ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Saturday, May 29, 2010

ನಮ್ಮ ಭಾರತ


ನಮ್ಮ ಭಾರತ

ಸೇತು ರಾಮೇಶ್ವರದಿಂದ ಮೇರು ಪರ್ವತದನಕ
ಹಬ್ಬಿರುವ ಉದ್ದದಾ ನಮ್ಮ ಭಾರತವು
ಆತುಕೊಂಡಿದೆ ವಿವಿಧ ಧರ್ಮ ಆಚಾರಗಳ
ಈ ಕಥೆಯ ಕೇಳಿ ಸುಖಿಸುವೆವು ಅನುದಿನವು

ಗಂಗೆ ಕಾವೇರಿ ನರ್ಮದೆ ಕೃಷ್ಣೆ ಗೋದೆಯರು
ತುಂಗೆ ಕಪಿಲೆ ಕಬಿನಿ ಬ್ರಹ್ಮಪುತ್ರೆಯರೂ
ಅಂಗಳದಿ ಮಂಗಳದ ದೀಪ ಶರಾವತಿಯು
ಬಂಗಾಳಕೊಲ್ಲಿಯಲಿ ಸಂಘಮಿಪ ನದಿಗಳು

ಭಾಷೆ ಹಲವು ನಮದು ಶ್ರೀಮಂತವಾಗಿಹುದು
ವೇಷಭೂಷಣಗಳಲು ಭಿನ್ನತೆಯ ಮೆರೆದೂ
ಕೋಶತುಂಬಲು ಹಗಲು ಇರುಳೆನದೆ ಶ್ರಮಿಸುವೆವು
ಆಶಯವು ಒಂದೇ ತಾಯೊಲುಮೆ ನಮಗಿರಲು

ಒಡಹುಟ್ಟಿದವರಂತೆ ಬದುಕಿ ಬಂದಿಹೆವಿಲ್ಲಿ
ನಡುತಟ್ಟಿ ಎದೆತಟ್ಟಿ ಸ್ವಾಭಿಮಾನದಲಿ
ಇಡಿದಾದ ಹಳೆಯ ಭಾರತ ನಮದು ನೆಲವೆನುತ
ಗಡಿನಾಡ ಜನಕೆಲ್ಲ ಗುಡುಗಿ ಹೇಳುವೆವು

ಬಲುರುಚಿಯ ಖಾದ್ಯ ನೈವೇದ್ಯ ಭಾರತಜನಕೆ
ಖಲುಶಿತದ ಮನವ ನಿರ್ಮಲಗೊಳಿಸುತಿರಲು
ಹಲಸು ಮಾವು ಬಾಳೆ ಏಲಕ್ಕಿ ಎಳೆನೀರು
ಬಳಸುತಾ ಭೂರಮೆಯ ಸಗ್ಗ ನೆನೆಯುವೆವು

ತಾಯಿ ಭಾರತಿ ನಿಂತು ಹರಸಿ ಮಕ್ಕಳನೆಲ್ಲ
ಬಾಯಿಗನ್ನವನಿಕ್ಕಿ ಮುದ್ದಿಸುವ ಕಾಲ
ಹಾಯ ಹರಿಗೋಲಿಕ್ಕಿ ದುರ್ಗಮದ ನದಿಯಲ್ಲಿ
ಮಾಯದಲಿ ರಮಿಸುವಳು ಬರಸೆಳೆದು ಬಹಳ