ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Thursday, February 2, 2012

ಅಜ್ಜನ ರಾಮರಾಜ್ಯದಲ್ಲಿ ಹುಲಿ-ಆನೆಗಳಿಗಾಗಿ ತವಕಿಸುತ್ತ ಕಳೆದ ದಿನಗಳು !


ಅಜ್ಜನ ರಾಮರಾಜ್ಯದಲ್ಲಿ ಹುಲಿ-ಆನೆಗಳಿಗಾಗಿ ತವಕಿಸುತ್ತ ಕಳೆದ ದಿನಗಳು !

[ಮುಂದುವರಿದು ಓದಿ ಮುಗಿಸೋಣವೇ ?....]

ಬಸವನ ಕೊಟ್ಗೆ ಬೀಜದ ಮರ ಎಂಬ ಮರವೊಂದು ಜಮೀನಿನ ಮನೆಯ ಹತ್ತಿರವೇ ಇತ್ತು. ಅದರ ಕಾಯಿಗಳು ಒಂಥರಾ ಅಡ್ಡ ವಾಸನೆಯುಳ್ಳವು. ಅದರ ಹೊರಕವಚ ಒಡೆದು ತೆಗೆದಾಗ ಒಳಗೆ ಬಾದಾಮಿಯಂತಹ ಬೀಜ-ಎಂತಹ ರುಚಿ! ಅಂತಹ ನಾಕಾರು ಕಾಯಿಗಳು ಸಿಕ್ಕರೆ ನಮ್ಮ ಪುಣ್ಯ. ಎತ್ತರದ ಮರದಲ್ಲಿ ತೂಗಾಡುವ ಕಾಯಿಗಳು ಗಾಳಿಗೇ ಬೀಳಬೇಕೇ ವಿನಃ ನಾವು ಬೀಸಿ ಎಸೆದ ಕಲ್ಲುಗಳು ತಾಗುತ್ತಲೇ ಇರಲಿಲ್ಲ. ಆದರೂ ಗಾಳಿಬೀಸಿ ಬೀಜದ ಉದುರುವಿಕೆಗಾಗಿ ಗಂಟೆಗಟ್ಟಲೆ ನಾವು ಕಾದು ಕೂತಿರುತ್ತಿದ್ದೆವು. ಮರದ ಪಕ್ಕದಲ್ಲೇ ಇನ್ನೊಂದೆರಡು ಚಿಕ್ಕಮರಗಳು. ಮರಕೋತಿ ಆಟಕ್ಕೆ ಕೋತಿಗಳೇ ಆಗಿದ್ದ ನಮಗೆ ಹೇಳಿಮಾಡಿಸಿದ್ದ ಜಾಗ ! ಅಲ್ಲೇ ಕೆಲವೊಮ್ಮೆ ಅಡಗಿಕೊಳ್ಳುವ ಆಟ, ಕಿವರ್ ಬಿಟ್ ಕಿವರ್ಯಾರು ?-ಆಟ ಎಲ್ಲಾ ನಡೆಯುತ್ತಿತ್ತು.

ಕಾಡಿನ ತುಂಬಾ ಎಲ್ಲೇ ಓಡಾಡಿದರೂ ಒಂದಿಲ್ಲೊಂದು ಕಾಡ ಮರದ ಘಮ ಮೂಡಿಗೆ ಬಡಿಯುತ್ತಿತ್ತು. ಅದು ಇಂತಿಂಥದ್ದೇ ಎಂದು ಗುರ್ತು ಹಿಡಿಯಲಾಗದಿದ್ದರೂ ಕೆಲವು ಔಷಧೀಯ ಮೂಲಿಕೆಗಳೂ ಅಂತಹ ಮರಗಳಲ್ಲಿರುತ್ತಿದ್ದವು. ಕೆಲವೊಮ್ಮೆ ಹಾದುಹೋಗುವಾಗ ಇಂದು ನಾವು ಉಪಯೋಗಿಸುವ ವಿಕ್ಸ್ ಪರಿಮಳ ಬರುತ್ತಿತ್ತು. ಇನ್ನೂ ಕೆಲವೊಮ್ಮೆ ಮಸಾಲೆಗೆ ನಾವು ಬಳಸುವ ದಾಲ್ಚಿನಿ ಎಲೆಯ ಸುಗಂಧ! ನಡುನಡುವೆ " ಅದೋ ಅಲ್ನೋಡು ಹುಲಿ ಹೆಜ್ಜೆ " ಎಂದು ಮಾವನ ಮಕ್ಕಳು ತೋರಿಸುತ್ತಿದ್ದರು. ಹುಲಿಯ ಹೆಜ್ಜೆ ಗುರುತು ಕಂಡ ನಮಗೆ ಒಳಗೊಳಗೇ ನಡುಕ! ಆದರೂ ಹುಲಿಯನ್ನು ಎಲ್ಲಾದರೂ ಜೀವಂತ ಕಾಣುವ ತವಕ!-- ಈ ಎರಡೂ ಭಾವನೆಗಳ ತಾಕಲಾಟದಲ್ಲಿ ಒಮ್ಮೊಮ್ಮೆ ನಡುಕ ಜಾಸ್ತಿಯಾದ್ರೆ ಇನ್ನೊಮ್ಮೊಮ್ಮೆ ತವಕ ಜಾಸ್ತಿ ! ಹುಲಿಗಳ ಇರುವಿಕೆ ಮತ್ತು ಓಡಾಟವಂತೂ ಖಾತ್ರಿಯಾಗಿತ್ತು. ಆದರೆ ಅಂದೆಲ್ಲಾ ಪ್ರಾಣಿಗಳು ಹಾಗೆ ಏಕಾಏಕಿ ಮನುಷ್ಯರ ವಸಾಹತುಗಳಿಗೆ ಹಗಲು ಹೊತ್ತು ಭೇಟಿ ನೀಡುತ್ತಿರಲಿಲ್ಲ. ಬೆಳಗಿನ ೫ ಗಂಟೆಯೊಳಗೆ ಅವುಗಳ ಓಡಾಟ ಮುಗಿದು ಅವು ಕಾಡನ್ನೋ ಕಾಡೊಳಗಿನ ಗವಿಗಳನ್ನೋ ಸೇರಿಬಿಡುತ್ತಿದ್ದವು. ಅವು ಹೊರಬರುವುದೇ ರಾತ್ರಿ ಹೊತ್ತಿನಲ್ಲಿ; ನಮಗೆ ನಡುಕ ಜೋರಾಗುವುದೂ ಆದೇ ಕತ್ತಲಲ್ಲಿ.

ಒಮ್ಮೆ ನಾವು ಜಮೀನಿನಲ್ಲಿರುವ ರಾತ್ರಿ, ಹುಲಿಯೊಂದು ಭಯಂಕರವಾಗಿ ಆರ್ಭಟಿಸಿತ್ತು. ಹಾಂಕೂಂ ಹಾಂಕೂಂ ಹಾಂಕೂಂ......ಸದ್ದಿಗೆ ನಮಗೆಲ್ಲಾ ಚಳಿಯಲ್ಲೂ ಬೆವರು ಹರಿಯುತ್ತಿತ್ತು, ಉಚ್ಚೆಗೆ ಅವಸರವಾದರೂ ಬಚ್ಚಲು ಹೊರಗೆ ಇದ್ದಿದ್ದರಿಂದ ಹೋಗಲು ಭಯವಾಗುತ್ತಿತ್ತು. ಇನ್ನು ಹೊರಗಡೆ ಜಮೀನಿನ ಜಾಗದಲ್ಲಿ ಎಲ್ಲಾದರೂ ಉಚ್ಚೆಗೆ ಹೋಗೋಣ ಎಂದರೆ ಅಲ್ಲೇ ಎಲ್ಲಾದರೂ ಹುಲಿ ಕೂತಿದ್ದರೆ ಎಂಬ ಅನಿಸಿಕೆ ಬೇರೆ. ಯಾರಲ್ಲೂ ಹೇಳಿಕೊಳ್ಳಲಾರೆವು, ಒತ್ತಡ ತಾಳಿಕೊಳ್ಳಲಾರೆವು. ಹಾಗೂ ಇದ್ದಬದ್ದ ದೇವರನ್ನೆಲ್ಲಾ ನೆನೆಯುತ್ತಾ ಚಾದರವನ್ನು ಮುಸುಕುಹಾಕಿಕೊಂಡು ಮಲಗಿ ಗಂಟೆಗಟ್ಟಲೆ ಕಳೆದು ನಿಧಾನವಾಗಿ ಮಾವನ ಮಕ್ಕಳನ್ನು ಕರೆದು ಎಬ್ಬಿಸಿಕೊಂಡು ಬಚ್ಚಲಿಗೆ ಹೋಗಿದ್ದೆವು. ಬಚ್ಚಲಿಗೆ ಹೋಗುವಾಗ ಕೈಕಾಲು ತರತರ ತರತರ. ಮತ್ತೆ ಮನೆಯೊಳಗೆ ಬಂದಮೇಲೇ ಬದುಕುವುದು ಗ್ಯಾರಂಟಿ ಎಂದು ಅಂದುಕೊಂಡಿದ್ದು! [ಹಗಲು ಹೊತ್ತಾದರೆ ನಾವು ಬಿಡುತ್ತಿರಲಿಲ್ಲ ಓಹೊಹೊ ಹಾಗೇನೂ ತಿಳೀಬೇಡಿ , ಕತ್ತಲೆಯಲ್ಲಿ ಏನೋ ಪಾಪ ಅಂತಾ ಸುಮ್ನಿದ್ದೆವಪ್ಪ!] ಮಾರನೇ ಬೆಳಿಗ್ಗೆ ಪಕ್ಕದ ಮರಾಠಿ ಕೇರಿಯಿಂದ ಬಂದ ಸುದ್ದಿ ಆಘಾತಕಾರಿಯಾಗಿತ್ತು. ಅಲ್ಲೊಂದು ಮನೆಯ ಬಾಗಿಲಿರದ ತಟ್ಟಿಯ ಕೊಟ್ಟಿಗೆಗೆ ನುಗ್ಗಿದ್ದ ಹುಲಿ ಕರುವೊಂದನ್ನು ಮುರಿದು ಎಳೆದುಕೊಂಡು ಹೋಗಿತ್ತು! ಪಾಪದ ಜೀವವೊಂದರ ಹರಣವಾಗಿತ್ತು- ಅದು ಇನ್ನೊಂದು ರಕ್ಕಸ ಜೀವಕ್ಕೆ ಆಹಾರವಾಗಿತ್ತು.

ಒಂದು ಬೆಳಿಗ್ಗೆ ಅತ್ತೆ ಘಟನೆಯೊಂದನ್ನು ಹೇಳಿದ್ದಳು. ಬೆಳಗಿನ ಆರುಗಂಟೆಗೆ ಎಂದಿನಂತೇ ತಣ್ಣಗಿನ ವಾತಾವರಣ. ಇನ್ನೇನು ಬೆಳಕು ಪೂರ್ತಿ ಹರಿದಿಲ್ಲ. ಅಂತಹ ಸಮಯದಲ್ಲಿ ಮನೆಗೆ ಕುಡಿಯುವ ನೀರು ತರುವ ಸಲುವಾಗಿ ಜಮೀನಿನ ಕೆಳಭಾಗದಲ್ಲಿದ್ದ ಬಾವಿಗೆ ಹೋಗಿದ್ದಳು. ಹೋದವಳೇ ಪುಸಕ್ಕನೆ ಬಿಂದಿಗೆಗೆ ಹಗ್ಗ ಕಟ್ಟಿ ಬಾವಿಗೆ ಬಿಟ್ಟು ನೇರು ಸೇದುತ್ತಿರುವಾಗ ಎಡಕ್ಕೆ ತಿರುಗಿ ನೋಡಿಬಿಟ್ಟಿದ್ದಾಳೆ. ನಾಲ್ಕು ಮಾರು ದೂರದಲ್ಲಿ ಪರ್ವತದಂತಹ ಕಪ್ಪು ಆಕೃತಿ ಬಾಳೆಮರಗಳ ಮಧ್ಯೆ ನಿಂತುಬಿಟ್ಟಿದೆ! ಹಗ್ಗ ಕೈಬಿಟ್ಟವಳೇ " ಅಯ್ಯಯ್ಯೋ ಅಪ್ಪೋ ನಾ ಸತ್ನೋ " ಎಂದು ಕೂಗುತ್ತಾ ಮನೆಗೆ ಓಡಿದ್ದಾಳೆ. ಬಂದಿದ್ದು ಶ್ರೀಮಾನ್ ಗಜರಾಜರು ! ಅವರು ಒಂಟಿ ಸಲಗ ಬೇರೆ ಆಗಿದ್ದರು ಎಂಬುದು ಮಾವನ ಅಂಬೋಣ. ಉದ್ದುದ್ದ ದಂತಗಳನ್ನು ಹೊಂದಿದ್ದ ಆ ಆನೆ ಬಹಳ ಎತ್ತರವಾಗಿದ್ದುದು ಸತ್ಯವಂತೆ. ಅಲ್ಲಿಂದ ಮೇಲೆ ಅತ್ತೆ ಶಾಸ್ತ್ರಗಳನ್ನೆಲ್ಲಾ ಬದಿಗಿಟ್ಟು ಬೆಳ್ಳಂಬೆಳಿಗ್ಗೆ ನೀರು ತರುವುದಕ್ಕೇ ಹೋಗುವುದನ್ನೇ ನಿಲ್ಲಿಸಿದಳಂತೆ.

ಒಮ್ಮೆ ನಾವು ಮಾಳದಲ್ಲಿ ಇದ್ದಾಗ ಸುಮ್ಮನೇ ಅಲ್ಲಿರುವ ಸಾಮಾನುಗಳನ್ನು ತಡಕಾಡುತ್ತಿದ್ದೆವು. ಮೊದಲು ನಮಗೆ ಕಣ್ಣಿಗೆ ಬಿದ್ದಿದ್ದು ಬೀಡಿ ಕಟ್ಟು ಮತ್ತು ಬೆಂಕಿಪೊಟ್ಟಣ. ಅಲ್ಲಿ ನಾವು ಮಕ್ಕಳ ಹೊರತು ಬೇರೇ ಯಾರೂ ಇರಲಿಲ್ಲ. ನಮ್ಮದೇ ರಾಜ್ಯ! -ಕೇಳಬೇಕೇ ? ಮನೆ ದೂರದಲ್ಲಿ ಕಾಣುತ್ತಿದ್ದರೂ ಮಾಳದಲ್ಲಿ ಏನು ನಡೆಯುತ್ತಿದೆ ಎಂಬುದು ಮನೆಯಲ್ಲಿರುವವರಿಗೆ ತಿಳೀತಾ ಇರ್ಲಿಲ್ಲ. ಮಾವನ ಗಂಡುಮಕ್ಕಳು ಸೇರಿದಂತೇ ನಾವು ಒಂದು ಚಾನ್ಸ್ ತೆಗೆದುಕೊಳ್ಳೋಣ ಏನೋ ಮಜಾ ಇರ್ಬೇಕು ಅದರಲ್ಲಿ ಎಂದು ಅಂದುಕೊಳ್ಳುತ್ತಿದ್ದೆವು. ನಿತ್ಯವೂ ಮಾವ ಅಗ್ನಿಯನ್ನು ತ್ರಿಕಾಲವಲ್ಲ ಅದೆಷ್ಟೋ ಕಾಲ ಆವಾಹನೆ ಮಾಡಿ ಹೊಗೆ ಬಿಡುವುದನ್ನೂ ಹೊಗೆ ಬಿಡುತ್ತಾ ಅದೇನೋ ಒಂದು ರೀತಿ ಗಮ್ಮತ್ತು ಇರುವ ಮುಖಭಾವ ಪಡೆಯುವುದನ್ನೂ ನೋಡಿದ್ದೆವು. ಅಲ್ಲೀಗ ತಡೆಹಾಕಲು ಯಾರೂ ಇರಲಿಲ್ಲ. ಮಕ್ಕಳಿಗೆಲ್ಲರಿಗೂ ಒಂದೇ ಆಸೆ, ಅದು ಹೇಗಿರುತ್ತದೆ ಎಂದು ನೋಡಬೇಕೆಂಬುದು. ಕಡ್ಡಿ ಗೀರಿ ಬೆಂಕಿ ಹಚ್ಚಿ ಸೇದಲು ಪ್ರಯತ್ನಿಸಿದೆವು. ಕೆಮ್ಮು...ವಾಕರಿಕೆ...ಥೂ.....ಹಾಳಾದ್ದು...ಬಾಯೆಲ್ಲಾ ಕೆಟ್ಟ ನಾತ! ಗಂಟೆಗಟ್ಟಲೆ ಹೊಟ್ಟೆ ತೊಳೆಸಿದಂತಾಗಿತ್ತು. ಇಂಥಾ ಹೊಲಸು ನಾತ ಮಾವನಿಗೆ ಅದೇನು ತೃಪ್ತಿ ಕೊಡುತ್ತದೋ ದೇವರೇಬಲ್ಲ. ಅಂದಿನಿಂದ ಮತ್ತೆ ಅದಕ್ಕೆ ಮತ್ತೆ ತಲೆಹಾಕಲಿಲ್ಲ.

ಇನ್ನೊಂದು ದಿನ ಬೆಳಿಗ್ಗೆ ಯಾವುದೋ ತುರ್ತಿನ ಕೆಲಸದಲ್ಲಿ ಮನೆಗೆ ಮರಳಿದ ಮಾವ ಕೋವಿಯನ್ನು ಮಾಳದಲ್ಲೇ ಬಿಟ್ಟಿದ್ದರು. ಆಡುತ್ತಾ ಆಡುತ್ತಾ ಮಾಳಕ್ಕೆ ಹೋದ ನಾವು, ಹಾಸಿದ್ದ ಗೋಣೀಚೀಲದ ಕೆಳಗೆ ಮಲಗಿಸಿಟ್ಟ ಕೋವಿಯನ್ನು ಕಂಡಿದ್ದೆವು. ಇರುವವರೆಲ್ಲಾ ಬಹಳ ಗುರಿಕಾರರೇ ಆಗಿದ್ದರು! ನಾಮೇಲು ತಾಮೇಲು ಎಂದು ಕೋವಿ ಎತ್ತಿಕೊಂಡು ಗುರಿ ಹಿಡಿಯಲು ತೊಡಗಿದ್ದೆವು. ಬಂದೂಕಿನ ಅಗುಳಿಯನ್ನು ಎಳೆಯುತ್ತಿದ್ದಂತೇ ಅದು ಹಿಂದಕ್ಕೆ ಒದೆಯುವುದಂತೆ ಎಂದು ಮಾವನ ಮಕ್ಕಳು ಹೇಳಿದರು. ಬಂದೂಕು ಎಳೆದವನ ಗತಿ ಏನಾಗಬೇಡ!! ಮೊದಲೇ ಬಂದೂಕನ್ನು ಅದು ವರೆಗೂ ಕಂಡಿದ್ದು ಚಿತ್ರದಲ್ಲಷ್ಟೇ ಆಗಿತ್ತು. ಜಮೀನಿಗೆ ಬಂದಮೇಲಷ್ಟೇ ಕೋವಿಯ ಪ್ರತ್ಯಕ್ಷ ದರ್ಶನವಾಗಿದ್ದು! ಅಗುಳಿ ಎಳೆದು ಹಿಡಿದಿದ್ದೇನೆ.....ಬಿಟ್ಟರೆ ಕೋವಿ ಹಿಂದಕ್ಕೆ ಒದ್ದರೆ ನನ್ನ ಗತಿ ಏನು ಎಂಬ ಹೆದರಿಕೆ. ಇಡೀ ಶರೀರವೆಲ್ಲಾ ಕಂಪಿಸಿ "ಅಯ್ಯೋ ಬದುಕಿದ್ದರೆ ಇನ್ನು ಜಮೀನಕಡೆ ತಲೆ ಹಾಕಬಾರದು" ಎಂದುಕೊಂಡಿದ್ದೆ. ಅಷ್ಟರಲ್ಲೇ ಮಾವ ಯಾವುದೋ ಕೆಲಸಕ್ಕೆ ಹೋದವರು ಕೋವಿಯನ್ನು ಮಾಳದಲ್ಲೇ ಬಿಟ್ಟಿದ್ದು ನೆನಪಾಗಿ ಓಡೋಡಿ ಬಂದರು. ವಾಸ್ತವಕ್ಕೆ ಕೋವಿಯಲ್ಲಿ ಈಡು ತುಂಬಿರಲಿಲ್ಲವಂತೆ. ಅದು ಖಾಲೀ ಇತ್ತು. ಹೀಗಾಗಿ ನನ್ನ ಕೈಯ್ಯಿಂದ ಅದನ್ನು ಕಸಿದುಕೊಂಡರು! ಎಲ್ಲರನ್ನೂ ಒಂದಷ್ಟು ಬೈದು ಹೋದರು.

ಗದ್ದೆಯ ಬದಿಯಲ್ಲಿ ಬೆಳ್ಳಕ್ಕಿಗಳ ವಿಹಾರವಂತೂ ಸದಾ ಇರುತ್ತಿತ್ತು. ಒಂಟಿಕಾಲಲ್ಲಿ ನಿಲ್ಲುವ ಬಕಗಳೂ ಇದ್ದವು. ಹಾರುತ್ತಾ ಕೂಗುತ್ತಾ ಅಲ್ಲಲ್ಲಿ ಹಿಂಡು ಹಿಂಡಾಗಿ ಗದ್ದೆಯ ಕೀಟಗಳನ್ನೋ ಹುಳ-ಹುಪ್ಪಡಿಗಳನ್ನೋ ತಿನ್ನುತ್ತಿದ್ದವು. ಹಸಿರುಟ್ಟ ಗದ್ದೆಗಳಲ್ಲಿ ಬಿಳಿಯ ರಂಗೋಲಿ ಇಟ್ಟಂತೇ ಕಾಣುವ ಆ ದೃಶ್ಯದಲ್ಲಿ ರಂಗೋಲಿಗೆ ನಿರ್ದಿಷ್ಟವಾದ ಆಕಾರವಂತೂ ಇರಲಿಲ್ಲ! ಬದಲಾಗುವ ಬಿಳಿಯ ರಂಗೋಲಿಗಳ ಪಕ್ಕದಲ್ಲೇ ಉರ್ಸಾನಕ್ಕಿಗಳೆಂಬ ಹಕ್ಕಿಗಳೂ ಬರುತ್ತಿದ್ದವು. ಅವುಗಳ ಬಣ್ಣ ಗಾಢ ಕಂದು. ಗದ್ದೆಯ ಬದುವಿನ ಏರಿಯಲ್ಲಿ ಅಲ್ಲಲ್ಲಿ ಹೂ ಗಿಡಗಳಿದ್ದವು. ಮಾಗಿ, ಮಲ್ಲಿಗೆ, ಜಾಜಿ-ಜೂಜಿ ಹೀಗೇ ಹಲವು ತೆರನಾದ ಹೂಗಳು ಬಿಡುತ್ತಿದ್ದವು. ಅವುಗಳ ಮಕರಂದ ಹೀರಲು ಹಲವು ವಿಧದ ದುಂಬಿಗಳೂ ಚಿಕ್ಕ ಪುರ್ಲೆ ಹಕ್ಕಿಗಳೂ ಬರುತ್ತಿದ್ದವು. ಅಂಗೋಡಂಗ ಫಲವಿರಬೇಕು ಇವತ್ತು ನಮಗೆ ಹಣ್ಣು ಸಿಗದಿದ್ದರೂ ನಾಳೆ ಮತ್ತಿನ್ಯಾರೋ ಜನಾಂಗ ತಿನ್ನುತ್ತದೆ ಬಿಡು ಎಂಬ ಅವನದೇ ಉದಾತ್ತ ಭಾವದಿಂದ ಅಜ್ಜ ಜಮೀನಿನ ಹಲವೆಡೆ ಸಾಧ್ಯವಾಗುವಲ್ಲೆಲ್ಲಾ ಮಾವು, ಪೇರಲೆ, ಚಿಕ್ಕು, ಹಲಸು ಹೀಗೇ ಹಣ್ಣುಬಿಡುವ ಸಸ್ಯ ವೈವಿಧ್ಯವನ್ನು ನೆಡಿಸಿದ್ದ. ಕೆಲವೊಮ್ಮೆ ತಾನೇ ಸ್ವತಃ ನಿಂತು ಮಣ್ಣು-ಗೊಬ್ಬರಗಳ ಕೆಲಸ ಮಾಡಿದ್ದೂ ಇದೆ. ನಮ್ಮೂರಲ್ಲೂ ಅಷ್ಟೇ: ಬೆಳೆದ ಹಣ್ಣುಗಳನ್ನು ಅಲ್ಲಿರಬಹುದಾದ ಎಲ್ಲರಿಗೂ ಅಜ್ಜ ಹಂಚುತ್ತಿದ್ದ, ಹಂಚಿಯೇ ತಿನ್ನಬೇಕೆಂಬ ಅಭ್ಯಾಸ ಅಜ್ಜನದಾಗಿತ್ತು.

ಜಮೀನಿನ ಕೆಳಭಾಗದಲ್ಲಿ ಉದ್ದಕ್ಕೂ ಹರಿಯುವ ದೊಡ್ಡ ಹಳ್ಳವೊಂದಿತ್ತು ಎಂದಿದ್ದೆನಲ್ಲಾ ..ಅದರಲ್ಲಿ ನಾವು ಈಜಲು ಹೋಗುತ್ತಿದ್ದೆವು. ಆ ಹಳ್ಳದಲ್ಲಿ ವಾಟೆಚಪ್ಪಿನ ಸಂದಿಗಳಿಂದ ಹಾಯ್ದು ಬರುವ ತಣ್ಣನೆಯ ಸ್ಫಟಿಕಸದೃಶ ನೀರು ಹರಿಯುತ್ತಿತ್ತು. ಯಾರೂ ಗಲೀಜು ಮಾಡಿರದ ಪರಿಶುದ್ಧ ನೀರು ಅದು. ಪೊಡವಿಯ ಅಡವಿಯ ನಡುನಡುವೆ ಹುದುಗಿರುವ ಗಿಡಗೋಪಾಲಕೃಷ್ಣನ ಮೂಲಿಕಾ ತೀರ್ಥ ಅದಾಗಿತ್ತು! ಅದರಲ್ಲಿ ಅದೆಷ್ಟು ಖನಿಜಪದಾರ್ಥಗಳು ಇದ್ದವೋ ಶಿವನೇ ಬಲ್ಲ. ಹಳ್ಳದಲ್ಲಿ ಬಂಡೆಗಳಿದ್ದವು, ಚಿಕ್ಕ ಚಿಕ್ಕ ಕಲ್ಲುಗಳಿದ್ದವು. ಹಾಗೆಯೇ ಹಾವಸೆಯೂ ಇದ್ದಿದ್ದರಿಂದ ಜಾರುತ್ತಿತ್ತು. ಕಲ್ಲಿನಮೇಲೆ ಕಾಲಿರಿಸಿ ’ಕಾಸು ಎಣಿಸಿಕೊಂಡ’ ಅನುಭವ ಇದೆ ಬಿಡಿ. ಆದರೆ ಇನ್ನೂ ಎಳೆಯ ಪ್ರಾಯ ಆಗಿದ್ದರಿಂದ ಬಿ.ವಿ.ಪಂಡಿತರ ತೈಲ ಹಚ್ಚಿಕೊಳ್ಳುವ ಪ್ರಮೇಯ ಆಗ ಬಂದಿರಲಿಲ್ಲ! ಕೆಲವೊಮ್ಮೆ ನೀರಿನಲ್ಲೇ ಅಟ್ಟಾಡಿಸಿಕೊಂಡು ಮುಖ ಮೂತಿ ಜರಿದುಕೊಂಡೋ ಕುಂಡೆಗೆ ಹೊಡೆತಬಿದ್ದು ನೊಂದುಕೊಂಡೋ ಉಜ್ಜಿಕೊಳ್ಳುತ್ತಾ ಕೂತಿದ್ದಿದೆ. ಮುಖವಡಿಯಾಗಿ ಬಿದ್ದರೂ ಮೂಗಿಗೆ ಏನೂ ಆಗಿಲ್ಲಾ ಎನ್ನುವ ಇವತ್ತಿನ ಅಂಹಕಾರಿಗಳಂತೇ ನಾವು ಬಿಟ್ಟುಕೊಡುವ ಜನವಾಗಿರಲಿಲ್ಲ! ಕಾಲಲ್ಲಿ ಆದ ಗಾಯಗಳು ವಾರಗಟ್ಟಲೆ ನೋವು ಕೊಟ್ಟರು ಹಳ್ಳದಲ್ಲಿ ಆಡುವ ಖುಷಿ ಇವತ್ತಿನ ಸ್ವಿಮ್ಮಿಂಗ್ ಪೂಲ್ ನಲ್ಲಿ ಸಿಗುವುದಿಲ್ಲ!

ಹಳ್ಳದಲ್ಲಿ ಅಲ್ಲಲ್ಲಿ ಹಲವಾರು ಕಾಲುಗಳಿರುವ ಊದ್ದದ ಒಂದು ರೀತಿ ಹುಳಗಳಿರುತ್ತಿದ್ದವು. ಅವು ನೀರಲ್ಲಿ ಈಜಾಡುತ್ತಾ ಬಂಡೆಗಳ ಸಂದಿನಲ್ಲಿ ಸೇರಿಕೊಂಡು ಬಿಡುತ್ತಿದ್ದವು. ಅವುಗಳು ಹೆಸರು ಅಂದಿಗೆ ನಮಗೆ ಗೊತ್ತಾಗಿರಲಿಲ್ಲ. ನಂತರ ತಿಳಿದಿದ್ದು ಅವು ಸೀಗಡೀ ಮೀನುಗಳು ಎಂದು. ಅವುಗಳನ್ನು ನಾವು ಹಿಡಿಯಲು ಪ್ರಯತ್ನಿಸುತ್ತಿದ್ದೆವು. ಇನ್ನೇನು ಮರಿ ಸೀಗಡಿಯೊಂದು ಸಿಕ್ಕೇ ಬಿಟ್ಟಿತು ಎಂದುಕೊಳ್ಳುವಷ್ಟರಲ್ಲಿ ಅದು ಸದ್ದಿಲ್ಲದೇ ಅದೆಲ್ಲೋ ಮಾಯವಾಗಿಬಿಡುತ್ತಿತ್ತು! ಸ್ವಲ್ಪ ದೊಡ್ಡ ಸೀಗಡಿಯಾದರೆ ಅಕಸ್ಮಾತ್ ಸಿಕ್ಕಿದರೂ ಕಚ್ಚುತ್ತದೇನೋ ಎಂಬ ಅಂಜಿಕೆ ನಮ್ಮಲ್ಲಿ. ಮಾವನ ಮಕ್ಕಳು ತಾವು ಅದನ್ನು ಕೈಲಿ ಮುಟ್ಟಿದ್ದೇವೆ ಎಂದಾಗ ನಾವೇಕೆ ಕಮ್ಮಿಯಾಗಬೇಕು ಹೇಳಿ ! ಹಿಡಿದು ಒಮ್ಮೆ ಮುಟ್ಟಿ ಮತ್ತೆ ನೀರಿಗೇ ಬಿಡುವುದು ನಮ್ಮ ಇಚ್ಛೆ! ಸೀಗಡಿ ಹಿಡಿದೇ ತೀರಬೇಕೆಂಬ ಛಲ ಹೊತ್ತು ಗಂಟೆಗಟ್ಟಲೆ ಅಲೆದಿದ್ದಿದೆ! ಮನೆಯಿಂದ ಕೂಗು ಕೇಳಿಸಿ ಇನ್ನೇನು ಬಡಿಗೆ ಬರುತ್ತದೆ ಎಂಬ ಡೌಟು ಬರುವವರೆಗೂ ನಾವು ಹೊರಡುವ ಪ್ರಮೇಯವೇ ಇರಲಿಲ್ಲ! ಅದು ಹೊತ್ತುಗೊತ್ತಿನ ಪ್ರಶ್ನೆಯಲ್ಲ, ಆಡುವುದೊಂದೇ ಗೊತ್ತು!

ತೋಟದಲ್ಲಿ ಗೊನೆಕಿತ್ತನಂತರ ಹಾಗೇ ಬಿದ್ದ ಬಾಳೆಮರಗಳನ್ನು ಕಡಿದುರುಳಿಸಿದಾಗ ಕತ್ತಲಲ್ಲಿ ಕಾಡುಗಳ್ಳರು ಕರಗಾಸ [ಗರಗಸ] ಕಾಮಗಾರಿ ನಡೆಸಿ ಶ್ರೀಗಂಧದ ಮರಗಳನ್ನು ಕಡಿದು ಪಡೆದ ಸಂತೃಪ್ತಿಗಿಂತಾ ಅಧಿಕ ತೃಪ್ತಿ ನಮ್ಮದಾಗುತ್ತಿತ್ತು! ಅಂತಹ ಬಾಳೆ ದಿಮ್ಮಿಗಳನ್ನು ನಿಧಾನಕ್ಕೆ ಎಳೆದೊಯ್ದು ಹಳ್ಳಕ್ಕೆ ರವಾನಿಸಿಕೊಂಡು ಅಲ್ಲಿ ನಾಕಾರು ದಿಮ್ಮಿಗಳನ್ನು ಒಂದರ ಪಕ್ಕ ಇನ್ನೊಂದು ಜೋಡಿಸಿಕೊಳ್ಳುತ್ತಿದ್ದೆವು. ಬಿದಿರ ಗೂಟಗಳನ್ನು ತಂದು ಆ ಕೊನೆಗೆ ಈ ಕೊನೆಗೆ ಮತ್ತು ಮಧ್ಯಕ್ಕೆ ಒಂದೊಂದು ಬರುವಂತೇ ಅಡ್ಡಡ್ಡ ಅವುಗಳ ಮಧ್ಯೆ ತೂರಿಸಿಬಿಟ್ಟರೆ ತೆಪ್ಪ ರೆಡಿ ! ನಂತರ ಬಹಳ ಹೊತ್ತು ಮಕ್ಕಳು ಸ್ವಾಮಿಗಳ ’ತೆಪ್ಪೋತ್ಸವ’! ಹಳ್ಳದಲ್ಲಿ ಉದ್ದಕ್ಕೂ ಅಗಲಕ್ಕೂ ಒಂದಷ್ಟು ದೂರ ಕ್ರಮಿಸುವುದು. ತೆಪ್ಪವನ್ನು ಗಿರಿಗಿಟ್ಲೆಯಂತೇ ತಿರುಗಿಸುವುದು. ಹೀಗೇ ಅದರಲ್ಲಿಯೇ ಆಟ. ಸುಮಾರು ಆಳವಿದ್ದ ಕೆಲ ಭಾಗಗಳಲ್ಲಿ ಈಜು ಹೊಡೆಯುವುದು ಬಲು ಮೋಜು! ಹಾಗೆ ಈಜು ಹೊಡೆಯುವಾಗ ತೆಪ್ಪದ ಕೆಳಗೆ ಮುಳುಗಿ ಅಡಗಿದ್ದ ನನ್ನನ್ನು ನೀರಲ್ಲಿ ಮುಳುಗಿ ಹೋಗೇಬಿಟ್ಟ ಎಂದು ಹೆದರಿ ಓಡಿ ಮಾವನನ್ನು ಕರೆತಂದಿದ್ದರು ಉಳಿದ ಮಕ್ಕಳು!

ಮರವೊಂದಕ್ಕೆ ಬಾವಿ [ತೆಂಗಿನನಾರಿನ] ಹಗ್ಗ ಕಟ್ಟಿ ಕೆಳಗೆಬಿಟ್ಟುಕೊಂಡು ಅದಕ್ಕೊಂದು ಹಲಗೆ ತುಂಡು ಸಿಕ್ಕಿಸಿಕೊಂಡು ’ಉಯ್ಯಾಲೆ ಸೇವೆ ’ ನಡೆಯುತ್ತಿತ್ತು. ತೂಗೀ ತೂಗೀ ತೂಗೀ ಹಗ್ಗ ಸವೆದು ಹರಿದು ಬಿದ್ದಾಗ ತಿರುಪತಿ ತಿಮ್ಮಪ್ಪಸ್ವಾಮಿ ಗೋವಿಂದಾ...ಗೋವಿಂದ! ದೀಪಾವಳಿಯಲ್ಲಿ ಆಕಾಶಬುಟ್ಟಿಯನ್ನು ಮನೆಯಲ್ಲೇ ತಯಾರುಮಾಡುವ ವೈಖರಿ ಹಿಂದಕ್ಕೆ ಇತ್ತು. ಬಿದಿರುಕಡ್ಡಿಗಳು, ಬಣ್ಣದ ಕಾಗದದ ತುಂಡುಗಳು, ಅಂಟು, ದಾರ ಇವುಗಳಿಂದ ನಾಜೂಕಾಗಿ ಜೋಡಿಸಿ ಮಾಡುವ ದೊಡ್ಡ ಆಕಾಶಬುಟ್ಟಿ ರೆಕ್ಕೆ ಪುಕ್ಕಗಳನ್ನು ಹಾರಿಸುತ್ತಾ ಎತ್ತರದ ಮರದ ಕೊಂಬೆಗೆ ಅಡ್ಡಲಾಗಿ ಹೊರಚಾಚುವಂತೇ ಕಟ್ಟಿದ್ದ ಗೂಟವೊಂದರ ತುದಿಗೆ ಕಟ್ಟಲಾದ ಗಡಗಡೆ [ಚಿಕ್ಕ ರಾಟಿ]ಯ ಮೂಲಕ ನಿತ್ಯವೂ ಮೇಲೇರಿ ಕೆಳಗಿಳಿದು ಮಾಡುತ್ತಿತ್ತು! ವಿದ್ಯುತ್ತಿರದ ಕಾರಣ ಅದರಲ್ಲಿ ಮೊಂಬತ್ತಿಯನ್ನೋ ಹಣತೆಯನ್ನೋ ಇಡುವ ವ್ಯವಸ್ಥೆ ಇರುತ್ತಿತ್ತು, ಬೆಂಕಿ ಸುತ್ತಲ ಕಾಗದಕ್ಕೆ ತಾಗದ ರೀತಿ ಇರುತ್ತಿತ್ತು. ದೀಪ ಹಚ್ಚಿದ ಆಕಾಶಬುಟ್ಟಿ ಧ್ವಜಾರೋಹಣದಂತೇ ಮೇಲೇರುವುದನ್ನು ನೋಡುವುದೇ ಬಲುಖುಷಿಯ ಕೆಲಸವಾಗಿತ್ತು. ಇಬ್ಬನಿ ಬಿದ್ದು ಬಣ್ಣದ ಕಾಗದ ಕಳಾಹೀನವಾಗದಿರಲಿ ಎಂಬ ಕಾರಣಕ್ಕೆ ಆಕಾಶಬುಟ್ಟಿ ನಿಲ್ಲುವ ಆ ಎತ್ತರಕ್ಕೂ ಮಾರು ಮೇಲೆ ಅದೇ ಮರದ ಸಹಾಯದಿಂದ ತಾಳೆಯಗರಿಯ ಛಾವಣಿಯನ್ನು ಮಾವ ಕಟ್ಟಿದ್ದು ಇನ್ನೂ ನೆನಪಿಗೆ ಬರುತ್ತಿದೆ.

ಅಜ್ಜನ ಇಂತಹ ಪ್ರೀತಿಯ ಅಶ್ರಯದಲ್ಲಿ ಬೆಳೆದ ಮಕ್ಕಳು ಅನುಭವಿಸಿದ ಆನಂದ ಇಂದಿನ ಮಕ್ಕಳಿಗೆ ಲಭ್ಯವಿಲ್ಲ. ಕಾಡುಗಳೂ ನಾಶವಾಗಿ ನಾಡೆಲ್ಲಾ ಕಾಂಕ್ರೀಟು ಕಾಡುಗಳಾದ ಪರಿಣಾಮ ಮುಂದೊಂದು ದಿನ ಇವೆಲ್ಲಾ ಕೇವಲ ಕಟ್ಟುಕಥೆಗಳಂತೇ ಕಾಣಿಸಿದರೆ ಆಶ್ಚರ್ಯವಿಲ್ಲ. ಇವತ್ತಿನ ಮಕ್ಕಳು ಬರೇ ಪೋಗೋ ಮತ್ತು ಇನ್ನಿತರ ವಾಹಿನಿಗಳಲ್ಲಿ ಕಾಣಸಿಗುವ ಕಾಲ್ಪನಿಕ ಆನಿಮೇಟೆಡ್ ಕಾಡನ್ನು ನೋಡಬೇಕಾಗಿದೆ. ನ್ಯಾಷನಲ್ ಜಿಯೋಗ್ರಾಫಿಕ್, ಡಿಸ್ಕವರಿ ಇಂತಹ ಕೆಲವು ಮಾಧ್ಯಮವಾಹಿನಿಗಳು ಕಾಡುಗಳನ್ನೂ ವನಚರಗಳನ್ನೂ ಅವುಗಳ ಬದುಕಿನ ಮಜಲುಗಳನ್ನೂ ತೋರಿಸುತ್ತಿರುವುದು ನಿಜಕ್ಕೂ ಆನಂದದಾಯಕ. ಮುಂದಿನ ಪೀಳಿಗೆಗೆ ಅಲ್ಪವಾದರೂ ಕಾಡುಗಳನ್ನು ನಾವು ಉಳಿಸುತ್ತೇವೇಯೇ ಎಂಬುದು ಚಿಂತನಾಕಾರಕ, ನಮಸ್ಕಾರ.