ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Saturday, January 23, 2010

ಅತಿ ಸಣ್ಣ ಕಥೆಗಳು


ಅತಿ ಸಣ್ಣ ಕಥೆಗಳು

ಅವಳು ಅಪ್ರತಿಮ ಸುಂದರಿ. ಆಗಾಗ ದಿನಸಿ ಕೊಳ್ಳಲು ಬರುವಳು. ಬೇಕಾದ ಸಾಮಾನಿನ ಚೀಟಿ ತರುತ್ತಿದ್ದಳು. ದುಡ್ಡುಕೊಟ್ಟು ತೆಗೆದುಕೊಂಡು ಹೋಗುತ್ತಿದ್ದಳು,ಮಾತೇ ಅಡುತ್ತಿರಲಿಲ್ಲ. ಶೆಟ್ಟರ ಮಗನಿಗೆ ಒಳಗೊಳಗೇ ಅಂಥಾ ಪ್ರೀತಿ, ಬಿಟ್ಟಿರಲಾರದ ಬಯಕೆ.ಅಂಗಡಿಯನ್ನಾದರೂ ಬಿಟ್ಟೇನು ಅವಳನ್ನು ಬಿಡೆ-ಮದುವೆಯಾದರೆ ಅವಳನ್ನೇ ಎಂಬ ತುಡಿತ.ಅಂದು ಬಂದಿದ್ದಳು-ಚಿಕ್ಕಮ್ಮನೊಡನೆ, ಅವಳೊಡನೆಯೂ ಮಾತಾಡುತ್ತಿರಲಿಲ್ಲ, ಎರ್ಡು ನಿಮಿಷಗಳ ಬಳಿಕ ಸನ್ನೆ ಮಾಡಿದಳು. ಶೆಟ್ಟರ ಮಗನಿಗೆ ಅರ್ಥವಾದಾಕ್ಷಣ ಕುಸಿದು ಹೋದ.

-----------

ಅವನೂ ಅವಳೂ ಅಲ್ಲೇ ಕೆಲಸಮಾಡುತ್ತಿದ್ದರು. ಎಂದೂ ಪರಸ್ಪರ ಮಾತಾಡಿರಲಿಲ್ಲ. ಕಣ್ಣಲ್ಲೇ ಮಾತನಾಡುತ್ತಿದ್ದರು. ದಿನಗಳು ಸರಿದುಹೋದವು. ನಾಲ್ಕಾರುದಿನ ಆಕೆ ಬಂದಿರಲಿಲ್ಲ. ಅವನಿಗೆ ಆತಂಕ. ಆದರೆ ಯಾರಲ್ಲಿಯೂ ಹೇಳಿಕೊಳ್ಳಲಾರ. ಮತ್ತೆ ಬಂದಳು- ಆಮಂತ್ರಣ ತಂದಿದ್ದಳು, " ಬನ್ನಿ,ನನ್ನ ಮದುವೆಗೆ ಫೆಬ್ರುವರಿ ೧೪ ರಂದು " .

-----------

ಡಾಕ್ಟರು ಮೊದಲು ಏನೂ ಹೇಳಿರಲಿಲ್ಲ, ಮಾಮೂಲಿ ಸಿಸೇರಿಯನ್ ಆಗಿರೋದ್ರಿಂದ ಆತ ಜಾಸ್ತಿ ಕೇಳಿರಲೂ ಇಲ್ಲ. ಗಡಿಬಿಡಿಯಲ್ಲಿ ಆತನ ಹೆಂಡ್ತಿಗೆ ಆಪರೇಶನ್ ನಡೆದೇ ಹೋಯಿತು.ಇನ್ನೇನು ಬಿಡುಗಡೆಮಾಡಿ ಕಳಿಸಬೇಕು.ಬಿಲ್ಲು ಕೊಟ್ಟರು, ಆತ ಹೇಳಿದ "ಬಿಡಿ ಡಾಕ್ಟ್ರೇ ನಂಗೊಂಥರಾ ಎದೆಯಲ್ಲಿ ಏನೋ ಆಗ್ತಾ ಇದೆ, ನಾನೂ ಇಲ್ಲೇ ಎಡ್ಮಿಟ್ ಆಗ್ತೀನಿ"

-----------

ಮುಂದಿನವಾರ ಸಂಕ್ರಾಂತಿ. ಅವರದ್ದು ಕೂಲಿ ಬದುಕು. ಚಿಕ್ಕ ಮಕ್ಕಳು, ಬೇಡುತ್ತವೆ: ಎಳ್ಳು-ಬೆಲ್ಲದ ಜೊತೆ ಸಿಹಿ ತಿಂಡಿ ಮಾಡಲು ಲೆಕ್ಕಹಾಕಿಕೊಂಡರು. ಅದಕ್ಕೆ ತಕ್ಕದಾಗಿ ಹಣಹೊಂದಿಸಿದರು.ಹಬ್ಬ ಬಂದೇಬಿಟ್ಟಿತು, ಅಂಗಡಿಗೆ ಹೋದಾಗ ಶೆಟ್ಟರು ಹೇಳಿದರು "ಸಕ್ರೆ ನಿಮ್ಕೈಗೆ ಸಿಗಲ್ಲ ಬಿಡಿ"

------------

ಆತ ವ್ಯಕ್ತಿಶಃ ತುಂಬಾ ಒಳ್ಳೆಯವನು. ಕಾರು,ಮನೆಯನ್ನೆಲ್ಲ ಸಾಲದಲ್ಲಿ ಕೊಂಡುಕೊಂಡಾಗಿತ್ತು. ಆಗಷ್ಟೇ ಮದುವೆಯಾಗಿತ್ತು ಬೇರೆ. ’ಸಾಫ್ಟ್ ವೇರ್ ಎಂಜಿನೀಯರ್’ ಎಂದು ಹುಡುಗಿ ಕೊಟ್ಟಿದ್ದರು. ಹಲವರನ್ನು ಕೆಲಸದಿಂದ ತೆಗೆದಿದ್ದರು;ಕೆಲಸದಲ್ಲಿ ತಪ್ಪಿರದಿದ್ದರೂ. ಒಂದಾವರ್ತಿ ಎಲ್ಲ ಮುಗಿಯಿತು. ತನಗೆ "ಗುಡ್ ಪರ್ಫಾರ್ಮರ್" ಎಂಬ ಸರ್ಟಿಫಿಕೇಟ್ ಕೊಟ್ಟಿದ್ದರು. ತನಗಂತೂ ತೊಂದರೆಯಿಲ್ಲ ಎಂದುಕೊಂಡಿದ್ದರೂ ಆ ದಿನ ಬಂದೇ ಬಿಟ್ಟಿತು. ಕೆಲವುದಿನಗಳ ನಂತರ ಪೇಪರ್ನಲ್ಲಿ ಬಂದಿತ್ತು "ಕಾಣೆಯಾಗಿದ್ದಾರೆ".

-------------

ಝಣಝಣ ಕಾಂಚಾಣ



ಝಣಝಣ ಕಾಂಚಾಣ




ಝಣ ಝಣ ಝಣಝಣ ಕಾಂಚಾಣ
ಕಿಂಕಿಣಿ ವಡ್ಯಾಣ |
ಝಣ ಝಣ ಝಣಝಣ ಕಾಂಚಾಣ

ಹದಿನಾಲ್ಕು ಲೋಕದೊಳು ನಿನ್ನ
ಹೊಗಳುವರೋ ರನ್ನ |
ನಿಧಿಯಿರಲು ನೀನೇ ಬಲುಚೆನ್ನ

ಹಲವರಿಗೆ ನೆಂಟನು ನೀನಣ್ಣ
ಹಣವಿರೆ ತಿಮ್ಮಣ್ಣ !
ಹಣವಿರದಿರೆ ನೀನೇ ತಿಪ್ಪಣ್ಣ !

ಘನಕಾರ್ಯಕೆ ಅತಿಥಿಗಳು ತಾವು
ಬೆಂಬಿಡರೀ ಜನವು |
ಧನಶಂಕರಿ ಹರಿಸಿರಲು ಒಲವು

ತಿರುಪತಿಯಲಿ ದರುಶನವು ತಮಗೆ
ಬೇಕಷ್ಟು ಘಳಿಗೆ !
ಗರಿನೋಟು ನಗಣಿತವೆನಿಸಿದಗೆ

ವೈದ್ಯರಾಜ ಬರುವರು ತಮ್ಮನೆಗೆ
ತಾವಿರುವ ಎಡೆಗೆ |
ವೇದ್ಯವಿಪ್ಪ ಸಂಪತ್ತಿರುವರೆಗೆ


ರಾಜಕೀಯ ಸ್ಥಾನಕೆಶುಭಮಸ್ತು
ಪಕ್ಷದಲೀ ಒತ್ತು |
ಚಲಿಸಿ ತಾವು ಹೇಳಿರೆಶ್ರೀರಸ್ತು

ಮಾಧ್ಯಮದಲಿ ತಮದೇ ಆರ್ಭಟವು
ಸಾಕಷ್ಟು ದಿನವು |
ಆದ್ಯತೆಯಲಿ ಕಳಿಸಿರೆಸಂಪದವು

ಜನಮನ್ನಣೆ ಮಾನ ಸನ್ಮಾನ
ಕಾಸಿರುವಾವರೆಗೆ |
ಮನದನ್ನೆಗೆ ದಕ್ಕೀತು ಬಹುಮಾನ

ಜನಸಾಗರ ಹರಿಸಿರೆ ಮೆರವಣಿಗೆ
ನೀಹೋದಾ ಹೊತ್ತು |
ನುಡಿಸಾವಿರ’-ಪತ್ರಿಕೆ ಬರವಣಿಗೆ
-----