ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Thursday, October 7, 2010

ಮಲ್ಟಿ ಮಸ್ಸಾಜ್ ಥೆರಪಿ !!

ಮಲ್ಟಿ ಮಸ್ಸಾಜ್ ಥೆರಪಿ!!


" ನಮಸ್ಕಾರ ವೀಕ್ಷಕರೇ, ನಿಮಗೆಲ್ಲಾ ಕಳಪೆ ಟಿವಿಗೆ ಸ್ವಾಗತ ಈ ಹಿಂದೆ ಹಲವಾರು ವಿಶೇಷ ಕಾರ್ಯಕ್ರಮಗಳನ್ನು ನೀಡಿ ಭಾರತದಲ್ಲಿಯೇ ನಂಬರ್ ಒನ್ ಎಂಬ ಹೆಗ್ಗಳಿಕೆಗೆ ಪಾತ್ರವಾದ ಕಳಪೆ ಟಿವಿ ಪ್ರತೀವಾರ ತಮಗೊಂದು ಹೊಸ ಹೊಸ ವಿಚಾರ ಮುಂಡಿಡುತ್ತಿದೆ. ಇವತ್ತೂ ಕೂಡ ನಮ್ಮ ಈ ವಿಶೇಷ ಮಲ್ಟಿ ಮಾಸಾಜ್ ಥೆರಪಿ ಕಾರ್ಯಕ್ರಮದ ಮೂಲಕ ತಮಗೆಲ್ಲಾ ಹಲವು ಗೊತ್ತಿರದ ಮಸಾಜ್ ಥೆರಪಿಗಳ ಬಗ್ಗೆ ಹೇಳಲಿಕ್ಕಿದ್ದೇವೆ. ಈ ನಮ್ಮ ಕಾರ್ಯಕ್ರಮಕ್ಕೆ ಮಲ್ಟಿ ಥೆರಪಿಸ್ಟ್ ಡಾ| ಕಪ್ಪೆಚೆನ್ನಿಗಪ್ಪ ಅವರು ಚಿಕಾಗೋದಿಂದ ಬಂದಿದಾರೆ, ಅವರು ಚಿಕಾಗೋದಲ್ಲಿ ಈ ಒಂದು ರಂಗದಲ್ಲಿ ತಮ್ಮ ಸೇವೆಯನ್ನು ಸಲ್ಲಿಸುತ್ತ ಬಹಳ ಪ್ರಖ್ಯಾತರಾಗಿದ್ದಾರೆ ಹಾಗೂ ಡಾ| ವಿನಯಾ ವೈಭವಿಯವರು ಬಂದಿದ್ದಾರೆ, ಅವರು ಡೆನ್ಮಾರ್ಕ್ ನಲ್ಲಿ ತಮ್ಮ ಥೆರಪಿ ಸೆಂಟರ್ ನಡೆಸುತ್ತಾ ಖ್ಯಾತಿಹೊಂದಿದ್ದಾರೆ. ಡಾ| ಕಪ್ಪೆಚೆನ್ನಿಗಪ್ಪನವರಿಗೆ ನಮಸ್ಕಾರ, ಕಾರ್ಯಕ್ರಮಕ್ಕೆ ಸ್ವಾಗತ"

" ನಮಸ್ಕಾರ "

" ಡಾ| ವಿನಯಾ ವೈಭವಿಯವರಿಗೆ ನಮಸ್ಕಾರ ಹಾಗೂ ಕಾರ್ಯಕ್ರಮಕ್ಕೆ ಸ್ವಾಗತ"

" ನಮಸ್ಕಾರ "

" ಡಾ| ಕಪ್ಪೆಯವ್ರೇ, ಇತ್ತೀಚಿನ ದಿನಗಳಲ್ಲಿ ಆಧುನಿಕ ಜೀವನದ ಕೆಲಸದ ಒತ್ತಡಗಳು ಹಲವಾರು ಸಮಸ್ಯೆಗಳಿಗೆ ಕಾರಣವಾಗುತ್ತವೆ ಎಂಬುದನ್ನು ಸಮಾಜ ಮನಗಂಡಿದೆ. ದಿನವೂ ಒಂದಿಲ್ಲೊಂದು ಕಾಯಿಲೆ ಇದರಿಂದ ಹುಟ್ಟಿಕೊಳ್ಳುಟ್ಟಲೇ ಇದೆ. ಈ ನಿಟ್ಟಿನಲ್ಲಿ ಮಾನಸಿಕ ಒತ್ತಡಗಳನ್ನು ದೇಹವನ್ನು ಮಸಾಜ್ ಮಾಡುವ ಮೂಲಕ ಪರಿಹರಿಸಬಹುದೆಂದು ತಜ್ಞರು ಹೇಳುತ್ತಾರೆ. ಮಸಾಜ್ ಗಳಲ್ಲಿ ಹಲವು ತೆರನಾದ ಮಸಾಜ್ ಗಳು ಮನುಷ್ಯನಿಗೆ ಮುದನೀಡುತ್ತವೆ. ಅದರಲ್ಲಂತೂ ಪ್ರಾಯೋಗಿಕವಾಗಿ ತಜ್ಞರು ಕಂಡುಹಿಡಿದ ಹೊಸ ಹೊಸ ಥೆರಪಿಗಳು ಒಂದಕ್ಕಿಂತ ಒಂದು ಭಿನ್ನ ಮತ್ತು ವಿಶೇಷ. ಬನ್ನಿ ಈ ವಿಷಯದ ಬಗ್ಗೆ ನುರಿತ ತಜ್ಞರು ಏನುಹೇಳುತ್ತಾರೋ ನೋಡೋಣ. ಡಾ| ಕಪ್ಪೆಯವರೇ ತಾವೇನಂತೀರಿ "

" ಇದೀಗ ತಾವು ಹೇಳಿದಂತೇ ಮಸಾಜ್ ಥೆರಪಿಗಳು ಮಾನವನ ಬಾಡಿ ಹಾಗೂ ಮೈಂಡ್ ಗೆ ರಿಲಾಕ್ಸ್ ಆಗಲು ಸಹಾಯಮಾಡುತ್ತವೆ. ನಮ್ಮ ಥೆರಪಿ ಸೆಂಟರಿನಲ್ಲಿ ನಾವು ಕಪ್ಪೆ ಮಸಾಜ್ [ಫ್ರಾಗ್ ಮಸಾಜ್] ಎಂಬ ಹೊಸ ರೀತಿಯ ಥೆರಪಿಯನ್ನು ಕಂಡುಹಿಡಿದಿದ್ದೇವೆ. ಇದು ಬಹಳ ಫಲಪ್ರದವಾಗಿ ಕಂಡುಬರುತ್ತದೆ. ತರಬೇತುಗೊಳಿಸಿದ ೧೦-೧೨ ದೊಡ್ಡ ಕಪ್ಪೆಗಳನ್ನು ರೂಮಿನಲ್ಲಿ ಬೆಡ್ ಮೇಲೆ ಮಲಗಿದ ವ್ಯಕ್ತಿಯ ಮೈಮೇಲೆ ಬಿಡಲಾಗುತ್ತದೆ. ಅವು ಅತ್ತಿಂದಿತ್ತ ಜಿಗಿಯುತ್ತ ಕೂಗುತ್ತ, ಉಚ್ಚೆಹಾರಿಸಿದಾಗ ಎಂತಹ ಟೆನ್ಶನ್ ಇದ್ದರೂ ತಂತಾನೇ ಇಳಿದುಹೋಗುತ್ತದೆ. ೩ ವರ್ಷಗಳ ಹಿಂದೆ ಪ್ರಪ್ರಥಮವಾಗಿ ಇದನ್ನು ನಾಸಾದ ವಿಜ್ಞಾನಿಯೊಬ್ಬರ ಮೇಲೆ ಪ್ರಾಯೋಗಿಕವಾಗಿ ನೋಡಬೇಕೆಂದುಕೊಂಡಾಗ ಬೆಂಗಳೂರಿನಿಂದ ಮಗಳಮನೆಗೆ ಬಂದ ರಾಮೇಗೌಡರು ಮೊದಲಾಗಿ ತಾವೇ ಬರುತ್ತೇವೆ ಎಂದು ಹಠಮಾಡಿದ್ದರಿಂದ ಅವರ ಮೇಲೇ ಪ್ರಯೋಗಿಸಿದೆವು. ಪ್ರಯೋಗ ಮುಗಿದು ಹೊರಗೆ ಬಂದಾಗ ರಾಮೇಗೌಡರ ಟೆನ್ಶನ್ ನಿವಾರಣೆಯಾಗಿ ಬರೇ ಕಪ್ಪೆ ಕಪ್ಪೆ ಎನ್ನುತ್ತಿದ್ದರು. ಸ್ವಲ್ಪ ಹೆದರಿದ್ದಾರೇನೋ ಎನಿಸಿತು. ಮಾರನೇ ದಿನದಿಂದ ಆರಾಮಾಗಿದ್ದಾರೆ. ಕಪ್ಪೆಯನ್ನು ಕಂಡರೆ ಆಗೋದಿಲ್ಲ ಅಷ್ಟೇ "

" ಡಾ| ವಿನಯಾ ಅವರೇ ತಮ್ಮ ಅಭಿಪ್ರಾಯವೇನೆಂದು ತಿಳಿದುಕೊಳ್ಳಬಹುದೇ ? "

" ಡಾ| ಕಪ್ಪೆಚೆನ್ನಿಗಪ್ಪ ಹೇಳಿದ ಹಾಗೇ ಹೊಸ ಥೆರಪಿಗಳು ಬಹಳ ಉತ್ತಮ ಫಲಿತಾಂಶೆ ನೀಡುತ್ತಿವೆ. ಡೆನ್ಮಾರ್ಕ್ ನ ನಮ್ಮ ಯೂನಿಟ್ ನಲ್ಲಿ ನಾವು ಭಾರತೀಯ ಮೂಲದ ಗಿಳಿಗಳನ್ನು ಕೊಂಡೊಯ್ದು ಗಿಳಿ ಥೆರಪಿ [ಪ್ಯಾರಟ್ ಮಸಾಜ್] ಮಾಡುತ್ತೇವೆ, ಇದಲ್ಲದೇ ಮಾಸ್ಕ್ವಿಟೋ ಮಸಾಜ್ ಅಥವಾ ಸೊಳ್ಳೆ ಥೆರಪಿ ಸಹಿತ ನಡೆಸುತ್ತಿದ್ದೇವೆ. ಬೆಡ್ಬಗ್ ಮಸಾಜ್ ಅಥವಾ ತಿಗಣೆ ಥೆರಪಿ ಕೂಡಾ ಪ್ರಾಯೋಗಿಕ ಹಂತದಲ್ಲಿದೆ. ಇನ್ನೇನು ಕೆಲವೇ ದಿನಗಳಲ್ಲಿ ಅದನ್ನೊ ಸಹಿತ ಭಾರತಕ್ಕೆ ಬಂದು ಸಾರ್ವಜನಿಕ ಸೇವೆಗೆ ಅರ್ಪಿಸಲಿದ್ದೇವೆ. "

" ತಮ್ಮ ಥೆರಪಿಗಳ ಬಗ್ಗೆ ಸ್ವಲ್ಪ ವಿವರವಾಗಿ ತಿಳ್ಕೋಬೌದಾ ಡಾ| ವಿನಯಾ ಅವರೇ ? "

" ಅವಶ್ಯವಾಗಿ, ಮೊದಲನೇದಾಗಿ [ಪ್ಯಾರಟ್ ಮಸಾಜ್] ಗಿಳಿಥೆರಪಿಯಲ್ಲಿ ಹತ್ತಾರು ಗಿಳಿಗಳನ್ನು ಟ್ರೇನ್ ಮಾಡಿ ಅವುಗಳು ಕುಳಿತಿರುವ ರೂಮಿನಲ್ಲಿ ವ್ಯಕ್ತಿಯನ್ನು ಬಿಡಲಾಗುತ್ತದೆ. ಲೈಟ್ ಆಗಿ ಬ್ಯಾಡಾಗಿಮೆಣಸಿನ ಹೊಗೆ ಹಾಕಿದಾಗ ಗಿಳಿಗಳು ಕ್ರೋಧಗೊಂಡು ಹಾರಾಡತೊಡಗುತ್ತವೆ. ಅವುಗಳ ಜೊತೆ ವ್ಯಕ್ತಿಕೂಡ ಸ್ವಲ್ಪ ಕೆಮ್ಮುತ್ತ ಕುಣಿಯುವುದರಿಂದ ಗಿಳಿಗಳು ಹೆದರಿ ಆ ವ್ಯಕ್ತಿಯ ಮೈಮೇಲೆ ಹಿಕ್ಕೆ ಹಾಕುತ್ತವೆ ಮತ್ತು ಕೆಲವೊಮ್ಮೆ ಸ್ವಲ್ಪ ಕಚ್ಚುತ್ತವೆ. ಸರಿಯಾದ ಆಯಕಟ್ಟಿನ ನರಮಂಡಲವಿರುವ ಭಾಗಗಳಲ್ಲಿ ಅವು ಕಚ್ಚುವುದರಿಂದ ಕೇವಲ ೧೫ ನಿಮಿಷದಲ್ಲಿ ವ್ಯಕ್ತಿ ರಿಲಾಕ್ಸ್ ಆಗಿಬಿಡುತ್ತಾನೆ "

" ಇನ್ನು ಸೊಳ್ಳೆ ಥೆರಪಿಕೂಡ ಹಾಗೇ , ಸುಮಾರು ನೂರಿನ್ನೂರು ಸೊಳ್ಳೆಗಳು ತುಂಬಿರುವ ರೂಮಿನಲ್ಲಿ ವ್ಯಕ್ತಿಯನ್ನು ಅಂಗಾತ ಮಲಗಿಸಿ ಹೊಟ್ಟೆಯ ಮೇಲೆ ತಣ್ಣೀರು ಪಟ್ಟಿ ಹಚ್ಚಲಾಗುತ್ತದೆ. ತರಬೇತುಗೊಂಡು ತಯಾರಾಗಿರುವ ಡಾಕ್ಟರ್ ಸೊಳ್ಳೆಗಳು ಒಂದೇ ಸಮನೆ ಗುಂಯ್ ಕಾರದಿಂದ ಮುತ್ತಿಕೊಂಡು ಮುತ್ತುಕೊಡುತ್ತವೆ. ಅಲ್ಲಲ್ಲಿ ಕಡಿಯುವುದು ಶರೀರಕ್ಕೆ ಬಹಳ ಹಿತಕರವಾಗಿರುತ್ತದೆ. ಮೇಲಾಗಿ ಸುಖದ ಸುಪ್ಪತ್ತಿಗೆಯಲ್ಲಿರುವ ಬಹಳ ಜನರಿಗೆ ಸೊಳ್ಳೆಯ ಕಡಿತದ ರುಚಿ ನೋಡಸಿಗುವುದಿಲ್ಲ, ಇಲ್ಲಿ ಅದನ್ನು ಅನುಭವಿಸಿ ಬಹಳ ಖುಷಿಪಡುತ್ತಾರೆ. ಥೆರಪಿ ಮುಗಿದು ಹೊರಡುವಾಗ ಬಾಯ್ತುಂಬಾ ಹೊಗಳುತ್ತಾರೆ. ಒಬ್ಬರಂತೂ ಕೆಲವು ಸೊಳ್ಳೆಗಳನ್ನು ಗುರುತಿಸಿ ನಾಮಕರಣಮಾಡಿದ್ದಾರೆ. ಕಡಿಯುವುದರಲ್ಲಿ ನಿಸ್ಸೀಮವಾದ ಕೆಲವು ಸೊಳ್ಳೆಗಳನ್ನು ಒಬ್ಬರು ತಮಗೆ ಸಾಕಲುಕೊಡಿ ಎಂದು ದುಂಬಾಲು ಬಿದ್ದರು. ಈಗಾಗಲ್ಲ, ಇನ್ನೇನು ಬ್ರೀಡಿಂಗ್ ಆಗ್ತಾ ಇದೆ, ನೆಕ್ಸ್ಟ್ ನೀವು ಬಂದಾಗ ಹತ್ತಿಪ್ಪತ್ತು ಕೊಡೂತ್ತೇವೆ ಎಂದಿದ್ದೇನೆ. ಅನೇಕರು ಸೊಳ್ಳೆಗಳು ಅಪಾಯಕಾರಿ ಎಂದು ಸುಮ್ಮನೇ ದೂರುತ್ತಾರೆ, ಆದರೆ ಅವುಗಳ ಉಪಯೋಗವನ್ನು ಒಮ್ಮೆ ಅರಿತರೆ ಅವುಗಳನ್ನು ಸಾಕಲು ತೊಡಗುತ್ತಾರೆ. ಸೊಳ್ಳೆ ಸಾಕಣೆ ನಿಟ್ಟಿನಲ್ಲಿ ಬಹಳ ಜನ ಮುಂದೆ ಬಂದರೆ ನಮ್ಮ ದೇಶ ಉದ್ಧಾರವಾದಹಾಗೇ. ಅದಕ್ಕೇ ನಮ್ಮ ಕೈಲಾದ ಎಲ್ಲಾ ಪ್ರಯತ್ನಗಳನ್ನೂ ಕಿಂಚಿತ್ತೂ ಕೊರತೆಯಿಲ್ಲದೇ ನಡೆಸುತ್ತಿದ್ದೇವೆ."

" ಇನ್ನು ತಿಗಣೆ ಥೆರಪಿಯಂತೂ ಸಮಾಜಕ್ಕೆ ಬಹುದೊಡ್ಡ ವರವಾಗಿದೆ. ಪಳಗಿದ ಕಡಲೇಕಾಳಿನ ಗಾತ್ರದ ತಿಗಣೆಗಳನ್ನು ಮಲಗಿರುವ ವ್ಯಕ್ತಿಯ ಸಮೀಪಬಿಟ್ಟಾಗ ವ್ಯಕ್ತಿಯನ್ನು ಮುದ್ದಿಸಿ ಆತನ ಶರೀರದಿಂದ ಮಲಿನ ರಕ್ತವನ್ನು ಅವು ಕುಡಿಯುವುದರಿಂದ ವ್ಯಕ್ತಿಗೆ ಹೊಸ ಜೀವಕಳೆ ಬರುತ್ತದೆ. ಸ್ವಲ್ಪವೇ ತುರಿಕೆ ಇದ್ದರೂ ಸಹಿತ ತನ್ನ ಮನೆಯನ್ನೇ ಮರೆಯುವ ವ್ಯಕ್ತಿ, ದೈನಂದಿನ ವ್ಯವಹಾರ-ಜಂಜಾಟ ಇವುಗಳನ್ನೆಲ್ಲಾ ಮರೆತು ಶಾಂತನಾಗುತ್ತಾನೆ, ವಿಶ್ರಾಂತಿಯಿಂದ ಎಚ್ಚೆತ್ತಾಗ, ಸಚಿನ್ ತೆಂಡೂಲ್ಕರ್ ’ ಮೈ ಕಂಹಾ ಹೂಂ ’ ಎಂದು ಕೋಲಾ ಕುಡಿದು ಹೇಳಿದ ರೀತಿಯಲ್ಲೇ ಉದ್ಗರಿಸುತ್ತಾನೆ. ಇದು ಆತ ಅನುಭವಿಸಿದ ಅತೀವ ವಿಶ್ರಾಂತಿಯ ಉಚ್ಛ್ರಾಯ ಸ್ಥಿತಿ. ಅಲ್ಲಿಂದ ಎದ್ದು ಆಚೆ ಬಂದ ವ್ಯಕ್ತಿಗೆ ವಾರಗಟ್ಟಲೆ ಅದರ ಗುಂಗೇ ಇರುವುದರಿಂದ ಬೇರೆಲ್ಲಾ ಟೆನ್ಶನ್ ಮಾಯವಾಗಿಬಿಡುತ್ತದೆ. ಹೀಗಾಗಿ ಪ್ರಾಯೋಗಿಕ ಹಂತದಲ್ಲಿರುವ ಈ ಚಿಕಿತ್ಸೆ ಸೇವೆಗೆ ಲಭ್ಯವಾದಮೇಲೆ ಭಾರತದಲ್ಲಿ ಇರುವ ಎಲ್ಲಾ ತಿಗಣೆಕುಲಗಳನ್ನೂ ಪರಿಶೋಧಿಸಿ ಅವುಗಳ ಯಜಮಾನರಿಗೆ ಗುರುತಿನ ಚೀಟಿ ಕೊಡಲಾಗುತ್ತದೆ. ಅತೀ ಹೆಚ್ಚು ತಿಗಣೆಗಳನ್ನು ಬೆಳೆಸಿದ ಒಬ್ಬ ವ್ಯಕ್ತಿಗೆ ಪ್ರತೀವರ್ಷ ’ಪಂದ್ಯ ಪುರುಷೋತ್ತಮ’ ಪ್ರಶಸ್ತಿ ನೀಡಿ ವೈಟ್ ಮೆಟಲ್ ತಿಗಣೆ ಸೇರಿದಂತೆ ಫಲತಾಂಬೂಲವಿತ್ತು ನೆರೆಯುವ ಸಾವಿರ ಸಾವಿರ ತಿಗಣೆ ಕೃಷಿಕರಮುಂದೆ ಸನ್ಮಾನಿಸಲಾಗುತ್ತದೆ. ಇವೆಲ್ಲಾ ನಮ್ಮ ಭವಿಷ್ಯದ ಯೋಜನೆಗಳು "

" ವೀಕ್ಷಕರೇ ಸಮಯ ಯಾರಿಗೂ ಕಾಯುವುದಿಲ್ಲ. ನಾವು ಮಲ್ಟಿ ಮಸಾಜ್ ಗಳ ಬಗ್ಗೆ ಬಹಳಷ್ಟು ಮಾಹಿತಿಗಳನ್ನು ಡಾ| ಕಪ್ಪೆಚೆನ್ನಿಗಪ್ಪ ಮತ್ತು ಡಾ| ವಿನಯಾ ವೈಭವಿಯವರುಗಳಿಂದ ಪಡೆದಿದ್ದೇವೆ. ಕಾರ್ಯಕ್ರಮಕ್ಕೆ ಬಂದು ತಮ್ಮ ಅನುಭವವನ್ನು ಹಂಚಿಕೊಂಡು ನಮಗೆ ಪೂರಕ ಮಾಹಿತಿಯನ್ನು ಒದಗಿಸಿಕೊಟ್ಟಿದ್ದಕ್ಕೆ ಡಾ| ಕಪ್ಪೆಚೆನ್ನಿಗಪ್ಪ ಮತ್ತು ಡಾ| ವಿನಯಾರವರುಗಳಿಗೆ ಕಳಪೆ ಟಿವಿಯ ಪರವಾಗಿ ನಮ್ಮ ತಂಡದಿಂದ ಅಭಿನಂದನೆಗಳು."

" ನಮಸ್ಕಾರ "