ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Tuesday, May 13, 2014

ದೀಪಕ ರಾಗದ ಬೆನ್ನತ್ತಿ ಭಾಗ-೨

ದೀಪಕ ರಾಗದ ಬೆನ್ನತ್ತಿ ಭಾಗ-೨

ದೀಪಕರಾಗದ ಮೂಲವನ್ನು ಆಳವಾಗಿ ಹುಡುಕುತ್ತಾ ಹೊರಟ ನನಗೆ ಮಧ್ಯೆ ಕೆಲವು ಕಾಲ ಆ ಕೆಲಸ ವಿಳಂಬ ಗತಿಯಲ್ಲಿ ಸಾಗಿದ್ದಕ್ಕೆ ನನ್ನಮೇಲೇ ನನಗೆ ಬೇಸರ ಬಂದಿತ್ತು. ಅನಿವಾರ್ಯವಾಗಿ ಹಾಗೆ ಸಹಿಸಿಕೊಂಡಿದ್ದೆ. ಸಮಸ್ಯೆಯ ಮೂಲದಲ್ಲಿ ಎದ್ದ ಪ್ರಶ್ನೆಗಳು ಇಂತಿದ್ದವು:

೧. ದೀಪಕ ರಾಗ ಎಂದು ಹುಟ್ಟಿತು?

೨. ಚಕ್ರವರ್ತಿ ವಿಕ್ರಮಾದಿತ್ಯ ಯಾವ ಶತಮಾನದಲ್ಲಿ ಜೀವಿಸಿದ್ದ?

೩. ವಿಕ್ರಮಾದಿತ್ಯನ ಕಾಲದಲ್ಲಿ ಆತನ ಆಸ್ಥಾನ ವಿದ್ವಾನ್ ಆಗಿ ಕಾಳಿದಾಸ ಸಹ ಇದ್ದನೇ?

೪. ವಿಕ್ರಮಾರ್ಕ ಶಕೆಯ ಆರಂಭಕ್ಕೂ ವಿಕ್ರಮಾದಿತ್ಯನಿಗೂ ಸಂಬಂಧವಿದೆಯೇ?

೫. ಭಾರತದಲ್ಲಿ ಹಲವು ವಿಕ್ರಮಾದಿತ್ಯರು ಆಗಿ ಹೋಗಿದ್ದಾರೆ, ಆದರೆ ನಮಗೆ ಬೇಕಾದ ಅಥವಾ ನಾವು ಹುಡುಕುತ್ತಿರುವ ವಿಕ್ರಮಾದಿತ್ಯ ಅವರಲ್ಲಿ ಯಾರು?

೬. ಯಾವ ವಿಕ್ರಮಾದಿತ್ಯನಿಂದ ದೀಪಕ ರಾಗ ಪ್ರಚುರಗೊಂಡಿತು ?

೭. ಹಿಂದೂಸ್ಥಾನೀ ಸಂಗೀತಕ್ಕೆ ಮುಸಲ್ಮಾನರ ಕೊಡುಗೆಗಳು ಕಾರಣವೇ?

೮.  ಬೇತಾಳ-ವಿಕ್ರಮಾದಿತ್ಯರ ಕಥೆಗಳಲ್ಲಿ ಬರುವ ವಿಕ್ರಮಾದಿತ್ಯ ಯಾರು ? ಅವನಿಗೂ  ನಾವು ಹುಡುಕುತ್ತಿರುವ ವಿಕ್ರಮಾದಿತ್ಯನಿಗೂ ಸಾಮ್ಯವಿದೆಯೇ?

೯. ವಿಕ್ರಮಾದಿತ್ಯ ಶನಿಪೀಡಿತನಾಗಿದ್ದನೆಂಬುದಕ್ಕೆ ಶಾಸನಗಳ ಆಧಾರವೇನಾದರೂ ಸಿಗುತ್ತದೆಯೇ?

೧೦. ವಿಕ್ರಮನ ಐತಿಹಾಸಿಕ ನ್ಯಾಯ-ನಿರ್ಣಯ ಸಿಂಹಾಸನಕ್ಕೂ ನಾವು ಹುಡುಕುತ್ತಿರುವ ವಿಕ್ರಮಾದಿತ್ಯನಿಗೂ ಸಂಬಂಧವಿದೆಯೇ?

ಈ ಸಮಸ್ಯೆಗೆ ಉತ್ತರ ಅಷ್ಟು ಸುಲಭದಲ್ಲಿ ದೊರೆಯುವುದಿಲ್ಲ. ಇದಕ್ಕೆ ಕಾರಣಗಳು ಹಲವಾರು, ಆದರೆ ಬ್ರಿಟಿಷರು ಮತ್ತು ಮೊಘಲರು ಭಾರತದಲ್ಲಿದ್ದಾಗ, ತಮಗೆ ಬೇಕಾದ ಅನುಕೂಲತೆಗಳನ್ನು ಕಲ್ಪಿಸಿಕೊಳ್ಳುವ ದುರುದ್ದೇಶದಿಂದ, ಭಾರತೀಯರು ನಿಜವಾದ ಇತಿಹಾಸ ಅರಿಯಲಾರದಂತೆ ಇಲ್ಲಿನ ಐತಿಹಾಸಿಕ ಉದ್ಗ್ರಂಥಗಳನ್ನು ಸುಟ್ಟುಹಾಕಿದರು! ಹೀಗಾಗಿ ಅನೇಕ ಐತಿಹಾಸಿಕ ಮತ್ತು ಪ್ರಾಗೈತಿಹಾಸಿಕ ಕೊಂಡಿಗಳು ನಮಗೆ ದಕ್ಕುವುದಿಲ್ಲ. ಅಳಿದುಳಿದ ಐತಿಹಾಸಿಕ ಗ್ರಂಥಗಳಲ್ಲಿ ನಮಗೆ ಬೇಕಾದ  ವಿಕ್ರಮಾದಿತ್ಯ ಮತ್ತು ಆತನ ಆಸ್ಥಾನದ ’ನವರತ್ನ’ಗಳ ಬಗ್ಗೆ ಮಾಹಿತಿ ದೊರೆಯುವುದಿಲ್ಲ. 

ಪ್ರಶ್ನೆಗಳನ್ನು ಮ್ಮನದಲ್ಲಿ ಧರಿಸಿದ ಮೇಲೆ ಅವಿರತವಾಗಿ ಶ್ರಮಿಸಿದ್ದಾಯ್ತು. ಮಿತ್ರರಾದ ಶತಾವಧಾನಿಗಳನ್ನು ಕೇಳಿದ್ದಾಯ್ತು. ಅವರ ಪ್ರಕಾರ ಆಗಿಹೋದ ವಿಕ್ರಮಾದಿತ್ಯರಲ್ಲಿ ಚಂದ್ರಗುಪ್ತ-ವಿಕ್ರಮಾದಿತ್ಯನೇ ಅತ್ಯಂತ ಪ್ರಭಾವೀ ವ್ಯಕ್ತಿಯಾಗಿದ್ದಾನೆ. ವಿಕ್ರಮಶಕೆ ಎಂಬುದು ಮಾಲವ ವಂಶಜರು ಹೂಣರನ್ನು ಸೋಲಿಸಿ ಮೆರೆದ ವಿಕ್ರಮವನ್ನು ಸೂಚಿಸುವ ಕಾಲಮಾನ ಎಂಬುದು ಅವಧಾನಿ ಗಣೇಶರ ಅಂಬೋಣ; ಅದಕ್ಕೂ ವಿಕ್ರಮಾದಿತ್ಯ ಎಂಬ ವ್ಯಕ್ತಿಗೂ ಸಂಬಂಧವನ್ನವರು ನಿರಾಕರಿಸುತ್ತಾರೆ. ಇನ್ನು ಅತ್ಯಂತ ಅಗಾಧ ಓದಿನ ಆಗರವಾದ ಅವರೇ ಹೇಳುವಂತೆ ವಿಕ್ರಮನ ಆಸ್ಥಾನದ ನವರತ್ನಗಳಲ್ಲಿ ಹಲವರ ಪರಿಚಯ ಯಾರಿಗೂ ಮತ್ತು ಎಲ್ಲೂ ಸಿಗುವುದಿಲ್ಲ!! 

    ಧನ್ವಂತರಿ ಕ್ಷಪಣಕೋಮರಸಿಂಹಶಂಕು
    ವೇತಾಲಭಟ್ಟ ಘಟಕರ್ಪರ ಕಾಳಿದಾಸಃ |
    ಖ್ಯಾತೋ ವರಾಹಮಿಹಿರೋ ನೃಪತೇ ಸಭಾಯಾಂ
    ರತ್ನಾನಿ ವೈ ವರರುಚಿರ್ನವ ವಿಕ್ರಮಸ್ಯ ||

೧. ಧನ್ವಂತರಿ
೨. ಕ್ಷಪಣಕ
೩. ಅಮರ ಸಿಂಹ
೪. ಶಂಕು
೫. ವೇತಾಲ ಭಟ್ಟ
೬. ಘಟ ಕರ್ಪರ
೭. ಕಾಳಿದಾಸ
೮. ವರಾಹ ಮಿಹಿರ
೯. ವರರುಚಿ

ಈ ಅಸ್ಥಾನ ವಿದ್ವಾನ್ ನವರತ್ನಗಳಲ್ಲಿ ಧನ್ವಂತರಿ ಯಾರು?  ಕ್ಷಪಣಕ ಯಾರು? ಶಂಕು ಯಾರು ? ವೇತಾಲ ಭಟ್ಟ ಯಾರು?  ಈ ಎಲ್ಲಾ ಹೆಸರುಗಳು ಅವರ ಅಂಕಿತನಾಮಗಳೇ?  ಅಥವಾ ಕಾವ್ಯನಾಮಗಳೇ?  ಗೊತ್ತಿಲ್ಲ, ಎಲ್ಲೂ-ಸಮರ್ಪಕವಾದ ಯಾವ ದಾಖಲೆಗಳೂ ಸಿಗುವುದಿಲ್ಲ. 

ಕಾಳಿದಾಸನ ಕಾಲಮಾನದ ಬಗೆಗೆ  ವಿದ್ವಾನ್ ರಾಮಚಂದ್ರ ತಿವಾರಿಯಂತಹ ಅನೇಕರು ಸಂಶೋಧನೆ ನಡೆಸಿದರು. ’ಕಾಳಿದಾಸ ತಿಥಿ ಸಮೃದ್ಧಿ’ ಮೊದಲಾದ ಹೊತ್ತಗೆಗಳೇ ರೂಪುಗೊಂಡವು. ಕೆಲವರಂತೂ ಕಾಳಿದಾಸ ಇಂಥಾದ್ದೇ ಶತಮಾನದಲ್ಲಿದ್ದ-ಅದು ಸುಳ್ಳೆಂದು ಯಾರಾದರೂ ಸಾಬೀತು ಪಡಿಸಿದರೆ ತಮಗೆ ನೀಡಲ್ಪಟ್ಟ ಡಿ.ಲಿಟ್ ಮೊದಲಾದ ಪದವಿಗಳನ್ನೇ ಹಿಂದಿರುಗಿಸುವ ಸವಾಲು ಒಡ್ಡಿದರು. ಆದರೂ ಕಾಳಿದಾಸನ ಕಾಲ ನಿರ್ಣಯ ಯಾಕೋ ಕಗ್ಗಂಟಾಗಿ ಕಾಡುತ್ತದೆ! ಎಂಟನೇ ಶತಮಾನದಲ್ಲಿದ್ದರೆಂದು ಹೇಳಲ್ಪಟ್ಟ ಆದಿಶಂಕರರ ಜೀವಿತಾವಧಿಯ ಇಸವಿಗಳ ಬಗೆಗೇ ನಿರ್ಣಯ ಕಷ್ಟವೆನಿಸಿರುವಾಗ ಅದಕ್ಕೂ ಹಿಂದಿನದೆನಿಸುವ ಕಾಳಿದಾಸನ ಜೀವಿತಾವಧಿಯನ್ನು ನಿರ್ಣಯಿಸುವುದು ಅಷ್ಟು ಸುಲಭವೇ?  ಕೆಲವೊಂದು ಆಧಾರಗಳ ಪ್ರಕಾರ ಕಾಳಿದಾಸ ಗುಪ್ತರಕಾಲದವನೇ ಅಂದರೆ ೩ನೇ ಶತಮಾನದಿಂದ ೬ನೇ ಶತಮಾನದ ಅವಧಿಯಲ್ಲಿ ಆಳಿದ ಗುಪ್ತ ಸಾಮ್ರಾಜ್ಯದಲ್ಲೇ ಇದ್ದ ಮಹಾಕವಿ ಎಂಬುದು ತಿಳಿದುಬರುತ್ತದೆ. ಕಾಳಿದಾಸನನ್ನು ಆಸ್ಥಾನ ವಿದ್ವಾನ್ ಆಗಿ ಹೊಂದಿದ್ದ ವಿಕ್ರಮಾದಿತ್ಯ ಎಂದಾದರೆ ಆ ವಿಕ್ರಮಾದಿತ್ಯ ಬೇರಾರೂ ಅಲ್ಲ; ಚಂದ್ರಗುಪ್ತ-ವಿಕ್ರಮಾದಿತ್ಯನೇ ಆಗಿದ್ದಾನೆ!  ಹಾಗಾದರೆ ಭವಿಷ್ಯ ಪುರಾಣದಲ್ಲಿ ಹೇಳಲ್ಪಟ್ಟ ವಿಕ್ರಮಾದಿತ್ಯನ ಕಾಲಮಾನ ಕ್ರಿಸ್ತಪೂರ್ವಕ್ಕೆ ಹೋಗುತ್ತದೆ!  ಆ ವಿಕ್ರಮಾದಿತ್ಯನಿಗೆ ಶನಿಪೀಡೆ ತಗುಲಿತ್ತೆಂದೂ, ಶನಿಯಿಂದ ಪೀಡಿತನಾದ ಆತ ಕೈಕಾಲುಗಳನ್ನು ಕಳೆದುಕೊಂಡು, ನಂದಿ ಶೆಟ್ಟಿಯ ಎಣ್ಣೆಯ ಗಾಣದ ನೊಗದಮೇಲೆ ಕುಳಿತು, ನಿಶ್ಚೇಷ್ಟಿತನಾಗಿ-ನೊಂದವನಾಗಿ, ದೀಪಕರಾಗವನ್ನು ಹಾಡಿದನೆಂದು ಹೇಳಲಾಗಿದೆ. ಹಾಗಾದರೆ ಚಂದ್ರಗುಪ್ತ-ವಿಕ್ರಮಾದಿತ್ಯ ಮತ್ತು ದೀಪಕರಾಗದ ವಿಕ್ರಮಾದಿತ್ಯ ಬೇರೆ ಬೇರೇಯೇ? -ಎಂಬ ಸಂದೇಹ ಉಳಿದುಹೋಗುತ್ತದೆ!

ಅವಧಾನಿ ಗಣೇಶರಲ್ಲಿ ಎರಡು ಗಂಟೆಗಳ ಕಾಲ ನಿಷ್ಕರ್ಶಿಸಿದಾಗ ಕೆಲವೊಂದು ಮಾಹಿತಿಗಳು ದೊರೆತವು, ಆಧಾರ ರಹಿತವಾಗಿ, ಜನಪದ ಕಥೆಯಂತಿರುವ, ಪುರಾಣೋಕ್ತ ಕಥೆಯ ವಿಕ್ರಮಾದಿತ್ಯನ ಕಾಲಮಾನವನ್ನು ನಿರ್ಧರಿಸುವ ಯಾವುದೇ ಮಾಪನಗಳು ಸಿಗದ ಕಾರಣ,  ಚಂದ್ರಗುಪ್ತ-ವಿಕ್ರಮಾದಿತ್ಯನ ಆಸ್ಥಾನ ವಿದ್ವಾಂಸರು ಮತ್ತು ಕವಿಗಳು ಆತನಮೇಲಿನ ಅತಿಶಯ ಪ್ರೇಮ ಮತ್ತು ಅಭಿಮಾನದಿಂದ ಅನೇಕ ಹೊತ್ತಗೆಗಳನ್ನೂ ಕಥಾನಕಗಳನ್ನೂ ರಚಿಸಿದರು ಎಂಬುದನ್ನು ನಿರ್ಧರಿಸಿದೆವು. ವರರುಚಿಯ ಬಗ್ಗೆ ಸ್ಥೂಲವಾಗಿ ವ್ಯಾಖ್ಯಾನಿಸಿದ ಅವಧಾನಿಗಳು, ವರರುಚಿಯನ್ನು ಕಾತ್ಯಾಯನ ಎಂದೂ ಕರೆಯಲಾಗಿದ್ದನ್ನು ಹೇಳಿ, ಪಾಂಡಿತ್ಯದಿಂದ ವಿದ್ವತ್ ಸಾಮ್ರಾಜ್ಯದಲ್ಲಿ ’ರಾಕ್ಷಸ’ನೆಂದು ಗುರುತಿಸಲ್ಪಟ್ಟ ವ್ಯಕ್ತಿಯೇ ವರರುಚಿ ಎಂಬುದನ್ನು ಬಣ್ಣಿಸಿದರು. ’ಘಟಕರ್ಪರ ಸಂದೇಶಕಾವ್ಯ’ವನ್ನು ಕಾಳಿದಾಸನೇ ಬರೆದಿದ್ದು,  ಪ್ರೇಮಿಗಳಿಬ್ಬರ ನಡುವಿನ ಸಂವಹನವನ್ನು ಬಣ್ಣಿಸುವ ಆತನ ಕೃತಿ ಮೇಘಸಂದೇಶ ಅಥವಾ ಮೇಘದೂತ ಎಂದು ಹೆಸರಾಗಿದೆ. ಒಡೆದು ಹೋದ ಹೂಜೆಯೊಂದರ ಬಗೆಗೆ ಅತೀವ ಕಳವಳ ವ್ಯಕ್ತಪಡಿಸುವ ಹೆಂಡತಿಯೊಬ್ಬಳು, ದೂರದಲ್ಲಿರುವ ತನ್ನ ಗಂಡನಿಗೆ ಸಂದೇಶ ತಲ್ಪಿಸುವಂತೆ ಮೇಘಗಳನ್ನೂ, ಮರಗಳನ್ನೂ ಕೇಳಿಕೊಳ್ಳುವ ಅತ್ಯದ್ಭುತ ರಮಣೀಯ ಕಥಾನಕ ’ಘಟಕರ್ಪರ’  ಹಾಗಾದರೆ ಘಟಕರ್ಪರನೆಂಬ ಬೇರೊಬ್ಬ ಕವಿಯಿದ್ದನೇ?ಹೌದು, ಆತನ ಬಗೆಗೂ ಚರ್ಚೆಗಳು ನಡೆದವು. ಮಂದಾಕ್ರಾಂತ ಛಂದಸ್ಸಿನಲ್ಲಿರುವ ಆತನ ಬರಹಗಳ ಸುದ್ದಿಯೊಂದಿಗೆ ’ಮಂದ್ರ’ ಕಾದಂಬರಿಯನ್ನು ಬರೆಯುವ ಮುನ್ನ ಸಂಗೀತ-ರಾಗಗಳ ಬಗೆಗೆ ಆಳವಾಗಿ ಸಂಶೋಧಿಸಿದ ಎಸ್.ಎಲ್.ಭೈರಪ್ಪನವರ ಅಭಿಪ್ರಾಯಗಳನ್ನೂ ಗಣನೆಗೆ ತೆಗೆದುಕೊಳ್ಳಲಾಯ್ತು. 

ಸಂಗೀತ ಸಾಮ್ರಾಜ್ಯವನ್ನು ಬೆರಗುಗಣ್ಣುಗಳಿಂದ ನೋಡಿ, ಆ ಕುರಿತು ಆಳವಾಗಿ ಅಧ್ಯಯನ ನಡೆಸಿದ ಮೈಸೂರಿನ ವಿದ್ವಾನ್ ರಾ.ಸತ್ಯನಾರಾಯಣ ಅವರ ಪ್ರಸ್ತಾಪವೂ ಬಂತು. ಮೊದಲಾಗಿ ಭಾರತೀಯ ಸಂಗೀತದಲ್ಲಿ ಹಿಂದೂಸ್ಥಾನಿ-ಉತ್ತರಾದಿಯೆಂದೋ  ಅಥವಾ ಕರ್ನಾಟಕ-ದಕ್ಷಿಣಾದಿಯೆಂದೋ ಭಿನ್ನತೆಗಳಿರಲಿಲ್ಲವೆಂಬುದು ಸಂಶೋಧಕರ ಅಭಿಪ್ರಾಯ. ಆದರೆ ಸಂಗೀತವೆಂಬುದು ಮೌಖಿಕ ಮಾಧ್ಯಮವಾದುದರಿಂದ ಸುಮಾರು ೬೦-೭೦ ಕಿ.ಮೀ ಅಂತರದಲ್ಲಿ  ಸಂಗೀತದ ರಾಗಗಳಲ್ಲಿ, ಅವುಗಳಲ್ಲಿ ಆಲಾಪನೆಗಳಲ್ಲಿ ಭಿನ್ನತೆಗಳು ಇದ್ದವು ಎಂಬುದು ತಿಳಿದುಬರುತ್ತದೆ. ಹೀಗಾಗಿ ವಿಭಿನ್ನ ಘರಾಣಾಗಳು ಬಳಕೆಯಲ್ಲಿದ್ದವು. ೧೪ನೇ ಶತಮಾನದಿಂದೀಚೆಗೆ ಸಂಗೀತದಲ್ಲಿ ಎರಡು ಪ್ರಕಾರಗಳು ಒಡಮೂಡಿದವಾದರೂ ಹಿಂದೂಸ್ಥಾನಿಯಲ್ಲಿ "ದ್ರುಪದ್" [ಹಿಂದೂಸ್ಥಾನೀ ಸಂಗೀತ ಪರಿಕರವಾದ ಸಾರಂಗಿಯನ್ನೂ ದ್ರುಪದ್ ಎಂದು ಕರೆಯುವುದಿದೆ]ಎನಿಸುವುದನೇ ಕರ್ನಾಟಕಿಯಲ್ಲಿ "ಪಲ್ಲವಿ" ಎನ್ನುವುದನ್ನು ಕಾಣಬಹುದು. ಅಂತೆಯೇ ಬಹುತೇಕ ರಾಗಗಳ ಹೆಸರುಗಳಲ್ಲಿ-ಆಲಾಪನಾ ವಿಧಾನಗಳಲ್ಲಿ ವ್ಯತ್ಯಾಸವಿರಬಹುದೇ ಹೊರತು ಎರದೂ ಪ್ರಕಾರಗಳಲ್ಲಿರುವ ರಾಗಗಳಲ್ಲಿ ಸಾಮ್ಯತೆಯುಂಟು. 

ಹಿಂದೂಸ್ಥಾನೀ ಸಂಗೀತಕ್ಕೆ ಅಪ್ರತಿಮ ಕೊಡುಗೆಗಳನ್ನು ಕೊಟ್ಟ ತಾನ್ ಸೇನ್ ಮೂಲತಃ ಅಪ್ಪಟ ಭಾರತೀಯ ಹಿಂದೂ ಬ್ರಾಹ್ಮಣನಾಗಿದ್ದಾತ! ಇಸ್ಲಾಂ ಪ್ರಭಾವದಿಂದ ಮತ್ತು ಮೊಘಲರ ಆಳ್ವಿಕೆಯಲ್ಲಿನ ಬಲವಂತಿಕೆಯಿಂದ ಆತ ಮುಸ್ಲಿಂ ಆಗಿ ಮತಾಂತರಗೊಂಡಿದ್ದು ತಿಳಿದುಬರುತ್ತದೆ. ದೀಪಕರಾಗವನ್ನು ಇನ್ನಷ್ಟು ಪ್ರಚುರಪಡಿಸಿದ ಖ್ಯಾತಿ ಇದೇ ತಾನ್ ಸೇನನದು.  ಮಧ್ಯಪ್ರಾಚ್ಯ ಮತ್ತು ಅರಬ್ ರಾಷ್ಟ್ರಗಳಿಂದ ಭಾರತಕ್ಕೆ ವಲಸೆಬಂದ ಮುಸಲ್ಮಾನರಲ್ಲಿ ಹಿಂದೆ ಭಾರತದಲ್ಲಿದ್ದಂತಹ ಸುಂದರ ಸಂಗೀತ ಸ್ವರಮೇಳಗಳ ಬಳಕೆ ಊರ್ಜಿತದಲ್ಲಿರಲಿಲ್ಲ. ಭಾರತೀಯ ಸಂಗೀತಕ್ಕೆ ಮನಸೋತ ಅವರು ಇಲ್ಲಿಗೆ ಬಂದನಂತರ ತಮ್ಮಲ್ಲಿನ ಕೆಲವು ರಾಗಗಳನ್ನು ಬದಲಿಸಿ ಭಾರತೀಯ ಪದ್ಧತಿಯಲ್ಲೇ ಅದನ್ನು ಹಾಡಲು ಆರಂಭಿಸಿದರು ಎಂಬುದು ಇತಿಹಾಸ. ಅಂತಹ ಒಂದು ರಾಗ: ಯಮನ್ ಅಥವಾ ಯಮನ್ ಕಲ್ಯಾಣ್. "ಅದು ಯಮನ್ ಅಲ್ಲ ಯವನ ಕಲ್ಯಾಣ್ ಎಂದು, ಅದನ್ನೇ ಮ್ಲೇಚ್ಛ ಕಲ್ಯಾಣ್ ಎಂದೂ ಹೇಳುತ್ತಾರೆ" ಎಂಬುದು ಶತಾವಧಾನಿ ಗಣೇಶರ ಹೇಳಿಕೆ. ಅಮೀರ ಖುಸ್ರು ಎಂಬ ಹೆಸರನ್ನು ಹಲವರು ವಿಚಿತ್ರವಾಗಿ ಬಳಸಿಕೊಂಡಿದ್ದಾರೆಯೇ ಹೊರತು ಆತ ಹಿಂದೆ ಇಂದಿನ ಕಾಬೂಲ್ ಕಡೆಗೆ ಬದುಕಿದ್ದವ ಎನ್ನುತ್ತಾರೆ ಗಣೇಶರು. ಅಮೀರ್ ಖುಸ್ರು ಭಾರತೀಯ ಸಂಗೀತಕ್ಕೆ ಒದೆರಡು ವಾದ್ಯ ಪರಿಕರಗಳನ್ನು ಕೊಟ್ಟಿದ್ದನ್ನು ಬಿಟ್ಟರೆ,  ಮುಸಲ್ಮಾನ ಜನಾಂಗದಿಂದ  ಹಿಂದೂಸ್ಥಾನೀ ಸಂಗೀತಕ್ಕೆ ಕೊಡುಗೆಗಳು ನೀಡಲ್ಪಟ್ಟಿವೆ ಎಂಬುದು ಸುಳ್ಳು ಎಂಬುದನ್ನು ಸಾಧಾರವಾಗಿ ವಿವರಿಸಿದರು.

ಬೇತಾಳ-ತ್ರಿವಿಕ್ರಮರ ಕಥೆಯನ್ನು ಪ್ರಾಯಶಃ ವೇತಾಲ ಭಟ್ಟನೇ ರಚಿಸಿರಬೇಕೆಂಬುದು ಸಂಶೋಧಕರ ಅನಿಸಿಕೆ; ಅದು ಇನ್ನೂ ನಿರ್ಧರಿತವಲ್ಲ. ಅದಕ್ಕೂ ಮುನ್ನ ಅಂತಹ ಯಾವುದೇ ಕೃತಿ ನಮಗೆ ಕಂಡು ಬರುವುದಿಲ್ಲ.  ಮಹಾಪಂಡಿತನಾಗಿದ್ದ ವೇತಾಲ ಭಟ್ಟ, ಆಶ್ರಯದಾತನಾದ ರಾಜಾ ವಿಕ್ರಮಾದಿತ್ಯನನ್ನು ಪ್ರಶಂಸಿಸುವ ಸಲುವಾಗಿ, ಇಪ್ಪತ್ತೈದು ಅದ್ಭುತ ಕಥೆಗಳನ್ನು ಹೊಂದಿರುವ ’ವೇತಾಲ ಪಂಚವಿಂಶತಿ’ಯನ್ನು ರಚಿಸಿರಬೇಕು.  ಕವಿ-ಪಂಡಿತ-ಕಲಾವಿದ-ಸಂಗೀತಜ್ಞ-ನ್ಯಾಯತತ್ಪರ-ಪ್ರಜಾರಂಜಕ-ಆಡಳಿತ ಸಮರ್ಥ-ಶೂರ-ಧೀರ-ಮಹಾಪರಾಕ್ರಮಿಯಾಗಿದ್ದ ಚಕ್ರವರ್ತಿ ಚಂದ್ರಗುಪ್ತ-ವಿಕ್ರಮಾದಿತ್ಯನ ಬಗೆಗೆ ಆ ಕಾಲಘಟ್ಟದಲ್ಲಿ ಅನೇಕ ದಂತಕಥೆಗಳು ಹುಟ್ಟಿದವಂತೆ! ವಿಶಾಖದತ್ತನೆಂಬ ಪಂಡಿತ ’ದೇವಿಚಂದ್ರಗುಪ್ತ’ಸಂಸ್ಕೃತ ನಾಟಕವನ್ನೂ ಬರೆದಿದ್ದು ಗೋಚರವಾಗುತ್ತದೆ. ರಾಜಾ ವಿಕ್ರಮನ ನ್ಯಾಯ ಸಿಂಹಾಸನವೆಂಬುದು ಈ ದೇಶ ಕಂಡ ಇನ್ನೊಂದು ಬೆರಗು!   ವಿಕ್ರಮಾದಿತ್ಯನ ನ್ಯಾಯದಾನದ ಹಲವು ಕಥೆಗಳು ಇಂದಿಗೂ ನಮಗೆ ಲಭ್ಯವಿದ್ದು, ಆತ ಕೈಗೊಂಡ ನಿರ್ಣಯಗಳು ಚಕಿತರನ್ನಾಗಿ ಮಾಡುತ್ತವೆ.

ದೀಪಕ ರಾಗ ಎಂದು ಹುಟ್ಟಿತು ಎಂಬುದರ ಬಗ್ಗೆ ಯಾವುದೇ ಮಾಹಿತಿ ಸಿಗುವುದಿಲ್ಲ! ಭಾರತೀಯ ಸಂಗೀತದಲ್ಲಿ ಸಂಧ್ಯಾ ಅಥವಾ ಸಂಜೆಯ ವೇಳೆಗೆ ದೀಪ ಮುಡಿಸುವ ಹೊತ್ತಿನಲ್ಲಿ ಹಾಡುವ ಅನೇಕ ರಾಗಗಳಿವೆ. ಅವುಗಳಲ್ಲಿ ಪೂರ್ವಿ ಥಾಟ್ ನಿಂದ ಆರಂಭಗೊಳ್ಳುವ ರಾಗಗಳೂ ಸೇರಿವೆ. ಸಂಜೆಯ  ಅಥವ ಸಂಧ್ಯಾ ರಾಗಗಳನ್ನೇ ದೀಪ ಹೊತ್ತಿಸುವ ವೇಳೆಯ ರಾಗಗಳಾದುದರಿಂದ "ದೀಪಕ ರಾಗ" ಎಂದು ಹೇಳಿದ್ದಿರಬೇಕೆ ಎಂಬುದು ಅವಧಾನಿಗಳ ಅನಿಸಿಕೆ. ತಾನ್ ಸೇನ್ನ ನಂತರದ ತಲೆಮಾರುಗಳಲ್ಲಿ ದೀಪಕ ರಾಗವೆಂದು ಪ್ರತ್ಯೇಕವಾಗಿ ಗುರುತಿಸಲ್ಪಟ್ಟ ರಾಗದ ಪ್ರಸ್ತಾವನೆಯಾಗಲೀ, ಹಾಡುವಿಕೆಯಾಗಲೀ ಅಷ್ಟಾಗಿ ನಡೆಯಲಿಲ್ಲ. ೬ನೇ ಶತಮಾನದಿಂದ ಸಿಗುವ ಸಂಗೀತ ಶಾಸ್ತ್ರಕ್ಕೆ ಸಂಬಂಧಿಸಿದ ಕೃತಿಗಳಲ್ಲಿ ದೀಪಕ ರಾಗದ ಪ್ರಸ್ತುತಿ ಅಲ್ಲಲ್ಲಿ ಕಾಣುತ್ತದೆಯೇ ವಿನಃ, "ಅದು ಇದೇ ರಾಗ" ಎಂಬುದನ್ನು  ನಿರ್ದಿಷ್ಟವಾಗಿ ಹೇಳಲು ಯಾವ ಆಧಾರಗಳೂ ಸಿಗುವುದಿಲ್ಲ!!  ಆಳವನ್ನು  ಅಗೆಯುತ್ತ ಹೋದರೆ ಭಾರತೀಯ ಸಂಗೀತವೆಂಬುದು ಕ್ರಿಸ್ತಪೂರ್ವ ೨೫೦೦ರಲ್ಲೂ ಬಳಕೆಯಲ್ಲಿದ್ದುದು ತಿಳಿದುಬರುತ್ತದೆ! ೧೯೬೩ರಲ್ಲಿ, ರಾಮಕೃಷ್ಣ ಮಠದ ಪ್ರಜ್ಞಾನಾನಂದ ಸ್ವಾಮಿಗಳು 'A History of Indian Music: Ancient period'  ಎಂಬ ಗ್ರಂಥವನ್ನು ಬರೆದಿದ್ದಾರೆ.  The Classical Music of North India  ಎಂಬ ಪುಸ್ತಕವನ್ನು ೭೫ ತಂತಿಗಳ ಸರೋದ್ ವಾದಕನೆಂದೇ ಖ್ಯಾತನಾದ ಅಲಿ ಅಕ್ಬರ್ ಖಾನ್ ಬರೆದಿದ್ದಾರೆ.


ಅಜಂತಾ ಗುಹೆ ೯ ರಲ್ಲಿನ ಗೋಡೆಯಲ್ಲಿರುವ ಚಿತ್ರ

ಸಂಗೀತವೆಂಬುದು ಭಾರತೀಯ ಮೂಲದಲ್ಲಿ ಯಾವಾಗ ಮತ್ತು ಎಲ್ಲಿ ಆರಂಭವಾಯ್ತೆಂಬುದು ಯಾರಿಗೂ ಸ್ಪಷ್ಟವಿಲ್ಲ! ಆದರೆ, ಕ್ರಿಸ್ತ ಪೂರ್ವ ೨೫೦೦ ವರ್ಷಗಳ ಹಿಂದೆಯೇ ಸಂಗೀತ ಬಳಕೆಯಲ್ಲಿತ್ತು ಎಂಬುದಕ್ಕೆ ಕಲವು ಆಧಾರಗಳು ದೊರೆಯುತ್ತವೆ. ಸಾಮವೇದದ ಸಾಮಗಾಯನವೇ ಸಂಗೀತಕ್ಕೆ ಮೂಲಾಧಾರ ಎನ್ನಲಾಗುತ್ತದೆ. ಸಾಮವೇದದ ಪದೋಚ್ಚರಣೆಗಳಲ್ಲಿ ಅನುದತ್ತ[ದೀರ್ಘ], ಉದತ್ತ[ಶೀಘ್ರ] ಮತ್ತು ಸ್ವರಿತ [ಮಧ್ಯಮ] ಪ್ರಕಾರದ ಉಚ್ಚರಣೆಗಳಿವೆ ಎಂಬುದನ್ನು ಕಾಣಬಹುದು. ಈ ವ್ಯವಸ್ಥೆಗೆ ಮುಂದೆ ಸ ರಿ ಗ ಮ ಪ ದ ನಿ ಎಂಬ ಸ್ವರಗಳ ಸಮ್ಮಿಲನ ಮಾತ್ರ ಯಾವಾಗ ಅಳವಡಿಸಲ್ಪಟ್ಟಿತು ಎಂಬುದು ತಿಳಿದುಬರುವುದಿಲ್ಲ! ಮಹಾರಾಷ್ಟ್ರದ ಅಜಂತಾ ಗುಹೆಗಳ ಪೈಕಿ ೯ನೇ ಗುಹೆಯೈ ಗೋಡೆಯಲ್ಲಿ, ಅಜಮಾಸು  ಕ್ರಿಸ್ತಪೂರ್ವ ೫೦೦ ರಲ್ಲಿ ಚಿತ್ರಿತವಾದ  ಚಿತ್ರವೊಂದರಲ್ಲಿ ಸಂಗೀತದ ಪರಿಕರಗಳೊಟ್ಟಿಗೆ ಹಾಡುತ್ತಿರುವ ಮಹಿಳೆಯರ ಗಾಯವ್ನವನ್ನು ಆಲಿಸುತ್ತಿರುವ ರಾಜನೊಬ್ಬನ ಚಿತ್ರವೊಂದಿದೆ!  ಚಾಣಕ್ಯನ ಅರ್ಥಶಾಸ್ತ್ರದಲ್ಲಿ ಭಾರತೀಯ ಸಂಗೀತದ ಬಗೆಗೆ ಹೇಳಿಕೆಯಿರುವುದು ಇನ್ನೊಂದು ದಾಖಲೆ. ಋಷಿ ವಾತ್ಸಾಯನನ ಹೇಳಿಕೆಯ ಪ್ರಕಾರ ಸಂಗೀತವೆಂಬುದು ಗೀತಂ, ವಾದ್ಯಂ, ನೃತ್ಯಂ ಎಂಬ ಮೂರು ಅಂಗಗಳಿಂದ ಕೂಡಿದೆ. ಸಾರಂಗದೇವನ ’ಸಂಗೀತ ರತ್ನಾಕರ’ ಎಂಬ ಹೊತ್ತಗೆಯನ್ನು ಬಿಟ್ಟರೆ ಅದಕ್ಕೂ ಆದಿಯಲ್ಲಿ ಯಾವ ಗ್ರಂಥಗಳೂ ಕಾಣಿಸುವುದಿಲ್ಲ. ೬ನೇ ಶತಮಾನದ ನಂತರ ಒಂದು ಲಿಖಿತ ರೂಪವಿರುವುದಕ್ಕೆ ಮತ್ತು ೭ನೇ ಶತಮಾನದಿಂದ ಆಳಿದ ರಾಜರುಗಳ ಆಸ್ಥಾನದಲ್ಲಿ ಸಂಗೀತಗಾರರು ಹಾಡುತ್ತಿದ್ದುದಕ್ಕೆ ಆಧಾರಗಳು ಸಿಗುತ್ತವೆ. ಸಿಂಧೂ ನಾಗರಿಕತೆ ಎಂದು ಇತಿಹಾಸ ತಜ್ಞರು ಹೇಳುವ ಕಾಲಘಟ್ಟದ ಸಾಮಗ್ರಿಗಳೆಂದು ಪರಿಗಣಿತವಾದವುಗಳಲ್ಲಿ, ಲಂಕೆಯಲ್ಲಿ ಸಂಗೀತ ವಿದ್ವಾಂಸ ರಾವಣನಿಂದ ರೂಪಿತವಾಯ್ತೆಂಬ ’ರಾವಣಾಹತ’ವೆಂಬ ವಾದ್ಯವೂ ಸೇರಿದೆ! ಇಷ್ಟೆಲ್ಲಾ ಇದ್ದರೂ ಭಾರತೀಯ ಸಂಗೀತವೆಂಬುದು, ಬಹುಶತಮಾನಗಳ ಕಾಲ ಗುರುವಿನಿಂದ ಶಿಷ್ಯನಿಗೆ [ಗುರು-ಶಿಷ್ಯ ಪರಂಪರೆ]ಬಾಯಿಂದ ಬಾಯಿಗೆ ಹೇಳಿಕೊಡಲ್ಪಟ್ಟು ಬಳಕೆಯಲ್ಲಿತ್ತಷ್ಟೆ. ಈ ಪರಂಪರೆ ಸುಮಾರು ೧೮ನೇ ಶತಮಾನದ ವರೆಗೂ ಮುಂದುವರಿಯಿತು ಎಂಬುದು ಕಾಣುತ್ತದೆ.


ಭಾರತೀಯ ಬಹುಪ್ರಾಚೀನ ಸಂಗೀತ ವಾದ್ಯ:  ರಾವಣಾಹತ

೧೮ನೇ ಶತಮಾನದಲ್ಲಿ ಭಾರತಕ್ಕೆ ಬ್ರಿಟಿಷರ ಆಗಮನವಾದಮೇಲೆ, ಬ್ರಿಟಿಷರು ಭಾರತದ ಈ ಪರಂಪರೆಯನ್ನು ವಿರೋಧಿಸಿ ಅಪರಾಧವೆಂಬಂತೆ ಕಂಡಿದ್ದರಿಂದ,  ಸಂಗೀತ ವಿದ್ವತ್ತುಳ್ಳವರು ತಮ್ಮ ಮನೆಯ ಮುಂದಿನ ಪೀಳಿಗೆಗಳಲ್ಲಿನ ಸಂಗೀತಾಸಕ್ತರಿಗೆ ಮಾತ್ರ ಸಂಗೀತವನ್ನು ಕಲಿಸಿಕೊಡುವುದು ಸಾಧ್ಯವಾಯ್ತು! ಸಂಗೀತವೆಂಬುದು ಕೇವಲ ಮನೋರಂಜನೆಯ ಮಾಧ್ಯಮವೆಂದು ಬ್ರಿಟಿಷ್ ಪ್ರೇರಿತ ಅನ್ಯ ರಾಜ್ಯಗಳವರು ಹೇಳುತ್ತಿದ್ದಾಗ, ಗ್ವಾಲಿಯರ್, ಬರೋಡಾ ಮತ್ತು ಅಯೋಧ್ಯಾ ರಾಜ್ಯಗಳು ಮಾತ್ರ ಸಂಗೀತವನ್ನು ಪುರಸ್ಕರಿಸುತ್ತಲೇ ಬಂದವು. ೧೯ನೇ ಶತಮಾನದಲ್ಲಿ ಬದುಕಿದ್ದ ಪಂಡಿತ್ ವಿಷ್ಣು ನಾರಾಯಣ ಭಾತ್‍ಖಂಡೆ [ಆಗಸ್ಟ್ ೧೦, ೧೮೬೦-ಸೆಪ್ಟೆಂಬರ್ ೧೯, ೧೯೩೬]  ಎಂಬವರು ಆಧುನಿಕ ಹಿಂದೂಸ್ಥಾನೀ ಶಾಸ್ತ್ರೀಯ ಸಂಗೀತದ ಬಗ್ಗೆ ನಿಖರವಾಗಿ ಪುಸ್ತಕವೊಂದನ್ನು ಬರೆಯುವವ ವರೆಗೂ ಸಂಗೀತ ಬಳಲುತ್ತಲೇ-ತೆವಳುತ್ತಲೇ ಬಂತು. ಮುಂಬೈಯ ಚಿತ್ಪಾವನ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಭಾತ್‍ಖಂಡೆ, ಆದಿಯಲ್ಲಿ ಕಾಲೇಜಿನಲ್ಲಿ ಕಾನೂನು ಪದವಿಯನ್ನು ಓದಿದವರು. ಆಗಲೇ ಸಂಗೀತದಲ್ಲಿ ಆಸಕ್ತಿ ತಳೆದು ಸಿತಾರ್ ನುಡಿಸತೊಡಗಿದ್ದರು. ಮುಂದೆ, ಅನಿರೀಕ್ಷಿತವಾಗಿ ತನ್ನ ಹೆಂಡತಿ ಮತ್ತು ಮಗಳ ಸಾವನ್ನು ಕಂಡ ಅವರು, ಹಿಂದೂಸ್ಥಾನಿ ಸಂಗೀತಕ್ಕೆ ತನ್ನ ಜೀವನವನ್ನು ಮುಡಿಪಾಗಿಟ್ಟರು. ಬ್ರಿಟಿಷರ ಸೊಕ್ಕಿನಿಂದ ಸೊರಗಿದ್ದ ಭಾರತೀಯ ಹಿಂದೂಸ್ಥಾನೀ ಪ್ರಕಾರದ ಸಂಗೀತದ ಅಳಿದುಳಿದ  ಭಾಗಗಳನ್ನು ಕಲೆಹಾಕಿ ಅದಕ್ಕೊಂದು ನಿರ್ದಿಷ್ಟ ಸ್ವರೂಪ ಪರಿಕಲ್ಪಿಸುವಲ್ಲಿ ಮುಂದಾದ ಅವರು ವಕೀಲಿ ವೃತ್ತಿಯನ್ನೂ ತೊರೆದುಬಿಟ್ಟರು.  ಹಲವು ಸಂಶೋಧನೆಗಳನ್ನು ಕೈಗೊಂಡ ಅವರ ಪ್ರಬಂಧ ’ಸ್ವರ ಮಾಲಿಕಾ’ ಮೊದಲು ಪ್ರಕಟವಾಯ್ತು. ನಂತರ ೧೯೦೯ ರಲ್ಲಿ, ’ಶ್ರೀ ಮಲ್ಲಕ್ಷಯ ಸಂಗೀತಂ’ ಎಂಬ ಸಂಸ್ಕೃತ ಭಾಷೆಯ ಗ್ರಂಥವನ್ನು ಹೊರತಂದರು; ನಂತರ ಜನಸಾಮಾನ್ಯರಿಗೆ ಅದು ಅರ್ಥವಾಗುವಂತೆ ಅವರ ಈ ಕೃತಿಗೆ ಅವರೇ ಭಾಷ್ಯ[ಅರ್ಥ ವಿವರಣೆ]ಗಳನ್ನು ಬರೆದರು. 


ಭಾತ್‍ಖಂಡೆಯವರ ಗ್ರಂಥದಲ್ಲಿ ದೀಪಕ ರಾಗದ ಬಗೆಗೆ ಶ್ಲೋಕ ವೊಂದು ಈ ರೀತಿ ಇದೆ:

ಪೂರ್ವೀ ಮೇಲ ಸಮುತ್ಪನ್ನೋ ದೀಪಕೋ ಗುನಿ ಸಮ್ಮತಃ
ಆರೋಹಣೇ ರಿ-ವರ್ಜ್ಯಂಸ್ಯಾದ್ ಅವರೋಹೇ ನಿ-ವರ್ಜಿತಂ |
ಷಡ್ಜ ಸ್ವರೋ ಭವೇದ್ವಾದಿ ಕೈಶ್ಚಿತ್ ಪಂಚಮರ್ಹರಿತಃ
ಗಾನಂ ಸುಸಮ್ಮತಂ ಚಾಸ್ಯ ದಿನೇ ಯಾಮೇ ತುರೀಯಕೇ ||

ಆರೋಹಣದಲ್ಲಿ ’ರಿ’ ಸ್ವರವನ್ನೂ ಮತ್ತು ಮತ್ತು ಅವರೋಹಣದಲ್ಲಿ ’ನಿ’ಸ್ವರವನ್ನೂ  ಬಳಸಬಾರದು. ಷಡ್ಜವನ್ನು ವಾದಿಯನ್ನಾಗಿಯೂ ಪಂಚಮವನ್ನು ಸಂವಾದಿಯನ್ನಾಗಿಯೂ ಬಳಸಬೇಕು [ಇದಕ್ಕೆ ವ್ಯತ್ಯಯದ ಹೇಳಿಕೆಗಳೂ ಕೆಲವರಲ್ಲಿವೆ!] ಎಂಬುದು ಶ್ಲೋಕದ ತಾತ್ಪರ್ಯ.

ದೀಪಕರಾಗದ ಜಾಡನ್ನು ಹಿಡಿಯಲು ಹೊರಟಾಗ ಕೆಲವು ಸಂಗೀತ ವಿದ್ವಾಂಸರನ್ನು ನಾನು ಕೇಳಿಕೊಂಡೆ. ಆ ಪೈಕಿ ಕೆರೆಮನೆ ರಾಮ ಹೆಗಡೆಯವರು ಮಾತ್ರ ಸ್ಪಂದಿಸಿ ಕೆಲವು ಮಾಹಿತಿ ನೀಡಿದರು; ಉಳಿದವರಿಗೆ ಈ ರಾಗದ ಬಗ್ಗೆ ಯಾವ ಆಸಕ್ತಿಯೂ ಇರದಿರಬಹುದು ಅಥವಾ ನನ್ನ ಕೋರಿಕೆ ಅವರ ಗಮನಕ್ಕೆ ಬಾರದೇ ಇದ್ದಿರಬಹುದು. ರಾಮ ಹೆಗಡೆಯವರಿಂದಲೂ ಕೆಲವು ಪ್ರಶ್ನಾವಳಿಗಳು ಹೊರಟಾಗ  ಅವಧಾನಿಗಳೆಡೆಗೆ ಮುಖಮಾಡಿದೆ, ಅಲ್ಲೊಂದಷ್ಟು ಮಾಹಿತಿ ದೊರೆಯಿತು. ಹಲವು ಹೊತ್ತಗೆಗಳನ್ನು ತಡಕಾಡಿದ ನಂತರವೂ ಬೇತಾಳ-ತ್ರಿವಿಕ್ರಮನೆನಿಸಿದ ವಿಕ್ರಮಾದಿತ್ಯ, "ನನ್ನ ಪರಾಕ್ರಮದ ಮುಂದೆ ನೀನೇನು? ಯತ್ನಿಸುತ್ತಲೇ ಇರು" ಎಂಬಂತೆ ಚಂದ್ರಗುಪ್ತ-ವಿಕ್ರಮಾದಿತ್ಯ  ಮತ್ತು ಭವಿಷ್ಯ ಪುರಾಣದಲ್ಲಿ ಕಂಡ ವಿಕ್ರಮಾದಿತ್ಯರಲ್ಲಿ ಇಬ್ಬರೂ ಅವರೇ ಆಗಿರಬಹುದೋ ಅಥವಾ ಇಬ್ಬರೂ ಬೇರೆ ಬೇರೆಯೋ ಎಂಬುದು ಖಂಡಿತ ಅರ್ಥವಾಗಲಿಲ್ಲ!

ಹೀಗೇ, ದೀಪಕ ರಾಗದ ಬೆನ್ನತ್ತಿ ಹೊರಟಾಗ, ಅಖಂಡ ಭಾರತೀಯ ಸಂಗೀತದ ಆಮೂಲಾಗ್ರ ದರ್ಶನವನ್ನು ಪಡೆಯುವಂತಾಯ್ತು. ಇಂದು ನಮ್ಮಲ್ಲಿನ ಉತ್ತರಾದಿ-ದಕ್ಷಿಣಾದಿ ಎಂಬೆರಡೂ ಸಂಗೀತ ಪ್ರಕಾರಗಳ ಕುರಿತಾಗಿ ಹಲವು ವಿದ್ವಾಂಸರು ಬರೆದ ಪುಸ್ತಕಗಳಿವೆ. ಸಾವಿರಾರು ವರ್ಷಗಳ ಇತಿಹಾಸದಲ್ಲೆಲ್ಲೋ ದೀಪಕರಾಗ ಅಡಗಿಹೋಗಿದೆ! "ಅದು ಇದೇ" ಎಂದು ನಿಖರವಾಗಿ, ನಿಚ್ಚಳವಾಗಿ ಹೇಳಲು ಯಾರಿಂದಲೂ ಸಾಧ್ಯವಿಲ್ಲದಂತಾಗಿದೆ. ಅನ್ಯ ದೇಶಗಳವರು ತಮ್ಮ ತಮ್ಮ ಸಂಸ್ಕೃತಿ-ಪರಂಪರೆಗೆ ಆದ್ಯತೆಗಳನ್ನು ಕೊಟ್ಟು, ರಕ್ಷಿಸಿಕೊಂಡರೆ,  ಪರಕೀಯರ ದಾಳಿ-ಆಳ್ವಿಕೆಗಳಿಂದ ಪ್ರಕ್ಷುಬ್ಧಗೊಂಡ, ಮಲಿನಗೊಂಡ ಭಾರತೀಯರ ಮನಸ್ಸುಗಳಲ್ಲಿ ನಿಜದ ಅರಿವಿರದೇ ಇರುವುದನ್ನು ಕಂಡಾಗ ಖೇದವಾಗುತ್ತದೆ.  ಅನ್ಯರ ಒಡೆದಾಳುವ ನೀತಿಗೆ ಬಲಿಯಾದ ನಾವು ಇನ್ನಾದರೂ ಎಚ್ಚೆತ್ತುಕೊಂಡು ನಮ್ಮ ಅಮೂಲ್ಯ ಸಂಸ್ಕೃತಿಯನ್ನು ಕಾಪಿಟ್ಟುಕೊಳ್ಳಬೇಕಾಗಿದೆ, ನಮಸ್ಕಾರ.