ಋಣಿ
ಋಣಿಯಾಗು ಜಗದಲ್ಲಿ ತಂದೆತಾಯಿಗಳಿಂಗೆ
ಅಣಿಗೊಳಿಸು ನಿನ್ನ ಮನ ನೆನೆಸೆ ಧೇನುವನು
ಕಣಕಣದ ತುಂಬೆಲ್ಲ ದೈವತ್ವವಂ ಹೊತ್ತ
ಗಣಿಯು ಸಾತ್ವಿಕ ರೂಪ | ಜಗದಮಿತ್ರ
ಊರೊಳಗೆ ದೊಡ್ಡಜನ ನೀನಹುದು ದುಡ್ಡಿರಲು
ವೀರನೆಂಬರು ನಿನಗೆ ನೀ ಗೆದ್ದುಬರಲು
ಆರೇಳುದಿನ ಕಾಲ ಬಡತನವ ನಟಿಸೊಮ್ಮೆ
ಕೇರುತ್ತ ಜನರೆಣಿಸು | ಜಗದಮಿತ್ರ
ಮರೆಯದಿರು ಶಿಕ್ಷಕರ ತೊರೆಯದಿರು ಮನೆಜನರ
ಕುರಿತೋದು ಮಹಾನುಭಾವ ಜೀವಿಗಳ
ಅರೆಕಾಸಿನಾಸೆಯಲಿ ಮಾರದಿರು ನಿನ್ನತನ
ಬರೆದು ತೋರಿಸು ಜಗಕೆ | ಜಗದಮಿತ್ರ
ನೆನೆಯೊ ನೆರೆಹೊರೆಯನ್ನ ನೆನೆಯೊ ಗುರುಹಿರಿಯರನ
ಮನಮುಟ್ಟಿ ಭಜಿಸು ನೀ ನಿತ್ಯ ದೈವವನ
ವನರಾಶಿ ಈ ಭೂಮಿ ವಾಯು ನದಿಗಳ ನೆನೆಯೊ
ಕನಸಲ್ಲು ಕೆಡಿಸದಿರು | ಜಗದಮಿತ್ರ
ವಿನಯ ವಿದ್ಯೆಗೆ ಬೇಕು ಮನೆಗೆ ಛಾವಣಿಬೇಕು
ಘನಕಾರ್ಯಮಾಡುವಗೆ ಮೊದಲು ಮನಬೇಕು
ಜನತಂತ್ರ ತುಳಿದಿರಲು ಅಡ್ಡದಾರಿಯ ಭರದಿ
ತನುಕೊಡವಿ ಸಡ್ಡುಹೊಡೆ | ಜಗದಮಿತ್ರ
ನೆನೆ ನಿನ್ನ ದೇಶವನು ನೆನೆ ನಿನ್ನ ರಾಜ್ಯವನು
ನೆನೆಯೊಮ್ಮೆ ಈ ಜನ್ಮದುಪಕರಿಪ ಜನರ
ಮನವ ಒಂದಾವರ್ತಿ ಹಿಡಿದು ಜಾಗ್ರತಗೊಳಿಸಿ
ಮುನಿಜನರ ನೆನೆಯೊ ನೀ | ಜಗದಮಿತ್ರ
ಸಖತ್ ಆಗಿದೆ ಸರ್ ಚುಟುಕುಗಳು.... ಒಳ್ಳೆ ಅರ್ಥಪೂರ್ಣವಾಗಿವೆ...
ReplyDeleteಅದ್ಭುತ ಚುಟುಕಗಳು ವಿ. ಆರ್. ಭಟ್ ಸರ್..
ReplyDeleteಜಗದಮಿತ್ರನ ಬದುಕ ನೀತಿ ಸಮಸ್ತ ಸಾರವನ್ನ ಒಳಗೊಂಡಿದೆ. ತುಂಬಾ ಮುದ್ದಾದ ಸಾರಭರಿತ ಕವನ. ಜಗದಮಿತ್ರನಿಗೆ ನಮನಗಳು.
ReplyDeletenice one sir..
ReplyDeleteRaaghu
'ಎನಿತು ಜೀವದಲಿ,ಎನಿತು ಜೀವರಿಗೆ
ReplyDeleteಎನಿತು ನಾವು ಋಣಿಯೋ!
ನಿಜದಿ ನೋಡಿದರೆ ಬಾಳು ಎಂಬುದು
ಋಣದ ರತ್ನ ಗಣಿಯೋ!'
ಮಂಕು ತಿಮ್ಮನ ಕಗ್ಗದ ತರಹವೇ ಜಗದ ಮಿತ್ರನ ವಚನಗಳು ಜೀವನಕ್ಕೆ ಬೆಳಕನ್ನು ತೋರುತ್ತವೆ.
ReplyDeleteಭಟ್ರೇ,
ReplyDeleteಜಗದ ಮಿತ್ರನ ಕಗ್ಗಗಳು ನಮ್ಮನ್ನು ಕಣ್ಣು ತೆರೆಸುತ್ತವೆ. ಇನ್ನು ನಿಮ್ಮ ಬರವಣಿಗೆ ಬಗ್ಗೆ ಹೇಳಲು ಪದಗಳಿಲ್ಲ........
ಆತ್ಮೀಯರೇ ಎಲ್ಲಾ ಬಂದು ಬಿಟ್ಟಿದ್ದೀರಿ,ತಮ್ಮೆಲ್ಲರ ಅನುಭೂತಿಗೆ ಅನಿಸಿಕೆಗೇ ಎಂದಿನಂತೆ ಋಣಿ. ಜೀವನದಲ್ಲಿ ಕೆಲವೊಮ್ಮೆಯಾದರೂ ನೆನೆಸಿಕೊಳ್ಳಬೇಕಾದ, ಸ್ಮರಿಸಿಕೊಳ್ಳಬೇಕಾದ ಹಲವು ಪಾತ್ರಗಳು ನಮಗೆ ಸಿಗುತ್ತವೆ, ಅವರನ್ನೆಲ್ಲ ಸ್ಮರಿಸಲೇಬೇಕಾದುದು ನಮ್ಮ ಆದ್ಯಕರ್ತವ್ಯ, ಒಂದು ಸಣ್ಣ ಉದಾಹರಣೆ ನೋಡಿ- ನನ್ನ ಗಾಡಿ ಮಳೆಯಲ್ಲಿ ಮಣ್ಣಿನಿಂದ ತೋಯ್ದಿರುವಾಗ ಗಾಡಿಯನ್ನು ಬಳಸಲು ನನಗೆ ಇಷ್ಟವಾಗಲಿಲ್ಲ, ಗಾಡಿಯೂ ಆಗಾಗ ನನ್ನನ್ನು ನೋಡಿ 'ತೊಳೆಯದೇ ಹಾಗೇ ಉಪಯೋಗಿಸುತ್ತೀಯೇನೋ ಮೂಢ?" ಎಂದ ಹಾಗೇ ಅನಿಸುತ್ತಿತ್ತು. ಕೆಲವೊಮ್ಮೆ ಚಿತ್ರ ವಿಚಿತ್ರ ಶಬ್ಧಗಳು ಗಾಡಿಯ ಎಂಜಿನ್ ನಲ್ಲಿ. ಒಮ್ಮೆ ಭಕ್ತಿಯಿಂದ ಸ್ನಾನಮಾಡಿಸಿದೆ ನೋಡಿ, ಗಾಡಿ ಯಾವ ಅಡ್ಡ ಸಪ್ಪಳ ಮಾಡದೇ ಓಡುತ್ತಿದೆ, ನೋಡಲೂ ಬಳಸಲೂ ಖುಷಿಯಾಗುತ್ತಿದೆ! ಹೀಗೇ ಎಷ್ಟೋ ಕಲ್ಲುಗಳಿಗೂ, ಲೋಹಗಳಿಗೂ ನಮಗೆ ಗೊತ್ತಿರದ ಜನ್ಮವಿರಬಹುದು-ಅಹಲ್ಯೆಯಂತೆ! ಜೀವವಿರುವ-ಜೀವವಿರದಿರುವ ಆದರೆ ನಮಗುಪಕೃತವಾದ ಎಲ್ಲಾ ವಸ್ತು-ವ್ಯಕ್ತಿಗಳನ್ನು ಸ್ಮರಿಸದಿದ್ದರೆ ಏನೋ ಅಸಮಾಧಾನ ಅನ್ನಿಸಿದ ಜಗದಮಿತ್ರನ ಅಹವಾಲುಗಳನ್ನು ಕಾವ್ಯರೂಪದಲ್ಲಿ ಇಟ್ಟಿದ್ದು ಈ ಮೇಲಿನ ರೀತಿಯಲ್ಲಿ. ಪ್ರತಿಕ್ರಿಯಿಸಿದ ಪ್ರಗತಿ ಮೇಡಂ, ಶ್ರೀ ದಿಲೀಪ್ ಹೆಗಡೆ, ಶ್ರೀ ಸೀತಾರಾಮ್, ಶ್ರೀ ರಾಘು, ಡಾ| ಕೃಷ್ಣಮೂರ್ತಿ, ದಿವ್ಯಾ ಮೇಡಂ, ಶ್ರೀ ಸುಧೀಂದ್ರ ದೇಶಪಾಂಡೆ, ಶ್ರೀಪ್ರವೀಣ್ ಮತ್ತು ಶ್ರೀ ವಸಂತ್ ತಮಗೆಲ್ಲರಿಗೂ ಜಗದಮಿತ್ರನ ನಮನಗಳು.ಸಮಸ್ತ ಓದುಗರಿಗೂ,ಮಿತ್ರರಿಗೂ, ಸಮಸ್ತ ಕನ್ನಡ ಪ್ರೇಮಿಗಳಿಗೂ ಕನ್ನಡ ಬ್ಲಾಗಿಗರಿಗೂ ಜಗದಮಿತ್ರ ಋಣಿ.
ReplyDeleteಊರೊಳಗೆ ದೊಡ್ಡಜನ ನೀನಹುದು ದುಡ್ಡಿರಲು
ReplyDeleteವೀರನೆಂಬರು ನಿನಗೆ ನೀ ಗೆದ್ದುಬರಲು
ಆರೇಳುದಿನ ಕಾಲ ಬಡತನವ ನಟಿಸೊಮ್ಮೆ
ಕೇರುತ್ತ ಜನರೆಣಿಸು | ಜಗದಮಿತ್ರ
Nice meaning sir
ಇದು ಯಾವಕಾಲಕ್ಕೂ ಸಹಜ ಅಲ್ಲವೇ ? ದುಡ್ಡಿದ್ದರೆ ಮಾತ್ರ ಎಲ್ಲರೂ ನಮಗೆ ನೆಂಟರು ನಮಗೆ ನೆಂಟರು ಎನ್ನುತ್ತಾರೆ, ಅಧಿಕಾರದಲ್ಲಿರುವ ಮಂತ್ರಿಗೆ ಹಲವರು ನೆಂಟರು, ಅಧಿಕಾರರಹಿತ ಮಾಜಿ ರಾಜಕಾರಣಿಗೆ ಹಿಂದೆ ನೆಂಟರಾಗಿದ್ದವರು ಈಗ ಅವರನ್ನು ದೂರವಿಟ್ಟು 'ಧೂರ್ತ' ಎನ್ನುತ್ತಾರೆ, ಇದು ಲೋಕ ! ಇದು ನರಕ ! ಇಲ್ಲಿಯೇ ನಾವು ಬಾಳಬೇಕಲ್ಲ, ಸಜ್ಜನಿಕೆಗೆ, ಸೌಜನ್ಯಕ್ಕೆ,ಸೌಶೀಲ್ಯಕ್ಕೆ ಬೆಲೆ ಇಲ್ಲ ಅಲ್ಲವೇ ? ಧನ್ಯವಾದ ವೆಂಕಟೇಶ್ ತಮಗೆ
ReplyDeleteಭಟ್ ಸರ್,
ReplyDeleteನಿಮ್ಮ ಆಘಾದ ಪದ ಕೋಶಗಳ ಪುಂಜಗಳ ಹೊತ್ತ ಕವನ ಬರೆಯುವ ನಿಮ್ಮ ಶಕ್ತಿಗೆ ಒಂದು ದೊಡ್ಡ ಸಲಾಂ......ತುಂಬಾ ಚೆನ್ನಾಗಿದೆ ಸರ್......
Thank you Sir
ReplyDelete