ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Saturday, June 18, 2011

ಬರೇರಾಮ !


ಬರೇರಾಮ !

ಬರೇರಾಮ ಎಂಬುದು ತಾಜಾ ಹೆಸರು. ಎಲ್ಲದರಲ್ಲೂ ನವನಾವೀನ್ಯತೆ ಬಯಸುವ ನವಪೀಳಿಗೆಯ ಜನೆತೆಗೆ ನಾನೂ ಏನಾದರೂ ಕೊಡುಗೆಯಾಗಿ ನೀಡಬೇಕೆಂಬ ಪೈಪೋಟಿಯಿಂದ ನೀಡಿದ ಹೆಸರು! ರಾಮನ ಹೆಸರಿಗೆ ಜೊತೆಗೆ ಏನೇನನ್ನೋ ಸೇರಿಸಿಕೊಂಡು ಹೊಸದನ್ನು ಕಂಡ ಜನ ನಮ್ಮವರು. ಹಳದೀರಾಮ ಎಲ್ಲರಿಗೂ ಕುಚ್ ಕಟ್ಟಾ- ಕುಚ್ ಮೀಟಾ ಸಿಹಿ ಹಂಚುತ್ತಾನಾದರೆ ಗಂಗಾರಾಮ ಬೆಂಗಳೂರಿಗರಿಗೆ ಸಿಂಹಸ್ವಪ್ನ! ಮಂಗಾರಾಮ ಹಿಂದೊಮ್ಮೆ ಬಿಸ್ಕತ್ತುಗಳನ್ನೂ ವೇಫರ್ಸ್‍ಗಳನ್ನೂ ತಯಾರಿಸುತ್ತಿದ್ದ. ಶ್ರೀರಾಮ ಚಿಟ್‍ಫಂಡ್ ನಡೆಸುತ್ತಾನೆಂಬ ಮಾತ್ರಕ್ಕೆ ಈತ ತ್ರೇತಾಯುಗದವನಲ್ಲ! ಇನ್ನುಳಿದಂತೇ ಜಲರಾಮ, ಬಲರಾಮ, ಗಣೇಶರಾಮ, ಮುಕುಂದ್‍ರಾಮ, ಅನಂತ್‍ರಾಮ, ಆನಂದ್‍ರಾಮ, ಲಕ್ಷ್ಮೀರಾಮ, ತುಳಸೀರಾಮ, ಸುಬ್ಬರಾಮ, ಗೋವಿಂದ್‍ರಾಮ, ವಿನಾಯಕರಾಮ, ಸಿದ್ಧರಾಮ!

ಅಯ್ಯಯ್ಯಯ್ಯೋ ಹರೇರಾಮ!

ಹಳೆಯ ಹಾಡುಗಳಿಗೆ ಫ್ಯುಶನ್ ಮ್ಯೂಸಿಕ್ ಜೋಡಿಸಿ ಮಜಾ ಪಡೆದಂತೇ ಈ ನಮ್ಮ ಹೊಸ ಪೀಳಿಗೆಯ ಹೈಕಳು ರಾಮನ ಹೆಸರಿಗೆ ಮುಂಭಡ್ತಿ ಕೊಟ್ಟು ಹಲವು ಸಾವಿರ ’ರಾಮಗಳೇ’ ಸೃಷ್ಟಿಯಾಗಿವೆ. ಇನ್ನು ಅತ್ತಕಡೆ ಹೊರಟರೆ ರಾಮಕೃಷ್ಣ, ರಾಮನಾರಾಯಣ, ರಾಮಗೋಪಾಲ, ರಾಮಚೈತನ್ಯ, ರಾಮೇಶ್ವರ, ರಾಮಪ್ರಸಾದ, ರಾಮಮಾಧವ ಅಂತೂ ಮುಗಿಯದ ಕಥೆ!

ರಾಮನಕಥೆಯಯನ್ನಾದರೂ ಹೇಳಿ ಮುಗಿಸಿಬಿಡಬಹುದು ಆದರೆ ರಾಮನಿಗಂಟಿದ ಈ ನಾಮದ ಮಹಿಮೆಯನ್ನು ಮುಗಿಸಲು ಮನುಷ್ಯಮಾತ್ರರಿಂದ ಸಾಧ್ಯವಿಲ್ಲವೇನೋ. ಯಾಕೆಂದರೆ ರಾಮನನ್ನು ಹಿಂದಕ್ಕೋ ಮುಂದಕ್ಕೋ ನಡುವೆಯೋ ಸೇರಿಸಿ ಇನ್ನೂ ಅದೆಷ್ಟೋ ಹೆಸರುಗಳು ಬರಬಹುದಾಗಿದೆ. ರಸ್ತೆಯಲ್ಲಿನಡೆದು ಹೋಗುತ್ತಿದ್ದಾಗ ’ಮಲಬಾರದವರ ಹೋಟೆಲ’ ಕಣ್ಣಿಗೆ ಬಿತ್ತು. ಉತ್ತರಕರ್ನಾಟಕದ ಕಡೆ ಒಮ್ಮೆ ಹೊರಟರೆ ಹಲವಾರು ಈ ರೀತಿಯ ಹೆಸರುಗಳೂ ಸಿಗುತ್ತವೆ. ’ಏಟಿಯಮ್ಮ’ ಇತ್ತೀಚೆಗೆ ಸೇರ್ಪಡೆಗೊಂಡ ಹೊಸ ಹೆಸರು. ಸೂಕ್ಷ್ಮವಾಗಿ ನೋಡುತ್ತಾ ಹೋದರೆ ’ಮಿಲ್ಕ ಭೂತ’, ’ಊರ್ವಶಿ ಅರವಿ ಶಾಪ’ , ’ಮಧುರಾಜ ಕಟ್ಟಿಂಗ ಶಾಪ’,’ಸುಧೀರ ಪಾನ ಬೀಡಿ ಸ್ಟಾಲ’, ’ದಂಡಗುಂಡ ಬಸವೇಶ್ವರ ಮೆಸ್ಸ’, ’ಮೆಣಸಿನಕಾಯಿ ಬ್ರದರ್ಸ’........ಓಹೊಹೊಹೊ ಮುಗೀವಲ್ದು ಬಿಡ್ರೀಯಪಾ!

ಹೆಸರಿನ ಕೊಡುಗೆಯಲ್ಲಿ ಮಲಬಾರದವರದ್ದೇ ನಿಚ್ಚಳ ಬಹುಮತ! ಯಾಕೆಗೊತ್ತೋ ಅಲ್ಲಿ ಅಪ್ಪನ ಒಂದು ಕಾಲು ಮುರಿದು ಅಮ್ಮನ ಕೈಮುರಿದು ಸೇರಿಸಿದರೆ ಬಿಸಿಬಿಸಿ ಹೊಸಾಹೆಸರು ಸಿದ್ಧ! ಇದೇನ್ರೀ ಅಲ್ಲಿ ಅಪ್ಪಂದೂ ಅಮ್ಮಂದೂ ಕೈಕಾಲು ಮುರೀತಾರಾ ಅಂದ್ರಾ ? ನಾ ಹಾಗೇನೂ ಹೇಳ್ಲಿಲ್ಲಾ ಸ್ವಾಮೀ ಅಪ್ಪ-ಅಮ್ಮನ ಹೆಸರಿನ ಒಂದೊಂದು ಭಾಗವನ್ನು ಸೇರಿಸಿ ಎಂದು ಪರ್ಯಾಯವಾಗಿ ಹೇಳಿದೆನಷ್ಟೇ. ಉದಾಹರಣೆಗೆ ಅಪ್ಪನ ಹೆಸರು ಅಜಿತ್ ಮತ್ತು ಅಮ್ಮನ ಹೆಸರು ಸಜಿತಾ ಎಂದಿದ್ದರೆ ಮಗ ’ಅಜಿಸಜಿ’ ಆಗಬಹುದು! ಆಮೇಲೆ ಮುಂದಕ್ಕೆ ಮೋನು ಸೇರಿಸಿಬಿಟ್ಟರೆ ನಾವು ಆಂಧ್ರದಲ್ಲೋ ಕನ್ನಡದಲ್ಲೋ ’ಬಾಬು’ ಎಂದಹಾಗೇ. ಅಜಿಸಜಿ ಮೋನು - ಅಹಹ ಎಂಥಾ ಅದ್ಭುತ ಹೆಸರು. ಮಲಬಾರದವರು ಹೆಸರಿಡುವ ವಿಷಯದಲ್ಲಿ ತಲೆಕೆಡಿಸಿಕೊಳ್ಳುವ ಜನ ಅಲ್ಲ. ಹೀಗಾಗಿ ಇವರಲ್ಲಿ ಭಿನ್ನಮತವಂತೂ ಸದ್ಯಕ್ಕಿಲ್ಲ ಬಿಡಿ!

ಕರ್ನಾಟಕ ಸಂಗೀತದ ಅಭಿಮಾನೀ ಪಂಡಿತರೊಬ್ಬರು ತಮ್ಮ ಹೆಣ್ಣು ಮಕ್ಕಳಿಬ್ಬರಿಗೆ ಹೆಸರಿಟ್ಟರಂತೆ ಏನುಗೊತ್ತೋ? ’ಪೂರ್ಣಚಂದ್ರಿಕಾ ಸುಹಾಸಿನೀ’, ’ರಮ್ಯಸಾರಿಕಾ ಸುಭಾಷಿಣೀ’. ದಿನವೂ ಕರೆಯುವುದು ಎಷ್ಟು ಸುಲಭ ನೋಡಿ. ಹಾಗೆನೋಡಿದರೆ ನಮ್ಮಲ್ಲಿ ಪೂರ್ಣಚಂದ್ರ ತೇಜಸ್ವಿಗಳಿರಲಿಲ್ಲವೇ? ಆದರೆ ಆ ಹೆಸರಿನ ಆದಿಭಾಗವನ್ನು ಬಿಟ್ಟು ಅಂತ್ಯಭಾಗವನ್ನು ಮಾತ್ರ ಜನ ಕರೆಯತೊಡಗಿದ್ದರು ಮತ್ತು ಜನರಿಗೆ ಆ ವ್ಯಕ್ತಿ ಈ ಹೆಸರಿಂದಲೇ ಗೊತ್ತೇ ಹೊರತು ಪೂರ್ಣವಾಗಿ ಹೇಳಿದರೂ " ಹಾಗಂದ್ರೆ ಯಾರು ? " ಎಂದು ಪ್ರಶ್ನಿಸಿದರೂ ತಪ್ಪಿಲ್ಲ!

ಇನ್ನು ಹೆಸರಿಗೂ ವ್ಯಕ್ತಿತ್ವಕ್ಕೂ ಅತ್ಯಂತ ಸಾಮೀಪ್ಯವುಳ್ಳ ಸಂಗ್ತಿ ಹೇಳ್ಲೇ ಬೆಕಲ್ಲ? ಕೂದಲು ಅತಿ ಕಮ್ಮಿ ಇದ್ದ ಕಾಕಮಂಡೆಯವಳಿಗೆ-ನಾಗವೇಣಿ, ಬಿಳಿಗೂದಲು ತಲೆತುಂಬಾ ಇರುವವಳಿಗೆ ಕೃಷ್ಣವೇಣಿ, ಎಲ್‍ಎಲ್‍ಟಿಟಿ [ಲುಕಿಂಗ್ ಟು ಲಂಡನ್ ಟಾಕಿಂಗ್ ಟು ಟೋಕಿಯೋ !-ಅಂದರೆ ಮಾಲಗಣ್ಣು ಅಥವಾ ಮಳ್ಳೆಗಣ್ಣು ಎನ್ನುತ್ತೇವಲ್ಲ ಅಂಥವರಿಗಾಗಿ ಯಾರೋ ಹೊಸೆದಿದ್ದು ] ಹುಡುಗಿಗೆ ಮೀನಾಕ್ಷಿ, ಕಣ್ಣುಗುಡ್ಡೆ ಹೊರಬರುಷ್ಟು ದೊಡ್ಡ ಕಣ್ಣವಳಿಗೆ ಕಮಲಾಕ್ಷಿ,ಈಗ ಸಾಯುತ್ತಾನೋ ಆಗಸಾಯುತ್ತಾನೋ ಅಂಥಿರುವವನಿಗೆ ಬಲರಾಮ, ೨೪/೭ ಎಣ್ಣೆಯನ್ನು ಧರಿಸಿದವನಿಗೆ ಕೌಶಿಕ್, ಏನೂ ಕೆಲಸಮಾಡದ ಸೋಮಾರಿಗೆ ದಕ್ಷ, ತೊಳೆದಿಟ್ಟ ಕೆಂಡದಂತಿರುವ ಜನಕ್ಕೆ ಸುಂದರ, ಮುಖದಲ್ಲಿ ಕಪ್ಪು ಕಲೆಯುಳ್ಳವಳಿಗೆ ಚಂದ್ರಕಲಾ, ಬಡತನವೇ ಹಾಸುಹೊಕ್ಕಾಗಿರುವ ಭಿಕಾರಿಗೆ ಕುಬೇರ, ಕೆಜಿ ಭಾರ ಎತ್ತಲೂ ಹರಿಯದವಗೆ ಭೀಮಸೇನ, ರಾವಣನ ರೋಮಕ್ಕೂ ಲೆಕ್ಕಸಿಗದ ವ್ಯಕ್ತಿಗೆ ಲಂಕೇಶ ....ಇವೆಲ್ಲಾ ಸರ್ವೇಸಾಮಾನ್ಯ.

ನೀವೂ ತಕರಾರು ಮಾಡಬಹುದು: "ಇಟ್ಕೊಳ್ತಾರೆ ಬಿಡ್ರೀ ಇನ್ನೇನು ಇವಾನ, ಥಾಮಸ್ಸು, ಪಿಂಟೋ ಅಂತ ಎಲ್ರೂ ಅಮೇರಿಕಾ ಹೆಸರುಗಳ ಥರದಲ್ಲೇ ಇಟ್ಕೊಳಕಾಗುತ್ತಾ. ಏನೋ ಅವರು ತೋರಿಸಿದ ಜೀವನ ಶೈಲಿಯೇನೋ ಇಷ್ಟವಾಯ್ತಪ್ಪಾ ಅಂದಮಾತ್ರಕ್ಕೆ ನಾವೆಲ್ಲಾ ಭಾರತೀಯರಲ್ಲವೇ ? " ಅನುಕೂಲವಾದ ಹಾಗೇ ಬಳಸುವುದು ಸೂಕ್ತ ಬಿಡಿ. ಬಿಪಾಶಾ [ಬಿಚ್ಹಾಕೋ ಬಸು] ನಾತಾಶಾ ಹತಾಶಾ ಮಲ್ಲಿಕಾ ಶೇರ್ಯಾವತ್ತು ಎಲ್ಲಾ ಇಲ್ಲವೇ ? ರವೀ-ನಾ ಕರೀ-ನಾ ಕತ್ರೀ-ನಾ ಇಲ್ಲವೇ? ಕಂಗನಾ ರನ್ನೌಟು ಇಲ್ಲವೇ ? ದೇವರಿಗೂ ಕೈಲಿ ಗನ್ನು ಕೊಟ್ಟು ’ದೇವಗನ್’ ಮಾಡಿಲ್ಲವೇ? ದೆವ್ವದ ಹಾಗೇ ಇರುವ ’ದೇವಳ್’ ಇಲ್ಲವೇ ? "ಮಿನಿಷಾ ಲಾಂಬ ಕೂಕಣಿ ಕಾಂಬ " ಅಂತಾರೆ ನಮ್ಮ ಕುಂದಾಪ್ರ ಪಡ್ಡೆಗ್ಳು.

ಇನ್ನು ಅನ್ವರ್ಥಕವಾಗಿ ಬಂದ ಹೆಸರುಗಳಿಗೆ ನಾವು ಶರಣೆನ್ನಲೇಬೇಕು. ಕೇಬಲ್ ಪರಮೇಶಿ, ಬ್ಯಾಟರಿಬ್ರಹ್ಮ, ಕಳ್ ಮಂಜ, ಲೂಸ್ ಮಾದ, ಬೆಂಕಿ ಮಾದೇವು, ಸ್ನೇಕ್ ಸೋಮಣ್ಣ, ಮುದ್ದೆ ದ್ಯಾವು, ಟ್ಯಾಂಕರ್ ಸೀನಪ್ಪ, ಪೇಪರ್ ಲಕ್ಷ್ಮಣು, ಫೊಟೋ ಗುರುರಾಜ, ದೇವಸ್ಥಾನ ಮಲ್ಲೇಶಿ, ಕಂಬದ ಮುಂಡಿಗೆ ಮಾಧವ, ತಪರಾಕಿ ರಾಮಣ್ಣ , ಫಿರಂಗಿ ಚಂದ್ರು , ಬಿಜೆಪಿ ಶಾಂತಣ್ಣ, ದಳ ಬಂಡೆಪ್ಪ, ಕೈ ಕೃಷ್ಣಪ್ಪ [ ಈ ಪೈಕಿ ಕೊನೆಯ ಮೂರು ಹೆಸರು ಪರ್ಮನೆಂಟ್ ಅಲ್ಲಾ ಎಂಬುದು ಕುದುರೆ ವ್ಯಾಪಾರ ತಜ್ಞರು ಹೇಳುವ ಮಾತು !] ಇವೆಲ್ಲಾ ಅವರವರ ವೃತ್ತಿಗೋ ಹವ್ಯಾಸಕ್ಕೋ ಅಥವಾ ಇನ್ಯಾವುದಕ್ಕೋ ಸಂಬಂಧಿಸಿದಂತೇ ರೂಢಮೂಲವಾಗಿ ಬಂದಿರುವುದರಿಂದ ಅವುಗಳ ಬಗ್ಗೆ ಅಪದ್ಧವಾಗಿ ಏನಾದರೂ ಹೇಳಿದರೆ ಅಪಚಾರವಾದೀತು ಶಾಂತಂ ಪಾಪಂ ಶಾಂತಂ ಪಾಪಂ .

ಇನ್ನು ಹೆಸರನ್ನು ಹುಡುಕಿಕೊಡೋ ಸಲಹೆಗಾರರೂ ಇದ್ದಾರೆ ! ಆಧಾರವೇ ಇಲ್ಲದ ’ಸಂಖ್ಯಾಶಾಸ್ತ್ರ’ವೆಂಬ ಮರ್ಕಟಶಾಸ್ತ್ರವೊಂದರ ಆಧಾರದಮೇಲೆ ಹೆಸರು ಬದಲಾವಣೆಗೂ ಸಲಹೆ ಸಿಗುತ್ತದೆ. ಹೆಸರಿನ ಮೇಲೆ ಅವಲಂಬಿಸಿ ತಿರುಪತಿಗೆ ಕರೆದುಕೊಂಡು ಹೋಗಿ ಮರುಮಾಂಗಲ್ಯಧಾರಣೆ ಮಾಡಿಸುವ ಜೈಶ್ರೀನಿವಾಸನ್ ಇದ್ದಾರೆ! ಮೂರುನಾಮದ ವೆಂಕಟರಮಣ ಸ್ವಾಮೀ ಗೋವಿಂದಾ ಗೋವಿಂದ! ಹರೇ ಶ್ರೀನಿವಾಸ, ಎಷ್ಟು ಶ್ರೀನಿವಾಸರು ಇಲ್ಲಿ ಸೀನನೋ ಸೀನುವೋ ಆಗಿಲ್ಲ? ಇದು ಎಂಥಾ ಅದ್ಭುತ ಲೋಕವಯ್ಯಾ! ನಿಮಗೆ ಯಾವ ಬಜೆಟ್ ನಲ್ಲಿ ಹೆಸರುಬೇಕು ಹೇಳಿ! ಕೆಂಪೇಗೌಡರು ಕಟ್ಟಿದ ಈ ನಿಮ್ಮ ಬೆಂಗಳೂರಿನಲ್ಲಿ ಎಲ್ಲವೂ ಲಭ್ಯ; ಎಲ್ಲವೂ ಒಂದೇ ಸೂರಿನಡಿಯಲ್ಲಿ! ಕಾಂಚಾಣಂ ಕಾರ್ಯಸಿದ್ಧಿಃ !

ಅಂತೂ ರಾಮಾ ನಿನ್ನ ನಾಮದಿಂದ ಹೊರಟ ಈ ’ರಾಮಾಯಣ’ ಅಭಿಯಾನ ನಡೆಯುತ್ತಿರುವಾಗಲೇ ಶಿವಪೂಜೆಯಲ್ಲಿ ಕರಡಿ ಬಂದಹಾಗೇ ಹಳದೀರಾಮನ ಸೋನ್ ಪಾಪಡಿ ಬಂತು! ಹರೇರಾಮ....ಅಲ್ಲಲ್ಲ... ಬರೇರಾಮ!