ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Saturday, January 22, 2011

ಪ್ರಜಾಪ್ರಭುತ್ವವೆಂಬ ಭೂತ


ಪ್ರಜಾಪ್ರಭುತ್ವವೆಂಬ ಭೂತ !


ಭೂತದ ಕಥೆಯನ್ನು ಕಳೆದವಾರ ಓದಿದ್ದೀರಿ. ಆದರೆ ’ಪ್ರಜಾಪ್ರಭುತ್ವ’ ಎಂಬ ವ್ಯವಸ್ಥೆಯೇ ಅರ್ಥಕಳೆದುಕೊಂಡು ಭೂತವಾದಾಗ ರಾಜ್ಯವೋ ದೇಶವೋ ಭೂತಾವಾಸದ ಜಾಗವಾಗುತ್ತದೆ! ಬಹಳಸರ್ತಿ ಪೌರಾಣಿಕ ಕಥಾಭಾಗಗಳನ್ನು ಹೇಳುವಾಗ ಇದನ್ನೇ ಹೇಳಿದ್ದೇನೆ. ಹಿಂದಕ್ಕೆ ಆಳುವ ದೊರೆಯನ್ನು ಜನರು ಅರ್ಥಾತ್ ಪ್ರಜೆಗಳು ಪ್ರತ್ಯಕ್ಷ ದೈವವೆಂಬಂತೇ ಕಾಣುತ್ತಿದ್ದರು. ರಾಜನೂ ತನ್ನ ಪ್ರಜೆಗಳ ಯೋಗಕ್ಷೇಮವನ್ನು ಕಾಲಕಾಲಕ್ಕೆ ವಿಚಾರಿಸುತ್ತ ಪ್ರಜಾರಂಜಕನಾಗಿ ರಾಜ್ಯಭಾರನಡೆಸುತ್ತಿದ್ದ.

ಉದಾಹರಣೆಗೆ ತೆಗೆದುಕೊಂಡರೆ ನಮ್ಮ ರಾಜ್ಯದ ಕೆಲವು ಅಣೆಕಟ್ಟುಗಳು ಮೈಸೂರು ಅರಸರ ಕಾಲದಲ್ಲಿ ನಿರ್ಮಿಸಿದವು. ಅವು ಸ್ವಾತಂತ್ರ್ಯ ಪೂರ್ವದವು. ಅಂದರೆ ಅವರಲ್ಲೂ ಅಭಿವೃದ್ಧಿಯತ್ತ ಸಾಕಷ್ಟು ಗಮನವಿತ್ತು.ಯಾವುದೇ ದೇಶದಲ್ಲಿ ಹೊಸದೇನನ್ನಾದರೂ ಕಂಡರೆ ಅದನು ತಮ್ಮ ದೇಶಕ್ಕೆ[ರಾಜ್ಯಕ್ಕೆ] ಕೊಂಡುಕೊಳ್ಳುವುದು ಯಾ ನಿರ್ಮಿಸುವುದು ಇತ್ಯಾದಿ ಕೆಲಸಗಳನ್ನು ಮಾಡುವುದರ ಜೊತೆಗೆ ಕಲೆ,ಸಂಗೀತ, ಸಾಹಿತ್ಯ, ವಿಜ್ಞಾನ, ಕೃಷಿ ಹೀಗೇ ಎಲ್ಲಾರಂಗಗಳಿಗೂ ಸಮಾನ ಮಹತ್ವನೀಡಲಾಗುತ್ತಿತ್ತು.

ಇಂದು ಯಾರೂ ರಾಜರಿಲ್ಲ, ಆದರೆ ಆಳುವ ಪ್ರತೀ ಶಾಸಕ ಯಾವ ರಾಜನಿಗೂ ಕಮ್ಮಿಯಿಲ್ಲದ ಆಸ್ತಿ ಸಂಪಾದಿಸಲು ಮುಂದಾಗುತ್ತಾನೆ. ಪ್ರತೀ ಶಾಸಕನೂ ಮೊದಲನೇ ಸಲಕ್ಕೇ ತಾನು ಮಂತ್ರಿ, ಮುಖ್ಯಮಂತ್ರಿಯಾಗಬೇಕೆಂಬ ಕನಸುಕಾಣುತ್ತಾನೆ. ಯಾರಿಗೂ ಪರಸ್ಪರರಲ್ಲಿ ಗೌರವವಿಲ್ಲ. ಎಲ್ಲಾ ದುಡ್ಡಿಗಾಗಿ ಮಾಡಿಕೊಂಡ ರಾಜಕೀಯ ದುಷ್ಟಕೂಟಗಳಾಗಿವೆ. ೨೦-೨೫ ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸುತ್ತಿರುವವರು ಚುನಾವಣೆಗೆ ನಿಲ್ಲಲು ಅರ್ಹರಾಗುತ್ತಾರೆ. ಅಪ್ಪ ರಾಷ್ಟ್ರಾಧ್ಯಕ್ಷನಾದರೆ ಮಗ ರಾಜ್ಯಾಧ್ಯಕ್ಷನಾಗುತ್ತಾನೆ! ಪಕ್ಷ ಸಂವರ್ಧನೆಯಲ್ಲಿ ಮೊದಲು ಕೊಟ್ಟು ಕರೆತಂದು ಆಮೇಲೆ ಮರಳಿ ಮೂರುಪಟ್ಟು ದೋಚುವ ಹುನ್ನಾರ-ದುರಾಲೋಚನೆ ಕೆಲವು ಪಕ್ಷಗಳದ್ದು. ಕುದುರೆ ವ್ಯಾಪಾರ, ಕುಸ್ತಿ-ಅಖಾಡ ಎಲ್ಲವೂ ಆಳುವ ಗೌರವಯುತ ಸ್ಥಾನವಾದ ವಿಧಾನಸೌಧದಲ್ಲೇ ನಡೆಯುತ್ತವೆ. ಒಬ್ಬಾತ ಅಂಗಿ ಹರಿದುಕೊಂಡು ಮೇಜು ಹತ್ತಿನಿಂತು ಬಾಯಿ ಬಾಯಿ ಬಡಿದುಕೊಂಡು ತನ್ನ ಪ್ರದರ್ಶನ ಮಾಧ್ಯಮಗಳಲ್ಲಿ ಕಾಣುವಂತೇ ಮಾಡಿದರೆ ಇನ್ನೊಬ್ಬಾತ ಹೊಡೆಯಲೇ ಹೋಗಿ ಸುದ್ದಿ ಮಾಡುತ್ತಾನೆ.

ಮಾಟ-ಮಂತ್ರಗಳು ಈ ಸ್ಥಾನದಿಂದ ಹಳ್ಳಿಯ ಮೂಲೆಯವರೆಗೂ ಮತ್ತೆ ತಲೆಯೆತ್ತುವಂತೇ ಮಾಡಿರುವ ರಾಜಕಾರಣಿಗಳು ಪರಸ್ಪರರ ಮೇಲೆ ಗೂಬೆ ಕೂರಿಸುತ್ತಾರೆ. ಆಳುವ ಪಕ್ಷದ ದೊರೆಗಳು ನುಂಗಣ್ಣಗಳಾಗುತ್ತಿರುವುದನ್ನು ಎದುರಿಗೆ ಕೂತು ಅನುಭವಿಸುವ ಹತಾಶಸ್ಥಿತಿಯಲ್ಲಿರುವ ವಿರೋಧಪಕ್ಷಗಳು ತಮ್ಮ ಘನತೆಗಳನ್ನೆಲ್ಲಾ ಗಾಳಿಗೆ ತೂರಿ ಕಾಲುಕೆರೆದು ಕೋಳಿ ಅಂಕಕ್ಕೆ ನಾಂದಿ ಹಾಡುತ್ತಾರೆ. "ಏನೋ ತಪ್ಪಾಯ್ತಪ್ಪಾ ಸರಿಮಾಡಿಕೊಂಡು ಹೋಗುತ್ತೇನೆ" ಎಂಬ ಮುಖ್ಯಮಂತ್ರಿಗೆ ಕೇವಲ ಒಂದೇ ಒಂದು ದಿನ ಸುರಳೀತ ವ್ಯವಹಾರ ಮಾಡಲು ಬಿಡುವುದಿಲ್ಲ. ಹಗಲೂ ರಾತ್ರಿ ಅಪ್ಪ-ಮಕ್ಕಳು ಸಿದ್ರಾಮಣ್ಣನೇ ಮುಂತಾದ ಕೆವರನ್ನು ಕರೆದುಕೊಂಡು ತಲೆಯಿಲ್ಲದ ಗೊಂಬೆಯಂತಿರುವ ದಿವಾನಖಾನೆಗೆ ತೆರಳುತ್ತಾರೆ. ಒತ್ತಡದಲ್ಲಿ ಗಾಳಿಬಂದ ಕಡೆ ವಾಲುವ ಗೂಟದ ಗೊಂಬೆ ಪೂರ್ವಕ್ಕೆ ನಿಂತರೆ ಒಂದು ರೂಪದಲ್ಲೂ ಪಶ್ಚಿಮಕ್ಕೆ ನಿಂತಾಗ ಇನ್ನೊಂದು ರೂಪದಲ್ಲೂ ಹಾಗೂ ಇನ್ನೆಷ್ಟು ದಿಕ್ಕುಗಳಿವೆಯೋ ಅಷ್ಟೂ ದಿಕ್ಕುಗಳಲ್ಲೂ ನಿಂತು ನೋಡಿದಾಗ ವಿಭಿನ್ನವಾಗಿ ಕಾಣುತ್ತದೆ!

ಯಾರದು ತಪ್ಪು ಯಾರದು ಸರಿ? ತಪ್ಪು ನಮ್ಮೆಲ್ಲರದು! ನೆನಪಿಡಿ ಇನ್ನೊಮ್ಮೆ ಒತ್ತಿ ಹೇಳುತ್ತೇನೆ-ತಪ್ಪು ನಮ್ಮೆಲ್ಲರದು. ನಮ್ಮ ರಾಜ್ಯಕ್ಕೆ ಯಾವುದೇ ಆಸ್ತಿಮಾಡದ ಕಡಿದಾಳ್ ಮಂಜಪ್ಪ ಅಥವಾ ಕೆಂಗಲ್ ಹನುಮಂತೈಯ್ಯನವರಂಥವರು, ನಿಜಲಿಂಗಪ್ಪನಂಥವರು ಬೇಕಾಗಿತ್ತು. ಆದರೆ ಅದೆಲ್ಲಾ ಈಗ ಇತಿಹಾಸ! ಮುಂಡಾಸು ಸುತ್ತಿದರೆ ಒಬ್ಬೊಬ್ಬರಿಗೂ ಜಾಸ್ತಿ ಬಟ್ಟೆ ಬೇಕಾಗುತ್ತದಲ್ಲಾ ಎಂಬ ಅನಿಸಿಕೆಯಿಂದ ಮಹಾತ್ಮಾಗಾಂಧಿ ಖಾದಿ ಟೋಪಿ ಧರಿಸುವಂತೇ ಎಲ್ಲರಲ್ಲೂ ಕೇಳಿಕೊಂಡರು. ಆದರೆ ಈಗ ಟೋಪಿ ಧರಿಸುತ್ತಿರುವ ರಾಜ್ಕಾರಣಿಗಳೆಲ್ಲಾ ನಾಟಕದ ಪಾತ್ರಗಳಂತೇ ಕಾಣುತ್ತಿರುವುದು ಮಾತ್ರ ವಿಪರೀತ ವಿಪರ್ಯಾಸ ಮತ್ತು ಹಾಸ್ಯಾಸ್ಪದ. ಬಡತನ ನಿರ್ಮೂಲನೆಗೆ ವಾರದಲ್ಲಿ ಒಂದುದಿನ ಉಪವಾಸವನ್ನು ಬೋಧಿಸಿದರು ಗಾಂಧಿಯವರು....ಇಂದು ನಮ್ಮಲ್ಲಿ ಉಪವಾಸ ಶಬ್ದವೇ ಊರ್ಜಿತವಿಲ್ಲ! ಅಹೋರಾತ್ರಿ ಹಣದ ಝಣತ್ಕಾರವನ್ನೇ ಕಿವಿಗೊಟ್ಟು ಆಲೈಸುವ ಮತ್ತು ಓಲೈಸುವ ಕುಟಿಲ ರಾಜಕಾರಣಿಗಳು ಪಬ್ಬು ಬಾರು ಲೈವ್ ಬ್ಯಾಂಡ್ ಗಳನ್ನೆಲ್ಲಾ ಅತೀ ಖಾಸಗಿಯಾಗಿ ಅನುಭವಿಸುತ್ತಾ ಪರರಿಗೆ ಅದನ್ನೆಲ್ಲಾ ಬಿಡಲು ಬೋಧಿಸುವವರಾಗುತ್ತಾರೆ. ತಮ್ಮ ಅಥವಾ ತಮ್ಮ ಸಹಚರರ ಅರ್ಥಾತ್ ಬಲಬಡುಕರ ಮೇಲೆ ಯಾವುದೇ ಕ್ರಿಮಿನಲ್ ಮೊಕದ್ದಮೆಗಳು ದಾಖಲಾಗದಂತೇ ನೋಡಿಕೊಳ್ಳುತ್ತಾರೆ. ಹಾಗೊಮ್ಮೆ ದಾಖಲಾದರೂ ಸಾಕ್ಷಿಗಳೇ ಸಿಗದಂತೇ ನೋಡಿಕೊಳ್ಳುತ್ತಾರೆ.

ಕುತ್ಸಿತ ರಾಜಕೀಯ ತಂತ್ರ-ಪ್ರತಿತಂತ್ರ ಮತ್ತು ಕುತಂತ್ರಗಳನ್ನು ಉಪಯೋಗಿಸುತ್ತಾ ಆಳುವ ಮತ್ತು ವಿರೋಧಿ ಪಕ್ಷಗಳು ಪರಸ್ಪರ ಕಾಲೆಳೆಯಲು ಪ್ರಯತ್ನಿಸುವುದರಲ್ಲಿ ಪ್ರಜೆಯಾದವನ ಬದುಕು ಮೂರಾಬಟ್ಟೆಯಾಗುತ್ತದೆ. ಯಾವುದೇ ಪ್ರಯೋಜನಕ್ಕೆ ಬಾರದ ಆಯೋಜನೆಗಳನ್ನು ಹುಟ್ಟುಹಾಕಿ ಹಣವಿನಿಯೋಗಿಸುತ್ತಾ ಅಲ್ಲಿಷ್ಟು ಇಲ್ಲಿಷ್ಟು ಮೇಯುವುದನ್ನು ಕಂಡರೆ ಹಿಂದಿನ ರಾಜರ ಕಾಲದಲ್ಲಿ ಈ ಗತಿಯಿರದಿದ್ದುದು ತಿಳಿಯುತ್ತದೆ. ಆಗ ಒಬ್ಬನೇ ರಾಜ ತನ್ನ ಬೊಕ್ಕಸವನ್ನು ತುಂಬಿಸಿಕೊಂಡು ಉಸ್ತುವಾರಿ ನೋಡಿಕೊಂಡಿದ್ದರೆ ಈಗ ಎಲ್ಲರೂ ತಾವು ರಾಜರೆಂದೇ ಅಂದುಕೊಳ್ಳುತ್ತಾ ಕುಳಿತಲ್ಲೇ ಕೊಪ್ಪರಿಗೆ ಹೊನ್ನನ್ನು ಬಯಸುತ್ತಾ ಲಂಚಕೋರರಾಗಿ ಬ್ರಷ್ಟಾಚಾರಿಗಳಾಗಿ ಸಿಕ್ಕಸಿಕ್ಕ ಮೂಲಗಳಿಂದ ಮೇಯಲು ತೊಡಗುತ್ತಾರೆ.

ಈ ಅಡ್ಡ ಮೇವಿನ ಹಲ್ಲಿಗೆ ಸಿಕ್ಕ ಅಧಿಕಾರಿಗಳು ತಮ್ಮ ಉಳಿವಿಗಾಗಿ ತಾವೂ ಅಡ್ಡಡ್ಡ ಮೇಯಲು ತೊಡಗುತ್ತಾರೆ. ಬ್ರಷ್ಟಾಚಾರ ನಿರ್ಮೂಲನೆ ಎಂಬ ವಿಷಯದ ಕುರಿತು ಬೆಳಿಗ್ಗೆ ವೇದಿಕೆಯಲ್ಲಿ ವ್ಯಾಖ್ಯಾನಿಸುವ ಮಂತ್ರಿಗಳು ಅದೇ ದಿನ ಸಾಯಂಕಾಲ ಸೇತುವೆ ದುರಸ್ತಿಯ ಕಾರ್ಯದಲ್ಲಿ ತನಗೆ ಬರಬೇಕಾದ ’ಪ್ರಸಾದ’ವನ್ನು ಪಡೆಯಲು ಗುಟ್ಟಾಗಿ ತೆರಳುತ್ತಾರೆ! ಮಾನಭಂಗ ಮಾಡುವವರನ್ನು ಗಲ್ಲಿಗೇರಿಸಬೇಕು ಎನ್ನುವ ರಾಜಕಾರಣಿಯ ಮೇಲೆ ದಾಖಲಾದ ಮಾನಭಂಗ ಕುರಿತ ಹಲವಾರು ಮೊಕದ್ದಮೆಗಳು ಇದ್ದಕ್ಕಿದ್ದ ಹಾಗೇ ಅನೂರ್ಜಿತಗೊಳ್ಳುತ್ತವೆ! ಚೆನ್ನಾಗಿ ಕೆಲಸಮಾಡುವ ದಕ್ಷ ಅಧಿಕಾರಿಗಳಿಗೆ ಸಿಗಬೇಕಾದ ಪುರಸ್ಕಾರಗಳು ಮತ್ತದೇ ’ಪ್ರಸಾದ’ ವಿಲೇವಾರಿ ಪ್ರಕ್ರಿಯೆಯಿಂದ ಯಾವುದೋ ದುಷ್ಟ ಅಧಿಕಾರಿಗಳಿಗೆ ಸಲ್ಲುತ್ತವೆ. ಸಾರಸ್ವತಲೋಕದಲ್ಲೂ ಇದು ಹೊರತಾಗಿರದೇ ಇತ್ತೀಚೆಗೆ ನಡೆದ ರಾಜ್ಯೋತ್ಸವ ಪ್ರಶಸ್ತಿಯ ಪಟ್ಟಿ ಹನುಮಂತನ ಬಾಲದಂತೇ ಬೆಳೆಯುತ್ತಿದ್ದುದ್ದನ್ನು ನೀವೆಲ್ಲಾ ನೋಡಿಯೇ ಇದ್ದೀರಿ. ಆ ಪಟ್ಟಿಯಲ್ಲಿ ಪುರಸ್ಕೃತರಾದವರಲ್ಲಿ ಯಾರು ನಿಜವಾಗಿ ಅರ್ಹರು ಎಂಬುದನ್ನು ಹಂಸಕ್ಷೀರನ್ಯಾಯದಿಂದ ತೆಗೆದು ನೋಡಬೇಕಾಗಿದೆ. ಯಾವುದೋ ಗೊತ್ತಿರದ ದೇಶದ ವಿಶ್ವವಿದ್ಯಾನಿಲಯ ದೂರದ-ಕಾಣದ-ಕಂಡರಿಯದ ರಾಜಕಾರಣಿಗೆ ಗೌರವ ಡಾಕ್ಟರೇಟ್ ಬಿಕರಿ ಮಾಡಿದ್ದು ಈಗ ಇತಿಹಾಸದಲ್ಲಿ ಸಿಗುತ್ತದೆ! ಇಂಥದ್ದೇ ಹಲವಾರು ವಿಶ್ವವಿದ್ಯಾನಿಲಯಗಳು ನಮ್ಮ ದೃಷ್ಟಿಕೋನದಲ್ಲಿ ಸಿಗುತ್ತವೆ!

ಯಾವುದಕ್ಕೂ ನೆಲೆಯಾಗಲೀ ಬೆಲೆಯಾಗಲೀ ಇಲ್ಲದ ಈ ಕಾಲ ನಿಜವಾಗಿಯೂ ಪ್ರಜೆಗಳು ಕಂಡ ಪ್ರಜಾಪ್ರಭುತ್ವವೆಂಬ ಭೂತ ಕುಣಿಯುತ್ತಿರುವ ಕಾಲವಲ್ಲವೇ ? ಬಡತನ ನಿರ್ಮೂಲನೆ, ಸಾಕ್ಷರತಾ ಯೋಜನೆ, ಬೆಳೆಯುತ್ತಿರುವ ಒಂದುಕಾಲದ ಅಲ್ಪಸಂಖ್ಯಾತರಿಗೂ ಇಂದು ಕಡ್ಡಾಯವಾಗಿ ಆಗಬೇಕಾದ ಕುಟುಂಬಯೋಜನೆ, ಭಿಕ್ಷುಕರ ಪುನರ್ವಸತಿ ಯೋಜನೆ, ಕುಗ್ರಾಮಗಳಿಗೆ ಮೂಲಭೂತ ಸೌಲಭ್ಯಯೋಜನೆ ---ಹೀಗೇ ಆಗಬೇಕಾದ ಎಲ್ಲಾ ಕಾರ್ಯಗಳನ್ನು ಬಿಟ್ಟು ಕಂಡಲ್ಲೆಲ್ಲಾ ಮಹಮಹಾ ರಸ್ತೆಗಳನ್ನು ನಿರ್ಮಿಸುತ್ತಾ ಚತುಷ್ಪಥ,ಪಂಚಪಥ ಮಾಡುವುದೊಂದೇ ಮಾಡಿದರೆ ಅದು ಅಭಿವೃದ್ಧಿಯ ಹಂತವೇ? ರಸ್ತೆಯನ್ನೇ ಉಣ್ಣಲೋ ತಿನ್ನಲೋ ಆಗುವುದಿಲ್ಲವಲ್ಲ, ರಸ್ತೆಯಲ್ಲೇ ಮಲಗಬೇಕಾದ ಕಾಲವನ್ನು ರಾಜಕಾರಣಿಗಳು ತಂದಿಟ್ಟರೆ ಅದು ಅನಿರೀಕ್ಷಿತವೇನಲ್ಲ! "ಭಾರತ ಬಡರಾಷ್ಟ್ರ ಭಾರತ ಬಡರಾಷ್ಟ್ರ" ಹುಟ್ಟಿದಾಗಿಂದ ಇದನ್ನ ಕೇಳುತ್ತಲೇ ಬಂದಿದ್ದೇವೆ. ನಮ್ಮೊಡನೆಯೇ ಜನಿಸಿ ನಮ್ಮ ನಡುವೆಯೇ ಇರುವ ಗುಳ್ಳೆನರಿಗಳು ಈ ಮಂತ್ರದ ಅರ್ಥವನ್ನು ಗ್ರಹಿಸಿಕೊಂಡು ಕೋಟಿಗಟ್ಟಲೇ ಕಪ್ಪುಹಣವನ್ನು ಸ್ವಿಸ್ ಬ್ಯಾಂಕಿನಲ್ಲಿ ಇಟ್ಟಿದ್ದಾರೆ. ಅದರ ವಿವರಣೆ ಬೇಕು ಎಂದರೂ ಖುದ್ದಾಗಿ ಪ್ರಧಾನಿಯೇ "ಇಲ್ಲಾ ಅದು ಅಂತರ್ರಾಷ್ಟ್ರೀಯ ವಾಣಿಜ್ಯ ವ್ಯವಹಾರಗಳ ಕಾಯ್ದೆಗೆ ಮಾಡುವ ಅಪಚಾರ, ಅದರಿಂದ ದೇಶ ದೇಶಗಳ ಸಂಪರ್ಕ ಕಡಿದುಹೋಗುತ್ತದೆ" ಎನ್ನುತ್ತಾರೆ! ಹೋಗಲಿ ಬಿಡಿ. ನಮ್ಮದಾದ ಹಣವನ್ನು ತನ್ನಲ್ಲಿರಿಸಿಕೊಂಡು ಕದ್ದೂ ಮುಚ್ಚಿ ಮಾತನಾಡುವ ಆ ದೇಶದ ಹಂಗಾದರೂ ನಮಗೇಕೆ ಬೇಕು. ಒಮ್ಮೆ ಅಲ್ಲಿರುವ ಎಲ್ಲಾ ಹಣ ಮರಳಿ ಭಾರತಕ್ಕೆ ಬಂದು ಮುಟ್ಟುಗೋಲಾಗಿ ಸರಕಾರೀ ಖಜಾನೆಯನ್ನು ಸೇರಲಿ ಎಂದರೆ ಬೆಕ್ಕಿಗೆ ಗಂಟೆ ಕಟ್ಟುವ ಪ್ರಮೇಯ ಹಲವು ರಾಜಕಾರಣಿಗಳನ್ನು ಕಾಡುತ್ತದೆ! ಎಲ್ಲರೂ ಖೂಳರೇ ಎಲ್ಲರೂ ಕಳ್ಳರೇ! ಯಾರೂ ಸಂಭಾವಿತರಲ್ಲ. ಎಲ್ಲೋ ಒಂದೆರಡು ಸುಸಂಕೃತ ವ್ಯಕ್ತಿಗಳು ಸೇವಾರ್ಥವಾಗಿ ರಾಜಕೀಯ ಸೇರಿ ಮಂತ್ರಿಗಳಾಗಿದ್ದರೆ ಅವರಿಗೆ ಮಿಕ್ಕವರು ಕೊಡುವ ಬಿರುದು" ಕೆಲಸಕ್ಕೆ ಬಾರದವರು" ಎಂಬುದು. ಅಂತಹ ಒಳ್ಳೆಯ ಮಂತ್ರಿಗಳು ಕೊಡು-ಕೊಳ್ಳುವ ವ್ಯವಹಾರ ಇಟ್ಟುಕೊಳ್ಳದೇ ಇರುವುದರಿಂದ ಬೇರೇ ಸಮಾನದರ್ಜೆಯ ಮಂತ್ರಿಗಳಿಗೆ ಯಾವುದೋ ಕೆಲಸಮಾಡಿಕೊಡಿರೆಂದು ಕೇಳುವಾಗ ’ಮಾಮೂಲಿ’ ಕೊಡುವುದು ಸಾಧ್ಯವಾಗದೇ ಕೇವಲ ನ್ಯಾಯಯುತವಾಗಿ ಕೇಳುತ್ತಾರೆ. ಹೀಗೆ ಬದುಕುವವರನ್ನು ಬೇರಾವ ಮಂತ್ರಿಗಳೂ ಮೂಸಿಯೂ ನೋಡುವುದಿಲ್ಲ;ಬದಲಾಗಿ ಮೂಲೆಗುಂಪುಮಾಡಿ ಬೇಡದ ಖಾತೆಯನ್ನು ಜಡಿದು ಕೂರಿಸುತ್ತಾರೆ!

ಅಮೇರಿಕಾದಂಥ ರಾಷ್ಟ್ರ ಬಲಿಷ್ಠವಾಗಿರುವುದು ಅಲ್ಲಿನ ರಾಜಕೀಯ ನೀತಿಯಿಂದ. ಮಿಕ್ಕೆಲ್ಲಾ ಜೀವನಶೈಲಿಗೆ ಅವರನ್ನು ನೋಡಿ ಕಲಿಯುವ ನಮ್ಮ ಜನ ರಾಜಕೀಯವನ್ನೂ ಅವರನ್ನೇ ನೋಡಿ ಕಲಿಯಬಹುದಿತ್ತು. ದಿವಾಳಿಯೆದ್ದಾಗಲೂ ಜಗತ್ತನ್ನು ನಿಯಂತ್ರಿಸುವ ತಾಕತ್ತಿದ್ದರೆ ಅದು ಅಮೇರಿಕಾಕ್ಕೆ ಮಾತ್ರ ಎಂಬುದನ್ನು ರಾಜಾರೋಷವಾಗಿ ಹೇಳಬೇಕಾಗಿದೆ. ದಿವಾಳಿಯೇಳುವುದಕ್ಕೆ ಅಲ್ಲಿನ ರಾಜಕೀಯ ವಿದ್ಯಮಾನ ಕಾರಣವಲ್ಲ, ಬದಲಾಗಿ ಅವರ ಅಸಮರ್ಪಕ ಆರ್ಥಿಕ ಠೇವಣಿಯೋಜನೆಗಳು ಕಾರಣ ಅಲ್ಲವೇ? ಇಡೀ ದೇಶದಲ್ಲಿ ಆಳುವ ಒಂದು ಪಕ್ಷ ಮತ್ತು ವಿರೋಧಿ ಸ್ಥಾನದಲ್ಲಿ ಇನ್ನೊಂದು ಪಕ್ಷ ಇದ್ದರೆ ಈ ರೀತಿ ದಿನವೂ ಗಬ್ಬುನಾರುವ ಪರಿಸ್ಥಿತಿಯ ನಿರ್ಮಾಣವಾಗುತ್ತಿರಲಿಲ್ಲ. ಇಲ್ಲಿ ಇಂದಿ ಸ್ವಾತಂತ್ರ್ಯ ಹೆಚ್ಚಾಗಿ ಮನೆಗೊಂದು ಪಕ್ಷ, ಕೇರಿಗೊಂದು, ಊರಿಗೊಂದು, ತಾಲೂಕಿಗೊಂದು ಹೀಗೇ ಸಾವಿರಾರು ಪಕ್ಷಗಳು ಅಣಬೆಕೊಡೆಗಳಂತೇ ರಾತ್ರೋರಾತ್ರಿ ಹುಟ್ಟಿ ತಂಬುಕಟ್ಟಿ ನಿಲ್ಲುತ್ತವೆ. ಅವರವರಲ್ಲೇ ಯಾವಾರ್ಗಲೋ ಹೊಂದಾಣಿಕೆ ಯಾವಾಗಲೋ ವಿಭಜನೆ ಅಂತೂ ’ಕಾರ್ಯಾವಾಸಿ ಕತ್ತೇಕಾಲು’ ಎನ್ನುವ ಗಾದೆಯ ನೆನಪಾಗುತ್ತದೆ. ಹಲವಾರು ತೇಪೆಗಳಿಂದ ಯಾವುದೇ ಮೌಲ್ಯಗಳಿಲ್ಲದೇ ಹೊಂದಾಣಿಕೆಮಾಡಿಕೊಂಡ ’ದುಪ್ಟಿ’ ಥರದ ಸಮ್ಮಿಶ್ರ ಪಕ್ಷಗಳು ಅಧಿಕಾರ ಲಾಲಸೆಯಿಂದ ಕಾಲನ್ನೆಳೆಯುವುದು ಕಾಣುತ್ತಿದ್ದರೂ ಪ್ರಜೆಗಳು ಮತ್ತದೇ ನೂರಾರು ಪಕ್ಷಗಳನ್ನು ಅನುಮೋದಿಸುತ್ತಿರುವುದು ಖೇದದ ವಿಷಾದದ ಸಂಗತಿಯಾಗಿದೆ. ಈಗ ಯಾವುದೇ ಪಕ್ಷವೆಂಬುದು ಇದ್ದರೆ ಅದು ಬರೇ ಬೋರ್ಡಿನಲ್ಲಿಮಾತ್ರ! ಇವತ್ತು ಅಲ್ಲಿರುವವರು ನಾಳೆ ಇನ್ನೆಲ್ಲೋ ಇರುತ್ತಾರೆ. ದೇಶೋದ್ಧಾರಕ್ಕಾಗಿ ಬಡವರಿಗೆ ಸೈಕಲ್ ತೋರಿಸಿದವರು ಅದೇ ಸೈಕಲ್ ಪಂಕ್ಚರ್ ಆದಾಗ ’ಕೈಬಿಟ್ಟು’ ಫಸಲಿನಾಶೆಗೆ ಹುಲ್ಲುಹೊತ್ತ ಮಹಿಳೆಯ ಪಾದಹಿಡಿಯುತ್ತಾರೆ...ಮತ್ತೆ ನಾಳೆ ಅದನೂ ಕೈಬಿಟ್ಟು "ತವರಿಗೆ ಮರಳಿದ ಸಂತೋಷ" ಎನ್ನುತ್ತಾ ಓರೆಬಾಯಲ್ಲೇ ನಗುತ್ತಾರೆ! ಇಷ್ಟೆಲ್ಲಾ ನೋಡುವಾಗ ನನಗನಿಸಿದ್ದು ಟಿವಿ ನೈನ್ ನವರ ಡೈಲಾಗು "ಹೀಗೂ ಉಂಠೇ ! "

ದಿನಕಳೆದ ಹಾಗೇ ದಿನಕಳೆಯಲೇ ಆಗದ ಪರಿಸ್ಥಿತಿ ನಿರ್ಮಾಣಮಾಡಿಕೊಳ್ಳುತ್ತಿರುವ ನಮ್ಮ ಪ್ರಜೆಗಳು ಬೆಳೆದು ನಿಂತ ಬಲಾಢ್ಯ ಭೂತವಾದ ಭಾರತೀಯ ’ಪ್ರಜಾಪ್ರಭುತ್ವ’ ಕ್ಕೆ ಬುದ್ಧಿಕಲಿಸುವರೇ ತಿಳಿಯದಾಗಿದೆ. ಕಾಲನಗರ್ಭದಲ್ಲಿ ಕಳೆದ ಮಣ್ಣಾದ ಉತ್ತಮ ರಾಜಮಹಾರಾಜರೇ ಮರಳಿಬಂದು ರಾಜಕೀಯವನ್ನು ನಡೆಸಿದರೇ ಚೆನ್ನ ಎನಿಸುತ್ತಿದೆ.