ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Tuesday, April 24, 2012

ದೀಪಂ ದೇವ ದಯಾನಿಧೇ-೬

ಚಿತ್ರಋಣ: ಅಂತರ್ಜಾಲ
ದೀಪಂ ದೇವ ದಯಾನಿಧೇ-೬

[ಜಗದ್ಗುರು ಶ್ರೀ ಶಂಕರಾಚಾರ್ಯರ ಅತಿ ಸಂಕ್ಷಿಪ್ತ ಜೀವನ ಚರಿತ್ರೆ]


ಇದಂ ವಿಷ್ಣುರ್ವಿಚಕ್ರಮೇ ತ್ರೇಧಾ ನಿದಧೇ ಪದಮ್ |
ಸಮೂಢಮಸ್ಯ ಪಾಗ್ಂಸುರೇ||

ಆಸ್ತಿಕ ಬಂಧುಗಳಿಗೆ ಶಂಕರರ ಜೀವನಾವಲೋಕನದ ಸಂಕ್ಷಿಪ್ತ ರೂಪದ ಬರಹದ ಈ ಭಾಗಕ್ಕೆ ಮತ್ತೆ ಸ್ವಾಗತ.

ನಾಳೆ ವೈಶಾಖ ಶುದ್ಧ ಪಂಚಮಿಯಂದು ಶ್ರೀಶಂಕರ ಜಯಂತಿ, ತನ್ನಿಮಿತ್ತ ಈ ಕಂತಿನ ಪ್ರಸರಣ, ಎಲ್ಲರಿಗೂ ಶಂಕರ ಜಯಂತಿಯ ಹಾರ್ದಿಕ ಶುಭಾಶಯಗಳು.

[ಅದ್ವೈತದ ಕುರಿತು ಬರೆದಾಗ ದ್ವೈತ ಮತ್ತು ವಿಶಿಷ್ಟಾದ್ವೈತ ವಾದಿಗಳಿಗೆ ಹಗುರವೆನಿಸಬಹುದು. ಸಮಷ್ಟಿಯಲ್ಲಿ ಯಾವ ಗುಂಪಿಗೂ ಸೇರದೇ ಹೊರನಿಂತು ನೋಡಿದಾಗ, ಜೀವನದ ಹಲವು ಘಟ್ಟಗಳಲ್ಲಿ ಅ-ದ್ವೈತವನ್ನೇ ಕಾಣಬಹುದಾಗಿದೆ. ಇದಕ್ಕೆ ಭಗವಂತನೇ ಹೇಳಿದ ಭಗವದ್ಗೀತೆಯೇ ಒಂದು ಉದಾಹರಣೆಯಾಗುತ್ತದೆ! ಶಂಕರರು ಅದ್ವೈತವನ್ನು ಹೊಸದಾಗಿ ಕಂಡುಹಿಡಿಯಲಿಲ್ಲ ಬದಲಾಗಿ ವೇದ-ಶಾಸ್ತ್ರ-ಪುರಾಣಗಳನ್ನೆಲ್ಲಾ ಮಥಿಸುತ್ತಾ ತೆರಳಿದ ಅವರಿಗೆ ಅದ್ವೈತದ ಸಾಕ್ಷಾತ್ ದರುಶನವಾಗುತ್ತದೆ; ಅದನ್ನೇ ಅವರು ಪ್ರಸ್ತಾವಿಸುತ್ತಾರೆ ಮತ್ತು ಆ ಮೂಲದಿಂದಲೇ ಸನಾತನ ಧರ್ಮವನ್ನು ಪುನರುಜ್ಜೀವನ ಗೊಳಿಸುತ್ತಾರೆ. ಮಾಯಾ ತತ್ವದ ಹುರುಳನ್ನು ಅರಿಯಲಾಗದವರಿಗೆ ಅದ್ವೈತಕ್ಕೆ ನೆಲೆಯೇ ಇಲ್ಲವೆಂಬ ಅನಿಸಿಕೆಯುಂಟಾಗುವುದು ಸಹಜ; ಮಾಯಾತತ್ವವನ್ನು ಅರಿಯುವುದು ಅಷ್ಟು ಸುಲಭದ ಕೆಲಸವಲ್ಲವಾದ್ದರಿಂದ ಕೆಲವರು ಕೆಲವು ಹಂತಗಳಲ್ಲೇ ನಿಂತರು. ಒಬ್ಬರು ಈ ಸೃಷ್ಟಿಯಲ್ಲಿ ಜೀವಾತ್ಮ ಮತ್ತು ಪರಮಾತ್ಮ ಒಂದೇ ಆದರೂ ಪರಮಾತ್ಮ ಹಲವು ಮೂಲಗಳಿಂದ ಜಗತ್ತನ್ನು ನಡೆಸುತ್ತಾನೆ ಎಂದರೆ ಇನ್ನೊಬ್ಬರು ಜೀವಾತ್ಮ ಮತ್ತು ಪರಮಾತ್ಮ ಬೇರೆ ಬೇರೆ ಎಂದಿದ್ದಾರೆ! ಜಗತ್ತಿನ ಎಲ್ಲಾ ಧರ್ಮಗಳೂ ಹೇಳುವುದು ಏಕಮೂಲವನ್ನೇ ಹೊರತು ಬಹುಮೂಲವನ್ನಲ್ಲ. ಅದರಲ್ಲೂ ಸಾರ್ವಕಾಲಿಕವೆನಿಸುವ ಹಲವು ಕೃತಿಗಳಿಂದ ಜಗತ್ತನ್ನೇ ನಿಬ್ಬೆರಗಾಗಿಸಿದ ಶಂಕರರು ಅರಿಯದೇ ಯಾವುದನ್ನೂ ಒಪ್ಪಿಕೊಳ್ಳುವ ಸ್ವಭಾವದವರಾಗಿರಲಿಲ್ಲ. ಹೊರಗೆ ನಮ್ಮ ವಾದಗಳೇನೇ ಇದ್ದರೂ ಅಂತರಂಗದಲ್ಲಿ ಅನೇಕ ಬಾರಿ ನಾವು ಅದ್ವೈತದ ಅನುಭೂತಿಗೆ ಸಹಜವಾಗಿ ಒಳಪಡುತ್ತೇವೆ! ಆಚಾರ್ಯತ್ರಯರನ್ನೂ ನಮಿಸೋಣ, ಆದರೆ ಈ ಜಗತ್ತಿನ ಮೂಲ ಅದ್ವೈತ ತತ್ವವೆಂಬುದನ್ನು ಸಮಷ್ಟಿಯಿಂದ ಮನಗಾಣಲು ಮುನ್ನಡೆಯೋಣ. ಸರ್ವರಿಗೂ ಮತ್ತೊಮ್ಮೆ ಶ್ರೀಶಂಕರ ಜಯಂತಿಯ ಹಾರ್ದಿಕ ಶುಭಾಶಯಗಳು.]

ಶಂಕರರು ಈಗ ಬಾಲ ಸನ್ಯಾಸಿ. ಹೊರಟುನಿಂತ ಶಂಕರರಿಗೆ ಗುರುವೊಬ್ಬರ ಅಗತ್ಯತೆ ಕಾಣಿಸಿತು. ಜಗತ್ತಿನ ಸಕಲಜೀವರಾಶಿಗಳೂ ಸೇರಿದಂತೆ ಎಲ್ಲದರ ಸೃಷ್ಟಿ, ಸ್ಥಿತಿ ಮತ್ತು ಲಯ ಕಾರ್ಯಗಳಿಗೆ ಯಾರು ಕಾರಣರೋ ಅಂತಹ ಶಕ್ತಿಯನ್ನೇ ’ಗುರು’ ಎನ್ನುವುದು. ಅದೇ ಪರಬ್ರಹ್ಮ!

ಗುರುರ್ಬ್ರಹ್ಮಾ ಗುರುರ್ವಿಷ್ಣುಃ ಗುರುರ್ದೇವೋ ಮಹೇಶ್ವರಃ|
ಗುರುಸ್ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ ||  

ಬ್ರಹ್ಮಸಾಕ್ಷಾತ್ಕಾರವನ್ನು ಪಡೆದ ಗುರುವನ್ನು ಪಡೆಯುವುದು ಉನ್ನತ ಕೆಲಸ. ಅವ್ಯಾಹತವಾಗಿ ಆವಿರ್ಭವಿಸುತ್ತಿರುವ ಅಂತರಾತ್ಮನ ನುಡಿಗಳನ್ನನುಸರಿಸಿ ಶಂಕರರು ನಡೆಯುತ್ತಿದ್ದರು. || ಸರ್ವಂ ಖಲ್ವಿದಂ ಬ್ರಹ್ಮ || ಎಂಬ ನುಡಿಯಂತೇ ನಮ್ಮಂತರಾತ್ಮವೇ ಆ ಪರಬ್ರಹ್ಮನ ಪ್ರತಿಬಿಂಬ. ನಮ್ಮಲ್ಲೇ ಕುಳಿತು ನಮ್ಮನ್ನು ನಡೆಸುವ ಆ ಶಕ್ತಿಯ ತನ್ನ ಮೂಲರೂಪದಿಂದ ಆವಿರ್ಭವಿಸಿದಾಗ ವ್ಯಕ್ತಿಗೆ ಆತ್ಮನ ಅರಿವುಂಟಾಗುತ್ತದೆ. ಕಾಲಟಿಯಿಂದ ಹೊರಟ ಶಂಕರರು ಉತ್ತರಾಭಿಮುಖವಾಗಿ ಗುರುವಿನ ಅನ್ವೇಷಕರಾಗಿ ನಡೆದರು. ಹಾದಿಯುದ್ದಕ್ಕೂ ಅನೇಕ ಪವಿತ್ರ ತಪೋಧಾಮಗಳನ್ನು ಸಂದರ್ಶಿಸುತ್ತಾ ನರ್ಮದಾನದೀ ತೀರಕ್ಕೆ ಬಂದು ತಲುಪಿದರು. ಪುಣ್ಯನದಿಗಳು ನಮ್ಮ ಜನ್ಮಜನ್ಮಾಂತರ ಪಾಪಗಳನ್ನು ನಾಶಮಾಡುವವಂತೆ. ಅದಕ್ಕೆಂತಲೇ ಹಿಂದೂಗಳು

ಗಂಚೇ ಚ ಯಮುನೇ ಚೈವ
ಗೋದಾವರಿ ಸರಸ್ವತಿ |
ನರ್ಮದೇ ಸಿಂಧು ಕಾವೇರಿ
ಜಲೇಸ್ಮಿನ್ ಸನ್ನಿಧಿಂ ಕುರು ||

ಎಂದು ಪುಣ್ಯನದಿಗಳನ್ನು ಪ್ರಾರ್ಥಿಸುವುದು ವಾಡಿಕೆ. ತಾನು ಉಪಭೋಗಿಸುವ ಶುದ್ಧಜಲದಲ್ಲಿ ಭಾರತದ ಸಪ್ತನದಿಗಳನ್ನು ಆವಾಹಿಸುವುದು ಒಂದು ಸಂಪ್ರದಾಯ. ಇಂತಹ ಸಪ್ತನದಿಗಳಲ್ಲಿ ಒಂದಾದ ನರ್ಮದಾ ನದೀತೀರದಲ್ಲಿ ಓಂಕಾರನಾಥ ಎಂಬುದೊಂದು ದಿವ್ಯತಾಣ. ಅಲ್ಲೊಬ್ಬ ಮಹಾಯೋಗಿಯ ನಿವಾಸವಿತ್ತು: ಅದು ಅಲ್ಲಿರುವ ಗುಹೆಯ ಒಳಗೆ. ಅಲ್ಲಿದ್ದವರೇ ಗೋವಿಂದ ಭಗವತ್ಪಾದರು. ಶುಕಾಚಾರ್ಯರ ಶಿಷ್ಯರಾದ ಗೌಡಪಾದಾಚಾರ್ಯರ ಶಿಷ್ಯರು ಈ ಗೋವಿಂದ ಭಗವತ್ಪಾದರು. ಸಮರ್ಥ ಗುರು ಸಿಗುವುದು ಹೇಗೆ ದುರ್ಲಭವೋ ಹಾಗೇ ಗುರುವಿಗೊಬ್ಬ ಸಮರ್ಥ ಶಿಷ್ಯ ಸಿಗುವುದೂ ಅಷ್ಟೇ ದುರ್ಲಭ. ಗೋವಿಂದ ಭಗವತ್ಪಾದರು ಬಹುದಿನಗಳಿಂದ ಶಿಷ್ಯನೊಬ್ಬನ ಆಗಮನದ ನಿರೀಕ್ಷಣೆಯಲ್ಲಿದ್ದರು. ಅವರಿಗೆ ಅದರ ಅರಿವಿತ್ತು; ದೃಷ್ಟಾಂತವೂ ಆಗಿತ್ತು. ಗೋವಿಂದ ಭಗವತ್ಪಾದರು ಯೋಗಶಾಸ್ತ್ರವನ್ನು ಭಾರತಕ್ಕೆ ಅನುಗ್ರಹಿಸಿದ ಮಹರ್ಷಿ ಪತಂಜಲಿಯ ಅವತಾರವೆಂದೂ ಹೇಳುವರು. ಶಂಕರರು ಅಲ್ಲಿಗೆ ಬಂದಾಗ ಗೋವಿಂದ ಭಗವತ್ಪಾದರು ಯೋಗಸಮಾಧಿಯಲ್ಲಿದ್ದುದನ್ನು ಕಂಡು ರೋಮಾಂಚನಗೊಂಡರು! ಈ ಗುರುಗಳ ಬಗ್ಗೆ ಕೇಳಿ ತಿಳಿದಿದ್ದರಾದರೂ ನೋಡಿರಲಿಲ್ಲ. ಬಹುದೂರದಿಂದ ತಾನು ಬಯಸಿ ಬಂದದ್ದು ತನಗೆ ಪ್ರಾಪ್ತವಾಗುವ ಸಕಾಲ ಸನ್ನಿಹಿತವಾಗುತ್ತಿರುವುದಕ್ಕೆ ಶಂಕರರು ಸಂತಸಗೊಂಡರು.

ಸಮಯ ಸರಿಯುತ್ತಲೇ ಇತ್ತು. ಕೆಲಹೊತ್ತಿನಲ್ಲೇ ಸಮಾಧಿಯಿಂದ ಎಚ್ಚೆತ್ತ ಗೋವಿಂದ ಭಗವತ್ಪಾದರು ಎದುರಿಗಿದ್ದ ತೇಜಸ್ವೀ ಬಾಲಕ ಶಂಕರರನ್ನು ಕಂಡರು. ಬ್ರಹ್ಮತೇಜಸ್ಸು ಶಂಕರರ ಮುಖದಲ್ಲಿ ಎದ್ದು ಕಾಣುತ್ತಿತ್ತು. ತನ್ನೆಡೆಗೆ ದೃಷ್ಟಿ ಹರಿಸಿದ ಗುರುವನ್ನು ಕಂಡು ಶಂಕರರು ದೀರ್ಘದಂಡ ಪ್ರಣಾಮವನ್ನು ಮಾಡಿದರು.

" ಮಹಾತ್ಮರೇ, ತಾವು ಬ್ರಹ್ಮಜ್ಞಾನಿಯೂ ಯೋಗಿ ಪತಂಜಲಿಯ ಸ್ವರೂಪಿಯೂ ಎಂಬುದನ್ನು ನಾನು ಬಲ್ಲೆ. ನಿಮ್ಮಿಂದ ಬ್ರಹ್ಮಜ್ಞಾನದ ಕುರಿತಾಗಿ ಅರಿಯಲು ಬಂದೆ. ತಮ್ಮ ಶಿಷ್ಯನನ್ನಾಗಿ ಸ್ವೀಕರಿಸಿ ಅನುಗ್ರಹಿಸಿರಿ " ಎಂದು ಶಂಕರರು ಪ್ರಾರ್ಥಿಸಿದರು. 

ಬಾಲಕ ಶಂಕರರು ಕಾವಿ ಧರಿಸಿದ್ದರು, ಕೈಯ್ಯಲ್ಲಿ ದಂಡ-ಕಮಂಡಲಗಳಿದ್ದವು. ನೋಡುವುದಕ್ಕೆ ಸಾಕ್ಷಾತ್ ಪರಶಿವನ ಚಿಕ್ಕ ಮೂರ್ತಿಯಂತಿದ್ದರು. ಶಂಕರರನ್ನೇ ದಿಟ್ಟಿಸಿನೋಡಿದ ಗೋವಿಂದ ಭಗವತ್ಪಾದರಿಗೆ ವೇದವೇದಾಂತಗಳನ್ನೂ ಸಕಲ ಶಾಸ್ತ್ರವಿದ್ಯೆಗಳನ್ನೂ ಓದಿ ಅರಗಿಸಿಕೊಂಡು ವಿನಯವೇ ಮೈವೆತ್ತ ಈತನಿಗೆ, ತನ್ನ ಅವಶ್ಯಕತೆಯಾದರೂ ಏನಿದೆ ಎಂದೆನಿಸಿತು. ಆದರೂ ಅದನ್ನು ತೋರಗೊಡದೇ,

" ಅಯ್ಯಾ ಯಾರು ನೀನು ? " --ಪ್ರಶ್ನಿಸಿದರು.

ಶಂಕರರು ಈ ವೇಳೆಗಾಗಲೇ ಬ್ರಹ್ಮ ಸ್ವರೂಪದ ಬಗ್ಗೆ ಅರಿತಿದ್ದರು. ’ಅಹಂ ಬ್ರಹ್ಮಾಸ್ಮಿ’ --ನಾನು ಬ್ರಹ್ಮನೇ ಆಗಿದ್ದೇನೆ ಎಂಬುದರ ಅರಿವೂ ಅವರಲ್ಲಿತ್ತು.

" ಮಹಾತ್ಮರೇ, ನಾನೆಂಬುದು ಯಾವುದೂ ಇಲ್ಲ. ಪಂಚಭೂತಗಳೂ ಪಂಚೇಂದ್ರಿಯಗಳೂ ನಾನಲ್ಲ. ಎಲ್ಲವನ್ನೂ ಮೀರಿದ ಪರಾತ್ಪರನಾದ ಪರಮೇಶ್ವರನೇ ನಾನು. " ಎಂದರಾದರೂ ಲೌಕಿಕವಾಗಿ ತನ್ನ ಪರಿಚಯವನ್ನೂ ತಿಳಿಸಿದರು. 

ಶಂಕರರು ಕ್ರಮಬದ್ಧವಾದ ಸನ್ಯಾಸವನ್ನು ಸ್ವೀಕರಿಸಿರಲಿಲ್ಲ. ಅದನ್ನು ವಿಧಿವತ್ತಾಗಿ ನಡೆಸಬೇಕಾಗಿತ್ತು. ಅದನ್ನರಿತ ಗುರು ಗೋವಿಂದ ಭಗವತ್ಪಾದರು ಶುಭದಿನವೊಂದನ್ನು ಗೊತ್ತುಪಡಿಸಿ ಶಂಕರರಿಗೆ ವಿಧಿವತ್ತಾಗಿ ಸನ್ಯಾಸ ದೀಕ್ಷೆ ಅನುಗ್ರಹಿಸಿ "ಶ್ರೀಶಂಕರ ಭಗವತ್ಪಾದರು" ಎಂಬ ಅಭಿದಾನವನ್ನಿತ್ತರು. ಅಂದಿನಿಂದ ಶಂಕರರು ಶ್ರೀಶಂಕರಾಚಾರ್ಯರೆಂದೇ ಕರೆಯಲ್ಪಟ್ಟರು. ಇದೇ ಸಮಯದಲ್ಲಿ ಗೋವಿಂದ ಭಗವತ್ಪಾದರ ಚರಣಕಮಲಗಳನ್ನು ಸ್ಮರಿಸುತ್ತಾ ಶಂಕರರು ಗೋವಿಂದರಲ್ಲಿ ಗೋವಿಂದನನ್ನು ಕಂಡು ಗೋವಿಂದಾಷ್ಟಕವನ್ನು ರಚಿಸಿ ಸ್ತುತಿಸಿದ್ದಾರೆ.

ದಿ|ಎಂ.ಎಸ್.ಸುಬ್ಬಲಕ್ಷ್ಮಿಯವರ ಸುಶ್ರಾವ್ಯ ಕಂಠದಲ್ಲಿ ಗೋವಿಂದಾಷ್ಟಕವನ್ನು ಕೇಳೋಣ [ಗಾಯಕಿಗೂ, ಸಂಗೀತವೃಂದಕ್ಕೂ ಮತ್ತು ಇದನ್ನು ಯೂಟ್ಯೂಬ್ ಮೂಲಕ ಒದಗಿಸಿದವರಿಗೂ ವಂದನೆಗಳು]:

ಯಾವ ಗುರುವಿಗೆ ತನ್ನ ಶಿಷ್ಯ ತಮ್ಮನ್ನೂ ಮೀರಿಸುವ ಸಾಮರ್ಥ್ಯವನ್ನು ಪಡೆದರೆ ಖುಷಿಯಾಗುವುದಿಲ್ಲ? ತಂದೆಯೊಬ್ಬನಿಗೆ ಮಗ ತನ್ನನ್ನೂ ಮೀರಿಸುವ ಸಾಮರ್ಥ್ಯಗಳಿಸಿದಾಗ ಆಗುವ ಹರ್ಷ ಗುರುವೊಬ್ಬನಿಗೆ ತನ್ನ ಶಿಷ್ಯ ಹಾಗೆ ಮಾಡಿದಾಗ ಸಹಜವಾಗಿ ಉಂಟಾಗುತ್ತದೆ. ’ಮಾಂಡೂಕ್ಯ ಕಾರಿಕಾ’ ಎಂಬ ಗ್ರಂಥವನ್ನು ಬರೆದ ಗೌಡಪಾದರ ಶಿಷ್ಯರಾದ ಗೋವಿಂದ ಭಗವತ್ಪಾದರಿಗೆ, ತನ್ನ ಶಿಷ್ಯ ಅದ್ವಿತೀಯ ಎಂಬ ಅನುಭೂತಿ ಮತ್ತು ಆತನ ಅತಿಶಯ ಬುದ್ಧಿಮಟ್ಟ ಅದಾಗಲೇ ಅರಿವಿಗೆ ಬಂದಿತ್ತು. ಬಹಳ ಹಿಂದೆ ಶುಕಾಚಾರ್ಯರ ಗುರುಗಳಾಗಿದ್ದ ವೇದವ್ಯಾಸರು ಗೋವಿಂದಪಾದರಿಗೆ ಹೇಳಿದ್ದರು: " ಮುಂದೆ ನಿನ್ನ ಶಿಷ್ಯ ನದಿಯೊಂದರ ಪ್ರವಾಹವನ್ನು ಕಮಂಡಲದಲ್ಲಿ ಕೂಡಿಹಾಕುತ್ತಾನೆ ಮತ್ತು ಆತನೇ ವೇದಾಂತಕ್ಕೆ ಭಾಷ್ಯಬರೆದು ಎಲ್ಲರನ್ನೂ ಜಾಗ್ರತಗೊಳಿಸುತ್ತಾನೆ" ಎಂದು! ಆ ಶಿಷ್ಯ ಈತನೇ ಎಂಬುದು ಗೋವಿಂದ ಭಗವತ್ಪಾದರಿಗೆ ಕೆಲವೇ ತಿಂಗಳುಗಳಲ್ಲಿ ತಿಳಿದುಬಂತು.

ಘಟನೆ ನಡೆದಿದ್ದು ಹೀಗೆ: ಏಕಪಾಠಿಯಾಗಿದ್ದ ಶಂಕರರು ಗುರುಗಳು ಒಮ್ಮೆ ಹೇಳಿದ್ದನ್ನು ಆ ಕ್ಷಣದಲ್ಲೇ ಅರಗಿಸಿಕೊಂಡುಬಿಡುತ್ತಿದ್ದರು. ಹಠಯೋಗ, ರಾಜಯೋಗ, ಜ್ಞಾನಯೋಗ ಮೊದಲಾದ ಹಲವು ವಿಭಾಗಗಳನ್ನು ಕಲಿಯುತ್ತಾ ಇರಲಾಗಿ ಒಂದು ದಿನ ಗುರು ಗೋವಿಂದರು ಎಂದಿನಂತೇ ಗುಹೆಯಲ್ಲಿ ಸಮಾಧಿಸ್ಥರಾಗಿದ್ದರು. ಆಗ ಮಳೆಗಾಲವಾಗಿದ್ದು ಎಲ್ಲೆಲ್ಲೂ ಮಳೆ ಜಾಸ್ತಿ ಸುರಿದು ನರ್ಮದೆಯೂ ಉಕ್ಕಿ ಹರಿಯತೊಡಗಿದಳು. ಉಕ್ಕಿ ಹರಿದ ನರ್ಮದೆಯ ಪ್ರವಾಹ ಗುಹೆಯ ಬಾಗಿಲಿಗೂ ಬಂದುಬಿಟ್ಟಿತು! ಇನ್ನೇನು ನೀರು ಒಳಗೆ ಪ್ರವೇಶಿಸಬೇಕು ಎಂಬಷ್ಟರಲ್ಲಿ ಶಂಕರರು ತನ್ನ ಕಮಂಡಲವನ್ನು ಗುಹೆಯ ಬಾಗಿಲಲ್ಲಿ ಇರಿಸಿ, ತಮ್ಮ ತಪಶ್ಶಕ್ತಿಯನ್ನು ಧಾರೆಯೆರೆದು ನುಗ್ಗಿಬರುತ್ತಿರುವ ನೀರನ್ನು ಅದರೊಳಗೆ ಅಡಗಿಸಿಬಿಟ್ಟರು. ಗೋವಿಂದ ಭಗವತ್ಪಾದರ ಮಿಕ್ಕುಳಿದ ಶಿಷ್ಯಂದಿರು ಇದನ್ನು ನೋಡಿ ಆಶ್ಚರ್ಯಚಕಿತರಾದರಲ್ಲದೇ ಶಂಕರರು ಮಹಾಮಹಿಮರೇ ಎಂಬುದನ್ನು ಅರಿತುಕೊಂಡರು.

ಸ್ವಲ್ಪ ಹೊತ್ತಿನ ಬಳಿಕ ಎಚ್ಚೆತ್ತ ಗೋವಿಂದ ಭಗವತ್ಪಾದರಿಗೆ ಎಲ್ಲದರ ಅರಿವೂ ಉಂಟಾಯ್ತು. ತನ್ನ ಸಮಾಧಿ ಸ್ಥಿತಿಗೆ ಭಂಗಬಾರದಿರಲೆಂದು ಶಂಕರರು ಪ್ರವಾಹವನ್ನು ಕಮಂಡಲದಲ್ಲಿ ಬಂಧಿಸಿದ್ದೂ ತಿಳಿಯಿತು. ವೇದವ್ಯಾಸರು ಹೇಳಿದ ಶಿಷ್ಯನನ್ನು ಈಗವರು ಸಾಕ್ಷಾತ್ ಕಂಡಿದ್ದರು; ವ್ಯಾಸರೇ ಹೇಳಿದಂತೇ ವೇದಾಂತ ಸೂತ್ರಕ್ಕೆ ಭಾಷ್ಯವನ್ನು ಬರೆಯುವ ಶಿಷ್ಯ ಈತನೇ ಎಂಬುದನ್ನು ಮನಗಂಡರು. ವೇದಾಂತದ ಅರ್ಥ ಜನಸಾಮಾನ್ಯರಿಗೆ ತಲ್ಪುವ ಸಲುವಾಗಿ ಅದರ ವ್ಯಾಖ್ಯಾನವನ್ನು ಮಾಡಬೇಕಾಗಿತ್ತು. ಈ ಕೆಲಸಕ್ಕೆ ಶಂಕರರೇ ತಕ್ಕವರು ಎಂದು ಗೋವಿಂದಪಾದರು ನಿರ್ಣಯಿಸಿದರು.

ಆನಂದತುಂದಿಲರಾದ ಗೋವಿಂದ ಭಗವತ್ಪಾದರು " ಶಂಕರರೇ, ನಿಮ್ಮ ಶ್ರದ್ಧಾ, ಭಕ್ತಿ, ನಿಷ್ಠೆಗಳೆಲ್ಲಾ ನನಗೆ ಬಹಳ ಮೆಚ್ಚುಗೆಯಾಗಿವೆ. ಬಹಳಕಾಲ ನಿಮ್ಮ ನಿರೀಕ್ಷೆಯಲ್ಲಿ ನಾನಿದ್ದೆ. ಈಗ ಆ ಕಾಲ ಪ್ರಾಪ್ತವಾಗಿದೆ. ಬ್ರಹ್ಮವೇನೆಂಬುದನ್ನು ನೀವು ಚೆನ್ನಾಗಿ ಅರಿತಿದ್ದೀರಿ. ನೀವು ಅನುಭವಿಸಿದ ಸತ್ಯ, ಆನಂದವನ್ನು ವೇದಾಂತದ ಮೂಲಕ ಸಮಸ್ತರಿಗೂ ತಿಳಿಸಿಕೊಡಬೇಕಾದ ಕೆಲಸ ಆಗಬೇಕಾಗಿದೆ. ಉಪನಿಷತ್ತುಗಳು, ಬ್ರಹ್ಮಸೂತ್ರ ಮತ್ತು ಭಗವದ್ಗೀತೆ ಈ ಮೂರು ಭಾರತದ ಆಧ್ಯಾತ್ಮಿಕ ನಿಧಿಗಳಾಗಿವೆ. ಇವುಗಳಿಗೆ ನಿಮ್ಮ ಅನುಭವದಲ್ಲಿ ಭಾಷ್ಯವನ್ನು ಬರೆಯಿರಿ. ನಿಮ್ಮ ಯೋಗ ಸಾಧನೆಯಿಂದ ಬಯಸಿದ ಸಂಕಲ್ಪ ಈಡೇರುತ್ತದೆ. ಈ ಕಾರ್ಯಕ್ಕಾಗಿ ಅಪ್ಪಣೆ ಕೊಟ್ಟಿರುತ್ತೇನೆ. ಪವಿತ್ರ ಕಾಶೀ ಕ್ಷೇತ್ರಕ್ಕೆ ಹೋಗಿ, ಅಲ್ಲಿ ವಿಶ್ವೇಶ್ವರನ ದರ್ಶನಪಡೆದು, ನಿಮ್ಮ ಈ ಕಾರ್ಯವನ್ನು ಮುಂದುವರಿಸಿರಿ" ಎಂದು ಆಶೀರ್ವದಿಸಿದರು.

ಶಂಕರರು ಗುರುಗಳ ಕಾಲುಮುಟ್ಟಿ ನಮಸ್ಕರಿಸುತ್ತಾ " ಮಹಾಪ್ರಸಾದ ಹಾಗೇ ಆಗಲಿ" ಎನ್ನುತ್ತಾ ಅಪ್ಪಣೆಯನ್ನು ಶಿರಸಾವಹಿಸಿದರು. ಯಾವ ಕೆಲಸವನ್ನು ಮಾಡಲು ಬಹಳಕಾಲದಿಂದ ಕಾಯುತ್ತಿದ್ದರೋ ಅ ಕೆಲಸಕ್ಕೆ ಗುರುವಾಣಿ ಅಪ್ಪಣೆಯಾಗಿ ಪ್ರಾಪ್ತವಾಗಿತ್ತು! ಆಕ್ಷಣದಲ್ಲಿ ಶಂಕರರಿಗೆ ಅಲ್ಲವೂ ಬ್ರಹ್ಮಮಯವಾಗಿ ಕಾಣಿಸಿತು.

ಕೆಲದಿನಗಳಲ್ಲೇ ಗೋವಿಂದ ಭಗವತ್ಪಾದರು ದೇಹತ್ಯಾಗಮಾಡಿದರು. ಅವರ ಅಂತ್ಯವಿಧಿಗಳನ್ನು ಅಲ್ಲಿರುವ ಶಿಷ್ಯರ ಸಹಕಾರದೊಂದಿಗೆ ನೆರವೇರಿಸಿ, ಮಹಾಸಮಾಧಿ ಮುಗಿದಮೇಲೆ, ಶಂಕರರು ಕಾಶೀಕ್ಶೇತ್ರಕ್ಕೆ ಪ್ರಯಾಣ ಬೆಳೆಸಿದರು. ಗುಹೆಯಲ್ಲಿ ಇದ್ದ ಇತರ ಕೆಲವು ಸನ್ಯಾಸಿಗಳೂ ಶಂಕರರ ಜೊತೆಗೆ ಕಾಶಿಗೆ ತೆರಳಿದರು. ಆಗಿನ್ನೂ ಶಂಕರರಿಗೆ ಹನ್ನೊಂದು ವಯಸ್ಸು! ಮುಂದಿನ ತನ್ನ ಜೀವನವನ್ನು ವೇದಾಂತ ಪ್ರಸಾರಣೆಗೆ ಮೀಸಲಿಟ್ಟರು ಶಂಕರರು. ಜಗತ್ತಿನ ಸಕಲ ಜೀವಿಗಳೂ ಬ್ರಹ್ಮವಲ್ಲದೇ ಬೇರೇನೂ ಅಲ್ಲ. ಈ ತತ್ವದ ಅರಿವುಂಟಾದವನು ಜೀವನ್ಮುಕ್ತನಾಗುತ್ತಾನೆ-ಇದು ವೇದಾಂತದ ಸಾರವಾಗಿದೆ. ಶಂಕರ ಭಗವತ್ಪಾದರು ಜಗತ್ತಿಗೇ ವೇದಾಂತದ ದರ್ಶನದ ಸಾರವನ್ನು ತಿಳಿಸಲು ಕಟಿಬದ್ಧರಾದರು. ಕುಸಿದಿರುವ ಸನಾತನ ಧರ್ಮದ ಪುನರುತ್ಥಾನ ಕ್ರಿಯೆಯೂ ಆಗಬೇಕಿತ್ತು. ಇದನ್ನೇ ಮನದಲ್ಲಿ ಸಂಕಲ್ಪಿಸುತ್ತಾ ವಿಂಧ್ಯಪರ್ವತದ ದಟ್ಟಕಾಡುಗಳನ್ನೆಲ್ಲಾ ದಾಟಿ,[ಮಾರ್ಗಮಧ್ಯೆ ಹಲವು ಪುಣ್ಯಧಾಮಗಳನ್ನು ಸಂದರ್ಶಿಸಿದರು] ದೂರದ ಪ್ರಯಾಗವನ್ನು ತಲುಪಿ ಆ ಮೂಲಕ ವಾರಾಣಸಿಗೆ ತಲುಪಿದರು.   

ಭೈರವಿ ರಾಗದಲ್ಲಿ [ಕುವೆಂಪು ಅವರ ವೃಂದಾವನಕೆ ಹಾಲನು ಮಾರಲು.... ಹಾಡಿನ ದಾಟಿಯಲ್ಲಿ] ಸ್ವರಚಿತ ಶಂಕರ ಭಕ್ತಿ ಗೀತೆ, ರಚಿಸಿ ಹಾಡಬೇಕೆಂದಿದ್ದರೂ ಗಂಟಲು ಸೋಂಕಿನಿಂದ ಹಾಡಲು ಸಾಧ್ಯವಾಗಿಲ್ಲ, ಸರಳವಾಗಿ ಯಾರಾದರೂ ಹಾಡಿಕೊಳ್ಳಬಹುದಾಗಿದೆ.  

ಷಣ್ಮತಗಳನು ಸ್ಥಾಪಿಸಿ ನುಡಿದಾ
ಶಂಕರ ನಿಜದದ್ವೈತವನು
ಶಂಕರ ನಿಜದದ್ವೈತವನು
ಷಣ್ಮತಗಳಲಿ ಮಾಯೆಯ ಮೂಲವ
ಅರಿಯಲು ನುಡಿದಾ ತತ್ವವನು

ಭರತ ಭೂಮಿಯಲಿ ಧರ್ಮವು ನಶಿಸಿರೆ
ಕೊರತೆಯ ಕಂಡ ಎಳವೆಯಲೇ
ನಿರತವು ಕಾರ್ಯದಿ ಮಾರ್ಗವ ತೋರಿದ
ಪರತತ್ವದ ನಡೆ ಬಾಳ್ವೆಯಲೇ

ದಕ್ಷಿಣ ಉತ್ತರ ಪೂರ್ವ ಪಶ್ಚಿಮ
ರಕ್ಷಣೆಗೆಂದಾಮ್ನಾಯಗಳಾ
ಭಕ್ಷಣೆ ಬಲಿಗಳ ಜೀವದ ಹಿಂಸೆಯ
ತಕ್ಷಣ ನಿಲಿಸುವ ಕಾರ್ಯಗಳಾ

ಬಾಲಕ ಶಂಕರ ದೇಶವ ಸುತ್ತಿದ
ಕಾಲಟಿಯಿಂದಾರಂಭಿಸುತಾ
ಲೀಲೆಯು ಘನತರ ಹಸುಳೆಯು ವೇದವ
ಲಾಲಿತ್ಯದಿ ವಿಜೃಂಭಿಸುತಾ

ತನ್ನಾ ಜೀವನ ದೇಶಕೆ ಅರ್ಪಿಸಿ
ಚಿನ್ನಾಟದ ಆ ಬಾಲ್ಯದಲಿ
ಪನ್ನಗಧರನಾ ಮಾನವ ರೂಪದಿ
ಮುನ್ನಡೆದನು ಸಾಫಲ್ಯದಲಿ

                           [....... ಚರಿತ್ರೆ ಹೀಗೇ ಕಂತುಗಳಲ್ಲಿ ಮುಂದುವರಿಯುತ್ತದೆ]