ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Thursday, July 14, 2011

ಆ ಮಹಾಕಾವ್ಯ ಈ ಭಾವ ಗೀತೆ ನಿನ್ನ ಪದಧ್ವನಿ


ಆ ಮಹಾಕಾವ್ಯ ಈ ಭಾವ ಗೀತೆ ನಿನ್ನ ಪದಧ್ವನಿ

ಸಾಮಾನ್ಯರಾದ ನಮಗೆ ಕಾವ್ಯವನ್ನು ಬರೆಯುವಾಗ ಹಲವೊಮ್ಮೆ ಯಾವುದೇ ವಿವೇಚನೆ ಇರುವುದಿಲ್ಲ. ಆದರೆ ಮಹರ್ಷಿಗಳು, ಮಹಾಕವಿಗಳು ಕಾವ್ಯವನ್ನು ತಮ್ಮ ತಪಸ್ಸಿನಿಂದ ಬಸಿದು ಕೊಟ್ಟಿದ್ದಾರೆ ಅರ್ಥಾತ್ ಅವುಗಳ ಬಳಕೆಯಿಂದ ಓದುಗರಲ್ಲಿ, ಸಮಾಜದಲ್ಲಿ ಒಳಿತಾಗಬೇಕು, ಜನಜೀವನದಲ್ಲಿ ಇಹ-ಪರಗಳ ತಿಳುವಳಿಕೆಗಳು ಸಮರ್ಪಕವಾಗಿ ಮೂಡಿ ಸಮಾಜ ತಪ್ಪು ಹಾದಿಯಲ್ಲಿ ನಡೆಯದಂತಾಗಬೇಕು ಎಂಬುದು ಅವರ ಅಪೇಕ್ಷೆಯಾಗಿರುತ್ತಿತ್ತು. ಅದರಿಂದ ಅವರಿಗೆ ಯಾವ ಪ್ರಯೋಜನವಾಗದಿದ್ದರೂ ಲೋಕದ ಹಿತಾರ್ಥ ಅದನ್ನವರು ನಡೆಸಿಬಂದಿದ್ದರು.

ಆ ಮಹಾಕಾವ್ಯಗಳ ಸರಹದ್ದಿನಲ್ಲಿ ಹಿಂದಕ್ಕೆ ಹಿಂದಕ್ಕೆ ಹೋಗುತ್ತಾ ಹೋದರೆ ಆಸಕ್ತರಿಗೆ ಕಾಣಸಿಗುವುದೇ ಮಹಾಭಾರತ. ತಪಸ್ಸಿನಿಂದ ವಿಮುಖರಾಗಿ ಲೌಕಿಕವಾಗಿ ಚಿಂತನ-ಮಂಥನ ನಡೆಸುತ್ತಿದ್ದ ಮಹಾ ಋಷಿ ಕೃಷ್ಣದ್ವೈಪಾಯನರಿಗೆ ಜಲೌಘದಂತೇ ತಂತಾನೇ ಒಂದು ಕಾವ್ಯ ಬಾಯಿಂದ ಹೊರಡಹತ್ತಿತು. ಹಾಗೆ ಹೊರಬಂದ ಆ ಕಾವ್ಯವನ್ನು ತಾನೇ ಹೇಳಿಕೊಂಡು ಬರೆಯಲು ಅವರಿಂದ ಸಾಧ್ಯವಾಗುತ್ತಿರಲಿಲ್ಲ. ಆ ಕುರಿತು ಹಾಗೇ ಜಂಜಾಟದಲ್ಲಿರುವಾಗ ದೇವರ್ಷಿ ನಾರದರು ಆ ಜಾಗಕ್ಕೆ ಬಿಜಯಂಗೈಯ್ಯುತ್ತಾರೆ, ಅದು ದೈವೀ ಸಂಕಲ್ಪ! ಬಂದ ನಾರದರಿಗೆ ಮಹರ್ಷಿಗಳ ಮುಖದಲ್ಲಿರುವ ಅವ್ಯಕ್ತ ಚಿಂತೆಯ ಅರಿವಾಗುತ್ತದೆ. ಲೋಕಾಭಿರಾಮವಾಗಿ ಉಭಯ ಕುಶಲೋಪರಿಗಳು ನಡೆದ ಬಳಿಕ ನಾರದರೇ ಅದನ್ನು ನೇರವಾಗಿ ಪ್ರಸ್ತಾಪಿಸುತ್ತಾರೆ. ತನ್ನಲ್ಲಿ ಒಡ ಮೂಡಿದ ಮಹಾಕಾವ್ಯವನ್ನು ಅಕ್ಷರ ರೂಪಕ್ಕೆ ತರಲಾಗದ ಪೀಕಲಾಟವನ್ನು ಮಹರ್ಷಿ ದೇವರ್ಷಿಗೆ ಹೇಳುತ್ತಾರೆ.

ಕೃತಿಗೆ ಲಿಪಿಕಾರನಾಗಿ ಒಬ್ಬಾತ ಬೇಕು, ಆತ ಬರೇ ಬೆರಳಚ್ಚು ತಜ್ಞನಾಗಿರದೇ ’ತಲೆ’ಯಿರುವಾತನಾಗಿ ತಾನು ಹೇಳುತ್ತಿರುವುದನ್ನು ಅರ್ಥವಿಸಿಕೊಂಡು ವೇಗದಲ್ಲಿ ಅದನ್ನು ಬರೆಯಬಲ್ಲವನಾಗಿರಬೇಕು ಎಂಬುದು ಮಹರ್ಷಿಗಳ ಆಶಯವಾಗಿರುತ್ತದೆ. ಅದಕ್ಕೆ ತಕ್ಕನಾದ ವ್ಯಕ್ತಿ ಈಶಸುತನೆನಿಸಿದ ಪರಬ್ರಹ್ಮ ಸ್ವರೂಪಿ ಗಣೇಶನೆಂಬುದು ನಾರದರ ಅಂಬೋಣ. ಗಣೇಶನನ್ನು ಒಲಿಸಿ ಕರೆಯಲು ಇರುವ ಸೂತ್ರಗಳಲ್ಲಿ ಖಂಡೋಪಾಸನೆ ಮತ್ತು ಅಖಂಡೋಪಾಸನೆಗಳೇ ಮೊದಲಾದ ಚರ್ಚೆಗಳು ನಡೆಯುತ್ತವೆ. ಕೊನೆಗೊಮ್ಮೆ ಇಬ್ಬರೂ ಧ್ಯಾನಾಸಕ್ತರಾಗಿ ಸ್ತುತಿಗೈದು ಗಣೇಶನನ್ನು ಪ್ರಸನ್ನಗೊಳಿಸಿ ಪ್ರತ್ಯಕ್ಷ ಕಾಣುವಲ್ಲಿ ಸಫಲರಾಗುತ್ತಾರೆ.

ಅಭ್ಯುತ್ಥಾನಂ ಸು ಆಸನಂ ಸ್ವಾಗತೋಕ್ತಿಃ
ಪಾದ್ಯಂಚಾರ್ಘ್ಯಂ ಮಧುಪರ್ಕಾಚ ಮೌಚ |
ಸ್ನಾನಂ ವಾಸೋ ಭೂಷಣಾಂಗಂಧಮಾಲ್ಯೇ
ಧೂಪೋ ದೀಪಃ ಸೋಪಹಾರಃ ಪ್ರಣಾಮ ||

ಬಂದ ಗಣೇಶನಿಗೆ ಸುಆಸನ[ ಕುಳಿತುಕೊಳ್ಳುವ ಪೀಠ-ಖುರ್ಚಿ] ಅರ್ಘ್ಯ [ಕೈತೊಳೆಯಲು ನೀರು] ಪಾದ್ಯ[ಕಾಲುತೊಳೆಯಲು ನೀರು]ಮಧು-ಪರ್ಕವೇ ಮೊದಲಾಗಿ ಷೋಡಶೋಪಚಾರವನ್ನು ನೆರವೇರಿಸಿದ ಬಳಿಕ ವಿಷಯ ಪ್ರಸ್ತಾವನೆಯಾಗುತ್ತದೆ. ಮಹರ್ಷಿಗಳು ಮಹಾಕಾವ್ಯದ ಹೇಳುವಿಕೆಯನ್ನು ಆರಂಭಿಸುತ್ತಾರೆ. ಗಣೇಶ ಅವರು ಹೇಳಿದ್ದನ್ನು ಅತಿ ಶೀಘ್ರವಾಗಿ ಬರೆದುಬಿಡುತ್ತಾನೆ. ಮಧ್ಯೆ ಹೇಳುವುದನ್ನು ನಿಲ್ಲಿಸಿದರೆ ಬರೆಯುತ್ತಿರುವ ಲೆಕ್ಕಣಿಕೆ[ಪೆನ್ನು] ಬಿಸುಟು ತಾನು ಹೊರಟುಹೋಗುತ್ತೇನೆ ಎಂಬ ಕರಾರು ಗಣೇಶನದ್ದಿರುತ್ತದೆ. ಆಗ ಮಹರ್ಷಿಗಳು ತಾನು ಹೇಳಿದ್ದನ್ನು ಅರ್ಥಮಾಡಿಕೊಂಡು ಬರೆಯುವಂತೇ ಗಣೇಶನಿಗೆ ಪ್ರತಿಕರಾರು ಹಾಕುತ್ತಾರೆ. ಗಣೇಶ ಒಪ್ಪಿ ಕಾವ್ಯದ ಬರಹ ಮುನ್ನಡೆಯುತ್ತದೆ.

ಮಹರ್ಷಿಗಳು ಹೇಳಿದ ಆ ಕಾವ್ಯದಲ್ಲಿ ಅಲ್ಲಲ್ಲಿ ತನಗೆ ಸಂದೇಹ ಬಂದಾಗ ಗಣೇಶ ಅದನ್ನು ಪರಿಹರಿಸುವಂತೇ ಮಹರ್ಷಿಗಳನ್ನು ಕೇಳುತ್ತಾನೆ, ಋಷಿಗಳು ಹಾಗೇ ಸಮಜಾಯಿಷಿ ಕೊಟ್ಟು ಸಂದೇಹ ನಿವಾರಣೆಯಾದಮೇಲೆ ಮತ್ತೆ ಲೆಕ್ಕಣಿಕೆ ಮುನ್ನಡೆಯುತ್ತದೆ. ಒಮ್ಮೆ ಹೀಗಾಗುತ್ತದೆ ಕಾವ್ಯದಲ್ಲಿರುವ ಕಥಾನಕ ಮಹಾಭಾರತ, ಭಾರತ ಕಥೆಯಲ್ಲಿ ಧರ್ಮರಾಯನ ರಥ ನೆಲದಿಂದ ಎತ್ತರಕ್ಕೆ ಗಾಳಿಯಲ್ಲಿ ಹಾರುತ್ತಿರುತ್ತದೆ. ಹಾರುತ್ತಿರುವ ರಥ ಒಮ್ಮೆ ಕುಸಿದು ಬೀಳುತ್ತದೆ. ಮಹಾ ಧರ್ಮಿಷ್ಠನಾದ ಯುಧಿಷ್ಠಿರನ ರಥವೇ ಹೀಗಾಗಲು ಕಾರಣವೇನು ? ಎಂಬ ಗಣೇಶನ ಪ್ರಶ್ನೆಗೆ ಋಷಿಗಳ ಉತ್ತರ - ಶ್ರೀಕೃಷ್ಣ " ಅಶ್ವತ್ಥಾಮೋ ಹತಃ ಕುಂಜರಃ " ಎಂದು ಘೋಷಿಸುವಂತೇ ಧರ್ಮರಾಯನಿಗೆ ಆಜ್ಞಾಪಿಸಿದಾಗ ಸತ್ಯಸಂಧನಾದ ಧರ್ಮರಾಯ " ಪ್ರತ್ಯಕ್ಷ ನೋಡದೆಯೇ ಹೇಳಲಾರೆ " ಎಂದುಬಿಡುತ್ತಾನೆ. ಸ್ವತಃ ಭಗವಂತನೇ ಆದ ಶ್ರೀಕೃಷ್ಣನ ಆಜ್ಞೆಯನ್ನು ಅವಗಣನೆಮಾಡಿದ್ದರ /ಉಲ್ಲಂಘನೆಮಾಡಿದ್ದರ ಪರಿಣಾಮವಾಗಿ ಧರ್ಮರಾಯನ ರಥ ಒಮ್ಮೆ ಹಾಗೆ ಧರೆಗುರುಳುತ್ತದೆ. " ಯಾರು ಭಗವಂತನನ್ನೇ ಸಂಶಯಿಸುತ್ತಾರೋ ಅವರಿಗೆ ಉಳಿಗಾಲವಿಲ್ಲ [ಸಂಶಯಾತ್ಮಾ ವಿನಶ್ಯತಿ] " ಎಂದು ಶ್ರೀಕೃಷ್ಣನೇ ಸಾರುತ್ತಾನೆ. --ಈ ಉತ್ತರ ಬರುತ್ತಿರುವಂತೆಯೇ ತನ್ನ ಶುಂಡ[ಸೊಂಡಿಲು]ವನ್ನೊಲೆದು ಹೂಂ ಹೂಂ ಎನ್ನುತ್ತಾ ಬಹಳ ಸಂತೋಷದಿಂದ ಭಾರತಕಥೆಯನ್ನು ಕಾವ್ಯರೂಪದಲ್ಲಿ ಬರೆದುಮುಗಿಸಿದನಂತೆ ಗಣೇಶ. ಗಣೇಶ ’ಗೀರ್ವಾಣ ಲಿಪಿ’ಯಲ್ಲಿ ಈ ಕಾವ್ಯವನ್ನು ಬರೆದ. ಛಂದಸ್ಸು-ವ್ಯಾಕರಣ, ಅಲಂಕಾರ, ಉಪಮೆ ಇತ್ಯೇತ್ಯಾದಿ ಸರ್ವಾಭರಣ ಸುಂದರಿಯಾದ ಈ ಮಹಾಕಾವ್ಯ [ಅದರ ಸಂಸ್ಕೃತದ ಆವೃತ್ತಿ] ಇಂದಿಗೂ ಸಾಹಿತ್ಯಾಸಕ್ತರಿಗೆ ಅತ್ಯುತ್ತಮ ’ಕಾವ್ಯ’ಳೆನಿಸಿದ್ದಾಳೆ!

ಬರೆಯುವಾಗ ಓದಿದ್ದಕ್ಕಿಂತ ಹತ್ತುಪಟ್ಟು ಹೆಚ್ಚಿನ ಅರ್ಥವಾಗುತ್ತದೆ ಎನ್ನುವುದು ಹಲವರ ಅನಿಸಿಕೆ ಅಲ್ಲವೇ? ಇನ್ನು ಕೆಲವರಿಗೆ ಬರೆಯುವಾಗಲೂ ತಲೆ ಎಲ್ಲೋ ಇರುತ್ತದೆ, ಹಾಗಾಗಿ ಅವರು ಬರೆದರೂ ಒಂದೇ ಬಿಟ್ಟರೂ ಒಂದೇ. ಗಣೇಶನಿಗೆ ಹೊಸದಾಗಿ ಅರ್ಥವಿವರಣೆಯೇನೂ ಬೇಕಾಗಿರಲಿಲ್ಲ, ಆದರೂ ಲೋಕದ ಹಿತಾರ್ಥ ರಚಿತವಾಗುವ ಅದಕ್ಕೆ ಲೋಕಕ್ಕೆ ತಿಳಿಯುವ ಹಾಗೇ ಆತ ಕಾರಣ ಕೇಳಿದ್ದಾನೆ. ಹೇಗೂ ಬರೆಯುವಾಗಲೇ ಅದರ ಪರಿಪೂರ್ಣ ಹುರುಳನ್ನು ಅರಿತಿದ್ದ ಗಣೇಶ ಬರೆದು ಮುಗಿಸಿ ನಿಂತು ಈ ಕೃತಿ ನಿಜಕ್ಕೂ ಮಹಾನ್ ಕಾವ್ಯವೇ ಸರಿ, ಇದು ಚತುರ್ವೇದಗಳ ನಂತರ ಜನಿಸಿದ್ದರಿಂದ ಪಂಚಮವೇದ ಎನಿಸಲಿ ಎಂದು ಹರಸಿ ಮಹರ್ಷಿಗಳಿಂದ ಬೀಳ್ಕೊಂಡನಂತೆ. ಈ ಮಹಾಕಾವ್ಯದ ಭಾಗವಾಗಿಯೇ ಸಂಗೀತದ ಸ್ವರ-ಲಯ-ತಾಳಗಳೂ ಹುಟ್ಟಿದ್ದರಿಂದ ಸಂಗೀತವನ್ನೂ ಇದೇ ಹೆಸರಿನಿಂದ ಕರೆಯುತ್ತಾರೆ. ಕೃತಿಯ ಕರ್ತೃವಾದ ಮಹರ್ಷಿ ಜಗತ್ತಿಗೇ ಒಳಿತಾಗಬಲ್ಲ ಹಲವು ಕೃತಿಗಳನ್ನು ಕೊಟ್ಟಿರುವುದರಿಂದ ವಿಶ್ವಬಂಧುವಾದ ಅವರನ್ನು ’ವ್ಯಾಸ’ ಎಂದು ಸಮಾಜ ಗೌರವಿಸುತ್ತದೆ.

ಚತುರ್ವೇದಗಳನ್ನೂ ಭಾಗವತ ಪುರಾಣವನ್ನೂ ವಾಣಿ ಮತ್ತು ವಾಙ್ಮಯಗಳನ್ನು ಸಮೀಕರಿಸಿ ಕೃತಿರೂಪಕ್ಕಿಳಿಸಿರುವುದರಿಂದ ವೈಶ್ವಿಕರಾದ [ವಿಶ್ವಬಂಧುವಾದ] ವ್ಯಾಸರಿಗೂ ಮೊದಲಾಗಿ ಯಾರೂ ಅಂತಹ ಮೇರು ಕೆಲಸಗಳನ್ನು ಮಾಡಿರಲಿಲ್ಲ. ವೇದವೆಂದರೇ ಜ್ಞಾನ. ತಾನು ಪಡೆದ ಜ್ಞಾನವನ್ನು ಜಗದ ಇತರರಿಗೂ ಹಂಚುವ ಹಂಬಲದಿಂದ ಇಂತಹ ಮಹತ್ಕಾರ್ಯವನ್ನು ಮಾಡಿ ಜ್ಞಾನಚಕ್ಷುವನ್ನು ಕರುಣಿಸಿದ ಮಹರ್ಷಿ ಗುರುಗಳೆಲ್ಲರ ಗುರುಗಳೆನಿಸಿದ್ದಾರೆ. ಈ ಕಾರಣಕ್ಕಾಗಿ ಉತ್ತಮ ಕೆಲಸಗಳನ್ನು ಮಾಡುವಾಗ ವ್ಯಾಸರನ್ನು ನೆನೆಯುವುದಾಗುತ್ತದೆ.

ಮಳೆಗಾಲದ ನಾಲ್ಕು ತಿಂಗಳು ಭೂಮಿಯಲ್ಲಿ ಹಲವು ಜೀವಿಗಳ ಸಂತಾನೋತ್ಫತ್ತಿ ಪ್ರಕ್ರಿಯೆ ಜಾಸ್ತಿಯಿರುತ್ತದೆ. ಹುಳ-ಹುಪ್ಪಟೆಗಳು, ಏಡಿಗಳು, ಸರೀಸೃಪಗಳೇ ಮೊದಲಾದ ಎಲ್ಲಾ ಜೀವಕೋಟಿಗಳ ಓಡಾಟ ಬಹಳ ಹೆಚ್ಚಿರುತ್ತದೆ. ಸರ್ವ ಸಂಗವನ್ನೂ ತ್ಯಜಿಸಿ ಜೀವನ್ಮುಕ್ತ ಸ್ಥಿತಿಯನ್ನು ಗಳಿಸುವತ್ತ ಹೆಜ್ಜೆಹಾಕುವ ಅಹಿಂಸೆಯನ್ನು ಅನುಸರಿಸುವ, ಬೋಧಿಸುವ ತಾಪಸಿಗಳು ಈ ಕಾಲದಲ್ಲಿ ಓಡಾಡಿದರೆ ಅವರ ಮರದ ಹಾವುಗೆಗಳಿಗೆ ಅರಿವಿಲ್ಲದೇ ಸಿಕ್ಕ ಜೀವಜಂತುಗಳು ಕೊಲ್ಲಲ್ಪಡುತ್ತವಲ್ಲಾ ಎಂಬ ಕಾರಣಕ್ಕೆ ಸನ್ಯಾಸಿಗಳಾದವರು ಕುಂಭದ್ರೋಣ ಮಳೆಯ ಸಮಯವಾದ ಅಷಾಢ ಹುಣ್ಣಿಮೆಯಿಂದ ಕಾರ್ತೀಕ ಹುಣ್ಣಿಮೆಯ ವರೆಗೆ ಒಂದೇ ಕಡೆಗೆ ಆಶ್ರಯಪಡೆದಿದ್ದು ತಮ್ಮ ತಪಸ್ಸನ್ನೂ ಏಕಾಂತವನ್ನೂ ಹೆಚ್ಚಿಸಿ ಜಗತ್ಕಲ್ಯಾಣಕ್ಕೆ ಪರೋಕ್ಷ ಕಾರಣೀಭೂತರಾಗುತ್ತಾರೆ. ನಾಲ್ಕು ಮಾಸಗಳ ಈ ಕಾಲವನ್ನು ಚಾತುರ್ಮಾಸವೆಂದೂ ನಡೆಯುವ ವೃತವನ್ನು ಚಾತುರ್ಮಾಸ್ಯವೆಂದೂ ಕರೆಯುತ್ತಾರೆ.


ಸಜ್ಜನರೂ ತಪೋನಿಷ್ಠರೂ ಆದ ಸಾಧು-ಸಂತರನ್ನು ಅವರ ಚಾತುರ್ಮಾಸ್ಯದ ವೇಳೆ ದರ್ಶಿಸಿ ಅವರಿಗೆ ಭಿಕ್ಷೆಯನ್ನು ನಡೆಸುವುದು, ಅವರ ಪಾದಪೂಜೆ ನಡೆಸುವುದು ಮತ್ತು ಅವರು ನಡೆಸಬಹುದಾದ ಸಂಕೀರ್ತನೆಗಳಲ್ಲಿ ಭಾಗಿಗಳಾಗುವುದು ಪುಣ್ಯತಮ ಕೆಲಸವಾಗಿರುತ್ತದೆ. ಲೌಕಿಕವಾಗಿ ಉದಾಹರಿಸಬಹುದಾದರೆ ತಾವೂ ಹೊರಟ ನೌಕೆಯಲ್ಲಿ ತಮಗೆ ಗೊತ್ತಿರುವ ಹಲವರನ್ನೂ ಜ್ಞಾನಮಾರ್ಗದಲ್ಲಿ ಕರೆದುಕೊಂಡು ಹೋಗುವ ಇಚ್ಛೆಯುಳ್ಳ ನಿಸ್ಪೃಹರು ಅವರಾಗಿರುತ್ತಾರೆ. ಜನನ-ಮರಣಗಳೆಂಬ ಚಕ್ರವ್ಯೂಹದಿಂದ ಹೊರಬರಲು ಸರಿಯಾದ ಆಯೋಜನೆ ಅಂಥಾ ತಪಸ್ವಿಗಳಿಂದ ಲಭಿಸಬೇಕೇ ವಿನಃ ಅದು ಕ್ರಯಕ್ಕೆ ಸಿಗುವಂಥದ್ದಲ್ಲ! ಜನಿಸಿದ ಪ್ರತೀವ್ಯಕ್ತಿಗೆ ಉತ್ತಮ ಗುರುವಿನ ದರ್ಶನವಾಗಬೇಕಾದರೆ ಅದೂ ಒಂದು ವಿಧಿಯಿಚ್ಛೆಯೇ ಆಗಿರುತ್ತದೆ. ಸಿಕ್ಕಿದ ಸದ್ಗುರುವನ್ನು ಸಮರ್ಪಕವಾಗಿ ಸೇವಿಸುವ ಬುದ್ಧಿ ಬರುವುದೂ ಕೂಡ ಆ ಯಾ ವ್ಯಕ್ತಿಯ ವಿಧಿಯೇ ಸರಿ.

ಯುಗಧರ್ಮಕ್ಕನುಗುಣವಾಗಿ ಕಲಿಯುಗದಲ್ಲಿ ಕಪಟ ಸನ್ಯಾಸಿಗಳು ಬಹಳವೇ ಇರುವುದರಿಂದ ಸನ್ಯಾಸಿಗಳಾದವರಿಗೆ ಕಾಲಹಾಕುವುದು ಕಷ್ಟವಾಗಿದೆ! ಸನ್ಯಾಸಿಗೂ ಸನ್ಯಾಸಿಯ ವೇಷಕ್ಕೂ ಹೊರನೋಟದಿಂದ ಸಾಮ್ಯತೆ ಕಾಣುವುದರಿಂದ ಅನೇಕ ಜನ ಸತ್ಯಾಸತ್ಯತೆಯ ಪರಾಮರ್ಷೆಗೆ ನಿಲುಕದ ವಿಷಯವೆಂದು ನಿಜ ಸನ್ಯಾಸಿಗಳನ್ನೂ ಮರೆತುಬಿಡುವ ಮಟ್ಟಕ್ಕೆ ಬೆಳೆದುಬಿಟ್ಟಿದ್ದಾರೆ. ಆದ್ಯ ಶಂಕರರು ಈ ರೀತಿ ಅಪ್ಪಣೆಕೊಡಿಸಿದ್ದಾರೆ --

ಅಸ್ಮತ್ ಪೀಠೇ ಸಮಾರೂಢಃ ಪರಿವ್ರಾಡುಕ್ತ ಲಕ್ಷಣಃ |
ಅಹಮೇವೇತಿ ವಿಜ್ಞೇಯ ಯಸ್ಯ ದೇವ ಇತಿ ಶ್ರುತೇ ||

-ಪರಿವ್ರಾಜಕ ಲಕ್ಷಣಗಳನ್ನು ಹೊಂದಿರುವ ವ್ಯಕ್ತಿ ತನ್ನ ಪೀಠದಲ್ಲಿ ಆಸೀನನಾದರೆ ಅವನನ್ನು ತಾನೇ ಅಂತ ತಿಳಿಯಿರಿ. ಅರಿಷಡ್ವರ್ಗಗಳಿಂದ ಮುಕ್ತರಾದ, ಹೊಗಳುವಿಕೆ-ತೆಗಳುವಿಕೆಯಲ್ಲಿ ಸ್ಥಿತಪ್ರಜ್ಞರಾದ, ಮೋಕ್ಷವನ್ನುಳಿದು ಇನ್ನುಳಿದ ಆಸೆಗಳನ್ನು ಪರಿತ್ಯಜಿಸಿದ, ಯಾರದೇ ಸಂಗವನ್ನೂ ಬಯಸದ, ತ್ರಿಕಾಲ ಸ್ನಾನ-ಸಂಧ್ಯಾ ತಪಃ ಪೂಜಾದಿ ಕೈಂಕರ್ಯನಿರತರಾದ, ಬಾಹ್ಯಾಸಕ್ತಿಯನ್ನು ವಿಜೃಂಭಿಸದ, ಜನರಿಗೆ ತ್ರಿಕರಣ ಪೂರ್ವಕ ಸನ್ಮಾರ್ಗ ಬೋಧಿಸುವ, ಸಾತ್ವಿಕ-ಸಸ್ಯಾಹಾರಿಗಳಾದ, ಅಹಿಂಸಾ ತತ್ಪರರಾದ, ಹೃದಯ ಸರೋವರದಲ್ಲಿ ಬೆಳಗುತ್ತಿರುವ ಪರಮಾತ್ಮನೆಂಬ ಸೂರ್ಯನನ್ನೇ ನೋಡುವ ಹಂಸದ ರೀತಿ ಪರಮಹಂಸರಾಗಿರುವ ವ್ಯಕ್ತಿಗಳು ಸನ್ಯಾಸಿಗಳು ಎನಿಸಿಕೊಳ್ಳುತ್ತಾರೆಯೇ ಹೊರತು ವಿಧಾನ ಸೌಧದಲ್ಲಿ ರಾಜಕೀಯ ಕಣಕ್ಕೆ ಮುನ್ನುಗ್ಗುವ, ವಿಷಯ ಪ್ರೇರಿತರಾಗಿ ಕಣ್ಣುಮುಚ್ಚಾಲೆಯಾಡುವ ವ್ಯಕ್ತಿಗಳಲ್ಲ. ಸನ್ಯಾಸಿಗಳ ನಡತೆಯನ್ನವಲೋಕಿಸಿ ಪರಿವ್ರಾಜಕರಾದವರನ್ನು ಮಾತ್ರ ಗುರುವೆಂದು ಪರಿಗಣಿಸು ಎಂದು ಆಚಾರ್ಯರು ಹೇಳಿದ್ದಾರಲ್ಲವೇ ? ಭಗವತ್ಪಾದ ಶಂಕರರಿಗೆ ಅಷ್ಟು ಹಿಂದೆಯೇ ಕಪಟ ಸನ್ಯಾಸಿಗಳ ಬಗ್ಗೆ ಅರಿವಿತ್ತು ಎಂಬುದು ಸ್ಪಷ್ಟವಾಗುತ್ತದೆ!

ಮನುಷ್ಯ ಎಷ್ಟೇ ತಾನರಿತರೂ ಅದು ಲೌಕಿಕ ವಿದ್ಯೆಯೇ ಹೊರತು ಪಾರಮಾರ್ಥಿಕವಲ್ಲ. ವಿಶ್ವವಿದ್ಯಾಲಯಗಳು ಕೊಡಮಾಡುವ ಪದವಿಗಳು ಕೇವಲ ಇಲ್ಲಿನ ವಿಷಯಗಳಿಗೆ ಸಂಬಂಧಿಸಿದ್ದೇ ಹೊರತು ಕಾಣದ ಲೋಕದ ಉನ್ನತ ಗಮ್ಯಸ್ಥಾನಕ್ಕೆ, ಗಹನವಾದ ಆ ವಿಷಯಗಳಿಗೆ ಸಂಬಂಧಿಸಿದ್ದಲ್ಲ. ವಿಜ್ಞಾನಮಯ ಲೋಕದಿಂದಾಚೆಗೆ ಏನಾದರೂ ಮಾಹಿತಿ ಲಭ್ಯವಾಗುವುದಾದರೆ ಅದು ಶುದ್ಧ ಸನ್ಯಾಸಿಗಳಿಗೇ ಹೊರತು ಸಾಮಾನ್ಯರಿಗಲ್ಲ. ನಮಗೆ ಗೊತ್ತಿರದ ಅನೇಕ ವಿಷಯಗಳನ್ನು ತಮ್ಮ ತಪೋಬಲದಿಂದ ತಾರ್ಕಿಕವಾಗಿ ನಿರ್ಣಯಿಸಬಹುದಾದ ತಾಕತ್ತು ಇರುವುದು ಕೇವಲ ತಾಪಸರಿಗೇ ಹೊರತು ಬೇರಾರಿಗೂ ಅಲ್ಲ.

ಮೂಕಂ ಕರೋತಿ ವಾಚಾಲಂ ಪಂಗುಂ ಲಂಘಯತೇ ಗಿರಿಮ್ |
ಯತ್ಕೃಪಾ ತಮಹಂ ವಂದೇ ಪರಮಾನಂದ ಮಾಧವಂ ||

ಹುಟ್ಟಿಸಿದ ಆ ಶಕ್ತಿ ಮೂಕನನ್ನೇ ವಾಚಾಳಿಯನ್ನಾಗಿಯೂ ಹೆಳವನನ್ನೇ ಶಿಖರಗಾಮಿಯನ್ನಾಗಿಯೂ ಮಾಡಬಲ್ಲ ಸಾಮರ್ಥ್ಯ ಉಳ್ಳದ್ದಾಗಿದೆ ಎಂಬ ಸತ್ಯದ ಅರಿವು ನಿಜದ ಅರಿವು ಕೂಪಮಂಡೂಕಗಳಾದ ನಮಗೆ ಸಹಜವಾಗಿ ಪ್ರಾಪ್ತವಲ್ಲ. ಯಾವಾಗ ಯುದ್ಧದಲ್ಲಿ ನಮ್ಮ ಕುದುರೆ ಸೋಲುತ್ತದೋ, ಯಾವಾಗ ಪರೀಕ್ಷೆಯಲ್ಲಿ ನಮ್ಮ ಅನುತ್ತೀರ್ಣತೆ ಘೋಷಿಸಲ್ಪಡುತ್ತದೋ, ಯಾವಾಗ ಇಲ್ಲದ ಕಾಯಿಲೆ ನಮಗೆ ಅಡರಿಕೊಂಡು ಹಿಂಸಿಸುತ್ತದೋ, ಯಾವಾಗ ಇರುವ ಬೊಕ್ಕಸ ಬರಿದಾಗಿ ನಡೆವ ಮಾರ್ಗವೇ ಗತಿಯಾಗಿ ಪರಿಣಮಿಸುತ್ತದೋ ಅಂತಹ ದಯನೀಯ ದಿನಗಳಲ್ಲಿ ಮಾತ್ರ ನಮಗೆ ಆ ಇನ್ನೊಂದು ಶಕ್ತಿಯ ಅರಿವು ಸ್ವಲ್ಪ ಮಟ್ಟಿಗೆ ಆಗುತ್ತದೆ! ಆದರೂ ’ಅಡಿಗೆ ಬಿದ್ದರೂ ಮೂಗು ಮೇಲೇ ಇದೆ’ ಎನ್ನುವ ನಮ್ಮ ಅಹಂ ಅಲ್ಲೂ ಕೆಲಸಮಾಡುತ್ತಲೇ ಇರುತ್ತದೆ! ಯಾವಾಗ ಅಹಂ ಎಂಬ ಗಡಿಯಾರ ನಿಷ್ಕ್ರಿಯವಾಗುತ್ತದೋ ಆಗ ಪರಾಶಕ್ತಿಯೆಂಬ ಯಂತ್ರ [ವಿದ್ಯುತ್ತು ಹೋದಾಗ ಯೂ.ಪಿ.ಎಸ್ ಅಥವಾ ಜನರೇಟರ್ ಇರುವಂತೇ]ಚಾಲೂ ಆಗುತ್ತದೆ. ಇಲ್ಲಿ ಯೂ.ಪಿ.ಎಸ್ ಮತ್ತೆ ನಾವೇ ತಯಾರಿಸಿದ ಯಂತ್ರವಾಗಿರುವುದರಿಂದ ಇತಿ-ಮಿತಿ ಸಹಿತವಾಗಿದೆ, ಆದರೆ ಪರಾಶಕ್ತಿ ಇತಿಮಿತಿ ರಹಿತದ್ದಾಗಿದೆ ಎಂಬುದನ್ನು ನಾವು ಅರಿಯಬೇಕು. ಅದು ಕರಗದ ಶಕ್ತಿ. ಇದಕ್ಕೆ ಉದಾಹರಣೆ ದ್ರೌಪದೀ ವಸ್ತ್ರಾಪಹರಣ. ಅಸಾಮಾನ್ಯ ಶೂರರೂ ಮೂರುಲೋಕದ ಗಂಡ ಎಂದೆಲ್ಲಾ ಬಿರುದು ಪಡೆದವರೂ ಸೇರಿದ ಪಂಚಪಾಂಡವರಲ್ಲಿ ಕೇವಲ ಒಬ್ಬನೇ ಒಬ್ಬ ಗಂಡ ಕೂಡ ದ್ರೌಪದಿಯ ಮಾನ ಕಾಪಾಡಲು ಸಮರ್ಥರಾಗಿರಲಿಲ್ಲ. ತುಂಬಿದ ಸಭೆಯಲ್ಲಿ ಮಾನಹೋಗುವಾಗಲೂ ಒಂದೇ ಕೈ ಎತ್ತಿ ಇನ್ನೊಂದರಲ್ಲಿ ಮಾನಮುಚ್ಚಿಕೊಂಡಾಗಲೂ ಪರಾಶಕ್ತಿ ಚಾಲೂ ಆಗಲಿಲ್ಲ. ಯಾವಾಗ ತನ್ನಿಂದಾಗದೆಂದು ಎರಡೂ ಕೈ ಮೇಲೆತ್ತಿ ಗೋಳಿಟ್ಟಳೋ ಆಗ ಅಕ್ಷಯಾಂಬರದ ಕೃಪೆಗೆ ಪಾತ್ರಳಾದಳು. ಆದರೆ ನಮ್ಮ ಯಾವ ಮಾನಕಗಳಿಗೂ ನಿಲುಕದ್ದು ಆ ಅದ್ಭುತ ಶಕ್ತಿ ಎಂಬುದನ್ನು ಎಲ್ಲರೂ ಒಪ್ಪಿಕೊಳ್ಳಬೇಕಾಗಿದೆ.

ಕಣ್ಣಿಗೆ ಕಾಣುವ ಆಕಾಶದ ಬುಡ-ತುದಿಗಳನ್ನಾಗಲೀ ಆಳ-ಅಗಲಗಳನಾಗಲೀ ಅಳೆಯಲಾಗದ ವಿಜ್ಞಾನ ನಮ್ಮದು! ಗುರುತ್ವ ಪೊಳ್ಳುಗಳ [ಬ್ಲ್ಯಾಕ್ ಹೋಲ್ಸ್]ಬಗ್ಗೆ ಅರಿವು ಬಂದರೂ ಅದರಾಚೆ ಏನಿದೆಯೆಂದಾಗಲೀ ಅದು ಹೇಗೆ ಹೋದ ವಸ್ತು-ವ್ಯಕ್ತಿಗಳನ್ನು ತನ್ನೊಳಗೆ ಎಳೆದುಕೊಳ್ಳುತ್ತದೆ ಎಂಬುದರ ಬಗ್ಗೆಯಾಗಲೀ ಇದುವರೆಗೆ ಅರಿಯಲಾಗದ ವಿಜ್ಞಾನ ನಮ್ಮದು! ಹಾಡಹಗಲೇ ನುಗ್ಗಿ ಜೀವಸಂಕುಲಗಳಿಗೆ ಪ್ರತ್ಯಕ್ಷ ದೈವತ್ವವನ್ನು ಕಣ್ತುಂಬ ಕಾಣಗೊಡುವ ಸೂರ್ಯನಲ್ಲಿ ಏನಿದೆಯೆಂಬ ಪರಿಪೂರ್ಣ ಮಾಹಿತಿ ಸಿಗದೇ ಅಂದಾಜುಕಟ್ಟಿದ ವಿಜ್ಞಾನ ನಮ್ಮದು! ನಿಯಮಬದ್ಧವಾಗಿ ಕೆಲಸ ನಿರ್ವಹಿಸುವ ಆಕಾಶ ಕಾಯಗಳ ನಿಯಂತ್ರಣ ಎಲ್ಲಿದೆ ಎಂಬುದನ್ನು ಅರಿಯದ ವಿಜ್ಞಾನ ನಮ್ಮದು! ಹೋಗಲಿ ದೇಹವೆಂಬ ಹಾರ್ಡ್ವೇರ್ ನಲ್ಲಿರುವ ಆತ್ಮವೆಂಬ ’ತಂತ್ರಾಂಶ’ ಹುಟ್ಟುವುದಕ್ಕಿಂತಾ ಮೊದಲು ಎಲ್ಲಿತ್ತು ಅಥವಾ ಸತ್ತಮೇಲೆ ಎಲ್ಲಿಗೆ ಹೇಗೆ ಹೋಯ್ತು ಎಂದು ಅರಿಯಲಾಗದ ಅತಂತ್ರ ವಿಜ್ಞಾನ ವೈಭೋಗ ನಮ್ಮದು! ಈ ಎಲ್ಲದನ್ನೂ ನಿರೂಪಿಸಿ, ನಿರ್ವಹಿಸುವ ನಮ್ಮ ಮೇರೆಗೂ ಮೀರಿದ ಇನ್ನೊಂದು ಯಾವುದೋ ಶಕ್ತಿಯ ಆವಾಸವನ್ನು ಅಲ್ಲಗಳೆಯುತ್ತೀರೇನು ? ಸಾಧ್ಯವೇ ನೀವೇ ಅವಲೋಕಿಸಿ.

ಹೀಗಾಗಿ ನಮಗಿಂತ ಹಿರಿದಾದ ಆ ದಿವ್ಯಶಕ್ತಿಯ ಸಾನ್ನಿಧ್ಯವನ್ನು ಸದಾ ಸಂಸ್ಮರಣೆಗೈದು ಅದರ ಹತ್ತಿರ ಹತ್ತಿರಕ್ಕೆ ನಮ್ಮನ್ನು ಸೆಳೆದೊಯ್ಯುವ ಪರಲೋಕದ ನಮ್ಮ ಗೈಡ್ ಈ ’ಗುರು.'

’ಸರ್ವೇಷಾಂ ಮಹಾಜನಾನಾಂ ಯೋಗಕ್ಷೇಮಾಭ್ಯುದಯ ಸಿದ್ಧ್ಯರ್ಥಂ’

ಎಂದು ಸಂಕಲ್ಪಿಸಿ ಸತತ ಜಗದ ಜನರ ಅಹವಾಲುಗಳನ್ನು ಜಗನ್ನಿವಾಸನ ಬಳಿಗೆ ತನ್ನ ತಪಸ್ಸಿನ ಮೂಲಕ ಒಯ್ಯುವ, ರವಾನಿಸುವ ಈ ಗುರುವೆಂಬ ಸಂದೇಶಕಾರನಿಗೆ, ಈ ನಮ್ಮ ಹಿತೈಷಿಗೆ, ಈ ನಮ್ಮ ಬಂಧುವಿಗೆ ನಮಿಸುವುದು ನಮ್ಮ ಕರ್ತವ್ಯವಾಗಿದೆ. ಹಾಗೆ ನಾವು ಮನಸ್ಸುಮಾಡಿ ಮುನ್ನಡೆಯೋಣ, ಗುರುದರ್ಶನಮಾಡಿ ಕೃತಾರ್ಥರಾಗೋಣ-ನಿಜದ ನೆಲೆಯನ್ನು ಅರಿಯುವತ್ತ ಅಂಬೆಗಾಲಿಡಲು ಪ್ರಯತ್ನಿಸೋಣ ಎಂಬ ಸದಾಶಯದೊಂದಿಗೆ ಜಗದ ಎಲ್ಲರ ಪರವಾಗಿ ಗುರುವಂದನೆ ಮಾಡುತ್ತಿದ್ದೇನೆ -

Justify Fullಅಜ್ಞಾನತಿಮಿರಾಂಧಸ್ಯ ಜ್ಞಾನಾಂಜಲಶಲಾಕಯಾ |
ಚಕ್ಷುರುನ್ಮೀಲಿತಂ ಯೇನ ತಸ್ಮೈ ಶ್ರೀಗುರವೇ ನಮಃ ||

ಸ್ಠಾವರಂ ಜಂಗಮಂ ವ್ಯಾಪ್ತಂ ಯತ್ಕಿಂಚಿತ್ ಸಚರಾಚರಂ |
ತತ್ಪದಂ ದರ್ಶಿತಂ ಯೇನ ತಸ್ಮೈ ಶ್ರೀಗುರವೇ ನಮಃ ||

ಜ್ಞಾನಶಕ್ತಿಸಮಾರೂಢಃ ತತ್ವಮಾಲಾವಿಭೂಷಿತಃ |
ಭುಕ್ತಿಮುಕ್ತಿಪ್ರದಾತಾ ಚ ತಸ್ಮೈ ಶ್ರೀಗುರವೇ ನಮಃ ||

ಕಾಷಾಯವಸ್ತ್ರಂ ಕರದಂಡಧಾರಿಣಂ ಕಮಂಡಲಂ ಪದ್ಮಕರೇಣ ಶಂಖಂ |
ಚಕ್ರಂ ಗದಾ ಭೂಷಿತ ಭೂಷಣಾಢ್ಯಂ ಶ್ರೀಪಾದರಾಜಂ ಶಿರಸಾ ನಮಾಮಿ ||

ಹಂಸ ಹಂಸಾಯ ವಿದ್ಮಹೇ ಪರಮಹಂಸಾಯ ಧೀಮಹಿ |
ತನ್ನೋ ಹಂಸಃ ಪ್ರಚೋದಯಾತ್ ||

|| ಓಂ ಸ್ವಸ್ತಿ ||