ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Wednesday, January 2, 2013

ಜಗದ ಮಾಯದಾಟಗಾರ

ಚಿತ್ರ ಋಣ : Ta Prohm Temple, Cambodia
Photograph by Peter Nijenhuis , www.InterestingPlac.es

ಜಗದ ಮಾಯದಾಟಗಾರ
[ಸನ್ಮಿತ್ರರೇ, ನಿಸರ್ಗದ ಕೌತುಕವನ್ನು ಬಣ್ಣಿಸುವುದು ಕಬ್ಬಿಗನ ಕನಸು. ಸದಾ ಹಲವಾರು ಸಾಂಸಾರಿಕ ವಿಷಯಗಳೇ ಎಡತಾಕಿರುವಾಗ ಅವುಗಳನ್ನು ಬಿಟ್ಟು ಹೊರಜಗತ್ತನ್ನು ಬೆರಗುಗಣ್ಣುಗಳಿಂದ  ಕಾಣುವ ಮನೋವೃತ್ತಿಗೆ ಹೂತ ಹುಣಿಸೇ ಮರವೂ ಕವನಕ್ಕೆ ವಿಷಯವಾದೀತು ಎಂದು ಬೇಂದ್ರೆ ಹೇಳಿದ್ದಾರೆ; ಅದನ್ನೇ ಕವನಿಸಿದ್ದಾರೆ. ಕಾಂಬೋಡಿಯಾದ/ ಈ ಜಗತ್ತಿನ ಅತೀ ಪುರಾತನ ಬೃಹದ್ದೇಗುಲವನ್ನು ಕಾಣುವಾಗ ಮನಸ್ಸಿಗೆ ಅಂಥದ್ದೇ ಭಾವ, ಆ ಭಾವಗಳ ಮಜಲಿನಲ್ಲಿ ಹುಟ್ಟಿದ್ದು ಈ ಕವನ, ಒಪ್ಪಿಸಿಕೊಂಡು ಓದುವ  ನಿಮ್ಮೆಲ್ಲರಿಗೂ  ಅನಂತ ಮುಂಗಡ ಧನ್ಯವಾದಗಳು  :   ]

ಮಗುವದೊಂದು ಆಟಕೆಳಸಿ ಬುಗುರಿಯನ್ನು ಚಲಿಸಿತು
ನಿಗದಿಗೊಂಡ ಸಮಯವಿಲ್ಲ ಸೊಗೆದೆಳೆಯುತ ನಲಿಯಿತು |
ನೆಗೆದು ನೆಗೆದು ಹಾರಿ ಕುಣಿದು ಹಗುರಗೊಂಡ ಸೊಬಗಲೂ
ಮುಗುದಮನಕೆ ಬೇಡವಾಯ್ತು ಬುಗುರಿಯಾಟ ನಲಿವಲೂ !

ಯುಗದ ಧರ್ಮ ಬಗೆಯ ಕರ್ಮ ಬಂಧಗಳಲಿ ಸಿಲುಕುತ
ಹೆಗಲಮೇಲೆ ಭಾರಹೊತ್ತು ಮುಗಿಯದಂತೆ ನಡೆಯುತ |
ಚಿಗರೆಕಂಡ ಸೀತೆ ತೆರದಿ ಹಲವು ಪಡೆವ ಹಂಬಲ
ಚಿಗಿತ ವಿಷಯಲೋಲುಪತೆಯು ನಿಗಮ ದುಃಖಕೆ ಬೆಂಬಲ !  

ಸೊಗದ ಮಾಯದಾಟಗಾರ ದಾಳಗಳನು ಬೀಸುವ
ಮೊಗವ ತೋರ ಸನಿಹಬಾರ ರೂಪದಲ್ಲಿ ಇರನವ |
ಯುಗಯುಗದಲು ಬರುವೆನೆಂದ ಗೀತೆಯಲ್ಲಿ ಮಾಧವ
ನೊಗವನೆಳೆವ ನಮಗದೆಲ್ಲಿ ಎಂದು ಕಾಂಬೆ ಕೇಶವ ?

ಸಗರಪುತ್ರರಿಂಗೆ ನಾಕ ಕರುಣಿಸಲ್ಕೆ ದೇಶದಿ
ಮಿಗಿಲುಗೊಂಡು ತುಂಬಿಹರಿದಳ್ ದೇವಗಂಗೆ ಕೋಶದಿ |
ಒಗೆದು ಬೆಳಕ ಚೆಲ್ಲಿ ಜೀವಕೋಟಿಗಳನು ಸಲಹುವ
ಮುಗಿದು ಕಯ್ಯ ಕಟ್ಟಿದರಸ ಭಾನುಗೊಂದು ಭವನವ ||

ಜಗದ ದೇವ ಯುಗದ ದೈವ ಬಗೆವುದೆಲ್ಲ ತಿಳಿಯದು
ನಗದು ರೂಪ ಬಿಗಿಯ ಸಡಿಲಿಸುತ್ತಲೊಮ್ಮೆ ನಗುವುದು |
ಸಿಗುವುದಿಲ್ಲ ನಮ್ಮ ಕಣ್ಗೆ ನಮ್ಮೊಳಗವಿತಿದ್ದರೂ
ಸಿಗದ ಸೂತ್ರ ಹಿಡಿದು ಜಗವ ಕುಣಿಸಿ ನಡೆಸುತಿರುವುದು ||