ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Monday, April 5, 2010

ಕಳ್ಳಮನಕೆ ಬೋಧನೆ

ಬದುಕಿನಲ್ಲಿ ಅನೇಕರು ಕಳ್ಳತನಕ್ಕೆ ಇಳಿಯುವುದು ಏನೂ ತೋಚದಾಗ, ತಮಗೆ ಯಾವುದೇ ದುಡಿಮೆಯ ಮಾರ್ಗ ಕಾಣದಾಗ, ಬದುಕೆಂಬ ವ್ಯವಹಾರದಲ್ಲಿ ಸೋತಾಗ, ಆಸೆ ಅತಿಯಾದಾಗ. ಮನದಲ್ಲಿ ತುಂಬಿರುವ ಹಲವು ಮುಳ್ಳುಗಳಲ್ಲಿ ಇದೂ ಒಂದು ಮುಳ್ಳು. ಕಳ್ಳತನ ಅನುವಂಶೀಯತೆಯಲ್ಲ ! ಕಳ್ಳತನ ಹುಟ್ಟಾ ಬಂದಿದ್ದಲ್ಲ, ಬದಲಿಗೆ ಆಮೇಲೆ ಕಲಿತ ಕೆಟ್ಟ ಪಾಠ ! ಎಳವೆಯಲ್ಲೇ ಒಳ್ಳೆಯ ಗುರು ಸಿಗದಿದ್ದರೆ ಅಡ್ಡ ಮಾರ್ಗ ಹಿಡಿದು, ಬೆಳೆಯುತ್ತ ದೊಡ್ಡವರಾದಾಗ ಅದನ್ನೇ ಸರಿ ಎಂದು ಸಮರ್ಥಿಸುತ್ತ ತಿರುಗುವ ಮನಕ್ಕೆ ಸರಿಯಾದ ಗುರು ಸಿಕ್ಕರೆ ಪರಿವರ್ತಿತವಾಗಬಹುದು. ಆನಂದಕಂದ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾದ ದಿ | ಶ್ರೀ ಬೆಟಗೇರಿ ಕೃಷ್ಣ ಶರ್ಮರು ' ಕಳ್ಳರ ಗುರು ' ಎಂಬ ಕಥೆಯೊಂದನ್ನು ಬರೆದಿದ್ದಾರೆ, ಅದರಲ್ಲಿ ಕಳ್ಳ ಹೇಗೆ ರಾತ್ರಿ ದೊಂದಿ ಹೊತ್ತಿಸಿಕೊಂಡು ಬಂದು ವೈದ್ಯರೊಬ್ಬರ ಮನೆಯ ಬಾಗಿಲು ಬಡಿದು ಸಹಾಯಕ್ಕಾಗಿ ಬೇಡುವುದು, ವೈದ್ಯರು ತಮ್ಮ ಕರ್ತವ್ಯಪರತೆಯಿಂದ ಆತ ಕಳ್ಳನೆಂದು ಗೊತ್ತಿದ್ದರೂ ಆತನ ಜೊತೆಗೆ ಹೋಗಿ ಆತನ ಮಗುವನ್ನು ಕಾಯಿಲೆಯಿಂದ ಗುಣಮುಖವಾಗಿಸಿ ಬದುಕಿಸಿದ್ದು, ಮುಂದೆ ಆ ಕಳ್ಳ ತನ್ನ ಸ್ವಭಾವ ತಿದ್ದಿಕೊಂಡು ಒಳ್ಳೆಯ ವ್ಯಕ್ತಿಯಾಗಿ ಬದುಕಿದ್ದು --ಇದನ್ನೆಲ್ಲ ಹೇಳಿದ್ದಾರೆ.

ಇವತ್ತಿನ ಸಿರಿಯ-ಸಂಪತ್ತಿನ ಬೆಡಗಿನ ವೈಭೋಗಗಳನ್ನು ಕಂಡು ಮನಸ್ಸು ಶೀಘ್ರ ಅವುಗಳನ್ನೆಲ್ಲ ಉಪಭೋಗಿಸುವ,ಉಪಯೋಗಿಸುವ ಆತುರಕ್ಕೆ ಒಳಗಾಗುತ್ತದೆ. ಅಂತಹ ಆತುರ ಕೆಲವೊಮ್ಮೆ ಮನಸ್ಸನ್ನು wild thinking ಹಚ್ಚುತ್ತದೆ, ಅಲ್ಲಿ ನಾವು ನಮ್ಮತನವನ್ನು ಮರೆತು ಏನೇನೋ ಕನಸುಕಂಡು ಆ ಹುಚ್ಚು ಸಾಹಸಕ್ಕೆ ಅಣಿಯಾಗುತ್ತೇವೆ. ಬೇಡದ ಆ ಸಂಪತ್ತಿಗೆ ಕೈಚಾಚಿ ಹಲವು ನೀತಿಬಾಹಿರ ಚಟುವಟಿಕೆಗಳಿಗೆ ಮನ ಮುಂದಾಗುತ್ತದೆ, ಇದಕ್ಕೆಲ್ಲ ಕಾರಣ overnight riches. ತ್ವರಿತ ಶ್ರೀಮಂತಿಕೆಯ ಬೆನ್ನು ಹತ್ತುವಿಕೆ. ಅವರ ಹತ್ತಿರ ಬಂಗಲೆಯಿದೆ ನನಗೂ ಇರಲಿ, ಅವರ ಹತ್ತಿರ BMW ಕಾರಿದೆ ನನ್ನ ಹತ್ತಿರವೂ ಇರಲಿ, ಅವರ ಮನೆಯಲ್ಲಿ ೫೬" ಎಲ್ ಈ ಡಿ ಟಿವಿ ಇದೆ ನಮ್ಮ ಮನೆಯಲ್ಲೂ ಇರಲಿ ಎಂಬ ಬಯಕೆ, ಅದೂ ನಾಳೆಯೇ ಬೇಕೆಂಬ ಆಸೆ. ಇಂತಹ ಆಸೆಗಳಿಗೆ ಕಡಿವಾಣ ಹಾಕದಿದ್ದರೆ ನಾವು ಯವುದೋ ಒಂದು ಅರ್ಥದಲ್ಲಿ ಕಳ್ಳರಾಗುತ್ತೇವೆ! ಇನ್ನು ಕೆಲವರು ಆಸ್ಪತ್ರೆಯ ಖರ್ಚಿಗಾಗಿ ದುಡ್ಡಿಲ್ಲದೆ, ಎಲ್ಲೂ ಸಾಲವೂ ಸಿಗದೇ ಅನಿವಾರ್ಯತೆಯಲ್ಲಿ ಕಳ್ಳರಾಗುತ್ತಾರೆ-ಅಂಥವರಲ್ಲಿ ನನ್ನ ಪ್ರಾರ್ಥನೆ--ನೀವು ನೇರ ಮಾಧ್ಯಮಗಳಲ್ಲಿ ನಿಮ್ಮ ಅನಿವಾರ್ಯತೆ ತಿಳಿಸಿ ಪ್ರಾರ್ಥಿಸಿ, ನಮ್ಮ ಜನ ಸಹಾಯಮಾಡುತ್ತಾರೆ, ಬದಲಾಗಿ ಕಳ್ಳತನ ಬೇಡ. ಇನ್ನು ಹೆಸರಿಗಾಗಿ ಕಳ್ಳತನ, ಕೃತಿ ಚೌರ್ಯಮಾಡಿಯಾದರೂ ಹೆಸರು ಪಡೆಯಬೇಕೆಂಬ ಉಳ್ಳವರ ಕಳ್ಳತನ,ಆಡಿಯೋ ವೀಡಿಯೋ ಪೈರೆಸಿ ಹೀಗೆ ಹಲವು ವಿಧದ ಕಳ್ಳತನಗಳಿವೆ, ಕಳ್ಳತನಗಳ ಕುರಿತಾಗಿ ಮನಸ್ಸು ಬೇಸರಿಸಿದಾಗ ಹುಟ್ಟಿದ ಕೆಲವು ಚುಟುಕಗಳನ್ನು ಸದ್ಗುರು ಡೀವೀಜಿಯವರನ್ನು ನೆನೆದು ಅವರ ಕಗ್ಗದ ರೀತಿಯಲ್ಲಿ ಬರೆಯಲು ಹೊರಟ ಪ್ರಯತ್ನದ ಕೂಸು ಇದು --[ಚಿತ್ರ ಋಣ : ಅಂತರ್ಜಾಲ ]

ಕಳ್ಳಮನಕೆ ಬೋಧನೆ

ಕಳ್ಳತನ ಎಂಬುವುದು ಕಳ್ಳಿ ಹಾಲಿನ ರೀತಿ
ಮುಳ್ಳು ಕುಟುಕುತ ಜೀವಹಿಂಸಿಪ ಅನೀತಿ
ಎಳ್ಳು ನೀರನು ಬಿಟ್ಟು ಮರೆನಿನ್ನ ನೋವುಗಳ
ಜೊಳ್ಳು ನೀನಾಗದಿರು | ಜಗದಮಿತ್ರ

ಬೆಳ್ಳಗಿರುವುದು ಎಲ್ಲ ಹಾಲಲ್ಲ ತಿಳಿದಿರಲಿ
ಉಳ್ಳವರಲೂ ಕಳ್ಳ ಬುದ್ಧಿ ತಾನಿಹುದು
ಬೆಳ್ಳಕ್ಕಿ ಕೊಕ್ಕರೆಯ ಬೋಧನೆಯ ಕೇಳುತಲಿ
ಮಳ್ಳುಬೀಳಲು ಬೇಡ | ಜಗದಮಿತ್ರ

ಕಾಸುಕಾಂಚಾಣ ಬೆಳ್ಳಿಬಂಗಾರದೊಡವೆಗಳ
ವಾಸನೆಯ ಹಿಡಿದು ಬೆಂಬಲಿಸುವುದು ಬೇಡ
ವಾಸಿಯಾಗದ ರೋಗ ಅದುಮಾತ್ರ ವಸುಧೆಯೊಳು
ಬೀಸು ದೊಣ್ಣೆಯನದಕೆ | ಜಗದಮಿತ್ರ

ಕಂಡವರ ಮನೆಯ ಸಿರಿ ಕಣ್ತುಂಬಿ ಹಲುಬದಿರು
ಭಂಡಧೈರ್ಯದಿ ನುಗ್ಗಿ ದೋಚಲವುಗಳನು
ಉಂಡಮನೆಗೆರಡು ಬಗೆಯುವ ಯೋಚನೆಯ ಬಿಟ್ಟು
ಗಂಡು ನೀನಾಗಿ ಮೆರೆ | ಜಗದಮಿತ್ರ

ಶೀಘ್ರದಲಿ ಕೈತುಂಬ ತುಂಬಿಕೊಳುವಾಮನದಿ
ವ್ಯಾಘ್ರವೇಷಕೆ ಕೊಡದೆ ಕೆಟ್ಟ ಅವಕಾಶ
ಉಗ್ರನಾಗಿಹ ನಾರಸಿಂಹನನು ನೆನೆಯುತ್ತ
ಜಾಗ್ರತೆಯ ನೀನುಣಿಸು | ಜಗದಮಿತ್ರ

ಹೆಣ್ಣು ಹೊನ್ನು ಮಣ್ಣು ಮೂರು ವಿಷಯಗಳಲ್ಲಿ
ಕಣ್ತಪ್ಪಿ ಬೀಳದಿರು ಆಳ ಕಮರಿಯಲಿ
ಉಣ್ಣು ನಿನಗಿರುವಷ್ಟು ಸಣ್ಣವನು ನೀನಲ್ಲ !
ಕಣ್ಣು ಕೈಯ್ಯೊಳಗಿರಲಿ | ಜಗದಮಿತ್ರ

ಒಳ್ಳೆತನವಿರೆ ದೈವ ಕೊಡುವುದದು ನಿನಪಾಲು
ಸುಳ್ಳುಹೇಳುತ ಕರೆಯದಿರು ಸಂಪದವನು
ಪೊಳ್ಳುಮನಕೀ ಬೋಧೆ ತುಂಬು ನೀ ಕಲಿಸುತ್ತ
ಮುಳ್ಳುಗಳ ಹೊರತೆಗೆಯೋ | ಜಗದಮಿತ್ರ