ರಸಿಕನ ಹುಡುಗಿ
ಏನಿದು ಅಹಾ ಈ ಬಳುಕು
ಏನೋ ಥಳುಕು ಥಳುಕು
ನವನವೀನ ಒರಸೆ ನಿನ್ನಾ ನಡುವಿನಲ್ಲೀ
ಸಂಚೊಂದು ಸಲಿಗೆಯಲ್ಲಿ
ಹೊಂಚಿದ್ದು ಸೆಳವಿನಲ್ಲಿ
ಮಿಂಚಗೊಂಚಲ ಹರಿಬಿಟ್ಟ ಚಳುಕು ಎದೆಯಾಳದಲ್ಲೀ
ಮಲ್ಲಿಗೆಯ ನಗೆಯ ಒನಪು
ಗಲ್ಲದ ಗುಳಿಯ ಹಾಸ್ಯ
ಅಲ್ಲೊಮ್ಮೆ ಮೂಗು ಕೊಂಕಿ ನನ್ನೆದೆಯ ನವಿಲ ಲಾಸ್ಯ!
ಅಟಕಾಯ್ಸೊ ಕಣ್ಣ ಕಾವ್ಯ
ತುಟಿಯಲ್ಲಿ ಭಾಷೆ ನವ್ಯ
ಕುಟುಕಿತ್ತು ನನ್ನ ಹೃದಯ ಹಗಲಿರುಳು ಬರೆದು ಭಾಷ್ಯ!
ಕೈಯಲ್ಲಿ ನೂರು ತಿರುವಿ
ಮೈಮನವ ಹೊರಳಿ ಬರುವಿ
ಸೈ ಸರಿಯು ಎಂಬ ಮನಸು ನಿನ್ನ ನೋಡಿ ಹೆಣೆದು ಕನಸು!
ಬಳ್ಳಿಯದು ಆ ಶರೀರ
ಬೆಳ್ಳಗಿನ ಎದೆಯ ಭಾರ
ಅಳ್ಳೆದೆಯೆ ಅಳೆದು ನುಂಗಿ ಕಳ್ಳನಾಮಾಡಿತಿಲ್ಲಿ!
ಎಳೆ ಬೆಂಡೆಕಾಯಿ ಬೆರಳು
ಸುಳಿಸುಳಿದು ಬರುವ ಕುರುಳು
ಕುಳಿತಲ್ಲೇ ಬಿಟ್ಟು ಬಾಯ ನಾನಲ್ಲಿ ಮಂಗಮಾಯ !
ನೀನ್ಯಾಕೋ ನನಗೆ ಇಷ್ಟ
ನೀನಿದ್ರೆ ಇಲ್ಲ ಕಷ್ಟ
ನೀನಿರದ ಬಾಳು ಶೂನ್ಯ ನೀ ಕೂಡಿ ಮಾಡು ಧನ್ಯ!