ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Monday, April 29, 2013

ಯಕ್ಷಚಂದ್ರನ ಸುವರ್ಣ ಸಂಭ್ರಮದ ಹೊನಲಲ್ಲಿ !

ಚಿತ್ರಋಣ: ಅಂತರ್ಜಾಲ 
ಯಕ್ಷಚಂದ್ರನ ಸುವರ್ಣ ಸಂಭ್ರಮದ ಹೊನಲಲ್ಲಿ !

ಗಜಮುಖನೆ ಮೆರೆವೇಕದಂತನೆ
ನಿಜಗುಣಾನ್ವಿತ ಪರಶುಧಾರನೆ
ರಜತ ಗಿರಿಗೊಡೆಯನ ಕುಮಾರನೆ ವಿದ್ಯೆವಾರಿಧಿಯೆ |
ಅಜನು ಹರಿ ರುದ್ರಾದಿಗಳು ನೆರೆ
ಭಜಿಸುತಿಹರನವರತ ನಿನ್ನನು
ತ್ರಿಜಗ ವಂದಿತ ಗಣಪ ಮಾಳ್ಪುದು ಮತಿಗೆ ಮಂಗಳವ ||

ತುಂಬಿದ ಸಭೆಯ ವೇದಿಕೆಯಲ್ಲಿ ಯಕ್ಷರಂಗದ ಹಿರಿಯ ಕೋಗಿಲೆಯೊಂದು ಕಲರವವನ್ನು ಹೊರಡಿಸಿತ್ತು! ಇಂತಹ ಕಲರವವನ್ನು ನಾನಂತೂ ಕೇಳದೇ ಸರಿಸುಮಾರು ೧೫ ವರ್ಷಗಳೇ ಕಳೆದುಹೋಗಿವೆ. ಹಲವರಿಗೆ ಪೂರ್ವಜನ್ಮದ ಸ್ಮರಣೆಯಾದ  ಹಾಗೇ ಭಾಸ; ಕಾರಣವಿಷ್ಟೇ ಇಂದಿನ ಭಾಗವತರಲ್ಲಿ ವೃತ್ತಿ ತಾದಾತ್ಮ್ಯತೆ, ಅಕ್ಷರಶುದ್ಧ ಉಚ್ಚಾರ, ಲಯಗಳ ಏರಿಳಿತ, ತಾಳದ ಗಚ್ಚು, ಶಾರೀರದ ಏರಿಳಿತ, ನೂರಕ್ಕೆ ನೂರು ಯಕ್ಷರಂಗದ ರಾಗಗಳನ್ನು ಬಳಸಿಕೊಳ್ಳುವ ಪರಿ, ಆ ತಿಟ್ಟುಗಳನ್ನು ಉಳಿಸಿಕೊಳ್ಳುವ ಪರಿ ಕಾಣಿಸುತ್ತಿಲ್ಲ-ಇದು ಇಂದಿನ ಬಡಗು ತಿಟ್ಟಿನ ಪ್ರೇಕ್ಷಕರ ದುರ್ದೈವ. ಪೂರ್ಣರಾತ್ರಿ ಯಕ್ಷಗಾನವನ್ನು ನೋಡುತ್ತಿದ್ದ ನಮಗೆ ೩ ತಾಸಿನ ಸಮಯಮಿತಿ ಯಕ್ಷಗಾನ ’ಅನೆಹೊಟ್ಟೆಗೆ ಅರೆಕಾಸಿನ ಮಜ್ಜಿಗೆ’ಎಂಬ ರೀತಿಯಲ್ಲಿ ಆಗಿಬಿಟ್ಟಿದೆ! ಅದರಲ್ಲೂ ಹಣದ ಗಂಟಿಗೇ ಅಂಬಿನ ಅಲಗನ್ನು ಗುರಿಯಾಗಿಸಿಕೊಂಡು ಏರ್ಪಡಿಸುವ ಹಲವು ಪ್ರಸಂಗಗಳ ಸಮ್ಮಿಶ್ರ ಸಮಯ-ಕಲಾಪ ಯಕ್ಷಗಾನಕ್ಕೆ ಮಾರಕವಾಗಿ ಪರಿಣಮಿಸಿಬಿಟ್ಟಿದೆ. ಇಂತಹ ಹೊತ್ತಿನಲ್ಲಿ ನಿಜನೆಲೆಯ ಯಕ್ಷಗಾನ ಯಾವುದು ಎಂಬುದನ್ನು ಹೆಕ್ಕಿ ತೆಗೆಯುವುದು ಬೆಣ್ಣೆಯ ಮೇಲಿನ ಕೂದಲನ್ನು ಹೆಕ್ಕಿತೆಗೆವಂತಹ ಕೆಲಸ.

ಕಾರ್ಯಕ್ರಮದ ಆದಿಯಲ್ಲಿ ಆರಂಭಗೊಂಡ ’ಹಿಮ್ಮೇಳ ವೈಭವ’ದ ಆದಿಯಲ್ಲಿ, ಹಾದಿ ಸುಗಮಗೊಳಿಸೆಂದು ಮಹಾಕವಿ ಕುಮಾರವ್ಯಾಸ ರಚಿತ ಭಾಮಿನಿಯನ್ನು ಶ್ರುತಪಡಿಸಿದವರು ನೆಬ್ಬೂರು ಭಾಗವತರು. ವಯಸ್ಸಿನಿಂದ ಹಣ್ಣಾದರೂ ಕಂಠವನ್ನು ಅದೇ ಗತಿಯಲ್ಲಿ ಕಾಪಿಟ್ಟುಕೊಂಡು ಇಂದಿಗೂ ಹಾಡಬಲ್ಲ ಆ ಚೈತನ್ಯಕ್ಕೆ ನಮಸ್ಕಾರ.  ಮಿಕ್ಕೆಲ್ಲಾ ಕಲೆಗಳಿಗೆ ಆರಾಧ್ಯ ದೈವವಿದ್ದಂತೇ ಯಕ್ಷಗಾನಕ್ಕೊಬ್ಬ ಆರಾಧ್ಯ ದೈವನಿದ್ದಾನೆ: ಆತನೇ ಗಣಪ. ಯಕ್ಷಗಾನದ ಸೃಷ್ಟಿಗೆ ಪ್ರೇರಿತನಾದ ಗಣಪ ಅದಕ್ಕೆ ಕರ್ತೃವಾಗಿ ಆತ ಬಳಸಿಕೊಂಡ ಪಾರ್ತಿ ಸುಬ್ಬನಿಂದ ಹಿಡಿದು ಕಳೆದ ಶತಮಾನದಲ್ಲಿ ಆಗಿಹೋದ ಮಹಾಮಹಾ ಕಲಾವಿದರೆಲ್ಲರೂ ಅದನ್ನು ಅನುಸರಿಸಿ ಬಂದಿದ್ದರು. ಸರಳ ಜೀವನಕ್ಕೆ ಒಗ್ಗಿಕೊಂಡಿದ್ದ ಅಂದಿನ ಯಕ್ಷಗಾನದ ಕಲಾವಿದರಿಗೆ ತುರ್ತಾಗಿ ಮತ್ತೆಲ್ಲಿಗೋ ಹಾರುವ ತರಾತುರಿಯ ವ್ಯವಹಾರ ಇರಲಿಲ್ಲ. ಹರಿಕಥೆಯಂತೆಯೇ, ಮಹಾವಿಷ್ಣುವಿನ ದಶಾವತಾರಗಳು ಮತ್ತು ಪುರಾಣಗಳ ಪುಣ್ಯಕಥಾನಕಗಳನ್ನು ಯಕ್ಷಗಾನದ ಕವಿಗಳು ಸೊಬಗಿನ ಸೋಬಾನೆ, ಭಾಮಿನಿ, ಸೋಬಾನೆ, ಚೌಪದಿ ಮೊದಲಾದ ಛಂದಸ್ಸುಗಳನ್ನು ಬಳಸಿ ವಿರಚಿಸಿದರು; ಸ್ವರ-ತಾಳ-ಲಯಬದ್ಧವಾಗಿ ಆಂಗಿಕ, ವಾಚಿಕ, ಶಾಬ್ದಿಕ, ಸಾತ್ವಿಕ ಮೊದಲಾದ ಅಭಿನಯದ ಮಟ್ಟುಗಳನ್ನು ಬಳಸಿ, ಕುಳಿತ ಪ್ರೇಕ್ಷಕರಿಗೆ ಕಥಾಹಂದರವನ್ನು ರಂಜನೀಯವಾಗಿ ಉಣಬಡಿಸುವುದು ದೇವರ ಸೇವೆ ಎಂಬರ್ಥದಲ್ಲಿ ಯಕ್ಷಗಾನ ನಡೆದುಬಂತು.

ಹಿಂದಕ್ಕೆ ಕಲಾವಿದರು, ಚೌಕಿಯಲ್ಲಿ ಇಟ್ಟ ಗಣಪತಿಯ ಮರದ ವಿಗ್ರಹ/ಚಿತ್ರಪಟ/ಕಿರೀಟಕ್ಕೆ ಹೂವಿಟ್ಟು, ಧೂಪ-ದೀಪಾರತಿಗಳನ್ನು ಬೆಳಗಿ, ಹಣ್ಣು-ಕಾಯಿ ಸಮರ್ಪಿಸುತ್ತಿದ್ದರು. ತಮ್ಮ ಕಲಾಸಮಯ ನಿರ್ವಿಘ್ನವಾಗಿ ಸಂಪನ್ನಗೊಳ್ಳುವುದಕ್ಕೆ ಸಾಕ್ಷೀಭೂತನಾಗಿ ರಂಗಕ್ಕೆ ಖುದ್ದಾಗಿ ಬರುವಂತೇ ನೀಡುವ ಆಹ್ವಾನವದು. ಪೂಜೆಯಿಂದ ಸಂಪ್ರೀತನಾದ ಗಣಪತಿ ಚೌಕಿಯಿಂದ ರಂಗಕ್ಕೂ ತರಲ್ಪಟ್ಟು ಮತ್ತೆ ಪೂಜೆಗೊಳ್ಳಲ್ಪಡುತಿದ್ದ.  ಬಾಲಗೋಪಾಲ ವೇಷದವರು ನರ್ತಿಸಿ ಸಭಾಮಧ್ಯದ ಪೀಠದಲ್ಲಿರಿಸಿದ ಗಜಮುಖನಿಗೆ ಆರತಿ ಬೆಳಗಿ ತೆರಳಿದಮೇಲೆ, ಸಭಾಲಕ್ಷಣವೆಂಬ ಪೂರ್ವರಂಗದ ಕಾರ್ಯಕ್ರಮದಲ್ಲಿ ಸ್ತ್ರೀವೇಷಧಾರಿಗಳು ಗಣಪನನ್ನು ಹಾಡಿಹೊಗಳುವ ರೀತಿಯಲ್ಲಿ ನುತಿಸಲಾಗುತ್ತಿತ್ತು. ನಂತರ ತೆರೆಕುಣಿತ, ಆಮೇಲೆ ಒಡ್ಡೋಲಗ, ಹೀಗೇ ಕ್ರಮಕ್ರಮವಾಗಿ ಯಕ್ಷಗಾನದ ಪೂರ್ವರಂಗ ಪ್ರಕಾರಗಳು ಮುಗಿದು, ಕುಳಿತ ಪ್ರೇಕ್ಷಕರ ಮನಸ್ಸನ್ನು ಯಕ್ಷಗಾನದಲ್ಲಿ ತಲ್ಲೀನಗೊಳಿಸುವೆಡೆಗೆ ಕಾರ್ಯಗತವಾಗುತ್ತಿದ್ದವು. ಇಂದು ಪೂರ್ವರಂಗದ ಮಾತೇ ಇಲ್ಲ. ಪಶ್ಚಿಮರಂಗ ಅರ್ಥಾತ್ ಮುಕ್ತಾಯದಲ್ಲೂ ತರಾತುರಿ, ಒಂದೇ ಮಂಗಳ ಶ್ಲೋಕವನ್ನು ಹೇಳಿದರೂ ಹೇಳಿದರೆ ಬಿಟ್ಟರೂ ಬಿಟ್ಟರೆ. ಆಟ ಮುಗಿದಾನಂತರ ಮತ್ತೆ ಗಣಪತಿ ಪೂಜೆ ಚೌಕಿಯಲ್ಲಿ; ಹಿಡಿದ ಕಾರ್ಯವನ್ನು ನಿರ್ವಿಘ್ನವಾಗಿ, ಯಥಾಯೋಗ್ಯವಾಗಿ ಸಂಪನ್ನಗೊಳಿಸಿಕೊಟ್ಟಿದ್ದಕ್ಕೆ ಆಭಾರಿಗಳಾಗಿ ಗೋಪಾಲವೇಷದವರಿಂದ ಹಿಡಿದು ಪ್ರಮುಖ ವೇಷಧಾರಿಗಳವರೆಗಿನ ಎಲ್ಲಾ ಕಲಾವಿದರೂ ಭಾಗವಹಿಸುತ್ತಿದ್ದರು.               

ಶಿಷ್ಟಕಲೆಯಾದ ಯಕ್ಷಗಾನವನ್ನು ಪ್ರಾಯಶಃ ಹುರಿದುಂಬಿಸಿದ್ದು ಗಣಪನ ಅಲಂಕಾರಗಳೇ ಎನ್ನಬೇಕು. ಗಣಪನ ಚಿತ್ರಗಳಲ್ಲಿ, ಮೂರ್ತಿಗಳಲ್ಲಿ ನಾವು ಕಾಣುವ ಅನೇಕ ಆಭರಣಗಳನ್ನು ಯಕ್ಷಗಾನ ಬಳಸಿಕೊಂಡಿದೆ. ಮೇಲಾಗಿ, ಕುಣಿತದಲ್ಲಿ ಅಪ್ಪನನ್ನೂ ಮೀರಿಸಿದ ಮಹಾನಿಪುಣ ನೃತ್ಯಗಾರ ಗಣಪತಿ ಎಂಬುದು ಹಲವರ ಅಭಿಮತ. ಮೃದಂಗವನ್ನು ಬಡಿದುಕೊಳ್ಳುತ್ತಾ ತಾನೇ ನರ್ತಿಸುವ ವಿಗ್ರಹಗಳೂ ಕೂಡ ನೋಡಸಿಗುತ್ತವೆ.

ವಾದ್ಯಂ ವಾದಯಿತುಂ ಸಮಾಂಕುಶಧರಾ
ಸಂತ್ಯುತ್ಸುಕಾ ವಾದಕಾ |

ಎಂದು ಇಡಗುಂಜಿ ಗಣಪತಿಯನ್ನು ದಿವಂಗತ ವಿದ್ವಾನ್ ಬ್ರಹ್ಮಶ್ರೀ ಊರಕೇರಿ ಗಜಾನನ ಶಾಸ್ತ್ರಿಗಳು ಬರೆದ ಸುಪ್ರಭಾತ ಸ್ತೋತ್ರದಲ್ಲಿ ಹೇಳಿದ್ದಾರೆ. ಗಣಪತಿಯ ಹೆಸರನ್ನು ಎತ್ತಿಕೊಂಡು ನಡೆಸುವ ಕಾರ್ಯಕ್ರಮಗಳಲ್ಲಿ ವಿಶಿಷ್ಟ ಸ್ಫೂರ್ತಿ ಸಿಗುವುದು ಸುಳ್ಳಲ್ಲ.

|| ಬಾಹುಭ್ಯಾಂ ನಮತಿ ಸಂಪತತ್ರೈಃ ದ್ಯಾವಾ ಪೃಥಿವೀ ಜನಯಂ ದೇವ ಏಕಃ ||

--ಎಂಬ ವೇದಮಂತ್ರ ದೇವರು ಒಬ್ಬನೇ ಎಂಬುದನ್ನು ಪುಷ್ಟೀಕರಿಸುತ್ತದೆ; ಎಂದಮೇಲೆ ಅಪ್ಪನೂ-ಅಮ್ಮನೂ-ಮಗನೂ ಅವನೇ, ದೇವರಂತಹ ಏಕಪಾತ್ರಾಭಿನಯಧಾರಿಯನ್ನು ಇನ್ನೆಲ್ಲಿ ಕಾಣಲು ಸಾಧ್ಯ? ಹೀಗಿದ್ದರೂ, ಸರಕಾರದಲ್ಲಿ ಒಂದೊಂದು ಕಾರ್ಯಕ್ಕೆ ಒಂದೊಂದು ಇಲಾಖೆ ಇರುವಹಾಗೇ, ದೇವರ ಆಡಳಿತದಲ್ಲಿ ಆತನೇ ಬಹುರೂಪಿಯಾಗಿ ಹಲವುಸ್ತರಗಳಲ್ಲಿ ಕಾಣಿಸಿಕೊಳ್ಳುತ್ತಾನೆ ಎಂಬುದನ್ನು ನಾವು ಗ್ರಹಿಸಬೇಕು. ಇರಲಿ, ಯಕ್ಷಗಾನವನ್ನು ಸಮಯಮಿತಿಗೆ ಅಳವಡಿಸುವ ಪ್ರಯತ್ನವನ್ನು ಪ್ರಥಮವಾಗಿ ಮಾಡಿದವರು ಕೆರೆಮನೆ ಶಂಭು ಹೆಗಡೆಯವರು. ಆಗಲೇ ಲೋಪಗಳಾಗಬಹುದು ಎಂದು ಮಹಾಬಲ ಹೆಗಡೆಯವರು ಅದನ್ನು ಒಪ್ಪುತ್ತಿರಲಿಲ್ಲ. ಈಗೀಗ ಬರುಬರುತ್ತಾ, ಅಂತಹ ಹಿರಿಯ ಕಲಾವಿದರೆಲ್ಲ ಅಳಿದಮೇಲೆ, ’ಮುಂಡೇ ಮದುವೆಯಲ್ಲಿ ಉಂಡವನೇ ಜಾಣ’ಎಂಬರೀತಿಯಲ್ಲಿ, ತೀರಾ ಅರ್ಜೆಂಟಾಗಿ ಮನಸ್ಸಿನ ಬಾಯಿಗೆ ಏನನ್ನೋ ತುರುಕಲು ಪ್ರಯತ್ನಿಸುತ್ತಾರೆ. ಕಥೆಯ ಹಿನ್ನೆಲೆಯಾಗಲೀ, ಕಥೆಯಲ್ಲಿ ಬರಬೇಕಾದ ಪೂರಕ ಪಾತ್ರಗಳಾಗಲೀ ಕಾಣಿಸದೇ ಇರುವುದರಿಂದಲೂ, ಹಲವು ಪದ್ಯಗಳನ್ನು ಹಾರಿಸಿಬಿಡುವುದರಿಂದಲೂ ಪ್ರೇಕ್ಷಕರಿಗೆ ನವರಸಗಳ ಅನುಭವ ಸಿಕ್ಕುವುದೂ ಇಲ್ಲ, ಕಥಾ ಸಂದರ್ಭದ ಅರ್ಥ ದಕ್ಕುವುದೂ ಇಲ್ಲ!!

"ಡಾಕ್ಟ್ರೇ, ಬಾಳ ಹೊಟ್ಟೆನೋವು ಮಾತ್ರೆ ಕೊಡಿ, ಇವತ್ತೇ ಒಂದು ಮದುವೆ ಊಟಕೂಡ ಉಂಟು ಮಾರಾಯ್ರೆ" ಎಂದು ಯಾರೋ ಒಬ್ಬಾತ ವೈದ್ಯರಲ್ಲಿ ಹೇಳಿದ್ದನ್ನು ಅವರು ಪ್ರಸ್ತಾಪಿಸಿದ್ದು ನೆನಪಿಗೆ ಬಂತು. ಸಂಘಟಕರಲ್ಲಿ ಬಹುತೇಕರಿಗೆ ದುಡ್ಡಿನ ಮೇಲೆ ಕಣ್ಣಿದ್ದರೆ, ಯುವಕಲಾವಿದರಿಗೆ ಪ್ರಸಂಗ ಮುಗಿಸ್ ಹೊತ್ತಾಕಿ, ಬೇರೇ ಪ್ರಸಂಗ ಅಲ್ಲೇರ್ ಆಜೂಬಾಜುಗೆಲ್ಲಾದರೂ ಇದ್ದರೆ ಅಲ್ಲೂ ನಟಿಸುವ ಆಸೆ [ಅವರಿಗೂ ಹಣದಮೇಲೆ ಪ್ರೀತಿ!] ಕೆಲವು ಕಲಾವಿದರ ಕಾಲ್ ಶೀಟು ಎಂಬುದು ಸಿನಿಮಾ ಹೀರೋಗಳ ಕಾಲ್ ಶೀಟುಗಳಿಗಿಂತಲೂ ಸಮಯದ ಅಭಾವಕ್ಕೆ ಒಳಪಟ್ಟಿದ್ದು! ಬೆಳಿಗ್ಗೆ ಮಂಗಳೂರಿನಲ್ಲಿ ಆಟವಿದ್ದರೆ, ರಾತ್ರಿ ಬೆಂಗಳೂರಿನಲ್ಲಿ, ಮಾರನೇದಿನ ಬೆಳಿಗ್ಗೆ ಕುಂದಾಪ್ರದಲ್ಲಿ ಮಾರಾಯ್ರೆ! ೩೬೫ ದಿವಸಗಳಲ್ಲಿ, ಅಷ್ಟೂದಿನಗಳಲ್ಲೂ ಒಂದೋ ಅಥವಾ ಒಂದಕ್ಕಿಂತಾ ಹೆಚ್ಚೋ ಪಾತ್ರಗಳನ್ನು ಬುಕ್ ಮಾಡಿಕೊಳ್ಳುವ ನಟರು ಇದ್ದಾರೆ!!-ಎಂದಾಗ ಯಕ್ಷಗಾನದ ಪಾತ್ರದೊಳಗೆ ಅವರ ತಾದಾತ್ಮ್ಯತೆ ಎಂಥದ್ದು? ಮೇಲಾಗಿ ಕಲಾವಿದರಿಗೆ ಇಲ್ಲದ ಚಟಗಳ ಅವಲಂಬನೆ ಎಂಬುದು ಎಲ್ಲಾ ಪ್ರೇಕ್ಷಕರಿಗೂ ಗೊತ್ತಿರುವ ಸೂಪರ್ ಸೀಕ್ರೆಟ್ಟು!

ಪಟ್ಟಾಭಿಷೇಕದ ದಶರಥನನ್ನೋ, ರಾಮ ನಿರ್ಯಾಣದ ರಾಮನನ್ನೋ, ಹರಿಶ್ಚಂದ್ರನನ್ನೋ, ಕರ್ಣನನ್ನೋ ಇಂದು ಚಿತ್ರಿಸಲು ಶಂಭು ಹೆಗಡೆಯವರಂತಹ ನಟರೇ ಇಲ್ಲ. ಭೀಷ್ಮ, ಜಮದಗ್ನಿ, ಕೃಷ್ಣ, ಬಿಲ್ಲಹಬ್ಬದ ಕಂಸ ಮೊದಲಾದ ಪಾತ್ರಗಳಿಂದ ಬೆರಗು ಹುಟ್ಟಿಸುವ ಮಹಾಬಲ ಹೆಗಡೆಯಂಥವರಿಲ್ಲ. ಯಕ್ಷಗಾನ ಕಲೆಗೆ ತನ್ನದೇ ಆದ ಛಾಪನ್ನು ಕೊಟ್ಟಿದ್ದು ಕೆರೆಮನೆ ಮನೆತನದ ಹೆಗ್ಗಳಿಕೆ. ಅವರ ನೈತಿಕತೆ, ಚಟರಹಿತ ಜೀವನ ವಿಧಾನ ಮೊದಲಾದ ಅಂಶಗಳು ಬೇರೆಲ್ಲರಿಗೆ ಮಾದರಿ. ಸುಗಂಧದ ಸಂಸರ್ಗದಿಂದ ದುರ್ಗಂಧವೂ ಉಡುಗಿಹೋದಂತೇ, ಕೆರೆಮನೆ ಕಲಾವಿದರ ಹಾಗೂ ಅವರ ಮೇಳದ ಸಂಸರ್ಗದಿಂದ ಅನೇಕ ಕಲಾವಿದರು ಸುಸಂಕೃತರಾಗಿ ಬೆಳೆದಿದ್ದರು. ಕೆರೆಮನೆ ಶಿವರಾಮ ಹೆಗಡೆಯವರ ಸಮಕಾಲೀನರಾದ ಅಚ್ಚು-ರಾಮಪ್ಪಿ[ಲಕ್ಷ್ಮಣ ಹೆಗಡೆ-ರಾಮ ಹೆಗಡೆ] ಎಂಬ ಕಲಾವಿದ ಸಹೋದರರು ಹೊನ್ನಾವರ ತಾಲೂಕಿನ ಬೇರಂಕಿ ಗ್ರಾಮದ ಕೊಂಡದಕುಳಿ ಎಂಬ ಮಜರೆಯಲ್ಲಿ ಆಗಿಹೋದರು. ಅಚ್ಚು ಆಂಜನೇಯನ ವೇಷ ಧರಿಸಿ ವೇದಿಕೆಗೆ ಬಂದಾಗ, ವೇದಿಕೆಯ ಪಕ್ಕದ ಕಂಬಗಳನ್ನೇ ಹತ್ತಿ ತೋರಿಸುತ್ತಿದ್ದ ನೈಜ ಕಲಾತ್ಮಕತೆ ಇವತ್ತೆಲ್ಲಿದೆ? ರಾಮಪ್ಪಿಯವರ ವೇಷದ ತಿಟ್ಟು ಕೆರೆಮನೆ ಶಿವರಾಮ ಹೆಗಡೆಯವರ ವೇಷವನ್ನೇ ಹೋಲುತ್ತಿತ್ತು ಎಂಬುದು ಇಂದಿನ ವೃದ್ಧ ಪ್ರೇಕ್ಷಕರ ಹೇಳಿಕೆ. ಈ ಪೈಕಿ ರಾಮ ಹೆಗಡೆಯವರ ಮೊಮ್ಮಗನಾಗಿ ಇವತ್ತು ಪ್ರಬುದ್ಧ ಕಲಾವಿದನಾಗಿ ಬೆಳೆದು ನಿಂತ, ಸಭ್ಯ-ಸುಶೀಲ-ಸದಾಚಾರೀ ಸರಳ ವ್ಯಕ್ತಿ ಕೊಂಡದಕುಳಿ ರಾಮಚಂದ್ರ ಹೆಗಡೆ. 

ಮೊನ್ನೆ ಮೊನ್ನೆ ಗುಂಡಬಾಳಾದಲ್ಲಿ ರಾಮಚಂದ್ರ ಕಲಿಯುತ್ತಿದ್ದುದನ್ನು ಕಂಡಿದ್ದ ಅನೇಕರಿಗೆ ಅದು ಆಡಾಡ್ತಾ ಕಳೆದುಹೋದ ೩೦ ವರ್ಷ ಎಂಬುದು ಗಮನಕ್ಕೆ ಬರುವುದೇ ಇಲ್ಲ!! ಗುಂಡಬಾಳೆಯ ಮುಖ್ಯಪ್ರಾಣನೆದುರು  ಕೆಲವಾರು ವರ್ಷಗಳಕಾಲ ಪ್ರತೀ ಬೇಸಗೆಯ ನಾಕು ತಿಂಗಳು ಸೇವೆನಡೆಸಿದ ರಾಮಚಂದ್ರ, ಅಜ್ಜನ ಹೆಸರಿಗೆ ಹೊಸ ಗರಿಯನ್ನು ಮೂಡಿಸುವಲ್ಲಿ ಹಾದುಬಂದ ಹಾದಿ ಅಜಮಾಸು ೩೫ ವರ್ಷಗಳು. ಈ ಸುದೀರ್ಘ ಅವಧಿಯಲ್ಲಿ, ಯಕ್ಷಗಾನವನ್ನೇ ವೃತ್ತಿಯನ್ನಾಗಿಸಿಕೊಂಡು ನಡೆಸಿಬಂದ ಅವರಿಗೆ ಎದುರಾಗಿರಬಹುದಾದ ಆರ್ಥಿಕ ಸಂಕಷ್ಟಗಳನ್ನು ನಾವು ಗಮನಿಸಬೇಕು. ಇಂದು ಯಕ್ಷಗಾನ ಕಲಾವಿದರು ಹಣಕ್ಕಾಗಿ ತಮ್ಮ ಕಲೆಯನ್ನು ಮಾರಿಕೊಳ್ಳುವ ಉದ್ದೇಶದ ಹಿಂದೆ ಇರುವ ಕರಾಳ ಛಾಯೆ ಅದು. ರಾಮಚಂದ್ರರು ಹರೆಯದವರಾಗಿದ್ದಾಗ ಇಂದಿನಂತೇ ಮಳೆಗಾಲದಲ್ಲೂ ಆಗುತ್ತಿದ್ದುದ ಆಟಗಳು ಸಂಖ್ಯೆ ತೀರಾ ಕಮ್ಮಿ. ಕಲಾವಿದರಿಗೆ ಎಷ್ಟೋ ದಿನ ಹೊಟ್ಟೆಯಮೇಲೆ ತಣ್ಣೀರುಪಟ್ಟೆ! ಆರು ತಿಂಗಳು ಗಣನೀಯವಲ್ಲದ ಆದಾಯ, ಇನ್ನಾರು ತಿಂಗಳು ಆದಾಯ ರಹಿತ ವ್ಯವಸಾಯ! ಆರ್ಥಿಕ ಮುಗ್ಗಟ್ಟುಗಳನ್ನು ಎದುರಿಸಿಯೂ ಹೊಸ ಸಾಹಸಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಅಧ್ಯಯನ ಶೀಲರಾಗಿ ಯಕ್ಷಗಾನ ಕಲೆಯಲ್ಲಿ ಇರುವ ಕೊರತೆಗಳನ್ನು ನೀಗಿಸಲು ಉದ್ಯುಕ್ತರಾದವರಲ್ಲಿ ರಾಮಚಂದ್ರ ಹೆಗಡೆ ಕೂಡ ಒಬ್ಬರು.

ಬದಲಾವಣೆ ಬಯಸುವ ಯುವಪ್ರೇಕ್ಷಕರ ಸಿನಿಕತೆಗೆ ತಕ್ಕದಾಗಿ ಅದನ್ನೇ ಎನ್ ಕ್ಯಾಶ್ ಮಾಡಿಕೊಳ್ಳುವ ಸಲುವಾಗಿ ದಕ್ಷಿಣಕನ್ನಡದ ಕೆಲವು ಜನ ಹೊಸ ಹೊಸ ಸಾಮಾಜಿಕ ಪ್ರಸಂಗಗಳನ್ನು ಬರೆದರು. ಛಂದಸ್ಸು, ವ್ಯಾಕರಣ, ತಾಳಗತಿ ಎಲ್ಲದರಲ್ಲೂ ಯಡವಟ್ಟುಗಳನ್ನೇ ತುಂಬಿಸಿಕೊಂಡ ಅಂತಹ ಪ್ರಸಂಗಗಳು ಮೂಲ ಯಕ್ಷಗಾನದ ಧ್ಯೇಯೋದ್ದೇಶವನ್ನು ಗಾಳಿಗೆ ತೂರಿದವು. ನೈತಿಕತೆ, ವೈಚಾರಿಕತೆ, ಸತ್ಯನಿಷ್ಠ ನಡೆ ಮೊದಲಾದ ಧನಾತ್ಮಕ ಅಂಶಗಳನ್ನು ಬೋಧಿಸಬೇಕಾದ ಪ್ರಸಂಗಗಳ ಬದಲಾಗಿ, ಹಾದರ, ಅಪರಾಧ, ಕಾಮುಕತೆ ಇಂತಹ ಅಂಶಗಳನ್ನೇ ಟಿವಿ ಧಾರಾವಾಹಿಗಳಂತೇ ಬಿಂಬಿಸ ಹೊರಟಿದ್ದು, ಯಕ್ಷಗಾನದ ಮೇಲೆ ನಡೆದ ಅತ್ಯಾಚಾರ ಎಂದರೆ ತಪ್ಪಲ್ಲ. ಇಂತಹ ಸಾಮಾಜಿಕ ಪ್ರಸಂಗಗಳನ್ನು ಧಿಕ್ಕರಿಸಿ ಪೌರಾಣಿಕ ಪ್ರಸಂಗಗಳನ್ನೇ ಆಡುವ ಕಳಕಳಿಯನ್ನು ಉಳಿಸಿಕೊಂಡವರು ಅಂದಿಗೂ ಇಂದಿಗೂ ಕೆರೆಮನೆ ಮೇಳದವರು ಮಾತ್ರ! ಅಂತಹ ಪೌರಾಣಿಕ ಪ್ರಸಂಗಗಳನ್ನೇ ಆತುಕೊಳ್ಳುವ ಇನ್ನೊಬ್ಬ ಕಲಾವಿದನನ್ನು ನಾವು ಹುಡುಕಬಹುದಾದರೆ ಅದು ರಾಮಚಂದ್ರರಲ್ಲಿ. ೧೨-೧೩ ವರ್ಷಗಳ ಹಿಂದೆ ದಕ್ಷಿಣಕನ್ನಡದ ಕುಂಭಾಶಿಯಲ್ಲಿ ನೆಲೆಸಿ, ಅಲ್ಲಿಂದಲೇ ’ಪೂರ್ಣಚಂದ್ರ ಯಕ್ಷಗಾನ ಪ್ರತಿಷ್ಠಾನ, ಕೊಂಡದಕುಳಿ, ಕುಂಭಾಶಿ’ ಎಂಬ ಮೇಳವೊಂದನ್ನು ಕಟ್ಟಿಕೊಂಡು ನಡೆಸುತ್ತಾ ಬರುತ್ತಿದ್ದಾರೆ; ಮೇಳದ ದಶಮಾನೋತ್ಸವವನ್ನೂ ಆಚರಿಸಿದ್ದಾರೆ. 

"ಪೂರ್ವರಂಗದ ಅಭಿನಯಕ್ಕೆ ಯಾರೂ ಸಿದ್ಧರಿಲ್ಲ" ಎಂಬ ಅವರ ಅನಿಸಿಕೆಯನ್ನು ಅವರು ಹೇಳಿದಾಗ ನಾನು ಕೇಳಬೇಕೆಂದಿದ್ದೆ: ಪೂರ್ವರಂಗವನ್ನು ಪ್ರಮುಖರಂಗದ ಸಹಕಲಾವಿದರೇ ನಿರ್ವಹಿಸುವಂತೇ ಮಾಡಿದರೇನಾಗುತ್ತದೆ? ಯಾರೂ ಇಲ್ಲ ಎಂಬ ಕ್ಷುಲ್ಲಕ ಕಾರಣ ಕೊಟ್ಟು ಶಿಷ್ಟ ಸಂಪ್ರದಾಯವನ್ನು ಮುರಿಯುವುದು ಔಚಿತ್ಯವೇ? ಪೂರ್ವರಂಗವಿಲ್ಲದ ಕಲೆ ಎಷ್ಟುಕಾಲ ತನ್ನ ಛಾಪನ್ನು ಇಟ್ಟುಕೊಂಡೀತು? ಕೆರೆಮನೆ ಮೇಳ ನಡೆಸುವ ಆಟಗಳಲ್ಲಿ ಇಂದಿಗೂ ತಕ್ಕಮಟ್ಟಿಗೆ ಪೂರ್ವರಂಗ ಇದೆಯಲ್ಲಾ? ಹಾಗೇ ಮಿಕ್ಕಿದ ’ಹೆಕ್ಕುಮೇಳ’ಗಳಲ್ಲೂ ಅದು ಆಗದು ಯಾಕೆ? "ರಾಮಚಂದ್ರ ತನ್ನದೇ ಮೇಳಕ್ಕೆ ಬದ್ಧನಾಗಿರಬೇಕು, ಅತಿಥಿ ಕಲಾವಿದನಾಗಿ ಕರೆದೆಡೆಗೆಲ್ಲಾ ಹೋಗಬಾರದು, ಅದರಿಂದ ತನ್ನ ಮೇಳದಲ್ಲಿ ಇರುವ ಕಲಾವಿದರಿಗೂ ಬದ್ಧತೆ ಇರುವುದಿಲ್ಲ, ಅವರನ್ನು ನಿಯಂತ್ರಿಸುವುದು ಕಷ್ಟಸಾಧ್ಯ" ಎಂದು ನೆಬ್ಬೂರು ಭಾಗವತರು ಹೇಳಿದ್ದು ಸರಿಯಾಗೇ ಇದೆ. ಪ್ರೇಕ್ಷಕ ಉತ್ತಮವಾದುದನ್ನು ಎಲ್ಲಿದ್ದರೂ ಹುಡುಕುತ್ತಾನೆ ಮತ್ತು ಅದನ್ನು ಹೇಗಾದರೂ ಪಡೆಯಲು ಪ್ರಯತ್ನಿಸುತ್ತಾನೆ. ಅತಿಥಿ ಕಲಾವಿದನಾಗಿ ಭಾಗವಹಿಸದ ಪಕ್ಷದಲ್ಲಿ ಯಾವ ಪ್ರೇಕ್ಷಕನೂ ವಂಚಿತನಾಗುವುದಿಲ್ಲ. ನಡೆಸುವ ಮೇಳದಲ್ಲಿ ಉತ್ತಮ ಕಲಾವಿದರನ್ನು ಇರಿಸಿಕೊಂಡರೆ ಎಲ್ಲರೂ ಅದೇ ಮೇಳದ ಪ್ರದರ್ಶನಗಳನ್ನೇ ನೋಡುತ್ತಾರೆ. ಇದಕ್ಕೊಂದು ರೂಪ ಬೇಕಾಗುತ್ತದೆ, ಕಲಾವಿದರಿಗೆ ನಿಗದಿತ ಸಂಬಳ ವಗೈರೆ ಪರಿಕಲ್ಪನೆಯಾಗಬೇಕಾಗುತ್ತದೆ, ಕಲಾವಿದರು ಮಾತುಕೊಟ್ಟಮೇಲೆ ಮೇಳಕ್ಕೆ ಬದ್ಧರಾಗಿರಬೇಕಾಗುತ್ತದೆ. ಇವತ್ತಿನ ಕಾಲಧರ್ಮಕ್ಕನುಸರಿಸಿ ಲಿಖಿತ ಒಡಂಬಡಿಕೆಯನ್ನೂ ಮಾಡಿಕೊಳ್ಳಬಹುದಾಗಿದೆ. ಹಾಗೊಮ್ಮೆ ಮೇಳಕ್ಕೊಂದು ರೂಪ ಬಂದರೆ ಆಗ ಹಾರುವ ಕಲಾವಿದರು ಹಾರಾಡದಂತಾಗುತ್ತದೆ! ಅವರೂ ನಡೆಯಲಿಕ್ಕೆ ಕಲಿಯುತ್ತಾರೆ ಮತ್ತು ಯಕ್ಷಗಾನದ ಮೂಲಸ್ರೋತ ಸತ್ವಕ್ಕೆ ಬದ್ಧರಾಗಿ ನಡೆದುಕೊಳ್ಳುತ್ತಾರೆ.   

ಏನಾಗಿದೆ ಎಂದರೆ ಕೊಂಡದಕುಳಿಯವರಂತಹ ಕಲಾವಿದರು ಯಾರೊಡನೆಯೂ ವೈಷಮ್ಯವನ್ನು ಕಟ್ಟಿಕೊಳ್ಳಲು ಬಯಸುವುದಿಲ್ಲ, ವೈಷಮ್ಯ ತುಸುಮಟ್ಟಿಗೆ ಆದರೂ ಸಹಿಸಿಕೊಂಡು ಮೇಳವನ್ನು ಒಂದು ವಿಶಿಷ್ಟ ಸ್ವರೂಪಕ್ಕೆ ಒಗ್ಗಿಸುವ ಇಚ್ಛೆ ರಾಮಚಂದ್ರರಿಗಿದ್ದಂತಿಲ್ಲ. ಸಮಯಮಿತಿಯ ಮೇಳಗಳಲ್ಲಿ ಭಾಗವಹಿಸುವ ಕಲಾವಿದರು ಅಂತಹ ಅವಕಾಶಗಳು ಎಲ್ಲಿದ್ದರೂ ಅಲ್ಲಿಗೆ ಹಾರುತ್ತಾರೆ. ಬೆಳಿಗ್ಗೆ ಈ ಮೇಳದಲ್ಲಿ ಭಾಗವಹಿಸಿದ ಕಲಾವಿದನೇ ಸಂಜೆ ಇನ್ನೊಂದು ಮೇಳದ ಪ್ರದರ್ಶನದಲ್ಲಿ ಭಾವಹಿಸುತ್ತಾನೆ! ಆತ ಯಾವ ಮೇಳದವ ಎಂದು ಪ್ರೇಕ್ಷಕ ತಿಳಿಯಬೇಕು? ಸಿನಿಮಾ ನಟರಂತೇ ಬೇರೆ ಬೇರೇ ಬ್ಯಾನರುಗಳಡಿಯಲ್ಲಿ ಕೆಲಸಮಾಡುವ ಸಿನಿಕತೆ ಯಕ್ಷಗಾನ ಕಲಾವಿದರಲ್ಲಿ ಇರಬಾರದಲ್ಲ? ಕೊನೇಪಕ್ಷ ಹಿಡಿದ ಮೇಳದಲ್ಲಿ ಒಂದು ವರ್ಷವಾದರೂ ಇದ್ದು, ಅಲ್ಲಿಂದಾಚೆಗೆ ಬೇಲಿ ಹಾರದೇ ಬದ್ಧತೆಯನ್ನು ಮೆರೆದರೆ ಅದು ಮೇಳಕ್ಕೂ, ಕಲಾವಿದರಿಗೂ, ಯಕ್ಷಗಾನ ಕಲೆಗೂ ಕ್ಷೇಮ ಎಂಬುದು ನನ್ನಂತಹ ಹಲವರ ಅಭಿಪ್ರಾಯ.  

೫೦ ವರ್ಷಗಳಲ್ಲಿ ರಾಮಚಂದ್ರರು ನಡೆಸಿದ ಪಾತ್ರಗಳಿಗೂ ಉಳಿದ ಕಲಾವಿದರು ವಹಿಸಿದ ವೇಷಗಳಿಗೂ ಅಜಗಜಾಂತರವಿದೆ. ಪಾತ್ರವನ್ನು ಪೋಷಿಸುವುದಾದರೆ ಅದಕ್ಕೊಂದಷ್ಟು ಪೂರ್ವಸಿದ್ಧತೆ ಬೇಕು. ಪಾತ್ರಗಳನ್ನು ಪೋಷಿಸಲು ಸಾಕಷ್ಟು ಅಧ್ಯಯನಶೀಲರಾಗಿರಬೇಕು. ಮಹಾಕಾವ್ಯಗಳನ್ನು ಓದಿಕೊಂಡರೆ ಪಾತ್ರಗಳ ಒಳಹೊರಗಿನ ಮಹಿಮೆ ತಿಳಿಯುತ್ತದೆ. ಕೇವಲ ಅನ್ಯರು ವಹಿಸಿದ್ದ ಪಾತ್ರಗಳನ್ನು ನೋಡಿ, ಅವರ ಮಾತುಗಳನ್ನು ಕೇಳಿ, ಅನುಕರಿಸುವ ಜಾಯಮಾನದವರು ಪಾತ್ರಪೋಷಿಸಿದರೆ ಜನ ಬಹುಕಾಲ ಅದನ್ನು ಮೆಚ್ಚಲಾರರು. ಕಿವಿಗಡಚಿಕ್ಕುವಂತೇ ಒದರುವುದು, ಸುಗಮ ಸಂಗೀತದ ಮಾದರಿಯಲ್ಲಿ ಯಕ್ಷಗಾನದ ಹಾಡುಗಳನ್ನು ಹೇಳುವುದು, ತಾಳ-ಲಯಗಳ ತಪ್ಪುವಿಕೆ ಮೊದಲಾದವು ಇಂದಿನ ಭಾಗವತರನೇಕರ ಬಡಿವಾರದ ಬಂಡವಾಳ. ಚಪ್ಪಾಳೆಗಳ ಮಧ್ಯೆ ಇಂದ್ರಲೋಕದಿಂದ ಧರೆಗಿಳಿದಂತೇ  ರಂಗಕ್ಕೆ ಬಂದು ಆಸೀನರಾಗುವ ಕೆಲವು ಭಾಗವತರು ನಿಜಕ್ಕೂ ಯಕ್ಷಗಾನದ ಮೂಲರಸಕ್ಕೆ ಹಾಲಹಲವನ್ನು ಸೇರಿಸಿಬಿಟ್ಟಿದ್ದಾರೆ. ಯಕ್ಷಗಾನ ಒಂದು ವಿಭಿನ್ನ ಪ್ರಕಾರದ ಸಂಗೀತವೇ ಹೊರತು ಸಂಗೀತವೇ ಯಕ್ಷಗಾನವಲ್ಲ ಎಂಬುದನ್ನು ಅಂಥವರಿಗೆ ತಿಳಿಸಿಹೇಳುವವರು ಯಾರೂ ಇಲ್ಲ! ಬಡಾ ಬಡಗಿನ ಮಹೋನ್ನತ ತಿಟ್ಟುಗಳನ್ನು ಯಥಾವತ್ತಾಗಿ ನಿರೂಪಿಸುತ್ತಾ ಸಾತ್ವಿಕ ಭಾವದಿಂದ ಪ್ರೇಕ್ಷಕರ ಮನಸೂರೆಗೊಳ್ಳುವಲ್ಲಿ ರಾಮಚಂದ್ರರು ಯಶಸ್ಸು ಗಳಿಸಿದ್ದಾರೆ; ಅವರು ರಾಮನೂ ಆಗಬಲ್ಲರು, ರಾವಣನಾಗಿಯೂ ಅಷ್ಟೇ ಲೀಲಾಜಲವಾಗಿ ಅಭಿನಯಿಸಬಲ್ಲರು.

೫೦ನೇ ವಯಸ್ಸಿನ ಹೊಸ್ತಿಲಲ್ಲಿ, ಅಭಿಮಾನಿಗಳು ನಡೆಸಿದ ಕಾರ್ಯಕ್ರಮ ಸುಂದರವಾಗಿತ್ತು. ಬೆಂಗಳೂರಿನ ಎ.ಡಿ.ಎ. ರಂಗಮಂದಿರದಲ್ಲಿ ನಿನ್ನೆ ಅಂದರೆ ೨೮.೦೪.೨೦೧೩ ಭಾನುವಾರದಂದು ರಾಮಚಂದ್ರರ ಕಲಾಭಿಮಾನಿಗಳಿಗೆ ಸಂತಸ. ಸಭಾ ಕಾರ್ಯಕ್ರಮದಲ್ಲಿ ಅನೇಕ ಸಹಕಲಾವಿದರು ಒಡನಾಟದ, ಒಡಲಾಳದ ಅನುಭವಗಳನ್ನು ಹಂಚಿಕೊಂಡರು. ಮುಂಬೈನ ಪಲ್ಯ ಉಮೇಶ್ ಶೆಟ್ಟರು, ವಿಜಯವಾಣಿಯ ತಿಮ್ಮಪ್ಪ ಭಟ್ಟರು, ಆಕಾಶವಾಣಿಯ ದಿವಾಕರ ಹೆಗಡೆಯವರು, ಕೋಕಿಲವಾಣಿಯ ನೆಬ್ಬೂರು ನಾರಾಯಣ ಭಾಗವತರು, ಎನ್. ಆರ್. ಹೆಗಡೆಯವರು ಮೊದಲಾದವರು ಮಾತನಾಡಿದರು. ನಂತರ ಕೊಂಡದಕುಳಿಯವರಿಗೆ ಬಂಗಾರದ ಕಡಗ ತೊಡಿಸಿ, ಶಾಲುಹೊದೆಸಿ, ಬೆಳ್ಳಿಯ ಮೆರುಗಿನ ಕಿರೀಟ-ಸ್ಮರಣಿಕೆ-ಮಾನ ಪತ್ರ ನೀಡಿ ಸನ್ಮಾನ ನಡೆಯಿತು. ಕೊಂಡದಕುಳಿಯವರು ಭಾಗವಹಿಸಿದ ಯಕ್ಷಗಾನ ಪ್ರಸಂಗಗಳ ಡಿವಿಡಿ [ದೃಶ್ಯ ಸಾಂದ್ರಿಕೆ] ಬಿಡುಗಡೆಮಾಡಲಾಯ್ತು. ಸಭೆಯ ನಂತರದಲ್ಲಿ ’ಸತ್ಯವಾನ್ ಸಾವಿತ್ರಿ’ ಎಂಬ ಪೌರಾಣಿಕ ಪ್ರಸಂಗವನ್ನು ಆಡಿತೋರಿಸಿದರು.

ಸುವರ್ಣವರ್ಷವನ್ನು ತಲ್ಪಿದ ಕೊಂಡದಕುಳಿಯವರ ಸಾರ್ಥಕ ಸೇವೆ ಶತಕಾಲ ಮುನ್ನಡೆಯಲಿ, ಇನ್ನೂ ವಿವಿಧ ಆಯಾಮಗಳಲ್ಲಿ ಯಕ್ಷಗಾನದ ಮೆರುಗನ್ನು ಹೆಚ್ಚಿಸುವತ್ತ ಅವರ ಸಾತ್ವಿಕ ಕಳೆ ಜನರನ್ನು ರಂಜಿಸಲಿ, ಹಲವು ನ-ಕಾರಗಳ ಮಧ್ಯೆಯೂ, ತನ್ನಂತಹ ಭರವಸೆಯ ಕಲಾವಿದರನ್ನು ಹುಟ್ಟುಹಾಕುವ ಗುರು-ಶಿಷ್ಯ ವ್ಯವಸಾಯದ ಓಂಕಾರ ಅವರಿಂದ ಆಗಲಿ ಎಂಬುದು ಅಭಿಮಾನೀ ಬಳಗದ ಎಲ್ಲರ ಹಾರೈಕೆ, ಅಪೇಕ್ಷೆ ಮತ್ತು ನಿರೀಕ್ಷೆ ; ಈ ದನಿಯಲ್ಲಿ ನನ್ನ ದನಿಯೂ ಸೇರಿದೆ ಎಂದು ಹೊಸದಾಗಿ ಹೇಳಬೇಕಿಲ್ಲವಲ್ಲಾ?  

Friday, April 26, 2013

ಕಷ್ಟದಡವಿಯ ಕಳೆದು ಬೆಟ್ಟಹೊಳೆಗಳಹಾದು ...........

ಚಿತ್ರಋಣ : ಅಂತರ್ಜಾಲ 
ಕಷ್ಟದಡವಿಯ ಕಳೆದು ಬೆಟ್ಟಹೊಳೆಗಳಹಾದು .....

ಕಳೆದ ೬ ದಶಕಗಳ ಹಿಂದಿನ ಸ್ಥಿತಿಗತಿ ಇಂದಿನಂತಿರಲಿಲ್ಲ. ದೇಶದ ತುಂಬ ಬ್ರಿಟಿಷರ ಪಳೆಯುಳಿಕೆಗಳು ಕಾಣುತ್ತಿದ್ದವು. ನೈಸರ್ಗಿಕವಾಗಿ, ಧಾರ್ಮಿಕವಾಗಿ, ಆಧ್ಯಾತ್ಮಿಕವಾಗಿ, ಭೌತಿಕವಾಗಿ, ಆರ್ಥಿಕವಾಗಿ, ಸಾಂಸ್ಕೃತಿಕವಾಗಿ, ಅನುಷಂಗಿಕವಾಗಿ, ಅನುವಂಶಿಕವಾಗಿ ಶ್ರೀಮಂತವಾಗಿದ್ದ ನಮ್ಮ ಭಾರತದ ಹೆಚ್ಚಿನ ಸಂಪತ್ತನ್ನು ಬ್ರಿಟಿಷರು ಕೊಳ್ಳೆಹೊಡೆದುಕೊಂಡು ಹೊರಟುಹೋಗುವುದರ ಜೊತೆಗೆ ಕ್ರೈಸ್ತ ಮಿಶನರಿಗಳನ್ನು ಸ್ಥಾಪಿಸಿ ತಮ್ಮ ಮತವನ್ನು ಪ್ರಚುರಗೊಳಿಸಿ ಹೋದರು. ರಾಜರುಗಳ ಆಳ್ವಿಕೆ ಅಳಿದು ಚಪ್ಪನ್ನೈವತ್ತಾರು ದೇಶಗಳು ಏಕಛತ್ರದಡಿಯಲ್ಲಿ ಆಳ್ವಿಕೆಗೆ ಒಳಪಡುವಂತಹ ಪ್ರಜಾತಂತ್ರಾಧಾರಿತ ಸರಕಾರ ಆಡಳಿತಕ್ಕೆ ಬಂತು. ಜನರಲ್ಲಿ ಪ್ರಾಮಾಣಿಕತೆ ಮತ್ತು ಜೀವನದ ಮೌಲ್ಯಗಳು ಅಧಿಕವಾಗಿದ್ದ ಕಾರಣ ಹಣಕ್ಕಾಗಿಯೇ ಎಲ್ಲವನ್ನೂ ಮಾಡುವ ಮನೋಭಾವನೆ ಇರಲಿಲ್ಲ; ಮರ್ಯಾದೆ ಎಂಬ ಪದಕ್ಕೆ ಬಹಳ ಬೆಲೆಯಿತ್ತು. ಕಾಡುಮೇಡುಗಳು ತಕ್ಕಮಟ್ಟಿಗೆ ಚೆನ್ನಾಗಿಯೇ ಇದ್ದವು; ವನ್ಯಮೃಗಗಳೂ ಪಕ್ಷಿಗಳೂ ಉಂಡಲೆದು ಸುಖದಿಂದಿದ್ದವು. ಗಣಿಗಾರಿಕೆಯ ಅಬ್ಬರವಾಗಲೀ, ಕಾಡುಗಳ್ಳರ ಅಟ್ಟಹಾಸವಾಗಲೀ ಇರಲಿಲ್ಲ. ಇಂತಹ ಕಾಲಘಟ್ಟದಲ್ಲಿ, ಮಹಾರಾಷ್ಟ್ರದ ಸಜ್ಜನಗಡದಿಂದ ಕಾಲ್ನಡಿಗೆಯಲ್ಲೇ ಸಂತರೊಬ್ಬರು ಊರೂರು ದಾಟುತ್ತಾ ಕರ್ನಾಟಕದ ಶಿವಮೊಗ್ಗೆಯ ಸಾಗರ ಪ್ರಾಂತಕ್ಕೆ ಬಂದರು; ಅವರೇ ಭಗವಾನ್ ಶ್ರೀಧರ ಸ್ವಾಮಿಗಳು. 

ರಾಜಾಶ್ರಯದಲ್ಲೂ, ತದನಂತರ ಬ್ರಿಟಿಷರ ಆಳ್ವಿಕೆಯಲ್ಲೂ ಸಹ ಅಂಗಡಿಗಳ ಸುಂಕ ವಸೂಲಿ ಮಾಡಿಕೊಡುವ ಪತಕಿ[ಫಸಕೀ ಪದದ ಅಪಭ್ರಂಶ] ಎಂಬ ಮನೆತನದ ಕವಲೊಂದು ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ದೇಗಲೂರಿನಿಂದ ಹೈದರಾಬಾದ್ ನಗರಕ್ಕೆ ಬಂದು ನೆಲೆಸಿತ್ತು. ಸಮುದ್ರದ ನಂಟಿದ್ದರೂ ಉಪ್ಪಿಗೆ ಬಡತನ ಎಂಬಂತೇ ಸರಕಾರಕ್ಕೆ ಸುಂಕವನ್ನು ವಸೂಲುಮಾಡಿ ತಲ್ಪಿಸುತ್ತಿದ್ದರೂ ಬಡತನ ಎಂಬುದು ಈ ಕವಲಿಗೆ ಬಂದ ಪಿತ್ರಾರ್ಜಿತ ಆಸ್ತಿಯಾಗಿತ್ತು!  ಸರ್ಪಶಾಪದಿಂದ ನಿರ್ವಂಶವಾಗತೊಡಗಿದ್ದ ಪತಕಿ ಮನೆತನದ  ದೇಗಲೂರು ನಾರಾಯಣರಾವ್ ಪತಕಿ-ಕಮಲಾಬಾಯಿ ದಂಪತಿ, ಕುಲಪುರೋಹಿತರಾದ ಮಾರುತಿರಾಯರೆಂಬವರ ಸಲಹೆಯ ಮೇರೆಗೆ, ಗಾಣಗಾಪುರ ಕ್ಷೇತ್ರಕ್ಕೆ ತೆರಳಿ, ಭೀಮಾ-ಅಮರಜಾ ನದಿಗಳ ಸಂಗಮದಲ್ಲಿ ಸಂಕಲ್ಪ ಸ್ನಾನ ಪೂರೈಸಿ, ದತ್ತಸ್ವರೂಪಿ ನರಸಿಂಹ ಸರಸ್ವತಿಯವರ ನಿರ್ಗುಣ ಪಾದುಕಾ ದರ್ಶನವನ್ನು ಪಡೆದುಕೊಂಡು, ಗುರುಚರಿತ್ರೆ ಪಾರಾಯಣ, ಪ್ರದಕ್ಷಿಣೆ, ನಮಸ್ಕಾರ, ಮಧುಕರಿ ಭಿಕ್ಷೆ ಇವುಗಳಿಂದ ಶ್ರೀ ದತ್ತನ ಉಪಾಸನೆಯನ್ನು ಶ್ರದ್ಧಾ-ಭಕ್ತಿ ಪುರಸ್ಸರ ನೆರವೇರಿಸುತ್ತಿರಲಾಗಿ, ಅವರ ಅತೀವ ಭಕ್ತಿಗೆ ಒಲಿದ ಶ್ರೀದತ್ತಾತ್ರೇಯನು ದರ್ಶನವಿತ್ತು ಒಂದು ಪೂರ್ಣಫಲವನ್ನಿತ್ತು, "ನಿಮ್ಮ ಇಚ್ಛೆಯಂತೆಯೇ ನಿಮಗೆ ಲೋಕೋದ್ಧಾರಕ ಪುತ್ರನೊಬ್ಬ ಜನಿಸುತ್ತಾನೆ" ಎಂದು ಹರಸಿದನು. ಆನಂದತುಂದಿಲರಾದ ಪತಕಿ ದಂಪತಿ ವ್ರತಸಮಾಪ್ತಿ ನಡೆಸಿ, ಅನ್ನಸಂತರ್ಪಣೆ ಮಾಡಿ ಹೈದರಾಬಾದಿಗೆ ಹಿಂದಿರುಗಿದರು.

ಸ್ವಲ್ಪ ಕಾಲದಲ್ಲಿಯೇ ಕಮಲಾಬಾಯಿ ಗರ್ಭಿಣಿಯಾದರು. ಸಾಮಾನ್ಯ ಸ್ತ್ರೀಯರಿಗಿಂತ ವಿಲಕ್ಷಣವಾದ ಬಯಕೆಗಳು ಉದ್ಭವಿಸಿ, ಪುರಾಣ-ಪುಣ್ಯಕಥೆಗಳನ್ನು ಕೇಳುತ್ತಾ ಸತ್ಸಂಗವನ್ನೂ ದಾನ-ಧರ್ಮಗಳನ್ನೂ  ನಡೆಸುತ್ತಾ ದಿನಗಳೆದರು. ನವಮಾಸ ಸಮೀಪಿಸುವ ಹೊತ್ತಿಗೆ ಕಮಲಾಬಾಯಿಯವರ ತಾಯಿ ಬಯಾಬಾಯಿಯವರು ಮಗಳನ್ನು ಹೆರಿಗೆ-ಬಾಣಂತನಕ್ಕಾಗಿ ಗುಲ್ಬರ್ಗಾ ಸಮೀಪದ ಲಾಡ್ ಚಿಂಚೋಳಿಯಲ್ಲಿದ್ದ ತನ್ನ ಹಿರಿಯ ಮಗಳು ಚಂದೂಬಾಯಿಯ ಮನೆಗೆ ಕರೆತಂದರು. ಹಿರಿಯಳಿಯ ತ್ರ್ಯಂಬಕ ದೇಸಾಯಿಯವರು ಸೌಜನ್ಯ ಪೂರ್ವಕ ಸಹಕಾರವಿತ್ತು ಸೀಮಂತವನ್ನು ನೆರವೇರಿಸಿದರು. ಮಾರ್ಗಶೀರ್ಷ ಮಾಸ ಸಮೀಪಿಸಿತು. ಶಾಲಿವಾಹನಶಕೆ ೧೮೩೦ ಪ್ಲವಂಗನಾಮ ಸಂವತ್ಸರದ ಮಾರ್ಗಶೀರ್ಷ ಶುದ್ಧ ಪೌರ್ಣಮೀ ಗುರುವಾರ ೧೯.೧೦.೧೯೦೭ ರಂದು ಸಾಯಂಕಾಲ ೭:೨೩ ನಿಮಿಷಕ್ಕೆ ಸರಿಯಾಗಿ, ಕಮಲಾಬಾಯಿಯವರು ಪುತ್ರರತ್ನಕ್ಕೆ ಜನ್ಮವಿತ್ತರು. ಅಂದು ದತ್ತಜಯಂತಿಯಾದ್ದರಿಂದ ದತ್ತದೇವರ ಪಲ್ಲಕ್ಕಿ ದೇಸಾಯರ ಮನೆಯ ಮುಂದೆ ಅದೇ ಸಮಯಕ್ಕೆ ಬಂದು ನಿಂತಿತ್ತು!

ಮಗುವಿಗೆ ಸಮಯದಲ್ಲಿ ಜಾತಕರ್ಮವನ್ನು ನೆರವೇರಿಸಿ, ಕುಲದೈವ ವೆಂಕಟರಮಣನಲ್ಲಿ ಪ್ರಾರ್ಥಿಸಿಕೊಂಡಿದ್ದಂತೇ "ಶ್ರೀಧರ" ಎಂದು ನಾಮಕರಣ ಮಾಡಲಾಯ್ತು. || ನಿತ್ಯಮೇವ ಮೋಕ್ಷಶ್ರಿಯಂ ಧರತೀತಿ ಶ್ರೀಧರಃ ||-ಶ್ರೀಧರ ಎಂಬ ಹೆಸರಿನ ಔಚಿತ್ಯ ಇದಾಗಿದ್ದು, ಮಗುವಿಗೆ ಇದು ಅನ್ವರ್ಥವೂ ಆಗಿತ್ತು. ಹುಟ್ಟಿದ ಮಗುವಿಗೆ ೪ನೇ ತಿಂಗಳಲ್ಲಿ ಸೂರ್ಯದರ್ಶನ ಮಾಡಿಸಬೇಕೆಂಬ ಶಾಸ್ತ್ರದಂತೇ, ನಾರಾಯಣರಾವ್ ಪತಕಿಯವರು ಹೆಂಡತಿ-ಮಗುವನ್ನು ಹೈದರಾಬಾದಿನ ತನ್ನ ಮನೆಗೆ ಕರೆತಂದರು. ಕಣ್ಣಲ್ಲಿ ಕಣ್ಣಿಟ್ಟು ಮಗುವಿನ ಆರೋಗ್ಯ, ಬೆಳವಣಿಗೆ, ಆಟ-ಪಾಠಗಳ ಬಗ್ಗೆ ಎಲ್ಲತಾಯಂದಿರಂತೇ ಕಮಲಾಬಾಯಿಯವರೂ ನಡೆದುಕೊಂಡರೂ ದತ್ತನ ವರಪ್ರಸಾದದಿಂದ ಜನಿಸಿದ ಮಗುವಿನ ಮೇಲೆ ಭಕ್ತಿ ಪೂರಿತವಾಗಿ ನಡೆದುಕೊಳ್ಳುವ ಮಾತೃಪ್ರೇಮ ಅವರದಾಗಿತ್ತು. ಅಮ್ಮನಿಂದ "ರಾಜಾ" ಎಂದೇ ಕರೆಯಲ್ಪಡುತ್ತಿದ್ದ ಶ್ರೀಧರರು ಬಾಲ್ಯಸಹಜ ಚಟುವಟಿಕೆಗಳಲ್ಲಿ ತೊಡಗಿದ್ದರೂ ಮಗುವಿನಲ್ಲಿ ವಯೋಮಾನಕ್ಕೆ ಮೀರಿದ ಕೆಲವು ಬೌದ್ಧಿಕ ವೈಶಿಷ್ಟ್ಯಗಳು ಆಗಾಗ ಗೋಚರಿಸುತ್ತಿದ್ದವು.

ಅಣ್ಣ ತ್ರ್ಯಂಬಕ, ಅಕ್ಕ ಗೋದಾವರಿಗೂ ಹಾಗೂ ರೇಣುಕೆ[ನಾರಾಯಣ ರಾವ್ ಪತಕಿಯವರ ಗತಿಸಿಹೋಗಿದ್ದ ಹಿರಿಯ ಪತ್ನಿಯ ಮಗಳು]ಗೂ ’ರಾಜ’ ಕಣ್ಮಣಿಯಾಗಿದ್ದ; ಎಲ್ಲರೂ ರಾಜನನ್ನು ಎತ್ತಿ ಮುದ್ದಾಡುವವರೇ. ಆರನೇ ತಿಂಗಳಲ್ಲಿ ಅನ್ನಪ್ರಾಶನ ನಡೆದು, ವರ್ಷತುಂಬಿದಾಗ ವರ್ಧಂತಿಯೂ ನಡೆಯಿತು. ಬಂಧುಬಾಂಧವರು ಹಿರಿಯರು ಬಂದು ಆಶೀರ್ವದಿಸಿದರು. ಹೀಗಿರುತ್ತಾ ಶ್ರೀಧರನಿಗೆ ೩ನೇ ವರ್ಷ ತುಂಬುವಾಗ ತಂದೆ ನಾರಾಯಣ ರಾಯರು ಅಕಾಲಮೃತ್ಯುವಿಗೀಡಾದರು; ಗತಿಸಿದಾಗ ನಾರಾಯಣ ರಾಯರ ವಯಸ್ಸು ೫೦ ವರ್ಷ. ಪತಿಯ ಮರಣ ಕಮಲಾಬಾಯಿಯವರನ್ನು ಧೃತಿಗೆಡಿಸಿತು. ಹಿರಿಯಮಗ ತ್ರ್ಯಂಬಕನಿಗಿನ್ನೂ ೧೫-೧೬ ವಯಸ್ಸು, ಶ್ರೀಧರ ಮೂರುವರ್ಷದವ.  ೧೦ ವರ್ಷದ ಗೋದಾವರಿಗೆ ಅದಾಗಲೇ ಮದುವೆಯಾಗಿತ್ತು. ಎಳವೆಯಲ್ಲೇ ವಿದ್ಯಾಭ್ಯಾಸವನ್ನು ನಿಲ್ಲಿಸಿ ಜೀವನೋಪಾಯಕ್ಕಾಗಿ ದುಡಿದು ಸಂಸಾರ ನಿಭಾಯಿಸಬೇಕಾದ ಒತ್ತಡ ತ್ರ್ಯಂಬಕನ ಹೆಗಲಮೇಲೆ ಬಿತ್ತು. ತಾಯಿಯ ದುಗುಡ ಮತ್ತು ಕಣ್ಣೀರನ್ನು ಗಮನಿಸುತ್ತಿದ್ದ ಮುಗ್ಧ ಶ್ರೀಧರ "ಅಮ್ಮಾ ಯಾಕೆ ಅಳುತ್ತೀಯಾ? ಇಲ್ನೋಡಿಲ್ಲಿ...ಮ್ಯಾಂವ್ ಮ್ಯಾಂವ್ ...ಬೌಬೌ" ಎಂದು ಪ್ರಾಣಿಗಳ ಕೂಗನ್ನು ಅಣಕಿಸಿ ತೋರಿಸಿ ತಾಯಿಗೆ ಸಮಾಧಾನಮಾಡಲು ತೊಡಗುತ್ತಿದ್ದ. ’ರಾಜ’ನ ಬಾಲಲೀಲೆಗಳನ್ನು ನೋಡಿ ತಮ್ಮ ದುಃಖವನ್ನು ಆ ತಾಯಿ ತುಸು ಮರೆಯುತ್ತಿದ್ದರು.

ಹೀಗಿರುತ್ತಾ, ಊರಿನಲ್ಲಿ ಸಿಡುಬು ರೋಗ ಹಬ್ಬಿ ಅದು ಶ್ರೀಧರನನ್ನೂ ಸಂಪೂರ್ಣವಾಗಿ ಬಾಧಿಸಿತು. ತಾಯಿಯ ಅಕ್ಕರೆಯ ಆರೈಕೆಯಲ್ಲಿ ಅಂತೂ ಸಿಡುಬು ಗುಣವಾಯ್ತು. ಏಕಸಂಧಿಗ್ರಾಹಿಯಾದ ಶ್ರೀಧರ ತಾಯಿಯ ಜೊತೆ ಹರಿಕಥೆಗಳನ್ನು ಕೇಳಲು ಹತ್ತಿರದ ದೇವಸ್ಥಾನಗಳಿಗೆ ಹೋಗುತ್ತಿದ್ದ. ಹೈದರಾಬಾದಿನಲ್ಲಿ ಅವರು ವಾಸವಾಗಿದ್ದ ಮನೆಯ ಸಮೀಪದಲ್ಲಿ, ಸಮರ್ಥ ಪರಂಪರೆಗೆ ಸೇರ್ರಿದ ಶ್ರೀ ನಾರಾಯಣ ಮಹಾರಾಜರ ಮಠವೊಂದಿತ್ತು. ಈ ಸಂತರು ೧೨ ವರ್ಷಗಳ ಕಾಲ ಸಜ್ಜನಗಡದಲ್ಲಿ ತಪಸ್ಸುಮಾಡಿ ಶ್ರೀರಾಮನ ಸಾಕ್ಷಾತ್ಕಾರವನ್ನು ಮಾಡಿಕೊಂಡಿದ್ದರು. ಶ್ರೀಧರನ ತಂದೆಯ ಕಡೆಯ ಸಂಬಂಧದ ನಾಗೋಬರಾಯರ ಪತ್ನಿ ತ್ರಿವೇಣಿಬಾಯಿಯವರು ಈ ಸಂತ ಉಪದೇಶಾನುಗ್ರಹವನ್ನು ಪಡೆದಿದ್ದರು. ಆದ್ದರಿಂದ ಆಕೆಯೊಡನೆ ಕಮಲಾಬಾಯಿಯವರು ಶ್ರೀಧರನನ್ನು ಕರೆದುಕೊಂಡು ಮಠಕ್ಕೆ ಹೋಗಿಬರುತ್ತಿದ್ದರು. ಮಠದಲ್ಲಿ ಸಮರ್ಥರ ತೈಲಚಿತ್ರವು ಬಾಲಕನನ್ನು ಬಹುವಾಗಿ ಆಕರ್ಷಿಸಿತ್ತು; ಗಂಟೆಗಟ್ಟಲೆ ತದೇಕಚಿತ್ತದಿಂದ ಆ ಚಿತ್ರವನ್ನು ನೋಡುತ್ತಾ ಕುಳಿತುಕೊಳ್ಳುತ್ತಿದ್ದನಾ ಶ್ರೀಧರ.

ಮಠದಲ್ಲಿ ಪುರಾಣಿಕರು ರಾಮಾಯಣವನ್ನು ಹೇಳುತ್ತಿದ್ದರೆ, ಕಥಾಭಾಗವನ್ನು ಅಂದಿಗೆ ಮುಗಿಸಿ ಮುಂದಿನ ಭಾಗವನ್ನು ನಾಳೆ ಹೇಳುವೆನೆಂದರೆ ಬಿಡಲೊಲ್ಲ ಶ್ರೀಧರ. ರಾಮನಮೇಲೆ ಎಲ್ಲಿಲ್ಲದ ಪ್ರೀತಿ ಮತ್ತು ಭಕ್ತಿಭಾವ ಶ್ರೀಧರನಿಗೆ. ದೇವಸ್ಥಾನ, ಪ್ರವಚನ, ನಾಮಸಂಕೀರ್ತನೆ, ಹರಿಕಥೆ ಇವುಗಳಲ್ಲೆಲ್ಲಾ ಬಾಲನಿಗೆ ಅತೀವ ಆಸಕ್ತಿ ಬೆಳೆಯಿತು. ಪ್ರವಚನದ ತತ್ವಗಳನ್ನು ಹೀರಿಕೊಂಡ ಶ್ರೀಧರ ಮನೆಗೆ ತೆರಳಿದ ನಂತರ ಆ ಪ್ರದೇಶದ ಮಕ್ಕಳಿಗೆ ತನ್ನ ಬಾಲಭಾಷೆಯಲ್ಲೇ ಪ್ರವಚನ ನಡೆಸುತ್ತಿದ್ದ; ’ರಾಮಲೀಲಾ’ ನಾಟಕ ನಡೆಸಿ ಅದರಲ್ಲಿ ರಾಮನ ಪಾತ್ರವನ್ನು ತಾನೇ ನಿರ್ವಹಿಸುತ್ತಿದ್ದ. "ಆಂಜನೇಯ ಚಿರಂಜೀವಿಯಂತೆ, ಆತ ಈಗ ಎಲ್ಲಿದ್ದಾನೆ? ರಾಮನಲ್ಲಿ ನಿಶ್ಚಲ ಭಕ್ತಿಯಿದ್ದರೆ ಆಂಜನೇಯನಂತೇ ನಾನೂ ಎತ್ತರಕ್ಕೆ ಜಿಗಿಯಬಹುದೇ?" ಎಂಬಿತ್ಯಾದಿ ಪ್ರಶ್ನೆಗಳನ್ನು ಅಮ್ಮನಲ್ಲಿ ಕೇಳುತ್ತಿದ್ದ.      

ಶ್ರೀಧರನ ಬಾಲ್ಯ ಮುಂದುವರಿದು ಶಾಲೆಗೆ ಸೇರಿಸಿದ್ದರು. ರಾಮನಾಮದ ಮಹಿಮೆಯನ್ನು ತಿಳಿದ ಶ್ರೀಧರ ಶ್ರೀರಾಮನಲ್ಲಿ ಅಚಲವಾದ ಶ್ರದ್ಧಾ-ಭಕ್ತಿಗಳನ್ನು ಹೊಂದಿದ್ದ. ಅಣ್ಣ ತ್ರ್ಯಂಬಕರು ಕುಲಪುರೋಹಿತರಾದ ಮಾರುತಿರಾಯರಲ್ಲಿ ವೇದಾಧ್ಯಯನ ಮಾಡಿ ಖ್ಯಾತ ಜ್ಯೋತಿಷಿಯೆನಿಸಿದ್ದರು; ನಾಲಿಗೆಯಲ್ಲಿ ಮತ್ಸ್ಯ ಚಿನ್ಹೆಯನ್ನು ಹೊಂದಿದ್ದ ಅವರು ಹೇಳಿದ್ದೆಲ್ಲಾ ನಿಜವಾಗುತ್ತಿತ್ತು. ತಮ್ಮ ಶ್ರೀಧರನಿಗೆ ೮ನೇ ವಯಸ್ಸಿನಲ್ಲಿ ಉಪನಯವನ್ನು ಅಮ್ಮನ ಅಣತಿಯಂತೇ ನೆರವೇರಿಸಿದರು ತ್ರ್ಯಂಬಕರು.  ೨೫-೨೬ ವಯಸ್ಸಿನ ತರುಣ ತ್ರ್ಯಂಬಕರು, ಪ್ಲೇಗಿನ ನಂತರ ಊರಿಗೆ ದಾಳಿಯಿಟ್ಟ ಗುದ್ದಮ್ಮನ ಬೇನೆ[ಇನ್ ಪ್ಲುಯೆಂಜಾ]ಗೆ ಬಲಿಯಾಗಿ ಹೋದರು. ಅಮ್ಮ ಮತ್ತೆ ಕಂಗಾಲಾದರು. ಇನ್ನೂ ಪ್ರಾಥಮಿಕ ೩ನೇ ತರಗತಿಯಲ್ಲಿ ಓದುತ್ತಿದ್ದ ಶ್ರೀಧರ ಸಂಸಾರದ ಭಾರವನ್ನು ಎಳೆಯಬಲ್ಲನೇ? ಪುತ್ರವಿಯೋಗದ ದುಃಖದೊಂದಿಗೆ ನಿತ್ಯದ ಅಶನಕ್ಕೂ ಪರಿತಾಪ ಪಡುವಂಥಾ ಸ್ಥಿತಿ ಕಮಲಾಬಾಯಿಯವರದ್ದಾಯ್ತು.

ಚಿಂತಾಯಾಶ್ಚ ಚಿತಾಯಾಶ್ಚ ಬಿಂದುಮಾತ್ರ ವಿಶೇಷತಾ |
ಚಿತಾ ದಹತಿ ನಿರ್ಜೀವಂ ಚಿಂತಾ ದಹತಿ ಜೀವಿನಂ ||

ಪುತ್ರಶೋಕವೊಂದೆಡೆ, ಶ್ರೀಧರನ ಭವಿಷ್ಯದ ಚಿಂತೆ ಇನ್ನೊಂದೆಡೆ ಈ ಎರಡರ ನಡುವೆ ಕಮಲಾಬಾಯಿಯವರ ಮನಸ್ಸು ನುಗ್ಗಾಗಿಹೋಯ್ತು. ಮಗ ತ್ರ್ಯಂಬಕನನ್ನು ಕಳೆದುಕೊಂಡು ೬ ತಿಂಗಳೂ ಆಗಿರಲಿಲ್ಲ, ಅಷ್ಟರಲ್ಲೇ ಮಗಳ ಪತಿಯಮನೆಯಿಂದ ಮಗಳು ಗೋದಾವರಿ ಗತಿಸಿಹೋದ ಸುದ್ದಿ ಆಘಾತವನ್ನು ತಂದಿತ್ತು. ಚಿಂತೆಯಿಂದ ದಹಿಸಲ್ಪಡುತ್ತಿದ್ದ ಅಮ್ಮನ ಮನಸ್ಸನ್ನು ತನ್ನ ವಿವಿಧ ತತ್ವಬೋಧೆಗಳಿಂದ ಶ್ರೀಧರ ಸಮಾಧಾನಿಸಯತ್ನಿಸಿದರೂ ಚಿಂತೆ ಅವರನ್ನು ಪೂರ್ತಿಯಾಗಿ ಬಿಡಲೇ ಇಲ್ಲ. ಚಿಂತೆಯಿಂದ ಹುಟ್ಟಿದ ಬೇನೆಗಳು ಅವರ ಶರೀರ ಬಳಲುವಂತೇ ಮಾಡಿದವು. ಅಮ್ಮನ ಬಳಲುವಿಕೆಯನ್ನು ಕಂಡ ಶ್ರೀಧರನಿಗೆ ಇದ್ದ ಆಯ್ಕೆಗಳು ಎರಡು: ಒಂದೇ ಶಾಲೆಗೆ ಹೋಗುವುದನ್ನು ನಿಲ್ಲಿಸಿ ಅಮ್ಮನ ಶುಶ್ರೂಷೆಯಲ್ಲಿ ತೊಡಗಬೇಕು ಅಥವಾ ಅಮ್ಮನನ್ನು ಬಿಟ್ಟು ಶಾಲೆಗೆ ಹೋಗಬೇಕು. ಮಾತೃಸೇವೆಗಿಂತ ಮಿಗಿಲಾದ ಕರ್ತವ್ಯ ತನಗಿಲ್ಲವೆಂದು ಬಗೆದ ಶ್ರೀಧರ ಶಾಲೆಗೆ ಹೋಗುವುದನ್ನು ನಿಲ್ಲಿಸಿ ಅಮ್ಮನ ಆರೈಕೆಯಲ್ಲಿ ತೊಡಗಿಕೊಂಡ.

ಸನ್ ೧೯೨೧, ದುಂದುಭಿ ಸಂವತ್ಸರದ ಮಾರ್ಗಶೀರ್ಷ ಶುದ್ಧ ಅಷ್ಟಮಿ ಮಂಗಳವಾರ, ಮೃತ್ಯುಶಯ್ಯೆಯಲ್ಲಿರುವ ತಾಯಿಯ ತಲೆಯನ್ನು ಶ್ರೀಧರ ನೇವರಿಸುತ್ತಾ ಕುಳಿತಿದ್ದಾನೆ. ಅತನ ಪುಟ್ಟ ಕೈಗಳನ್ನು ತಮ್ಮ ಬಡಕಲು ಕೈಯ್ಯಿಂದ ಸವರಿ ಅತ್ಯಂತ ಪ್ರೇಮದಿಂದ ಎದೆಯಮೇಲಿಟ್ಟುಕೊಂಡ ಕಮಲಾಬಾಯಿಯವರು, "ರಾಜಾ! ಇನ್ನು ನಿನಗೆ ದೇವರೇ ರಕ್ಷಕ" ಎಂದು ಗದ್ಗದ ಸ್ವರದಿಂದ ಉದ್ಗರಿಸಿದರು. ಅದನ್ನು ಕೇಳಿಯೂ ಕೇಳದಂತಿದ್ದ ಶ್ರೀಧರ "ಅಮ್ಮಾ ನನ್ನಿಂದ ಯಾವ ಸೇವೆಯಾಗಬೇಕು ಹೇಳಮ್ಮಾ" ಅನ್ನುತ್ತಲೇ ಇದ್ದ. ಶ್ರೀಧರ ಯಾರೆಂಬುದನ್ನು ತನ್ನ ಅಂತರಂಗ ಅರಿತಿದೆಯೆಂಬುದರ ಕುರಿತು ಆ ತಾಯಿ ಮಾತನಾಡ ಹತ್ತಿದ್ದರು. ಶ್ವಾಸೋಚ್ವಾಸದ ಸೆಳೆತ ಜೋರಾಗಿದ್ದು ಸರಿಯಾಗಿ ಮಾತನಾಡಲು ಆಗುತ್ತಿರಲಿಲ್ಲ. ಹಾಗೆಯೇ ಸ್ವಲ್ಪ ಚೇತರಿಸಿಕೊಂಡು ಮೆಲ್ಲಗೆ, "ಶ್ರೀಧರ! ನನ್ನ ಮುದ್ದಿನ ಸಿರಿಧರ! ಮಗೂ ನೀನು ಜಗತ್ತಿನಲ್ಲಿನ ಎಲ್ಲ ಸ್ತ್ರೀಯರನ್ನೂ ನನ್ನಂತೆಯೇ ನೋಡಿ ಅವರ ಉದ್ಧಾರವನ್ನು ಮಾಡಬೇಕು. ಈ ಮುಂದೆ ನೀನು ಮಾಡುವ ಆ ಸೇವೆಯೇ ನನ್ನ ಅಖಂಡ ಸೇವೆ. ಯಾವ ಸ್ತ್ರೀಯನ್ನಾದರೂ ಸಮತ್ವದ ದೃಷ್ಟಿಯಿಂದ ನೋಡದೆ ಸ್ತ್ರೀಯೆಂಬ ಭೇದ ಕಲ್ಪನೆಯ ದೃಷ್ಟಿಯಿಂದ ನೋಡುವುದೇ ಪರಮಾರ್ಥಕ್ಕೆ ಧಕ್ಕೆ. ಶ್ರೀಧರಾ! ನಿನಗೆ ನಿರ್ಗುಣ ನಿಸ್ಪೃಹ ವೃತ್ತಿಯ ಸಮತ್ವ ಭಾವನೆಯ ಸರ್ವ ಪ್ರಕಾರವೂ ಗೊತ್ತಿರುವುದರಿಂದ ಹೆಚ್ಚು ಹೇಳುವುದೇನಿದೆ?

ನನಗೆ ಇನ್ನು ಯಾವ ಇಚ್ಛೆಯೂ ಇಲ್ಲ. ನನ್ನ ಅಂತ್ಯಕಾಲದ ಮಾತಿನಂತೆ ನಡೆದರೆ ವಂಶವು ಬೆಳೆಯುವುದು ಹೇಗೆ? ಎಂದು ಜನರು ಆಡಿಕೊಳ್ಳಬಹುದು. ಆದರೆ ಅದೆಲ್ಲವನ್ನೂ ನಾನು ಚೆನ್ನಾಗಿ ಯೋಚಿಸಿಯೇ ಹೇಳುತ್ತಿದ್ದೇನೆ. ನನ್ನ ಮುದ್ದಿನ ಕರುಳಕುಡಿಯನ್ನು ಜಗತ್ತಿನ ಉದ್ಧಾರ ಮಾಡಲೆಂದೇ ಭಾರತಾಂಬೆಯೆ ಮಡಿಲಲ್ಲಿ ಬಿಟ್ಟು ಹೋಗುತ್ತಿದ್ದೇನೆ! ನನ್ನ ಮಾತನ್ನು ನೀನು ಎಂದಿಗೂ ತೆಗೆದು ಹಾಕಿಲ್ಲ. ನಡೆಸುವೆಯೆಂಬ ದೃಢವಾದ ನಂಬಿಕೆ ನನಗಿದೆ" ಎಂದುಹೇಳಿ ಕ್ಷಣಕಾಲ ಸುಮ್ಮನಾದರು. "ಅಮ್ಮಾ ನಿನ್ನ ವಚನವನ್ನು ಪಾಲಿಸುತ್ತೇನೆ" ಎಂಬ ಶ್ರೀಧರನ ಪ್ರತಿಕ್ರಿಯೆಯನ್ನು ಕೇಳಿ ಕಮಲಾಬಾಯಿಯವರ ಮನದುಂಬಿಬಂತು. ತಡವರಿಸುತ್ತಾ, "ಶ್ರೀಧರಾ! ನನಗೆ ಯಾವ ಇಚ್ಛೆಯೂ ಉಳಿದಿಲ್ಲವಪ್ಪಾ, ನಾನು ಆನಂದಗೊಂಡಿದ್ದು ತೃಪ್ತಳಾಗಿದ್ದೇನೆ. ಅನಂತಾನಂತ ಸ್ವರೂಪದಲ್ಲಿ ಸೇರುತ್ತೇನೆ" -ಕ್ಷೀಣಸ್ವರದಲ್ಲಿ ಹೀಗೆ ಉಲಿಯುತ್ತಾ ಅನಂತದಲ್ಲಿ ಐಕ್ಯವಾದರು. ತಮ್ಮ ಬಂಧು-ಬಳಗದವರೊಡನೆ ೧೪ರ ಬಾಲಕ ಶ್ರೀಧರ ತಾಯಿಯ ಅಂತ್ಯಸಂಸ್ಕಾರವನ್ನು ವಿಧಿವತ್ತಾಗಿ ನಡೆಸಿದ.

ತಾಯಿ, ತಂದೆ, ಅಕ್ಕ, ಅಣ್ಣ ಎಲ್ಲರನ್ನೂ ಕಳೆದುಕೊಂಡ ಶ್ರೀಧರ, ಚಿತ್ತಸ್ಥೈರ್ಯವನ್ನು ಕಳೆದುಕೊಳ್ಳದೇ, ದೊಡ್ಡಪ್ಪ ದೇಸಾಯರ ಸಹಕಾರದಿಂದ ಗುಲ್ಬರ್ಗಾದಲ್ಲಿ ತನ್ನ ಮಾಧ್ಯಮಿಕ ಓದಿಗಾಗಿ ಶಾಲೆಗೆ ಸೇರಿದ. ೬ನೇ ತರಗತಿಯಲ್ಲಿ ಶ್ರೀಧರನಿರುವಾಗ,  ತರಗತಿಯ ಮಕ್ಕಳಿಗೆ ಜೀವನದ ಧ್ಯೇಯಗಳನ್ನು ಬರೆಯುವಂತೇ ಶಿಕ್ಷಕರು ಸೂಚಿಸಿದರು. ಮನಸ್ಸಿನಲ್ಲಿ ಇದ್ದುದನ್ನು ಬರೆದರೆ ಉಳಿದವರ ಅಪಹಾಸ್ಯಕ್ಕೆ ಈಡಾದೇನೋ ಎಂಬ ಅಳುಕಿನಲ್ಲೇ ಶ್ರೀಧರ "To obtain complete grace of God and to serve mankind is the goal of my life" [ಪರಮಾತ್ಮನ ಸಂಪೂರ್ಣ ಕೃಪೆಯನ್ನು ಪಡೆಯುವುದು ಮತ್ತು ಜನಸೇವೆ ಮಾಡುವುದೇ ನನ್ನ ಗುರಿ] ಎಂದು ಎಂದು ಬರೆದೇಬಿಟ್ಟಿದ್ದ.  

ಶ್ರೀಧರನಿದ್ದವ ಭಗವಾನ್ ಸಮರ್ಥ ಶ್ರೀಧರಸ್ವಾಮೀ ಮಹಾರಾಜರೆನಿಸುವವರೆಗೆ ಶ್ರೀಧರರು ನಡೆದ ಹಾದಿ ಬಹಳ ದುರ್ಗಮವಾದುದು. ಅವರ ಹುಟ್ಟಿನಿಂದ ಮಾಧ್ಯಮಿಕ ಶಾಲೆಯ ವರೆಗಿನ ವಿಷಯವನ್ನು ಅತಿಸಂಕ್ಷಿಪ್ತವಾಗಿ ಹೇಳಲು ಹೊರಟ ಪ್ರಯತ್ನವೇ ಇಷ್ಟು ಉದ್ದದ ಲೇಖನಕ್ಕೆ ಕಾರಣವಾಯ್ತು. ಇಷ್ಟಿದ್ದೂ ಅವರ ಬಾಲಾಲೀಲೆಗಳನ್ನಾಗಲೀ, ಮಾಧ್ಯಮಿಕ ಶಾಲೆಯ ಮುಂದಿನ ಹಂತದ ವಿಷಯಗಳನ್ನಾಗಲೀ, ಸಾಧುಜೀವನ-ಎದುರಿಸಿದ ಪರೀಕ್ಷೆಗಳು-ಉಪವಾಸ-ಸಂನ್ಯಾಸ-ತಪಸ್ಸು-ಸಾಧನೆ-ಶಿಷ್ಯಾನುಗ್ರಹ-ಅಘಟಿತಘಟನಾ ಕೌತುಕಗಳ ಬಗ್ಗೆ ಬರೆಯುವುದು ಬಹಳ ವಿಸ್ತಾರದ ಇತಿಹಾಸದ ವಿಷಯ. [’ಸದ್ಗುರು ಭಗವಾನ್ ಶ್ರೀಶ್ರೀಧರ ಚರಿತ್ರೆ’ ಎಂಬ ಸಾಂಗ್ರಾಹ್ಯ ಗ್ರಂಥವು ವರದಹಳ್ಳಿಯ ಶ್ರೀಧರಾಶ್ರಮದಲ್ಲಿಯೂ ಮತ್ತು ಬೆಂಗಳೂರಿನ ವಸಂತಪುರದಲ್ಲಿರುವ ಶ್ರೀಧರ ಪಾದುಕಾ ಮಂದಿರದಲ್ಲಿಯೂ ಲಭ್ಯ, ಆಸಕ್ತ ಆಸ್ತಿಕ ಮಹಾಶಯರು ಅದನ್ನು ಖರೀದಿಸಿ ಓದಿಕೊಳ್ಳಬಹುದಾಗಿದೆ].ಶ್ರೀಧರರು ಪ್ರತೀ ಹಂತದಲ್ಲಿಯೂ ತಾನು ಭಗವಂತನ ಪ್ರತಿರೂಪವೆಂಬುದನ್ನು ತನ್ನ ಕೃತಿಗಳಿಂದಲೇ ಹೇಳಿದರೇ ವಿನಃ ನೇರವಾಗಿ ತನ್ನ ಬಗೆಗೆ ಹೇಳಿಕೊಳ್ಳಲಿಲ್ಲ. ಬಾಲ್ಯದ, ಪೂರ್ವಾಶ್ರಮದ ಕಷ್ಟಕೋಟಲೆಗಳು ಶ್ರೀಧರರ ವಿರಕ್ತಮಾರ್ಗಕ್ಕೆ ಸೋಪಾನವಾದವು. ತನ್ನ ವೈಯ್ಯಕ್ತಿಕ ದೇಹದ ಬಾಧೆಗಳನ್ನು ಮೀರಿ, ದೇಶದುದ್ದಗಲಕ್ಕೂ ಚಲಿಸಿ, ಬಹುಜನರ ತಾಪ-ತ್ರಯ [ಅಧಿದೈವಿಕ, ಅಧಿಭೌತಿಕ ಮತ್ತು ಆಧ್ಯಾತ್ಮಿಕ ಸಮಸ್ಯೆ]ಗಳನ್ನು ಬಗೆಹರಿಸಿದವರು.

ಸದ್ಗುರು ಭಗವಾನರು ೧೯೫೪ ರಲ್ಲಿ ಸಾಗರ ಪಟ್ಟಣದಿಂದ ೫ ಕಿ.ಮೀ. ದೂರದಲ್ಲಿರುವ ’ವದ್ದಳ್ಳಿ’ [ಒದ್ದಳ್ಳಿ]ಎಂಬ ದಂಡಕಾರಣ್ಯವನ್ನು ಏಕಾಂತಕ್ಕಾಗಿ ಆಯ್ದುಕೊಂಡರು. ಅಗಸ್ತ್ಯ ಮುನಿಗಳ ತಪೋಭೂಮಿಯಾಗಿದ್ದ ಆ ಪ್ರದೇಶದಲ್ಲಿ ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ದುರ್ಗಾಂಬಾ ದೇವಸ್ಥಾನವಿದ್ದು, ರಕ್ಕಸರನ್ನು ದೇವಿ ತನ್ನ ಕಾಲಿನಿಂದ ಒದ್ದದ್ದರಿಂದ ’ವದ್ದಳ್ಳಿ’ ಎಂದು ಜನರ ಬಾಯಲ್ಲಿ ಅದು ನೆಲೆನಿಂತಿತು ಎನ್ನುತ್ತದೆ ಸ್ಥಳಪುರಾಣ. ಗುರುಗಳು ಅಲ್ಲಿಗೆ ಬಂದಾಗ, ದೇವಸ್ಥಾನದ ಮುಕ್ತದ್ವಾರದೊಳಹೊಕ್ಕು ಗರ್ಭಗುಡಿಯಲ್ಲಿ ಹೋಗಿ ಕುಳಿತುಕೊಳ್ಳುವ ಹುಲಿಗಳಿದ್ದವಂತೆ; ಆಗೀಗ ಹೆದರುತ್ತಲೇ ಬಂದು ಪೊಜೆಗೆ ಪ್ರಯತ್ನಿಸಿ ಹೋಗುತ್ತಿದ್ದ ಅರ್ಚಕರನ್ನು ಬಿಟ್ಟರೆ ಜನ ಓಡಾಡುವ ಜಾಗ ಅದಾಗಿರಲಿಲ್ಲ. ಹುಲಿಗಳನ್ನು ತಮ್ಮ ತಪೋಬಲದಿಂದ ಸ್ಥಳಾಂತರಿಸಿ ದೇವಿಯ ಪೂಜಾ ಕೈಂಕರ್ಯಗಳು ಸಾಂಗವಾಗಿ ನಡೆಯುವಂತೇ ನೋಡಿಕೊಂಡು, ಅದೇ ದೇವಸ್ಥಾನದ ಹೊರಭಾಗದಲ್ಲಿ ಶ್ರೀಧರರು ತಮ್ಮ ವಸತಿ ಇಟ್ಟುಕೊಂಡು ಪ್ರವಚನಗಳನ್ನೂ ನಡೆಸಿದರು. ಕಾಲಾನಂತರ ಲೋಕಾಂತದಿಂದ ಏಕಾಂತಕ್ಕೆ ಭಂಗವುಂಟಾಗಬಾರದೆಂಬ ಅನಿಸಿಕೆಯಿಂದ ತಳಕುಟಿ, ಮಧ್ಯಕುಟಿ ಮತ್ತು ಶಿಖರಕುಟಿ ಎಂಬ ಮೂರು ಜಾಗಗಳಲ್ಲಿ ತಪಸ್ಸನ್ನು ನಡೆಸಿದರು. ಶಿಖರಕುಟಿಯ ಗುಹೆಯಪಕ್ಕದಲ್ಲಿ ಧರ್ಮಧ್ವಜವನ್ನು ಸ್ಥಾಪಿಸಿದರು. ರಾಮದೇವಸ್ಥಾನ, ಪುಷ್ಕರಣಿಗಳು, ವ್ಯಾಸಗುಹೆ, ಹಲವು ಯತಿಗಳ ಸಮಾಧಿಗಳು, ಆಂಜನೇಯನ ಸನ್ನಿಧಿ ಮೊದಲಾದ ವೈಶಿಷ್ಟ್ಯಗಳನ್ನು ಹೊಂದಿದ ವರದಹಳ್ಳಿ ಪ್ರಮುಖ ಧಾರ್ಮಿಕ ಕೇಂದ್ರವಾಗಲಿದೆಯೆಂದು ಗುರುಗಳು ಹೇಳಿದ್ದು, ಈಗ ಫಲಶ್ರುತಿ ಕಾಣುತ್ತಿದೆ.     

ಪರಮಾತ್ಮನ ಪೂರ್ಣ ಸಗುಣರೂಪವಾಗಿ ಪ್ರಕಟಗೊಂಡ ಶ್ರೀಧರ ಭಗವಾನರು, ಆದಿಶಂಕರರಂತೇ ಆಸೇತು ಹಿಮಾಚಲ ಹಲವು ಬಾರಿ ಯಾತ್ರೆನಡೆಸಿದರು, ದರ್ಶನಕ್ಕೆ ಬಂದ ಆರ್ತರ-ಬಡಜನರ-ರೋಗಿಷ್ಟರರೆಲ್ಲರಿಗೆ ಆಯಾಯ ಕ್ಷಣದಿಂದಲೇ ಅವರವರ ಯಾತನೆಗಳಿಂದ ಮುಕ್ತಿಯನ್ನು ಕರುಣಿಸಿದವರು. ಮೇಲ್ಕಂಡ ಅವರ ಛಾಯಾಚಿತ್ರವನ್ನು ಮೂಲಪ್ರತಿ-ದೊಡ್ಡಗಾತ್ರದಲ್ಲಿ ನೋಡಿದಾಗ ಎಡಮುಂಗುರುಳಲ್ಲಿ ಶಂಖದ ಆಕೃತಿ, ಬಲಗಿವಿಯಲ್ಲಿ ನಾರಸಿಂಹ ಮುಖದ ಆಕೃತಿ, ಬಲಗೈ ಹಸ್ತದಲ್ಲಿ ತ್ರಿಶೂಲಾಕೃತಿ ಇತ್ಯಾದಿಯಾಗಿ ಕೆಲವು ಆಕಾರಗಳು ಸ್ಪಷ್ಟವಾಗಿ ಗೋಚರಿಸುವುದನ್ನು ಕಾಣಬಹುದಾಗಿದೆ. ೫೦ ವರ್ಷಗಳ ಹಿಂದಿನ ಚಿತ್ರ  ಕೃತ್ರಿಮ ಸೃಷ್ಟಿಯಲ್ಲ, ತಿದ್ದಿದ್ದಲ್ಲ! ಪ್ರಮಾದಿ ಸಂವತ್ಸರದ ಚೈತ್ರ ವದ್ಯ ದ್ವಿತೀಯಾ ಗುರುವಾರ ದಿನಾಂಕ ೧೯-೦೪-೧೯೭೩ರಂದು ಬೆಳಗಿನ ೯ ಘಂಟೆಗೆ ತಮ್ಮ ಭೌತಿಕ ಶರೀರವನ್ನು ವಿಸರ್ಜಿಸಿದ ಸಮರ್ಥ ಶ್ರೀಧರರ ಆರಾಧನೆ [೨೭-೦೪-೨೦೧೩]ಯ ಪ್ರಯುಕ್ತ ಈ ಲೇಖನ. ಶ್ರೀಧರರು ಕನ್ನಡನಾಡಿನಲ್ಲಿ ಹುಟ್ಟಿದ್ದು ನಮ್ಮ ಅದೃಷ್ಟ, ಮೇಲಾಗಿ ಅವರ ತಪೋಭೂಮಿಯಾಗಿ ವರದಪುರವನ್ನು ಆಯ್ಕೆಮಾಡಿಕೊಂಡಿದ್ದು ಇನ್ನೊಂದು ಸೌಭಾಗ್ಯ. ಸ್ವಾನಂದಾಮೃತದಲ್ಲಿ ತೃಪ್ತರಾದ ಭಗವಾನರು ಸಕಲರ ಸರ್ವಾಭೀಷ್ಟಗಳನ್ನೂ ನೆರವೇರಿಸಲಿ ಎಂಬುದು ಈ ಸಂದರ್ಭದಲ್ಲಿ ಗುರುಗಳಲ್ಲಿ ಪ್ರಾರ್ಥಿಸಿ, ಮಾಡುವೆ ಹಾರೈಕೆಯಾಗಿದೆ.

ನಮಃ ಶಾಂತಾಯ ದಿವ್ಯಾಯ ಸತ್ಯಧರ್ಮ ಸ್ವರೂಪಿಣೇ|
      ಸ್ವಾನಂದಾಮೃತ ತೃಪ್ತಾಯ ಶ್ರೀಧರಾಯ ನಮೋ ನಮಃ ||   

    

Sunday, April 21, 2013

ಆರಕ್ಕೇರುವ ರಭಸದಲ್ಲಿ ಆಳಕ್ಕೆ ಬೀಳಬಾರದಲ್ಲಾ

ಚಿತ್ರಋಣ : ಅಂತರ್ಜಾಲ 
ಆರಕ್ಕೇರುವ ರಭಸದಲ್ಲಿ ಆಳಕ್ಕೆ ಬೀಳಬಾರದಲ್ಲಾ
          
ಆಶಾವಾದವೇ ಮನುಷ್ಯನ ಬವಿಷ್ಯದ ಜೀವನಕ್ಕೆ ಊರುಗೋಲು. ಹಿಂದೆಂದೋ ಬೆಳೆತೆಗೆದ ಭೂಮಿಯಲ್ಲಿ, ಕಾಲಾನಂತರ ಬಿರುಬಿಸಿಲಿಗೆ ಕುದಿಕುದಿದು ಒಡೆಒಡೆದುಹೋದ ಗದ್ದೆಗಳ ನಡುವೆ ಕುಳಿತು, ಸುಕ್ಕುಗಟ್ಟಿದ ಚರ್ಮದ ಕುರುಚಲು ಗಡ್ಡದ ಮುಖವನ್ನು ಆಗಸದೆಡೆಮಾಡಿ, ಚಾಚಿದ ಹಸ್ತದ ನೆರಳಡಿಯಿಂದ ಕಣ್ಣುಗಳನ್ನು ಕೀಲಿಸುತ್ತಾ, ಬಾರದ ಮಳೆ ಬಂದೀತು ಎಂಬ ತುಂಬು ಹಂಬಲ ಹೊರುವ ರೈತ ಯಾವುದೋ ಅವ್ಯಕ್ತ ಶಕ್ತಿಯಲ್ಲಿ ಅವ್ಯಾಹತವಾಗಿ ತನ್ನ ಮೂಕಪ್ರಾರ್ಥನೆಯನ್ನು ಸಲ್ಲಿಸುತ್ತಲೇ ಇರುವುದು ಆಶಾವಾದಕ್ಕೆ ಉದಾಹರಣೆ; ಅಲ್ಲಿ ಬಯಕೆಗಳು ಸತ್ತಿಲ್ಲ, ಭಾವನೆಗಳು ಬತ್ತಿಲ್ಲ. ಆ ಭಾವನೆಗಳಿಗೆ ಕೆಲವೊಮ್ಮೆ ದೇವಕಳೆ ಬಂದೀತು; ಬಾರದ ಮಳೆ ಧಾರೆಧಾರೆಯಾಗಿ ಸುರಿದು ಜೀವಕಳೆ ತಂದೀತು; ಕಮರಿದ್ದ ಕುರುಚಲುಗಳುಗಳ ಹಳೆಬೇರುಗಳಲ್ಲಿ ನವಚೈತನ್ಯದ ಚಿಲುಮೆಯುಕ್ಕಿ ಚಿಗುರಿಕೊಂಡಾವು, ಉತ್ತು-ಬಿತ್ತು ಹಸಿರುಡುವ ಭೂಮಿಯಲ್ಲಿ ಬೆಳೆತೆಗೆದು ರೈತ ಸಮೃದ್ಧಗೊಂಡಾನು-ಸಂತೃಪ್ತಗೊಂಡಾನು. ಬಾರದ ಮಳೆ ಬರುವುದು ವಿಜ್ಞಾನದ ಚಮತ್ಕಾರಕ್ಕೆ ನಿಲುಕುವುದಿಲ್ಲ! ಮುಗ್ಧ ಭಾವನೆಗಳು ಎಲ್ಲಾ ಸಲ ಅರ್ಥಹೀನವಲ್ಲ.  

ನಗರದ ಬೀದಿಗಳಲ್ಲಿ ರಾಮನವಮಿ ಉತ್ಸವ ನಡೆಯುತ್ತದೆ. ಶ್ರೀರಾಮನಿಗೆ ಪೂಜೆ ಸಲ್ಲಿಸುವ ಭರದಲ್ಲಿ ಒಂದಷ್ಟು ಹಣ ಸಂಗ್ರಹಿಸಿ ಕೆಲವುಜನ ತೊಡಗಿಕೊಳ್ಳುತ್ತಾರೆ. ಸೌತೇಕಾಯಿ, ಕರಬೂಜ, ಬೆಲ್ಲ, ಬೇಳೆ, ಗಜ್ಜರಿ, ಉಪ್ಪು-ಲಿಂಬೆ-ಒಗ್ಗರಣೆ ಸಾಮಾನು, ಹಾರ-ಹೂವು-ಮಾವಿನೆಲೆಗಳ ತೋರಣ ಎಲ್ಲವೂ ಸಿದ್ಧಗೊಳ್ಳುತ್ತವೆ. ಅದೆಲ್ಲಿಂದಲೋ ನೀರನ್ನು ತರುತ್ತಾರೆ; ನೀರಿನ ಶುದ್ಧಾಶುದ್ಧತೆಯ ಬಗ್ಗೆ ತೀರಾ ಗಮನವಿಲ್ಲ; ಪಾತ್ರೆಗಳ ಶುಚಿತ್ವದ ಬಗ್ಗೆ ತಲೆಕೆಡಿಸಿಕೊಂಡವರಿಲ್ಲ. ಒಂದಷ್ಟು ಕೋಸಂಬರಿ ಕಲಸುತ್ತಾರೆ, ಒಂದಷ್ಟು ಪಾನಕ ಕದಡುತ್ತಾರೆ. ರಾಮನಿಗೆ ಹಣ್ಣು-ಕಾಯಿ ಇಟ್ಟು  ಸಾರ್ವಜನಿಕರಿಗೆ ಪಾನಕ-ಕೋಸಂಬರಿ ವಿತರಿಸುತ್ತಾರೆ. ಬಳಸಿದ ಪ್ಲಾಸ್ಟಿಕ್ ಡ್ರಮ್ ಗಳನ್ನು ನೋಡಿದರೆ ವಾಂತಿ ಬರುವಂತಿರುತ್ತದೆ. ಬೆವರು ಸುರಿಸುತ್ತಲೇ ಕಲಸುವ ಕೈಗಳನ್ನು ನೋಡಿದರೆ ಹೊಲಸು ಎನಿಸುತ್ತದೆ. ಬೇಡ ಎನ್ನಲಾಗದ ರಾಮಪ್ರಸಾದ; ತೆಗೆದುಕೊಂಡರೆ ಕುಟುಕುತ್ತದೆ ಒಳಗಿನ ಅಳುಕುವಾದ. ರಾಮೋತ್ಸವ ನಡೆಸುವ ಆ ಜನ ಅಲ್ಲೂ ಸಂಗ್ರಹಿಸಿದ ಹಣವನ್ನು ಉಳಿಸುತ್ತಾರೆ; "ನಾವೂ ಗಡ್ಜಾಗಿ ರಾಮೋತ್ಸವ ನಡೆಸಿದ್ದೇವೆ" ಎಂಬ ಆ ಜನ ಉಳಿದ ಹಣದಲ್ಲಿ ಎಣ್ಣೆ ಕುಡಿಯುತ್ತಾರೆ. ಪಾನಕ ಕುಡಿದ ಪಾಪದ ಮಗು ಸಾಯುತ್ತದೆ, ಎಣ್ಣೆಕುಡಿದ ’ದೊಡ್ಡಮಗು’ ಏನೂ ಗೊತ್ತಿಲ್ಲದವರಂತೇ ನಗುತ್ತದೆ. ಇದು ರಾಮನ ಹೆಸರಿಗೆ ಬಳಿಯುವ ಮಸಿಯೇ ಹೊರತು ರಾಮಸೇವೆಯಲ್ಲ. ರಾಮನಮೇಲಿರುವ ಭಕ್ತಿಭಾವಕ್ಕಿಂತಾ ರಾಮನ ನೆಪದಲ್ಲಿ ಕುಡಿತಕ್ಕೊಂದಷ್ಟು ಹಣ ಕಲೆಹಾಕುವುದು ಕೆಲವರ ಉದ್ದೇಶ. ಈ ಉದ್ದೇಶ ಊರಹಬ್ಬ, ಅಣ್ಣಮ್ಮದೇವಿಯ ಉತ್ಸವ, ಕನ್ನಡ ರಾಜ್ಯೋತ್ಸವ, ಗಣೇಶೋತ್ಸವ ಮೊದಲಾದ ಸಂದರ್ಭಗಳಲ್ಲೂ ಇರುತ್ತದೆ!  

ನಗರಗಳಲ್ಲಿ ಪಾನ್ ಕಾರ್ಡ್ ಮತ್ತು ಪಾಸ್ ಪೋರ್ಟ್ ಮಾಡಿಸಿಕೊಡುವವರ ಸಂಖ್ಯೆ ಹೆಚ್ಚಾಗಿದೆ. ಸುದ್ದಿಮಾಧ್ಯಮ ಮತ್ತು ಜಾಹೀರಾತು ವ್ಯವಹಾರದಲ್ಲಿ ತೊಡಗಿಕೊಂಡ ನಮಗೊಬ್ಬ ಒಮ್ಮೆ ದೂರವಾಣಿ ಕರೆಮಾಡಿದ್ದ. ಅಲ್ಲಿಗೆ ನಮ್ಮವರು ಹೋದಾಗ ತಿಳಿದದ್ದು: ಆತ ನಿತ್ಯವೂ ದಿನಪತ್ರಿಕೆಗಳಲ್ಲಿ ಕೆಲವು ಜಾಹೀರಾತುಗಳನ್ನು ಕೊಡುತ್ತಿದ್ದ. ಅವು ಪಾಸ್ ಪೋರ್ಟ್ ಮಾಡಿಸಿಕೊಳ್ಳುವ ವ್ಯಕ್ತಿಗಳ ವಿಳಾಸಗಳ ಬಗ್ಗೆಯೋ ಹೆಸರುಗಳ ಬಗ್ಗೆಯೋ ಇರುತ್ತಿದ್ದವು. ಹೆಚ್ಚಿನ ಪೂರ್ವಾಪರಗಳನ್ನು ಅರಿಯದೇ ಕೇವಲ ಹಣಕ್ಕಾಗಿ ಪಾಸ್ ಪೋರ್ಟ್ ಮಾಡಿಸಿಕೊಡುವುದು ಆತನ ಕೆಲಸ. ನೇರವಾಗಿ ಪಾಸ್ ಪೋರ್ಟ್ ಕಚೇರಿಗೆ ಹೋದರೆ ಸಮಯ ವ್ಯಯವಾದೀತು ಎಂದುಕೊಳ್ಳುವ ಜನರೊಟ್ಟಿಗೆ, ದುರುದ್ದೇಶಗಳಿಂದ ಬೇನಾಮಿ ವಿಳಾಸ-ಮಾಹಿತಿಗಳನ್ನು ನೀಡಿ ಪಾಸ್ ಪೋರ್ಟ್ ಮಾಡಿಸಿಕೊಳ್ಳುವ ಜನರೂ ಇರುತ್ತಾರೆ. ಅಂಥಾ ಜನ ದೇಶದ್ರೋಹದ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಾರೆ. ಇತ್ತೀಚೆಗೆ ತಿಳಿದುಬಂದಿದ್ದು ರಾಜಕಾರಣಿಗಳಲ್ಲಿ ಹಲವರು ನಾಲ್ಕೈದು ಪಾನ್ ಕಾರ್ಡ್ ಗಳನ್ನು ಹೊಂದಿದ್ದಾರೆ. ಹೆಸರಿನಲ್ಲಿ ಸ್ವಲ್ಪ ಬದಲಾವಣೆಯಾದರೂ ಪಾನ್ ಕಾರ್ಡ್ ಬದಲಾಗುತ್ತದೆ; ಆದರೆ ಏಕವ್ಯಕ್ತಿ ಅನೇಕ ಪಾನ್ ಕಾರ್ಡ್ ಪಡೆಯುವುದು ಅಪರಾಧ ಎನ್ನುತ್ತದೆ ಕಾನೂನು.

ನಮ್ಮಲ್ಲಿ ಕಾನೂನು ಪಾಲಕರಾಗಬೇಕಾಗಿದ್ದ ರಾಜಕಾರಣಿಗಳೇ ಕಾನೂನು ಭಂಜಕರಾಗುತ್ತಾರೆ; ಮಿಕ್ಕುಳಿದವರು ಅವರನ್ನು ಅನುಸರಿಸುತ್ತಾರೆ. ಪಾನ್ ಕಾರ್ಡ್ ಮತ್ತು ಪಾಸ್ ಪೋರ್ಟ್ ಕಾಳಸಂತೆ ರಾಜಾರೋಷವಾಗೇ ನಡೆಯುತ್ತಿದೆ. ದಿಢೀರ್ ಹಣಗಳಿಸುವ ಇಚ್ಛೆಯಿಂದ ಹಲವು ದಂಧೆಗಳು ಸಮಾಜದಲ್ಲಿ ನಡೆಯುತ್ತವೆ. ಅವುಗಳಲ್ಲಿ ಎಥಿಕ್ಸ್ ಇರುವುದಿಲ್ಲ, ಸಾಮಾಜಿಕ ಕಳಕಳಿಯಾಗಲೀ ಹಿತಾಸಕ್ತಿಯಾಗಲೀ ಇರುವುದಿಲ್ಲ. ನಮಗೆ ಇನ್ನೊಮ್ಮೆ ಮಸಾಜ್ ಪಾರ್ಲರ್ ಒಂದರಿಂದ ಜಾಹೀರಾತು ಪ್ರಕಟಿಸುವ ಸಲುವಾಗಿ ಕರೆಬಂದಿತ್ತು. ಕರಾಳ ದಂಧೆ ನಡೆಸುವವರು ನೇರವಾಗಿ ಯಾವುದನ್ನೂ ಹೇಳುವುದಿಲ್ಲ; ಹಾಗಂತ ಅವರಿಗೆ ಅಬ್ಬರದ ಪ್ರಚಾರ ಮತ್ತು ಅಗಣಿತ ಐಶ್ವರ್ಯದ ಹೆಬ್ಬಯಕೆ; ರಾತ್ರಿ-ಬೆಳಗಾಗುವುದರೊಳಗೆ ಅಚಾನಕ್ಕಾಗಿ ಸಿರಿವಂತರಾಗಿ ಮೆರೆಯುವ ಕನಸು. ಹೇಗಾದರೂ ಒಮ್ಮೆ ಕೋಟ್ಯಧಿಕ ಕಾಸನ್ನು ಕಲೆಹಾಕಿಬಿಟ್ಟರೆ ಆಮೇಲೆ ರಾಜಕಾರಣಕ್ಕೋ ಮತ್ತೊಂದಕ್ಕೋ ಜಿಗಿದು ಏನಾದರೂ ಮಾಡೋಣ ಎಂಬ ಇರಾದೆ ಕೂಡ. ಅದಕ್ಕೆ ಪೂರಕವಾಗಿ, ಇಂದಿನ ನಮ್ಮ ರಾಜಕಾರಣದಲ್ಲಿ ಕಾನೂನು ಉಲ್ಲಂಘಿಸಿ ಕರಾಳ ದಂಧೆಯನ್ನು ನಡೆಸಿದವರು ಅಥವಾ ಹಲವು ಕೊಲೆ-ಸುಲಿಗೆ ಮೊದಲಾದ  ಗುನ್ನೆಗಳಲ್ಲಿ ಪರೋಕ್ಷವಾಗಿ ಭಾಗಿಯಾದವರು ಬಹಳಮಂದಿ ಇದ್ದಾರೆ. ಕಾನೂನು ಸಾರುತ್ತದೆ: ಚುನಾವಣೆಗೆ ನಿಲ್ಲುವ ಅಭ್ಯರ್ಥಿ ಅಪರಾಧಿಯೋ ಆಪಾದಿತನೋ ಕಳಂಕಿತನೋ ಆಗಿರಬಾರದು ಎಂದು. ಹಾಗೊಮ್ಮೆ ನೋಡಿದರೆ ಇಂದು ಟಿಕೆಟ್ ಪಡೆದ ಬಹಳ ಅಬ್ಯರ್ಥಿಗಳ ಕರಾಳಮುಖಗಳು ಗೋವಿನರೂಪವನ್ನು ಹೊತ್ತು ಚುನಾವಣೆಗೆ ಇಳಿದಿವೆ ಎನ್ನಬಹುದು; ಎಲ್ಲವೂ ಒಳಗಿನ ಡೀಲ್ ಗಳಲ್ಲೇ ಮುಗಿದು ಮುಚ್ಚಲ್ಪಡುತ್ತಿವೆ!      

ಹೆಚ್ಚಿನ ಮಸಾಜ್ ಪಾರ್ಲರ್ ಗಳಲ್ಲಿ ಏನು ನಡೆಯುತ್ತದೆ ಎಂಬುದನ್ನು ನೀವೂ ಬಲ್ಲಿರಿ. ಮಸಾಜ್ ಥೆರಪಿ ಆಯುರ್ವೇದದ ಒಂದು ಭಾಗವೇನೋ ಹೌದು. ಆದರೆ ಆಯುರ್ವೇದ ಅದನ್ನು ಮಾಂಸದ ಅಡ್ಡೆಗಳನ್ನಾಗಿ ಮಾಡಿಕೊಳ್ಳಲು ಹೇಳಿಲ್ಲ. ಅನೇಕ ಮಸಾಜ್ ಪಾರ್ಲರ್ ಗಳು ಮುಂದೆ ತೋರಿಸುವುದು ಒಂದು, ಹಿಂದೆ ನಡೆಸುವುದು ಇನ್ನೊಂದು. ಅಲ್ಲಿರುವ ಬೆಲೆವೆಣ್ಣುಗಳಿಗೂ ಹಣ ಜಾಸ್ತಿ ಬೇಕು. ನಡೆಸುವ ಮಾಲೀಕರಿಗಂತೂ ಹಣ ಎಷ್ಟಿದ್ದರೂ ಬೇಕು-ಹೇಗಾದರೂ ಬರಬೇಕು. ಆಯುರ್ವೇದದ ಪಂಚಕರ್ಮ ಚಿಕಿತ್ಸೆಯ ಭಾಗವಾದ ಮಸಾಜ್ ಥೆರಪಿ, ಹಲವು ವಿಕೃತ ಜನರಿಗೆ ಹೊಸದೊಂದು ದಂಧೆ ಸೃಷ್ಟಿಸಿಕೊಳ್ಳಲು ಅವಕಾಶ ನೀಡಿಬಿಟ್ಟಿತು. ಇಂದು ಅಂತಹ ಜನ ನಡೆಸುವ ಮಸಾಜ್ ಪಾರ್ಲರ್ ಗಳು ಆಯುರ್ವೇದದ ಹೆಸರಿಗೆ ಮಸಿಬಳಿಯುತ್ತಿವೆ. ನಿಜವಾದ ಆಯುರ್ವೇದದ ಪಂಚಕರ್ಮ ಚಿಕಿತ್ಸಾ ಮಳಿಗೆಗಳಿಗೂ ಮರ್ಯಾದಸ್ತರು ಹೋಗಲು ಅಂಜುತ್ತಾರೆ. 

ನಿತ್ಯಾನಂದ, ಕಾಳಿಸ್ವಾಮಿಗಳಂತಹ ಕಳ್ಳರನೇಕರು ಕಾವಿ ಧರಿಸಿ ಸನಾತನ ಧರ್ಮಕ್ಕೆ ಅಪಚಾರ ಮಾಡುತ್ತಿದ್ದಾರೆ. ಟಿವಿ ಸೀರಿಯಲ್ಲುಗಳು ಕುಟುಂಬ ಒಡೆಯುವ ಯೋಜನೆಗಳನ್ನೂ ಹೊಸತೆರನಾದ ಪಾತಕಗಳನ್ನು ನಡೆಸುವುದನ್ನೂ ದೃಶ್ಯರೂಪಕವಾಗಿ ತೋರಿಸುತ್ತಿವೆ; ಟಿವಿಗಳವರು ಅಪರಾಧಗಳನ್ನು ವೈಭವೀಕರಿಸಿ ತೋರಿಸಿ ’ಸಮಾಜೋದ್ಧಾರ’ಕ್ಕೆ ಹೊರಟಿದ್ದಾರೆ! ಜೀವಿಸಿರುವ ಗೋವಿನಂತಹ ಪ್ರಾಣಿಗಳ ಮೇಲೆ ಕಿಂಚಿತ್ತೂ ದಯೆಯಿರದ ಜನ, ಹದ್ದು-ಮಂಗ-ಬೆಕ್ಕು ಮೊದಲಾದ ಸತ್ತ ಪ್ರಾಣಿಗಳನ್ನು ಅಂತ್ಯಸಂಸ್ಕಾರಗೊಳಿಸುತ್ತಿದ್ದೇವೆ ಎಂದು ತೋರಿಸುವ ಮೂಲಕ ಟಿವಿಗಳಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಾರೆ. ಚಿಟ್ ಫಂಡ್ ಗಳಲ್ಲಿ, ಸಹಕಾರೀ ಬ್ಯಾಂಕುಗಳಲ್ಲಿ ಹಣದ ದುರ್ಬಳಕೆ ಕನ್ನಡಿಯ ಚಿತ್ರದಂತೇ ಕಾಣುತ್ತದೆ. ಒಂದೇ ನಿವೇಶನವನ್ನು ಹತ್ತುಮಂದಿಗೆ ಮಾರುವವರೂ ಹಲವು ವೇಷಗಳನ್ನು ಧರಿಸಿ ಸಜ್ಜನರಿಗೆ ನಾಮ ತೀಡುವವರೂ ಜಾಸ್ತಿಯಾಗಿದ್ದಾರೆ. ಎಲ್ಲೆಲ್ಲೂ ರಾಜಕೀಯದ ಅರಾಜಕತೆಯೇ ಕಾಣುತ್ತದೆ, ಭ್ರಷ್ಟರಲ್ಲದ ರಾಜಕಾರಣಿಗಳು ಸಿಗುವುದೇ ದುರ್ಲಭ. ಬಡತನವೆಂದು ಭಾಷಣ ಬಿಗಿಯುವ ಪುಢಾರಿಗಳು ಹಣ-ಹೆಂಡಗಳನ್ನು ನೀರಿನಂತೇ ವ್ಯಯಿಸುವುದನ್ನು ಕಂಡಾಗ ಅಂಬೇಡ್ಕರ್ ರಂತಹ ಉನ್ನತಮನಸ್ಕರು ಅಳುತ್ತಾರೆ. ಪ್ರಜಾಸತ್ತೆಯ ಕಥೆಯನ್ನು ಯಾರೋ ಹೇಳಿದಂತಾಗಿ ’ಹೀಗೂ ಉಂಟೇ?’ ಎನಿಸುತ್ತದೆ.  

ಆಹಾರವನ್ನು ವ್ಯಾಪಾರೀಕರಣಗೊಳಿಸಬಾರದು, ಅನ್ನ ದಾನದ ರೂಪದಲ್ಲಿ ಹಸಿದ ಹೊಟ್ಟೆಗಳನ್ನು ತಣಿಸಬೇಕು ಎಂದು ಸನಾತನ ಧರ್ಮದ ನೆಲೆಗಟ್ಟು ಹೇಳುತ್ತದೆ. ಅನ್ನವನ್ನು[ತಿಂದುಂಬ ಪದಾರ್ಥಗಳನ್ನು] ಮಾತ್ರ ವಿಕ್ರಯಿಸಬಾರದು ಎಂಬುದು ಅದರ ಅರ್ಥ. ಇಂದು ನಗರಗಳಲ್ಲಿ ಅಸಂಖ್ಯ ಫಾಸ್ಟ್ ಫುಡ್ ಜಾಯಿಂಟ್ ಗಳು ಅನ್ನವನ್ನು ವಿಕ್ರಯಿಸುತ್ತಿವೆ. ಅವುಗಳಲ್ಲಿ ಕೆಲಸಮಾಡುವ ಅಡಿಗೆಯವರು, ಅಡಿಗೆಯ ಪರಿಕರಗಳು, ಅಡಿಗೆಗೆ ಬಳಸುವ ತೈಲಪದಾರ್ಥಗಳು ಮತ್ತು ಕಚ್ಚಾ ಆಹಾರ ಸಾಮಗ್ರಿಗಳು, ಅಡಿಗೆಯ ಕೋಣೆ ಇವುಗಳನ್ನೆಲ್ಲಾ ನೋಡಿಬಿಟ್ಟರೆ, ಶುಚಿತ್ವ ಬಯಸುವವರು ಅಲ್ಲಿ ಆಹಾರವನ್ನು ಸ್ವೀಕರಿಸುವುದಿಲ್ಲ. ಬದುಕುವುದಕ್ಕಾಗಿ ಮಾತ್ರ ತಿನ್ನುವ ಜನ [ತಿನ್ನುವುದಕ್ಕಾಗಿಯೇ ಬದುಕುವವರಲ್ಲದ ಜನ] ಶುಚಿತ್ವಕ್ಕೆ ಬಹಳ ಮೌಲ್ಯ ಕೊಡುತ್ತಾರೆ. ಅಡಿಗೆ ತಯಾರಿಸುವ ಜನರಲ್ಲಿ ದುಡ್ಡಿಗಾಗಿ ಕೆಲಸಮಾಡುವ ಭಾವನೆಯಿದೆ, ತಯಾರಿಸಿದ ಅಡಿಗೆ-ಖಾದ್ಯಗಳನ್ನು ಮಾರಿ ಹಣಗಳಿಸಿಕೊಳ್ಳುವ ಭಾವನೆ ಮಾಲೀಕರಲ್ಲಿದೆ. ಹಣವನ್ನುಳಿದು ಬಾಕಿ ಭಾವನೆಗಳಿಗೆ ಬೆಲೆಯಿಲ್ಲದ ಆ ಜಾಗಗಳಲ್ಲಿ ಸಾರ್ವಜನಿಕರ ಹಿತಾಸಕ್ತಿ ಎಷ್ಟರಮಟ್ಟಿಗೆ ಬರಲು ಸಾಧ್ಯ?  

ರಸ್ತೆಬದಿಯಲ್ಲಿ ಮಾರುವ ಆಹಾರ ಪದಾರ್ಥಗಳ ತಯಾರಿಕೆಯ ಹಿನ್ನೆಲೆಯನ್ನಂತೂ ನೋಡಿದರೆ, ಗಿರಾಕಿಗಳಿಗೆ ದೇವರೇ ಗತಿ!! ಮುಂಬೈಯಲ್ಲಿ ನಡೆದ ಪಾನಿಪೂರಿಯ ವ್ಯಾಪಾರಿಯ ’ಉಚ್ಚಾಶಕ್ತಿ’ಯನ್ನು ಅನೇಕರು ಮಾಧ್ಯಮಗಳಲ್ಲಿ, ಫೇಸ್ ಬುಕ್ ಮೊದಲಾದ ಜಾಲತಾಣಗಳಲ್ಲಿ ಗಮನಿಸಿದ್ದೀರಿ. ಬೀದಿಬದಿಯ ವ್ಯಾಪಾರಿಗಳಿಗೆ ಮನೆಯೆಂಬ ಜಾಗದಲ್ಲಿ ಯಾವುದೇ ಸೌಕರ್ಯಗಳಿರುವುದು ಕಮ್ಮಿ, ಇದ್ದರೂ ಅವರ ವ್ಯಾಪಾರೀ ಜೀವನಕ್ಕೆ ಅದನ್ನವರು ಬಳಸುವುದು ಕಮ್ಮಿ. ಅಂಥಾ ಬೀದಿ ವ್ಯಾಪಾರಿಗಳಿಗೆ ಪರ್ಯಾಯ ಕೆಲಸ ಕಲ್ಪಿಸಿಕೊಡಬೇಕೇ ವಿನಃ ಅದಕ್ಕೆ ಪ್ರೋತ್ಸಾಹ ನೀಡುವುದು ತರವಲ್ಲ. ಸಂಬಂಧ ಪಟ್ಟ ಕಾರ್ಪೋರೇಟರ್ ಗಳು ಅದನ್ನು ಗಮನಿಸುವುದಿಲ್ಲ ಯಾಕೆಂದರೆ ಅವರಿಗೆ ಬೀದಿ ವ್ಯಾಪಾರಿಗಳಿಂದ, ತಳ್ಳುಗಾಡಿಗಳಿಂದ ಹಫ್ತಾ ಸಿಗುತ್ತದೆ. ಪೋಲೀಸರು ಪ್ರತೀ ಗಾಡಿಯಿಂದ ನಿತ್ಯವೂ ಹತ್ತಿಪ್ಪತ್ತು ರೂಪಾಯಿ ಕಿತ್ತುಕೊಂಡು ಆಶೀರ್ವದಿಸುತ್ತಾರೆ. ಈ ಆಟಗಳನ್ನು ಬೆಂಗಳೂರಿನ ಮೆಜೆಸ್ಟಿಕ್ ಮತ್ತು ಮಲ್ಲೇಶ್ವರಂ ಮೊದಲಾದ ಕಡೆಗಳಲ್ಲಿ ನಾವು ಕಾಣಬಹುದಾಗಿದೆ.  

ಯಾವುದೋ ನೀರು ಯಾವುದೋ ಸಾರು
ಬಾಯಿಬಿಡಬೇಡ ಸಿಕ್ಕಿದ್ದು ಮಾರು

ಕಲಬೆರಕೆ ಎಣ್ಣೆ ಕ್ರತ್ರಿಮದ ಬೆಣ್ಣೆ
ಸತ್ತಪ್ರಾಣಿಗಳ ಕರುಳಡಿಯ ಗೊಣ್ಣೆ

ಯಾವುದೋ ಹಿಟ್ಟು ಒಂದಷ್ಟು ತಟ್ಟು
ಬಣ್ಣಗಳ ಜುಟ್ಟು ಆಕಾರ ಕೊಟ್ಟು 

ಕಾವಲಿಗೆ ಬಿಟ್ಟು ಕರಿದೆತ್ತಿ ಒಟ್ಟು
ಗಿರಾಕಿಗಳಿಗಿಟ್ಟು ಕೋಡ್ಬಳೆ ನಿಪ್ಪಟ್ಟು

ಬರುತಾರೆ ಸಾರು ಇಳಿತಾರೆ ತೇರು !
ತಿರುತಿರುಗಿ ಜೋರು ಬಿಸಿಯೆನುತ ಮಾರು 

ಧಾವಂತದ ಜೀವನ ಶೈಲಿಯಲ್ಲಿ ಮನೆಯಲ್ಲಿ ಸಿದ್ಧಪಡಿಸಿಕೊಳ್ಳಲಾಗದ ಅನಾನುಕೂಲತೆ ಕೆಲವರದಾದರೆ ರುಚಿಗಾಗಿ ಹಪಹಪಿಸಿ ಜೊಲ್ಲಿಳಿಸುವ ಪರಿ ಹಲವರದು. ಕೆಟ್ಟರೆ ಹೇಗೂ ಆಸ್ಪತ್ರೆಯಿದೆ! ಆಸ್ಪತ್ರೆಯಲ್ಲಿ ಮಲಗಿಕೊಳ್ಳಲು ಸಮಯವಿರುವಷ್ಟು ಮನೆಯಲ್ಲಿ ಅಡುಗೆಮಾಡಿಕೊಳ್ಳಲು ಇಲ್ಲ ಇಂದಿನ ಜನರಿಗೆ.

ಮನೆಯಲ್ಲಿ ತಯಾರಿಸುವ ಅಡುಗೆಗಳೇ ಮಲಿನಗೊಂಡಾವು ಎಂಬ ಕಾರಣಕ್ಕೆ ಹಲವು ಸರ್ತಿ ಅದನ್ನು ಮಡಿಯಲ್ಲೇ ತಯಾರಿಸಿ ಎಂದರು ಪೂರ್ವಜರು. ಸ್ನಾನಮಾಡಿ, ತೊಳೆದೊಣಗಿಸಿದ ಸ್ವಚ್ಛಬಟ್ಟೆಯುಟ್ಟು, ಕೈಗಳನ್ನು ಮತ್ತೆ ತೊಳೆದುಕೊಂಡು ಶುದ್ಧಗೊಳಿಸಿದ ಪಾತ್ರೆಗಳಲ್ಲಿ, ಶುದ್ಧವಾದ ಪ್ರದೇಶದಲ್ಲಿ, ಶುದ್ಧವಾದ ಪರಿಕರಗಳು-ಸಾಮಗ್ರಿಗಳನ್ನು ಬಳಸಿ ತಯಾರಿಸಿದ ಆಹಾರ ಮಾತ್ರ ದೇವರಿಗೆ ಸಮರ್ಪಿಸಲು ಯೋಗ್ಯ ಎಂದುಬಿಟ್ಟರು! ಆದರ ಹಿಂದೆ ಇರುವ ವಿಜ್ಞಾನವನ್ನು ನಾವು ಗಮನಿಸಬೇಕು.

ಆಹಾರವಸ್ತುಗಳನ್ನು ಹೈಜೀನಿಕ್ ಆಗಿ ತಯಾರಿಸುತ್ತೇವೆ ಎಂಬ ಸೋಗಲಾಡಿತನದಲ್ಲಿ ಒಂದಕ್ಕೆ ಮೂರರಿಂದ ಹತ್ತುಪಟ್ಟು ಹೆಚ್ಚಿಗೆ ಹಣಪಡೆಯುವ ಜನ, ವೈದ್ಯಕೀಯದಿಂದ ಜನಸೇವೆಯ ಬದಲಿಗೆ ಹೈಟೆಕ್ ಆಸ್ಪತ್ರೆಗಳಲ್ಲಿ ಪರೋಕ್ಷ ಸುಲಿಗೆ ನಡೆಸುವ ಜನ, ವಿದ್ಯೆಕಲಿಸುವ ನೆಪದಲ್ಲಿ ಅಲ್ಲಿಯೂ ಪರೋಕ್ಷ ಸುಲಿಗೆಗಿಳಿಯುವ ಜನ ಇವರೆಲ್ಲಾ ಇದ್ದಾಗ  ಅಲ್ಲೆಲ್ಲಾ ಢಾಳಾಗಿ ಕಾಣುವುದು ಆರಕ್ಕೇರುವ ಬಯಕೆಯೊಂದೇ.    

ದೈವ ಸೃಷ್ಟಿಯ ವೈಚಿತ್ರವನ್ನು ನೋಡಿ: ನದಿಗಳು ಹರಿಯುತ್ತವೆ-ಪರೋಪಕಾರಾರ್ಥವಾಗಿ, ಮರಗಿಡಗಳು ನೆರಳು-ಹಣ್ಣು ನೀಡುತ್ತವೆ-ಪರೋಪಕಾರ್ಥವಾಗಿ, ಕಾಮಧೇನುಗಳು ಹಾಲನ್ನು ಕೊಡುತ್ತವೆ-ಪರೋಪಕಾರಾರ್ಥವಾಗಿ, ಸೂರ್ಯ ಬೆಳಕು ಚೆಲ್ಲುತ್ತಾನೆ-ಪರೋಪಕಾರಾರ್ಥವಾಗಿ, ಭೂಮಿತಾಯಿ ಹಲವು ವಿಧದ ಸಸ್ಯೋತ್ಫನ್ನಗಳನ್ನು ನೀಡುತ್ತಾಳೆ-ಪರೋಪಕಾರಾರ್ಥವಾಗಿ..ಇಷ್ಟೆಲ್ಲಾ ಪರೋಪಕಾರಗಳನ್ನು ನಾವು ಗಮನಿಸಿಯೂ ಸ್ವಾರ್ಥಿಗಳಾಗಿದ್ದೇವೆ; ಪರರಿಗೆ ಪರೋಕ್ಷ ಹಿಂಸೆ ನೀಡುತ್ತಿದ್ದೇವೆ. ಮಾಡುವ ಕೆಲಸಗಳಲ್ಲಿ ಶ್ರದ್ಧೆಯಿರುವುದಿಲ್ಲ; ಕೆಲಸ ಮಾಡದೆಯೂ ಹಣದ ಥೈಲಿ ನಮ್ಮದಾಗಬೇಕೆಂಬ ಆಸೆ ಮಾತ್ರ ತಪ್ಪುವುದಿಲ್ಲ. ಪೂರ್ವಜರಲ್ಲಿ ಸ್ವಹಿತಾಸಕ್ತಿಗಿಂತ ಹೆಚ್ಚು ಪರಹಿತಾಸಕ್ತಿ ನೆಲೆಸಿತ್ತು. ಮಾಡುವ ಕೆಲಸಗಳನ್ನು ಪ್ರಾಮಾಣಿಕವಾಗಿ, ಪರಿಶುದ್ಧವಾಗಿ, ಭಾವನಾಪೂರ್ವಕವಾಗಿ ಮಾಡುತ್ತಿದ್ದರು. ಇಂದಿನ ಸಾಮಾಜದ ನಮ್ಮಲ್ಲಿ ಇರುವ ಭಾವನೆಗಳಿಗೂ ಪೂರ್ವಜರಲ್ಲಿ ಇದ್ದ ಸಮಾಜಿಕ ಭಾವನೆಗಳಿಗೂ ಅಜ-ಗಜಾಂತರವಿದೆ. ಹೇಗಾದರೂ ಮಾಡಿ ಆರಕ್ಕೇರುವ ನಮ್ಮ ಅಭಿಲಾಷೆಯ ಈಡೇರುವಿಕೆಗಾಗಿ ಸಾಮಾಜಿಕ ಸ್ವಾಸ್ಥ್ಯವನ್ನು ಹದಗೆಡಿಸಲೂ ನಾವು ಹೆದರುವುದಿಲ್ಲ, ಹಿಂದೆಬೀಳುವುದಿಲ್ಲ.

ಎಳವೆಯಲ್ಲಿ ನಾವೆಲ್ಲಾ ನಮ್ಮ ಶಾಲೆಯಲ್ಲಿ ಹಾಡಿಕೊಂಡು ಪ್ರಾರ್ಥಿಸುತ್ತಿದ್ದ ಹಾಡಿನ ಭಾಗ ಹೀಗಿದೆ :

ದೇವದೇವನೆ ಹಸ್ತಪಾದಗಳಿಂದಲೂ ಮನದಿಂದಲೂ
ನಾವುಮಾಡಿದ ಪಾಪವೆಲ್ಲವ ಹೋಗಲಾಡಿಸು ದೇವನೆ

ಕಾಯಾ, ವಾಚಾ, ಮನಸಾ [ತ್ರಿಕರಣಗಳಿಂದ] ಗೊತ್ತಿರದೇ ಮಾಡಿರಬಹುದಾದ ಪಾಪಗಳನ್ನು ದೇವರೆಂಬ ಶಕ್ತಿ ಪರಿಹರಿಸುತ್ತದೆ. ಗೊತ್ತಿದ್ದೂ ಮಾಡುವ ಪಾಪವನ್ನು ಹೋಗಲಾಡಿಸುವುದು ದೈವದ ನಿಯಮವಲ್ಲ, ನೀತಿಯಲ್ಲ. ನದಿಗಳನ್ನು ಮಲಿನಮಾಡುವುದು, ಸಾರ್ವಜನಿಕರಿಗೆ ಕಲಬೆರಕೆ ಆಹಾರಗಳನ್ನು ಪೊರೈಸುವುದು, ವಾಸಿಸುವ ದೇಶಕ್ಕೆ ದ್ರೋಹವೆಸಗುವಂಥಾ ಕೆಲಸಗಳನ್ನು ಪರೋಕ್ಷವಾಗಿ ಮಾಡಿಕೊಡುವುದು, ದಿಢೀರ್ ಶ್ರೀಮಂತಿಕೆಯ ಅಪೇಕ್ಷೆಯಲ್ಲಿ ಕರಾಳ ದಂಧೆಗಳನ್ನು ನಡೆಸುವುದು...ಇಲ್ಲೆಲ್ಲೂ ಉನ್ನತ ಭಾವನೆಗಳಿಲ್ಲ, ಸಾಮಾಜಿಕ ಕಳಕಳಿಯಿಲ್ಲ.

ಮೇಟಿವಿದ್ಯೆಯೇ ಭಾರತದ ಬೆನ್ನೆಲುಬು. ಕೋಟಿಗಟ್ಟಲೆ ಕೈಗಾರಿಕೆಗಳು ಮುಗಿಲೆತ್ತರಕ್ಕೆ ಬೆಳೆದರೂ, ವಿಜ್ಞಾನ ಎಷ್ಟೇ ಮುಂದುವರಿದರೂ ಹೊಟ್ಟೆಗೆ ತಿನ್ನುವುದು ಅನ್ನದಾತ ಬೆಳೆದ ಅನ್ನವನ್ನೇ. ನೀರಿಲ್ಲದಿದ್ದರೆ ಬೆಳೆಯಿರುವುದಿಲ್ಲ, ಬೆಳೆಯಿಲ್ಲದಿದ್ದರೆ ರೈತಜನರಿಲ್ಲ, ರೈತಜನರಿಲ್ಲದಿದ್ದರೆ ಅನ್ನವಿಲ್ಲ, ಅನ್ನವಿಲ್ಲದಿದ್ದರೆ ಜನಜೀವನ ಹೇಗೆ ನಡೆದೀತು?  ಬಾರದ ಮಳೆ ಬರಬೇಕಿದ್ದರೆ ಸಮಾಜದಲ್ಲಿ ನೈತಿಕತೆ ಹೆಚ್ಚಬೇಕು, ಪ್ರಕೃತಿಯಮೇಲಿನ ದೌರ್ಜನ್ಯ ಕಡಿಮೆಯಾಗಬೇಕು, ತಾನು-ತನ್ನವರು ಭಾವನೆಗಿಂತ ಎಲ್ಲರೂ ತಮ್ಮವರೇ ಎಂಬಂಥಾ ಭಾವನೆ ಬೆಳೆಯಬೇಕು. ಮಾಡುವ ಕರ್ತವ್ಯಕ್ಕೆ ಉತ್ತಮ ಮಾರ್ಗಗಳನ್ನೇ  ಆಯ್ದುಕೊಳ್ಳಬೇಕು. ಮಾಡುವ ಕೆಲಸಗಳಲ್ಲಿ ಅತ್ಯಂತ ಸ್ವಚ್ಛತೆ, ಶ್ರದ್ಧೆ ಮತ್ತು ಸಮರ್ಪಣಾ ಭಾವ ಬೇಕು. ಮಾಡುವ ಕೆಲಸ ದೇವರಸೇವೆ ಎಂಬಂತೆಯೇ ನಡೆಯಬೇಕು. ಕಣ್ಣೀರಿನ ಬದಲಿಗೆ ರೈತರ ಮೊಗದಲ್ಲಿ ನಗುವನ್ನು ಕಾಣಬೇಕು; ನವಯುವಕರು ಬೇಸರದಿಂದ ಮೇಟಿವಿದ್ಯೆಯನ್ನು ತೊರೆದು, ಕೆಲಸ ಅರಸುತ್ತಾ, ದೇಶಾಂತರ ಅಲೆದಾಡುವ ಪ್ರಮೇಯ ನಿಲ್ಲಬೇಕು.    

ಸ್ವಾತಂತ್ರ್ಯ ಪೂರ್ವದಲ್ಲಿ, ಗೋಪಾಲಕೃಷ್ಣ ಗೋಖಲೆಯವರು ಸಾರ್ವಜನಿಕ ಸೇವೆಗೆ ತಮ್ಮನ್ನು ತೊಡಗಿಸಿಕೊಂಡು ಸಂಸ್ಥೆಗಳನ್ನು ಕಟ್ಟಿದ್ದರು. ಅದಕ್ಕೆ ದುಡಿಯುವ ಕೈಗಳಿಗೆ ಅವರ ಕುಟುಂಬ ನಿರ್ವಹಣೆಗೆ ತೊಂದರೆಯಾಗದಂತೇ ಗೋಖಲೆಯವರೇ ನೋಡಿಕೊಂಡರು. ಬ್ರಿಟಿಷರೇ ನಿಬ್ಬೆರಗಾಗಿ ಇಂತಹ ಸಮಾಜಸೇವೆಯನ್ನು ಎಲ್ಲೂ ಕಂಡಿಲ್ಲವೆಂದರು. ಗೋಖಲೆಯವರನ್ನು ಅಪಾರವಾಗಿ ಮೆಚ್ಚಿದ್ದ ಸಂತ ಡಿವಿಜಿಯವರು ಸ್ಥಾಪಿಸಿದ ’ಗೋಖಲೆ ಸಾರ್ವಜನಿಕ ಸಂಸ್ಥೆ’ಗೆ ಅಧ್ಯಕ್ಷರಿಲ್ಲ, ಅದನ್ನು ಕಾರ್ಯದರ್ಶಿಗಳೇ ನಡೆಸುತ್ತಾರೆ. "ಅಧ್ಯಕ್ಷರು ಯಾರು?" ಎಂದು ಕೇಳಿದರೆ "ಶ್ರೀರಾಮನೇ ಅಧ್ಯಕ್ಷ" ಎಂಬುತ್ತರ ಬರುತ್ತದೆ. ಹುಟ್ಟಿದಾರಭ್ಯ ಆ ಸಂಸ್ಥೆ ನಡೆಸಿದ ಸಮಾಜ ಸೇವೆ ಗಣನೀಯ. ಅಲ್ಲಿ ವ್ಯಯಿಸುವ ಪೈಸೆಪೈಸೆಯೂ ಸಾರ್ವಜನಿಕರಿಗೆ ತಲುಪುತ್ತದೆ. ಇಂತಹ ವಿಶ್ವತೋಮುಖ ಭಾವ ನಮ್ಮೆಲ್ಲರಲ್ಲಿ ಮೂಡಿದರೆ ನಮ್ಮ ಸ್ಥಿತಿ ಸಹಜವಾಗಿ ಆರಕ್ಕೇರೀತು. ನೀತಿ-ನಿಯಮಗಳನ್ನೆಲ್ಲಾ ಗಾಳಿಗೆ ತೂರಿ ಸ್ವೇಚ್ಛಾಚಾರಿಗಳಾಗಿ ಅಡ್ಡಮಾರ್ಗಗಳಿಂದ ಹಣಗಳಿಸಿದರೆ ಒಂದಿಲ್ಲೊಂದು ದಿನ ಆಳಕ್ಕೆ ಬೀಳಬೇಕಾದೀತು; ಸುನಾಮಿ, ಭೂಕಂಪ, ಕ್ಷಾಮ, ಅತಿವೃಷ್ಟಿ, ಜ್ವಾಲಾಮುಖಿ ಯಾವುದೋ ಘಟಿಸಿ, ಅನ್ಯಾಯದ ಸಂಪತ್ತನ್ನು ಅಳಿಸಿಹಾಕೀತು. ಅದು ಪ್ರಕೃತಿ ಧರ್ಮ. ರಕ್ಕಸ ಮನಸ್ಸಿನ ಮನುಷ್ಯರಿಗೆ ತಕ್ಕ ಪಾಠ ಕಲಿಸುವುದು ದೈವಕರ್ಮ.         

Sunday, April 14, 2013

ಭಟ್ರ ಕಾಚಾ ಕೊಡಿ :) :) :)

 ಚಿತ್ರಋಣ: ಅಂತರ್ಜಾಲ 
ಭಟ್ರ ಕಾಚಾ ಕೊಡಿ  :) :) :)

[ನಗುವಿಲ್ಲದಿದ್ದರೆ ಬದುಕು ನೀರವವಾಗಿರುತ್ತದೆ, ನೀರಸವಾಗಿರುತ್ತದೆ. ನಕ್ಕಾಗ ಶರೀರದಲ್ಲಿರುವ ೭೨೦೦೦ ನಾಡಿಗಳೂ ಕೆಲಸಮಾಡುವವಂತೆ; ಆಯುಷ್ಯ, ಆರೋಗ್ಯ ವರ್ಧಿಸುವುದಂತೆ. ಬಣಬಣಗುಡುವ ಒಣಗುವ ಬೇಸಿಗೆಯಲ್ಲಿ ನೀರಸವಾದರೆ ಹೇಗೆ? ಗ್ರಾಮ್ಯ ಜನಪದರ ಮಾತುಕತೆ ಹಲವೊಮ್ಮೆ ನಮ್ಮಲ್ಲಿ ಹಾಸ್ಯರಸವನ್ನು ಉಕ್ಕಿಹರಿಸುತ್ತದೆ.  ಈ ನಗೆಹೂರಣದಲ್ಲಿ ಬಳಸಲ್ಪಟ್ಟಿರುವ ಗ್ರಾಮ್ಯ ಭಾಷೆ, ಪದಗಳು ಎಲ್ಲರಿಗೂ ಅರ್ಥವಾಗುತ್ತದೋ ಇಲ್ಲವೋ ಅರಿಯೆ. ಬಿರುಬೇಸಿಗೆಯಲ್ಲಿ ಶರೀರ ಬೆವರಿ ನಾಲಿಗೆ ಒಣಗಿ ಹೋಗುವಾಗ, ಬಾಯಲ್ಲಿ ಮತ್ತೆ ನೀರೂರಿಸುವ ’ಭಟ್ರ ಕಾಚಾ’ ಕಥಾನಕವನ್ನು ನಿಮ್ಮ ಮುಂದಿಡಬೇಕೆಂಬ ಬಹುದಿನದ ಬಯಕೆಯನ್ನು ತೀರಿಸಿಕೊಂಡ ಸಮಾಧಾನವಷ್ಟೇ ನನ್ನದು. ಕೆಲವು ಪದ-ಅರ್ಥಗಳ ಕೋಷ್ಟಕವನ್ನು ಪ್ರತ್ಯೇಕವಾಗಿ ಕೊಡುತ್ತಿದ್ದೇನೆ, ಅರ್ಥವಾಗದ ಪಕ್ಷದಲ್ಲಿ, ಕೋಷ್ಟಕದಿಂದ ನಗದು ಸಾಲ ಎತ್ತಿಕೊಂಡು ನೀವು ನಗದೇ ಇರಲಾರಿರಿ ಎಂಬುದು ಬರಹಗಾರನ ಅನಿಸಿಕೆ; ಹಾಗೊಮ್ಮೆ ಆದರೆ ಅದು ಬರಹ ಸಾಫಲ್ಯಗೊಳ್ಳುವ ಬಗೆ, ಎಂದಮೇಲೆ ತಡವೇಕೆ? ಓದುವುದಕ್ಕೆ ತೊಡಗಿಕೊಳ್ಳಿ, ನಮಸ್ಕಾರ]

ಕಳದ ಬ್ಯಾಸ್ಗಿಲಿ ನಮ್ಮನಿ ಶಣ್ ತಂಗಿ ಬೆಂಗ್ಳೂರ್ಗೆ ಕರ್ಕಂಡೋಗಿತಲ...ಅಲ್ಲೀತನ ನಾಂವು ಎಂತದು ಸರ್ಯಾಗಿ ಕಂಡೊರೇ ಅಲ್ಲ. ನಮ್ಮನಿ ಹೆರಿ ತಂಗಿ ಮದ್ವಿ ಮಾಡ್ಬೇಕಾರೆ, ಮರ್ತ್ ಕಮ್ತಿಯೋರ್ ಜವಳಿ ಅಂಗ್ಡೀಲಿ ಉದ್ರಿ ಮ್ಯಾಲೆ ತಕಂಡದ್ದೇ ನಾಕ್ ಪತ್ಲ, ಎರಡ್ ಮುಂಡು, ಎರಡ್ ಜೋಡಿ ಅಂಟ್ರವಾಲ್ ಹೊಲ್ಸ್ಕಂಬುಕೆ ವಸ್ತ್ರ, ಹತ್ರಂದೋರ್ಗೆ ಕೊಡುಕೆ ಹೇಳಿ ಹತ್ತು ಟುವಾಲು, ಮದಮಗಗೆ ಒಂದ್ ಸರ್ಟ್ ಪೀಸು-ಒಂದ್ ಪ್ಯಾಂಟ್ಪೀಸು ಇಂತದೆಲ್ಲಾ ಸೇರಿ ಒಟ್ಟೂ ೨೦ ಸಾವ್ರ ದಾಟೋಯ್ತು. ನಮ್ಕೆಲೆಲ್ಲಾ ದುಡ್ಡೆಲ್ಲದೆ? ಹ್ಯಾಂಗೊ ದೇವರ ನಡ್ಸನೆ ಬಿಟ್ರೆ ನಮ್ಕುಡೇನೂ ಇಲ್ಲ. ಯಾಕೊ ಮರ್ತ್ ಕಮತೀರು ಗುರ್ತದಗೆ ಉದ್ರಿಕೊಟ್ರು ಮರ್ಯಾದುಳೀತು, ಇಲ್ಲಾಂದ್ರೆ ನಮ್ಗತಿ ಬೇಕಾ?  ನಂಗೊಟ್ಟು ೫ ಹೆಣ್ಮಕ್ಳು. ಗಂಡಾಯ್ತದ್ಯನೊ ಹೇಳಿ ನೋಡ್ತಿದ್ದಾಗಿತು ಗಂಡ್ ಹುಟ್ಲೇ ಇಲ್ಲ. ಯಾವ್ದಾರು ಆಕಳ್ಳಿ ಗಂಡೂ ಸಮ ಹೆಣ್ಣೂ ಸಮ ದೇವ್ರು ಕೊಟ್ಟುಂದು ಅಂತೇಳಿ ಸುಮ್ಕಾಕಂಡೊ. ಮಕ್ಕಳು ದೊಡ್ಡಾಯ್ತ್ಲೇಯ ಕರ್ಚೇನ್ ಕಮ್ಮಿ ಬತ್ತದ್ಯಾ? ನಮ್ಮನಿ ಶಣ್ ತಂಗಿ "ಅಪ ನೀ ಬ್ಯಾಜಾರ್ ಮಾಡ್ಕಂಬ್ಯಾಡ. ಹೆಣ್ಣಾರೇನಾಯ್ತು ಗಂಡ್ಗಿಂತ ಚಲೋ ಕೆಲ್ಸ ಮಾಡಿ ತೋರ್ಸುಕೆ ಆಯ್ತದೆ. ಈಗೆಲ್ಲಾ ಕಾಲ ಬದ್ಲಾಗದೆ" ಅಂತಿತ್ತು, "ಶಾಲಿ ಕಲಿತೆ" ಅಂತು, ಕಳಸ್ದೆ, ಕೋಲೇಜ್ಗೂ ಹೋಗಿ ಬೀಯೆ ಮುಗಿಸ್ಗಂಡು ಬೆಂಗಳೂರಗೆ ನೌಕರಿ ಮಾಡುಕೆ ಹೋಗುವರೀಗು ಕರ್ಚ್ ಮಾಡ್ದೆ. ಈಗ ಅದರ ಕಾಲ್ಮೇಲೆ ಅದು ನಿತ್ಗಂಡದೆ.

ಟೀವಿಲಿ ವಾರ್ತಿ ಓದತ್ತದ್ಯಲ್ರ,  ’ಭಾರತಿ’ ಅಂತಿ, ಅದೇಯ ನಮ್ಮನಿ ಶಣ್ ತಂಗಿ. ಗುಂಡಿಬೈಲ್ ಪರಂಭಟ್ರ ನೆಂಟ್ರ ಕೈಮೇಲೆ ಬೆಂಗಳೂರಗೆ ನೌಕರಿ ಸಿಕ್ಕಂದು. "ಅಪಾ ನೀ ಬರ್ಲೇಬೇಕು" ಅಂದಿ ಹಟ ಹಿಡೀತು ಅದ್ಕೇ ಕಳದ ಬ್ಯಾಸ್ಗಿಲಿ ಬೆಂಗಳೂರ್ಗೆ ಹೋದಂದು. ಬೆಂಗಳೂರ್ಗೆ ಹೋದಂದೌದು, ಅದ್ಯೆಂತ ಕೇಳ್ತ್ರಿ? ನಮ್ಗೆಲ್ಲ ಲಾಯ್ಕಿಲ್ಲಪ. ಮಾರ್ ಮಾರ್ಗೂ ದುಡ್ಡಿದ್ರೆ ಮಾತ್ರ ಜೀವನ, ಯಾರೂ ನರಮನಸ್ರು ಅಂಬೋ ರೀತೀಲೇ ಕಾಂಬುದಿಲ್ಲ. ಎಲ್ನೋಡ್ರು ಬಿರಿಡಿಂಗೋ ಬಿರಡಿಂಗು-ಮೋವತ್ತು ನಲ್ವತ್ತು ಮಾಳಗೆ ಬಿರಡಿಂಗು, ಒಂದಕ್ಕಿಂತಾ ಇನ್ನೊಂದ್ ಬಲ. ಒಂದೊಂದ್ ರಸ್ತಿ ಕಾಂಬೇಕು! ಓಹೊಹೋ ಅದೆಷ್ಟಗಲ ಅಂದ್ಕಂಡೀರಿ? ಸುಮಾರ್ನೋರ್ಗೆ ದಾಟುಕೆ ಸಾಧ್ಯಾಗ, ಲೆಕ್ಕತಪ್ಪಿ ವಾಹನ ಬೇರೆ. ದಾಟುಕೂವ ಅದೆಂತದೋ ಸಿಂಗಾಲ್ ಕೊಡ್ತರೆ ಸಿಂಗಾಲ್ ಕೊಟ್ಟಾಗೇ ದಾಟ್ಕಂಬೇಕು. ಎಲ್ನೋಡ್ರು ಜನ ಜನ ಜನ. ತಂಗಿ ಕೆಲಸ ಮಾಡು ಆಫೀಸ್ಗೆ ಕರ್ಕಂಡೋಗಿತು: ಅದೆಂತದೋ ಪೆಟ್ಗಿ ಕಂಡಾಂಗಾಯ್ತದೆ, ಅದರೊಳಗೆ ಹೊಕ್ಕ ನಿತ್ಗಂಡ್ರಾಯ್ತು ಅದು ಮ್ಯಾಲೆ-ಕೆಳಗೆ ಇರು ಮೆತ್ತಿಗೆಲ್ಲಾ ಕರ್ಕಂಡೋಯ್ತದೆ. ತಡೀರಿ ಅದ್ಕೇನೋ ಹೆಸರದೆ....’ನಿಪ್ಟು’ ಅಂತರ್ಯಪ. ಪ್ಯಾಟೆಲ್ಲ ಏನ್ ಕಮ್ಮಿ ಬೆಳದದ್ಯ ಈಗ? ನಾವೆಲ್ಲ ಶಣ್ಕಿಪ್ಪಗೆ ಇಂತಾ ಪ್ಯಾಟೆಲ್ಲ ಇಲ್ಲಾಗಿತು. ಎಂತಾರು ಬೇಕಾರೆ ಕೊಳಗದ್ದಿ ತೇರನ ಬಯಲಗೆ ಪ್ಯಾಟಿ ಬತ್ತಿತಲ್ರ..ಅಲ್ಲೇ ನಾವು ಕರುದಿ ಮಾಡುದಾಗಿತು. ಕಾಯಸ್ಸಿದ್ರೆ ಎನಾರು ಕರುದಿ ಇಲ್ಲಾಂದ್ರೆ ಇಲ್ಲ. ಈಗ ತಕಣಿ ಹೊನ್ನಾವ್ರ...ಕುಮಟಿ...ಭಟ್ಕಳ ಏಲ್ನೋಡ್ರು ಪ್ಯಾಟ್ಯೇವ. ಆದರೂ ಬೆಂಗಳೂರ್ ಪ್ಯಾಟಿ ನಮುನಿ ಪ್ಯಾಟೆ ನಾ ನೋಡ್ಲೇ ಇಲ್ಲ. ಹೋದ್ಲಾಗಾಯ್ತು ಕಣ್ಣೋದ್ಕಡಿಗೆಲ್ಲಾ ಅಂಗಡಿಯೇವ. ಒಂದ ಗದ್ದಿ, ಹಿತ್ಲ, ತ್ವಾಟ ಅಂಬುದೇ ಕಾಂಬುಕಿಲ್ಲ. 

ನಾವೊಂದಪಗೆ ಹತ್ತೊರ್ಸದ ಹಿಂದೆ ಮಂಗಳೂರ್ಗೆ ಹೋಗಾಗಿತು-ನೀರಡಕಿ ಯಾಪಾರ ಮಾಡವಂಗೆ. ಅಲ್ಲೊಬ್ಬ ಜಾಸ್ತಿ ಕರುದಿ ಮಾಡ್ತನೆ ಹೇಳಿ ಸುದ್ದಿ ಸಿಕ್ದ ಕೂಡ್ಲೆ ಹೋಗಾಗಿತು. ಮೂರ್ತಿ, ನಾನು, ತಿಮ್ಮ, ಯಂಕ್ಟ ನಾಕ ಜನ ಸೇರಿ ಹೋಗಿರು. ಯಾಪಾರಕೆ ತಡ ಆಗಿ ದುಡ್ಡು ಸಿಗುದು ಮಾರ್ನೇ ದಿನ ಅಂತಾಗಿತು, ಹೀಂಗಾಗಿ ಉಳ್ಕಂಬು ಪ್ರಸಂಗ ಬಂತು. ಅದ್ಯಾವ್ದೋ ಹೋಟ್ಲಗೆ ಉಳ್ಕಂಬನಿ ಹೇಳಿ ಮೂರ್ತಿ ಹೇಳ್ದ. ಕರ್ಚೆಲ್ಲಾ ಯಾಪಾರದ ಸಾವ್ಕಾರ್ರೇ ಕೊಡ್ತರ್ಯಂತೆ ಅಂದ. ಸವಲತ್ತು ಕೊಟ್ಮೇಲೆ ನಮ್ಗಿನ್ನೇನು ಹೇಳಿ ಉಳ್ಕಂಡಾಗಿತು. ಅಲ್ಲೆಂತದ್ರ...ತಿಂಬುಕೆ ಉಂಬುಕೆ ಅದೆಷ್ಟ್ ಸಾಮಾನು! ನಂಗ್ ಆ ಹೆಸರೆಲ್ಲ ಹೇಳೂಕ್ ಬರುದಿಲ್ಲ. ಅದ್ಯಾವ್ಯಾವ್ ನಮೂನಿ ತಿಂಡಿ ಇತ್ತು ಗೊತ್ತದ್ಯಾ? ಬೆಳಗು ಸೆರಿಗೆ ಎದ್ದೊತ್ಗೆ ತೊಳ್ಕಂಬುಕೆ ಬಚ್ಚಲಕೊಟ್ಗಿ ಅಲ್ಲೇ ಇರ್ತದೆ. ನಮ್ಮನಿಲಿ ದೇವರಮನೆಯೂ ಹೊಳ್ಯೂದಿಲ್ಲ ಗುತ್ತದ್ಯಾ ಅಷ್ಟು ಪಳ ಪಳ ಪಳ ಹೊಳಿತಿತ್ತು ನೆಲ, ಗ್ವಾಡೆ ಎಲ್ಲಾವ. ಬೆಳ್ಳಗದೆಂತದೋ ಮರಗಿ ನಮೂನಿಲಿ ಇತ್ತು. ಅದ್ರಗೆ ನೀರು ಸಲ್ಪ ಮಾತ್ರ ಇತ್ರ- ಕೈ ಹಾಕಿ ಹಾಂಗೇ ಮೊಕ ತೊಳ್ಕಂಡೆ. "ಬಾಕಿ ಎಲ್ಲಾ ಹೌದು ಅದ್ಯಂತಕೆ ಬೆಳಿ ಮರಿಗೀಲಿ ನೀರಿಲ್ಲ?" ಹೇಳಿ ಮೂರ್ತಿಕುಡೆ ಕೇಳ್ದೆ. ಮೂರ್ತಿ "ಯಾವ್  ಮರಗಿ ಸೆಂಬಣ್ಣ?" ಅಂದ. "ಅದೇವ ನೋಡು" ಹೇಳಿ ಕೈ ಮಾಡಿ ತೋರ್ಸದೆ.  ಆ ಮೂರ್ತಿ ಕೇಳ್ದವ್ನೇ, ಅದೆಂತಾ ಆಯ್ತೋ ಗುತ್ತಿಲ್ಲ, ಆ ನಮ್ನಿ ನಗ್ಯಾಡ್ದ ಮಾರಾರೆ.  ಅದೆಂಥದೋ ಕಮೋಡಂತೆ ಕಮೋಡು, ನಂಗೆ ಗುತ್ತಾಗ್ಲಿಲ್ಲ, ಮೂರ್ತಿ, ತಿಮ್ಮ, ಯಂಕ್ಟ ಅಲ್ಲಿಂದ ಬರೂವರಿಗೂ ನಗ್ಯಾಡುದ್ರು. ಹೋಕ್ಕಳಿ ಬುಡು ಅವರ ಮಾಡ್ದ ಪಾಪ ಅವರಿಗೆ ಅಂದ್ಕ ಸುಮ್ನಾಗ್ಬುಟ್ಟೆ.

ನಾವೆಲ್ಲಾ ಹಳೇ ಜನ. ಈ ಪ್ಯಾಟೆ ಜನ ತಯಾರ್ಮಾಡಂದು ಕೆಲವೆಲ್ಲಾ ನಮಗೆ ಗುತ್ತಾಗುದಿಲ್ಲ. ಮುಟ್ಟುಕೆ, ಸುಚ್ಚಾಕುಕೆ ಎಲ್ಲಾ ಹೆದರ್ಕಿ. ಮುಟ್ಟದ್ರೆ ಕೆಲು ಹಾಳಾಗೋಯ್ತದ್ಯನೋ ಅಂತಿ ಅನುಮಾನ. ಯಂಕ್ಟ ಅದೆಂತದೋ ಒತ್ತಿದೊಡ್ತಕ್ಕೆ ಬಸ್ ಅಂತಿ ನೀರು ಹರೀತು ಗುತ್ತದ್ಯಾ? ಅದೆಲ್ಲೆಲ್ಲಿ ಎಂತೆಂತಾ ಮರಗಿ ಇಡ್ತರೆ ಹೇಳೇ ಗುತ್ತಿಲ್ಲ. ನಮ್ ದಾಮು ಇದ್ನಲ್ರ ಕೊಳಿಅಡಕೆ ಯಾಪಾರದಂವ, ಅಂವಗೆ ಗಾಡಿ ಡಿಕ್ಕಿಯಾಗಿ ಪರ್ಟಿ ಹೊಡ್ದು ಹೊಟ್ಟಿ ಕಳ್ಳೆಲ್ಲಾ ಹೆರಗೆ ಕಾಣ್ತಿತ್ತು ಮಾರಾರೆ. ಕರ್ಚೆಷ್ಟಾರು ಆಕಳ್ಳಿ, ಮೊನ್ನಾಗಷ್ಟೇ ಮದ್ವ್ಯಾದ ಮನ್ಸ ಅಂತೇಳಿ, ತಾಪರತೋಪು ಮಂಗಳೂರ್ ಆಸ್ಪಟ್ರಿಗೆ ಕರ್ಕಂಡೋದ್ರು. ನಾವೆಲ್ಲಾ ಸೇರಿ ವರ್ಗಿಣಿ ಹಾಕ್ಕಂಬುದು ಹೇಳಿ ಮಾತಾಡ್ಕಂಡಾಗಿತು. ಡಾಕ್ಟ್ರು ಅವರ್ಯಲ್ರ...ಅವರು, "ಹೊಲಗಿ ಹಾಕ್ಬೇಕಾಯ್ತದೆ ಇಲ್ಲಾಂದ್ರೆ ಆಗೂದಿಲ್ಲ" ಅಂದ್ರಂತೆ. "ಹೊಲಿಗಿಲೆಲ್ಲಾ ನಾನಾ ನಮೂನಿ ಅದೆ, ಬರೀ ಹೊಲಿಗಿ ಬ್ಯಾರೆ, ಎಮರಾಡಿ ಬ್ಯಾರೆ, ಡಿಜಾಯ್ನು ಮಾಡಿದ್ದಕ್ಕೆ ಬ್ಯಾರೆ" ಅಂತವ ನಮ್ಮ ಶಣ್ ತಂಗಿ ಹೇಳುಂದು ನೆನಪ್ನಗಿತ್ತು. ಅಲ್ಲಿಗೋದ್ ನಮ್ ಜನ ಪೋನ್ ಮಾಡ್ದಾಗ ಹೇಳೇಬುಟ್ಟೆ"ನೋಡ್ರೋ, ಬ್ಯಾರೆ ಬ್ಯಾರೆ ನಮೂನಿ ಹೊಲಗಿ ಅದ್ಯಂತೆ, ನಮಗೆ ಸಾದಾ ಹೊಲಗಿ ಸಾಕು ಮತ್ತೆ, ಎಮರಾಡಿ ಗಿಮರಾಡಿ ಎಲ್ಲಾ ಬ್ಯಾಡ, ಕರ್ಚು ಸಿಕ್ಕಾಪಟ್ಟೆ ಮಿತಿ ಮೀರೋಯ್ತದೆ" ಅಂದೆ. ದಾಮು ಆರಾಮಾಗಿ, ಕಳದ ವಾರ ಮನೆಗ್ ಬಂದ. ಸಂತಿಗಿದ್ದೋರೆಲ್ಲಾ ನನ್ನೋಡಿ ಹಲ್ಕಿರೂಕೆ ಸುರುಮಾಡದ್ರು. ನನ್ನಿಂದ ಏನೋ ತಪ್ಪಾಗದೆ ಹೇಳಿ ನಂಗುತ್ತಾಗೋಯ್ತು. ಬಾಳ ಸಲ ಕೇಳ್ದ ಮ್ಯಾಲೆ ತಿಮ್ಮ ಹೇಳುಂದು ಹೀಂಗದೆ:" ಸೆಂಬಣ್ಣ, ನಾನಾ ನಮೂನಿ ಹೊಲಗಿ ಹಾಕೂಕೆ ಅದೆಂತಾ ವಸ್ತ್ರ ಅಂತ ತಿಳ್ಕಂಡಿದ್ಯ. ಮನಸ್ರಿಗೆ ಹೊಲಗಿ ಹಾಕುವಾಗ ಆ ನಮೂನಿ ಎಲ್ಲಾ ಬಳ್ಸೂದಿಲ್ಲ ಮಾರಾಯ" ಅಂದ.

ನಮ್ಗೆಲ್ಲಾ ಜಾಸ್ತಿ ಆಸ್ತಿಪಾಸ್ತಿ ಇಲ್ರ; ದುಡಿಬೇಕು ಉಂಬೇಕು ಅಷ್ಟೇಯ. ಯಾಕೋ ಈಗ ನಮ್ಮ ಶಣ್ ತಂಗಿ ಬೆಂಗಳೂರಗೆ ಇದ್ದ್ ಮ್ಯಾಲೇ ನಾವು ಪರಪಂಚ ಸಲ್ಪ ನೋಡಂದು. ನಾವೆಲ್ಲಾ ಹಳ್ಳೀ ಜನವಪ್ಪ, ನಾಂವ್ ಕಲ್ತಂದೆಷ್ಟು? ನಮ್ಗೆ ಪ್ಯಾಟೆ ಮಂದಿ ಇಂಗ್ಲೀಸು ಪಂಗ್ಲೀಸೆಲ್ಲಾ ಗುತ್ತಾಗುದಿಲ್ಲ. ಆದ್ರೂ ಒಂದಷ್ಟ್ ಇಂಗ್ಲೀಸ್ನ  ಒಳ ಪೆಡ್ಲಲ್ನಾಗೇ ಕಲ್ತೆ. ನಮ್ಮನಿ ಶಣ್ ತಂಗಿ ಮುಂದೇ ಮಾತಾಡುಕೆ ಮರ್ಯಾದಿ ಗುತ್ತದ್ಯಾ? ಅದು ಹ್ಯಾಂಗ್ ಮಾತಾಡ್ತದೆ ಅಂತ್ರಿ; ಒಳ್ಳೇ ಹೊದಲು ಹೊಟ್ದಂಗೆ ಮಾತಾಡ್ತದೆ. ನಾಂವ್ ಕಲೀದಿಗಿದ್ರೂ ಬ್ಯಾಜಾರಿಲ್ಲ ನಮ್ಮಲ್ಲಿ ಒಬ್ರಾರೂ ಕಲ್ತವರು ಅವ್ಯರಲ ಹೇಳೇ ಖುಷಿಯಾಗದೆ. ನಮ್ಗೆಲ್ಲಾ ಇನ್ನೆಂತದ್ರ? ನಾಡ್ಗೆ ದೂರ ಕಾಡ್ಗೆ ಹತ್ರ. ಮಕ್ಳಮರಿ ಮದ್ವೆಮನಕಾಲ ಮುಗಿಸಿ ಕಡಿಗೆಂತಾ ಆದ್ರೂ ಬ್ಯಾಜಾರಿಲ್ಲ. ನಾವೆಲ್ಲಾ ಬಾಳಾ ಭಾವಿಕರು. ನಂಬ್ಕಿ ಜನ. ಸುಳ್ಳೇಳುದು, ಡಗ ಹಾಕುದು ಇವೆಲ್ಲಾ ಇಲ್ಲ. ಅದ್ಕೇ ಅಲ್ವನ್ರ...ಅಡಕೆ ಯಾಪಾರದಗೆ ಸಾವ್ರಾರ್ ರುಪಾಯಿ ಕಳ್ಕಂಡಂದು. ಸೆಂಬಣ್ಣ ಬರಿ ಬೋಳೆ ಅಂತ ಬಾಕ್ಯೊರ್ ತೆಳ್ಕಂಡರೆ. ಮ್ಯಾಲೊಬ್ಬ ಕುಂತನೆ...ಅಂವ ನೋಡ್ತನೆ ಬಿಡಿ.

ಆರಾಮಿಲ್ಲಾಗಿತು ಹೇಳಿ ದವಾಖಾನಿಗೆ ಹೋಗಿದೆ; ಡಾಕ್ಟ್ರು ಪರೀಕ್ಸಿ ಮಾಡಿ, ೧೦ ಬೆಳಿ ಗುಳಗೆ ೫ ಅರಷ್ನಿಬಣ್ಣದ ಗುಳಗೆ ಕೊಟ್ರು, ಚೀಟಿ ಬರ್ದು "ದಿನಾ ಮೂರ್ ಚಮಚ ತಕಳಿ, ವಾರ ಆದ್ಮೇಲೆ ಬನ್ನಿ" ಅಂದ್ರು. ನಮ್ಮಳ್ಳಿಯಿಂದ ಪ್ಯಾಟಿಗೆಂತ ದಿನಾ ಹೋಗುಕಾಯ್ತದ್ಯಾ? ಅದ್ಕೇ ಯೋಚ್ನಿ ಮಾಡ್ದೆ. ವಾರಕ್ಕೆ ಯೋಳ್ ದಿನ, ಯೋಳ್ಮೂರ್ಲ ೨೧ ಅಂತ ಲೆಕ್ಕ ಮಾಡ್ಕಂಡೆ. ಸೀದಾ ಬಜಾರ್ ರಸ್ತೆ ಶಾಂತ್ ಪರಬುರ ಪಾತ್ರೆ ಅಂಗ್ಡೀಗೆ ಹೋಗಿ ನಿಂತ್ಕಂಡೆ. "ಒಡ್ಯಾ ಹಣ ತುಸು ಕಮ್ಮಿ ಅಯ್ತದ್ಯಾಬಲ, ನಂಗೊಂದ್ ೨೧ ಚಮಚ ಕೊಡುರಾ? ಮುಂದನವಾರ ಮತ್ತೆ ಬರೂದದೆ-ಬಂದಾಗ ಕೊಟ್ಟೋಯ್ತೆ" ಅಂದೆ. ಅವ್ರೆಲ್ಲಾ ನಮ್ಗೆ ಪರಚಯದ ಜನ. ಆಯ್ತು ತಕಂಡೋಗಿ ಅಂದ್ಬುಟ್ರು, ತಂದೆ. ವಾರದ ನಂತ್ರ, ’ಹ್ಯಾಂಗೂ ಕಮ್ಮಿ ಆಗದೆ ಮತ್ತೆ ಡಾಕ್ಟ್ರ ತಾವ ಹೋಗ್ಲೋ ಬ್ಯಾಡವೋ’ ಹೇಳಿ ಯೋಚ್ನಿ ಮಾಡ್ದೆ. ಡಾಕ್ಟ್ರಿಗೆ ಸಿಟ್ಟಬಂದ್ರೆ ಮುಂದೆಲ್ಲಾರು ಬೈದ್ರೆ ಕಷ್ಟ ಹೇಳಿ ಮತ್ತೆ ಹೊಂಟೆ. "ಡಾಕ್ಟ್ರೇ, ನಂಗಕಮ್ಮಿ ಆಗದೆ. ನೀವು ಹೇಳ್ದಾಂಗೇಯ ಎಲ್ಲಾ ಮಾಡ್ದೆ, ಪದೇ ಪದೇ ಅಲ್ಲಿಂದ ಪ್ಯಾಟಿಗೆ ಬರೂಕಾಗೂದಿಲ್ಲ ಹೇಳಿ ದಿನಕ್ಕೆ ಮೂರರಂತೇ ವಾರಕ್ಕೆ ೨೧ ಚಮಚ ಆಯ್ತಿತ್ತಲ್ರ, ಅದಷ್ಟ್ನೂ ಶಾಂತ್ ಪರಬುರ ಅಂಗಡೀಲಿ ಕರುದಿ ಮಾಡ್ಕಂಡೇ ಹೋಗ್ಬುಟ್ಟಿದ್ದೆ" ಅಂದೆ. ಡಾಕ್ಟ್ರ ಮುಂದೆ ಸುಮಾರ್ ಜನ ಇದ್ರು. ಡಾಕ್ಟ್ರು ಎಂತಕೋ ನಗ್ಯಾಡದ್ರು. ವಾಪಸ್ ಬಂದವ್ನೆ ನಮ್ಮಟ್ಟಿ ಯಂಕ್ಟನ ಕರದು ಹೇಳ್ದೆ. ಅವನೂ ಜೋರ್ ಹಲ್ಕಿರದ. "ಸೆಂಬಣ್ಣಾ, ಡಾಕ್ಟ್ರು ಚೀಟೀಲಿ ನೀರೌಷದಿ ಬರ್ದರೆ.  ಅದನ್ನ ಔಷದಿ ಅಂಗ್ಡೀಲಿ ಕರುದಿ ಮಾಡಿ, ದಿನಕ್ಕೆ ಮೂರ ಚಮಚ ಕುಡಿ ಅಂತ ಹೇಳಂದು" ಅಂದ. ಯಾರ್ನ ನಂಬುದು ಯಾರ್ನ ಬಿಡುದು ಮಾರಾರೆ?

ಕಳದವರ್ಸ ಈ ದಿನ್ದಗೆ ಬೆಂಗಳೂರಗೆ ಹದನೈದ್ ದಿನ ಇದ್ದೆ. ನಮ್ಮನಿ ಶಣ್ ತಂಗಿ ಅಲ್ಲಿ ಸುಮಾರ್ ಬದಿಗೆ ಕರ್ಕಂಡೋಗಿತು. ಮಂತ್ರಿ ಮಹಲಿಗೂ ಕರ್ಕೊಂಡೋಗಿತು ಬಲ್ರ. ಅದೆಂತದು ಅಂತ್ರಿ...ಸ್ವರ್ಗ  ಸ್ವರ್ಗ ಗುತ್ತದ್ಯಾ? "ಅಪ್ಪ-ಅಮ್ಮನ್ನೊಂದು ಬಿಟ್ಟು ಬಾಕಿ ಎಲ್ಲಾ ಒಂದೇ ಕಡೀಗೆ ಸಿಕ್ತದೆ ಅಪಾ"ಅಂತು. ಮೆಟ್ಲೆಲ್ಲಾ ಗರಗರ ತಿರುಗೂದ್ ನೋಡ್ಬೇಕು. ಅದ್ಯಂತದ್ರ ಮಾರಾರೆ? ನನ್ ಕೈ ಹಿಡ್ಕಂಡೇ ಕರ್ಕಂಡೋಯ್ತಿತ್ತಾ....ಆದ್ರೂ ಕಾಲಿಡುಕೇ ಗುತ್ತಾಗ್ಲಿಲ್ಲ. ಇಡ್ಬೇಕು ಅಂದ್ಕೂಡ್ಲೇ ಸರಗುಟ್ಕಂಡು ಮುಂದೋಯ್ತಿತು-ಮೆಟ್ಲು. ಜಾರಿ ಬೀಳುದೊಂದ್ ಬಾಕಿ. ಹಿಂದಿದ್ದೋರ್ ಯಾರೋ ಹಿಡದ್ರು. ಆ ಬೆಳಕು, ಆ ಬಣ್ಣ, ಆ ವಸ್ತ್ರ, ಆ ಜನ, ಆ ವ್ಯವಸ್ಥೆ ಇಂದ್ರನ ಅಮರಾವತಿ ಇದ್ದಂಗಿತ್ತು ಮಾರಾರೆ. ಕರುದಿ ಕರ್ಚಿಗೆ ದುಡ್ಡೊಂದಿದ್ರೆ ನಮ್ಮಂತೊರ್ಗೆ ಯಂತ ತಕಬೇಕು ಹೇಳೆ ತೆಳೂದಿಲ್ಲ. ತಿರುಗು ಕುರ್ಚಿ, ತಿರುಗು ಪೆಟ್ಗೆ, ತಿರುಗು ಮೆಟ್ಲು, ಎಲ್ಲ ಒಂದ್ಸಲ ನೋಡ್ವಾಂಗದೆ. ಒಂದೇ ತೊಂದ್ರೆ ಅಂದ್ರೆ ಬೀಡಿ ಸೇದೂಕೆ ಕವಳ ಹಾಕುಕೆ ಎಲ್ಲೂ ಜಾಗ ಸಿಗುದಿಲ್ಲ. ಮತ್ತೊಂದ ಸಲಿ ಬಂದಾಗ ಹಿಸ್ಗನ ದೇವಸ್ಥಾನಕ್ಕೂ ಹೋಪನಿ ಅಂತು ನಮ್ ಶಣ್ ತಂಗಿ. ಹಿಸ್ಗಂಗೂ ದೇವಸ್ಥಾನ ಮಾಡರ್ಯಾ?  

ಈ ಸಲ ಸಿಕ್ಕಾಪಟ್ಟೆ ಸೆಕೆಯಲ್ರ. ಅಪರೂಪಕ್ಕೆ ಮೊನ್ನಾಗೆ ಪ್ಯಾಟಿಗೋಗಿದೆ. ಶಕೆ ತಡೂಕಾಲಿಲ್ಲ. ಕೆಲ್ಸ ಮುಗ್ದಮ್ಯಾಲೆ ಬಿಕ್ಕು ಕಮ್ತೀರ ಐಶ್ರೀಮ್ ಅಂಗಡಿಗೆ ಹೋದೆ. "ಏನ್ ಕೊಡ್ಲಿ?" ಅಂದ್ರು. ಸ್ವತಾ ಅವರೇ ಕೆಲಸ ಮಾಡ್ತರೆ. ಸಪ್ಲಾಯ್ ಹಿಡದು ಗಲ್ಲಿಮೇಲೆ ಕೂರೂವರೆಗಿನ ಕೆಲಸವೂ ಅವ್ರದೇ. ಎಂತೆಂತಾ ಅದೆ ಕೇಳ್ದೆ. ಬರ್ಗುಂಟ್ಕಂಡು ಪಟಪಟಪಟ ೧೫-೨೦ ಹೆಸರು ಹೇಳದ್ರು. ಬೆಂಗಳೂರಿಗೆ ಹೋದಾಗ ನಮ್ ತಂಗಿ ಸಂತೀಗೆ ಒಂದ ಕಡೆಗೆ ಐಶ್ರೀಮ್ ತಿಂದಿದ್ದೆ. ’ಭಟ್ರ ಕಾಚಾ ಕೊಡಿ’ ಅಂತು, ಕೊಟ್ಟಿದ್ರು, ಬಾಳಾ ಚೊಲೊ ಇತ್ತು ಆಯ್ತಾ..ಅದ್ಕೇಯ ಇಲ್ಲೂ ಸಿಕ್ರೆ ಅದನೇ ತಿಂಬ ಹೇಳಿ ಭಿಕ್ಕು ಕಮ್ತೀರಿಗೆ ಹೇಳ್ದೆ"ಭಟ್ರ ಕಾಚಾ ಕೊಡಿ."  ಭಿಕ್ಕು ಕಮ್ತೀರಿಗೆ ನೆಗ್ಯೋ ನೆಗಿ. "ಯಂತಕ್ರ ಮರಾರೆ? ಯಂತಾ ಆಯ್ತು?" ಅಂದೆ. "ಭಟ್ರ ಕಾಚಾ ಒಣಗೂಕೆ ಹಾಕರೆ. ಅರ್ಧಗಂಟೆ ಆಯ್ತದೆ" ಅಂದ್ಕಂಡು ಮತ್ತೆ ನಗೂಕೆ ಸುರುಮಾಡೀರು ಆಯ್ತಾ. ನಾ ಹೇಳಂದು ಯಂತದು ಹೇಳಿ ಅವರಿಗೆ ಅರ್ತಾ ಆಗಿತ್ತು ಅಂತಿಟ್ಕಣಿ. ಅದನ್ನೇ ಕೊಟ್ರು ತಿಂದ್ಕಂಡೂ ಬಂದೆ. ರಾತ್ರಿ ತಂಗಿಗೆ ಪೋನ್ ಮಾಡಿ ಕೇಳ್ದೆ. "ಶಣ್ ತಂಗಿ ನಾ ಬೇಂಗ್ಳೂರಿಗ್ ಬಂದಾಗ ಅದ್ಯಾವ್ದೋ ನಮೂನಿ ಐಶ್ರೀಮ್ ತಿಂದಾಗಿತಲೇ ಅದ್ಕೆ ಹೆಸರೆಂತದು?" "ಅಪಾ ಅದು ಬಟರ್ ಸ್ಕಾಚು" ಅಂತು. ಸದ್ಯಕ್ಕೆ ಇನ್ಯಾರ್ಗೂ ಗುತ್ತಾಗ್ಲಿಲ್ಲ ಅಂದ್ಕಂಡು ಸುಮ್ನಾಕಂಡೆ.           

                            __________________ಗ್ರಾಮ್ಯ ಪದ-ಅರ್ಥ ಕೋಷ್ಟಕ
____________________

ಮರ್ತ್ ಕಮ್ತಿ-ಮಾರುತಿ ಕಾಮತ್

ಕಲಿ,ಕಲ್ತ-ಓದು, ಓದಿದ

ಪತ್ಲ-ಸೀರೆ

ಮುಂಡು-ಅಡ್ಡಪಂಚೆ

ಅಂಟ್ರವಾಲು-ಅಂಡರ್ ವೇರ್

ಟುವಾಲು- ಟವೆಲ್

ಬಿರಡಿಂಗು- ಬಿಲ್ಡಿಂಗ್

ಮೆತ್ತು-ಮಹಡಿ

ನೀರಡಕಿ/ನೀರಡಕೆ-ನೀರಲ್ಲಿ ನೆನೆಸಿದ ಒಂದುವಿಧದ ಸಿಪ್ಪೆ ಕೊಳೆತ ವಾಸನೆಯುತ ಅಡಕೆ

ಕೊಳಿ ಅಡಕೆ-ಒಂದು ವಿದದ ಹಾಳು ಅಡಕೆ

ಸುಚ್ಚು-ಸ್ವಿಚ್

ಮರಗಿ-ಮರಿಗೆ

ಅಂತಿ-ಅಂತ

ಎಮರಾಡಿ-ಎಂಬ್ರಾಯ್ಡರಿ

ಸಂತಿಗೆ-ಜೊತೆಗೆ, ಸಂಗಡ

ಹೊದಲು ಹೊಟ್ದಂಗೆ-ಅರಳು ಹುರಿದ ಹಾಗೆ

ಗುಳಗೆ-ಗುಳಿಗೆ, ಮಾತ್ರೆ

ಶಾಂತ್ ಪರಬು-ಶಾಂತರಾಮ ಪ್ರಭು

ಕವಳ-ಎಲೆಯಡಕೆ

ಭಿಕ್ಕು ಕಮ್ತಿ- ಭಿಕ್ಕು ಕಾಮತ್


ಹಿಸ್ಗನ ದೇವಸ್ಥಾನ-ಇಸ್ಕಾನ್ [ಹಿಸ್ಗ ಅಂದರೆ ಉತ್ತರಕನ್ನಡ-ಮಲೆನಾಡು ಪ್ರಾಂತದಲ್ಲಿ ಬಸವನ ಹುಳು!]


Monday, April 8, 2013

ಬೇವು ಬೆಲ್ಲವನೊಟ್ಟು ತನ್ನಿರಿ


ಚಿತ್ರಋಣ : ಚಿತ್ತಾರ ಡಾಟ್  ಕಾಂ 
ಬೇವು ಬೆಲ್ಲವನೊಟ್ಟು ತನ್ನಿರಿ

ಮಾವು ಹೊಂಗೆಗಳೆಲ್ಲ ಚಿಗುರುತ
ಜಾವದಲೆ ಕೋಗಿಲೆಯು ಕೂಗುತ
ಜೀವಲೋಕದಿ ಆ ಯುಗಾದಿಯ ಬೆಡಗು ಕೂಡಿಸುತ |
ಯಾವ ಮಾಯೆಯ ಮೋಡಿಯೊಳಗಾ
ದೇವ ಕರೆವನೊ ಜೀವಸಂಕುಲ
ಕೀವ ನೆಲ್ಲವ ನಿತ್ತು ಪೊರೆವನೊ ಬೆರಗು ಮೂಡಿಸುತ ||

ಕೂಸು ಹುಟ್ಟಿತು ಗಿಡಮರದೊಳಾ
ಭೂಸುರರ ಬೆಸಗೈದು ಕರೆಯುತ
ಕೇಸರಿಯ ಕತ್ತೂರಿ ಪರಿಮಳ ಭುವಿಯಲೋಕದೊಳು |
ಹಾಸಿ ನೇರಳೆ ಕಂದು ಹಳದಿಯ
ಬೀಸಿ ತಣ್ಣನೆ ಮಂದ ಮಾರುತ
ನೇಸರನು ಮೇಲೇರೆ ಕವಿಜನರಿಳಿಸೆ ಪಾಕದೊಳು ||  

ದುಂಬಿಗಳು ಮಕರಂದ ಹೀರುತ
ರೆಂಬೆಗಳ ಸಡಗರದಿ ಸುತ್ತುತ 
ತುಂಬಿರುವ ತರುಲತೆಗಳೆಡೆಯಲಿ ಮಂತ್ರಘೋಷಗಳ |
ನಂಬಿರುವ ಹೂ-ಕುವರಿಯರ ನಡು
ವೆಂಬ ಜಾಗದಿ ಕೂತು ವರಿಸುತ
ಬೆಂಬಿಡದೆ ಕಳೆದವರ ಕನ್ಯಾಪೊರೆಯ ವೇಷಗಳ || 

ತಂಬೆಲರ ಬಳಿಸಾರಿ ರಶ್ಮಿಯೊ
ಳಿಂಬುನೀಡುತ ನೇವರಿಸಿ ರವಿ
ಕಂಬದಾಟವನಾಡುತಿರೆ ಬಂಗಾರದಾಭರಣ |
ಹಂಬಲಿಸಿ ಜಗನಾಟಕದ ಗುರು
ವೆಂಬ ಹಂಕಾರವನು ತಾಳದೆ
ಕಂಬಳದಿ ರಥವೇರಿ ಸೂಸುತಲಗಣಿತದ ಕಿರಣ ||

ಬೇವು ಬೆಲ್ಲವನೊಟ್ಟು ತನ್ನಿರಿ
ಸಾವಧಾನದಿ ಕುಳಿತು ತಿನ್ನಿರಿ
ನೋವು-ನಲಿವಿನ ಹಂದರವು ಜೀವನದ ವೈಖರಿಯು |
ಭಾವದೊಳರಾಶಿಗಳ ಬಗೆಯುತ
ನಾವಿಕನ ನಡೆಯಷ್ಟು ಗಮನಿಸಿ
ನಾವರಿಯೆ ಬಹುದೀಯುಗಾದಿಯು ಯುಗದ ಚಾಕರಿಯು ||


 ಆತ್ಮೀಯ ಸ್ನೇಹಿತರಿಗೆಲ್ಲರಿಗೂ ಯುಗಾದಿಯ ಹಾರ್ದಿಕ ಶುಭಾಶಯಗಳು.

ಪದ್ಯಪಾನ ಹಮ್ಮಿಕೊಂಡು ಅತ್ಯದ್ಭುತವಾಗಿ ಸಂಪನ್ನಗೊಂಡ ಡಾ. ರಾ ಗಣೇಶರ ಶತಾವಧಾನ ಕಾರ್ಯಕ್ರಮದ ಡಿವಿಡಿ ಸಾಂದ್ರಿಕೆಗಳು ಬಿಡುಗಡೆಗೊಂಡಿವೆ. ಕನ್ನಡದ ಛಂದೋಬದ್ಧ ಕಾವ್ಯಗಳನ್ನು ಸವಿಯುವಲ್ಲಿ ಆಸಕ್ತರಾದವರು ಮತ್ತು ಅಭಿಜಾತ ಕಲೆಯಾದ ಅವಧಾನವನ್ನು ನೇರವಾಗಿ ನೋಡದಲು ಅವಕಾಶ ಇರದಿದ್ದವರು ಈ ಸಾಂದ್ರಿಕೆಗಳನ್ನು ರೂಪಾಯಿ ಐದುನೂರು ಪಾವತಿಸಿ ಪಡೆದುಕೊಳ್ಳಬಹುದಾಗಿದೆ. ವಿವರಗಳು ಇಂತಿವೆ : 

Shathaavadhaana DVDs are ready now and available at padyapaana office in the
below address.

166, MCR Extension, 18th Cross
(Post Office Road, Behind Indraprastha Restaurant)
Vijayanagar
Bangalore - 560040
Here is a pointer to the location in Google maps for your convenience:
http://tinyurl.com/d5lkb9
Ph: 234-02001, 93425-02001, 9448871438

With respect to  the same, below are some  details.

1. The set contains 2 pouches of total 7 DVDs. starting from procession till
felicitation all the activities are covered.

2. The cost of the total set is 500 INR.

3. Importantly We need volunteers  who can distribute the DVDs on behalf of
Padyapaana at various locations of Bangalore and other places in karnataka and
outside. So, please let us know if any one is interested or point some one who
can take up this responsibility to make the DVDs available for interested folks
to purchase near their places.


Please contact the above mentioned numbers for further details.

~ Padyapaana Samiti.


Friday, April 5, 2013

ಮೂರ್ತಿ ಕಣ್ಣೆದುರು ಪ್ರತ್ಯಕ್ಷವಾದಾಗ....................!!!
ಮೂರ್ತಿ ಕಣ್ಣೆದುರು ಪ್ರತ್ಯಕ್ಷವಾದಾಗ....................!!!
                     
ತುಸು ವಿಶಾಲವಾದ ಜಾಗವನ್ನು ಹೊಂದಿದ ಕಾಂಪೌಂಡಿನ ಒಳಗೆ ಕಳೆದ ಶತಮಾನದ ಕಟ್ಟಡ. ಮೆಟ್ಟಿಲೇರಿ ಮಹಡಿಯನ್ನು ತಲುಪಿದರೆ ಅಲ್ಲೊಂದು ಹಜಾರ ಅಥವಾ ಹಾಲ್.  ತೀರಾ ಆಡಂಬರವಲ್ಲದ ಸಾದಾ ಸೀದಾ ಆದರೂ ವಿಶೇಷವೆನಿಸುವಂಥಾ ಮೆತ್ತೆಗಳಿರುವ ಸೋಫಾಗಳು, ಒಂದೆಡೆ ಅತಿ ಉದ್ದನೆಯ ಪೆಂಡೂಲಮ್ ಹೊಂದಿರುವ [ಮೈಸೂರು ಅರಮನೆಯಲ್ಲಿ ಸಿಕ್ಕಿತೇನೋ ಎಂಬಂತಹ]ಅತಿವಿಶಿಷ್ಟ ನಿಲುಗಡಿಯಾರ, ಬಿರುಬೇಸಿಗೆಯ ಸೆಕೆ ಬಂದವರಿಗೆ ತಾಗದಿರಲೆಂದು ಅಳವಡಿಸಿರುವ ಏಸಿ, ಜೀನ್ಸ್ ಮತ್ತು ಟೀ ಶರ್ಟ್ ನಲ್ಲಿ, ಎಂದಿನಂತೇ ಮುಗುಳುನಗುತ್ತ ರತ್ನಗಂಬಳಿಯಮೇಲೆ ಎದ್ದುನಿಂತು ಸ್ವಾಗತಿಸಿದ ಮೂರ್ತಿಯ ಚಿತ್ರ ತಲೆಯಲ್ಲಿ ಸ್ಥಿರವಾಗಿ ನಿಂತಿದೆ. ಮೈಕ್ರೋಸಾಫ್ಟ್ ನಲ್ಲಿ ಪ್ರೋಗ್ರಾಮರ್ ಆಗಿದ್ದ ಈ ಮೂರ್ತಿ ಅಂತಿಂಥ ಮೂರ್ತಿಯಲ್ಲ! ಕ್ಯಾಲಿಫೋರ್ನಿಯಾದಲ್ಲಿ ಮೂರು ಕಂಪನಿಗಳಿಗೆ ಹುಟ್ಟುನೀಡಲು ಪಾಲುದಾರರಾಗಿ ಕಾರಣರಾಗಿದ್ದ ಮೂರ್ತಿ, ಸ್ಥಾಪಿಸಿದ್ದ ’ಎಲಿಗ್ರೋ ಸಿಸ್ಟಮ್ಸ್’ ಎಂಬ ಐಪಿ ಸೆಕ್ಯುರಿಟಿ ಕಂಪನಿಯ ಬೆಳವಣಿಗೆಯನ್ನು ಕಂಡು ಸಿಸ್ಕೋ ಅದನ್ನು ಕೊಂಡುಕೊಂಡಿತು. ನೆಟ್ ವರ್ಕ್ ಎಂಜಿನೀಯರ್ ಆದ ಮೂರ್ತಿ ನನ್ನ ಮೂಲ ವೃತ್ತಿ ಮಾರ್ಗದವರೇ ಎಂಬುದನ್ನು ತಿಳಿದಾಗ ಸಂತಸವಾಯ್ತು. ಎಲ್ಲಿಯ ನೆಟ್ ವರ್ಕು ಎಲ್ಲಿಯ ಬರಹಲೋಕ, ಎಲ್ಲಿಯ ಸಂಗೀತ-ಸಾಹಿತ್ಯ, ಸಂಬಂಧವೇ ಇಲ್ಲದ ಈ ಎರಡು ದಾರಿಗಳಲ್ಲಿ ಸಂಬಂಧವನ್ನು ಕಲ್ಪಿಸುವ ಜನರಿದ್ದಾರೆ ಎಂಬುದು ನಿಮ್ಮ ಮುಂದೆ ಸಾಬೀತಾಗಿರುವ ವಿಷಯ. ಮೂರ್ತಿಯ ಸಂಗೀತವನ್ನು ನೀವು ಅಲಿಸಿದ್ದೀರಿ, ನನ್ನ ಬರಹಗಳನ್ನೂ ನೀವು ಓದಿ ಆಸ್ವಾದಿಸಿದ್ದೀರಿ; ಯಾಕೆ ಹೀಗೆ ಹೇಳಿದೆನೆಂದರೆ ವ್ಯಕ್ತಿಗೆ ಮಾದುವ ವೃತ್ತಿಯಲ್ಲಿ ವೃತ್ತಿಸಂತೋಷ ಇದ್ದರೆ, ಓದು ಯಾವುದೇ ಆದರೂ ಮಡುವುದು ಬಯಸಿದ್ದನ್ನೇ!  

ನಮ್ಮ ನಡುವೆ ನಾವು ಅನೇಕರನ್ನು ನೋಡುತ್ತೇವೆ. ಇಲೆಕ್ಟ್ರಿಕಲ್, ಮೆಕಾನಿಕಲ್, ಸಿವಿಲ್ ಮೊದಲಾದ ಎಂಜಿನೀಯರಿಂಗ್ ಓದಿಕೊಂಡ ಜನ ತೊಡಗಿಕೊಳ್ಳುವುದು ತದ್ವಿರುದ್ಧವಾದ ವೃತ್ತಿಗಳಲ್ಲಿ. ಏನನ್ನೂ ಓದದ ವ್ಯಕ್ತಿ ಮಲೆನಾಡ ಕಾಡಿನ ಭಾಗಗಳಲ್ಲಿ ವಿದ್ಯುಜ್ಜನಕಗಳನ್ನು ನಿರ್ಮಿಸಿಕೊಟ್ಟು ದಾಖಲೆಮಾಡಿದ್ದಾರೆ. ಕೃಷಿಕರಿಗೆ ಉಪಯೋಗವಾಗುವ ಹಲವು ಯಂತ್ರೋಪಕರಣಗಳನ್ನು ಜಾಸ್ತಿ ಓದಿರದ ಹಳ್ಳಿಗರೇ ತಯಾರಿಸಿಕೊಡುತ್ತಿದ್ದಾರೆ. ತೀರಾ ಇತ್ತೀಚೆಗೆ ಬಂದ ಮೊಬೈಲ್ ಸಿಮ್ ಬಳಸಿ, ಆ ಮೂಲಕ ನಿಯಂತ್ರಿಸಬಲ್ಲ ಯಂತ್ರಗಳನ್ನೂ ಸಹ ಕೆಲವರು ಸಿದ್ಧಪಡಿಸಿದ್ದಾರೆ. ಎಂಜಿನೀಯರಿಂಗ್ ಕಾಲೇಜುಗಳಲ್ಲಿ ಪ್ರಾಜೆಕ್ಟ್ ಮಾಡುವ ಹುಡುಗರು ಇಂಥವರಿಂದ ಮಾಹಿತಿ ಪಡೆದರೂ ತಪ್ಪಿಲ್ಲ. ಬದುಕು ಮನುಷ್ಯನಿಗೆ ಪಾಠಕಲಿಸುತ್ತದೆ; ಬದುಕು ಕಲಿಸುವ ಪಾಠವನ್ನು ಯಾವ ವಿಶ್ವವಿದ್ಯಾಲಯವೂ ಹೇಳಿಕೊಡಲು ಸಾಧ್ಯವಾಗುವುದಿಲ್ಲ. ವ್ಯಕ್ತಿಯ ಮನದಲ್ಲಿ ನಿಶ್ಚಿತ ಉತ್ತಮ ಗುರಿಯೊಂದು ಹುಟ್ಟಿಬಿಟ್ಟರೆ, ಅದನ್ನು ಸಾಧಿಸಲು ಆತ ಸನ್ನದ್ಧನಾಗೇ ಇರುತ್ತಾನೆ, ಅದಕ್ಕಾಗಿಯೇ ಸತತ ಪರಿಶ್ರಮಿಸುತ್ತಾನೆ. ಚಾರ್ಟರ್ಡ್ ಅಕೌಂಟಂಟ್ ಆಗಿರುವ ಯಂಡಮೂರಿ ವೀರೇಂದ್ರನಾಥ್ ಅವರು ’ದುಡ್ಡು ದುಡ್ಡು’ ಎಂಬ ಕಾದಂಬರಿಯನ್ನು ಬರೆದು ಹೆಸರುವಾಸಿಯಾದರು. ಅವರ ಬರಹಗಳು ಇಂದಿಗೂ ಹಾಗೇ ಹಸೀ ಗೋಡೆಗೆ ಹರಳನ್ನು ಮೆತ್ತುವ ಪ್ರಾತ್ಯಕ್ಷಿಕೆಯನ್ನು ಅವರು ಬರಹಗಳ ಮೂಲಕ ಉಣಬಡಿಸುತ್ತಾರೆ. ಕನ್ನಡ ಬರುವುದಿಲ್ಲವಾದರೂ, ನನ್ನ ಬರಹಗಳನ್ನು ಬೇರೆಯವರಿಂದ ತರ್ಜುಮೆ ಮಾಡಿಸಿ ತಿಳಿದುಕೊಂಡೆ ಎಂದು ಅವರೊಮ್ಮೆ ನನಗೆ, ಶುಭಾಶಯ ತಿಳಿಸಿ ಮಿಂಚಂಚೆ ಕಳಿಸಿದ್ದಾರೆ.

ಪಂಜೆಯವರು ತಮ್ಮ ಕವನದಲ್ಲಿ

ಏರುವನು ರವಿ ಏರುವನು
ಬಾನೊಳು ಸಣ್ಣಗೆ ತೋರುವನು
ಏರಿದವನು ಚಿಕ್ಕವನಿರಬೇಕೆಲೆ
ಎಂಬಾ ಮಾತನು ಸಾರುವನು

ಎಂದಿದ್ದಾರೆ. ಆ ಪ್ರಕಾರ ನಾನು ಭೇಟಿಯಾದ ಮೂರ್ತಿ, ನನಗೆ ಮಿಂಚಂಚೆ ಕಳಿಸಿದ ಯಂಡಮೂರಿ ಇವರೆಲ್ಲಾ ಬಹಳ ಎತ್ತರಕ್ಕೆ ಏರಿದರೂ, ನಿಗರ್ವಿಗಳಾಗಿ ಸರಳ ಜೀವನವನ್ನು ನಡೆಸಿದ್ದಾರೆ. ಅಂದಹಾಗೆ ಆ ಮೂರ್ತಿ ನನ್ನ-ನಿಮ್ಮೆಲ್ಲರ ಮನದಮೂರ್ತಿ; ಮನೋಮೂರ್ತಿ! ಅವರ ಮನೆಯೊಳಗೆ ಅವರೆದುರು ಕುಳಿತುಕೊಳ್ಳುತ್ತಿದ್ದಂತೆಯೇ, ಸಹಾಯಕನ ಮೂಲಕ ಕಾಫಿ ತರಿಸಿಕೊಟ್ಟರು. ಇದುವರೆಗೆ ಎಲ್ಲೂ ಭೇಟಿಯಾಗಿರದ, ನನ್ನಂತಹ ಸಾಮಾನ್ಯನನ್ನೂ ಸಹ ಅವರು ನಡೆಸಿಕೊಂಡ ರೀತಿ ನನಗೇ ಮುಜುಗರವನ್ನುಂಟುಮಾಡಿತ್ತು. ಮಾತನಾಡುತ್ತಿದ್ದರೆ ಹತ್ತಿರದ ನೆಂಟರೊಡನೆ ಹರಟಿದ ಅನುಭವ; ಮಾತಿನಲ್ಲಿ ತೀರಾ ಔಪಚಾರಿಕತೆಯಿಲ್ಲ, ಡಂಬಾಚಾರವಿಲ್ಲ, ತೂಕದ ಮಾತು, ಮಿತಮಾತು, ಶುದ್ಧ ಕನ್ನಡದಲ್ಲೇ ಮಾತು. ಸಹಜವಾಗಿ ಹೊರಹೊಮ್ಮುವ ಮುಖಭಾವಗಳು, ಆಗಾಗ ತಿಳಿನಗೆ, ಯಾವುದನ್ನೂ ಗೌಪ್ಯವಾಗಿಡದಂಥಾ ನೇರ ಮಾತುಗಾರಿಕೆ-ಇವುಗಳನ್ನೆಲ್ಲಾ ಮೂರ್ತಿಯವರಲ್ಲಿ ಕಂಡೆ.

ಬೆಂಗಳೂರು ವಿಶ್ವವಿದ್ಯಾಲಯದ ವಿಶ್ವೇಶ್ವರಯ್ಯ ಎಂಜಿನೀಯರಿಂಗ್ ಕಾಲೇಜಿನಲ್ಲಿ, ಇಲೆಕ್ಟ್ರಿಕಲ್ ಎಂಜಿನೀಯರಿಂಗ್ ಓದುತ್ತಿರುವಾಗಲೇ ಮನೋಮೂರ್ತಿಯವರು ಡ್ರಮ್ ಬಾರಿಸುತ್ತಿದ್ದರಂತೆ. ಕರ್ನಾಟಕ ಸಂಗೀತಕ್ಕೆ ಒತ್ತುಕೊಟ್ಟ  ಹಿನ್ನೆಲೆಯ ಮನೆತನದಲ್ಲಿ ಜನಿಸಿದ ಅವರಿಗೆ ಬಾಲ್ಯದಿಂದಲೇ ಸಂಗೀತದಲ್ಲಿ ಆಸಕ್ತಿ. ಎಲ್ಲೇ ಸಂಗೀತ ಗೋಷ್ಠಿ, ವಾದ್ಯಗೋಷ್ಠಿಗಳು ನಡೆದರೂ ಸಾಧ್ಯವಾದಲ್ಲೆಲ್ಲಾ ಅದನ್ನು ನೋಡುವುದು ಮೂರ್ತಿಯ ಆಸಕ್ತಿಯ ವಿಷಯಗಳಲ್ಲೊಂದು. ಸಂಗೀತಕ್ಕೇ ಮನಸ್ಸು ಸೋತಿದ್ದರೂ ಮನೆಯವರು ಪದವಿ-ಗಿದವಿ ಓದಿಸದೇ ಹಾಗೇ ಬಿಟ್ಟುಬಿಡುತ್ತಾರ್ಯೇ? ಸಹಜವಾಗಿ ಮನೆಯವರೆಲ್ಲರ ಒತ್ತಾಯದಮೇರೆಗೆ, ಉನ್ನತ ವ್ಯಾಸಂಗಕ್ಕಾಗಿ ಕ್ಯಾಲಿಫೋರ್ನಿಯಾಗೆ ಹಾರಿದವರು ಮನೋಮೂರ್ತಿ-ಅಲ್ಲಿ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ ಮತ್ತು ಸ್ಟಾನ್ ಫೋರ್ಡ್ ವಿಶ್ವವಿದ್ಯಾಲಯಗಳಲ್ಲಿ ಓದಿದರಂತೆ. ಓದು ನಡೆದೇ ಇದ್ದರೂ ಜೊತೆಜೊತೆಗೇ ಸಂಗೀತರಂಗವೂ ಕೈಬೀಸಿ ಕರೆಯುತ್ತಿತ್ತು. ಹಸಿರುಮೇವನ್ನು ಕಂಡ ಹಸಿದ ದನದಂತೇ ಸಂಗೀತದ ಹಸಿವನ್ನು ನೀಗಿಸಿಕೊಳ್ಳಲು ಮೂರ್ತಿಯ ಮನಸ್ಸು ಸದಾ ಅವಕಾಶ ಹುಡುಕುತ್ತಿತ್ತು.

ಸಂಗೀತದಲ್ಲಿ ತೊಡಗಿಕೊಂಡ ಮೂರ್ತಿ ಕನ್ನಡತಾಯ್ನೆಲದಲ್ಲಿ, ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ, ’ಅಮೇರಿಕಾ ಅಮೇರಿಕಾ’ ಚಲನಚಿತ್ರಕ್ಕೆ ಸಂಗೀತವೊದಗಿಸಿದರಾದರೂ ಅವರ ಸಂಗೀತದಿಂದ ಜನರ ಹೃದಯವೀಣೆಯನ್ನು ಮೀಟಿದ್ದು ’ಮುಂಗಾರುಮಳೆ’ಯಲ್ಲಿ. ’ಅಮೇರಿಕಾ ಅಮೇರಿಕಾ’ ಚಿತ್ರದ ’ನೂರು ಜನುಮಕೂ....’ ಮತ್ತು ’ಅಮೇರಿಕಾ ಅಮೇರಿಕಾ’ ಹಾಡುಗಳೂ ಸಹ ಜನರನ್ನು ಆಕರ್ಷಿಸಿವೆ. ನಂತರ ’ನನ್ನ ಪ್ರೀತಿಯ ಹುಡುಗಿ’ ಎಂಬ ಚಿತ್ರಕ್ಕೆ ಸಂಗೀತ ನೀಡಿದಾಗ ’ಕಾರ್ ಕಾರ್ ಕಾರ್’ ಹಾಡು ಬಹಳ ಜನಪ್ರಿಯವಾಯ್ತು. ರಾಷ್ಟ್ರ ಪ್ರಶಸ್ತಿಯನ್ನು ಗಳಿಸಿದ ’ಪ್ರೀತಿ ಪ್ರೇಮ ಪ್ರಣಯ’ ಚಿತ್ರಕ್ಕೂ ಸಂಗೀತ ಮೂರ್ತಿಯವರೇ ನೀಡಿದ್ದಾರೆ. ಜೋಕ್ ಫಾಲ್ಸ್ ಎಂಬ ಹಾಸ್ಯಮಯ ಚಿತ್ರದಲ್ಲೂ ಮನೋಮೂರ್ತಿಗಳು ಸಂಗೀತದಿಂದ ಗಮನಸೆಳೆದಿದ್ದಾರೆ. ಎಲ್ಲೆಡೆಯಲ್ಲೂ ಮಳೆಯಾಗಿದ್ದರೂ ಮೂರ್ತಿಯವರ ಹೊಲದಲ್ಲಿ ಮಾತ್ರ ಮಳೆ ಬಿದ್ದಿದ್ದು ’ಮುಂಗಾರುಮಳೆ’ ಚಿತ್ರ ಬಿಡುಗಡೆಯಾದಮೇಲೆಯೇ. ನಿರ್ಮಾಪಕರಿಗೆ ೭೫ ಕೋಟಿ ಆದಾಯ ತಂದುಕೊಟ್ಟ ಈ ಚಿತ್ರ ಕನ್ನಡದಲ್ಲಿ ಅತ್ಯಂತ ಹಿಟ್ ಚಿತ್ರವೆನಿಸಿದ್ದು ಅದಕ್ಕೆ ಮೂರ್ತಿಯವರ ಸುಮಧುರ ಸಂಗೀತವೂ ಒಂದು ಕಾರಣವಾಗಿದೆ. ನಂತರ ೨೦೦೭ರಲ್ಲಿ ಇನ್ನೊಂದು ಯಶಸ್ವೀ ಚಿತ್ರ ’ಚೆಲುವಿನ ಚಿತ್ತಾರ’ ಬಿಡುಗಡೆಯಾಗಿ, ಇನ್ನೊಮ್ಮೆ ಮೂರ್ತಿ ಲೈಮ್ ಲೈಟ್ ನಲ್ಲಿ ಕಾಣಿಸಿಕೊಂಡರು. ನಾದಮಧುರ್ಯದ ಕೈಚಳಕ ಮತ್ತು ಇಂಪಾದ ಸ್ವರಸಮ್ಮೇಳನ ಮೂರ್ತಿಯವರಿಗೆ ಕರಗತವಾಗಿದ್ದರಿಂದ ಅನೇಕ ನಿರ್ಮಾಪಕರು ಮೂರ್ತಿಯವರನ್ನು ಮೂರ್ತಿಯವರನ್ನೇ ಸಂಗೀತಕ್ಕೆ ಆಯ್ಕೆಮಾಡಿಕೊಳ್ಳತೊಡಗಿದರು. ೨೦೦೫ರಲ್ಲಿ ಹಿಂದೀ ಚಿತ್ರವೊಂದಕ್ಕೆ ಸಂಗೀತವನ್ನೊದಗಿಸಿದ್ದರೂ ಆ ಚಿತ್ರ ಬಿಡುಗಡೆ ಕಾಣದಿದ್ದುದು ವಿಷಾದನೀಯ.

ಸಂದರ್ಶನದ ಆಯ್ದ ಭಾಗ ಈ ಕೆಳಗಿನಂತಿದೆ:

 • ನಿಮ್ಮ ಬಗ್ಗೆ ಸ್ವಲ್ಪ ಹೇಳ್ತೀರಾ ?

೧೯೭೬ ರಿಂದ ನಾನು ಕಂಪ್ಯೂಟರ್ ನೆಟ್ ವರ್ಕಿಂಗ್ ನಲ್ಲಿದ್ದೆ. ೧೯೯೦ರ ಆದಿಭಾಗದಲ್ಲಿ ನನಗನ್ನಿಸಿತು. ನಾನು ಕಂಪ್ಯೂಟರ್ ಗಳ ಜೊತೆ ಮಾತನಾಡುವುದರ ಹೊರತಾಗಿ ಇನ್ನೇನನ್ನಾದರೂ ಮಾಡಬೇಕು ಎಂದು. ಸಂಗೀತ ಹೇಗೂ ನನ್ನ ಐಚ್ಛಿಕ ವಿಷಯವಾಗಿದ್ದು ಸಂಗೀತವೆಂಬುದು ಶರೀರದ ಕಣಕಣವನ್ನೂ ವ್ಯಾಪಿಸಿತ್ತು. ಯುವಿಸಿಇ ಯಲ್ಲಿ ಕಲಿಯುತ್ತಿರುವಾಗ ನನ್ನದೇ ಆದ ಪಾಪ್ ಬ್ಯಾಂಡನ್ನು ಹೊಂದಿದ್ದೆ. ಕನ್ನಡಲ್ಲಿ ಕೆಲವು ಪಾಪ್ ಹಾಡುಗಳನ್ನು ಅದಾಗಲೇ ನಾನು ತಯಾರಿಸಿದ್ದೆ. ಮತ್ತು ಸಾಕಷ್ಟು ಟ್ಯೂನ್ ಗಳನ್ನು ಸಿದ್ಧಪಡಿಸಿಕೊಂಡಿದ್ದೆ. ಪ್ರಥಮವಾಗಿ ೧೯೯೫-೯೬ ರಲಿ ಕನ್ನಡದಲ್ಲಿ ’ಅಮೇರಿಕಾ ಅಮೇರಿಕಾ’ ಎಂಬ ಸಿನಿಮಾಕ್ಕೆ ಸಂಗೀತನೀಡಿದೆ. ನಾನು ಸಾಮಾನ್ಯವಾಗಿ ವರ್ಷಕ್ಕೆ ೨ ಸಿನಿಮಾಗಳಿಗೆ ಸಂಗೀತವೊದಗಿಸುತ್ತಿದ್ದು ಕಳೆದ ಕೆಲವರ್ಷಗಳಿಂದ ವರ್ಷಕ್ಕೆ ಒಂದೇ ಸಿನಿಮಾಕ್ಕೆ ಸಂಗೀತ ನೀಡಲು ನಿರ್ಧರಿಸಿದ್ದೇನೆ. ಹೈಟೆಕ್ ಕೆಲಸ ಯಾಂತ್ರಿಕವಾಗಿ ಇದ್ದೇ ಇರುತ್ತದೆ ಆದರೆ ಸಂಗೀತಮಾತ್ರ ನನ್ನನ್ನು ಸದಾ ಅದರಲ್ಲಿ ತೊಡಗಿಕೊಳ್ಳುವಂತೇ ಮಾಡುತ್ತದೆ, ಸಂಗೀತಕ್ಕಾಗಿ ದಿನದ ೨೪ ಗಂಟೆ ಕೆಲಸಮಾಡಿದರೂ ಬೇಸರವೆನಿಸುವುದಿಲ್ಲ.

 • ನಿಮಗೆ ಸಂಗೀತ ಕ್ಷೇತ್ರದಲ್ಲಿ ಕೆಲಸಮಾಡಲು ಸಮಯ ಸಿಗುತ್ತದೆಯೇ?

ಏನನ್ನಾದರೂ ಸಾಧಿಸಬೇಕೆಂದರೆ ಸಂಬಂಧಿಸಿದ ರಂಗಕ್ಕಾಗಿ ಸಮಯವನ್ನು ನಾವೇ ಹೊಂಚಿಕೊಳ್ಳಬೇಕಲ್ಲವೇ? ನಾನು ಪ್ರಾಜೆಕ್ಟ್ ಗಳನ್ನು ನಡೆಸುವಾಗ ಪ್ರತಿರಾತ್ರಿ ೩-೪ ಗಂಟೆಯಷ್ಟೇ ನಿದ್ದೆಮಾಡುತ್ತೇನೆ.

 • ಯಾಕೆ ಸಂಗೀತವೇ ನಿಮ್ಮ ಆಯ್ಕೆ?

ಚಿಕ್ಕವನಿದ್ದಾಗ ಬೇಸಿಗೆಯ ರಜಾದಿನಗಳಲ್ಲಿ ಪಾಲಕರೊಟ್ಟಿಗೆ ಕರ್ನಾಟಕ ಸಂಗೀತ ಕಛೇರಿಗಳಿಗೆ ಹೋಗುತ್ತಿದ್ದೆ. ಅಂದಿನಿಂದಲೂ ಸಂಗೀತವೆಂದರೆ ಕಿವಿನಿಮಿರುತ್ತದೆ. ಗಣಕತಜ್ಞರಲ್ಲಿ ಅನೇಕರು ತಮ್ಮ ದಿನನಿತ್ಯದ ಯಾಂತ್ರಿಕತೆಯ ಕೆಲಸಗಳ ಒತ್ತಡಗಳನ್ನು ಪರಿಹರಿಸಿಕೊಳ್ಳಲು, ಪ್ರತಿರಾತ್ರಿ ಮನೆಗೆ ಮರಳಿದ ನಂತರ ಯಾವುದಾದರೊಂದು ಸಂಗೀತದ ಉಪಕರಣವನ್ನು ನುಡಿಸುತ್ತಾರೆ.

 • ನಿಮ್ಮಲ್ಲಿ ಸ್ಟುಡಿಯೋ ಏನಾದರೂ ಇಟ್ಟುಕೊಂಡಿದ್ದೀರೇ?

ಹೌದು, ನಾನು ಸಂಗೀತದ ಅಳವಡಿಕೆಗೆ ಬೇಕಾದ ವ್ಯವಸ್ಥೆಗಳನ್ನು ಇಟ್ಟುಕೊಂಡಿದ್ದೇನೆ. ಅಲ್ಲೇ ರೆಕಾರ್ಡಿಂಗ್ ಕೂಡ ಮಾಡುತ್ತೇನೆ. ಅಲ್ಲೇ ನಾನು ಎಲ್ಲವನ್ನೂ ಮಾಡಬಹುದಾದರೂ, ವೃತ್ತಿನಿರತ ರೆಕಾರ್ಡಿಂಗ್ ನಿಪುಣರಿಂದ ಅದನ್ನು ಸಮರ್ಪಕವಾಗಿ ನೆರವೇರಿಸುವ ದೃಷ್ಟಿಯಿಂದ ರೆಕಾರ್ಡ್ ಮಾಡಿದ್ದನ್ನು ಇಲ್ಲಿಗೆ ಹೊತ್ತುತರುತ್ತೇನೆ. ಯಾವುದೇ ಹಾಡಿಗೆ ನೇರವಾದ ವಾದ್ಯಗೋಷ್ಠಿಯ ಅಳವಡಿಕೆ ಬೇಕಾಗಿ ಕಂಡರೆ, ಆಗ ನೇರವಾಗಿ ಭಾರತದಲ್ಲಿಯೇ ವಾದ್ಯಗೋಷ್ಠಿಗಳನ್ನು ಬಳಸಿಕೊಳ್ಳುತ್ತೇನೆ. 

 • ಭಾರತದ ಸಂಗೀತ ಸ್ಟುಡಿಯೋಗಳು ಹಿತಕರವಾಗಿವೆಯೇ?

ಹೌದೌದು, ಬಹಳ ಹಿತಕರವಾಗಿವೆ. ಅಮೇರಿಕಾಗಿಂತ ನಮ್ಮ ಭಾರತದ ಸ್ಟುಡಿಯೋಗಳೇ ವಾಸಿ ಎಂದೆನಿಸುತ್ತದೆ.  ಇಲ್ಲಿನ ತಂತ್ರಜ್ಞರು ಭಾರತೀಯ ಸಂಗೀತ ಹೇಗಿರಬೇಕೆಂಬ ಅನುಭೂತಿಯನ್ನು ಹೊಂದಿರುವುದೂ ಇದಕ್ಕೆ ಒಂದು ಕಾರಣ. ಸಂಗೀತದ ಉಪಕರಣಗಳು ಅವವೇ ಆಗಿದ್ದರೂ ಅವುಗಳನ್ನು ನುಡಿಸುವವರ ಶೈಲಿಯಿಂದ ವಿಭಿನ್ನ ರಾಗಗಳೂ ಪದ್ಧತಿಗಳೂ ಹೊರಡುತ್ತವೆ.

 • ಅಪ್ಪಟ ಭಾರತೀಯ ಸಂಗೀತ  ಅಥವಾ ಪಾಶ್ಚಾತ್ಯ ಸಮ್ಮಿಶ್ರ ಸಂಗೀತ-ಇವುಗಳಲ್ಲಿ ಯಾವುದರ ಬಳಕೆ ನಿಮ್ಮ ಗುರಿ ?

ನಾನು ಇನ್ನೂ ಕಲಿಯುತ್ತಿದ್ದೇನೆ, ಕಲಿಯುವಿಕೆಗೆ ಕೊನೆಯಿಲ್ಲ. ಅನುಭವ ತಂದುಕೊಡುವ ಜ್ಞಾನ ಬೇರಾವುದಕ್ಕಿಂತಲೂ ದೊಡ್ಡದು. ಸಂಗೀತದಲ್ಲಿ ನಿಜವಾಗಿಯೂ ಬೇರೊಂದೇ ಏನನ್ನೋ ನಾನು ಬಯಸುತ್ತಿದ್ದೇನೆ. ಉದಾಹರಣೆಗೆ, ಹಿನ್ನೆಲೆ ಸಂಗೀತಕ್ಕೆ ಇಂತಿಂಥದೇ ಒಂದಷ್ಟು ಸೂತ್ರಗಳಿವೆ-ಅವುಗಳನ್ನು ಎಲ್ಲರೂ ಅನುಸರಿಸುತ್ತಾರೆ. ಅವುಗಳ ಮೇಲೆ ವಿಭಿನ್ನ ಪ್ರಯೋಗಗಳನ್ನು ಮಾಡುವ ಮನಸ್ಸಿದೆ. ಹಾಡುಗಳಲ್ಲೂ ಕೂಡ ಹಾಗೇ. ಈ ಕ್ಷಣಕ್ಕೆ ಇಂಥಾದ್ದೇ ಎಂದು ನಾನು ಎತ್ತಿ ತೋರಿಸಲು ಆಗುವುದಿಲ್ಲ, ಆದರೆ ಖಂಡಿತವಾಗಿಯೂ ನಾನು ಹೊಸತನವನ್ನು ಅಳವಡಿಸುವುದರಲ್ಲಿ ಯಶಸ್ವಿಯಾಗುತ್ತೇನೆ.

 • ಕನ್ನಡ ಸಿನಿಮಾರಂಗದಲ್ಲಿನ ಬೆಳವಣಿಗೆಗಳ ಬಗ್ಗೆ ಏನು ಹೇಳ್ತೀರಿ?

ನಾನು ಸತ್ಯ ಹೇಳುತ್ತೇನೆ. ನಾನು ಕನ್ನಡದ ಸಂಗೀತವನ್ನು ಬಹಳ ಆಲಿಸುವುದಿಲ್ಲ; ಕಾರಣವಿಷ್ಟೇ: ನನಗೆ ಅಷ್ಟೊಂದು ಸಮಯ ಲಭ್ಯವಾಗುವುದಿಲ್ಲ. ಇನ್ನೊಂದೆಂದರೆ, ಯಾವಾಗ ನಾನು ಒಂದು ಆಲ್ಬಮ್ ಆಲಿಸುತ್ತೇನೆಯೋ, ಅಲ್ಲಿನ ಹಾಡುಗಳಿಗೆ ನನ್ನ ಮನ ತಂತಾನೇ ಸೋಲಬೇಕು-ಮತ್ತೆ ಮತ್ತೆ ಅವುಗಳನ್ನೇ ಆಲಿಸುವಷ್ಟು ಹಿಡಿಸಬೇಕು, ಹಾಗೆ ಅವುಗಳಲ್ಲಿ ಮಿಂದೆದ್ದು ಬಂದಾಗ ನನಗೇನಾದರೂ ಹೊಸ ಪ್ರಯೋಜನ ಸಿಗುವಂತಿರಬೇಕು. ಈಗಿರುವ ಹಾಡುಗಳನ್ನಷ್ಟೇ ಕೇಳುವುದರಲ್ಲಿ ಅರ್ಥವಿಲ್ಲ, ಈಗಿರುವ ಹಾಡುಗಳಿಗಿಂತಾ ವಿಭಿನ್ನವಾದ ಹಾಡುಗಳನ್ನು ಕೇಳುವುದೊಳಿತು. ಕನ್ನಡದ ಈಗಿರುವ ಹಾಡುಗಳನ್ನು ಬಹಳವಾಗಿ ಆಲಿಸುವುದರಿಂದ, ಮುಂದಿನ ನನ್ನ ಸಂಗೀತದಲ್ಲಿ ಅವುಗಳ ಆಯಾಮಗಳು ಪ್ರತಿಫಲಿತವಾಗಲೂ ಬಹುದು!      

 • ಕನ್ನಡದಲ್ಲಿ ಈಗಿರುವ ಹಾಡುಗಳನ್ನು ಕೇಳುವುದರಿಂದ ಅವುಗಳಲ್ಲಿನ ಧನಾತ್ಮಕ ಅಂಶಗಳನ್ನು ನೀವು ಮುಂದೆ ಅಳವಡಿಸಿಕೊಂಡು, ಆದರೆ ಅವುಗಳಿಗಿಂತ ವಿಭಿನ್ನವಾದ ಹಾಡುಗಳನ್ನು ಕೊಡುವ ಸಾಧ್ಯತೆ ಕಾಣಬಾರದೇಕೆ?

ನೀವು ಅತ್ಯಂತ ಸಮಂಜಸವಾಗಿ ಹೇಳಿದ್ದೀರಿ. ಕೆಲವೊಮ್ಮೆ ನಾವು ಉದಾಹರಣೆಗಳಿಂದ ಕಲಿಯಬೇಕಾಗುತ್ತದೆ. ಜನ ಅಪೇಕ್ಷೆ ಪಟ್ಟಾಗ, ಕೆಲವುಬಾರಿ ನಾನು ಹಾಗೆ ಕನ್ನಡ ಹಾಡುಗಳನ್ನು ಕೇಳುವುದಿದೆ, ಅವು ಹಿತಕರವಾಗಿರಲಿ, ಹಿಡಿಸದಿರಲಿ, ಹೇಗಿದ್ದರೂ ತಾಳ್ಮೆಯಿಂದ ಆಲಿಸುತ್ತೇನೆ. 

 • ಸಂಗೀತ ನಿಮ್ಮ ನೆಚ್ಚಿನ ವಿಷಯ, ನೀವೊಬ್ಬ ಸಿನಿಮಾ ನಿರ್ಮಾಪಕ ಕೂಡಾ, ನಿರ್ಮಾಪಕನಾಗಲು ಯಾವುದು ಕಾರಣವಾಯ್ತು?

ಅದೊಂದು ಕಾಕತಾಳೀಯವಷ್ಟೇ. ನಾನು ಅಂತಾರಾಷ್ಟ್ರೀಯ ನಿರ್ಮಾಪಕನೇನೂ ಅಲ್ಲ. ಯಾರಾದರೂ ಯೋಗ್ಯರು ಸಹಾಯ ಬಯಸಿದರೆ, ಅವರು ಹಿಡಿದಿರುವ ಸಿನಿಮಾದಲ್ಲಿ ನನಗೆ ಭರವಸೆ ಹುಟ್ಟಿದರೆ, ಸಹಾಯಮಾಡಲು ತೊಂದರೆಯಿಲ್ಲ.

ಸಿನಿಮಾ ಸಂಗೀತದ ಬಗ್ಗೆ ನಿಮ್ಮ ಅನಿಸಿಕೆ ಏನು?

ಒಳ್ಳೇ ಪ್ರಶ್ನೆ, ಸಿನಿಮಾ ಸಂಗೀತವೆಂಬುದು ಕೇಳುಗರ ಸಲುವಾಗಿ ತಯಾರಿಸುವಂಥದ್ದು. ಶ್ರೋತೃಗಳು/ವೀಕ್ಷಕರು ಮತ್ತು ನಿರ್ದೇಶಕರು ಏನನ್ನು ಅಪೇಕ್ಷಿಸುತ್ತಾರೆ ಎಂಬುದನ್ನು ನಾನು ಅವಲಂಬಿಸುತ್ತೇನೆ. ಆದಾಗ್ಯೂ ಕಥೆಯ ಅವಲಂಬನೆ ಬಹಳವಾಗಿರುತ್ತದೆ. ಹೀಗಾಗಿ ಸಿನಿಮಾ ಸಂಗೀತದಲ್ಲಿ ಹೆಚ್ಚಿನ ನಮನೀಯತೆ-ಹೊಂದಾಣಿಕೆ ಸಾಧ್ಯವಾಗುವುದಿಲ್ಲ. 

 • ಕನ್ನಡದಲ್ಲಿ ಯಾವುದಾದರೂ ಸಿನಿಮಾ ನಿರ್ಮಾಣಮಾಡುವ ಸಾಧ್ಯತೆ ಇದೆಯೇ?

ಗೊತ್ತಿಲ್ಲ, ಉತ್ತಮವಾದ ಪ್ರಾಜೆಕ್ಟ್ ಕಂಡರೆ ಮಾಡಲೂಬಹುದು. ಹಾಗೊಮ್ಮೆ ಮಾಡಿದರೆ ಸಂಗೀತಕ್ಕೆ ಹೇಗೂ ನಾನೇ ಇರುತ್ತೇನೆ.

 • ಸಂಗೀತದಲ್ಲಿ ಯಾರಾದರೂ ಅಥವಾ ಯಾವುದಾದರೂ ಬ್ಯಾಂಡ್ ಅಥವಾ ಶೈಲಿ ನಿಮ್ಮನ್ನು ಹುರಿದುಂಬಿಸುತ್ತದೆಯೇ?

ಹೌದು, ನನಗೆ ಚಾವಡಿ ಸಂಗೀತ[ಲೌಂಜ್ ಮ್ಯೂಸಿಕ್] ಬಹಳ ಇಷ್ಟ, ಅಲ್ಲಿ ಜಗತ್ತಿನ ಎಲ್ಲಾವಿಧದ ಸಂಗೀತಗಾರರೂ ಉಪಕರಣಗಳೂ ಬಳಸಲ್ಪಡುತ್ತವೆ, ಉತ್ತಮ ಸಂಗೀತಗಾರ್ರಾದ ಪಂಡಿತ್ ಜಸ್ ರಾಜ್, ಪತೇ ಅಲಿ ಖಾನ್ ಮೊದಲಾದವರ ಕಚೇರಿಗಳನ್ನು ನಾನು ಇಷ್ಟಪಡುತ್ತೇನೆ. ನನಗೆ ಜಾಜ್ ಮ್ಯೂಸಿಕ್ ಕೂಡ ಇಷ್ಟ, ಅದನ್ನು ಭಾರತೀಯ ಸಿನಿಮಾಗಳಲ್ಲಿ ಇನ್ನೂ ಅಳವಡಿಸಿಲ್ಲ; ಕನ್ನಡ ಹಾಗಿರಲಿ, ಹಿಂದೀ ಸಿನಿಮಾರಂಗ ಕೂಡ ಅದನ್ನು ಪ್ರಯತ್ನಿಸಲಿಲ್ಲ.    

 • ನೀವು ಹಿಂದೀ ಅಥವಾ ಇತರ ಯಾವುದೇ ಭಾಷೆಯ ಹಾಡುಗಳನ್ನು ಕೇಳುತ್ತೀರೇ? ಹಿಂದೀ ಆಲ್ಬಂ ಗಳನ್ನು ಕೇಳುವಿರೇ?

ಹಾಂ ಹೌದು, ಮೊದಲೇ ಹೇಳಿದಂತೇ, ಕನ್ನಡ ಸಿನಿಮಾ ಹಾಡುಗಳನ್ನು ಕೇಳುವಂತೇ ಹಿಂದೀ ಹಾಡುಗಳನ್ನೂ ಕೇಳುತ್ತೇನೆ. ಹಿಂದೀ ಗೀತೆಗಳ ಡಿವಿಡಿಗಳನ್ನು ನನ್ನ ಹೆಂಡತಿ ಕೊಂಡು ತರುತ್ತಾಳೆ; ಮುಂಜಾನೆ ಟ್ರೆಡ್ ಮಿಲ್ ನಲ್ಲಿ ವ್ಯಾಯಾಮ ಮಾಡುತ್ತಿರುವಾಗ ನಾನು ಅವುಗಳನ್ನು ಆಲಿಸುತ್ತೇನೆ. ಕೆಲವು ಉತ್ತಮ ಸಂಗೀತ ನಿಯೋಜಿತವಾದ ಹಾಡುಗಳೂ ಇವೆ. ಹಿಂದೀ ನಿರ್ಮಾಪಕರು ತೆಗೆದುಕೊಳ್ಳುವ ಹೊಣೆಗಾರಿಕೆಯನ್ನು ಕನ್ನಡದ ನಿರ್ಮಾಪಕರು ತೆಗೆದುಕೊಳ್ಳಲು ತಯಾರಿಲ್ಲ. ಹೊಸತನದ ಅಳವಡಿಸುವಿಕೆಗೆ ಒಗ್ಗಿಕೊಳ್ಳಬಹುದಾದ ಶ್ರೋತೃಗಳು ಬಹಳ ಇದ್ದಾರೆಂದು ನಿರೀಕ್ಷಿಸಲು ಸಾಧ್ಯವಿಲ್ಲ. ಹಿಂದೀ ಮತ್ತು ಇಂಗ್ಲೀಷಿನಲ್ಲಿ ಹಾಗಿಲ್ಲ; ಅಲ್ಲಿ ಹೊಸತನಕ್ಕೆ ಒತ್ತು ಸಿಗುತ್ತದೆ. ವಿಶಾಲವಾದ ಮಾರುಕಟ್ಟೆ ಇರುವುದರಿಂದ ರಿಸ್ಕ್ ತೆಗೆದುಕೊಳ್ಳಲು ಅಲ್ಲಿನ ನಿರ್ಮಾಪಕರು ಹೆದರುವುದಿಲ್ಲ. ಅವರು ಪ್ರತಿಶತ ಒಬ್ಬರನ್ನೇ ತೃಪ್ತಗೊಳಿಸಿದರೂ ಅವರಿಗೆ ನಷ್ಟವಾಗುವುದಿಲ್ಲ.

 • ಪ್ರಸಕ್ತ ನೀವೇನು ಮಾಡುತ್ತಿದ್ದೀರಿ ?

ಕೆಲವು ಪ್ರಾಜೆಕ್ಟ್ ಗಳನ್ನು ನಡೆಸುತ್ತಿದ್ದೇನೆ, ಅವುಗಳ ಪೈಕಿ-ಹೊಸಬರು ಸೇರಿ ನಿರ್ಮಿಸುತ್ತಿರುವ ’ಅಲೆ’ ಸಿನಿಮಾಕ್ಕೆ ಸಂಗೀತ ಸಂಯೊಜನೆಯಲ್ಲಿ ತೊಡಗಿಕೊಂಡಿದ್ದೇನೆ. ಮತ್ತು ಪಬ್ಲಿಕ್ ಟಿವಿ ನಡೆಸುತ್ತಿರುವ ’ಫ್ರೆಶ್ ವೈಸ್ ಆಫ್ ಕರ್ನಾಟಕ’ ರಿಯಾಲಿಟಿ ಶೋ ನಲ್ಲಿ ಇನ್ನೊಬ್ಬ ಸಂಗೀತಗಾರ ಸಾಗರ್ ಅವರಜೊತೆ ತೀರ್ಪುಗಾರನಾಗಿ ಕುಳಿತು ನಡೆಸಿಕೊಡುತ್ತಿದ್ದೇನೆ.    

 • ನಿಮ್ಮಂಥವರಿಗೆ ಹಣವೇ ಮುಖ್ಯವಲ್ಲ ಆದರೆ ಸಂಗೀತವೆಂದರೆ ಪಂಚಪ್ರಾಣ ಮತ್ತು ಅದೇ ಮುಖ್ಯ. ನಿರ್ಮಾಪಕ/ನಿರ್ದೇಶಕರು ನಿಮ್ಮಂಥವರನ್ನು ಪ್ರೋತ್ಸಾಹಿಸುತ್ತಾರೆ ಎಂದುಕೊಂಡಿಲ್ಲವೇ? ಒಂದೊಮ್ಮೆ ಹೊಸಹೊಸ ನಿರ್ಮಾಪಕ, ನಿರ್ದೇಶಕರು ನಿಮ್ಮನ್ನು ಕರೆದರೆ ನೀವು ಕೈಜೋಡಿಸಬಹುದೇ?

ಮಾಡಬೇಕು ಎಂದುಕೊಂಡಿದ್ದೇನೆ. ಅಂತಹ ನಿರ್ಮಾಪಕ/ನಿರ್ದೇಶಕರು ಕನ್ನಡದಲ್ಲಿ ಇರಬಹುದು. ಈಗೀಗ ಉತ್ತಮ  ನಿರ್ಮಾಪಕ/ನಿರ್ದೇಶಕರು ರಂಗಕ್ಕೆ ಬರುತ್ತಿದ್ದಾರೆ. ಆದರೆ ಇಲ್ಲಿನವರೆಗೆ ನಾನು ಹೊಸಬರ ಜೊತೆ ಕೆಲಸ ಮಾಡಿರಲಿಲ್ಲ. ನಾನು ಕವಿತಾ, ನಾಗತಿಹಳ್ಳಿ ಮತ್ತು ಈಗ ನಾಗೇಂದ್ರ ಅವರ ಜೊತೆ ಕೆಲಸಮಾಡಿದ್ದೇನೆ; ಮಾಡಿದ ಕೆಲಸ ನನಗೆ ತೃಪ್ತಿ ತಂದಿದೆ.

 • ಕನ್ನಡ ಚಿತ್ರರಂಗದ ಅಭಿವೃದ್ಧಿಯ ಬಗ್ಗೆ ನಿಮ್ಮ ಸಲಹೆಗಳೇನಾದರೂ ಸಿಗಬಹುದೇ?

ನನ್ನ ಅನಿಸಿಕೆಯನ್ನು ಹೇಳುವುದಾದರೆ, ನಾವು ಗುಣಮಟ್ಟದ ಚಿತ್ರಗಳನ್ನು ಮಾತ್ರ ನಿರ್ಮಿಸುವತ್ತ ಮುಂದಾಗಬೇಕು. ಕಥೆಯಿಂದ ಹಿಡಿದು ತಾಂತ್ರಿಕತೆಯವರೆಗೆ ಪ್ರತೀ ಹಂತದಲ್ಲೂ ಕಠಿಣಶ್ರಮ ವಹಿಸಿ ಸಾಧಿಸಬೇಕು. ಕಥೆಯೊಂದನ್ನು ತೆಗೆದುಕೊಂಡರೆ, ಕಥೆ ಉತ್ತಮವೇ ಆಗಿದ್ದರೂ ಸಿನಿಮಾ ಮಾಡುವಾಗ ಚೆನ್ನಾಗಿಯೂ ಮಾಡಬಹುದು, ಕಳಪೆಯಾಗಿಯೂ ಮಾಡಬಹುದು. ಚಿತ್ರಮಂದಿರಗಳು ಉತ್ತಮವಾಗಿಲ್ಲ ಎಂಬುದು ಜನಾಭಿಪ್ರಾಯ. ಅದಕ್ಕಾಗಿಯೂ ಹೆಚ್ಚಿನಮಂದಿ ಚಿತ್ರಮಂದಿರಗಳಿಗೆ ಹೋಗುವುದೇ ಇಲ್ಲ. ನಾನು ಕಪಾಲಿ ಮತ್ತಿತರ ಚಿತ್ರಮಂದಿರಗಳಲ್ಲಿ ಕೆಲವು ಸಿನಿಮಾಗಳನ್ನು ನೋಡಿದ್ದೇನೆ; ಅವುಗಳಲ್ಲಿನ ವ್ಯವಸ್ಥೆ ಇಂದಿನ ತಾಂತ್ರಿಕತೆಯ ಮುನ್ನಡೆಯಲ್ಲೂ ಹಾಗೆ ಹಿಂದೆಬಿದ್ದಿರುವುದು ಬೇಸರ ತರಿಸಿದೆ. ಚಿತ್ರ ನಿರ್ಮಾಣಮಾಡಿದಷ್ಟೇ ಚಿತ್ರವನ್ನು ಜನರಿಗೆ ತಲ್ಪಿಸುವುದೂ ಉತ್ತಮವಾಗಿ ನಡೆಯಬೇಕು. ಗೊತ್ತು, ಇದಕ್ಕೆಲ್ಲಾ ಹಣಬೇಕು, ಆದರೆ ಒಮ್ಮೆ ಇವುಗಳನ್ನೆಲ್ಲಾ ಉತ್ತರಿಸಿದರೆ ಜನ ಹಣತೆತ್ತು ನೋಡಲು ಮುಂದೆಬರುತ್ತಾರೆ. ಅದಿಲ್ಲದಿದ್ದರೆ ನಮ್ಮಲ್ಲಿನ ಸಿನಿಮಾಗಳನ್ನು ಉಳಿದ ಭಾಷೆಗಳ ಸಿನಿಮಾಗಳಿಗೆ ಹೋಲಿಸಿ ತುಲನೆಮಾಡುವುದರಲ್ಲಿ ಜನ ಕಾಲಕಳೆಯುತ್ತಾರೆಯೇ ವಿನಹ ಚಿತ್ರಮಂದಿರಗಳಿಗೆ ಬರುವುದಿಲ್ಲ.

 • ನಿಮ್ಮ ಮುಂದಿನ ಯೋಜನೆಗಳೇನು ?

ನಡೆಸುತ್ತಿರುವುದನ್ನು ಮುಂದುವರಿಸಿಕೊಂಡು ಹೋಗುತ್ತೇನೆ. ಧನಾತ್ಮಕವಾದ ಅಂಶಗಳ ಅಳವಡಿಕೆಗೆ ಸತತವಾಗಿ ಶ್ರಮಿಸುತ್ತೇನೆ, ಸಂಗೀತ ಕ್ಷೇತ್ರದಲ್ಲಿ ಕಠಿಣಶ್ರಮವಹಿಸಿ ತೊಡಗಿಕೊಳ್ಳುತ್ತಾ ನನ್ನನ್ನೇ ನಾನು ಉತ್ತಮವಾದುದನ್ನು ತಿದ್ದಿಕೊಳ್ಳುತ್ತಿರುತ್ತೇನೆ.