ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Sunday, February 19, 2012

ಅರಿಯದೇ ಅರ್ಚಿಸಿದರೂ ಮರೆಯದೇ ಮರ್ಯಾದೆಕೊಡುವ ಮುಗ್ಧನಿವ ಮಹಾದೇವ !

ಪಶುಪತಿನಾಥ ಮಂದಿರದ ಮುಖ್ಯ ಮಹಾದ್ವಾರ

ಅರಿಯದೇ ಅರ್ಚಿಸಿದರೂ ಮರೆಯದೇ ಮರ್ಯಾದೆಕೊಡುವ ಮುಗ್ಧನಿವ ಮಹಾದೇವ !

ಶಿವನ ಕುರಿತು ಸಾವಿರ ಸಾವಿರ ಕಥೆಗಳು ನಮಗೆ ದೊರೆಯುತ್ತಲೇ ಇರುತ್ತವೆ. ಈ ಲೋಕದ ಸೃಷ್ಟಿ, ಸ್ಥಿತಿ, ಲಯ[ನಾಶ] ಈ ಮೂರೂ ಕಾರ್ಯಗಳು ಏಕಮೂಲದ ಶಕ್ತಿಯಿಂದ ನಡೆದರೂ ಶಿವನನ್ನು ಲಯಕರ್ತನೆಂದು ದೂರಿ ಆತನನ್ನು ದೂರವೇ ಇಡುವ ಮಂದಿಯೂ ಇದ್ದಾರೆ; ಅದು ಹೊಸದೇನೂ ಅಲ್ಲ. ಪಾಲಿಗೆ ಬಂದ ಕೆಲಸವನ್ನು ಅನಿವಾರ್ಯವಾಗಿ ಪಾಲಿಸುವ ಶಿವ ಮಾರ್ಕಾಂಡೇಯನ ಭಕ್ತಿಗೆ ಒಲಿದು ಮೃತ್ಯುಂಜಯನೂ ಆಗಿದ್ದಾನೆ, ಕಣ್ಣ[ಪ್ಪ]ನ ಕಣ್ಣಿಗೆ ತನ್ನನ್ನೇ ಮಾರಿಕೊಂಡಿದ್ದಾನೆ! ಶಿವನನ್ನು ತಪಿಸಿ ಕರೆದು ಅರ್ಜುನ ಪಾಶುಪತಾಸ್ತ್ರವನ್ನೇ ಪಡೆದರೆ ರಾವಣ ಆತ್ಮ ಲಿಂಗವನ್ನೇ ಪಡೆದಿದ್ದ ಎಂಬುದು ಈ ನೆಲದ ಕಥೆ. ಇಂತಹ ನಮ್ಮ ಬೋಲೇನಾಥ ಯಾ ಬೋಳೇ ಶಂಕರ ಪುರಾಣದ ಭಾಗವತದ ಕಥಾಭಾಗಗಳಲ್ಲಿ ರಕ್ಕಸರಿಗೆ ವರಗಳನ್ನು ಕರುಣಿಸಿ ಸಂದಿಗ್ಧದಲ್ಲಿ ಸಿಲುಕಿಕೊಳ್ಳುವುದನ್ನೂ ಕೂಡ ಕಾಣಬಹುದಾಗಿದೆ. ಭೂತಗಣಗಳಿಗೆ, ರಕ್ಕಸರಿಗೆ ಪ್ರಿಯ ದೈವ ಶಿವನೇ ಆದರೂ ಪರೋಕ್ಷ ಅವರುಗಳ ನಿಯಂತ್ರಣಕ್ಕೂ ಆತ ಕಾರಣನಾಗಿದ್ದಾನೆ.

ಅಲಂಕಾರ ಪ್ರಿಯೋ ವಿಷ್ಣುಃ
ಅಭಿಷೇಕ ಪ್ರಿಯಃ ಶಿವಃ |.....

ಒಂದು ಚೊಂಬು ನೀರನ್ನು ನಿಷ್ಕಲ್ಮಶ ಹೃದಯದಿಂದ ಲಿಂಗರೂಪೀ ಶಿವನಮೇಲೆ ಎರಚಿದರೆ ಆತ ಸಂತೃಪ್ತ! ಸರಳತೆಯಲ್ಲಿ ಅತಿ ಸರಳ ಪೂಜೆ ಶಿವನ ಪೂಜೆ. ಇದೇ ಶಿವ ಕ್ರುದ್ಧನಾದರೆ ಮಾತ್ರ ಆಡುವುದು ತಾಂಡವ ! ಶಿವತಾಂಡವದ ಡಮರು ನಿನಾದಕ್ಕೆ ಸಮಸ್ತಲೋಕಗಳೂ ಅಂಜುತ್ತವೆ ಎಂಬುದು ಪ್ರತೀತಿ. ನರ್ತನದಲ್ಲಿಯೂ ಈತನದೇ ಮೊದಲಸ್ಥಾನವಾದ್ದರಿಂದ ನಟರಾಜ ಎಂಬ ಹೆಸರಿನಿಂದಲೂ ಪೂಜಿಸಲ್ಪಡುತ್ತಾನೆ.

ರಾತ್ರಿಯ ದೀಪಗಳಲ್ಲಿ ಪಶುಪತಿನಾಥ ದೇವಸ್ಥಾನ ಸಮುಚ್ಛಯ

ಶಿವನಿಲ್ಲದೇ ಶುಭ ಸಾಧ್ಯವೇ? ಶಿವ ಎಂದರೆ ಶುಭ ಎಂದೇ ಅಲ್ಲವೇ? ಮುಕ್ಕಣ್ಣ ತನ್ನ ಮೂರನೇ ಕಣ್ಣು ತೆರೆಯುವುದೂ ಕೂಡ ಕೋಪಗೊಂಡಾಗ ಎಂಬುದು ಸತ್ಯ. ಈ ಭೂಮಿ ಕಾಯುವುದೂ ಆರುವುದೂ ಬೇಗ ಹೇಗೋ ಹಾಗೇ ಈಶ್ವರನ ಸಿಟ್ಟು. ಅದು ಬಂದಷ್ಟೇ ಬೇಗ ಹೋಗುವುದೂ ಜನಜನಿತ. ಶಿವನನ್ನು ತಂಪಾಗಿರಿಸಿದರೆ ಜಗತ್ತಿಗೇ ತಂಪು ಎಂಬ ಕಾರಣದಿಂದ ಜಲಾಭಿಷೇಕ ನಡೆಸುವುದು ಸರ್ವವಿದಿತ. ಈಶ್ವರ ತನ್ನ ಅದಮ್ಯ ಶಕ್ತಿಯನ್ನು ತೇಜೋರೂಪದಲ್ಲಿ ಪ್ರಕಟಗೊಳಿಸಿದ್ದು ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಎಂಬುದು ಆಸ್ತಿಕರ ಅನಿಸಿಕೆ; ಇದು ವೈಜ್ಞಾನಿಕವಾಗಿಯೂ ಗಣಿಸಬಹುದಾದ ಅಂಶ!

ಕಾಶೀ ವಿಶ್ವನಾಥ ಜ್ಯೋತಿರ್ಲಿಂಗ

ಸೌರಾಷ್ಟ್ರೇ ಸೋಮನಾಥಂ ಚ ಶ್ರೀಶೈಲೇ ಮಲ್ಲಿಕಾರ್ಜುನಮ್ |
ಉಜ್ಜಯಿನ್ಯಾಮ್ ಮಹಾಕಾಳಮೋಂಕಾರಮಮಲೇಶ್ವರಮ್ ||

ಪರಲ್ಯಾಂ ವೈದ್ಯನಾಥಂ ಚ ಡಾಕಿನ್ಯಾಂ ಭೀಮಶಂಕರಮ್|
ಸೇತುಬಂಧೇ ತು ರಾಮೇಶಂ ನಾಗೇಶಂ ದಾರುಕಾವನೇ ||

ವಾರಣಸ್ಯಾಂ ತು ವಿಶ್ವೇಶಂ ತ್ರ್ಯಂಬಕಂ ಗೌತಮೀತಟೇ|
ಹಿಮಾಲಯೇ ತು ಕೇದಾರಂ ಘೃಷ್ಮೇಶಂ ಚ ಶಿವಾಲಯೇ ||

ಏತಾನಿಜ್ಯೋತಿರ್ಲಿಂಗಾನಿ ಸಾಯಂ ಪ್ರಾತಃ ಪಠೇನ್ನರಃ |
ಸಪ್ತಜನ್ಮಕೃತಂ ಪಾಪಂ ಸ್ಮರಣೇನ ವಿನಶ್ಯತಿ ||

ಭವ್ಯ ಭಾರತದ ಇಂತಿಂತಹ ಪ್ರದೇಶಗಳಲ್ಲಿ ಜ್ಯೋತಿರ್ಲಿಂಗಗಳಿವೆ ಎಂಬುದನ್ನು ನೆನಪಿಸುವಂತೇ ರಚಯಿತವಾದ ಈ ಸ್ತೋತ್ರವನ್ನು ಬೆಳಿಗ್ಗೆ ಮತ್ತು ಸಾಯಂಕಾಲ ಪಠಿಸಿದರೆ ಏಳು ಜನ್ಮಗಳ ಸಂಚಿತ ಕರ್ಮಗಳು ನಾಶವಾಗುತ್ತವೆ ಎಂದು ತಿಳಿಸಿದ್ದಾರೆ. ಜ್ಯೋತಿರ್ಲಿಂಗಗಳ ದರ್ಶನ ಎಲ್ಲರಿಗೂ ಸಾಧ್ಯವಲ್ಲ! ಅದಕ್ಕೆ ಬರೇ ಹಣವಿದ್ದರೆ ಸಾಲದು, ಯೋಗಬೇಕು! ಮೊದಲು ಮನಸ್ಸು ಸಿದ್ಧವಾಗಬೇಕು. ಆಮೇಲೆ ಯಾತ್ರೆಗೆ ಅನುಕೂಲಕರವಾದ ದೈಹಿಕ ಅನುಕೂಲವಿರಬೇಕು, ಸಮಯ ದೊರೆಯಬೇಕು, ಸಾಂಸಾರಿಕ ತಾಪತ್ರಯಗಳಿಂದ ತುಸು ಬಿಡುಗಡೆ ದೊರೆಯಬೇಕು. ಈ ಎಲ್ಲಾ ಕ್ಷೇತ್ರಗಳಲ್ಲೂ ವಿಶಿಷ್ಟವಾದ ಪೂಜೆಗಳು ಜರುಗುತ್ತವೆ. ಶಿವಪೂಜಾ ವೈಭವಗಳನ್ನು ಈ ಹನ್ನೆರಡು ಕ್ಷೇತ್ರಗಳಲ್ಲಿ ಪಡೆಯಬಹುದಾಗಿದೆ.

ಶ್ರೀ ಪಶುಪತಿನಾಥ ಲಿಂಗ ಚಿತ್ರ-೧

ಶ್ರೀ ಪಶುಪತಿನಾಥ ಲಿಂಗ ಚಿತ್ರ-೨

ಪಂಚ ಮುಖಗಳುಳ್ಳ ಶ್ರೀ ಪಶುಪತಿನಾಥನ ಪ್ರಧಾನ ಲಿಂಗ

ಇವೆಲ್ಲವುಗಳಿಗಿಂತ ನಮ್ಮ ಅವಿಭಜಿತ ಭಾರತದ ಒಂದು ಭಾಗವಾಗಿದ್ದ ನೇಪಾಳದಲ್ಲಿ ಶಿವ ಪಶುಪತಿನಾಥನಾಗಿದ್ದಾನೆ! ಈ ಕುರಿತು ಸ್ವಲ್ಪ ತಿಳಿದುಕೊಳ್ಳೋಣ. ಭಕ್ತಜನ ಬೋಲೇನಾಥ ಎಂದು ಕರೆಯುವ ಶಿವ ಪಶುಪತಿ ಎನಿಸಿದ ಬಗ್ಗೆ ಅಲ್ಲಿನ ಪ್ರಾದೇಶಿಕ ಕಥೆಗಳು ಹಲವು. ನಂದೀವಾಹನನಾದ ಶಂಕರ ಸಹಜವಾಗಿ ಪಶುಪತಿಯೆನಿಸಿದರೂ ಅಲ್ಲಿರುವ ಕಥೆಗಳೇ ಬದಲು !

ಮೊದನಲೆಯ ಕಥೆ ಸಾರುವುದು ಶಿವ-ಪಾರ್ವತಿ ಸುತ್ತಾಡುತ್ತಾ ಬಾಗ್ಮತೀ ದಡಕ್ಕೆ ಬಂದಾಗ ಶಿವನಿಗೆ ಜಿಂಕೆಯಾಗಿ ವಿಹರಿಸುವ ಆಸೆಯಾಗುತ್ತದೆ. ಪರಮಾತ್ಮನಾತ ಕೇಳಬೇಕೇ ? ಆ ಕ್ಷಣದಲ್ಲೇ ಶಿವ-ಪಾರ್ವತಿ ಹರಿಣಗಳಾಗಿ ಅಲ್ಲಿನ ಕಾಡಿನಲ್ಲಿ ವಿಹರಿಸತೊಡಗಿದರಂತೆ. ದೇವತೆಗಳು ದೇವಲೋಕದಲ್ಲಿ ಶಿವನ ಬರವನ್ನು ಕಾದೇ ಕಾದರು! ಶಿವ-ಸತಿಯರ ಪತ್ತೆಯೇ ಇರಲಿಲ್ಲ. ಭೂಮಿಗೆ ಬಂದು ಹುಡುಕುತ್ತಾ ಹುಡುಕುತ್ತಾ ಬಾಗ್ಮತೀ ನದಿಯ ದಡದಲ್ಲಿ ಹರಿಣದ ರೂಪದಲ್ಲಿರುವ ಶಿವ-ಪಾರ್ವತಿಯರನ್ನು ಕಂಡು ಬೆನ್ನಟ್ಟಿದರು! ಶಿವ ಭುವಿಯಲ್ಲೇ ಇರುವ ಮನದಿಚ್ಛೆಯಿಂದ ಅಲ್ಲಿ ತಪ್ಪಿಸಿಕೊಳ್ಳಲೆತ್ನಿಸಿದ. ಓಡತೊಡಗಿದ ಶಿವನನನ್ನು ಹಿಡಿಯುವಾಗ ಮೃಗದ ಕೊಂಬು ಕಿತ್ತು ದೇವನೊಬ್ಬನ ಕೈಗೆ ಬಂತು. ಶಿವನ ಕೋಪಕ್ಕೆ ಹೆದರಿದ ದೇವತೆಗಳು ಅಲ್ಲೇ ನಿಂತು ಆ ಕೊಂಬನ್ನು ಭೂಮಿಯಲ್ಲಿ ನೆಟ್ಟು ಪ್ರಾರ್ಥಿಸಿತೊಡಗಿದರು; ಪೂಜಿಸತೊಡಗಿದರು. "ಹೇ ಪಶುಪತೇ ಕೃಪಯಾ ದೇವಲೋಕಮಾಗಚ್ಛತು " ಎಂದು ಪರಿಪರಿಯಾಗಿ ಕೇಳಿಕೊಂಡಾಗ ಶಿವ ದೇವಲೋಕಕ್ಕೆ ಮರಳಿದನಾದರೂ ಕೊಂಬು ಮಾತ್ರ ಭುವಿಯಲ್ಲೇ ಉಳಿಯಿತು. ಭುವಿಯ ಭಕ್ತರ ಸಂತೋಷಕ್ಕಾಗಿ, ಇಲ್ಲಿನ ಜನರ ಸಂಕಷ್ಟಗಳ ನಿವಾರಣೆಗಾಗಿ ಅದನ್ನೇ ಪೂಜಿಸಲಿ ಎಂದ ಪರಶಿವ ಪಶುಪತಿಯಾಗಿ ಆ ಜಾಗದಲ್ಲುಳಿದ! ಮುಗ್ಧ ಶಿವ ಏನು ಕೇಳಿದರೂ ಕೊಡುವ ಸ್ವಭಾವದವನಾದ್ದರಿಂದ ಅಲ್ಲಿನ ಜನ ಪ್ರೀತಿಯಿಂದ ಬೋಲೇನಾಥ ಎಂದೂ ಕರೆಯತೊಡಗಿದರು.

ಎರಡನೆಯ ಕಥೆ ಹೀಗಿದೆ: ದಕ್ಷಯಜ್ಞದಲ್ಲಿ ಕುಂಡಕ್ಕೆ ಹಾರಿ ಆತ್ಮಾರ್ಪಣೆ ಮಾಡಿಕೊಂಡ ಸತಿಯನ್ನು ಎತ್ತಿಕೊಂಡ ಹೊರಟ ಶಿವ. ಸತಿಯ ಶರೀರದ ಭಾಗಗಳು ಆಗಲೇ ಅಲ್ಲಲ್ಲಿ ಕುಸಿದು ಬೀಳತೊಡಗಿದ್ದವು. ಹಾಗೆ ಬಿದ್ದ ಸ್ಥಳಗಳಲ್ಲೆಲ್ಲಾ ದೇವೀ ದೇವಾಲಯಗಳು ಸ್ಥಾಪಿತವಾದವು. ಅಂತಹ ದೇವಾಲಯವೊಂದು ಗುಹ್ಯೇಶ್ವರೀ ದೇವಿ ಸ್ಥಾನ. ಅದು ಪಶುಪತಿನಾಥ ಮಂದಿರದ ಸಮುಚ್ಛಯದಲ್ಲೇ ಇದೆ! ಸತಿಗಾಗಿ ಶಿವ ಅಲ್ಲಿ ನೆಲೆಸಿದ ಎಂಬುದು ಈ ಕಥೆಯ ಐತಿಹ್ಯ.

ಕಥೆ ಮೂರು : ಭೂಮಂಡಲವನ್ನು ಒಂದು ಕಾಲಕ್ಕೆ ನಾಗಗಳು ಆಳುತ್ತಿದ್ದವು. ಅವುಗಳಲ್ಲಿ ವಾಸುಕಿ ಒಬ್ಬ. ವಾಸುಕಿ ತನ್ನ ಆಡಳ್ತೆಯ ಪ್ರದೇಶವಾದ ನೇಪಾಳದಲ್ಲಿ ಶಿವನನ್ನು ಪೂಜಿಸುವ ಸಲುವಾಗಿ ಶಿವಲಿಂಗವೊಂದನ್ನು ಸ್ಥಾಪಿಸಿದ. ಅದೇ ಪಶುಪತಿನಾಥ ಲಿಂಗ !

ಹಗಲು ವೀಕ್ಷಣೆಯಲ್ಲಿ ಪಶುಪತಿನಾಥ ದೇಗುಲದ ವಿಮಾನ ಗೋಪುರ

ಕಥೆ ನಾಲ್ಕು : ಬೌದ್ಧಾವತಾರೀ ಮಹಾವಿಷ್ಣು ತನ್ನ ಸಿದ್ಧಿಗಾಗಿ ನೇಪಾಳದ ಮಂಡಿಹಾಟು ಪ್ರದೇಶದಲ್ಲಿ ಪಂಚಾಗ್ನಿಯನ್ನು ಸೃಷ್ಟಿಸಿ ತಪಸ್ಸು ನಡೆಸಿದ. ಅಲ್ಲಿನ ಆ ಉಷ್ಣತೆಗೆ ಮಣಿಮತಿ ಎಂಬ ನದಿಯ ಉಗಮವಾಯಿತು. ಸ್ಥಾನಿಕವಾಗಿ ಅಲ್ಲಿದ್ದ ಪಾರ್ವತೀ ದೇವಿ ಪ್ರಸನ್ನಳಾಗಿ ಬುದ್ಧನಿಗೆ ವಜ್ರಯೋಗಿನಿಯಾಗಿ ಕಂಡು ವರವನ್ನು ನೀಡಲು ಮುಂದಾದಳು. ಬುದ್ಧ ತಪಗೈದ ಆ ಪ್ರದೇಶದಲ್ಲಿ ಆತ ಲಿಂಗವೊಂದನ್ನು ಸ್ಥಾಪಿಸಲೆಂದೂ, ಅಲ್ಲಿ ಬೌದ್ಧರು ಮತ್ತು ಹಿಂದೂ ಸಮುದಾಯದವರು ಪರಸ್ಪರ ಸೌಹಾರ್ದಯುತ ಬದುಕು ಬದುಕುವರೆಂದು ತಿಳಿಸಿ ಅಂತರ್ಧಾನಳಾದಳು. ವಜ್ರಯೋಗಿನಿಯ ಇಚ್ಛೆಯಂತೇ ಬಾಗ್ಮತಿ ಮತ್ತು ಮಣಿಮತಿ ನದಿಗಳ ಸಂಗಮದ ಜಾಗದಲ್ಲಿ ಸ್ವತಃ ಬುದ್ಧನೇ ಶಿವಲಿಂಗವೊಂದನ್ನು ಪ್ರತಿಷ್ಠಾಪಿಸಿದ. ಅದೇ ಇಂದಿನ ಪಶುಪತಿನಾಥ ಲಿಂಗ !

ಮೂಲ ಭಟ್ಟ ಮತ್ತು ಸಹಭಟ್ಟ : ಕನ್ನಡ ಕರಾವಳಿಯ ಪುರೋಹಿತರು, ಅಲ್ಲಿನ ಸಾಂಪ್ರದಾಯಿಕ ಪೂಜಾ ತೊಡುಗೆಯಲ್ಲಿ

ಒಂದುಕಾಲಕ್ಕೆ ಕನ್ನಡದ ಪ್ರಥಮ ದೊರೆ ಬನವಾಸಿಯ ಮಯೂರವರ್ಮ ತನ್ನ ಸಾಮ್ರಾಜ್ಯ ವಿಸ್ತರಣೆಯ ದಂಡಯಾತ್ರೆಯಲ್ಲಿ ಅನೇಕ ರಾಜ್ಯಗಳನ್ನು ಜಯಿಸುತ್ತಾ ನೇಪಾಳಕ್ಕೆ ಬಂದ. ಅಲ್ಲಿಯೂ ಜಯಭೇರಿ ಬಾರಿಸಿ ತನ್ನ ಸಂಸ್ಥಾನದ ಭಾಗವಾಗಿ ನೇಪಾಳವನ್ನು ಸ್ವೀಕರಿಸಿದ! ತನ್ನ ಇಷ್ಟದಂತೇ ಅಲ್ಲಿನ ಪಶುಪತಿನಾಥನನ್ನು ಪೂಜಿಸಲು ಕರ್ನಾಟಕದ ಕರಾವಳಿಯ ಬ್ರಾಹ್ಮಣ ಪುರೋಹಿತರನ್ನೇ ನೇಮಿಸಿದ.

ಪಶುಪತಿನಾಥನ ಹಿಂದೆ ಇಂತಹ ಹಲವು ಐತಿಹ್ಯಗಳಿವೆ. ಕ್ರಿಸ್ತನ ಮರಣಾನಂತರ ೪೦೦ ವರ್ಷಗಳಿಂದ ದೇವಾಲಯ ಇದ್ದ ದಾಖಲೆ ಸಿಗುತ್ತದೆ. ಬೌದ್ಧ ಧರ್ಮದ ಉಚ್ಛ್ರಾಯ ಸ್ಥಿತಿಯಲ್ಲಿ ಕೆಲವು ಮೌಢ್ಯಗಳು ಸೇರಿಕೊಂಡು ಅಲ್ಲಿ ದೇವದೇವನ ಸಂಪ್ರೀತಿಗಾಗಿ ಮಾನವ ಬಲಿಯನ್ನು ನಡೆಸುತ್ತಿದ್ದರು. ಕೇದಾರದಲ್ಲಿ ತಪಸ್ಸು ನಡೆಸಿದ ಆದಿ ಶಂಕರರು ನೇಪಾಳದ ಕಂಠ್ಮಂಡುವಿನ ಪಶುಪತಿನಾಥ ದೇವಸ್ಥಾನಕ್ಕೆ ತೆರಳಿ ಆಗ ಅಲ್ಲಿ ಆಡಳಿತ ನಡೆಸುತ್ತಿದ್ದ ರಾಜನನ್ನು ಕರೆದು ನರಬಲಿಯನ್ನು ನಿಲ್ಲಿಸುವಂತೇ ತಿಳಿಸಿಹೇಳಿದರು, ಮಾತ್ರವಲ್ಲ ನಡೆಸಬೇಕಾದ ಪೂಜಾವಿಧಾನಗಳ ಬಗ್ಗೆಯೂ ತಿಳಿಸಿದರು. ಅಲ್ಲಿರುವ ಮೌಢ್ಯಗಳನ್ನು ತೆಗೆದುಹಾಕಿ ಹೊಸದಾಗಿ ಆ ಲಿಂಗವನ್ನು ಕಳಾಪೂರ್ಣವಾಗುವಂತೇ ಮಾಡಿದರು. ಶಂಕರರ ಅಣತಿಗೆ ಮಣಿದ ಮಹಾರಾಜ ಸಾತ್ವಿಕ ಪೂಜೆಗೆ ಒಪ್ಪಿದನಲ್ಲದೇ ಪೂಜೆ ಸಮರ್ಪಕವಾಗಿ ನಡೆಯಲು ಭಾರತದ ದಕ್ಷಿಣ ಭೂಪ್ರದೇಶದಿಂದ ವೇದ-ವೇದಾಂಗಗಳನ್ನು ಓದಿಕೊಂಡ ಬ್ರಾಹ್ಮಣರನ್ನು ಕಳುಹಿಸಬೇಕಾಗಿ ಪ್ರಾರ್ಥಿಸಿದ. ಶಂಕರರು ಒಪ್ಪಿ ಪೂಜೆ ಸರಿಯಾದ ಕ್ರಮದಲ್ಲಿ ನಡೆಯಲು ಆರಂಭವಾಯ್ತು. ಅಂದಿನಿಂದ ಸದಾ ಕರ್ನಾಟಕದ ಅದರಲ್ಲೂ ಕರಾವಳೀ ಪ್ರಾಂತದ ಬ್ರಾಹ್ಮಣ ಪುರೋಹಿತರು ಪಶುಪತಿನಾಥನ ಪೂಜೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವುದು ನಮ್ಮ ರಾಜ್ಯಕ್ಕೂ ಮತ್ತು ಪಶುಪತಿನಾಥನಿಗೂ ಇರುವ ನೇರ ಸಂಬಂಧ !

ಕೈಲಾಸ ಮಾನಸ ಸರೋವರದ ಒಂದು ವಿಹಂಗಮ ದೃಶ್ಯ

ಅಲ್ಲಿ ಪೂಜೆಗೆ ಒಟ್ಟೂ ಐದು ಮಂದಿ ಬ್ರಾಹ್ಮಣರು ಇರುತ್ತಾರೆ. ಮುಖ್ಯ ಪುರೋಹಿತನನ್ನು ಮೂಲ ಭಟ್ಟ ಅಥವಾ ರಾವಳ ಎಂಬುದಾಗಿ ಕರೆಯುತ್ತಾರೆ. ದೇವಸ್ಥಾನದ ವ್ಯಾವಹಾರಿಕ ಆಗುಹೋಗುಗಳ ಕುರಿತು ಕಾಲಕಾಲಕ್ಕೆ ಈತ ನೇರವಾಗಿ ನೇಪಾಳದ ರಾಜನಿಗೆ ವರದಿ ಒಪ್ಪಿಸಬೇಕಿತ್ತು. ರಾಜನೊಡನೆ ನೇರ ಸಂಪರ್ಕ ಇರುವುದು ಮೂಲ ಭಟ್ಟನಿಗೆ ಮಾತ್ರ! ಅಂದರೆ ಎಂತಹ ಆದ್ಯತೆ ನೀಡಿದ್ದರು ಎಂಬುದನ್ನು ಗಮನಿಸಬಹುದಾಗಿದೆ. ಕ್ರಿ.ಶ. ೨೦೦೯ ರಲ್ಲಿ ರಾಜಾಧಿಕಾರ ತಪ್ಪಿ ಪ್ರಜಾತಂತ್ರ ಆಡಳಿತಕ್ಕೆ ಬಂತು. ಮಾವೋವಾದಿಗಳು ಬ್ರಾಹ್ಮಣ ಪೂಜೆಯನ್ನು ವಿರೋಧಿಸಿ ತಾವೇ ಪೂಜೆ ಮಾಡುತ್ತೇವೆ ಎಂದು ಅಲ್ಲಿರುವ ಭಟ್ಟರುಗಳನ್ನು ಹಿಡಿದರು, ಬಡಿದರು. ಲಿಂಗವನ್ನು ಸ್ಪರ್ಶಿಸುವುದಕ್ಕೆ ಐದುಮಂದಿ ಬ್ರಾಹ್ಮಣ ಪುರೋಹಿತರ ಹೊರತು ಮತ್ತೆ ಯಾರಿಗೂ ಅವಕಾಶವಿರಲಿಲ್ಲ. ಆಗಮೋಕ್ತ ರೀತ್ಯಾ ದೇವಾಲಯದ ಪೂಜೆಗಳು ನಡೆಯುತ್ತಿದ್ದವು. ಇದನ್ನೇ ವಿರೋಧಿಸಿ ಕೆಲಕಾಲ ಗಲಭೆ-ಹಿಂಸೆ ನಡೆಯಿತು. ಕಟ್ಲೆ ನೇಪಾಳದ ಪರಮೋಚ್ಚ ನ್ಯಾಯಾಲಯದ ಕಟ್ಟೆಗೇರಿತು. ನ್ಯಾಯಾಲಯ ದೇವಸ್ಥಾನದಲ್ಲಿ ಯಾರೇ ಆದರೂ ಪೂಜೆ ಮಾಡಬಹುದೆಂಬ ಆಜ್ಞೆ ಹೊರಡಿಸಿದ ಕೆಲವೇ ದಿನಗಳಲ್ಲಿ ಕೆಲವು ಅವಘಡಗಳು ಘಟಿಸಿದವು! ನೇಪಾಳದ ಜನ ಮತ್ತೆ ಪೂಜೆಯ ಸಲುವಾಗಿ ನ್ಯಾಯಾಲಯದ ಆಜ್ಞೆಯನ್ನು ಧಿಕ್ಕರಿಸಿ ನಡೆದರು! ಪುನಃ ಅಲ್ಲಿ ನಮ್ಮ ಕರಾವಳಿಯ ಬ್ರಾಹ್ಮಣರನ್ನೇ ಪೂಜೆಗೆ ನಿಯಮಿಸಲಾಗಿದೆ!

ಅಂತೂ ಪಶುಪತಿಯ ಪೂಜೆಗೆ ಇಷ್ಟೆಲ್ಲಾ ಕಥೆಗಳು ಕಾಲಕಾಲಕೂ ಜನಿಸಿದವು ಎಂಬುದು ಆತನ ಮೇಲಿನ ಪ್ರೀತಿಯನ್ನು ತೋರಿಸುತ್ತದೆ. ಭೋಲೇನಾಥನ ಸನ್ನಿಧಾನ ನೋಡಲೂ ಕೂಡ ಸಹಜವಾಗಿ ರಮಣೀಯವಾಗಿದೆ. ಹಿಮಾಲಯದವರೆಗೂ ತೆರಳುವ ಭಕ್ತರು ಅನುಕೂಲವಿದ್ದರೆ ನೇಪಾಳದ ಕಂಠ್ಮಂಡುವಿನ ಪಶುಪತಿನಾಥನನ್ನೂ ದರ್ಶಿಸಿದರೆ ಒಳ್ಳೆಯದು. ಅದರಂತೇ ಶಿವನ ವಾಸಸ್ಥಳವೆಂದು ಪ್ರಚಲಿತವಾದ ಆದರೆ ವಿಪರ್ಯಾಸವಾಗಿ ಈಗ ಚೈನಾ ಆಳ್ವಿಕೆಯ ಭೂಭಾಗಕ್ಕೆ ಸೇರ್ಪಡೆಯಾದ ಕೈಲಾಸ-ಮಾನಸ ಸರೋವರ ಕೂಡ ನೋಡಲೇಬೇಕಾದ ರಮಣೀಯ ಸ್ಥಳಗಳಲ್ಲಿ ಒಂದು. ಇಲ್ಲೆಲ್ಲಾ ಹೋಗಲು ಎದೆಗಾರಿಕೆ ಬೇಕು! ಪ್ರಯಾಣ ದುರ್ಗಮ, ಹವಮಾನದ ವೈಪರೀತ್ಯಗಳನ್ನು ಲೆಕ್ಕಿಸುತ್ತಾ, ಸಿಗಬಹುದಾದ ಹೆಲಿಕಾಪ್ಟರ್ ಗಳಲ್ಲಿ ಧೈರ್ಯಗೆಡದೇ ಕೂತು, ಆಮ್ಲಜನಕದ ಕೊರತೆ ಬಾಧಿಸಿದರೂ ತಾಳಿಕೊಂಡು ದರ್ಶಿಸುವುದು ಎಲ್ಲರಿಗೂ ಸಾಧ್ಯವಾಗುವುದಿಲ್ಲ.

ದೂರದಲ್ಲಿ ಕೈಲಾಸ ಪರ್ವತ ಹಿನ್ನೆಲೆಯಾಗುಳ್ಳ ಮಾನಸ ಸರೋವರದ ಚಿತ್ರ

ಪರಶಿವನ ಆರಾಧನೆಗೆ ಪ್ರಮುಖವಾಗಿ ಬಳಸುವುದು ರುದ್ರ: ನಮಕ-ಚಮಕಗಳು. ಸುಶ್ರಾವ್ಯ ಸ್ವರಮೇಳದಲ್ಲಿ ರುದ್ರಾಭಿಷೇಕ ನಡೆಸಿದಾಗ, ಅದನ್ನು ಕೇಳುವ ಮನಸ್ಸಿಗೆ ಸಿಗುವ ಆನಂದ ಇನ್ನಾವ ಮಂತ್ರದಿಂದಲೂ ಸಿಗುವುದು ಆಸಾಧ್ಯ! ಜೀವವೈಜ್ಞಾನಿಕ ವಿಶ್ಲೇಷಣೆಯಂತೇ ನರಮಂಡಲ ಮತ್ತು ಮೆದುಳಿನ ಸಂತುಲಿತ ಕ್ರಿಯೆಗೆ ಸ್ವಸ್ಥ ಮನಸ್ಸು ನಮ್ಮದಾಗುವುದಕ್ಕೆ ಈ ವೇದಮಂತ್ರಗಳ ಅದರಲ್ಲೂ ರುದ್ರ ಪಠಣ, ಶ್ರವಣ ಮತ್ತು ಮನನ ಕಾರಣ ಎಂಬುದಾಗಿ ತಿಳಿದುಬಂದಿದೆ. ರಕ್ತದೊತ್ತಡ ಸಮತೋಲನವಿಲ್ಲದ ಜನ ರುದ್ರಾಭಿಷೇಕ ನಡೆಯುವ ಸ್ಥಳದಲ್ಲಿ ಆಗಾಗ ಕೂರುವುದರಿಂದ, ರುದ್ರಾಕ್ಷಿಯ ಮಾಲೆ ಧರಿಸುವುದರಿಂದ ಅದರಿಂದ ಪರಿಹಾರ ಕಾಣಬಹುದಾಗಿದೆ! ಅಭಿಷೇಕ ಮಾಡಿ ತೆಗೆದ ತೀರ್ಥವನ್ನು ಪ್ರಾಶನಮಾಡುವುದರಿಂದ, ಪ್ರೋಕ್ಷಿಸಿಕೊಳ್ಳುವುದರಿಂದ ಶಾರೀರಿಕ ಬಾಧೆಗಳನ್ನು ಕಳೆದುಕೊಳ್ಳುವುದು ತಿಳಿದುಬಂದ ವಿಷಯ! ಇಂದು ನಾವು ತಿಳಿದ ವಿಜ್ಞಾನಕ್ಕಿಂತ ಹೆಚ್ಚಿನ ಆಳವಾದ ಜ್ಞಾನ ನಮ್ಮ ಋಷಿಮುನಿಗಳಿಗೆ ಇತ್ತು ಎಂಬುದಕ್ಕೆ ಇದಕ್ಕಿಂತ ಬೇರೇ ಉದಾಹರಣೆ ಬೇಕೇ ?

ಬೇಡನೊಬ್ಬ ಬೇಟೆಗೆ ತೆರಳಿ ಏನೂ ಸಿಗದೇ, ದಾರಿತಪ್ಪಿ, ಹಸಿದ ಹೊಟ್ಟೆಯಲ್ಲಿ ದಟ್ಟ ಕಾನನದಲ್ಲಿ ರಾತ್ರಿ ಕಳೆಯಬೇಕಾಗಿ ಬಂತು. ಮನೆಯಲ್ಲಿರುವ ಹಸಿದ ಹೆಂಡತಿ-ಮಕ್ಕಳನ್ನು ನೆನೆಯುತ್ತಾ, ಮೇಲೆರಗಬಹುದಾದ ಹಿಂಸ್ರ ಕಾಡುಪ್ರಾಣಿಗಳಿಂದ ರಕ್ಷಿಸಿಕೊಳ್ಳುವ ಸಲುವಾಗಿ ಹತ್ತಿರವೇ ಇದ್ದ ಮರವೊಂದನ್ನು ಏರಿದ. ಬೇಸರ ಕಳೆಯಲು ತನಗೇ ಅರಿವಿಲ್ಲದೇ ಎಲೆಗಳನ್ನು ಕಿತ್ತು ಕಿತ್ತು ನೆಲಕ್ಕೆ ಬಿಸುಟ. ನೆಲದಲ್ಲಿ ನೆಲೆಯಾಗಿದ್ದ ಶಿವಲಿಂಗ ಆತನಿಗೆ ಗೋಚರಿಸಲೂ ಇಲ್ಲಾ; ಹತ್ತಿದ ಮರ ಬಿಲ್ವ ವೃಕ್ಷವೆಂಬುದೂ ತಿಳಿದಿಲ್ಲ! ಬೆಳಗಿನ ಜಾವ ಸಾಕ್ಷಾತ್ ಪರಶಿವ ಬೇಡನ ಮುಂದೆ ಪ್ರತ್ಯಕ್ಷನಾಗಿದ್ದ!! ಬೇಡನ ಅಜ್ಞಾನದಲ್ಲೂ ಆತನ ಪೂಜೆಯನ್ನು ಮೆಚ್ಚಿದ ಬೀರೇಶ್ವರ ಬೇಡನ ಸಂಕಷ್ಟವನ್ನು ನೀಗಿದ ಮಾತ್ರವಲ್ಲ ಆ ಜನ್ಮಾನಂತರ ಭವದ ಬಂಧನದಿಂದ ಮುಕ್ತಿಯನ್ನು ಕರುಣಿಸಿದ! ದೇವ-ದಾನವರು ಸಮುದ್ರ ಮಥನ ಮಾಡಿದಾಗ ಮೊದಲು ಉಕ್ಕಿದ ಹಾಲಾಹಲದಿಂದ ಲೋಕಗಳು ಕಂಗೆಟ್ಟವು. ಹರಿದುಬಂದ ಹಾಲಹಲವೆಂಬ ನಂಜನ್ನು ನಂಜಿಲ್ಲದ ಶಿವ ಭುಂಜಿಸಿದ..ನಂಜುಂಡೇಶ್ವರನಾದ. ಶಿವನ ಉಳಿವಿಗೆ ಹಾವನ್ನು ಕೊರಳಲ್ಲಿ ಬಂಧಿಸಿ ನಂಜು ಒಳಸೇರದಂತೇ ಅರ್ಧಾಂಗಿ ಪಾರ್ವತಿ ತಡೆದಿದ್ದರಿಂದ ಕಂಠ[ಕತ್ತು]ನೀಲಿಯಾದ ಶಿವ ನೀಲಕಂಠನಾದ!

ಶಂಕರ ಆತ್ಮಲಿಂಗವನ್ನೇ ನಮ್ಮ ಕರ್ನಾಟಕದ ಮಂದಿಗೆ ಕೊಟ್ಟ-ಇಷ್ಟು ಪ್ರೀತಿ ಸಾಲದೇ? ಯಾವುದೇ ಜಾತಿ-ಮತಗಳ ಭೇದವಿಲ್ಲದೇ ಸಾಂಪ್ರದಾಯಿಕ ಕ್ರಮದಲ್ಲಿ ಮುಟ್ಟು ಪೂಜಿಸಬಹುದಾದ ಗೋಕರ್ಣ ನಮ್ಮ ಕನ್ನಡಿಗರ ಹೆಮ್ಮೆ ! ವಿಶ್ವಮಾನವ ತತ್ವದಿಂದ ವಿದೇಶಿಗರಿಗೂ ಸಂಸ್ಕಾರ ಕಲಿಸಿ ಅಲ್ಲೀಗ ಆಲಯ ಪ್ರವೇಶಕ್ಕೆ ಅವಕಾಶ ಕಲ್ಪಿಸಲು ಸಿದ್ಧತೆ ನಡೆಸಲಾಗುತ್ತಿದೆ-ಇದು ನಮ್ಮ ಕನ್ನಡಿಗರ ಕೊಡುಗೆ-ಇಡೀ ಜಗತ್ತಿಗೆ ! ಅಂತಹ ಶಿವನನ್ನು ಈ ದಿನ ಅಹೋರಾತ್ರಿ ಪೂಜಿಸುವ ಕೈಂಕರ್ಯ ಲೋಕದಲ್ಲಿ. ಶಿವ ಪೂಜೆ ಈ ದಿನ ಮಾತ್ರವಲ್ಲ ನಿತ್ಯವೂ ನಡೆಯಲಿ, ಬದುಕಿನ ಜಂಜಡಗಳನ್ನು ಪರಿಹರಿಸಿಕೊಳ್ಳಲು ಸಹಕಾರಿಯಾಗಲಿ ಎಂಬುದು ನಿಮ್ಮೆಲ್ಲರಲ್ಲಿ ನನ್ನ ಪ್ರಾರ್ಥನೆ. ಸರ್ವರಿಗೂ ಶಿವರಾತ್ರಿಯ ಹಾರ್ದಿಕ ಶುಭಾಶಯಗಳು. ಶಂಭುವಿಗೆ ಮನಸಾ ಬಿಲ್ವಪತ್ರೆಯೊಂದನ್ನು ಅರ್ಪಿಸುವ ಮೂಲಕ ಈ ಲೇಖನಕ್ಕೆ ಶಿವಾಯನಮಃ ಎನ್ನೋಣವೇ ? :


ಅಜ್ಞಾನೇನ ಕೃತಂ ಪಾಪಂ ಜ್ಞಾನೇನಾಪಿ ಕೃತಂ ಚ ಯತ್ |
ತತ್ಸರ್ವಂ ನಾಶಯಾಮಾತು ಏಕಬಿಲ್ವಂ ಶಿವಾರ್ಪಣಂ ||