ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Friday, February 19, 2010

ಅಮೃತಾತ್ಮವೆ ನೆನೆ 'ನಾರಾಯಣ'

ನೂರು ಜನ್ಮಗಳನ್ನು ಕಳೆದ ನಂತರ ಒಮ್ಮೆ ಮನುಷ್ಯಜನ್ಮ ಬರುತ್ತದೆಂದು ಸನಾತನ ಧರ್ಮದಲ್ಲೂ, ಬುದ್ಧ ಜಾತಕ ಕಥೆಗಳ ಮುಖಾಂತರವೂ ನಮಗೆ ತಿಳಿದುಬರುತ್ತದೆ. ಬಡತನ-ಸಿರಿತನಗಳು ಕಾಲಾನುಕ್ರಮದಲ್ಲಿ ಬದಲಾಗುತ್ತಿರುತ್ತವೆ, ಇದಕ್ಕೆ ಕಾರಣ ಸಿರಿ ಶಾಶ್ವತವಲ್ಲ ! ಲಕ್ಷ್ಮಿ ಒಂದೇ ಕಡೆ ನಿಲ್ಲುವುದಿಲ್ಲ! ಹಿಂದೊಮ್ಮೆ ವಿಜಯನಗರ ಸಾಮ್ರಾಜ್ಯದಲ್ಲಿ ಇಂತಹ ಅಪರೂಪದ ಘಟನೆ ನಡೆಯಿತು, ತಮಗೆಲ್ಲಾ ಗೊತ್ತಿರುವಂತೆ ಶ್ರೀನಿವಾಸ ನಾಯಕ ಆಗರ್ಭ ಶ್ರೀಮಂತಿಕೆ ತುಂಬಿ 'ನವಕೋಟಿ ನಾರಾಯಣ' ಎಂಬ ಹೆಸರಿನಿಂದ ಗುರುತಿಸಲ್ಪಟ್ಟ ವೇಳೆ, ಅವರು ಮನೆಯಿಂದಾಚೆ ಹೋದಾಗ ಶ್ರೀನಿವಾಸರ ಮನೆಗೆ ಯಾರೋ ಬಡ ವ್ಯಕ್ತಿ ಬಂದು ಮಗಳ ಮದುವೆಗೆ ಸಹಾಯಮಾಡಿರೆಂದು ದುಂಬಾಲು ಬಿದ್ದಾಗ ಶ್ರೀನಿವಾಸರ ಹೆಂಡತಿ ಏನು ಕೊಟ್ಟರೂ ತನ್ನ ಯಜಮಾನರಿಗೆ ಜವಾಬು ಕೊಡಲು ಸಾಧ್ಯವಿಲ್ಲವೆಂದು ಪರಿಗಣಿಸಿ ಸಹಾಯ ಬಯಸಿ ಬಂದ ವ್ಯಕ್ತಿಗೆ ತನ್ನ ಮೂಗುತಿ [ನತ್ತು]ಯನ್ನು ಕೊಟ್ಟು ಅದನ್ನು ಮಾರಿ ಪ್ರತಿಯಾಗಿ ಬೇರೆ ಏನಾದರೂ ಪಡೆಯುವಂತೆ ಹೇಳುತ್ತಾಳೆ, ಸ್ವಲ್ಪ ಸಮಯದ ನಂತರ ಹೊರಗಿನಿಂದ ಬಂದ ಶ್ರೀನಿವಾಸ ನಾಯಕ ಹೆಂಡತಿಯ ಮೂಗಿನಲ್ಲಿ ಮೂಗುತಿ ಕಾಣದೆ ಸಿಟ್ಟಿನಿಂದ ಆರ್ಭಟಿಸುತ್ತಾನೆ. ಯಜಮಾನನ ಕೋಪಕ್ಕೆ ಹೆದರಿ ಆಕೆ ದಾರಿ ಕಾಣದೆ ಮಹಡಿಯೇರಿ ಒಂದು ಹರಿವಾಣದಲ್ಲಿ ವಿಷಯುಕ್ತ ನೀರೆತ್ತಿಕೊಂಡು 'ದೇವಾ ನಿನ್ನಿಚ್ಛೆ ಇದ್ದಂತಾಗಲಿ' ಎಂದು ಇನ್ನೇನು ಕುಡಿಯಬೇಕೆನ್ನುವಷ್ಟರಲ್ಲಿ ಮೇಲಿಂದ ಏನೋ ಹರಿವಾಣದಲ್ಲಿ ಬಿದ್ದ ಸದ್ದು ! ಎತ್ತಿ ನೋಡುತ್ತಾಳೆ ತನ್ನ ಮೂಗುತಿ ! ಏನಿದು ಎಲ್ಲಿಂದ ಬಂತು ಎಂದು ಚಕಿತಳಾಗುತ್ತಾಳೆ, ನಡೆದದ್ದನ್ನೆಲ್ಲ ಶ್ರೀನಿವಾಸರಿಗೆ ಅರುಹುತ್ತಾಳೆ. ಕ್ಷಣಾರ್ಧದಲ್ಲಿ ಮನಸ್ಸಿನ ಸ್ಥಿತಿ ಬದಲಾಗಿ ಇಹದ ಶ್ರೀಮಂತಿಕೆಗೆ ಅರ್ಥವಿಲ್ಲ ಎಂಬುದನ್ನು ಮನಗಂಡ ಶ್ರೀನಿವಾಸರು ದೈವಭಕ್ತರಾಗುತ್ತಾರೆ; ಪುರಂದರದಾಸರೆಂದು ಅಂಕಿತ ಪಡೆದು ವಿಠಲನ ಪರಮ ಭಕ್ತರಾಗಿ ಮುಂದೆ ಅನೇಕ ಕೀರ್ತನೆ, ಸಂಕೀರ್ತನೆ, ಭಜನೆಗಳನ್ನು ರಚಿಸುತ್ತಾರೆ; ಖ್ಯಾತನಾಮರಾಗುತ್ತಾರೆ.

|| ಆಕಾಶಾತ್ಪತಿತಮ್ ತೋಯಂ ಯಥಾ ಗಚ್ಛತಿ ಸಾಗರಮ್ ||

ಹೇಗೆ ಮಳೆ ನೀರು ಎಲ್ಲೇ ಬಿದ್ದರೂ ಹರಿದು ಅನೇಕ ಹೊಳೆ-ಹಳ್ಳಗಳಿಗೆ ಸೇರಿ ಕೊನೆಗೊಮ್ಮೆ ಸಾಗರವನ್ನು ಸೇರುತ್ತದೋ ಹಾಗೇ ನಾವು ಯಾವುದೇ ಧರ್ಮ,ಭಾಷೆ,ಜನಾಂಗ ಏನೇ ಆಗಿದ್ದರೂ ನಮ್ಮಎಲ್ಲಾ ರೂಪದ ಪ್ರಾರ್ಥನೆಗಳು ಸಲ್ಲುವುದು ಮೂಲ ಪರಾಶಕ್ತಿಗೆ; 'ಪರಬ್ರಹ್ಮ' ಶಕ್ತಿಗೆ
. ಮನುಷ್ಯ ಹಿಂದೂ, ಕ್ರೈಸ್ತ, ಮುಸ್ಲಿಂ ಅಥವಾ ಇನ್ನಾವುದೇ ಧರ್ಮದವನಾಗಿರಲಿ ಅವನಿಗೆ ಬೇಕಾದ ರೂಪದಲ್ಲಿ, ರೀತಿಯಲ್ಲಿ ಕಣ್ಣಿಗೆ ಅಗೋಚರವಾದ ಆ ದಿವ್ಯ ಶಕ್ತಿಯನ್ನು ಆರಾಧಿಸಬಹುದು. ಜೀವನದಲ್ಲಿ ತಾನು ಸೋತಾಗ, ಪರೀಕ್ಷೆಗಳನ್ನು ಪಾಸುಮಾಡದಾಗ, ತನ್ನ ಕುದುರೆ ಗೆಲ್ಲದಾಗ, ಅನಿರೀಕ್ಷಿತ ಅವಘಡಗಳಲ್ಲಿ ಸಿಲುಕಿಕೊಂಡಾಗ, ಯಾರಿಂದಲೂ ಸಹಾಯ ಸಿಗದಾಗ,ಪರಿಹರಿಸಲಾರದ ಸಂಕಷ್ಟದಲ್ಲಿ ಸಿಲುಕಿಕೊಂಡಾಗ ಕೊನೆಯ ಆಸರೆಯಾಗಿ ತನಗಿಂತ ಹೆಚ್ಚಿನ ಶಕ್ತಿಯೊಂದಿದೆ ಅದನ್ನು ನಂಬಿದ್ದರೆ ಈ ಸ್ಥಿತಿ ಬರುತ್ತಿರಲಿಲ್ಲ ಎಂದು ಹಂಬಲಿಸುತ್ತಾನೆ.

ಅದನ್ನೇ ಶಿವಶರಣರು ಹೇಳಿದ್ದು -
ಅವರವರ ಭಾವಕ್ಕೆ ಅವರವರ ಭಕುತಿಗೆ
ಅವರವರ ತೆರನಾಗಿ ಇರುತಿಹನು ಶಿವಯೋಗಿ - ಎಂದು


ಮಹಾಭಾರತದಲ್ಲಿ ತುಂಬಿದಸಭೆಯಲ್ಲಿ, ಪಾಪಿ ದುಶ್ಯಾಸನನಿಂದ ತನ್ನ ವಸ್ತ್ರಾಪಹರಣವಾಗುತ್ತಿರುವಾಗ, ದ್ರೌಪದಿಯು ತನ್ನ ಐದುಮಂದಿ ಅಸಾಮಾನ್ಯ ಪತಿಯರು ನಿಂತಲ್ಲೇ ನಿತ್ರಾಣರಾಗಿಹೋದಾಗ, ನಿಶ್ಶಕ್ತ ರಾದಾಗ ಕೊನೆಯದಾಗಿ ಏನಾದರಾಗಲೆಂದು ತನ್ನಿಂದಾಗದೆಂದು ಎರಡೂ ಕೈ ಮೇಲಕ್ಕೆತ್ತಿ ಆರ್ತಳಾಗಿ, ದೀನಳಾಗಿ ಕೃಷ್ಣನನ್ನು ಕರೆಯುತ್ತಾಳೆ; ಫಲವಾಗಿ ಅಕ್ಷಯಾಂಬರ ಪಡೆಯುತ್ತಾಳೆ. ಭಾಗವತದಲ್ಲಿ ಗಜೇಂದ್ರನೆಂಬ ಆನೆಯ ಕಾಲನ್ನು ಮೊಸಳೆ ಕಚ್ಚಿ ಹಿಡಿದಾಗ, ತನ್ನ ರಕ್ಷಕರು ಯಾರೂ ಇಲ್ಲವೆಂದು ತಿಳಿದವೇಳೆ ಗಜೇಂದ್ರ ದೈವಕ್ಕೆ ಮೊರೆಹೋಗುತ್ತಾನೆ, ಆನೆಯ ಆರ್ತನಾದ ಕೇಳಿ ಮಹಾವಿಷ್ಣು ಗರುಡ ವಾಹನನಾಗಿಬಂದು ತನ್ನ ಚಕ್ರದಿಂದ ಮೊಸಳೆಯನ್ನು ಘಾಸಿಗೊಳಿಸಿ ಆನೆಯ ಸಂಕಷ್ಟವನ್ನು ಪರಿಹರಿಸುತ್ತಾನೆ. ಹೀಗೇ 'ನನ್ನದಲ್ಲ' ಎಂಬ ನಮ್ಮ ಅನಿಸಿಕೆಯ ಬೆಳವಣಿಗೆ ನಮಗೆ ಹೆಚ್ಚಿನ ಶಕ್ತಿ ಕೊಡುತ್ತದೆ ಮಾತ್ರವಲ್ಲ ಮನಸ್ಸು ಕೆಟ್ಟದಾರಿಗೆ ಹೋಗದಂತೆ ನಮ್ಮ ಮನಸ್ಸಿಗೆ ನಮ್ಮ ಆಂತರ್ಯವೇ ಪ್ರಚೋದಿಸುತ್ತದೆ. ಅದನ್ನೇ ನಾವು

|| ಧೀ ಯೋ ಯೋನಃ ಪ್ರಚೋದಯಾತ್ ||

ಎಂದು
ಈ ರೂಪದಲ್ಲಿ ಪ್ರಾರ್ಥಿಸುತ್ತೇವೆ. ಇಂತಹ ಪ್ರಾರ್ಥನೆಗಳಿಂದ ನಮ್ಮ ಮನಸ್ಸಿಗೆ ಸನ್ಮಾರ್ಗದಲ್ಲಿ ಕ್ರಿಯಾತ್ಮಕತೆ ಬರುತ್ತದೆ [positive attitude],ತನ್ಮೂಲಕ ಲೋಕದಲ್ಲಿ ನಾವು ಪರೋಪಕಾರಿಗಳಾಗಿ, ಪರಹಿತರಕ್ಷಕರಾಗಿ ಯಾವೊಂದೂ ಕೆಟ್ಟ ಚಾಳಿಯನ್ನು ಮೈಗೂಡಿಸಿಕೊಳ್ಳದೆ ಉತ್ತಮ ಮಾರ್ಗದಲ್ಲಿ ಬದುಕಲು ಪ್ರೇರೇಪಿಸುತ್ತದೆ !

ಓಂ ಸಹನಾವವತು ಸಹನೌ ಭುನಕ್ತು
ಸಹವೀರ್ಯಂ ಕರವಾವಹೈ
ತೇಜಸ್ವಿನಾವಧೀತಮಸ್ತು ಮಾ| ವಿದ್ವಿಷಾವ ಹೈ

ಓಂ ಶಾಂತಿಃ ಶಾಂತಿಃ ಶಾಂತಿಃ

ಆಹಾ ಎಷ್ಟೊಂದು ಅರ್ಥಗರ್ಭಿತ ನಮ್ಮ ಮಂತ್ರಗಳು, ಎಲ್ಲರೂ ಸಹಬಾಳ್ವೆ ಬಾಳೋಣ, ಎಲ್ಲರೂ ಒಟ್ಟಾಗಿ ಕೆಲಸಮಾಡೋಣ, ಒಟ್ಟಾಗಿ ಊಟಮಾಡೋಣ, ಒಟ್ಟಾಗಿ-ಸಹನಶೀಲರಾಗಿ ತೇಜಸ್ವಿಗಳಾಗಿ ಬದುಕೋಣ ಎಂದಲ್ಲವೇ ಈ ಮಂತ್ರ ತಿಳಿಸುವುದು. ಅದಕ್ಕೇ ನಮ್ಮ ಸನಾತನ ಧರ್ಮದಲ್ಲಿ ಪರಧರ್ಮ ಸಹಿಷ್ಣುತೆ ಇದೆ. ಪರನಿಂದೆ ಸಲ್ಲ, ಎಲ್ಲಾ ಧರ್ಮಗಳೂ ಬೋಧಿಸುವ ಮೂಲ ಒಳಿತೇ, ಎಲ್ಲರೂ ಒಂದೇ ಎಂಬ ಭಾವವಿದೆ. ಅದನ್ನೇ ಸಂಸ್ಕೃತದಲ್ಲಿ

|| ವಸುದೈವ ಕುಟುಂಬಕಮ್ ||

ಎಂದಿದ್ದಾರೆ ನಮ್ಮ ಪ್ರಾಜ್ಞರು. ಅಂದರೆ ವಿಶ್ವವೇ, ಜಗತ್ತೇ ನಮ್ಮ ಕುಟುಂಬ ಎಂದು ಭಾವಿಸೋಣ, ನಮ್ಮ ನಮ್ಮಲ್ಲೇ ಜಗಳಗಳು, ಅರ್ಥಹೀನ ಕೃತ್ಯಗಳು,ಹಿಂಸೆ-ದುರಾಚಾರಗಳು ಬೇಡ ಎಂಬ ಉದ್ದೇಶ-ಆರ್ಷೇಯ ಸಂಸ್ಕೃತಿ ; ಎಷ್ಟು ಸುಸಂಕೃತವಲ್ಲವೇ ?

ಇಹದ ನಮ್ಮ ಬಾಧೆಗಳನ್ನು ಕಳೆಯಲು ದೇವರ ಮಿಕ್ಕುಳಿದ ಎಲ್ಲ ನಾಮಗಳಿಗಿಂತಲೂ 'ನಾರಾಯಣ' ಎಂಬ ನಾಮ ಶ್ರೇಷ್ಠ ವೆಂದು ನಾವು ಅಜಾಮಿಳನ ಕಥೆಯಲ್ಲಿ ತಿಳಿಯುತ್ತೇವೆ. ವ್ಯಭಿಚಾರಿಯಾಗಿದ್ದ ಅಜಾಮಿಳ, ಅನೇಕ ಕೆಟ್ಟಕೆಲಸಗಳಲ್ಲಿ ತೊಡಗಿ ಕೊಂಡಿದ್ದ ಅಜಾಮಿಳ, ರೋಗಿಯಾಗಿ ಹಾಸಿಗೆ ಹಿಡಿದು ನರಳುತ್ತಿರುವಾಗ ಸಾಯುವ ಕೊನೇ ಗಳಿಗೆಯಲ್ಲಿ 'ನಾರಾಯಣ'ಸ್ಮರಣೆ ಮಾಡುತ್ತಾನೆ; ಅದರಿಂದ ಪಾಪಮುಕ್ತನಾಗಿ ಮಹಾವಿಷ್ಣುವಿನ ಸಾಯುಜ್ಯವನ್ನು ಪಡೆಯುತ್ತಾನೆ. ಇವತ್ತಿಗೂ ಅದಕ್ಕೇ ಯಾರಾದರೂ ಗತಿಸಿದಾಗ ಪುರೋಹಿತರು ಭಗವನ್ನಾಮ ಸ್ಮರಣೆ ಅದರಲ್ಲೂ 'ನಾರಾಯಣ' ಜಪವನ್ನು ಮಾಡಲು ಹೇಳುತ್ತಾರೆ. ಹೀಗೇ ಕಾಲ, ದೇಶ, ಸಮಯದ ಪರಿಮಿತಿಗೆ ಒಳಪಡದ ನಾಮ 'ನಾರಾಯಣ'. ಇಂತಹ ನಾರಾಯಣ ಧ್ಯಾನದ ಗೀತೆಯೊಂದಿಗೆ, ನಮಗೆಲ್ಲ ಮೇರೆ ಮೀರಿದ ಸುಖ-ಸಂತೋಷ, ಸಮೃದ್ಧಿ, ನೆಮ್ಮದಿ, ಆಯುರಾರೋಗ್ಯ ಕೊಡಲೆಂದು ನಿಮ್ಮನ್ನು ನನ್ನೊಂದಿಗೆ ಪ್ರಾರ್ಥನೆಯಲ್ಲಿ ಭಾಗಿಗಳಾಗಲು ಕರೆಯುತ್ತಿದ್ದೇನೆ--

[ಚಿತ್ರ ಕೃಪೆ : ಅಂತರ್ಜಾಲ ]

ಅಮೃತಾತ್ಮವೆ ನೆನೆ 'ನಾರಾಯಣ'


ಸಾವಿರ ಜನುಮದ ಪಾಪವ ತೊಳೆಯಲು
ಅಮೃತಾತ್ಮವೆ ನೆನೆ ' ನಾರಾಯಣ '|
ಸಾಗರ ಜೀವನ, ಪಯಣಿಕರೈ ನಾವ್
ನೌಕೆಯ ನಾವಿಕ ನಾರಾಯಣ ||ಪ||

ವಿಸ್ತರವೀ ಜಗ ಸುಸ್ಥಿರವಲ್ಲ
ಹಸ್ತ ಪಿಡಿದು ಪೊರೆ ನಾರಾಯಣ|
ಕಸ್ತೂರಿ ತಿಲಕ ಲಲಾಟ ಪಲಕವೈ
ಕೌಸ್ತುಭಧಾರಿಯೇ ನಾರಾಯಣ ||೧ ||

ಆಗೊಮ್ಮೆ ಈಗೊಮ್ಮೆ ಮಗುದೊಮ್ಮೆ ಎನ್ನದೆ
ಬಗಲಲೇ ಇರಿಸಿಕೊ ' ನಾರಾಯಣ '|
ಬಾಗಿಶಿರವ ಮುಗಿದೊಮ್ಮೆ ಈ ಕರವ
ಮೊಗೆದು ಭಜಿಸೊ ನಿತ್ಯ 'ನಾರಾಯಣ' ||೨||

ದಿನವಹಿ ತಿರುಗುತ ಕೆಲಸವ ಮಾಡುವ
ಮನದ ದುಗುಢ ನೀಗೋ ನಾರಾಯಣ|
ಘನಮಹಿಮನುನೀ ಪರಮಪದವು ನೀ
ಅಮೃತ ತತ್ವವೇ ಲಕ್ಷ್ಮೀನಾರಾಯಣ ||೩||

ಹರಿಯೂ ನೀ ಮತ್ತೆ ಹರನೂ ನೀನೇ
ಪರಿಪರಿ ರೂಪವೋ ನಾರಾಯಣ|
ಸರಿಗಮಪದ ಹಾಡಿ ಕೊಂಡಾಡುವೆನಿನ್ನ
ಹರಸೊ ಅಮೃತ ಸ್ವಾಮಿ ನಾರಾಯಣ ||೪||