ಸಮಾಜಿಕ ಖಂಡನೆ
ಗುಂಡು ಕಲ್ಲನು ಕಟ್ಟಿ ತಳ್ಳುವುದು ನೀರಿನಲಿಭಂಡ ಲೋಭೀ ಧನದ ತುಂಡೂ ವ್ಯಯಿಸದನ
ಉಂಡು ಮರೆತುಜ್ಜುಗವ ಮಲಗುವ ಭಿಕಾರಿಯಂ
ಕಂಡೊಡನೆ ಖಂಡಿಸೈ | ಜಗದಮಿತ್ರ
ಗಂಡತಾನೆಂದೆಂಬ ಹಮ್ಮು ಬಿಮ್ಮಲಿ ಬೀಗಿ
ಹೆಂಡತಿಯ ಹೆದರಿಸುತ ಗೃಹದಿ ಉರಿಯುವನ
ಮೊಂಡುಬುದ್ಧಿಯ ತೋರಿ ಮಕ್ಕಳನು ಹಿಂಸಿಪನ
ಬಂಡೆದ್ದು ತಿದ್ದುವುದು | ಜಗದಮಿತ್ರ
ದಂಡೆದ್ದು ಅಪ್ಪಳಿಸಿದಾ ಕಷ್ಟಗಳ ಸಹಿಸಿ
ಪುಂಡ ಮಗನಂ ಕಂಡು ನೊಂದ ಪಾಲಕರ
ಕೊಂಡೊಯ್ದು ವೃದ್ಧರಾಶ್ರಮಕಟ್ಟಿ ಬರುವಂಥ
ಗಂಡನ್ನು ದೂರವಿಡು | ಜಗದಮಿತ್ರ
ಚಂಡತಾನೆಂದೆನುತ ಕೊಲೆಸುಲಿಗೆ ಮಾಡುವನ
ಹಿಂಡು ಜನರೊಡನಾಡಿ ಭರದಿ ನಿಗ್ರಹಿಸಿ
ಅಂಡುಮುರಿಯುವ ರೀತಿ ಎರಡಿಟ್ಟು ಕಲಿಸುವುದು
ಗಂಡುಗಲಿಗಳು ಸೇರಿ | ಜಗದಮಿತ್ರ
ಉಂಡು ದೇಹದ ಸುಖವ ಮಗುವನ್ನು ಕರುಣಿಸುತ
ಕಂಡೂಕಾಣದೆ ಓಡ್ವ ನಜಭಂಡನವನ
ಮಂಡೆಬಿಸಿ ಮಾಳ್ಪಂತೆ ಹಿಡಿತಂದು ಥಳಿಸೊಮ್ಮೆ
ಗಿಂಡಿಯಲಿ ಧಾರೆಯೆರೆ | ಜಗದಮಿತ್ರ
ಮಂಡಿಯಲಿ ಕಲಬೆರಕೆ ಮಾಡುತ್ತ ಮಾರುವರ
ಕಿಂಡಿಯಲಿ ಪರಿಕಿಸುತ ಕರೆತಂದು ಸಭೆಗೆ
ದಂಡವಿಧಿಸುತ ತಿಳಿಸಿ ಮುಂದಿರ್ಪ ಹಾದಿಯಲಿ
ಗುಂಡಿಗೆಯ ಸರಿಗೊಳಿಸು | ಜಗದಮಿತ್ರ
ಕಂಡ ಭೂಮಿಯಭಾಗ ತನ್ನ ಬಳಗಕ್ಕಿರಿಸಿ
ಹುಂಡಿಯಲಿ ಲಂಚವನು ಪಡೆದು ಆಳುವರ
ಚಂಡುಬುಗುರಿಯನಾಡೆ ಕಳಿಸು ಕಾರಾಗೃಹಕೆ
ದುಂಡಗಿನ ನಗುಮೊಗದಿ | ಜಗದಮಿತ್ರ