ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Sunday, April 4, 2010

ಕನ್ನಡಮ್ಮನ ಕೈತುತ್ತು ನೆನೆದು

ಆಗಾಗ ನಾವು ಮಾಡಬೇಕಾದ ಕರ್ತವ್ಯಗಳಲ್ಲಿ ಕನ್ನಡಮ್ಮನ ನೆನಪೂ ಒಂದು. ನಮ್ಮಿಂದ ಏನನ್ನೂ ಕೇಳದ ತಾಯಿ ನಮಗೆಲ್ಲವನ್ನೂ ಕೊಡುತ್ತಲೇ ಇರುತ್ತಾಳೆ. ತಾಯಿಗೆ ತನ್ನ ಮಗಿವಿನ ಮೇಲೆ ಅದಮ್ಯ ಆಸೆ, ಬಿಟ್ಟಿರಲಾರದ ಪ್ರೀತಿ, ನಿರ್ವ್ಯಾಜ-ನಿಷ್ಕಳಂಕ ಹೊಕ್ಕುಳ ಬಳ್ಳಿಯ ಮೋಹದ ಹರಹು. ತಾಯಿ ಎಂದಿಗೂ ಮಗುವನ್ನು ಮರೆಯುವುದಿಲ್ಲ, ಒಮ್ಮೆ ಹೆತ್ತಮೇಲೆ ಅದು 100 % RECORDED IN MIND ! ಮಗು ಕುಂಟೋ-ಕುರುಡೋ-ಮೂಕವೋ-ಬುದ್ಧಿಮಾಂದ್ಯವೋ ಅದಕ್ಕಾಗಿ ಮಗುವನ್ನು ತೊರೆಯುವುದಿಲ್ಲ. ಎಷ್ಟೋ ಮಕ್ಕಳು ಪೋಲಿಯೋ ಆಗಿ ಬಳಲುತ್ತಿದ್ದರೂ ತಾಯಿ ತಾನು ಮುದುಕಾಗಿ ದೇಹ ಬಿಡುವವರೆಗೂ ಪ್ರೀತಿಯಿಂದ ಪೊರೆದಿದ್ದನ್ನು, ಹೊತ್ತು ಹೊತ್ತಿಗೆ ಅವರ ಬೇಕುಬೇಡಗಳನ್ನು ಕೇಳಿ ತಿಳಿದು ಪೂರೈಸಿದ್ದನ್ನು ನೋಡಿದ್ದೇನೆ, ನೋಡುತ್ತಿದ್ದೇನೆ. ಇಂತಹ ಅಮ್ಮ ತನಗೇ ಹಸಿವಿದ್ದರೂ, ಆರೋಗ್ಯ ಕೆಟ್ಟಿದ್ದರೂ ತನ್ನ ಮಗು ಮಾತ್ರ ಉಂಡುಟ್ಟು ಸುಖವಾಗಿರಲಿ ಎಂದು ಬಯಸುತ್ತಾಳೆ,ಹಾರೈಸುತ್ತಾಳೆ, ಹರಸುತ್ತಾಳೆ , ತನ್ನಿಂದ ಆಗುವ ಸರ್ವ ಪ್ರಯತ್ನ ಮಾಡುತ್ತಾಳೆ. ಮಗು ದೊಡ್ಡದಾಗಿ ೫೦ ವರ್ಷವಾದರೂ ತಾಯಿಗೆ ಇನ್ನೂ ಅದು ಮಗುವೇ ! ಆ ಹಸಿ ಹಸಿ ಪ್ರೀತಿಯನ್ನು ಅವಳು ತೊಡೆದುಹಾಕುವುದೇ ಇಲ್ಲ. ಇಂತಹದೇ ಪ್ರೀತಿ ನಮ್ಮ ಕನ್ನಡಮ್ಮನದು, ಅಲ್ಲಿ ಹೇಳಲು ಬಾಯಿಲ್ಲ, ಹರಸಲು ಕಾಣುವ ಕೈಯಿಲ್ಲ, ಆದರೆ ಎಲ್ಲವೂ ಅವ್ಯಕ್ತ, ಆ ಅವ್ಯಕ್ತದಲ್ಲೇ ಆನಂದ ಕೊಡುವ ಪರಿ ಅದ್ಭುತ, ಶಾಶ್ವತ, ಚಿರಂತನ, ಚಿರನೂತನ. ಅಂತಹ ಹೆತ್ತ ಕನ್ನಡಮ್ಮ ಕೊಡುತ್ತಿರುವ ಕೈತುತ್ತನ್ನು ನೆನೆಸಿ ಬರೆದೆ, ನಿಮಗರ್ಪಿಸಿದೆ ಇಗೋ ಸ್ವೀಕರಿಸಿ ಈ ಹಾಡು--




ಕನ್ನಡಮ್ಮನ ಕೈತುತ್ತು ನೆನೆದು


ಕನ್ನಡ ಜನತೆಯ ಮನವನು ತಣಿಸಲು
ನನ್ನಾಸೆಯ ಕೃತಿ ಬರೆದಿಹೆನು
ಮುನ್ನಡೆಸಿರಿ ನೀವ್ ಬಂಧುಗಳೆಲ್ಲರು
ಉನ್ನತ ದಿನವನು ಬಯಸಿಹೆನು

ರನ್ನ ಷಡಕ್ಷರಿ ಪಂಪ ಹರಿಹರರು
ಕಣ್ಣತೆರೆಸಿದರು ಅಂದಿನಲಿ
ಜನ್ನ ಲಕುಮಿಪತಿ ಪೊನ್ನ ಮುದ್ದಣರು
ಮುನ್ನ ಬರೆದರದೋ ಪ್ರೀತಿಯಲಿ

ಅನುಕೂಲದಿ ಅರೆಗಳಿಗೆಯ ಎತ್ತಿಡಿ
ಮನೆವಾರ್ತೆಯ ಜೊತೆ ಅನುದಿನವು
ಇನಕುಲೇಂದ್ರನೋಲೈಸುತ ಬೆಳಗಿರಿ
ಮನುಕುಲಕಾಗುವ ಸುಪಥವನು

ಅನ್ನವೀಯುತಲಿ ಪೊರೆದೀ ಕನ್ನಡ
ಅನ್ಯ ಭಾಷೆಗಿಂತಲು ಮಿಗಿಲು
ಮಾನ್ಯಮಾಡಿ ನಿಮ್ಮೆದೆಗೂಡಲಿ ತುಸು
ನನ್ನೀ ಅಮ್ಮನ ಸುಖಮಡಿಲು

ವನರಾಶಿಯ ಸಹ್ಯಾದ್ರಿಯ ಶ್ರೇಣಿಯ
ಘನ ಖನಿಜದ ನಿಕ್ಷೇಪಗಳ
ಅನವರತವು ಕಾಪಿಡಿ ಕೊಲೆಗೈಯ್ಯದೆ
ಜನಕೀಯಲಿ ಸುಖ ಭೋಗಗಳ

ಕನವರಿಸಿದೆ ನಾ ಮುಂದಿನ ದಿನಗಳ
ಧನ-ಕನಕೇತರ ಕಣಜಗಳ
ಕೆನೆ ಹಾಲ್ಮೊಸರು ತುಪ್ಪ ಜೇನುಗಳ
ಕೊನೆಯಿರದಿರಲೀ ಊಟಗಳ

ಜನಸಂಪದವದು ಹರುಷದಿ ನಲಿಯಲಿ
ಮನದುಂಬುತ ಈ ಕೃತಿಗಳನು
ವನಸಿರಿಯದ ಶಾಶ್ವತವಿಡೆ ಜಗದಲಿ
ಕನಸದು ನನಸೆಂದೆನ್ನುವೆನು

8 comments:

  1. ನಿಮ್ಮ ಹಾರೈಕೆಯೇ ನನ್ನದು.ಕನ್ನಡ ಚಿರ೦ತನವಾಗಲಿ.

    ReplyDelete
  2. ಮಾನ್ಯರೇ,
    ಹಲವರಿಗೆ ನವಂಬರ್ ಡಿಸೆಂಬರ್ ಗಳಲ್ಲಿ ಮಾತ್ರ ಕನ್ನಡ ನೆನಪಾಗುತ್ತೆ. ಕನ್ನಡ ಜಾತ್ರೆಯಲ್ಲಿ ಕಂಠಪೂರ್ತಿ ಕುಡಿದು ಚಿತ್ತಾಗುವವರಿಗೇನೂ ಕಮ್ಮಿ ಇಲ್ಲ.ಆದರೆ ನಿಮ್ಮದು ನಿತ್ಯ ಕನ್ನಡಮ್ಮನ ಅರ್ಚನೆ.

    ಗುಡಿಗೆ ತಂದ ಹೂಗಳೆಲ್ಲ
    ಪೂಜೆಗೆಂದು ರಾಶಿ ಇರಲು
    ಶಿವನ ಮುಡಿಯ ಸೇರ್ವ
    ಒಂದು ದಳವೆ ಧನ್ಯವು|
    -ಇದು ನನ್ನ ಒಂದು ಕವನದ ಒಂದು ನುಡಿ.ಸಾಹಿತ್ಯ ಸಮಾರಾಧನೆಯಲ್ಲಿ ಎಷ್ಟೋ ಜನರು ತೊಡಗಿದ್ದಾರೆ. ಆದರೆ ನಿತ್ಯವೂ ಸಾಮಾಜಿಕ ಕಳಕಳಿಯನ್ನು ನಿಮ್ಮ ಬರಹದಲ್ಲಿ ಕಾಣಬಹುದಾಗಿದೆ.ನಿಮ್ಮ ಬರಹಗಳು ಶಿವನ ಮುಡಿಯನ್ನು ಸೇರಿದ ದಳದಂತೆ.

    ReplyDelete
  3. ಉತ್ತಮ ಮನಸ್ಸಿನಿ೦ದ ಉತ್ಪನ್ನವಾದ ಉತ್ತಮ ಕವನ..

    ಒಳ್ಳೆಯ ಸಾಹಿತ್ಯದ ಅನುಭವ, ಉತ್ತಮ ಭಾಷಾಜ್ನಾನ ಇರುವುದರಿ೦ದ ಒ೦ದು ಪುಸ್ತಕವನ್ನು ಹೊರತರುವುದರೆಡೆಗೆ ಪ್ರಯತ್ನ ಮಾಡಬಹುದಿತ್ತು ಎ೦ಬುದು ನನ್ನ ಅಭಿಪ್ರಾಯ.ಈಗಾಗಲೇ ಮಾಡಿದ್ದರೆ ಸ೦ತೋಷ.

    ReplyDelete
  4. ಕನ್ನಡದ ಬಗೆಗೆ ನಿಮಗಿರುವ ಒಲವನ್ನು ಕಂಡು ಮನಸ್ಸು ತುಂಬಿ ಬರುತ್ತದೆ.

    ReplyDelete
  5. ನಿಮ್ಮ ಕನ್ನಡದ ಒಲವೇ ನಮ್ಮದೂ ಸಹ. ನಮ್ಮೆಲ್ಲರ ಮನದ ಮಾತಿಗೆ ನೀವು ಭಾಷೆ ನೀಡಿ ಕವನವಾಗಿಸಿದ್ದಿರಾ... ಧನ್ಯವಾದಗಳು.

    ReplyDelete
  6. ಇಡೀ ದಿನ ನನ್ನ ವೃತ್ತಿಯಲ್ಲಿ ನಿರರ್ಗಳ ಆಂಗ್ಲಭಾಷೆಯಲ್ಲೇ ಇರುತ್ತೇನೆ, ಆದರೆ ಹೆಂಡತಿ ಬಂದಾಗ ತಾಯಿಯನ್ನು ಹೊರದಬ್ಬುವ, ಮರೆಯುವ ಸ್ವಭಾವದ ಮನಸ್ಸು ನನ್ನದಲ್ಲ! ನನ್ನ ತಾಯಿಗೆ ಕೊಟ್ಟ ಪ್ರೇಮದಷ್ಟೇ ಪ್ರೇಮವನ್ನ ಕನ್ನಡಕ್ಕೂ ಕೊಡುತ್ತೇನೆ, ದೇಶಕ್ಕೂ ಕೊಡುತ್ತೇನೆ. ನನ್ನ ಕಲ್ಪನೆಯೇ ವಸುದೈವಕುಟುಂಬ ಎಂದ ಮೇಲೆ ಇಲ್ಲಿ ಜಾತಿ,ಮತ,ಕೋಮು ಇದರ ಗೊಡವೆ ಇಲ್ಲ, ನಮ್ಮವರೇ ಎಲ್ಲಾ, ಸ್ವಲ್ಪ ತೀದ್ದಿ ತೀಡಿದರೆ ಎಲ್ಲವೂ ಸಾಕಾರ. ಹೀಗಾಗಿ ಕನ್ನಡ ಗುಡಿಯಲ್ಲಿ ಹಲವಾರು ಪ್ರಧಾನ ಅರ್ಚಕರಿದ್ದಾರೆ, ನಾನೊಬ್ಬ ಅರ್ಚಕರ ಸಹಾಯಕ ಎಂದಷ್ಟೇ ಹೇಳಲು ಬಯಸುತ್ತೇನೆ.

    ಬಹಳ ಸ್ನೇಹಿತರು ಇಲ್ಲಿ ಮನಮುಕ್ತಾರವರು ಹೇಳಿದಂತೆ ಪುಸ್ತಕ ರೂಪದಲ್ಲಿ ಹೊರತರಲು ಸಂದೇಶ ನೀಡಿದ್ದಾರೆ, ನನ್ನ ಬ್ಲಾಗ್ ನಲ್ಲಿ 21 ಮಾಲಿಕೆಗಳನ್ನು ಸದ್ಯ ನಡೆಸುತ್ತಿದ್ದೇನೆ, ದೇವರು ನಡೆಸಿದರೆ, ನಿಮ್ಮೆಲ್ಲರ ಪ್ರೀತಿ ಅನುರಳಿಸಿದರೆ ಒಳ್ಳೆಯ ಹೃದಯಗಳ ಮುಂದೆ ಎಲ್ಲಾ ಕೃತಿಗಳನ್ನೂ ಪುಸ್ತಕಗಳ ರೂಪದಲ್ಲಿ ಏಕಕಾಲಕ್ಕೆ ಹೊರತರುವ ಆಸೆ ಇದೆ.ಒಂದು ಕಾಲದಲ್ಲಿ ಈ ಮೊದಲೇ ತಮಗೆಲ್ಲ ಹೇಳಿದಂತೆ ಬರೆದ ಅನೇಕ ಕೃತಿಗಳನ್ನು ಕಳೆದುಕೊಂಡಿದ್ದೇನೆ, ಇನ್ನು ಹಾಗಾಗದಿರಲಿ ಎಂಬ ಸಲುವಾಗಿ ಬ್ಲಾಗ್ ನಲ್ಲಿ ತಮಗೆಲ್ಲ ಸಿಗುವಂತೆ ಲೋಕಾರ್ಪಣೆ ಮಾಡಿದ್ದೇನೆ. ನನ್ನ ಅನೇಕ ಕೃತಿಗಳು ಬೇರೆಯವರ ಹೆಸರಲ್ಲಿ ಪ್ರಕಟಿಸಲ್ಪಟ್ಟಿವೆ, ನನ್ನ ಕವನಗಳು ಅದೇ ರೀತಿ ಬೇರೆಯವರ ಹೆಸರಲ್ಲಿ ಕ್ಯಾಸೆಟ್ ಗಳ ರೂಪದಲ್ಲಿ ಹೊರಬಂದಿವೆ-ಈಗಲೂ ಬೆಂಗಳೂರಲ್ಲಿ ಲಭ್ಯವಿವೆ, ಆದರೆ ಆ ಕೃತಿಗಳ ಬಗ್ಗೆ ನನಗೆ ಪಶ್ಚಾತ್ತಾಪವಿಲ್ಲ ಬದಲಾಗಿ ನಮ್ಮ ಜನರ ಮನೋಭಾವನೆಗೆ ನೊಂದಿದ್ದೇನೆ. ಅದೇನೇ ಇದ್ದರೂ ಇನ್ನಾದರೂ ಮುಂದೆ ಕೆಲವು ಕಾಲದಲ್ಲಿ ಅವುಗಳ ಸಂಗ್ರಹವಾಗುತ್ತಿದ್ದಂತೆ ಪುಸ್ತಕಗಳನ್ನು ಹೊರತರುತ್ತೇನೆ, ತಪ್ಪದೆ ತಮಗೆಲ್ಲ ತಿಳಿಸಿಯೇ ಆ ಕೆಲಸ ಮಾಡುತ್ತೇನೆ,ಅಲ್ಲಿಯವರೆಗೆ ತಮ್ಮ ಸಲಹೆಯನ್ನು ಮನದಲ್ಲೇ ಗುನುಗುನಿಸಿಕೊಂಡಿರುತ್ತೇನೆ.

    ಬ್ಲಾಗ್ ಗೇ ಇತ್ತೀಚಿಗೆ ಅನೇಕ ಹೊಸ ಸ್ನೇಹಿತರು ಬಂದು ತಮ್ಮ ರುಜುವಾತಿಗಾಗಿ ಸತತ ನೋಡುತ್ತಿರುತ್ತೇವೆ ಎಂಬ ಅವ್ಯಕ್ತ ಹೇಳಿಕೆಯಿಂದ ನನ್ನ ಬ್ಲಾಗಾಡಿಗರಾಗಿ ಸೇರಿದ್ದಾರೆ, ಅಂತಹ ಎಲ್ಲಾ ಮಿತ್ರರಿಗೆ ತಡವಾಗಿಯಾದರೂ ಸ್ವಾಗತ ಬಯಸುತ್ತಿದ್ದೇನೆ-ಬೇಸರಿಸಬೇಡಿ ಎಂಬ ವಿನಮ್ರ ವಿನಂತಿಯೊಂದಿಗೆ.

    ಪ್ರತಿಕ್ರಿಯಿಸಿದ ಸರ್ವಶ್ರೀ ಕು.ಸು.ಮುಳಿಲಾಯ, ಹರಿಹರಪುರ ಶ್ರೀಧರ್,ಸುಧೀಂಧ್ರ ದೇಶಪಾಂಡೆ, ಸೀತಾರಾಮ್ ಮತ್ತು ಮನಮುಕ್ತಾದ ಶ್ರೀಮತೀ ಲತಾಶ್ರೀ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು, ನೇಪಥ್ಯದ ಓದುಗರೇ ಬಹಳ, ಅವರು ಪ್ರತಿಕ್ರಿಯೆ ಹಾಕುತ್ತ ಸಾಗದೆ ಹಾಗೇ ಓದುತ್ತ ಆನಂದಿಸುವವರು, ಅಂಥವರಿಗೂ ಮುಂದೆ ಓದಲಿರುವವರಿಗೂ ಸಹಿತ ನಮನಗಳು.

    ReplyDelete
  7. ಶ್ರೀಯುತ ವಿ ಆರ್ ಭಟ್ ಅವ್ರೆ,
    ಕನ್ನಡಮ್ಮನ ಬಗ್ಗೆ ಬರೆದ ನಿಮ್ಮ ಕವನ, ಬರಹವನ್ನು ನೋಡಿ ತುಂಬಾ ಸಂತೋಷವಾಯಿತು. ಕೇವಲ ನವಂಬರ್ ತಿಂಗಳಲ್ಲಿ ಮಾತ್ರ ಕನ್ನಡವನ್ನು ನೆನೆಸಿಕೊಳ್ಳುವರಿರುವ ಈ ಕಾಲದಲ್ಲಿ ನಿಮ್ಮಿಂದ ಇಂತಹ ಒಂದು ಬರಹವನ್ನು ನಿರೀಕ್ಷಿಸಿದ್ದೆ! ಕನ್ನಡ ನೆಲ ಜಲ ಭಾಷೆ ರಕ್ಷಣೆಗಾಗಿ ಎಷ್ಟೋ ಜನರು ತಮ್ಮ ಪ್ರಾಣವನ್ನು ಕೂಡ ತೆತ್ತಿದ್ದಾರೆ. ಕನ್ನಡ ಪ್ರೇಮಿಗಳ ತ್ಯಾಗವನ್ನು ನಾವು ಅರ್ಥ ಮಾಡಿಕೊಳ್ಳದೆ ಇಗ್ಲೀಷಿನ ಪುತ್ರರೆಂಬಂತೆ ವರ್ತಿಸುತ್ತಿದ್ದೇವೆ. ನಮ್ಮತನವನ್ನು ಉಳಿಸಿಕೊಳ್ಳದೆ ಪರಕೀಯ ಸಂಸ್ಕೃತಿಗೆ ಮೊರೆ ಹೋಗಿ ತಾಯ್ನಾಡನ್ನೇ ಮರೆಯುವಂತ ನೀಚರು ಅರ್ಥಮಾಡಿಕೊಂಡರೆ ಒಳ್ಳೆಯದು!
    ನಿಮ್ಮ ಪ್ರಯತ್ನ ಸಾರ್ಥಕವಾಗಲಿ.
    ಕೃತಿ ಚೌರ್ಯ ಮಾಡುವವರ ಬಗ್ಗೆ ನಿಮ್ಮ ತಾಳ್ಮೆಯ ದೋರಣೆ ನನಗೇಕೋ ಸರಿ ಕಾಣಲಿಲ್ಲ!
    (ನಿಷ್ಟುರವಾಗಿ ಹೇಳಿದ್ದಕ್ಕೆ ಬೇಸರ ಮಾಡಿಕೊಳ್ಳಬೇಡಿ!)

    ReplyDelete
  8. ಪ್ರವೀಣ್ ನನ್ನ ಮೇಲಿನ ನಿಮ್ಮ ಆ ಅಭಿಮಾನ,ಪ್ರೀತಿ ಅರ್ಥವಾಗುತ್ತದೆ, ಗಾದೆಗಳಿವೆ ನೋಡಿ ತಾಳಿದವನು ಬಾಳಿಯಾನು ಅಥವಾ patience pays ಹಾಗಾಗಿ ಕೃತಿ ಚೌರ್ಯವಾದರೂ ಕ್ಷಮಿಸಿಬಿಡುವುದು ನಮ್ಮ ದೊಡ್ಡತನ, ನಮ್ಮಲ್ಲಿ ಜ್ಞಾನಕ್ಕೆ ಕೊರತೆ ಇರದಂತೆ ವಾಗ್ದೇವಿ ಹರಸಿದರೆ ಅಂತಹ ಎರವಲು ಪಡೆದವರ ಕಾಲ ಎಷ್ಟು ಸಮಯ ನಡೆದೀತು ಅಲ್ಲವೇ ? ಮೇಲಾಗಿ ಜಗಳದ ಮನೋಭೂಮಿಕೆ ನನ್ನದಲ್ಲವೇ ಅಲ್ಲ ಹೀಗಾಗಿ ಅದಕ್ಕಾಗಿ ನಾನು ಪರಿತಪಿಸಿ ಜಗಳಕಾಯಲಿಲ್ಲ ! ನಿಮ್ಮ ಕಳಕಳಿಗೆ ತುಂಬಾ ಆಭಾರಿ, ಕನ್ನಡವನ್ನು ಎಲ್ಲರೂ ಹೀಗೆ ನೆನೆಸುತ್ತಲೇ ಇರಬೇಕು, ನಿತ್ಯವೂ ನಮದು ಕನ್ನಡಾರಾಧನೆಯೇ ಆದರೂ ಮಧ್ಯೆ ಮಧ್ಯೆ ಎಂದೋ 'ಅಮ್ಮಾ , ಅವ್ವಾ , ಅಬ್ಬೆ, ಅಕ್ಕಾ ' ಅಂತ ನಮ್ಮ ತಾಯಂದಿರನ್ನು ಕರೆದಂತೆ ಒಮ್ಮೆ ನೇರ ಕನ್ನಡಮಾತೆಯನ್ನು ಕರೆಯುತ್ತಿದ್ದರೆ ಅದು ಕವಿವರ್ಯರು ಸಾರಿದ ಹಾಗೇ ' ಕನ್ನಡ ಗೋವಿನ ಓ ಮುದ್ದಿನ ಕರು' - ಕರು ಕೂಗಬೇಕು, ಅಮ್ಮ ಹಸುವನ್ನು ಕೂಗಿ ಕರೆಯಬೇಕು, ನಮ್ಮ ಕನ್ನಡ ಹಸು ಕಾಮಧೇನು, ಬೇಡಿದ್ದನ್ನು ಕೊಡುವ ಹಸು, ಯಾವ ಶ್ರೀಮಂತಿಕೆಗೆ, ಸೌಲಭ್ಯಕ್ಕೆ ಕೊರತೆಯಿಲ್ಲ ಇಲ್ಲಿ, ಆ ತಾಯಿಯ ನೆನೆಪು ಎಲ್ಲರಿಗೂ ಆಗಾಗ ಮರುಕಳಿಸಲಿ ಎಂಬುದು ನನ್ನಮನದಿಚ್ಛೆ, ಧನ್ಯವಾದ.

    ReplyDelete