ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Saturday, July 31, 2010

ಭಕ್ತಿ-ಶ್ರದ್ಧೆ-ಸೇವೆ


ಭಕ್ತಿ-ಶ್ರದ್ಧೆ-ಸೇವೆ

ಯಾತ್ರೆ ಹೋಗಲುಬೇಕು ತೀರ್ಥಕ್ಷೇತ್ರಂಗಳಿಗೆ
ಜಾತ್ರೆ ನೋಡಲು ಜನರ ಬಹುರೂಪಗಳನು
ಮಾತ್ರೆ ನುಂಗುವ ಬದಲು ರಕ್ತದೊತ್ತಡವದಕೆ
ಸೂತ್ರ-ಮನಮುದಗೊಳಿಸು | ಜಗದಮಿತ್ರ

ಪ್ರೀತಿಸುತ ದೈವಗಳ ಪಲ್ಲಕಿಯ ಹೊರು ನೀನು
ರೀತಿಯಲಿ ಬಹುವಿಧದಿ ಪೂಜಿಸುತಲವನ
ಭೀತಿಯಿಂ ಮುಗ್ಗರಿಸಿ ಹೊರನೋಟದಲಿ ಭಜಿಸೆ
ನೀತಿಯದು ಸರಿಯಿರದು | ಜಗದಮಿತ್ರ

ಕಾವ ದೇವನ ಕಂಡು ಜಾವದಲಿ ಸರದಿಯಲಿ
ಭಾವಭಕ್ತಿಯ ಹೃದಯ ತೆರೆದಿಡುತಲವಗೆ
ಮಾವು ತೆಂಗಿನಕಾಯಿ ಜಾಜಿ-ಮಲ್ಲಿಗೆಯಿಟ್ಟು
ಜೀವಕಳೆ ನೀ ಕಾಣು | ಜಗದಮಿತ್ರ

ಪತ್ರೆಯಾದರು ಇರಲಿ ಪುಷ್ಪವಾದರು ಬರಲಿ
ಗಾತ್ರದಲಿ ಮನ ಮಾತ್ರ ಬಹುದೊಡ್ಡದಿರಲಿ
ಹತ್ರದಲಿ ಸಿಗುವಂತ ಫಲ ನೀರು ಪನ್ನೀರು
ಪಾತ್ರೆಯೊಳಗಿಟ್ಟು ಮುಗಿ | ಜಗದಮಿತ್ರ

ಹೃದಯಕಮಲದ ಮಧ್ಯೆ ಸಿಂಹಾಸನದಿ ಕುಳಿತ
ಉದಯ ನಾರಾಯಣನ ಮುದದಿಂದ ನೆನೆದು
ಬದುಕಿನಲಿ ಜೊತೆಗಾರ ಅನನ್ಯ ಸಹಕಾರ
ವಿಧಿಯವನೆ ಹಿಡಿಯವನ | ಜಗದಮಿತ್ರ

ಛತ್ರ ಚಾಮರನೀಡು ಶಯನದುತ್ಸವ ಮಾಡು
ಉತ್ತರೋತ್ತರ ನಾಮ ಸ್ಮರಣೆಯದ ಪಾಡು
ಕ್ಷಾತ್ರನಾ ಚಂಡಕೌಶಿಕ ಜಪಿಸಿ ಮುನಿಯಾದ
ಖಾತ್ರಿಯದು ನೀ ಪಡೆವೆ | ಜಗದಮಿತ್ರ

ನರ್ತಿಸುತ ಕೈಕಾಲು ದಂಡಿಸುತ ಶಿರ ಬಾಗಿ
ವರ್ತನೆಯೊಳಾದೈವ ಸಂಪ್ರೀತಗೊಳಿಸು
ವ್ಯರ್ಥಮಾಡದೆ ಸಮಯ ಅಷ್ಟಾಂಗ ಸೇವಿಸಲು
ಪಾರ್ಥಸಾರಥಿಯೊಲಿವ | ಜಗದಮಿತ್ರ


Friday, July 30, 2010

ಗಾಡಿಕಾರನ ರೂಢಿಗಾಡಿಕಾರನ ರೂಢಿಗೂಡಲಿರುವೀ ಕಣ್ಣ
ದೂರದೆಡೆ ಹರಿಬಿಟ್ಟು
ಆಡಿ ತುಂಬಿದೆ ಮನದಿ ರೂಪಗಳನ
ಬೇಡವೆಂದರು ಬಿಡದೆ
ಕಿವಿಗಳನು ತೆರೆದಿಟ್ಟು
ಜಾಡಿಸುತ ತುಂಬಿರುವೆ ಶಬ್ಧಗಳನ


ನಾಡನೆಲ್ಲವ ತಿರುಗಿ
ನಾಸಿಕದಿ ಆಘ್ರಾಣಿಸಿ
ಕಾಡಿ ತುರುಕಿದೆ ಒಳಗೆ ಕಂಪುಗಳನ


ಬೀಡಾಡಿ ತಿನ್ನುತ್ತ
ಮತ್ತಷ್ಟು ಒದರೆಂದು
ಜೋಡಿಸಿದೆ ಜಿಹ್ವೆಯೊಳು ರುಚಿಗ್ರಂಥಿಗಳನ


ಬೀಡುಬಿಡುತಲಿ ಸ್ಪರ್ಶ
ಸುಖ ನೀಡಿ ಪಡೆಯೆಂದು
ಮಾಡುಮಾಡಿದೆ ಚರ್ಮ ಪದರಗಳನ


ಗಾಡಿಯನು ನಮಗಿತ್ತು
ಸವಲತ್ತು ಕೊಟ್ಟುಣಿಸಿ
ಗಾಢಾಂಧಕಾರದಲಿ ಕೂಡಿ ನಮ್ಮನ್ನ

ಗಾಡಿಕಾರನೆ ನಿನ್ನ
ಅಡಿಯೆಲ್ಲಿ ಮುಡಿಯೆಲ್ಲಿ ?
ವಾಡಿಕೆಯು ಪೂಜಿಪುದು ಹಲರೂಪಗಳನ

Thursday, July 29, 2010

ಶ್ರೀ ಭೈರವೆಶ್ವರ ಯುವಕರ ಸಂಘ(ರಿ)


ಶ್ರೀ ಭೈರವೆಶ್ವರ ಯುವಕರ ಸಂಘ(ರಿ)
ಹೆಸರೇಳು ತಾಲ್ಲೋಕು,ಸಕಲಾಪುರ ಹೋಬಳಿ, ಹುಡುಕಾಡು ಜಿಲ್ಲೆ, ಕರ್ನಾಟಕ ರಾಜ್ಯ
ಪಿನ್ನ್ :- ೫೬_ _ ೧೦ ಫೋನ್ : ೧೨೩೪೫
ಅಧ್ಯಕ್ಷರು : ಚೆಲುವಯ್ಯ ಕಾರ್ಯದರ್ಶಿಗಳು: ಪರಮೇಶಿ


ಸರ್ವರಿಗೂ ಹಾದರದ ಸ್ವಾಗತ

-- ಸೊಂಟದ ಕೀಲುಗಳಲ್ಲಿ, ಪಕ್ಕೆಗಳಲ್ಲಿ, ಬೆನ್ನುಹುರಿಯಲ್ಲಿ ಚಳಿಯಾದ ಅನುಭವ !

ಮೇಲಿನ ಸಂಘದವರು ವಾರ್ಷಿಕೋತ್ಸವ ಇಟ್ಟುಕೊಂಡು ಭಾಷಣ ಮಾಡಲು ಕರೆದರು. ಆಮಂತ್ರಣದಲ್ಲಿ ಹೆಸರು ಹಾಕಿಸಿಕೊಂಡೂ ಬಂದಿದ್ದರು. ಆಮಂತ್ರಣ ಓದಿ ತಬ್ಬಿಬ್ಬಾಗಿಬಿಟ್ಟೆ ! ಯಾಕ್ರೀ ಅನ್ನೋದೇ ಸಸ್ಪೆನ್ಸು !

ಆ ಊರಿನ ಒಂಡೆರಡು ಮಂದಿಗೆ ನಾನು ಚೆನ್ನಾಗಿ ಗೊತ್ತಂತೆ, ಹಾಗಾಗಿ " ನೀವೇ ಬರಬೇಕು" ಎಂಬ ಹಠ.

ಆಮಂತ್ರಣ ಮುಂದೆ ಓದಿ --

ಮರೆಯದಿರಿ ಮರೆತು ನಿರಾಶರಾಗದಿರಿ

ದ್ರೌಪತೀ ವಸ್ತ್ರಾಪಹರಣ ಎಂಬ ಪೌರಾಣಿಕ ನಾಟಕವನ್ನು ಹಾಡಿತೋರಿಸಲಿದ್ದಾರೆ.

ವಿಸೇಷ ಆಕರ್ಶಣೆ:- ಚಲುವೇ ಗೌಡರ ಹೊಸ ಸೀನರಿ, ಹೊಸ ಡ್ರಸ್ಸು ,ಏಕಕಾಲಕ್ಕೆ ಅನೇಕ ವಾಧ್ಯಗಳನ್ನು ನೋಡಿ ಆನಂದಿಸಿ

ಪಾತ್ರದಾರಿಗಳು

ಶ್ರೀ ದಫೇದಾರ ತಿಮ್ಮೇಗೌಡರು-ದುಶ್ಯಾಶನ
ಶ್ರೀ ಪೋಲೀಸ್ ಅನುಮೇಗೌಡರು-ಶಕುನಿ
ಶ್ರೀ ಕೇಬಲ್ ಭೈರಪ್ಪ--ಭೀಮ
ಶ್ರೀ ಸಾಹುಕಾರ್ ಚಿನ್ನಪ್ಪ--ಕೌರವ
ಶ್ರೀ ನಂದಿನಿ ಮಾದೇಶ--ಅರ್ಜುನ
ಶ್ರೀ ಜಮೀನ್ದಾರ್ ಜವರಯ್ಯ-ನಕುಲ
ಶ್ರೀ ಮೀಸೆ ಹೊನ್ನಪ್ಪ-ಸಹದೇವ
ಶ್ರೀ ಕಲಾಕಾರ್ ಮಂಜು-ಧರ್ಮರಾಯ
ಶ್ರೀ ಗಂಗಹನುಮಯ್ಯ [ನಿವ್ರೂತ್ತ ಬಿಎಸೆನೆಲ್ ವ್ಯವಸ್ಥಾಪಕರು]-- ಕ್ರಿ ಷ್ಣ
ಶ್ರೀ ಚಿಕ್ಕಹನುಮಂತರಾಯಪ್ಪ-ದ್ರೌಪತಿ
ಸೀನ, ಪುಟ್ಟಣ್ಣ, ರೇವಣ್ಣ, ಕರಿಬಸವ, ಬಸ್ಯ, ವೆಂಕಿ, ಯಲಹಂಕ ಸೋಮು, ಮೈಕೊ ಕ್ರಿಷ್ಣಪ್ಪ,
ದೊಡ್ಡಹನುಮ, ದೊಡ್ಡಗಣೇಷ, ವೆಂಕಟೇಶು, ರಾಜು, ಬಾಬು, ಕಡ್ಡೀಪುಡಿ ಆನಂದ, ತರ್ಲೆರಾಮ, ಗೋವಿಂದು
ಇನ್ನೂ ಅನೇಕರು ವಿವಿಧ ಪಾತ್ರಗಳಲ್ಲಿ ತಮ್ಮನ್ನು ರಂಜಿಸಲಿದ್ದಾರೆ.

ನಾಟಕ ನಿರ್ದೇಶಕರು :- ಹಾಮಾ ಬಾಲಯ್ಯ ಬಣ್ಣ :- ಮೇಕಪ್ ರಾಜು ಕ್ಯಾಸಿಯೋ :- ಪ್ರಕಾಶ್


ಕುಮಾರಿ ಮೆಗಾಶ್ರೀ ಮತ್ತು ಕುಮಾರಿ ಹೇಮಾಶ್ರೀ ಇವರುಗಳಿಂದ ಭರತನಾಟ್ಯ

ಸಭಾ ಕಾರ್ಯಕ್ರಮ :- ರಾತ್ರಿ ೭:೩೦ ರಿಂದ

ಸ್ವಾಗತಗೀತೆ
ಸ್ವಾಗತಭಾಶಣ
ಮಾಲಾರ್ಪಣೆ
ಮುಖ್ಯ ಅತಿಥಿಗಳ ಭಾಶಣ
ಸಂಘದ ವಿವಿಧ ಸ್ಪರ್ಧೆಗಳಲ್ಲಿ ಗೆದ್ದವರಿಗೆ ಬಹುಮಾನ ವಿತರಣೆ
ಅಧ್ಯಕ್ಷರ ಭಾಶಣ
ವಂದನಾರ್ಪಣೆ

ರಾತ್ರಿ ೯:೩೦ ರಿಂದ ವಿವಿಧ ಮನೋರಂಜನಾಕಾರ್ಯಕ್ರಮಗಳು ಹಾಗೂ ದ್ರೌಪತೀ ವಸ್ತ್ರಾಪಹರಣ ನಾಟಕ

ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಬನ್ನಿ, ನಿಮ್ಮವರನ್ನೂ ಕರೆತನ್ನಿ
-------------------

--ಇಲ್ಲಿಗೆ ಆಮಂತ್ರಣ ಪತ್ರಿಕೆ ಮುಗಿಯಿತು

ಈಗ ಅಲ್ಲಿ ನಡೆದ ಅನುಭವದ ಬಗ್ಗೆ ಕೇಳಿ

ಅವತ್ತು ಈ ಸಂಘದ ವತಿಯಿಂದ ಬಾಡಿನ ಊಟ ಎರ್ಪಾಟಾಗಿತ್ತಂತೆ ! ಮಧ್ಯಾಹ್ನದಿಂದ ಸಾಯಂಕಾಲದವರೆಗೆ ಗ್ರಾಮಸ್ಥರು, ಪರಊರವರು, ಅವರವರ ನೆಂಟರಿಷ್ಟರು ಎಲ್ಲಾ ಸೇರಿ ಸರಿಸುಮಾರು ೩ಸಾವಿರ ಜನರಿದ್ದರು.ಸಭೆಗೆ ಬರುವಾಗಲೇ ಅಲ್ಲಿ ಕುಳಿತ ಕೆಲವರ ಹತ್ತಿರದಿಂದ ಪಾಸಾಗಿ ಬರುವಾಗ ಹುಳಿ ಹುಳಿ ವಾಸನೆ ಬರುತ್ತಿತ್ತು.
ಸಂಜೆ ಸಭೆ ಶುರುವಾಯ್ತು.

" ಈಗ ಸ್ವಾಗತ ಗೀತೆ-ಕುಮಾರಿ ರಶ್ಶಿತಾರವರಿಂದ "

ಸ್ವಾಗತವೂ ನಿಮಗೆ ಸುಸ್ವಾಗತವೂ ನಿಮಗೆ --ಸ್ವರ ಹೊರಟಾಗ ಡಬ್ಬುಹಾಕಿಕೊಂಡ ಕಿವಿ ಮತ್ತೆತೆರೆಯುವುದೇ ಇಲ್ಲವೇನೋ ಅಂದುಕೊಂಡಿದ್ದೆ. ಅಂತೂ ಮುಗಿಯಿತು, ಉಸ್ಸಪ್ಪಾ! ಶ್ಶು...

" ಈಗ ಸ್ವಾಗತ ಭಾಷಣ- ನಮ್ಮ ಸಂಘದ ಸದಸ್ಯರಾದ ಗೋವಿಂದುರವರಿಂದ"

" ಮಾಹನೀಯರೇ ಮಹಳಿಯರೇ ಮತ್ತು ನಮ್ಮ ಸಂಘದ ಪದಾಧಿಕಾರಿಗಳೇ, ಈಗ ಸ್ವಾಗತ ಭಾಷಣವನ್ನುಮಾಡುವಂತೆ ನಮ್ಮ ಹಿರಿಯ ಸದಸ್ಯರಾದಂತ ವೆಂಕಿರವರು ಹೇಳಿದರು. ಅವರ ಮಾತನ್ನು ಮನ್ನಿಸಿ ಈಗ ಸುರುಮಾಡುತ್ತೇನೆ.
ಮೊದಲ್ನೇದಾಗಿ ಗಣ್ಯರಾದಂತಹ ಶ್ರೀ ವಿ.ಆರ್.ಭಟ್ಟರು ಬೆಂಗಳೂರಿಂದ ನಮ್ಮ ಕರೆಗೆ ಹೋ ಗೊಟ್ಟು ಹಿಲ್ಲೀತಂಕ ಬಂದಿದಾರೆ ಹವರಿಗೆ ಹಾದರದ ಸ್ವಾಗತ.

ಎರಡ್ನೇದಾಗಿ ನಮ್ಮ ಸನ್ಮಾನ್ಯ ಅಧ್ಯಕ್ಸರಾದಂತ ಶ್ರೀ ಚೆಲುವಯ್ಯನೋರು ಬಹಳ ಮುಂಚಿತವಾಗಿ ಬಂದು ಹೀ ಸ್ಥಾನವನ್ನು ಹಲಂಕರಿಸಿದ್ದಾರೆ ಹವರಿಗೂ ಸ್ವಾಗತ.

ಮೂರನೇದಾಗಿ ಅನೇಕ ಅಳ್ಳಿಗಳಿಂದ ತಾವೆಲ್ಲಾ ಬಂದು ಸೇರಿದ್ದೀರಿ ತಮಗೆಲ್ಲಾ ಸುಸುಸ್ವಾಗತ.

ಇನ್ನು ನಾಲ್ಕನೇದಾಗಿ ನಮ್ ಗ್ರಾಮಸ್ಥರು ಹಿರೀಕ್ರು ಎಲ್ಲಾ ಬಂದವ್ರೆ, ಮಕ್ಳು-ಮರಿಗೊಳ್ನ ಎತ್ಕಂಡು ತಮ್ಮ ಅಲವಾರು ಕಷ್ಟಗೋಳ ಮಧ್ಯೆನೂವೆ ನಮ್ಮ ಎಂಗುಸ್ರೆಲ್ಲಾ ಬಂದವ್ರೆ ಅವರೆಲ್ಲರಿಗೂ ಸ್ವಾಗತ ಸುಸ್ವಾಗತ.

ಇನ್ನು ಕೊನೇಕಿತ ನಮ್ ಸಂಘದ ಕಾರ್ಯದರ್ಸಿಗೋಳಾದಂತ ಶ್ರೀಮಾನ್ ಪರಮೇಶಿ ಇದ್ದಾರೆ ಹಾಗೂ ಅನೇಕ ಸದಸ್ಯರುಗೋಳು ಬಂದವ್ರೆ, ತಮ್ಮ ಇರೋಬರೋ ಕೆಲ್ಸಾನೆಲ್ಲ ಪಕ್ಕಕ್ ಮಡೀಕಂಡು ಬಂದವ್ರೆ ಇದೆಲ್ಲಾ ಯಾಕೇಳಿ ನಮ್ಮೂರ್ ಜನ್ಕೆ ಒಸಿ ಸಂತೋಸಾಗ್ಲಿ, ವರ್ಸದಾಗ ಒಂದ್ಕಿತಾ ಈ ತರ ಕಾರ್ಯಕ್ರಮ್ಗೋಳ್ನ ಮಡೀಕಂಡ್ರೆ ಎಲ್ಲಾ ಚೆನ್ನಾಗಿರ್ತೈತೆ ಹಂತ ಅಮ್ಮಕೊಂಡೀವಿ, ತಮ್ಮೆಲ್ಲರ್ಗೂನೂವೆ ಹಾದರದ ಸ್ವಾಗತ.

ಇಷ್ಟು ಏಳಿ ನನ್ನ ಚಿಕ್ಕ ಭಾಶಣ ಮುಗಸ್ತಾ ಇದೀನಿ ನಮುಸ್ಕಾರ, ಜೈಹಿಂದ್, ಜೈ ಕರ್ನಾಟಕ, ಸಿರಿಗನ್ನಡಂ ಗೆಲ್ಗೆ "

ನನಗೆ ನಗಬೇಕೋ ಅಳಬೇಕೋ ಗೊತ್ತಾಗ್ಲಿಲ್ಲ.

" ಈಗ ಮಾಲಾರ್ಪಣೆ ನಮ್ಮ ಸಂಘದ ಕಾರ್ಯದರ್ಸಿಗಳಾದಂತ ಸ್ರೀಮಾನ್ ಪರಮೇಶಿ ಎಲ್ಲಿದ್ರೂ ಅರ್ಜೆಂಟಾಗಿ ಸ್ಟೇಜಿನ್ ಮ್ಯಾಕೆ ಬರ್ಬೇಕು "

ಆಕಡೆ ಈಕಡೆ ಆಕಡೆ ಈಕಡೆ ಕತ್ತಾಡಿಸಿ ಹುಡುಕಾಡಬೇಕಾಯ್ತು ಹಾರಹಾಕುವವರಿಗಾಗಿ! ಅಂತೂ ಪರಮೇಶಿ ಬಂದ್ರು.

"ಮೊದಲನೇ ದಾಗಿ ನಮ್ಮ ಮುಖ್ಯ ಹತಿಥಿ ಸ್ರೀ ವಿ.ಆರ್.ಭಟ್ ರವರಿಗೆ ಮಾಲಾರ್ಪಣೆ "

" ಏ ಬಸ್ಯಾ ಹೊಡೀರ್ಲಾ ಚಪ್ಪಾಳೆನಾ ಏನ್ ಹಾಂಗ್ ಮಕಮಕ ನೋಡ್ತಾಯ್ಕಂಡ್ರಿ ? " --ಇದೂ ಅನೌನ್ಸರ್ ಹೆಳಿದ್ದೇ ಆಗಿದೆ!

" ಎರುಡ್ನೇ ದಾಗಿ ನಮ್ ಅಧ್ಯಕ್ಸರೂಗೆ ಮಾಲಾರ್ಪಣೆ "

ಸಭೆ ನಡೆಯುತ್ತಿರುವಾಗ ಅನಿರೀಕ್ಷಿತವಾಗಿ ಅಲ್ಲಿನ ಎಮ್.ಎಲ್.ಏ ಬಂದ್ರು. ಅವರನ್ನು ಕಂಡವ್ರೇ ಸಂಘದ ಅಧ್ಯಕ್ಷರು ಪರಮೇಶಿಯವರನ್ನು ಪಕ್ಕಕ್ಕೆ ಕರೆದು ಕೇಳಿದರು " ಪರಮೇಶಿ ಎಸ್ಟ್ರಾ ಆರ ತಂದಿದ್ದು ಐತೇನ್ಲಾ ಒಳೀಕ್ಕೆ ?"
ಪರಮೇಶಿ ಎದ್ನೋ ಬಿದ್ನೋ ಅಂತ ಗ್ರೀನ್ ರೂಮ್ ಕಡೆ ಚೆಕ್ ಮಾಡೋಕೆ ಹೋದ್ರು.

ಅನೌನ್ಸರ್ ಘೋಷಿಸಿದ " ಇದೀಗ ತಾನೇ ಸನ್ಮಾನ್ಯ ಎಮ್ಮೆಲ್ಲೆ ಸಾಹೇಬ್ರು ಸೋಮಣ್ಣ ಬಂದವ್ರೆ, ತಮ್ಮ ಬಿಡುವಿಲ್ದ ಕಾರ್ಯಗೋಳ ನಡುವೆ ಬರಕಾಯಾಕಿಲ್ಲ ಅಂದಿದ್ದ್ರೂನೂವೆ ಹಿಂದು ಬಂದವ್ರೆ ಹವರಿಗೆ ಹಾದರದ ಸ್ವಾಗತವನು ಕೋರುತ್ತೇವೆ "

" ಈಗ ಸನ್ಮಾನ್ಯ ಎಮ್ಮೆಲ್ಲೆ ಸೋಮಣ್ಣೋರ್ಗೆ ನಮ್ಮ ಅಧ್ಯಕ್ಸರಿಂದ ಆರಾರ್ಪಣೆ"

--ಇದೆಲ್ಲಾ ಮುಗೀತು. ನನಗೆ ಬಳಸುವ ಅಪ್ಪಟ ಕನ್ನಡ ನೋಡಿ ಬಹಳ ನಗುಬರುತ್ತಿತ್ತು, ಒಮ್ಮೊಮ್ಮೆ ವಿಷಾದವೂ ಆಗುತ್ತಿತ್ತು!

ನಮ್ಮ ಹತ್ತಿರ ಬಂದ ಅನೌನ್ಸರ್ ಯಾರು ಮೊದಲು ಭಾಷಣಮಾಡುತ್ತಾರೆ ಅಂತ ಕೂಗಲಿ ಎಂದು ಕಿವಿಗಳಲ್ಲಿ ಕೇಳಿದರು. ಅಂತೂ ನಮ್ಮೊಳಗೆ ತೀರ್ಮಾನವಾಗಿ ಮೊದಲು ನಾನೇ ಮಾತನಾಡಬೇಕೆಂದುತಿಳಿದುಬಂತು. ನಾನು ಮಾತನಾದಲು ನಿಂತೆ. ನನ್ನ ಬಾಯಿಂದ ಮಾತು ಹೊರಬರುವ ಪ್ರತೀ ಹಂತದಲ್ಲಿ ನನಗೆ ನಗು ಉಕ್ಕರಿಸಿ ಬರುತ್ತಿತ್ತು. ನನ್ನ ಭಾಷಣವನ್ನು ಕೇಳುವ ರುಚಿ-ಅಭಿರುಚಿ ಇದ್ದವರು ಅಲ್ಲಿ ಯಾರೂ ಇದ್ದಹಾಗಿಲ್ಲ ಎಂಬ ನನ್ನ ಅನಿಸಿಕೆ ನಿಜವಾಗಿತ್ತು. ನನ್ನ ಭಾಷಣದ ಅರ್ಥವನ್ನು ಕೇಳಿದರೆ ಬಹುಶಃ ರಾಮನಿಗೆ ಸೀತೆ ಏನಾಗಬೇಕು ಎಂದು ರಾಮಾಯಣ ಕೇಳಿದವರಲ್ಲಿ ಪ್ರಶ್ನಿಸಿದರೆ ಸೀತೆ ರಾಮನಿಗೆ ತಂಗಿ ಅಂದಹಾಗಾಯ್ತು ಅಂದ್ರಂತೆ-- ಈ ಥರ ಆಗಿತ್ತು. ಕೆಲವೊಮ್ಮೆ ಹೀಗೇ ಆಗಿಬಿಡುತ್ತದೆ. ನಾವು ಬರಲಾಗುವುದಿಲ್ಲ ಎನ್ನಲಾಗುವುದಿಲ್ಲ, ಹೋಗದಿದ್ದರೆ ನಮಗೆ ಸೊಕ್ಕು ಅಂತಾರೆ ಹೋದರೆ ಈ ರೀತಿ ’ ಆರಾರ್ಪಣೆ’ !

" ಸಂಘದವರ ಚಟುವಟಿಕೆಗಳ ಬಗ್ಗೆ ಹಾಗೂ ಜನೋಪಕಾರೀ ಕೆಲಸಗಳ ಬಗ್ಗೆ ಕೇಳಿದ್ದೇನೆ, ಪ್ರೀತಿಯಿಂದ ಸಂಘದ ಸದಸ್ಯರ ಆಹ್ವಾನಕ್ಕೆ ಬೆಲೆಕೊಟ್ಟು ತಾವೆಲ್ಲಾ ಇಲ್ಲಿ ಬಂದು ಸೇರಿದ್ದೀರಿ, ಇದು ನನಗೆ ಬಹಳ ಸಂತೋಷ "

ಹೇಳುತ್ತಿರುವಾಗಲೇ ಮುಂದಿರುವ ಕೆಲವು ಗಂಡಸರು ಗೊರೆಯುವುದು ಕೇಳಿಸಿತು. ಹಿಂದೆ ಕತ್ತಲಲ್ಲಿ ಯಾರ್ಯಾರೋ ಏನೇನೋ ಬಡಬಡಾಯಿಸುತ್ತಿದ್ದರು. ನನ್ನ ಮಾತು ಅತ್ಯಂತ ಬೇಗ ಮುಗೀತು-ಇದರರ್ಥ ಜಾಸ್ತಿ ನನ್ನ ಮಾತಿನ ಅವಶ್ಯಕತೆ ಅಲ್ಲಿ ಕಂಡುಬರಲಿಲ್ಲ. ಸಂಘದವರು ಪಾಪ ಭಕ್ತಿಯಿಂದ ಕರೆದಿದ್ದಾರೆ-ಹೋಗಿದ್ದೇನೆ. ಅದಕ್ಕೇ ಸ್ವೀಟ್ ಆಂಡ್ ಶಾರ್ಟ್ ಆಗಿ ಮುಗಿಸಿಬಿಟ್ಟೆ.

" ಈಗ ನಮ್ಮ ಎಮ್ಮೆಲ್ಲೆ ಸ್ರೀ ಸೋಮಣ್ಣೋರು ಸಭಿಕರನ್ನುದ್ದೇಸಿಸಿ ಹೆರಡು ಮಾತನ್ನಾಡಲಿದ್ದಾರೆ "

ಶ್ರುವಾಯ್ತು ನೋಡಿ, ಹನ್ನೆರಡು ಇಂಚಿನ ಡ್ರಿಲ್ ಬಿಟ್ಟಿನ ಕೊರೆತ ಹಾಗೂ ಮೊರೆತ, ಇಡೀ ಸಭೆ ನಿದ್ದೆಮಾಡುತ್ತಿತ್ತು ಎನ್ನಬೇಕು, ಎಮ್ಮೆಲ್ಲೆ ಬಾಲಬಡುಕರು ನೂರಾರು ಜನರನ್ನ " ಏ ಬನ್ರೋ " ಅಂತ ಅವ್ರೇ ಎಬ್ಬಿಸ್ಕೊಂಡು ಬಂದಿದ್ರು. ಅವರೆಲ್ಲ ಅಲ್ಲಲ್ಲಿ ಕೂತವರು ವಿಧಿಯಿಲ್ಲದೇ ಚಪ್ಪಾಳೆ ತಟ್ಟುತ್ತಿದ್ದರು! ಅಂತೂ ೩೦ ನಿಮಿಷಗಳ ಡ್ರಿಲ್ ಈಗ ನಿಂತಿತು.

" ಈಗ ನಮ್ಮ ಸಂಘದ ಅಧ್ಯಕ್ಸರಾದಂತ ಸ್ರೀಮಾನ್ ಸ್ರೀ ಚಲುವಯ್ಯರವರು ತಮ್ಮ ಹಭಿಪ್ರಾಯವನ್ನು ತಮ್ಮೊಡನೆ ಅಂಚಿಕೊಳ್ಳಲಿದ್ದಾರೆ"

ಚಲುವಯ್ಯನವರು ಶುದ್ಧ ಗ್ರಾಮ್ಯ ಭಾಷೆಯಲ್ಲಿ ಕೊರೆದಿದ್ದೇ ಕೊರೆದಿದ್ದು! ಇಡೀಸಭೆಯಲ್ಲಿ ಪಿನ್ ಡ್ರಾಪ್ ಸೈಲನ್ಸ್ ! ಕಾರಣ ಗೊತ್ತೇ- ಎಲ್ಲರೂ ನಿದ್ದೆಮಾಡುತ್ತಿದ್ದರು. ಸಂಘಕ್ಕೆ ಹೊಸದಾಗಿ ಸೇರಿದ ಪಡ್ಡೆಗಳಷ್ಟು ಜನ ಮಧ್ಯೆ ಮಧ್ಯೆ ಕೂತವರು ಟಪ ಟಪ ಟಪ ಟಪ ಅಂತ ನಿಲ್ಲಿಸಿ ಎನ್ನುವವರೆಗೂ ಚಪ್ಪಾಳೆ ತಟ್ಟುತ್ತಿದ್ದರು, ಅದು ಅವರ ಅಧ್ಯಕ್ಷರಮೇಲಿನ ಅಭಿಮಾನದಿಂದ. ವೇದಿಕೆಯ ಪರದೆಯ ಹಿಂದೆ ಯಾವುದೋ ಪಡ್ಡೆ ಹೇಳುತ್ತಿತ್ತು " ನಮ್ ಚಲವಯ್ಯೋರು ಯಾರ್ಗೂ ಬಿಟ್ಕೊಡಾಕಿಲ್ಲ, ಭಾಳ ಚನ್ನಾಗ್ ಮಾತಾಡ್ತರೆ, ಯಾರೂ ಎಲ್ಲಿದ್ರೂನೂವೆ ಚಪ್ಪಾಳೆ ತಟ್ಟಬೇಕು ಕಣಪ್ಪೋ"
ಮುಗೀತು!

"ಈಗ ಹೊಂದನಾರ್ಪಣೆ ನಮ್ಮ ಸಂಘದ ಹಿರಿಯ ಸದಸ್ಯರಾಗಿರತಕ್ಕಂತಹ ಶಾಂಭಪ್ಪನವರಿಂದ "

" ಮಾನ್ಯ ಅಧ್ಯಕ್ಸರೇ, ಪೂಜ್ಯ ಗುರುಗಳೇ ಹಾಗೂ ನನ್ನ ಸಹಪಾಠಿಗಳೇ " -ಏನಪ್ಪಾ ಇದು ಎಂದು ಆಶ್ಚರ್ಯವಾಯಿತು.
"ಶಾಂಭಪ್ಪಾ ಅದು ಸ್ಕೂಲ್ದು ಕಣ್ಲಾ, ಸಂಘದ್ದೇಳ್ಲಾ " ಅಂತ ಅನೌನ್ಸರ್ ಹೇಳಿದ್ದು ಮೈಕ್ ನಲ್ಲಿ ಎಲ್ಲರಿಗೂ ಕೇಳಿಸಿತು, ಆದರೆ ಯಾರೂ ನಗಲಿಲ್ಲ : ಕಾರಣ ನೀವೇ ಊಹಿಸಿಕೊಳ್ಳಿ. ಮತ್ತೆ ಮುಂದುವರೀತು.

" ನನ್ನ ಹೊಂದನಾರ್ಪಣೆ ಮಾಡಕಾಕವ್ರೆ, ಗೊತ್ತಿದ್ದಷ್ಟ್ ಏಳ್ಬುಡು ಅಂದ್ರು. ನಮ್ಗೆಲ್ಲಾ ತೀರಾ ಭಾಶಣ ಮಾಡಕಾಯಾಕಿಲ್ಲ. ಅದ್ಕೇ ಒಸಿ ಅಡ್ಜಸ್ಟ್ ಮಾಡ್ಕೋಬುಡಿ. ತಪ್ಪ್ನೆಲ್ಲಾ ನಿಮ್ಮ್ ಹೊಟ್ಟೆವಳೀಕಾಕೊಂಬುಡಿ. ಮೊದಲ್ನೇ ದಾಗಿ ಇಲ್ಲಿಗೆ ಭಾಶಣ ಮಾಡಲು ಬಂದಿರತಕ್ಕಂತಹ ಸ್ರೀ ವಿ.ಆರ್.ಭಟ್ಗೆ ಹೊಂದನೆಗಳು. ಎರಡ್ನೇದಾಗಿ ಸನ್ಮಾನ್ಯ ಹೆಮ್ಮೆಲ್ಲೆ ಸಾಏಬ್ರು ಕುಂತವ್ರೆ ಹವರ್ಗೂ ಹೊಂದನೆಗಳು. ಮೂರ್ನೇದಾಗಿ ನಮ್ಮ್ ಪಕ್ಕದಳ್ಳಿ ಕಡೆಗಿಂದೇಲ್ಲಾ ಕಿತ್ತೆದ್ ಬಂದಾರಲ್ಲ ಅಂತವ್ರಗೆಲ್ಲ ಹೊಂದನೆಗಳು. ಈ ಕಿತಾ ನಮ್ಮೂರ್ ಜನಗೋಳ್ಗೆ ಎಲ್ರೂಗೂನು ಹೊಂದನೆಗಳು. ನಾಟಕದಾಗೆ ನನ್ನ ಪಾರ್ಟ್ ನೋಡೋಕೋಸ್ಕರ ನಮ್ಮ ಅತ್ತೆ-ಮಾವ,ಬಾಮೈದ ಎಲ್ಲಾದಿರು ಬಂದವ್ರೆ ಅವ್ರಗೆಲ್ಲಾನುನೂವೆ ಹೊಂದನೆಗಳು. ನಮ್ ಸಂಘ ಭಾಳ ಚೆನ್ನಾಗಿ ಕೆಲ್ಸ ಮಾಡ್ತೈತೆ, ಗಣೇಶಬ್ಬ, ಊರಬ್ಬ ಇದೆಲ್ಲಾ ಮಾಡೋದು, ಅಂದಾನ, ರಸ್ತೆರಿಪೇರಿ,ರಕ್ತದಾನ ಇದೆಲ್ಲಾ ಮಾಡ್ತವ್ರೆ ನಮ್ ಹೈಕ್ಳು ಅವ್ರೀಗೆಲ್ಲಾನುನೂವೆ ಹೊಂದನೆಗಳು,ಇಲ್ಲಿಗೆ ನನ್ನ ಭಾಷಣ ಮುಗುಸ್ತೀನಿ, ನಂಗೆ ಭಾಶಣಮಾಡೋದು ಕಲ್ಸಬುಟ್ಟು ಹೀಂಗ್ ನಿಂತ್ಕಾ, ಚೀಟಿ ಹೀಂಗ ಮಡೀಕಾ ಅಂತೆಲ್ಲಾ ಹೇಳ್ಕೊಟ್ಟು ನಮ್ಮನ್ನು ಬೆಳ್ಸಸದ ನಮ್ ಅಧ್ಯಕ್ಸರುಗೆ ನನ್ನ ನಮಸ್ಕಾರ"

" ಇಲ್ಲಿಗೆ ಸಭಾ ಕಾರ್ಯಕ್ರಮ ಮುಗೀತು, ಈಗ ಭರತನಾಟ್ಯ ಸುರುವಾಗ್ತೈತೆ, ಎಲ್ಲಾ ಅಲ್ಲಲ್ಲೇ ಕೂತಿದ್ದು ಸಾಂತರೀತಿಯಿಂದ ನೊಡ್ಬೇಕು ಹಂತೇಳಿ ಪ್ರಾರ್ಥನೆ "

ಅಯ್ಯಯ್ಯೋ ರಾಮ ! ಅಂತೂ ಸಭೆ ಮುಗೀತು. ನಂತ್ರ ಮುಂದೆ ಕೂತು ಮಜಾ ತಗೋಬೇಕಲ್ಲ! ದೂರದ ಹಳ್ಳಿಗಾಡು ಬೇರೆ. ರಾತ್ರಿ ವಾಹನ ಸೌಲಭ್ಯ ಇರೋದಿಲ್ಲ. ಅದಕ್ಕಿಂತ ಬಂದದ್ದಕ್ಕೆ ಅಲ್ಲೇ ಮುಂದೆ ಕೂತು ಬೆಳಗುಮಾಡುವ ಪರಿಸ್ಥಿತಿ ನನ್ನದಾಗಿತ್ತು!

[ಮುಂದಿನ ಭಾಗದಲ್ಲಿ ನಾಟಕದ ಬಗ್ಗೆ ಓದಿ- ಒಂದೆರಡು ದಿನಗಳಲ್ಲಿ!]

Wednesday, July 28, 2010

ಹೊಲಸು ಹೊರುವರು ನಾವು !!ಹೊಲಸು ಹೊರುವರು ನಾವು !!

[ಇಂದಿನ ರಾಜಕೀಯದ ಜನರ ಕುರಿತು, ಅವರನ್ನು ಆಯ್ದು ಕಳಿಸಿದ ನಮ್ಮ ಮಂಕು ಬುದ್ಧಿಯ ಕುರಿತು ಈ ವಿಪ್ಲವದ ಕವನ]

ಹೊಲಸು ತುಂಬಿದ ಬುಟ್ಟಿ
ಹೊತ್ತು ನಾವೀವತ್ತು
ಕಳೆಗುಂದಿ ಕುಳಿತಿಹೆವು ಮಂಗನಂತೆ !
ಕಳಿಸುವಾಗಿರಲಿಲ್ಲ
’ತಲೆ’ ನಮಗೆ ತಲೆಯಲ್ಲಿ
ಬಿಳಿಹಂದಿ ಆನೆಗಳು ಬೆಳೆದವಂತೆ!

ಹಳೆಯ ಪೈಜಾಮಿನಲಿ
ಹಲವತ್ತುಕೊಳುತಾಗ
ಬಂದಿದ್ದ ಹಲವರನು ನಾನು ಕಂಡೆ
ಕಳೆಕಳೆಯ ಹೊಸ ವೇಷ
ಹೊಸ ಭಾಷೆ ಹೊಸ ಬದುಕು
'ಬಂದಿದ್ದು ಏಕೆಂಬ' ಮಾತನುಂಡೆ!

ಇಪ್ಪತ್ತು ಅಂಶಗಳ
ಜನಸೇವೆ ತಮದೆನುತ
ಒಪ್ಪತ್ತು ಊಟಕ್ಕೂ ಸೈ ಎಂದರಾಗ
ಒಪ್ಪುತ್ತ ಭೂರಮೆಯ
ಭಾರ ಕಳೆಯುವೆವೆಂದು
ತಪ್ಪುದಾರಿಗೆ ಎಳೆದು ಬದಲಿಸುತ ರಾಗ !

ಜನತೆ ಸುಖಿಸುವುದಕ್ಕೆ
ಘನಥರದ ಕಾರ್ಯಗಳ
ಮನವಿಟ್ಟು ಮಾಡುವುದು ಅವರಿತ್ತ ವಚನ
ಘನತೆಗಪ್ಪುದು ಕುಂದು
ಗಣಿಧಣಿಗಳಿಲ್ಲದಿರೆ
ಗಹನವಾಗಿದೆ ಗಾತ್ರ ಆಗಿಲ್ಲ ಪಚನ !

ಮನುಕುಲದ ಮುನ್ನಡೆಗೆ
ತನುಮನದ ಸಹಕಾರ
ಕನವರಿಸಿ ನಡೆಸುವೆವು ಕಾಲ್ನಡಿಗೆಯೆನುತ
ಅನುಕೂಲಕೊಂದು ಥರ
ಜನಜಾತ್ರೆ ಹೊಮ್ಮಿಸುತ
ತನುಕುಣಿಸಿ ಕೈ ತೋರಿ ಹಲವಾರು ಕುಣಿತ !

ಸೌಧದಲಿ ಸಭೆಗಳಲಿ
ವಾದ ಮಂಡಿಸುವಾಗ
ಬಾಧಿಸುವುದವುಗಳಿಗೆ ಅಸಹ್ಯ ರೋಗ !
ಕೌದಿ ಹೊದ್ದುದ ಮರೆತು
ಬೈದಾಡಿ ಕಬ್ಬರಿದು
ಕಾದಾಟನಡೆಸಿ ಸಭ್ಯತೆಮರೆವರಾಗ

ನಮ್ಮನಾಳುವ ಜನಕೆ
ಬಿಡಲೊಮ್ಮೆ ಬಾಣವನು
ಇರುತಿಲ್ಲ ನಮ್ಮಕಡೆ ಸಿದ್ಧ ಬತ್ತಳಿಕೆ
ತಿಮ್ಮ ಯಂಕರ ಕರೆದು
ಭುಜ ತಟ್ಟಿ ಹೊಗಳುವರು
ಬರುತಿಲ್ಲ ನಮಗೆಲ್ಲ ಬುದ್ಧಿ ಯಾತಕ್ಕೆ ?

Tuesday, July 27, 2010

ಭಾಗ್ಯದ ಬಳೆಗಾರ ಹೋಗಿಬಾ ನನ್ನ ತವರೀಗೆ

ಚಿತ್ರ ಋಣ : ಅಂತರ್ಜಾಲ

ಭಾಗ್ಯದ ಬಳೆಗಾರ ಹೋಗಿಬಾ ನನ್ನ ತವರೀಗೆ


ತನ್ನ ತಂದೆ-ತಾಯಿಗಳನ್ನು ಮಗಳು ನೆನೆಸಿಕೊಂಡಷ್ಟು ಮಗ ನೆನೆಸಿಕೊಳ್ಳಲಾರ! ಮದುವೆ ಆಗುವವರೆಗೆ ಮಗ ಎಲ್ಲದಕ್ಕೂ " ಅಮ್ಮ" " ಅಮ್ಮ" " ಅಮ್ಮ" ಎನ್ನುತ್ತಿದ್ದವನು ಮದುವೆಯಾದ ಘಳಿಗೆಯಿಂದ ಅಮ್ಮನನ್ನು ದೂರವಿಡಲು ಪ್ರಾರಂಭಿಸುತ್ತಾನೆ. ವಾಸ್ತವವಾಗಿ ಮದುವೆಯ ಹೊಸ್ತಿಲಲ್ಲಿ ನಿಂತ ಮಗನನ್ನು ನೋಡಿದಾಗ ಅಮ್ಮನಿಗೆ ಆತನ ಪ್ರೀತಿ ತನಗಿನ್ನೆಲ್ಲಿ ಸಿಗುವುದೋ ಎಂಬಭಾವ ಉದ್ಬವಿಸುವುದೋ ಏನೋ! ಯಾಕೆಂದರೆ ಮದುವೆಯಾದ ನಂತರ ಮಗ ಮೊದಲಿನ ಪ್ರೀತಿಯಿಂದ ಇರಲು ಬಂದ ಇನ್ನೊಂದು ಹೆಣ್ಣು ಬಿಡಬೇಕಲ್ಲ.

ಇದು ಒಂದು ವಾದವಾದರೆ, ಬಂದ ಹೆಣ್ಣಿಗೆ ಒಂಚೂರೂ ಸೌಲಭ್ಯ ಕಲ್ಪಿಸದೆ, ಮನೆಯ ಆಳಿನಂತೇ ನಡೆಸಿಕೊಳ್ಳುವ ಅತ್ತೆಯೊಂದಿಗೆ ಸೇರಿಕೂಳ್ಳುವ ಗಂಡ ತನ್ನನ್ನು ಲೆಕ್ಕಿಸುವುದೇ ಇಲ್ಲ --ಎನ್ನುವ ವಾದ ಇನ್ನೊಂದೆಡೆ.

ಈ ಎರಡರ ನಡುವೆ ದಿನಬೆಳಗಾದರೆ ವರದಕ್ಷಿಣೆಯ ಗೋಳು ದೃಶ್ಯ ಹಾಗೂ ಶ್ರಾವ್ಯ ಮಾಧ್ಯಮಗಳು, ಪತ್ರಿಕೆಗಳು ಇವುಗಳ ವಾರ್ತೆಗಳ ಒಂದು ಭಾಗವಾಗಿಹೋಗಿವೆ! ಒಂದುಕಡೆ ಭಯೋತ್ಪಾದಕರು, ನಕ್ಸಲೈಟ್ಸ್ ವಿಭಾಗ, ಇನ್ನೊಂದು ಕಡೆ ಅಪಘಾತಗಳ ವಿಭಾಗ ಮತ್ತೊಂದು ಕಡೆ ಕೊಲೆ,ಸುಲಿಗೆ,ದರೋಡೆ,ಡಕಾಯಿತಿ ಮತ್ತು ವರದಕ್ಷಿಣೆ ವಿಭಾಗ ಹೀಗೇ ಪತ್ರಿಕೆ ಮತ್ತು ಮಾಧ್ಯಮಗಳವರು ಇವುಗಳನ್ನೆಲ್ಲ ಬೆಳಿಗ್ಗೆ ಬೆಳಿಗ್ಗೆ ಮನವನ್ನು ಹಿಂಡುವ ಈ ಥರದ ವಾರ್ತೆಗಳನ್ನು ಕೊನೆಯ ಪುಟಕ್ಕೋ ದೃಶ್ಯದಲ್ಲಾದರೆ ಸ್ವಲ್ಪ ಹಿತಮಿತವಾಗೋ ಪ್ರಕಟಪಡಿಸುವುದು ಒಳ್ಳೆಯದು ಅನಿಸುತ್ತಿದೆ.

ಇತ್ತೀಚೆಗೆ ನಾವು ಕಾಣುತ್ತಿರುವ ಮನುಷ್ಯರ ರಾಕ್ಷಸೀ ಪ್ರವೃತ್ತಿ ಬಹಳ ಖೇದವನ್ನುಂಟುಮಾಡುತ್ತದೆ. ಹೆಣ್ಣಿನ ಬಾಳ್ವೆ ಕಷ್ಟ. ಹುಟ್ಟುವುದು ಒಂದುಕಡೆ, ಬದುಕುವುದು ಇನ್ನೊಂದು ಕಡೆ. ಗಂಡನಿಗಾಗಿ ತನ್ನ ತಂದೆ-ತಾಯಿ, ಅಣ್ಣ-ತಮ್ಮ[ಇದ್ದರೆ,ಯಾಕೆಂದರೆ ಈಗೆಲ್ಲ ಒಂಟಿ ಮಕ್ಕಳಾದರೆ ಅವರೆಲ್ಲ ಎಲ್ಲಿ!] ಇವರನ್ನೆಲ್ಲ ತೊರೆದು ಗಂಡನ ಮನೆ ಸೇರುತ್ತಾಳೆ. ನಾಳೆಯ ಬದುಕಿನ ಸುಂದರ ಕನಸುಗಳನ್ನು ಮನಸ್ಸಿನಲ್ಲಿ ಕಲ್ಪಿಸಿಕೊಳ್ಳುತ್ತ, ಒಡಲೊಳಗಾಡುವ ಕರುಳಬಳ್ಳಿಯನು ನೆನೆಸುತ್ತ, ತಂದೆ-ತಾಯಿ, ಅಣ್ಣ-ತಮ್ಮಂದಿರನ್ನು ಆಗಾಗ ಜ್ಞಾಪಿಸಿ ಕೊಳ್ಳುತ್ತ ಕಾಲಹಾಕುತ್ತಾಳೆ. ಹೆಣ್ಣೆಂಬ ಈ ಜೀವ ಬಯಸುವುದು ಕೇವಲ ಪ್ರೀತಿಯ ಆಸರೆ!

ಇತ್ತ ಹಲವು ಗಂಡಸರು ಬಯಸುವುದು ಕದ್ದೋ ಮುಚ್ಚೋ ಒಟ್ಟಿನಲ್ಲಿ ವರದಕ್ಷಿಣೆ! ಅವರಿಗೆ ಪ್ರೀತಿಯನ್ನೀಯುವ ಆ ಜೀವಕ್ಕಿಂತ ಆ ಜೀವವನ್ನು ಆಟದ ದಾಳವಾಗಿಟ್ಟುಕೊಂಡು ಬೇಕಾದಾಗ, ಹಾರಿಸಿದಾಗ ಅವಳ ತವರು ಮನೆಯಿಂದ ಬರುವ ದುಡ್ಡು-ಬಂಗಾರ-ಆಸ್ತಿ ಇವುಗಳೇ ಮುಖ್ಯ! ನಾಟ್ ದಾಟ್ ಎವರಿಒನ್ ಈಸ್ ಸೇಮ್ ಬಟ್ ಇಟ್ ಈಸ್ ಇನ್ಕ್ರೀಸಿಂಗ್ ಇನ್ ಆರ್ಡರ್!

ಹಿಂದೊಂದು ಕಾಲವಿತ್ತು ಅಂದುಬಿಟ್ಟರೆ ಸಾಕು ಕಥೆ ಕೊರೆಯಲು ಹೊರಟ ಅಂದುಕೊಂಡುಬಿಡುತ್ತೀರಿ. ಆದರೆ ಹಿಂದಾಗಿದ್ದು ಇಂದು ಇತಿಹಾಸ, ಅದು ಕಥೆ, ಅದು ಹಲವು ಕಾವ್ಯ-ಸಾಹಿತ್ಯಕ್ಕೆ, ಕಾದಂಬರಿಗೆ ಜೀವೆಜೀವಾಳ! ಇರ್ಲಿ, ವಿಷಯಕ್ಕೆ ಮರಳೋಣ. ಆ ಕಾಲದಲ್ಲಿ ಮನುಷ್ಯ ಮನುಷ್ಯನಾಗಿ ಬದುಕಿದ್ದ! ಅಲ್ಲಿ ’ಮಾನವೀಯ ಮೌಲ್ಯ’ ಎಂಬೊಂದು ಅಪರೂಪದ ವಿಷಯವಿತ್ತು, ಅದಕ್ಕೆ ಧಕ್ಕೆಬಾರದ ರೀತಿಯಲ್ಲಿ ಘನತೆ,ಗೌರವದಿಂದ ಬದುಕೂ ಸಾಗುತ್ತಿತ್ತು. ಅಲ್ಲಿ ಕೇವಲ ಹಣಕ್ಕಾಗಿ, ಆಸ್ತಿಗಾಗಿ ಜನ ಸಂಬಂಧಗಳನ್ನು ಮಾಡಿಕೊಳ್ಳುತ್ತಿರಲಿಲ್ಲ. ಇಂದಿನ ಕಲುಷಿತ, ಕುತ್ಸಿತ ರಾಜಕೀಯ ಅಲ್ಲಿನ ಬದುಕಿಗೆ ಪ್ರವೆಶಿಸಿರಲಿಲ್ಲ! ಜನ ತಮ್ಮಷ್ಟಕ್ಕೆ ತಾವು ಗ್ರಾಮ್ಯ ಶೈಲಿಯಲ್ಲಿ ಬದುಕುತ್ತ ಹಾಯಾಗಿದ್ದರು, ಅಷ್ಟೇಅಲ್ಲ ಹಬ್ಬ-ಹುಣ್ಣಿಮೆಗಳನ್ನು ಬಹಳ ಗಡದ್ದಾಗಿ ಜನಪದ ಶೈಲಿಯ ಆಚರಣೆಗಳಿಂದ ಪ್ರೇರಿತರಾಗಿ ಅನುಭವಿಸುತ್ತಿದ್ದರು.

ಪಂಚ್ಮಿ ಹಬ್ಬ ಉಳಿದಾವು ದಿನ ನಾಕ....
ಅಣ್ಣ ಬರಲಿಲ್ಲ ಯಾಕ ಕರಿಲಾಕ....?

ಎಂಥಾ ಹಾಡು ಅಂತೀರಿ. ಇದನ್ನು ನಾಗರ ಪಂಚಮಿಯ ಸಲುವಾಗಿ ನಮ್ಮ ಜನ ಬಳಸುತ್ತಿದ್ದರು. ಇದೊಂದೇ ಏನು ? ಹಲವು ಹತ್ತು. ರಾಗಿ ಬೀಸುವಾಗ, ಹಿಟ್ಟು ರುಬ್ಬುವಾಗ, ಮಕ್ಕಳನ್ನು ರಮಿಸುವಾಗ, ಪೂಜೆ-ಪುನಸ್ಕಾರ ನಡೆಸುವಾಗ, ಹೊಲದಲ್ಲಿ ಬಿತ್ತನೆ ಕಾರ್ಯವೇ ಮೊದಲಾಗಿ ಕೆಲ್ಸ ನಡೆಸುವಾಗ...ಎಲ್ಲೆಲ್ಲೂ ಆ ಹಾಡುಗಳ ಆಪ್ಯಾಯಮಾನ ಅವಲಂಬನೆ ಮತ್ತು ಅದರ ಅರ್ಥ ಬದುಕಿನ ಏಕತಾನತೆಯನ್ನು ಬದಲಿಸುತ್ತಿದ್ದವು. ಯವುದೋ ಒಂದು ರಿಧಮ್ ಅನುಸರಿಸಿಕೊಂಡು ಹಾಡುವ ಪ್ರತೀ ಹಾಡು ಕೂಡ ಕೆಲ್ಸ-ಕಾರ್ಯಗಳಿಂದ ಆಗಬಹುದಾದ ದಣಿವನ್ನು ನಿವಾರಿಸುತ್ತಿತ್ತು, ಪರಸ್ಪರರಲ್ಲಿ ಬಾಂಧವ್ಯ-ಆಪ್ತತೆ ಹೆಚ್ಚುವಂತೆ ಮಾಡುತ್ತಿತ್ತು. ಮತ್ತೊಮ್ಮೆ ಅದೇ ಕೆಲ್ಸ ಮಾಡಲು ಉತ್ಸಾಹ ಕುಂದದಂತೇ ತಡೆಯುತ್ತಿತ್ತು. ಇವತ್ತು ಪಂಚ್ಮಿ ಹಬ್ಬದ ಹಾಡೇ ಇರಲಿ ಮತ್ತೊಂದೇ ಇರಲಿ ಯಾರಾದರೂ ಜನಪದ ಕಲಾವಿದರನ್ನು ಕರೆಸಿ ಹಾಡಿಸಬೇಕಾಗಿದೆಯೇ ಹೊರತು ಅವುಗಳು ಜನಸಾಮಾನ್ಯನ ದೈನಂದಿನ ಚಟುವಟಿಕೆಗಳಿಂದ ಬೇರ್ಪಟ್ಟಿವೆ.

ಕಾಡೀಗಚ್ಚಿದ ಕಣ್ಣು ತೀಡಿ ಮಾಡಿದ ಹುಬ್ಬು
ಮಾವೀನ ಹೋಳು ನಿನ ಕಣ್ಣು ...
ಮಾವೀನ ಹೋಳು ನಿನ ಕಣ್ಣು ಕಂದಮ್ಮ ಮಾವ ಬಣ್ಣೀಸಿ ಕರೆದಾನ ....

ಎಲ್ಲಿದೆ ಮಗುವನ್ನು ರಮಿಸುವ ಈ ಪದ್ಯ? ಇಂದು ಇದನ್ನೆಲ್ಲಾ ನಾವು ತೊರೆದಿದ್ದೇವೆ, ಬೆಳಗಾದರೆ ದೃಶ್ಯಮಾಧ್ಯಮದ ಮುಂದೆ! ದೇವರು-ದಿಂಡರು ಏನೂ ಬೇಕಾಗಿಲ್ಲ. ಅಷ್ಟೂ ಬೇಕೆಂದರೆ ಎರಡು ಊದಿನಕಡ್ಡಿಯನ್ನು ಟಿವಿಗೇ ಹಚ್ಚಿಬಿಟ್ಟರೆ ಮುಗಿಯಿತಲ್ಲ! ಸುಬ್ಬಲಕ್ಷ್ಮಿಯವರ ಸುಪ್ರಭಾತ ದೇವಸ್ಥಾನಕ್ಕೆ ಮಾತ್ರ! ನಮಗೆಲ್ಲ ಅದ್ಯಾಕೆ ? ದಿನಾಲೂ ಕೇಳೀ ಕೇಳೀ ಬೇಜಾರು !

ನಮ್ಮನೆಯ ಪಕ್ಕದ್ಮನೆ ಪಡ್ಡೆಗೆ ಬೆಳಗಿನ ಜಾವವೇ ’ಕಣ್ ಕಣ್ ಕಣ್ ಹೊಡಿತಾಳೆ .....ಗಲ್ ಗಲ್ ಗಲ್ ಎಂತೈತೆ ...’ ಹಾಡು ಬೇಕು! ಹಾಸಿಗೆ ಬಿಟ್ಟು ಏಳುವುದೇ ೯ ಘಂಟೆಗೆ. ಅಲ್ಲೀವರೆಗೂ ಅವೇ ಸಿನಿಮಾ ಹಾಡುಗಳು. ಎಪ್ಫೆಮ್ಮು ಎಪ್ಫೆಮ್ಮು! ಮಕ್ಕಳಿಗೆ ತಿಳಿಹೇಳಬೇಕಾದ ಹಿರಿಯರೇ ಅದನ್ನು ಅನುಗ್ರಹಿಸಿರುವಾಗ ಇನ್ನು ಮಕ್ಕಳ ತಪ್ಪೇನು?

ಇವತ್ತಿನ ಢಾಂಬಿಕತನ,ಢೋಂಗಿಮನ ನಮಗೆ ಹಲವು ಹತ್ತು ಆಸೆಗಳನ್ನು ಹೊತ್ತು ತಂದಿದೆ. ಮಾಧ್ಯಮಗಳ ಅತಿರಂಜಿತ ಕಥಾ ಹಂದರಗಳಿಂದಲೂ, ಸಿನಿಮಾಗಳ ಬಟ್ಟೆ ರಹಿತ ಎಲ್ಲಾ ಓಪನ್ ದೃಶ್ಯಗಳ ಹದಿಹರೆಯದವರ ಮನಗೆದರುವ ಕಾಮ ಸಂಬಂಧೀ ದೃಶ್ಯಾವಳಿ ಮತ್ತು ಕಥೆಗಳಿಂದಲೂ ಸಮಾಜದ ಸ್ವಾಸ್ಥ್ಯ ಹದಗೆಡುತ್ತಿದೆ. ನಿನ್ನೆಯವರೆಗೆ ಅಪ್ಪಾ ಅಪ್ಪಾ ....ಎಂದು ಅಪ್ಪ ಹೇಳಿದ ಹಾಗೇ ಕೇಳುತ್ತಿದ್ದ ಹುಡುಗಿ ಇಂದು ಅಪ್ಪನ ವಿರುದ್ಧ ದೃಶ್ಯಮಾಧ್ಯಮದಲ್ಲಿ ಹೇಳಿಕೆ ಕೊಡುತ್ತಾಳೆ. ಅಪ್ಪ ತನ್ನ ಪ್ರೇಮಿಯನ್ನು ಅಗಲಿಸಲು ಪ್ರಯತ್ನಿಸುತ್ತಾನೆ ಎಂದು ರಂಪಮಾಡುತ್ತಾಳೆ. ಆದರೆ ಮುಂದಾಗುವ ಪರಿಣಾಮವನ್ನು ನೆನೆದ ಅಪ್ಪ-ಅಮ್ಮ ಕಣ್ಣೀರಲ್ಲಿ ಕೈತೊಳೆಯುತ್ತ ಕೈಕೈ ಹಿಸುಕಿಕೊಳ್ಳುತ್ತ ಕೂರುವಂತೆ ಮಾಡುತ್ತಾರೆ. ಮಠದಲ್ಲಿದ್ದ ವೈರಾಗ್ಯಮಾತೆ ಎಳೆವೆಯ ಹುಡುಗನನ್ನು ಬಯಸಿ ತನಗೆ ಪ್ರೀತಿ ಕೊಡುವವರಿಲ್ಲಾ ಎನ್ನುತ್ತ ಆತನನ್ನೇ ವರಿಸಿ ಆತನ ತಾಯಿಯ ಮನಸ್ಸನ್ನು ತಲ್ಲಣಗೊಳಿಸುತ್ತಾಳೆ! ಇವೆಲ್ಲ ಇಂದಿನ ಮುಂದುವರಿದ ನಮ್ಮ ಸಂಸ್ಕೃತಿಯ ಸ್ವೇಚ್ಛಾಚಾರದ ಮನೋವಾಂಛೆ ಅನ್ನೋಣವೇ ?

ಹಾಗಾದರೆ ನಮಗೆಲ್ಲಾ ಏನಾಗಿದೆ ? ಅದನ್ನೇ ನಾವು ಅರ್ಥೈಸಿಕೊಳ್ಳುತ್ತಿಲ್ಲ. ಅರ್ಥೈಸಿಕೊಂಡರೆ ಧುತ್ತನೆ ನಮಗೆದುರಾಗುವ ಪ್ರಶ್ನೆ>> ಹೀಗೂ ಉಂಟೇ ? .....

ಅತಿ ಆಸೆಗೆ ಬಲಿಯಾಗಿದ್ದೇವೆ, ಢಾಂಬಿಕರಾಗಿದ್ದೇವೆ, ನಮಗೇ ನಾವು ಮೋಸಗಾರರಾಗಿದ್ದೇವೆ, ದೈವ ಭಕ್ತಿ ಕೇವಲ ಆಚರಣೆಗೆ ಸೀಮಿತವಾಗಿದೆ, ಹಿರಿ-ಕಿರಿಯ ಭೇದಭಾವವಿಲ್ಲ, ವಕೀಲರು ಗೆದ್ದಿದ್ದೇ ನ್ಯಾಯ, ಸರಿಯಾದ ಗುರುವನ್ನು ಗುರುತಿಸಿಕೊಳ್ಳುವ ಶಕ್ತಿ ನಮಗಿಲ್ಲ, ವಿದೇಶೀ ಕಂಪನಿಗಳು ದುಡ್ಡುಮಾಡಲು ಬಂದು ಪ್ರಾರಂಭಿಸಿದ ಮಾಲ್ ಕಲ್ಚರ್ ಗೆ ನಾವು ಒಣ ಪ್ರತಿಷ್ಠೆ ಮೆರೆಯಲು ಹೋಗುತ್ತೇವೆ, ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು ಬೇಕು ಎಂಬಂತೇ ಕಂಡಿದ್ದನ್ನೆಲ್ಲ ಕೊಳ್ಳುವ,ಖರೀದಿಸುವ ಕೊಳ್ಳುಬಾಕರಾಗಿದ್ದೇವೆ, ಕ್ಷಣಿಕ ವ್ಯಾಮೋಹಕ್ಕಾಗಿ-ಕಾಮತೀಟೆಗಾಗಿ ಮಡದಿಯನ್ನೇ ಮರೆತು ಬೇರೊಂದು ಹೆಂಗಸನ್ನೋ ಹುಡುಗಿಯನ್ನೋ ಹುಡುಕುವ ದುರಾಚಾರಿಗಳಾಗಿದ್ದೇವೆ, ಕೆಲಸಬೇಡ-ಹಣಬೇಕು ಎಂಬ ಸೂತ್ರಕ್ಕೆ ಅಂಟಿಕೊಂಡಿದ್ದೇವೆ--ಇವೆಲ್ಲ ಅದಕ್ಕೆ ಕಾರಣ! ಇರುಳಲ್ಲಿ ಕಂಡ ಬಾವಿಗೆ ಹಗಲಲ್ಲಿ ಬಿದ್ದಿರುವುದೇ ಇದಕ್ಕೆ ಕಾರಣ. ನಮಗರ್ಥವಾಗದ ಸಂಸ್ಕೃತಿಯ ಜಾಡು ಹಿಡಿದು ನಮ್ಮತನವನ್ನು ತೊರೆಯುತ್ತಿರುವುದೇ ಇದಕ್ಕೆಲ್ಲಾ ಕಾರಣ! ಈ ಒಂದು ಗಾಡಾಂಧಕಾರದಲ್ಲಿ ನಾವು ಮಾನವರಾಗಿರುವ ಬದಲು ದಾನವರಾಗುತ್ತಿದ್ದೇವೆ, ತಾಮಸರಾಗುತ್ತಿದ್ದೇವೆ.

ನಮ್ಮಲ್ಲಿ ಹೆಣ್ಣುಮಕ್ಕಳು ಮಣ್ಣಿನ ಬಳೆಗಳನ್ನು ಇಡುವುದು ಬಿಟ್ಟು ಬಹಳಕಾಲವಾಯಿತು. ಹಿಂದಕ್ಕೆ ಬಳೆಗಾರ ಮನೆಬಾಗಿಲಿಗೇ ಬರುತ್ತಿದ್ದ. ಬಳೆಯ ಮಲಾರವನ್ನು ಹೊತ್ತು ತರುತ್ತಿದ್ದ ಆತನ ಉದರಂಭರಣೆಯ ಜೊತೆಜೊತೆಗೇ ಆತ ಬಳೆಗಾರ ಚೆನ್ನಯ್ಯನ [ಕೇಳಿದ್ದೀರಲ್ಲ? ನರಸಿಂಹಸ್ವಾಮಿಗಳ ಕವನದಲ್ಲಿ]ಪಾತ್ರವನ್ನೂ ನಿರ್ವಹಿಸುತ್ತಿದ್ದರು. ಬೇಕಾದ ಬಳೆಗಳನ್ನು ಕೊಡುವುದರ ಜೊತೆಗೆ ಹಳ್ಳಿಯಿಂದ ಹಳ್ಳಿಗೆ ಹರಿಕಾರರಾಗಿ ಕೆಲಸಮಾಡುತ್ತಿದ್ದರು. ಅಂದಿನ ಆ ಬದುಕಿನಲ್ಲಿ ಈ ಥರದ ದ್ವೇಷ-ವೈಷಮ್ಯವಿರಲಿಲ್ಲ, ಸಿರಿವಂತಿಕೆಯ ಸೋಗಿರಲಿಲ್ಲ, ಪಟ್ಟಣದ ಬದುಕಿನ ಥಳುಕುಬಳುಕು-ಒಳಗೆಲ್ಲಾ ಹುಳುಕಿನ ವ್ಯವಹಾರವಿರಲಿಲ್ಲ. ಅಂದಿನ ಬಾಣಂತಿ ತನ್ನ ತವರನ್ನು ನೆನೆಸಿ ಹೊರಟಾಗ ಬರುವ ಹಾಡು ನೋಡಿ--

ತೌರೂರ ದಾರಿಯಲಿ ನವಿಲ ಬಣ್ಣದ ಪಕ್ಷಿ
ತಲಿಬ್ಯಾನಿ ಎದ್ದು ಅಳುತಿತ್ತ....
ತಲಿಬ್ಯಾನಿ ಎದ್ದು ಅಳತಿತ್ತ ಕಂದನ ನಗುವೀಕಿ ನೋಡಿ ನಲಿತಿತ್ತ...

ಎಂತಹ ಆಪ್ತತೆ ತುಂಬಿದೆ ನೋಡಿ. ಹಾದಿಯಲ್ಲಿ ನವಿಲೊಂದು ತಲೆನೋವಿನಿಂದ ಬಳಲುತ್ತಿದ್ದುದಾಗಿಯೂ ಆಕೆಯ ಕಂದನನ್ನು ನೋಡಿ ಅದರ ನೋವು ಮರೆಯಿತೆಂದೂ ಬರೆದ ಜನಪದ ಮಹಾಶಯ ಯಾರಿರಬಹುದು ?

ಅದೇ ರೀತಿ ಬಳೆಗಾರ ತನ್ನ ಗಂಡನ ಮನೆಯಲ್ಲಿದ್ದಾಗ ಬಂದರೆ ಅವನನ್ನು ತನ್ನ ತಾಯಿಗೂ, ಅಕ್ಕ-ತಂಗಿಯರಿಗೂ ಬಳೆಸಿಗಲಿ ಎನ್ನುವ ಸಲುವಾಗಿ, ಗರತಿ ಆತನಲ್ಲಿ ವಿನಂತಿಸುತ್ತಿದ್ದುದು " ಅಯ್ಯಾ ಭಾಗ್ಯದ ಲಕ್ಷಣವಾದ ಬಳೆಯನ್ನು ಮಾರುವ ಬಳೆಗಾರನೇ ನನ್ನ ತವರಿಗೂ ಸ್ವಲ್ಪ ಹೋಗಿಬಾರಪ್ಪಾ" ಎಂದು.
ಈ ಹಿನ್ನೆಲೆಯಲ್ಲಿ ಆ ಬಳೆಗಾರನ ಕೂಡ ಹಾಡುವ ಹಾಡು--

ಭಾಗ್ಯದ ಬಳೆಗಾರ ಹೋಗಿಬಾ ನನ್ ತವರೀಗೆ

ಹಂಚಿನ ಮನೆ ಕಾಣೋ..ಕಂಚಿನ ಕದ ಕಾಣೋ....

ಎಷ್ಟೆಲ್ಲಾ ಗುರುತು, ಬಣ್ಣನೆ ತನ್ನ ತೌರಬಗೆಗೆ. ಇದು ಆ ತಂಗಿಯ, ಆ ಅಕ್ಕನ, ಆ ಗರತಿಯ ತೌರಿನ ಬಗೆಗಿದ್ದ ಪ್ರೀತಿಯನ್ನು ತೋರಿಸುತ್ತದೆ. ’ ಕೊಟ್ಟ ಹೆಣ್ಣು ಕುಲಕ್ಕೆ ಹೊರಗು’ ಎಂದು ಯಾವಾತನೋ ಗಾದೆ ಮಾಡಿರಬಹುದು ಆದರೆ ಅದು ನಿಜವಾಗಿ ಅನ್ಯಾಯ. ಕೇವಲ ಹೆಣ್ಣಾಗಿ ಹುಟ್ಟಿದ ಮಾತ್ರಕ್ಕೆ ಆಕೆ ತನ್ನೆಲ್ಲಾ ಆಪ್ತರ-ಹುಟ್ಟಿದ ಮನೆಯವರ ಔದಾರ್ಯದಿಂದ ವಂಚಿತಳಾಗಬೇಕೆ? ಹಾಗಂತ ತವರಿನ ಮೇಲೆಯೇ ವಿಪರೀತ ಒತ್ತಡ ಹೇರಿ ವಸೂಲಿ ಕೆಲ್ಸವನ್ನೂ ಅವಳು ಮಾಡಲಾರಳು. ಈ ಇಕ್ಕಟ್ಟಿನಲ್ಲಿ ಆ ಕಡೆ ಗಂಡನಮನೆಯವರ ಕಿರುಕುಳ ಈ ಕಡೆ ತವರುಮನೆಗೆ ಹೇಳಲಾಗದ ತಳಮಳ-ಇಲ್ಲೆಲ್ಲೋ ನಡುವೆ ಒಂದು ಆಳ ಕಮರಿಯಲ್ಲಿ ಸಿಲುಕಿದ ಆ ಮಹಾತಾಯಿ ನಿಟ್ಟುಸಿರುಬಿಡುತ್ತಾಳೆ, ತನ್ನನ್ನು ಮುಗಿಸಿಕೊಳ್ಳುವ ಹಂತಕ್ಕೆ ಮಾನಸಿಕ ಸಿದ್ಧತೆ ನಡೆಸುತ್ತಾಳೆ, ಅಥವಾ ಏನಾದರಾಗಲಿ ಎಂದು ಗಂಡನ ಮನೆಯಲ್ಲೇ ಇದ್ದು ಅಲ್ಲಿನವರಿಂದ ಕೊಲ್ಲಲ್ಪಡುತ್ತಾಳೆ! ಇದು ನಮ್ಮ ಇಂದಿನ ಸಿರಿವಂತಿಕೆಯ ದ್ಯೋತಕವಾಗಿಬಿಟ್ಟಿದೆ. ಆಮೇಲೆ ಸ್ವಲ್ಪಕಾಲ ರಾಜಕೀಯ ಮಾಡಿ ಕೊಲೆಗಡುಕರು ತಪ್ಪಿಸ್ಕೊಂಡು ಆ ಹುಡುಗನಿಗೆ ಇನ್ನೊಂದು ಮದುವೆಗೆ [ಇನ್ನೊಂದು ’ಕುರಿ ಬಲಿಗೆ’] ತಯಾರಿ ನಡೆಸುತ್ತಾರೆ. ಇದು ಮೂರ್ನಾಲ್ಕು ಹುಡುಗಿಯರನ್ನು ಆತ ಹಾಗೆ ಮದುವೆಯಾಗಿ ಸಾಯಿಸುವವರೆಗೂ ತೀರಾ ಬೆಳಕಿಗೆ ಬರುವುದೇ ಇಲ್ಲ!

ಇಂತಹದ್ದನ್ನೆಲ್ಲ ಅರಿತೇ ಇಂದು ಹೆಣ್ಣು ಮಗುವೇ ಬೇಡ ಎಂಬ ಹಂತಕ್ಕೆ ಪಾಲಕರು ಬಂದಿದ್ದಾರೆ. ಇದರ ಸಲುವಾಗೇ ಅನೇಕ ವರ್ಷಗಳ ಕಾಲ ಗೌಪ್ಯವಾಗಿ ಸ್ಕ್ಯಾನಿಂಗ್ ಯಂತ್ರಗಳ ಮೂಲಕ ಭ್ರೂಣದ ಲಿಂಗ ಪರೀಕ್ಷೆ ಮಾಡಿಸಿ ಅದು ಹೆಣ್ಣಾಗಿದ್ದರೆ ಅದನ್ನು ಆಬಾರ್ಷನ್ ಮಾಡಿಬಿಡುತ್ತಿದ್ದರು.ನೋಡಿ ಎಲ್ಲಿಗೆ ಹೋಗಿ ಎಲ್ಲಿಗೆ ಬಂತು ಕಾಲ! ನಮ್ಮ ಹಿರಿಯರು ಇದನ್ನೆಲ್ಲ ತಿಳಿದೇ ಭ್ರೂಣ ಹತ್ಯೆ ಮಹಾಪಾಪ ಅದೊಂದು ಕೊಲೆಯಷ್ಟೇ ಪಾಪದ ಕೆಲಸ, ಪಾತಕ ಎಂದು ಹೇಳಿದ್ದಾರೆ.

ನಮ್ಮಷ್ಟಕ್ಕೆ ನಾವು ಅಲ್ಪ ತೃಪ್ತರಾಗಿ ಅಂದಿನ ದಿನಗಳಂತೇ ದೇವರು ಕೊಟ್ಟದ್ದರಲ್ಲಿ, ಪ್ರಾಮಾಣಿಕವಾಗಿ ಗಳಿಸಿದ್ದರಲ್ಲಿ ತೃಪ್ತಿ ಕಂಡಿದ್ದರೆ ಈ ರೀತಿ ಬವಣೆಗಳು ಬರುತ್ತಿರಲಿಲ್ಲ. ಒತ್ತಡಗಳು ಉದ್ಭವವಾಗುತ್ತಿರಲಿಲ್ಲ, ಮಾನವೀಯ ಮೌಲ್ಯಗಳು ಕುಸಿಯುತ್ತಿರಲಿಲ್ಲ, ಜೀವಗಳು ಬಲಿಯಾಗುತ್ತಿರಲಿಲ್ಲ. ಇದನ್ನೆಲ್ಲಾ ಬರೆಯುವಾಗ ಕೊನೆಗೊಮ್ಮೆ ನಾನು ಕೇಳಿದ ಹಾಡು

ಭಾಗ್ಯದ ಬಳೆಗಾರ ಹೋಗಿಬಾ ನನ್ ತೌರೀಗೆ.....

ಆ ಗರತಿ, ಆ ಭಾರತಿ ಮತ್ತೆ ಜನಿಸಲಿ, ಸುಖದ ಕಾಲ ನಮಗೆ ಮತ್ತೆ ಸಿಗುವಂತಾಗಲಿ, ಮಾನವೀಯ ಮೌಲ್ಯಗಳು ಮತ್ತೆ ಚಿಗಿತು ಬೆಳೆಯಲಿ, ಅನ್ಯಾಯ-ಅಧರ್ಮ ಅಳಿದು ಮಾನವ ಪ್ರೇಮ ಎಲ್ಲೆಡೆಗೆ ಅನುರಳಿಸಲಿ ಎಂಬ ಸದಾಶಯದೊಂದಿಗೆ ನಿಮ್ಮಕೈಗೀಲೇಖನ, ನಮಸ್ಕಾರ.

Monday, July 26, 2010

ಉದ್ಯಾನದಲ್ಲೊಂದರ್ಧಘಂಟೆ !!


ಚಿತ್ರಗಳ ಋಣ : ಅಂತರ್ಜಾಲ

ಉದ್ಯಾನದಲ್ಲೊಂದರ್ಧಘಂಟೆ !!

ತದರಿನನನ......ರಿನನನ...ರಿನನನ.... ಎನ್ನುತ್ತ ತಮ್ಮಷ್ಟಕ್ಕೆ ಹಾಡಿಕೊಳ್ಳುತ್ತ ಕುಳಿತಿದ್ದರು ವೆಂಕೋಬರಾಯರು. ನಾನೂ ರಾಯರಿಗೆ ಪರಿಚಯವಿದ್ದರೂ ಸಿಗುವುದು ಅಪರೂಪ. ಎಲ್ಲಾದರೂ ಪುಗಸಟ್ಟೆ ಮನೋರಂಜನೆ ಬೇಕೆಂದಿದ್ದರೆ ಪಾರ್ಕಿಗೆ ಹೋಗುವುದು ಜಾಸ್ತಿ. ನೀವೀಗ ಕೇಳುವ ಪ್ರಶ್ನೆ ಮೊದಲೇ ನನಗೆ ತಿಳಿದಿದೆ. ಪಾರ್ಕಿನಲ್ಲೇನು ಸಿಗುತ್ತೆ ಮನೋರಂಜನೆ.... ನೀನೇನೋ ತಲೆ ತುರಿಸಿಕೊಂಡು ಹಾಡು ಬರೆಯುತ್ತೇನೆ ಎಂದು ಕುಳಿತುಕೊಂಡುಬಿಡಬಹುದು ಆದರೆ ನಮಗೆಲ್ಲಾ ಏನ್ ಸಿಗುತ್ತೆ ಮಹಾ?

ನೆವರ್, ನೆವರ್ ಮಿಸ್ ಎನ್ ಅಪಾರ್ಚ್ಯುನಿಟಿ --ಇದು ಒಂದುಕಾಲದಲ್ಲಿ ಸ್ಪೈಸ್ ಟೆಲಿಕಾಂ ನವರ ಸ್ಲೋಗನ್ ಆಗಿದ್ದರೂ ಯಾವಾಗಲೂ ಅದು ಅವರದೇ ಆಗಿರಲು ಆ ಮಾತೇನು ಅವರಪ್ಪನಮನೆ ಸೊತ್ತೇ? ಅದೆಲ್ಲಾ ಇರ್ಲಿ, ನಾನು ಹೇಳುತ್ತಿರುವುದು ತಾವು ಪಾರ್ಕಿನಲ್ಲಿ ಮಜಾ ತೆಗೆದುಕೊಳ್ಳುವುದನ್ನು ಮರೆಯಬೇಡಿ ಎಂದು. ತಲೆಹರಟೆ ಎಂದಿರೇ ಹಾಂ ಒಂಥರಾ ಹಾಗೇ ಅಂದುಕೊಳ್ಳಿ ತಪ್ಪೇನಿಲ್ಲ!

ನೀವೇ ವಿಚಾರ ಮಾಡಿ... ಪಾರ್ಕಿನಲ್ಲಿ ಥರಾವರಿ ಜನರ ಜಾತ್ರೆಯೇ ಇರುತ್ತದೆ [ಕೆಲವು ಪಾರ್ಕಿನಲ್ಲಿ ಗಿಡಗಳೂ ಇರುವುದಿಲ್ಲ, ಜನರೂ ಇರುವುದಿಲ್ಲ.. ತುಕ್ಕು ಹಿಡಿದ ಬೋರ್ಡುಗಳು ಮಾತ್ರ ನಮ್ಮನ್ನೇ ಹೆದರಿಸುವಂತೆ ನಿಂತಿರುತ್ತವೆ ಅನ್ನಿ!] ಆದರೂ ಹಲವೊಂದು ಪಾರ್ಕುಗಳು ಜನನಿಬಿಡ. ಅಲ್ಲಿ ಸುಮ್ಮನೇ ಹೋಗಿ ಒಂದುಕಡೆ ಕುಳಿತುಕೊಳ್ಳಿ.

ಅಗೋ ಅಲ್ಲಿ ಲಕ್ಷ್ಮಮ್ಮನಂತೆ ಯಾರೋ ಕರೆದರು. ನೋಡುತ್ತಲೇ ಇದ್ದೇನೆ, ನಾನೇನೂ ವಯಸ್ಸಾದ ಮುದುಕಿ[ ಎಡಮುದುಕಿಯಲ್ಲ ] ಎಂದುಕೊಂಡರೆ ಇನ್ನೂ ವಯಸ್ಸು ೪೫ ದಾಟಿರುವ ಹಾಗಿಲ್ಲ. ೯೯ ಕೆಜಿ ಶರೀರದ ಕಾಂಪ್ಲೆಕ್ಸ್ ನ್ನು ಎರಡೂ ಸೇರಿದಂತೆ ೯ ಕೆಜಿ ತೂಗುವ ಕಾಲುಗಳ ಪಿಲ್ಲಾರ್ ಮೇಲೆ ಹೊತ್ತುಕೊಂಡು ದಸ್ಸೋ ಬುಸ್ಸೋ ದಸ್ಸೋ ಬುಸ್ಸೋ ಎನ್ನುತ್ತ ಗಾಳಿಗೆ ಹಾಯಿದೋಣಿ ತೂಗಿದ ಹಾಗೇ, ಹಳೆಯ ಗೋಡೆ ಗಡಿಯಾರದ ಪೆಂಡೂಲಂ ತೂಗಿದ ಹಾಗೇ ಆಕಡೆ ಈಕಡೆ ಆಕಡೆ ಈಕಡೆ ತೂಗುತ್ತ ಬಂತು ಸವಾರಿ! ಆ ಇಬ್ಬರು ಹೆಂಗಸರು ನನ್ನ ಪಕ್ಕದ ಕಲ್ಲು ಬೆಂಚಿನಮೇಲೆ ಕುಳಿತು ಹರಟಲು ತೊಡಗಿದರು.

" ಅಲ್ರೀ ಲಕ್ಷ್ಮಮ್ನೋರೇ ನಿಮ್ಮನೇಲ್ ಏನ್ ತಿಂಡಿ ಇವತ್ತು? "

" ಪೂರಿ ಸಾಗು"
ನೋಡಿದಾಗಲೇ ಅಂದುಕೊಂಡಿದ್ದೆ ’ಕಾಂಪ್ಲೆಕ್ಸ್’ ಕಟ್ಟಿರುವುದು ಬರಿದೇ ಅಲ್ಲ ಅದರ ಹಿಂದೆ ಸಾಕಷ್ಟು ’ಪರಿಶ್ರಮ’ ಅಡಗಿದೆ ಅಂತ, ಹೌದಪ್ಪಾ ಹೌದು ಅನುಮಾನವೇ ಇಲ್ಲ!

ಅದೂ ಇದೂ ಬೇಕಾದ್ದು ಬೇಡಾದ್ದು ಉಗುರಿನಿಂದ ತಲೆಯವರೆಗಿನ ಎಲ್ಲಾವಿಚಾರಗಳ ಪಾರಾಯಣ ಕೇಳಿದೆ! ಸುಮಾರು ೧೦ ನಿಮಿಷವಾಗಿತ್ತೇನೋ. ಮಧ್ಯೆ ಮಧ್ಯೆ ಒಬ್ಬೊಬರಾಗಿ ಹೆಂಗಸರು ಬರುತ್ತಲೇ ಇದ್ದರು. ನಾನು ಸಹಜವಾಗಿ ಎಲ್ಲವನ್ನೂ ನೋಡಿದರೂ ನೋಡದ ಹಾಗೇ ಜಾಣಕುರುಡನಾಗಿದ್ದೆ ! ಸುಮಾರು ೧೫ ನಿಮಿಷಗಳಲ್ಲಿ ೧೫-೨೦ ಹೆಂಗಸರು ಸೇರಿದರು. ಕಥೆ ಕಥೆ ಕಥೆ, ಕಾಡು ಹರಟೆ. ಗಂಡಂದಿರು ಎದುರಿಗಿಲ್ಲದ ಸಂತೋಷದಲ್ಲಿ ಮಂಗಗಳ ಥರ ಕಾಲಕಳೆದಿದ್ದೇ ಬಂತು. ಎಲ್ಲರೂ ತೂಕದ ’ತೂಗಮ್ಮ’ಗಳೇ!

" ರೀ ಅವರ್ಮನೆ ಸಂಗೀತಾ ಓಡಿಹೋಗ್ಬಿಟ್ಳಂತೆ ಕಣ್ರೀ"

" ಹೌದಾ ನಾ ಮೊದ್ಲೇ ಲೆಕ್ಕ ಹಾಕಿದ್ದೆ ಒಂದಲ್ಲಾ ಒಂದಿನ ಆಕೆ ಹೋಗೇ ಹೋಗ್ತಾಳೆ ಅಂತ, ಹಾಗೇ ಆಗ್ಲಿ ಬಿಡಿ ಸುಧಮ್ಮಂಗೆ ಸ್ವಲ್ಪ ಬುದ್ಧಿಬರ್ಬೇಕು"

ನೋವಲ್ಲೂ ನಲಿವನ್ನು ಕೊಡುವವರು ಇದ್ದಾರೆ ಅನ್ನುತ್ತಾರಲ್ಲ ಇಲ್ಲಿ ಅದು ಬೇರೆ ರೀತಿ- ಪರರ ನೋವಲ್ಲೂ ತಾವು ಇತರರಿಗೆ ಅದನ್ನಾಡಿಕೊಂಡು ನಲಿವು ಕೊಡುತ್ತಾರೆ. ನನಗಂತೂ ಅಲ್ಲಲ್ಲೇ ಸಿಟ್ಟು, ವಿಷಾದ, ನೋವು, ನಲಿವು ನೀವು ಏನೇ ಹೇಳಿ ನವರಸಗಳು ಮೇಳೈಸಿದ ಅನುಭವ! ಅಲ್ಲಲ್ಲೇ ಸಣ್ಣಗೆ ಹಾಡು ಹಾಡಿಕೊಳ್ಳುವವರು, ಸಿಳ್ಳೆಯಲ್ಲಿ ಹಾಡು ನುಡಿಸುವ ಆಧುನಿಕ ಸಿಳ್ಳೆಕಲಾವಿದೆಯರಾದ ಗರತಿಯರು, ಮಗ ವಿದೇಶದಿಂದ ಮೂರು ತಿಂಗಳಹಿಂದೆ ತಂದ ತಿನ್ನಲಾಗದೇ ಫ್ರಿಜ್ ನಲ್ಲಿ ಇಟ್ಟಿದ್ದ ಸ್ವೀಟು ಇಲ್ಲಿಗೆ ತಂದು ಗೆಳತಿಯರೊಂದಿಗೆ ವಿದೇಶೀ ಸಂಗತಿಗಳನ್ನು ರುಚಿರುಚಿಯಾಗಿ ಹರಟಿ ಹಳಸಲು ಸ್ವೀಟನ್ನು ಅಂತಸ್ತು ತೋರಿಸಲೂ ಆಯಿತು ಮತ್ತು ಖರ್ಚುಮಾಡಿದ ಹಾಗೂ ಆಯಿತು ಎಂಬಂತೇ ತಂದಿರುವವರು, ನಿನ್ನೆ ಖರೀದಿಸಿದ ರೇಷ್ಮೆ ಸೀರೆಗಳನ್ನು ತೋರಿಸಿ ಹೊಟ್ಟೆ ಉರಿಸಲು ಬಂದವರು ಹೀಗೇ ಹಲವು ಥರದವರಿದ್ದರು!

ಅಲ್ಲಾ ಸ್ವಾಮೀ ನಮ್ಮೂರಲ್ಲಿ ಹಬ್ಬಗಳಿಗೆ ಮಾತ್ರ ಕರಿದ ಪದಾರ್ಥಗಳನ್ನು ಮಾಡೋರು. ಈಗ್ಲೂ ಹಾಗೇನೆ. ಅಲ್ಲಿ ತೂಗಪ್ಪ-ತೂಗಮ್ಮ ಇಲ್ಲವೇ ಇಲ್ಲ! ದಿನಬೆಳಗಾದರೆ ಇಲ್ಲದ್ದು ಸಲ್ಲದ್ದು ಮಾಧ್ಯಮದ ಅಡುಗೆ ಶೋ ಗಳಲ್ಲಿ ಕಂಡಿದ್ದು ಅಂತ ಅದೂ ಇದೂ ಕರಿಯುತ್ತಲೇ ಇದ್ದರೆ ಸಮಾಜದಲ್ಲಿ ಎಲ್ಲರೂ ’ತೂಕದ ವ್ಯಕ್ತಿ’ಗಳಾಗುತ್ತಾರೆ ಎಂಬುದು ನನ್ನ ಥೀಸಿಸ್, ಇದರ ಬಗ್ಗೆ ಪ್ರಬಂಧ ಬರೆದರೆ ನನಗೆ ಗಿನ್ನೆಸ್ ದಾಖಲೆ ಪಾರ್ಕಿನಲ್ಲಿ ನಾನು ಕೂತಾಗಲೇ ಕೈಗೆ ತಂದುಕೊಟ್ಟು ಹೋಗುತ್ತಾರೆ!

ರಾಮೇಗೌಡ್ರು ಲೈಟಾಗಿ ಬೈಟೂ ಕಾಪಿ ಕುಡ್ದು ಎರ್ಡಿಡ್ಲಿ ತಿಂದು ಉದ್ದುದ್ದ ಪೈಜಾಮಿನಲ್ಲಿ ಅಡ್ಡಡ್ಡ ಕಾಲಾಡಿಸುತ್ತ ಬಂದೇಬಿಟ್ಟರು. ಇವತ್ತು ಅವರಜೊತೆ ಅವರ ಅಳಿಯನೋ ಯಾರೋ ಬಂದಿದ್ದಾರೆ. ಸುಮಾರು ಹದಿನೈದು ಕೋಳಿಗಳನ್ನು ತುಂಬಿದ ಚೀಲದಷ್ಟು ಸಣ್ಣ ಹೊಟ್ಟೆ! ಹೊಟ್ಟೆಯ ಸುತ್ತ ಸ್ಕೂಟರ್ ಟೈರು ಇದ್ದಹಾಗೇ ಅಲ್ಲೇ ಒಂದು ರಿಂಗಿನ ಆಕಾರ! ಬಟ್ಟೆಯೊಳಗಿದ್ದರೇ ಹೀಗೆ ಇನ್ನು ಬಟ್ಟೆ ತೆಗೆದರೆ ಸುಮೋಗಳೆಲ್ಲ ಹೆದರಿ ಜಪಾನುತೊರೆಯಲೇ ಬೇಕು ಏನಂತೀರಿ? ರಾಮೇ ಗೌಡ್ರು ಬರದಿದ್ರೆ ಪಾರ್ಕಿಗೆ ಕಳೆಯೇ ಇಲ್ಲ, ಬರೇ ಪಾರ್ಕಿನಲ್ಲಿ ಬೆಳೆದಿರುವ ಕಳೆಗಳನ್ನೇ ನೋಡಿ ಮರಳಬೇಕು! ಅವರ ಗತ್ತೇನು ಗಾಂಭೀರ್ಯವೇನು ಆ ನಡಿಗೆಯೇನು ನಾಲ್ಕು ಜನರಿಗೆ ಬದುಕನ್ನು ರೂಪಿಸಿಕೊಟ್ಟಿದ್ದೇನೆಂಬ ಸಂತೋಷವೇನು ಇದನ್ನೆಲ್ಲ ಅವರಬಾಯಿಂದಲೇ ನೀವೊಮ್ಮೆ ಕೇಳಬೇಕು. ಆಗ ಅದರ ನಿಜವಾದ ರುಚಿ ಅನುಭವಕ್ಕೆ ನಿಲುಕುತ್ತದೆ.

ರಾಮೇಗೌಡ್ರ ಬಳಗವೇ ಒಂದಷ್ಟು ಜನ ಇದಾರೆ. ಅಭಿಮಾನ ಅನ್ನಿ, ಕಾಸು ಬೇಕಾದಾಗ ಅನಿವಾರ್ಯತೆಗೆ ಇರಲಿ ಅಂತ ಬೆನ್ನಿಗೆ ಆತುಕೊಂಡಿರುವವರೆನ್ನಿ [ರಾಮೇಗೌಡ್ರು ಕಾಸು ಬಿಚ್ಚುತ್ತಾರೋ ಇಲ್ಲವೋ ಅದು ತಿಳಿದಿಲ್ಲ, ಆದರೂ ಬಾಯಲ್ಲಿ ಪಟಾಕಿ ಹಾರಿಸಿದ್ದಾರಲ್ಲ ಅದನ್ನೇ ಕೇಳಿ ರಾಮೇಗೌಡ್ರು ಜನೋಪಕಾರಿ ಎಂದುಕೊಂಡವರೆಷ್ಟೋ!] ಈ ಬಳಗವೆಲ್ಲ ಟೈರ್ ಟ್ಯೂಬ್ ಇದ್ದವ್ರೇ! ಎಲ್ಲರಲ್ಲೂ ಒಂದೊಂದು ಸೇರಿ ಟೈರಿನ ಅಂಗಡಿಯೇ ಪಾರ್ಕಲ್ಲಿ ಪ್ರಾರಂಭಗೊಂಡಹಾಗೇ ಇರುತ್ತದೆ. ಇವರೆಲ್ಲರ ಕಥೆ ಏನು ಗೊತ್ತೇ ? ರಾತ್ರಿ ಮಲಗಿದಾಗ ಹಲವು ಕೋಳಿಗಳು ಇವರೆಲ್ಲರೊಡನೆ ಅತ್ಮಕಥೆ ಹೇಳಿಕೊಂಡು ಗೋಳಿಡುವುದೇ ಅವರು ಘೀಳಿಡುವುದಕ್ಕೆ ಕಾರಣ. ಅದಕ್ಕೇ ಆದಷ್ಟೂ ಅವುಗಳನ್ನು ಮಟ್ಟಹಾಕುವ ಲೆಕ್ಕದಲ್ಲಿ ಬೇಗ ಜೀರ್ಣಿಸಿ ಕರಗಿಸಿಬಿಟ್ಟರೆ ಆಮೇಲೆ ಅವುಗಳ ಕಥೆ ಕೇಳುವ ತೊಂದರೆ ತಪ್ಪುತ್ತದಲ್ಲಾ ಎಂಬುದು ತುಂಬಿದ ಹಂಬಲ! ಜೊತೆಗೆ ಅಷ್ಟಿಷ್ಟು ಮೊಬೈಲ್ ಬಗ್ಗೆ, ಈ ಮೇಲ್ ಬಗ್ಗೆ ಎಲ್ಲ ಪರಸ್ಪರ ತಿಳುವಳಿಕೆ ಪಡೆಯುವಾ ಅಂತ. ಪಾರ್ಕಿಗೆ ಹಂದಿಗಳಂತೇ ಬಂದವರೇ ಇವರು ನಿಲ್ಲುವುದೇ ಇಲ್ಲ! ಜೋರಾಗಿ ಓಡುವವರು, ನಿಧಾನಕ್ಕೆ ಸ್ಕೂಟರ್ ಬಿಟ್ಟ ಹಾಗೇ ಬ್ಯಾಲೆನ್ಸ್ ಮಾಡಿಕೊಂಡು ಓಡುವವರು, ಯೋಗಾಸನದ ತಪ್ಪು ಭಂಗಿಗಳನ್ನು ತಪತಪತಪನೆ ಹಾಕುವವರು, ಬಸ್ಕಿ ಹೊಡೆಯುವವರು, ನೀರಲ್ಲಿ ನೆನೆದ ನಾಯಿ ತಲೆಯಲ್ಲಾಡಿಸಿದಂತೇ ಮಾಡುವವರು, ಕೈಕಾಲಿನ ಎಲ್ಲಾಬೆರಳು-ಸಂದಿ ಇತ್ಯಾದಿಗಳಲ್ಲಿ ಥರಥರದ ಶಬ್ಢ ಹೊರಡಿಸುವವರು, ನಿಂತಲ್ಲೇ ಸ್ಕೂಲ್ ಕವಾಯತು ಮಾಡಿದ ಹಾಗೇ ಮಾಡುವವರು, ಹಾವು ಬಳುಕಿದ ಹಾಗೇ ಬಳುಕಲು ಪ್ರಯತ್ನಿಸಿ ಬೀಳುವವರು ಹೀಗೇ ಒಂದೇ ಎರಡೇ? ಮರೆಯಲು ಸಾಧ್ಯವಾಗದ ಅಗಾಧ ಅನುಭವ ಸ್ವಾಮೀ!

ಪಡ್ಡೆ ಹೈಕಳು ಮೊಬೈಲಿಂದ ತಮ್ಮ ತಮ್ಮ ಹುಡುಗಿಯರನ್ನು ಬುಕ್ ಮಾಡಿಕೊಂಡು ಬಂದು ಅಲ್ಲಲ್ಲಿ ಸಂದುಗೊಂದುಗಳಲ್ಲಿ ಸರಿಯಾಗಿ ಬೆಳಕು ಬೀಳದ ಭಾಗದಲ್ಲಿ ಕುಳಿತು ತಮಗೆ ಲೋಕವೇ ಗೊತ್ತಿಲ್ಲ ಎನ್ನುವ ಹಾಗೇ ಪರಸ್ಪರ ಅಂಟಿಕೊಂಡು ಆಂಟಿಯರಿಗೆಲ್ಲ ಮುಜುಗರ ಉಂಟುಮಾಡುತ್ತಿದ್ದರು! ಅವರಲ್ಲಿ ಕೆಲವರು ’ಈ ಗುಲಾಬಿಯು ನಿನಗಾಗಿ..’ ಸ್ಟೇಜ್ ನಲ್ಲಿದ್ದರೆ ಇನ್ನು ಕೆಲವರು ’ ಈ ಬಂಧನಾ ಜನುಮ ಜನುಮದಾ...’ ದಲ್ಲಿದ್ದರು, ಸ್ವಲ್ಪಮಟ್ಟಿಗೆ ’ ಈ ಸಮಯ ಆನಂದಮಯ ...’ ಎನ್ನುವ ನಿತ್ಯಾನಂದನ ಶಿಷ್ಯರೂ ಇದ್ದರು! ಅಪರೂಪಕ್ಕೆ ’ನಾನೊಂದು ತೀರ ನೀನೊಂದು ತೀರ...’ ಹಾಡುವ ಪಾಲಕರ ನಿರ್ವಹಣೆಯಲ್ಲಿ ಸಿಕ್ಕು ಬೇರಾಗುವ ರೀತಿಯವರೂ ಇದ್ದರು.

ಹೌದೀಗ ಕೇಳಲು ಮರೆತೇ ಬಿಟ್ಟೆ ನಿಮಗೆಲ್ಲ ಒಟ್ಟೂ ಎಷ್ಟು ಆಂಟಿ-ಅಂಕಲ್ ಗಳು ಇದ್ದಾರೆ? ನಮ್ಮ ಬೆಂಗಳೂರಲ್ಲಿ ಇದಕ್ಕೆ ಕೊರತೆಯೇ ಇಲ್ಲ! ಮನೆಗೆ ಬಾಡಿಗೆಗೆ ಬಂದವರು ಯಜಮಾನನಿಗೆ ’ಅಂಕಲ್’ ಎಂದರೆ ಸ್ಕೂಲ್ ನಲ್ಲಿ ಡ್ಯಾನ್ಸ್ ಕಲಿಸುವ ಮೇಡಂ ಗೆ ಕಲಿಯುತ್ತಿರುವ ಹುಡುಗಿ ’ಆಂಟಿ’ ಎನ್ನುತ್ತಾಳೆ, ಇದೆಲ್ಲಾ ಹೋಗಲಿ ಆಫೀಸುಗಳಿಗೆ ಬಂದ ಪಡ್ಡೆಗಳು ಕೆಲವೊಮ್ಮೆ ಅಂಕಲ್ -ಆಂಟಿ ಎನ್ನುವುದನ್ನು ಮರೆತಿರುವುದಿಲ್ಲ. ಒಬ್ಬಾತ ನನ್ನ ಮಿತ್ರರೊಬ್ಬರಿಗೆ [ಅವರ ಕಚೇರಿಯಲ್ಲಿ ಕೆಲಸಮಾಡುತ್ತಿರುವಾತ ] ’ಅಂಕಲ್’ ಎಂದನಂತೆ, ಅದಕ್ಕೇ ಕೋಪಗೊಂಡ ಅವರು ತಕ್ಷಣ ಆತನ ಲೆಕ್ಕಾಚಾರಮಾಡಿ ಕೆಲಸದಿಂದ ವಜಾಗೊಳಿಸಿದ್ದಾಗಿ ತಿಳಿಸಿದರು.

ಅರ್ಧ ಘಂಟೆ ಕಳೆದಿದ್ದೇ ಗೊತ್ತಾಗಲಿಲ್ಲ ನೋಡಿ. ಅದೇನದು ಸದ್ದು? ಯಾರೋ ನಗುವಂತಿದೆ ? ಅವರೇ ಅಲ್ಲವೇ ನಾನು ನೋಡಿ ನಿಮಗೆ ತಿಳಿಸಿದ ಹೆಂಗಸರು? ಹೌದು. ಅದೇಕೆ ಆ ಥರ ನಗು, ಕೆಟ್ಟನಗು, ಹುಚ್ಚನಗು? ಹೊರಗಡೆ ಎಲ್ಲೂ ನಗದ ಜನ ಪಾರ್ಕಿನಲ್ಲಿ ನಿಮಗೆ ನಕ್ಕು ತೋರಿಸುತ್ತಾರೆ! ನಗುವಿನ ಮಿಮಿಕ್ರಿ ಮಾಡುತ್ತಾರೆ! ’ಮಣ್ಣಿನ ಮಕ್ಕಳ’ಂತೇ ಹುಟ್ಟಿದಾರಭ್ಯ ಇಲ್ಲೀವರೆಗೆ ಅವರ ಮುಖಗಳಲ್ಲಿ ನಗುವಿನ ನರ ಅಲ್ಲಾಡದೇ ಸೀಲ್ ಓಪನ್ ಆಗದ ಬಾಕ್ಸಿನ ಥರ ಇದ್ದುಬಿಡುತ್ತದೆ! ಅಪರೂಪಕ್ಕೆ " ಬಿ.ಪಿ, ಜಾಸ್ತಿಯಾಗಿದೆ, ನೀವು ಸ್ವಲ್ಪ ವ್ಯಾಯಾಮ ಮಾಡಿ, ಸ್ವಲ್ಪ ನಗುವುದನ್ನು ಅಭ್ಯಾಸಮಾಡಿಕೊಳ್ಳಿ " ಎಂದು ವೈದ್ಯರು ಹೇಳಿದ ಮಾರನೇ ದಿನವೇ ಸ್ಟಾರ್ಟ್! ನಗುವ ಹೆಂಗಸರ ಗುಂಪಿಗೆ ಹಲವು ಗಂಡಸರೂ ಬಂದು ಸೇರಿದರು... ಹ್ಹ ಹ್ಹ ಹ್ಹ ಹ್ಹ ಹ್ಹ .....ಜೋರಾಯಿತು ಜೋರಾಯಿತು ಜೋರಾಯಿತು ಅಗೋ ನೋಡಿ ತಾರಕ ಸ್ವರದಲ್ಲಿ ವಿಜೃಂಭಿಸುತ್ತಿದೆ ಹುಚ್ಚು ನಗು..ಕ್ರತ್ರಿಮ ನಗು! ಅಲ್ಲೆಲ್ಲೋ ಅಡ್ಡಾಡುತ್ತಿದ್ದ ಬೀದಿ ನಾಯಿಗಳು ಏನಾಯಿತೆಂದು ತಿಳಿಯದೇ ಕಂಗಾಲು! ಪಾಪ ಕೂಗಿದರೆ ಅವುಗಳ ಪ್ರಾಣಕ್ಕೇ ಸಂಚಕಾರ, ಕೂಗದೇ ಇದ್ದರೆ ಕೂಗಲಾರದ ನಾಯಿಗಳೇ ಇವು ಅಂತ ಯಾರಾದರೂ ತಿಳಿಯುತ್ತಾರೇನೋ.. ನಾಯಿಪಾಡು ..ಡ್ಯೂಟಿ ಮಾಡಲೇಬೇಕು!

ಇನ್ನೇನು ನಾನು ಹೊರಟೆ. ಅನಿತರಲ್ಲಿ ಇಲ್ಲೀವರೆಗೆ ಯಾವತ್ತೂ ಒಂದೇ ಒಂದು ಫರ್ಲಾಂಗೂ ನಡೆದು ಗೊತ್ತಿರದ ಅತಿರಥ ಮಹಾರಥರು ಒಳ್ಳೆಳ್ಳೆಯ ಅಫೀಶಿಯಲ್ ಡೆಸ್ಸು, ಜ್ಯೂಡೋ ಶೂಸ್ ಹಾಕಿಕೊಂಡು ಶ್ರೀಮದ್ಗಾಂಭೀರ್ಯದಿಂದ ನಿಧಾನವಾಗಿ ಬರುತ್ತಿದ್ದರು. ಈಗೀಗ ಪಾರ್ಕಿನ ರಂಗಸ್ಥಳಕ್ಕೆ ಅವರ ಪಾತ್ರಗಳ ಪ್ರವೇಶ! ಭೀಮನ ಥರದವರು, ಕೌರವನ ಮೋರೆಯವರು, ಶಕುನಿ-ದುಶ್ಯಾಸನ ಎಲ್ಲಥರದ ಪರ್ಸನಾಲಿಟಿಯವರೂ ಇದ್ದರು. ಮಹಾಭಾರತವನ್ನು ಮಟ್ಟಸವಾಗಿ ನೋಡಿದ ಅನುಭವ ಕೊಡುವಷ್ಟು ಠಾಕುಠೀಕಾಗಿ ಮುಗುಮ್ಮಾಗಿ ಯುದ್ಧಮುಗಿಸಿ ಜಯಸಿರಿಯನ್ನು ಹೊತ್ತುತಂದ ಯೋಧರಂತೇ ಕಾಣುವವರಿದ್ದರು! ಹೂತ ರಥದ ಗಾಲಿಯನ್ನು ಎತ್ತುತ್ತಿರುವ ಕರ್ಣನಂತೇ ಕಾಣುವ ಬಿದ್ದ ಮೊಬೈಲ್ ಎತ್ತುತ್ತಿರುವವರಿದ್ದರು!

ಹೊರಟೆ ಎಂದುಕೊಳ್ಳುತ್ತಿರುವಾಗಲೇ ಒಂದು ಕಲ್ಲು ಬೆಂಚಿನಲ್ಲಿ ಮಾಸಿದ ಬಟ್ಟೆಯಲ್ಲಿ ಮಲಗಿದ ಉದ್ದ ಗಡ್ಡದ ಮುದುಕನೊಬ್ಬ ಕುರುಕ್ಷೇತ್ರವನ್ನು ನೆನಪಿಗೆ ತಂದ! ಅಲ್ಲೇ " ಕಳ್ಳೇಕಾಯ್ ಕಳ್ಳೇಕಾಯ್ " ಎನ್ನುತ್ತ ಆಗಾಗ ಬೆಕ್ಕು ಮಿಯಾಂವ್ ಮಿಯಾಂವ್ ಎಂದ ಹಾಗೇ ಕೂಗುವಾತ ಕೂತಿದ್ದ! ಕುರುಕ್ಷೇತ್ರದ ಕೈಲಾಗದ ಗಾಯಾಳುಗಳ ರೀತಿ ಕಂಡ! ಸಿನಿಮಾ ನೋಡಿ ಹೊರಬಂದ ಹಾಗಿದ್ದ ನನಗೆ ಏನಪ್ಪಾ ಜಗವೆನ್ನಿಸಿತು. ಜಗ ಸೋಜಿಗ !

ಸಂಪೂರ್ಣ ಕುರುಕ್ಷೇತ್ರ !
" ಕೃಷ್ಣಾ ನನ್ನಿಂದ ಯುದ್ಧ ಸಾಧ್ಯವಿಲ್ಲ, ನೋಡಿದರೆ ಎಲ್ಲರೂ ನನ್ನವರಂತೇ ಕಾಣುತ್ತಾರಪ್ಪಾ! ಬೇಡವೇ ಬೇಡ ನಾನು ಯುದ್ಧ ಬಿಟ್ಟು ತೆರಳುತ್ತೇನೆ " ಎಂದು ಹೊರಹೊರಟಾಗಲೇ ಅನಿಸಿದ್ದು ನಾನೂ ತೂಗಪ್ಪ ಆಗಿಬಿಡಬಹುದೇ? ಆ ಚಕ್ರವ್ಯೂಹವನ್ನು ಬೇಧಿಸಲು ನನ್ನಿಂದ ಸಾಧ್ಯವೇ ?

ಅಶರೀರವಾಣಿ ಮೊಳಗಿತು " ನಾಲಿಗೆ ನಿನ್ನ ಹಿಡಿತಲ್ಲಿಡು ಅರ್ಜುನ, ನಿನ್ನ ಕೆಲಸವನ್ನು ಜಾಸ್ತಿ ಮಾಡು, ಗಾಡಿ ಬಿಟ್ಟು ಭೂಮಿಗೆ ಇಳಿ, ನಾಲಿಗೆ ಬಿಗಿಹಿಡಿ, ನಿನಗೆ ಮಂಗಳವಾಗಲಿ"

" ಧನ್ಯೋಸ್ಮಿ " !

Sunday, July 25, 2010

ಯಾರು ?


ಚಿತ್ರ ಋಣ: ಅಂತರ್ಜಾಲ

ಯಾರು ?


ಸೌರಮಂಡಲದಲ್ಲಿ ಇರುವೆಲ್ಲ ಕಾಯಗಳ
ಗೌರವದಿ ಹಿಡಿದಿಟ್ಟು ನಡೆಸುವುದು ಯಾರು ?
ಪೌರುಷದಿ ಕುಂಟ ಕುರುಡಾದಿ ಹಲವರ ಸೃಜಿಸಿ
ರೌರವದ ನರಕವನು ಉಣಿಸುವರು ಯಾರು ?

ಬುದ್ಧಿಮಾಂದ್ಯರ ತಂದು ಬುದ್ಧಿವಂತರನಡುವೆ
ಇದ್ದುಬಿಡಿ ನೀವೆಂತ ಹುಟ್ಟಿಸುವರಾರು ?
ಎದ್ದೇಳಲಾಗದಾ ಪೋಲಿಯೋ ಹಬ್ಬಿಸುತ
ಒದ್ದಾಟ ಮೂಡಿಸುವ ಆ ಅದುವೆ ಯಾರು ?

ದೇಹದೊಳಗೊಂದೇನೋ ಕಾಣದುದನಿಳಿಬಿಟ್ಟು
ದಾಹ ತಣಿಸಿಕೊ ಎಂದು ಕಳಿಸಿದವರಾರು ?
'ಆಹಾ ಇದು ಏನು ಮಹಾ' ಹಾರಾಟ ಜೋರಾಗೆ
ವಾಹ ವಾ ಬಾ ಎಂದು ಕಿತ್ತವರು ಯಾರು ?

ಅಂಚಿರದ ಆಗಸವ ಕಟ್ಟಿನಿಲ್ಲಿಸುತಲ್ಲಿ
ಕಂಚು-ತಾಮ್ರಗಳನ್ನು ಕೊಟ್ಟವರು ಯಾರು?
ಮಂಚ ಮಾನಿನಿ ಮದ್ಯ ಮಾಂಸಾದಿಗಳ ತುಂಬಿ
ಸಂಚಿನಲಿ ಸಿಲುಕಿಸುತ ಬಂಧಿಸುವರಾರು?

ಬಿರುಗಾಳಿ ನೆರೆಗಳನು ಥರಥರದಿ ತಂದಿಡುತ
ಒರೆಹಚ್ಚಿ ಓರೆಯಲಿ ನೋಡುವುದದಾರು?
ತೆರೆಯೆಳೆದು ಹಲವಕ್ಕೆ ಮರುಮಾತಲೆಕ್ಕಿಸದೆ
ಅರಿವಿಡದೆ ಕರೆದೊಯ್ವ ಅಗೋಚರವಾರು?

ವೈದ್ಯರನು ಕಂಡು ನಸುನಕ್ಕು ತಾ ಮುಸುಕಿನಲಿ
ವೇದ್ಯವಾಗದ ಅವಧಿ ನೀಡುವವರಾರು?
ವಾದ್ಯಮೇಳಗಳಲ್ಲಿ ಖಾದ್ಯ ತೈಲಗಳಲ್ಲಿ
ಬಾಧ್ಯಸ್ಥವಾಗಿರುವ ಅಣುರೂಪವಾರು?

ಬಾಂಬು ಗರ್ನಾಲು ತೋಪು ತಪರಾಕಿಗಳ
ಕಾಂಬಕೈಯಲೆ ಕೊಟ್ಟು ಆಡಿಸುವರಾರು ?
ಸಾಂಬ ನಿನ್ನಯ ರೂಪ ಕಾಣುವೆನು ಕಣಕಣದಿ
ಮಾಂಬರದಿ ಕುಳಿತ ನೀನಲ್ಲದಿನ್ಯಾರು?

----------

ಆತ್ಮೀಯ ಬ೦ಧು, ಪ್ರಣಾಮಗಳು.

ತಮ್ಮ ಮೈಲ್ ಮತ್ತು ಬ್ಲಾಗ್ ಗಳನ್ನು ನೋಡಿದೆ. ಸ೦ತಸವಾಯ್ತು. ತಮ್ಮ ಮೈಲ್ ವಿಳಾಸವನ್ನು ಹಿಡಿದುಇಟ್ಟಿದ್ದೇನೆ. ನನಗೆ ಸಮಯ ಸಿಕ್ಕಾಗ ನನ್ನ ಕೆಲವು ಲೇಖನಗಳನ್ನು ಕಳುಹಿಸುತ್ತೇನೆ. ತಮ್ಮ ಅಭಿಪ್ರಾಯವನ್ನು ಗೌರವಿಸುತ್ತೇನೆ. ತಮ್ಮೊ೦ದಿಗೆ ಈ ಮೂಲಕ ಮಾತಾಡಲು ನನಗೆ ಪ್ರೇರೇಪಿಸಿದ್ದು ನಮ್ಮ ಪೂಜ್ಯ ಗುರುಗಳೂ, ನಮ್ಮ ನಾಟಕವನ್ನು ಸಾಗರದಲ್ಲಿ 1959 ರಲ್ಲಿ ನೋಡಿ, ಅನುಗ್ರಹಿಸಿ ತಮ್ಮ ಬ೦ಗಾರದ ಪಾದುಕೆಗಳನ್ನಿತ್ತು ಹರಸಿದ, ಇ೦ದಿಗೂ ನನ್ನೊಳಗೇ ಇದ್ದು ಪ್ರತಿ ನಿಮಿಷವೂ ನಮ್ಮನ್ನೆಲ್ಲಾ ಹರಸುತ್ತಿರುವ ಶ್ರೀ ಶ್ರೀಧರಸ್ವಾಮಿಗಳ ಭಾವಚಿತ್ರ. ನಿಮಗೆಲ್ಲಾ ಶುಭವಾಗಲಿ. ವ೦ದನೆಗಳು.

ಎ೦ದೂನಿಮ್ಮವ,.

ಮಾಸ್ಟರ್ ಹಿರಣ್ಣಯ್ಯ.

-----ಮಾನ್ಯ ಮಿತ್ರರೇ, ಇವತ್ತು ' ನಿಮ್ಮೊಡನೆ.....' ಬ್ಲಾಗಿಗೆ ಹಿರಿಯರಾದ ಮಾಸ್ಟರ್ ಹಿರಣ್ಣಯ್ಯ ಬಂದು, ಗುರು ಶ್ರೀಧರರ ಬಗ್ಗೆ ಓದಿದ್ದು, ಶ್ರೀಗಳ ಬಗೆಗಿನ ಅವರ ಸ್ವಂತದ ಅನಿಸಿಕೆಗಳನ್ನು ನನ್ನೊಡನೆ ಮೇಲ್ ಮುಖಾಂತರ ಹಂಚಿಕೊಂಡಿದ್ದಾರೆ, ಜ್ಞಾನಿಗಳಾದ- ಪಕ್ವ ಮನದವರಾದ ಶ್ರೀಯುತರನ್ನು ಬ್ಲಾಗಿಗೆ ಹೃತ್ಪೂರ್ವಕವಾಗಿ ಸ್ವಾಗತಿಸಿದ್ದೇನೆ ಮತ್ತು ಧನ್ಯತೆಗಳನ್ನು ಅರ್ಪಿಸಿದ್ದೇನೆ. ಸಮಾಜವನ್ನು ಸುಧಾರಿಸುವ ಕೆಲಸವನ್ನು ನಾಟಕಗಳ ಮುಖಾಂತರ ಮಾಡಲು ಸಾಧ್ಯ ಎಂಬುದನ್ನು ಶ್ರೀಯುತರು ತೋರಿಸಿಕೊಟ್ಟ ಬಗ್ಗೆ ಋಜುಮಾರ್ಗದವರಾದ ತಮಗೆಲ್ಲ ಹೊಸದಾಗಿ ಹೇಳಬೇಕಿಲ್ಲ. ಅವರ ಆಪ್ತ ನುಡಿಗಳು ನನ್ನ ಮನಸ್ಸನ್ನು ತುಂಬಾ ಸೆಳೆದವು. ಅವರು ನೂರ್ಕಾಲ ನಮ್ಮೊಡನಿರಲಿ ಮತ್ತು ನಮಗೆಲ್ಲ ಮಾರ್ಗದರ್ಶಕರಾಗಿರಲಿ ಎಂದು ಹಾರೈಸುತ್ತೇನೆ.

Saturday, July 24, 2010

|| ಗುರು ಬುದ್ಧಿ ವಿಶೇಷತಃ ||


|| ಗುರು ಬುದ್ಧಿ ವಿಶೇಷತಃ ||

ಜಗತ್ತಿನಲ್ಲಿ ಎಲ್ಲರ ಬುದ್ಧಿಗಿಂತ ಗುರುಬುದ್ಧಿ ವಿಶೇಷ ಎಂದು ಪ್ರಮಾಣೀಕೃತವಾಗಿದೆ! ಇದು ಇಂದಿನ ನಮ್ಮ ವಿಜ್ಞಾನಕ್ಕೂ ಸವಾಲೊಡ್ಡಿ ಜಯಿಸಬಹುದಾದ ವಿಷಯ! ಸದ್ಗುರುವೊಬ್ಬ ಕೇವಲ ತನ್ನ ತಪೋಬಲದಿಂದ ಕುಳಿತಲ್ಲೇ ಎಲ್ಲವನ್ನೂ ಗಳಿಸಬಲ್ಲ. ಎಲ್ಲಾ ಜ್ಞಾನ, ಭಾಷೆ, ಪರಿಕರ ಏನು ಬೇಕು ಹೇಳಿ ಅದನ್ನೆಲ್ಲವನ್ನೂ ಪಡೆಯಬಲ್ಲ ಯೋಗಸಿದ್ಧಿ ಗುರುವಿಗೆ ಸಾಧ್ಯ. ಹಾಗಂತ ಎಲ್ಲಾ ಗುರುವಿಗೂ ಅದು ಧಕ್ಕಲೇ ಬೇಕೆಂತಿಲ್ಲ ಅಥವಾ ಧಕ್ಕಿದವರೆಲ್ಲ ಅದನ್ನು ಪ್ರಯೋಗಿಸಿ ತೋರಿಸಬೇಕೆಂದಿಲ್ಲ.

ತನಗಾಗಿ ಪರಿತಪಿಸದ, ತನ್ನ ಹೊಟ್ಟೆಬಟ್ಟೆಯ ಹಾಗೂ ತನ್ನ ಸ್ವಾಸ್ಥ್ಯದ ಚಿಂತೆಯನ್ನು ಮರೆತು ಕೇವಲ ಆತ್ಮೋನ್ನತಿ ಬಯಸಿ, ಮೋಕ್ಷ ಬಯಸಿ ತಪಸ್ಸನ್ನಾಚರಿಸುವ ಯತಿಗೆ ಗುರುವೆನ್ನುತ್ತಾರೆ. ಸದ್ಗುರುವಾದವನು ’ನಾನು’ ಎಂಬ ಅನಿಸಿಕೆ ತೊರೆದು ’ನಾವು’ ಎಂಬ ಹಂತವನ್ನು ತಲ್ಪಿ ತನ್ನ ಆತ್ಮೋದ್ಧಾರದ ಜೊತೆಗೆ ನಂಬಿಬಂದ ಶಿಷ್ಯಗಣದ ಉದ್ಧಾರವನ್ನು ಬಯಸುತ್ತಾನೆ. ಇಂತಹ ಸಾಧನೆಯ ಮಾರ್ಗ ಬಲು ದುರ್ಗಮ, ಬಹಳ ಕಠಿಣ. ಎಲ್ಲಕ್ಕಿಂತ ಹೆಚ್ಚಾಗಿ ಇಂದಿನ ಈ ದಿನಗಳಲ್ಲಿ ಸಿಗುವ ಕಣ್ಣಿಗೆ ರಾಚುವ ಹಲವು ಐಹಿಕ ಸುಖೋಪಭೋಗಗಳನ್ನು ತ್ಯಜಿಸಿ ಏಕನಿಷ್ಠೆಯಿಂದ ಇಂದ್ರಿಯನಿಗ್ರಹಮಾಡಿ ಸಾಧನೆಮಾಡುವುದು ವಜ್ರಾದಪಿ ಕಠೋರ! ಹಿಂದಿನ ಕಾಲದಲ್ಲಿ ಸರಿಸುಮಾರು ೧೯ ನೇ ಶತಮಾನಕ್ಕೂ ಮುಂಚೆ ಕೊನೇಪಕ್ಷ ಸರಿಯಾದ ಶಿಷ್ಯಂದಿರಾದರೂ ಸಿಗುತ್ತಿದ್ದರು, ಈಗ ನಿಜವಾದ ಸನ್ಯಾಸಿಗಳಿಗೆ ಶಿಷ್ಯರು ಸಿಗುವುದು ದುರ್ಲಭ, ಅದೇ ಢಾಂಬಿಕರಿಗೆ ಬಹಳಜನ ಸಿಗುತ್ತಾರೆ!

ಗುರುಪೂರ್ಣಿಮೆ ಮತ್ತು ಚಾತುರ್ಮಾಸ್ಯ ವೃತ

ಆಷಾಢ ಮಾಸದ ಹುಣ್ಣಿಮೆಯನ್ನು ಗುರುಪೂರ್ಣಿಮೆ ಎಂದು ಪ್ರಾಜ್ಞರು ಗುರುತಿಸಿದ್ದಾರೆ. ಈ ಹುಣ್ಣಿಮೆಯ ದಿನ ಗುರುವನ್ನು ನೆನೆಯುವುದರಿಂದ, ದರ್ಶಿಸುವುದರಿಂದ, ತೀರ್ಥ-ಮಂತ್ರಾಕ್ಷತೆಗಳನ್ನು ಪಡೆಯುವುದರಿಂದ ವಿಷಿಷ್ಟ ಅನುಭೂತಿ ಉಂಟಾಗುವುದು ಹಲವರ ಅನುಭವಕ್ಕೆ ನಿಲುಕಿದ ವಿಷಯ. ನಮಗೆ ವಿದ್ಯೆ ಕಲಿಸಿದ, ಬುದ್ಧಿ ಹೇಳಿದ, ತಿದ್ದಿಬರೆಸಿದ, ಗುದ್ದು ಕೊಟ್ಟು ಒಂದು ಮನುಷ್ಯರೂಪಕ್ಕೆ ತಂದ ಗುರುವಿಗಲ್ಲದೇ ನಮ್ಮೊಳಗಿನ ನಮ್ಮಾತ್ಮಕ್ಕೆ ಪರದ ತತ್ವವನ್ನು ಪರಿಚಯಿಸುವ, ಆ ಮೂಲಕ ಆತ್ಮಕ್ಕೆ ಉತ್ತಮ ಸಂಸ್ಕಾರ ಕೊಡುವ ಗುರುಗಳೆಲ್ಲರನ್ನೂ ನೆನಪುಮಾಡಿಕೊಂಡು ಅವರ ಪಾದಾರವಿಂದಗಳಿಗೆ ಶಿರಸಾ ವಂದಿಸುವ ದಿನವೇ ಗುರುಪೂರ್ಣಿಮೆ. ಗುರುವಿನ ಮೂಲವನ್ನು ಹುಡುಕಿದರೆ ಅದು ಪರೋಕ್ಷ ಆದಿನಾರಾಯಣ ಅಂದರೆ ಮಹಾವಿಷ್ಣುವನ್ನೇ ಪುನಃ ಸೇರುತ್ತದೆ. ಯಾವ ಪರಂಪರಾ ಶ್ಲೋಕವನ್ನೇ ತೆಗೆದುಕೊಂಡರೂ ಮೂಲದಲ್ಲಿ ಆ ಶ್ಲೋಕ ನಾರಾಯಣನ ಕುರಿತೇ ಪ್ರಾರಂಭವಾಗುತ್ತದೆ.

ಭಗವಂತ ತನ್ನ ಭಕ್ತರ ಒಳಿತಿಗಾಗಿ, ಅವನಾಡುವ ನಾಟಕದ ಪಾತ್ರಧಾರಿಗಳಿಗೆ ಪರೋಕ್ಷ ಸಹಕರಿಸಲಾಗಿ, ಹಾರಾಡುವ ಮತಿಗೆಟ್ಟ ಜನರ-ರಕ್ಕಸ ಸಂಸ್ಕೃತಿಯ ದಮನಕ್ಕಾಗಿ ಆಗಾಗ ಬೇರೆಬೇರೆ ರೂಪದಲ್ಲಿ ಅವತರಿಸುತ್ತಾನೆ ಎಂಬುದನ್ನು ಅವನೇ ಗೀತೆಯಲ್ಲಿ ಹೇಳಿದ್ದಾನಲ್ಲವೇ ? ಈ ಅವತಾರಗಳಲ್ಲಿ ಪೂರ್ಣಾವತಾರ, ಅಂಶಾವತಾರ, ಅಂಶಾಂಶಾವತಾರ ಎಂಬ ಕೆಲವು ಭೇದಗಳಿವೆ. ಉದಾಹರಣೆಗೆ ವರಾಹ, ನಾರಸಿಂಹ, ರಾಮ, ಕೃಷ್ಣ ಇವೆಲ್ಲ ಪೂರ್ಣಾವತಾಗಳಾದರೆ ತಿರುಪತಿ ಶ್ರೀನಿವಾಸ, ದತ್ತಾತ್ರೇಯ, ಅಯಪ್ಪ ಇವುಗಳೆಲ್ಲಾ ಅಂಶಾವತಾರಗಳು. ವ್ಯಾಸ, ಪರಾಶರ, ಶಂಕರ, ರಾಮಾನುಜ, ಮಧ್ವ ಈ ಥರದವೆಲ್ಲಾ ಅಂಶಾಂಶಾವತಾರಗಳೆಂದರೆ ತಪ್ಪೇನಿಲ್ಲ. ಹೀಗೇ ಹಲವು ಸ್ತರಗಳಲ್ಲಿ ಒಬ್ಬರ ಮೇಲೆ ಇನ್ನೊಬ್ಬರು ಗೋಚರಿಸುವ ಈ ಗುರುಪರಂಪರೆಗಳಲ್ಲಿ ಏರುತ್ತಾ ಏರುತ್ತಾ ಹಿಂದಕ್ಕೆ ಹೋದರೆ ಕಾಣುವುದು ಶ್ರೀಮನ್ನಾರಾಯಣ ಸ್ವರೂಪ! ನನಗೊಬ್ಬ ಗುರು, ಆ ಗುರುವಿಗೆ ಇನ್ನೊಬ್ಬ ಗುರು, ಅವರ ಗುರುವಿಗೆ ಮತ್ತೊಬ್ಬ ಗುರು ಹೀಗೇ ಸ್ತರಗಳು ಮೇಲೆ ಹೋಗುತ್ತವೆ. ಒಟ್ಟಿನಲ್ಲಿ ಇಡೀ ಗುರುಸಂಕುಲವನ್ನೇ ಧ್ಯಾನಾವಾಹನಾದಿ ಪೂಜೆ ನಡೆಸಿ ಒಮ್ಮೆ ಅವರ ಋಣ ನೆನೆಯುವುದು ನಮ್ಮೆಲ್ಲರ ಕರ್ತವ್ಯ. ಈ ಗುರುಪೂಜೆಯನ್ನು ಆಯಾಯ ಧರ್ಮಗಳವರು ಅವರವರ ಧರ್ಮಾನುಸಾರ ನೆರವೇರಿಸಬಹುದು.

ಮಳೆಗಾಲದಲ್ಲಿ ಮುಂಗಾರಿನ ಮಳೆಯ ಸೇಚನಕ್ಕೆ ಭೂಮಿ ನೆನೆದಾಗ ಅಲ್ಲಿ ಹಲವು ಥರದ ಕ್ರಿಮಿಕೀಟಗಳು ಹುಟ್ಟಿಕೊಂಡು ಭೂಮಿಯ ಮೇಲ್ಪದರದಲ್ಲಿ ನೆಲೆಗೊಳ್ಳುತ್ತವೆ. ಕಪ್ಪೆಮರಿಗಳು, ಏಡಿಮರಿಗಳು, ಎರೆಹುಳುಗಳು, ಶತಪದಿ, ಸಹಸ್ರಪದಿ, ಚೇಳು, ಪಡಚೇಹುಳು, ಶಂಖದ ಹುಳು, ಬಸವನಹುಳು .....ಹೀಗೇ ಒಂದೆರಡಲ್ಲ ಅನೇಕ ಸಹಸ್ರಥರದ ಪ್ರಭೇದಗಳನ್ನು ಹೊಂದಿರುವ ಕೀಟಕುಟುಂಬಗಳ ಸಂತಾನವೃದ್ಧಿ ಈ ಕಾಲಘಟ್ಟದಲ್ಲಿ ಜಾಸ್ತಿ. ಇಂತಹ ಸಂದರ್ಭದಲ್ಲಿ ಅಹಿಂಸೆಯನ್ನು ಬೋಧಿಸುವ-ಪ್ರತಿಪಾದಿಸುವ ಸನ್ಯಾಸಿಗಳು ಓಡಾಡಿದರೆ ತಾನು ಎಲ್ಲಿ ಅವುಗಳ ಜೀವಕ್ಕೆ ಕುತ್ತು ತರಬೇಕಾಗುತ್ತದೋ ಎಂಬ ಅನಿಸಿಕೆಯಿಂದ ಒಂದು ಸರಿಯಾದ ತಪೋಯೋಗ್ಯ ಜಾಗ ಹುಡುಕಿ ಅಲ್ಲಿ ನಾಲ್ಕು ಮಾಸಗಳು ಅಥವಾ ನಾಲ್ಕು ಪಕ್ಷಗಳ ಪರ್ಯಂತ ತಪಸ್ಸಿನಲ್ಲಿ ಮಗ್ನರಗುತ್ತಾರೆ. ಒಂದೇ ಕಡೆ ಅವರು ಹಾಗೆ ಮೊಕ್ಕಾಂ ಹೂಡಿರುವ ವೇಳೆ ಬೇರೆ ಬೇರೆ ಸ್ಥಳಗಳ ಶಿಷ್ಯರು ಗುರುವನ್ನು ಕಾಣಲೂ ಸಾಧ್ಯವಾಗುತ್ತದೆ. ಹೀಗಾಗಿ ವ್ಯಾಸಮಹರ್ಷಿಯನ್ನೂ ತಮ್ಮ ಗುರುಸಂಕುಲವನ್ನೂ ಅರ್ಘ್ಯ-ಪಾದ್ಯಾದಿ ಶೋಡಷೋಪಚಾರದಿಂದಲೂ ನೈವೇದ್ಯವೇ ಮೊದಲಾದ ವಿಶೇಷ ಉಪಚಾರಗಳಿಂದಲೂ ಅರ್ಚಿಸಿ, ಪೂಜಿಸಿ ತಾವು ಕೈಗೊಳ್ಳುವ ದೀರ್ಘ ತಪಸ್ಸಿಗೆ ಅನುಕೂಲವಿರುವಂತೆಯೂ ತಮ್ಮಿಂದ ಶಿಷ್ಯಗಣದ ಉದ್ಧಾರಕ್ಕೆ ಅನುಕೂಲವಾಗಲೆಂದೂ ಪ್ರಾರ್ಥಿಸುತ್ತಾರೆ. ಹೀಗೆ ಪೂಜಿಸಿದ ವೃತದ ಆದಿಭಾಗದಲ್ಲಿ ಆ ದಿನದ ಜಪತಪಗಳನ್ನು ಪೂರೈಸಿ ಹೊರಬಂದು ನೆರೆದ ಶಿಷ್ಯರಿಗೆ ಅಭಿಮಂತ್ರಿಸಿದ ಅಕ್ಷತೆಗಳನ್ನು ಎರಚುವುದು ಅಥವಾ ಕೊಡುವುದು ಸಂಪ್ರದಾಯ. ಹಾಗೆ ಗುರುವು ಕೊಡುವ ಆ ಮಂತ್ರಾಕ್ಷತೆ ಎಂದಿಗಿಂತ ಹೆಚ್ಚಿನ ಶಕ್ತಿಯನ್ನು ಹೊಂದಿದ್ದಾಗಿರುತ್ತದೆ ಮತ್ತು ಅದಕ್ಕೆ ವ್ಯಾಸಮಂತ್ರಾಕ್ಷತೆ ಎಂದೇ ಕರೆಯುತ್ತಾರೆ. ಹೇಗೆ ದೊಡ್ಡ ಆಯಸ್ಕಾಂತದ ಪ್ರಭಾವ ಜಾಸ್ತಿ ಇರುತ್ತದೋ ಹಾಗೇ ಉಳಿದ ದಿನ ಸಣ್ಣ ಆಯಸ್ಕಾಂತವಾದರೆ ಗುರುಪೂರ್ಣಿಮೆಯ ದಿನ ಅತೀದೊಡ್ಡ ಆಯಸ್ಕಾಂತದ ಬಲ ಈ ಆಶೀರ್ವಾದಕ್ಕಿದೆ ಎಂಬುದು ಅನುಭವಿಕರ ಮಾತು.

ಈ ಸುಸಂದರ್ಭ ಒಂದು ಕಥೆ ಹೇಳುತ್ತೇನೆ ಕೇಳಿ- ಶ್ರೀ ಶಂಕರರು ತಿರುಗುತ್ತ ತಿರುಗುತ್ತ ಹಿಮಾಲಯದ ತಪ್ಪಲಿನ ಗುಹೆಯೊಂದರಲ್ಲಿ ತನಗೆ ಬೇಕಾದ ಆಧ್ಯಾತ್ಮಿಕ ಗುರುವನ್ನು ಕಾಣುತ್ತಾರೆ. ಹಾಗೆ ಕಂಡಿದ್ದು ಕೇವಲ ಯೋಗ ದೃಷ್ಟಿಯಿಂದಲೇ ಹೊರತು ನೇರವಾದ ದರ್ಶನ ಅವರಿಗಿನ್ನೂ ಆಗಿರುವುದಿಲ್ಲ. ಶಂಕರರು ಕಾಯುತ್ತಾ ಕಾಯುತ್ತಾ ಬಹಳ ಸಮಯವಾಗುತ್ತದೆ. ಆದರೆ ಗುಹೆಯಲ್ಲಿ ಇರುವ ಆ ಗುರುಗಳು ಸಮಾಧಿ ಸ್ಥಿತಿಯಲ್ಲಿದ್ದಾರೆ. ಅವರನ್ನು ಜಾಗ್ರತಸ್ಥಿತಿಗೆ ತಂದರೆ ಕೋಪಬರಲೂ ಬಹುದು ಅಥವಾ ಹಾಗೆ ತಪೋಭಂಗ ಮಾಡಿದ ಪಾಪ ಬರಬಹುದೆಂಬ ಅನಿಸಿಕೆಯಿಂದ ಕೇವಲ ಯೋಗ ಮಾರ್ಗದಿಂದಲೇ ಅವರ ಆತ್ಮವನ್ನು ಸಂಧಿಸಿ ತಾನು ಬಂದಿದ್ದೇನೆ ಎನ್ನುತ್ತಾರೆ. ಆಗ ಎಚ್ಚೆತ್ತ ಗುರುಗಳು ಕೇವಲ ತನ್ನ ಕಾಲು ಪಾದಗಳನ್ನು ಮಾತ್ರ ಹೊರಗೆ ಕಾಣಿಸಿ ಮಿಕ್ಕಿದ ಶರೀರಭಾಗದ ದರ್ಶನ ಕೊಡದಂತೇ ಇರುತ್ತಾರೆ. ಮತ್ತು ಕೇಳುತ್ತಾರೆ " ನೀನು ಬಂದೆ ಅಂದೆಯಲ್ಲ, ಯಾರು ನೀನು ? " " ನಾವು ಬಂದಿದ್ದೇವೆ " ಶಂಕರರು ಹೀಗೆ ಹೇಳುವವರೆಗೂ ಅವರು ಹಾಗೇ ಬರೇ ಪಾದಗಳನ್ನು ಮಾತ್ರ ತೋರಿಸಿದರಂತೆ. ಆ ಗುರುಗಳೇ ಗುರು ಗೋವಿಂದ ಭಗವತ್ಪಾದರು. ಆಗ ಶಂಕರರ ಬಾಯಿಂದ ಹುಟ್ಟಿದ್ದು ’ಗೋವಿಂದಾಷ್ಟಕಮ್’ ಅಷ್ಟಕ ಸ್ತೋತ್ರ! ಹೀಗೇ ಗುರುವನ್ನು ಕಾದು ನೋಡಬೇಕೆಂಬುದು ಪ್ರತೀತಿ.

ಇತ್ತೀಚಿನ ಇಂತಹ ಒಂದು ಗುರುವೆಂದರೆ ಬ್ರಹ್ಮೈಕ್ಯ ಶ್ರೀ ಶ್ರೀಧರ ಸ್ವಾಮಿಗಳು. ಕರ್ನಾಟಕದ ಗಡಿಭಾಗದಲ್ಲಿ ಗುಲಬರ್ಗಾದ ಲಾಡ್ ಚಿಂಚೋಳಿಯಲ್ಲಿ ಜನಿಸಿದ ದತ್ತಾತ್ರೇಯನ ಅವತಾರವಾದ ಶ್ರೀ ಭಗವಾನರು ಸಾವಿರ ಸಾವಿರ ಸಂಖ್ಯೆಯಲ್ಲಿ ಭಕ್ತಜನರನ್ನು ಉದ್ಧರಿಸಿದ್ದಾರೆ. ಯಾವುದೇ ಪವಾಡಗಳನ್ನು ಅವರೌ ಮಾಡುತ್ತಿರಲಿಲ್ಲ, ಬದಲಾಗಿ ಅವರ ಉಪಸ್ಥಿತಿಯಿದ್ದಲ್ಲಿ ಹಲವು ಪವಾಡಗಳು ನಡೆಯುತ್ತಿದ್ದವು. ಒಮ್ಮೆ ಹೀಗಾಯಿತು ಅತೀ ಬಡವನೊಬ್ಬ ಶ್ರೀಗಳಲ್ಲಿ ಬೇಡಿದ "ಸ್ವಾಮೀ ನಾನೊಬ್ಬ ಬಡವ, ನನ್ನಲ್ಲಿ ಕೊಡಲು ಏನೂ ಇಲ್ಲ, ತಾವು ಒಮ್ಮೆ ನಮ್ಮನೆಗೆ ಬಂದು ತಮ್ಮ ಪಾದಧೂಳಿಯಿಂದ ನಮ್ಮನ್ನು ಪುನೀತರನ್ನಾಗಿ ಮಾಡ್ಬೇಕು. " ತಮಾಷೆಗಾಗಿ ಗುರುಗಳು " ಆಯ್ತಪ್ಪಾ ನೀನು ಹೋಗಿ ಬಯಲಿನಲ್ಲಿರುವ ಧೂಳನ್ನು ತಂದು ನಿಮ್ಮನೆಯ ನೆಲದಮೇಲೆಲ್ಲಾ ಚೆಲ್ಲು, ನಾನು ನಡೆದು ಹೋದಾಗ ಅಲ್ಲಿ ನನ್ನ ಪಾದ ಸೋಕುವುದರಿಂದ ಅದು ನನ್ನ ಪಾದಧೂಳಿಯೇ ಆಯಿತಲ್ಲ ಇನ್ನೇನು ಆಗದೇ ? " ಎಂದರಂತೆ. ಶ್ರದ್ಧೆಯಿಂದ ಮರುಮಾತನಾಡದ ಆ ಶಿಷ್ಯ ಗುರುಗಳು ಹೇಳಿದ ಹಾಗೇ ಮಾಡಿದ್ದು ಗುರುಗಳನ್ನು ಕರೆದೊಯ್ಯಲು ಬಂದ. ಗುರುಗಳಿಗೆ ಬಹಳ ಕನಿಕರ ಮೂಡಿಬಿಟ್ಟಿತು. ತಕ್ಷಣಕ್ಕೆ ಗುರುಗಳು ಹೊರಟು ಆತನ ಮನೆಗೆ ಬಂದು ಆತನಿಗೆ ಹೇಳಿದಂತೇ ಮನೆಯ ತುಂಬೆಲ್ಲ ನಡೆದಾಡಿದರು. ಅವರು ಹೋದಲ್ಲೆಲ್ಲಾ ಬಂಗಾರದ ನಾಣ್ಯಗಳು ಕಾಣಿಸಿಕೊಂಡವು ! ಅವುಗಳನ್ನೆತ್ತಿ ಗುರುಗಳ ಪಾದಕ್ಕೆ ತುಲಸೀ ಸಮೇತ ಅರ್ಚಿಸಿದ ಆ ಭಕ್ತ. ಆತನ ನಿರ್ವಿಣ್ಣಭಾವ ನೋಡಿದ ಗುರುಗಳು " ಬದುಕು ಪೂರ್ತಿ ನಿನಗಿದು ಸಾಕು" ಎಂದು ಎಲ್ಲಾ ಬಂಗಾರದ ನಾಣ್ಯಗಳನ್ನೂ ಅವನ ಕೈಗೆ ಹಾಕಿ, ತಲೆಯಮೇಲೆ ಅಭಯ ಹಸ್ತವನ್ನಿಟ್ಟು ಹರಸಿದರು. ಅಂದಿನಿಂದ ಆತನಿಗೆ ಯಾವುದೇ ಬಡತನದ ಭವಣೆ ಕಾಡಲಿಲ್ಲ.

ಇದು ಕೇಳಲು ಕಥೆ ಎನಿಸಿದರೂ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ವರದಪುರದ ಶ್ರೀ ಶ್ರೀಧರಾಶ್ರಮದಲ್ಲಿ ಇದರ ದಿನಾಂಕ ಮತ್ತು ಭಕ್ತ ವ್ಯಕ್ತಿ ಯಾರಗಿದ್ದ ಎಂಬ ದಾಖಲೆ ಸಹಿತ ಸಿಗುತ್ತದೆ! ಇಂತಹ ಹಲವು ಸಾವಿರ ಘಟನೆಗಳು ಶ್ರೀಧರರ ಅವತಾರದಲ್ಲಿ ನಡೆದವು. ಅದಕ್ಕೇ ಅವರನ್ನು ಜನ ’ಭಗವಾನ್’ ಎಂದರು, ’ಅಘಟಿತ ಘಟನಾ ಅದ್ಬುತ ಶಕ್ತಿ’ ಎಂದರು. ಇಂತಹ ಗುರುವನ್ನು ಪಡೆಯಲು ಯೋಗ ಬೇಕು. ಇದು ಎಲ್ಲರಿಗೂ ಲಭ್ಯವಲ್ಲ. ಇಂದಿನ ನಮ್ಮ ಜಂಜಾಟಗಳಲ್ಲಿ ಸಿಲುಕಿಕೊಂಡು ನಮ್ಮ ಮೂಲಸ್ವರೂಪವನ್ನೇ ಮರೆತ ನಾವು ಚಕ್ರವ್ಯೂಹದ ಅಭಿಮನ್ಯುವಿನ ರೀತಿ ಆಗಿಬಿಟ್ಟಿದ್ದೇವೆ. ಹುಟ್ಟು-ಸಾವು ಎಂಬ ಈ ಜೀವನ ಚಕ್ರದಿಂದ ಹೊರಬರಲು ಅದಕ್ಕಿರುವ ಮಾರ್ಗವೊಂದೇ ಅದು ಗುರುವನ್ನು ಮೊರೆಹೋಗುವುದು! ಅವರ ದರ್ಶನ, ಪಾದಸ್ಪರ್ಶನದಿಂದ ಮಾತ್ರ, ಅವರ ಕೃಪೆಯಿಂದ ಮಾತ್ರ ಶೀಘ್ರಗತಿಯಲ್ಲಿ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ. ನಮ್ಮಲ್ಲಿನ ಗಾದೆ ಹೀಗಿದೆ -’ಹರ ಮುನಿದರೂ ಗುರು ಕಾಯುತ್ತಾನೆ’ ಎಂದು. ಮನೆಯಲ್ಲಿ ಚಿಕ್ಕವರಿರುವಾಗ ಅಪ್ಪ ಮುನಿಸಿಕೊಂಡರೆ ಅಮ್ಮನ ಸೆರಗಿನ ಹಿಂದೋ ಕಾಲಹಿಂದೋ ನಿಂತು ಅಮ್ಮನ ಮುಖೇನ ಅಪ್ಪನ ಸಿಟ್ಟನ್ನು ಶಮನಗೊಳಿಸುತ್ತಿದ್ದೆವು. ಅದೇ ರೀತಿ ಹರನಿಗೇ ಅಂದರೆ ದೇವರಿಗೇ ಕೋಪಬಂದು ನಿನ್ನನ್ನು ತರಿದುಬಿಡುತ್ತೇನೆ ಎಂತ ಬಂದರೂ ರಾಮನಿಗೆ ಹನುಮ ತೋರಿದಂತೆ ಕೇವಲ ದೇವರ ನಾಮಬಲದಿಂದ ದೇವರನ್ನೇ ಮಂತ್ರಮುಗ್ಧಗೊಳಿಸಿ ತನ್ಮೂಲಕ ನಮ್ಮನ್ನು ಕಾಪಾಡುವ, ಸನ್ಮಾರ್ಗ ಬೋಧಿಸಿ ನಮ್ಮನ್ನು ಉದ್ಧರಿಸುವ ಸ್ಥಾನವೊಂದಿದ್ದರೆ ಅದು ’ಗುರು’ ಮಾತ್ರ. ಅಮ್ಮನ ಪ್ರೀತಿ, ಅಪ್ಪನ ವಾತ್ಸಲ್ಯ, ಸ್ನೇಹಿತನ ಹೆಗಲು, ಅಕ್ಕ-ತಂಗಿ-ಅಣ್ಣ-ತಮ್ಮ ಈ ಎಲ್ಲರ ಆಪ್ತತೆ ತೋರುವ ಸಕಲವೂ ಆಗಿ ಸಂಭಾಳಿಸುವ, ಸಂತೈಸುವ, ಆಲಿಸುವ, ಲಾಲಿಹಾಡುವ, ರಮಿಸುವ, ಎತ್ತಿ ಮುದ್ದಾಡುವ ಪರಾತ್ಪರ ಶಕ್ತಿಯಾದ ಇಂತಹ ಗುರುವನ್ನು ಸ್ಮರಿಸಲು ಬೇರೆ ಹಲವು ಲೌಕಿಕ ಕಾರಣಗಳು ಬೇಕಿಲ್ಲ. ಇಂತಹ ಗುರುರೂಪವನ್ನು ನೆನೆಯೋಣವೇ ?

ನೆನೆವೆ ಶ್ರೀಧರ ಸತತ ಗುರುವರ
ನಿನ್ನ ಅಡಿದಾವರೆಗಳ
ಮನವನಣಿಗೊಳಿಸುತ್ತ ಭವಹರ
ಕನವರಿಸುವೇ ಪದಗಳ

ದೇಗಲೂರಲಿ ಹುಟ್ಟಿಬೆಳೆಯುತ ದೇಗುಲವೆ ನೀನಾಗಿಹೆ
ಸಾಗಿ ದೂರದಿ ಉತ್ತರದಿ ನಿನ್ನ ಪಾದಪದ್ಮವನೂರಿದೆ
ಯಾಗಯಜ್ಞದ ತಿರುಳ ಅರುಹಿದೆ ಮಾರ್ದನಿಸಿ ಜನಕೂಗಿರೆ
ಸಾಗರದ ಪ್ರಾಂತದಲಿ ನೆಲೆಸಿದ ಯೋಗಿ ನಿನ್ನನು ಭಜಿಸುವೆ

ದತ್ತರೂಪನೆ ಕಮಲಾ ತನಯನೆ ವಿಮಲ ಕೋಮಲ ನೇತ್ರನೆ
ನೆತ್ತಿನೇವರಿಸುತ್ತ ಹರಸಿದೆ ಭಕ್ತಜನರನುರಾಗನೆ
ಒತ್ತಿ ಬೆರಳನು ಹರಿಸಿ ತೀರ್ಥವ ಕೊಟ್ಟೆ ನೀನೌಷಧವನು
ಎತ್ತುವೆನು ಮಂಗಳದ ಆರತಿ ಸೃಷ್ಟಿಗೊಡೆಯನೆ ನಮಿಪೆನು
----


ಬೀಜಸ್ಯಾಂತರಿವಾಂಕುರೋ ಜಗದಿದಂ ಪ್ರಾಙ್ ನಿರ್ವಿಕಲ್ಪಂ ಪುನಃ
ಮಾಯಾಕಲ್ಪಿತ-ದೇಶಕಾಲಕಲನಾ-ವೈಚಿತ್ರ್ಯ-ಚಿತ್ರೀಕೃತಂ|
ಮಾಯಾವೀವ ವಿಜೃಂಭಯತ್ಯಪಿ ಮಹಾಯೋಗೀವ ಯಃ ಸ್ವೇಚ್ಛಯಾ
ತಸ್ಮೈ ಶ್ರೀಗುರುಮೂರ್ತಯೇ ನಮ ಇದಂ ಶ್ರೀ ದಕ್ಷಿಣಾಮೂರ್ತಯೇ ||


ಸದಾಶಿವಸಮಾರಂಭಾಂ ಶಂಕರಾಚಾರ್ಯ ಮಧ್ಯಮಾಂ |
ಅಸ್ಮದಾಚಾರ್ಯಪರ್ಯಂತಾಂ ವಂದೇ ಗುರು ಪರಂಪರಾಮ್ ||

Friday, July 23, 2010

’ಮಳೆಗಾಲದ ಒಂದು ದಿನ’


’ಮಳೆಗಾಲದ ಒಂದು ದಿನ’

ಬಹಳ ಜನ ಸೇರಿದ್ದರೂ ಮೊದಮೊದಲು ಯಾಕೆಂಬುದು ತಿಳಿಯಲಿಲ್ಲ. ನಂತರ ನನ್ನನ್ನು ಅಜ್ಜಿ-ಅಮ್ಮ ಆಗಾಗ ತಮ್ಮ ತೊಡೆಯ ಮೇಲೆ ಮಲಗಿಸಿಕೊಂಡು " ಹುಷಾರಾಗುತ್ತದೆ ಹೆದರಬೇಡ" ಎನ್ನುವಾಗಲೇ ಏನೋ ಅನುಮಾನ ಶುರುವಾಗಿದ್ದು! ಅದನ್ನು ಅರ್ಥೈಸಿಕೊಳ್ಳಲು ಬಹಳ ಸಮಯ ಹಿಡಿಯಲಿಲ್ಲ. ಯಾಕೆಂದರೆ ಅದು ಮೊದಲು ಮನಸ್ಸಿಗೆ ಗೊತ್ತಾಗಿ ಮರೆತಿದ್ದ ವಿಷಯ ಅಷ್ಟೇ !

ಮಳೆಗಾಲ ನಮ್ಮ ಕರಾವಳಿಯಲ್ಲಿ ಬಹಳ ಜೋರು. ಒಮ್ಮೊಮ್ಮೆ ಧೋ ಎನ್ನಹತ್ತಿದರೆ ಬರೋಬರಿ ಮೂರು ನಾಲ್ಕುದಿನಗಳವರೆಗೆ ಬಿಡದೇ ಇರುವ ಮಳೆಯೂ ಇತ್ತು. ವಾರಗಳತನಕ ಸುರಿದೂ ಸುರಿದೂ ಸುರಿದೂ ಬೇಸರಹುಟ್ಟಿಸುವಷ್ಟು ಮಳೆ ಬರುತ್ತಿತ್ತು. ಅಂದಿನ ಆ ಬೇಸರದ ಮಳೆಯ ದಿನಗಳಲ್ಲಿ ಕಾಲಹಾಕಲೇಂದೇ ಯಕ್ಷಗಾನದ ತಾಳಮದ್ದಲೆಯ ರೂಪ ಬಂದಿದ್ದು! ಯಾರಾದರೂ ಒಳ್ಳೆಯ ಮಾತುಗಾರರು ಬಂದ ಸುದ್ದಿ ತಿಳಿದರೆ ಪ್ರಸಂಗ ಯಾವುದೇ ಇರಲಿ ನಾವು ಹೋಗಿ ಅಕ್ಕ ಪಕ್ಕದ ಮನೆಗಳಲ್ಲೋ ದೇವಸ್ಥಾನದಲ್ಲೋ ಅದೆಲ್ಲಿ ತಾಳಮದ್ದಲೆ ನಡೆಯುತ್ತಿತ್ತೋ ಅಲ್ಲಿಗೆ ಧೌಡಾಯಿಸಿ ಕುಳಿತುಕೊಳ್ಳುತ್ತಿದ್ದೆವು. ಆದರೆ ದಿನಂಪ್ರತಿ ಪ್ರಸಂಗ[ತಾಳಮದ್ದಲೆ]ಇರುತ್ತಿರಲಿಲ್ಲ. ಆಗೆಲ್ಲ ಕಥೆ ಹೇಳುವವರನ್ನು ಹುಡುಕುವುದು! ಯಾರು ಚೆನ್ನಾಗಿ ಕಥೆ ಹೇಳುತ್ತಾರೋ ಅವರನ್ನು ಹುಡುಕಿ ದುಂಬಾಲು ಬೀಳುವುದು. ಅಂತೂ ಬ್ಯಾಂಕಿನಿಂದ ಸಾಲಪಡೆದಷ್ಟು ಕಷ್ಟಪಟ್ಟಾದರೂ ಅವರಿಂದ ಕಥೆ ಕೇಳಲೇಬೇಕು! ಇದು ನಮ್ಮ ಸಂಕಲ್ಪ ಸಿದ್ಧಿ!

ಮಳೆಗಾಲದ ನಮ್ಮ ಶಾಲೆಗಳಲ್ಲಿ ದಾಖಲೆ ನಿರ್ಮಿತ ಒಂದು ಕಾಯಂ ಪ್ರಬಂಧವೆಂದರೆ ’ಮಳೆಗಾಲದ ಒಂದು ದಿನ’ ! ಮಕ್ಕಳೇ ನಾಳೆ ಎಲ್ಲರೂ ಪ್ರಬಂಧ ಬರೆದುಕೊಂಡು ಬನ್ನಿ ಎಂದುಬಿಟ್ಟರೆ ನಾವೆಲ್ಲ ಬರೆಯೋದಕ್ಕೆ ಅಷ್ಟಾಗಿ ಗಟ್ಟಿಗರಲ್ಲದ ಕಾಲ ಅದಾಗಿದ್ದರಿಂದ ಬೆಕ್ಕಿಗೆ ಬರೆಹಾಕಿದಂತಾಗುತ್ತಿತ್ತು. " ಹ್ಯಾಗಾದ್ರೂ ತಪ್ಪಿಸ್ಕೊಳ್ಬೇಕಲ್ಲೋ ಸದಾಶಿವ " ಅಂತ ನಮ್ನಮ್ಮೊಳಗೆ ನಾವು ಮಾತಾಡಿಕೊಳ್ಳುತ್ತಿದ್ದೆವು. ಯಾಕೆಂದರೆ ಪ್ರಬಂಧ ಚೆನ್ನಾಗಿರಲಿಲ್ಲವೆಂದರೆ ನಮ್ಮ ಸರ್ ನಮ್ಮನ್ನು ಇತರ ಹುಡುಗರ ಮುಂದೆ ಛೇಡಿಸುವುದಾಗಾಲೀ ಗೇಲಿಮಾಡುವುದಾಗಲೀ ನಮಗೆ ಸತ್ತಷ್ಟಾಗುತ್ತಿತ್ತು, ಮರ್ಯಾದೆವಂತರು ನೋಡಿ! ಅದಕ್ಕೇ ಸಹವಾಸವೇ ಬೇಡ ಅಂತ ಯಾವುದಾದರೂ ಕಾರಣ ಹುಡುಕಿ ರಜಾಗುಜರಾಯಿಸಿಬಿಟ್ಟರೆ ಆಮೇಲೆ ಸರು ಅವರೇ ಕರಿಹಲಗೆಯ ಮೇಲೆ ಬರೆಯಿಸಿಕೊಡುವುದನ್ನು ನಕಲುಮಾಡಿಕೊಂಡರೆ ಸರಿ ಎಂಬುದು ನಮ್ಮ ಅಂಬೋಣ.

ವಿಷಯಕೇಳಿ ! ಮಳೆಗಾಲದ ಒಂದು ದಿನ ಅಂತ ಈಗ ಬರೆಯಲು ಹೇಳಿದರೆ ಒಂದಲ್ಲ, ಮಳೆಗಾಲದ ಸಾವಿರದಿನ ಬೇಕಾದರೂ ಬರೆದು ಕೊಟ್ಟೇವು, ಆದರೆ ಅಂದಿಗೆ ನಮಗದು ಆಗುತ್ತಿರಲಿಲ್ಲ. ಏನು ಬರೆಯಬೇಕೆಂಬುದೇ ತಿಳಿಯುತ್ತಿರಲಿಲ್ಲ. ಅಸಲಿಗೆ ನಾವು ವಿದ್ಯಾವಂತರೇನೋ ಹೌದಾಗಿದ್ದೆವು, ಅಂದರೆ ಪತ್ರಿಕೆಗಳನ್ನು ತಲೆಕೆಳಗಾಗಿ ಹಿಡಿದರೆ ನಮಗೆ ದೂರದಿಂದಲೇ ಗೊತ್ತಾಗುತ್ತಿತ್ತಪ್ಪ ಇನ್ನೇನು ಬೇಕು ಹೇಳಿ ? ಹಾಗಂತ ಕಮ್ಮಿ ಎಂದುಕೊಳ್ಳಬೇಡಿ ನಮ್ಮ ಚಿಕ್ಕಪ್ಪ, ಅಜ್ಜ ಎಲ್ಲಾ ಹೇಳಿದ್ದರು ದಿನಾಲೂ ರೇಡಿಯೋ ವಾರ್ತೆಕೇಳಿ ಲೋಕದ ಎಲ್ಲಾವಿಷಯ ಗೊತ್ತಾಗುತ್ತದೆ ಅಂತ. ನಿಜಹೇಳಲಾ ವಾರ್ತೆ ಮುಗಿದ ತಕ್ಷಣ ಬರುವ ಸಿನಿಮಾ ಹಾಡುಗಳು ನಮ್ಮ ಮನಕದ್ದುಬಿಟ್ಟಿದ್ದವು! ನಮಗೆ ವಾರ್ತೆಗೀರ್ತೆ ಎಲ್ಲಾ ಬೇಕಾಗುತ್ತಿರಲಿಲ್ಲ, ಆದರೆ ಹಾಡು ಕೇಳುವ ಚಟದಿಂದ ರೇಡಿಯೋ ಹತ್ತಿರವೇ ಸುಳುಕಾಡುವುದು ಜಾಸ್ತಿ ಇತ್ತು. ದೊಡ್ಡವರು ಬಂದರೆ ವಾರ್ತೆಕೇಳುವುದನ್ನು ತೋರಿಸುವುದು ಜೋರು! ಇಲ್ಲೂ ಅಷ್ಟೇ-ಅವರು ಬೈಯ್ದರೆ ತಡಕೊಳ್ಳುವ ತಾಕತ್ತು ನಮಗಿರಲಿಲ್ಲ,ಮರ್ಯಾದೆ ಪ್ರಶ್ನೆ ನೋಡಿ-ಅದಕ್ಕೇ ಅವರು ಹೇಳಿದ ಹಾಗೇ ವಾರ್ತೆ ಕೇಳಿದ ಹಾಗೇ ಕೇಳಿ ನಂತರ ಹಾಡು ಶುರುವಾದಾಗ ಸಣ್ಣಗೆ ಎಲೆ ಅಡಿಕೆ ಜೊತೆಗಿರುವ ಸುಣ್ಣದ ಅಂಡೆಯ ಥರದ ಅದೇನನ್ನೋ ತಿರುಗಿಸಿ ಸ್ವಲ್ಪ ಶಬ್ಢ ಜೋರಾಗಿ ಬರುವಂತೆ ಇಟ್ಟುಕೊಳ್ಳುತ್ತಿದ್ದೆವು. ಯಾರಾದರೂ ದೊಡ್ಡವರು ದೊಡ್ಡಬಾಯಿಮಾಡಿದರೆ [ಎನೋ ಕೂಗಿಕರೆದರೆ] ನಮಗೆ ಅನಿರೀಕ್ಷಿತವಾಗಿ ದೊಡ್ಡ ರೋಡ್ ಹಂಪ್ ಸಿಕ್ಕಿದ ಅನುಭವ ! ಹಾಡಿನ ಶಬ್ಢ ಸಣ್ಣಗಾಗಿಬಿಡುತ್ತಿತ್ತು !

ಸುಮ್ಮನೇ ಹೇಳುವುದಕ್ಕಲ್ಲ ದಿ|ಹೈಗುಂದ ಡಾಕ್ಟರು ಎಂದರೆ ನಮ್ಮಲ್ಲಿ ಆಗ ಜನಜನಿತ. ಜನರ ನಡುವೆ ತನ್ನನ್ನು ತೊಡಗಿಸಿಕೊಂಡ, ತೀರಾ ಬದುಕುವುದಕ್ಕೆ ಬೇಕಾಗುವಷ್ಟು ಮಾತ್ರ ಶುಲ್ಕ ಪಡೆದು ತುಲನಾತ್ಮಕ ನಾಡಿ ಪರೀಕ್ಷೆಯೇ ಮೊದಲಾದ ಕೆಲವು ಕ್ರಮಗಳಿಂದ ರೋಗಿಗಳ ರೋಗವಾಸಿಮಾಡುವ ಸೇವಾಭಾವನೆಯ ಆಯುರ್ವೈದ್ಯ ಅವರಾಗಿದ್ದರೂ ಪ್ರಸಂಗದ ಅರ್ಥ ಹೇಗೆ ಹೇಳುತ್ತಿದ್ದರು ಬಲ್ಲಿರೋ ಕೂತವ ಕೂತೇ ಇರಬೇಕು-ಬಾಯಿ ತೆರೆದುಕೊಂಡು! ಅವರ ಜೊತೆ ಎದುರಿಗೆ ಅಪರೂಪಕ್ಕೆ ಕೆರೆಮನೆ ದಿ|ಮಹಾಬಲ ಹೆಗಡೆಯವರು ಬಂದುಬಿಟ್ಟರೆ ಮುಗಿಯಿತು- ಅಲ್ಲಿ ಬೆಳಗಾಗುವವರೆಗೂ ಹಬ್ಬವೇ! ಕೇಳುವ ಕಿವಿಗೆ ರಸದೌತಣ. ಮಹಾಬಲರು ತಮ್ಮ ತೋಟ ಗದ್ದೆಗಳಲ್ಲೂ ತಿರುಗಾಡುತ್ತ " ನೋಡಿದೆಯಾ ವಿದುರ ಕೌರವನೊಡ್ಡೋಲಗವ......." ಎಂದು ಅಲ್ಲಿ ಹುಟ್ಟಿ ಬೆಳೆದ ಕಳೆಯ ಸಸಿಗಳೆಡೆಗೆ ಅಡ್ಡಡ್ಡ ಕೈತೋರಿಸುತ್ತ ನಡೆಯುತ್ತಿದ್ದರಂತೆ!ಇನ್ನೂ ವಿಶೇಷ ಎಂದರೆ ಬಾಂಬೆಗೋ ಎಲ್ಲಿಗೋ ಹೋಗಿ ಮರಳಿಬಂದವರು ಅಲ್ಲೆಲ್ಲೋ ಊರಕಡೆಯಲ್ಲಿ ಎಳೆನೀರನ್ನು ಕುಡಿದು ನೂರು ರುಪಾಯಿ ನೋಟು ಕೊಟ್ಟು [ಅಂದಿನ ಕಾಲಕ್ಕೆ ನೂರು] ಚಿಲ್ಲರೆ ಪಡೆಯದೇ ಯಕ್ಷಗಾನದ ಹಾಡು ಹೇಳಿಕೊಳ್ಳುತ್ತಾ ಹಾಗೇ ಹೋಗಿದ್ದರಂತೆ! ಅಂದರೆ ಯಕ್ಷಗಾನವನ್ನೇ ತನ್ನ ಉಸಿರಾಗಿ ಅನುಭವಿಸಿದ ಮಹಾನ್ ಕಲಾವಿದರಲ್ಲಿ ಮಹಾಬಲರೂ ಒಬ್ಬರು. ಇಂತಹ ಘಟಾನುಘಟಿಗಳು ಪ್ರಸಂಗ ನಡೆಸಿಕೊಡುವದಿನ ನಾವೆಲ್ಲಾ ಅಲ್ಲಿ ಹಾಜರು! ಮಾರನೇ ದಿನ ಶಾಲೆಯಲ್ಲಿ ಕಣ್ಣಲ್ಲಿ ಆಗಾಗ ಆಗಾಗ ಹಲವು ಕಲಾವಿದರು ಪ್ರಸಂಗದ ಅರ್ಥಹೇಳುವಂತೇ ಭಾಸ!

ಎಲ್ಲೋ ಒಮ್ಮೊಮ್ಮೆ ಗುರು ಮಾಸ್ತರು ಕ್ಲಾಸು ತೆಗೆದುಕೊಂಡರೆ ’ಮಳೆಗಾಲದ ಒಂದುದಿನ’ ಬರೆಯಬೇಕಾಗಿಯೇ ಬರುತ್ತಿತ್ತು. ಈ ಪ್ರಬಂಧ ಇದೆಯಲ್ಲ ಇದನ್ನು ಬರೆಸದ ಶಾಲೆಗಳು ಹಾಗೂ ತರಗತಿಗಳು ಇಲ್ಲವೆಂದರೆ ತಪ್ಪಿಲ್ಲವೇನೋ! ಏನೇನೋ ಸರ್ಕಸ್ಸು ಮಾಡಿ ಅದನ್ನು ಬರೆಯಹೊರಟರೆ ಮತ್ತದೇ ಪ್ರಶ್ನೆ- ಏನಂತ ಬರೆಯಬೇಕು. ಪ್ರಬಂಧದ ಗಂಧ-ಗಾಳಿಯೂ ಇರದ ಜನ ನಾವು, ಅಷ್ಟಿದ್ದೂ ಪ್ರಬಂಧ ಬರೆಯುತ್ತೇವೆಂದು ಹೊರಟರೆ ಸ್ಥಿತಿಗತಿ ಏನಾಗಬೇಡ! ಅವರಿವರ ಹತ್ತಿರ ಕೇಳುವುದು. ಅದೂ ಇದೂ ಸೇರಿಸಿ ಕೊನೆಗೊಮ್ಮೆ ಅದನ್ನು ಪ್ರಬಂಧ ಅಂತ ಕರೆದುಬಿಡುವುದು ನಮ್ಮ ವಿಶ್ವಪ್ರಯತ್ನ! [ಭಗೀರಥ ಪ್ರಯತ್ನಕ್ಕಿಂತ ದೊಡ್ಡದು ಎಂದು ತಿಳಿದುಕೊಳ್ಳಿ]

ಹೀಗೇ ಒಂದು ಮಳೆಗಾಲ. ಹಲಸಿನ ಹಪ್ಪಳ ತಿನ್ನುವ ಕಾಲ! ಹೊರಗೆ ಹನಿಹನಿ ಸೋನೆ ಮಳೆಯಿತ್ತು. ನಾನು ಮತ್ತು ಅಜ್ಜಿ ಅಡಿಗೆಮನೆಯಲ್ಲಿ ಹಲಸಿನ ಹಪ್ಪಳವನ್ನು ತಿನ್ನುವ ಪೂರ್ವ ತಯಾರಿಯಲ್ಲಿ ತೊಡಗಿದ್ದೆವು. ನಾನು ನೋಡುವುದು-ಅಜ್ಜಿ ತಯಾರುಮಾಡುವುದು. ಎರಡು ಹಲಸಿನ ಹಪ್ಪಳ ನಿಗಿನಿಗಿ ಇಂಗಾಳದ[ಕೆಂಡದ] ಒಲೆಯಲ್ಲಿಟ್ಟು ಸುಟ್ಟು ಅವುಗಳ ಎರಡೂ ಮೈಗೆ ಕೊಬ್ಬರಿ ಎಣ್ಣೆ ಸವರಿ ಮೇಲೆ ಕಾಯಿತುರಿ ಇಟ್ಟು ಅಜ್ಜಿ ನನ್ನ ಹತ್ತಿರ ಅದನ್ನು ಕೊಟ್ಟು ಮಹಡಿಯಲ್ಲಿ ಕುಳಿತು ಓದುತ್ತಿದ್ದ ನನ್ನ ಚಿಕ್ಕಪ್ಪನಿಗೆ ಕೊಟ್ಟುಬರಲು ತಾಕೀತು ಮಾಡಿದಳು. ಭಕ್ತಿಯಿಂದ ಅದನ್ನು ಶಿರಸಾವಹಿಸಿ ನಡೆಸಲು ಸುಕುಮಾರನಾದ ನಾನು ಮನೆಯ ಒಳಗಡೆಯ ಮರದ ಏಣಿಯನ್ನು ಹತ್ತಿ ಹೋಗಿ ಅದನ್ನು ಚಿಕ್ಕಪ್ಪನಿಗೆ ಕೊಟ್ಟು ನನ್ನ ಪಾಲಿನ ಹಪ್ಪಳದ ವಸೂಲಿಗೆ ವಾಪಸ್ಸು ಬರುತ್ತಿದ್ದೆ. ಅಲ್ಲೇ ನೋಡಿ ಎಡವಟ್ಟಾಗಿದ್ದು- ಏಣಿಯು ಹೊರ ಕಿಟಕಿಗೆ ಹತ್ತಿರವಿದ್ದುದರಿಂದ ಮಳೆಯ ನೀರಿನ ಸಣ್ಣ ಹನಿಗಳು ಗಾಳಿಗೆ ಕಿಟಕಿ ಮೂಲಕ ಹಾರಿ ಏಣಿಯ ಮೆಟ್ಟಿಲ ಮೇಲೆ ಬಿದ್ದಿದ್ದವು. ಇದನ್ನು ತಿಳಿಯದೇ ಇಳಿಯುತ್ತಿದ್ದ ನಾನು ಏಣಿಯ ತುದಿಯಿಂದ ಕೆಳತನಕ ಎಷ್ಟು ಮೆಟ್ಟಿಲು ಇದೆಯೆಂಬುದನ್ನು ಒಂದೇ ಸಲಕ್ಕೆ ಲೆಕ್ಕಹಾಕಿಬಿಟ್ಟಿದ್ದೆ! ಹಾಗೆ ಬಿದ್ದ ಪರಿಣಾಮ [ಬಿದ್ದ ಎನ್ನಬೇಡಿ-ಮರ್ಯಾದೆ ಪ್ರಶ್ನೆ ಮಾರಾಯರೆ] ಹಣೆಯ ಮೂಲೆಗೆ ಏನೋ ಬಡಿದು ಆಳವಾದ ಗಾಯದ ಜೊತೆಗೆ ನನಗೆ ಪ್ರಜ್ಞೆ ಇರಲಿಲ್ಲ. ಅಷ್ಟು ಮಾತ್ರ ತಿಳಿದಿತ್ತೇ ವಿನಃ ನಂತರದ್ದು ನನಗೆ ಏನೂ ಗೊತ್ತಿರಲಿಲ್ಲ.

ತಿಳಿದಿದ್ದು ಇಷ್ಟು- ನಾನು ಬಿದ್ದಮೇಲೆ ರಕ್ತ ಸುಮಾರು ಹೋಯಿತು. ನಂತರ ಕಂಗಾಲಾದ ಮನೆಯ ಹಿರಿಯರು ಅದು ಹೇಗೋ ಗಾಡಿ ಹಿಡಿದು ಹತ್ತು ಕಿಲೋಮೀಟರ್ ದೂರಕ್ರಮಿಸಿ ಅಡಿಗ ವೈದ್ಯರನ್ನು ಕರೆತಂದರು. ಅಡಿಗ ವೈದ್ಯರು ಬಂದವರೇ ಅದೇನೇನೋ ಚಿಕಿತ್ಸೆ ಮಾಡಿ ಹಣೆಯ ಗಾಯಕ್ಕೆ ಬ್ಯಾಂಡೇಜು ಕಟ್ಟಿ, ನನಗೆ ನೋವು ತಿಳಿಯದಂತೆ ಏನೇನೋ ಮಾಡಿದ್ದರು. ಇದನ್ನೆಲ್ಲ ಕಂಡು ಹೌಹಾರಿ ಹೆದರಿಬಿದ್ದ ನನ್ನ ಅಜ್ಜಿ-ಆಮ್ಮ ಎಲ್ಲಾ ಸೇರಿ ಮಳೆಗೆ ಹಿಡಿಶಾಪ ಹಾಕಿದರಿರಬೇಕು! ಅಂತೂ ನನಗಾದ ಸ್ಥಿತಿ ನೋಡಿ ಅವರು ನನಗೆ ಇನ್ನೇನಾಗುತ್ತದೋ ಎಂಬ ಒಳ ಮನಸ್ಸಿನ ಹೆದರಿಕೆಯಿಂದ " ಹೆದರಬೇಡ ಹೆದರಬೇಡ " ಎನ್ನುತ್ತ ತಲೆನೇವರಿಸುತ್ತಿದ್ದರು. ಅಂತೂ ಕೊನೆಗೊಮ್ಮೆ ನಿರುಂಬಳವಾಗಿ ಎಲ್ಲರೂ ನಿಟ್ಟುಸಿರು ಬಿಟ್ಟಿದ್ದರು! ಆಮೇಲೆ ಸರಿಸುಮಾರು ತಿಂಗಳಕಾಲ ನನ್ನ ಬ್ಯಾಂಡೇಜು ಬಿಡಿಸಿರಲಿಲ್ಲ. ಕೊನೆಕೊನೆಗೆ ಅದಕ್ಕೆ ಮೇಲಿಂದ ಕೊಬ್ಬರಿ ಎಣ್ಣೆ ಬಿಡುತ್ತ ಅದು ತಂತಾನೇ ಜಾರುವಂತೆ ಮಾಡಿದರು. ತಿಂಗಳ ಮೇಲೆ ಅದ್ಯಾವುದೋ ಒಂದು ರಾತ್ರಿ ಮಲಗಿರುವಾಗ ಹಾಸಿಗೆಯಲ್ಲೇ ಅದು ತನ್ನಿಂದ ತಾನೇ ಬಿದ್ದುಹೋಯಿತು. ಮಳೆಗಾಲವನ್ನು ವಿನಾಕಾರಣ ಬೈದರೇ ಹೊರತು ಅದರದ್ದೇನು ತಪ್ಪು!

ಅದಾದಮೇಲೆ ಮಳೆಗಾಲದ ಹಲವು ದಿನಗಳು ಬಂದುಹೋದವು. ಆದರೆ ಬರೆಯಬೇಕಾದ ಆ ಪ್ರಬಂಧಮಾತ್ರ ಹಾಗೆಯೇ ಕುಳಿತಿರುತ್ತಿತ್ತು. ಮಳೆ ಜೋರಾದಾಗ ಮರದಮೇಲೆ ನೆನೆಯುತ್ತ ಕೂರುವ ಮಂಗಗಳು " ಸಾಯ್ಲಿ ಹಾಳಾದ್ ಮಳೆಗಾಲ, ನಾಳೆ ಬೆಳಗಾಗಲಿ ನಾವೆಲ್ಲ ಸೇರಿ ಮನೆ ಕಟ್ಟಿಯೇ ಬಿಡೋಣ " ಎಂದುಕೊಳ್ಳುತ್ತವಂತೆ. ಬೆಳಗಾದಾಗ ಆಹಾರ ಹುಡುಕುವ ಗಡಿಬಿಡಿಯಲ್ಲಿ ರೊಯ್ಯ ರೊಯ್ಯನೆ ಮರದಿಂದ ಜಿಗಿಜಿಗಿದು ಹಾರೋಡಿ ಪರಾರಿ, ಮತ್ತೆ ಮರುರಾತ್ರಿ ಮಳೆಬಂದಾಗ ಅದೇ ಮನೆಕಟ್ಟುವ ಮೀಟಿಂಗು! ಇದರ ಪುನರಾವರ್ತನೆ ಮಳೆಗಾಲ ಮುಗಿಯುವವರೆಗೂ. ಒಂದರ್ಥದಲ್ಲಿ ಮಾಡಬೇಕು ಮಾಡಬೇಕು ಎನ್ನುತ್ತ ಹಾಗೇ ಮುಂದೂಡುವ ಕೆಲಸಗಳಿಗೆ ನಮ್ಮಲ್ಲಿ ಇಂದಿಗೂ ಬಳಸುವ ಗಾದೆ ’ಮಂಗ ಮನೆಕಟ್ಟಿದ ಹಾಗೇ ’ ಅಂತ. ಇಲ್ಲಿ ’ಮಳೆಗಾಲದ ಒಂದುದಿನ’ ಕೂಡ ಮಂಗ ಮನೆಕಟ್ಟಿದ ಹಾಗೇ ಅಲ್ಲವೇ ?

Thursday, July 22, 2010

ಋಣಿ

ಚಿತ್ರ ಋಣ :ಅಂತರ್ಜಾಲ

ಋಣಿ

ಋಣಿಯಾಗು ಜಗದಲ್ಲಿ ತಂದೆತಾಯಿಗಳಿಂಗೆ
ಅಣಿಗೊಳಿಸು ನಿನ್ನ ಮನ ನೆನೆಸೆ ಧೇನುವನು
ಕಣಕಣದ ತುಂಬೆಲ್ಲ ದೈವತ್ವವಂ ಹೊತ್ತ
ಗಣಿಯು ಸಾತ್ವಿಕ ರೂಪ | ಜಗದಮಿತ್ರ

ಊರೊಳಗೆ ದೊಡ್ಡಜನ ನೀನಹುದು ದುಡ್ಡಿರಲು
ವೀರನೆಂಬರು ನಿನಗೆ ನೀ ಗೆದ್ದುಬರಲು
ಆರೇಳುದಿನ ಕಾಲ ಬಡತನವ ನಟಿಸೊಮ್ಮೆ
ಕೇರುತ್ತ ಜನರೆಣಿಸು | ಜಗದಮಿತ್ರ

ಮರೆಯದಿರು ಶಿಕ್ಷಕರ ತೊರೆಯದಿರು ಮನೆಜನರ
ಕುರಿತೋದು ಮಹಾನುಭಾವ ಜೀವಿಗಳ
ಅರೆಕಾಸಿನಾಸೆಯಲಿ ಮಾರದಿರು ನಿನ್ನತನ
ಬರೆದು ತೋರಿಸು ಜಗಕೆ | ಜಗದಮಿತ್ರ

ನೆನೆಯೊ ನೆರೆಹೊರೆಯನ್ನ ನೆನೆಯೊ ಗುರುಹಿರಿಯರನ
ಮನಮುಟ್ಟಿ ಭಜಿಸು ನೀ ನಿತ್ಯ ದೈವವನ
ವನರಾಶಿ ಈ ಭೂಮಿ ವಾಯು ನದಿಗಳ ನೆನೆಯೊ
ಕನಸಲ್ಲು ಕೆಡಿಸದಿರು | ಜಗದಮಿತ್ರ

ವಿನಯ ವಿದ್ಯೆಗೆ ಬೇಕು ಮನೆಗೆ ಛಾವಣಿಬೇಕು
ಘನಕಾರ್ಯಮಾಡುವಗೆ ಮೊದಲು ಮನಬೇಕು
ಜನತಂತ್ರ ತುಳಿದಿರಲು ಅಡ್ಡದಾರಿಯ ಭರದಿ
ತನುಕೊಡವಿ ಸಡ್ಡುಹೊಡೆ | ಜಗದಮಿತ್ರ

ನೆನೆ ನಿನ್ನ ದೇಶವನು ನೆನೆ ನಿನ್ನ ರಾಜ್ಯವನು
ನೆನೆಯೊಮ್ಮೆ ಈ ಜನ್ಮದುಪಕರಿಪ ಜನರ
ಮನವ ಒಂದಾವರ್ತಿ ಹಿಡಿದು ಜಾಗ್ರತಗೊಳಿಸಿ
ಮುನಿಜನರ ನೆನೆಯೊ ನೀ | ಜಗದಮಿತ್ರ

Tuesday, July 20, 2010

ತಿಂಗಳ ಕನಸು

ರಾಜಾರವಿವರ್ಮ ರಚಿತ ಚಿತ್ರಕೃಪೆ-ಅಂತರ್ಜಾಲ

ತಿಂಗಳ ಕನಸು

ತಿಂಗಳ ರಾತ್ರಿಯಲಿ ತಂಗಾಳಿ ಸುಯ್ದಿರಲು
ಅಂಗಳಕಿಳಿವ ಆಸೆ
ಮಂಗಳನೋಡೋಡಿ ಓಡೋಡಿ ಕಂಡಿರಲು
ಕಂಗಳ ತುಂಬಿಹುದು ಕನಸುಗಳ ಪರಿಷೆ!

ಅಲ್ಲಿ ನೀರವದ ಪರಿಸರದಿ ಮಾಮರದಿ ಗೂಡಿನಲಿ
ಚಿಲಿಪಿಲಿ ಸವಿಯುಲಿಯ ಕೊಸರುವಿಕೆ
ಎಲ್ಲಾ ಮಲಗಿರಲು ಹಾಯಾಗಿ ಅನುಭವಿಸೆ ಸುಖನಿದ್ದೆ
ನಲ್ಲೆ ನೆನಪಾಗಿ ಉಲಿದುಲಿದು ಗುನುಗುವಿಕೆ

ಹಾಡು ಹಾಡುತ್ತ ನಡೆಯುತ್ತಾ ನಗುತಿರುವ ಚಂದಿರನ
ಜಾಡಿ ನೀರಿನಲಿ ಬಂಧಿಸುವ ಬಯಕೆ
ಆಡಿ ಮುದ್ದಾಡಿ ಮನಸಾರೆ ನೇವರಿಸೆ ಮುಂಗುರುಳ
ಬೀಡು ಬಿಟ್ಟಿಹುದು ಮನವದು ಮೇಯೋಕೆ!

ರವಿಯು ನಿರ್ಗಮಿಸಿ ಜಾವದಲಿ ಶಶಿಯುದಿಸಿ ನಸುನಗುತ
ಭುವಿಯ ಮೈಗೆಲ್ಲ ಹಾಲಿನ ಅಭಿಷೇಚನ
ಕವಿದ ಕತ್ತಲೆಯ ಮೋಡಗಳ ನಡುನಡುವೆ ಅಡಗುತ್ತ
ಸವಿವ ಕಣ್ಣಿಗೆ ಬೆಳ್ಳಿಯ ನೀರಾಜನ!

ಉದ್ದಜಡೆಯವಳೆ ಸಂಪಿಗೆನಾಸಿಕ ಮುದ್ದು ಮೊಗದವಳೆ
ಖುದ್ದು ನೀನೊಮ್ಮೆ ಇಲ್ಲಿಗೆ ಬರಬಾರದೇ ?
ಸದ್ದುಮಾಡದೆ ಹಿತ್ತಲ ಬಾಗಿಲನು ತೆರೆಯುತ್ತ ತಾಬರದೇ
ನಿದ್ದೆ ಕದ್ದವಳೆ ಇರುವೆಯ ದಯೆತೋರದೇ ?

Monday, July 19, 2010

ಕಾಮನ್ ಸೆನ್ಸ್ -ದಿ ಸೆನ್ಸ್ ವ್ಹಿಚ್ ಈಸ್ ನಾಟ್ ಸೋ ಕಾಮನ್ ಆಂಡ್ ಏಜಿಂಗ್

ಚಿತ್ರ ಕೃಪೆ -ಅಂತರ್ಜಾಲ

ಕಾಮನ್ ಸೆನ್ಸ್ -ದಿ ಸೆನ್ಸ್ ವ್ಹಿಚ್ ಈಸ್ ನಾಟ್ ಸೋ
ಕಾಮನ್


ಆಂಡ್

ಏಜಿಂಗ್

ಇದರ ಬಗ್ಗೆ ನಮ್ಮ ಹೊಸ ಪೀಳಿಗೆಯವರು ಲಕ್ಷ್ಯವಿಟ್ಟರೆ ಅವರ ಅರ್ಧ ಕರ್ತವ್ಯ ನೆರವೇರಿದ ಹಾಗೇ ಎಂದರೆ ತಪ್ಪಲ್ಲ ಅಲ್ಲವೇ ? ಯಾಕೆಂದರೆ ಯಾವುದು ಜೀವನದಲ್ಲಿ ಅತೀ ಮುಖ್ಯವೋ ಅದನ್ನೇ ಅರಿತಿರದ ಹೊಸ ಪೀಳಿಗೆ ತಯಾರಾಗುತ್ತಿದೆ! ಎಪ್ಟಿಟ್ಯೂಡ್ ಟೆಸ್ಟ್ ಇದೆ ಅಂತ ಆಗಾಗ ಪುಸ್ತಕದ ಬದನೇಕಾಯಿ ಬಳಸುವ ಯುವ ಪೀಳಿಗೆಗೆ ನಿಜ ಅರ್ಥದಲ್ಲಿ ಅದು ಟೆಸ್ಟ್ ಬರೆಯಲು ಬೇಕಾಗಿ ಓದಿಕೊಳ್ಳುವ ಸಾಮಗ್ರಿಯಾಗಿದೆಯೇ ಹೊರತು ಜೀವನಕ್ರಮದಲ್ಲಿ ಅದರ ಅಳವಡಿಕೆ ಇಲ್ಲ. ನಾವೆಲ್ಲಾ ಆಗಾಗ ಅನ್ನುತ್ತಿರುತ್ತೇವೆ-ಜನರೇಶನ್ ಗ್ಯಾಪ್ ಜನರೇಶನ್ ಗ್ಯಾಪ್ ಅಂತ. ಆದರೆ ಕೆಲವು ಜನರಿಗೆ ತಲೆಮಾರುಗಳ ಮಧ್ಯೆ ಯಾವುದೇ ಬದಲಾವಣೆಯ ಅನಿಸಿಕೆ ಇರದ ಬಳಕೆ ಸಾಧ್ಯ. ಕೆಲವರು ಮುದುಕರಾದರೂ ಎಳಬರ ಜೊತೆ ಸ್ನೇಹಿತರ ರೀತಿ ಹೊಂದಿಕೊಳ್ಳುತ್ತಾರೆ. ಕೆಲವರು ಚಿಕ್ಕವರಿದ್ದರೂ ಅವರಿಗೆ ತಾವು ವಯಸ್ಸಾಗಿ ಅನುಭವ ಪಕ್ವವಾದವರಂತೇ ಕಾಣಿಸಿಕೊಳ್ಳಬೇಕೆಂಬ ಅಪೇಕ್ಷೆ. ಅದಿರಲಿ ನಾವೀಗ ಸದ್ಯಕ್ಕೆ ಮರಳಿ ವಿಷಯಕ್ಕೆ ಬರೋಣ-

ಕಾಮನ್ ಸೆನ್ಸ್ ಅಂದರೇನು? ಬದುಕಿನಲ್ಲಿ ನಾಗರಿಕನೋರ್ವ ತನ್ನ ಇರವಿನಿಂದ ಇನ್ನೊಬ್ಬರಿಗೆ ಅನಾನುಕೂಲವೋ ಅಪಚಾರವೋ ಆಗದಂತೆ ನೋಡಿಕೊಳ್ಳುವುದರ ಜೊತೆಗೆ ತಾನು ಮಾಡಬೇಕಾದ ಕೆಲವು ಸಮಾಜಮುಖಿ ಕೆಲಸಗಳನ್ನು ಸಾಮಾನ್ಯ ತಿಳುವಳಿಕೆ ಅಥವಾ ಕಾಮನ್ ಸೆನ್ಸ್ ಎನ್ನುತ್ತಾರೆಯಷ್ಟೇ? ಸೆನ್ಸ್ ಅನ್ನುವ ಶಬ್ಧಕ್ಕೆ ಸ್ಪಂದಿಸು ಎನ್ನುವ ಅರ್ಥವೂ ಸಿಗುತ್ತದೆ. ಸ್ಪಂದನೆಯೇ ಇಲ್ಲದ ಹಲವು ವ್ಯಕ್ತಿಗಳು ಸಿಗುತ್ತಾರೆ, ಅದಲ್ಲದೇ ಇತ್ತೀಚೆಗೆ ನಮ್ಮ ಕನ್ನಡದ ಭಾಷಾಶೈಲಿಯಲ್ಲಿ ’ಜಾಣ ಕುರುಡು’, ’ಜಾಣ ಕಿವುಡು’ ಇತ್ಯಾದಿ ಶಬ್ಢಗಳು ಸೇರಿಕೊಂಡಿವೆ. ಕಂಡೂ ಕಾಣದಂತಿರುವುದಕ್ಕೆ ಜಾಣ ಕುರುಡು ಎಂದರೆ ಕೇಳಿಸಿದರೂ ಕೆಳಿಸದಿರುವುದಕ್ಕೆ ಜಾಣ ಕಿವುಡು ಎನ್ನುತ್ತಾರೆ. ಹಿಂದೆಲ್ಲ ಜೀವನದಲ್ಲಿ ಜಾಣ ಕುರುಡು ಮತ್ತು ಜಾಣ ಕಿವುಡು ಸ್ವಭಾವ ಜಾರಿಯಲ್ಲಿರಲಿಲ್ಲ. ಅಲ್ಲಿ ಏನಿದ್ದರೂ ಆಡಿದ ಮಾತೆಲ್ಲ ಸತ್ಯವೇ ಆಗಿರುತ್ತಿತ್ತು.ಇದೆಲ್ಲ ಇಂದಿನ ನಮ್ಮ ಅಗತ್ಯಕ್ಕೆ, ಅನುಕೂಲಕ್ಕೆ ತಕ್ಕಂತೆ ನಾವು ಸೃಜಿಸಿಕೊಂಡ ಶಬ್ಧಗಳು.

ರಸ್ತೆಯಲ್ಲಿ ನಡೆದು ಹೋಗುತ್ತಿರುತ್ತೇವೆ ಎಂದಿಟ್ಟುಕೊಳ್ಳೋಣ, ನಮ್ಮ ಬೆಂಗಳೂರಿನಂತಹ ಶಹರದಲ್ಲಿ ರಸ್ತೆಯಲ್ಲಿ ನಡೆಯ ಹೊರಟರೆ ಬಟ್ಟೆ ಬದಲಾಯಿಸಿ ಸ್ನಾನಮಾಡಬೇಕಾದುದು ನಮ್ಮಂಥವರಿಗೆ ಅನಿವಾರ್ಯ, ಕಾರಣ ಇಷ್ಟೇ -ಸಿಂಗಾಪೂರ್ ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಕರೆದ ಬೆಂಗಳೂರಲ್ಲಿ ನಡೆದಾಡುವ ಬಹುತೇಕ ಯುವ ಪೀಳಿಗೆ ಕಂಡ ಕಂಡಲ್ಲಿ ಪಿಚಕ್ ಪಿಚಕ್ ಎಂದು ಉಗುಳಿಕೊಂಡೇ ಓಡಾಡುತ್ತಾರೆ. ತಿಳಿಯ ಹೇಳಿದರೆ ದುರುಗುಟ್ಟಿ ನೋಡಿ ಹೊಡೆಯೋಕೆ ಬರುವ ಸಂಪ್ರದಾಯ ಅವರದ್ದು! "ಇದೇನ್ ನಿಮ್ಮಪ್ಪನ್ ಮನೆ ಜಾಗಾನಾ?" ಎನ್ನುವ ಮಾತಿನಿಂದ ಜಗಳಕ್ಕೆ ಆರಂಭ. ಇದೇ ರೀತಿ ರಸ್ತೆಯಲ್ಲಿ ಅಥವಾ ಕಂಡಲ್ಲಿ ಬೀಡಿ-ಸಿಗರೇಟು ಸೇದುವುದು, ಸೇದಿದ ನಂತರ ಅದರ ಕೊನೆಯ ಆ ಮೋಟನ್ನು ಬೆಂಕಿ ಸಹಿತ ಅಲ್ಲಲ್ಲೇ ಬಿಸಾಡುವುದು,ಕಂಡ ಕಂಡ ಗೋಡೆಯ ಮೇಲೆ, ವಿದ್ಯುತ್ ಕಂಬಗಳಮೇಲೆ, ರಸ್ತೆಗಳ ನಾಮಫಲಕಗಳ ಮೇಲೆ ಬೇಕಾಬಿಟ್ಟಿ ಭಿತ್ತಿಪತ್ರಗಳನ್ನು ಅಂಟಿಸುವುದು, ಬಾಳೇಹಣ್ಣಿನ ಸಿಪ್ಪೆಯನ್ನು ಗೊತ್ತಿದ್ದೂ ರಸ್ತೆಗೆ ಹಾಕಿ ಯಾಓ ಜಾರಿದಾಗ ಮಜಾತೆಗೆದುಕೊಳ್ಳುವುದು, ಹಲ್ಲಲ್ಲಿ ಕತ್ತರಿಸಿ ಬಾಯಿಗೆ ಗುಟ್ಕಾ ಸುರುವಿಕೊಂಡು ಕಾಲಿ ಗುಟ್ಕಾ ಪ್ಯಾಕೆಟ್ ಅನ್ನು ರಸ್ತೆಗೆ ಎಸೆಯುವುದು, ಕಾಲಿಯಾಗಿರುವ ನೀರಿನ/ಕೋಲಾ ಬಾಟಲಿಗಳನ್ನು ಸುಮ್ಮನೇ ಕೈಯ್ಯಲ್ಲಿ ಯಾಕೆ ಅಂತ ಅಲ್ಲಲ್ಲೇ ಬಿಸಾಡುವುದು, ಎಲ್ಲೆಂದರಲ್ಲಿ ನಾಯಿಗಳ ರೀತಿ ಮೂತ್ರ ವಿಸರ್ಜಿಸುವುದು ಇವೆಲ್ಲಾ ಕಣ್ಣಿಗೆ ದಿನವೂ ಢಾಳಾಗಿ ಎದ್ದು ಕಾಣುವ ನಮ್ಮ ಸಿಂಗಾಪೂರಿನ ಲಕ್ಷಣಗಳು!

ಗೋಡೆಯಮೇಲೆ ಗೀಚುವುದು, ಬಸ್ಸಿನ ಕಿಟಕಿಯಿಂದ ತಿಂದುಳಿದ ಹಣ್ಣಿನ ಕೊಳೆತ ಭಾಗ, ಸಿಪ್ಪೆ ಮುಂತಾದುವುಗಳನ್ನು ಎಸೆಯುವುದು, ವಾಹನಗಳ ಕಿಟಕಿಯಿಂದ ಪಿಚಕ್ಕನೆ ಉಗುಳುವುದು-ಕೈ ತೊಳೆಯುವುದು, ವಾಹನ ಚಲಿಸುತ್ತಿರುವಾಗ ತಲೆ ಮತ್ತು ಕೈಗಳನ್ನು ಆಗಾಗ ಕಿಟಕಿಯಿಂದ ಹೊರಚಾಚುವುದು, ಶಹರದ ನಡುವಿನರಸ್ತೆಗಳಲ್ಲಿ ಹಸುಗಳು/ಎಮ್ಮೆಗಳು ಓಡಾಡಿದರೆ ತೊಂದರೆ ಅಂತ ತಿಳಿದೂ ಅವುಗಳನ್ನು ಹಾಗೆ ಮಧ್ಯೆ ಕಳಿಸುವುದು, ನಾಯಿಯನ್ನು ರಸ್ತೆಯ ಕಂಡ ಕಂಡ ಭಾಗಗಳಲ್ಲಿ ನಿಲ್ಲಿಸಿ [ಹೆಚ್ಚಾಗಿ ಪಕ್ಕದ ಮನೆಯ ಮುಂದೆ]ಮಲ-ಮೂತ್ರ ವಿಸರ್ಜಿಸುವುದು,ಪಬ್ಲಿಕ್ ಟಾಂಕಿಯ ನೀರಿನ ಕೊಳಾಯಿಯನ್ನು ತಿರುಗಿಸಿ ತಮ್ಮ ಕೆಲ್ಸವಾದ ಮೇಲೆ ಅದನ್ನು ಸ್ವಸ್ಥಾನಕ್ಕೆ ತಿರುಗಿಸಿ ನೀರು ನಿಲ್ಲಿಸದೇ ಹಾಗೇ ತೆರಳುವುದು, ಉದ್ಯಾನದಲ್ಲಿ ಹುಲ್ಲು ಹಾಸಿನ ಮೇಲೆ ಅಡ್ಡಡ್ಡ ಮಲಗುವುದು, ಹೂವು ಕೀಳುವುದು, ಬೇಡದ ತ್ಯಾಜ್ಯಗಳನ್ನು ಉದ್ಯಾನದಲ್ಲೇ ಕಂಡಲ್ಲಿ ಬಿಸಾಡುವುದು ಇವೆಲ್ಲಾ ಅವಿರತವಾಗಿ ನಡೆಸಿಬಂದ ನಮ್ಮ ಉದ್ಯಾನ ನಗರಿಯ ಯುವ ಪೀಳಿಗೆಯ ಸರ್ವೇಸಾಮಾನ್ಯ ಸ್ವಭಾವಗಳು-ಇವು ಅವರ ಲೆಕ್ಕದಲ್ಲಿ ತಪ್ಪಲ್ಲ ಎಂದು ಪರಿಗಣಿತವಾದ ಅಂಶಗಳು.

ಯಾವುದೋ ಸಂಪಿನಿನಲ್ಲಿ/ಹರತಾಳದಲ್ಲಿ/ಬಂದಿನಲ್ಲಿ ಸರಕಾರೀ ಬಸ್ಸುಗಳಿಗೆ ಬೆಂಕಿ ಹಚ್ಚುವುದು, ಜನರಿಗೆ ಕಲ್ಲಲ್ಲಿ ಹೊಡೆಯುವುದು, ಚಪ್ಪಲಿ ತೂರುವುದು, ವಿದೇಶೀ ಕೆಟ್ಟ ಪ್ರಜೆಯೊಬ್ಬ ಮಾಡಿದ್ದನ್ನು ಮಾಧ್ಯಮಗಳಲ್ಲಿ ತಿಳಿದು ಆ ಅಂಧಾನುಕರಣೆಯನ್ನೇ ಮಾಡಿ ಗಣ್ಯವ್ಯಕ್ತಿಗಳಿಗೆ ಹಾಗೂ ನ್ಯಾಯಾಲಯಗಳಲ್ಲಿ ಚಪ್ಪಲಿ ತೂರುವುದು, ಯವುದೋ ಕಾರ್ಖಾನೆಯ/ಮನೆಯ ಗಾಜಿನ ಕಿಟಕಿಗಳನ್ನು ಒಡೆಯುವುದು, ರೈಲು-ಬಸ್ಸು ತಡೆಯುವುದು ಇವೆಲ್ಲಾ ಉಗ್ರರೂಪೀ ವಿವೇಕಹೀನರ ಕೆಲಸಗಳು. ಖೋಟಾ ನೋಟು ಚಲಾವಣೆ,ಕೊಡಬಾರದ ಮುಖ್ಯಮಾಹಿತಿಗಳನ್ನು ವಿದೇಶೀಯರಿಗೆ ಕೊಡುವ ಬೇಹುಗಾರಿಕೆ, ಹಣದ ಆಸೆಗೆ ಯಾರಿಗೋ ಸಹಾಯಮಾಡಲು ಹೋಗಿ ಕೊಲೆ-ಸುಲಿಗೆ-ದರೋಡೆ ಮಾಡುವುದು, ಸಾರ್ವಜನಿಕ ಆಸ್ತಿಗಳಾದ ಮಂದಿರ,ಮಸೀದಿ,ಇಗರ್ಜಿ, ಬಸದಿ ಇವುಗಳನ್ನೆಲ್ಲ ದ್ವಂಸಮಾಡುವುದು, ದೇಶದ ಬಾವುಟಕ್ಕೆ ಅಪಚಾರವೆಸಗುವುದು, ತಮ್ಮ ಕಂಪನಿಗಳಲ್ಲಿ ವಿದೇಶೀಯರು ಅವರವರ ರಾಷ್ಟ್ರಗೀತೆಗಳನ್ನು ಹಾಡಿಕೊಂಡು ನಮ್ಮ ರಾಷ್ಟ್ರ ಗೀತೆಗೆ ಅವಹೇಳನ ಮಾಡುವಾಗ ಮುಚ್ಚಿಹಾಕುವುದು, ಕನ್ನಡ ಸಂಘಟನೆಗಳ ಹೆಸರಲ್ಲಿ ರೌಡಿಸಂ ಮಾಡುವುದು, ಇನ್ನೊಬ್ಬರ ಆಸ್ತಿಯನ್ನು ಬಲವಂತವಾಗಿ ತನ್ನದಾಗಿಸಿಕೊಳ್ಳುವುದು, ಹುಡುಗಿಯನ್ನು ನಂಬಿಸಿ ಕೈಕೊಡುವುದು, ಹಲವು ಹುಡಿಗಿಯರನ್ನು ಹಾಳುಮಾಡುವ ಚಟವನ್ನು ಬೆಳೆಸಿಕೊಂಡು ಮಜಾ ಪಡೆಯುವುದು-ಇವೆಲ್ಲಾ ಗುನ್ನೆಗಳು-ಅಪರಾಧಗಳು ಎನಿಸಿಕೊಳ್ಳುವ ಮಾಡಬಾರದ ಕೆಲಸಗಳು, ಆದರೆ ನಡೆದೇ ಇರುವ ಸಾಮಾನ್ಯ ಜ್ಞಾನರಹಿತ ಘಟನೆಗಳು.

ಪಠ್ಯಗಳಲ್ಲಿ ಪರರಿಗೆ ಸಹಾಯಮಾಡಬೇಕು, ಬಡವರಿಗೆ ಆದಷ್ಟು ದಾನ ಮಾಡಬೇಕು, ಆರ್ತರನ್ನು ರಕ್ಷಿಸಬೇಕು, ಕೈಲಾಗದವರನ್ನು ಕಣ್ಣೆತ್ತಿ ನೋಡಿ ಅವರಿಗೊಂದು ದಾರಿ ಕಲ್ಪಿಸಬೇಕು--ಹೀಗಿದ್ದೆಲ್ಲಾ ನಾವು ಓದಿರುತ್ತೇವೆ, ಆದರೆ ಯಾವುದೋ ಒಬ್ಬ ಕುರುಡ ಕೋಲು ಹಿಡಿದು ದೊಡ್ಡ ರಸ್ತೆಯನ್ನು ದಾಟುತ್ತಿರುವಾಗ ಇನ್ನೇನು ರಸ್ತೆಯ ಮಧ್ಯದ ವಿಭಾಜಕಕ್ಕೆ ತಾಗಿ ಬೀಳುತ್ತಾನೆ ಅಥವಾ ವಾಹನಕ್ಕೆ ಅಡ್ಡ ಸಿಕ್ಕಿಹಾಕಿಕೊಳ್ಳುತ್ತಾನೆ ಎಂದು ಕಾಣುತ್ತಿದ್ದರೂ ಕಂಡರೂ ಕಾಣಿಸದ ಹಾಗೇ ಸುಮ್ಮನೇ ಹೋಗಿಬಿಡುವುದು, ಯಾರೋ ಮುದುಕಿ/ಮುದುಕ ಸಹಾಯಮಾಡಿ ಎಂದು ಗೋಗರೆಯುತ್ತಿದ್ದರೆ ಅವರನ್ನು ಲೆಕ್ಕಿಸದಿರುವುದು, ಬಸ್ಸಿನಲ್ಲಿ ಮಹಿಳೆಯರ ಮೀಸಲು ಜಾಗದಲ್ಲಿ ಕುಳಿತುಕೊಳುವುದು, ಬಸ್ಸಿನಲ್ಲಿ ನಿಲ್ಲಲಾರದ ಮುದುಕರು ಪಕ್ಕಕ್ಕೆ ಬಂದು ನಿಂತಾಗ ಕುಳಿತಲ್ಲೇ ಕಂಡೂ ಕಾಣದಂತಿರುವುದು, ಬಸ್ಸಿನಲ್ಲಿ ನೂಕು ನುಗ್ಗಲಿನಲ್ಲಿ ಹುಡುಗಿಯ ಕೈಮೈ ತಾಗುವಂತೆ ನಿಂತುಕೊಂಡು ಮಜಾತೆಗೆದುಕೊಳ್ಳುವುದು,ಏಕಮುಖ ಸಂಚಾರದ ರಸ್ತೆಯಲ್ಲಿ ಅದು ನಮಗಲ್ಲ ಎಂದು ಪೋಲೀಸರಿರದಿದ್ದಾಗ ಹಾಗೇ ಗಾಡಿ ಓಡಿಸಿಕೊಂಡು ಹೋಗುವುದು, ರಸ್ತೆ ಅಪಘಾತದಲ್ಲಿ ಯಾರೋ ಬಿದ್ದಿದ್ದರೆ ನೋಡದೇ ರುಯ್ಯನೆ ಮುಂದೆ ಹೋಗಿಬಿಡುವುದು, ಪಕ್ಕದ ಮನೆಗೆ ಕಳ್ಳರು ಬಂದ ಸುದ್ದಿ ಕೇಳಿ ತಮ್ಮನೆಯ ಬಾಗಿಲುಗಳನ್ನು ತೆಗೆದು ಅಲ್ಲಿಗೆ ಸಹಾಯಕ್ಕೆ ಧಾವಿಸದೇ ಬಾಗಿಲು ಮುಚ್ಚಿ ಭದ್ರಪಡಿಸ್ಕೊಳ್ಳುವುದು, ಯಾವುದೋ ವ್ಯಕ್ತಿ ಕೂಗಿಕೊಂಡರೆ ಅದು ನಮಗ್ಯಾಕೆ ಬಿಡಿ ಎಂದುಕೊಂಡು ಅಸಡ್ಡೆ ಮಾಡುವುದು--ಇವೆಲ್ಲಾ ಕುರುಡು,ಕಿವುಡು ಜಾಣತನವೆಂಬ ಸಾಮಾನ್ಯಜ್ಞಾನ ರಹಿತ ಘಟನೆಗಳು.

ಪಟ್ಟಿ ಮಾಡಿದರೆ ಆಂಜನೇಯನ ಬಾಲದಂತೆ ಬೆಳೆಯುವ ಇಂತಹ ಘಟನೆಗಳು ನಮ್ಮೆಲ್ಲರ ಜೀವನದಲ್ಲಿ ಹಾಸುಹೊಕ್ಕಾಗಿವೆ. ಕೆಲವೊಮ್ಮೆ ನಾವೇ ಕೆಲವು ಸಣ್ಣ-ಪುಟ್ಟ ಲೋಪದೋಷಗಳಲ್ಲಿ ಭಾಗಿಯಾಗಿದ್ದರೆ ಅಚ್ಚರಿಪಡಬೇಕಿಲ್ಲ! "ನಾವೂ ಮನುಷ್ಯರು ತಾನೇ ? ಆಗುತ್ತಪ್ಪ ಅದಕ್ಕೇನೀಗ? " ಎಂದುಕೊಳ್ಳುವ ಬದಲು ಸ್ವಲ್ಪ ವಿವೇಚಿಸಿದರೆ ನಾವೆಲ್ಲಿ ಎಡವುತ್ತೇವೆ ಎಂಬುದನ್ನು ತಿಳಿದುಕೊಂಡು ಅಷ್ಟಷ್ಟಾಗಿ ಸರಿಪಡಿಸಿಕೊಳ್ಳಬಹುದಲ್ಲ !

ಇನ್ನು ಕೆಲವರಿಗೆ ತಾವು ಬಹಳ ವಯಸ್ಸಾದ ಅನುಭವೀ ಮುತ್ಸದ್ಧಿ ಎನಿಸಿಕೊಳ್ಳುವ ತವಕ. ಅವರು ಕುರುಚಲು ಗಡ್ಡ ಬೆಳೆಸಿಕೊಳ್ಳುವುದು, ಕಣ್ಣಿಗೆ ಗೋಲ್ಡನ್ ಕಲರ್ ಫ್ರೇಮ್ ಇರುವ ಕನ್ನಡಕ ಹಾಕಿಕೊಳುವುದು, ಕೂದಲನ್ನು ಆದಷ್ಟು ಹಣ್ಣಾಗಿದ್ದು ಕಾಣುವಂತೆ ಬಿಡುವುದು ಇವೆಲ್ಲಾ ಅವರ ಆಕರ್ಷಣೆಗಳು! " ನಾವೆಲ್ಲಾ ಆಗೆಲ್ಲಾ ಹೇಗಿದ್ದೆವು ಅಂದ್ರೆ " ಎಂದು ಶುರುವಿಟ್ಟುಕೊಳ್ಳುವ ಅವರ ಮಾತು ಕೆಂಪೇಗೌಡರ ಕಾಲದವರೆಗೋ ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದ ವರೆಗೋ ಹೋಗಿನಿಲ್ಲುತ್ತವೆ. ವಯಸ್ಸಿನ್ನೂ ನಮಗಿಂತ ನಾಲ್ಕೈದು ವರ್ಷ ಜಾಸ್ತಿ ಇದ್ದರೂ ಎಲಾ ಇವನ ಯಾವರೀತಿ ಮಾತಾಡುತ್ತಾನಲ್ಲಾ ಎಂಬ ಪರಿಭಾಸವಾದರೂ ನಾವು ಹೇಳಿದರೆ ನಮಗೇ ಎದುರುಹಾಯುವ ಮೌಢ್ಯ ಅವರದಾಗಿರುತ್ತದೆ. ಈ ಹುಸಿ ವೃದ್ಧತನದಲ್ಲಿ ತಾನು ಮಾಡಬೇಕಾದ ಅನೇಕ ಕೆಲಸಗಳಿಗೆ ಡಿಸ್ಕೌಂಟು ಪಡೆಯುವ ಮನೋಭಿಲಾಷೆ ಅಡಗಿರುತ್ತದೆ ಎಂಬುದನ್ನು ಶೋಧಿಸಿ ತಿಳಿದುಕೊಂಡಿದ್ದೇನೆ. ಅಂಥವರಿಗೆ " ಸ್ವಾಈ ನೀವು ಇದೇ ರೀತಿ ಮಾಡಿದರೆ ಬೇಗ ಬೊಜ್ಜು ಬೆಳೆದು ನಿಜವಾಗಿಯೂ ಮುಪ್ಪು ಬಂದುಬಿಡುತ್ತದೆ " ಎಂದು ಹೇಳಬೇಕೆನಿಸುತ್ತದೆ. ಕೆಲವರು ತಮ್ಮ ಅನುಭವ ತುಂಬಾ ಆಳದ್ದು ಎನ್ನುವುದನ್ನು ಪ್ರಕಟಿಸಲೂ ಹೀಗೆ ಮುದುಕು ವೇಷ ಹಾಕುತ್ತಾರೆ ! ಕೆಲವರದ್ದು ಪ್ರಚಾರಪ್ರಿಯತೆ, ವಯಸ್ಸಾಗಿದ್ದರೂ ಶರೀರ ಮಾಗಿದ್ದರೂ ಏನಾದರೂ ಅಸಡ್ಡೆ ಹೇಳಿಕೆ ಕೊಟ್ಟು ಮಾಧ್ಯಮಗಳಲ್ಲಿ ಪ್ರಚಾರದಲ್ಲಿರುವುದೇ ಇವರ ಚಾಳಿ. ಬುದ್ಧಿಜೀವಿಗಳೆನಿಸಿಕೊಳ್ಳುವ ಇವರು ಜೀವಿತದ ಪೂರ್ತಿ ಆಗಾಗ ಆಗಾಗ ಸುದ್ದಿ ಮಾಡುತ್ತ ಬಂದವರೇ ಆಗಿರುತ್ತಾರೆ, ಈಗ ಮುದುಕಾಗಿ ಸುದ್ದಿ ಮಾಡಲು ಏನೂ ಇಲ್ಲದಾದಾಗ ಏನಾದರೂ ಅಸಂಬದ್ಧ ಹೇಳಿಕೆ ಕೊಟ್ಟುಬಿಟ್ಟರೆ ಅದರಿಂದ ಪ್ರಚಾರ ಸಿಗುತ್ತದಲ್ಲ ಎಂಬ ಅನಿಸಿಕೆ ಅವರದ್ದು. ಅವರ ಹೇಳಿಕೆಗಳು ಸಮಾಜದಮೇಲೆ ಯಾವ ಪರಿಣಾಮ ಉಂಟುಮಾಡುತ್ತವೆ ಎಂಬ ಕನಿಷ್ಠ ತಿಳುವಳಿಕೆಯನ್ನೂ ವಿವೇಚಿಸದೇ ಹೇಳಿಕೆ ಕೊಟ್ಟು ಪ್ರಚಾರ ಪಡೆವ ಹುನ್ನಾರ.

ಇನ್ನು ಕೆಲವು ಜನರಿರುತ್ತಾರೆ. ಅವರಿಗೆ ಮುಪ್ಪೇ ಬರುವುದಿಲ್ಲ. ಅವರು ಬಳಸದ ಬಣ್ಣಗಳೇ ಇಲ್ಲ, ಬಳಸದ ಪರಿಮಳ ದ್ರವ್ಯಗಳಾಗಲೀ, ಲೋಶನ್-ಶಾಂಪೂ, ಕ್ರೀಮು ಮುಂತಾದವುಗಳಾಗಲೀ ಇಲ್ಲವೇ ಇಲ್ಲ. ಚಿರಯೌವ್ವನಿಗರು ಎಂದು ಕರೆಸಿಕೊಳ್ಳಬೇಕೆಂಬುದು ಅವರ ಆಸೆ. ಕೆಲವರಲ್ಲಿ ಎಲ್ಲೋ ಒಳಗೆ ಕಾಮವಾಸನೆ ಕೂಡ ಇದ್ದಿರುತ್ತದೆ! ಯಾರನ್ನೋ ಪ್ರಲೋಭನೆಗೆ ಒಳಪಡಿಸಲು ಅವರು ಬಹಳ ಪ್ರಯತ್ನದಲ್ಲಿರುತ್ತಾರೆ! ಯಾವುದು ವಯಸ್ಸಾದವರಿಗೆ ಸಿಂಧುವಲ್ಲವೋ ಅದನ್ನು ಮಾಡಹೊರಟರೆ ಎಷ್ಟು ಚೆನ್ನ ಹೇಳಿ?

ಸಾಮಾನ್ಯ ಜ್ಞಾನದಲ್ಲಿ ಗಣಿತ, ವಿಜ್ಞಾನ,ಸಮಾಜ ವಿಜ್ಞಾನ, ರಾಜಕೀಯ, ಭಾಷೆ, ಸಂಗೀತ,ಸಾಹಿತ್ಯ, ಕಲೆ ಮುಂತಾದ ಎಲ್ಲರಂಗಗಳಲ್ಲೂ ಸ್ವಲ್ಪ ಸ್ವಲ್ಪ ಜ್ಞಾನ ಬೇಕೇ ಬೇಕು. ಒಂದು ಘಟನೆ ಕೇಳಿ- ವಿಧಾನ ಸೌಧದಿಂದ ಬಹುಮಹಡಿ ಕಟ್ಟಡ[ಅಂದಿನ ದಿನಗಳಲ್ಲಿ]ಕ್ಕೆ ಇರುವುದು ೦.೪ ಕಿಲೋಮೀಟರಿಗಿಂತ ಕಡಿಮೆ ಅಂತರ. ಆದರೆ ಇದನ್ನೇ ಪುಸ್ತಕಗಳಲ್ಲಿ ಲೆಕ್ಕತೋರಿಸುವಾಗ ರಸ್ತೆಕಾಮಗಾರಿಯ ಕಂತ್ರಾಟುದಾರನೊಬ್ಬ ೭೫ ಕಿಲೋಮೀಟರ್ ಎಂದು ನಮೂದಿಸಿ ಹಣಪಡೆದುಕೊಂಡಿದ್ದು ಹಳೆಯ ಜೋಕು! ನಮಗೆ ಗಣಿತ ಗೊತ್ತಿಲ್ಲದಿದ್ದರೆ ಅಳತೆ ಮಾಡುವುದು ಹೇಗೆ? ನಮ್ಮ ಬದುಕಿಗೆ ಯಾವುದನ್ನೇ ಕೊಡು-ಕೊಳ್ಳುವಾಗ ತೂಕ-ಅಳತೆಗಾದರೂ ನಮಗೆ ಗಣಿತ ಬೇಡವೇ? ಲೆಕ್ಕ ಬರದಿದ್ದರೆ ದುಡ್ಡು ಎಣಿಸುವುದು ಹೇಗೆ? ಹೀಗೇ ಉದಾಹರಿಸುತ್ತಾ ನಡೆದರೆ ಅದು ಮುಗಿಯದ ಕಥೆ!

ಹೀಗೇ ಸಾಮಾನ್ಯ ಜ್ಞಾನ ಕೇವಲ ಕುಳಿತಲ್ಲೇ ಬರುವುದಲ್ಲ. ಅದನ್ನು ನಾವು ಬಲ್ಲವರಿಂದ- ಸಮಾಜದಿಂದ ಪಡೆದುಕೊಂಡು ಅನುಸರಿಸಬೇಕು. ಯಾವುದು ಪಥ್ಯವೋ ಯಾವುದು ಸಮಂಜಸವೋ ಅದನ್ನು ಅನುಸರಿಸಬೇಕು. ನಮ್ಮಿಂದ ಸಮಾಜಕ್ಕೆ, ಇತರ ಜನರಿಗೆ ತೊಂದರೆ ಆಗದ ರೀತಿಯಲ್ಲಿ, ನಮ್ಮಿಂದ ಬೇರೆಯವರಿಗೆ ಆಭಾಸ, ಅಪಚಾರ ಆಗದ ರೀತಿಯಲ್ಲಿ, ನಮ್ಮಿಂದ ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆಬಾರದ ರೀತಿಯಲ್ಲಿ ನಡೆದುಕೊಳ್ಳುವುದು, ಬದುಕಿನಲ್ಲಿ ಶಿಸ್ತು-ಸಂಯಮ,ನಿಯಮ,ನ್ಯಾಯ-ನೀತಿ ಇವುಗಳನ್ನು ಅಳವಡಿಸಿಕೊಳ್ಳುವುದು, ಎಲ್ಲವನ್ನೂ ತಿಳಿದಿದ್ದು ಪ್ರತೀ ಹೆಜ್ಜೆಯನ್ನೂ ತೂಗಿ-ಅಳೆದು ನಂತರವೇ ಮುಂದಿಡುವುದು ಸಾಮಾನ್ಯ ಜ್ಞಾನ. ಬೆಂಕಿ ಸುಡುತ್ತದೆ, ನೀರು ನೆನೆಸುತ್ತದೆ, ಗಾಳಿ ಬೀಸುತ್ತದೆ ಇವೆಲ್ಲಾ ನಮಗೆ ಗೊತ್ತಿರುವ ಸಾಮಾನ್ಯ ಜ್ಞಾನವಾದರೆ ವಿದ್ಯುತ್ತಿನಿಂದ ಶಾಕ್ ಹೊಡೆಯುತ್ತದೆ, ವಾಹನವನ್ನು ಅತಿವೇಗದಿಂದ ಓಡಿಸಿದರೆ ಅಪಘಾತವಾಗುತ್ತದೆ, ಕುಡಿತದಿಂದ ಹಲವರಿಗೆ ಅಪಚಾರವಾಗುತ್ತದೆ ಎಂಬುದೆಲ್ಲ ಹಿರಿಯರ, ಅನುಭವಿಕರ ಮೂಲಕ ಪಡೆದುಕೊಳ್ಳಬೇಕಾದ ಸಾಮಾನ್ಯ ಜ್ಞಾನ. ಪರೀಕ್ಷೆಗೆ ಹೋಗುವಾಗ ಲೆಕ್ಕಣಿಕೆ[ಪೆನ್ನು], ಪೆನ್ಸಿಲ್ ಇರಬೇಕು, ಕಛೇರಿಗಳ ಸಂದರ್ಶನಕ್ಕೆ ಹೋಗುವಾಗ ಜೀನ್ಸ್ ಪ್ಯಾಂಟು-ಟೀ ಶರ್ಟ್ ಹಾಕಬಾರದು, ವಕೀಲರು ಹಿಪ್ಪಿ ಕೂದಲನ್ನು ಬಿಟ್ಟು ಒಂದೇ ಕಿವಿಗೆ ಒಂಟಿ ಹಾಕಿ ಕೈಗೆ ಬಳೆ ಹಾಕಿಕೊಂಡು ಅಲೆಯಬಾರದು, ಹುಡುಗಿಯರು ಅತಿಯಾದ ಮಾಡ್ ಡ್ರೆಸ್ ಹಾಕಿಕೊಂಡು ಕಾಲೇಜಿಗೆ ಹೋಗಬಾರದು -ಎಂಬುದೆಲ್ಲ ಅನುಭವದಿಂದ ಹಿರಿಯರು ಹೇಳುವ ಜ್ಞಾನ. ತಂತಮ್ಮ ರಂಗಕ್ಕೆ ಸಂಬಂಧಿಸಿದಂತೇ ಹೇಗೆ ನಡೆದುಕೊಳ್ಳಬೇಕೆಂದು ಕಲಿಯುವುದು ಗಾಢಾಂಧಕಾರದಿಂದ ಸಿನಿಮಾ ಮಾಧ್ಯಮದವರನ್ನು ಅನುಸರಿಸದಿರುವುದು ಅನುಭವದಿಂದ ಬರಬೇಕಾದದ್ದು. ಇದು ಇಲ್ಲದವರಿಗೆ ಸಿದ್ಧಿಸಲಿ, ಯಾವುದು ಸಾಮಾನ್ಯಜ್ಞಾನವೆಂದು ಗಣಿಸಲ್ಪಟ್ಟು ಗಾಳಿಗೆ ತೂರಲ್ಪಡುತ್ತದೋ ಅದು ಸ್ವಸ್ಥಾನದಲ್ಲಿದ್ದು ಮೆರುಗನ್ನು ಪಡೆದು ಸ್ವಸ್ಥ ಸಮಾಜ ನಿರ್ಮಾಣವಾಗಲಿ ಎಂದು ಹಾರೈಸೋಣ.

Sunday, July 18, 2010

ಸ್ವಗತ


ಸ್ವಗತ

ಎದ್ದು ಗೆದ್ದು ಹಾರುತಿದೆ ಮನಸು
ಕದ್ದ ಕನಸುಗಳು ಬಯಲಾಗಿ ನನಸು
ಮುದ್ದು ಮುಖದಿ ತುಸು ಮಂದಹಾಸ
ಸದ್ದಿಲ್ಲದ ಸಹಜ ಸಂತೋಷ

ಪೆದ್ದು ಪೆದ್ದಾಗಿ ಇದ್ದ ದಿನ ಹಲವು
ಒದ್ದೆ ಕಣ್ಣ ಒರಸಲಿಲ್ಲ ಕರವು
ಇದ್ದ ಈ ಅಂಗಗಳಲಿಷ್ಟು ಭೇದ
ಬದ್ಧತೆಯ ಕುರಿತೋದಿ ವೇದ !

ನಮ್ಮಣ್ಣ ನನಗಿಂತ ಭಿನ್ನ
ತಿಮ್ಮಣ್ಣ ದ್ಯಾವ್ರ್ನ ಕಂಡಿಹನ
ತಮ್ಮ ಜರುಗು ಜರುಗು ನೀನಂತ
ಸುಮ್ಮನೊರಗಿ ಮರದಡಿಗೆ ಕುಂತ

ಯೋಗ ಧ್ಯಾನ ಎಲ್ಲ ಬೆಕಂತ
ಯಾಗ ಯಜ್ಞ ಮಾಡಬೇಕಂತ
ಭೋಗಭಾಗ್ಯ ನಮ್ಮ ಹಣೆಬರವು
ಬೀಗುದ್ಯಾಕ ನೀನು ಸಿರಿವಂತ ?

ವಿಷಯ ಐತಿ ತುಂಬ ಗಂಭೀರ !
ಕಷಾಯಕ್ಕೆ ರೋಗಗಳು ಬಾರ
ಕುಶಲದೊಳು ಇದನ ನೀನರಿತೂ
ಖುಷಿಗೊಳಿಸು ನಡೆಸು ನೀ ಹಲವ್ರ

ನಿನಾರು ಎಂಬುದನ ತಿಳಕೋ
’ನಾನಲ್ಲ’ ಎಂದು ನೀ ಹೇಳ್ಕೋ
ಬಾನಲ್ಲಿ ಸೆಳಮಿಂಚು ಪಡೆದು
ಕಾನನದಿ ಕಿರುದಾರಿ ಕಂಡ್ಕೋ

Saturday, July 17, 2010

ನಿನ್ನಯ ಬಲು ಹೇಳು ಮಾರುತಿಯನ್ನು ನಿರೀಕ್ಷಿಪೆನು.....ನಿನ್ನಯ ಬಲು ಹೇಳು ಮಾರುತಿಯನ್ನು ನಿರೀಕ್ಷಿಪೆನು.....

ಹೀಗಿರಬೇಕು ಜೀವನದಲ್ಲಿ ಉತ್ಸಾಹ ಎಂದರೆ, ಹೀಗಿರಬೇಕು ಲವಲವಿಕೆಯೆಂದರೆ ಹೀಗಿರಬೇಕು ಸ್ಪಿರಿಟ್ ಎಂದರೆ! ಇದು ಉತ್ಪ್ರೇಕ್ಷೆಯಲ್ಲ ಬದಲಾಗಿ ವಾಸ್ತವಿಕತೆ. ಬೇರೆ ಯಾವುದೇ ರಂಗದಲ್ಲಾದರೂ ೭೭ ವರ್ಷ ವಯಸ್ಸಾಗಿಬಿಟ್ಟರೆ ಆತ ಅತಿ ಮುದುಕನೆಂದು ಗುರುತಿಸಿ ಗೌರವಿಸಿ ನಿಧಾನಕ್ಕೆ ನಡೆತಂದು ವೇದಿಕೆಯಮೇಲೆ ಕುಳ್ಳಿರಿಸಿ, ಹಾರ ತುರಾಯಿ ಅರ್ಪಿಸಿ ಮತ್ತೆ ಹಾಗೇ ಕೈಹಿಡಿದುಕೊಂಡು ವೇದಿಕೆಯಿಂದ ಅವರ ಆಸನಕ್ಕೆ ಕರೆದೊಯ್ಯುವ ’ನಿಧಾನ ನಿಧಾನ ವಯಸ್ಸಾಯ್ತು’ ಎನ್ನುವ ಪ್ರಶ್ನೆ. ಆದರೆ ೭೭ ವಯಸ್ಸಿನ ವ್ಯಕ್ತಿಯೊಬ್ಬ ತೀರಾ ೨೦ರ ಎಳೆಯ ಹುಡುಗನನ್ನೂ ನಾಚಿಸುವಷ್ಟು ತಾಳಹಾಕಿ ಕುಣಿಯುತ್ತಾನೆಂದರೆ ಇದನ್ನು ನಂಬಬೇಕೋ ಬಿಡಬೇಕೋ ಹಲವರಿಗೆ ಇದೇ ಒಂದು ಸಮಸ್ಯೆ! ಪ್ರಾಯಶಃ ಯಾರ ಮನೆಯಲ್ಲೇ ಆಗಲಿ ನೋವಿಗೋ ಉಳುಕಿಗೋ ತೈಲವನ್ನು ಲೇಪಿಸಿ ಉಜ್ಜಿಕೊಳ್ಳುತ್ತ ಮಲಗಿ ಕಾಲಕಳೆಯುವ ಈ ಮುಪ್ಪಿನ ವಯಸ್ಸು ಈ ವ್ಯಕ್ತಿಗೆ ಮಾತ್ರ ಹೊಸ ಪ್ರಾಯವನ್ನು ಮರಲಿ ಕೊಟ್ಟಿದೆ, ಹೊಸ ಜೀವಕಳೆಯನ್ನು ಹೊರಹೊಮ್ಮಿಸಿದೆ-ಈ ಮೂಲಕ ಆಳಸಿಗಳಾಗಿ ಕುಳಿತ ಯುವಕರನೇಕರನ್ನು ಕರೆದು ಕುಣಿಸಿದೆ. ತನ್ನ ಹಾವ-ಭಾವ, ಅತಿ ವಿಷಿಷ್ಟ ಕುಣಿತ, ಕೊನೆಯ ಪ್ರೇಕ್ಷಕನೂ ನೋಡಬಹುದಾದ ಕಣ್ಣಿನ ಕಸರತ್ತು, ಒಂದೊಂದು ಹಾಡಿಗೂ ಹಲವು ಬಗೆಯ ಭಾವ-ಭಂಗಿಗಳ ಮಸಲತ್ತು, ಬಾಲ್ಯ-ಶೈಶವ-ಯೌವ್ವನ-ಮುಪ್ಪು-ಮರಣ ಎಲ್ಲವನ್ನೂ ಕಥೆಯ ಹಂದರಕ್ಕನುಗುಣವಾಗಿ ಕೇವಲ ಅಭಿನಯದಲ್ಲೇ ಹೇಳುವ ಅನೂಹ್ಯ ಹೊಸತನ, ವೇದಿಕೆಗೆ ಪ್ರವೇಶಿಸುತ್ತಿದ್ದಂತೆಯೇ ತರುವ ಮಿಂಚಿನ ಸಂಚಾರ- ಇವನ್ನೆಲ್ಲ ಹೇಳುತ್ತಿರುವುದು ಕರ್ನಾಟಕದ ಅಪ್ಪಟ ಹಾಗೂ ಸಮಗ್ರ ಕಲೆಯಾದ ಯಕ್ಷಗಾನದ ಅನಭಿಷಿಕ್ತ ಸಾಮ್ರಾಟ ಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆಯವರ ಬಗ್ಗೆ. ಒಮ್ಮೆ ನೋಡಿದರೆ ಮಗುದೊಮ್ಮೆ ನೋಡುವ, ಇನ್ನೊಮ್ಮೆ ಮತ್ತೊಮ್ಮೆ ಹಲವೊಮ್ಮೆ ನೋಡಬೇಕೆಂದು ಮನಸ್ಸು ಕಾಡುವ ಶ್ರೇಷ್ಠ ಅಭಿನಯ ಚಾತುರ್ಯ ನಮ್ಮ ಚಿಟ್ಟಾಣಿ ಅಜ್ಜನವರದು, ಛೆ ಛೆ ಹೀಗೆಂದರೆ ಅವರಿಗೆ ಕೋಪಬಂದೀತು ! ನಮ್ಮ ಚಿಟ್ಟಾಣಿಯವರದ್ದು.ಒಂದುಕಾಲದಲ್ಲಿ ಉತ್ತರಕನ್ನಡದ ಹೊನ್ನಾವರ ತಾಲೂಕಿನ ಭಾಸ್ಕೇರಿ ಎಂಬ ಊರಿನ ಭಾಗವಾದ ಚಿಟ್ಟಾಣಿ ಎಂಬ ಸಣ್ಣ ಕಿಷ್ಕಿಂಧೆಯಲ್ಲಿ ಜನಸಿ, ಯಕ್ಷಗಾನದ ಹಿಂದಿನ ತಲೆಮಾರಿನ ಅತಿರಥ ಮಹಾರಥರ ಪಾತ್ರಗಳನ್ನು ನೋಡಿ ಪ್ರಭಾವಿತನಾಗಿ, ಓದನ್ನು ತೊರೆದು ಗುಡ್ಡಗಳಲ್ಲಿ-ಬಯಲುಗಳಲ್ಲಿ ತಾನೇ ತಯಾರಿಸಿಕೊಂಡ ಹಳದಿ,ಕೆಂಪು,ಮಸಿ[ಅರಿಶಿನ,ಕುಂಕುಮ,ಕಪ್ಪು] ಬಣ್ಣಗಳನ್ನು ಬರೆದುಕೊಂಡು, ಹಿರಿಯರ ಕಣ್ತಪ್ಪಿಸಿ, ತನ್ನ ಹಾಗೂ ತನ್ನ ಓರಗೆಯ ಮಿತ್ರರ ಸಂತೋಷಕ್ಕಾಗಿ ಮನದಣಿಯೇ ಕುಣಿದ ಪೋರನೊಬ್ಬ ಈ ಮಟ್ಟಕ್ಕೆ ಬೆಳೆಯಬಲ್ಲ ಎಂದು ಯಾರೂ ಎಣಿಸಿರಲಿಲ್ಲ! ಹಿನ್ನೆಯಲ್ಲಿ ಅನುವಂಶಿಕವಾಗಿ ಯಾರೂ ಕಲಾರಂಗದಲ್ಲಿ ಇರದ, ಈ ಕಲೆಗೆ ಪೂರಕ ಪ್ರತಿಕ್ರಿಯೆ ಮನೆಯ ಸದಸ್ಯರಿಂದ ಸಿಗದ ಆ ಕಾಲದಲ್ಲಿ, ಮನೆಯ ಕಿತ್ತುತಿನ್ನುವ ಬಡತನ ಎಲ್ಲರನ್ನೂ ಆರ್ಥಿಕವಾಗಿ ದಿನಂಪ್ರತಿ ಬಡಿದುಕೂರಿಸುವ ಉತ್ಸಾಹರಹಿತ ಬದುಕಿನ ಆ ಕಾಲಘಟ್ಟದಲ್ಲಿ ಈ ಮಗು ಇದನ್ನು ಸಾಧಿಸಿದ್ದು, ಅದೇ ಮಗು ಈಗ ಅಜ್ಜನ ಸ್ಥಾನಕ್ಕೆ ಬಂದುನಿಂತಿದ್ದು, ಕನ್ನಡ ಸಿನಿಮಾ ರಂಗದ ರಾಜಕುಮಾರ್ ಇದ್ದಹಾಗೇ ಯಕ್ಷರಂಗದಲ್ಲಿ ತನ್ನನ್ನು ಮೀರಿಸದ ಸಾಧನೆಯನ್ನು ಗೈದಿದ್ದು, ಯಕ್ಷಗಾನವನ್ನು ನೋಡುವ,ಕೇಳುವ ಹುಚ್ಚಿದ್ದವರಿಗೆಲ್ಲ ಹೆಚ್ಚಿನ-ಮೆಚ್ಚಿನ ದೊಡ್ಡ ದೀಪಾವಳಿ ಹಬ್ಬ ಕೊಟ್ಟಿದ್ದು ಶ್ರೀಯುತರು ಪಡೆದ ಪುಣ್ಯ, ಯಕ್ಷರಂಗದ ಪ್ರೇಕ್ಷಕರೂ ಪಡೆದ ಭಾಗ್ಯ!

ಒಬ್ಬ ವ್ಯಕ್ತಿ ಶಕ್ತಿಯಾಗಿ ಬೆಳೆದರೆ, ಗುರುತರ ಪಾತ್ರ ನಿರ್ವಹಿಸಿದರೆ ಬಹುಶಃ ಅವನ ಶಕೆಯಿಂದ ಸುತ್ತಲ ಅನೇಕ ಜನ ಪ್ರಭಾವಿತರಾಗುವುದರೊಂದಿಗೆ ಹುಟ್ಟಿದ ಊರಿಗೂ ಕ್ಷೇತ್ರಕ್ಕೂ ಹೆಸರು ಸಿಗುತ್ತದೆ ಎಂಬುದು ಸುಳ್ಳಲ್ಲ-ಯಾಕೆಂದರೆ ಯಾರಿಗೂ ಅಷ್ಟಾಗಿ ಗೊತ್ತಿರದ ’ಚಿಟ್ಟಾಣಿ’ ಎಂಬ ಮಜರೆ [ಅತಿ ಚಿಕ್ಕ ಭೂ ಪ್ರದೇಶ] ಕೇವಲ ಈ ನಟನ ಹೆಸರ ಜೊತೆ ಪ್ರಾರಂಭದಲ್ಲಿ ಥಳುಕುಹಾಕಿಕೊಂಡು ಇಂದು ಚಿಟ್ಟಾಣಿ ಎಂದರೆ ಸಾಕು ಅದು ರಾಮಚಂದ್ರ ಹೆಗಡೆ ಎಂದೇ ಅರ್ಥಕೊಡುವಷ್ಟು ನಾಣ್ಯದ ಎರಡು ಮುಖವಾಗಿ ಬಿಟ್ಟಿವೆ ಈ ಹೆಸರುಗಳು.


ಯಕ್ಷಗಾನದ ಗಾಳಿ ಇಲ್ಲದವರಿಗೂ ಅವರ ಒಂದೇ ಕುಣಿತವನ್ನು ಒಮ್ಮೆ ತೋರಿಸಿದರೆ ಸಾಕು ಮತ್ತೆ ಅದನ್ನೇ ತೋರಿಸುವಂತೆ ಅಥವಾ ಎಲ್ಲಾದರೂ ಅವರ ಕಾರ್ಯಕ್ರಮವಿದ್ದರೆ ಮುಂಚಿತವಾಗಿ ತಿಳಿಸುವಂತೆ ಬುಲಾವುಬರುತ್ತದೆ!ಎಂತಹ ಗಾರುಡೀ ವಿದ್ಯೆ ನೋಡಿ! ಎಂತಹ ಮಾಂತ್ರಿಕತೆ ಅನ್ನಿ, ಆದರೂ ಇಂದಿನ ಈ ಸ್ಥಾನಕ್ಕೆ ಅವರೇರುವ ಹಿಂದಿನ ಆವರ ಅವಿರತ ಪ್ರಯತ್ನ, ಅವಿಶ್ರಾಂತ ದುಡಿಮೆ, ಒಳ್ಳೆಯ ನಟನಾಗಬೇಕೆಂಬ ಆ ಛಲ ಇಂದಿನ ನಮ್ಮೆಲ್ಲಾ ಗುರಿಸಾಧಕರಿಗೊಂದು ಬಲ-ಆದರ್ಶ.

ವಿದ್ಯೆ ಕಲಿಯಲಿಲ್ಲ, ಮಾತಿನ ಭಂಡವಾಳವಿಲ್ಲ, ಆರ್ಥಿಕ ಸಾಮರ್ಥ್ಯ ಅಂದಿಗಿರಲಿಲ್ಲ, ಆಟ ಮುಗಿಸಿ ಮನಗೆ ಮರಳುವಾಗ ಬೆಳೆಯುತ್ತಿರುವ ಸಂಸಾರಕ್ಕೆ ಬೇಕಲ್ಲ? ಅವರದೇ ಭಾಷೆಯಲ್ಲಿ ಹೇಳುವುದಾದರೆ .....ಹೂಹುಂ ? ಹೂಹುಂ ? ಎಲ್ಲಿದೆ ಬಹುಕಿನ ಬಂಡಿ ಎಳೆಯಲು ಬೇಕಾದ ಹಣ;ಆರ್ಥಿಕತೆ? ಆದರೂ ಇದನ್ನೇ ನಂಬಿಕೊಂಡು ಕೇವಲ ತನಗೆ ಮುಂದೊಂದು ದಿನ ಒಳ್ಳೆಯದಾದೀತೆಂಬ ಧೋರಣೆಯಿಂದ ಆ ಅಪ್ರತಿಮ ವಿಶ್ವಾಸದಿಂದ ಛಲದಂಕಮಲ್ಲನಾಗಿ ಎಡಬಿಡದೇ ಪಾತ್ರಗಳನ್ನು ಮಾಡಿದರು;ಅಷ್ಟಿಷ್ಟು ಲಭಿಸಿದ ಸಂಭಾವನೆಯನ್ನು ಉದರಂಭರಣೆಗೆ ಹೇಗೋ ಸಾಕಾಗುವಂತೆ ತೂಗಿಸಿಕೊಂಡರು.

ಕಾಲವೊಂದು ಬಂತು. ಅಲ್ಲಿ ಪ್ರದರ್ಶನ ಇದ್ದಲ್ಲಿ ಚಿಟ್ಟಾಣಿ ಇದ್ದರೆ ಮಾತ್ರ ಕಂತ್ರಾಟುದಾರರಿಗೆ ಗಂಟಿಗೆ ತೊಂದರೆಯಿಲ್ಲ ಎಂದೆನಿಸಿತು. ಅದು ಖಂಡಿತವೂ ಹೌದು. ಚಿಟ್ಟಾಣಿ ಮಾಡದ ಪಾತ್ರಗಳಿಲ್ಲ; ಕುಣಿಯದ ನೃತ್ಯ ಶೈಲಿಯಿಲ್ಲ! ಕೆಲವು ಯಕ್ಷಗಾನ ಪಾತ್ರಧಾರಿಗಳು ಯಾರು ಕುಣಿಯುತ್ತಾರೆ ಎಂಬ ದೃಷ್ಟಿಯಿಂದ ಅಲ್ಲಲ್ಲೇ ’ಕಳ್ಳಬೀಳುವ’ [ಕುಣಿತವನ್ನು ಸ್ವಲ್ಪವಷ್ಟೇ ಶಾಸ್ತ್ರಕ್ಕೆ ಮಾಡಿ ಮುಗಿಸುವ]ತರಗತಿಯವರಿದ್ದರು! ಆದರೆ ಆರೋಗ್ಯ ಸರಿಯಿರದಿದ್ದರೂ ಬಂದು ಕೊಟ್ಟಮಾತಿಗೆ ಕಟ್ಟುಬಿದ್ದು ತನ್ನನ್ನು ನಂಬಿ ಬಂದ ಅಭಿಮಾನೀ ಪ್ರೇಕ್ಷಕರನ್ನು ದಂಗುಬಡಿಸುವ ಚಾಕಚಕ್ಯತೆ ಮತ್ತು ಕುಣಿತದ ಹುಮ್ಮಸ್ಸು ಚಿಟ್ಟಾಣಿಯವರಲ್ಲಿತ್ತು;ಇದೆ. ಈ ಒಂದು ಗುಣವೇ ಅವರನ್ನು ಈ ರಂಗದಲ್ಲಿ ಮೇರುವ್ಯಕ್ತಿಯನ್ನಾಗಿ ಬೆಳೆಸಿತು ಅಂದರೆ ತಪ್ಪಲ್ಲ. ಮಾಗಧ, ಕಾರ್ತವೀರ್ಯ, ಕೌರವ, ದುಷ್ಟಬುದ್ಧಿ, ಕೀಚಕ, ಭಸ್ಮಾಸುರ ಹೀಗೆ ಹಲವು ಪ್ರಮುಖ ದುಷ್ಟಪಾತ್ರಗಳೂ ಸೇರಿದಂತೆ ಇನ್ನೂ ಅನೇಕ ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸಿದ್ದಾರೆ-ಪಾತ್ರಗಳಿಗೆ ಜೀವ ತುಂಬಿದ್ದಾರೆ. ಅದೊಂದು ಕಾಲ ಯಕ್ಷಲೋಕದ ಗಂಧರ್ವ ದಿ| ಕಾಳಿಂಗನಾವುಡರ ಭಾಗವತಿಕೆ ಮತ್ತು ದಿ| ದುರ್ಗಪ್ಪ ಗುಡಿಗಾರರ ಮದ್ದಳೆಗಳೊಂದಿಗೆ ಚಿಟ್ಟಾಣಿಯ ಪಾತ್ರ-ಅದೊಂದು ಧರೆಗಿಳಿದ ಇಂದ್ರನ ನಂದನವನ! ’ನೀಲಗಗನದೊಳು ಮೇಘಗಳಾ...ಕಂಡಾಗಲೆ......ನವಿಲು ಗೈಯ್ಯುತಿದೆ ಎಂಬ ಶೃಂಗಾರ ರಸದ ಹಾಡಿಗೆ ಸಖಿಯರೋಮ್ದಿಗೆ ವನವಿಹಾರದ ಸಂಭ್ರಮದಲ್ಲಿ ಮೆರೆಯುವ ಯಾವುದೇ ರಾಜಪಾತ್ರವಾಗಿರಲಿ ಅಲ್ಲಿ ಪ್ರೇಕ್ಷಕ ತನ್ನನ್ನೇ ಆ ಪಾತ್ರದಲ್ಲಿ ಸಮ್ಮಿಳಿಸಿಕೊಂಡು ಅನುಭವಿಸಿದ ಪರಿ ಇಂದಿಗೂ ಕಣ್ಕಟ್ಟುತ್ತದೆ! ಇಂದು ಆ ಕಂಚಿನ ಕಂಠದ ಕೋಗಿಲೆ ಮರದಿಂದ ಹಾರಿಹೋಗಿದೆಯಲ್ಲದೇ ಮೃದುಮಧುರ ಭಾವಗಳಿಗೆ ಜೀವಕೊಡುತ್ತಿದ್ದ ಮೃದಂಗ ಮಾಂತ್ರಿಕ ಗುಡಿಗಾರರೂ ದಿವಂಗತರಾಗಿದ್ದಾರೆ. ಈಗೇನಿದ್ದರೂ ಹೊಸ ಪೀಳಿಗೆಯ ಹಿಮ್ಮೇಳ ಕಲಾವಿದರು. ತನ್ನ ಕಲಾಜೀವನದಲ್ಲಿ ಅದೆಷ್ಟು ಭಾಗವತರನ್ನು, ಉಳಿದ ಹಿಮ್ಮೆಳ ಕಲಾವಿದರನ್ನು, ಸಹಕಲಾವಿದರನ್ನು ಕಂಡರೋ ಹೆಗಡೆಯವರನ್ನೇ ಕೇಳಬೇಕು. ಸರಿಸುಮಾರು ಮೂರು ತಲೆಮಾರಿನ ಕಲಾವಿದರು ಇವರೊಂದಿಗೆ ಪಾತ್ರಮಾಡಿದ್ದಾರೆ.

ನವರಸಗಳನ್ನೂ ತನ್ನ ಭಾವಾಭಿವ್ಯಕ್ತಿಯಿಂದ ಎದುರುಗಡೆ ಕೂತಿರುವ ಅತಿ ದಡ್ಡ ಪ್ರೇಕ್ಷಕನಿಗೂ ಗೊತ್ತಾಗುವಹಾಗೆ ಅಭಿನಯಿಸಿ ಮಿತ ಅರ್ಥದೊಂದಿಗೆ ಎಲ್ಲೂ ಏನೂ ಕಮ್ಮಿಯಾಗಿಲ್ಲ ಅನ್ನುವ ಹಾಗೇ ನಡೆಸಿಕೊಂಡುಹೋಗಬಲ್ಲ ಸ್ವಸಾಮರ್ಥ್ಯ ಶ್ರೀ ಚಿಟ್ಟಾಣಿಯವರಿಗೆ ಮಾತ್ರ ಇದೆ ಎಂದರೆ ತಪ್ಪಲ್ಲ. ರಾಜ್ಯಪ್ರಶಸ್ತಿಯೊಂದಿಗೆ ಅಸಂಖ್ಯ ಪ್ರಶಸ್ತಿ-ಫಲಕಗಳನ್ನು ತನ್ನದಾಗಿಸಿಕೊಂಡ ಚಿಟ್ಟಾಣಿಗೆ ಪ್ರಶಸ್ತಿಯ-ಗೌರವದ ಬೆನ್ನುಹತ್ತಿ ಹಿಡಿವ ಚಟವಿಲ್ಲ. ನವಿಲಿಗೆ ನರ್ತನ ಕೋಗಿಲೆಗೆ ಗಾಯನ ಹೇಗೆ ಸಹಜ ಪ್ರಕ್ರಿಯೆಯೋ ಚಿಟ್ಟಾಣಿಗೆ ಕುಣಿತವೇ ಸಹಜ ಪ್ರಕ್ರಿಯೆ. ಅಂತೆಯೇ ನವಿಲಿಗೆ ನಿನ್ನ ನರ್ತನ ಚೆನ್ನಾಗಿಲ್ಲವೆಂದೂ ಕೋಗಿಲೆಯಲ್ಲಿ ನಿನ್ನ ಗಾಯನ ಚೆನ್ನಾಗಿಲ್ಲವೆಂದೂ ಹೇಳಲು ಸಾಧ್ಯವೇ? ಹೀಗಾಗಿ ಬಹುಸಂಖ್ಯಾಕ ಪುರಸ್ಕಾರಗಳು ಅವರನ್ನು ಹುಡುಕಿ ಬಂದವು. ಈಗಲೇ ನೀವು ಸನ್ಮಾನ ಮಾಡಿ-ಮರುಕ್ಷಣ ಅದೇ ವೇದಿಕೆಯಲ್ಲಿ ತನ್ನೆಲ್ಲಾ ಕಸುವಿನಿಂದ ಯಾವುದೇ ಅಹಂಕಾರವಿಲ್ಲದೇ ಕುಣಿವ ನವಿಲು ಈ ಚಿಟ್ಟಾಣಿ!

ಈ ಕೆಳಗಿನ ಯೂಟ್ಯೂಬ್ ಕೊಂಡಿಯಲ್ಲಿ ಅದು ಒಮ್ಮೆ ಬಿಟ್ಟು ಬಿಟ್ಟು ಬಂದ ನಂತರ ರೀಪ್ಲೇ ಮಾಡಿ [ಪುನರ್ವೀಕ್ಷಿಸಿ] ಚಿಟ್ಟಾಣಿಯ ಕುಣಿತದ ಒಂದು ಝಲಕ್ ಅನುಭವಿಸಿ-
ಚಿಟ್ಟಾಣಿಯವರಿಗೂ ಹಿಮ್ಮೇಳದವರಿಗೂ ಹಾಗೂ ಯೂಟ್ಯೂಬ್ ಮೂಲಕ ನಮಗಿದನುಣಬಡಿಸಿದ ಗಜಾನನ ಎನ್ನುವವರಿಗೂ ಚಪ್ಪಾಳೆಯ ಬದಲಾಗಿ ಧನ್ಯವಾದಸಮರ್ಪಿಸೋಣವೇ?

ಮೂರು ಗಂಡು ಮಕ್ಕಳಲ್ಲಿ ಇಬ್ಬರು ಯಕ್ಷಗಾನ ಕಲಿತಿದ್ದಾರೆ. ಹಿರಿಯ ಮಗ ಸುಬ್ರಹ್ಮಣ್ಯ ಚಿಟ್ಟಾಣಿ ಕುಣಿತ ಮತ್ತು ಅರ್ಥಗಾರಿಕೆ ಎರಡನ್ನೂ ಮೇಳೈಸಿಕೊಂಡು ಹೊಸತನವನ್ನು ಮೆರೆದಿದ್ದರೆ, ಇನ್ನೊಬ್ಬ ಮಗ ನರಸಿಂಹ ಚಿಟ್ಟಾಣಿ ಅಪ್ಪನ ರೀತಿಯಲ್ಲೇ ಕುಣಿತವನ್ನಷ್ಟೇ ಮಾಡುತ್ತಾರೆ. ಮಗಳೊಬ್ಬಳಿದ್ದು ಮದುವೆಯಾಗಿ ಸುಖದಿಂದಿದ್ದಾರೆ. ಹೀಗೇ ಈಗ ಸುಖೀಕುಟುಂಬದ ಸಾಹಸಸಿಂಹ ಚಿಟ್ಟಾಣಿ ಎಂದರೆ ಅದು ಸಮಂಜಸವೇ ಸರಿ. ಗೇರುಸೊಪ್ಪೆಯ ಹತ್ತಿರದಲ್ಲಿ ಜಮೀನು ಖರೀದಿಸಿ ಅಲ್ಲಿ ಮನೆಮಾಡಿ ನೆಲೆನಿಂತ ಚಿಟ್ಟಾಣಿ ಶತಾಯುಷ್ಯವನ್ನೂ ಮೀರಿ ಬದುಕಿಬಾಳಿ ಇನ್ನೂ ಹಲವುಕಾಲ ಇದೇ ಉತ್ಸಾಹದಲ್ಲಿ ಯುವ ಪೀಳಿಗೆಗೆ ತನ್ನ ಪಾತ್ರ ಪ್ರದರ್ಶಿಸಲಿ ಎಂದು ನಾವೆಲ್ಲ ಹಾರೈಸೋಣವೇ?

Friday, July 16, 2010

ಮೂಕ ರೋದನ !

ವೇದದ ಮಹತ್ವವನ್ನರಿಯುವ ಮತ್ತು ವೇದ ಸಂತುಲಿತ ಜೀವನವನ್ನು ನಡೆಸಲು ಬಯಸುವ ಎಲ್ಲ ದೇಶಬಾಂಧವರ ಆದ್ಯ ಕರ್ತವ್ಯ ವೇದದಷ್ಟೇ ಮಹತ್ವವನ್ನು ಪಡೆದು ನಮ್ಮೆಲ್ಲರ ಜೀವನದ ಅವಿಭಾಜ್ಯ ಅಂಗವಾಗಿರುವ ಗೋಮಾತೆಯ ರಕ್ಷಣೆ. ಅದರಲ್ಲೂ ಭಾರತೀಯ ಗೋ ತಳಿಗಳು ದಿನೇ ದಿನೇ ಕ್ಷೀಣಿಸುತ್ತಿವೆ. ಉತ್ತರಕರ್ನಾಟಕದ ಬಹುಭಾಗಗಳಲ್ಲಿ ದಲ್ಲಾಳಿಗಳಿಗೆ ರಾಸುಗಳ ಮಾರಾಟ್ ನಡೆದೇ ಇದೆ. ಇದೀಗ ಕರ್ನಾಟಕ ಸರಕಾರ ಗೋನಿಷೇಧ ಕಾಯ್ದೆಯನ್ನು ಜಾರಿಗೊಳಿಸುವುದರಿಂದ ಆಕಳುಗಳನ್ನು ಕಾಳಸಂತೆಯಲ್ಲೋ ಅಥವಾ ಹೊರನಾಡಿಗರಿಗೋ, ಪರನಾಡಿಗರಿಗೋ ಮಾರಾಟಮಾಡುತ್ತಾರೆ. ಬದುಕಲು ಗಂಜಿಹುಡುಕುವ ಸ್ಥಿತಿಯಲ್ಲಿರುವ ರೈತ ತನ್ನುಳಿವಿಗಾಗಿ ಇಂತಹ ಮುಗ್ಧ, ಸಾತ್ವಿಕ ಜೀವಿಗಳನ್ನು ಬಲಿಕೊಡುತ್ತಿದ್ದಾನೆ. ಇದನ್ನು ತಪ್ಪಿಸಲು ಮಠ-ಮಾನ್ಯಗಳು ಪಹರೆ ನಡೆಸುತ್ತಿದ್ದರೂ, ಜನ ಜಾಗ್ರತಿ ಹಮ್ಮಿಕೊಂಡಿದ್ದರೂ ಇದಿನ್ನೂ ಪೂರ್ತಿಯಾಗಿ ಅಳವಡಿಕೆಯಾಗಿಲ್ಲ.

ದಿನವೂ ಹುಲ್ಲು-ನೀರನ್ನು ಸ್ವೀಕರಿಸುತ್ತ ಅಮೃತತುಲ್ಯ ಹಾಲನ್ನು ನಮಗೀಯುವ ಗೋವು ನಮಗೆಲ್ಲ ಪ್ರಾತಃಸ್ಮರಣೀಯ, ಮಾತ್ರವಲ್ಲ ನೀವೆಲ್ಲ ತಿಳಿದಂತೆ ಗೋವಿನಲ್ಲಿಯೇ ಎಲ್ಲಾ ದೇವತೆಗಳ ವಾಸವಿದೆ ಎಂದು ಭಾವಿಸಿದ್ದೇವೆ ನಾವು. ನಮ್ಮ ಗೃಹಪ್ರವೇಶಕ್ಕಾಗಲೀ ಒಳ್ಳೆಯ ಕಾರ್ಯಕ್ರಮಗಳಲ್ಲಾಗಲೀ ಗೋಪೂಜೆ ಕಡ್ಡಾಯವಾಗಿದೆ -ಇದು ನಮ್ಮ ಆರ್ಷೇಯ ವೇದ ಸಂಸ್ಕೃತಿ. ಉಂಡಮನೆಗೆ ಎರಡು ಬಗೆಯಬೇಡ ಎನ್ನುವುದು ಗಾದೆ, ಆದರೆ ಹಾಲುಂಡ ಮನೆಯನ್ನೇ ನಾವು ಕೆಡವಲು ಹೊರಟಿದ್ದೇವೆ. ವನ್ಯ ಪ್ರಾಣಿಗಳಿಗಾದರೂ ರಕ್ಷಣೆ ಇದೆ ಆದರೆ ನಮ್ಮ ನಡುವೆಯೇ ಇದ್ದು ನಿತ್ಯವೂ ನಮಗೆ ಹಾಲನ್ನು ಸುರಿಸಿ ಬದುಕು ಹಸನಾಗಿಸುವ ಗೋಮಾತೆಯನ್ನು ಮಾತ್ರ ನಾವು ಉಡಾಫೆಮಾತುಗಳಿಂದ ಇನ್ನೂ ಇನ್ನೂ ಇನ್ನೂ ದೂರ ಇಟ್ಟಿದ್ದೇವೆ.

ಕಾಲಘಟ್ಟದಲ್ಲಿ ವೇದದ ತತ್ವ ಸಾರುತ್ತದೆ - ಬೆಳಿಗ್ಗೆ ಎದ್ದು ಶೌಚಾದಿ ನಿತ್ಯಕರ್ಮ ಮುಗಿಸಿ ರಾತ್ರಿ ಕಂಡ ಕೆಟ್ಟ ಕನಸಿನಿಂದ ನೊಂದಿದ್ದರೆ ಅದನ್ನು ಗೋವಿನ ಕಿವಿಯಲ್ಲಿ ಹೇಳಿ ಪ್ರಾರ್ಥಿಸು ! ತಮಗೆಲ್ಲ ಇದು ತಿಳಿದಿರಬಹುದು. ನನ್ನ ತಂದೆಯ ದಿನಚರಿ ಇವತ್ತಿಗೂ ಇದೇ ಇದೆ. ಇದರರ್ಥ ಗೋವು ನಮ್ಮ ಅಹವಾಲನ್ನು ಸ್ವೀಕರಿಸುತ್ತದೆ ಎಂದಲ್ಲವೇ? ಅದೇ ಬಯಲುನಾಡಿನ ಮಠವೊಂದರಲ್ಲಿ ಮೂಕಪ್ಪ ಸ್ವಾಮಿಗಳೆಂಬ ಹೆಸರಿನಲ್ಲಿ ಯಾವ ಒಬ್ಬ ಸನ್ಯಾಸಿಗೂ ಕಡಿಮೆ ಇರದ ಆಚರಣೆ ತೋರುವ ಮೂಕ ಬಸವ ಸ್ವಾಮಿಗಳನ್ನು ನಾವು ನೋಡುತ್ತೇವೆ. ಅಂದಮೇಲೆ ಕೇವಲ ಮಾತು ಬಂದರೆ ಮಾತ್ರ ಎಲ್ಲವೂ ತಿಳಿಯುತ್ತದೆ ಇಲ್ಲದಿದ್ದರೆ ಇಲ್ಲ ಎಂಬ ನಮ್ಮ ಭಾವನೆ ಸಲ್ಲ. ಆದರೂ ದೈವ ಕೊಟ್ಟ ಆ ಶರೀರದಲ್ಲಿ ತನ್ನನ್ನು ತಾನು ಉಳಿಸಿಕೊಳ್ಳಲು ಬೇಕಾಗಿ ಹೋರಾಡುವ ಅನುಕೂಲಗಳಿಲ್ಲ.

ಅನುಭಾವಿಗಳಾದ ತಮಗೆಲ್ಲ ಹೆಚ್ಚಿಗೆ ಹೇಳಿ ಕೇಳಲಾರೆ. ನನ್ನದೊಂದು ಸಣ್ಣ ಕೋರಿಕೆ, ಎಲ್ಲೆಲ್ಲಿ ಇಂತಹ ಅನಾಹುತಗಳು ನಡೆಯುತ್ತವೆಯೋ ಅದನ್ನು ತಡೆಗಟ್ಟಲು ನಾವೆಲ್ಲ ಶ್ರಮಿಸೋಣ ಎಂಬುದು. ಇದಕ್ಕೆ ತಮ್ಮೆಲ್ಲರ ಸಹಮತವನ್ನು ಯಾಚಿಸುತ್ತೇನೆ. ದಯವಿಟ್ಟು ನಾವು ಬದುಕುಪೂರ್ತಿ ಹಾಲುಂಡ ಮನೆಗೆ ಎರಡು ಬಗೆಯುವುದು ಬೇಡ ಅಲ್ಲವೇ?


ಸಚಿತ್ರ ಸುದ್ದಿ ಋಣ -ವಿಜಯಕರ್ನಾಟಕ ದಿನಪತ್ರಿಕೆ

[ಮೇಲಿನ ಚಿತ್ರವನ್ನು ಕ್ಲಿಕ್ಕಿಸಿ ದೊಡ್ಡದು ಮಾಡಿ ಸುದ್ದಿ ತಿಳಿದುಕೊಳ್ಳಬಹುದು]


ಮೂಕ ರೋದನ !


ನನ್ನೊಡೆಯ ಗೆಣೆಕಾರ ನಿನಗೆರಗಿ ಬೇಡುವೆನು
ಮಾರದಿರು ನನ್ನನೀಗ
ಚೆನ್ನಾಗಿ ಬಾಳೆಂದು ಮನಪೂರ್ತಿ ಹರಸಿಹೆನು
ತೂರದಿರು ಕಟುಕಗೀಗ

ಹನ್ನೆರಡು ಮಕ್ಕಳನು ಹೆತ್ತು ಕೊಟ್ಟೆನು ನಿನಗೆ
ಹಾಲುಣಿಸಿ ಬಹಳ ದಿನವು
ಇನ್ನೆರಡು ವರುಷದಲಿ ಆಯುಷ್ಯ ಮುಗಿಯುವುದು
ನೀರುಣಿಸು ಉಳಿದ ದಿನವೂ

ನಿನ್ನ ಮಕ್ಕಳ ಕಂಡೆ ಮಡದಿ ಕೊಟ್ಟುದನುಂಡೆ
ನನ್ನೆಣಿಕೆ ಮೀರಿ ನೆಡೆದು
ಮುನ್ನ ಹಾಲೀವಾಗ ಪ್ರೀತಿ ಸಿಹಿಸಿಹಿಯುಂಡೆ
ಇನ್ನದಕೆ ಜೀವ ಬರದು !

ಒಡೆಯ ಕೈಮುಗಿಯುವೆನು ಕಣ್ಣಲ್ಲೇ ಪ್ರಾರ್ಥಿಪೆನು
ಅಡಿಗಳಿಗೆ ಎರಗಿ ನಾನು
ಬಡವಾಯ್ತು ಈ ಜೀವ ಸಹಿಸಲಾರದು ನೋವ
ಒಡನಾಡಿ ಕ್ಷಮಿಸೆಯೇನು ?

ಹಣದ ಥೈಲಿಯ ಹುಡುಕಿ ಕಣಕಣದಿ ಅದ ನೆನೆದು
ಗುಣಮರೆತು ಹೋದೆಯಲ್ಲಾ?
ಹೆಣಗಾಟವೀ ಬದುಕು ದೈವ ಚಿತ್ರಿತ ತೊಡಕು
ಒಣಗುತಿದೆ ದೇಹವೆಲ್ಲ !

ಹುಲ್ಲು-ಕಸವನು ತಿಂದು ಸಿಗುವಂತ ನೀರ್ಕುಡಿದು
ಹಾಲೆರೆದೆ ಭವದಿ ನಿಮಗೆ
ಕಲ್ಲು-ಮಣ್ಣೊಳಗಿಟ್ಟು ಮುಚ್ಚಿಬಿಡು ದೇಹವನು
ಅಲ್ಲಿಗದು ಸಾಕು ನನಗೆ

Thursday, July 15, 2010

ದೊಡ್ಡವರಾಗಿ !ದೊಡ್ಡವರಾಗಿ !


ಇದೇನಪ್ಪಾ ನಾವೆಲ್ಲಾ ದೊಡ್ಡವರಾಗಿ ಬಹಳ ಸಮಯವೇ ಸರಿಯಿತಲ್ಲ, ಇನ್ನೂ ದೊಡ್ಡವರಾಗಿ ಎಂದರೆ ಏನಿದರರ್ಥ ಎಂಬ ಯೋಚನೆ ಸಹಜ. ಆದರೆ ದೊಡ್ಡವರಾಗಿ ಎನ್ನಲು ಕಾರಣವಿದೆ. ಅದನ್ನು ಮುಂದೆ ನೀವೇ ತಿಳಿಯುತ್ತೀರಿ.

ಬಹಳ ಜನ ಹಾಗೇ ಗಾಳಿಗೆ ಮುದುಕರಾಗಿಬಿಟ್ಟಿದ್ದಾರೆ ಎನ್ನುವುದು ನಮ್ಮಲ್ಲಿನ ಒಂದು ಮಾತು! ಗಾಳಿಗೆ ಮುದುಕಾಗುವುದು ಅಂದರೇನು ? ಬದುಕಿನಲ್ಲಿ ಯಾವೊಂದೂ ಸಣ್ಣ ಜವಾಬ್ದಾರಿಯನ್ನೂ ಹೊರದೇ, ಹಲವಕ್ಕೆ ಪರಾವಲಂಬಿಯಾಗಿ, ಸ್ವಾರ್ಥಿಯಾಗಿ ಬರೇ ತನ್ನ ಬದುಕೊಂದನ್ನೇ ನೋಡಿಕೊಂಡಿರುವ ಹಲವು ವಿಷಯಗಳಲ್ಲಿ ಅನುಭವ ಶೂನ್ಯರಾದ ವ್ಯಕ್ತಿಗಳನ್ನು ತಮಾಷೆಗೆ ’ಗಾಳಿಗೆ ಮುದುಕಾದವರು’ ಅಥವಾ ಗಾಳಿಗೇ ಕೂದಲೆಲ್ಲ ಹಣ್ಣಾದವರು ಎನ್ನುವುದು ನಮ್ಮಲ್ಲಿನ ವಾಡಿಕೆ!

ಮನುಷ್ಯ ಬೆಳೆಯ ಬೇಕಾದರೆ ತನ್ನೊಳಗಿನ ಹಲವು ಅನಿಷ್ಟಗಳನ್ನು ತೊಡೆದುಹಾಕಬೇಕು. ಅದರಲ್ಲಿ ಮುಖ್ಯವಾದವು ಅಸೂಯೆ ಮತ್ತು ಸಣ್ಣತನ! ನಮ್ಮ ಸಹೋದ್ಯೋಗಿಗೆ ಪ್ರಮೋಶನ್ ಬಂದಿದ್ದಕ್ಕಾಗಿ, ಪಕ್ಕದ ಮನೆಯವರಿಗೆ ಲಾಟರಿಯಲ್ಲಿ ಲಕ್ಷರೂಪಾಯಿ ಸಿಕ್ಕಿದ್ದಕ್ಕಾಗಿ, ಎದುರು ಮನೆ ಹುಡುಗಿ ನಮ್ಮ ಮಗಳಿಗಿಂತ ಹೆಚ್ಚಿನ ಅಂಕ ಗಳಿಸಿದ್ದಕ್ಕಾಗಿ, ಆಚೆಮನೆ ಸೀತಮ್ಮ ಸುಂದರ ರೇಷ್ಮೆ ಸೀರೆ ಖರೀದಿಸಿದ್ದಕ್ಕಾಗಿ, ವಿಪಕ್ಷದಲ್ಲಿ ಕುಳಿತ ನಮಗೆ ಆಡಳಿತ ನಡೆಸುತ್ತಿರುವ ಪಕ್ಷದ ಯಾವುದೋ ಸಾಧನೆ ಧುತ್ತೆಂದು ಕಣ್ಣಿಗೆ ಬಿದ್ದುದಕ್ಕಾಗಿ, ಅಷ್ಟೆಲ್ಲಾ ಪ್ರೀತಿಸುತ್ತಿದ್ದ ಆ ಹುಡುಗಿ ಕೈಕೊಟ್ಟು ಇನ್ನೊಬ್ಬನ ಜೊತೆ ಮದುವೆಯಾಗುತ್ತಿರುವುದಕ್ಕಾಗಿ, ಇದೇ ಓಣಿಯ ಕೊನೇ ಮನೆಯಲ್ಲಿರುವ ಚಿಕ್ಕ ಹುಡುಗ ರಮೇಶ ಸಾಫ್ಟ್ ವೇರ್ ಎಂಜಿನೀಯರ್ ಆಗಿ ರಾಶಿ ಸಂಬಳ ಪಡೆಯುತ್ತಿರುವುದಕ್ಕಾಗಿ ಹೀಗೆ ಹಲವಾರು ಕಾರಣಗಳಿಗೆ ನಾವು ಒಂದಿಲ್ಲೊಂದು ಸಮಯ ಮತ್ಸರಿಸುತ್ತೇವೆ. ನಮಗೆ ದಕ್ಕದ ಆ ಭಾಗ್ಯಕ್ಕಾಗಿ ಕೈಕೈ ಹಿಸುಕಿಕೊಳ್ಳುತ್ತೇವೆ, ಆಡಲೂ ಆಗದೆ ಅನುಭವಿಸಲೂ ಆಗದೆ ನಮ್ಮೊಳಗೇ ನಾವು ಕಾಯುತ್ತೇವೆ-ಬೇಯುತ್ತೇವೆ! ಒಂದು ಕ್ಷಣ ವಿವೇಚಿಸಿದರೆ ನಮಗೆ ತಿಳಿದು ಬರುವ ಸೀದಾ ಸಾದಾ ಅಂಶ-ನಾವು ನಮಗೆ ಸಂಬಂಧವೇ ಇಲ್ಲದ ಯಾವುದೋ ವಿಷಯಕ್ಕಾಗಿ ಅಷ್ಟೆಲ್ಲಾ ತಲೆಕೆಡಿಸಿಕೊಂಡಿರುತ್ತೇವೆ. ಇದು ಬೇಕೆ?

ಹಿಂದಕ್ಕೆ ಅವಿಭಕ್ತ ಕುಟುಂಬ ಪದ್ಧತಿ ಜಾರಿಯಲ್ಲಿತ್ತು. ಇಂದು ಕೇವಲ ಟಿ.ವಿ. ಪರದೆಯಲ್ಲಿ ಅಪರೂಪಕ್ಕೆ ಕಾಣಬಹುದಾದ ಇಂತಹ ಕುಟುಂಬಗಳು ಹಿಂದೆ ಬಹಳವಾಗಿದ್ದವು. ಅಲ್ಲಿ ಅಜ್ಜ-ಅಜ್ಜಿ, ಅಪ್ಪ-ಅಮ್ಮ, ದೊಡ್ಡಪ್ಪ-ದೊಡ್ಡಮ್ಮ, ಚಿಕ್ಕಪ್ಪ-ಚಿಕ್ಕಮ್ಮ, ಅತ್ತೆ, ಚಿಕ್ಕಪ್ಪನ ಮಕ್ಕಳು, ದೊಡ್ಡಪ್ಪನ ಮಕ್ಕಳು, ಮತ್ತೊಬ್ಬ ದೊಡ್ಡಪ್ಪನ ಕುಟುಂಬ ಮತ್ತು ಅವರ ಮಕ್ಕಳು, ಇನ್ನೊಬ್ಬ ಸಣ್ಣ ಚಿಕ್ಕಪ್ಪ-ಅವರ ಕುಟುಂಬ-ಮಕ್ಕಳು ಹೀಗೇ ಹಲವಾರು ಅಣ್ಣ-ತಮ್ಮಂದಿರು ಸೇರಿ ಒಂದೇ ಮನೆಯಲ್ಲಿ ಅಡಿಗೆ-ಊಟ-ಆಟ ಎಲ್ಲವನ್ನೂ ನಡೆಸುತ್ತ ಹಾಯಾಗಿ ಸುಖದಿಂದಿದ್ದರು. ಮನೆಯಲ್ಲಿ ಯಾರಾದರೂ ಚಿಕ್ಕ ಮಕ್ಕಳಿದ್ದರೆ ಅವುಗಳ ಆರೈಕೆಯನ್ನು ಮುದಿ ಜೀವಗಳು ಕೈಲಾಗುವವರೆಗೂ ಬಹಳವಾಗಿ ನಡೆಸಿಕೊಡುತ್ತಿದ್ದವು. ಮಕ್ಕ್ಳಿಗೆ ಕಥೆ-ಕವನ, ದೇವರ ಸ್ತೋತ್ರ ಇವುಗಳನ್ನೂ ನೀತಿ ಕಥೆ-ಪಂಚತಂತ್ರದ ಕಥೆ ಇವುಗಳನ್ನೆಲ್ಲಾ ಹೇಳುತ್ತಾ ಮುಂದಿನ ಪೀಳಿಗೆಗೆ ಬೇಕಾಗುವ ನೈತಿಕತೆಯನ್ನು ಆ ಮೂಲಕ ಕುಟುಂಬದ ಹಿರಿಯರು ಧಾರೆ ಎರೆಯುತ್ತಿದ್ದರು. ಇಂತಹ ಕುಟುಂಬಗಳಲ್ಲಿ ಬಟ್ಟೆ-ಬರೆ ಖರೀದಿ, ಹೆಂಗಸರಿಗೆ ಬೇಕಾಗುವ ಬಳೆ-ಓಲೆ ಇತ್ಯಾದಿ ಖರೀದಿ, ಮಕ್ಕಳ ಆಟಿಕೆ ಖರೀದಿ, ಶಾಲೆಗೆ ಹೋಗುವ ಒಂದೇ ಓರಗೆಯ [ಅಣ್ಣ-ತಮ್ಮಂದಿಅರ್ ಮಕ್ಕಳು]ಮಕ್ಕಳಿಗೆ ಪುಸ್ತಕಗಳ ಖರೀದಿ ಇವನ್ನೆಲ್ಲ ಒಟ್ಟಾಗಿ ಒಂದೇ ಸಲ ಮಾಡುತ್ತಿದ್ದರು. ಅಂಗಿ, ಸೀರೆ, ಮಕ್ಕಳ ಅಂಗಿ-ಚಡ್ಡಿ ಇಂತಹ ಬಟ್ಟೆಗಳನ್ನು ಸ್ಕೂಲ್ ಯೂನಿಫಾರ್ಮ್ ಇದ್ದಹಾಗೇ ಪನ್ನಾ ಲೆಕ್ಕದಲ್ಲಿ ಒಟ್ಟಿಗೇ ಖರೀದಿಸಿ ಅಮೇಲೆ ಅವರವರ ಅಳತೆಗೆ ತಕ್ಕಂತೆ ಹೊಲಿಸಿಕೊಳ್ಳುತ್ತಿದ್ದರು. ಕೇವಲ ವರ್ಷಕ್ಕೊಂದಾವರ್ತಿ ಜವಳಿ ತರುವುದು ಅಂತಲೇ ಇರುತ್ತಿತ್ತು. ಮನೆಯ ಯಾರಿಗೇ ಯಾವುದೇ ಹೆಚ್ಚು-ಕಮ್ಮಿ ಎನಿಸಿದರೂ ಹೊಂದಾಣಿಕೆಯೇ ಜೀವನದ ಸೂತ್ರವಾಗಿತ್ತು. ವಸ್ತು-ಒಡವೆಗಳನ್ನು ಸಂಖ್ಯೆಯಲ್ಲಿ ಕಮ್ಮಿ ಇದ್ದರೆ ಯಾರದರೂ ಉದಾರವಾಗಿ ಅದನ್ನು ಕೆಲವರು ಬಳಸಿಕೊಳ್ಳಲಿ ಎಂದು ಸುಮ್ಮನಿರುತ್ತಿದ್ದರು.

ಇಂತಹ ಒಂದು ಮನೆಯಲ್ಲಿ ಇಬ್ಬರು ಚಿಕ್ಕ ಹೆಣ್ಣುಮಕ್ಕಳು [ಅಣ್ಣ-ತಮ್ಮನ ಮಕ್ಕಳು] ಒಂದೇ ಇರುವ ಮಲ್ಲಿಗೆಯ ದಂಡೆಗಾಗಿ ಜಗಳಕಾದರು. ಒಬ್ಬಳ ಅಪ್ಪ ಮಧ್ಯೆ ಬಂದು ತನ್ನ ಮಗಳನ್ನು ಚೆನ್ನಾಗಿ ಗದರಿಸಿ ಇಸಿದುಕೊಂಡು ಇನ್ನೊಬ್ಬ ಹುಡುಗಿಗೆ ಅದನ್ನು ಕೊಟ್ಟ. ಆ ಹುಡುಗಿ ಸಂತೋಷಗೊಂಡು ತನ್ನ ತಂದೆ-ತಾಯಿಯೆಡೆಗೆ ನಡೆದಳು.--ಇಲ್ಲಿ ಮೊದಲನೇ ಹುಡುಗಿ ತನ್ನ ಕೈಲಿರುವ ಮಲ್ಲಿಗೆ ದಂಡೆಯನ್ನು ತ್ಯಾಗಮಾಡ್ಬೇಕಾಯಿತು, ಹಾಗೆ ಮಾಡಲು ಮನಸ್ಸು ಮಾಡಿಸಿದ್ದು ಈ ಹುಡುಗಿಯ ಅಪ್ಪ. ಈತನಿಗೆ ಆ ಇನ್ನೊಬ್ಬ ಹುಡುಗಿ ತನ್ನ ಸಹೋದರನ ಮಗಳೇ ತಾನೆ-ಚೆನ್ನಾಗಿರಲಿ ಎಂಬ ಭಾವವಿತ್ತು. ತನ್ನ ಮಗಳಿಗೆ ಇಲ್ಲದಿದ್ದರೂ ಸರಿ ಅವಳು ಚೆನ್ನಗಿರಲಿ ಎಂದು ದೊಡ್ಡಮನಸ್ಸಿನಿಂದ ಇಸಿದುಕೊಟ್ಟಿದ್ದಾನೆ. ಈ ಥರದ ಹಲವು-ಹತ್ತು ಘಟನೆಗಳು ಅವಿಭಕ್ತ ಕುಟುಂಬಗಳಲ್ಲಿ ಹಾಸುಹೊಕ್ಕಾಗಿದ್ದವು. ಅಲ್ಲಿ ದುಡ್ಡಿನ ದುರಹಂಕಾರವಿರಲಿಲ್ಲ, ಬಡತನದ ಬವಣೆ ಗೊತ್ತಿರಲಿಲ್ಲ. ಇಡೀ ಕುಟುಂಬದ ಸದಸ್ಯರು ಒಟ್ಟಾಗಿ ದುಡಿಯುತ್ತಿದ್ದರು, ಒಟ್ಟಾಗಿ ತಿನ್ನುತ್ತಿದ್ದರು, ಒಟ್ಟಾಗಿ ಕುಳಿತು ದೈನಂದಿನ ಆಗು-ಹೋಗುಗಳನ್ನು ಪರಸ್ಪರ ಮೆಲುಕು ಹಾಕುತ್ತಿದ್ದರು. ಒಬ್ಬರ ಅನುವು-ಆಪತ್ತಿನಲ್ಲಿ ಇಡೀ ಕುಟುಂಬವೇ ನೆರವಿಗೆ ನಿಲ್ಲುತ್ತಿತ್ತು. ಒಬ್ಬ ಕಾಯಿಲೆಯಿಂದ ಬಳಲುತ್ತಿದ್ದರೆ ಮಿಕ್ಕುಳಿದವರು ಆತನೂ ಸೇರಿದಂತೆ ಆತನ ಕುಟುಂಬವನ್ನು ಪೊರೆಯುತ್ತಿದ್ದರು! ಅಲ್ಲಿ ಅನ್ಯೋನ್ಯತೆ ಇತ್ತು, ಪ್ರೀತಿ ಇತ್ತು, ವಿಶ್ವಾಸವಿತ್ತು, ಅವಲಂಬನೆ ಹಿತಮಿತವಾಗಿತ್ತು, ಪ್ರಾಮಾಣಿಕತೆ ಇತ್ತು, ದುಡಿಯುವ ಮನೋಭಾವವಿತ್ತು, ಹಂಚಿತಿನ್ನುವ ದೊಡ್ಡತನವಿತ್ತು.

ಅಧುನಿಕೀಕರಣದಿಂದಾಗಿ ಅವಿಭಕ್ತ ಕುಟುಂಬಗಳು ಬಹುಪಾಲು ವಿಭಕ್ತವಾದವು-ಮಾಯವಾದವು, ಚಿಕ್ಕ ಚಿಕ್ಕ ವಿಭಜಿತ ಕುಟುಂಬಗಳು ಪೇಟೆ ಪಟ್ಟಣ ಸೇರಿದವು. ಅಲ್ಲಿರುವ ಚಿಕ್ಕ ಮಕ್ಕಳನ್ನು ನೋಡಿಕೊಳ್ಳಲು ಹಿರಿಯರು ಯಾರೂ ಇರಲಿಲ್ಲ! ನೀತಿಕಥೆ, ರೀತಿ-ರಿವಾಜು ಇವುಗಳನ್ನು ತಿಳಿಸಿಕೊಡಲು ಅಪ್ಪ-ಅಮ್ಮಗೆ ಪುರುಸೊತ್ತಿಲ್ಲ! ಶಾಲೆಯಿಂದ ಬರುವ ಮಗುವನ್ನು ಮನೆಯಲ್ಲಿ ಸ್ವಾಗತಿಸುವುದು ಬೀಗಹಾಕಿದ ಬಾಗಿಲು! ಅನಾರೋಗ್ಯ ಪೀಡಿತ ಗಂಡನಿಗೆ ಊಟ ಅಂತ ಅಲ್ಲೆಲ್ಲೋ ಮಾಡಿಟ್ಟು ಕೆಲಸಕ್ಕೆ ಹೋಗುವ ಹೆಂಡತಿ, ಕಾಯಿಲೆಬಿದ್ದ ಹೆಂಡತಿಯನ್ನು ಮೂತ್ರವಿಸರ್ಜಿಸಲು ಕರೆದುಕೊಂಡು ಹೋಗಲು ಸಮಯವಿರದ ಗಂಡ, ಬೆಳಗಿನ ಧಾವಂತದಲ್ಲಿ ಹೋಟೆಲಿನದೇ ತಿಂಡಿ-ಅರ್ಧ ಬೆಂದ ಇಡ್ಲಿ ತಿಂದು ಸ್ವಲ್ಪ ಅದನ್ನೇ ಕಟ್ಟಿಕೊಂಡು, ಮಗುವಿಗೆ ಅದನ್ನೇ ತುರುಕಿ ಎಲ್ಲರೂ ಅವರವರ ಅಖಾಡಾಕ್ಕೆ ಪ್ರಯಾಣ, ಸಮಯ ಮೀರಿದ್ದಕ್ಕೆ ನಾಲ್ಕು ಗರಮ್ ಮಾತು- ಸಂಸಾರದ ದೋಸೆ ತೂತು! ಇಂತಹ ಪರಿಸರದಲ್ಲಿ ೪೦ ವಯಸ್ಸಿಗೇ ದಂಪತಿಗೆ ಬಿ.ಪಿ., ಶುಗರು ಇವೆಲ್ಲಾ ಕೇವಲ ಮಾನಸಿಕ ಒತ್ತಡದ ಪರಿಣಾಮ, ಈ ಮಾನಸಿಕ ಒತ್ತಡ ಹೆಚ್ಚಿನ ಮನೆಗಳಲ್ಲಿ ವಿಭಕ್ತ ಕುಟುಂಬದಲ್ಲಿನ ಅನಿವಾರ್ಯತೆಯ ಪರಿಣಾಮ!

" ತಮ್ಮಾ ಆರಾಮೇನೋ " ಎಂದು ಹಳ್ಳಿಯಿಂದ ಅಣ್ಣ ದೂರವಾಣಿಯಲ್ಲಿ ಮಾತನಾಡಿದರೆ ಮನಸ್ಸು ತುಂಬಿಬರುತ್ತದೆ. ಅವಿಭಕ್ತ ಕುಟುಂಬದ ಆ ಆಪ್ತತೆ ಇನ್ನೆಲ್ಲಿ ಎಂದು ಮನಸ್ಸಿಗೆ ಅದರ ಅಲೆಬಂದು ಅಪ್ಪಳಿಸುತ್ತದೆ. ಅಣ್ಣನ ಮುಂದೆ ತಮ್ಮ ಸಣ್ಣವನೇ ಆಗಿದ್ದರೂ ಬದುಕು ಕೊಟ್ಟ ನೋವಿನಿಂದ ಇನ್ನೂ ಸಣ್ಣವನಾಗಿಬಿಡುತ್ತಾನೆ. ಅಣ್ಣ ಎದುರಿಗೆ ಬಂದರೆ ಅವನನ್ನು ಆತುಕೊಂಡು ಗೋಳೋ ಎಂದು ದೊಡ್ಡದಾಗಿ ಅತ್ತುಬಿಡುವಾ ಎನಿಸುತ್ತದೆ! ಅಣ್ಣ ಊರಲ್ಲಿದ್ದು ಅಪ್ಪ-ಅಮ್ಮನನ್ನಾದರೂ ಸೇವೆಗೈಯ್ಯುತ್ತಿದ್ದಾನೆ ಆದರೆ ತಾನು ಸ್ವಾರ್ಥಿಯಾಗಿ ತನ್ನ ಕುಟುಂಬವನ್ನು ಮಾತ್ರ ಹೊಟ್ಟೆಹೊರೆದುಕೊಳ್ಳುತ್ತ ಹಲವಾರು ಒತ್ತಡ-ಜಂಜಡಗಳ ಮಧ್ಯೆ ಯಾಕಪ್ಪಾ ಸಿಕ್ಕಿಹಾಕಿಕೊಂಡೆ ಎಂದೆನಿಸುತ್ತದೆ ಆ ತಮ್ಮನಿಗೆ!

ಬಹುತೇಕ ವಿಭಕ್ತ ಮನೆಗಳಲ್ಲಿ ಇದಕ್ಕೆ ಮೂಲಕಾರಣ ಹೆಂಗಳೆಯರಾಗಿರುತ್ತಾರೆ. ಅವರು ದೊಡ್ಡವರಾಗಿರುವುದಿಲ್ಲ! ಅವರ ಸಣ್ಣತನ ಇಡೀ ಕುಟುಂಬದ ಸೌಹಾರ್ದತೆಯನ್ನೇ ಬಲಿತೆಗೆದುಕೊಳ್ಳುತ್ತದೆ. "ನನಗೆ ನಿಮ್ಮ ಅಪ್ಪ-ಅಮ್ಮನ ಜೊತೆ, ಅಣ್ಣ-ಅತ್ತಿಗೆ ಜೊತೆ ಇರಲು ಸಾಧ್ಯವಿಲ್ಲ, ಬೇಕಾದರೆ ಬೇರೆ ಮನೆ ಮಾಡಿ, ಇಲ್ಲಾಂದರೆ ನನ್ನ ದಾರಿ ನನಗೆ-ನಿಮ್ಮ ದಾರಿ ನಿಮಗೆ" ಎಂದು ಸವಾಲೊಡ್ಡಿ ಬಡಗಂಡನಿಗೆ ವಿಭಜಿಸುವ ಸೂತ್ರದ ಕಂಕಣಕಟ್ಟುವ ಜನ ಇವರೇ! ಎಲ್ಲೋ ಕೆಲವೊಮ್ಮೆ ಅಪವಾದವಿರಬಹುದುಷ್ಟೇ.

ಇನ್ನೊಂದು ಘಟನೆ, ಒಂದು ಕಡೆ ಇಬ್ಬರು ಒಂದೇ ಊರಿನ ಹುಡುಗಿಯರು ಸೇರಿ ಒಂದು ಕೋಣೆ ಬಾಡಿಗೆಗೆ ಪಡೆದು ಪಟ್ಟಣದಲ್ಲಿ ಓದುಮುಂದುವರಿಸುತ್ತಿದ್ದರು. ಅವರು ದಿನಾಲೂ ಅಧ ಲೀಟರ್ ಹಾಲು ಖರೀದಿಸಿ ಉಪಯೋಗಿಸುತ್ತಿದ್ದರು. ಆವರಲ್ಲಿ ಒಬ್ಬಳಿಗೆ ಹಾಲು ಸ್ವಲ್ಪ ಕಡಿಮೆ ಸಾಲುತ್ತಿತ್ತು. ಇನ್ನೊಬ್ಬಳು ಸ್ವಲ್ಪ ಹಾಲು ಕುಡಿಯುವ ತರಗತಿಯವಳು. ಇದನ್ನೇ ಸದಾ ನೋಡುತ್ತಿದ್ದ ಮೊದಲನೆಯವಳಿಗೆ ತನ್ನ ಸ್ನೇಹಿತೆ ತನಗಿಂತ ಹಾಲನ್ನು ಜಾಸ್ತಿ ಉಪಯೋಗಿಸುವುದು ಖರ್ಚಿನ ವಿಷಯದಲ್ಲಿ ಸಹಿಸಲಾಗಾಲಿಲ್ಲ. ಶುರು ತಗೊಳಿ-ಮಾರನೇ ದಿನದಿಂದಲೇ ಅವರು ಅರ್ಧರ್ಧ ಲೀಟರ್ ಪ್ರತ್ಯೇಕ ತೆಗೆದುಕೊಂಡು ಪ್ರತ್ಯೇಕವಾಗಿ ಇಟ್ಟುಕೊಳ್ಳಹತ್ತಿದರು. ಮುಂದೆ ಆ ಇಬ್ಬರಲ್ಲಿ ಮೊದಲನೆಯವಳು ಯಾವುದೋ ಕಂಪನಿಯಲ್ಲಿ ಸ್ವಾಗತಕಾರಿಣಿಯಾದರೆ ಎರಡನೆಯವಳು ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಮ್ಯಾನೇಜರ್ ಆದಳು. ಇದರರ್ಥ ಹಾಲು ಜಾಸ್ತಿ ಕುಡಿಯುವವರು ದೊಡ್ಡ ಹುದ್ದೆಗೆ ಏರುತ್ತಾರೆಂದಲ್ಲ, ಅವಳಲ್ಲಿ ದೊಡ್ಡತನವಿತ್ತು- ಅವಳು ಧಾರಾಳಿಯಾಗಿದ್ದಳು, ಆ ಧಾರಾಳಿತನ ಅವಳ ಹೆಚ್ಚಿನ ಓದಿಗೆ ಮತ್ತು ಹಲವು ವೃತ್ತಿಪರ ಪರೀಕ್ಷೆಗಳನ್ನು ಬರೆಯಲು ಅನುವುಮಾಡಿಕೊಟ್ಟಿತು. ಎಂದೋ ಒಮ್ಮೆ ಭೇಟಿಯಾದ ಇಬ್ಬರೂ ಪರಸ್ಪರ ಹಳೆಯ ನೆನಪನ್ನು ಕೆದಕಿದರು, ಬ್ಯಾಂಕ್ ಮ್ಯಾನೇಜರ್ ಆಗಿರುವವಳು ಮೊದಲನೆಯವಳಿಗೆ ದುಬಾರಿ ಬೆಲೆಯ ಸೀರೆಯೋಮ್ದನ್ನು ಉಡುಗೊರೆಯಾಗಿ ನೀಡಿದಳು! ಅವಳ ಮುಂದೆ ಮೊದಲನೆಯವಳು ಕುಬ್ಜಳಾಗಿಹೋದಳು,ಹಾಲಿನ ಬಳಕೆಯ ಬಗ್ಗೆ ತಾನು ತೋರಿದ ಸಣ್ಣತನ ನೆನದು ಮನಸ್ಸಲ್ಲೇ ಮರುಗಿದಳು.

ದೊಡ್ಡವ್ಯಕ್ತಿಗಳು ದೊಡ್ಡತನವನ್ನೇ ಮೈಗೂಡಿಸಿಕೊಂಡಿರುತ್ತಾರೆ. ಅವರಿಗೆ ಎಲ್ಲಿದ್ದರೂ ಜನಮೆಚ್ಚುಗೆ ಮತ್ತು ಮನ ಮೆಚ್ಚುಗೆ ಎರಡೂ ಸಿಗುತ್ತವೆ. ಕೊನೇಪಕ್ಷ ನಾಲ್ಕಾರು ಜನ ಅವರನ್ನು ಸಮಾಜದಲ್ಲಿ ಗುರುತಿಸಿ ಗೌರವಿಸುತ್ತಾರೆ. ಅವರಿಗೆ ಬೇಕಾದ ಯಾವುದೋ ಕೆಲಸವನ್ನು ಇನ್ಯಾರೋ ಗೌರವಪೂರ್ವಕವಾಗಿ ಮಾಡಿಕೊಡುತ್ತಾರೆ. ಅವರು ಹತ್ತಾರು ಜನ ಇಷ್ಟಪಡುವ ವ್ಯಕ್ತಿಯಾಗುತ್ತಾರೆ. ತುಂಬಿದ ಕೊಡ ತುಳುಕುವುದಿಲ್ಲ ಎಂಬಂತೆ [ಕಾಲೀ ಕೊಡವೂ ತುಳುಕುವುದಿಲ್ಲ ಎನ್ನಬೇಡಿ!] ಸಮಾಜದ ಕೆಲವು ಸಮಸ್ಯೆಗಳಿಗಾದರೂ ಅವರು ಸ್ಪಂದಿಸುತ್ತಾರೆ. ಬಡಜನತೆಗೆ ತಮ್ಮಿಂದಾಗಬಹುದಾದ ಸಹಾಯ ಸಹಕಾರಗಳನ್ನು ನೀಡುತ್ತಾರೆ. ಸರ್ ಎಮ್. ವಿಶ್ವೇಶ್ವರಯ್ಯನವರು ಎಂತಹ ದೊಡ್ಡವರಾಗಿದ್ದರೆಂದರೆ ತನಗೆ ಮಹಾರಾಜರಿಂದ ಬಂದ ಪುರಸ್ಕಾರದ ಹಣವನ್ನು ಬೆಂಗಳೂರಿನಲ್ಲಿ ಎಸ್.ಜೆ.ಪಾಲಿಟೆಕ್ನಿಕ್ ಕಟ್ಟುವಂತೇ ಕೊಟ್ಟುಬಿಟ್ಟರು, ಅಭಿಮಾನೀ ಬಳಗ ಅಪರೂಪವಾಗಿ ಏರ್ಪಡಿಸಿದ್ದ ಸನ್ಮಾನದಲ್ಲಿ ತಮಗೆ ಕೊಟ್ಟ [ಅಂದಿನಕಾಲಕ್ಕೆ] ಒಂದು ಲಕ್ಷರೂಪಾಯಿ ನಗದನ್ನು ದೊಡ್ಡವರಾದ ನಮ್ಮ ಡೀವೀಜಿ ಗೋಖಲೆ ಸಾರ್ವಜನಿಕ ಸಂಸ್ಥೆಯ ಬೆಳವಣಿಗೆಗೆ ಕೊಟ್ಟರು!

ನಾವು ನಮಗೇ ಅರಿವಿಲ್ಲದೆ ಪ್ರತೀ ಸೇಕಂದಿಗೂ ಬೆಳೆಯುತ್ತಲೇ ಇದ್ದೇವೆ, ವಯಸ್ಸು ಜಾಸ್ತಿಯಾಗುತ್ತಲೇ ಇದೆ, ಒಂದರ್ಥ ನಾವು ಗಾಳಿಗೆ ಮುದುಕರಾಗುತ್ತಿದ್ದೇವೆ. ಅದಿಲ್ಲಾ ನಾವು ನಮ್ಮನ್ನೂ ನಮ್ಮ ಬದುಕಿನ ಗತಿಯನ್ನೂ ಸಿಂಹಾವಲೋಕನ ಮಾಡಿಕೊಳ್ಳಬೇಕು. ಬದುಕಿನ ತೂಮ್ಬ ನಮ್ಮಲ್ಲಿ ನಾವು ಇದುವರೆಗೆ ತುಂಬಿಕೊಂಡು ನಡೆದ ಸಣ್ಣತನ ಮತ್ತು ಅಸೂಯೆ ಈ ಎರಡು ಅಂಶಗಳನ್ನು ಬಿಡಬೇಕು. ಶಕ್ಯವಾದಷ್ಟೂ ಧಾರಾಳಿಗಳಾಗಬೇಕು. ಆಗ ಮಾತ್ರ ನಾವು ದೊಡ್ಡವರಾಗಲು ಸಾಧ್ಯ, ನಿಜ ಅರ್ಥದಲ್ಲಿ ಬೆಳೆಯಲು ಸಾಧ್ಯ.