'ಆ ಆತ'
ಎದೆಯುಬ್ಬಿಸಿ ನಡೆವನು ಆತ ಒಳಗೊಳಗೆ
ನನ್ನೊಳಗೆ
ಎಡಬಿಡದೆ..ಅನುದಿನವೂ....ಅನುಕ್ಷಣವೂ!
ಹೆದರುವನಲ್ಲ ಆತ ಒಂದಿನಿತು ಯಾವುದಕೂ
ಮರುಗುವನಲ್ಲ ಆತ ನೂರೆಂಟು ಮೊರೆತಕ್ಕೂ
ಅಲುಗುವುದಿಲ್ಲ ಆತ ಜಗವರಿತ ಕಂಪನಕೂ !
ನಲುಗುವುದಿಲ್ಲ ಆತ ಈ ಬೆಂಕಿ ಆ ಮಳೆಗೂ
ಬಿರುಬಿಸಿಲದು ಬಿಸಿಲೇ ಅಲ್ಲ ಆತನಿಗೆ ಅರೆಘಳಿಗೆ
ನೊರೆಹಾಲನು ಕುಡಿಯುವುದಿಲ್ಲ ಈ ಘಳಿಗೆ ಮರುಘಳಿಗೆ
ಹರೆದಾಡುವ ಹಂಬಲವಿಲ್ಲ ಸ್ಥಿರನಾತ ಶಾಶ್ವತನು
ಬರೆ ಸುಮ್ಮನೆ ಇರುವನು ಒಳಗೆ ಇಣುಕುತ್ತ ನನ್ನೊಳಗೆ!
ಚಿಂತೆಯ ಸಂತೆಯನೆಂದೂ ಬಯಸಿಲ್ಲ-ಬಯಸಲ್ಲ
ಕಂತೆನೋಟುಗಳನ್ನು ತನದಾಗಿಸೋ ಆಸೆಯದಿಲ್ಲ!
ಕುಂತು ತಿನ್ನುವನಲ್ಲ..ಮಲಗುವುದು..ಗೊತ್ತಿಲ್ಲ
ಆಂತರ್ಯದಿ ಬರೆಯುತ ಏನೋ ಕೂತಿರುವ ಕಡೆತನಕ !
ಅಣ್ಣ-ತಮ್ಮಂದಿರನು ಕಂಡಿಲ್ಲ-ಕಾಣಲ್ಲ
ಸುಣ್ಣ-ಬೆಣ್ಣೆಗಳಲಿ ಆಸಕ್ತಿ ಮೊದಲವಗಿಲ್ಲ!
ಕಣ್ಣಿಗೆ ಕಾಣದ ಲೋಕ ಅವನಿರವು ಅನಿವಾರ್ಯ
ಮಣ್ಣಲಿ ನನ್ನೊಡನಿದ್ದು ನನಗೊಮ್ಮೆಯು ಕಾಣನು ಆತ!
’ಅವನೆನ್ನುವ’ ನನ್ನಯ ಬುದ್ಧಿ ಅತಿಮಿತವೋ ನನಗರಿವಿಲ್ಲ
’ಅವನಲ್ಲ’ದ ಆ ’ಅವನ’ನ್ನು ಅವನೆನ್ನುವೆ ನಿಮ್ಮೊಡನೆಲ್ಲ
’ಅವನಿ’ಲ್ಲದೆ ಈ ಜಗವಿಲ್ಲ ’ಅದು’ ಎನ್ನಲು ಮನಸೊಪ್ಪಲ್ಲ
ಇದಕಾಯಿತು ಭಾವದ ಹರಿವು ನನ್ನೊಳಗಿನ ’ಆತನ’ ಒಲವು!
ನಿಮ್ಮೊಳಗೆ ಇರುವವನು ನನ್ನೊಳಗೂ ಇದ್ದಾನೆ!ಇಲ್ಲಿದ್ದು ,ಅಲ್ಲೂ ಇರುವವನು!ನೋಟಕನೂ ಆಗಿ ಆಟಕನೂ ಆಗಿ ಮಾಟಮಾಡಿದ್ದಾನೆ!
ReplyDeleteಒಳ್ಳೆಯ ಚಿಂತನೆಗೆ ಹಚ್ಚುವ ಬರಹ ಕೊಟ್ಟಿದ್ದಕ್ಕೆ ಧನ್ಯವಾದಗಳು.
ತುಂಬಾ ಚೆನ್ನಾಗಿದೆ ಸರ್
ReplyDeleteಚಿಂತನೆ ಎಲ್ಲರಿಗೂ ನಿಲುಕುವ ವಿಷಯವಲ್ಲ, ಇಲ್ಲಿ ಪರ್ಯಾಯ ಆಧ್ಯಾತ್ಮ, ಪರ್ಯಾಯ ಪರಲೋಕದ ಇರುವು, ಪರ್ಯಾಯ ಪುನರ್ಜನ್ಮದ ನೆರಳು ಎಲ್ಲವೂ ಸೇರಿರುತ್ತವೆ. ಇಷ್ಟಪಟ್ಟು ಪರತಿಕ್ರಿಯಿಸಿದ ಡಾ|ಕೃಷ್ಣಮೂರ್ತಿ ಡಾ|ಗುರುಮೂರ್ತಿ ತಮಗೂ ಓದಿದ ಎಲ್ಲಾ ಮಿತ್ರರಿಗೂಧನ್ಯವಾದಗಳು
ReplyDeleteಅದ್ಭುತ ವೈಚಾರಿಕ ಕವನ. ನಾನು ನನ್ನಲ್ಲಿನ ಆನು ನೀನು -ನಿನ್ನಲಿನ ತಾನು ಇವುಗಳ ನಡುವಿನ ಆವು -ಇವು ಮಧುರ ತೊಂತನ! ನಾಕುತಂತಿ ಬೇಂದ್ರೆಯಜ್ಜ ನೆನಪಾದರು!
ReplyDeleteಸೀತಾರಾಮ್ ಸರ್, ಇಂತಹ ಕವನವನ್ನೂ ಇಷ್ಟಪದುವವರಿದ್ದರೆ ಅದು ನಿಮ್ಮಂಥವರೇ ಸರಿ! ಯಾಕೆಂದರೆ ಈ ಥರದ ಕವನಗಳು ಎಲ್ಲರಿಗೂ ರುಚಿಸುವ ಕವನಗಳಲ್ಲ, ಬೇಂದ್ರೆಯಜ್ಜನ ಆಶೀರ್ವಾದ ನಮ್ಮ ಮೇಲಿರಲಿ ಅವರ ನೆರಳಲ್ಲಿ ನಡೆವ ಸದವಕಾಶ ಸಿಗಲಿ ಎಂದು ಹಾರೈಸುತ್ತೇನೆ, ತಮಗೆ ನಮನಗಳು
ReplyDelete