ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Monday, July 12, 2010

ಛಲ



ಛಲ


ಇರಲೇಕೆ ಈ ಜಗದಿ ಛಲವಿಲ್ಲದಿರೆ ಮನದಿ
ಬರಲುಂಟೆ ಪರಲೋಕದಾ ಗಂಟು ನಮಗೆ ?
ಹರಿವಾಣದೆದೆಯಲ್ಲಿ ಸಾಧಿಪಗೆ ನೂರೆಂಟು
ನರನ ನಾಡಿಯ ಮಿಡಿತ | ಜಗದಮಿತ್ರ

ಬರುವ ಸಂಕಷ್ಟಗಳ ದುಃಖ-ದುಮ್ಮಾನಗಳ
ಇರುವೆಯಂದದಿ ಕಂಡು ತಿರುಗಿ ಮುನ್ನಡೆದು
ಅರಿವು ಕೊಡುವರ ಕೂಡ ಹದ ಸ್ನೇಹವಂ ಪಡೆದು
ಹಿರಿಯೋ ಛಲದಾ ಕತ್ತಿ | ಜಗದಮಿತ್ರ

ಅರೆಘಳಿಗೆ ಮರೆತಿರಲು ಜಗವು ಮರೆವುದು ನಿನ್ನ
ಹೊರಗೆ ಸಾಧಿಪ ಸಮಯ ಸೀಮಿತವು ಇಹದಿ
ಹರನಿಲ್ಲ-ಹರಿಯಿಲ್ಲ ಜನರು ಮೊದಲೇ ಇಲ್ಲ
ಗುರಿಯಿಲ್ಲದಿರೆ ನಿನಗೆ | ಜಗದಮಿತ್ರ

ಜಗಕಾಗಿ ಬದುಕಿದರು ಶ್ರೀರಾಮ ಶ್ರೀಕೃಷ್ಣ
ಬಗೆಬಗೆಯ ಕಷ್ಟಗಳ ನುಂಗಿ ನೀರ್ ಕುಡಿದು
ಲಘುಬಗೆಯ ಕಾರ್ಪಣ್ಯಕಿಟ್ಟು ಮನದಲಿ ಕಿಚ್ಚು
ಧಗ ಧಗನೆ ಉರಿಸುನೀ | ಜಗದಮಿತ್ರ

ಹೇಡಿಯೆಂಬರು ನಿನಗೆ ನಗೆಯಾಡಿ ಬೆರಳಿಟ್ಟು
ಆಡಿಕೊಂಬರು ನಿನ್ನ ಎಲ್ಲರೆದುರಿನಲಿ
ಬೀಡಾಡಿಗಳ ನಿನ್ನ ಛಲದಿಂದ ದಮನಿಸುತ
ರೂಢಿಗುತ್ತಮನಾಗು | ಜಗದಮಿತ್ರ

ಛಲದಿಂದ ಶಿವಧನುವ ಮುರಿದನಾ ಶ್ರೀರಾಮ
ಹಲವು ಯೋಜನದುದ್ದ ಹಾರಿದನು ಹನುಮ !
ಗೆಲುವ ಗಾಂಢೀವಿ ತಾ ಪಡೆದ ಪಾಶುಪತಾಸ್ತ್ರ
ನಿಲುವು ನಿನಗಿದು ತರವು | ಜಗದಮಿತ್ರ

ಬಲವು ಬಹುಥರವಿಹುದು ಚೆಲುವು ಕ್ಷಣಿಕದ್ದಿಹುದು
ಒಲವು ಸಾರ್ಥಕ್ಯಕ್ಕೆ ದಾರಿಯಲಿ ದೀಪ
ಹಲವು ಹದಿನೆಂಟು ಪದ-ಪಟ್ಟಗಳು ನಿನಗಿಹವು
ಛಲವ ಸಾಧಿಸಿ ಪಡೆಯೋ | ಜಗದಮಿತ್ರ