ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Saturday, July 3, 2010

'ಆ ಆತ'

ಚಿತ್ರ ಕೃಪೆ : ಅಂತರ್ಜಾಲ

'ಆ ಆತ'

ಎದೆಯುಬ್ಬಿಸಿ ನಡೆವನು ಆತ ಒಳಗೊಳಗೆ
ನನ್ನೊಳಗೆ
ಎಡಬಿಡದೆ..ಅನುದಿನವೂ....ಅನುಕ್ಷಣವೂ!

ಹೆದರುವನಲ್ಲ ಆತ ಒಂದಿನಿತು ಯಾವುದಕೂ
ಮರುಗುವನಲ್ಲ ಆತ ನೂರೆಂಟು ಮೊರೆತಕ್ಕೂ
ಅಲುಗುವುದಿಲ್ಲ ಆತ ಜಗವರಿತ ಕಂಪನಕೂ !
ನಲುಗುವುದಿಲ್ಲ ಆತ ಈ ಬೆಂಕಿ ಆ ಮಳೆಗೂ

ಬಿರುಬಿಸಿಲದು ಬಿಸಿಲೇ ಅಲ್ಲ ಆತನಿಗೆ ಅರೆಘಳಿಗೆ
ನೊರೆಹಾಲನು ಕುಡಿಯುವುದಿಲ್ಲ ಈ ಘಳಿಗೆ ಮರುಘಳಿಗೆ
ಹರೆದಾಡುವ ಹಂಬಲವಿಲ್ಲ ಸ್ಥಿರನಾತ ಶಾಶ್ವತನು
ಬರೆ ಸುಮ್ಮನೆ ಇರುವನು ಒಳಗೆ ಇಣುಕುತ್ತ ನನ್ನೊಳಗೆ!

ಚಿಂತೆಯ ಸಂತೆಯನೆಂದೂ ಬಯಸಿಲ್ಲ-ಬಯಸಲ್ಲ
ಕಂತೆನೋಟುಗಳನ್ನು ತನದಾಗಿಸೋ ಆಸೆಯದಿಲ್ಲ!
ಕುಂತು ತಿನ್ನುವನಲ್ಲ..ಮಲಗುವುದು..ಗೊತ್ತಿಲ್ಲ
ಆಂತರ್ಯದಿ ಬರೆಯುತ ಏನೋ ಕೂತಿರುವ ಕಡೆತನಕ !

ಅಣ್ಣ-ತಮ್ಮಂದಿರನು ಕಂಡಿಲ್ಲ-ಕಾಣಲ್ಲ
ಸುಣ್ಣ-ಬೆಣ್ಣೆಗಳಲಿ ಆಸಕ್ತಿ ಮೊದಲವಗಿಲ್ಲ!
ಕಣ್ಣಿಗೆ ಕಾಣದ ಲೋಕ ಅವನಿರವು ಅನಿವಾರ್ಯ
ಮಣ್ಣಲಿ ನನ್ನೊಡನಿದ್ದು ನನಗೊಮ್ಮೆಯು ಕಾಣನು ಆತ!

’ಅವನೆನ್ನುವ’ ನನ್ನಯ ಬುದ್ಧಿ ಅತಿಮಿತವೋ ನನಗರಿವಿಲ್ಲ
’ಅವನಲ್ಲ’ದ ಆ ’ಅವನ’ನ್ನು ಅವನೆನ್ನುವೆ ನಿಮ್ಮೊಡನೆಲ್ಲ
’ಅವನಿ’ಲ್ಲದೆ ಈ ಜಗವಿಲ್ಲ ’ಅದು’ ಎನ್ನಲು ಮನಸೊಪ್ಪಲ್ಲ
ಇದಕಾಯಿತು ಭಾವದ ಹರಿವು ನನ್ನೊಳಗಿನ ’ಆತನ’ ಒಲವು!