ಚಳಿಗಾಲದ ಒಂದು ದಿನ !
[ಬರಹಗಳು ತ್ವರಿತಗತಿಯಲ್ಲಿ ಪ್ರಕಟಿಸಲ್ಪಟ್ಟಿವೆ, ಓದುಗ ಮಿತ್ರರು ಹಿಂದಿನ ಕೃತಿಗಳನ್ನೂ ಓದಬಹುದು. ಪ್ರಸಕ್ತ ಈ ಲೇಖನ ಯಾವುದೇ ಶಿಕ್ಷಕರನ್ನು ಹೀಗಳೆಯುವ ಕ್ರಮವಲ್ಲ, ಬದಲಾಗಿ ಅಂದಿನ ನಮ್ಮ ಆಗುಹೋಗುಗಳಲ್ಲಿ ಅನುಭವಿಸಿದ ಮಜದ ಮಜಲುಗಳನ್ನೊಳಗೊಂಡಿದ್ದಷ್ಟೇ. ಎಲ್ಲಾ ಶಿಕ್ಷಕರ ಮೇಲೂ ನನಗೆ ಅಪಾರ ಗೌರವವಿದೆ, ಸಹಾನುಭೂತಿ ಇದೆ. ಹೀಗಾಗಿ ಶಿಕ್ಷಕ ಓದುಗರು ಇದನ್ನು ಅನ್ಯಥಾ ಭಾವಿಸದೇ ತಾವೂ ವಿದ್ಯಾರ್ಥಿಯಾಗಿದ್ದಾಗಿನ ನೆನಪುಗಳನ್ನು ತಂದುಕೊಳ್ಳಬಹುದಾಗಿದೆ.]
ಯಾವಾಗ ನೋಡಿ ಕನ್ನಡ ಪ್ರಾಥಮಿಕ ಶಾಲೆಗಳಲ್ಲಿ ಕಲಿಸುವ ಮಾಸ್ತರಮಂದಿ ಸಾಮಾನ್ಯವಾಗಿ ನಿಬಂಧ ಅಂತ ಬರೆಸುವಾಗ ಅವರ ಮೊಟ್ಟ ಮೊದಲ ಆಯ್ಕೆ ’ಮಳೆಗಾಲದ ಒಂದು ದಿನ’. ಹಳ್ಳಿಯ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಮಳೆಗಾಲದಲ್ಲಿ ಆಗುವ ತೊಂದರೆಗಳು ಹಳ್ಳಿಯ ಮೂಲದ ಬಹುತೇಕರಿಗೆ ಗೊತ್ತು. ಅಲ್ಲಿನ ಹಳ್ಳ-ದಿಣ್ಣೆಗಳು, ಗದ್ದೆ-ಬದುವುಗಳು, ತೋಟತುಡಿಕೆಗಳ ಅಕ್ಕಪಕ್ಕದಲ್ಲೆಲ್ಲೋ ಇರುವ ಕಾಲುದಾರಿಗಳಲ್ಲಿ ಸಾಗಿ ಮುಖ್ಯ ಮಣ್ಣು ರಸ್ತೆಗೆ ತಲುಪಿ ಆ ದಾರಿಯಾಗಿ ಶಾಲೆಗೆ ಹೋಗುವಾಗ ಹಲವು ಸಮಸ್ಯೆಗಳ ಉದ್ಭವ ಆಗುವುದುಂಟು. ಅದನ್ನೇ ಆಧರಿಸಿ ಅನಾದಿ ಕಾಲದ ಯಾರೋ ಮೇಷ್ಟ್ರು ಆರಂಭಿಸಿದ ಆ ಹೆಸರಿನ ಕಥಾನಕ ಇನ್ನೂ ಮುಗಿದಿಲ್ಲವೆಂದರೆ ನಿಮಗೆ ಆಶ್ಚರ್ಯವಾಗಬೇಕು! ಕನ್ನಡ ವ್ಯಾಕರಣದ ಭಾಗವಾಗಿ ನಿಬಂಧ ಬರೆಯುವ ದಿನ ಬಂತೆಂದರೆ ಅಂದು ’ಮಳೆಗಾಲದ ಒಂದು ದಿನ’ದ ಕಥೆ ಬರುವುದು ಒಂದು ಶಾಸ್ತ್ರವೋ ಸಂಪ್ರದಾಯವೋ ಎಂಬಂತೇ ಈ ಅಂಧಾನುಕರಣೆ !
ಆ ಕಾಲದಲ್ಲೇ ’ಮಳೆಗಾಲದ ಒಂದು ದಿನ’ ಕೆಲವು ಮಾಸ್ತರ ಮಂದಿಗೆ ಚಳಿ ಬಿಡಿಸುವ ಆಲೋಚನೆ ಇರುತ್ತಿದ್ದ ವಿರೋಧೀ ವಿದ್ಯಾರ್ಥಿ ಬಣಗಳು ಇರುತ್ತಿದ್ದವು! ಹಾಗಂತ ಅಂಥಾ ಕಟು ದ್ವೇಷವೆಂದಲ್ಲ, ಆದರೂ ಅಲೋಪಥಿಕ್ ಮಾತ್ರೆಗಳನ್ನು ನುಂಗುವ ಕ್ರಾನಿಕ್ ಡಿಸೀಸ್ ಇರುವ ಜನರಹಾಗೇ ಮಾಸ್ತರಮಂದಿ ಕೊಟ್ಟ ಲತ್ತೆಗಳನ್ನು ತಿಂದೂ ತಿಂದೂ ಬೇಸರವಾಗಿ ಯಾವಾಗ ಮಾಸ್ತರ ಮಂದಿಗೆ ಚಳಿ ಬಿಡಿಸುವುದು ಎಂದು ಒಳಗೊಳಗೇ ಹಲ್ಲುಮಸೆಯುತ್ತಿದ್ದರು. ಒಳಗೇ ಕಟಗುಡುವ ಹಲ್ಲಿನ ಸಣ್ಣ ಶಬ್ದ ಅವರ ಅಕ್ಕಪಕ್ಕದಲ್ಲೆಲ್ಲೋ ಕೂತುಕೊಳ್ಳುತ್ತಿದ್ದ ನಮಗೆಲ್ಲಾ ಆಗಾಗ ಕೇಳುತ್ತಿತ್ತು. ನಾವೇನೂ ಮಹಾಸಭ್ಯರಾಗಿದ್ದವರು ಅಂತ ತಿಳೀಬೇಡಿ: ಪರ್ಸಂಟೇಜಿನಲ್ಲಿ ಸ್ವಲ್ಪ ಕಮ್ಮಿ ಇತ್ತು ಎಂದಷ್ಟೇ ಹೇಳಬಹುದು! ಯಾಕೆಂದರೆ ಅಜ್ಜನಮನೆಯಲ್ಲಿ ಎಮ್ಮೆ ಕರುಹಾಕಿದ ನೆವದಲ್ಲಿ ರಜಾ ಘೋಷಿಸಿಕೊಂಡು ವಾರ ಬಿಟ್ಟು ಮರಳಿಬಂದಾಗ ಕೆಲವು ಸರ್ತಿ ಶಾಲೆಯ ಹೊರಗೆ ಬಾಗಿ ನಿಲ್ಲಬೇಕಾಗುತ್ತಿತ್ತು! ಅಥವಾ ಶಾಲೆಯ ಇಡೀ ಕಟ್ಟಡವನ್ನೇ ದೇವಸ್ಥಾನಗಳಲ್ಲಿ ಸುತ್ತುವಂತೇ ಸುತ್ತುತ್ತಾ ಇರಬೇಕಾಗುತ್ತಿತ್ತು. ನಾವು ರಜೆ ಹಾಕಿದರೆ ಈ ಮಾಸ್ತರಮಂದಿಗೆ ಏನಪ್ಪಾ ಅಂಥಾ ತೊಂದ್ರೆ ? ಹೊಟ್ಟೆಕಿಚ್ಚಿನ ಪಾಪಿಗಳು ಎಂದುಕೊಳ್ಳುತ್ತಿದ್ದೆವು ನಾವು. ಈ ಕೆಲವು ಸಂದರ್ಭಗಳಲ್ಲಿ ಮಾತ್ರ ನಾವು ವಿರೋಧೀ ಬಣಗಳಲ್ಲಿ ಗುರುತಿಸಿಕೊಳ್ಳುತ್ತಿದ್ದೆವು ಬಿಟ್ರೆ ಮಿಕ್ಕಿದ ದಿನಗಳಲ್ಲಿ ನಾವೆಲ್ಲಾ ಗುರುಗಳ ಪಕ್ಷವೇ! ಅಲ್ಲಿ ’ಕುರ್ಚಿ’ ಸಿಗಲಿಲ್ಲ ಎಂಬ ರಾಜಕಾರಣದ ಅಂಶ ಲವಲೇಶವೂ ಇರಲಿಲ್ಲ. ರಜೆ ಹಾಕಿದಾಗ ಮಾಸ್ತರಮಂದಿ ಮಾಡುತ್ತಿದ್ದ ಕೆಂಗಣ್ಣು ಹೊರತುಪಡಿಸಿ ನಮ್ಮ ಗುರುಗಳೆಲ್ಲಾ ಬಹಳ ಒಳ್ಳೆಯವರೇ.
ಅಷ್ಟಕ್ಕೂ ಮಾಬ್ಲ, ಸುಬ್ರಾಯ ಇಂಥವ್ರೆಲ್ಲಾ ಕಾಯಮ್ಮಾಗಿ ಆಡಿಕೊಳ್ಳುತ್ತಿದ್ದ ಪಿಸುಮಾತುಗಳು ಆಗಾಗ ಹಂಗಾಮಿಗೆ ಅವರ ಪಕ್ಷ ಸೇರುತ್ತಿದ್ದ ನಮಗೂ ಗೊತ್ತಾಗುತ್ತಿದ್ದವು! ವಿರೋಧೀ ಬಣದ ಎಷ್ಟು ಪ್ರಬಲವಾಗಿತ್ತೆಂದರೆ ನಾಯಕನೇ ಇಲ್ಲದಿದ್ದರೂ ಮುಂಬೈನ ಡಬ್ಬಾವಾಲಾಗಳ ರೀತಿ ಕೆಲಸ ನಿರ್ವಹಿಸುವುದರಲ್ಲಿ ಸಮರ್ಥವಾಗಿತ್ತು; ಸಶಕ್ತವಾಗಿತ್ತು. ಮಾಸ್ತರಮಂದಿ ಶಾಲೆ ಮುಗಿಸಿ ಮನೆಗೆ ಸಾಗಿದ ಮೇಲೆ ಹಾದೀಲೋ ಬೀದೀಲೋ ಯಾವುದೋ ಮರದ ಕೆಳಗೆ ಆಗಾಗ ಬೈಠಕ್ಕು ನಡೀತಿತ್ತು. ಬೈಠಕ್ಕಿನ ವಿಷಯ ಮಾತ್ರ ದಯವಿಟ್ಟು ಕೇಳಬೇಡಿ : ಅದೊಂಥರಾ ’ ಬೆಕ್ಕಿಗೆ ಗಂಟೆ ಕಟ್ಟುವ ’ ಹಾಗಿನದು. ಹೋಗ್ಲಿ ಹೇಳೇಬಿಡ್ಲಾ? ಎದುರಾಗುವ ಮಾಸ್ತರಮಂದಿಗೆ ಎದುರಾ ಎದುರೇ ತಕ್ಕ ಶಾಸ್ತಿ ಮಾಡಿ ಬಾಕಿ ಮಕ್ಕಳಿಂದ ಶಹಭಾಸ್‍ಗಿರಿ ಪಡೆಯುವುದೇ ಆಗಿರುತ್ತಿತ್ತು. " ನೋಡ್ಡೋ ನೋಡ್ಡೋ " ಎಂದು ನೋಡುವುದಕ್ಕೇ ಒತ್ತು ಕೊಟ್ಟು ಪೌರುಷ ಕೊಚ್ಚುವ ಉತ್ತರಕುಮಾರನ ರೀತಿಯಲ್ಲಿ ಮೆರೆಯಲಿಚ್ಛಿಸುವ ಮಕ್ಕಳಿದ್ದರು. ಆದರೆ ಅಂದಿನ ದಿನಗಳಲ್ಲಿ ನಮ್ಮಲ್ಲಿನ ಪಾಲಕರಿಗೆ ಈ ಮಾಸ್ತರಮಂದಿ ಯಾವುದೇ ದೂರು ನೀಡುತ್ತಿರಲಿಲ್ಲ; ಇದು ಮಾತ್ರ ಅವರ ಔದಾರ್ಯವನ್ನು ಎತ್ತಿ ತೋರುತ್ತಿತ್ತು. ಅಲ್ಲೊಂದು ರಾಜೀ ಸೂತ್ರವೂ ಇತ್ತು: ಮಾಸ್ತರಮಂದಿ ಅಲ್ಲೀ ಇಲ್ಲೀ ಯಾರ್ಯಾರದ್ದೋ ಮನೇಲಿ ಇಸ್ಪೀಟು ಆಡಿದ್ದನ್ನೋ ಕಾಯಿವ್ಯಾಪಾರ ಮಾಡಿದ್ದನ್ನೋ ಕಂಡ ವಿರೋಧೀ ಬಣಗಳವರು ಆಗಾಗ ದೂರದಿಂದ ಬರುವ ’ಇನೇಶ ಭಟ್ಟ’ [ಇನ್ಸ್‍ಪೆಕ್ಟರ್ ಎಂದು ತಿಳಿಯಿರಿ, ಈ ಕುರಿತು ಹಿಂದಿನ ನನ್ನ ಪ್ರಬಂಧವೊಂದರಲ್ಲಿ ವಿವರವಾಗಿ ಹೇಳಿದ್ದೇನೆ]ರಿಗೆ ಹೇಳಿಬಿಟ್ಟರೆ ಎಂಬ ಅಪಾಯದ ಅರಿವಿರುವುದರಿಂದ ಅದೊಂಥರಾ ’ ಮ್ಯೂಚ್ವಲ್ ಅಂಡರ್ ಸ್ಟ್ಯಾಂಡಿಂಗು’ !
’ಮಳೆಗಾಲದ ಒಂದು ದಿನ’ ಎಂದ ತಕ್ಷಣ ನಾವೆಲ್ಲಾ ಕೆಲವು ಜನ ಮನಸ್ಸಿನಲ್ಲಿ ಅಂದುಕೊಳ್ಳುತ್ತಿದ್ದುದು " ಮಾಸ್ತರರ ಹಳೇ ಜಾಕೀಟು ಕಿಲೋಮೀಟರು ದೂರದವರೆಗೂ ತನ್ನ ಮುಗ್ಗಿದ ’ಪರಿಮಳ’ ಹಬ್ಬಿಸಿತ್ತು " ಎಂತಲೋ ಅಥವಾ " ಮಾಸ್ತರು ದೇವಪ್ಪಶೆಟ್ಟರ ಮನೆಯ ಅಂಗಳದ ಹಾದಿಯಲ್ಲಿ ಹಾವಸೆ ತುಳಿದು ದೊಪಕ್ಕನೆ ’ದುಡ್ಡು ಹೆಕ್ಕಿದರು’ " ಹೀಗೆಲ್ಲಾ ಇರುತ್ತಿದ್ದವು! ವಾಸ್ತವದ ಸಂಗತಿ ನಿಮ್ಮಲ್ಲಿ ಹೇಳದೇ ಬಚ್ಚಿಡಲು ಸಾಧ್ಯವೇ? ನಮ್ಮ ಕರಾವಳಿಯಲ್ಲಿ ಧೋ ಎಂದು ಸುರುಹಚ್ಚುವ ಮಳೆಯಲ್ಲಿ ವಾರಗಟ್ಟಲೆ ಒಮ್ಮೊಮ್ಮೆ ಮಿತ್ರನ ದರುಶನವೇ ಆಗುವುದಿಲ್ಲ. ಯಾವಾಗ ಆ ಫ್ರೆಂಡು ಬರುವುದಿಲ್ಲವೋ ಒದ್ದೆಯ ಪಸೆ ಹಾಗ್ಹಾಗೇ ಇದ್ದು ಬಟ್ಟೆಗಳೆಲ್ಲಾ ಒಂಥರಾ ಗಬ್ಬು ನಾರುತ್ತವೆ, ಥೂ ! ಅದರಲ್ಲಂತೂ ಸಿಗುವ ಸಂಬಳದಲ್ಲಿ ಕಷ್ಟಪಟ್ಟು ಎರಡು ಜೋಡೀ ಪ್ಯಾಂಟು ಶರ್ಟು ಹೊಲಿಸಿಕೊಳ್ಳುತ್ತಿದ್ದ ಮಾಸ್ತರಮಂದಿಗೆ ವಾರಾಂತ್ಯದಲ್ಲಿ ತೊಳೆದು ಅವು ಒಣಗದೇ ಇದ್ದಾಗ ಬಹಳ ಪೇಚಾಟ. ಕಟ್ಟಿಗೆ ಒಲೆಗೆ ಎತ್ತರದಲ್ಲಿ ಬಿದಿರಿನ ಗಳ ಅಡ್ಡಡ್ಡ ಕಟ್ಟಿ ಆ ಸೆಕೆಗೆ ಬಟ್ಟೆ ಒಣಗಿಸುವ ಪ್ರಯತ್ನವೂ ನಡೆಯುತ್ತಿತ್ತು. ಸೋನೆ ಮಳೆಯಲ್ಲಿ ಓಡಾಡಲೇ ಬೇಕಾದ ಅನಿವಾರ್ಯತೆ ಇರುವುದರಿಂದ ಅಲ್ಲಲ್ಲಿ ಅರ್ಧರ್ಧ ನೆನೆಯುವ ಬಟ್ಟೆ ಕೆಲವೊಮ್ಮೆ ತನ್ನ ಅಮೋಘ ’ರಸದೌತಣ’ವನ್ನು ಸುತ್ತಲ ಎಲ್ಲರಿಗೂ ಕೊಡಮಾಡುವುದು ಸರ್ವೇ ಸಾಮಾನ್ಯ! ಮೂಗಿಗೆ ಪ್ಲಾಸ್ಟರ್ ಹಾಕಿಕೊಂಡರೂ ಒಡೆದು ಒಳನುಗ್ಗುವ ಅಸಾಮಾನ್ಯ ’ಪರಿಮಳ’ಕ್ಕೆ ’ಮಾರಿಹೋಗದವರೇ’ ಇಲ್ಲ! ಮಳೆಗಾಲದಲ್ಲಿ ಅದಕ್ಕೆಂತಲೇ ನಾವು ಕೆಲವು ಮನೆಗಳ ಕಡೆಗೆ ತಲೆಯನ್ನೂ ಹಾಕಿ ಮಲಗುತ್ತಿರಲಿಲ್ಲ!
ಗೂಟಕ್ಕೆ ಕಟ್ಟಿದ ಹರಕೆಯ ಕುರಿಯಂತೇ ನಾತವನ್ನು ತಾಳಲಾರದೆಯೂ ತಾಳಿಕೊಳ್ಳಬೇಕಾದ ಅಡ್ಜೆಸ್ಟ್‍ಮೆಂಟ್ ವ್ಯವಹಾರದಲ್ಲಿ ವಾಕರಿಕೆ ಬರುವಂತಾದರೂ ಮಾಸ್ತರಿಗೆ ಹೇಳಲುಂಟೇ ? ಅದರಲ್ಲಂತೂ ಕೆಲವು ಜನ ಹನಿಯುವ ನೆಗಡಿಯ ಮೂಗಿಗೆ ಕರವಸ್ತ್ರ ಹಿಡಿದು ಸೂಂ ...ಸೂಂ ... ರಪ್ ರಪ್ ರಫ್ ಎಂದು ಗೊಣ್ಣೆ ಎಳೆದು ಮಡಚಿ ಅದನ್ನು ಮತ್ತದೇ ಪ್ಯಾಂಟಿನಲ್ಲಿ ತುರುಕಿಕೊಂಡಿದ್ದನ್ನು ನೋಡಿಬಿಟ್ಟರೆ ದಿನಗಟ್ಟಲೆ ಊಟ-ತಿಂಡಿ ಬೇಡವಾಗಿ ಬಿಡುತ್ತಿತ್ತು. ನಾವೆಲ್ಲಾ ಹೇಗೇ ಅಂದರೆ ಊಟಕ್ಕೆ ಕೂತಾಗ ’ಲಂಡನ್ನಿನ’ ಸುದ್ದಿ ಬಂದರೂ ಸಹಿಸದ ಜನ; ಕಾವಲಿಯಲ್ಲಿ ಜಿಲೇಬಿ ಬಿಡುವುದಕ್ಕೂ ಲಂಡನ್ನಿಗೆ ಕೂರುವುದಕ್ಕೂ ಸಾಮ್ಯತೆ ಕಾಣುವುದರಿಂದ ಅದನ್ನೆಲ್ಲಾ ನೆನೆಸಿಕೊಳ್ಳಲೂ ಒಂಥಾರಾ ಆಗುವ ಜನ. ಅಂಥದ್ದರಲ್ಲಿ ಸಾಕ್ಷಾತ್ ಸಿಂಬಳದ ಪರಮೋಚ್ಚ ದರ್ಶನ ಮಾಸ್ತರರ ಕರವಸ್ತ್ರದಲ್ಲಿ ನಡೆದಾಗ ಇನ್ನೇನು ಕತ್ತು ಮುರಿಯಲು ಎತ್ತಿದ ಕಟುಕನ ಕೈಯ್ಯ ಕೋಳಿಯ ಅವಸ್ಥೆ ನಮ್ಮದಾಗುತ್ತಿತ್ತು; ಆದರೂ ಪ್ರಾಣಮಾತ್ರ ಇರುತ್ತಿತ್ತು !
ಆಗಾಗ ಬೀಡೀ ಧಂ ಎಳೆಯುವ ಹವ್ಯಾಸದ[ಸ್ವಲ್ಪ ಮರ್ಯಾದೆ ಕೊಡೋಣ ಚಟ ಎನ್ನಬಾರದು,ಎಷ್ಟೆಂದರೂ ಮಾಸ್ತರಲ್ಲವೇ?] , ’ಅಗ್ನಿಹೋತ್ರಿ’ ಗಳೆಂದು ವಿರೋಧೀ ಬಣದಿಂದ ಬಿರುದಾಂಕಿತಗೊಂಡ ಮಾಸ್ತರೊಬ್ಬರು ಎದುರಿಗೆ ಸೇದದಿದ್ದರೂ ಸೇದಿದ ತರುವಾಯ ತರಗತಿಗೆ ಮರಳಿದ ಅವರ ಬಾಯಿಂದ ಕೊಳೆತ ಬೀಡೀ ಮೋಟಿನ ಹೊಗೆಯ ಅನಪೇಕ್ಷಿತ ಸುಗಂಧ ದಸರಾ ಜಂಬೂಸವಾರಿಯಂತೇ ಗಜಗಾಂಭೀರ್ಯದಿಂದ ಮುಂದಕ್ಕೆ ಮುಂದಕ್ಕೆ ಮುಂದಕ್ಕೆ ನಿಧಾನವಾಗಿ ನಮ್ಮೆಡೆಗೆ ಸಾಗಿಬರುತ್ತಿತ್ತು! ಹಲ್ಲುಜ್ಜುವುದನ್ನೇ ಮರೆತಹಾಗಿರುವ ಅವರ ಬಾಚಿ ಹಲ್ಲುಗಳ ಸಂದಿಯಲ್ಲಿ ಕಪ್ಪುಗಟ್ಟಿರುವುದು ಕಾಣಿಸುತ್ತಿತ್ತು, ಕೈಲಿರುವ ಕಡ್ಡಿಯೊಂದನ್ನು ಅನಾಯಾಸವಾಗಿ ಆಗಾಗ ಹಲ್ಲಿಗೆ ಹಾಕಿ-ತೆಗೆದು ಹಾಕಿ-ತೆಗೆದು ಮಾಡುವುದರಿಂದ ಜಂಬೂಸವಾರಿಯ ಸ್ತಬ್ಧ ಚಿತ್ರಗಳು ಹಲವು ಹೊರಬರುತ್ತಿದ್ದವು ! ಇನ್ನೊಬ್ಬ ಮಾಸ್ತರು ಪಾಠಮಾಡುವಾಗ ಎದುರಿಗೆ ಕುಳಿತ ವಿದ್ಯಾರ್ಥಿಗಳಿಗೆ ಬಾಯಿಯ ’ತೀರ್ಥ ಪ್ರೋಕ್ಷಣೆ’ ಸದಾ ಅಗುತ್ತಿತ್ತು. ಇಂತಹ ಮಾಸ್ತರುಗಳ ಗುಂಪಿನ ಮಧ್ಯೆ ನಾವು ಮಾತ್ರ ಯಾವ ಪಕ್ಷದಲ್ಲೂ ಪಕ್ಕಾ ಆಗದೇ ಸ್ವತಂತ್ರ ಅಭ್ಯರ್ಥಿಗಳಾಗಿ ಪರೀಕ್ಷೆ ಎದುರಿಸುತ್ತಿದ್ದೆವು!
’ಮಳೆಗಾಲದ ಒಂದು ದಿನ’ ಎನ್ನುವ ಬದಲು ಬೇರೇ ಹೆಸರೇ ಇರಲಿಲ್ಲವೇ ನಿಬಂಧಕ್ಕೆ ? ಗೊತ್ತಿಲ್ಲ. ಆದರೆ ನೀವು ಎಲ್ಲಿಂದೆಲ್ಲಿಗಾದರೂ ಹೋಗಿ ಇಂದಿಗೂ ನಮ್ಮ ಸರಕಾರೀ ಪ್ರಾಥಮಿಕ ಶಾಲೆಗಳಲ್ಲಿ ಕಾಣುವ ಅಪ್ಪಟ ಸತ್ಯ ಯಾವುದೆಂದರೆ ’ಮಳೆಗಾಲದ ಒಂದು ದಿನ’ ! ಮಳೆಗಾಲ ಮುಗಿದಮೇಲೆ ಚಳಿಗಾಲ ಬರಬೇಕಲ್ಲ. ಚಳಿಗಾಲದಲ್ಲಿಯೂ ದಿನಗಳಿರುವುದಿಲ್ಲವೇ? ಎಂಬುದು ನಮ್ಮ ಹಲವರ ಅಂತರಂಗದಲ್ಲಿ ಹುಟ್ಟಿದ್ದ ಪ್ರಶ್ನೆಯಾದರೂ ಹೇಳಿಕೊಳ್ಳಲಾಗುತ್ತಿರಲಿಲ್ಲ. ಗೋಪಾಲ ಮಾಸ್ತರು ಸುಬ್ರಾಯನ ಕೆನ್ನೆಗೆ ಹೊಡೆದು ಹಲ್ಲು ಅಲುಗಾಡತೊಡಗಿದ್ದು ನಮ್ಮಲ್ಲಿನ ಒಂದು ಬೈಠಕ್ಕಿನಲ್ಲಿ ಎಲ್ಲರಿಗೂ ತಿಳಿದುಬಂದ ವಿಷಯ. ಸುಬ್ರಾಯ ಮನೆಯಲ್ಲಿ ಹೇಳಿದರೆ ತಪ್ಪುಮಾಡಿದ್ದಕ್ಕೆ ಮತ್ತೆ ಮನೆಯವರಿಂದಲೂ ಶಿಕ್ಷೆಯಾಗುತ್ತಿತ್ತು; ಅಲ್ಲಿ ಅಪ್ಪ ಅಲುಗಾಡುವ ಹಲ್ಲನ್ನು ಇಕ್ಕಳದಿಂದ ಪೂರ್ತಿ ಕಿತ್ತುಹಾಕುವ ಸಂಭವನೀಯತೆಯೇ ಜಾಸ್ತಿ ಇದ್ದಿದ್ದರಿಂದ ವಿಷಯ ನಮ್ಮೊಳಗೇ ಗೌಪ್ಯವಾಗಿತ್ತು! ಪಾಪದ ಹುಡುಗ ನೋವನ್ನು ಸಹಿಸಿ ಕೆನ್ನೆ ಊದಿಸಿಕೊಂಡು ಮನೆಗೆ ಹೋಗೀ ಬಂದು ಮಾಡುತ್ತಿದ್ದ; ಮನೆಯಲ್ಲಿ ಹಲ್ಲುನೋವಿಗೆ ಹೀಗಾಗಿದೆ ಎಂದು ಲವಂಗದ ಎಣ್ಣೆ ಹಾಕಿಕೊಂಡಿದ್ದನಂತೆ.
ಮಳೆಗಾಲ ಮುಗಿದು ದೀಪಾವಳಿ ಕಳೆದು ಚಳಿಗಾಲ ಬಂದೇ ಬಂತು. ಹಾವಿನ ದ್ವೇಷ ಹನ್ನೆರಡು ವರುಷ ಇರುತ್ತೋ ಇಲ್ಲವೋ ಗೊತ್ತಿಲ್ಲ ಸುಬ್ರಾಯನ ದ್ವೇಷ ಚಳಿಗಾಲದವರೆಗಂತೂ ಜೀವಂತವಿತ್ತು! ದ್ವೇಷಕ್ಕೆ ಕೆಲವೊಮ್ಮೆ ಅಸಾಧ್ಯ ಧೈರ್ಯವೂ ಬಂದುಬಿಡುತ್ತದೆ. ಗೋಪಾಲ್ ಮಾಸ್ತರು ಕಂಡರೆ ಕಚ್ಚಲು ಹವಣಿಸುವ ಹಾವಿನಂತಾಗುತ್ತಿದ್ದ ಸುಬ್ರಾಯ ಏನಾದರೂ ಮಾಡಿ ಮಾಸ್ತರಿಗೆ ಬುದ್ಧಿಕಲಿಸಬೇಕೆಂದು ಆಲೋಚಿಸ ಹತ್ತಿದ್ದ! ಗೋಪಾಲ್ ಮಾಸ್ತರರ ಊರಿಗೂ ನಮ್ಮ ಶಾಲೆಗೂ ಕೇವಲ ೩-೪ ಮೈಲು ಅಂತರ. ಮನೆಯಿಂದ ಬಂದು-ಹೋಗಿ ಮಾಡಲು ಅನುಕೂಲವಾಗುತ್ತದೆ ಎಂದು ಗೋಪಾಲ್ ಮಾಸ್ತರು ಈ ಶಾಲೆಗೇ ವರ್ಗ[ಟ್ರಾನ್ಸ್‍ಫರ್] ಮಾಡಿಸಿಕೊಂಡಿದ್ದರು. ಹತ್ತು ವರ್ಷವೇ ಆಗಿಬಿಟ್ಟಿತ್ತೋ ಏನೋ ಅಂತೂ ಹಾಗೂ ಹೀಗೂ ಕಸರತ್ತು ನಡೆಸಿ ಅವರು ನಮ್ಮ ಶಾಲೆಯಲ್ಲೇ ಕಾಯಂ ಆಗಿ ಠಿಕಾಣಿ ಹೂಡಿಬಿಟ್ಟಿದ್ದರು. ನದಿ ದಾಟಿ ಹೋಗುವ ಶಾಲೆಗಳಿಗೆ ಹಾಕಿಬಿಟ್ಟರೆ ಓಡಾಡುವುದು ಕಷ್ಟ ಎಂಬುದು ಅವರ ಅನಿಸಿಕೆ. ಆ ಕಾಲದಲ್ಲಿ ಹಳ್ಳಿಗಳಲ್ಲಿ ವಾಹನ ಸೌಕರ್ಯ ಕಮ್ಮಿ ಇತ್ತು. ಬೆಳಿಗ್ಗೆ ಒಂದು -ರಾತ್ರಿ ಒಂದು ಹೀಗೇ ವೈದ್ಯರು ಗುಳಿಗೆ ಬರೆದಂತೇ ಬಸ್ಸುಗಳು ಓಡುತ್ತಿದ್ದವು. ಬಸ್ಸು ತಪ್ಪಿಹೋದರೆ ಅಂದಿನದಿನ ಫಜೀತಿಯೇ. ಅದರಲ್ಲಂತೂ ಸಾಯಂಕಾಲದ ಬಸ್ಸು ತುಂಬಾ ಮಹತ್ವದ್ದು. ಚಳಿಗಾಲದಲ್ಲಿ ಕತ್ತಲಾಗುವುದೂ ಬೇಗ. ಅಹ-ಕ್ಷಯ = ಅವಚಯ [ಹಗಲು ಕಡಿಮೆ ರಾತ್ರಿ ಹೆಚ್ಚು].
ಹೀಗೇ ಒಂದು ದಿನ ಗೋಪಾಲರು ಶಾಲೆ ಮುಗಿಸಿ ಕಳ್ಳೇ ಬಯಲಿನ ಗದ್ದೆಹಾಳಿಯಮೇಲೆ ನಡೆದು ಹೋಗುತ್ತಿದ್ದರು. ಸಮಯ ಆರೂ ಚಿಲ್ಲರೆ ಆಗಿರಬಹುದು. ಆಗಲೇ ಮಬ್ಬುಗತ್ತಲು. ಹಾದಿಯ ಪಕ್ಕದಲ್ಲಿ ಅದೆಲ್ಲೋ ಅಡಗಿದ್ದ ಸುಬ್ರಾಯ ವಿಚಿತ್ರವಾಗಿ ಕೂಗಿಬಿಟ್ಟ. ಅವಸರದಲ್ಲಿ ಓಡುತ್ತಿದ್ದ ಗೋಪಾಲ್ ಮಾಸ್ತರು ಹೆದರಿ ಹಾರಿ ಗದ್ದೆಗೆ ಬಿದ್ದರು. ಹಾರಿಬಿದ್ದ ರಭಸಕ್ಕೆ ಕಾಲು ಉಳುಕಿ ಹೋಯ್ತು. ರಿಪೇರಿಗೆ ಸುಮಾರು ಒಂದು ತಿಂಗಳೇ ಬೇಕಾಯ್ತು! ಗುಟ್ಟು ನಿಮ್ಮಲ್ಲೇ ಇರಲಿ -- ವಿಚಿತ್ರವಾಗಿ ಕೂಗಿದ್ದು ದೆವ್ವ ಎಂದಷ್ಟೇ ತಿಳಿದ ಗೋಪಾಲರಾಯರಿಗೆ ಅದು ಸುಬ್ರಾಯನ ಕಿತಾಪತಿ ಎಂಬುದು ಇನ್ನೂ ಗೊತ್ತಿಲ್ಲ; ಹೌದಲ್ವಾ ಪಾಪ ಈಗ ಮಾಸ್ತರು ಮಕ್ಕಳ ಜೊತೆಗೆ ಬೇರೇ ಏಲ್ಲೋ ಇದ್ದಾರೆ ಅನಿಸುತ್ತದೆ, ನೀವು ಹೇಳಿದರೂ ಅವರು ತಲೆಕೆಡಿಸಿಕೊಳ್ಳುವುದಿಲ್ಲ ಬಿಡಿ, ಇನ್ನು ಸುಬ್ರಾಯ ನಿಮಗೆಲ್ಲಿ ಸಿಗುತ್ತಾನೆ ? ಆತ ನನಗೇ ಸಿಗದೇ ಇಡೀ ೨೦ ವರ್ಷಗಳೇ ಕಳೆದಿವೆ.