ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Saturday, March 3, 2012

ಚಿಕ್ಕದನ್ನು ದೊಡ್ಡದಾಗಿ ಮಾಡಿ ಸಂಭ್ರಮಿಸುವ ಸಂಭ್ರಮ !

ಚಿತ್ರಕೃಪೆ: ಅಂತರ್ಜಾಲ

ಚಿಕ್ಕದನ್ನು ದೊಡ್ಡದಾಗಿ ಮಾಡಿ ಸಂಭ್ರಮಿಸುವ ಸಂಭ್ರಮ!

ಚಿಕ್ಕದೊಂದು ವಿಷಯವನ್ನು ದೊಡ್ಡದಾಗಿ ಹೇಳಿ ಸಂಭ್ರಮಿಸುವ ಪರಿಪಾಟ ನಮ್ಮಲ್ಲಿ ಅನೇಕರಿಗೆ ಇರುತ್ತದೆ. ಅದು ತಪ್ಪು ಎನ್ನುವುದಿಲ್ಲ. ಆದರೆ ಚಿಕ್ಕದನ್ನೇ ದೊಡ್ಡದನ್ನಾಗಿ ಮಾಡುವ/ಬೆಳೆಸುವ ಸ್ವಭಾವ ಕೆಲವೊಮ್ಮೆ ಹೋದಲ್ಲೆಲ್ಲಾ ಅದನ್ನೇ ಮಾಡುವುದು ಅರಿವಿಗಿಲ್ಲದೇ ನಡೆದುಬಿಡುತ್ತದೆ. ಕೆಲವೊಮ್ಮೆ ಚಿಕ್ಕದನ್ನು ದೊಡ್ಡದನ್ನಾಗಿ ಮಾಡಲೇಬೇಕಾದ ಅನಿವಾರ್ಯತೆ ಬಂದುಬಿಡುತ್ತದೆ! ಅದಕ್ಕೊಂದು ಚಿಕ್ಕ ಉದಾಹರಣೆ: ನಮ್ಮೂರಕಡೆ ಹಳ್ಳಿಯ ರಸ್ತೆಯಲ್ಲಿ ರಾತ್ರಿ ಹೊತ್ತಿನಲ್ಲಿ ಒಬ್ಬ ಅನಿರೀಕ್ಷಿತವಾಗಿ ಸೈಕಲ್ ಏರಿ ಹೊರಟ. ಅವನು ತುರ್ತಾಗಿ ತಾಲೂಕಾ ಪ್ರದೇಶವನ್ನು ತಲ್ಪಲೇಬೇಕಾದ ಅನಿವಾರ್ಯತೆ ಇತ್ತಂತೆ. ಹೋಗುತ್ತಾ ಹೋಗುತ್ತಾ ತಾಲೂಕು ಕೇಂದ್ರ ತಲುಪುವಾಗ ಪಟ್ಟಣದ ವ್ಯಾಪ್ತಿ ಬರುತ್ತದಲ್ಲಾ....ಅಲ್ಲಿ ಪೋಲೀಸನೊಬ್ಬ ಕೈ ಅಡ್ಡಹಾಕಿ ನಿಲ್ಲಿಸಿದ್ದಾನೆ.


" ಹೇಯ್ ನಿಲ್ಲು "

ಸೈಕಲ್‍ನಲ್ಲಿದ್ದವನಿಗೆ ಉಚ್ಚೆ ಬರುವುದೊಂದು ಬಾಕಿ! ಯಾಕೆಂದರೆ ಹಳ್ಳೀಜನ ಪೋಲೀಸರಿಗೆ ಅಷ್ಟು ಹೆದರುತ್ತಿದ್ದರು ಆಗ.

" ಮಹಾಸ್ವಾಮೀ ನಿಂತೆ, ಯಾಕೆ ಎಂದು ಕೇಳಬಹುದಾ ? "


" ಎಲ್ಲಯ್ಯ ನಿನ್ನ ಸೈಕಲ್ ಡೈನೆಮೋ ? "

[ಆಗೆಲ್ಲಾ ರಾತ್ರಿ ಓಡಿಸೋ ಸೈಕಲ್ಲಿಗೆ ಡೈನೆಮೋ ಎಂಬ ಚಿಕ್ಕ ಹೆಡ್ ಲೈಟು ಇರಬೇಕಾದುದು ಕಡ್ಡಾಯವಾಗಿತ್ತು]


" ಮಹಾಸ್ವಾಮೀ ಡೈನೆಮೋ ಇಲ್ಲ, ಮನೇಲಿ ಯಾರಿಗೋ ಹುಷಾರಿಲ್ಲ, ಅದಕ್ಕೇ ವೈದ್ಯರನ್ನು ಕಾಣಲು ಬಂದೆ "


" ಎಲಾ ಇವನ ನನ್ನ ಹತ್ರ ಸುಳ್ ಹೇಳ್ತೀಯಾ ? ಬಿಡುವುದಿಲ್ಲ ಇಲ್ಲೇ ಇರು "

ಪರಿಪರಿಯಾಗಿ ಸೈಕಲ್ಲಿನಾತ ಬೇಡಿಕೊಂಡಮೇಲೆ ...


" ಆಯ್ತು ನಿನ್ನ ಹೆಸರು ಹೇಳು ಬರೆದುಕೊಳ್ತೇನೆ "


" ಭಯಕೃದ್ಭಯನಾಶನಾಚಾರ್ " --ಉತ್ತರ ಬಂತು !

ಪೋಲೀಸ ಇನ್ನೊಮ್ಮೆ ಕೇಳಿದ, ಮತ್ತೊಮ್ಮೆ ಕೇಳಿದ. ಸರಿಯಾಗಿ ಬರೆದುಕೊಳ್ಳಲು ಆಗಲೇ ಇಲ್ವಂತೆ!

" ಹೂಂ ..ಹೋಗ್ ಹೋಗು ಇನ್ಮೇಲೆ ಡೈನೆಮೋ ಇಲ್ದೇ ಓಡಿಸ್ಬೇಡ "

ಎಂದನಂತೆ!

ಸೈಕಲ್ ಸುದ್ದಿ ಬಂದಾಗಲೆಲ್ಲಾ ಈ ಕಥೆ ನೆನಪಾಗುತ್ತದೆ; ಗೆಳೆಯರ ಗುಂಪಿನಲ್ಲಿ ತಮಾಷೆಯಾಗಿ ಬೆಳೆಯುತ್ತದೆ, ದೊಡ್ಡದಾಗುತ್ತದೆ!

ಆದರೆ ಹಿಂದೊಮ್ಮೆ ಚಿಕ್ಕದಾದ, ಪೋಲೀಸರು ಮತ್ತು ವಕೀಲರ ನಡುವಿನ ತೊಡಕೊಂದನ್ನು ಮಾಧ್ಯಮದವರು ದೊಡ್ಡದಾಗಿ ತೋರಿಸಿದ್ದೇ ನಿನ್ನೆಯ ಅನಾಹುತಕ್ಕೆ ಕಾರಣವಾಯ್ತು ಎಂಬುದು ನನ್ನ ಅನಿಸಿಕೆಯಾಗಿದೆ. ಸಮಾಜಕ್ಕೆ ಎಲ್ಲರೂ ಬೇಕು. ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗ. ಮಾಧ್ಯಮ ಚತುರ್ಥ ಅಂಗವಾಗಿ ಬರುತ್ತದೆ ಎಂದರೆ ತಪ್ಪಲ್ಲ. ಕೆಲವೊಮ್ಮೆ ಸರಕಾರೀ ವಿಭಾಗಗಳಲ್ಲೇ ಕೆಲವು ತಂಟೆ-ತಕರಾರು ಉದ್ಭವವಾಗುವುದು ಸಹಜ. ಅದಕ್ಕೂ ನ್ಯಾಯಾಲಯ ಪರಿಶೀಲಿಸಿ ಪರಿಹಾರ ಸೂಚಿಸುತ್ತದೆ. ವಕೀಲರ ಮತ್ತು ಪೋಲೀಸರ ನಡುವೆ ನಡೆದ ಚಿಕ್ಕ ಬಡಿದಾಟವನ್ನು ತಿಂಗಳುಗಳ ಹಿಂದೆ ಮಾಧ್ಯಮದವರು ಬಿತ್ತರಿಸಿದ್ದೇ ನಿನ್ನೆಯ ಘಟನೆಗೆ ಮೂಲ ಕಾರಣವಿರಬಹುದೇ ಎಂಬುದು ಹಲವರಿಗೆ ಬಂದ ಸಂಶಯ.

ಚಿಕ್ಕದನ್ನು ದೊಡ್ಡದಾಗಿ ಮಾಡಿ ಸಂಭ್ರಮಿಸುವ ಮಾಧ್ಯಮದವರ ವೃತ್ತಿ ಗುಣಧರ್ಮ ಅವತ್ತು ವಕೀಲರುಗಳ-ಆರಕ್ಷಕರ ನಡುವಿನ ಕಥೆಯನ್ನೂ ತೋರಿಸಿತ್ತು! ಆ ಈರ್ಷ್ಯೆಯೇ ವಕೀಲರುಗಳಿಗೆ ಕೋಪಬರಿಸಿತ್ತು ಎನಿಸುತ್ತದೆ. ಏನಿದ್ದರೂ ನ್ಯಾಯಾಂಗದಲ್ಲಿ ಕೆಲಸಮಾಡುವ ವಕೀಲರುಗಳು ಹೊಡೆದಾಟಕ್ಕೆ ಇಳಿದಿದ್ದು ಖಂಡನಾರ್ಹವೇ ಸರಿ. ಅದು ಎಲ್ಲರಿಗೂ ಬೇಸರ ತರಿಸಿದೆ. ಹೀಗಾಗಿ ಚಿಕ್ಕದನ್ನು ದೊಡ್ಡದುಮಾಡಿ ಸಂಭ್ರಮಿಸುವ ಮೊದಲು ಯೋಚಿಸಲೇ ಬೇಕು ಎಂಬುದು ಪಥ್ಯ.

ಇತ್ತೀಚೆಗೆ ಮಾಧ್ಯಮದವರ ಮೇಲೂ ಸಾಕಷ್ಟು ಆಪಾದನೆಗಳಿವೆ. ಮಾಧ್ಯಮದ ಕೆಲವರು [ಎಲ್ಲವರೂ ಅಲ್ಲ ಎಂಬುದನ್ನು ಈಗಲೇ ಸ್ಪಷ್ಟಪಡಿಸುತ್ತೇನೆ] ದಬ್ಬಾಳಿಕೆ ಮಾಡುತ್ತಾರಂತೆ. " ಏನ್ರೀ ನಾವು ಮಾಧ್ಯಮದವ್ರು " ಎಂದು ಎಲ್ಲದಕ್ಕೂ ಬೆದರಿಕೆ ಹಾಕುತ್ತಾರಂತೆ! ಇದಕ್ಕೆ ಪೂರಕವಾಗಿ ನಾನು ಕೇಳಿದ ಘಟನೆಯೊಂದು ಹೀಗಿದೆ : ಒಂದುಕಡೆ ಪ್ರಾಚೀನ ದೇವಳವೊಂದಿದೆ. ಅಲ್ಲಿ ಯಾತ್ರಿಕರು ಜಾಸ್ತಿ ಬರುತ್ತಿದ್ದಾರೆ. ಯಾರ್ಯಾರೋ ನಿಸರ್ಗ, ಪ್ರವಾಸ ಎಂದೆಲ್ಲಾ ಹೇಳಿಕೊಂಡು ತಿನ್ನುವುದಕ್ಕೆ, ಕುಡಿಯುವುದಕ್ಕೆ ಒಂದಷ್ಟು ಕಟ್ಟಿಸಿಕೊಂಡು ಬರುತ್ತಾರೆ. ಹಾಗೆ ಬರುವ ನಾಕುಚಕ್ರದ ಗಾಡಿಗಳನ್ನು ಗೇಟಿನಲ್ಲಿ ಪಾಸ್ ಮೂಲಕ ಒಳಗೆ ನಿಲ್ಲಿಸಲು ಬಿಡಲಾಗುತ್ತದೆ. ಯಾಕೆಂದರೆ ಯಾರು ಯಾರು? ಯಾರು ಭಯೋತ್ಫಾದಕರು-ಯಾರು ಅಲ್ಲಾ ? ಎಂದೆಲ್ಲಾ ಗೊತ್ತಾಗುವುದಿಲ್ಲವಲ್ಲಾ! ಹೀಗಾಗಿ ವಾಹನದಲ್ಲಿ ಬಂದವರು ಒಬ್ಬರು ಕೆಳಗಿಳಿದು ಅಲ್ಲಿನ ಕಚೇರಿಗೆ ಹೋಗಿ ಹೆಸರು, ವಿಳಾಸ, ಗಾಡಿಯ ಮಾಹಿತಿ ನೀಡಿ ಪಾಸು ಪಡೆದು ಬರಬೇಕು. ಆಮೇಲೆ ಗೇಟ್ ಕೀಪರ್ ಗಾಡಿಯನ್ನು ಒಳಗೆ ಬಿಡುತ್ತಾನೆ.

ಒಂದುದಿನ ಅನಿರೀಕ್ಷಿತವಾಗಿ ಒಂದು ನಾಕುಚಕ್ರದ ವಾಹನ ಬಂದಿದೆ. ಅದರಲ್ಲಿ ಒಬ್ಬಳು ಹೆಂಗಸು ಇದ್ದಳಂತೆ. ಕೂತಲ್ಲಿಂದಲೇ ಅದೇನೋ ಮಾತು ನಡೆಯಿತು ಗೇಟ್ ಕೀಪರ್ ಜೊತೆಗೆ. ಮಾತು ವಾದಕ್ಕಿಳಿಯಿತು. ಆತ ಪಾಸು ಇಲ್ಲದೇ ಬಿಡುವುದಿಲ್ಲ ಎಂದು...ಈಕೆ "ನಾವು ಮಾಧ್ಯಮದವರು" ಎಂದು! ಮಾಧ್ಯಮದ ಮಹಿಳೆಯ ಧಮಕಿ ಎಲ್ಲೀವರೆಗೆ ಬಂತೆಂದರೆ ಪಾಪದ ಗೇಟ್ ಕೀಪರನನ್ನು ಕಾಲರ್ ಹಿಡಿದು ಕೆನ್ನೆಗೆ ಒಂದು ಹೊಡೆದಳಂತೆ. ಆಮೇಲೆ ಗಾಡಿಯಲ್ಲಿ ಅವಳ ಜೊತೆ ಬಂದಿರುವವರೆಲ್ಲಾ ಸೇರಿಕೊಂಡು ಅವನನ್ನು ಹಿಗ್ಗಾಮುಗ್ಗಾ ಥಳಿಸಿದರಂತೆ. ಆಮೇಲೆ ಕಚೇರಿಗೆ ನುಗ್ಗಿ ಅಲ್ಲಿನ ಆಡಳಿತ ಕಚೇರಿಯಲ್ಲಿರುವ ಗುಮಾಸ್ತರನ್ನೂ ಬಿಡದೇ ಅವರ ಕಾಲರ್ ಕೂಡ ಹಿಡಿದು ದಬಾಯಿಸಿದರಂತೆ! ಆಯ್ತು ಆ ಪಾಪದ ಜನ ಸುಮ್ಮನಿದ್ದರು. ಗುಮಾಸ್ತರು ಅಲ್ಲಿನ ಆಡಳ್ತೆಯ ಹಿರಿಯರಿಗೆ ಸುದ್ದಿ ತಲ್ಪಿಸಲೋ ಬೇಡವೋ ಎಂದುಕೊಂಡು ಅಳುಮುಖದಲ್ಲಿ ಕೆಲಸ ಮುಂದುವರಿಸಿದ್ದರಂತೆ.

ಮಾಧ್ಯಮದವರು ಎನಿಸಿಕೊಂಡವರು ಒಳಗೆ ಹೋದರು. ತಮಗೆ ಬೇಕಾದ ಕೆಲಸ ಮುಗಿಸಿಕೊಂಡು ಹೊರಗೆ ಬಂದರು. ಮರಳಿ ಗಾಡಿ ತೆಗೆಯಲು ಹೊರಟಾಗ ಆ ಸುತ್ತಮುತ್ತಲಿನ ಅಲ್ಲಿನ ಸ್ಥಾನಿಕ ನಿವಾಸಿಗಳು ೨೫೦-೩೦೦ ಮಂದಿ ಜಮಾಯಿಸಿದ್ದರಂತೆ. ಎಲ್ಲರೂ ಸೇರಿ ಮಾಧ್ಯಮದವರು ಎಂದು ಹೇಳಿಕೊಂಡವರಿಗೆ ಎರಡೆರಡು ಬಿಟ್ಟು ಇನ್ನು ಆ ಕಡೆ ಮುಖಹಾಕದಹಾಗೇ ಮಾಡಿದ ಘಟನೆ ನಡೆದಿದೆ. ಇದನ್ನು ಆ ಮಾಧ್ಯಮದವರೂ ಸೇರಿದಂತೇ ಯಾರೂ ಸುದ್ದಿಮಾಡಲಿಲ್ಲ ಯಾಕೆಂದರೆ ಮಾಧ್ಯಮದವರೂ ತಪ್ಪು ಮಾಡುವ ಸಾಧ್ಯತೆ ಇರುತ್ತದೆ ಎಂಬುದು ಸಾಬೀತಾಗಿ ಜನ ಹಾಗೇ ಭಾವಿಸಬಹುದು ಎಂದು! ಹೀಗಾಗಿ ಮಾಧ್ಯಮದವರು ಸಿಕ್ಕಾಪಟ್ಟೆ ಸಂಭಾವಿತರು ಎಂಬುದು ತಳ್ಳಿಹಾಕಿದ ಮಾತು!

ಮಾಧ್ಯಮದಲ್ಲಿರುವ ವರದಿಗಾರರಿಗೆ ಕೆಲವೊಮ್ಮೆ ತಾವೇನು ಮಾಡುತ್ತಿದ್ದೇವೆ, ಯಾರ ಹತ್ತಿರ ಏನು ಮಾತಾಡುತ್ತಿದ್ದೇವೆ ಎಂಬ ಕನಿಷ್ಠ ಪರಿವೆಯೂ ಇರುವುದಿಲ್ಲ ಎಂಬುದಕ್ಕೆ ಒಂದು ಉದಾಹರಣೆ : ಕಳೆದಸಾಲಿನ ಕನ್ನಡ ಸಾಹಿತ್ಯ ಸಮ್ಮೇಳನದ ಅಧಕ್ಷರಾಗಿದ್ದ ಜೀವಿಯವರನ್ನು ಒಬ್ಬ ವರದಿಗಾರ್ತಿ ಸಂದರ್ಶಿಸಿದ್ದು ನನಗಿನ್ನೂ ನೆನಪಿದೆ. ನೂರರ ವಯೋಮಾನದ ಅವರಲ್ಲಿ " ಕನ್ನಡಕ್ಕೆ ನೀವೇನು ಕೊಡ್ಬೇಕು ಅಂತಿದೀರಾ ? " ಎಂದು ಕೇಳಿದ್ದಾಳೆ. ಅವರು ನಗುತ್ತಲೇ ತುಸು ಬಿಗುವಿನಿಂದ " ಕನ್ನಡಕ್ಕೆ ನಾನು ಕೊಡುವುದನ್ನು ಕೊಟ್ಟಾಗಿದೆ ಇನ್ನು ಬೇರೆಯವರು ಕೊಡುವುದನ್ನು ನೋಡುವುದು " ಎಂದಿದ್ದಾರೆ. ಕನ್ನಡಕ್ಕೆ ಅತ್ಯಮೂಲ್ಯ ನಿಘಂಟನ್ನೇ ತಯಾರಿಸಿ ಕೊಟ್ಟ ಜೀವಿಯವರಲ್ಲಿ ಆಕೆ ಹಾಗೆ ಕೇಳಬಹುದಿತ್ತೇ ?

ಒಪ್ಪಿಕೊಳ್ಳೋಣ: ಬಿಸಿಲು, ಮಳೆ, ಚಳಿ ಯಾವುದನ್ನೂ ಲೆಕ್ಕಿಸದೇ ಮಾಧ್ಯಮದವರು ಕ್ಯಾಮೆರಾ, ಮೈಕು ಹಿಡಿದು ವೀಕ್ಷಕ ಪ್ರಭುಗಳಿಗೆ, ಜನಸಾಮಾನ್ಯರಿಗೆ, ಪ್ರಜೆಗಳಿಗೆ ವಿಷಯತಲ್ಪಿಸುವಲ್ಲಿ ಬಹಳ ಪ್ರಯಾಸಪಡುತ್ತಾರೆ. ಅಷ್ಟಷ್ಟೇ ಪ್ರಯಾಸವನ್ನು ಆ ಯಾ ರಂಗಗಳಲ್ಲಿ ಇರುವವರು ಅನುಭವಿಸುವುದು ಬದುಕಿನ ಅನಿವಾರ್ಯತೆ. ಮಾಧ್ಯಮವೂ ಒಂದು ವೃತ್ತಿ ತಾನೇ? ಅಲ್ಲಿ ಕೆಲಸಮಾಡಿ ಅದಕ್ಕೆ ಹಣಸಂಪಾದಿಸುತ್ತಾರಲ್ಲ? ಕೊನೇಪಕ್ಷ ರೈತರ ಹಾಗಲ್ಲ! ನಿಗದಿತ ಸಂಬಳವೋ ಪ್ಯಾಕೇಜೋ ಸಿಕ್ಕೇ ಸಿಗುತ್ತದೆ ಎಂಬ ಭರವಸೆಯಂತೂ ಇರುತ್ತದೆ. "ಪ್ರಯಾಸ ಪಡ್ತೀವಿ ಪ್ರಯಾಸ ಪಡ್ತೀವಿ " ಅಂತ ಅದನ್ನೇ ಹೇಳಿಕೊಳ್ಳುವುದರಲ್ಲಿ ಯಾವ ಅರ್ಥವೂ ಕಾಣುವುದಿಲ್ಲ. ಎಲ್ಲಾ ವೃತ್ತಿಗಳ ಹಾಗೇ ಅಲ್ಲೂ ಅದು ಅನಿವಾರ್ಯು!

ಶುಕ್ರವಾರ ೦೨.೦೩.೧೦೧೨ ರ ಸಂಜೆ, ವಾಹಿನಿಯೊಂದರಲ್ಲಿ , ವಕೀಲರುಗಳ ದೌರ್ಜನ್ಯದಿಂದ ಒಬ್ಬ ಪೋಲೀಸ ಸತ್ತನೆಂದೂ, ಸುಮಾರು ೨೦ ಮಂದಿ ಪೋಲೀಸರನ್ನು ಕಟ್ಟಡವೊಂದರಲ್ಲಿ ಕೂಡಿಟ್ಟು ಇಬ್ಬರ ಕಣ್ಣುಕೀಳಲಾಯಿತೆಂದೂ ಪೇದೆಗಳ ಹೆಸರು ಸಹಿತ ತಿಳಿಸಿ ವರದಿ ಬಿತ್ತರಿಸುತ್ತಿದ್ದ ಒಬ್ಬ ಪುಣ್ಯಾತ್ಮ!! ಇದರ ಸತ್ಯಾಸತ್ಯತೆ ಎಷ್ಟು? ಬರೇ ಟಿ.ಆರ್.ಪಿ ಹೆಚ್ಚಿಸಿಕೊಳ್ಳುವ ಹಪಾಹಪಿಯಿಂದ ಇಲ್ಲದ್ದನ್ನೂ ಇದ್ದಹಾಗೇ ಹೇಳುವುದಕ್ಕೆ ಇದು ಸಾಕ್ಷಿಯಲ್ಲವೇ? "ವಕೀಲರ ಸಂಖ್ಯೆ ಜಾಸ್ತಿ ಆಗಿರುವುದರಿಂದ ಕೆಲಸವಿಲ್ಲದೇ ಅಲೆಯುವ ವಕೀಲರು ಈ ದೊಂಬಿಗೆ ಕಾರಣರಾಗಿರಬಹುದೇ?"--ಎಂಬ ಪ್ರಶ್ನೆಯನ್ನೂ ಆ ಪುಣ್ಯಾತ್ಮ ಎದುರು ಕೂತವರಲ್ಲಿ ಕೇಳುತ್ತಿದ್ದ. ಇನ್ನೊಂದು ವೃತ್ತಿ ಸಮುದಾಯದ ಸಂಖ್ಯಾಬಲ-ನಿರುದ್ಯೋಗದ ಬಗ್ಗೆ ಅವಹೇಳನಕಾರೀ ಮಾತು ಇದಾಗುವುದಿಲ್ಲವೇ? ಇದರಿಂದ ನೋಡುಗರ ಮನದಲ್ಲಿ ಕೆರಳುವ ಭಾವನೆಗಳೇನಿರಬಹುದು? [ಸುಳ್ಳನ್ನೇ ನೂರು ಸಲ ತೋರಿಸಿದರೆ ದೂರದಲ್ಲಿನ ಜನ ಅದನ್ನೇ ಸತ್ಯ ಎಂದು ನಂಬುವಷ್ಟು ಪರಿಣಾಮಕಾರೀ ಮಾಧ್ಯಮವಾಹಕಗಳೇ ಮಾಧ್ಯಮದವರ ಹತ್ತಿರ ಇವೆ!] ಇಂಥಾದ್ದೆಲ್ಲಾ ನೋಡಿದರೆ ಮಾಧ್ಯಮದವರು ಹೇಗಾದರೂ ಏನಾದರೂ ಹೇಳಿ ಯಾವರೀತಿಯಲ್ಲಾದರೂ ನುಣುಚಿಕೊಳ್ಳುತ್ತಾರೆ ಎಂಬುದು ಸ್ಪಷ್ಟವಾಗುತ್ತದೆ. ಇದಕ್ಕೆಲ್ಲಾ ಒಂದು ನಿಯಂತ್ರಕ ಕಾನೂನು ಜಾರಿಗೆ ಬರಬೇಕಾಗಿದೆ.

ಕೆಲವೊಮ್ಮೆ ಮಾಧ್ಯಮವಾಹಿನಿಗಳ ಕುರ್ಚಿಗಳಲ್ಲಿ ಕುಳಿತಾಗ ಅಧಿಕಾರ ಮದವೋ ಎಂಬಂತೇ ಚಿತ್ರ-ವಿಚಿತ್ರ ಪ್ರಶ್ನೆಗಳನ್ನು ಎದುರಿಗಿರುವ ಮಹಾನ್ ವ್ಯಕ್ತಿಗಳಲ್ಲಿ ಕೇಳುತ್ತಾರೆ. ಸ್ವರ್ಗದಿಂದ ಧರೆಗಿಳಿದವರಂತೇ ಕಾಣಿಸುತ್ತಾ, ಜನಸಾಮಾನ್ಯರಿಗಿಂತ ತಾವು ಭಿನ್ನ ತಾವು ಮಾಧ್ಯಮದವರು ಎಂಬ ಅಹಮಿಕೆ ಮೆರೆಯುವ ನಿರೂಪಕರೂ/ಸಂದರ್ಶಕರೂ ಇದ್ದಾರೆ. ತಾವು ಜನಸಾಮಾನ್ಯರಲ್ಲಿ ಒಂದುಭಾಗ ಎನ್ನುವ ಭಾವನೆ ಬರುವವರೆಗೂ ಅವರು ತಪ್ಪುಗಳನ್ನು ಮಾಡಬಹುದು ಎನಿಸುತ್ತದೆ! ಯಾವಾಗ ತಮ್ಮನ್ನು ತಾವು ಸರಿಯಾಗಿ ಅರಿಯುತ್ತಾರೋ ಆಗ ಇಂತಹ ತಾಪತ್ರಯಗಳು ನಿವಾರಣೆಯಾಗಬಹುದು.

ಪತ್ರಿಕೆ ನಡೆಸುವ ಒಬ್ಬಾತ ಹಿಂದೊಮ್ಮೆ ಅತ್ಯಂತ ಹಳೆಯ, ಉತ್ತಮ ಸಂಪ್ರದಾಯದ, ಯಾವುದೇ ತಪ್ಪನ್ನೆಸಗದ ಮಠವೊಂದಕ್ಕೆ ಕರೆಮಾಡಿ ಹಣ ಕೇಳಿದ್ದೂ ಸುದ್ದಿ ಮೊದಲೇ ಬಂದಿದೆ. ಆದರೆ ಆ ಮಠದವರು ಅದಕ್ಕೆ ಸೊಪ್ಪುಹಾಕಲಿಲ್ಲ. ಅವರ ವಿರುದ್ಧ ಒಂದಷ್ಟು ಬರೆದ ಆತ ಇನ್ಯಾರಿಗೋ ಕರೆಮಾಡಿ ಕೈಕಾಲು ಮುರಿಸಿಕೊಂಡಿದ್ದ! ’ಮಾಧ್ಯಮದವರು’ ಎನಿಸಿಕೊಂಡು ರೋಲ್ ಕಾಲ್ ಮಾಡುವ ಜನವೂ ಇದ್ದಾರೆ. ರೋಲ್ ಕಾಲ್ ನಲ್ಲೇ ಪತ್ರಿಕೆ ಓಡಿಸಿ ಮನೆ-ಮಠ ಕಟ್ಟಿಕೊಂಡವರೂ ಇದ್ದಾರೆ. ಹೀಗಾಗಿ ದೇಶದ ಎಲ್ಲೆಡೆ ಮಾಧ್ಯಮವೂ ಜನರ ಕೆಂಗಣ್ಣಿಗೆ ಗುರಿಯಾಗಿದೆ. ಅಪರೂಪಕ್ಕೆ ಆರಕ್ಷಕರಲ್ಲಿ ಕೆಲವರು ಎಣ್ಣೆಹಾಕಿ ಡ್ಯೂಟಿ ಮಾಡಿದಂತೇ ಮಾಧ್ಯಮದಲ್ಲೂ ಎಡವಟ್ಟುಗಳು ಸೇರ್ಕೊಂಡಿರ್ತಾರೆ. ಇನ್ನು ಹಣ ಸ್ವೀಕೃತಿಯ ಬಗ್ಗೆ ದಿನಪತ್ರಿಕೆಗಳೇ ವರದಿ ಮಾಡಿವೆ! ಲೋಕಾಯುಕ್ತರ ವರದಿಯಲ್ಲೂ ಗಣಿಧಣಿಗಳಿಂದ ಕೆಲವರು ಹಣಪಡೆದದ್ದರ ಬಗ್ಗೆ ದಾಖಲೆ ಇದೆ ಎಂಬುದು ಗುಸುಗುಸು! ಹೀಗಾಗಿ ಮಾಧ್ಯಮದವರೂ ತಮ್ಮ ಆತ್ಮಶೋಧನೆ ಮಾಡಿಕೊಳ್ಳಬೇಕಾಗಿದೆ.

ಬೆಂಗಳೂರಿನ ವಕೀಲರ ಬಗ್ಗೆ ಬರೆಯುವ ಅಗತ್ಯವೇ ಇಲ್ಲ! ೦೨.೦೩.೧೦೧೨ ಶುಕ್ರವಾರ ಮಧ್ಯಾಹ್ನದಿಂದ ಶನಿವಾರ ರಾತ್ರೀವರೆಗೆ ಅದನ್ನು ಜನ ನೋಡೀ ನೋಡೀ ಸುಸ್ತಾಗಿ, ಬೇಸತ್ತು ಟಿವಿ ಆನ್ ಮಾಡುವುದನ್ನೇ ಬಿಟ್ಟುಬಿಟ್ಟಿದ್ದಾರೆ! ಇದೊಂದು ತ್ರಿಕೋನ ದ್ವೇಷ ಸರಣಿಯೆನ್ನಬಹುದೇ? ಪೋಲೀಸರ ಮೇಲಿನ ಸಿಟ್ಟಿಗೆ ವಕೀಲರು ಅವರಮೇಲೆ-ವಕೀಲರಮೇಲಿನ ಸಿಟ್ಟಿಗೆ ಪೋಲೀಸರು ವಕೀಲರ ಮೇಲೆ, ತಮ್ಮೊಳಗಿನ ಜಗಳವನ್ನು ಕೋಟ್ಯಂತರ ಜನರಿಗೆ ತೋರಿಸಿದ್ದಕ್ಕಾಗಿ ವಕೀಲರು ಮಾಧ್ಯಮದವರ ಮೇಲೆ ಹೀಗೆ ನಡೆದಿದೆ ಈ ನಿಯಮ ಉಲ್ಲಂಘನೆ! ಸರಕಾರೀ ಇಲಾಖೆಗಳಿಗೆ-ವಿಭಾಗಗಳಿಗೆ ಸಂಬಂಧಿಸಿದ ವಕೀಲರು ಮತ್ತು ಪೋಲೀಸರು ತಮ್ಮೊಳಗಿನ ಸಮಸ್ಯೆಗಳನ್ನು ಕೂತು ಮಾತಾಡಿ ಬಗೆಹರಿಸಿಕೊಳ್ಳಬೇಕಿತ್ತು. ಅದನ್ನು ಆದಷ್ಟೂ ಚಿಕ್ಕದಾಗಿ ಮಾಧ್ಯಮ ತೋರಿಸಿದ್ದರೆ ಅವರುಗಳಿಗೂ ಬೇಸರವಾಗುತ್ತಿರಲಿಲ್ಲವೇನೋ. ಹೀಗೆ ನೋಡಿದಾಗ ವಕೀಲರುಗಳೂ ಪೋಲೀಸರೂ ತಮ್ಮತಮ್ಮೊಳಗೇ ಆತ್ಮಾವಲೋಕನ ಮಾಡಿಕೊಳ್ಳುವುದು ಅವಶ್ಯವೆನಿಸುತ್ತದೆ.

ಇಲ್ಲಿ ರಾಜಕಾರಣಿಗಳ ಸ್ವಾರ್ಥಪರತೆಯಿಂದ, ಪರಸ್ಪರ ಕಚ್ಚಾಟಗಳಿಂದ ಹಡಾಲೆದ್ದುಹೋದ ಪ್ರಜಾತಂತ್ರದ ವ್ಯವಸ್ಥೆಯೂ ತನ್ನ ಪಾತ್ರವನ್ನು ನಿರ್ವಹಿಸುತ್ತದೆ. ಆಳುವವರು ಸರಿಯಾಗಿದ್ದರೆ ಎಲ್ಲರೂ ಸರಿಯಾಗಿರುತ್ತಾರೆ. ಸ್ವಾತಂತ್ರ್ಯಬಂದ ಆ ಕಾಲಘಟ್ಟದಲ್ಲಿ ಆತುರದಲ್ಲಿ ಮಾಡಿದ ಸಂವಿಧಾನದಲ್ಲಿ ಸಾಕಷ್ಟು ಲೋಪದೋಷಗಳಿವೆ-ಅದನ್ನೇ ಬಂಡವಾಳ ಮಾಡಿಕೊಂಡ ಧೂರ್ತ ರಾಜಕಾರಣಿಗಳು ಅದರಿಂದಲೇ ಲಾಭಪಡೆಯಲು ತಂತ್ರಗಾರಿಕೆ ಮಾಡಿಕೊಂಡಿದ್ದಾರೆ. ವೈಯ್ಯಕ್ತಿಕ ಬದುಕಿನ ನಡತೆಯೇ ಸರಿಯಿಲ್ಲದ ಖೂಳಜನರನೇಕರು ಆಡಳಿತ ಯಂತ್ರಕ್ಕೆ ಸೇರಿಕೊಂಡಿದ್ದಾಗ, ಆಳುವ ಪಕ್ಷದ ಒಳಹುಳುಕು-ಜಗಳ ವಿಪರೀತವಾದಾಗ, ವಿರೋಧ ಪಕ್ಷಗಳು ಕೇವಲ ಚಿಕ್ಕಚಿಕ್ಕ ತಪ್ಪುಗಳನ್ನೇ ದೊಡ್ಡದು ಮಾಡಿ ವಿಜೃಂಭಿಸಿ ತಮ್ಮ ಬೇಳೇ ಬೇಯಿಸಿಕೊಳ್ಳುವ ಪರಿ ನಡೆಯುವಾಗ ಆಡಳಿತ ಹಿಡಿತವಿಲ್ಲದೇ ಸಡಿಲಗೊಳ್ಳುತ್ತದೆ. ರೋಗನಿರೋಧಕ ಶಕ್ತಿ ಕಮ್ಮಿ ಇರುವ ಬಲಹೀನ ಶರೀರಕ್ಕೆ ಹಲವು ಕಾಯಿಲೆಗಳು ಅಮರಿಕೊಂಡಂತೇ ಸಡಿಲವಾದ ಪ್ರಜಾತಂತ್ರದ ಅಂಗಾಂಗಗಳಲ್ಲಿ ಇಂತಹ ಬಡಿದಾಟ ಮೊದಲಾದ ’ಸಾಮಾಜಿಕ ರೋಗಗಳು’ ಕಾಣಿಸಿಕೊಳ್ಳುತ್ತವೆ.

ಒಟ್ಟಿನಲ್ಲಿ ನಿನ್ನೆಯ ಈ ತ್ರಿಕೋನ ಜಗಳದಲ್ಲಿ, ದೊಂಬಿಯಲ್ಲಿ, ಯಾರದು ತಪ್ಪು ಯಾರದು ಒಪ್ಪು ಎಂಬುದನ್ನು ಬಹಳ ಸಂಯಮದಿಂದ ನಿಗಾವಹಿಸಿ ನಿರ್ಧರಿಸಬೇಕಾಗಿದೆ, ತಪ್ಪಿತಸ್ಥರಿಗೆ ಸರಿಯಾದ ಶಿಕ್ಷೆಯಾಗಬೇಕಾಗಿದೆ. ಸಂಬಂಧಿಸಿದ ಈ ಮೂರೂ ವಿಭಾಗಗಳವರು ಕೂತು ಮಾತಾಡಿ ಜಗಳ ಪರಿಹರಿಸಿಕೊಳ್ಳಬೇಕಾಗಿದೆ. ಚಿಕ್ಕದನ್ನು ದೊಡ್ಡದಾಗಿ ಮಾಡಿ ಸಂಭ್ರಮಿಸುವ ಮೊದಲು ಹತ್ತಾರುಸಲ ಯೋಚನೆ ಮಾಡುವ ಅಗತ್ಯ ಕಾಣುತ್ತದೆ.