ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Monday, April 26, 2010

ನೆನೆವುದೆನ್ನ ಮನ ಶ್ರೀಗಜಾನನಅನಂತ ಶಕ್ತಿ ಸಂದೋಹ ಪೂರ್ಣಸ್ಯ ಪರಮಾತ್ಮನಃ |
ವಿಘ್ನ ವಿದ್ವಂಸಿನೀ ಶಕ್ತಿಂ ಗಜರಾಜಮುಪಾಸ್ಮಹೇ ||

ಅನಂತ ಶಕ್ತಿಗಳ ಆಗರವಾಗಿ ಭಗವಂತನ ಪೂರ್ಣರೂಪ ಪಡೆದ ವಿಘ್ನ ವಿದ್ವಂಸಕ ಶಕ್ತಿಯೇ ಶ್ರೀ ಮಹಾಗಣಪತಿ. ಗಣಗಳಿಗೆಅಧಿಪತಿಯಾಗಿ ಮೆರೆವ ಒಂದು ದೈವೀಶಕ್ತಿಯೇ ಗಣಾಧಿಪತಿ ಅಥವಾ ಗಣಪತಿ. ಈ ಗಣಪತಿ ಎಂಬ ಗಜಮುಖ ರೂಪ ವಿಶ್ವದ ಎಲ್ಲೆಡೆಜನಪ್ರಿಯತೆ ಪಡೆದ ದೈವರೂಪ. ಅನೇಕ ದೇಶಗಳಲ್ಲಿ ವಿವಿಧ ರೂಪಗಳಿಂದ ಕಂಗೊಳಿಸುವ ಮೂರ್ತಿ ಈ ವಿಶ್ವಂಭರ. ವಿಶ್ವವನ್ನೇಧರಿಸಿಯೂ ಮತ್ತು ವಿಶ್ವದೊಳಗೆ ಹೊಕ್ಕೂ ಇರುವುದರಿಂದ ಈತನಿಗೆ ವಿಶ್ವಂಭರ ಎಂಬ ಹೆಸರು. ಬಹಳ ದೊಡ್ಡ ಹಾಗೂ ಉದ್ದನೆಯಹೊಟ್ಟೆ ಇರುವುದರಿಂದ ಲಂಬೋದರ ಎಂದರೆ ಒಂದೇ ಕೋರೆ ಹಲ್ಲನ್ನು ಇಟ್ಟುಕೊಂಡಿದ್ದರಿಂದ ಏಕದಂತ ಎಂತಲೂ ಹೊಗೆಯಬಣ್ಣದಲ್ಲಿ ಕೆಲವೊಮ್ಮೆ ಕಾಣುವುದರಿಂದ ಧೂಮ್ರವರ್ಣ ಎಂತಲೂ ಕರೆಯುತ್ತಾರೆ. ಹಣೆಯ ಮೇಲೆ ಅಪ್ಪ ಕೊಟ್ಟ ಚಂದ್ರನನ್ನುಧರಿಸಿದ್ದರಿಂದ ಬಾಲಗಣಪನನ್ನು ಬಾಲಚಂದ್ರನೆಂದೂ ವಿಕಟನಾಟಕಗಳನ್ನು ಪ್ರದರ್ಶಿಸುವುದರಿಂದ ವಿಕಟನೆಂದೂ ನಾರದರುಕರೆದರು. ವಕ್ರತುಂಡನಾದ ಈತ ಕೃಷ್ಣಪಿಂಗಾಕ್ಷ ಎಂಬ ನಾಮಧೇಯವನ್ನೂ ಪಡೆದ. ಪಾರ್ವತಿಯ ಮಗನೆಂಬ ಹೆಗ್ಗಳಿಕೆಯಿಂದಅಮ್ಮನ ರಕ್ಷಣೆಯ ಬಾಗಿಲ ಭಟನಾಗಿ ಅಮ್ಮನ ಆಜ್ಞೆಯನ್ನು ಚಾಚೂತಪ್ಪದೆ ಪಾಲಿಸಿ ತನ್ನ ಪ್ರಾಣಹರಣವಾದರೂ
ಕರ್ತವ್ಯದಲ್ಲಿ ಒಮ್ಮೆ ವೀರಮರಣವನ್ನಪ್ಪಿದ್ದ ಗೌರಿಯ ಮುದ್ದುಕಂದ ಶ್ರೀಮುದ್ದುಗಣಪ. ಮೂಷಿಕಾಸುರನನ್ನು ಮರ್ದಿಸಿ ತನ್ನವಾಹನವನ್ನಾಗಿಸಿಕೊಂಡ ಇಲಿದೇರ ಈ ಬೆನಕ. ಆನೆಯ ಮೊಗವನ್ನು ಹೊತ್ತರೂ ಅಲ್ಲೇ ನಸುನಗುತ್ತಾ ಎಲ್ಲರನ್ನು ನಗಿಸುವಸ್ವಭಾವದ ಜನಪ್ರಿಯ ದೈವ ನಮ್ಮ ಜನಗಣಾಧಿಪ. ಪ್ರತಿ ಮನೆಯಲ್ಲೂ ವಾಹನದಲ್ಲೂ ಹಾದಿ ಬೀದಿಯ ಮಧ್ಯೆಯೂ ಮನೆಯಮುಂದಿನ ಕಾಂಪೌಂಡ್ ಗೋಡೆಯಲ್ಲೂ ಹೀಗೆ ಬಹುತೇಕ ಎಲ್ಲಕಡೆ ತನಗೊಂದು ಶಾಶ್ವತ ಸ್ಥಾನ ದೊರಕಿಸಿಕೊಂಡ ನಮ್ಮೀವಿನಾಯಕ ಸದಾ ವಿಶ್ವವಂದ್ಯ. ನಂಬಿದವರಿಗೆ ಇಷ್ಟಾರ್ಥಗಳನ್ನು ಇತ್ತು ಪೊರೆವ ನಮ್ಮ ಸುಮುಖ ದುರ್ಮುಖನೆಂದೂ ಕರೆದರೆ ಇಲ್ಲಾಎನ್ನಲಿಲ್ಲ.

ಸ್ಥೂಲವಾಗಿ ನಮಗೆ ಕಾಣುವ ಗಣಪತಿಯ ರೂಪಕ್ಕೆ, ಅವನ ಪ್ರತೀ ಅಂಗಾಂಗಗಳು ಇಂತಿಂಥದ್ದನ್ನೇ ತಿಳಿಸುತ್ತವೆ ಎಂಬುದುಅನೇಕರ ವಾದವಾದರೆ ಮತ್ತೆ ಮೂಲಾಧಾರ ಚಕ್ರದಲ್ಲಿ ಪ್ರತೀ ಮಾನವನಲ್ಲಿ ಇರುವ ಕುಂಡಲಿನೀ ಶಕ್ತಿಯೇ ಈ ಗಜಕರ್ಣಿಕ. ಅಥರ್ವಣ ವೇದದಲ್ಲಿ ಗಣಪತಿಯನ್ನು

ತ್ವಂ ಗುಣತ್ರಯಾತೀತಃ | ತ್ವಂ ಅವಸ್ಥಾತ್ರಯಾತೀತಃ | ತ್ವಂ ದೇಹತ್ರಯಾತೀತಃ | ತ್ವಂ ಕಾಲತ್ರಯಾತೀತಃ |ತ್ವಂ ಮೂಲಾಧಾರಸ್ಥಿತೋಸಿ ನಿತ್ಯಮ್| ತ್ವಂ ಶಕ್ತಿತ್ರಯಾತ್ಮಕಃ | ತ್ವಾಂ ಯೋಗಿನೋ ಧ್ಯಾಯಂತಿ ನಿತ್ಯಮ್ |

ಹೀಗೆಲ್ಲ ವರ್ಣಿಸಿ ಈತ ಜ್ಞಾನಮಯನೂ ವಿಜ್ಞಾನಮಯನೂ ಆಗಿದ್ದಾನೆ ಎಂದಿದ್ದಾನೆ ಸ್ವತಃ ಅಥರ್ವ ವೇದಕರ್ತ ದೇವರು!

ಮೂಲ ಪರಬ್ರಹ್ಮ ರೂಪವಾದ ಈ ಮಹಾಗಣಪತಿ ಪಾರ್ವತೀಪರಮೇಶ್ವರರ ಮಗನಾಗಿ ಗಜಮುಖನಾಗಿ ಅವತರಿಸುತ್ತಾನೆ. ಗಣೇಶಪುರಾಣದಲ್ಲಿ ಗಣಪತಿಯ ೧೭ ಅವತಾರಗಳನ್ನು ಕಾಣಬಹುದು. ತ್ರೇತಾಯುಗದಲ್ಲಿ ಮಯೂರೇಶ್ವರನಾಗಿ ಕಂಗೊಳಿಸಿದಈತ ಕಾಲಾನುಕ್ರಮದಲ್ಲಿ ಸಿಂಹವಾಹನನಾಗಿ ಅತ್ರಿ-ಅದಿತಿಗಳಿಗೂ ಮಗನಾಗಿ ಜನಿಸಿದ್ದ! ರಕ್ತಬೀಜಾಸುರನನ್ನು ಸಂಹರಿಸಿರಕ್ತಾಂಬರಧರನಾಗಿ ಕೆಂಪು ಬಣ್ಣದಿಂದ ಪ್ರಜ್ವಲಿಸಿದ. ಪಾಶ ಅಂಕುಶಗಳನ್ನು ಹಿಡಿದು ನಡೆದು ವಿಘ್ನಕರ್ತನೂ-ವಿಘ್ನಹರ್ತನೂ ಆಗಿವಿಘ್ನೇಶ್ವರನಾದ. ಐದು ಮುಖವುಳ್ಳ ಹೇರಂಭನಾದ. ಕಲಿಯುಗದಲ್ಲಿ ದ್ವಿಭುಜನಾದ.

ಗನೇಶಕವಚವೆಂಬ ಮಂತ್ರದಲ್ಲಿ--

ಧ್ಯಾಯೆತ್ ಸಿಂಹಗತಂ ವಿನಾಯಕಮಮುಂ ದಿಗ್ಭಾಹುಮಾದ್ಯೇ ಯುಗೇ |
ತ್ರೇತಾಯಂ ತು ಮಯೂರ ವಾಹನಮುಮಂ ಷಡ್ಭಾಹುಕಂ ಸಿದ್ಧಿದಂ ||
ದ್ವಾಪರೇತು ಗಜಾನನಂ ಯುಗಭುಜಂ ರಕ್ತಾಂಗರಾಗಂ ವಿಭು ತುರ್ಯೇತು |
ದ್ವಿಭುಜಂ ಸಿತಾಂಗರುಚಿರಂ ಸರ್ವಾರ್ಥದಂ ಸರ್ವದಾ ||

ಹೀಗೆ ಹೆಳಿದ್ದಾರೆ. ಗೌರಿ ತನ್ನ ಮುದ್ದು ಕಂದನಿಗೆ ರಾಕ್ಷಸ ಬಾಧೆ ತಪ್ಪಲಿ ಎಂಬ ಕಾರಣದಿಂದ ಋಷಿಗಳಿಂದ ಕೇಳಿ ಪಡೆದ ಮೂಲಗಣಪನ ಸ್ತೋತ್ರ ಇದು. ಒಂದು ಶಕ್ತಿ ತನ್ನ ರಕ್ಷಣೆಗೆ ತನ್ನಮೂಲರೂಪವನ್ನೇ ಹೇಗೆ ಬಳಸುತ್ತದೆ ಎಂದು ಇಲ್ಲಿ ಕಾಣಬಹುದು. ಇಂದಿಗೂ ’ಗಣೇಶಕವಚ’ವನ್ನು ಮಕ್ಕಳ ರಕ್ಷಣೆಗಾಗಿ ಪಠಿಸಿ ಅರ್ಚನೆಮಾಡಿ ಪ್ರಾಸದ ಕುಂಕುಮವನ್ನು ಧರಿಸುವಂತೆಯೂ ಅಥವಾ ಆಮಂತ್ರವನ್ನೇ ಯಂತ್ರರೂಪದಲ್ಲಿ/ತಾಯತರೂಪದಲ್ಲಿ ಧರಿಸುವಂತೆಯೂ ಬಳಸುತ್ತಾರೆ.

ಒಟ್ಟಿನಲ್ಲಿ ಗಣೇಶ ಎಂಬುದು ಅದೊಂದು ಅದ್ಬುತ ಶಕ್ತಿ! ಪರಮ ಚೈತನ್ಯ ! ಹಾಗಾಗಿಯೇ

ಶುಕ್ಲಾಂಬರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ |
ಪ್ರಸನ್ನ ವದನಂ ಧ್ಯಾಯೇತ್ ಸರ್ವ ವಿಘ್ನೋಪಶಾಂತಯೇ ||

--ಅಂತ ಶ್ವೇತ ಪೀತಾಂಬರ ಧಾರಿಯೂ ಸ್ವತಃ ಮಹಾವಿಷ್ಣುವೂ ಚಂದ್ರನ ಬಣ್ಣವುಳ್ಳವನೂ ನಾಲ್ಕು ಕೈ ಉಳ್ಳವನೂ ಆದಗಣಪತಿಯನ್ನು ಹೀಗೊಮ್ಮೆ ಸೌಮ್ಯವಾಗಿ ಧ್ಯಾನಿಸಿದರೂ

ವಕ್ರತುಂಡ ಮಹಾಕಾಯ ಕೋಟಿಸೂರ್ಯ ಸಮಪ್ರಭ |

ಎಂದು ತಡೆಯಲಾರದ ಬರಿಗಣ್ಣಿಂದ ನೋಡಲಾರದ ಆ ದಿವ್ಯ ಪ್ರಭೆಯನ್ನು ನಮಿಸುತ್ತೇವೆ. ಒಂದೇ ಸೂರ್ಯನನ್ನು ನೆಟ್ಟಗೆನೋಡಲಾರದ ನಾವು ಕೋಟಿಸೂರ್ಯನ ಪ್ರಭೆಯನ್ನು ನೋಡಲು ಸಾಧ್ಯವೇ ? ಆದರೂ ಮಹಾತ್ಮರಾಗಿ ಬದುಕನ್ನುಮನುಕುಲಕ್ಕಾಗಿ ಸವೆಸಿದ ಋಶಿಗಳನೇಕರು, ಮನೀಷಿಗಳು ಎಲ್ಲರ ಹಿತಕ್ಕಾಗಿ ಅವರೆಲ್ಲ ಸಾಕ್ಷಾತ್ಕರಿಸಿಕೊಂಡು ದಿವ್ಯ ಚಕ್ಷು ಪಡೆದುನೋಡಿದ ರೂಪಗಳನ್ನು ಬೇರೆ ಬೇರೆ ಶ್ಲೋಕಗಳಲ್ಲಿ ಹೀಗೆಲ್ಲಾ ಹೇಳಿದ್ದಾರೆ.


ಅಣಿಮಾ ಗರಿಮಾದಿ ಅಷ್ಟಸಿದ್ಧಿಗಳನ್ನು ತನ್ನಲ್ಲೇ ಇರಿಸಿಕೊಂಡ ಗಜಾನನನನ್ನು ಕೇವಲ ಬರವಣಿಗೆಯಿಂದ ವರ್ಣಿಸಲು ಸಾಧ್ಯವಿಲ್ಲ.

ಕವಿಂ ಕವೀನಾಂ ಮುಪವಶ್ರವಸ್ತಮಂ | ----ಕವಿಗಳಿಗೇ ಕವಿಯಾಗಿ, ಲಿಪಿಕಾರನಾಗಿ ನಮಗೆಲ್ಲ ವ್ಯಾಸರು ಹೇಲಿದ
ಮಹಾಭಾರತವನ್ನು ಭಗವದ್ಗೀತೆಯ ಸಹಿತ ಬರೆದು ಕರುಣಿಸಿದ ಗೀರ್ವಾಣ ಲಿಪಿಕರ್ತ ಜ್ಯೇಷ್ಟರಾಜನನ್ನು ನಾವು ಸಣ್ಣಕಾವ್ಯರೂಪದಲ್ಲಿ ಧ್ಯಾನಿಸಿ ಪುನೀತರಾಗೋಣವೇ ?


[ನೆನೆವುದೆನ್ನ ಮನ ಎಂದು ಮೂರಾವರ್ತಿ ಅಂದರೆ ತ್ರಿಕರಣ ಪೂರ್ವಕ ಸ್ಮರಿಸಿ ೩ ವರ್ಷಗಳ ಹಿಂದೆ ಇಡಗುಂಜಿಮಹಾಗಣಪತಿಯನ್ನು ನೆನೆದು ಬರೆದ ಭಕ್ತಿ ರೂಪ, ಆತನ ಪ್ರಸಾದ ಇಂದು ತಮ್ಮೆಲ್ಲರಿಗಾಗಿ, ಭುಂಜಿಸಿ ಕೃತಾರ್ಥರಾಗಿ --]


ನೆನೆವುದೆನ್ನ ಮನ ಶ್ರೀಗಜಾನನ

ನೆನೆವುದೆನ್ನಮನ ನೆನೆವುದೆನ್ನಮನ
ನೆನೆವುದೆನ್ನಮನ ಶ್ರೀ ಗಜಾನನ
ಕನವರಿಸುವೆ ಸದಾ ನಿನ್ನ ಸನ್ನಿಧಿಯ
ಬೆನಕ ಬಾರಯ್ಯ ಇದೊ ನೂರೆಂಟು ನಮನ || ಪ ||

ಬಾಲ ಭಾಸ್ಕರ ನೀನೆ ಕೋಟಿ ಸೂರ್ಯನು ನೀನೆ
ಕಾಲ ಗರ್ಭದಲಿ ಹುದುಗಿ ಕುಳಿತವ ನೀನೆ
ಭಾಲಚಂದ್ರನು ನೀನೆ ಧೂಮ್ರಕೇತುವು ನೀನೆ
ಲೀಲಾ ನಾಟಕ ವಿಕಟ ವಿಘ್ನಹರನು ನೀನೆ || ೧ ||

ದೇಶ ಕೋಶಗಳ ಮೀರಿದ ಮಹಿಮಾ
ದಾಶರಥಿಗೆ ಜಯ ಕರುಣಿಸಿದ ಗರಿಮಾ
ಕ್ಲೇಶನಾಶ ವಿಪ್ಲವಹರ ಲಘಿಮಾ
ವೇಶದಿ ಲಿಂಗ ಧರೆಗಿಳಿಸಿಹ ಗಣಿಮಾ || ೨ ||

ಮೋದಕ ಪ್ರಿಯ ಬಾರೊ ಮುಗ್ಧರೂಪನೆ ಬಾರೊ
ಸಾಧಕರಿಗೆ ಸಕಲ ಸಿದ್ಧಿಗಳನು ತಾರೊ
ಬಾಧಕಗಳ ನೀಗೆ ಭವಭಯಹರ ಬಾರೊ
ನಾದ ಬ್ರಹ್ಮನೆ ಬಾರೊ ರತ್ನಗರ್ಭನೆ ಬಾರೊ || ೩ ||

ರಾಶಿವಿದ್ಯೆಗಳ ಅಧಿಪತಿ ಗಣಪತಿ
ಭಾಶೆ ಸಾಲದು ನಿನಗೆ ನಮಿಸಲು ದಿನಪತಿ
ರೋಶದಿ ಚಂದ್ರನ ಶಪಿಸಿದ ಶ್ರೀಪತಿ
ಪಾಶಾಂಕುಶಧರನೆ ಮಂಗಲದಾರತೀ || ೪ ||

ಮಲಗಿಹಳಹ ನೀರೆ

ಇಡೀ ಭಾರತವನ್ನೇ ಒಂದು ನಾರಿಯ ಥರ ನೋದುವ ಪ್ರಯತ್ನ ಇದು. ಭಾರತಮಾತೆಯ ಸೊಬಗನ್ನು ನೈಸರ್ಗಿಕವಾಗಿ ಮನುಷ್ಯ ರೂಪಕ್ಕೆ ಹೊಲಿಸುತ್ತ ನಡೆದರೆ ಆಗ ನಮಗೆ ಯಾರೋ ಮಲಗಿದ ರೀತಿ ಕಾಣುತ್ತದೆಯಲ್ಲವೇ ? ನಮ್ಮ ನೋಟವನ್ನೂ ಆ ರೀತಿಯಲ್ಲಿ ಇಟ್ಟುಕೊಂಡಾಗ ಸಮೃದ್ಧ ನಾರಿಯೋರ್ವಳು ಮಲಗಿದ ರೀತಿ ಕಾಣಸಿಗುತ್ತದೆ.ಮಲಗಿಹಳಹ ನೀರೆ


ಮಲಗಿಹಳಹ ನೀರೆ ನೀರವದಿ
ಹೊಲಗಳ ಹೊದಿಕೆಯಡಿ ವಿಸ್ತಾರದಿ


ಬಣ್ಣದ ಸೀರೆ ಕುಬುಸವ ತೊಡುತಾ
ಬಿನ್ನಾಣಗಿತ್ತಿ ಮೆರುಗನು ಪಡೆದು
ನುಣ್ಣನೆ ಮೈಗೆ ಪುಣ್ಯ ನದಿಗಳಾ
ಸಣ್ಣಗೆರೆಗಳಾ ಚೌಕಳಿ ಹಿಡಿದು


ಬೆಣ್ಣೆ ಹಚ್ಚಿದ ಹಿಮದ ಜಡೆಗಳು
ಕಣ್ಮನ ತಣಿಸುವ ಶರಧಿಯ ಸೀರೆ
ತಣ್ಣನ ಪರ್ವತ ಸ್ತನಗಳ ತೋರಿ
ಉಣ್ಣಲಾಸೊಬಗನು ಹಂಚುತೆಲ್ಲರಿಗೆ


ಭೂಶಿರಗಳ ಥರ ಉದ್ದನೆ ಉಗುರು
ಭೇಷಾಗಿಹ ಕರಾವಳಿ ತೊಡೆಗಳು
ಆಶೆಯ ಚಪ್ಪಟೆ ಭೂಮಿಯ ಉದರ
ರಾಶಿ ರಾಶಿ ಮನು ಮಕ್ಕಳ ಹಡೆದು


ಹಲವು ತೆರನ ಆ ನಸುಮೈಗಂಪು
ಬೆಳವಲ ಮಡಿಲು ನಳಿದೋಳುಗಳು
ಒಲವ ಸೂಸಿ ಮಂದಸ್ಮಿತ ಸುಸ್ಮಿತ
ಬಲವು ಬ್ರಹ್ಮನದು ಕರಗಿ ಹರಿಯಲು