ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Monday, June 14, 2010

ಪಂಚಾಗ್ನಿಯ ನಡುವೆ ಜೀವಂತ ಕಂಡ ಪರಮಹಂಸ !!


ಅಂತೂ ಇಂತೂ ನಿತ್ಯಾನಂದನ ಬಿಡುಗಡೆಯಾಯ್ತು! ಆತನ ಭಕ್ತರ ಮನಸ್ಸಿಗೆ ಕಾಡಿನಿಂದ ಶ್ರೀರಾಮ ವನವಾಸ ಮುಗಿಸಿ ಬಂದದ್ದಕ್ಕಿಂತ ತುಸು ಹೆಚ್ಚೇ ಖುಷಿಯಾಯ್ತು. ಛೆ ಛೆ ನಮ್ಮ ಸ್ವಾಮೀಜಿ ಹಾಗಲ್ಲ- ತುಂಬಾ ಸೆನ್ಸಿಟಿವೆ ಮ್ಯಾಟರು ಎನ್ನುತ್ತಿರುವ ನಿತ್ಯಭಕ್ತಾನಂದರುಗಳಿಗೆಲ್ಲ ನಮೋನ್ನಮಃ ! ಭಾರತಮಾತೆ ಬಹುಶಃ ಬಹಳದಿನಗಳಮೇಲೆ ಪುರುಸೊತ್ತು ಮಾಡಿಕೊಂಡು ಒಮ್ಮೆ ನಕ್ಕಿರಬೇಕು! ಸ್ವಲ್ಪ ಕಣ್ಣು ಕ್ಲೀಯರ್ ಇದ್ದವರಿಗೆ ಪಂಚಾಗ್ನಿ ಎಂದು ಹೆಸರಿಸಿದ ಚಳಿಗೆ ಹಾಕಿಕೊಳ್ಳುವ ಬೆಂಕಿಯ ಮಧ್ಯೆ ಆಗಾಗ ಸಣ್ಣಗೆ ಕಣ್ಣು ಕಿರಿದಾಗಿ ತೆರೆದು ಮೀಡಿಯಾದವರ ಕ್ಯಾಮರಾ ನೋಡುತ್ತಿದ್ದ ನಿತ್ಯಾನಂದನನ್ನು ನೋಡಲು ಕಣ್ಣುಗಳೆರಡೂ ಸಾಲದು! ನಿತ್ಯ ಬರುತ್ತಿದ್ದಂತೆ ಇಡೀ ಆಶ್ರಮಕ್ಕೆ ಆಶ್ರಮವೇ ಎದ್ದು ಕುಣಿಯಿತು. ಪೂರ್ಣಕುಂಭ ಸ್ವಾಗತ ಬೇರೆ! ಲೋಕದಲ್ಲಿ ಇನ್ನೆಲ್ಲೂ ಸಿಗದ ಆನಂದವನ್ನು ಪಡೆಯುತ್ತಿರುವ ಎಲ್ಲಾ ಆನಂದಗಳು-ಮಾತಾನಂದಗಳು ಖುದ್ದು ಹಾಜರಿದ್ದು ನಿತ್ಯಾನಂದವನ್ನು ಬರಮಾಡಿಕೊಂಡರು. ಜನಮರುಳೋ ಜಾತ್ರೆ ಮರುಳೋ ಎಂಬಂತೆ ಹಲವು ಜನ ಹೆಚ್ಚಿನ ಶಿಕ್ಷಣ ಪಡೆದ ಭಕ್ತರೂ ಇದ್ದರು. ಅಂದಹಾಗೆ ಈ ಪಂಚಾಗ್ನಿಗೆ ಸೀಮೆ ಎಣ್ಣೆ ಸುರಿದು ಶಾಸ್ತ್ರೋಕ್ತವಾಗಿ ಬೆಂಕಿ ಹಚ್ಚಲಾಯಿತು! ಅಲ್ಪ ಸ್ವಲ್ಪ ಹೊಗೆಉಗುಳುತ್ತ ಆಗಾಗ ಅರ್ಧ ಅಡಿ ಎತ್ತರಕ್ಕೆ ಉರಿದ ಬೆಂಕಿಯನ್ನೇ ಮಾಧ್ಯಮದವರು ಕಷ್ಟಪಟ್ಟು ಕವರೇಜ್ ಮಾಡಿ ಸಾರ್ವಜನಿಕರಿಗೆ ಪಂಚಾಗ್ನಿ ಎಂದು ತೋರಿಸಬೇಕಾಯಿತು! ಇಂತಹ ಅಡ್ಡಕಸುಬಿ ಖಡ್ಡ ಸ್ವಾಮಿಗಳು ಬಹಳ ಒಳ್ಳೆಯ ಶಬ್ಢಗಳನ್ನೆಲ್ಲ ದುರುಪಯೋಗ ಮಾಡುತ್ತಾರಲ್ಲ ಎಂಬುದೇ ಖೇದದ ಮಾತು. ಅಂತೂ ಪಂಚಾಗ್ನಿ ಪ್ರಾಯಶ್ಚಿತ್ತ ಲೋಕ ಮಾಡಿದ ತಪ್ಪಿಗೆ ಎಂದೂ ಭಕ್ತರು ಟಿ.ವಿಯಲ್ಲಿ ಕೂತು ಹೇಳಿಕೆ ಕೊಟ್ಟರು! ಈ ಲೋಕಕಲ್ಯಾಣಾಥದ ಪ್ರಾಯಶ್ಚಿತ್ತದ ೨೧ ದಿನಗಳ ಕಾಲ ಪ್ರತೀ ದಿನ ಗಾಂಜಾ-ಆಫೀಮು ಬಳಕೆಯೂ ಇದ್ದರೆ ಬಿದ್ದ ಮಳೆಯ ಚಳಿಗೆ ಸ್ವಲ್ಪ ಬೆಚ್ಚಗೆ ಹಚ್ಚಗೆ ಇರಬಹುದಾಗಿತ್ತು ಆದರೆ ಅದು ಇನ್ನೂ ಪ್ರಾರಂಭವಾಗಿಲ್ಲ ಅನಿಸುತ್ತದೆ.

ಪಂಚಾಗ್ನಿಯ ವರ್ಣನೆ ಕೆಲವು ವೇದ-ಪುರಾಣ ಭಾಗಗಳಲ್ಲಿ ಇದೆ ಎಂಬುದನ್ನು ಕೇಳಿದ್ದೇನೆ. ವ್ಯಕ್ತಿ ತನಗೆ ತಾನೇ ಪ್ರಾಯಶ್ಚಿತ್ತಕ್ಕಾಗಿ ೪೫ ದಿನಗಳ ಕಾಲ ಚತುರಸ್ರ ಮಂಡಲ ಅಂದರೆ ಚೌಕಾಕಾರದ ಕುಂಡವನ್ನು ಸುತ್ತಲೂ ಕೊರೆದು, ಅದರಲ್ಲಿ ವ್ಯಕ್ತಿ ತಾನು ಕುಳಿತಾಗ ಹೊರಗೆ ಕಾಣದಷ್ಟು ಎತ್ತರದವರೆಗಿನ ಬೆಂಕಿಯನ್ನು ನಾಲ್ಕೂ ದಿಕ್ಕಿನಲ್ಲಿ ಉರಿಸಿದರೆ ಮೇಲಿಂದ ಉರಿವ ಸೂರ್ಯ ಐದನೆಯ ಅಗ್ನಿ ಎಂಬುದನ್ನೂ ಪರಿಗಣಿಸಿ, ಸತತ ನಲವತ್ತೈದು ದಿನ ಬೆಳಿಗ್ಗೆ ಸೂರ್ಯೋದಯಕ್ಕಿಂತ ಮುಂಚೆ ಆರಂಭಿಸಿ ಅಪರಾಹ್ನದವರೆಗೆ ಪ್ರತಿನಿತ್ಯ ನಡೆಸುವ ಪ್ರಾಯಶ್ಚಿತ್ತ ವಿಧಿ ಇದು. ಇದನ್ನು ಹೋಗಿ ಯವುದೋ ಚಿಲ್ಲರೆ ಬೆಂಕಿಗೆ ಹೋಲಿಸಿ ಪಂಚಾಗ್ನಿ ಎಂದರೆ-ಹೇಳಿದ್ದನ್ನು ನಾವೆಲ್ಲ ಕೋಲೆ ಬಸವನ ಥರ ಸರಿಯೆಂದು ನಂಬಿದರೆ ಜಗತ್ತಿನಲ್ಲಿ ಮೂರ್ಖರ ಸಂಖ್ಯೆ ಜಾಸ್ತಿಯಾದೀತು ಎಂಬುದು ನಮ್ಮ ಅಂಬೋಣ!

ಪರಮಹಂಸರದು ಅತೀತಾಶ್ರಮ-ಅವರು ಏನುಬೇಕಾದರೂ ಮಾಡಬಹುದು ಎಂದೆಲ್ಲ ಹುಚ್ಚು ಹೇಳಿಕೆ ಕೊಡುವ ಆಧ್ಯಾತ್ಮಿಕವಾಗಿ ಏನೂ ಓದದ-ಅರಿಯದ ಆನಂದಗಳನ್ನು-ಮಾತಾನಂದಗಳನ್ನು ನೋಡಿದರೆ ಪಾಪ ಅನ್ನಿಸುತ್ತಿತ್ತು. ಅಲ್ಲಾ ಸ್ವಾಮೀ ನಮಗೆ ಸನ್ಮಾರ್ಗ ಬೋಧಿಸುವ ಸರಿಯಾದ ಸನ್ಯಾಸಿಗಳು ಸಾವಿರ ಸಾವಿರ ಸಂಖ್ಯೆಯಲ್ಲಿ ಇರುವಾಗ ಇವರಿಗೆಲ್ಲ ಯಾವ ಮಂಕು ಕವಿದಿದೆ ಎಂಬುದೇ ಅರ್ಥವಾಗುತ್ತಿಲ್ಲ. ಅನೇಕ ಕಾಂತರು-ಕಾಂತೆಯರೂ-ಕಾಂತಿಯರೂ ಬಂದು ದೊಪ್ಪೆಂದು ಅಡ್ಡಬೀಳುವ ಪ್ರಕ್ರಿಯೆಗೆ ಮತ್ತೆ ಚಾಲನೆ ದೊರೆತಿದೆ. ಒಟ್ಟಿನಲ್ಲಿ ನಿತ್ಯಾನಂದನಿಗೆ ಪುಗಸಟ್ಟೆ ಪ್ರಚಾರ ಸಿಕ್ಕಂತಾಯ್ತು. ನಮ್ಮ ಸಮಾಜವೇ ಹೀಗೆ. ಇಂತಹ ಹಗಲುಗಳ್ಳರನ್ನೇ ನಂಬುವುದು,ಅವರು ಎಲ್ಲರ ಮಧ್ಯೆ ವಿಜೃಂಭಿಸುವಂತೆ ಮಾಡುವುದು. ನೆನೆಪಿರಲಿ-ಬಿಡದಿಗೆ ಭಕ್ತರು ಹೆಚ್ಚುವ ಕಾಲ ಬಂದಿದೆ! ನಿತ್ಯಾನಂದನಿಗೆ ಶುಕ್ರದೆಸೆ ಬಂದಿದೆ. ನಾವೂ ಯಾಕೆ ಕಮ್ಮಿ ಎನಿಸಿಕೊಳಬೇಕು? ನಾವೆಲ್ಲ ಸೇರಿ ಒಂದು ಭಜನೆ ಹಾಡಿದರೆ ಹೇಗೆ? ತಗಳಿ-- ಭಜನೆ ನಾನೇ ರಚಿಸಿ ಕೊಟ್ಟಿದ್ದೇನೆ >>>

ಪಂಚಾಗ್ನಿಯ ನಡುವೆ ಜೀವಂತ ಕಂಡ ಪರಮಹಂಸ !!

[ರಾಮ ಮಂತ್ರವ ಜಪಿಸೋ ಎಂಬಂತೆ ]

ಪಂಚಾಗ್ನಿಯ ಉರಿಸೋ ನಿತ್ಯನೇ ನಿನ್ನ
ಪಂಚಾಗ್ನಿಯ ಉರಿಸೋ

ನಾರೀನರರ ಮಧ್ಯೆ ಕೆದಕಿ ವರ್ತುಳ ಕೊರೆದು
ನೂರಾರು ಲೀಟರು ಸೀಮೆ ಎಣ್ಣೆಯ ಸುರಿದು
ಭಾರೀ ಜನಸ್ತೋಮ ಮತ್ತೆ ಮೀಡಿಯಾದವರು
ಹಾರಿ ಬಂದು ನೋಡಿ ದಂಗುಬಡಿಸಿಕೊಂಬ

ಪಂಚಾಗ್ನಿಯು ಎಂದರೇನೆಂದು ತಿಳಿಯದೆ
ಹೊಂಚು ಹಾಕಿ ಜನಕೆಳೆಯೊ ನಾಮವನು
ಮಂಚವೇರಿ ಮುದದಲಿ ನರ್ತಿಸು ಮತ್ತೆ
ಕೊಂಚ ನೆನೆಪಿರಲಿ-ಸೀಡಿ ಕ್ಯಾಮರಾಗಳು!

ಓದಿದವರಿಗೆಲ್ಲ ಮಂಕು ಬೂದಿಯ ಎರಚಿ
ಮಾಧವ ಕಲೆ ಕಲಿಸಿದೆಯೊ ನೀ ಗುರುವೇ ?
ಆದಿನಾರಾಯಣ ತಾನೇ ಎಂದರೂ
ಖೇದ ನಮಗೆ ಜನ ನಂಬುತಾ ಕೆಟ್ಟರು!

’ಪರಮಹಂಸ’ ಶಬ್ಧವನೆಲ್ಲ ಬಳಸುತ
ಚರಮ ಹರಿಯುವಂತ ನೋವುತಾರದಿರೊ
ಕರುಮನಮದು ಅನುಭವಿಸಿ ತೀರಲು
ಮರಿಮಕ್ಕಳು ಕಾವಿ ನೋಡಿ ಹೆದರಲು !

ಕಾಂತರನೇಕರು ನಿನ್ನ ಭಕುತರು
ಕಾಂತಿಯರೂ ಕಾವಿ ತೊಟ್ಟು ಬಂದರು
ಆಂತರ್ಯದಿ ಎರ್ರೋಟಿಕ್ ಪ್ಲೆಷರು
ಶಾಂತಿಮಾಡು ನೀ ಕಾವಿಯ ತೆರೆದು !

ಬಿಡದಿಯ ಭಕ್ತರ ದಂಡನು ತೊರೆದು
ತಡಮಾಡದೆ ಹಿಮಾಲಯ ಹಿಡಿದು
ಬಿಡದೇ ಖಾಕಿಗಳು ನಿನ್ನ ಹುಡುಕಲು
ಅಡಿಗಡಿಗೂಮ್ಮೆ ನಗುತಲಿ ತಾ ಬಂದೆ !