ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Thursday, December 2, 2010

ಮನವ ಶೋಧಿಸಬೇಕು ನಿತ್ಯ !


ಮನವ ಶೋಧಿಸಬೇಕು ನಿತ್ಯ !

ಮನಸ್ಸಿನ ಕುರಿತು ಬಹಳ ಬರೆದಿದ್ದೇನೆ. ಆಗಾಗ ಬರೆಯುತ್ತಲೇ ಇದ್ದೇನೆ. ಗಣಕಯಂತ್ರದ ಕೇಂದ್ರಬಿಂದುವಾದ ಮೈಕ್ರೋ ಪ್ರಾಸೆಸ್ಸರ್ ಥರಾನೇ ಮನಸ್ಸು ನಮ್ಮ ಶರೀರದ ಪ್ರಮುಖಕೇಂದ್ರ. ಮನಸ್ಸಿಗೂ ಆತ್ಮಕ್ಕೂ ವೈಜ್ಞಾನಿಕ ಭಿನ್ನತೆ ತೋರಿಸುವುದು ಕಷ್ಟವಾದರೂ ಮನಸ್ಸು ಬೇರೆ, ಆತ್ಮಬೇರೆ--ಇದೇ ನಮ್ಮೊಳಗಿನ ವಿಚಿತ್ರ. ಮನಸ್ಸಿನಲ್ಲೂ ಚಿತ್ತ, ಬುದ್ಧಿ, ಅಹಂಕಾರ ಇತ್ಯಾದಿ ಹಲವು ಸ್ತರಗಳಿವೆ! ಮನಸ್ಸಿನ ಅವಲೋಕನವನ್ನೇ ಮಾಡಿದರೆ ಮಾತ್ರ ಈರುಳ್ಳಿಯ ಎರಡನೇ ಹಂತದ ಪಾರದರ್ಶಕ ಸಿಪ್ಪೆಯ ರೀತಿಯಲ್ಲಿ ಇವುಗಳ ಇರವು ನಮಗೆ ಗೊತ್ತಾಗುತ್ತದೆ. ಇಂತಹ ಮನಸ್ಸನ್ನು ನಿಗ್ರಹಿಸುವ ಸಾಮರ್ಥ್ಯದ ಕೀಲಿಕೈ ಮನಸ್ಸಿನದೇ ಒಂದು ಭಾಗವಾದ ಬುದ್ಧಿಯಲ್ಲಿದೆ! ಆ ಬುದ್ಧಿಗೆ ಒಳ್ಳೆಯ ಪ್ರಚೋದನೆಯನ್ನು ಕೊಡು ಎಂಬ ಮಂತ್ರವೇ ಶ್ರೀ ಗಾಯತ್ರಿ ಮಂತ್ರ. ಅದರ ತಾತ್ಪರ್ಯವನ್ನಷ್ಟೇ ಹೇಳಿದ್ದೇನೆ ಯಾಕೆಂದರೆ ಗಾಯತ್ರಿಯ ಕುರಿತು ಇಲ್ಲಿ ಪ್ರಸ್ತಾಪಿಸಿದ್ದಲ್ಲ.

ಮನುಷ್ಯನಾಗಿ ಹುಟ್ಟಿದಮೇಲೆ, ಉಪ್ಪು-ಖಾರ ತಿಂದ ಮೇಲೆ ಇವೆಲ್ಲಾ ಇರೋದೇ ಬಿಡಿ ಎನ್ನುವ ಅನಿಸಿಕೆ ಬಹುತೇಕರದೇ ಆದರೂ ಮನಸ್ಸಿನ ವಿಕೃತಿಗಳನ್ನು ಹದ್ದುಬಸ್ತಿನಲ್ಲಿಡುವುದು ನಮ್ಮ ಆದ್ಯ ಕರ್ತವ್ಯ. ಇದರಲ್ಲಿ ಪ್ರಮುಖವಾಗಿ ಕಾಮ-ಅಂದರೆ ಭೋಗ, ಗಂಡು-ಹೆಣ್ಣುಗಳ ಮಿಲನಕ್ರಿಯೆ. ಪ್ರಾಣಿಗಳಿಗೆ ಈ ವಿಷಯದಲ್ಲಿ ಯಾವುದೇ ಹಿಡಿತಗಳಿಲ್ಲವಾದರೂ ಅವುಗಳಲ್ಲಿ ವರ್ಷವಿಡೀ ಮಿಲನೋತ್ಸವವಿರುವುದಿಲ್ಲ. ಬೇರೇ ಬೇರೇ ಪ್ರಾಣಿ ಪಕ್ಷಿಗಳಿಗೆ ಬೇರೇ ಬೇರೇ ಕಾಲಗಳು ಋತುಗಳು ಮಿಲನೋತ್ಸವದ ಸಮಯವಾಗಿರುತ್ತವೆ. ಆದರೆ ಮನುಷ್ಯನಲ್ಲಿ ಮಾತ್ರ ಇದಕ್ಕೆ ಕಾಲವೂ ಇಲ್ಲ ಋತುವೂ ಇಲ್ಲ. ಬಯಸಿದಾಗಲೆಲ್ಲಾ ಕಾಮದ ತೆವಲನ್ನು ತೀರಿಸಿಕೊಳ್ಳುವ ಸ್ವಭಾವ ಮನುಷ್ಯನದು. ಹೊಟ್ಟೆಗೆ ಬಟ್ಟೆಗೆ ಸ್ವಲ್ಪ ಕಮ್ಮಿ ಇದ್ದರೂ ಇದಕ್ಕೆ ಮಾತ್ರ ಕಮ್ಮಿ ಇರುವುದಿಲ್ಲ. ಸಂತಾನೋತ್ಪತ್ತಿ ಸಹಜ ಪ್ರಕ್ರಿಯೆಯಾದರೂ ಮನುಷ್ಯನಿಗೆ ಇದರಲ್ಲಿಯೇ ಅತಿಯಾದ ಆಸಕ್ತಿ, ಮಿತಿಮೀರಿದ ಆಸಕ್ತಿ. ಹರೆಯದ ಸುಂದರ ಹೆಣ್ಣನ್ನು ಕಂಡಾಗ ನೀರಿಳಿಯುವ ನಾಲಿಗೆ ತಿರುವುತ್ತ ನೋಡುವ ಪ್ರಾಯದ ಗಂಡುಗಳೇ ಬಹುತೇಕ. ಗಂಡಸರಲ್ಲಿ ಕಾಮೋದ್ರೇಕವಾಗುವುದೂ ಶೀಘ್ರ ಮತ್ತು ಕಾಮಪಿಪಾಸೆಯ ಹರವು ಸುಮಾರು ೧೩-೧೪ ವಯಸ್ಸಿನಿಂದಲೇ ಹಿಡಿದು ಸಾಯುವವರೆಗೂ ಹಬ್ಬಿರುತ್ತದೆ ಎಂದರೆ ಆಶ್ಚರ್ಯವಾಗಬಹುದಲ್ಲವೇ ? ಆದರೂ ಸತ್ಯ.

ಮಗ ಹರೆಯಕ್ಕೆ ಕಾಲಿಡುವಾಗ ಇಂತಹ ವಿಷಯವನ್ನು ಹೇಳಿಕೊಳ್ಳಲಾಗದೇ ಅಪ್ಪ ಮಾನಸಿಕವಾಗಿ ನೋಯುತ್ತಿದ್ದರೆ ಮಗನಿಗೆ ಯಾವುದೋ ಹುಡುಗಿಯ ಚಿಂತೆ ಕಾಡುತ್ತಿರುತ್ತದೆ. ಇದೇ ಕಾರಣವಾಗಿ ಮನೆಯಲ್ಲಿ ಪರಸ್ಪರ ಜಗಳವಾಗುತ್ತದೆ, ವೈಮನಸ್ಸು ಬೆಳೆಯುತ್ತದೆ. ಇದನ್ನು ಅರಿತೇ ಪ್ರಾಜ್ಞರು ಮಗನಿಗೆ ೧೬ ವರ್ಷ ವಯಸ್ಸು ಮೆಟ್ಟಿದಾಗ ಆತನನ್ನು ಸ್ನೇಹಿತನಂತೇ ಕಾಣು ಎಂದಿದ್ದಾರೆ.

|| ಪ್ರಾಪ್ತೇಷು ಷೋಡಶೇ ವರ್ಷೇ ಪುತ್ರಂ ಮಿತ್ರ ವದಾಚರೇ || -

ಎಂಬ ಉಲ್ಲೇಖ ನಮಗೆ ಸಂಸ್ಕೃತದಲ್ಲಿ ದೊರೆಯುತ್ತದೆ. ವಿಷಯಾಸಕ್ತಿಗೆ ಕಡಿವಾಣಹಾಕುವ ಸಲುವಾಗಿ ತಿಳುವಳಿಕೆ ನೀಡಲು ಒಬ್ಬ ಸ್ನೇಹಿತನಂತೇ ನಡೆಸಿಕೋ ಎಂಬುದು ಇದರ ಅರ್ಥವಲ್ಲವೇ ? ಆದರೂ ಈ ವಿಷಯ ಬರೇ ಪಠ್ಯವಾಗೇ ಇದೆ ಬಿಟ್ಟರೆ ಕೃತಿಯಲ್ಲಿ ಎಷ್ಟುಮನೆಯಲ್ಲಿ ಅಪ್ಪ-ಮಗ ಮಿತ್ರರಾಗಿರುತ್ತಾರೆ ? ಹಲವೊಂದು ಕಡೆ ಅಪ್ಪನ ಬುದ್ಧಿಯೇ ಈ ವಿಷಯದಲ್ಲಿ ಸ್ಥಿಮಿತವನ್ನು ಹೊಂದಿರುವುದಿಲ್ಲ ಅಂದಮೇಲೆ ಆತ ಮಗನನ್ನು ತಿದ್ದುವುದು ಸಾಧ್ಯವೇ ? ಹೀಗಾಗಿ ಬೇಕೋ ಬೇಡವೋ ನಮ್ಮೆಲ್ಲರ ಜೀವನದಲ್ಲಿ ಒಂದಿಲ್ಲೊಂದು ಸಮಯದಲ್ಲಿ ನಾವು ಮನಸ್ಸಿನ ತಾಳ ತಪ್ಪುವಂತೇ ನಡೆದುಕೊಳ್ಳುತ್ತೇವೆ.
ಆಳಕ್ಕೆ ಬೀಳುವ ಮುನ್ನ ಎಚ್ಚೆತ್ತುಕೊಳ್ಳುವವರು ಕೆಲವರಾದರೆ, ಆಳದಲ್ಲಿ ಬಿದ್ದು ಒದ್ದಾಡುವವರು ಹಲವರು. ಇದು ರಾತ್ರಿ ಬೆಳದಿಂಗಳಲ್ಲಿ ಕಂಡ ಬಾವಿಗೆ ಹಗಲಿನಲ್ಲಿ ಬೀಳುವ ಸ್ಥಿತಿ!

ಈ ತಾಳತಪ್ಪುವಿಕೆಯೇ ಸಮಾಜದಲ್ಲಿ ಹಲವು ನಿಜಜೀವನದ ಕಥೆಗಳಿಗೆ ಕಾರಣವಾಗುತ್ತದೆ. ಅಕ್ರಮ ಸಂಬಂಧಗಳು, ಅನೈತಿಕ ಸಂಪರ್ಕಗಳು ಬೆಳೆಯುತ್ತವೆ. ಅವೇ ಮುಂದೆ ಹಲವು ಕಡೆಗಳಲ್ಲಿ ದ್ವೇಷ, ವೈಷಮ್ಯ, ಕೊಲೆಗಳ ಹಂತವನ್ನು ತಲುಪುತ್ತವೆ ! ಇಂತಹ ವಿಷಯಾಸಕ್ತಿಯನ್ನೇ ವಿಷಯವಸ್ತುವಾಗಿಟ್ಟುಕೊಂಡು ಅನೇಕ ಸಾಮಾಜಿಕ ಕಥೆಗಳನ್ನೋ ನಾಟಕಗಳನ್ನೋ ಬರಹಗಾರರು ರಚಿಸುತ್ತಾರೆ. ಅದು ’ನಡೆಯುವುದು ಹೌದು ಹೌದು’ ಎಂಬ ಭಾವನೆ ನಮ್ಮಲ್ಲೂ ಅದಕ್ಕೆ ತಾಳಹಾಕುವುದರಿಂದ ನಮಗೆ ಕಥೆ ನೈಜತೆಗೆ ಹತ್ತಿರವಾಗಿ ಕಾಣುತ್ತದೆ. ಬೆಂಕಿಯನ್ನೇ ಕಾಣದ ವ್ಯಕ್ತಿಗೆ ಬೆಂಕಿಯಕಥೆ ಕೇಳಿ ಭಾವನೆ ಕೆರಳುವುದಿಲ್ಲವಲ್ಲವೇ ? ಅದೇ ರೀತಿ ಸಾಮಾಜಿಕ ಜೀವನದಲ್ಲಿ ತೊಡಗಿಕೊಂಡಿರದ ಮನಸ್ಸಿಗೆ ಇಂತಹ ಕಥೆಗಳಿಂದ/ನಾಟಕಗಳಿಂದ ಯಾವುದೇ ಪ್ರಭಾವವಾಗುವುದಿಲ್ಲ. ಚಿಕ್ಕ ಮಗುವಿನೆದುರು ದೊಡ್ಡವರು ಸರಸವನ್ನು ನಡೆಸಿದರೆ ಆ ಮಗುವಿಗೆ ಅದರ ಗಂಧ ತಲುಪುವುದಿಲ್ಲ. ಅದೇ ಮಗು ಬೆಳೆಯುತ್ತಾ ಬೆಳೆಯುತ್ತಾ ರೂಪ,ರಸ. ಗಂಧ, ಸ್ಪರ್ಶ, ಶ್ರವಣ ಎಲ್ಲಾ ಇಂದ್ರಿಯಗಳೂ ತಮ್ಮ ಕೆಲಸದಲ್ಲಿ ಚುರುಕುಗೊಳ್ಳುತ್ತವೆ. ಹೀಗೆ ಚುರುಕುಗೊಳ್ಳಲು ನಮ್ಮ ಮನಸ್ಸೇ ಕಾರಣ. ಆ ಮನಸ್ಸಿಗೆ ಬುದ್ಧಿಯ ಆಜ್ಞೆ ಕಾರಣ. ಆ ಬುದ್ಧಿಗೆ ಆತ್ಮನ ಪ್ರಚೋದನೆ ಕಾರಣ.

ದೇವರನ್ನು ಎಷ್ಟೆಲ್ಲಾ ನಾವು ಪ್ರಾರ್ಥಿಸಿದಾಗ ಆತ ನೇರವಾಗಿ ಬಂದು " ಓಹೋ ಭಟ್ಟರಿಗೆ ಬಹಳ ತೊಂದರೆಯಿದೆ ಒಂದು ಮಾರುತಿ ಡಿಸೈರ್ ಕಾರು ಕೊಡಿಸುತ್ತೇನೆ " ಅಂತಲೋ " ಮಗನೇ ಇಗೋ ಹತ್ತುಕೋಟಿ ಹಣ" ಎಂತಲೋ ಸಹಾಯಮಾಡಲು ಬರುವುದಿಲ್ಲ. ಬದಲಾಗಿ ನಮ್ಮಾತ್ಮದ ಮೂಲರೂಪವಾದ ಪರಮಾತ್ಮ ನಮ್ಮಾತ್ಮದ ಮೂಲಕ ನಮ್ಮ ಅಂತರಂಗದ ಮೂಲಕ ನಮ್ಮ ಮನಸ್ಸಿಗೆ, ಬುದ್ಧಿಗೆ ಒಳ್ಳೆಯ ಪ್ರಚೋದನೆ ಕೊಡುತ್ತಾನೆ. ಈ ಪ್ರಚೋದನೆ ಕೊಡುವ ಪ್ರಕ್ರಿಯೆ ಮತ್ತದೇ ಜನ್ಮಾಂತರದ ಕರ್ಮಬಂಧನದ ಜಾಲರಿಯಲ್ಲಿ ಸಿಲುಕಿರುತ್ತದೆ. ಎಲ್ಲರ ಮನಸ್ಸಿಗೂ ಒಳ್ಳೆಯ ಪ್ರಚೋದನೆಯನ್ನೇ ಕೊಡಬೇಕೆಂದೇನಿಲ್ಲ, ಕೆಲವರಿಗೆ ಕೆಟ್ಟ ಪ್ರಚೋದನೆಯನ್ನೂ ಕೊಡಬಹುದು. ಒಂದೊಮ್ಮೆ ಹಾಗೆ ಕೆಟ್ಟ ಪ್ರಚೋದನೆಯನ್ನು ಕೊಟ್ಟರೆ ಆ ವ್ಯಕ್ತಿ ಇಲ್ಲಸಲ್ಲದ ವಿಕೃತಿಗಳನ್ನು ನಡೆಸಿ, ಸಮಾಜಬಾಹಿರ ಕೃತ್ಯಗಳನ್ನು ನಡೆಸಿ ನಿಂದನೆಗೊಳಗಾಗುತ್ತಾನೆ!

ನಾವು ಎಷ್ಟೇ ಬುದ್ಧಿ ಸ್ಥಿಮಿತದಲ್ಲಿದ್ದರೂ ವಿರುದ್ಧಲಿಂಗಿಗಳು ಪರಸ್ಪರ ಏಕಾಂತದಲ್ಲಿ ಸಿಕ್ಕಾಗ ಎಲ್ಲೋ ಮನದ ಮೂಲೆಯಲ್ಲಿ ಕಾಮತೃಷೆಯ ಹಾವು ಹೆಡೆಯಾಡುತ್ತದೆ. ಹಾಗೊಮ್ಮೆ ಕೃತಿಯಿಂದ ನಾವು ಯಾವುದೇ ನೀತಿ ಬಾಹಿರ ಕೆಲಸವನ್ನು ಮಾಡದೇ ಮಾನಸಿಕವಾಗಿ ಅದನ್ನು ಕಲ್ಪಿಸಿಕೊಂಡರೂ ಸಹ ಅದು ಮಾನಸಿಕ ವ್ಯಭಿಚಾರ ಎನಿಸಿಕೊಳ್ಳುತ್ತದೆ. ಒಂದು ಹುಡುಗಿಯನ್ನು ಮನದಲ್ಲೇ ಸಂಭೋಗಿಸಿದಂತೇ ಕಲ್ಪಿಸಿಕೊಂಡರೆ ಅದಕ್ಕೆ ನಿಜವಾಗಿಯೂ ಹುಡುಗಿಯನ್ನು ಸಂಭೋಗಿಸಿದಾಗ ಸಿಗಬಹುದಾದ ಪಾಪದ ಫಲವನ್ನೇ ಶಾಸ್ತ್ರಕಾರರು ಹೇಳುತ್ತಾರೆ. ಜೀವನದಲ್ಲಿ ಗಂಡು-ಹೆಣ್ಣಿಗೆ ಒಂದೇ ಮದುವೆ, ಆ ಮದುವೆಯಲ್ಲಿ ಅಗ್ನಿಸಾಕ್ಷಿಯಾಗಿ ಕೈಹಿಡಿದ ಜೀವನದ ಪಾಲುದಾರ ವ್ಯಕ್ತಿಯನ್ನು

|| ಧರ್ಮೇಚ ಅರ್ಥೇಚ ಕಾಮೇಚ ನಾತೀ ಚರಾಮಿ || -

ಧರ್ಮದಲ್ಲಿ, ಅರ್ಥದಲ್ಲಿ, ಕಾಮದಲ್ಲಿ ಅಂದರೆ ಧರ್ಮಾಚರಣೆಯಲ್ಲೂ ದುಡಿಮೆಯಲ್ಲೂ ಕಾಮದಲ್ಲೂ ಕೇಳಿಯೇ ಮುನ್ನಡೆಯುತ್ತೇನೆಯೇ ಹೊರತು ಆ ವ್ಯಕ್ತಿಯನ್ನು ಬಿಟ್ಟು ಈ ವಿಷಯಗಳಲ್ಲಿ ಏಕಾಏಕಿ ತೊಡಗಿಕೊಳ್ಳಲಾರೆ ಎಂಬುದಾಗಿ ವಾಗ್ದಾನ ಮಾಡುತ್ತಾರೆ. ಈ ವಾಗ್ದಾನದಂತೇ ಗಂಡು ಹೆಣ್ಣಿನ ಹೆಣ್ಣು ಗಂಡಿನ ಒಪ್ಪಿಗೆಯಿಲ್ಲದೇ ಈ ವಿಷಯಗಳಲ್ಲಿ ಮುಂದುವರಿಯಕೂಡದು. ಆದರೆ ಮಂತ್ರಗಳ ಅರ್ಥವನ್ನೇ ತಿಳಿಯದ ನಮಗೆ ಗಲಾಟೆಯ ಮಧ್ಯೆ ಮದುವೆಯ ಮಂಟಪದಲ್ಲಿ ಏನು ಹೇಳಿದರು ಎಂದು ತಿಳಿಯುವ ವ್ಯವಧಾನವಾದರೂ ಎಲ್ಲಿರುತ್ತದೆ?

ಎಂತಹ ಒಳ್ಳೆಯ ವ್ಯಕ್ತಿಯೂ ಕೂಡ ಮನುಷ್ಯ ಸಹಜವಾಗಿ ಮಾನಸಿಕವಾಗಿ ಕೆಲವೊಮ್ಮೆ ವ್ಯಭಿಚಾರಿಯಾಗಿಬಿಡುತ್ತಾನೆ. ಇದಕ್ಕೆ ಉದಾಹರಣೆಯನ್ನು ನೋಡಿ. ಒಬ್ಬಾತ ಬಹಳ ಒಳ್ಳೇ ಮನುಷ್ಯನಿದ್ದನಂತೆ. ಆತನ ಮನೆಯ ಎದುರು ಮನೆಯಲ್ಲಿ ಸುಂದರವಾದ ವ್ಯಭಿಚಾರೀ ಹೆಂಗಸೊಬ್ಬಳು ಇದ್ದಳಂತೆ. ಆಕೆಗೆ ನೂರೆಂಟು ಗಿರಾಕಿಗಳು. ಈತನಿಗೆ ದಿನವೂ ಎದುರಿಗೆ ಯಾರು ಬರುತ್ತಾರೆ ಹೋಗುತ್ತಾರೆ ಎಂದು ಕಣ್ಣುಹಾಯಿಸುವ ಮತ್ತು ಅದನ್ನೇ ತನ್ನಮನೆಗೆ ಬಂದವರ ಕೂಡ ಹೇಳಿಕೊಳ್ಳುವ ಚಪಲ. ಶಾರೀರಿಕವಾಗಿ ಆತ ಏನೂ ತಪ್ಪುಮಾಡಿಲ್ಲವಾದರೂ ಅವನ ಮನಸ್ಸು ಮಾತ್ರ ಅವಳೊಡನೆ ದಿನವೂ ಹತ್ತಾರುಬಾರಿ ಸಂಭೋಗಿಸಿಬಿಟ್ಟಿದೆ ! ಇಬ್ಬರೂ ಸತ್ತು ಯಮನಲ್ಲಿಗೆ ಬಂದಾಗ ಚಿತ್ರಗುಪ್ತ ಪಾಪ-ಪುಣ್ಯಗಳ ಹೊತ್ತಗೆಯನ್ನು ತೆರೆದು ಓದಿದನಂತೆ. ಅದರ ಪ್ರಕಾರ ವ್ಯಭಿಚಾರೀ ಹೆಂಗಸು ಕಡಿಮೆ ಪಾಪಗಳಿಸಿದವಳೂ ಹಾಗೂ ಈ ಒಳ್ಳೆಯ ವ್ಯಕ್ತಿ ಜಾಸ್ತಿ ಪಾಪವನ್ನು ಗಳಿಸಿದವನೂ ಆಗಿರುತ್ತಾರೆ. ಆಗಈ ವ್ಯಕ್ತಿ ಅಲ್ಲಿ ತಕರಾರು ಮಾಡುತ್ತಾನಂತೆ. ನಾನು ಏನೂ ಪಾಪಮಾಡಿಲ್ಲ. ಅವಳಾದರೆ ದಿನವೂ ನೂರಾರು ಜನರಿಗೆ ಸೆರಗು ಹಾಸುತ್ತಿದ್ದಳು ತನಗೆ ಅದು ಹೇಗೆ ಜಾಸ್ತಿ ಪಾಪ ? ಆಗ ಚಿತ್ರಗುಪ್ತ ಹೇಳಿದನಂತೆ " ಅಯ್ಯಾ ಅವಳು ತನ್ನ ಉದರಂಭರಣೆಗಾಗಿ ಅದನ್ನು ವೃತ್ತಿಯನ್ನಾಗಿ ನಡೆಸಿದಳು. ಆಕೆ ತನ್ನ ಶರೀರವನ್ನು ಬೇರೆಯವರಿಗೆ ಕೊಟ್ಟಾಗಲೆಲ್ಲಾ ಭಗವಂತನನ್ನೇ ನೆನೆಯುತ್ತಿದ್ದಳು. ನೀನಾದರೋ ಪ್ರತೀಸರ್ತಿ ಆಕೆಯ ಮನಗೆ ಗಿರಾಕಿ ಬಂದಗಲೆಲ್ಲಾ ನಿನ್ನ ಮನಸ್ಸಿನಲ್ಲಿ ಅವಳೊಟ್ಟಿಗೆ ಕ್ರಿಯೆಯಲ್ಲಿ ತೊಡಗುತ್ತಿದ್ದೆ. ಆಕೆ ಗಿರಾಕಿಯನ್ನು ಕಳುಹಿಸಿ ದಿನವಾದರೂ ನಿನ್ನ ಮನಸ್ಸು ಅದನ್ನೇ ಧ್ಯಾನಿಸುತ್ತಿತ್ತು. ಹೀಗಾಗಿ ಕೊಳಕು ತುಂಬಿದ ನಿನ್ನ ಮನಸ್ಸು ಪಾಪದ ಕೂಪವಾಗಿದೆ."

ಶಾರೀರಿಕ ವ್ಯಭಿಚಾರ ವ್ಯಕ್ತಿಗಳನೇಕರನ್ನು ಹಾಳುಗೆಡವಿದರೆ ಮಾನಸಿಕ ವ್ಯಭಿಚಾರ ಆ ವ್ಯಕ್ತಿಯೊಬ್ಬನನ್ನೇ ಹಾಳುಗೆಡವುತ್ತದೆ. ಇಂತಹ ಅಗೋಚರವಾದ ಮಾನಸಿಕ ಪಾಪವನ್ನು ಜಪ-ತಪದ ಪ್ರಭಾವಳಿಯುಳ್ಳ ಬ್ರಾಹ್ಮಣರಿಗೆ ಧನವನ್ನು ದಾನವಾಗಿ ಕೊಡುವ ಮೂಲಕ ಅಲ್ಪಮಟ್ಟಿಗೆ ಪರಿಹರಿಸಿಕೊಳ್ಳಬಹುದು ಎಂಬುದಾಗಿ ಶಾಸ್ತ್ರ ಸಾರುತ್ತದೆ. ಅದಕ್ಕೆಂತಲೇ ಯಜ್ಞಯಾಗಾದಿ ಒಳ್ಳೆಯ ಕಾರ್ಯಗಳನ್ನು ಮಾಡುವ ಪೂರ್ವಭಾವಿಯಾಗಿ ಕಂಕಣಗ್ರಹಣಮಾಡುವ ಕಾಲದಲ್ಲಿ ’ ಕೃಛ್ರಾಚರಣೆ ’ ಎಂಬ ಪ್ರಾಯಶ್ಚಿತ್ತ ವಿಧಿಯೊಂದಿದೆ. ಅದನ್ನು ಬಹುತೇಕ ವೈದಿಕರು ಮಾಡಿಸುತ್ತಾರೆ. ಇಲ್ಲಿ ಪಾಪದ ವರ್ಗಾವಣೆಯಾಗುವುದರಿಂದ ದಾನರೂಪದ ಧನ ಪಾಪವನ್ನು ಹೊತ್ತು ತರುವುದರಿಂದ ದಾನವನ್ನು ಸ್ವೀಕರಿಸಿದ ಜನ ತನ್ನ ವೈಯ್ಯಕ್ತಿಕ ಜಪ-ತಪದಿಂದ ಅದನ್ನು ನಿವಾರಿಸಿಕೊಳ್ಳಬೇಕಾಗುತ್ತದೆ.

|| ಮನ ಏವ ಮನುಷ್ಯಾಣಾಂ || ಮನಸ್ಸೇ ಎಲ್ಲದಕ್ಕೂ ಕಾರಣವಾಗಿರುವುದರಿಂದ ಮಾನಸಿಕವಾಗಿ ನಾವು ಮಾಡುವ ವ್ಯಭಿಚಾರವೂ ಶಾರೀರಿಕವಾಗಿ ಮಾಡಿದಷ್ಟೇ ಪರಿಣಾಮಕಾರಿ ಎಂಬ ದೃಷ್ಟಿಯಲ್ಲಿ ಮನಸ್ಸಿಗೆ ಯಾವಾಗಲೂ ಅಂತಹ ಆಲೋಚನೆಗಳು ಬಾರದಿರಲಿ ಒಳ್ಳೆಯ ಪ್ರೇರೇಪಣೆಯೇ ಆಗಲಿ ಎಂಬುದೇ ನಿತ್ಯದ ಪ್ರಾರ್ಥನೆಯಾಗಿದೆ. ಈ ಪ್ರಾರ್ಥನೆಯನ್ನೇ ಮೌನವಾಗಿ ಮನದಲ್ಲಿ ಧರಿಸುವುದೇ ಧ್ಯಾನವೆನಿಸಿಕೊಳ್ಳುತ್ತದೆ. ಶರೀರಕ್ಕೆ ಸ್ನಾನವಿದ್ದಹಾಗೇ ಮನಸ್ಸಿಗೆ ಧ್ಯಾನವೇ ಸ್ನಾನವಾಗುತ್ತದೆ! ಧ್ಯಾನದಲ್ಲಿ ನಮ್ಮಂತರಂಗವನ್ನು ಶೋಧಿಸಿಕೊಳ್ಳಬೇಕೆಂದು ದಾಸರು ಹೇಳಿದರು

ಮನವ ಶೋಧಿಸಬೇಕು ನಿತ್ಯ
ನಾವು ಅನುದಿನ ಮಾಡಿದ ಪಾಪ ಪುಣ್ಯದ ವೆಚ್ಚ .....

ಎಂದು. ಎಂತಹ ಅದ್ಬುತ ಜ್ಞಾನಲಹರಿ ! ಅಂತಹ ಹಿರಿಯರಿಗೆ ನಮಿಸುತ್ತಾ ನಮ್ಮ ಅಂತರಂಗವನ್ನು ಶುದ್ಧೀಕರಿಸುವ ಪ್ರಕಿಯೆಯಲ್ಲಿ ತೊಡಗೋಣ ಅಲ್ಲವೇ ?