ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Friday, November 26, 2010

ಎಮ್ಮೆ ಕಳೆದಿದೆ !

ಎಮ್ಮೆ ಕಳೆದಿದೆ !

ಇದು ಹಳ್ಳಿಗಳ ರಿಯಾಲಿಟಿ ಶೋ ! ನೀವೂ ನೋಡಿರಬಹುದು. ಕೆಲವೊಂದು ಘಟನೆಗಳನ್ನು ನೆನಪಿಸಿಕೊಂಡರೆ ನಗಬೇಕೋ ಅಳಬೇಕೋ ತಿಳಿಯುವುದಿಲ್ಲ. ಆದರೆ ಒಮ್ಮೆ ನಕ್ಕು ಹಗುರಾಗುವುದರಲ್ಲಿ ತೊಂದರೆಯೇನಿಲ್ಲ. ಹೀಗಾಗಿ ಕಳೆದ ಎಮ್ಮೆಯನ್ನು ಹುಡುಕುವ ನೆಪದಲ್ಲಿ ಹಳ್ಳಿಯನ್ನೊಮ್ಮೆ ಸುತ್ತೋಣ ಬನ್ನಿ, ಸಿಗುವಷ್ಟು ಸಿಗಲಿ !

ಜಂಬೂಸವಾರಿ ಭಾಗ-೧


ಬೆಳ್ಳಂಬೆಳಿಗ್ಗೆಯೇ ಆಗಲಿ, ಮಟಮಟ ಮಧ್ಯಾಹ್ನವೇ ಆಗಲಿ, ಚುಮುಚುಮು ಚಳಿಯ ಸಾಯಂಕಾಲವೇ ಆಗಲಿ ಮಂಜು ಏರುವುದು ಅದೇ ಹಳೇ ಲೂನಾ. ಆತ ಹೇಳಿಕೇಳಿ ಊರ್ಕಡೆಯವ್ನಪ್ಪ ಅದಕ್ಕೇ ಆಗಾಗ ಅವನ ದರ್ಶನ ನಮಗೆಲ್ಲಾ ಕಾಯಂ ಇರ್ತಿತ್ತು. ಆತನ ವೈಶಿಷ್ಟ್ಯ ಎಂದರೆ ಎಂದೂ ಕಿಕ್ ಹಾಕಿದರೆ ಚಾಲು ಆಗದ ಆತನ ವಾಹನವನ್ನು ಒಂದಷ್ಟು ದೂರ ಆತನೇ ತಳ್ಳಿ ಓಡಿಸಿಕೊಂಡು ಹೋಗಿ ಪುರರ್ ಎಂದು ಚಾಲು ಆದ ತಕ್ಷಣ ಹಾರಿ ಕೂತು ಮುಂದೆ ಓಡುವುದು! ಹಳ್ಳಿಯಲ್ಲವೇ ಗಾಡಿಗಳೇ ಅಪರೂಪವಾದ ಕಾಲವೊಂದಿತ್ತು. ಆಗಾಗ ಅಕ್ಕ-ಪಕ್ಕದ ಮನೆಗಳವರು " ಮಂಜಣ್ಣ ಗಾಡಿ ಕೊಡ್ತೀಯಾ ಸ್ವಲ್ಪ ಪೇಟೆಗೆ ಹೋಗಿ ಬರ್ಬೇಕಿತ್ತು " ಅಂತ ಬೆನ್ನು ಹತ್ತುತ್ತಿದ್ದರು.

" ಗಾಡಿ ಕೊಡಲೇನೋ ಅಡ್ಡಿಲ್ಲ ಆದರೆ ಅದನ್ನು ಚಾಲು ನೀವೇ ಮಾಡ್ಕಂಬೆಕು " ಎಂದುಬಿಡುತ್ತಿದ್ದ. ಪ್ರಯತ್ನಿಸಿದ ಒಬ್ಬರ ಕೈಲೂ ಅದು ಸಾಧ್ಯವಾಗದೇ ಆಮೇಲಾಮೇಲೆ ’ಮಂಜಣ್ಣನ ರಥ’ ಅಂತ ಜನ ಅದನ್ನ ಕರೀತಾ ಇದ್ರು.


ಇಂತಹ ಗಾಡಿಯನ್ನು ದಸರಾ ಆಯುಧಪೂಜೆಗೊಮ್ಮೆ ಪೂಜೆ ಮಾಡ್ಸೋದು ವಾಡಿಕೆ. ಅದಕೂ ಮುಂಚೆ ಎರಡೂ ಚಕ್ರನೆಲ್ಲಾ ಚೆನ್ನಾಗಿ ತಿಕ್ಕಿ ತೊಳೆದು, ವರ್ಷಗಳಿಂದ ನೀರು ಕಂಡಿರದ ಬಾಡೀನೆಲ್ಲಾ ತೊಳ್ದು, ಹರದ್ಹೋಗಿರೋ ಸೀಟ್ ಕವರ್ ಗೆ ಹೊಲಿಗೆ ಹಾಕಿ, ಬ್ರೇಕ್ ಹಿಡಿಕೆಗೆಲ್ಲಾ ಸ್ವಲ್ಪ ಅದೇಂಥದೋ ಎಣ್ಣೆ ಹಾಕಿ.....ಹೇಳ್ತೀರೋ ಕೇಳ್ತೀರೋ ಗಾಡಿ ಮದುವಣಗಿತ್ತಿಯಂತೇ ತಯಾರಾಗುತ್ತಿತ್ತು. ಆಮೇಲೆ ಅಲಂಕಾರ ಬೇರೆ. ಒಮ್ಮೆ ಅವರಮನೆಗೆ ಯಾರೋ ಪುರೋಹಿತರೂ ಬಂದವರಿದ್ರು. ಅವರ ಹತ್ತಿರಾನೇ ಪೂಜೆ ಮಾಡ್ಸಿದ್ರೆ ಒಳ್ಳೇದು ಅಂತ ಅಂದ್ಕೊಂಡು ಪೂಜೆ ಶುರುವೂ ಆಗ್ಹೋಯ್ತು. ಪೂಜೆಗೆ ಸಂಕಲ್ಪಮಾಡುತ್ತ ’........’ ಇಂಥಾ ದೇವರ ಪ್ರೀತ್ಯರ್ಥ ಎಂದು ಹೇಳಬೇಕಲ್ಲ ...ಪುರೋಹಿತರು ಕೇಳದ್ರು...

" ತಮಾ ಈ ಗಾಡಿ ಹೆಸರೆಂಥದ ? "

" ......ಅದರ ಹೆಸ್ರು ಲೂನಾ " .

ಪುರೋಹಿತರು ಹೇಳಿದರು " ಶ್ರೀಮಹಾಕಾಳೀ ಮಹಾಸರಸ್ವತೀ ಮಹಾಲಕ್ಷ್ಮೀ ಸಹಿತ ಲೂನಾದೇವತಾಭ್ಯೋ ನಮಃ ಅತ್ರಾಗಚ್ಛಾ ಆವಾಹಯಿಷ್ಯೇ "
ಜಂಬೂಸವಾರಿ ಭಾಗ-೨

ಆ ಕಾಲದಲ್ಲಿ ಊರಲ್ಲೆಲ್ಲಾ ಕಾರು ಅಂದರೆ ಅಂಬಾಸೆಡರ್ ಮಾತ್ರ. ನಮಗೆಲ್ಲಾ ಅದನ್ನೆಲ್ಲಾ ಹೇಳುವಷ್ಟು ಪರಿಜ್ಞಾನ ಎಲ್ಲಿತ್ತು ? ಹೋಗಲಿ ಊರಿನ ಬಹಳಷ್ಟು ಜನ ಹೇಳುತ್ತಿದ್ದುದೂ ಹಾಗೇ : ’ ಅಂಬಾರಶೆಟ್ರ ಕಾರು ’ ! ಎಳವೆಯಲ್ಲೇ ನಾನೊಬ್ಬ ಕಡ್ಡಿಹಾಕಿ ಕಾರಣ ಹುಡುಕುವ ಸ್ವಭಾವದವನಿದ್ದೆನಲ್ಲ ನಾನು ತಿಳಿದುಕೊಂಡದ್ದು ಯಾರೋ ಅಂಬಾರಶೆಟ್ರು ಅಂತ ಕುಚ್ಚೀ[ಖುರ್ಚಿ]ಸಾಹುಕಾರನ ಫ್ಯಾಕ್ಟರಿಯಲ್ಲಿ ತಯಾರಾಗುವ ಈ ಕಾರಿಗೆ ಎಲ್ಲರೂ ’ಅಂಬಾರಶೆಟ್ರ ಕಾರು’ ಎನ್ನುತ್ತಾರೆ ಎಂದು. ಕೊನೆಕೊನೆಗೆ ಪಟ್ಟಣಗಳಿಗೆ ಹೋದಾಗ ಆ ಶಬ್ದದಲ್ಲಿ ಏನೋ ವ್ಯತ್ಯಾಸವನ್ನು ಜನ ಉಚ್ಚರಿಸುತ್ತಿದ್ದುದು ಗಮನಕ್ಕೆ ಬಂತು. ಅವರು ಹೇಳಿದ್ದನ್ನು ಸರಿಯಾಗಿ ತಿಳಿದು ಗಟ್ಟಿಮಾಡಿಕೊಳ್ಳುವವರೆಗೆ ಹೆಸರಿನ ಬದಲಿಗೆ ಬಳಸಬೇಕಾದಲ್ಲೆಲ್ಲಾ ’ಕಾರು’ ಎಂದು ಬಳಸುತ್ತಿದ್ದೆ. ಮರ್ಯಾದೆ ಪ್ರಶ್ನೆ ನೋಡಿ ! ಎಲ್ಲಾದ್ರೂ ಅಪ್ಪಿ ತಪ್ಪಿ ತಪ್ಪೇನಾದ್ರೂ ಹೇಳದ್ರೆ ಎಲ್ಲರೂ ನಗ್ಯಾಡು ಪ್ರಸಂಗ.


ಈ ಅಂಬಾರಶೆಟ್ರ ಕಾರಲ್ಲಿ ನಾವು ಮಕ್ಕಳು ಲೆಕ್ಕಕ್ಕೇ ಇಲ್ಲ ಬಿಡಿ, ದೊಡ್ಡವರು ೧೩ ಜನ ಮತ್ತು ಡ್ರೈವರ್--ಇದು ನಮ್ಮ ಪ್ರಯಾಣವಾಗಿತ್ತು. ಅದು ಹೇಗೆ ಕೂರುತ್ತಿದ್ದರು ಎಲ್ಲಿ ಕಾಲಿಡುತ್ತಿದ್ದರು ಇದೆಲ್ಲಾ ಕೇಳಬೇಡಿ. ಕಾರಲ್ಲಿ ಹೋಗ್ಬೇಕೋ ಹೋಗ್ಬೇಕು ಅಷ್ಟೇ ! ಕೆಲವೊಮ್ಮೆ ಇಂತಹ ಕಾರನ್ನೂ ಒತ್ತಿ ತಳ್ಳುತ್ತಾ ಚರರ್ ಚರರ್ ಚರರ್ ಚರರ್ ಚರರ್ ಎನ್ನುವ ಕಾರನ್ನು ಸುಮಾರು ಸಲ ಪ್ರಯತ್ನಿಸಿ ಚಾಲೂಮಾಡುವುದು ಅನಿವಾರ್ಯವಾಗುತ್ತಿತ್ತು. ಒಂದ್ಸಲಾ ಹೊರ್ಟ್ತು ಅಂದ್ರೆ ನಮಗೆ ಭೂಮಿಯಿಂದ ರಾಕೆಟ್ ಉಡ್ಡಯನ ಮಾಡಿದಷ್ಟು ಖುಷಿ. ಆಗಾಗ ಹಳ್ಳಿಯ ಬಸ್ಸುಗಳು ಹಾಳಾಗಿ ಬರದೇ ಇದ್ದಾಗ ಕಾರಿನ ಅನಿವಾರ್ಯತೆ ಬರುತ್ತಿತ್ತು. ಅಷ್ಟೊಂದು ಭಾರವನ್ನು ಸಹಿಸಿಯೂ ಹಳ್ಳಿಯ ಕಚಡಾ ರಸ್ತೆಗಳಲ್ಲಿ ತರಾವರಿ ಓಡಾಡುತ್ತ, ಕೆಸರುಮೆತ್ತಿದ ಟೈರುಗಳು ಹಾಳಾಗಿದ್ದು ಕಮ್ಮಿ. ಕಾರು ಕೈಕೊಟ್ಟಿದ್ದೂ ಕಮ್ಮಿ. ಅಂಬಾರಶೆಟ್ರ ಕಾರಿನ ಮುಂದೆ ಇವತ್ತಿನ ಕಾರುಗಳೆಲ್ಲಾ ಜರ್ಸಿ ದನಗಳಂತೇ ಕಾಣುತ್ತವೆ ನನಗೆ. ರಿಪೇರ್ಯೋ ರಿಪೇರಿ. ಹೊಸಕಾಲಮಾನದ ಕಾರುಗಳ ನಡುವೆ ಅಂಬಾರಶೆಟ್ರು ಅಂಬಾರ ಬಿಟ್ಟು ಭೂಮಿಗೆ ಬಿದ್ದುಬುಟ್ರು ಪಾಪ !


ಹಾಲು ತುಂಬಾ ಇದೇರಿ !

ಹಳ್ಳಿಗಳಲ್ಲಿ ಎಮ್ಮೆ ವ್ಯಾಪಾರ ನಡೆಯುತ್ತಲೇ ಇರುತ್ತದೆ. ಅವರ ಎಮ್ಮೆ ಇವರಿಗೆ ಇವರ ಎಮ್ಮೆ ಅವರಿಗೆ ಎಂದು ಮಾರಾಟಮಾಡಿಸಿಕೊಡುವ ಮಧ್ಯವರ್ತಿಗಳು ಅಲ್ಲಲ್ಲಿ ಇರುತ್ತಾರೆ. ಅವರು ಒಂದು ಸಣ್ಣ ಕೊಟ್ಟಿಗೆಯನ್ನು [ದೊಡ್ಡಿ] ವ್ಯಾಪಾರದ ಎಮ್ಮೆಗಳಿಗೇ ಅಂತಲೇ ಕಟ್ಟಿಸಿಕೊಳ್ಳುತ್ತಾರೆ. ಗಿರಾಕಿ ಸಿಕ್ಕಾಗ ಅವರನ್ನು ಹೊರಗೆ ನಿಲ್ಲಿಸಿ ಕೊಟ್ಟಿಗೆಯೊಳಕ್ಕೆ ಬರುವ ಮಧ್ಯವರ್ತಿ ತನ್ನ ಸುಪರ್ದಿಯಲ್ಲಿರುವ ಹಾಗೂ ಗಿರಾಕಿಯ ಬಜೆಟ್ ಗೆ ದೊರೆಯಬಹುದಾದ ಎಮ್ಮೆಯ ಕೆಚ್ಚಲಿಗೆ ಚೆನ್ನಾಗಿ ಒದ್ದು ಹೊರಬರುತ್ತಿದ್ದ. ಆಮೇಲೆ ಗಿರಾಕಿಯನ್ನು ಒಳಗೆ ಕರೆದು ಹಾಲುಹಿಂಡುತ್ತಾ ಜೋರಾಗಿ ಒಮ್ಮೆ ಕೂಗಿದರೆ ಎಮ್ಮೆ ಹೆದರಿ ಇಲ್ಲದ ಹಾಲನ್ನೂ ಅದೆಲ್ಲಿಂದ ಕೊಡುತ್ತಿತ್ತೋ ಗೊತ್ತಿಲ್ಲ. ಗಿರಾಕಿಗೆ ಒಪ್ಪಿಗೆಯಾಗಿ ತೆಗೆದುಕೊಂಡು ಹೋದ ಮಾರನೇ ದಿನವೇ ಮತ್ತೆ ಗಿರಾಕಿ ವ್ಯಾಪಾರಿಯನ್ನು ಹುಡುಕಿಕೊಂಡು ಮರಳಿ ಬರುತ್ತಿದ್ದ. " ನೀವು ಕೊಟ್ಟ ಎಮ್ಮೇಲಿ ಹಾಲೇ ಇಲ್ಲ ಮಾರಾರ್ಯೆ ನನಗೆ ಬದ್ಲಮಾಡ್ಕೊಡಿ " " ಓಹೋ ಅದೆಂಥದ್ರೀ ಅದು....ನಿಮ್ಗೆ ಸಾರಾವಳಿ ಇಲ್ಲ ಇಲ್ಲಾಂದ್ರೆ ಒಳ್ಳೇ ಹಾಲ್ಕೊಡ್ತಿತು " ನಂತರ ಅಂತೂ ಮಾತು ನಡೆದು ಗಿರಾಕಿಗೆ ಒಂದು ತಿಂಗಳಲ್ಲೇ ಬೇರೆ ಎಮ್ಮೆಯನ್ನು ಕೊಡುವ ಭರವಸೆಯಮೇಲೆ ಗಿರಾಕಿ ವಾಪಸ್ಸಾಗುತ್ತಿದ್ದ. ಇವತ್ತಿನ ಸುರುಟಿ ಎಮ್ಮೆಗಳಿಗೆ ಆ ರೀತಿಯ ಒಂದು ಒದೆತ ಬಿದ್ದರೆ ಎಮ್ಮೆ ನಿತ್ತಲ್ಲೇ ಚೊಂಯಪ್ಪಟ್ನ !


ಮದುವೆ ಮುಂದೆ ಹೋಗಿದೆ !

ಕಾರಣಾಂತರಗಳಿಂದ ನಮ್ಮ ಮನೆಯಲ್ಲಿ ನಡೆಯಬೇಕಾಗಿದ್ದ ಮದುವೆಯನ್ನು ಮುಂದಿನ ತಿಂಗಳು ೧೬ನೇ ತಾರೀಖಿಗೆ ಮುಂದೂಡಲಾಗಿದೆ. ಆಮಂತ್ರಣ ಸಿಗದವರು ದಯವಿಟ್ಟು ಇದನ್ನೇ ಆಮಂತ್ರಣವೆಂದು ತಿಳಿದುಕೊಳ್ಳಬೇಕಾಗಿ ವಿನಂತಿ.

ಇಂತೀ ಶ್ರೀ ರಾಮಪ್ಪನವರು ಮತ್ತು ಕುಟುಂಬ, ಬಿಟ್ಟುಬಂದಹಳ್ಳಿ

ಈ ರೀತಿಯ ಪ್ರಕಟಣೆಗಳು ದಿನಪತ್ರಿಕೆಗಳಲ್ಲಿ ನೂರಾರು ಇರುತ್ತಿದ್ದವು. ಇದು ಸಾರ್ವಜನಿಕರಿಗೆ ಸಂಬಂಧಿಸಿದ್ದೋ ಅಥವಾ ವೈಯ್ಯಕ್ತಿಕವಾಗಿ ಕೆಲವರಿಗೆ ಸಂಬಂಧಿಸಿದ್ದೋ ತಿಳಿಯುತ್ತಿರಲಿಲ್ಲ! ಈಗಲೂ ಇಂತಹ ಅನೇಕ ಜಾಹೀರಾತುಗಳು ಬರುತ್ತವೆ : ಅವು ಮುಖ್ಯ ಪತ್ರಿಕೆಯ ಭಾಗವೇ ಆಗಿ ’ಶೋಭಿಸುತ್ತವೆ’ ! ಜನ ಒಪ್ಪಲಿ ಬಿಡಲಿ ಜಾಹೀರಾತು ಕೊಡುವ ಕಂಪನಿಯವರು ದಿನಪತ್ರಿಕೆ ನಡೆಸುವ ಸಂಸ್ಥೆಗೆ ಹಣವನ್ನು ಕೇಳಿದಷ್ಟು ಕೊಡುತ್ತಾರಲ್ಲ ಅದಕ್ಕೇ. ನೀವೇ ನೋಡಿರಬಹುದಲ್ಲ ಆ ಬಜಾರು ಈ ಬಜಾರು ಅರ್ಧ ಪತ್ರಿಕೆಯ ತುಂಬಾ ಬಜಾರಿನದ್ದೇ ಕಾರುಬಾರು!


" ಅವರಮನೆ ಹುಡುಗಿಯಾ ? ಅವಳು ಕಾಗೆ " !

ಒಂದೇ ಊರಿನ ಎರಡು ತುದಿಗಳಲ್ಲಿ ಎರಡು ಮನೆಗಳವರಿದ್ದರು. ಒಬ್ಬಾತನಿಗೆ ಮದುವೆಗೆ ಬಂದ ಮಗಳು ಇನ್ನೊಬ್ಬನಿಗೆ ವಯಸ್ಸಿಗೆ ಬಂದ ಮಗ. ಆಗೆಲ್ಲಾ ಜಾತಕವನ್ನೂ ನೋಡಬೇಕಾಗಿತ್ತಲ್ಲ. ತನ್ನ ಯೋಗ್ಯತೆಗೇನೂ ಕಮ್ಮಿ ಇಲ್ಲಾ ಎಂಬುದು ಈ ಗಂಡಿನ ಅಪ್ಪನ ಅಂಬೋಣವಾದರೆ ತಮಗೆ ತಕ್ಕವರಲ್ಲಾ ಎಂಬುದು ಹೆಣ್ಣಿನ ಅಪ್ಪನ ಅನಿಸಿಕೆ. ಹೀಗಾಗಿ ಇವರಾಗಿ ಕೇಳಲಿಲ್ಲ ಅವರಾಗಿ ಕೊಡಲಿಲ್ಲ. ಯಾರೂ ಕಮ್ಮಿಯಿರಲಿಲ್ಲ ಬಿಡಿ : ಏನಿಲ್ಲದಿದ್ದರೂ ಅಹಂಭಾವಕ್ಕೇನೂ ಕೊರತೆಯಿರಲಿಲ್ಲವಲ್ಲ ! ಹುಡುಗನ ಅಪ್ಪ ಆ ಹುಡುಗಿಯ ಜಾತಕವನ್ನು ಇನ್ಯಾರದೋ ಮುಖಾಂತರ ಹೇಗೋ ತರಿಸಿ ಮೇಳಾಮೇಳೀ ನೋಡಿಟ್ಟಿದ್ದ. ಯಾವಗಲೋ ದೇವಸ್ಥಾನಕ್ಕೆ ಬಂದ ಹುಡುಗಿಯನ್ನೂ ನಖಶಿಖಾಂತ ನೋಡಿ ’ ನಮ್ಮನೆ ತಮ್ಮಂಗೆ ಇದು ಒಳ್ಳೇ ಜೋಡಿ ’ ಎಂತಲೂ ಮನಸ್ಸಲ್ಲೇ ಶರಾ ಬರೆದುಕೊಂಡಿದ್ದ ! ಹೆಣ್ಣಿನ ಮನೆಯ ಕಡೆಗೆ ಸಾಗಿ ಹೋಗುವ ಜನ ಈ ಗಂಡಿನ ಮನೆಯ ದಿಕ್ಕಿನಿಂದಲೇ ಹೋಗಬೇಕಾದುದು ಮಾರ್ಗದ ಅನಿವಾರ್ಯತೆ. ದಿನಬೆಳಗಾದ್ರೆ ಯಾರೇ ಹೊಸಬರು ಬರಲಿ " ಹೋಯ್ ನೀವು ಓ ಅವರ ಮನೆಗೆ ಹೋಗಲಿಕ್ಕೆ ಬಂದವ್ರಾ ? ಅವರ ಮನೆ ಹುಡುಗಿಯಲ್ವಾ ಅವಳು ಕಾಗೆ ....ತೊಳೆದಿಟ್ಟ ಮಸಿಕೆಂಡ " ಎನ್ನುವುದನ್ನು ಬೇಕೆಂತಲೇ ಅಭ್ಯಾಸಮಾಡಿಕೊಂಡ. ಹೇಗಾದ್ರೂ ಆ ಹೆಣ್ಣಿನ ಅಪ್ಪನನ್ನು ಬಗ್ಗಿಸಿ ತನ್ನ ಕಾಲಿಗೆ ಬೀಳಿಸಿಕೊಳ್ಳಬೇಕೆಂಬುದು ಇವನ ಬಯಕೆ. ಬಂದ ಹಲವು ಪರವೂರ ಸಂಬಂಧಗಳು ನಡುದಾರಿಯಿಂದಲೇ ವಾಪಸ್ಸಾಗುವಂತೇ ನೋಡಿಕೊಂಡ ಹೆಗ್ಗಳಿಗೆ ಶ್ರೀಮಾನ್ ಇವರದು ! ಕೊನೆಗೂ ಅದೆಲ್ಲಿಂದಲೋ ಬಂದ ಜೀಪು ತುಂಬಾ ಇದ್ದ ಜನ ಈತ ಕೈಅಡ್ಡಹಾಕಿದರೂ ನಿಲ್ಲಿಸದೇ ಮುಂದಕ್ಕೆ ಹೋಗೇ ಬಿಟ್ಟರು. ಕಪ್ಪಿನ ಕಾಗೆ ಬೆಳ್ಳನ ಗುಬ್ಬಚ್ಚಿಯಾಗಿ ಬುರ್ರನೆ ಹಾರೇ ಹೋಯಿತು !


ಎಮ್ಮೆಕಳೆದಿದೆ !

ನಮ್ಮ ಹತ್ತಿರದ ಸಂಬಂಧಿಕರೊಬ್ಬರಿಗೆ ದಿನಪತ್ರಿಕೆಯಲ್ಲಿ ಒಳಪುಟಗಳನ್ನು ಚಾಚೂ ತಪ್ಪದೇ ಓದುವ ಚಟ ! ಪತ್ರಿಕೆಗೆ ಕೊಡುತ್ತಿದ್ದ ಕಾಸಿಗೆ ಬಡ್ಡೀ ಸಮೇತ ಹಿಂಪಡೆದ ರೀತಿ ಒಂದೇ ಒಂದೂ ಇಂಚನ್ನೂ ಬಿಡದೇ ಮಗುಚಿ ತಿರುವಿ ಓದೇ ಓದುತ್ತಿದ್ದರು. ಪತ್ರಿಕೆಯನ್ನು ಕೆಲವು ಶಾಲಾಮಕ್ಕಳು ಪುಸ್ತಕ ಓದಿದಂತೇ ದೊಡ್ಡದಾಗಿ ಓದುವುದು ಬೇರೆ ಅವರ ಕೆಟ್ಟಚಾಳಿ. ಆಗೆಲ್ಲಾ ನಮ್ಮಲ್ಲಿಗೆ ಹುಬ್ಬಳ್ಳಿಯಿಂದ ’ಸಂಯುಕ್ತ ಕರ್ನಾಟಕ’ ಬರುತ್ತಿತ್ತು. ಒಳಪುಟಗಳ ತುಂಬಾ ವೈಕುಂಠಸಮಾರಾಧನೆ, ಶಿವಗಣಾರಾಧನೆ, ವಿವಾಹ ಮುಂದೂಡಿಕೆ ಇಂಥದ್ದೇ ಬರಹಗಳು. ಮಧ್ಯೆ ಮಧ್ಯೆ ಅವರೂ ಇವರೂ ಕಳೆದುಹೋದವರ ಸುದ್ದಿ ಇರುತ್ತಿತ್ತು. ಒಮ್ಮೆ ನಮ್ಮನೆಗೆ ಬಂದವರು ಲೋಕಾಭಿರಾಮವಾಗಿ ಬೆಳಗಿನ ಚಾ ಕುಡಿದಮೇಲೆ ಪತ್ರಿಕೆ ಓದಲು ಪ್ರಾರಂಭಿಸಿದರು. ’ ಹುಬ್ಬಳ್ಳಿಯಲ್ಲಿ ಹಳೇಹುಬ್ಬಳ್ಳಿಯ ಇಂಥಾ ಕಡೆಯಲ್ಲಿ ಇಂಥವರಿಗೆ ಸಂಬಂಧಿಸಿದ ಎರಡು ಎಮ್ಮೆಗಳು ಮೇಯಲಿಕ್ಕೆ ಬಿಟ್ಟಿದ್ದು ಮರಳಲಿಲ್ಲ, ಹುಡುಕಿಕೊಟ್ಟವರಿಗೆ ಸೂಕ್ತ ಬಹುಮಾನ ಕೊಡಲಾಗುವುದು. ಯಾರಾದರೂ ನೋಡಿದಲ್ಲಿ ವೀರನಗೌಡ್ರ ಸಂಗನಗೌಡ್ರ ಕೇರಾಫ ಇಂಥಾ ವಿಳಾಸಕ್ಕೆ ತಿಳಿಸುವುದು. ಬಾಕಿ ಸಂಗ್ತಿ ಮೊಖ್ತಾ ’ ! ಪುಣ್ಯಾತ್ಮ ಪಠಿಸುತ್ತಿದ್ದುದನ್ನು ಕೇಳುವುದೇ ಮಜವಾಗಿರುತ್ತಿತ್ತು. ನಿಮಗೂ ಇಂಥವರು ಸಿಗುತ್ತಾರೆ : ಬಸ್ಸಿನಲ್ಲಿ ದಿನಪತ್ರಿಕೆ ಕೈಯ್ಯಲ್ಲಿ ಹಿಡಿದುಕೊಳ್ಳಿ ಸ್ವಲ್ಪ ಹೊತ್ತಿನಲ್ಲೇ ಬುಲಾವ್ ಬರುತ್ತದೆ-ಪತ್ರಿಕೆಗೆ! " ಸ್ವಲ್ಪ ಪೇಪರ್ ಕೊಡ್ತೀರಾ ? " ಕೊಟ್ಟರೆ ನೀವೇ ಮರಳಿ ಕೇಳಿ ಪಡೆಯಬೇಕು. ಇಲ್ಲದಿದ್ದರೆ ಅವರು ನಾವು ಕೊಟ್ಟ ದುಡ್ಡಿಗೆ ತಾವು ಬಡ್ಡೀ ಪಡೆಯಲಿಲ್ಲವೆಂಬ ರೀತಿಯಲ್ಲಿ ಕಳೆದುಹೋದ ಎಮ್ಮೆಯನ್ನೋ ಹೋರಿಯನ್ನೋ ಹುಡುಕುತ್ತಿರುತ್ತಾರೆ! ಬಿಟ್ಟಿಯಲ್ಲಿ ತಿನ್ನುವ ಹಣ್ಣೇ ಅಷ್ಟೊಂದು ರುಚಿಯೇ ? ಇಷ್ಟೇ ಅಲ್ಲ, ವ್ಯಾವಹಾರಿಕ ದಿನಗಳಂದು ಬೇರೆಬೇರೇ ಕಚೇರಿ, ಬ್ಯಾಂಕು ಇಂಥಲ್ಲೆಲ್ಲಾ ಪೆನ್ನು ಕೇಳುವ ಜನ ಸಿಗುತ್ತಾರೆ. ಪೆನ್ನು ಬಳಸಿಕೊಂಡಮೇಲೆ ಮರಳಿಕೊಡುವವರೇ ಕಮ್ಮಿ, ಕೊಟ್ಟರೂ " ತಗೋಳಿ " ಅಂತ ನಮ್ಮೆಡೆಗೆ ಬಿಸಾಕಿ ಹೋಗುತ್ತಾರೆ! ಇಂಥವರಿಗೆಲ್ಲಾ ಸಾಮಾನ್ಯ ಜ್ಞಾನ ಇರುವುದೇ ಇಲ್ಲವೇ ? ಎಲ್ಲೆಲ್ಲಿಗೆ ಹೋದಾಗ ಏನೇನು ಬೇಕಾಗುತ್ತದೆ ಎಂಬ ಒಂಚೂರೂ ಪರಿಜ್ಞಾನ ಇರುವುದಿಲ್ಲವೇ ?

ಮತ್ತೆ ಸಿಗೋಣ, ನಿಮ್ಮಲ್ಲಿ ಎಲ್ಲಾದ್ರೂ ಎಮ್ಮೆ ಕಳೆದಿದ್ರೆ ದಿನಪತ್ರಿಕೆಯಲ್ಲಿ ಪ್ರಕಟಿಸುವುದನ್ನು ಮರೆಯಬೇಡಿ!