ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Wednesday, June 16, 2010

ರಾಕ್ಷಸರು!


ರಾಕ್ಷಸರು ಎಲ್ಲಿದ್ದಾರೆ ಈ ಜಗದಲ್ಲಿ? ಜಗತ್ತಿನಲ್ಲಿ ಹಲವು ರೀತಿಯಲ್ಲಿ ನಮಗೆ ರಾಕ್ಕಸರು ಸಿಗುತ್ತಾರೆ. ರಾಕ್ಷಸರು ಎಂದ ಮಾತ್ರಕ್ಕೆ ವಿರೂಪಿಗಳು, ಕೋರೆ ಹಲ್ಲುಳ್ಳವರು ಎಂಬ ಚಿತ್ರ ನಮ್ಮ ಮನಃಪಟಲದ ಮೇಲೆ ಬಂದು ನಿಲ್ಲುತ್ತದೆ. ಆದರೆ ರಾಕ್ಷಸರೂ ಮನುಷ್ಯರೇ, ಅವರಲ್ಲಿನ ರಕ್ಕಸಗುಣದಿಂದ ಅವರು ರಾಕ್ಷಸರಾಗುತ್ತಾರೆ. ಜನಸಾಮಾನ್ಯರಿಗೆ ನಾನಾ ರೀತಿಯಲ್ಲಿ ಉಪಟಳ ಕೊಡುವ ಎಲ್ಲರೂ ರಾಕ್ಷಸರೇ ಆಗಿರುತ್ತಾರೆ. ನಮ್ಮ ಮಧ್ಯೆಯೇ ನೋಡಿ ಪಂಚಾಗ್ನಿಯ ಪರಮಹಂಸ ಎಂದುಕೊಂಡು ನಂಬಿಸಿ ನಾಮವೆಳೆವವ ಒಬ್ಬನಾದರೆ ಉದ್ಯೋಗವರಸಿ ಬಂದ ವ್ಯಕ್ತಿಯ ಕಿಡ್ನಿ ಮುಂತಾದ ಅಂಗಾಂಗಗಳನು ಕದ್ದು ಮಾರುವವರು ಇನ್ನೊಂದೆಡೆ, ಸಾರಾಯಿ ತಯಾರುಮಾಡಿ ಸಾವಿರ್ ಸಾವಿರ ಸಂಸಾರಗಳನ್ನು ಬೀದಿಪಾಲುಮಾಡಿ ರಾಜಕೀಯದಲ್ಲಿ ತಾವು ಮುನ್ನಡೆದು ಮೆರೆಯುವರು ಕೆಲವರಾದರೆ, ರೈತರ ಭೂಮಿಯನ್ನು ವಿನಾಕಾರಣ ಕಸಿದು ಅವರನ್ನೆಲ್ಲ ಅನಾಥರನ್ನಾಗಿ ಮಾಡುವವರು ಕೆಲವರು, ನೆರೆ ಸಂತ್ರಸ್ತರಿಗೆ ಕೊಡಲೆಂದು ಸಂಗ್ರಹಿಸಿ ತಾವೇ ತಿಂದು ತೇಗುವವರು ಇನ್ನೂ ಕೆಲವರು, ದುಪ್ಪಟ್ಟು ಹಣ ಶೀಘ್ರಕೊಡುತ್ತೇವೆ ಎಂದು ಠೇವಣಿ ಪಡೆದು ನಾಮವೆಳೆವವರು ಮತ್ತೂ ಕೆಲವರು,ಅನಾಥ-ವೃದ್ಧರಿಗೆ ಆಶ್ರಯ ಕೊಡುವ ನೆಪದಲ್ಲಿ ಅವರನ್ನು ನೋಡಲಾರದ ಸ್ಥಿತಿಯಲ್ಲಿಟ್ಟು ಹಣಬಾಚುವವರು, ವಿದೇಶದಲ್ಲಿ ಕುಳಿತು ಗ್ಯಾಂಗು,ಮಾಫಿಯಾ ವ್ಯವಹಾರ ನಡೆಸುವವರು ಕೆಲವರು, ಶಿಕ್ಷಣ-ವೈದ್ಯಕೀಯ ಸೇವೆ ಈ ಎಲ್ಲಾ ರೀತಿಯಲ್ಲಿಯೂ ಮುಖವಾಡ ಧರಿಸಿ ಚೆನ್ನಾಗಿ ಮೇಯುವವರು ಹಲವರು ಅಲ್ಲವೇ? ಇಂಥವರನ್ನೆಲ್ಲಾ ರಾಕ್ಷಸರು ಎಂದು ಸಂಬೋಧಿಸಿದ್ದಾನೆ ಜಗದಮಿತ್ರ. ಜನಸಂತತಿ ಹಲ್ಲಿನ ಮಧ್ಯೆ ಇರುವ ನಾಲಿಗೆಯಂತೆ ಬದುಕಲು ಪ್ರಯತ್ನಿಸುವಾಗ ಇಂತಹ ಕುತ್ಸಿತ,ಕುಟಿಲ, ಕಪಟ,ಖೂಳ ರಕ್ಕಸತನವನ್ನು ನೆನೆಪಿಸಿಕೊಂಡು, ಪರಾಮರ್ಶಿಸಿಕೊಂಡು ಬದುಕಬೇಕು ಎಂದಿದ್ದಾನೆ ಜಗದಮಿತ್ರ. ಬೇಸರಗೊಡ ತನ್ನ ಮನದಿಂದ ಜನತೆಗಾಗಿ ಮೀಟಿ ತೆಗೆದ ರಾಗಗಳನ್ನು ಶಬ್ಧಗಳಲ್ಲಿ ಈ ರೀತಿ ಪೋಣಿಸಿಕೊಟ್ಟಿದ್ದಾನೆ ಜಗದಮಿತ್ರ--

ರಾಕ್ಷಸರು!

ಪಂಚಾಗ್ನಿ ಪರಮಹಂಸಾದಿ ಶಬ್ಧಗಳ
ಮಿಂಚಿನಾವೇಗದಲಿ ಬಳಸುತ್ತ ಜನಕೆ
ಸಂಚುಮಾಡುತ ಹಲವು ಮಿಥ್ಯ ಸತ್ಯವದೆಂದು
ವಂಚಿಸುವರೈ ನೋಡ | ಜಗದಮಿತ್ರ

ಉದ್ಯೋಗವೀವೆನುತ ಕರೆದು ಯುವಪೀಳಿಗೆಯ
ಸಾಧ್ಯವಿರುವೆಲ್ಲರೀತಿಯಲಿ ಹಣಪಡೆದು
ವೇದ್ಯವಾಗದರೀತಿ ಅಂಗಾಂಗ ಕಡಿದಿರಿಸಿ
ಮೇಧ್ಯ ಭಕ್ಷಿಸುತಿಹರು | ಜಗದಮಿತ್ರ

ಸಾರಾಯಿ ಮಾರುತ್ತ ಸಾರಾಸಗಾಟಾಗಿ
ಪಾರಾಯಣ ಭಜನೆ ಹೊರಗೆ ತೋರಿಕೆಗೆ
ಯಾರು ಏನಾದರೇನ್ ರಾಜಕೀಯದಿ ತಾವು
ಜೋರಾಗಿ ಬದುಕುವರು | ಜಗದಮಿತ್ರ

ಇದ್ದುದನು ಹೇಳಿದರೆ ಎದ್ದು ತಾವೆದೆಗೊದೆದು
ಗೆದ್ದು ತಾವಾಳಿಹರು ರಾಜ್ಯ-ದೇಶವನು
ಸದ್ದಿರದೆ ಮಾರುತ್ತ ಮಣ್ಣಮಕ್ಕಳ ಭೂಮಿ
ಮೆದ್ದು ಮೆರೆವರು ಜಗದಿ| ಜಗದಮಿತ್ರ

ಹುಂಡಿಯನು ಹಿಡಿದಿಡಿದು ಕಂಡಕಂಡಲ್ಲೆಲ್ಲ
ದಂಡೆದ್ದುಹೋಗಿ ಧನಕನಕ ಸಂಗ್ರಹಿಸಿ
ಉಂಡಿರದ ಆ ಜನಕೆ ಪರಿಹಾರವೀವೆನುತ
ಉಂಡು ಕೈ ತಿರುವಿದರು | ಜಗದಮಿತ್ರ

ದುಪ್ಪಟ್ಟು ಹಣವೆನುತ ಆಸೆ-ಆಮಿಷ ತೋರಿ
ಉಪ್ಪಿಟ್ಟು-ಕೇಸರೀಬಾತು ನೀಡುತಲಿ
ತಪ್ಪೇನು ಗೊತ್ತಿರದ ಜನಗಳಿಗೆ ನೀಡಿಹರು
ಕಪ್ಪೆ-ಕಲ್ಲಿನ ಚೀಲ | ಜಗದಮಿತ್ರ

ಅನಾಥ-ವೃದ್ಧರಿಗೆ ಆಶ್ರಯವ ಈವೆಂದು
ಕನಾತು ಕಟ್ಟಿ ಕೋಣೆಯ ಮೂರು ತೋರಿ
ದುರ್ನಾತ ಹೊಡೆವಂತ ಹಂದಿಗೂಡಲಿ ಕೂಡಿ
ನಾನಾಥರದಿ ಮೆಲ್ವರ್ | ಜಗದಮಿತ್ರ

ತಂತ್ರಗಾರಿಕೆಯಿಂದ ಯಂತ್ರೋಪಕರಣವನು
ಮಂತ್ರಿಮಾಗಧರಿಂದ ಮರೆಯಲ್ಲಿ ಪಡೆದು
ಕಂತ್ರಿಬುದ್ಧಿಯ ಬಳಸಿ ದೇಶದ್ರೋಹಿಗಳಾಗಿ
ಸಂತ್ರಸ್ತರನು ಮಾಳ್ಪರ್ | ಜಗದಮಿತ್ರ