ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Sunday, April 21, 2013

ಆರಕ್ಕೇರುವ ರಭಸದಲ್ಲಿ ಆಳಕ್ಕೆ ಬೀಳಬಾರದಲ್ಲಾ

ಚಿತ್ರಋಣ : ಅಂತರ್ಜಾಲ 
ಆರಕ್ಕೇರುವ ರಭಸದಲ್ಲಿ ಆಳಕ್ಕೆ ಬೀಳಬಾರದಲ್ಲಾ
          
ಆಶಾವಾದವೇ ಮನುಷ್ಯನ ಬವಿಷ್ಯದ ಜೀವನಕ್ಕೆ ಊರುಗೋಲು. ಹಿಂದೆಂದೋ ಬೆಳೆತೆಗೆದ ಭೂಮಿಯಲ್ಲಿ, ಕಾಲಾನಂತರ ಬಿರುಬಿಸಿಲಿಗೆ ಕುದಿಕುದಿದು ಒಡೆಒಡೆದುಹೋದ ಗದ್ದೆಗಳ ನಡುವೆ ಕುಳಿತು, ಸುಕ್ಕುಗಟ್ಟಿದ ಚರ್ಮದ ಕುರುಚಲು ಗಡ್ಡದ ಮುಖವನ್ನು ಆಗಸದೆಡೆಮಾಡಿ, ಚಾಚಿದ ಹಸ್ತದ ನೆರಳಡಿಯಿಂದ ಕಣ್ಣುಗಳನ್ನು ಕೀಲಿಸುತ್ತಾ, ಬಾರದ ಮಳೆ ಬಂದೀತು ಎಂಬ ತುಂಬು ಹಂಬಲ ಹೊರುವ ರೈತ ಯಾವುದೋ ಅವ್ಯಕ್ತ ಶಕ್ತಿಯಲ್ಲಿ ಅವ್ಯಾಹತವಾಗಿ ತನ್ನ ಮೂಕಪ್ರಾರ್ಥನೆಯನ್ನು ಸಲ್ಲಿಸುತ್ತಲೇ ಇರುವುದು ಆಶಾವಾದಕ್ಕೆ ಉದಾಹರಣೆ; ಅಲ್ಲಿ ಬಯಕೆಗಳು ಸತ್ತಿಲ್ಲ, ಭಾವನೆಗಳು ಬತ್ತಿಲ್ಲ. ಆ ಭಾವನೆಗಳಿಗೆ ಕೆಲವೊಮ್ಮೆ ದೇವಕಳೆ ಬಂದೀತು; ಬಾರದ ಮಳೆ ಧಾರೆಧಾರೆಯಾಗಿ ಸುರಿದು ಜೀವಕಳೆ ತಂದೀತು; ಕಮರಿದ್ದ ಕುರುಚಲುಗಳುಗಳ ಹಳೆಬೇರುಗಳಲ್ಲಿ ನವಚೈತನ್ಯದ ಚಿಲುಮೆಯುಕ್ಕಿ ಚಿಗುರಿಕೊಂಡಾವು, ಉತ್ತು-ಬಿತ್ತು ಹಸಿರುಡುವ ಭೂಮಿಯಲ್ಲಿ ಬೆಳೆತೆಗೆದು ರೈತ ಸಮೃದ್ಧಗೊಂಡಾನು-ಸಂತೃಪ್ತಗೊಂಡಾನು. ಬಾರದ ಮಳೆ ಬರುವುದು ವಿಜ್ಞಾನದ ಚಮತ್ಕಾರಕ್ಕೆ ನಿಲುಕುವುದಿಲ್ಲ! ಮುಗ್ಧ ಭಾವನೆಗಳು ಎಲ್ಲಾ ಸಲ ಅರ್ಥಹೀನವಲ್ಲ.  

ನಗರದ ಬೀದಿಗಳಲ್ಲಿ ರಾಮನವಮಿ ಉತ್ಸವ ನಡೆಯುತ್ತದೆ. ಶ್ರೀರಾಮನಿಗೆ ಪೂಜೆ ಸಲ್ಲಿಸುವ ಭರದಲ್ಲಿ ಒಂದಷ್ಟು ಹಣ ಸಂಗ್ರಹಿಸಿ ಕೆಲವುಜನ ತೊಡಗಿಕೊಳ್ಳುತ್ತಾರೆ. ಸೌತೇಕಾಯಿ, ಕರಬೂಜ, ಬೆಲ್ಲ, ಬೇಳೆ, ಗಜ್ಜರಿ, ಉಪ್ಪು-ಲಿಂಬೆ-ಒಗ್ಗರಣೆ ಸಾಮಾನು, ಹಾರ-ಹೂವು-ಮಾವಿನೆಲೆಗಳ ತೋರಣ ಎಲ್ಲವೂ ಸಿದ್ಧಗೊಳ್ಳುತ್ತವೆ. ಅದೆಲ್ಲಿಂದಲೋ ನೀರನ್ನು ತರುತ್ತಾರೆ; ನೀರಿನ ಶುದ್ಧಾಶುದ್ಧತೆಯ ಬಗ್ಗೆ ತೀರಾ ಗಮನವಿಲ್ಲ; ಪಾತ್ರೆಗಳ ಶುಚಿತ್ವದ ಬಗ್ಗೆ ತಲೆಕೆಡಿಸಿಕೊಂಡವರಿಲ್ಲ. ಒಂದಷ್ಟು ಕೋಸಂಬರಿ ಕಲಸುತ್ತಾರೆ, ಒಂದಷ್ಟು ಪಾನಕ ಕದಡುತ್ತಾರೆ. ರಾಮನಿಗೆ ಹಣ್ಣು-ಕಾಯಿ ಇಟ್ಟು  ಸಾರ್ವಜನಿಕರಿಗೆ ಪಾನಕ-ಕೋಸಂಬರಿ ವಿತರಿಸುತ್ತಾರೆ. ಬಳಸಿದ ಪ್ಲಾಸ್ಟಿಕ್ ಡ್ರಮ್ ಗಳನ್ನು ನೋಡಿದರೆ ವಾಂತಿ ಬರುವಂತಿರುತ್ತದೆ. ಬೆವರು ಸುರಿಸುತ್ತಲೇ ಕಲಸುವ ಕೈಗಳನ್ನು ನೋಡಿದರೆ ಹೊಲಸು ಎನಿಸುತ್ತದೆ. ಬೇಡ ಎನ್ನಲಾಗದ ರಾಮಪ್ರಸಾದ; ತೆಗೆದುಕೊಂಡರೆ ಕುಟುಕುತ್ತದೆ ಒಳಗಿನ ಅಳುಕುವಾದ. ರಾಮೋತ್ಸವ ನಡೆಸುವ ಆ ಜನ ಅಲ್ಲೂ ಸಂಗ್ರಹಿಸಿದ ಹಣವನ್ನು ಉಳಿಸುತ್ತಾರೆ; "ನಾವೂ ಗಡ್ಜಾಗಿ ರಾಮೋತ್ಸವ ನಡೆಸಿದ್ದೇವೆ" ಎಂಬ ಆ ಜನ ಉಳಿದ ಹಣದಲ್ಲಿ ಎಣ್ಣೆ ಕುಡಿಯುತ್ತಾರೆ. ಪಾನಕ ಕುಡಿದ ಪಾಪದ ಮಗು ಸಾಯುತ್ತದೆ, ಎಣ್ಣೆಕುಡಿದ ’ದೊಡ್ಡಮಗು’ ಏನೂ ಗೊತ್ತಿಲ್ಲದವರಂತೇ ನಗುತ್ತದೆ. ಇದು ರಾಮನ ಹೆಸರಿಗೆ ಬಳಿಯುವ ಮಸಿಯೇ ಹೊರತು ರಾಮಸೇವೆಯಲ್ಲ. ರಾಮನಮೇಲಿರುವ ಭಕ್ತಿಭಾವಕ್ಕಿಂತಾ ರಾಮನ ನೆಪದಲ್ಲಿ ಕುಡಿತಕ್ಕೊಂದಷ್ಟು ಹಣ ಕಲೆಹಾಕುವುದು ಕೆಲವರ ಉದ್ದೇಶ. ಈ ಉದ್ದೇಶ ಊರಹಬ್ಬ, ಅಣ್ಣಮ್ಮದೇವಿಯ ಉತ್ಸವ, ಕನ್ನಡ ರಾಜ್ಯೋತ್ಸವ, ಗಣೇಶೋತ್ಸವ ಮೊದಲಾದ ಸಂದರ್ಭಗಳಲ್ಲೂ ಇರುತ್ತದೆ!  

ನಗರಗಳಲ್ಲಿ ಪಾನ್ ಕಾರ್ಡ್ ಮತ್ತು ಪಾಸ್ ಪೋರ್ಟ್ ಮಾಡಿಸಿಕೊಡುವವರ ಸಂಖ್ಯೆ ಹೆಚ್ಚಾಗಿದೆ. ಸುದ್ದಿಮಾಧ್ಯಮ ಮತ್ತು ಜಾಹೀರಾತು ವ್ಯವಹಾರದಲ್ಲಿ ತೊಡಗಿಕೊಂಡ ನಮಗೊಬ್ಬ ಒಮ್ಮೆ ದೂರವಾಣಿ ಕರೆಮಾಡಿದ್ದ. ಅಲ್ಲಿಗೆ ನಮ್ಮವರು ಹೋದಾಗ ತಿಳಿದದ್ದು: ಆತ ನಿತ್ಯವೂ ದಿನಪತ್ರಿಕೆಗಳಲ್ಲಿ ಕೆಲವು ಜಾಹೀರಾತುಗಳನ್ನು ಕೊಡುತ್ತಿದ್ದ. ಅವು ಪಾಸ್ ಪೋರ್ಟ್ ಮಾಡಿಸಿಕೊಳ್ಳುವ ವ್ಯಕ್ತಿಗಳ ವಿಳಾಸಗಳ ಬಗ್ಗೆಯೋ ಹೆಸರುಗಳ ಬಗ್ಗೆಯೋ ಇರುತ್ತಿದ್ದವು. ಹೆಚ್ಚಿನ ಪೂರ್ವಾಪರಗಳನ್ನು ಅರಿಯದೇ ಕೇವಲ ಹಣಕ್ಕಾಗಿ ಪಾಸ್ ಪೋರ್ಟ್ ಮಾಡಿಸಿಕೊಡುವುದು ಆತನ ಕೆಲಸ. ನೇರವಾಗಿ ಪಾಸ್ ಪೋರ್ಟ್ ಕಚೇರಿಗೆ ಹೋದರೆ ಸಮಯ ವ್ಯಯವಾದೀತು ಎಂದುಕೊಳ್ಳುವ ಜನರೊಟ್ಟಿಗೆ, ದುರುದ್ದೇಶಗಳಿಂದ ಬೇನಾಮಿ ವಿಳಾಸ-ಮಾಹಿತಿಗಳನ್ನು ನೀಡಿ ಪಾಸ್ ಪೋರ್ಟ್ ಮಾಡಿಸಿಕೊಳ್ಳುವ ಜನರೂ ಇರುತ್ತಾರೆ. ಅಂಥಾ ಜನ ದೇಶದ್ರೋಹದ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಾರೆ. ಇತ್ತೀಚೆಗೆ ತಿಳಿದುಬಂದಿದ್ದು ರಾಜಕಾರಣಿಗಳಲ್ಲಿ ಹಲವರು ನಾಲ್ಕೈದು ಪಾನ್ ಕಾರ್ಡ್ ಗಳನ್ನು ಹೊಂದಿದ್ದಾರೆ. ಹೆಸರಿನಲ್ಲಿ ಸ್ವಲ್ಪ ಬದಲಾವಣೆಯಾದರೂ ಪಾನ್ ಕಾರ್ಡ್ ಬದಲಾಗುತ್ತದೆ; ಆದರೆ ಏಕವ್ಯಕ್ತಿ ಅನೇಕ ಪಾನ್ ಕಾರ್ಡ್ ಪಡೆಯುವುದು ಅಪರಾಧ ಎನ್ನುತ್ತದೆ ಕಾನೂನು.

ನಮ್ಮಲ್ಲಿ ಕಾನೂನು ಪಾಲಕರಾಗಬೇಕಾಗಿದ್ದ ರಾಜಕಾರಣಿಗಳೇ ಕಾನೂನು ಭಂಜಕರಾಗುತ್ತಾರೆ; ಮಿಕ್ಕುಳಿದವರು ಅವರನ್ನು ಅನುಸರಿಸುತ್ತಾರೆ. ಪಾನ್ ಕಾರ್ಡ್ ಮತ್ತು ಪಾಸ್ ಪೋರ್ಟ್ ಕಾಳಸಂತೆ ರಾಜಾರೋಷವಾಗೇ ನಡೆಯುತ್ತಿದೆ. ದಿಢೀರ್ ಹಣಗಳಿಸುವ ಇಚ್ಛೆಯಿಂದ ಹಲವು ದಂಧೆಗಳು ಸಮಾಜದಲ್ಲಿ ನಡೆಯುತ್ತವೆ. ಅವುಗಳಲ್ಲಿ ಎಥಿಕ್ಸ್ ಇರುವುದಿಲ್ಲ, ಸಾಮಾಜಿಕ ಕಳಕಳಿಯಾಗಲೀ ಹಿತಾಸಕ್ತಿಯಾಗಲೀ ಇರುವುದಿಲ್ಲ. ನಮಗೆ ಇನ್ನೊಮ್ಮೆ ಮಸಾಜ್ ಪಾರ್ಲರ್ ಒಂದರಿಂದ ಜಾಹೀರಾತು ಪ್ರಕಟಿಸುವ ಸಲುವಾಗಿ ಕರೆಬಂದಿತ್ತು. ಕರಾಳ ದಂಧೆ ನಡೆಸುವವರು ನೇರವಾಗಿ ಯಾವುದನ್ನೂ ಹೇಳುವುದಿಲ್ಲ; ಹಾಗಂತ ಅವರಿಗೆ ಅಬ್ಬರದ ಪ್ರಚಾರ ಮತ್ತು ಅಗಣಿತ ಐಶ್ವರ್ಯದ ಹೆಬ್ಬಯಕೆ; ರಾತ್ರಿ-ಬೆಳಗಾಗುವುದರೊಳಗೆ ಅಚಾನಕ್ಕಾಗಿ ಸಿರಿವಂತರಾಗಿ ಮೆರೆಯುವ ಕನಸು. ಹೇಗಾದರೂ ಒಮ್ಮೆ ಕೋಟ್ಯಧಿಕ ಕಾಸನ್ನು ಕಲೆಹಾಕಿಬಿಟ್ಟರೆ ಆಮೇಲೆ ರಾಜಕಾರಣಕ್ಕೋ ಮತ್ತೊಂದಕ್ಕೋ ಜಿಗಿದು ಏನಾದರೂ ಮಾಡೋಣ ಎಂಬ ಇರಾದೆ ಕೂಡ. ಅದಕ್ಕೆ ಪೂರಕವಾಗಿ, ಇಂದಿನ ನಮ್ಮ ರಾಜಕಾರಣದಲ್ಲಿ ಕಾನೂನು ಉಲ್ಲಂಘಿಸಿ ಕರಾಳ ದಂಧೆಯನ್ನು ನಡೆಸಿದವರು ಅಥವಾ ಹಲವು ಕೊಲೆ-ಸುಲಿಗೆ ಮೊದಲಾದ  ಗುನ್ನೆಗಳಲ್ಲಿ ಪರೋಕ್ಷವಾಗಿ ಭಾಗಿಯಾದವರು ಬಹಳಮಂದಿ ಇದ್ದಾರೆ. ಕಾನೂನು ಸಾರುತ್ತದೆ: ಚುನಾವಣೆಗೆ ನಿಲ್ಲುವ ಅಭ್ಯರ್ಥಿ ಅಪರಾಧಿಯೋ ಆಪಾದಿತನೋ ಕಳಂಕಿತನೋ ಆಗಿರಬಾರದು ಎಂದು. ಹಾಗೊಮ್ಮೆ ನೋಡಿದರೆ ಇಂದು ಟಿಕೆಟ್ ಪಡೆದ ಬಹಳ ಅಬ್ಯರ್ಥಿಗಳ ಕರಾಳಮುಖಗಳು ಗೋವಿನರೂಪವನ್ನು ಹೊತ್ತು ಚುನಾವಣೆಗೆ ಇಳಿದಿವೆ ಎನ್ನಬಹುದು; ಎಲ್ಲವೂ ಒಳಗಿನ ಡೀಲ್ ಗಳಲ್ಲೇ ಮುಗಿದು ಮುಚ್ಚಲ್ಪಡುತ್ತಿವೆ!      

ಹೆಚ್ಚಿನ ಮಸಾಜ್ ಪಾರ್ಲರ್ ಗಳಲ್ಲಿ ಏನು ನಡೆಯುತ್ತದೆ ಎಂಬುದನ್ನು ನೀವೂ ಬಲ್ಲಿರಿ. ಮಸಾಜ್ ಥೆರಪಿ ಆಯುರ್ವೇದದ ಒಂದು ಭಾಗವೇನೋ ಹೌದು. ಆದರೆ ಆಯುರ್ವೇದ ಅದನ್ನು ಮಾಂಸದ ಅಡ್ಡೆಗಳನ್ನಾಗಿ ಮಾಡಿಕೊಳ್ಳಲು ಹೇಳಿಲ್ಲ. ಅನೇಕ ಮಸಾಜ್ ಪಾರ್ಲರ್ ಗಳು ಮುಂದೆ ತೋರಿಸುವುದು ಒಂದು, ಹಿಂದೆ ನಡೆಸುವುದು ಇನ್ನೊಂದು. ಅಲ್ಲಿರುವ ಬೆಲೆವೆಣ್ಣುಗಳಿಗೂ ಹಣ ಜಾಸ್ತಿ ಬೇಕು. ನಡೆಸುವ ಮಾಲೀಕರಿಗಂತೂ ಹಣ ಎಷ್ಟಿದ್ದರೂ ಬೇಕು-ಹೇಗಾದರೂ ಬರಬೇಕು. ಆಯುರ್ವೇದದ ಪಂಚಕರ್ಮ ಚಿಕಿತ್ಸೆಯ ಭಾಗವಾದ ಮಸಾಜ್ ಥೆರಪಿ, ಹಲವು ವಿಕೃತ ಜನರಿಗೆ ಹೊಸದೊಂದು ದಂಧೆ ಸೃಷ್ಟಿಸಿಕೊಳ್ಳಲು ಅವಕಾಶ ನೀಡಿಬಿಟ್ಟಿತು. ಇಂದು ಅಂತಹ ಜನ ನಡೆಸುವ ಮಸಾಜ್ ಪಾರ್ಲರ್ ಗಳು ಆಯುರ್ವೇದದ ಹೆಸರಿಗೆ ಮಸಿಬಳಿಯುತ್ತಿವೆ. ನಿಜವಾದ ಆಯುರ್ವೇದದ ಪಂಚಕರ್ಮ ಚಿಕಿತ್ಸಾ ಮಳಿಗೆಗಳಿಗೂ ಮರ್ಯಾದಸ್ತರು ಹೋಗಲು ಅಂಜುತ್ತಾರೆ. 

ನಿತ್ಯಾನಂದ, ಕಾಳಿಸ್ವಾಮಿಗಳಂತಹ ಕಳ್ಳರನೇಕರು ಕಾವಿ ಧರಿಸಿ ಸನಾತನ ಧರ್ಮಕ್ಕೆ ಅಪಚಾರ ಮಾಡುತ್ತಿದ್ದಾರೆ. ಟಿವಿ ಸೀರಿಯಲ್ಲುಗಳು ಕುಟುಂಬ ಒಡೆಯುವ ಯೋಜನೆಗಳನ್ನೂ ಹೊಸತೆರನಾದ ಪಾತಕಗಳನ್ನು ನಡೆಸುವುದನ್ನೂ ದೃಶ್ಯರೂಪಕವಾಗಿ ತೋರಿಸುತ್ತಿವೆ; ಟಿವಿಗಳವರು ಅಪರಾಧಗಳನ್ನು ವೈಭವೀಕರಿಸಿ ತೋರಿಸಿ ’ಸಮಾಜೋದ್ಧಾರ’ಕ್ಕೆ ಹೊರಟಿದ್ದಾರೆ! ಜೀವಿಸಿರುವ ಗೋವಿನಂತಹ ಪ್ರಾಣಿಗಳ ಮೇಲೆ ಕಿಂಚಿತ್ತೂ ದಯೆಯಿರದ ಜನ, ಹದ್ದು-ಮಂಗ-ಬೆಕ್ಕು ಮೊದಲಾದ ಸತ್ತ ಪ್ರಾಣಿಗಳನ್ನು ಅಂತ್ಯಸಂಸ್ಕಾರಗೊಳಿಸುತ್ತಿದ್ದೇವೆ ಎಂದು ತೋರಿಸುವ ಮೂಲಕ ಟಿವಿಗಳಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಾರೆ. ಚಿಟ್ ಫಂಡ್ ಗಳಲ್ಲಿ, ಸಹಕಾರೀ ಬ್ಯಾಂಕುಗಳಲ್ಲಿ ಹಣದ ದುರ್ಬಳಕೆ ಕನ್ನಡಿಯ ಚಿತ್ರದಂತೇ ಕಾಣುತ್ತದೆ. ಒಂದೇ ನಿವೇಶನವನ್ನು ಹತ್ತುಮಂದಿಗೆ ಮಾರುವವರೂ ಹಲವು ವೇಷಗಳನ್ನು ಧರಿಸಿ ಸಜ್ಜನರಿಗೆ ನಾಮ ತೀಡುವವರೂ ಜಾಸ್ತಿಯಾಗಿದ್ದಾರೆ. ಎಲ್ಲೆಲ್ಲೂ ರಾಜಕೀಯದ ಅರಾಜಕತೆಯೇ ಕಾಣುತ್ತದೆ, ಭ್ರಷ್ಟರಲ್ಲದ ರಾಜಕಾರಣಿಗಳು ಸಿಗುವುದೇ ದುರ್ಲಭ. ಬಡತನವೆಂದು ಭಾಷಣ ಬಿಗಿಯುವ ಪುಢಾರಿಗಳು ಹಣ-ಹೆಂಡಗಳನ್ನು ನೀರಿನಂತೇ ವ್ಯಯಿಸುವುದನ್ನು ಕಂಡಾಗ ಅಂಬೇಡ್ಕರ್ ರಂತಹ ಉನ್ನತಮನಸ್ಕರು ಅಳುತ್ತಾರೆ. ಪ್ರಜಾಸತ್ತೆಯ ಕಥೆಯನ್ನು ಯಾರೋ ಹೇಳಿದಂತಾಗಿ ’ಹೀಗೂ ಉಂಟೇ?’ ಎನಿಸುತ್ತದೆ.  

ಆಹಾರವನ್ನು ವ್ಯಾಪಾರೀಕರಣಗೊಳಿಸಬಾರದು, ಅನ್ನ ದಾನದ ರೂಪದಲ್ಲಿ ಹಸಿದ ಹೊಟ್ಟೆಗಳನ್ನು ತಣಿಸಬೇಕು ಎಂದು ಸನಾತನ ಧರ್ಮದ ನೆಲೆಗಟ್ಟು ಹೇಳುತ್ತದೆ. ಅನ್ನವನ್ನು[ತಿಂದುಂಬ ಪದಾರ್ಥಗಳನ್ನು] ಮಾತ್ರ ವಿಕ್ರಯಿಸಬಾರದು ಎಂಬುದು ಅದರ ಅರ್ಥ. ಇಂದು ನಗರಗಳಲ್ಲಿ ಅಸಂಖ್ಯ ಫಾಸ್ಟ್ ಫುಡ್ ಜಾಯಿಂಟ್ ಗಳು ಅನ್ನವನ್ನು ವಿಕ್ರಯಿಸುತ್ತಿವೆ. ಅವುಗಳಲ್ಲಿ ಕೆಲಸಮಾಡುವ ಅಡಿಗೆಯವರು, ಅಡಿಗೆಯ ಪರಿಕರಗಳು, ಅಡಿಗೆಗೆ ಬಳಸುವ ತೈಲಪದಾರ್ಥಗಳು ಮತ್ತು ಕಚ್ಚಾ ಆಹಾರ ಸಾಮಗ್ರಿಗಳು, ಅಡಿಗೆಯ ಕೋಣೆ ಇವುಗಳನ್ನೆಲ್ಲಾ ನೋಡಿಬಿಟ್ಟರೆ, ಶುಚಿತ್ವ ಬಯಸುವವರು ಅಲ್ಲಿ ಆಹಾರವನ್ನು ಸ್ವೀಕರಿಸುವುದಿಲ್ಲ. ಬದುಕುವುದಕ್ಕಾಗಿ ಮಾತ್ರ ತಿನ್ನುವ ಜನ [ತಿನ್ನುವುದಕ್ಕಾಗಿಯೇ ಬದುಕುವವರಲ್ಲದ ಜನ] ಶುಚಿತ್ವಕ್ಕೆ ಬಹಳ ಮೌಲ್ಯ ಕೊಡುತ್ತಾರೆ. ಅಡಿಗೆ ತಯಾರಿಸುವ ಜನರಲ್ಲಿ ದುಡ್ಡಿಗಾಗಿ ಕೆಲಸಮಾಡುವ ಭಾವನೆಯಿದೆ, ತಯಾರಿಸಿದ ಅಡಿಗೆ-ಖಾದ್ಯಗಳನ್ನು ಮಾರಿ ಹಣಗಳಿಸಿಕೊಳ್ಳುವ ಭಾವನೆ ಮಾಲೀಕರಲ್ಲಿದೆ. ಹಣವನ್ನುಳಿದು ಬಾಕಿ ಭಾವನೆಗಳಿಗೆ ಬೆಲೆಯಿಲ್ಲದ ಆ ಜಾಗಗಳಲ್ಲಿ ಸಾರ್ವಜನಿಕರ ಹಿತಾಸಕ್ತಿ ಎಷ್ಟರಮಟ್ಟಿಗೆ ಬರಲು ಸಾಧ್ಯ?  

ರಸ್ತೆಬದಿಯಲ್ಲಿ ಮಾರುವ ಆಹಾರ ಪದಾರ್ಥಗಳ ತಯಾರಿಕೆಯ ಹಿನ್ನೆಲೆಯನ್ನಂತೂ ನೋಡಿದರೆ, ಗಿರಾಕಿಗಳಿಗೆ ದೇವರೇ ಗತಿ!! ಮುಂಬೈಯಲ್ಲಿ ನಡೆದ ಪಾನಿಪೂರಿಯ ವ್ಯಾಪಾರಿಯ ’ಉಚ್ಚಾಶಕ್ತಿ’ಯನ್ನು ಅನೇಕರು ಮಾಧ್ಯಮಗಳಲ್ಲಿ, ಫೇಸ್ ಬುಕ್ ಮೊದಲಾದ ಜಾಲತಾಣಗಳಲ್ಲಿ ಗಮನಿಸಿದ್ದೀರಿ. ಬೀದಿಬದಿಯ ವ್ಯಾಪಾರಿಗಳಿಗೆ ಮನೆಯೆಂಬ ಜಾಗದಲ್ಲಿ ಯಾವುದೇ ಸೌಕರ್ಯಗಳಿರುವುದು ಕಮ್ಮಿ, ಇದ್ದರೂ ಅವರ ವ್ಯಾಪಾರೀ ಜೀವನಕ್ಕೆ ಅದನ್ನವರು ಬಳಸುವುದು ಕಮ್ಮಿ. ಅಂಥಾ ಬೀದಿ ವ್ಯಾಪಾರಿಗಳಿಗೆ ಪರ್ಯಾಯ ಕೆಲಸ ಕಲ್ಪಿಸಿಕೊಡಬೇಕೇ ವಿನಃ ಅದಕ್ಕೆ ಪ್ರೋತ್ಸಾಹ ನೀಡುವುದು ತರವಲ್ಲ. ಸಂಬಂಧ ಪಟ್ಟ ಕಾರ್ಪೋರೇಟರ್ ಗಳು ಅದನ್ನು ಗಮನಿಸುವುದಿಲ್ಲ ಯಾಕೆಂದರೆ ಅವರಿಗೆ ಬೀದಿ ವ್ಯಾಪಾರಿಗಳಿಂದ, ತಳ್ಳುಗಾಡಿಗಳಿಂದ ಹಫ್ತಾ ಸಿಗುತ್ತದೆ. ಪೋಲೀಸರು ಪ್ರತೀ ಗಾಡಿಯಿಂದ ನಿತ್ಯವೂ ಹತ್ತಿಪ್ಪತ್ತು ರೂಪಾಯಿ ಕಿತ್ತುಕೊಂಡು ಆಶೀರ್ವದಿಸುತ್ತಾರೆ. ಈ ಆಟಗಳನ್ನು ಬೆಂಗಳೂರಿನ ಮೆಜೆಸ್ಟಿಕ್ ಮತ್ತು ಮಲ್ಲೇಶ್ವರಂ ಮೊದಲಾದ ಕಡೆಗಳಲ್ಲಿ ನಾವು ಕಾಣಬಹುದಾಗಿದೆ.  

ಯಾವುದೋ ನೀರು ಯಾವುದೋ ಸಾರು
ಬಾಯಿಬಿಡಬೇಡ ಸಿಕ್ಕಿದ್ದು ಮಾರು

ಕಲಬೆರಕೆ ಎಣ್ಣೆ ಕ್ರತ್ರಿಮದ ಬೆಣ್ಣೆ
ಸತ್ತಪ್ರಾಣಿಗಳ ಕರುಳಡಿಯ ಗೊಣ್ಣೆ

ಯಾವುದೋ ಹಿಟ್ಟು ಒಂದಷ್ಟು ತಟ್ಟು
ಬಣ್ಣಗಳ ಜುಟ್ಟು ಆಕಾರ ಕೊಟ್ಟು 

ಕಾವಲಿಗೆ ಬಿಟ್ಟು ಕರಿದೆತ್ತಿ ಒಟ್ಟು
ಗಿರಾಕಿಗಳಿಗಿಟ್ಟು ಕೋಡ್ಬಳೆ ನಿಪ್ಪಟ್ಟು

ಬರುತಾರೆ ಸಾರು ಇಳಿತಾರೆ ತೇರು !
ತಿರುತಿರುಗಿ ಜೋರು ಬಿಸಿಯೆನುತ ಮಾರು 

ಧಾವಂತದ ಜೀವನ ಶೈಲಿಯಲ್ಲಿ ಮನೆಯಲ್ಲಿ ಸಿದ್ಧಪಡಿಸಿಕೊಳ್ಳಲಾಗದ ಅನಾನುಕೂಲತೆ ಕೆಲವರದಾದರೆ ರುಚಿಗಾಗಿ ಹಪಹಪಿಸಿ ಜೊಲ್ಲಿಳಿಸುವ ಪರಿ ಹಲವರದು. ಕೆಟ್ಟರೆ ಹೇಗೂ ಆಸ್ಪತ್ರೆಯಿದೆ! ಆಸ್ಪತ್ರೆಯಲ್ಲಿ ಮಲಗಿಕೊಳ್ಳಲು ಸಮಯವಿರುವಷ್ಟು ಮನೆಯಲ್ಲಿ ಅಡುಗೆಮಾಡಿಕೊಳ್ಳಲು ಇಲ್ಲ ಇಂದಿನ ಜನರಿಗೆ.

ಮನೆಯಲ್ಲಿ ತಯಾರಿಸುವ ಅಡುಗೆಗಳೇ ಮಲಿನಗೊಂಡಾವು ಎಂಬ ಕಾರಣಕ್ಕೆ ಹಲವು ಸರ್ತಿ ಅದನ್ನು ಮಡಿಯಲ್ಲೇ ತಯಾರಿಸಿ ಎಂದರು ಪೂರ್ವಜರು. ಸ್ನಾನಮಾಡಿ, ತೊಳೆದೊಣಗಿಸಿದ ಸ್ವಚ್ಛಬಟ್ಟೆಯುಟ್ಟು, ಕೈಗಳನ್ನು ಮತ್ತೆ ತೊಳೆದುಕೊಂಡು ಶುದ್ಧಗೊಳಿಸಿದ ಪಾತ್ರೆಗಳಲ್ಲಿ, ಶುದ್ಧವಾದ ಪ್ರದೇಶದಲ್ಲಿ, ಶುದ್ಧವಾದ ಪರಿಕರಗಳು-ಸಾಮಗ್ರಿಗಳನ್ನು ಬಳಸಿ ತಯಾರಿಸಿದ ಆಹಾರ ಮಾತ್ರ ದೇವರಿಗೆ ಸಮರ್ಪಿಸಲು ಯೋಗ್ಯ ಎಂದುಬಿಟ್ಟರು! ಆದರ ಹಿಂದೆ ಇರುವ ವಿಜ್ಞಾನವನ್ನು ನಾವು ಗಮನಿಸಬೇಕು.

ಆಹಾರವಸ್ತುಗಳನ್ನು ಹೈಜೀನಿಕ್ ಆಗಿ ತಯಾರಿಸುತ್ತೇವೆ ಎಂಬ ಸೋಗಲಾಡಿತನದಲ್ಲಿ ಒಂದಕ್ಕೆ ಮೂರರಿಂದ ಹತ್ತುಪಟ್ಟು ಹೆಚ್ಚಿಗೆ ಹಣಪಡೆಯುವ ಜನ, ವೈದ್ಯಕೀಯದಿಂದ ಜನಸೇವೆಯ ಬದಲಿಗೆ ಹೈಟೆಕ್ ಆಸ್ಪತ್ರೆಗಳಲ್ಲಿ ಪರೋಕ್ಷ ಸುಲಿಗೆ ನಡೆಸುವ ಜನ, ವಿದ್ಯೆಕಲಿಸುವ ನೆಪದಲ್ಲಿ ಅಲ್ಲಿಯೂ ಪರೋಕ್ಷ ಸುಲಿಗೆಗಿಳಿಯುವ ಜನ ಇವರೆಲ್ಲಾ ಇದ್ದಾಗ  ಅಲ್ಲೆಲ್ಲಾ ಢಾಳಾಗಿ ಕಾಣುವುದು ಆರಕ್ಕೇರುವ ಬಯಕೆಯೊಂದೇ.    

ದೈವ ಸೃಷ್ಟಿಯ ವೈಚಿತ್ರವನ್ನು ನೋಡಿ: ನದಿಗಳು ಹರಿಯುತ್ತವೆ-ಪರೋಪಕಾರಾರ್ಥವಾಗಿ, ಮರಗಿಡಗಳು ನೆರಳು-ಹಣ್ಣು ನೀಡುತ್ತವೆ-ಪರೋಪಕಾರ್ಥವಾಗಿ, ಕಾಮಧೇನುಗಳು ಹಾಲನ್ನು ಕೊಡುತ್ತವೆ-ಪರೋಪಕಾರಾರ್ಥವಾಗಿ, ಸೂರ್ಯ ಬೆಳಕು ಚೆಲ್ಲುತ್ತಾನೆ-ಪರೋಪಕಾರಾರ್ಥವಾಗಿ, ಭೂಮಿತಾಯಿ ಹಲವು ವಿಧದ ಸಸ್ಯೋತ್ಫನ್ನಗಳನ್ನು ನೀಡುತ್ತಾಳೆ-ಪರೋಪಕಾರಾರ್ಥವಾಗಿ..ಇಷ್ಟೆಲ್ಲಾ ಪರೋಪಕಾರಗಳನ್ನು ನಾವು ಗಮನಿಸಿಯೂ ಸ್ವಾರ್ಥಿಗಳಾಗಿದ್ದೇವೆ; ಪರರಿಗೆ ಪರೋಕ್ಷ ಹಿಂಸೆ ನೀಡುತ್ತಿದ್ದೇವೆ. ಮಾಡುವ ಕೆಲಸಗಳಲ್ಲಿ ಶ್ರದ್ಧೆಯಿರುವುದಿಲ್ಲ; ಕೆಲಸ ಮಾಡದೆಯೂ ಹಣದ ಥೈಲಿ ನಮ್ಮದಾಗಬೇಕೆಂಬ ಆಸೆ ಮಾತ್ರ ತಪ್ಪುವುದಿಲ್ಲ. ಪೂರ್ವಜರಲ್ಲಿ ಸ್ವಹಿತಾಸಕ್ತಿಗಿಂತ ಹೆಚ್ಚು ಪರಹಿತಾಸಕ್ತಿ ನೆಲೆಸಿತ್ತು. ಮಾಡುವ ಕೆಲಸಗಳನ್ನು ಪ್ರಾಮಾಣಿಕವಾಗಿ, ಪರಿಶುದ್ಧವಾಗಿ, ಭಾವನಾಪೂರ್ವಕವಾಗಿ ಮಾಡುತ್ತಿದ್ದರು. ಇಂದಿನ ಸಾಮಾಜದ ನಮ್ಮಲ್ಲಿ ಇರುವ ಭಾವನೆಗಳಿಗೂ ಪೂರ್ವಜರಲ್ಲಿ ಇದ್ದ ಸಮಾಜಿಕ ಭಾವನೆಗಳಿಗೂ ಅಜ-ಗಜಾಂತರವಿದೆ. ಹೇಗಾದರೂ ಮಾಡಿ ಆರಕ್ಕೇರುವ ನಮ್ಮ ಅಭಿಲಾಷೆಯ ಈಡೇರುವಿಕೆಗಾಗಿ ಸಾಮಾಜಿಕ ಸ್ವಾಸ್ಥ್ಯವನ್ನು ಹದಗೆಡಿಸಲೂ ನಾವು ಹೆದರುವುದಿಲ್ಲ, ಹಿಂದೆಬೀಳುವುದಿಲ್ಲ.

ಎಳವೆಯಲ್ಲಿ ನಾವೆಲ್ಲಾ ನಮ್ಮ ಶಾಲೆಯಲ್ಲಿ ಹಾಡಿಕೊಂಡು ಪ್ರಾರ್ಥಿಸುತ್ತಿದ್ದ ಹಾಡಿನ ಭಾಗ ಹೀಗಿದೆ :

ದೇವದೇವನೆ ಹಸ್ತಪಾದಗಳಿಂದಲೂ ಮನದಿಂದಲೂ
ನಾವುಮಾಡಿದ ಪಾಪವೆಲ್ಲವ ಹೋಗಲಾಡಿಸು ದೇವನೆ

ಕಾಯಾ, ವಾಚಾ, ಮನಸಾ [ತ್ರಿಕರಣಗಳಿಂದ] ಗೊತ್ತಿರದೇ ಮಾಡಿರಬಹುದಾದ ಪಾಪಗಳನ್ನು ದೇವರೆಂಬ ಶಕ್ತಿ ಪರಿಹರಿಸುತ್ತದೆ. ಗೊತ್ತಿದ್ದೂ ಮಾಡುವ ಪಾಪವನ್ನು ಹೋಗಲಾಡಿಸುವುದು ದೈವದ ನಿಯಮವಲ್ಲ, ನೀತಿಯಲ್ಲ. ನದಿಗಳನ್ನು ಮಲಿನಮಾಡುವುದು, ಸಾರ್ವಜನಿಕರಿಗೆ ಕಲಬೆರಕೆ ಆಹಾರಗಳನ್ನು ಪೊರೈಸುವುದು, ವಾಸಿಸುವ ದೇಶಕ್ಕೆ ದ್ರೋಹವೆಸಗುವಂಥಾ ಕೆಲಸಗಳನ್ನು ಪರೋಕ್ಷವಾಗಿ ಮಾಡಿಕೊಡುವುದು, ದಿಢೀರ್ ಶ್ರೀಮಂತಿಕೆಯ ಅಪೇಕ್ಷೆಯಲ್ಲಿ ಕರಾಳ ದಂಧೆಗಳನ್ನು ನಡೆಸುವುದು...ಇಲ್ಲೆಲ್ಲೂ ಉನ್ನತ ಭಾವನೆಗಳಿಲ್ಲ, ಸಾಮಾಜಿಕ ಕಳಕಳಿಯಿಲ್ಲ.

ಮೇಟಿವಿದ್ಯೆಯೇ ಭಾರತದ ಬೆನ್ನೆಲುಬು. ಕೋಟಿಗಟ್ಟಲೆ ಕೈಗಾರಿಕೆಗಳು ಮುಗಿಲೆತ್ತರಕ್ಕೆ ಬೆಳೆದರೂ, ವಿಜ್ಞಾನ ಎಷ್ಟೇ ಮುಂದುವರಿದರೂ ಹೊಟ್ಟೆಗೆ ತಿನ್ನುವುದು ಅನ್ನದಾತ ಬೆಳೆದ ಅನ್ನವನ್ನೇ. ನೀರಿಲ್ಲದಿದ್ದರೆ ಬೆಳೆಯಿರುವುದಿಲ್ಲ, ಬೆಳೆಯಿಲ್ಲದಿದ್ದರೆ ರೈತಜನರಿಲ್ಲ, ರೈತಜನರಿಲ್ಲದಿದ್ದರೆ ಅನ್ನವಿಲ್ಲ, ಅನ್ನವಿಲ್ಲದಿದ್ದರೆ ಜನಜೀವನ ಹೇಗೆ ನಡೆದೀತು?  ಬಾರದ ಮಳೆ ಬರಬೇಕಿದ್ದರೆ ಸಮಾಜದಲ್ಲಿ ನೈತಿಕತೆ ಹೆಚ್ಚಬೇಕು, ಪ್ರಕೃತಿಯಮೇಲಿನ ದೌರ್ಜನ್ಯ ಕಡಿಮೆಯಾಗಬೇಕು, ತಾನು-ತನ್ನವರು ಭಾವನೆಗಿಂತ ಎಲ್ಲರೂ ತಮ್ಮವರೇ ಎಂಬಂಥಾ ಭಾವನೆ ಬೆಳೆಯಬೇಕು. ಮಾಡುವ ಕರ್ತವ್ಯಕ್ಕೆ ಉತ್ತಮ ಮಾರ್ಗಗಳನ್ನೇ  ಆಯ್ದುಕೊಳ್ಳಬೇಕು. ಮಾಡುವ ಕೆಲಸಗಳಲ್ಲಿ ಅತ್ಯಂತ ಸ್ವಚ್ಛತೆ, ಶ್ರದ್ಧೆ ಮತ್ತು ಸಮರ್ಪಣಾ ಭಾವ ಬೇಕು. ಮಾಡುವ ಕೆಲಸ ದೇವರಸೇವೆ ಎಂಬಂತೆಯೇ ನಡೆಯಬೇಕು. ಕಣ್ಣೀರಿನ ಬದಲಿಗೆ ರೈತರ ಮೊಗದಲ್ಲಿ ನಗುವನ್ನು ಕಾಣಬೇಕು; ನವಯುವಕರು ಬೇಸರದಿಂದ ಮೇಟಿವಿದ್ಯೆಯನ್ನು ತೊರೆದು, ಕೆಲಸ ಅರಸುತ್ತಾ, ದೇಶಾಂತರ ಅಲೆದಾಡುವ ಪ್ರಮೇಯ ನಿಲ್ಲಬೇಕು.    

ಸ್ವಾತಂತ್ರ್ಯ ಪೂರ್ವದಲ್ಲಿ, ಗೋಪಾಲಕೃಷ್ಣ ಗೋಖಲೆಯವರು ಸಾರ್ವಜನಿಕ ಸೇವೆಗೆ ತಮ್ಮನ್ನು ತೊಡಗಿಸಿಕೊಂಡು ಸಂಸ್ಥೆಗಳನ್ನು ಕಟ್ಟಿದ್ದರು. ಅದಕ್ಕೆ ದುಡಿಯುವ ಕೈಗಳಿಗೆ ಅವರ ಕುಟುಂಬ ನಿರ್ವಹಣೆಗೆ ತೊಂದರೆಯಾಗದಂತೇ ಗೋಖಲೆಯವರೇ ನೋಡಿಕೊಂಡರು. ಬ್ರಿಟಿಷರೇ ನಿಬ್ಬೆರಗಾಗಿ ಇಂತಹ ಸಮಾಜಸೇವೆಯನ್ನು ಎಲ್ಲೂ ಕಂಡಿಲ್ಲವೆಂದರು. ಗೋಖಲೆಯವರನ್ನು ಅಪಾರವಾಗಿ ಮೆಚ್ಚಿದ್ದ ಸಂತ ಡಿವಿಜಿಯವರು ಸ್ಥಾಪಿಸಿದ ’ಗೋಖಲೆ ಸಾರ್ವಜನಿಕ ಸಂಸ್ಥೆ’ಗೆ ಅಧ್ಯಕ್ಷರಿಲ್ಲ, ಅದನ್ನು ಕಾರ್ಯದರ್ಶಿಗಳೇ ನಡೆಸುತ್ತಾರೆ. "ಅಧ್ಯಕ್ಷರು ಯಾರು?" ಎಂದು ಕೇಳಿದರೆ "ಶ್ರೀರಾಮನೇ ಅಧ್ಯಕ್ಷ" ಎಂಬುತ್ತರ ಬರುತ್ತದೆ. ಹುಟ್ಟಿದಾರಭ್ಯ ಆ ಸಂಸ್ಥೆ ನಡೆಸಿದ ಸಮಾಜ ಸೇವೆ ಗಣನೀಯ. ಅಲ್ಲಿ ವ್ಯಯಿಸುವ ಪೈಸೆಪೈಸೆಯೂ ಸಾರ್ವಜನಿಕರಿಗೆ ತಲುಪುತ್ತದೆ. ಇಂತಹ ವಿಶ್ವತೋಮುಖ ಭಾವ ನಮ್ಮೆಲ್ಲರಲ್ಲಿ ಮೂಡಿದರೆ ನಮ್ಮ ಸ್ಥಿತಿ ಸಹಜವಾಗಿ ಆರಕ್ಕೇರೀತು. ನೀತಿ-ನಿಯಮಗಳನ್ನೆಲ್ಲಾ ಗಾಳಿಗೆ ತೂರಿ ಸ್ವೇಚ್ಛಾಚಾರಿಗಳಾಗಿ ಅಡ್ಡಮಾರ್ಗಗಳಿಂದ ಹಣಗಳಿಸಿದರೆ ಒಂದಿಲ್ಲೊಂದು ದಿನ ಆಳಕ್ಕೆ ಬೀಳಬೇಕಾದೀತು; ಸುನಾಮಿ, ಭೂಕಂಪ, ಕ್ಷಾಮ, ಅತಿವೃಷ್ಟಿ, ಜ್ವಾಲಾಮುಖಿ ಯಾವುದೋ ಘಟಿಸಿ, ಅನ್ಯಾಯದ ಸಂಪತ್ತನ್ನು ಅಳಿಸಿಹಾಕೀತು. ಅದು ಪ್ರಕೃತಿ ಧರ್ಮ. ರಕ್ಕಸ ಮನಸ್ಸಿನ ಮನುಷ್ಯರಿಗೆ ತಕ್ಕ ಪಾಠ ಕಲಿಸುವುದು ದೈವಕರ್ಮ.         

1 comment:

  1. Superb and very inspiring Sir, your each word is very very valuable and respected!!

    ReplyDelete