ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Monday, January 25, 2010

ವಿಜಯೋತ್ಸವ


ವಿಜಯೋತ್ಸವ

ವಿಜಯೋತ್ಸವ ಇದುವೆ ವಿಜಯೋತ್ಸವ
ಜಗದ ಜನತೆ ನೆನೆದು ನೋಡೆ ಗಣರಾಜ್ಯೋತ್ಸವ

ವಿವಿಧ ಧರ್ಮ ಮತಗಳು ಸವಿಧ ನೀತಿ ಪಥಗಳು
ತ್ರಿವಿಧ ದಾಸೋಹ ನಡೆಪ ಸಂತ ಮಹಂತರುಗಳು
ಭವದ ದೇಶ ಮೆರೆಸಲು ಬರದ ಬವಣೆ ತಣಿಸಲು
ಕವಿದ ಮೋಡ ಸರಿಸಲು ಭಾರತವನು ಬೆಳಗಲು

ವಿಜ್ಞಾನದ ನಡೆಗಳು ತಂತ್ರಜ್ಞಾನ ಪಡೆಗಳು
ಸುಜ್ಞಾನದ ದೀಪವಾಗಿ ಹಲವು ಮಾಧ್ಯಮಗಳು
ಅಜ್ಞಾನವ ಕಳೆಯಲು ಅನ್ಯಾಯವ ತಡೆಯಲು
ಪ್ರಜ್ಞಾನವ ವಿಸ್ತರಿಸಿ ಭಾರತವನು ಬೆಳಗಲು

ಹಲವು ರಾಜ್ಯಂಗಳು ಕೆಲವು ಪ್ರಾಂತಂಗಳು
ಹಲವು ವೇಷಭೂಷಣ ಕೆಲವು ನೀತಿದರ್ಪಣ
ಒಲವಿನಿಂದ ಕೂಡಿದ ಹಲವು ಭಾಷೆನಮ್ಮದು
ಗೆಲುವನೆಮಗೆ ನೀಡಲು ಭಾರತವನು ಬೆಳಗಲು

ಅರಸು ವಂದಿ-ಮಾಗಧರು ಹರಸುತಾಳಿ ಅಳಿದರು
ಬೆರೆಸಿ ಹಾಲು-ಜೇನು ನಮ್ಮ ಸಾಹಿತಿಗಳು ಸುರಿದರು
ಒರೆಸೆ ಕಣ್ಣನೀರ ಹನಿಯ ಸೋದರಿಯರು ಬರುವರು
ಹರಿಸಲೆಮ್ಮನೆಲ್ಲರು ಭಾರತವನು ಬೆಳಗಲು

ಕಲೆಯನಾಡು ಭಾರತ ಕರುಣೆ ನಮಗೆ ಕರಗತ
ಮಲೆಯನಾಡು ಭಾರತ ದಯೆಯು ನಮ್ಮ ರಕುತ
ಬಲಿದನಾಡು ಭಾರತ ಅನುಕಂಪವ ಬೀರುತ
ಒಲಿದನಾಡು ಭಾರತ ವಿಶ್ವಪ್ರೇಮ ಮೆರೆಯುತ

ಜೈ ಹಿಂದ್ ಜೈ ಹಿಂದ್

ಜೈ ಹಿಂದ್
ಜೈ ಹಿಂದ್ ಜೈ ಹಿಂದ್