ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Tuesday, April 20, 2010

ಮಗುವಿನ ಮೊಗದ ಜಗ

ಮಗುವಿನ ಮೊಗದಲ್ಲಿ ಅರಳುವ ಮುಗ್ಧ ನಗೆಯಲ್ಲಿ ಎಣಿಸಲಾರದಷ್ಟು ಅದ್ಬುತ ಭಾವನೆಗಳಿವೆ. It is a treasure of thoughts ! ದಿನವಿಡೀ ಕೆಲಸ ಮಾಡಿ ದಣಿದು ಬಂದರೂ ಸಂಜೆ ಮಗುವಿನ ಮುಖದಲ್ಲಿ ಅರಳುವ ನಗು ನೋಡಿ ನಮ್ಮ ಕ್ಲೇಶವನ್ನು, ಸುಸ್ತನ್ನು ಒಮ್ಮೆಲೇ ಕಳೆದುಕೊಳ್ಳುತ್ತೇವೆ. Such an electrifying smile ! ಅದಕ್ಕಿರುವ ಆ ಶಕ್ತಿ ಬಹುಶಃ ಬೇರೆ ಯಾವುದಕ್ಕೂ ಇರಲಾರದು. ಮಕ್ಕಳ ಜಗತ್ತೇ ಹಾಗೆ. ದೂರದಲ್ಲಿ ಯಾರದೋ ಮಗು ನಗುತ್ತಿದ್ದರೂ ಅದನ್ನು ನೋಡಿಯೇ ನಾವು ಸಂತಸ ಪಡುತ್ತೇವೆ. ಮಗುವಿನಲ್ಲಿ ಆ ಮುಗ್ಧ ಭಾವನೆಗಳಿವೆ. ಅದಕ್ಕೆ ವ್ಯವಹಾರದ ಹೊರ ಜಗತ್ತು ಗೊತ್ತಿಲ್ಲ ! ಅದು ತಿಳಿದಿರುವುದು ಕಣ್ಣಿಗೆ ಕಾಣುವ ಅಪ್ಪ-ಅಮ್ಮ ಮತ್ತು ಸುತ್ತಲ ಹತ್ತಾರು ಹತ್ತಿರದ ಬಂಧುಗಳನ್ನು ಮಾತ್ರ. ಚಿಕ್ಕ ಶಿಶುವಿನಿಂದ ಹಿಡಿದು ೭-೮ ವರ್ಷಗಳ ವರೆಗೂ ಮಗುವಿನ ಲೋಕದ ಪರಿಯೇ ವಿಭಿನ್ನ.

ಅನೇಕ ಆಟಿಕೆಗಳನ್ನು ತಂದುಕೊಳ್ಳುವುದು, ರಾಶಿ ಹಾಕುವುದು, ಕಿತ್ತಾಡಿ ಹರಡುವುದು, ಅದರಲ್ಲಿ ಕೆಲವನ್ನು ಎತ್ತಿಕೊಂಡು ಇನ್ನೊಂದು ಕಡೆ ಜೋಡಿಸಿಕೊಳ್ಳುವುದು, ಜೋಡಿಸಿದ ವಸ್ತುಗಳು ಬಿದ್ದಾಗ ಅಳುವುದು, ಮತ್ತೆ ಪುನರಪಿ ಪ್ರಯತ್ನಿಸುವುದು, ಪಕ್ಕದ ಮನೆಗಳ ಮಕ್ಕಳೊಡನೆ ಆಟವಾಡುವುದು, ದೊಡ್ಡವರನ್ನು ಅನುಕರಿಸುವುದು, ಟಿವಿ ಕಾರ್ಯಕ್ರಮಗಳನ್ನು ಅನುಕರಿಸುವುದು, ಕೆಲವೊಮ್ಮೆ ತನ್ನದೇ ಆದ ಶೈಲಿಯಲ್ಲಿ ಏನೋ ಹಾಡಿಕೊಳ್ಳುವುದು, ಜೋರಾಗಿ ಓಡಿ ಬೀಳುವುದು, ಬೀಳುವುದನ್ನು ಯಾರೂ ನೋಡಲಿಲ್ಲ ಎಂಬುದನ್ನು ಖಾತರಿ ಪಡಿಸಿಕೊಂಡು ಸುಮ್ಮನೇ ಎದ್ದು ಹೋಗುವುದು, ಬೀಳುವುದನ್ನು ನಾವು ನೋಡಿಬಿಟ್ಟರೆ ಬೋ ಅಂತ ಮರ್ಯಾದೆಯಾಗಿ ಅಳಲು ಮುಂದಾಗುವುದು, ವೈದ್ಯರ ಆಟ, ಅಡಿಗೆ ಆಟ, ವಾಹನ ಚಾಲನೆ ಆಟ, ಅಡಗಿಕೊಳ್ಳುವ ಆಟ, ಪುಸ್ತಕಗಳಲ್ಲಿ ಏನೋ ಗೀಚಿ ಚಿತ್ರ ಬರೆದೆನೆಂದು ತೋರಿಸುವುದು, ಅಪ್ಪನ ಮೇಲೆ ಆನೆ ಸವಾರಿ, ಉಪ್ಪು ಬೇಕಾ ಚಪ್ಪೆ ಬೇಕಾ ಪುರ್ ಪುರ್ ಪುರ್ ಎಂದು ಬೆನ್ನಮೇಲೇರಿ ಕುಣಿಯುವುದು ....ಹೀಗೇ ಒಂದೇ ಎರಡೇ ? ಅಲ್ಲೆಲ್ಲಾ ಮಧ್ಯೆ ಮಧ್ಯೆ ಕಿಲ ಕಿಲ ನಗು, ಕಾಲ ಗೆಜ್ಜೆಯ ಸಣ್ಣನೆಯ ನಿನಾದ, ತಪ್ಪು ಹೆಜ್ಜೆಗಳ ನಡೆತ, ಕೆಲವೊಮ್ಮೆ ಭಯಮಿಶ್ರಿತ ವಿಷಾದ, ಮುರಿದ ಗೊಂಬೆಯ ಬಗ್ಗೆ ರೋದನ, ತಿಂಡಿ-ಊಟ ಬೇಡವೆಂಬ ಹಠ, ದೂರದ ಚಂದ್ರನ ಲೋಕಕ್ಕೆ ಹೋಗಿ ಏನೆಲ್ಲಾ ಹುಡುಕಿ ತೆಗೆದು ತರುವ ಆಸೆ, ಹೀಗೇ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಇಂತಹ ಮಗುವಿನ ಮೊಗದ ಜಗತ್ತನ್ನು ಕಂಡು ಬರೆದ ನಾಲ್ಕು ಸಾಲು ಈ ಕವನದ ರೂಪ---





ಮಗುವಿನ ಮೊಗದ ಜಗ


ಮಗುವೆ ನಿನ್ನಯ ಮೊಗದ ಮೊಗೆದು ಬಡಿಸುವ ಖುಷಿಯ

ನಗುವಿನೊಂದಿಗೆ ನಲಿವಾ ಜಗದೊಡೆಯ ನಾನು !
ಬಗೆಬಗೆಯ ವೇಷದಲಿ ನನ್ನ ರಮಿಸುವ ವಿಷಯ
ಲಘುಬಗೆಯಲೀ ಕಲಿತ ಜಾಣ ಮರಿ ನೀನು

ಇಂದ್ರ ನಂದನದಂತೆ ಭುವಿಯ ಅಂಗಣದಲ್ಲಿ
ಚಂದ್ರಮನ ನಾಚಿಸುವ ದುಂಡು ಮುಖವರಳಿ
ಸಾಂದ್ರತೆಯ ಹೆಚ್ಚಿಸುವ ವಿದ್ಯುನ್ಮಾನದ ದೀಪ
ಲಾಂದ್ರದಲಿ ಜಗದ ಭಾವಗಳೆಲ್ಲ ಕೆರಳಿ

ಬಿಂದು ಹನಿ ಹನಿಯಾಗಿ ಹನಿಯು ಹಳ್ಳವದಾಗಿ
ಕುಂದಣದ ಚಿತ್ತಾರ ಮೂಡಿ ಜೀವದಲಿ
ನೊಂದ ಮನವಿರಲೇನು ನಿನ್ನ ನಗುವದು ಸಾಕು
ಒಂದಿನಿತು ಮರೆಯೆ ಚಿಂತೆಯ ತೊರೆಯುತಿಲ್ಲಿ

ರಂಜಿಸುವ ಆಟಗಳು ಬಹು ವಿಧದ ನೋಟಗಳು

ಮಂಜಹನಿ ಹರಳುಗಟ್ಟಿದ ತೆರನ ಸೊಗಸು
ನಂಜನರಿಯದ ಮನಸು ಮುಗ್ಧತೆಯ ಸಾಕಾರ
ಸಂಜೆಸೂರ್ಯನ ಕಿರಣ ನೆನೆಯಿತದು ಮನಸು