ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Wednesday, December 14, 2011

ಯಾವುದೋ ಕಾಣದ ಆ ಶಕ್ತಿಯ ಬಗ್ಗೆ ನಿಮಗೆ ನಂಬಿಕೆಯಿರಲಿ !


ಯಾವುದೋ ಕಾಣದ ಆ ಶಕ್ತಿಯ ಬಗ್ಗೆ ನಿಮಗೆ ನಂಬಿಕೆಯಿರಲಿ !


ಇದು ನನ್ನ ಒತ್ತಾಯವಲ್ಲ, ನಿಮ್ಮೆಲ್ಲರ ಗೆಳೆಯನಾಗಿ, ಅಂತರ್ಜಾಲದ ಮೂಲಕ ನಿಮ್ಮ ಆಪ್ತ ಸಹವರ್ತಿಯಾಗಿ ಕೊಡುತ್ತಿರುವ ನನ್ನ ಸಲಹೆ ಅಷ್ಟೇ. ಕಳೆದವಾರ ನಂಬಿಕೆಯ ಬಗ್ಗೆ ಬರೆದಿದ್ದೆ. ಆಮೇಲೆ ಅತಿಯಾದ ಕೆಲಸಗಳ ನಡುವೆ ನನ್ನ ಅಂತರ್ಜಾಲದ ’ಅಂತರ್ಜಲ’ ಕಮ್ಮಿಯಾಗಿ ಹೋಗಿತ್ತು. ಬರೆಯಲು ಮನಸ್ಸಿದ್ದರೂ ವಿಷಯಗಳು ಹಲವು ಹತ್ತು ಮನಸ್ಸನ್ನು ಮುತ್ತಿಕೊಂಡು ಬರೆಯುವಂತೇ ಒತ್ತಾಯಿಸುತ್ತಿದ್ದರೂ ಬರೆಯಲು ಸಮಯಮಾತ್ರ ಕೊನೆಗೂ ಆಗಿರಲಿಲ್ಲ. ಕೇಳದೇ ಧುಮ್ಮಿಕ್ಕಿದ ಭಾವನೆಗಳ ಜಲಪಾತದಲ್ಲಿ ಕಂಡ ದೃಶ್ಯವೇ ಕನ್ನಡ ನಾಡ ಭಕ್ತಿಗೀತೆಗಳು-ನೀವದನ್ನು ಓದಿದ್ದೀರಿ.

ನಿಮ್ಮೊಡನೆ ಬ್ಲಾಗ್ ಎರಡು ವರ್ಷಗಳನ್ನು ಪೂರೈಸಿ ಮೂರನೇ ವರ್ಷಕ್ಕೆ ಕಾಲಿಟ್ಟು ಅದಾಗಲೇ ಕೆಲವು ದಿನಗಳು ಕಳೆದವು. ಹುಟ್ಟಿದಹಬ್ಬವನ್ನು ಆಚರಿಸಿಕೊಳ್ಳುವ ಮನುಷ್ಯ ನಾನಲ್ಲ. ಸಮಾಜಕ್ಕೆ ಅಂತಹ ಕೊಡುಗೆಯನ್ನು ಕೊಟ್ಟು ಹಸಿವಿನಲ್ಲಿರುವವರಿಗೆ ಅನ್ನಕೊಡಲು ಸಾಧ್ಯವಿದ್ದರೆ, ಬಡವರ ಬಡತನಕ್ಕೆ ಕಾರಣ ಹುಡುಕಿ ಸ್ವಿಸ್ ಬ್ಯಾಂಕಿನಲ್ಲಿ ಕದ್ದೂಮುಚ್ಚಿ ಹಣವಿಟ್ಟು ಚುನಾವಣೆ ಬಂದಾಗ ಬಡವರನ್ನುದ್ಧರಿಸುವ ಸೋಗು ಹಾಕುವವರ ಆ ಕಳ್ಳಹಣವನ್ನು ತಂದು ಬೇಕಾದವರಿಗೆ, ನೊಂದವರಿಗೆ, ಆರ್ತರಿಗೆ ಹಂಚಿ ಸಮತ್ವವನ್ನು ಕಾಪಾಡಿಕೊಳ್ಳಬಹುದಾದ ತಾಕತ್ತು ನನ್ನಲ್ಲಿದ್ದಿದ್ದರೆ, ನನ್ನ ಹುಟ್ಟುಹಬ್ಬ ಎಲ್ಲರಿಗೂ ಸಂಭ್ರಮವಾದರೆ ಹೋಗಲಿ ಬಹುತೇಕರಿಗಾದರೂ ಸಂಭ್ರಮವಾದರೆ ಅದನ್ನು ಆಚರಿಸಬಹುದಿತ್ತು. ಇದು ಕೀಳರಿಮೆಯಲ್ಲ, ಇದು ಸಾಮಾನ್ಯಾತಿಸಾಮಾನ್ಯನೊಡನೆ ಸಹಜೀವನ ನಡೆಸುವ ಪ್ರವೃತ್ತಿ. ಅಂದಾದುಂಧಿ ಖರ್ಚುಮಾಡಿ, ಕೇಕು ಕತ್ತರಿಸಿ ಸಂಭ್ರಮಿಸುವ ಬದಲು ಅದೇ ಹಣವನ್ನು ಯಾರು ಅಸಹಾಯರು ಅವರಿಗೆ ನೀಡಿದರೆ ಅದರಲ್ಲಿರುವ ಖುಷಿ ನಿಜಕ್ಕೂ ಇದರಲ್ಲಿಲ್ಲ! ನನ್ನ ಮಗನಿಗೆ ಚಾಕೋಲೇಟ್ ಕೊಡಿಸುವಾಗ ಕೂಡ ಕಟ್ಟಡ ಕೂಲಿಗಳ ಮಗು ರಸ್ತೆಯಲ್ಲಿ, ಮರಳದಿಬ್ಬದಲ್ಲಿ ಹಸಿವಿನಿಂದ ಹೊರಳಾಡುದನ್ನು ಮನ ನೆನೆಯುತ್ತದೆ; ಮರುಗುತ್ತದೆ! ರಸ್ತೆಗಳಲ್ಲಿ ಡೊಂಬರಾಟನಡೆಸುವ ಎಳೆಯ ಮಕ್ಕಳನ್ನು, ಬಿಸಿಲಿನಲ್ಲಿ ಹಸಿದ ಮಗುವನ್ನು ಜೋಳಿಗೆಯಲ್ಲಿ ಹೊತ್ತು ಬೇಡುವ ತಾಯಂದಿರನ್ನೂ ನೋಡಿದಾಗ ಅಯ್ಯೋ ಎನಿಸುತ್ತದೆ. ಈ ಎಲ್ಲದರ ನಡುವೆ ನನಗೆ ಹುಟ್ಟಿದ ಹಬ್ಬದ ಸಂಭ್ರಮ ಬೇಕಾಗಿಲ್ಲ; ಅದರಂತೆಯೇ ಬ್ಲಾಗ್ ಯಾವತ್ತು ಹುಟ್ಟಿತು ಎಂಬುದನ್ನೂ ಅಷ್ಟಾಗಿ ಮತ್ತೆ ಮತ್ತೆ ಅವಲೋಕಿಸುವುದಿಲ್ಲ. ಬರೆಯುವುದಷ್ಟೇ ನನ್ನ ಆದ್ಯತೆ.

ಒಮ್ಮೆ ನಾವು ಇನ್ನೂ ದ್ವಿತೀಯ ಪಿಯೂಸಿಯನ್ನು ಓದುತ್ತಿರುವ ಸಮಯ, ನನ್ನೊಟ್ಟಿಗೆ ನನ್ನೊಬ್ಬ ಮಿತ್ರ, ಇಬ್ಬರದೂ ಒಂದು ರೂಮು, ನಮ್ಮದೇ ಅಡುಗೆ. ಒಂದು ರಾತ್ರಿ ಸುಮಾರು ೧ ಗಂಟೆಗೆ ಹೊಟ್ಟೆಯನೋವು ಎಂದು ಚೀರಹತ್ತಿದ ಆತನಿಗೆ ಏನುಕೊಡಬೇಕೆಂದು ನನಗೆ ತಿಳಿಯಲಿಲ್ಲ. ನನ್ನಲ್ಲಿ-ಅವನಲ್ಲಿ ಯಾವುದೇ ಔಷಧವಿರಲಿಲ್ಲ, ಕೆಳಮಧ್ಯಮದರ್ಜೆಯ ಪಟ್ಟಣಗಳಲ್ಲಿ ರಾತ್ರಿ ೮:೩೦ ನಂತರ ಔಷಧದ ಅಂಗಡಿಗಳು ಬಾಗಿಲು ಮುಚ್ಚಿರುತ್ತವೆ. ಯಾವುದಾದರೂ ಆಸ್ಪತ್ರೆಗೆ ಕರೆದುಕೊಂಡು ಹೋಗೋಣ ಎಂದರೆ ಯಾರಲ್ಲಿ ಕೇಳುವುದು? ಮಾರ್ನೇ ದಿನ ನನಗೆ ಪರೀಕ್ಷೆ. ಆ ಪರೀಕ್ಷೆಯೆ ನಡುವೆಯೇ ಈ ಪರೀಕ್ಷೆ! [ಆತನಿಗೆ ಅಗ ಪರೀಕ್ಷೆಯಿರಲಿಲ್ಲ ಎಂಬುದು ಸಮಾಧಾನ] ಕತ್ತಲ ದಾರಿಯಲ್ಲಿ ಆ ಅಪರಾತ್ರಿಯಲ್ಲಿ ರಸ್ತೆಹಿಡಿದು ಆತನನ್ನು ಯಾವುದಾದರೂ ಆಸ್ಪತ್ರೆಗೆ ಒಯ್ಯಲು ನನ್ನಲ್ಲಿ ಜಾಸ್ತಿ ಹಣಕೂಡ ಇರಲಿಲ್ಲ. ಹಣವಿರದಿದ್ದಾಗ ಯಾವುದೇ ಕೆಲಸವಾಗಲಿ ಅರ್ಧ ಜಂಘಾಬಲವೇ ಉಡುಗಿಹೋಗುತ್ತದೆ! ಈಗಂತೂ ಎಲ್ಲೆಲ್ಲೂ ಎಲ್ಲರಿಗೂ ಹಣವೇ ಪ್ರಧಾನ.

ಎರಡು ನಿಮಿಷ ಯೋಚಿಸಿದೆ. ನಾನೊಬ್ಬ ಭಕ್ತಿ ಭಂಡಾರಿ. ನನಗೆ ನಾನು ನಂಬಿದ ಕಾಣದ ಆ ಶಕ್ತಿಯಲ್ಲಿ ಅತೀವ ನಂಬಿಕೆಯಿದೆ. ಅದು ರಾಮನೋ ರಹೀಮನೋ ಬುದ್ಧನೋ ಕ್ರಿಸ್ತನೋ ಎಲ್ಲವೂ ಕೂಡ; ಹಲವು ರೂಪಗಳನ್ನು ಪಡೆಯಬಲ್ಲ ನಿರಾಕಾರ ರೂಪ! ನನ್ನ ಚೀಲದಲ್ಲಿ ಒಂದು ಕರಡಿಗೆಯಲ್ಲಿ ಶ್ರೀರಾಮಚಂದ್ರಾಪುರಮಠದ ಹಿಂದಿನ ಗುರುಗಳಾಗಿದ್ದ ಬ್ರಹ್ಮೈಕ್ಯ ಶ್ರೀ ರಾಘವೇಂದ್ರ ಭಾರತೀ ಸ್ವಾಮಿಗಳು ತಮ್ಮ ಕರಕಮಲದಿಂದ ಶ್ರೀರಾಮ[ಶಂಕರಾಚಾರ್ಯರಿಂದ ನೀಡಲ್ಪಟ್ಟು, ಅವಿಚ್ಛಿನ್ನವಾದ ಪರಂಪರೆಯ ಸ್ವಾಮಿಗಳಿಂದ ಸದಾ ಪೂಜೆಗೊಳ್ಳುವ]ನನ್ನು ಪೂಜಿಸಿದ್ದ ಶ್ರೀಗಂಧದ ಪ್ರಸಾದದ ಉಂಡೆಗಳು ಇದ್ದವು. ನಿತ್ಯವೂ ನಾನು ಅವುಗಳಲ್ಲಿ ಚೂರು ತುಣುಕು ತೆಗೆದು ಸ್ವಲ್ಪ ನೀರು ಸೇರಿಸಿ ಕಲಸಿ ಹಣೆಗೆ ಹಚ್ಚಿಕೊಳ್ಳುತ್ತಿದ್ದೆ. ಯಾಕೋ ಶ್ರೀರಾಮನ ಚಿತ್ರ ಕಣ್ಮುಂದೆ ಸುಳಿಯುತ್ತಿತ್ತು, ಮನಸಾ ಗುರುಪರಂಪರೆಗೆ, ಶ್ರೀರಾಮನಿಗೆ ಒಮ್ಮೆ ನಮಿಸಿ ಸ್ವಲ್ಪ ಅವೇ ಗಂಧದ ತುಣುಕುಗಳನ್ನು ಲೋಟವೊಂದರಲ್ಲಿ ಹಾಕಿ ನೀರಿನಲ್ಲಿ ಕದಡಿ ಮಿತ್ರನಿಗೆ ಕುಡಿಸಿದೆ. ಅರ್ಧಗಂಟೆಯೂ ಕಳೆದಿರಲಿಲ್ಲ, ಹೊಟ್ಟೆನೋವು ನಿಂತಿತ್ತು!

ಇನ್ನೊಂದೆರಡು ಪ್ರಸಂಗ ಹೀಗಿದೆ: ನಾನು ಓಡಿಸುತ್ತಿರುವ ಸ್ಕೂಟರಿಗೆ ಒಂದು ಕಾರು ಬಂದು ಗುದ್ದುವ ಸನ್ನಿವೇಶ ಎದುರಾಯ್ತು. ಕಾರು ಎಡದಿಂದ ನನಗೆ ತಾಗುತ್ತಿರುವುದು ಕಾಣುತ್ತಿತ್ತು; ತಪ್ಪಿಸಿಕೊಳ್ಳಲು ಸಾಧ್ಯವೇ ಇರಲಿಲ್ಲ. ಆತ ಬಹಳವೇಗದಲ್ಲಿದ್ದ. ನುಗ್ಗಿ ಬಂದ ಆತ ಎಡಕ್ಕೆ ಹೊಡೆದೇ ಬಿಟ್ಟ. ಸ್ಕೂಟರಿಗೆ ಸ್ವಲ್ಪ ಪೆಟ್ಟುಬಿದ್ದಿದ್ದು ಬಿಟ್ಟರೆ ನನಗೆ ಏನೂ ಆಗಲಿಲ್ಲ! ಗೇರುಸೊಪ್ಪೆಯ ಘಟ್ಟದ ಇಳಿಜಾರಿನಲ್ಲಿ ನಾವು ಪ್ರಯಾಣಿಸುತ್ತಿದ್ದ ಬಸ್ಸಿನ ಜಾಯಿಂಟ್ ಕಟ್ಟಾಗಿಹೋಯ್ತು. ಬಸ್ಸು ಹೇಗ್ಹೇಗೋ ಓಡಲು ತೊಡಗಿತ್ತು, ಸಾಲದ್ದಕ್ಕೆ ಬ್ರೇಕ್ ಕೂಡ ಚೆನ್ನಾಗಿರಲಿಲ್ಲ. ಡ್ರೈವರ್ ಚಿಂತೆಗೀಡಾಗಿದ್ದ. ಬಸ್ಸಿನಲ್ಲಿ ನಿದ್ದೆಮಾಡಿಕೊಂಡಿದ್ದವರನ್ನು ಬಿಟ್ಟರೆ ಮಿಕ್ಕುಳಿದವರಿಗೆ ವಿಷಯದ ಅರಿವಾಗಿತ್ತು. ಆದರೂ ಚಲಿಸುವ ವಾಹನದಲ್ಲಿ ಕುಳಿತು ಅದರ ನಿಯಂತ್ರಣ ನಮ್ಮ ಕೈಮೀರಿದಾಗ ಏನುಮಾಡಲು ಸಾಧ್ಯ ? ಇಲ್ಲೆಲ್ಲಾ ನನಗೆ ಅನಿಸಿದ್ದು ನನ್ನ ನಂಬಿಕೆ ನನ್ನನ್ನು ಇನ್ನೂ ಇಲ್ಲಿ ಉಳಿಸಿದೆ. ನನ್ನ ’ಅವತಾರ’ಕ್ಕೆ ಕರ್ತವ್ಯ ಇನ್ನೂ ಬಾಕಿ ಇದೆ!

ಚಿಕ್ಕವನಿರುವಾಗ ನಮ್ಮ ತೋಟದಲ್ಲಿ ಬಾವಿಯೊಂದನ್ನು ತೋಡುತ್ತಿದ್ದರು. ಹತ್ತಡಿ ಆಳದ ಬಾವಿಯಲ್ಲಿ ಅದಾಗಲೇ ನೀರು ಸಣ್ಣಗೆ ಜಿನುಗುತ್ತಿತ್ತು. ಕೆಸರುಸಹಿತದ ಆ ನೀರನ್ನು ಹೊರಹಾಕುವ ಕೆಲಸಕ್ಕೆ ತುಂಬಿಸಿಕೊಡುವ ಸಹಾಯಕ ನಾನಾಗಿದ್ದೆ. ಆ ದಿನ ಅಪರಾಹ್ನ ಮೂರುಗಂಟೆಯೂ ಆಗಿರಲಿಲ್ಲ. ನನಗ್ಯಾಕೋ ಕೋಪ ಬಂದಿತ್ತು; ನೀರು ತುಂಬಿಸುವುದಿಲ್ಲವೆಂದು ಜಗಳವಾಡಿ ಮೇಲಕ್ಕೆ ಹತ್ತಿ ಹೊರಟುಬಿಟ್ಟೆ. ನಾನು ಹಾಗೆ ಮಾಡಿದ ನಂತರ ಬಾವಿ ತೆಗೆಯುತ್ತಿದ್ದ ಆಳುಗಳು ತಮಗೂ ಯಾಕೋ ಸಾಕೆನಿಸಿ ಮೇಲಕ್ಕೆ ಬಂದಿದ್ದರು. ಕ್ಷಣಾರ್ಧದಲ್ಲಿ ಬಾವಿಯ ಪಕ್ಕೆ ಕುಸಿದು ಹತ್ತಾರು ಕ್ವಿಂಟಾಲು ಕಲ್ಲು ಮಿಶ್ರಿತಮಣ್ಣು ರಾಶಿ ಬಿತ್ತು! ಬಾವಿಯಲ್ಲೇ ಇದ್ದಿದ್ದರೆ ನಾವೆಲ್ಲಾ ಮಣ್ಣೊಳಗೇ ಮಣ್ಣಾಗುತ್ತಿದ್ದೆವೋ ಏನೋ.

ಇನ್ನೂ ಹಲವಾರು ಘಟನೆಗಳಿವೆ. ಇದನ್ನೆಲ್ಲಾ ನನೆಸಿದಾಗ ನನಗನಿಸಿದ್ದು ಯಾವುದೋ ಶಕ್ತಿ ನಮಗೇ ಅರಿವುಗೊಡದೆ ಸತತ ತನ್ನನ್ನು ಕೆಲಸದಲ್ಲಿ ನಿಯೋಜಿಸಿಕೊಂಡಿರುತ್ತದೆ. ನಂಬಿಕೆಯಿಂದ ಪ್ರಾರ್ಥಿಸಿದರೆ ಅದರಿಂದ ಕಷ್ಟಕ್ಕೆ ಪರಿವರ್ತನೆ ಸಿಗುತ್ತದೆ! ಪ್ರಾರ್ಥಿಸುವಾಗ ನಿಸ್ವಾರ್ಥರಾಗಿ ಪ್ರಾರ್ಥಿಸಬೇಕು. ಬರೇ ನಾನು-ನನ್ನದು ಹೆಂಡತಿ-ಮಕ್ಕಳು ಕುಟುಂಬ ಇವಷ್ಟನ್ನೇ ಅಲ್ಲದೇ " ಸರ್ವೇಷಾಂ ಮಹಾಜನಾನಾಂ ಯೋಗಕ್ಷೇಮಾಭ್ಯುದಯ ಸಿದ್ಧ್ಯರ್ಥಂ " [ಜಗತ್ತಿನ್ನ ಎಲ್ಲರ ಯೋಗಕ್ಷೇಮಾಭಿವೃದ್ಧಿಯನ್ನು ಬಯಸುವ] ಪ್ರಾರ್ಥನೆ ನಮದಾದರೆ ಅದಕ್ಕೆ ಸಿಗುವ ಫಲವೂ ಕೂಡ ದೊಡ್ಡದು.

ಇಂದಿರಾಗಾಂಧಿ ಪ್ರಧಾನಿಯಾಗಿದ್ದಾಗ ಮೀಸಾ ಕಾಯ್ದೆ ಜಾರಿಗೊಳಿಸಿ ಅನೇಕರನ್ನು ವಿನಾಕಾರಣ ಶಿಕ್ಷೆಗೆ ಗುರಿಪಡಿಸಿದ್ದಳು. ಅದೇ ಕಾಲಕ್ಕೆ ಜನ ಒಳಗೊಳಗೇ ಗುಸುಗುಸು ದಂಗೆ ಎದ್ದಿದ್ದರು. ಪರಿಸ್ಥಿತಿಯನ್ನರಿತ ಇಂದಿರಾ ಕಾಂಚಿಯ ಕಡೆಗೆ ಬಂದು ಅಲ್ಲಿನ ಪರಮಾಚಾರ್ಯರನ್ನು ಭೇಟಿಮಾಡಲು ಮುಂದಾದಳು. ನೇರಮುಖ ದರ್ಶನಕ್ಕೆ ಅವಕಾಶವೀಯದ ಪರಮಾಚಾರ್ಯರಲ್ಲಿ ತನಗೂ-ತನ್ನ ಕುಟುಂಬಕ್ಕೂ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿದರೆ ಪರಮಾಚಾರ್ಯರು ಏನೂ ಪ್ರತಿಕ್ರಿಯಿಸಲಿಲ್ಲವಂತೆ. ದೇಶಕ್ಕೆ ಒಳಿತಾಗಲಿ ಎಂದು ಕೇಳಿದಾಗ ತಮ್ಮ ಬಲಗೈಯಾಡಿಸಿ ಆಶೀರ್ವಾದವೆಂಬಂತೇ ತೋರಿದರಂತೆ! ಬರುವ ಸೌಕರ್ಯವೇನಿದ್ದರೂ ಎಲ್ಲರಿಗೂ ಬರಲಿ, ದೊರೆವ ಸುಖವೇನಿದ್ದರೂ ಎಲ್ಲರಿಗೂ ಸಿಗಲಿ. ನನಗೆ ಮಾತ್ರ ಸಿಗಬಹುದಾದ ಸುಖಕ್ಕೆ ಎಂದೂ ಹಾತೊರೆಯುವುದಿಲ್ಲ. ನಮ್ಮೂರಿನ ಗಾದೆ ’ಊರಿಗಾದ ಹಾಗೇ ಪೋರನಿಗೆ’ ! ಊರಿಗೆಲ್ಲಾ ಏನು ಲಭ್ಯವೋ ಅದೇ ನನಗೂ ಸಾಕು. ಆದರೆ ಉತ್ತಮವಾದುದನ್ನು ಸಮಾಜ ಗಳಿಸಿಕೊಳ್ಳಲು ಪರಾಶಕ್ತಿಯಲ್ಲಿ ನಂಬಿಕೆ ಬೇಕು. ಮತ್ತೆ ಸಿಗೋಣ, ಧನ್ಯವಾದ.