ಬದುಕಿನಲ್ಲಿ ಅನೇಕರು ಕಳ್ಳತನಕ್ಕೆ ಇಳಿಯುವುದು ಏನೂ ತೋಚದಾಗ, ತಮಗೆ ಯಾವುದೇ ದುಡಿಮೆಯ ಮಾರ್ಗ ಕಾಣದಾಗ, ಬದುಕೆಂಬ ವ್ಯವಹಾರದಲ್ಲಿ ಸೋತಾಗ, ಆಸೆ ಅತಿಯಾದಾಗ. ಮನದಲ್ಲಿ ತುಂಬಿರುವ ಹಲವು ಮುಳ್ಳುಗಳಲ್ಲಿ ಇದೂ ಒಂದು ಮುಳ್ಳು. ಕಳ್ಳತನ ಅನುವಂಶೀಯತೆಯಲ್ಲ ! ಕಳ್ಳತನ ಹುಟ್ಟಾ ಬಂದಿದ್ದಲ್ಲ, ಬದಲಿಗೆ ಆಮೇಲೆ ಕಲಿತ ಕೆಟ್ಟ ಪಾಠ ! ಎಳವೆಯಲ್ಲೇ ಒಳ್ಳೆಯ ಗುರು ಸಿಗದಿದ್ದರೆ ಅಡ್ಡ ಮಾರ್ಗ ಹಿಡಿದು, ಬೆಳೆಯುತ್ತ ದೊಡ್ಡವರಾದಾಗ ಅದನ್ನೇ ಸರಿ ಎಂದು ಸಮರ್ಥಿಸುತ್ತ ತಿರುಗುವ ಮನಕ್ಕೆ ಸರಿಯಾದ ಗುರು ಸಿಕ್ಕರೆ ಪರಿವರ್ತಿತವಾಗಬಹುದು. ಆನಂದಕಂದ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾದ ದಿ | ಶ್ರೀ ಬೆಟಗೇರಿ ಕೃಷ್ಣ ಶರ್ಮರು ' ಕಳ್ಳರ ಗುರು ' ಎಂಬ ಕಥೆಯೊಂದನ್ನು ಬರೆದಿದ್ದಾರೆ, ಅದರಲ್ಲಿ ಕಳ್ಳ ಹೇಗೆ ರಾತ್ರಿ ದೊಂದಿ ಹೊತ್ತಿಸಿಕೊಂಡು ಬಂದು ವೈದ್ಯರೊಬ್ಬರ ಮನೆಯ ಬಾಗಿಲು ಬಡಿದು ಸಹಾಯಕ್ಕಾಗಿ ಬೇಡುವುದು, ವೈದ್ಯರು ತಮ್ಮ ಕರ್ತವ್ಯಪರತೆಯಿಂದ ಆತ ಕಳ್ಳನೆಂದು ಗೊತ್ತಿದ್ದರೂ ಆತನ ಜೊತೆಗೆ ಹೋಗಿ ಆತನ ಮಗುವನ್ನು ಕಾಯಿಲೆಯಿಂದ ಗುಣಮುಖವಾಗಿಸಿ ಬದುಕಿಸಿದ್ದು, ಮುಂದೆ ಆ ಕಳ್ಳ ತನ್ನ ಸ್ವಭಾವ ತಿದ್ದಿಕೊಂಡು ಒಳ್ಳೆಯ ವ್ಯಕ್ತಿಯಾಗಿ ಬದುಕಿದ್ದು --ಇದನ್ನೆಲ್ಲ ಹೇಳಿದ್ದಾರೆ.
ಇವತ್ತಿನ ಸಿರಿಯ-ಸಂಪತ್ತಿನ ಬೆಡಗಿನ ವೈಭೋಗಗಳನ್ನು ಕಂಡು ಮನಸ್ಸು ಶೀಘ್ರ ಅವುಗಳನ್ನೆಲ್ಲ ಉಪಭೋಗಿಸುವ,ಉಪಯೋಗಿಸುವ ಆತುರಕ್ಕೆ ಒಳಗಾಗುತ್ತದೆ. ಅಂತಹ ಆತುರ ಕೆಲವೊಮ್ಮೆ ಮನಸ್ಸನ್ನು wild thinking ಹಚ್ಚುತ್ತದೆ, ಅಲ್ಲಿ ನಾವು ನಮ್ಮತನವನ್ನು ಮರೆತು ಏನೇನೋ ಕನಸುಕಂಡು ಆ ಹುಚ್ಚು ಸಾಹಸಕ್ಕೆ ಅಣಿಯಾಗುತ್ತೇವೆ. ಬೇಡದ ಆ ಸಂಪತ್ತಿಗೆ ಕೈಚಾಚಿ ಹಲವು ನೀತಿಬಾಹಿರ ಚಟುವಟಿಕೆಗಳಿಗೆ ಮನ ಮುಂದಾಗುತ್ತದೆ, ಇದಕ್ಕೆಲ್ಲ ಕಾರಣ overnight riches. ತ್ವರಿತ ಶ್ರೀಮಂತಿಕೆಯ ಬೆನ್ನು ಹತ್ತುವಿಕೆ. ಅವರ ಹತ್ತಿರ ಬಂಗಲೆಯಿದೆ ನನಗೂ ಇರಲಿ, ಅವರ ಹತ್ತಿರ BMW ಕಾರಿದೆ ನನ್ನ ಹತ್ತಿರವೂ ಇರಲಿ, ಅವರ ಮನೆಯಲ್ಲಿ ೫೬" ಎಲ್ ಈ ಡಿ ಟಿವಿ ಇದೆ ನಮ್ಮ ಮನೆಯಲ್ಲೂ ಇರಲಿ ಎಂಬ ಬಯಕೆ, ಅದೂ ನಾಳೆಯೇ ಬೇಕೆಂಬ ಆಸೆ. ಇಂತಹ ಆಸೆಗಳಿಗೆ ಕಡಿವಾಣ ಹಾಕದಿದ್ದರೆ ನಾವು ಯವುದೋ ಒಂದು ಅರ್ಥದಲ್ಲಿ ಕಳ್ಳರಾಗುತ್ತೇವೆ! ಇನ್ನು ಕೆಲವರು ಆಸ್ಪತ್ರೆಯ ಖರ್ಚಿಗಾಗಿ ದುಡ್ಡಿಲ್ಲದೆ, ಎಲ್ಲೂ ಸಾಲವೂ ಸಿಗದೇ ಅನಿವಾರ್ಯತೆಯಲ್ಲಿ ಕಳ್ಳರಾಗುತ್ತಾರೆ-ಅಂಥವರಲ್ಲಿ ನನ್ನ ಪ್ರಾರ್ಥನೆ--ನೀವು ನೇರ ಮಾಧ್ಯಮಗಳಲ್ಲಿ ನಿಮ್ಮ ಅನಿವಾರ್ಯತೆ ತಿಳಿಸಿ ಪ್ರಾರ್ಥಿಸಿ, ನಮ್ಮ ಜನ ಸಹಾಯಮಾಡುತ್ತಾರೆ, ಬದಲಾಗಿ ಕಳ್ಳತನ ಬೇಡ. ಇನ್ನು ಹೆಸರಿಗಾಗಿ ಕಳ್ಳತನ, ಕೃತಿ ಚೌರ್ಯಮಾಡಿಯಾದರೂ ಹೆಸರು ಪಡೆಯಬೇಕೆಂಬ ಉಳ್ಳವರ ಕಳ್ಳತನ,ಆಡಿಯೋ ವೀಡಿಯೋ ಪೈರೆಸಿ ಹೀಗೆ ಹಲವು ವಿಧದ ಕಳ್ಳತನಗಳಿವೆ, ಕಳ್ಳತನಗಳ ಕುರಿತಾಗಿ ಮನಸ್ಸು ಬೇಸರಿಸಿದಾಗ ಹುಟ್ಟಿದ ಕೆಲವು ಚುಟುಕಗಳನ್ನು ಸದ್ಗುರು ಡೀವೀಜಿಯವರನ್ನು ನೆನೆದು ಅವರ ಕಗ್ಗದ ರೀತಿಯಲ್ಲಿ ಬರೆಯಲು ಹೊರಟ ಪ್ರಯತ್ನದ ಕೂಸು ಇದು --[ಚಿತ್ರ ಋಣ : ಅಂತರ್ಜಾಲ ]
ಕಳ್ಳಮನಕೆ ಬೋಧನೆ
ಕಳ್ಳತನ ಎಂಬುವುದು ಕಳ್ಳಿ ಹಾಲಿನ ರೀತಿ
ಮುಳ್ಳು ಕುಟುಕುತ ಜೀವಹಿಂಸಿಪ ಅನೀತಿ
ಎಳ್ಳು ನೀರನು ಬಿಟ್ಟು ಮರೆನಿನ್ನ ನೋವುಗಳ
ಜೊಳ್ಳು ನೀನಾಗದಿರು | ಜಗದಮಿತ್ರ
ಬೆಳ್ಳಗಿರುವುದು ಎಲ್ಲ ಹಾಲಲ್ಲ ತಿಳಿದಿರಲಿ
ಉಳ್ಳವರಲೂ ಕಳ್ಳ ಬುದ್ಧಿ ತಾನಿಹುದು
ಬೆಳ್ಳಕ್ಕಿ ಕೊಕ್ಕರೆಯ ಬೋಧನೆಯ ಕೇಳುತಲಿ
ಮಳ್ಳುಬೀಳಲು ಬೇಡ | ಜಗದಮಿತ್ರ
ಕಾಸುಕಾಂಚಾಣ ಬೆಳ್ಳಿಬಂಗಾರದೊಡವೆಗಳ
ವಾಸನೆಯ ಹಿಡಿದು ಬೆಂಬಲಿಸುವುದು ಬೇಡ
ವಾಸಿಯಾಗದ ರೋಗ ಅದುಮಾತ್ರ ವಸುಧೆಯೊಳು
ಬೀಸು ದೊಣ್ಣೆಯನದಕೆ | ಜಗದಮಿತ್ರ
ಕಂಡವರ ಮನೆಯ ಸಿರಿ ಕಣ್ತುಂಬಿ ಹಲುಬದಿರು
ಭಂಡಧೈರ್ಯದಿ ನುಗ್ಗಿ ದೋಚಲವುಗಳನು
ಉಂಡಮನೆಗೆರಡು ಬಗೆಯುವ ಯೋಚನೆಯ ಬಿಟ್ಟು
ಗಂಡು ನೀನಾಗಿ ಮೆರೆ | ಜಗದಮಿತ್ರ
ಶೀಘ್ರದಲಿ ಕೈತುಂಬ ತುಂಬಿಕೊಳುವಾಮನದಿ
ವ್ಯಾಘ್ರವೇಷಕೆ ಕೊಡದೆ ಕೆಟ್ಟ ಅವಕಾಶ
ಉಗ್ರನಾಗಿಹ ನಾರಸಿಂಹನನು ನೆನೆಯುತ್ತ
ಜಾಗ್ರತೆಯ ನೀನುಣಿಸು | ಜಗದಮಿತ್ರ
ಹೆಣ್ಣು ಹೊನ್ನು ಮಣ್ಣು ಮೂರು ವಿಷಯಗಳಲ್ಲಿ
ಕಣ್ತಪ್ಪಿ ಬೀಳದಿರು ಆಳ ಕಮರಿಯಲಿ
ಉಣ್ಣು ನಿನಗಿರುವಷ್ಟು ಸಣ್ಣವನು ನೀನಲ್ಲ !
ಕಣ್ಣು ಕೈಯ್ಯೊಳಗಿರಲಿ | ಜಗದಮಿತ್ರ
ಒಳ್ಳೆತನವಿರೆ ದೈವ ಕೊಡುವುದದು ನಿನಪಾಲು
ಸುಳ್ಳುಹೇಳುತ ಕರೆಯದಿರು ಸಂಪದವನು
ಪೊಳ್ಳುಮನಕೀ ಬೋಧೆ ತುಂಬು ನೀ ಕಲಿಸುತ್ತ
ಮುಳ್ಳುಗಳ ಹೊರತೆಗೆಯೋ | ಜಗದಮಿತ್ರ
[ಕಂಡವರ ಮನೆಯ ಸಿರಿ ಕಣ್ತುಂಬಿ ಹಲುಬದಿರು]
ReplyDeleteಪರದ್ರವ್ಯೇಶು ಲೋಷ್ಟವತ್-ಎಂಬ ನಮ್ಮ ಪೂರ್ವಜರ ಮಾತಿಗೆ ನಿಮ್ಮ ಈ ಸಾಲು ಹತ್ತಿರವಾಗುತ್ತದೆ.
ಇದೊಂದು ಗುಣ ಬೆಳೆಸಿಕೊಂಡರೆ ಇನ್ನೇನು ಬೇಕು? ಕೊಡುವಾಗ ಭಗವಂತ ಕೊಟ್ಟೇಕೊಡುವನೆಂಬ ಭರವಸೆ ಇಟ್ಟು ಬದುಕಿದರೆ ಬದುಕಿನಲ್ಲಿ ಸಂಪತ್ತು ಅನುಭವಿಸುವ ಯೋಗ ವಿದ್ದರೆ ತಾನಾಗಿಯೇ ಬರುತ್ತದೆ.ಅದಕ್ಕಾಗಿ ಕೊರಗಬೇಕಿಲ್ಲ,ಆದರೆ ದುಡಿಯುವ ಶ್ರಮವಿರಬೇಕು.ಆದರೆ ಜೀವನದಲ್ಲಿ ಒಂದು ವೇಳೆ ಕಷ್ಟ ಬಂದರೆ ಎದುರಿಸುವ ಶಕ್ತಿ ಬೆಳೆಯುತ್ತದೆ. ಕಷ್ಟ, ದು:ಖಗಳನ್ನು ಎದುರಿಸುವ ಸಾಮರ್ಥ್ಯವನ್ನೊಮ್ಮೆ ಮೈಗೂಡಿಸಿಕೊಂಡರೆ ಮುಂದೆಲ್ಲಾ ಜೀವನ ಹಗುರ.
ಕಳಬೇಡ ಕೊಲಬೇಡ ಎಂಬ ಬಸವಣ್ಣನವರ ವಚನ ಸಾಹಿತ್ಯ ನೆನಪಾಯಿತು.ದಿನವೂ ಯಾವುದೋ ಒಂದು ವಿಶೇಷ ರೀತಿಯಲ್ಲಿ ಮನಸನ್ನು ಬೆಳಗುವ ಬರಹಗಳು ನಿಮ್ಮ ಬ್ಲಾಗಿನಲ್ಲಿ ಇರುತ್ತವೆ .ಧನ್ಯವಾದಗಳು.
ReplyDeleteಅದ್ಭುತವಾದ ಬರಹ ಜೊತೆಗೆ ಒಪ್ಪವಾದ ಮುದಕೊಡುವ ಕಗ್ಗ ಮಾದರಿಯ ಜಗದ ಮಿತ್ರನ ಭೋಧನೆ -ಮನ ಪ್ರಫ಼ುಲ್ಲಗೊ೦ಡಿತು.
ReplyDeleteಧನ್ಯವಾದಗಳು ಭಟ್ಟರೇ.
ಕಗ್ಗಗಳು ಎಂದಿನಂತೆ ಸಾತ್ವಿಕ ಆಶಯಗಳನ್ನು ಹೇಳುತ್ತಿವೆ.
ReplyDeleteಹಿತಕರವಾದ ಬೋಧನೆಗಳು ಹಿತವಾದ ಶೈಲಿಯಲ್ಲಿವೆ.
ReplyDeleteಜಗದಮಿತ್ರರಿಗೆ ಅಭಿನಂದನೆಗಳು.
ಸ್ವಾಮಿಗಳೇ, ಈಗ ಮಾತ್ರ ಕಳ್ಳನಿಗೆ ಮನಸ್ಸು ಚುರ್ರ್ ಅನ್ನದೆ ಇರೋದಿಲ್ಲ. ನಿಮ್ಮ ಕೃತಿ ಚೌರ್ಯ ಮಾಡಿದ ಕಳ್ಳ ಪಶ್ಚಾತ್ತಾಪ ಪಟ್ಟೆ ಪಡುತ್ತಾನೆ! ಇನ್ನೊಮ್ಮೆ ಅವ ಖಂಡಿತಾ ಕಳ್ಳತನಕ್ಕೆ ಇಳಿಯಲಾರ!
ReplyDeleteಜಗದ ಮಿತ್ರನ ಕಗ್ಗದ ಮೂಲಕ ಲೋಕಕ್ಕೊಂದು (ಕಳ್ಳರಿಗೆ) ಪಾಠ ಹೇಳಹೊರಟಿದ್ದೀರಾ, ನಿಮ್ಮ ಪ್ರಯತ್ನಕ್ಕೆ ಸರಿಯಾದ ಫಲ ಸಿಗಲಿ ಅಂತ ಆ ದೇವರಲ್ಲಿ ನಾನು ಬೇಡಿಕೊಳ್ಳುತ್ತೇನೆ.
ಜೀವಿತದಲ್ಲಿ ಎಷ್ಟೇ ಕಷ್ಟಬಂದರೂ ಹಾಗೇ ಅದನ್ನು ಎದುರಿಸಬೇಕೇ ಹೊರತು ಬಡತನ ನಿವಾರಿಸಿಕೊಳ್ಳಲು, ಇಲ್ಲದ ಸಂಪತ್ತನ್ನು ಪಡೆಯಲು, ಉಳ್ಳವರ ಮಟ್ಟಕ್ಕೆ ಬೆಳೆಯಲು, ಯಾರನ್ನೋ ಖುಷಿಪಡಿಸಲು ಕಳ್ಳತನ, ಸುಳ್ಳತನ ಸಲ್ಲ. ಹರಿಕೀರ್ತನಾ ವಿಚಕ್ಷಣ ದಿ | ಶ್ರೀ ಗುರುರಾಜುಲು ನಾಯ್ಡುರವರು ಹೇಳಿದ್ದನ್ನು ಕೇಳಿದ್ದು- " ಇಲ್ಲೊಂದು ನೂರುರೂಪಾಯಿ ನೋಟು ಬಿದ್ದಿದೆ ಎಂದರೆ ಎಲ್ಲರೂ ತಂದು ತಂದು ಅಂತ ಬರ್ತಾರೆ, ಇಲ್ಲೊಂದು ನೂರುರೂಪಾಯಿ ಇಟ್ಟಿದ್ದೆ ನಿಮಗೇನಾದರೂ ಸಿಕ್ಕಿದೆಯಾ ಅಂದರೆ ಇಲ್ಲಾ ನಾನು ನೋಡಿಲ್ಲಾ ಅನ್ನುತ್ತಾರೆ " ಅಂತ. ಹೀಗಿದೆ ಇಂದಿನ ಲೋಕ. ಮೌಲ್ಯಯುತ ವಸ್ತುವನ್ನು ಎಷ್ಟು ಬೀಗ ಹಾಕಿ ಇಟ್ಟರೂ ಬಿಡುವುದಿಲ್ಲ, ದೇವರ ಹುಂಡಿಗಳು,ಆಭರಣಗಳನ್ನೂ ಬಿಡುವುದಿಲ್ಲ, ದೇವರು ೨ ಸಲ ನಗುತ್ತಾನೆ ಅಂತ ಕೇಳಿದ್ದೆ -ಅಲ್ಲ ಅದು ಮೂರುಸಲ, ಮನುಷ್ಯರು ತಾವೇ ಹಾಕಿದ ದುಡ್ಡು-ಆಭರಣಗಳನ್ನು ತಾವೇ ಕದಿಯುವಾಗ " ಎಲೋ ಮೂಢ ನಿನ್ನ ಜನುಮವೇ ಹೀಗೆ, ನೀನು ನಡೆದಲ್ಲಿ ಹುಲ್ಲು ಕೂಡ ಚಿಗುರದ ಅಪ್ಪಟ ಸ್ವಾರ್ಥ ನಿನ್ನದು, ನಿನ್ನನ್ನೇ ಸೃಜಿಸಿದ ನನ್ನ ಇರುವಿಕೆಯನ್ನೇ ಮರೆಮಾಚಿ ದೋಚುವಿಯಲ್ಲ ನಿನ್ನ ಸ್ಥಿತಿ ನೆನಪಾಗಿ ನಗುಬರುತ್ತಿದೆ " ಎಂದು ದೇವರು ಗಹಗಹಿಸಿ ನಗುತಾನೆ ಅಂದುಕೊಂಡಿದ್ದೇನೆ. ರಾಮರಾಜ್ಯದಲ್ಲಿ ಬೀಗವೇ ಇರಲಿಲ್ಲವಂತೆ, ಇವತ್ತು ಪೂಜೆ ಮುಗಿದ ರಾಮನ ಗುಡಿಗೇ ಬೀಗ !
ReplyDeleteಪ್ರತಿಕ್ರಿಯಿಸಿದ ಸರ್ವಶ್ರೀ ಹರಿಹರಪುರ ಶ್ರೀಧರ್, ಡಾ| ಕೃಷ್ಣಮೂರ್ತಿ, ಸೀತಾರಾಮ್ , ಸುಬ್ರಹ್ಮಣ್ಯ, ಸುಧೀಂಧ್ರ ದೇಶಪಾಂಡೆ, ಪ್ರವೀಣ್ ಈ ಎಲ್ಲಾ ಮಿತ್ರರಿಗೂ, ನೇಪಥ್ಯದ ಓದುಗರಿಗೂ, ಇನ್ನೂ ಓದಲಿರುವ,ಓದದ ಮಿತ್ರರಿಗೂ ವಂದನೆಗಳು.
ಸರ್,
ReplyDeleteನಿಮ್ಮ ಜಗದ ಮಿತ್ರನ ಮೂಲಕ ಹಿತೋಪದೇಶ ನೀಡುವ ಪರಿ ತುಂಬಾ ಚೆನ್ನಾಗಿದೆ
ನೀವ್ಯಾಕೆ ಇಂಥಹ ಹಲವು ಕವನಗಳನ್ನು ಸೇರಿಸಿ ಪುಸ್ತಕ ಹೊರ ತರಬಾರದು?
ತುಂಬಾ ಅರ್ಥಪೂರ್ಣ ಸಾಲುಗಳಿವು
ಸ್ವಾಮೀ, ನಿನೆಯಷ್ಟೇ ಇದೇ ಥರ ಮನಮುಕ್ತಾ ಹೇಳಿದ್ದರು, ಅನೇಕರು ಮೇಲ್ ಮೂಲಕ ಹೇಳುತ್ತಲೇ ಇದ್ದಾರೆ, ಕೆಲವು ಕಾಲಾನಂತರ ಪಕ್ಕದ ಲಿಸ್ಟ್ ನಲ್ಲಿ ತೋರಿಸಿರುವ ಎಲ್ಲಾಕೃತಿಗಳನ್ನು ಪುಸ್ತಕಗಳ ರೂಪದಲ್ಲಿ ಹೊರತರಲು ಇಚ್ಛಿಸಿದ್ದೇನೆ, ತಮಗೂ ಸಮಯಬಂದಾಗ ತಿಳಿಸಿ, ಎಲ್ಲರನ್ನೂ ಆ ಕೆಲಸಕ್ಕೆ, ಬಿಡುಗಡೆಗೆ ಆಮಂತ್ರಿಸುತ್ತೇನೆ, ಪ್ರತಿಕ್ರಿಯಿಸಿದ ತಮಗೆ ಧನ್ಯವಾದಗಳು
ReplyDeleteKhanditaa, namma sahakaara idde ide pustaka hora taralu
ReplyDelete