ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Tuesday, July 2, 2013

ಗುಟ್ಟೊಂದು ಹೇಳುವೆ-’’ಟೆಕ್ಕಾಣಿ’’ ತಿಳಿಯುವರೇ!


ಗುಟ್ಟೊಂದು ಹೇಳುವೆ-’’ಟೆಕ್ಕಾಣಿ’’ ತಿಳಿಯುವರೇ!

ಪುಟ್ಟಾಣಿ ಮಕ್ಕಳಿಗೆ ಗುಟ್ಟನ್ನು ಹೇಳುವ ಕಾಲ ಹೊರಟ್ಹೋಯ್ತು!! ಕಾಲದ ಮಹಿಮೆ ಹೇಗಿದೆಯೆಂದರೆ ಎಷ್ಟೋ ಮನೆಯಲ್ಲಿ ಪುಟ್ಟಾಣಿ ಮಕ್ಕಳೇ ಅಪ್ಪ-ಅಮ್ಮಂದಿರಿಗೆ ಕೆಲವನ್ನು ಹೇಳಿಕೊಡುತ್ತಾರೆ. ನಂಬುವುದಾದರೆ ನಂಬಿ ಬಿಟ್ಟರೆ ಬಿಡಿ-7 ವರ್ಷದ ನನ್ನ ಮಗ ಯಾವ ಮೊಬೈಲ್ ಹ್ಯಾಂಡ್ಸೆಟ್ ತೆಗೆದುಕೊಂಡರೂ ಕ್ಷಣಾರ್ಧದಲ್ಲಿ ಆಪರೇಟ್ ಮಾಡುತ್ತಾನೆ; ಆದರೆ ನನಗೆ ಅಷ್ಟುಬೇಗ ಅವು ಆಪ್ತವಾಗುವುದಿಲ್ಲ. "ಅಪ್ಪಾ, ಹಾಗಲ್ಲಾ..ಹೀಗೆ" ಎಂದು ಆತ ತೋರಿಸಿಕೊಡುವಾಗ ಆತನ ತಲೆ ಎಷ್ಟು ಓಡುತ್ತಿದೆ ಎಂದುಕೊಂಡರೂ ಓದಿಗಿಂತ ಇತರ ಚಟುವಟಿಕೆಗಳಲ್ಲಿ ಮಕ್ಕಳು ಜಾಸ್ತಿ ಆಸಕ್ತರಾಗುತ್ತಿದ್ದಾರೆ ಎಂಬ ವಿಷಯ ಮನದಮೂಸೆಯಲ್ಲಿ ರಿಂಗಣಿಸುತ್ತದೆ. ದಿನಮಾನ ಹೇಗಿದೆ ಎಂದರೆ ಎಲ್ಲೆಲ್ಲೂ ಗಣಕ ತಂತ್ರಾಂಶದ್ದೇ ಆಳ್ವಿಕೆ, ತಂತ್ರಾಂಶವಿಲ್ಲದೇ ಯಾವ ಕೆಲಸ ಮಾಡಿಕೊಳ್ಳಹೋದರೂ ಅದು ಅಪೂರ್ಣವಾಗುತ್ತದೆ ಎನ್ನಬಹುದು. ಎಲ್ಲಾ ವೈಜ್ಞಾನಿಕ ಆವಿಷ್ಕಾರಗಳಂತೇ ತಂತ್ರಾಂಶ ಪೂರಕವೂ ಹೌದು ಮತ್ತು ಮಾರಕವೂ ಹೌದು! ಉದಾತ್ತ ಧ್ಯೇಯಗಳಿಂದ ಬಳಸುವಾಗ ಪೂರಕವಾಗಿದ್ದರೆ ದುರುದ್ದೇಶಗಳಿಂದ ಬಳಸುವಾಗ ಮಾರಕವಾಗುತ್ತದೆ. ತಂತ್ರಾಂಶಗಳನ್ನವಲಂಬಿಸಿ ನಡೆಯುವ ಗಣಕಯಂತ್ರಗಳ ಮಾಮೂಲಿ ನಡೆಯನ್ನೇ ಬದಲಿಸಬಹುದಾದ ಸಾಧ್ಯಾಸಾಧ್ಯತೆಗಳ ಗುಟ್ಟನ್ನು ರಟ್ಟುಮಾಡುವುದೇ ಈ ಕಥೆ:

ಬಹುದಿನಗಳ ಕಾಲ ಅನಾಥವಾಗಿ ಬಿದ್ದಿದ್ದ ಈ ಕಥೆಯ ನಿಜನಾಮಧೇಯ ‘’ಎಥಿಕಲ್ ಹ್ಯಾಕಿಂಗ್’’ ಎಂದು; ಯಾಕೋ ಹ್ಯಾಕಿಂಗ್ ಎಂಬ ಹೆಸರೇ ಹಲವರನ್ನು ಹೆದರಿಸುತ್ತಿರುವುದರಿಂದ ಅನಾಮತ್ತಾಗಿ ಅದಕ್ಕೆ ಬೇರೇ ಶೀರ್ಷಿಕೆ ಕೊಟ್ಟು ಪೂರ್ವಾಶ್ರಮದ ಹೆಸರು ’ಎಥಿಕಲ್ ಹ್ಯಾಕಿಂಗ್’ ಎಂದಿತ್ತು ಎಂಬುದನ್ನು ನಿಮಗೆ ಈಗಷ್ಟೇ ಹೇಳುತ್ತಿದ್ದೇನೆ. ಜೊತೆಗೆ ಇನ್ನಷ್ಟು ಊರೊಟ್ಟಿನ ಗೊಜ್ಜು-ಚಟ್ನಿ ಎಲ್ಲಾ ಇಟ್ಟಿರುವುದರಿಂದ ಇದಕ್ಕೆ ಬರೇ ’ಎಥಿಕಲ್ ಹ್ಯಾಕಿಂಗ್’ ಹೆಸರೂ ಸರಿಹೊಂದುವುದಿಲ್ಲ ಬಿಡಿ. ಇರಲಿ, ವಿಷಯಕ್ಕೆ ಬಂದುಬಿಡೋಣ. ನಮ್ಮಲ್ಲಿ ಗಣಕಯಂತ್ರದ ಸಾಮಾನ್ಯ ಬಳಕೆದಾರರನೇಕರಿಗೆ ವೈರಸ್ ಎಂದರೇನು ಎಂಬುದರ ಬಗ್ಗೇನೆ ಸರಿಯಾದ ಮಾಹಿತಿಯಿಲ್ಲ! ಮನುಷ್ಯರಿಗೆ  ಹುಷಾರಿಲ್ಲದಾಗ, ಜ್ವರಬಂದಾಗ ಕೆಲವೊಮ್ಮೆ ’ವೈರಲ್ ಫೀವರ್’ ಎಂದೆಲ್ಲಾ ಮಾತನಾಡುತ್ತೇವಲ್ಲಾ ಅದರಂತೇ ಕಂಪ್ಯೂಟರಿಗೆ ಯಾವುದೋ ರೀತಿಯ ಜ್ವರಹತ್ತುತ್ತದೆ ಎಂದುಕೊಳ್ಳುವವರೇ ಬಹಳಜನ ಇದ್ದಾರೆ! "ವೈರಸ್ ಬಂದರೆ ಏನೇನು ತಿಂದುಹಾಕಿಬಿಡುತ್ತದೋ ಯಾರಿಗೆ ಗೊತ್ತು?" ಎಂದು ಅದೆಷ್ಟೋ ಜನ ನನ್ನಲ್ಲಿ ಹೇಳಿದ್ದುಂಟು. ವೈರಸ್ ಎಂದರೆ ಕಣ್ಣಿಗೆ ಕಾಣದ ಕೀಟಾಣು ಎಂದುಕೊಂಡು ಕಥೆ ಕೊರೆಯಲು ಆರಂಭಿಸಿದವರ ಮಾತುಗಳನ್ನು ನೆನೆಸಿಕೊಂಡರೆ ಏಕದಮ್ 72 ಗಂಟೆಗಳ ಸತತ ನಗುವನ್ನು ಏಕಾಏಕಿಯಾಗಿ ತಂದುಕೊಳ್ಳಬಹುದು! ಸದ್ಯ, ಅಂಥವರು ಮೆಡಿಕಲ್ ಶಾಪ್ ನಿಂದ ಯಾವ ಮಾತ್ರೆಗಳನ್ನು ತರಬೇಕೆಂದು ಮಾತ್ರ ಕೇಳಲಿಲ್ಲ. 

ವೈರಸ್ ಎಂಬುದಕ್ಕೆ ಆಂಗ್ಲಭಾಷೆಯಲ್ಲಿ ಒಂದೇ ವಾಕ್ಯದಲ್ಲಿ ಸರಳವಾಗಿ ತಿಳಿಸುವುದಾದರೆ:Virus is also a software, destructive in nature[ವೈರಸ್ ಎಂಬುದು ಕೂಡ ಒಂದು ತಂತ್ರಾಶ, ಹಾಳುಗೆಡಹುವುದೇ ಅದರ ಉದ್ದೇಶ.] ಮನುಷ್ಯ ಶರೀರಕ್ಕೆ ದಾಳಿ ಇಡುವ ವೈರಾಣುವಿಗೂ ಕಂಪ್ಯೂಟರ್ ವೈರಸ್ಸಿಗೂ ಭೌತಿಕ ಹೋಲಿಕೆಯಿಲ್ಲ. ಇದನ್ನು ಮನದಟ್ಟು ಮಾಡಿಸುವಾಗ ನನ್ನನ್ನೇ ಹಣ್ಣುಗಾಯಿ ನೀರುಗಾಯಿ ಮಾಡಿದ ಮಹಾಶಯರಿದ್ದಾರೆ! ಆದರೂ ಗಣಕಯಂತ್ರಗಳ ಬಗ್ಗೆ ಮತ್ತು ಅವುಗಳ ಕಾರ್ಯವೈಖರಿ ಬಗ್ಗೆ ಉಪನ್ಯಾಸಕೊಡುವ ಆಸೆ ನನ್ನನ್ನು ಬಿಟ್ಟುಹೋಗಲೇ ಇಲ್ಲ. ಗಣಕಯಂತ್ರದ ಮತ್ತು ತಂತ್ರಜ್ಞಾನ, ತಂತ್ರಾಶ ಈ ಎಲ್ಲವುಗಳ ಮತ್ತು ಅವುಗಳನ್ನಾಧರಿಸಿದ ನನ್ನ ವೃತ್ತಿಯ ಕುರಿತು ತಮಾಷೆಯಾಗಿ ಕೆಲವೊಮ್ಮೆ ಹಾಸ್ಯ ಕಷಾಯಗಳನ್ನೋ ರಸಾಯನಗಳನ್ನೋ ನನ್ನ ಮಿತ್ರರಲ್ಲಿ ಹಂಚಿಕೊಂಡಿದ್ದಿದೆ. ಶಾಲೆಯಲ್ಲಿ ಮಕ್ಕಳಿಗೆ ಮಿಸ್ ಹೇಳಿದ್ದೇ ಸತ್ಯವಾದಂತೇ ನಮ್ಮ ಗಣಕಯಂತ್ರಗಳ ಜನಸಾಮಾನ್ಯ ಬಳಕೆದಾರರಿಗೆ ಗಣಕಯಂತ್ರಗಳ ಬಗೆಗೆ ಅವರು ಊಹಿಸಿದ್ದೇ ಸತ್ಯ!  

ಅಯ್ಯಾ ಮಹಾಜನಗಳೇ, ಉಪಕಥೆಯೊಂದನ್ನು ಕೇಳುವಂಥವರಾಗಿ: ಒಂದಾನೊಂದು ಕಾಲದಲ್ಲಿ ಕೆಂಪೇಗೌಡ ಕಟ್ಟಿಸಿದ ಈ ಬೆಂದಕಾಳೂರಿನ ಪ್ರದೇಶವೊಂದರಲ್ಲಿ, ಗಣಕಯಂತ್ರವನ್ನು ಮನೆಯಲ್ಲೇ ಇಟ್ಟುಕೊಂಡು ಅಕೌಂಟ್ಸ್ ಮಾಡಿಕೊಡುತ್ತಿದ್ದ ಬ್ರಹ್ಮಚಾರಿಯೊಬ್ಬನ ಮನೆಗೆ ಅವನ ರೂಮ್ ಮೇಟ್ ಆಗಿರುವ ವ್ಯಕ್ತಿಯ ತಂದೆ ಹಳ್ಳಿಯಿಂದ ಬಂದಿದ್ದರು. ರಾತ್ರಿಯ ಊಟವೆಲ್ಲಾ ಮುಗಿದು ಹಳ್ಳಿಯಕಡೆಗಿನ ಸುದ್ದಿಗಳು-ಲೋಕಾಭಿರಾಮವಾಗಿ ಹರಿದು, ಇನ್ನೇನು ಮಲಗಬೇಕು ಎಂಬ ಹೊತ್ತಿಗೆ, ಅಗೋ ಕಂಡಿತು: ಪೊಲ್ಲಂಬಲಮೇಡುವಿನಲ್ಲಿ ದಿವ್ಯಜ್ಯೋತಿ!! ಹಳ್ಳಿಯಿಂದ ಬಂದಿದ್ದ ವ್ಯಕ್ತಿ ಎಲೆಯಡಿಕೆ ಹಾಕಿಕೊಂಡು ತನ್ನ ಗೊರಗೊರ ಮಾತಿನಲ್ಲೇ ಮಗನಲ್ಲಿ ಕೇಳಿದರು:"ತಮ್ಮಾ, ಅದ್ಯಾಕ ಅಂವ ಅಲ್ಲಿ ಒಬ್ಬನೇ ಟಿವಿ ನೋಡ್ತಾನಲ?" ಹಳ್ಳಿಯಾತ ’ಟಿವಿ’ ಎಂದು ಹೇಳಿದ್ದು ಯಾವುದಕ್ಕೆ ಗೊತ್ತೇ? ಅಕೌಂಟ್ಸ್ ಮಾಡುತ್ತಿದ್ದ ಬ್ರಹ್ಮಚಾರಿ ಇನ್ನೊಂದು ಕೋಣೆಯಲ್ಲಿ ಗಣಕಯಂತ್ರ ಹಚ್ಚಿಕೊಂಡು[ಆಗ ಕಲರ್ ಮಾನಿಟರ್ ಇರಲಿಲ್ಲ, ಬ್ಲಾಕ್ ಅಂಡ ವ್ಹೈಟ್ ಅಥವಾ ಎಸ್.ವಿ.ಜಿ.ಏ ಮೊನೊಕ್ರೋಮ್ ಮಾನಿಟರ್ ಬಳಕೆಯಲ್ಲಿತ್ತು]ಮಾನಿಟರ್ ನೋಡಿಕೊಂಡು ಕೆಲಸಮಾಡುತ್ತಿದ್ದುದನ್ನು ಕಂಡು!! ಅಂದಿನವರೆಗೆ ಗಣಕಯಂತ್ರವನ್ನು ಚಿತ್ರದಲ್ಲೂ ಸರಿಯಾಗಿ ಗಮನಿಸಿರದ ಹಳ್ಳಿಯ ವ್ಯಕ್ತಿಗೆ ಮಾನಿಟರ್ ಎಂಬ್ದು ಟಿವಿಯಂತೇ ಗೋಚರವಾಗಿತ್ತು. ಇಂತಹ ತಮಾಷೆಯ ಪ್ರಸಂಗಗಳು ಒಂದೆರಡಲ್ಲ.        

ಗಣಕಯಂತ್ರಗಳು ಬಳಕೆಗೆ ಬಂದ ಹೊಸದರಲ್ಲಿ, ಮಹಾನಗರದಲ್ಲಿ ನಾನು ನೋಡಿದ ಅನೇಕ ಅಪ್ಪ-ಅಮ್ಮಂದಿರಿಗೆ ತಮ್ಮ ಮಕ್ಕಳಿಂದ ಕಂಪ್ಯೂಟರ್ ಹೇಳಿಸಿಕೊಳ್ಳಲು ಮರ್ಯಾದೆಯಾಗುತ್ತಿತ್ತು, ಕಲಿಕಾಕೇಂದ್ರಗಳಿಗೆ ಹೋದರೆ ಅಲ್ಲಿ ಪಕ್ಕದಲ್ಲಿರುವ ಜ್ಯೂನಿಯರ್ ಗಳ ಜೊತೆ ನಮ್ಮ ಸೀನಿಯರ್ ಮಂದಿಗೆ ಕೂತು ಕಲಿಯಲು ಒಂಥರಾ ಮುಜುಗರವಾಗುತ್ತಿತ್ತು. ರಾತ್ರಿಶಾಲೆಯಲ್ಲಿ ಅಕ್ಷರ ಕಲಿಯುವವರಲ್ಲಿರುವ ಮುಖಭಾವ ಹೊತ್ತು ಅಳುಕುತ್ತಲೇ ಕೀಬೋರ್ಡು ಅದುಮಿದವರು-ಆ ನಮ್ಮ ಸೀನಿಯರುಗಳು. ಹಳೆಯ ಸಿನೆಮಾವೊಂದರಲ್ಲಿ ಇರುಳುಗಣ್ಣನ ಪಾತ್ರದಲ್ಲಿ ನಟ ದಿನೇಶ್ "ಆ ಒಂದು ಆ ಎರಡು ಆ ಮೂರು" ಎಂದುಕೊಳ್ಳುತ್ತಾ ಕೂರಲುಹೋಗಿ ಜಾರಿಬೀಳುವ ಸನ್ನಿವೇಶದಂತೇ, ಬಳಕೆಯ ಕ್ರಮ ಪಕ್ಕಾ ಗೊತ್ತಾಗದಿದ್ದರೂ ಗೊತ್ತಾಯ್ತೆಂದು ಬಾಯ್ತುಂಬ ಹಲಬುತ್ತಲೇ ಇರುತ್ತಿದ್ದವರು ಹಲವರು! ಕಚೇರಿಗಳಲ್ಲಿ ಅದಾಗತಾನೇ ಒಂದೊಂದೋ ಎರಡೆರಡೋ ಬಂದು ಕುಂತಿದ್ದ ಗಣಕಯಂತ್ರಗಳನ್ನು ಕಂಡರೆ, ಸರ್ಕಸ್ಸಿನ ಹುಲಿಗೆ ರಿಂಗ್ ಮಾಸ್ಟರ್ ಕಂಡಾಗ ಉಂಟಾಗುವ ಅಸಹಾಯ ಭಾವ ನಮ್ಮ ಸೀನಿಯರುಗಳಲ್ಲಿ! ಗಣಕಯಂತ್ರ ಯಾರಾದರೂ ಚಾಲೂಮಾಡಿಕೊಳ್ಳಲಿ ಎಂದುಕೊಂಡು ನೋಡಿಯೂ ನೋಡದಂತೇ ದೂರನಿಲ್ಲುತ್ತಿದ್ದವರು ಕೆಲವರಾದರೆ, ಚಾಲೂ ಮಾಡಿದಮೇಲೆಯೇ ತಲುಪಬೇಕೆಂಬ ಧೋರಣೆಯಿಂದ ಹತ್ತು ನಿಮಿಷ ತಡವಾಗೇ ಕಚೇರಿಗೆ ಬರುತ್ತಿದ್ದವರು ಇನ್ನೂ ಕೆಲವರು.

ಇಂಥಾ ಕಾಲಘಟ್ಟದಲ್ಲಿ, ಇಂದಿನ ಇನ್ಫೋಸಿಸ್ಸಿನ ನಾರಾಯಣ ಮೂರ್ತಿಗಳು, "ಸಾಫ್ಟ್ ವೇರ್ ಕಂಪನಿ ಮಾಡುವುದಕ್ಕೆ ಸಾಲಕೊಡಿ" ಎಂದು ಬ್ಯಾಂಕುಗಳಿಗೆ ಹೋದಾಗ, [ಸಾರಿ, ಆಗ ’ಸಾಫ್ಟ್ ವೇರ್’ ಎಂಬ ಪದ ಇನ್ನೂ ಕನ್ನಡೀಕೃತವಾಗಿರಲಿಲ್ಲ.] "ಸಾಫ್ಟ್ ವೇರ್ ಎಂದರೇನು?" ಎಂಬ ಬ್ಯಾಂಕಿನವರ ಪ್ರಶ್ನೆಗೆ ನಾರಾಯಣ ಮೂರ್ತಿಗಳು ತಮ್ಮ ಅಷ್ಟೂ ಎನರ್ಜಿಯನ್ನು ಉಪಯೋಗಿಸಿ ವಿವರಿಸಿದರೂ, ಬ್ಯಾಂಕಪ್ಪಗಳ ’’ಟ್ಯೂಬ್ ಲೈಟ್’’ ಹತ್ತಲೇ ಇಲ್ಲ! ಕಣ್ಣಿಗೆ ಕಾಣದ ಯಾವುದನ್ನೋ ‘ಸಾಫ್ಟ್ ವೇರ್’ ಎನ್ನುತ್ತಾ ಬಂದರೆ ಅವರಾದರೂ ಹೇಗೆ ಒಪ್ಪಬೇಕು ಪಾಪ! ನಮ್ಮದೇ ಅಕೌಂಟಿನಲ್ಲಿ ನಮ್ಮದೇ ಹಣ ಕಣ್ಣಿಗೆ ಕಂಡರೂ ಕೊಡುವಮೊದಲು ಹತ್ತತ್ತು ಸರ್ತಿ ಪರಾಂಬರಿಸಿ ನೋಡುವ ಜನ ಅವರು-ಹಣಕಾಸಿನ ವ್ಯವಹಾರ ನೋಡಿ, ಸುಲಭವಲ್ಲ! ಕಣ್ಣಿಗೆ ಕಾಣದ ವ್ಯವಹಾರ ಎಂದಮೇಲೆ ಏನೋ ಗಿಲ್ಮಿಟ್ಟು ಇರಲೇಬೇಕು ಎಂದುಕೊಂಡ ಬ್ಯಾಂಕಪ್ಪಗಳು "ಮಿಸ್ಟರ್ ಮೂರ್ತಿ, ವಿ ಆರ್ ಸಾರಿ" ಎಂದು ಕೈಚೆಲ್ಲಿದಾಗ ನಾರಾಯಣ ಮೂರ್ತಿಗಳು ಕೈಕೈ ಹೊಸಕಿಕೊಂಡು ಹೊರಬರಬೇಕಾಯ್ತು. ದಶಕಗಳ ನಂತರ ಇದೇ ನಾರಾಯಣಮೂರ್ತಿಗಳು ಅಂತಹ ಬ್ಯಾಂಕುಗಳಿಗೇ ಬ್ಯಾಂಕಿಂಗ್ ಸಾಫ್ಟ್ ವೇರ್ ಮಾಡಿಸಿಕೊಟ್ಟಾಗಲಾದರೂ ’ಸಾಫ್ಟ್ ವೇರ್ ಎಂದರೇನು’  ಎಂಬುದಕ್ಕೆ ಬ್ಯಾಂಕಪ್ಪಗಳಿಗೆ ಉತ್ತರ ಸಿಕ್ಕಿತೋ ಇಲ್ಲವೋ ದೇವರಾಣೆ ನನಗಂತೂ ಗೊತ್ತಿಲ್ಲ! ಆದರೆ, ಅದಾಗಲೇ ಮೂರ್ತಿಗಳ ಕಂಪನಿಯಲ್ಲಿ ಕೆಲಸಮಾಡುತ್ತಿದ್ದ ಸಾವಿರಾರು ಎಂಜಿನೀಯರುಗಳಿಗೆ ಬಹುರಾಷ್ಟ್ರೀಯ ಬ್ಯಾಂಕುಗಳು ಸಾಲನೀಡಿದ್ದವು ಎಂಬುದು ನಿಮ್ಮಾಣೆಗೂ ಸತ್ಯ.            

ಬ್ಯಾಂಕುಗಳು ಸಾಫ್ಟ್ ವೇರ್ ಮಾಡಿಸಿಕೊಂಡಿದ್ದು ನಿಜ. ಬಳಕೆ ಆರಂಭಗೊಂಡಿದ್ದೂ ನಿಜ. ಆದರೆ ತಂತ್ರಾಂಶ ಅಳವಡಿಸಿಕೊಂಡ ಕೆಲವು ಬಹುರಾಷ್ಟ್ರೀಯ ಬ್ಯಾಂಕುಗಳು ಗಿರಾಕಿಗಳನ್ನು ಆಕರ್ಷಿಸಲು,  ಕೋರ್ ಬ್ಯಾಂಕಿಂಗ್, ನೆಟ್ ಬ್ಯಾಂಕಿಂಗ್, ಎ.ಟಿ.ಎಂ ಮೊದಲಾದ ಸವಲತ್ತುಗಳನ್ನು ಆರಂಭಿಸಿಯೇಬಿಟ್ಟವು. ಸೌಲಭ್ಯವಂಚಿತರಾಗುತ್ತೇವೆ ಎನಿಸಿದರೆ ಗಿರಾಕಿಗಳು ಬರದೇ ಉಳಿದಾರು ಎಂದುಕೊಂಡ ಭಾರತೀಯ ಬ್ಯಾಂಕುಗಳೂ ಕೂಡ ಅಂತಹ ಸವಲತ್ತುಗಳನ್ನು ಕೊಡುವಲ್ಲಿ ತಯಾರಾದವು. ಸಂಬಂಧಿತ ಯಂತ್ರೋಪಕರಣಗಳೆಲ್ಲಾ ಪ್ರತಿಷ್ಠಾಪಿತವಾಗಿ ವ್ಯವಹಾರ ಆರಂಭಗೊಂಡಮೇಲೆ ಕೆಲವರ ಅಕೌಂಟ್ ’ಹ್ಯಾಕ್’ ಆಗಿದ್ದುದು ತಿಳಿದುಬಂತು. ಭಾರೀಮೊತ್ತವಿದ್ದ ಅಕೌಂಟಿನಲ್ಲಿ ಹಣವೇ ಇಲ್ಲದಿರುವುದು ಅಥವಾ ಹಣ ಕಡಿಮೆ ಆಗಿರುವುದು ಕಂಡುಬಂತು. ಆಗಲೇ ಗೊತ್ತಾಗಿದ್ದು ಬ್ಯಾಂಕಿಂಗ್ ಸಾಫ್ಟ್ ವೇರ್ ಗಳಲ್ಲೇ ತೊಂದರೆ ಇದೆ ಎಂಬುದು! ಸಾಫ್ಟ್ ವೇರ್ ತಂತ್ರಜ್ಞರನ್ನು ಕರೆಸಿ ಕೇಳಿದಾಗಲೇ, ’ಹ್ಯಾಕಿಂಗ್’ ಎಂಬ ಪದ ಮತ್ತು ಪ್ರಕ್ರಿಯೆಗಳ ಬಗ್ಗೆ ಮೊದಲಾಗಿ ತಿಳಿದಿದ್ದು. ಹಾಗಾದರೆ ಹ್ಯಾಕಿಂಗ್ ಎಂದರೇನು ಎಂಬ ಅವರ ಪ್ರಶ್ನೆಗೆ ತಂತ್ರಜ್ಞರು ವಿವರಿಸಿ ಹೇಳಿದರು.                     

’ಹ್ಯಾಕಿಂಗ್’ ಎಂದರೆ ಅತಿಕ್ರಮಣವಿದ್ದಂತೆ. ಅನುಮತಿಯಿಲ್ಲದೇ, ಕಳ್ಳತನದಿಂದ ಇನ್ನೊಬ್ಬರ ಖಾತೆಯನ್ನು ಬಳಸಿ ಲಾಭ ಪಡೆಯುವುದು ಹ್ಯಾಕಿಂಗ್ ಎನಿಸುತ್ತದೆ. ಅದು ಇಮೇಲ್ ಖಾತೆಯಿರಬಹುದು, ಬ್ಯಾಂಕ ಖಾತೆಯಿರಬಹುದು ಅಥವಾ ಇನ್ನಿತರ ಸಾಮಾಜಿಕ ತಾಣಗಳಲ್ಲಿನ ಖಾತೆಯಿರಬಹುದು. ಹ್ಯಾಕಿಂಗ್ ಬಗ್ಗೆ ಜಾಸ್ತಿ ತೆಲೆಕೆಡಿಸಿಕೊಳ್ಳುವುದೆಲ್ಲಪ್ಪಾ ಅಂದರೆ ಬ್ಯಾಂಕ್ ಖಾತೆಗಳು ಹ್ಯಾಕ್ ಆದಾಗ! ಮಾಹಿತಿತಂತ್ರಜ್ಞಾನ ಅಭಿವೃದ್ಧಿ ಹೊಂದುತ್ತಾ ನಡೆದಾಗ, ತಮ್ಮ ಕಚೇರಿಗಳಲ್ಲಿನ ಸರದಿಯ ಸಾಲನ್ನು ಕಮ್ಮಿಗೊಳಿಸಲು ’ನೆಟ್ ಬ್ಯಾಂಕಿಂಗ್’ ಎಂಬ ಸೌಲಭ್ಯವನ್ನು ಬ್ಯಾಂಕುಗಳು ಕೊಡಮಾಡಿದವು. ನೆಟ್ ಬ್ಯಾಂಕಿಂಗ್ ಸೌಲಭ್ಯವನ್ನು ಬಳಸಿಕೊಳ್ಳುತ್ತಾ ಆನ್ ಲೈನ್ ನಲ್ಲಿ ಕೆಲಸಮಾಡುತ್ತಿರುವ ಜನರಬಗೆಗೆ ಮಾಹಿತಿ ಕಲೆಹಾಕುವ ಹ್ಯಾಕರ್ ಗಳು ತಯಾರಾಗೇಬಿಟ್ಟರು. ಜೊತೆಗೆ ಮ್ಯಾಗ್ನೆಟಿಕ್ ಕೋಡ್ ಇರುವ ಸ್ವೈಪಿಂಗ್ ಕಾರ್ಡ್ [ಕ್ರೆಡಿಟ್, ಡೆಬಿಟ್ ಕಾರ್ಡ್]ಗಳಲ್ಲಿನ ಇಲೆಕ್ಟ್ರಾನಿಕ್ ಚಿಪ್ ಗಳಲ್ಲಿ ಅಡಕವಾಗಿರುವ ಮಾಹಿತಿಗಳನ್ನು ಕಲೆಹಾಕುವ ಕೆಲಸ ಅಲ್ಲಲ್ಲಿ ನಡೆಯಿತು. ಅಂತಹ ಕಳ್ಳರೇ ಸೇರಿಕೊಂಡು ಹ್ಯಾಕ್ ಮಾಡುವ ಬಗ್ಗೆ ತರಬೇತಿ ನೀಡುವುದಕ್ಕೇ ಕೆಲವು ಜಾಲತಾಣಗಳನ್ನು ಆರಂಭಿಸಿದರು.  ಸಂಗ್ರಹಿಸಿದ ಮಾಹಿತಿಗಳ ಮೂಲಕ ನಕಲೀ ಕಾರ್ಡುಗಳನ್ನು ತಯಾರಿಸಿ ಬಳಸುವ ಮಟ್ಟಕ್ಕೆ ಹ್ಯಾಕರ್ಸ್ ಪಡೆಗಳು ತಯಾರಾದವು. ಕಾರ್ಡುಗಳ ಬಳಕೆದಾರರ ಜೊತೆಗೆ ಬ್ಯಾಂಕುಗಳ ಆಡಳ್ತೆಗಳಿಗೂ ಅಂತಹ ಹ್ಯಾಕರ್ ಗಳು ದುಃಸ್ವಪ್ನವಾಗಿ ಕಾಡಿದರು. ಅಂತಹ ಹ್ಯಾಕರ್ಸ್ ಗಳನ್ನು ನಿಭಾಯಿಸಲು ಬ್ಯಾಂಕ್ ಆಡಳ್ತೆಗಳೂ ಮತ್ತು ಮಾಹಿತಿ ತಂತ್ರಜ್ಞಾನಕ್ಷೇತ್ರಗಳವರೂ ಚಿಂತನಮಂಥನ ನಡೆಸಿದರು.

ವಿಪರ್ಯಾಸವೆಂದರೆ ಯಾರು ಮಾಹಿತಿ ತಂತ್ರಜ್ಞಾನವನ್ನು ಬಲ್ಲವರೋ ಅಂಥವರಲ್ಲೇ ಕೆಲವು ದುಷ್ಟರು ಹ್ಯಾಕರ್ಸ್ ಗಳಾಗಿದ್ದರು. ಅವರನ್ನು ನಿಭಾಯಿಸುವುದು ಮನೆಯೊಳಗೆ ಹೊಕ್ಕ ಇಲಿಯನ್ನು ನಿಭಾಯಿಸಿದಂತೇ ಆಗಿತ್ತು; ಇಲಿಗಾದರೂ ತನ್ನನ್ನು ಹಿಡಿಯುತ್ತಾರೋ ಹೊಡೆಯುತ್ತಾರೋ ಎಂಬ ಮುಂದಿನ ಬೆಳವಣಿಗೆಗಳ ಬಗೆಗಿನ ಮಾಹಿತಿ ಸಿಗುವುದಿಲ್ಲ, ಆದರೆ ಇಲ್ಲಿ ಹಾಗಲ್ಲ! ಹ್ಯಾಕರ್ಸ್ ವಿರುದ್ಧ ಜನಿಸುವ ಬ್ರಹ್ಮಾಸ್ತ್ರಗಳ ಬಗೆಗೆ  ಪ್ರತಿನಿತ್ಯದ, ಪ್ರತೀಹಂತದ ಮಾಹಿತಿ ಹ್ಯಾಕರ್ಸ್ ಗಳಿಗೆ ರವಾನೆಯಾಗುತ್ತಿತ್ತು! ಯಾರು ಗೂಢಚಾರರು, ಯಾಹು ಬೇಹುಗಾರಿಕೆಯವರು ಮತ್ತು ಯಾರು ಸಂಭಾವಿತರು ಎಂದು ಗುರುತಿಸುವುದೇ ಬಹಳ ತ್ರಾಸದಾಯಕ ಕೆಲಸವಾಗಿತ್ತು. ಅಂತಹ ಸನ್ನಿವೇಶದಲ್ಲಿ, ಜಾಗತಿಕ ಮಟ್ಟದಲ್ಲಿ ಹಾರ್ಡ್ ವೇರ್ ತಯಾರಕ ಸಂಸ್ಥೆಯಾಗಿ ಕಂಪ್ಯೂಟರನ್ನು ಜನಪ್ರಿಯಗೊಳಿಸಿದ ’ಐಬಿಎಂ’ ಸಂಸ್ಥೆ ’ಎಥಿಕಲ್ ಹ್ಯಾಕಿಂಗ್’ ಎಂಬ ಹೊಸಮಾರ್ಗವನ್ನು ಕಂಡುಕೊಂಡಿತು. ದುರ್ಬಲವಾದ ಶರೀರದಲ್ಲಿ ವೈರಾಣುಗಳು ಪ್ರವೇಶಿಸಿ ಬಹುಬೇಗ ತಮ್ಮ ಅಸ್ತಿತ್ವವನ್ನು ಸ್ಥಾಪಿಸುತ್ತವೆ ಹೇಗೋ ಹಾಗೆಯೇ ದುರ್ಬಲವಾದ ತಂತ್ರಾಂಶದಲ್ಲಿ ಹ್ಯಾಕರ್ಸ್ ಸೇರಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ ಎಂಬ ತೀರ್ಮಾನಕ್ಕೆ ಬಂದ ’ಐಬಿಎಂ’ ಸಂಸ್ಥೆಯ ತಜ್ಞರು ತಂತ್ರಜ್ಞಾನದ ದೌರ್ಬಲ್ಯವನ್ನು ಪತ್ತೆ ಹಚ್ಚುವುದಕ್ಕಾಗಿ ತಮ್ಮಲ್ಲೇ ಕೆಲವರು, ಬಳಕೆದಾರರ ಪರವಾನಗಿಯನ್ನು ಪಡೆದುಕೊಂಡು, ಪರೀಕ್ಷಾರ್ಥವಾಗಿ ಹಾರ್ಡ್ ವೇರ್ ಮತ್ತು ತಂತ್ರಾಂಶಗಳ ಹ್ಯಾಕಿಂಗ್ ನಡೆಸಲು   ಪ್ರಯತ್ನಿಸಿದರು.    

’ಎಥಿಕಲ್ ಹ್ಯಾಕಿಂಗ್’ ಎಂಬ ಕಾರ್ಯ ಹ್ಯಾಕಿಂಗಿನ ಅಣುಕು. ಅದು ತಂತ್ರಾಂಶ ತಯಾರಕರ ಅಥವಾ ಬಳಕೆದಾರರ ಅನುಮತಿಯನ್ನು ಪಡೆದು ನಡೆಸುವಂತಹ ಕಾರ್ಯ. ಯಾವೆಲ್ಲಾ ರೀತಿಯಿಂದ ಹ್ಯಾಕಿಂಗ್ ನಡೆಸಲು ಸಾಧ್ಯವೋ ಅಷ್ಟೂ ವಿಧಗಳಲ್ಲಿ ಗಣಕಯಂತ್ರಗಳನ್ನು ಪರೀಕ್ಷೆಗೆ ಒಡ್ಡುವುದು ಎಥಿಕಲ್ ಹ್ಯಾಕಿಂಗ್. ಎಥಿಕಲ್ ಹ್ಯಾಕಿಂಗ್ ನಡೆಸುವ ನಿಪುಣ, ಒಮ್ಮೆ ಹ್ಯಾಕ್ ಮಾಡಿನೋಡಿ ಮತ್ತೆ ತಾನು ಹ್ಯಾಕ್ ಮಾಡಿದ ಯಂತ್ರಕ್ಕೋ ತಂತ್ರಾಂಶಕ್ಕೋ ಹ್ಯಾಕ್ ಮಾಡಿದ್ದು ಗೊತ್ತಾಗದಂತೇ ತೇಪೆಹಾಕುತ್ತಾನೆ. ಯಾವುದೇ ವಿಧದಲ್ಲೂ ಹ್ಯಾಕ್ ಮಾಡಲು ಬರುತ್ತಿಲ್ಲವೆಂದಾದರೆ ತಂತ್ರಾಂಶ ಚೆನ್ನಾಗಿದೆ ಎಂದು ತಿಳಿಯಬಹುದು. ಹಾರ್ಡ್ ವೇರಿಗೆ ಸಂಬಂಧಿಸಿದಂತೇ ಅದರ ಸಂಪೂರ್ಣ ನಿಗ್ರಹ ಸಾಧ್ಯವಾಗಿಲ್ಲವಾದರೂ, ಹ್ಯಾಕಿಂಗ್ ತಡೆಗಟ್ಟುವಲ್ಲಿ-ಗಣನೀಯ ಪ್ರಮಾಣದಲ್ಲಿ ಎಥಿಕಲ್ ಹ್ಯಾಕಿಂಗ್ ಎಂಬ ಕಾರ್ಯ ಸಹಾಯಮಾಡಿದೆ. ಎಥಿಕಲ್ ಹ್ಯಾಕಿಂಗನ್ನು ಕರಗತಮಾಡಿಕೊಳ್ಳಲು ಕೆಲವು ನಿಯಮ-ನಿಬಂಧನೆಗಳು ಹೇಳಲ್ಪಟ್ಟಿವೆ.  ಬಳಕೆದಾರರು ತಮ್ಮ ಖಾಸಗೀ ಕಂಫ್ಯೂಟರನ್ನು ಹ್ಯಾಕ್ ಮಾಡಿನೋಡಲೂ ಎಥಿಕಲ್ ಹ್ಯಾಕಿಂಗ್ ನಿಪುಣರನ್ನು ಒಡಂಬಡಿಕೆಯ ಮೇಲೆ ಕರೆಯಿಸಿಕೊಳ್ಳಬಹುದಾಗಿದೆ. ಎಥಿಕಲ್ ಹ್ಯಾಕಿಂಗ್ ಮಾಡುವ ಮಂದಿ ಹ್ಯಾಕರ್ಸ್ ಆಗಿರುವುದಿಲ್ಲ ಎಂಬುದನ್ನು ಗಮನಿಸಬೇಕು. ಉದಾಹರಣೆಗೆ ಎಥಿಕಲ್ ಹ್ಯಾಕಿಂಗ್ ನಿಪುಣರನ್ನು ಕರೆಸಿಕೊಂಡ ಬ್ಯಾಂಕೊಂದು ತನ್ನಲ್ಲಿನ ಕೆಲವು ಅಕೌಂಟುಗಳನ್ನು ಹ್ಯಾಕ್ ಮಾಡಲು ಪರವಾನಗಿ ನೀಡುತ್ತದೆ, ಹಾಗೊಮ್ಮೆ ಹ್ಯಾಕ್ ಮಾಡಲು ಸಾಧ್ಯವಾದರೆ ತಾನು ಬಳಸುವ ತಂತ್ರಾಂಶದಲ್ಲಿ ಸುರಕ್ಷತೆ ಸಾಲುತ್ತಿಲ್ಲ ಎಂಬುದು ಬ್ಯಾಂಕಿನ ಗಮನಕ್ಕೆ ಬರುತ್ತದೆ ಮತ್ತು ಬದಲಾಯಿಸಿಕೊಳ್ಳಲು ಅನುಕೂಲವಾಗುತ್ತದೆ. ಹ್ಯಾಕ್ ಮಾಡಲು ಸಾಧ್ಯವೇ ಆಗುವುದಿಲ್ಲ ಎಂದಾದರೆ ತಂತ್ರಾಂಶ ಚೆನ್ನಾಗಿದೆ ಎಂದು ತಿಳಿದುಬರುತ್ತದೆ. ಈ ಚೆಕ್-ಅಪ್ ಸೇವೆಗೆ ಎಥಿಕಲ್ ಹ್ಯಾಕಿಂಗ್ ನಿಪುಣರಿಗೆ ಸೇವೆಪಡೆದುಕೊಂಡ ಬ್ಯಾಂಕಿನವರು ಸೇವಾಶುಲ್ಕ ನೀಡುತ್ತಾರೆ.     

ಹಾಗಾದರೆ ಹ್ಯಾಕಿಂಗ್ ಯಾವ ಯಾವ ಮಟ್ಟದಲ್ಲಿ ನಡೆಯುತ್ತದೆ ಎಂಬ ಬಗ್ಗೆ ಸ್ವಲ್ಪ ತಿಳಿದುಕೊಂಡಿದ್ದರೆ ಒಳ್ಳೆಯದು. ಹ್ಯಾಕರ್ಸ್ ಗಳಲ್ಲಿ ಮೂರು ವಿಧ: 1.] ವ್ಹೈಟ್ ಹ್ಯಾಟ್ ಹ್ಯಾಟ್ ಹ್ಯಾಕರ್ಸ್, 2] ಗ್ರೇ ಹ್ಯಾಕರ್ಸ್ ಮತ್ತು 3]ಬ್ಲ್ಯಾಕ್ ಹ್ಯಾಟ್ ಹ್ಯಾಕರ್ಸ್. ಇವರ ಕಾರ್ಯವಿಧಾನಗಳು ಆರಂಭವಾಗುವ ಮೂಲವನ್ನು ಗಮನಿಸೋಣ: ಗಣಕಯಂತ್ರ ಮಾನವ ನಿರ್ಮಿತವೇ ಆಗಿರುವುದರಿಂದ, ಅದರ ಕಾರ್ಯಾರಂಭ ನಿಗದಿತ ರೀತಿಯಲ್ಲಿ ನಡೆಯುತ್ತದೆ. ಆನ್ ಮಾಡಿದಾಗ ಇಂತಿಂಥಾ ಮಾಹಿತಿ ಇಂತಿಂಥಾ ಜಾಗಗಳಿಗೆ ರವಾನೆ ಆಗಬೇಕೆಂಬುದು ಮೊದಲೇ ಫೀಡ್ ಆಗಿರುತ್ತದೆ. ಅಗತ್ಯವಾದ ಆರಂಭಿಕ ಮಾಹಿತಿ ರವಾನೆಯಾಗುವ ಜಾಗವನ್ನೇ ಹ್ಯಾಕರ್ಸ್ ಗಳು ತಮ್ಮ ಪ್ರಯೋಗಕ್ಕೆ ಬಳಸಿಕೊಳ್ಳುತ್ತಾರೆ. ಗಣಕಯಂತ್ರದ ಮಾಹಿತಿಯಲ್ಲಿ ಪ್ರಮುಖವಾಗಿ ಎರಡು ಭಾಗಗಳು: ಒಂದು ಡಾಟಾ ಇನ್ನೊಂದು ಸಂಜ್ಞೆ[ಇನಸ್ಟ್ರಕ್ಷನ್]. ಈ ಮಾಹಿತಿ ಬೈನರಿ ಭಾಷೆಯ ಒಂದೊಂದೇ ’ಬಿಟ್’[ಬೈನರಿ ಅಂಕೆ]ಗಳ ಮೂಲಕ ವರ್ಗಾವಣೆಗೊಳ್ಳುತ್ತದೆ. ಉದಾಹರಣೆಗೆ: ಒಂದು ಗಣಕಯಂತ್ರದಲ್ಲಿರುವ ಆರಂಭಿಕ ಸ್ಥಿರಮಾಹಿತಿಯ ಪ್ರಕಾರ, ಮೊದಲನೇ ಸರ್ತಿ 8ಬಿಟ್ ಡಾಟಾ ಮತ್ತು 2ಬಿಟ್ ಸಂಜ್ಞೆಗಳನ್ನು ಮತ್ತು ಎರಡನೇ ಸರ್ತಿ ಉಳಿದ 8ಬಿಟ್ ಡಾಟಾ ಮತ್ತು 2ಬಿಟ್ ಸಂಜ್ಞೆಗಳನ್ನು ಮುಂದಿನಕಾರ್ಯಕ್ಷೇತ್ರಕ್ಕೆ ಲಭ್ಯವಾಗುವಂತೇ ಪ್ರಧಾನ ನೆನಪಿನ ಕೋಶಗಳಿಗೆ[ಮೇನ್ ಮೆಮೊರಿ] ವರ್ಗಾವಣೆಗೊಳಿಸಬೇಕಾಗಿರುತ್ತದೆ.

8ಬಿಟ್ ಡಾಟಾ ಬದಲಿಗೆ 9ಬಿಟ್ ಅಥವಾ 10ಬಿಟ್ ಡಾಟಾ ಕಳಿಸಲು ಹ್ಯಾಕರ್ಸ್ ಆಗಿರುವವರು ಪ್ರಯತ್ನಿಸುತ್ತಾರೆ! ಗಣಕಯಂತ್ರಕ್ಕೆ ಸರಿಯಾದ ಸಮಯಕ್ಕೆ ಸಮರ್ಪಕವಾದ ಡಾಟಾ ಮತ್ತು ಸಂಜ್ಞೆ ಸಿಗದ ಕಾರಣ "ಮುಂದೇನು?"-ಎಂಬುದನ್ನು ಚಿಂತಿಸಲೂ ಆಗದೇ ಗಣಕಯಂತ್ರ ತನ್ನ ಕೆಲಸದಗತಿಯನ್ನು ನಿಲ್ಲಿಸಿ ’ಆಪರೇಟಿಂಗ್ ಸಿಸ್ಟಮ್’ ಎಂಬ ತಂತ್ರಾಂಶದ ಸಲಹೆಯನ್ನು ಪಡೆಯಲು ಮುಂದಾಗುತ್ತದೆ. ಇದನ್ನು ತಾಂತ್ರಿಕ ಪರಿಭಾಷೆಯಲ್ಲಿ ’ಬಫರ್ ಓವರ್ ಫ್ಲೋ’ ಎಂದು ಕರೆಯುತ್ತಾರೆ. ನುಸುಳುಕೋರರಿಗೆ ಗಡಿಯಲ್ಲಿ ಅವಕಾಶ ಸಿಕ್ಕಿ ಅವರು ಒಳನುಗ್ಗಿ ಕೆಲವು ಪ್ರದೇಶಗಳನ್ನೋ ವಸಾಹತುಗಳನ್ನೋ ವ್ಯಾಪಿಸಿಕೊಂಡು ತಾತ್ಕಾಲಿಕವಾಗಿ ಅಧಿಕಾರ ಚಲಾಯಿಸಿದಂತೇ, ಹ್ಯಾಕರ್ಸ್ ಗಳು ಗಣಕಯಂತ್ರಗಳಲ್ಲಿ ಇಂಥಾದ್ದೇ ಅವಕಾಶಕ್ಕಾಗಿ ಕಾಯುತ್ತಾರೆ. ಮುಂದಿನ ಸಂಜ್ಞೆಗಳನ್ನು ತಮಗೇ ಬೇಕಾದ ರೀತಿಯಲ್ಲಿ ಕೊಡತೊಡಗುವುದರಿಂದ ಗಣಕಯಂತ್ರ ಅವರ ಸಂಜ್ಞೆಗಳಂತೇ ವರ್ತಿಸುತ್ತದೆ.

ದಿನಗಟ್ಟಲೇ ಕುಳಿತು ಹೇಗಾದರೂ ಮಾಡಿ ಗಣಕಯಂತ್ರಗಳನ್ನು ಹಾಳುಗೆಡಹುವುದು ’ವ್ಹೈಟ್ ಹ್ಯಾಟ್ ಹ್ಯಾಕರ್ಸ್’ ಎಂಬ ಮಾದರಿಯ ಹ್ಯಾಕರುಗಳ ಕಾರ್ಯವೈಖರಿಯಾದರೆ, ಗ್ರೇ ಹ್ಯಾಟ್  ಹ್ಯಾಕರ್ಸ್ ಎಂಬ ಗುಂಪು ಕೂಡ ಹೀಗೇ ಮಾಡುವ ಮೂಲಕ ಹೊಸ ಹೊಸ ದಾರಿಯಲ್ಲಿ ಯಂತ್ರಗಳನ್ನು ಕೆಡಿಸಲು ನೋಡುತ್ತದೆ ಮತ್ತುಅದರಿಂದ ತನಗೆ ಆದಾಯ ಬರುವಂತೇ ನೋಡಿಕೊಳ್ಳುತ್ತದೆ. ಇನ್ನೊಬ್ಬರ ಪರವಾಗಿ ಯಂತ್ರಗಳನ್ನು ಕೆಡಿಸುವಂತಹ ಕೆಲಸಗಳನ್ನು ಮಾಡುವ ಈ ಗುಂಪು ಯಾರು ಯಂತ್ರಗಳನ್ನು ಹಾಳುಮಾಡಲು ಹೇಳುತ್ತಾರೋ ಅವರಿಂದ ’ಸುಪಾರಿ’ ಪಡೆಯುತ್ತದೆ! ಇಷ್ಟೇ ಅಲ್ಲದೇ ಹ್ಯಾಕ್ ಮಾಡುವ ಯಂತ್ರಗಳಿಂದ ಹೆಚ್ಚಿನ ಆರ್ಥಿಕ ಸಂಪತ್ತು ತಮಗೆ ದೊರೆಯುತ್ತದೋ ಎಂದೂ ಪರಿಶೀಲಿಸುತ್ತದೆ. ಗಣಕಯಂತ್ರಗಳನ್ನು ಹ್ಯಾಕ್ ಮಾಡಿ ಅವುಗಳಿಂದ ಆರ್ಥಿಕ ಲಾಭ ಪಡೆಯುವುದರೊಟ್ಟಿಗೆ ಯಾವಯಾವ ಯಂತ್ರಗಳನ್ನು ಹೇಗೆ ಹೇಗೆ ಹ್ಯಾಕ್ ಮಾಡಬೇಕೆಂಬ ’ಕೋಡ್’ಗಳನ್ನು ಬರೆದುಕೊಟ್ಟು ಹಣಗಳಿಸುವುದು ಬ್ಲ್ಯಾಕ್ ಹ್ಯಾಟ್ ಹ್ಯಾಕರ್ಸ್ ಗಳ ದಾರಿಯಾಗಿದೆ. ಮೂರೂ ಗುಂಪುಗಳ ಸಾಮಾನ್ಯ ಉದ್ದೇಶ ಒಂದೇ: ಯಂತ್ರಗಳನ್ನು ಹ್ಯಾಕ್ ಮಾಡುವುದು. ಹ್ಯಾಕ್ ಮಾಡಿದ ಯಂತ್ರಗಳಿಂದ ಲಭಿಸುವ ಮಾಹಿತಿಗಳನ್ನಾಧರಿಸಿ ಅವರ ಮುಂದಿನ ಕೆಲಸಗಳು ನಿರ್ಧಾರವಾಗುತ್ತವೆ. ಈ ಮೂರೂ ಗುಂಪುಗಳ ಕೆಲಸ ಕಾನೂನಿನ ಪ್ರಕಾರ ಅಪರಾಧವಾಗಿರುತ್ತದೆ. ಇಂತಹ ಅಪರಾಧಿಗಳು ಸಿಕ್ಕಿಬಿದ್ದಲ್ಲಿ ಕನಿಷ್ಠ ಎರಡು ವರ್ಷಗಳ ಜೈಲುವಾಸ ಮತ್ತು ದಂಡ ಅಥವಾ ಗರಿಷ್ಠ ಹತ್ತುವರ್ಷಗಳ ಸೆರೆವಾಸ ಮತ್ತು ಜುಲ್ಮಾನೆಯನ್ನು ವಿಧಿಸಲಾಗುತ್ತದೆ.      

ಒಟ್ಟಾರೆಯಾಗಿ ಹೇಳಬೇಕೆಂದರೆ ಹ್ಯಾಕಿಂಗ್ ಎಂಬುದು ಹೈಜಾಕಿಂಗ್ ಆಫ್ ಕಂಪ್ಯೂಟರ್ ಆಪರೇಶನ್ಸ್. ಹ್ಯಾಕಿಂಗ್ ನಡೆಸುವ ಮಂದಿ ಸದಾ ಆನ್ ಲೈನ್ ನಲ್ಲೇ ಗಾಳಬಿಟ್ಟುಕೊಂಡು ಕೂತುಕೊಳ್ಳುತ್ತಾರೆ! ಮೊಬೈಲುಗಳ ಮೂಲಕ, ಇಮೇಲ್ ಗಳ ಮೂಲಕ ಹಲವಾರು ಜನರಿಗೆ ಆಕರ್ಷಕ ಸಂದೇಶ ಕಳುಹಿಸಿ, ಅವರೆಲ್ಲರ ಬ್ಯಾಂಕ್ ಖಾತೆಗಳ ಮಾಹಿತಿಯನ್ನು ಪಡೆಯಲು ಪ್ರಯತ್ನಿಸುತ್ತಾರೆ. ’ಪುಕ್ಕಟ್ಟೆಯಾಗಿ ಲಾಟರಿ ಹೊಡೆದಿದೆ’ ಎಂದರೆ ಬಿಡಲಾರದ ಕಡುಲೋಭಿಗಳು ಅಂಥವರಿಗೆ ತಮ್ಮ ಬ್ಯಾಂಕ್ ಖಾತೆಗಳ ಮಾಹಿತಿಯನ್ನು ಯಾರಿಗೂ ತಿಳಿಯದಂತೇ ಗುಪ್ತವಾಗಿ ಕಳಿಸುತ್ತಾರೆ! ಲೋಭಿಗಳ ಅಥವಾ ಜಾಸ್ತಿ ಹಣಮಾಡಿಕೊಳ್ಳುವವರ/ ಹಣದ್ವಿಗುಣ ಮಾಡಿಕೊಳ್ಳಬಯಸುವರ ಬ್ಯಾಂಕ್ ಖಾತೆಗಳ ಮಾಹಿತಿ ತಮಗೆ ದೊರೆಯುತ್ತಲೇ ಹ್ಯಾಕರ್ಸ್ ಪಡೆ ಜಾಗೃತವಾಗಿಬಿಡುತ್ತದೆ; ಕೆಲವೇ ಗಂಟೆಗಳಲ್ಲಿ ಮಾಹಿತಿ ಕಳಿಸಿದವರ ಬ್ಯಾಂಕ್ ಖಾತೆಗಳು ಹ್ಯಾಕ್ ಆದರೂ ಆಗಿಬಿಡಬಹುದು!! 

ಕೆಲವೊಮ್ಮೆ ಕಂಪನಿಗಳ ಸೀಕ್ರೆಟ್ಟುಗಳನ್ನು ತಿಳಿದುಕೊಳ್ಳಲೂ ಹ್ಯಾಕಿಂಗ್ ನಡೆಯುತ್ತದೆ. ಆ ಸೀಕ್ರೆಟ್ಟುಗಳನ್ನು ಬೇರೇ [ಕಾಂಪಿಟೀಟರ್ಸ್]ಜನರಿಗೆ ಹಂಚುವುದರಿಂದ ಹ್ಯಾಕರ್ಸ್ ಗಳಿಗೆ ಆರ್ಥಿಕ ಲಾಭ ದೊರೆಯುತ್ತದೆ. ಅಂತರ್ಜಾಲದ ಮೂಲಕ ಬರುವ ಹ್ಯಾಕರ್ಸ್ ಕೆಲವರಾದರೆ ಇನ್ನೂ ಕೆಲವರು ’ರೇಡಿಯೋ ಫ್ರೀಕ್ವೆನಿ ಐಡೆಂಟಿಫಿಕೇಶನ್’[ಆರ್.ಎಫ್.ಐಡಿ] ಎಂತ ತಂತ್ರಜ್ಞಾನದ ಸಹಾಯದಿಂದ ಹ್ಯಾಕ್ ಮಾಡುತ್ತಾರೆ. ಮ್ಯಾಗ್ನೆಟಿಕ್ ಬಾರ್ ಕೋಡ್ ಸಿಗ್ನಾಲ್ ಗಳಿರುವ ಕಾರ್ಡುಗಳ ನ್ನು ಖಾತೆಗಳಲ್ಲಿ ಚಲಾಯಿಸಲು ಕನಿಷ್ಠ 29 ಸೇಕಂದು ಸಮಯ ಹಿಡಿಯುತ್ತದೆ; ಅದೇ ಆರ್.ಎಫ್.ಐಡಿ ಕಾರ್ಡುಗಳಾದರೆ 16 ಸೇಕಂದುಗಳು ಸಾಕು. 13 ಸೇಕಂದುಗಳ ಸಮಯ ಉಳಿತಾಯ ಆಗುತ್ತದೆ ಎಂಬ ಉದ್ದೇಶದಿಂದ ವಿದೇಶಗಳಲ್ಲಿ ಆರ್.ಎಫ್.ಐಡಿ ಕಾರ್ಡುಗಳು ಜಾರಿಗೆ ಬಂದಿವೆ. ಆದರೆ ಆರ್.ಎಫ್.ಐಡಿ ಕಾರ್ಡುಗಳ ಮೂಲಕ ಮಾಹಿತಿ ಸೋರಿಕೆ ಬಹಳ ತ್ವರಿತವಾಗಿ ಮತ್ತು ಇನ್ನೂ ಸುಲಭವಾಗಿ ನಡೆಯುತ್ತದೆ ಎಂಬ ಆಧಾರಸಹಿತ ಆಕ್ಷೇಪಣೆ ಎದ್ದಿದೆ. ಹೀಗಾಗಿ ಆರ್.ಎಫ್.ಐಡಿ ತಂತ್ರಜ್ಞಾನಕ್ಕೆ ಇನ್ನೂ ಹೆಚ್ಚಿನ ಸುರಕ್ಷತಾ ಕ್ರಮ ಕೈಗೊಳ್ಳಬೇಕು ಎಂಬ ಹೇಳಿಕೆ ಜಾಗತಿಕ ಮಟ್ಟದಲ್ಲಿ ಪ್ರಚಲಿತಗೊಂಡಿದೆ.

ಎಷ್ಟೋ ಸಲ ಅಂತರ್ಜಾಲದಲ್ಲಿ ಯಾವುದೋ ಕಾರಣಕ್ಕೆ ಸಂಪರ್ಕಿಸುವ ಅಪರಿಚಿತರು ಬಹಳ ಮಾನವೀಯತೆ ತೋರುವಂತೇ ನಟಿಸುತ್ತಾ, ಸ್ಲೋ ಆಗಿರುವ ನಿಮ್ಮ ಗಣಕಯಂತ್ರದ ಸ್ಪೀಡ್ ಹೆಚ್ಚಿಸಿಕೊಡುವ ನೆಪದಲ್ಲಿ, ಗಣಕಯಂತ್ರದ ಕಂಟ್ರೋಲನ್ನು ತಮಗೆ ವರ್ಗಾಯಿಸುವ ತಂತ್ರಾಂಶದ ಮೂಲಕ ಒಪ್ಪಿಗೆ ಸೂಚಿಸುವಂತೇ ಕೋರಬಹುದು. ಇನ್ನೂ ಕೆಲವೊಮ್ಮೆ ನಿಮ್ಮ ಯಂತ್ರಗಳ, ಖಾತೆಗಳ ಐಡಿ, ಪಾಸ್ ವರ್ಡ್ ಮೊದಲಾದ ಮಾಹಿತಿಗಳನ್ನು ನಿಮ್ಮನ್ನು ಕೇಳಿಯೇ ಪಡೆದುಕೊಳ್ಳಬಹುದು. ನಿಮ್ಮ ಅನುಮತಿಯಿಂದಲೇ ಅವರಿಗೆ ಸಿಗುವ ಮಾಹಿತಿ ನಿಮಗೇ ಮಾರಕವಾಗಿಬಿಡಬಹುದು. ನಿಮ್ಮ ಅನುಮತಿಯಿಂದ ಸಿಕ್ಕ ಮಾಹಿತಿಯಾದುದರಿಂದ ಅಪರಾಧ ಎಸಗಿದವರು ತಪ್ಪಿಸಿಕೊಳ್ಳಲು ಆವರಿಗದು ಸಹಾಯಕವಾಗಬಹುದು. ಅನೇಕ ಕಚೇರಿಗಳಲ್ಲಿ ನೆಟ್ ವರ್ಕ್ ಪ್ರಿಂಟರುಗಳನ್ನು ಬಳಸುತ್ತಿದ್ದಾರೆ. ಗಣಕಯಂತ್ರಕ್ಕಿರುವಂತೇ ಅದಕ್ಕೂ ಒಂದು ಪ್ರತ್ಯೇಕ ಐಪಿ ಎಡ್ರೆಸ್ [ಇಂಟರ್ನೆಟ್ ಪ್ರೊಟೊಕಾಲ್ ಎಡ್ರೆಸ್] ಇರುತ್ತದೆ. ಅಂತಹ ಮಾಹಿತಿ ಹ್ಯಾಕರ್ಸ್ ಗಳಿಗೆ ದೊರಕಿದರೆ ಅವರು ಆ ಮೂಲಕ ನೆಟ್ ವರ್ಕ್ ಪ್ರವೇಶ ಪಡೆಯಬಲ್ಲರು! ಹೀಗಾಗಿ ನೆಟ್ ವರ್ಕ್ ಪ್ರಿಂಟರ್ ಅಥವಾ ಯಾವುದೇ ಗಣಕಯಂತ್ರದ ಐಪಿ ಎಡ್ರೆಸ್ ಗಳನ್ನು  ಅಥವಾ ಯಂತ್ರಗಳ ಯಾವುದೇ ಪೋರ್ಟುಗಳ ವಿವರಗಳನ್ನು [ಈ ಬಗ್ಗೆ ಮಾಹಿತಿಯಿರುವ ಸಿಬ್ಬಂದಿ ಅಥವಾ ಮ್ಯಾಂಟೆನನ್ಸ್ ಮಾಡುವ ಸಿಸ್ಟಮ್ ಎಡ್ಮಿನಿಸ್ಟ್ರೇಟರ್ ಗಳು] ಬೇಜವಾಬ್ದಾರಿಯಿಂದ ಪರಭಾರೆ ಮಾಡುವುದು ಹ್ಯಾಕಿಂಗಿಗೆ ಅನುಕೂಲ ಕಲ್ಪಿಸಬಹುದು.   

ಭಾರತದಲ್ಲಿ ನಗರಗಳಲ್ಲಿ, ಪಟ್ಟಣಗಳಲ್ಲಿ, ಮೇಲಾಗಿ ಹಳ್ಳಿಗಳಲ್ಲಿಯೂ ಸಹ ಕಂಪ್ಯೂಟರುಗಳ ಬಳಕೆ ದಿನೇ ದಿನೇ ಜಾಸ್ತಿಯಾಗುತ್ತಿದೆ. ನಗರಗಳಲ್ಲಿ ಗಲ್ಲಿಗಲ್ಲಿಗೆ ಎಟಿಎಂ ಗಳು ಬಂದಿವೆ. ಭರಪೂರ ಮಾಹಿತಿಯ ಮಹಾಪ್ರವಾಹ ಅಂತರ್ಜಾಲದ ಮೂಲಕ ಹರಿದಾಡುತ್ತಿದೆ. ಮಾಹಿತಿಗಳನ್ನು ಒದಗಿಸುವವರಲ್ಲಿ ಮತ್ತು ಪಡೆದುಕೊಳ್ಳುವವರಲ್ಲಿ ಪರಸ್ಪರ ಪರಿಚಯ, ನೇರಸಂಪರ್ಕ ಇರದೇ ಇದ್ದಪಕ್ಷದಲ್ಲಿ ಮಾಹಿತಿ ಕೊಡುವ ಜನ ಹತ್ತಾರುಸರ್ತಿ ಹಿನ್ನೆಲೆ ಮುನ್ನೆಲೆ ವಿಚಾರಿಸಿಕೊಂಡು, ಮಾಹಿತಿಕೇಳಿದವರಿಗೆ ಕೊಡುವುದು ಉತ್ತಮ. ಇಲ್ಲದಿದ್ದರೆ ಹ್ಯಾಕ್ ಆಗಿದೆಯೆಂದು ತಲೆಯಮೇಲೆ ಕೈಹೊತ್ತುಕೊಳ್ಳುವ ಸಂದರ್ಭ ಎದುರಾಗಬಹುದು, ಜೋಕೆ. ನಗುನಗುತ್ತಾ ಓದಲಾರಂಭಿಸಿದ ’’ಟೆಕ್ಕಾಣಿ’’ಯ ಕಥೆ ಬಹಳ ಗಂಭೀರವಾಗಿರುವುದನ್ನು ಈಗ ಕಂಡಿರಲ್ಲವೇ? ಹೇಗಿದೆ ಗುಟ್ಟು? ಜಾಗರೂಕರಾಗಿರುತ್ತೀರಲ್ಲವೇ ನೆನಪಿನಲ್ಲಿಟ್ಟು?