ಕಳೆದ ೬ ದಶಕಗಳ ಹಿಂದಿನ ಸ್ಥಿತಿಗತಿ ಇಂದಿನಂತಿರಲಿಲ್ಲ. ದೇಶದ ತುಂಬ ಬ್ರಿಟಿಷರ ಪಳೆಯುಳಿಕೆಗಳು ಕಾಣುತ್ತಿದ್ದವು. ನೈಸರ್ಗಿಕವಾಗಿ, ಧಾರ್ಮಿಕವಾಗಿ, ಆಧ್ಯಾತ್ಮಿಕವಾಗಿ, ಭೌತಿಕವಾಗಿ, ಆರ್ಥಿಕವಾಗಿ, ಸಾಂಸ್ಕೃತಿಕವಾಗಿ, ಅನುಷಂಗಿಕವಾಗಿ, ಅನುವಂಶಿಕವಾಗಿ ಶ್ರೀಮಂತವಾಗಿದ್ದ ನಮ್ಮ ಭಾರತದ ಹೆಚ್ಚಿನ ಸಂಪತ್ತನ್ನು ಬ್ರಿಟಿಷರು ಕೊಳ್ಳೆಹೊಡೆದುಕೊಂಡು ಹೊರಟುಹೋಗುವುದರ ಜೊತೆಗೆ ಕ್ರೈಸ್ತ ಮಿಶನರಿಗಳನ್ನು ಸ್ಥಾಪಿಸಿ ತಮ್ಮ ಮತವನ್ನು ಪ್ರಚುರಗೊಳಿಸಿ ಹೋದರು. ರಾಜರುಗಳ ಆಳ್ವಿಕೆ ಅಳಿದು ಚಪ್ಪನ್ನೈವತ್ತಾರು ದೇಶಗಳು ಏಕಛತ್ರದಡಿಯಲ್ಲಿ ಆಳ್ವಿಕೆಗೆ ಒಳಪಡುವಂತಹ ಪ್ರಜಾತಂತ್ರಾಧಾರಿತ ಸರಕಾರ ಆಡಳಿತಕ್ಕೆ ಬಂತು. ಜನರಲ್ಲಿ ಪ್ರಾಮಾಣಿಕತೆ ಮತ್ತು ಜೀವನದ ಮೌಲ್ಯಗಳು ಅಧಿಕವಾಗಿದ್ದ ಕಾರಣ ಹಣಕ್ಕಾಗಿಯೇ ಎಲ್ಲವನ್ನೂ ಮಾಡುವ ಮನೋಭಾವನೆ ಇರಲಿಲ್ಲ; ಮರ್ಯಾದೆ ಎಂಬ ಪದಕ್ಕೆ ಬಹಳ ಬೆಲೆಯಿತ್ತು. ಕಾಡುಮೇಡುಗಳು ತಕ್ಕಮಟ್ಟಿಗೆ ಚೆನ್ನಾಗಿಯೇ ಇದ್ದವು; ವನ್ಯಮೃಗಗಳೂ ಪಕ್ಷಿಗಳೂ ಉಂಡಲೆದು ಸುಖದಿಂದಿದ್ದವು. ಗಣಿಗಾರಿಕೆಯ ಅಬ್ಬರವಾಗಲೀ, ಕಾಡುಗಳ್ಳರ ಅಟ್ಟಹಾಸವಾಗಲೀ ಇರಲಿಲ್ಲ. ಇಂತಹ ಕಾಲಘಟ್ಟದಲ್ಲಿ, ಮಹಾರಾಷ್ಟ್ರದ ಸಜ್ಜನಗಡದಿಂದ ಕಾಲ್ನಡಿಗೆಯಲ್ಲೇ ಸಂತರೊಬ್ಬರು ಊರೂರು ದಾಟುತ್ತಾ ಕರ್ನಾಟಕದ ಶಿವಮೊಗ್ಗೆಯ ಸಾಗರ ಪ್ರಾಂತಕ್ಕೆ ಬಂದರು; ಅವರೇ ಭಗವಾನ್ ಶ್ರೀಧರ ಸ್ವಾಮಿಗಳು.
ರಾಜಾಶ್ರಯದಲ್ಲೂ, ತದನಂತರ ಬ್ರಿಟಿಷರ ಆಳ್ವಿಕೆಯಲ್ಲೂ ಸಹ ಅಂಗಡಿಗಳ ಸುಂಕ ವಸೂಲಿ ಮಾಡಿಕೊಡುವ ಪತಕಿ[ಫಸಕೀ ಪದದ ಅಪಭ್ರಂಶ] ಎಂಬ ಮನೆತನದ ಕವಲೊಂದು ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ದೇಗಲೂರಿನಿಂದ ಹೈದರಾಬಾದ್ ನಗರಕ್ಕೆ ಬಂದು ನೆಲೆಸಿತ್ತು. ಸಮುದ್ರದ ನಂಟಿದ್ದರೂ ಉಪ್ಪಿಗೆ ಬಡತನ ಎಂಬಂತೇ ಸರಕಾರಕ್ಕೆ ಸುಂಕವನ್ನು ವಸೂಲುಮಾಡಿ ತಲ್ಪಿಸುತ್ತಿದ್ದರೂ ಬಡತನ ಎಂಬುದು ಈ ಕವಲಿಗೆ ಬಂದ ಪಿತ್ರಾರ್ಜಿತ ಆಸ್ತಿಯಾಗಿತ್ತು! ಸರ್ಪಶಾಪದಿಂದ ನಿರ್ವಂಶವಾಗತೊಡಗಿದ್ದ ಪತಕಿ ಮನೆತನದ ದೇಗಲೂರು ನಾರಾಯಣರಾವ್ ಪತಕಿ-ಕಮಲಾಬಾಯಿ ದಂಪತಿ, ಕುಲಪುರೋಹಿತರಾದ ಮಾರುತಿರಾಯರೆಂಬವರ ಸಲಹೆಯ ಮೇರೆಗೆ, ಗಾಣಗಾಪುರ ಕ್ಷೇತ್ರಕ್ಕೆ ತೆರಳಿ, ಭೀಮಾ-ಅಮರಜಾ ನದಿಗಳ ಸಂಗಮದಲ್ಲಿ ಸಂಕಲ್ಪ ಸ್ನಾನ ಪೂರೈಸಿ, ದತ್ತಸ್ವರೂಪಿ ನರಸಿಂಹ ಸರಸ್ವತಿಯವರ ನಿರ್ಗುಣ ಪಾದುಕಾ ದರ್ಶನವನ್ನು ಪಡೆದುಕೊಂಡು, ಗುರುಚರಿತ್ರೆ ಪಾರಾಯಣ, ಪ್ರದಕ್ಷಿಣೆ, ನಮಸ್ಕಾರ, ಮಧುಕರಿ ಭಿಕ್ಷೆ ಇವುಗಳಿಂದ ಶ್ರೀ ದತ್ತನ ಉಪಾಸನೆಯನ್ನು ಶ್ರದ್ಧಾ-ಭಕ್ತಿ ಪುರಸ್ಸರ ನೆರವೇರಿಸುತ್ತಿರಲಾಗಿ, ಅವರ ಅತೀವ ಭಕ್ತಿಗೆ ಒಲಿದ ಶ್ರೀದತ್ತಾತ್ರೇಯನು ದರ್ಶನವಿತ್ತು ಒಂದು ಪೂರ್ಣಫಲವನ್ನಿತ್ತು, "ನಿಮ್ಮ ಇಚ್ಛೆಯಂತೆಯೇ ನಿಮಗೆ ಲೋಕೋದ್ಧಾರಕ ಪುತ್ರನೊಬ್ಬ ಜನಿಸುತ್ತಾನೆ" ಎಂದು ಹರಸಿದನು. ಆನಂದತುಂದಿಲರಾದ ಪತಕಿ ದಂಪತಿ ವ್ರತಸಮಾಪ್ತಿ ನಡೆಸಿ, ಅನ್ನಸಂತರ್ಪಣೆ ಮಾಡಿ ಹೈದರಾಬಾದಿಗೆ ಹಿಂದಿರುಗಿದರು.
ಸ್ವಲ್ಪ ಕಾಲದಲ್ಲಿಯೇ ಕಮಲಾಬಾಯಿ ಗರ್ಭಿಣಿಯಾದರು. ಸಾಮಾನ್ಯ ಸ್ತ್ರೀಯರಿಗಿಂತ ವಿಲಕ್ಷಣವಾದ ಬಯಕೆಗಳು ಉದ್ಭವಿಸಿ, ಪುರಾಣ-ಪುಣ್ಯಕಥೆಗಳನ್ನು ಕೇಳುತ್ತಾ ಸತ್ಸಂಗವನ್ನೂ ದಾನ-ಧರ್ಮಗಳನ್ನೂ ನಡೆಸುತ್ತಾ ದಿನಗಳೆದರು. ನವಮಾಸ ಸಮೀಪಿಸುವ ಹೊತ್ತಿಗೆ ಕಮಲಾಬಾಯಿಯವರ ತಾಯಿ ಬಯಾಬಾಯಿಯವರು ಮಗಳನ್ನು ಹೆರಿಗೆ-ಬಾಣಂತನಕ್ಕಾಗಿ ಗುಲ್ಬರ್ಗಾ ಸಮೀಪದ ಲಾಡ್ ಚಿಂಚೋಳಿಯಲ್ಲಿದ್ದ ತನ್ನ ಹಿರಿಯ ಮಗಳು ಚಂದೂಬಾಯಿಯ ಮನೆಗೆ ಕರೆತಂದರು. ಹಿರಿಯಳಿಯ ತ್ರ್ಯಂಬಕ ದೇಸಾಯಿಯವರು ಸೌಜನ್ಯ ಪೂರ್ವಕ ಸಹಕಾರವಿತ್ತು ಸೀಮಂತವನ್ನು ನೆರವೇರಿಸಿದರು. ಮಾರ್ಗಶೀರ್ಷ ಮಾಸ ಸಮೀಪಿಸಿತು. ಶಾಲಿವಾಹನಶಕೆ ೧೮೩೦ ಪ್ಲವಂಗನಾಮ ಸಂವತ್ಸರದ ಮಾರ್ಗಶೀರ್ಷ ಶುದ್ಧ ಪೌರ್ಣಮೀ ಗುರುವಾರ ೧೯.೧೦.೧೯೦೭ ರಂದು ಸಾಯಂಕಾಲ ೭:೨೩ ನಿಮಿಷಕ್ಕೆ ಸರಿಯಾಗಿ, ಕಮಲಾಬಾಯಿಯವರು ಪುತ್ರರತ್ನಕ್ಕೆ ಜನ್ಮವಿತ್ತರು. ಅಂದು ದತ್ತಜಯಂತಿಯಾದ್ದರಿಂದ ದತ್ತದೇವರ ಪಲ್ಲಕ್ಕಿ ದೇಸಾಯರ ಮನೆಯ ಮುಂದೆ ಅದೇ ಸಮಯಕ್ಕೆ ಬಂದು ನಿಂತಿತ್ತು!
ಮಗುವಿಗೆ ಸಮಯದಲ್ಲಿ ಜಾತಕರ್ಮವನ್ನು ನೆರವೇರಿಸಿ, ಕುಲದೈವ ವೆಂಕಟರಮಣನಲ್ಲಿ ಪ್ರಾರ್ಥಿಸಿಕೊಂಡಿದ್ದಂತೇ "ಶ್ರೀಧರ" ಎಂದು ನಾಮಕರಣ ಮಾಡಲಾಯ್ತು. || ನಿತ್ಯಮೇವ ಮೋಕ್ಷಶ್ರಿಯಂ ಧರತೀತಿ ಶ್ರೀಧರಃ ||-ಶ್ರೀಧರ ಎಂಬ ಹೆಸರಿನ ಔಚಿತ್ಯ ಇದಾಗಿದ್ದು, ಮಗುವಿಗೆ ಇದು ಅನ್ವರ್ಥವೂ ಆಗಿತ್ತು. ಹುಟ್ಟಿದ ಮಗುವಿಗೆ ೪ನೇ ತಿಂಗಳಲ್ಲಿ ಸೂರ್ಯದರ್ಶನ ಮಾಡಿಸಬೇಕೆಂಬ ಶಾಸ್ತ್ರದಂತೇ, ನಾರಾಯಣರಾವ್ ಪತಕಿಯವರು ಹೆಂಡತಿ-ಮಗುವನ್ನು ಹೈದರಾಬಾದಿನ ತನ್ನ ಮನೆಗೆ ಕರೆತಂದರು. ಕಣ್ಣಲ್ಲಿ ಕಣ್ಣಿಟ್ಟು ಮಗುವಿನ ಆರೋಗ್ಯ, ಬೆಳವಣಿಗೆ, ಆಟ-ಪಾಠಗಳ ಬಗ್ಗೆ ಎಲ್ಲತಾಯಂದಿರಂತೇ ಕಮಲಾಬಾಯಿಯವರೂ ನಡೆದುಕೊಂಡರೂ ದತ್ತನ ವರಪ್ರಸಾದದಿಂದ ಜನಿಸಿದ ಮಗುವಿನ ಮೇಲೆ ಭಕ್ತಿ ಪೂರಿತವಾಗಿ ನಡೆದುಕೊಳ್ಳುವ ಮಾತೃಪ್ರೇಮ ಅವರದಾಗಿತ್ತು. ಅಮ್ಮನಿಂದ "ರಾಜಾ" ಎಂದೇ ಕರೆಯಲ್ಪಡುತ್ತಿದ್ದ ಶ್ರೀಧರರು ಬಾಲ್ಯಸಹಜ ಚಟುವಟಿಕೆಗಳಲ್ಲಿ ತೊಡಗಿದ್ದರೂ ಮಗುವಿನಲ್ಲಿ ವಯೋಮಾನಕ್ಕೆ ಮೀರಿದ ಕೆಲವು ಬೌದ್ಧಿಕ ವೈಶಿಷ್ಟ್ಯಗಳು ಆಗಾಗ ಗೋಚರಿಸುತ್ತಿದ್ದವು.
ಅಣ್ಣ ತ್ರ್ಯಂಬಕ, ಅಕ್ಕ ಗೋದಾವರಿಗೂ ಹಾಗೂ ರೇಣುಕೆ[ನಾರಾಯಣ ರಾವ್ ಪತಕಿಯವರ ಗತಿಸಿಹೋಗಿದ್ದ ಹಿರಿಯ ಪತ್ನಿಯ ಮಗಳು]ಗೂ ’ರಾಜ’ ಕಣ್ಮಣಿಯಾಗಿದ್ದ; ಎಲ್ಲರೂ ರಾಜನನ್ನು ಎತ್ತಿ ಮುದ್ದಾಡುವವರೇ. ಆರನೇ ತಿಂಗಳಲ್ಲಿ ಅನ್ನಪ್ರಾಶನ ನಡೆದು, ವರ್ಷತುಂಬಿದಾಗ ವರ್ಧಂತಿಯೂ ನಡೆಯಿತು. ಬಂಧುಬಾಂಧವರು ಹಿರಿಯರು ಬಂದು ಆಶೀರ್ವದಿಸಿದರು. ಹೀಗಿರುತ್ತಾ ಶ್ರೀಧರನಿಗೆ ೩ನೇ ವರ್ಷ ತುಂಬುವಾಗ ತಂದೆ ನಾರಾಯಣ ರಾಯರು ಅಕಾಲಮೃತ್ಯುವಿಗೀಡಾದರು; ಗತಿಸಿದಾಗ ನಾರಾಯಣ ರಾಯರ ವಯಸ್ಸು ೫೦ ವರ್ಷ. ಪತಿಯ ಮರಣ ಕಮಲಾಬಾಯಿಯವರನ್ನು ಧೃತಿಗೆಡಿಸಿತು. ಹಿರಿಯಮಗ ತ್ರ್ಯಂಬಕನಿಗಿನ್ನೂ ೧೫-೧೬ ವಯಸ್ಸು, ಶ್ರೀಧರ ಮೂರುವರ್ಷದವ. ೧೦ ವರ್ಷದ ಗೋದಾವರಿಗೆ ಅದಾಗಲೇ ಮದುವೆಯಾಗಿತ್ತು. ಎಳವೆಯಲ್ಲೇ ವಿದ್ಯಾಭ್ಯಾಸವನ್ನು ನಿಲ್ಲಿಸಿ ಜೀವನೋಪಾಯಕ್ಕಾಗಿ ದುಡಿದು ಸಂಸಾರ ನಿಭಾಯಿಸಬೇಕಾದ ಒತ್ತಡ ತ್ರ್ಯಂಬಕನ ಹೆಗಲಮೇಲೆ ಬಿತ್ತು. ತಾಯಿಯ ದುಗುಡ ಮತ್ತು ಕಣ್ಣೀರನ್ನು ಗಮನಿಸುತ್ತಿದ್ದ ಮುಗ್ಧ ಶ್ರೀಧರ "ಅಮ್ಮಾ ಯಾಕೆ ಅಳುತ್ತೀಯಾ? ಇಲ್ನೋಡಿಲ್ಲಿ...ಮ್ಯಾಂವ್ ಮ್ಯಾಂವ್ ...ಬೌಬೌ" ಎಂದು ಪ್ರಾಣಿಗಳ ಕೂಗನ್ನು ಅಣಕಿಸಿ ತೋರಿಸಿ ತಾಯಿಗೆ ಸಮಾಧಾನಮಾಡಲು ತೊಡಗುತ್ತಿದ್ದ. ’ರಾಜ’ನ ಬಾಲಲೀಲೆಗಳನ್ನು ನೋಡಿ ತಮ್ಮ ದುಃಖವನ್ನು ಆ ತಾಯಿ ತುಸು ಮರೆಯುತ್ತಿದ್ದರು.
ಹೀಗಿರುತ್ತಾ, ಊರಿನಲ್ಲಿ ಸಿಡುಬು ರೋಗ ಹಬ್ಬಿ ಅದು ಶ್ರೀಧರನನ್ನೂ ಸಂಪೂರ್ಣವಾಗಿ ಬಾಧಿಸಿತು. ತಾಯಿಯ ಅಕ್ಕರೆಯ ಆರೈಕೆಯಲ್ಲಿ ಅಂತೂ ಸಿಡುಬು ಗುಣವಾಯ್ತು. ಏಕಸಂಧಿಗ್ರಾಹಿಯಾದ ಶ್ರೀಧರ ತಾಯಿಯ ಜೊತೆ ಹರಿಕಥೆಗಳನ್ನು ಕೇಳಲು ಹತ್ತಿರದ ದೇವಸ್ಥಾನಗಳಿಗೆ ಹೋಗುತ್ತಿದ್ದ. ಹೈದರಾಬಾದಿನಲ್ಲಿ ಅವರು ವಾಸವಾಗಿದ್ದ ಮನೆಯ ಸಮೀಪದಲ್ಲಿ, ಸಮರ್ಥ ಪರಂಪರೆಗೆ ಸೇರ್ರಿದ ಶ್ರೀ ನಾರಾಯಣ ಮಹಾರಾಜರ ಮಠವೊಂದಿತ್ತು. ಈ ಸಂತರು ೧೨ ವರ್ಷಗಳ ಕಾಲ ಸಜ್ಜನಗಡದಲ್ಲಿ ತಪಸ್ಸುಮಾಡಿ ಶ್ರೀರಾಮನ ಸಾಕ್ಷಾತ್ಕಾರವನ್ನು ಮಾಡಿಕೊಂಡಿದ್ದರು. ಶ್ರೀಧರನ ತಂದೆಯ ಕಡೆಯ ಸಂಬಂಧದ ನಾಗೋಬರಾಯರ ಪತ್ನಿ ತ್ರಿವೇಣಿಬಾಯಿಯವರು ಈ ಸಂತ ಉಪದೇಶಾನುಗ್ರಹವನ್ನು ಪಡೆದಿದ್ದರು. ಆದ್ದರಿಂದ ಆಕೆಯೊಡನೆ ಕಮಲಾಬಾಯಿಯವರು ಶ್ರೀಧರನನ್ನು ಕರೆದುಕೊಂಡು ಮಠಕ್ಕೆ ಹೋಗಿಬರುತ್ತಿದ್ದರು. ಮಠದಲ್ಲಿ ಸಮರ್ಥರ ತೈಲಚಿತ್ರವು ಬಾಲಕನನ್ನು ಬಹುವಾಗಿ ಆಕರ್ಷಿಸಿತ್ತು; ಗಂಟೆಗಟ್ಟಲೆ ತದೇಕಚಿತ್ತದಿಂದ ಆ ಚಿತ್ರವನ್ನು ನೋಡುತ್ತಾ ಕುಳಿತುಕೊಳ್ಳುತ್ತಿದ್ದನಾ ಶ್ರೀಧರ.
ಮಠದಲ್ಲಿ ಪುರಾಣಿಕರು ರಾಮಾಯಣವನ್ನು ಹೇಳುತ್ತಿದ್ದರೆ, ಕಥಾಭಾಗವನ್ನು ಅಂದಿಗೆ ಮುಗಿಸಿ ಮುಂದಿನ ಭಾಗವನ್ನು ನಾಳೆ ಹೇಳುವೆನೆಂದರೆ ಬಿಡಲೊಲ್ಲ ಶ್ರೀಧರ. ರಾಮನಮೇಲೆ ಎಲ್ಲಿಲ್ಲದ ಪ್ರೀತಿ ಮತ್ತು ಭಕ್ತಿಭಾವ ಶ್ರೀಧರನಿಗೆ. ದೇವಸ್ಥಾನ, ಪ್ರವಚನ, ನಾಮಸಂಕೀರ್ತನೆ, ಹರಿಕಥೆ ಇವುಗಳಲ್ಲೆಲ್ಲಾ ಬಾಲನಿಗೆ ಅತೀವ ಆಸಕ್ತಿ ಬೆಳೆಯಿತು. ಪ್ರವಚನದ ತತ್ವಗಳನ್ನು ಹೀರಿಕೊಂಡ ಶ್ರೀಧರ ಮನೆಗೆ ತೆರಳಿದ ನಂತರ ಆ ಪ್ರದೇಶದ ಮಕ್ಕಳಿಗೆ ತನ್ನ ಬಾಲಭಾಷೆಯಲ್ಲೇ ಪ್ರವಚನ ನಡೆಸುತ್ತಿದ್ದ; ’ರಾಮಲೀಲಾ’ ನಾಟಕ ನಡೆಸಿ ಅದರಲ್ಲಿ ರಾಮನ ಪಾತ್ರವನ್ನು ತಾನೇ ನಿರ್ವಹಿಸುತ್ತಿದ್ದ. "ಆಂಜನೇಯ ಚಿರಂಜೀವಿಯಂತೆ, ಆತ ಈಗ ಎಲ್ಲಿದ್ದಾನೆ? ರಾಮನಲ್ಲಿ ನಿಶ್ಚಲ ಭಕ್ತಿಯಿದ್ದರೆ ಆಂಜನೇಯನಂತೇ ನಾನೂ ಎತ್ತರಕ್ಕೆ ಜಿಗಿಯಬಹುದೇ?" ಎಂಬಿತ್ಯಾದಿ ಪ್ರಶ್ನೆಗಳನ್ನು ಅಮ್ಮನಲ್ಲಿ ಕೇಳುತ್ತಿದ್ದ.
ಶ್ರೀಧರನ ಬಾಲ್ಯ ಮುಂದುವರಿದು ಶಾಲೆಗೆ ಸೇರಿಸಿದ್ದರು. ರಾಮನಾಮದ ಮಹಿಮೆಯನ್ನು ತಿಳಿದ ಶ್ರೀಧರ ಶ್ರೀರಾಮನಲ್ಲಿ ಅಚಲವಾದ ಶ್ರದ್ಧಾ-ಭಕ್ತಿಗಳನ್ನು ಹೊಂದಿದ್ದ. ಅಣ್ಣ ತ್ರ್ಯಂಬಕರು ಕುಲಪುರೋಹಿತರಾದ ಮಾರುತಿರಾಯರಲ್ಲಿ ವೇದಾಧ್ಯಯನ ಮಾಡಿ ಖ್ಯಾತ ಜ್ಯೋತಿಷಿಯೆನಿಸಿದ್ದರು; ನಾಲಿಗೆಯಲ್ಲಿ ಮತ್ಸ್ಯ ಚಿನ್ಹೆಯನ್ನು ಹೊಂದಿದ್ದ ಅವರು ಹೇಳಿದ್ದೆಲ್ಲಾ ನಿಜವಾಗುತ್ತಿತ್ತು. ತಮ್ಮ ಶ್ರೀಧರನಿಗೆ ೮ನೇ ವಯಸ್ಸಿನಲ್ಲಿ ಉಪನಯವನ್ನು ಅಮ್ಮನ ಅಣತಿಯಂತೇ ನೆರವೇರಿಸಿದರು ತ್ರ್ಯಂಬಕರು. ೨೫-೨೬ ವಯಸ್ಸಿನ ತರುಣ ತ್ರ್ಯಂಬಕರು, ಪ್ಲೇಗಿನ ನಂತರ ಊರಿಗೆ ದಾಳಿಯಿಟ್ಟ ಗುದ್ದಮ್ಮನ ಬೇನೆ[ಇನ್ ಪ್ಲುಯೆಂಜಾ]ಗೆ ಬಲಿಯಾಗಿ ಹೋದರು. ಅಮ್ಮ ಮತ್ತೆ ಕಂಗಾಲಾದರು. ಇನ್ನೂ ಪ್ರಾಥಮಿಕ ೩ನೇ ತರಗತಿಯಲ್ಲಿ ಓದುತ್ತಿದ್ದ ಶ್ರೀಧರ ಸಂಸಾರದ ಭಾರವನ್ನು ಎಳೆಯಬಲ್ಲನೇ? ಪುತ್ರವಿಯೋಗದ ದುಃಖದೊಂದಿಗೆ ನಿತ್ಯದ ಅಶನಕ್ಕೂ ಪರಿತಾಪ ಪಡುವಂಥಾ ಸ್ಥಿತಿ ಕಮಲಾಬಾಯಿಯವರದ್ದಾಯ್ತು.
ಚಿಂತಾಯಾಶ್ಚ ಚಿತಾಯಾಶ್ಚ ಬಿಂದುಮಾತ್ರ ವಿಶೇಷತಾ |
ಚಿತಾ ದಹತಿ ನಿರ್ಜೀವಂ ಚಿಂತಾ ದಹತಿ ಜೀವಿನಂ ||
ಪುತ್ರಶೋಕವೊಂದೆಡೆ, ಶ್ರೀಧರನ ಭವಿಷ್ಯದ ಚಿಂತೆ ಇನ್ನೊಂದೆಡೆ ಈ ಎರಡರ ನಡುವೆ ಕಮಲಾಬಾಯಿಯವರ ಮನಸ್ಸು ನುಗ್ಗಾಗಿಹೋಯ್ತು. ಮಗ ತ್ರ್ಯಂಬಕನನ್ನು ಕಳೆದುಕೊಂಡು ೬ ತಿಂಗಳೂ ಆಗಿರಲಿಲ್ಲ, ಅಷ್ಟರಲ್ಲೇ ಮಗಳ ಪತಿಯಮನೆಯಿಂದ ಮಗಳು ಗೋದಾವರಿ ಗತಿಸಿಹೋದ ಸುದ್ದಿ ಆಘಾತವನ್ನು ತಂದಿತ್ತು. ಚಿಂತೆಯಿಂದ ದಹಿಸಲ್ಪಡುತ್ತಿದ್ದ ಅಮ್ಮನ ಮನಸ್ಸನ್ನು ತನ್ನ ವಿವಿಧ ತತ್ವಬೋಧೆಗಳಿಂದ ಶ್ರೀಧರ ಸಮಾಧಾನಿಸಯತ್ನಿಸಿದರೂ ಚಿಂತೆ ಅವರನ್ನು ಪೂರ್ತಿಯಾಗಿ ಬಿಡಲೇ ಇಲ್ಲ. ಚಿಂತೆಯಿಂದ ಹುಟ್ಟಿದ ಬೇನೆಗಳು ಅವರ ಶರೀರ ಬಳಲುವಂತೇ ಮಾಡಿದವು. ಅಮ್ಮನ ಬಳಲುವಿಕೆಯನ್ನು ಕಂಡ ಶ್ರೀಧರನಿಗೆ ಇದ್ದ ಆಯ್ಕೆಗಳು ಎರಡು: ಒಂದೇ ಶಾಲೆಗೆ ಹೋಗುವುದನ್ನು ನಿಲ್ಲಿಸಿ ಅಮ್ಮನ ಶುಶ್ರೂಷೆಯಲ್ಲಿ ತೊಡಗಬೇಕು ಅಥವಾ ಅಮ್ಮನನ್ನು ಬಿಟ್ಟು ಶಾಲೆಗೆ ಹೋಗಬೇಕು. ಮಾತೃಸೇವೆಗಿಂತ ಮಿಗಿಲಾದ ಕರ್ತವ್ಯ ತನಗಿಲ್ಲವೆಂದು ಬಗೆದ ಶ್ರೀಧರ ಶಾಲೆಗೆ ಹೋಗುವುದನ್ನು ನಿಲ್ಲಿಸಿ ಅಮ್ಮನ ಆರೈಕೆಯಲ್ಲಿ ತೊಡಗಿಕೊಂಡ.
ಸನ್ ೧೯೨೧, ದುಂದುಭಿ ಸಂವತ್ಸರದ ಮಾರ್ಗಶೀರ್ಷ ಶುದ್ಧ ಅಷ್ಟಮಿ ಮಂಗಳವಾರ, ಮೃತ್ಯುಶಯ್ಯೆಯಲ್ಲಿರುವ ತಾಯಿಯ ತಲೆಯನ್ನು ಶ್ರೀಧರ ನೇವರಿಸುತ್ತಾ ಕುಳಿತಿದ್ದಾನೆ. ಅತನ ಪುಟ್ಟ ಕೈಗಳನ್ನು ತಮ್ಮ ಬಡಕಲು ಕೈಯ್ಯಿಂದ ಸವರಿ ಅತ್ಯಂತ ಪ್ರೇಮದಿಂದ ಎದೆಯಮೇಲಿಟ್ಟುಕೊಂಡ ಕಮಲಾಬಾಯಿಯವರು, "ರಾಜಾ! ಇನ್ನು ನಿನಗೆ ದೇವರೇ ರಕ್ಷಕ" ಎಂದು ಗದ್ಗದ ಸ್ವರದಿಂದ ಉದ್ಗರಿಸಿದರು. ಅದನ್ನು ಕೇಳಿಯೂ ಕೇಳದಂತಿದ್ದ ಶ್ರೀಧರ "ಅಮ್ಮಾ ನನ್ನಿಂದ ಯಾವ ಸೇವೆಯಾಗಬೇಕು ಹೇಳಮ್ಮಾ" ಅನ್ನುತ್ತಲೇ ಇದ್ದ. ಶ್ರೀಧರ ಯಾರೆಂಬುದನ್ನು ತನ್ನ ಅಂತರಂಗ ಅರಿತಿದೆಯೆಂಬುದರ ಕುರಿತು ಆ ತಾಯಿ ಮಾತನಾಡ ಹತ್ತಿದ್ದರು. ಶ್ವಾಸೋಚ್ವಾಸದ ಸೆಳೆತ ಜೋರಾಗಿದ್ದು ಸರಿಯಾಗಿ ಮಾತನಾಡಲು ಆಗುತ್ತಿರಲಿಲ್ಲ. ಹಾಗೆಯೇ ಸ್ವಲ್ಪ ಚೇತರಿಸಿಕೊಂಡು ಮೆಲ್ಲಗೆ, "ಶ್ರೀಧರ! ನನ್ನ ಮುದ್ದಿನ ಸಿರಿಧರ! ಮಗೂ ನೀನು ಜಗತ್ತಿನಲ್ಲಿನ ಎಲ್ಲ ಸ್ತ್ರೀಯರನ್ನೂ ನನ್ನಂತೆಯೇ ನೋಡಿ ಅವರ ಉದ್ಧಾರವನ್ನು ಮಾಡಬೇಕು. ಈ ಮುಂದೆ ನೀನು ಮಾಡುವ ಆ ಸೇವೆಯೇ ನನ್ನ ಅಖಂಡ ಸೇವೆ. ಯಾವ ಸ್ತ್ರೀಯನ್ನಾದರೂ ಸಮತ್ವದ ದೃಷ್ಟಿಯಿಂದ ನೋಡದೆ ಸ್ತ್ರೀಯೆಂಬ ಭೇದ ಕಲ್ಪನೆಯ ದೃಷ್ಟಿಯಿಂದ ನೋಡುವುದೇ ಪರಮಾರ್ಥಕ್ಕೆ ಧಕ್ಕೆ. ಶ್ರೀಧರಾ! ನಿನಗೆ ನಿರ್ಗುಣ ನಿಸ್ಪೃಹ ವೃತ್ತಿಯ ಸಮತ್ವ ಭಾವನೆಯ ಸರ್ವ ಪ್ರಕಾರವೂ ಗೊತ್ತಿರುವುದರಿಂದ ಹೆಚ್ಚು ಹೇಳುವುದೇನಿದೆ?
ನನಗೆ ಇನ್ನು ಯಾವ ಇಚ್ಛೆಯೂ ಇಲ್ಲ. ನನ್ನ ಅಂತ್ಯಕಾಲದ ಮಾತಿನಂತೆ ನಡೆದರೆ ವಂಶವು ಬೆಳೆಯುವುದು ಹೇಗೆ? ಎಂದು ಜನರು ಆಡಿಕೊಳ್ಳಬಹುದು. ಆದರೆ ಅದೆಲ್ಲವನ್ನೂ ನಾನು ಚೆನ್ನಾಗಿ ಯೋಚಿಸಿಯೇ ಹೇಳುತ್ತಿದ್ದೇನೆ. ನನ್ನ ಮುದ್ದಿನ ಕರುಳಕುಡಿಯನ್ನು ಜಗತ್ತಿನ ಉದ್ಧಾರ ಮಾಡಲೆಂದೇ ಭಾರತಾಂಬೆಯೆ ಮಡಿಲಲ್ಲಿ ಬಿಟ್ಟು ಹೋಗುತ್ತಿದ್ದೇನೆ! ನನ್ನ ಮಾತನ್ನು ನೀನು ಎಂದಿಗೂ ತೆಗೆದು ಹಾಕಿಲ್ಲ. ನಡೆಸುವೆಯೆಂಬ ದೃಢವಾದ ನಂಬಿಕೆ ನನಗಿದೆ" ಎಂದುಹೇಳಿ ಕ್ಷಣಕಾಲ ಸುಮ್ಮನಾದರು. "ಅಮ್ಮಾ ನಿನ್ನ ವಚನವನ್ನು ಪಾಲಿಸುತ್ತೇನೆ" ಎಂಬ ಶ್ರೀಧರನ ಪ್ರತಿಕ್ರಿಯೆಯನ್ನು ಕೇಳಿ ಕಮಲಾಬಾಯಿಯವರ ಮನದುಂಬಿಬಂತು. ತಡವರಿಸುತ್ತಾ, "ಶ್ರೀಧರಾ! ನನಗೆ ಯಾವ ಇಚ್ಛೆಯೂ ಉಳಿದಿಲ್ಲವಪ್ಪಾ, ನಾನು ಆನಂದಗೊಂಡಿದ್ದು ತೃಪ್ತಳಾಗಿದ್ದೇನೆ. ಅನಂತಾನಂತ ಸ್ವರೂಪದಲ್ಲಿ ಸೇರುತ್ತೇನೆ" -ಕ್ಷೀಣಸ್ವರದಲ್ಲಿ ಹೀಗೆ ಉಲಿಯುತ್ತಾ ಅನಂತದಲ್ಲಿ ಐಕ್ಯವಾದರು. ತಮ್ಮ ಬಂಧು-ಬಳಗದವರೊಡನೆ ೧೪ರ ಬಾಲಕ ಶ್ರೀಧರ ತಾಯಿಯ ಅಂತ್ಯಸಂಸ್ಕಾರವನ್ನು ವಿಧಿವತ್ತಾಗಿ ನಡೆಸಿದ.
ತಾಯಿ, ತಂದೆ, ಅಕ್ಕ, ಅಣ್ಣ ಎಲ್ಲರನ್ನೂ ಕಳೆದುಕೊಂಡ ಶ್ರೀಧರ, ಚಿತ್ತಸ್ಥೈರ್ಯವನ್ನು ಕಳೆದುಕೊಳ್ಳದೇ, ದೊಡ್ಡಪ್ಪ ದೇಸಾಯರ ಸಹಕಾರದಿಂದ ಗುಲ್ಬರ್ಗಾದಲ್ಲಿ ತನ್ನ ಮಾಧ್ಯಮಿಕ ಓದಿಗಾಗಿ ಶಾಲೆಗೆ ಸೇರಿದ. ೬ನೇ ತರಗತಿಯಲ್ಲಿ ಶ್ರೀಧರನಿರುವಾಗ, ತರಗತಿಯ ಮಕ್ಕಳಿಗೆ ಜೀವನದ ಧ್ಯೇಯಗಳನ್ನು ಬರೆಯುವಂತೇ ಶಿಕ್ಷಕರು ಸೂಚಿಸಿದರು. ಮನಸ್ಸಿನಲ್ಲಿ ಇದ್ದುದನ್ನು ಬರೆದರೆ ಉಳಿದವರ ಅಪಹಾಸ್ಯಕ್ಕೆ ಈಡಾದೇನೋ ಎಂಬ ಅಳುಕಿನಲ್ಲೇ ಶ್ರೀಧರ "To obtain complete grace of God and to serve mankind is the goal of my life" [ಪರಮಾತ್ಮನ ಸಂಪೂರ್ಣ ಕೃಪೆಯನ್ನು ಪಡೆಯುವುದು ಮತ್ತು ಜನಸೇವೆ ಮಾಡುವುದೇ ನನ್ನ ಗುರಿ] ಎಂದು ಎಂದು ಬರೆದೇಬಿಟ್ಟಿದ್ದ.
ಶ್ರೀಧರನಿದ್ದವ ಭಗವಾನ್ ಸಮರ್ಥ ಶ್ರೀಧರಸ್ವಾಮೀ ಮಹಾರಾಜರೆನಿಸುವವರೆಗೆ ಶ್ರೀಧರರು ನಡೆದ ಹಾದಿ ಬಹಳ ದುರ್ಗಮವಾದುದು. ಅವರ ಹುಟ್ಟಿನಿಂದ ಮಾಧ್ಯಮಿಕ ಶಾಲೆಯ ವರೆಗಿನ ವಿಷಯವನ್ನು ಅತಿಸಂಕ್ಷಿಪ್ತವಾಗಿ ಹೇಳಲು ಹೊರಟ ಪ್ರಯತ್ನವೇ ಇಷ್ಟು ಉದ್ದದ ಲೇಖನಕ್ಕೆ ಕಾರಣವಾಯ್ತು. ಇಷ್ಟಿದ್ದೂ ಅವರ ಬಾಲಾಲೀಲೆಗಳನ್ನಾಗಲೀ, ಮಾಧ್ಯಮಿಕ ಶಾಲೆಯ ಮುಂದಿನ ಹಂತದ ವಿಷಯಗಳನ್ನಾಗಲೀ, ಸಾಧುಜೀವನ-ಎದುರಿಸಿದ ಪರೀಕ್ಷೆಗಳು-ಉಪವಾಸ-ಸಂನ್ಯಾಸ-ತಪಸ್ಸು-ಸಾಧನೆ-ಶಿಷ್ಯಾನುಗ್ರಹ-ಅಘಟಿತಘಟನಾ ಕೌತುಕಗಳ ಬಗ್ಗೆ ಬರೆಯುವುದು ಬಹಳ ವಿಸ್ತಾರದ ಇತಿಹಾಸದ ವಿಷಯ. [’ಸದ್ಗುರು ಭಗವಾನ್ ಶ್ರೀಶ್ರೀಧರ ಚರಿತ್ರೆ’ ಎಂಬ ಸಾಂಗ್ರಾಹ್ಯ ಗ್ರಂಥವು ವರದಹಳ್ಳಿಯ ಶ್ರೀಧರಾಶ್ರಮದಲ್ಲಿಯೂ ಮತ್ತು ಬೆಂಗಳೂರಿನ ವಸಂತಪುರದಲ್ಲಿರುವ ಶ್ರೀಧರ ಪಾದುಕಾ ಮಂದಿರದಲ್ಲಿಯೂ ಲಭ್ಯ, ಆಸಕ್ತ ಆಸ್ತಿಕ ಮಹಾಶಯರು ಅದನ್ನು ಖರೀದಿಸಿ ಓದಿಕೊಳ್ಳಬಹುದಾಗಿದೆ].ಶ್ರೀಧರರು ಪ್ರತೀ ಹಂತದಲ್ಲಿಯೂ ತಾನು ಭಗವಂತನ ಪ್ರತಿರೂಪವೆಂಬುದನ್ನು ತನ್ನ ಕೃತಿಗಳಿಂದಲೇ ಹೇಳಿದರೇ ವಿನಃ ನೇರವಾಗಿ ತನ್ನ ಬಗೆಗೆ ಹೇಳಿಕೊಳ್ಳಲಿಲ್ಲ. ಬಾಲ್ಯದ, ಪೂರ್ವಾಶ್ರಮದ ಕಷ್ಟಕೋಟಲೆಗಳು ಶ್ರೀಧರರ ವಿರಕ್ತಮಾರ್ಗಕ್ಕೆ ಸೋಪಾನವಾದವು. ತನ್ನ ವೈಯ್ಯಕ್ತಿಕ ದೇಹದ ಬಾಧೆಗಳನ್ನು ಮೀರಿ, ದೇಶದುದ್ದಗಲಕ್ಕೂ ಚಲಿಸಿ, ಬಹುಜನರ ತಾಪ-ತ್ರಯ [ಅಧಿದೈವಿಕ, ಅಧಿಭೌತಿಕ ಮತ್ತು ಆಧ್ಯಾತ್ಮಿಕ ಸಮಸ್ಯೆ]ಗಳನ್ನು ಬಗೆಹರಿಸಿದವರು.
ಸದ್ಗುರು ಭಗವಾನರು ೧೯೫೪ ರಲ್ಲಿ ಸಾಗರ ಪಟ್ಟಣದಿಂದ ೫ ಕಿ.ಮೀ. ದೂರದಲ್ಲಿರುವ ’ವದ್ದಳ್ಳಿ’ [ಒದ್ದಳ್ಳಿ]ಎಂಬ ದಂಡಕಾರಣ್ಯವನ್ನು ಏಕಾಂತಕ್ಕಾಗಿ ಆಯ್ದುಕೊಂಡರು. ಅಗಸ್ತ್ಯ ಮುನಿಗಳ ತಪೋಭೂಮಿಯಾಗಿದ್ದ ಆ ಪ್ರದೇಶದಲ್ಲಿ ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ದುರ್ಗಾಂಬಾ ದೇವಸ್ಥಾನವಿದ್ದು, ರಕ್ಕಸರನ್ನು ದೇವಿ ತನ್ನ ಕಾಲಿನಿಂದ ಒದ್ದದ್ದರಿಂದ ’ವದ್ದಳ್ಳಿ’ ಎಂದು ಜನರ ಬಾಯಲ್ಲಿ ಅದು ನೆಲೆನಿಂತಿತು ಎನ್ನುತ್ತದೆ ಸ್ಥಳಪುರಾಣ. ಗುರುಗಳು ಅಲ್ಲಿಗೆ ಬಂದಾಗ, ದೇವಸ್ಥಾನದ ಮುಕ್ತದ್ವಾರದೊಳಹೊಕ್ಕು ಗರ್ಭಗುಡಿಯಲ್ಲಿ ಹೋಗಿ ಕುಳಿತುಕೊಳ್ಳುವ ಹುಲಿಗಳಿದ್ದವಂತೆ; ಆಗೀಗ ಹೆದರುತ್ತಲೇ ಬಂದು ಪೊಜೆಗೆ ಪ್ರಯತ್ನಿಸಿ ಹೋಗುತ್ತಿದ್ದ ಅರ್ಚಕರನ್ನು ಬಿಟ್ಟರೆ ಜನ ಓಡಾಡುವ ಜಾಗ ಅದಾಗಿರಲಿಲ್ಲ. ಹುಲಿಗಳನ್ನು ತಮ್ಮ ತಪೋಬಲದಿಂದ ಸ್ಥಳಾಂತರಿಸಿ ದೇವಿಯ ಪೂಜಾ ಕೈಂಕರ್ಯಗಳು ಸಾಂಗವಾಗಿ ನಡೆಯುವಂತೇ ನೋಡಿಕೊಂಡು, ಅದೇ ದೇವಸ್ಥಾನದ ಹೊರಭಾಗದಲ್ಲಿ ಶ್ರೀಧರರು ತಮ್ಮ ವಸತಿ ಇಟ್ಟುಕೊಂಡು ಪ್ರವಚನಗಳನ್ನೂ ನಡೆಸಿದರು. ಕಾಲಾನಂತರ ಲೋಕಾಂತದಿಂದ ಏಕಾಂತಕ್ಕೆ ಭಂಗವುಂಟಾಗಬಾರದೆಂಬ ಅನಿಸಿಕೆಯಿಂದ ತಳಕುಟಿ, ಮಧ್ಯಕುಟಿ ಮತ್ತು ಶಿಖರಕುಟಿ ಎಂಬ ಮೂರು ಜಾಗಗಳಲ್ಲಿ ತಪಸ್ಸನ್ನು ನಡೆಸಿದರು. ಶಿಖರಕುಟಿಯ ಗುಹೆಯಪಕ್ಕದಲ್ಲಿ ಧರ್ಮಧ್ವಜವನ್ನು ಸ್ಥಾಪಿಸಿದರು. ರಾಮದೇವಸ್ಥಾನ, ಪುಷ್ಕರಣಿಗಳು, ವ್ಯಾಸಗುಹೆ, ಹಲವು ಯತಿಗಳ ಸಮಾಧಿಗಳು, ಆಂಜನೇಯನ ಸನ್ನಿಧಿ ಮೊದಲಾದ ವೈಶಿಷ್ಟ್ಯಗಳನ್ನು ಹೊಂದಿದ ವರದಹಳ್ಳಿ ಪ್ರಮುಖ ಧಾರ್ಮಿಕ ಕೇಂದ್ರವಾಗಲಿದೆಯೆಂದು ಗುರುಗಳು ಹೇಳಿದ್ದು, ಈಗ ಫಲಶ್ರುತಿ ಕಾಣುತ್ತಿದೆ.
ಪರಮಾತ್ಮನ ಪೂರ್ಣ ಸಗುಣರೂಪವಾಗಿ ಪ್ರಕಟಗೊಂಡ ಶ್ರೀಧರ ಭಗವಾನರು, ಆದಿಶಂಕರರಂತೇ ಆಸೇತು ಹಿಮಾಚಲ ಹಲವು ಬಾರಿ ಯಾತ್ರೆನಡೆಸಿದರು, ದರ್ಶನಕ್ಕೆ ಬಂದ ಆರ್ತರ-ಬಡಜನರ-ರೋಗಿಷ್ಟರರೆಲ್ಲರಿಗೆ ಆಯಾಯ ಕ್ಷಣದಿಂದಲೇ ಅವರವರ ಯಾತನೆಗಳಿಂದ ಮುಕ್ತಿಯನ್ನು ಕರುಣಿಸಿದವರು. ಮೇಲ್ಕಂಡ ಅವರ ಛಾಯಾಚಿತ್ರವನ್ನು ಮೂಲಪ್ರತಿ-ದೊಡ್ಡಗಾತ್ರದಲ್ಲಿ ನೋಡಿದಾಗ ಎಡಮುಂಗುರುಳಲ್ಲಿ ಶಂಖದ ಆಕೃತಿ, ಬಲಗಿವಿಯಲ್ಲಿ ನಾರಸಿಂಹ ಮುಖದ ಆಕೃತಿ, ಬಲಗೈ ಹಸ್ತದಲ್ಲಿ ತ್ರಿಶೂಲಾಕೃತಿ ಇತ್ಯಾದಿಯಾಗಿ ಕೆಲವು ಆಕಾರಗಳು ಸ್ಪಷ್ಟವಾಗಿ ಗೋಚರಿಸುವುದನ್ನು ಕಾಣಬಹುದಾಗಿದೆ. ೫೦ ವರ್ಷಗಳ ಹಿಂದಿನ ಚಿತ್ರ ಕೃತ್ರಿಮ ಸೃಷ್ಟಿಯಲ್ಲ, ತಿದ್ದಿದ್ದಲ್ಲ! ಪ್ರಮಾದಿ ಸಂವತ್ಸರದ ಚೈತ್ರ ವದ್ಯ ದ್ವಿತೀಯಾ ಗುರುವಾರ ದಿನಾಂಕ ೧೯-೦೪-೧೯೭೩ರಂದು ಬೆಳಗಿನ ೯ ಘಂಟೆಗೆ ತಮ್ಮ ಭೌತಿಕ ಶರೀರವನ್ನು ವಿಸರ್ಜಿಸಿದ ಸಮರ್ಥ ಶ್ರೀಧರರ ಆರಾಧನೆ [೨೭-೦೪-೨೦೧೩]ಯ ಪ್ರಯುಕ್ತ ಈ ಲೇಖನ. ಶ್ರೀಧರರು ಕನ್ನಡನಾಡಿನಲ್ಲಿ ಹುಟ್ಟಿದ್ದು ನಮ್ಮ ಅದೃಷ್ಟ, ಮೇಲಾಗಿ ಅವರ ತಪೋಭೂಮಿಯಾಗಿ ವರದಪುರವನ್ನು ಆಯ್ಕೆಮಾಡಿಕೊಂಡಿದ್ದು ಇನ್ನೊಂದು ಸೌಭಾಗ್ಯ. ಸ್ವಾನಂದಾಮೃತದಲ್ಲಿ ತೃಪ್ತರಾದ ಭಗವಾನರು ಸಕಲರ ಸರ್ವಾಭೀಷ್ಟಗಳನ್ನೂ ನೆರವೇರಿಸಲಿ ಎಂಬುದು ಈ ಸಂದರ್ಭದಲ್ಲಿ ಗುರುಗಳಲ್ಲಿ ಪ್ರಾರ್ಥಿಸಿ, ಮಾಡುವೆ ಹಾರೈಕೆಯಾಗಿದೆ.
ನಮಃ ಶಾಂತಾಯ ದಿವ್ಯಾಯ ಸತ್ಯಧರ್ಮ ಸ್ವರೂಪಿಣೇ|
ಸ್ವಾನಂದಾಮೃತ ತೃಪ್ತಾಯ ಶ್ರೀಧರಾಯ ನಮೋ ನಮಃ ||
ನಮಃ ಶಾಂತಾಯ ದಿವ್ಯಾಯ ಸತ್ಯಧರ್ಮ ಸ್ವರೂಪಿಣೇ|
ReplyDeleteಸ್ವಾನಂದಾಮೃತ ತೃಪ್ತಾಯ ಶ್ರೀಧರಾಯ ನಮೋ ನಮಃ ||