ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Friday, January 20, 2012

ಅರ್ಪಾ, ಅಪಸ್ಮಾರ ಮತ್ತು ಅಗೋಚರ ಕಾರಣಗಳು.

ಚಿತ್ರಗಳ ಋಣ : ಅಂತರ್ಜಾಲ

ಅರ್ಪಾ, ಅಪಸ್ಮಾರ ಮತ್ತು ಅಗೋಚರ ಕಾರಣಗಳು.

ಕಳೆದವಾರದಲ್ಲಿ ಈ ಪ್ರಪಂಚ ಅತ್ಯಂತ ಚಿಕ್ಕ ವಯಸ್ಸಿನ ಒಂದು ಪ್ರತಿಭೆಯನ್ನು ಕಳೆದುಕೊಂಡಿತು. ಅರ್ಪಾ ಕರೀಮ್ ರಾಂಧವಾ ಎಂಬ ಈ ಪಾಕಿಸ್ತಾನೀ ಹುಡುಗಿಯ ಸಾಧನೆ ಕಮ್ಮಿಯದೇನಲ್ಲ. ೯ನೇ ವಯಸ್ಸಿನಲ್ಲೇ ಮೈಕ್ರೋ ಸಾಫ್ಟ್ ಸರ್ಟಿಫೈಡ್ ಪ್ರೊಫೆಶನಲ್ [ಎಮ್.ಸಿ.ಪಿ] ಪರೀಕ್ಷೆಯಲ್ಲಿ ಉತ್ತೀರ್ಣಳಾಗಿದ್ದ ಅರ್ಪಾ ಮೈಕ್ರೋ ಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್‍ನ ಅಚ್ಚರಿಗೆ ಕಾರಣಳಾಗಿದ್ದಳು. ಬದುಕಿದ್ದರೆ ಗೇಟ್ಸ್ ನ ಸಹಾಯ ಪಡೆದು ಇನ್ನೇನೋ ಆಗುವವಳಿದ್ದಳು, ಆದರೆ ವಿಧಿಯಿಚ್ಛೆ ಬೇರೇನೇ ಇತ್ತು! ಕಂಪ್ಯೂಟರ್ ಎಂಬುದು ಹಲವರಿಗೆ ಅನೇಕ ಸೌಲಭ್ಯಗಳನ್ನೂ ಸದವಕಾಶಗಳನ್ನೂ ತಂದುಕೊಟ್ಟಿದೆ. ಅಂಗವಿಕಲರೂ ಕೂಡ ಕುಳಿತಲ್ಲೇ ಕಂಫ್ಯೂಟರ್ ಬಳಸಿ ಏನೇನೋ ಸಾಹಸ ತೋರಿದ್ದನ್ನು ನಾವು ನೋಡಿಯೇ ಇದ್ದೇವೆ. ಆದರೆ ಎಮ್.ಸಿ.ಪಿ. ಎಂಬ ಪರೀಕ್ಷೆಯನ್ನು ೯ನೇ ವಯಸ್ಸಿಗೇ ಪಾಸು ಮಾಡುವುದು ಬಾಳೆಹಣ್ಣು ತಿಂದಹಾಗಲ್ಲ! ಸಾಮಾನ್ಯವಾಗಿ ಹಲವು ವಯಸ್ಕರಿಗೂ ಬರೆದು ಜಯಗಳಿಸಲಾಗದ ಪ್ರಶ್ನೆಗಳಿರುತ್ತವೆ ಅದರಲ್ಲಿ. ಹಾಗಂತ ಅರ್ಪಾ ಅಂಗವಿಕಲಳೇನೂ ಆಗಿರಲಿಲ್ಲ. ಎಲ್ಲರಂತೇ ಸಹಜ ಬೆಳವಣಿಗೆ ಹೊಂದಿದ್ದಳು. ಆದರೆ ಅವಳಿಗೆ ಇದ್ದ ಒಂದೇ ತೊಂದರೆ ಎಂದರೆ ಅಪಸ್ಮಾರ ಅಥವಾ ಮೂರ್ಛೆರೋಗ.ಮೂರ್ಛೆರೋಗಕ್ಕೆ ಕಾರಣಗಳು ಇಂದಿಗೂ ಲಭ್ಯವಿಲ್ಲ. ವೈಜ್ಞಾನಿಕವಾಗಿ ಅದು ಆ ಸಿಂಡ್ರೋಮ್ ಈ ಸಿಂಡ್ರೋಮ್ ಎಂದು ಗುರುತಿಸಿದರೂ ಮೂರ್ಛೆರೋಗದಿಂದ ಸಂಪೂರ್ಣ ಗುಣಮುಖರಾದವರು ಕಮ್ಮಿ. ಇದ್ದಕ್ಕಿದ್ದಂತೇ ಯಾವುದೋ ಕೆಟ್ಟ ಸಂದೇಶ ಮೆದುಳಿನ ನರಗಳಲ್ಲಿ ಒಡಮೂಡಿ ವ್ಯಕ್ತಿಯು ಕೆಲಹೊತ್ತು ತನ್ನತನವನ್ನೇ ಕಳೆದುಕೊಂಡು ಇಡೀ ಶರೀರ ಅಥವಾ ಭಾಗಶಃ ಶರೀರ ವಿಚಿತ್ರಗತಿಯಲ್ಲಿ ಕಂಪಿಸುವುದು ಯಾ ಒದ್ದಾಡುವುದೇ ಅಪಸ್ಮಾರ. ಅಪಸ್ಮಾರದಲ್ಲಿ ಪ್ರಮುಖವಾಗಿ ಎರಡು ಮಟ್ಟ : ಒಂದು ಲಘು ಅಪಸ್ಮಾರ ಮತ್ತೊಂದು ಗರಿಷ್ಠ ಅಪಸ್ಮಾರ. ಅದೇ ರೀತಿ ಅಪಸ್ಮಾರ ಕೆಲವೊಮ್ಮೆ ಬಾಲ್ಯದಲ್ಲಿ ಮಾತ್ರ ಕಾಡುತ್ತದೆ. ಕೆಲವೆಡೆ ಇದನ್ನು ಬಾಲಗ್ರಹ ಬಾಧೆ ಎನ್ನುವುದೂ ಇದೆ. ಇನ್ನು ಇಡಿಯೋಪಥಿಕ್ ಅಥವಾ ಅನುವಂಶೀಯವಾಗಿ ಬರುವ ಅಪಸ್ಮಾರ ಒಂದು ತೆರನದ್ದಾದರೆ ಕ್ರಿಪ್ಟೋಜೆನಿಕ್ ಅಥವಾ ಕಾರಣವಿಲ್ಲದೇ ಕಾಡುವ ಅಪಸ್ಮಾರ ಇನ್ನೊಂದು ವಿಧದ್ದಾಗಿದೆ. ಅನುವಂಶೀಯತೆಯಿಂದ ಬರುವ ಮೂರ್ಛೆರೋಗ ಬಾಲ್ಯದಲ್ಲಿ ಕಾಡುವುದಿಲ್ಲವಾದ್ದರಿಂದ ಇದಕ್ಕೆ ಚೈಲ್ಡ್ ಹುಡ್ ಎಬ್ಸೆನ್ಸ್ ಎಪಿಲೆಪ್ಸಿ ಎಂದೂ ಅಲ್ಲದೇ ಜುವೆನೈಲ್ ಎಪಿಲೆಪ್ಸಿ, ಎಪಿಲೆಪ್ಸಿ ವಿತ್ ಗ್ರ್ಯಾಂಡ್ ಮಾಲ್ ಸೀಜರ್ಸ್ ಎಂದೂ ಕರೆಯುತ್ತಾರೆ. ಕೆಲವೊಮ್ಮೆ ಇದು ಬಾಲ್ಯದಲ್ಲಿ ಎಲ್ಲೋ ಸಲ್ಪ ಲಘುವಾಗಿ ಕೆಲವರಿಗೆ ಕಾಡುವುದರಿಂದ ಬಿನೈನ್ ಫೋಕಲ್ ಎಪಿಲೆಪ್ಸಿ ಆಫ್ ಚೈಲ್ಡ್ ಹುಡ್ ಎಂದೂ ಪರಿಗಣಿಸಲ್ಪಟ್ಟಿದೆ. ಎರಡನೆಯದ್ದು ಕಾರಣವಿಲ್ಲದೇ ಕಾಡುವಂಥದ್ದು, ಇದಕ್ಕೆ ಗರಿಷ್ಠವಾಗಿ ಸಂಭವಿಸುವುದಕ್ಕೆ ವೆಸ್ಟ್ ಸಿಂಡ್ರೋಮ್ ಮತ್ತು ಲಿನಾಕ್ಸ್ ಗೆಸ್ಟಾಟ್ ಸಿಂಡ್ರೋಮ್ ಎಂದೂ ಹೆಸರಿಸಿದ್ದಾರೆ. ಇದರಲ್ಲಿ ಲಘು ಅಥವಾ ಪಾರ್ಶಿಯಲ್ ಆಗಿ ಸಂಭವಿಸುವುದಕ್ಕೆ ಟೆಂಪೋರಲ್ ಲೋಬ್ ಎಪಿಲೆಪ್ಸಿ ಮತ್ತು ಫ್ರಂಟ್ ಲೋಬ್ ಎಪಿಲೆಪ್ಸಿ ಎಂದಿದ್ದಾರೆ ವಿಜ್ಞಾನಿಗಳು ಮತ್ತು ವೈದ್ಯವಿಜ್ಞಾನ ಪರಿಣತರು.

ಅಪಸ್ಮಾರದ ಮೆದುಳಿನ ತಂತು ಚಿತ್ರಣ

ಹೀಗೇ ಅಪಸ್ಮಾರದ ವೈಖರಿ ಈ ರೀತಿ ಇದ್ದರೂ ಅದಕ್ಕೆ ಸಂಪೂರ್ಣವಾದ ಕಾರಣ ಇಂದಿಗೂ ಒದಗಿ ಬಂದಿಲ್ಲ. ನರಸಂಬಂಧೀ ನಿಯಮಿತ ಔಷಧಗಳ ಸತತ ಸೇವನೆಯಿಂದ ಅದನ್ನು ನಿವಾರಿಸಬಹುದೆಂದು ವೈದ್ಯರುಗಳು ಹೇಳಿದರೂ ಸಂಪೂರ್ಣ ನಿವಾರಣೆ ಆಗಿರುವುದು ಕಾಕತಾಳೀಯವಷ್ಟೇ! ನರರೋಗ ತಜ್ಞರು ಅಥವಾ ಮನಶ್ಶಾಸ್ತ್ರಜ್ಞರು ಕೊಡುವ ಅಲೋಪಥಿಕ್ ಮಾತ್ರೆಗಳ ಸತತ ಸೇವನೆಯಿಂದ ಅಡ್ಡ/ಪ್ರತಿಕೂಲ ಪರಿಣಾಮಗಳಂತೂ ಗ್ಯಾರಂಟಿ! ಅಪಸ್ಮಾರ ತಪ್ಪಿಸುವ ಅಂತಹ ಔಷಧ ಕೆಲವರಿಗೆ ನಿದ್ದೆಯ ಮಂಪರು ನೀಡಿದರೆ, ಇನ್ನು ಕೆಲವರು ಆಲಸ್ಯದಿಂದ ಬಳಲುವಂತೇ ಮಾಡುತ್ತದೆ. ಇನ್ನು ಕೆಲವರಿಗೆ ಪರೋಕ್ಷವಾಗಿ ಶರೀರದ ಉಳಿದ ಅಂಗಾಂಗಗಳ ಮೇಲೆ ಆ ಔಷಧಗಳು ಅಡ್ಡ ಪರಿಣಾಮ ಬೀರುತ್ತವೆ ಎಂಬುದರಲ್ಲಿ ಎರಡುಮಾತಿಲ್ಲ. ಆದರೂ ಸಮಾಜದಲ್ಲಿ ಹತ್ತರಜೊತೆ ಹನ್ನೊಂದನೆಯ ವ್ಯಕ್ತಿಯಾಗಿ ಬದುಕು ನಿರ್ವಹಿಸಲು ಮಾತ್ರೆಗಳ ಬಳಕೆ ಅನಿವಾರ್ಯವಾಗಿದೆ ಎನ್ನುತ್ತಾರೆ ಅದನ್ನು ಅನುಭವಿಸಿದವರು.

ಅಪಸ್ಮಾರ ಬಂದಾಗ ಮೆದುಳಿನ ನೂರಾರು ಜೀವಕೋಶಗಳು ಸಾಯುತ್ತವೆ ಎಂಬುದು ಪರೀಕ್ಷೆಗಳಿಂದ ತಿಳಿದುಬಂದಿದೆಯಾದರೂ ಈಈಜಿ [ಇಲೆಕ್ಟ್ರೋಎನ್ಸಿಫಾಲೋಗ್ರಾಫಿ]ಯಂತ್ರದಲ್ಲಿ ಅಪಸ್ಮಾರದ ಅವತರಣಿಕೆ ಮಾತ್ರ ಕಾಣಲು ಸಾಧ್ಯವಾಗುವುದಿಲ್ಲ. ಪ್ರತೀಬಾರಿ ಅಪಸ್ಮಾರ ಅಪ್ಪಳಿಸಿದಾಗ ವ್ಯಕ್ತಿ ಲಘುವಾದರೆ ಸ್ವಲ್ಪ ಅಥವಾ ಗರಿಷ್ಠವಾದರೆ ತುಂಬಾ ಬಳಲಬೇಕಾಗುತ್ತದೆ. ಗರಿಷ್ಠ ಪ್ರಮಾಣದಲ್ಲಿ ಅಪಸ್ಮಾರ ಘಟಿಸಿದ ಗಂಟೆಗಟ್ಟಲೆ ರೋಗಿಗೆ ಎಚ್ಚರವಿರುವುದಿಲ್ಲ ಯಾಕೆಂದರೆ ಮೆದುಳು ಸಹಜ ಸ್ಥಿತಿಗೆ ಮರಳಿರುವುದಿಲ್ಲ. ಲಘು ಮತ್ತು ಗರಿಷ್ಠ ಎರಡೂ ತೆರನಾದ ಅಪಸ್ಮಾರ ರೋಗಿಗಳನ್ನು ನಾನು ನೋಡಿದ್ದೇನೆ. ಒಮ್ಮೆ ಒಬ್ಬರ ಜೊತೆ ಊಟ ಮಾಡುತ್ತಿದ್ದಾಗ ಅವರಿಗೆ ತುತ್ತು ತಲೆಗೆ ಹತ್ತಿತು, ನೀರು ಕುಡಿಸಿದರೂ ಮಾತಾಡುತ್ತಿರಲಿಲ್ಲ, ಕರೆದರೂ ಮಾತಾಡುತ್ತಿರಲಿಲ್ಲ, ಕಣ್ಣೆಲ್ಲಾ ತಕ್ಷಣಕ್ಕೆ ಕೆಂಪಗಾಗಿ ಅವರು ಸ್ತಬ್ಧವಾಗಿದ್ದರು! ಮೊದಲಾಗಿ ನನಗೆ ಆ ಬಗ್ಗೆ ತಿಳಿದಿರಲಿಲ್ಲ. ಆ ನಂತರವೇ ತಿಳಿದದ್ದು ಅದು ಲಘು ಅಪಸ್ಮಾರ. ಇನ್ನು ಸ್ನೇಹಿತರೊಬ್ಬರು ದ್ವಿಚಕ್ರ ವಾಹನ ಓಡಿಸುವಾಗ ಬಿದ್ದು ಒದ್ದಾಡುತ್ತಿರುವುದನ್ನು ಯಾರೋ ಹೇಳಿದ್ದರು, ಆಮೇಲೆ ಅವರಲ್ಲಿಗೆ ಧಾವಿಸಿ ಅವರನ್ನು ಆಸ್ಪತ್ರೆಗೆ ಸೇರಿಸಿದಾಗಲೇ ತಿಳಿದದ್ದು ಅದು ಗರಿಷ್ಠ ಪ್ರಮಾಣದ ಅಪಸ್ಮಾರ ಅಂತ. ಆ ವ್ಯಕ್ತಿ ತನ್ನನ್ನು ನಾವು ಹತ್ತರಜೊತೆ ಹನ್ನೊಂದಲ್ಲಾ ಎಂದು ದೂರ ಇಡಬಹುದೆಂಬ ಸಂಶಯದಿಂದ ನಮಗೆ ತಿಳಿಸಿರಲೇ ಇಲ್ಲ. ಮೇಲಾಗಿ ಅಪಸ್ಮಾರವಿದ್ದರೆ ಮದುವೆ ಮಾಡಿಕೊಳ್ಳಲು ಹುಡುಗಿ ಕೊಡುತ್ತಾರೋ ಇಲ್ಲವೋ ಎಂಬ ಕಾರಣವೂ ಅವರಲ್ಲಿತ್ತು! ಮಿತ್ರರೇ ಒಂದು ವಿನಂತಿ: ಅಪಸ್ಮಾರವಿದ್ದವರು ಹತ್ತಿರ ಇರುವವರ ಕೂಡ ಅದನ್ನು ತಿಳಿಸಿಟ್ಟರೆ ತುಂಬಾ ಅನುಕೂಲ. ಬಿ.ಎಮ್.ಟಿ.ಸಿ ಬಸ್ ಚಾಲಕನೊಬ್ಬ ಅಪಸ್ಮಾರ ಬಂದು ಅಪಘಾತವಾದ ಘಟನೆ ಕೆಲವು ದಿನಗಳ ಹಿಂದೆ ವರದಿಯಾಗಿತ್ತು. ಅಪಸ್ಮಾರ ಕಾಯಿಲೆ ಇರುವವರು ದಯವಿಟ್ಟು ವಾಹನ ಚಲಾಯಿಸಬೇಡಿ; ಅದು ನಿಮಗೂ ಮತ್ತು ಸಾರ್ವಜನಿಕರಿಗೂ ಒಳ್ಳೆಯದಲ್ಲ.

ಧ್ಯಾನನಿರತ ಭಗವಾನ್ ಶ್ರೀ ಶ್ರೀಧರ ಸ್ವಾಮಿಗಳು

ಅಪಸ್ಮಾರಕಾಯಿಲೆಯನ್ನು ಜನ್ಮಾಂತರದ ಕುಕೃತ್ಯದ ಅವಶೇಷದಿಂದ ಬರುವ ಕಾಯಿಲೆ ಎಂದು ಹಿಂದೂ ಮೈಥಾಲಜಿ ಬಣ್ಣಿಸುತ್ತದೆ. ಒಪ್ಪಿಕೊಳ್ಳೋಣ-ಇಹದ ಈ ಜನ್ಮವೂ ಮತ್ತು ಬರುವ ಎಲ್ಲಾ ಕಾಯಿಲೆಗಳೂ ಜನ್ಮಾಂತರದಿಂದ ಪಡೆದ ಫಲಗಳೇ ಎಂಬುದನ್ನು ನಾನು ಅಲ್ಲಗಳೆಯುವುದಿಲ್ಲ. ಯಾಕೆಂದರೆ ಅದರ ಅನುಭೂತಿಯನ್ನು ಹಲವಾರು ನಿದರ್ಶನಗಳ ಮೂಲಕ ಆಳವಾಗಿ ಅಧ್ಯಯನ ಮಾಡಿದ್ದೇನೆ-ಇನ್ನೂ ಮಾಡುತ್ತಲೇ ಇದ್ದೇನೆ. ಆ ಕುರಿತು ಇಲ್ಲಿ ಮತ್ತೆ ಹೆಚ್ಚಿಗೆ ಬರೆಯುವುದಿಲ್ಲ. ಚಿಕ್ಕದೊಂದು ಘಟನೆ ಹೀಗಿದೆ: ಕರ್ನಾಟಕಕ್ಕೇ ಅಥವಾ ಭಾರತಕ್ಕೇ ಪ್ರಕಾಂಡ ಪಂಡಿತರೆನಿಸಿದ ಶಾಸ್ತ್ರಿಗಳೊಬ್ಬರು[ಹೆಸರನ್ನು ಬುದ್ಧ್ಯಾಪೂರ್ವಕ ಹೇಳುತ್ತಿಲ್ಲ, ಕ್ಷಮಿಸಿ] ಯಾವುದೋ ಕಾರಣವನ್ನು ಆಮೂಲಾಗ್ರ ಗ್ರಹಿಸದೇ ಸನ್ಯಾಸಿಯೊಬ್ಬರನ್ನು ನಿಂದಿಸಿದ್ದರಂತೆ. ಆ ಗುರು ಪ್ರತ್ಯಕ್ಷವಾಗಿ ಬಾಯಿಂದ ಶಪಿಸಲಿಲ್ಲವಾದರೂ ಪರೋಕ್ಷವಾಗಿ ಅವರ ಮನ ನೊಂದಿತ್ತು. ಸನ್ಯಾಸಿಯ ನೊಂದ ಮನದ ಪ್ರತಿಫಲನ ಮಾರನೇ ದಿನದಿಂದಲೇ ಅಪಸ್ಮಾರದ ರೂಪದಲ್ಲಿ ಶಾಸ್ತ್ರಿಗಳಿಗೆ ಕಾಡಿತ್ತು. ಯಾವುದೇ ಔಷಧಿಯಿಂದಲೂ ವಾಸಿಯಾಗದ ಅದರಿಂದ ಬೇಸತ್ತ ಅವರು ಭಗವಾನ್ ಶ್ರೀಧರ ಸ್ವಾಮಿಗಳನ್ನು ಭೇಟಿಯಾಗಿ ಕಣ್ಣೀರ್ಗರೆದು ತೋಡಿಕೊಂಡರು-ಬೇಡಿಕೊಂಡರು. ತಾಯಿಯ ವಾತ್ಸಲ್ಯವನ್ನು ಸಹಜವಾಗಿ ಹೊಂದಿದ್ದ ಶ್ರೀಧರರು ತಮ್ಮ ತೀರ್ಥ-ಮಂತ್ರಾಕ್ಷತೆಗಳನ್ನು ನೀಡಿ ಆ ಮೂಲಕ ಶಾಸ್ತ್ರಿಗಳು ಗುರುನಿಂದನೆಯಿಂದ ಪಡೆದಿದ್ದ ಅಪಸ್ಮಾರವನ್ನು ನಿವಾರಿಸಿದರು ಎಂಬುದು ದಾಖಲಿಸಲ್ಪಟ್ಟ ಇತಿಹಾಸ. ಇದೇ ಸಮಯದಲ್ಲಿ ಶ್ರೀಧರರು ಮಾತನಾಡುತ್ತಾ " ಮಕ್ಕಳೇ, ಇಹದ ಈ ಬಂಧನವನ್ನು ಹಂತಹಂತವಾಗಿ ಕಳಚಿ ಮುಮುಕ್ಷುತ್ವದೆಡೆಗೆ ನಿಮಗೆ ಸಾಗಲಿಕ್ಕೆ ತೀರ್ಥ, ಮಂತ್ರಾಕ್ಷತೆ ಮತ್ತು ಭಸ್ಮಗಳೆಂಬ ಔಷಧಿಗಳನ್ನು ಕೊಡುವ ವೈದ್ಯನಾನಾಗಿದ್ದೇನೆ " ಎಂದಿದ್ದಾರೆ! ಅದಕ್ಕೇ ಇಂತಹ ಯೋಗಿಗಳನ್ನೂ ಮಹಾತ್ಮರನ್ನೂ ’ಭವರೋಗ ವೈದ್ಯಂ ’ ಎನ್ನುತ್ತಾರೆ ಸಂಸ್ಕೃತದಲ್ಲಿ. ಬಹುಶಃ ಇಂತಹ ಅಪಸ್ಮಾರ ಕಾಯಿಲೆಗೆ ಸಂಪೂರ್ಣ ಪರಿಹಾರ ತಪಸ್ಸಿದ್ಧಿಯನ್ನು ಪಡೆದ ಯೋಗಿಗಳಿಂದಲೇ ಆಗಬೇಕೇ ವಿನಃ ಲೌಕಿಕವಾದ ಯಾವುದೇ ಔಷಧಿಯೂ ತಾತ್ಕಾಲಿಕ ಮತ್ತು ಸಮರ್ಪಕ ನಿವಾರಣೋಪಾಯವಲ್ಲ ಎಂಬುದು ನನ್ನ ಅಭಿಪ್ರಾಯವಾಗಿದೆ.

ಮರಳಿ ಅರ್ಪಾಳ ಕುರಿತು ಚಿಂತಿಸೋಣ. ಅರ್ಪಾ ಎಳೆವೆಯಲ್ಲೇ ಅತ್ಯಂತ ಪ್ರಬುದ್ಧ ಮನಸ್ಕಳಾಗಿದ್ದಳು, ಕಂಪ್ಯೂಟರ್ ಜೀನಿಯಸ್ ಎನಿಸಿದ್ದಳು. ಅಪಸ್ಮಾರ ಎಷ್ಟೋ ಲಕ್ಷ ಲಕ್ಷ ಜನರಲ್ಲಿ ಇದೆ. ಅಪಸ್ಮಾರ ಇರುವವರೆಲ್ಲಾ ಸಾಯುವುದಿಲ್ಲ, ಆದರೆ ಅಪಸ್ಮಾರ ಕೆಲವೊಮ್ಮೆ ಸಾವಿಗೂ ಕಾರಣವಾಗುತ್ತದೆ ಎಂಬುದು ತಿಳಿದುಬಂದ ವಿಷಯ. ಹಿಂದೆ ಹೇಳಿದಂತೇ ಅಪಸ್ಮಾರ ಘಟಿಸಿದಾಗ ಮೆದುಳಿನ ಜೀವಕೋಶಗಳಲ್ಲಿ ವಿಚಿತ್ರ ವಿದ್ಯುತ್ತು ಪ್ರವಹಿಸುತ್ತದೆ, ಆ ಮೂಲಕ ಜೀವಕೋಶಗಳು ಸತ್ತುಹೋಗುತ್ತವೆ. ಸತ್ತಜೀವಕೋಶಗಳಲ್ಲಿ ಸಂಗ್ರವಾಗಿದ್ದ ಸಂದೇಶಗಳೂ ಮಾಹಿತಿಗಳೂ ಅಳಿಸಿಹೋಗುತ್ತವೆ. ಕೆಲವೊಮ್ಮೆ ಅಪಸ್ಮಾರ ರೋಗಿಗಳು ಯಾವುದೋ ಕುರಿತಾಗಿ ಯೋಚಿಸುವಾಗ ಅದು ಸಂಪೂರ್ಣ ಸ್ಮರಣೆಗೆ ಬಾರದೇ ಹೋಗಬಹುದು. ಅಪಸ್ಮಾರ ರೋಗವಿದ್ದೂ ಕಂಪ್ಯೂಟರ್ ಅಪರೇಟಿಂಗ್ ಸಿಸ್ಟಮ್ ಕುರಿತಾದ ಅಗಾಧ ಮಾಹಿತಿಯನ್ನು ಚಾಚೂ ತಪ್ಪದೇ ಓದಿ ಅದನ್ನು ನೆನಪಿಸಿಕೊಂಡು ಎಮ್.ಸಿ.ಪಿ ಮುಗಿಸಿ ತೇರ್ಗಡೆಯಾಗಿದ್ದು ನಿಜಕ್ಕೂ ಅವಳ ದೊಡ್ಡ ಸಾಧನೆ.


ಬಿಲ್ ಗೇಟ್ಸ್ ಜೊತೆಗೆ ಅರ್ಪಾ

ಸಾಧನೆಮಾಡಿ ಮನೆಮಂದಿಗೂ ಜನಿಸಿದ ದೇಶಕ್ಕೂ ಕೀರ್ತಿ ತಂದುಕೊಟ್ಟ ಅರ್ಪಾ ಇನ್ನು ನೆನಪುಮಾತ್ರ. ಸಂತಸದಿಂದಿದ್ದ ಆಕೆಯ ಮಾತಾ-ಪಿತೃಗಳಿಗೆ ಅದೆಷ್ಟು ನೋವಾಗಿರಬಹುದು ಅಲ್ಲವೇ? ದೇಶವಾಸಿಗಳಿಗೇ ಏಕೆ ಜಗತ್ತಿನ ಜನರೆಲ್ಲಾ ಚಣಕಾಲ ಭಾರವಾದ ಹೃದಯದಿಂದ ಕೇಳಬೇಕಾದ ಜೀನಿಯಸ್ ಒಬ್ಬಳ ಅಕಾಲಿಕ ವಿದಾಯದ ಕಥೆ ಇದು. ಕೆಲವೊಮ್ಮೆ ಹೀಗೇ ಎಷ್ಟೋ ಘಟನೆಗಳು ನಡೆಯುತ್ತವೆ. ಬಾಲ್ಯದಲ್ಲಿ ಅತ್ಯಂತ ಹೆಚ್ಚಿನ ಸಾಧನೆಮಾಡಿ ಹರೆಯಕ್ಕೆ ಬರುತ್ತಿದ್ದಂತೇಯೇ ಯಾವುದೋ ಕಾರಣದಿಂದ ಇಹಲೋಕಕ್ಕೆ ವಿದಾಯ ಹೇಳುವ ಮೂಲಕ ಜನ್ಮದಾತರಿಗೆ ಆಜನ್ಮ ಪರ್ಯಂತ ನೋವನ್ನು ಬಿಟ್ಟುಹೋಗಿಬಿಡುತ್ತಾರೆ. ಹೋದವರ ನೋವಿಗಿಂತಾ ಮನೆಯವರ ಗೋಳು ದುಃಖ ತರುವ ವಿಷಯ. ಗತಿಸಿದ ಜೀನಿಯಸ್ ಅರ್ಪಾ ಮತ್ತೆ ಇನ್ನೂ ಹೆಚ್ಚಿನ ಸಾಧನೆ ಮಾಡುವ ಉನ್ನತ ಜನ್ಮ ಪಡೆಯಲಿ, ಜಗತ್ತಿಗೇ ಮಾದರಿಯಾಗುವ ಸೌಭಾಗ್ಯ ಆಕೆಗೊದಗಲಿ ಎಂಬ ಶುಭಹಾರೈಕೆಗಳೊಡನೆ ನಮ್ಮೆಲ್ಲರ ಅಶ್ರುತರ್ಪಣ.