ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Friday, June 24, 2011

ಅಚ್ಚುತ ಹೋದನು ಬಚ್ಚಲು ಮನೆಗೆ !


ಅಚ್ಚುತ ಹೋದನು ಬಚ್ಚಲು ಮನೆಗೆ !

[ನಲ್ಮೆಯ ಸ್ನೇಹಿತರೇ, ನಮಸ್ಕಾರಗಳು. ಹಾಸ್ಯಸಪ್ತಾಹದ ೫ನೇ ದಿನಕ್ಕೆ ಇದು ಆಮಂತ್ರಣ. ಕೆಲವೊಂದು ಘಟನೆಗಳು ಅಂತಹ ವ್ಯಕ್ತಿಗಳು ಎದುರಾದಾಗ ಅಥವಾ ನೆನಪಾದಾಗ ನಮ್ಮ ನೆನಪಿನ ಆಳದಿಂದ ಪುಟಿದೆದ್ದು ಗರಿಬಂದ ಹಕ್ಕಿಮರಿ ಕಂಡಲ್ಲೆಲ್ಲಾ ಹಾರಾಡಿದಂತೇ ಕುಣಿದು ಕುಪ್ಪಳಿಸುತ್ತವೆ; ಹೊಸದಾಗಿ ಸೈಕಲ್/ವೆಹಿಕಲ್ ಕಲಿತ ವ್ಯಕ್ತಿ ಹೊತ್ತುಗೊತ್ತಿಲ್ಲದೇ ಅದನ್ನು ಓಡಿಸಿದ ರೀತಿ ಅದೇ ಮೂಡ್‍ನಲ್ಲಿರುತ್ತವೆ. ಅಂತಹ ಒಂದೆರಡು ಸ್ವಾರಸ್ಯ ಇಂದು ನಿಮ್ಮೆಲ್ಲರಿಗಾಗಿ: ಅಚ್ಚುತ ಹೋದನು ಬಚ್ಚಲು ಮನೆಗೆ !]

ನನ್ನ ಬಳಗದಲ್ಲಿ ಒಬ್ಬ ಮಹರಾಯನಿಗೆ ಕವಿಯಾಗಬೇಕೆಂಬಾಸೆ ಇತ್ತು. ಯಾರ್ಯಾರೆಲ್ಲಾ ಕವನಗಳನ್ನು ಬರೀತಾರೆ ನಾನ್ಯಾಕೆ ಬರೀಬಾರ್ದು ಎಂಬುದು ಅವನ ಸಮಸ್ಯೆ. ಸಮಸ್ಯೆಯನ್ನು ನನ್ನೆದುರು ತಂದಾಗ ಬೆನ್ನು ತಟ್ಟಿದೆ, ಬರೀ ಅಂದೆ. ಆಗಷ್ಟೇ ನಾವು ಅಚ್ಯುತ ಎನ್ನುವ ಮನುಷ್ಯನ ಕಥೆ ಮಾತಾಡಿ ನಕ್ಕು ಮುಗಿಸಿದ್ದೆವು. ಅದೇ ಗುಂಗಿನಲ್ಲಿದ್ದ ಆ ಬಡಪಾಯಿಗೆ ಕವನಕ್ಕೆ ವಸ್ತು ಬೇರಾವುದೂ ಸಿಗದುದರಿಂದಲೂ ಮತ್ತೆ ಬೇರೆಯದನ್ನು ಹುಡುಕುತ್ತಾ ಕೂರುವ ಬದಲು ಅದೇ ವಿಷಯದಮೇಲೆ ಆಶು ಕವಿತೆಯೊಂದನ್ನು ತಾನು ಬರೆಯುವುದಾಗಿಯೂ ಹೇಳಿದ ಆತ ಬರವಣಿಗೆಗೆ ಕೂತೇಬಿಟ್ಟ!

ಅಷ್ಟಕ್ಕೂ ನಿಮಗಿಲ್ಲಿ ಅಚ್ಯುತ ಯಾರೆಂದು ಹೇಳಬೇಕಲ್ಲ? ನಮ್ಮ ಪಕ್ಕದ ಊರಿನ ಮನುಷ್ಯ. ಅಚ್ಯುತ ಪ್ರಭು. ವಿದ್ಯೆ ಕನ್ನಡ ಪ್ರಾಥಮಿಕ. ಘಟನೆ ನಡೆದಾಗ ಆತನ ವಯಸ್ಸು ಸುಮಾರು ೨೭-೨೮ ವರ್ಷ. ಒಳ್ಳೇ ಪ್ರಾಯ. ಹುಡುಗಿಯರ ಮುಂದೆ ತಾನು ಚೆನ್ನಾಗಿ ಕಾಣಬೇಕೆಂಬ ಕನಸುಕಾಣುತ್ತಿದ್ದ ಹುರಿಮೀಸೆ ಹೈದ. ವೃತ್ತಿಯಲ್ಲಿ ಕೃಷಿಕ: ಅಡಕೆ ಬೆಳೆಗಾರ. ತಯಾರಿಸಿದ ಅಡಕೆ ತೆಗೆದುಕೊಂಡು ಕುಮಟಾದ ಮಂಡಿಗೆ ಹೋಗಿದ್ದ. ಅಲ್ಲಿನ ಹಲವು ಮಂಡಿಗಳ ಪೈಕಿ ಒಂದು ನಮ್ಮನೆಗೆ ಸೇರಿದ್ದಿತ್ತು. ಅಲ್ಲಿ ಅದನ್ನು ನನ್ನ ಅಜ್ಜ ಆರಂಭಿಸಿದ್ದು ಚಿಕ್ಕಪ್ಪ ನೋಡಿಕೊಳ್ಳುತ್ತಿದ್ದರು. ಅಚ್ಯುತ ನಮಗೆಲ್ಲಾ ಬಹಳ ಪರಿಚಯದವ. ಸಲುಗೆ ಜಾಸ್ತಿ. ಕುಮಟಾಕ್ಕೆ ಅಡಕೆ ಮಾರಲು ಹೋದಾತ ಅಲ್ಲಿ ಮಂಡಿಯ ಒಳಭಾಗದಲ್ಲಿ ಆಗಿನ್ನೂ ಬ್ರಹ್ಮಚಾರಿಯಾಗಿದ್ದ ಚಿಕ್ಕಪ್ಪನ ಬಳಕೆಗೆ ಅಂತ ಸ್ನಾನದ ಕೋಣೆಯೊಂದು ಇತ್ತು. ಸ್ನಾನದ ಕೋಣೆ ಉದ್ದದಲ್ಲಿ ಸುಮಾರು ರೈಲ್ವೇ ಬೋಗಿಯ ಆಕಾರದಲ್ಲಿದ್ದು ಒಂದುಕಡೆ ಗೋಡೆಯಲ್ಲಿ ಒಂದು ಕಪಾಟು ಇತ್ತು. ಆ ಕಪಾಟಿನಲ್ಲಿ ಹಲವು ಸಾಮಾನುಗಳು: ಹಣಿಗೆ, ಕನ್ನಡಿ, ಹೇರ್ ಆಯಿಲ್, ಸ್ನೋ ಪೌಡರ್, ಟೂತ್ ಪೇಸ್ಟ್, ಬ್ರಶ್ ಇತ್ಯಾದಿ ಇತ್ಯಾದಿ...

ಕುಮಟಾಕ್ಕೆ ಹೋಗಿದ್ದ ಅಚ್ಯುತ ಸ್ನಾನದ ಕೋಣೆಗೆ ನಡೆದ. ಅಲ್ಲಿರುವ ಕಪಾಟಿನಲ್ಲಿ ಸ್ವರ್ಗವನ್ನೇ ಕಂಡ! ಜಾಸ್ತಿ ಓದಿರದ ಆತನಿಗೆ ಆಂಗ್ಲ ಭಾಷೆಯಲ್ಲಿ ನಮೂದಿಸಿದ ಹೆಸರುಗಳನ್ನು ಓದಲು ಕಷ್ಟವಾಗುತ್ತಿತ್ತು; ಒಂದೊಮ್ಮೆ ಓದಿದರೂ ಅರ್ಥವಾಗುತ್ತಿರಲಿಲ್ಲ. ಮಂಗಹೊಕ್ಕ ಬಾಳೆ ತೋಟದಂತೇ ಕಪಾಟಿನಲ್ಲಿರುವ ಎಲ್ಲಾ ಸಾಮಾನುಗಳನ್ನೂ ಹೇಗೇಗೋ ತಿರುಗಿಸಿ/ತೆಗೆದು ನೋಡೇ ನೋಡಿದ. ಪರಿಮಳ ಮೂಸಿದ, ಕೈಗೆ ಹಚ್ಚಿಕೊಂಡ...ಹೀಗೇ ಏನೇನೋ ಮಾಡಿದ. ಧಾರಾಳಿಯಾಗಿದ್ದ ನನ್ನ ಚಿಕ್ಕಪ್ಪ ಅಚ್ಯುತನಿಗೆ ಪ್ರವೇಶವನ್ನಾಗಲೀ ಅಥವಾ ಅವನು ಅಲ್ಲಿ ಆರಾಮಾಗಿ ಯಾವುದೇ ವಸ್ತುವನ್ನು ಬಳಸಲಾಗಲೀ ಬೇಡಾ ಎನ್ನಲಿಲ್ಲ. ಚಿಕ್ಕಪ್ಪ ಹೊರಗಡೆ ವ್ಯವಹಾರದಲ್ಲಿ ಬ್ಯೂಸಿಯಾಗಿರುವಾಗ ಅಚ್ಯುತನ ರಿಸರ್ಚು ಬಹಳ ಆಳವಾಗಿ ನಡೆಯಿತು!

ರಿಸರ್ಚಿನ ಕೊನೆಯ ಭಾಗವನ್ನು ತಲ್ಪಿದ ಅಚ್ಯುತನಿಗೆ ಸಿಕ್ಕಿದ್ದು ಬೆಳ್ಳಗಿನ ವಸ್ತು! ಎಣ್ಣೆಗಪ್ಪಿನ ಬಣ್ಣದಲ್ಲಿದ್ದ ತನ್ನನ್ನು ಸುಂದರ ಹುಡುಗಿಯರು ನೋಡಬೇಕಾದರೆ ಇಂತಹ ಅದ್ಭುತ ವಸ್ತುವಿನ ಬಳಕೆ ಅನಿವಾರ್ಯ ಎಂಬುದನ್ನು ಅಚ್ಯುತ ಅಂದೇ ನಿರ್ಧರಿಸಿ ಬಿಟ್ಟ! ಸಂಶೋಧನೆಯನ್ನು ಪ್ರಾಯೋಗಿಕವಾಗಿ ನೋಡುವ ಅತೀವ ಹಂಬಲದಲ್ಲಿ ಬೆಳ್ಳಗಿನ ಸುವಾಸನೆಯುಳ್ಳ ಆ ವಸ್ತುವನ್ನು ಮುಖದ ತುಂಬಾ ಲೇಪಿಸಿಕೊಂಡ. ೫-೧೦ ನಿಮಿಷ ಒಣಗಲು ಬಿಟ್ಟ! ಕನ್ನಡಿ ನೋಡಿಕೊಂಡು ತಾನು ಬೆಳ್ಳಗೆ ಕಾಣುವುದನ್ನು ಕಂಡು ಬಹಳ ಸಂತಸಪಟ್ಟ. ಹುಟ್ಟಿದರೆ ಹುಟ್ಟ ಬೇಕು ಇಂಥಾ ಪಟ್ಟಣಗಳಲ್ಲಿ ಎಂತೆಂತಹ ವಸ್ತುಗಳೆಲ್ಲಾ ಸಿಗುವುದಪ್ಪಾ ಎಂದು ತನ್ನಲ್ಲೇ ಹೇಳಿಕೊಂಡ. ಈ ಕೆಲಸದ ನಡುವೆ ಸಮಯದ ಪರಿವೆಯೇ ಇರಲಿಲ್ಲ.

ಇತ್ತ ಚಿಕ್ಕಪ್ಪ ಕೆಲಸ ಮುಗಿಸಿ ಮಧ್ಯಾಹ್ನದ ಊಟಕ್ಕೂ ಮುನ್ನ ಸ್ವಲ್ಪ ಫ್ರೆಶ್ ಆಗಲು ಸ್ನಾನದ ಕೋಣೆಗೆ ತೆರಳಿದರು. ಬಾಗಿಲ ಅಗುಳಿ ಹಾಕಿತ್ತು. ಅಚ್ಯುತ ಹೋಗಿದ್ದನಲ್ಲವಾ ಅಂದುಕೊಂಡರು. ಬಾಗಿಲು ಬಡಿದರು. ಬಡಿದ ಬಾಗಿಲ ಸದ್ದಿಗೆ ಆಗಸದಲ್ಲಿ ಹಾರುತ್ತಿದ್ದ ಅಚ್ಯುತ ಮನೋವಿಮಾನ ದಬೋಲ್ಲನೆ ಭೂಮಿಗೆ ಬಿದ್ದಿತು! ಅಚ್ಯುತ ಬಾಗಿಲು ತೆರೆದ. ಚಿಕ್ಕಪ್ಪ ಹೆದರಿ ಹೌಹಾರಿ ಬಿದ್ದರು! ವಿಷಯಕೇಳಿ : ಬೆಳ್ಳಗೆ ಕಾಣುವ ಬಯಕೆಯಿಂದ ಅಚ್ಯುತ ಮುಖ ಪೂರ್ತಿ ಕಾಲ್ಗೇಟ್ ಪೇಸ್ಟ್ ಹಚ್ಚಿಕೊಂಡುಬಿಟ್ಟಿದ್ದ!

ಕೋಣೆಯ ಬಾಗಿಲು ತೆರೆದಾಗಲೇ ಅದರ ಪರಿಮಳ ಚಿಕ್ಕಪ್ಪನಿಗೆ ಬಂತಾದರೂ ಅಚ್ಯುತನನ್ನೇ ಕೇಳಿದಾಗ ಆತ ಸಂಶೋಧನೆ ಮಾಡಿ ಬಳಸಿದ ವಸ್ತುವಿನೆಡೆಗೆ ಕೈ ತೋರಿದ!ಹೆಸರು ಗೊತ್ತಿಲ್ಲ, ಯಾಕೆ ಅಂತ ಗೊತ್ತಿಲ್ಲ. ಬೆಳ್ಳಗಾಗುವುದೊಂದೇ ಗೊತ್ತು. ಸದ್ಯ ಅಲ್ಲಿ ಬೆಳ್ಳಗಿನ ಡಿಸ್ಟೆಂಪರೊ ಪೇಂಟೋ ಇರಲಿಲ್ಲ; ಇದ್ದಿರುತ್ತಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು! ಚಿಕ್ಕಪ್ಪನ ಮುಖವೆಲ್ಲಾ ನಕ್ಕೂ ನಕ್ಕೂ ಕೆಂಪಗಾಗಿ ಹೋಯಿತು. ನಗುವುದನ್ನು ಕೇಳಿಸಿಕೊಂಡ ಜನ ಅಲ್ಲಲ್ಲೇ ಹಣಿಕಿ ಇಣುಕಿ ನೋಡಹತ್ತಿದರು. ಹಲವರಿಗೆ ಕುತೂಹಲ. ಮಾಡಿದ ತಪ್ಪಿನ ಅರಿವಾಗಿ ಅಚ್ಯುತ ತಾನೂ ನಗುತ್ತಲೇ ಇದ್ದ. ಆಮೇಲೆ ಆತನಿಗೆ ತಿಳಿಹೇಳಿ ಮುಖ ತೊಳೆದುಕೊಳ್ಳಲು ತಿಳಿಸಿದರು. ಅಂದಿನಿಂದ ಅಚ್ಯುತ ಎಲ್ಲೇ ಸಿಕ್ಕರೂ ನಗುಮಾತ್ರ ಕಾಯಂ ಆಗಿಬಿಟ್ಟಿತು.

ಈ ಕಥೆಯನ್ನು ಬಳಗದ ’ಕವಿ’ ಮಹಾಶಯ ಕವನರೂಪ ಕೊಡಲು ಕೂತ. ಕೂತ ಕೂತ ಕೂತ ಕೂತೇ ಇದ್ದ! ಬೆಳಗಿನಿಂದ ಸಂಜೆಯವರೆಗೆ ಕೂತರೂ ಪದಗಳ ಜೋಡಣೆ ಸಾಧ್ಯವಾಗಲಿಲ್ಲ. ಜೊತೆಗೆ ಆತನಿಗೆ ಭಾಷಾ ಪ್ರೌಢಿಮೆ ಬೇರೆ ಇರಲಿಲ್ಲ. ನಮ್ಮ ಹಳ್ಳಿಗಳಲ್ಲಿ ಕೆಲವರು ಆಡುಭಾಷೆಯಲ್ಲಿ ಹಲವು ತಪ್ಪುಗಳನ್ನು ಮಾಡುತ್ತಾರೆ. ಅಲ್ಲಿ ’ಅಚ್ಯುತ’ ಇರುವುದು ಹೋಗಿ ’ಅಚ್ಚುತ’ ಆಗಿಬಿಡುತ್ತದೆ. ನಮ್ಮ ಬಳಗದ ಕವಿಗಳೂ ಅದನ್ನೇ ಮಾಡಿದರು. ಮಲಬದ್ಧತೆಯಾದವರು ತಾಸುಗಟ್ಟಲೇ ಮುಖ ಗಂಟುಹಾಕಿಕೊಂಡು ತಿಣುಕಿದ ಹಾಗೇ ತಿಣುಕಿ ತಿಣುಕಿ ಎರಡು ಸಾಲು ಬರೆದಿದ್ದ:

ಅಚ್ಚುತ ಹೋದನು ಬಚ್ಚಲುಮನೆಗೆ
ಹಚ್ಚಿದ ಪೇಸ್ಟನು ಮೆಚ್ಚುತ ಮುಖಕೆ ...

ಅಹ ಅಹ ಏನು ಪ್ರಾಸ ಏನು ಪ್ರಾಸ ನಂಗಂತೂ ತುಂಬಾ ಇಷ್ಟವಾಯ್ತಪ್ಪ! " ಕವಿವರ್ಯ ಮುಂದುವರಿಯಲಿ ಗಾಡಿ " ಎಂದರೆ ಬ್ರಹ್ಮರಾಕ್ಷಸ ಅರಳೀಮರ ಹಿಡಿದು ಕೂತ ಹಾಗೇ ಕೂತುಬಿಟ್ಟಿದ್ದ; ಜಪ್ಪಯ್ಯಾ ಅಂದ್ರೂ ಬಿಡೋ ಥರಾ ಕಾಣಿಸುತ್ತಿರಲಿಲ್ಲ. ಸಮಯ ಆಗ್ತಾ ಆಗ್ತಾ ಕವಿಗೆ ತಲೆನೋವು ಬಂತು. ಬಂದ ತಲೆನೋವು ಜೋರಾಗುತ್ತಾ ಜೋರಾಗುತ್ತಾ ಬದುಕೇ ಬೋರಾಗಿ ಹೋಯ್ತು! ತಥ್ ನನ್ಮಗಂದು ಹಾಳಾಗ್ಹೋಗಲಿ ಎಂದು ಪೆನ್ನು ಕಾಗದ ಬಿಸಾಕಿ ಕವನ ಬರೆಯುವುದನ್ನೇ ಬಿಟ್ಟ! "ಬರ್ಯಯ್ಯಾ ಸುಧಾ, ತರಂಗ ಯಾವ್ದಕ್ಕಾದರೂ ಕಳಿಸೋಣ" ಎಂದರೆ ಯದ್ವಾ ತದ್ವಾ ಬಯ್ಕೊಂಡು ಎದ್ದೇ ಹೋದ!

’ಕವಿ’ ಎದ್ದುಹೋದರೇನಾಯ್ತು ಇನ್ನೊಂದು ಕಪಿ ಕಥೆ ಕೇಳಿ: ಆಗಷ್ಟೇ ನಮ್ಮ ಹಳ್ಳೀ ಕಡೆ ಅಡಕೆ ವ್ಯಾಪಾರ ಜೋರಾಗಿತ್ತು. ಅರೆಕಲಿತ ಹಳ್ಳೀ ವ್ಯಾಪಾರಸ್ಥರು. ಬಹುತೇಕರು ಅಚ್ಯುತನ ಎಡಕ್ಕೋ ಬಲಕ್ಕೋ ನಿಲ್ಲುವ ಅರ್ಹತೆಯವರು. ಅಂಥವರಲ್ಲಿ ಮಹಾಬಲೇಶ್ವರ ಒಬ್ಬ. ಹೆಸರು ಉದ್ದ ಇರುವುದರಿಂದ ಊರಕಡೆ ಜನ ಪ್ರೀತಿಯಿಂದ ’ಮಾಚ’ ಎನ್ನುತ್ತಿದ್ದರು. ಮಾಚ ಅಡಕೆ ವ್ಯಾಪಾರದಲ್ಲಿ ಎತ್ತಿದಕೈ! ಮುಗ್ಧನಾದ ಮಾಚ ದುಡ್ಡಿಗೆ ಎಂದೂ ಕೈ ಎತ್ತುವುದಿಲ್ಲಾ ಎಂಬ ನಂಬಿಕೆಯಿದ್ದುದರಿಂದ ಅನೇಕ ಜನ ತಾವು ಬೆಳೆದ ಅಡಕೆಯನ್ನು ಹಳ್ಳಿಯ ವ್ಯಾಪಾರಸ್ಥನಾದ ಮಾಚನಿಗೇ ಕೊಡುತ್ತಿದ್ದರು.

ಒಮ್ಮೆ ಮಂಗಳೂರಿನ ವ್ಯಾಪಾರಿಯೊಬ್ಬರಿಗೆ ರಾಶಿ ರಾಶಿ ಅಡಕೆ ಬೇಕಂತೆ, ಒಳ್ಳೇ ರೇಟು ಕೊಡ್ತಾರಂತೆ ಎಂಬ ಸುದ್ದಿ ಮಾಚ ಮತ್ತು ಅಂತಹ ಹತ್ತಾರು ಜನ ಹಳ್ಳಿ ವ್ಯಾಪಾರಸ್ಥರಿಗೆ ತಲುಪಿತು. ವ್ಯವಹಾರ ಕುದುರಿಸುವ ಸಲುವಾಗಿ ಸಂಘವಿಲ್ಲದ ಕೂಟದ ಸದಸ್ಯರೆಲ್ಲಾ ಸೇರಿ ಮಂಗಳೂರಿಗೆ ತೆರಳಿದರು. ಮಾಚನಿಗೆ ಇದೆಲ್ಲಾ ಹೊಸತು. ಹೆಚ್ಚೆಂದರೆ ತಾಲೂಕು ಪಟ್ಟಣ ನೋಡಿ ಗೊತ್ತಿದ್ದ ಆತನಿಗೆ ಮಂಗಳೂರಿಗೆ ಹೋಗುವುದೇ ಅಮೇರಿಕಾಕ್ಕೆ ಹೋದಂತಹ ಥ್ರಿಲ್ಲಿಂಗು! ಮಂಗಳೂರು ಬಂದೇ ಬಿಟ್ಟಿತು. ಬಸ್ಸು ಇಳಿಯುತ್ತಿದ್ದ ಹಾಗೇ ಅಲ್ಲಿನ ಜನಜಂಗುಳಿ ಅಗಲದ ರಸ್ತೆಗಳು ತರಾವರಿ ಅಂಗಡಿ ಮುಂಗಟ್ಟುಗಳು ಇವುಗಳನ್ನೆಲ್ಲಾ ಕಂಡ. ಎತ್ತೆತ್ತರದ ’ಬಿರಡಿಂಗು’ ಮಾಚನನ್ನು ದಂಗುಬಡಿಸಿತು. ಅದಾಗಲೇ ಸಾಯಂಕಾಲವಾಗುತ್ತಾ ಬಂದಿದ್ದರಿಂದ ಅವರೆಲ್ಲಾ ಒಂದು ಲಾಡ್ಜ್‍ನಲ್ಲಿ ತಂಗಲು ಅವರಲ್ಲಿಯೇ ’ಸ್ವಲ್ಪ ಅಡ್ಡಿಲ್ಲ’ ಎನ್ನುವ ಥರದವನೊಬ್ಬ ವ್ಯವಸ್ಥೆ ಮಾಡಿದ.

ರೂಮು ತೆಗೆದುಕೊಂಡ ಈ ಜನ ಸ್ವಲ್ಪ ಹೊತ್ತು ಅಲ್ಲೇ ಲೋಕಲ್ ಓಡಾಟಕ್ಕೆ ತೆರಳಿದರು. ರಾತ್ರಿಯ ಜಗಮಗ ಬೆಳಕು ಮಾಚನಿಗೆ ಸ್ವರ್ಗವನ್ನೇ ಕಾಣುತ್ತಿದ್ದೇನೇನೋ ಎನ್ನುವ ಅನುಭವ ಕೊಟ್ಟವು. ರಂಭೆ ಊರ್ವಶಿಯಂತಹ ಸುಂದರ ತರುಣಿಯರು ಅದಾಗಲೇ ಅಲ್ಲಲ್ಲಿ ಪ್ಯಾಂಟು ಧರಿಸಿ ಎದುರಾದಾಗ ಮಾಚ ನಾಚಿ ತಲೆತಗ್ಗಿಸಿ ನಡೆಯುತ್ತಿದ್ದ! ಆ ರಾತ್ರಿ ಆತನಿಗೆ ಇಂದ್ರನ ಅರಮನೆಯಲ್ಲಿ ಮಲಗಿದ ಅನುಭವ ! ಏನು ಐಶಾರಾಮ ಏನು ವ್ಯವಸ್ಥೆ! ಅಬಬಬಬ ಮಾಚ ಊರಿಗೆ ಮರಳಿದಮೇಲೆ ಏನೆಲ್ಲಾ ಸುದ್ದಿ ಹೇಳಬೇಕೆಂಬುದನ್ನು ನೆನಪಿಸಿಕೊಳ್ಳುತ್ತಿದ್ದ. ಆದ್ರೆ ರಾತ್ರಿ ಎಷ್ಟೊತ್ತಾದರೂ ಆ ಸುಟ್ಟ ಗಾಡಿಗಳವರು ಶಬ್ದಮಾಡುವುದನ್ನು ನಿಲ್ಲಿಸಲೇ ಇಲ್ಲ! ಶಿವಾರಾಮಾ ಅಂತ ಉಂಡು ಸ್ವಲ್ಪ ಅಲ್ಲೇ ದಿಂಬಿಗೆ ಒರಗಿಕೊಂಡ ಅರೆಘಳಿಗೆಯಲ್ಲೇ ಗೊಂಯ್ ಪುಂಯ್ ಕೊಂಯ್ ಎನ್ನುತ್ತಾ ಶರವೇಗದಲ್ಲಿ ಬಂದ ಸೊಳ್ಳೆಗಳು ಯಮಯಾತನೆ ನೀಡಲು ಶುರುವಿಟ್ಟವು! ಇದೆರಡು ಬಿಟ್ಟರೆ ಬಾಕಿ ಎಲ್ಲಾ ದೇವಲೋಕ ಎಂದುಕೊಂಡ ಮಾಚನಿಗೆ ಬೆಳಗಾಗಿದ್ದೇ ಗೊತ್ತಾಗಲಿಲ್ಲ.

ಆದರೂ ಸ್ನೇಹಿತರೆಲ್ಲರಿಗಿಂತ ತಾನೇ ಮೊದಲು ಎದ್ದು ಸ್ನಾನದ ಕೋಣೆಗೆ ಹೋದ ಮಾಚ ಹೊಳೆಯುವ ನುಣುಪಾದ ಬೆಳ್ಳಗಿನ ಗೋಡೆಯನ್ನು ಮುಟ್ಟಿನೋಡಿದ. ಅಹಹಾ ಎಂಥಾ ವ್ಯವಸ್ಥೆಯಪ್ಪಾ! ಸ್ನಾನದ ಕೋಣೆಯಲ್ಲಿ ಮುನ್ನಡೆದ ಮಾಚನಿಗೆ ಅಂಡಾಕೃತಿಯ ತೊಟ್ಟಿಯಲ್ಲಿ ನೀರು ಇಟ್ಟಿದ್ದು ಕಂಡಿತು. ತೊಟ್ಟಿ ಅತ್ಯಂತ ಸ್ವಚ್ಛವಿತ್ತು, ಆದರೆ ನೀರು ಮಾತ್ರ ತಳಕ್ಕೆ ಹೋಗಿತ್ತು ಯಾಕೆ ಅಂತ ತಿಳಿಯಲಿಲ್ಲ. ಮಗ್ಗನ್ನು ಹಾಕಿ ನೀರೆತ್ತಲು ನೋಡಿದರೆ ಸಾಧ್ಯವಾಗಲಿಲ್ಲ ಹೀಗಾಗಿ ಕೈಯನ್ನೇ ಬೊಗಸೆಮಾಡಿ ನೀರು ಮೊಗೆದ ಮಾಚ ಎಷ್ಟು ಶುದ್ಧವಾಗಿದೆಯಪ್ಪಾ ಎಂದುಕೊಳ್ಳುತ್ತಾ ಮುಖಕ್ಕೆ ಸಿಂಪಡಿಸಿಕೊಂಡು ತೊಳೆದೇ ತೊಳೆದ.

ಇತ್ತ ಸ್ನೇಹಿತರು ಎದ್ದರು. ಆಕಳಿಸುತ್ತಾ ಮೈಮುರಿದು ಸ್ನಾನಕ್ಕೋ ಮುಖಮಾರ್ಜನೆಗೋ ಅಂತ ಒಬ್ಬೊಬ್ಬರಾಗಿ ಇನ್ನೇನು ಹೋಗಬೇಕು, ಅಷ್ಟರಲ್ಲಿ ಮಾಚ ಸ್ನಾನದಕೋಣೆಯಿಂದ ಹೊರಗೆ ಬಂದವನೇ ಅಂಡಾಕೃತಿಯ ತೊಟ್ಟಿಯನ್ನು ಹೊಗಳ ತೊಡಗಿದ. ’ಸ್ವಲ್ಪ ಅಡ್ಡಿಲ್ಲ’ ಎನಿಸಿಕೊಂಡ ವ್ಯಕ್ತಿ ಒಳಗೆ ಹೋಗಿ ನೋಡುತ್ತಾನೆ-ಅದು ಕಮೋಡು! ಶಿವನೇ ... ಆತ ಅದರಲ್ಲಿಯೇ ಮುಖಮಾರ್ಜನೆ ಮಾಡಿದ ಮಾಚನ ಹೇಳಿಕೆಯನ್ನು ನೋಡಿ ನಗುತಡೆಯದಾದ. ಊರಿಗೆ ಮರಳಿದಮೇಲೆ ಬಾಯಿಂದ ಬಾಯಿಗೆ ಹಬ್ಬಿದ ಸುದ್ದಿ ಊರಪರವೂರ ಹತ್ತಾರು ಹಳ್ಳಿಯ ಚಿಲ್ಲರೆ ವ್ಯಾಪಾರಸ್ಥರಿಗೆ ತಿಳಿಯಿತು. ಅವರೆಲ್ಲಾ ಪರಸ್ಪರ ಹೇಳಿಕೊಂಡಿದ್ದೇನು ಗೊತ್ತೇ " ಅದೆಂಥದೋ ಬಿಳೀ ಸಂಡಾಸ್ ಪೆಟ್ಗಿ ಇರ್ತದಂತೆ ಸಲ್ಪ ನೀರ್ ತುಂಬ್ಕಂಡು, ನಾವೆಲ್ಲಾನಾ ಹೋದ್ರೆ ಹುಸಾರಾಗಿರ್ಬೇಕಪ್ಪಾ "

Justify Full