ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Monday, July 2, 2012

ಈಗೆಲ್ಲಾ ಡಿಜಿಟಲ್, ಫೋಟೊಗ್ರಫಿ ಬಹಳ ಈಸಿ ! ಚೌರ್ಯ ಇನ್ನೂ ಈಸಿ !!

 ಚಿತ್ರಋಣ: ಅಂತರ್ಜಾಲ

 ಈಗೆಲ್ಲಾ ಡಿಜಿಟಲ್, ಫೋಟೊಗ್ರಫಿ ಬಹಳ ಈಸಿ ! ಚೌರ್ಯ ಇನ್ನೂ ಈಸಿ !!

ಬದುಕಿನ ಮಜಲುಗಳಲ್ಲಿ ಘಟಿಸಬಹುದಾದ ಘಟನೆಗಳನ್ನು ಚಿತ್ರಗಳರೂಪದಲ್ಲಿ ಸೆರೆಹಿಡಿದಿಡುವ ಬಯಕೆ ಜನರಲ್ಲಿ ಇವತ್ತಿಗೂ ಇದೆ. ಆಗಿಹೋದ ಕಾಲ ಮರಳಿಬರುವುದಿಲ್ಲ; ನಡೆದುಹೋದ ಕಾರ್ಯ ಮತ್ತೆ ಜರುಗುವುದಿಲ್ಲ ಎಂಬ ಕಾರಣಕ್ಕಾಗಿ ಫೋಟೋಗ್ರಫಿ ಎಂಬ ಕುಶಲಕಲೆಯೊಂದು ಹುಟ್ಟಿಕೊಂಡಿತು.

ಕಾಲಘಟ್ಟವೊಂದರಲ್ಲಿ ವಿಜ್ಞಾನದ ಮುನ್ನಡೆ ಅಷ್ಟಾಗಿ ಇನ್ನೂ ಆಗಿರದಿದ್ದಾಗ ಕ್ಯಾಮೆರಾ ಎಂಬ ವಸ್ತುವೇ ಒಂದು ರೋಚಕ ಪರಿಕರವಾಗಿತ್ತು! ಪ್ರಪಂಚದ ದುಬಾರಿ ವಸ್ತುಗಳಲ್ಲಿ ಒಂದಾಗಿದ್ದ ಅದನ್ನು ಜನಸಾಮಾನ್ಯರು ಖರೀದಿಸಲಾಗುತ್ತಿರಲಿಲ್ಲ; ಬದಲಿಗೆ ಹಲವರಿಗೆ ಛಾಯಾಚಿತ್ರಗಳನ್ನು ಸೆರೆಹಿಡಿದು ಕೊಡುವುದನ್ನೇ ಕೆಲವರು ವೃತ್ತಿಯನ್ನಾಗಿಸಿಕೊಂಡರು. ಕ್ಯಾಮೆರಾ ಅಷ್ಟೇ ಅವರ ಬಂಡವಾಳ. ಮಿಕ್ಕಿದಂತೇ ಅವರ ಸಮಯ ಮತ್ತು ಸಂಯಮ ಇವುಗಳು ಕೆಲಸಮಾಡಲು ಬೇಕಾದ ಅಂಶಗಳಾಗಿದ್ದವು. ಸ್ವಂತಕ್ಕಾಗಿ ಮನೆ ಕಟ್ಟಿಕೊಳ್ಳಬೇಕೆಂಬ ಆಸೆ ಇವತ್ತಿಗೆ ಹಲವರಿಗೆ ಇರುವಂತೇ ಸ್ವಂತಕ್ಕಾಗಿ ಕ್ಯಾಮೆರಾ ಇಟ್ಟುಕೊಳ್ಳಬೇಕೆಂಬ ಆಸೆ ಬಹುತೇಕರಲ್ಲಿತ್ತು; ಅದರಲ್ಲಿ ಕೆಲವರು ಮಾತ್ರ ಯಶಸ್ಸು ಪಡೆದಿದ್ದರು. ದುಬಾರಿ ವೆಚ್ಚದ ಸಾಮಗ್ರಿಗಳನ್ನು ಬೇಡುತ್ತಿದ್ದ ಅಂದಿನ ಕಪ್ಪು-ಬಿಳುಪಿನ್ ಮೆಕಾನಿಕಲ್ ಕ್ಯಾಮೆರಾ ಬಳಕೆಯ ಮಾಹಿತಿ ಇರದೇ ಬಳಸಿದರೆ ಕೆಲವೊಮ್ಮೆ ಕೆಟ್ಟು ಕೂರುತ್ತಿತ್ತು. ಗೊತ್ತಿಲ್ಲದೇ ಅಗುಳಿ ತೆಗೆದರೆ ಒಳಗಡೆ ಇಟ್ಟಿರುವ ಫಿಲ್ಮ್ ರೋಲ್ ಬೆಳಕನ್ನು ಕಾಣುತ್ತಿದ್ದಂತೇ ಕೆಟ್ಟುಹೋಗುತ್ತಿತ್ತು! ಕತ್ತಲಲ್ಲಿ ಆ ಫಿಲ್ಮ್ ರೋಲ್ ಕ್ಯಾಮೆರಾದೊಳಕ್ಕೆ ಅಳವಡಿಸುವ ಮತ್ತು ಫಿಲ್ಮ್ ರೋಲ್ನ ಕೊನೆಯ ಚಿತ್ರಗ್ರಹಣ ಮುಗಿದಮೇಲೆ ಅದನ್ನು ಮತ್ತೆ ಕತ್ತಲಲ್ಲಿ ಕ್ಯಾಮೆರಾದಿಂದ ಹೊರತೆಗೆದುಕೊಂಡು ಹಾಗೇ ಅದನ್ನು ಡೆವಲಪರ್ ಹಾಕಿ ಪ್ರಾಸೆಸ್ ಮಾಡುವುದು ಕೆಲವರಿಗೆ ಮಾತ್ರ ಕರತಲಾಮಲಕವಾಗಿತ್ತು.

ಮೆಕಾನಿಕಲ್ ಕ್ಯಾಮೆರಾಗಳಲ್ಲಿ ಶಟರ್ ಆಪರೇಷನ್ ಕೆಲವೊಮ್ಮೆ ಸರಿಯಾಗಿ ಆಗದೇ ತೆಗೆಯುವ ಚಿತ್ರಗಳು ಬಾರದೇ ಹೋಗುವ ಪರಿಸ್ಥಿತಿ ಕೂಡ ಇತ್ತು. ಕೊಡಾಕ್,ಯಾಶಿಕಾ, ಮಿನೋಲ್ಟಾ ಮೊದಲಾದ ಕಂಪನಿಗಳು ಹೊಸಹೊಸ ಮಾದರಿಯ ಕ್ಯಾಮೆರಾಗಳನ್ನು ಕಾಲಕಾಲಕ್ಕೆ ಅಭಿವೃದ್ಧಿಪಡಿಸುತ್ತಲೇ ಬಂದವು. ’ಎಸ್.ಎಲ್.ಆರ್.’ ಅಥವಾ ಸಿಂಗಲ್ ಲೆನ್ಸ್ ರಿಪ್ಲೆಕ್ಸ್ ಟೆಕ್ನಾಲಜಿ ಬಳಕೆಯಾಗುವ ವರೆಗೆ ಛಾಯಾಚಿತ್ರಗಳನ್ನು ಸೆರೆಹಿಡಿಯುವ ಜನರಿಗೆ ಅದು ಸಮಯವನ್ನು ಬೇಡುವ ಕೆಲಸವಾಗಿತ್ತು. ಪ್ಲಾಷ್ ಇರದಿದ್ದಾಗ ಸೂರ್ಯನ ಬಿಸಿಲನ್ನೋ ಬೆಳಕನ್ನೋ ಅವಲಂಬಿಸಿ ಚಿತ್ರ ಸೆರೆಹಿಡಿಯಬೇಕಾಗುತ್ತಿತ್ತು. ಎದುರುಗಡೆಯ ದೃಶ್ಯವನ್ನು ಹೇಗೆ ಚಿತ್ರವನ್ನಾಗಿ ಸೆರೆಹಿಡಿಯಬೇಕೆಂದು ತಿಳಿಯದೇ ಬಳಸಿದರೆ ಚಿತ್ರದಲ್ಲಿ ಬರಬೇಕಾದ ಪೂರಕ ಅಂಶಗಳನ್ನು ಬಿಟ್ಟು ಮಿಕ್ಕವುಗಳೇ ವಿಜೃಂಭಿಸುತ್ತಿದ್ದವು! ನಮ್ಮೂರ ಕಡೆಗಳಲ್ಲಿ ಪ್ರೊಫೆಶನಲ್ ಫೋಟೋಗ್ರಾಫರ್ ಎಂದು ಬರೆದುಕೊಂಡಿರುವ ವೃತ್ತಿನಿರತರೇ ಅಂದಿಗೆ ತೆಗೆದ ಕೆಲವು ಛಾಯಾಚಿತ್ರಗಳಲ್ಲಿ ಕೆಲವರ ಮುಖ ಸೊಟ್ಟಗೆ ಬಂದಿದ್ದು, ಗುಂಪಿನಲ್ಲಿ ನಿಂತವರಲ್ಲಿ ಕೆಲವರ ತಲೆ ಕಾಣಿಸದೇ ಹೋಗಿದ್ದು ಹೀಗೇ ಭಿನ್ನ ಭಿನ್ನ ಕಲಾಕೃತಿಗಳು ಆ ವೃತ್ತಿಪರ ಕಲಾವಿದರಿಗೆ ಗೊತ್ತಿಲ್ಲದಂತೆಯೇ ಸಿದ್ಧವಾಗಿಬಿಡುತ್ತಿದ್ದವು; ಗ್ರಾಹಕರಿಗೂ ಚಿತ್ರಗಳ ಗುಣಮಟ್ಟದ ಬಗ್ಗೆ ತೀರಾ ಜಾಸ್ತಿ ತಿಳಿದಿರದ ಕಾರಣ ಫೋಟೋಗ್ರಾಫರ್ ಕೊಟ್ಟಿದ್ದನ್ನೇ ಮಹಾಪ್ರಸಾದ ಎಂಬ ರೀತಿಯಲ್ಲಿ ಆಲ್ಬಮ್ ಮಾಡಿ ಇಟ್ಟುಕೊಂಡು ಬಂದ ಅತಿಥಿಗಳಿಗೆ ತೋರಿಸುತ್ತಿದ್ದರು.     

ಚಿತ್ರಗ್ರಹಣವನ್ನು ಸಮರ್ಪಕವಾಗಿ ಮಾಡಲು ಬರದ ಹಲವರಿಗಾಗಿ ಫೋಟೋಗ್ರಫಿ ಕಲಿಸುವ ಸ್ಕೂಲ್ಗಳೂ ಹುಟ್ಟಿಕೊಂಡವು. ಅನೇಕ ಜನ ಅಂತಹ ಸ್ಕೂಲ್ಗಳ ಮೊರೆಹೋಗಿ ಕಲಿತರೂ ಅದನ್ನು ವೃತ್ತಿಯನ್ನಾಗಿಸಿಕೊಳ್ಳುವಲ್ಲಿ ಮುಂದಾಗಲಿಲ್ಲ. ಏನೂ ಗೊತ್ತಿರದೇ ಇದ್ದರೂ ಕುತೂಹಲಿಯಾಗಿ ಕಲಿಯಬಯಸಿದ ಕೆಲವರು ಅಲ್ಲಿಲ್ಲಿ ನೋಡೇ ಅಷ್ಟಿಷ್ಟು ಕಲಿತುಕೊಂಡು ಅದನ್ನೇ ತಮ್ಮ ವೃತ್ತಿಯನ್ನಾಗಿ ಆಯ್ದುಕೊಂಡರು. ಈ ಕುತೂಹಲದ ಹಿಂದೆ ಅವರೊಳಗಿದ್ದ ’ಕಲಾವಿದ’ನ ಕೈವಾಡವಿರುತ್ತಿತ್ತು. ಅಭಿಜಾತ ಕಲಾವಿದರಿಗೆ ಕಲಿಕೆ ನೆಪಮಾತ್ರ. ಒಮ್ಮೆ ನೋಡಿದರೆ ಸಾಕು ಅದನ್ನು ಅನುಕರಿಸುವ, ಮತ್ತಷ್ಟು ಕಸರತ್ತುಗಳನ್ನು ಮಾಡಿ ಆ ಕಲೆಯನ್ನು ಉದ್ದೀಪಿಸುವ ಮನೋಭಾವ ಅಂಥಾವ್ಯಕ್ತಿಗಳಲ್ಲಿ ಒಡಮೂಡುತ್ತದೆ. ಅದು ಕೇವಲ ಫೋಟೋಗ್ರಫಿ ರಂಗದಲ್ಲಲ್ಲ, ಯಾವುದೇ ರಂಗವನ್ನು ತೆಗೆದುಕೊಂಡರೂ ಅದಮ್ಯ ಕುತೂಹಲವೇ ಕಲಿಕೆಗೆ ಮೂಲಕಾರಣ ಎನ್ನಬಹುದು. ಛಾಯಾಚಿತ್ರವನ್ನು ಸೆರೆಹಿಡಿಯುವ ಫೋಟೋಗ್ರಾಫರ್ ಕಣ್ಣು ಒಮ್ಮೆ ಮುಂದಿರುವ ದೃಶ್ಯವನ್ನು ಕಂಡಕೂಡಲೇ ಮನದಲ್ಲಿ ಅದರ ಲೋಪದೋಷಗಳು ಕಾಣಿಸಿಕೊಳ್ಳುತ್ತಿದ್ದವು. ಚಿತ್ರ ಹೇಗಿರಬೇಕೆಂಬ ಸಮಗ್ರ ಕಲ್ಪನೆ ಆತನ ಮನದಲ್ಲಿ ಮೂಡುವುದರ ಜೊತೆಗೆ ಕ್ಯಾಮೆರಾದಂತಹ ಉಪಕರಣಗಳಲ್ಲಿನ ದೋಷಗಳೂ ಅವನಿಗೆ ತಿಳಿದಿರುತ್ತಿದ್ದವು. ಹೀಗಾಗಿ ಕಾಯಿಲೆಗಳನ್ನು ಹೇಳದೇ ಬಚ್ಚಿಟ್ಟು ಹುಡುಗಿಯನ್ನು ಮದುವೆಮಾಡುವ ಹಾಗೇ ನ್ಯೂನತೆಗಳನ್ನು ಮರೆಮಾಚಲು ಕೆಲವರು ತಮ್ಮದೇ ಆದ ಮಾರ್ಗಗಳನ್ನು ಕಂಡುಕೊಂಡಿದ್ದರು!   

ತಮಾಷೆಯ ಪ್ರಸಂಗವೊಂದು ಹೀಗಿದೆ: ಒಂದು ಮದುವೆಮನೆಯಲ್ಲಿ ಆ ಊರ ದಡ್ಡನೊಬ್ಬ ಕುಳಿತಿದ್ದ. ಆತನಿಗೆ ತನ್ನದೂ ಛಾಯಾಚಿತ್ರ ಇರಲಿ ಎಂಬ ಆಸೆ. ಮದುವೆಗೆ ಬಂದ ಫೋಟೋಗ್ರಾಫರ್ ನ ಹಿಂದೆಬಿದ್ದ ಆತ ತನ್ನ ಫೋಟೋ ತೆಗೆಯುವಂತೇ ದುಂಬಾಲು ಬೀಳುತ್ತಿದ್ದ. ದಡ್ಡನಿಗೆ ಮುಂದಿನ ಎರಡು ಹಲ್ಲುಗಳು ವಕ್ರವಾಗಿ ಮುಂದೆಚಾಚಿದ್ದವು. ಫೋಟೋಗ್ರಾಫರ್ ಒಮ್ಮೆ ಆತನಿಗೆ ಹೇಳಿದ "ನೋಡಣ್ಣಾ ನಿನ್ನ ಫೋಟೋ ತೆಗೆದಿದ್ದು ತೊಳೆಯುವಾಗ ಉಬ್ಬಿರುವ ನಿನ್ನ ಎರಡು ಹಲ್ಲುಗಳು ಕ್ಯಾಮೆರಾಕ್ಕೆ ಸಿಕ್ಕಿಹಾಕಿಕೊಂಡು ರೀಲ್ ಹೊರತೆಗೆಯಲಾಗದೇ ಬಹಳ ಕಷ್ಟವಾಗಿ ಹೋಯ್ತು, ನಿನ್ನ ಮುಂದಿನ ಹಲ್ಲುಗಳು ಉಬ್ಬಿರುವುದರಿಂದ ಫೋಟೋ ಬರಲ್ಲ."  ಕೆಲವುದಿನಗಳು ಸಂದವು. ಊರಕಡೆಗೆ ಫೋಟೋಗ್ರಫಿ ಮಾಡುವವರು ಯಾರೋ ಒಬ್ಬರೋ ಇಬ್ಬರೋ ಇರುತ್ತಾರಲ್ಲ ಹೀಗಾಗಿ ಮತ್ತೊಂದು ಮದುವೆಮನೆಯಲ್ಲಿ ಮತ್ತದೇ ಫೋಟೋಗ್ರಾಫರ್ ಮತ್ತು ಮತ್ತದೇ ದಡ್ಡನ ಮುಖಾಮುಖಿ ನಡೆದೇ ಹೋಯ್ತು. ಈಸರ್ತಿ ದಡ್ಡ ಬಹಳ ಧೈರ್ಯದಿಂದ ಫೋಟೊಗ್ರಾಫರ್ ನ ರಟ್ಟೆ ಹಿಡಿದು ಹೇಳಿದ "ಈ ಸಲ ನನ್ನ ಫೋಟೋ ಬಂದೇ ಬರುತ್ತೆ ಯಾಕೆ ಗೊತ್ತಾ ಮುಂದಿನ ಎರಡು ಹಲ್ಲುಗಳನ್ನು ಕೀಳಿಸಿಕೊಂಡೇ ಬಂದಿದೀನಿ ನೋಡು" ಎಂದ! 

ಬ್ಲಾಕ್ ಅಂಡ್ ವ್ಹೈಟ್ ಸಿನಿಮಾಗಳ ಹಾಗೇ ಛಾಯಾಚಿತ್ರಗಳೂ ಬ್ಲಾಕ್-ಅಂಡ್ ವ್ಹೈಟ್ ಆಗಿದ್ದ ಕಾಲ.ಕೆಲವು ವೃತ್ತಿಪರರು ಬಹಳ ತಾದಾತ್ಮ್ಯತೆಯಿಂದ ಚಿತ್ರಕ್ಕೆ ಪೂರಕವಾದ ಅಂಶಗಳನ್ನು ಸೆರೆಹಿಡಿಯುವಲ್ಲಿ ಒಳ್ಳೆಯ ಹೆಸರುಮಾಡಿದರು. ಬೆಂಗಳೂರಿನ ಮಟ್ಟಿಗೆ ಈ.ಹನುಮಂತ ರಾವ್, ಈಗಲೂ ನಮ್ಮ ನಡುವೆ ಇರುವ ಹಿರಿಯಮಿತ್ರ ಎಮ್.ಎಸ್. ಹೆಬ್ಬಾರ್, ಜಿ.ಕೆ.ವೇಲ್ ಮೊದಲಾದ ಕೆಲವು ಕಲಾವಿದರು ತಮ್ಮತನವನ್ನು ಸಾಬೀತುಗೊಳಿಸಿದರು. ಬಣ್ಣದ ಚಿತ್ರಗಳಿಲ್ಲದ ಆ ಕಾಲಕ್ಕೆ ಕೈಯ್ಯಲ್ಲಿ ಬ್ರಶ್ ಹಿಡಿದು ಬಣ್ಣವನ್ನು ಕೊಡುವ ವ್ಯವಸ್ಥೆಯಲ್ಲೂ ಕೆಲವರು ಯಶಸ್ಸು ಪಡೆದರು. ಆ ಚಿತ್ರಗಳು ಅಂದಿನ ಬಣ್ಣದ ಛಾಯಾಚಿತ್ರಗಳೆನಿಸಿದವು;ಹಲವು ಕಡೆ ಅಂಥವು ಈಗಲೂ ನೋಡಸಿಗುತ್ತವೆ. ಛಾಯಾಚಿತ್ರಗ್ರಹಣಕಾರರಲ್ಲಿ ವ್ಯಕ್ತಿಗಳ ಚಿತ್ರ, ನೈಸರ್ಗಿಕ ದೃಶ್ಯಗಳ ಚಿತ್ರ, ವನ್ಯಜೀವಿ ಚಿತ್ರ ಗ್ರಹಣಕಾರರಾಗಿ ಕೆಲವರು ತಮ್ಮನ್ನು ಆ ಯಾ ವಿಭಾಗಗಳಿಗೆ ಸೀಮಿತಗೊಳಿಸಿಕೊಂಡರು. ಪಟ್ಟಣಗಳಲ್ಲೂ ಸ್ವಲ್ಪ ಜನಸಂಪರ್ಕ ಜಾಸ್ತಿ ಇರುವ ಹಳ್ಳಿಗಳಲ್ಲೂ ಸ್ಟುಡಿಯೋಗಳು ಬಾಗಿಲು ತೆರೆದವು. ಯಾವುದೇ ಉತ್ತಮ ಕಾರ್ಯಕ್ರಮವಿರಲಿ-ಫೋಟೋಗ್ರಫಿ ಎಂಬುದು ಅನಿವಾರ್ಯ ಎನಿಸುವಷ್ಟು ಹಾಸುಹೊಕ್ಕಾಯ್ತು.           

ಈ ಮಧ್ಯೆ ಒಂದೆರಡು ದಶಕಗಳ ಕಾಲ ಕಲರ್ ಕ್ಯಾಮೆರಾಗಳೂ ಬಂದವು. ಅಂತಹ ಕ್ಯಾಮೆರಾಗಳು ಬಂದಾಗ ಅವುಗಳನ್ನು ಖುದ್ದಾಗಿ ನೋಡುವ ಕುತೂಹಲ ನಮ್ಮಂತಹ ಬಹಳ ಮಂದಿಗೆ ಇತ್ತು. ಅವುಗಳಿಂದ ತೆಗೆದ ಚಿತ್ರಗಳು ಹೇಗೆ ಬಣ್ಣಬಣ್ಣಗಳಲ್ಲಿ ದೊರೆಯಬಹುದು ಎಂಬ ಪ್ರಮೇಯವೂ ಕಾಡುತ್ತಿತ್ತು. ಅವುಗಳಲ್ಲಿ ಬಳಸುವ ಫಿಲ್ಮ ರೋಲ್ಗಳು ಮತ್ತು ಚಿತ್ರಗಳನ್ನು ಅಚ್ಚುಮೂಡಿಸಲು ಬಳಸುವ ಮುದ್ರಣಕಾಗದಗಳು ವಿಶಿಷ್ಟ ರಾಸಾಯನಿಕ ಗುಣಧರ್ಮದವು ಎಂಬುದರ ಅರಿವಾಗಲೀ ಪರಿವೆಯಾಗಲೀ ನಮಗೆ ಇರಲಿಲ್ಲ. ಕಲರ್ ಫೋಟೋ ಕರುಣಿಸುವ ನೆಪದಲ್ಲಿ ವೃತ್ತಿಪರರು ಆ ಕಾಲಕ್ಕೆ  ಸ್ವಲ್ಪ ಕಾಸನ್ನೂ ಮಾಡಿಕೊಂಡರು. ಬಣ್ಣದ ಚಿತ್ರಗಳನ್ನು ಮುದ್ರಿಸುವ ಮುದ್ರಕಯಂತ್ರಗಳನ್ನು ತರಿಸಿಕೊಂಡ ಕೆಲವರು ಹಾಕುವ ಬಣ್ಣದಲ್ಲೇ ಪ್ರತಿಶತ ಕಮ್ಮಿ ಮಾಡಲು ತೊಡಗಿದರು. ೩-೪ ಪಾಸ್ಗಳಿರುವಲ್ಲಿ ಒಂದೇ ಪಾಸ್ ಕೊಟ್ಟು ಮುದ್ರಣ ಕಲರ್ಫುಲ್ ಆಗಿ ಬರುತ್ತಲೇ ಇರಲಿಲ್ಲ. ಬೆಂಗಳೊರಿನಲ್ಲಂತೂ ವೃತ್ತಿಪರ ಛಾಯಾಗ್ರಾಹಕರಿಗೆ ಮೆಜೆಸ್ಟಿಕ್ ಏರಿಯಾದಲ್ಲಿ ಒಬ್ಬ ಮಹಾಶಯ ಬಣ್ಣದ ಛಾಯಚಿತ್ರಗಳನ್ನು ಹೋಲ್ ಸೇಲ್ ದರದಲ್ಲಿ [ಕಳಪೆಯಾಗಿ]ಮುದ್ರಿಸಿಕೊಡುತ್ತಿದ್ದ!ಒಂದೇ ಛಾಯಾಚಿತ್ರದ ನೆಗೆಟಿವ್ ಬೆಂಗಳೂರಿನಲ್ಲಿ ಮುದ್ರಣಕಾಣುವುದಕ್ಕೂ ಕುಂದಾಪುರದಲ್ಲಿ ಮುದ್ರಣಕಾಣುವುದಕ್ಕೂ ಗುಣಮಟ್ಟದ ಅಂತರ ಕಾಣಿಸುತ್ತಿತ್ತು. ಕ್ಯಾಮೆರಾಗಳಿಗೆ ರೀಲು ತುಂಬಿ ಸೆಲ್ಲು ತುಂಬಿ ಸುಸ್ತಾದ ಮಂದಿಗೆ ವರದಾನವಾಗಿ ಬಂದಿದ್ದೇ ಡಿಜಿಟಲ್ ಕ್ಯಾಮೆರಾ. 

ಕಾಲಬದಲಾಗಿ ಕಂಪ್ಯೂಟರ್ ಕಾಲಿಟ್ಟಮೇಲೆ ಜಗದ ಎಲ್ಲಾರಂಗಗಳಲ್ಲೂ ಜಾಗೃತಿ ಮೂಡಿತು; ತೀವ್ರಗತಿಯಲ್ಲಿ ನಾನಾ ಆವಿಷ್ಕಾರಗಳೂ ಬದಲಾವಣೆಗಳೂ ಆದವು. ಮನೆ ಕಟ್ಟಿಸುವ ಮೊದಲೇ ಗಣಕಯಂತ್ರದಲ್ಲಿ ಕಟ್ಟುವ ಮನೆಯ ರೂಪರೇಷೆಗಳನ್ನು ಕಂಡು, ಬಣ್ಣ-ಬೇಡಗೆ ಅರಿತುಕೊಂಡು, ಮನೆಯೊಳಗಣ ಕೋಣೆಕೊಠಡಿ ದೇವರಮನೆ, ಮಲಗುವ ಕೋಣೆ, ಬಚ್ಚಲುಮನೆ ಎಲ್ಲವನ್ನೂ ಕೂಲಂಕಷವಾಗಿ ಪರಿಶೀಲಿಸಿ ತಿಳಿದುಕೊಂಡು ಆಮೇಲೆ ಮನೆಕಟ್ಟಿಸುವಷ್ಟು ಆಧುನಿಕೀಕರಣ ಆರಂಭವಾಯ್ತು. ಗಣಕಯಂತ್ರದ ಬಳಕೆ ಮತ್ತು ಅಳವಡಿಕೆಯಿಂದ ಆದ ಮಾರ್ಪಾಟುಗಳಲ್ಲಿ ಗುಣಮಟ್ಟದ ಬಗ್ಗೆ ಬಹಳ ಆದ್ಯತೆ ನೀಡಲಾಯ್ತು. ನಿಖರವಾದ ಅಳತೆಯ ಮಾನದಂಡಗಳು ಒಡಮೂಡಿದವು. ಮನೋವೇಗದಂತಹ ವೇಗದಲ್ಲಿ ನಡೆದ ಆವಿಷ್ಕಾರಗಳಲ್ಲಿ ವಿದ್ಯುನ್ಮಾನ ರಂಗದಲ್ಲಿ ಹುಟ್ಟಿಕೊಂಡಿದ್ದು ಡಿಜಿಟಲ್ ತಂತ್ರಜ್ಞಾನ! ಈ ತಂತ್ರಜ್ಞಾನವನ್ನು ವಿದ್ಯುನ್ಮಾನ ಕ್ಷೇತ್ರದ ಎಲ್ಲಾ ಉಪಕರಣಗಳಿಗೂ ಬಳಸಿಕೊಳ್ಳುವ ಪ್ರಯತ್ನ ನಡೆಯಿತು. ಸೆಲ್ಯುಲಾರ್ ಫೋನ್ಗಳೂ ಡಿಜಿಟಲ್ ಕ್ಯಾಮೆರಾಗಳೂ ಹುಟ್ಟಿಕೊಂಡವು. ಬೇಕಾದಾಗ ತೆಗೆದು ನೋಡುವ, ಮುದ್ರಿಸಿಕೊಳ್ಳುವ, ನಕಲುಮಾಡಿಕೊಳ್ಳುವ ಸೌಕರ್ಯ ಮತ್ತು ಸೌಲಭ್ಯಗಳು ಲಭ್ಯವಾದವು.      

ಡಿಜಿಟಲ್ ಕ್ಯಾಮೆರಾ ಬಂದಮೇಲೆ ಫೋಟೋಗ್ರಫಿ ಎನ್ನುವುದು ಬಹಳ ಈಸಿಯಾಗಿದೆ, ಅತಿ ಸರಳ ಮತ್ತು ಸುಲಭವಾಗಿದೆ. ತರಹೇವಾರಿ ಫ್ಲಾಷ್ಗಳು ಜ಼ೂಮ್ ಲೆನ್ಸ್ಗಳು ಕ್ಯಾಮೆರಾದೊಳಗೂ ಇರುವಂತೇ ಅಥವಾ ಅಳವಡಿಕೆಯಾಗಿ ಜೋಡಿಸಿಕೊಳ್ಳುವಂತೇ ಸಿಗುವ ಡಿಜಿಟಲ್ ಕ್ಯಾಮೆರಾವನ್ನು ತರಬೇತುಗೊಳಿಸಿದ ಮಂಗನ ಕೈಲಿ ಕೊಟ್ಟರೂ ಗುಂಡಿ ಅದುಮಿ ಚಿತ್ರತೆಗೆಯಬಲ್ಲದು ! ಸೆರೆಹಿಡಿಯುವ ಮೊದಲೇ ಚಿತ್ರ ಹೇಗೆ ಬರುತ್ತದೆ ಎಂಬುದೂ ತಿಳಿದುಹೋಗುವ, ಅಗತ್ಯಕ್ಕೆ ತಕ್ಕಂತೇ ದೃಶ್ಯಗಳ ಆಯ-ಅಗಲಗಳನ್ನು ಹಿರಿದು-ಕಿರಿದು ಮಾಡಿಕೊಳ್ಳಬಹುದಾದ ಆಯ್ಕೆಗಳ ಅನುಕೂಲತೆಯುಳ್ಳ ಇವತ್ತಿನ ಕ್ಯಾಮೆರಾಗಳಲ್ಲಿ ಚಿತ್ರ ಸೆರೆಹಿಡಿಯುವ ವೃತ್ತಿ ಕಷ್ಟವೇನಲ್ಲ. ಯಾವುದೋ ಕಾಡುಪ್ರಾಣಿಯೋ ಹಕ್ಕಿಯೋ ದುಂಬಿಯೋ ಬೇಕು ಎಂಬ ಕಾರಣಕ್ಕಾಗಿ ಮಾತ್ರ ಸ್ವಲ್ಪ ಸಮಯ ಅಲೆದಾಡಬೇಕಾದೀತೇ ಹೊರತು, ಕಾಡತೂಸಿಗೆ ಮಸಿತುಂಬಿ-ಗುಂಡುತುಂಬಿ ಈಡುಮಾಡಲು ಅಣಿಗೊಳಿಸುವಂತೇ ಕ್ಯಾಮೆರಾವನ್ನೇ ಹದಗೊಳಿಸಿಕೊಳ್ಳುವ ಪ್ರಮೇಯ ಇರುವುದಿಲ್ಲ.

ವಿಪರ್ಯಾಸ ಎಂದರೆ ವೈಜ್ಞಾನಿಕ ಶೋಧಗಳು, ಆವಿಷ್ಕಾರಗಳು ಪೂರಕವಾಗಿರುವಂತೇ ಮಾರಕವೂ ಆಗಿಬಿಡುತ್ತವೆ ಎಂಬುದಕ್ಕೆ ಹಲವು ಉದಾಹರಣೆಗಳು ಸಿಗುತ್ತವೆ. ಗುಣಮಟ್ಟದ ಬದುಕಿಗೆ ಗುಣಮಟ್ಟದ ವಸ್ತು-ಯಂತ್ರ-ಕಟ್ಟಡಗಳನ್ನು ಒದಗಿಸಿದ ಗಣಕಯಂತ್ರ ಗುಣಮಟ್ಟದ ಚಿತ್ರಗಳನ್ನು ಕೊಡುವಲ್ಲಿಯೂ ಬಳಕೆಯಾಗುತ್ತಿದೆ. ಗಣಕಯಂತ್ರಕ್ಕೆ ಡಿಜಿಟಲ್ ಕ್ಯಾಮೆರಾ ಅಥವಾ ಮೆಮರಿ ಕಾರ್ಡ್ ಅಳವಡಿಸಿದಾಗ ಅವುಗಳಲ್ಲಿರುವ ಚಿತ್ರಗಳನ್ನು ಗಣಕಯಂತ್ರದಲ್ಲಿ ಕಾಣಬಹುದಾಗಿದೆ, ಬಣ್ಣ-ಆಕಾರ, ಬೆಳಕು, ಹಿನ್ನೆಲೆ ಸನ್ನಿವೇಶ ಎಲ್ಲವುಗಳ ಅಷ್ಟೇ ಏಕೆ ಚಿತ್ರಗಳ ಭಾಗಗಳನ್ನೇ ತಿದ್ದುಪಡಿಮಾಡಬಹುದಾಗಿದೆ.ಚಿತ್ರಗಳನ್ನೂ ವೀಡಿಯೋಗಳನ್ನೂ ತಿದ್ದುಪಡಿ ಮಾಡಬಹುದು ಎಂಬುದನ್ನೇ ದಾಳವಾಗಿ ಬಳಸಿಕೊಂಡು ತಮ್ಮ ತಪ್ಪೇನೂ ಇಲ್ಲ ಎಂದು ಹೆಂಡದಮಂತ್ರಿ ರೇಣುಕಾಚಾರ್ಯ ಮತ್ತು ಚೋರಗುರು ನಿತ್ಯಾನಂದ ಹೇಳಿಕೊಂಡಿದ್ದಾರೆ. ತಿದ್ದುಪಡಿ ಮಾಡುವ ಅನುಕೂಲತೆ ಕಂಡ ಚಿತ್ರಚೋರರು ಮೂಲ ಫೋಟೋಗ್ರಾಫರ್ ಹೆಸರನ್ನು ಅಳಿಸಿ ಅಲ್ಲಿ ತಮ್ಮ ಹೆಸರನ್ನು ದಾಖಲಿಸುತ್ತಾರೆ.

ಡಿಜಿಟಲ್ ಮೀಡಿಯಾ ಚೌರ್ಯ ಇಷ್ಟಕ್ಕೇ ನಿಲ್ಲುವುದಿಲ್ಲ. ಹಲವು ತಂತ್ರಾಂಶಗಳೂ ಮತ್ತು ಸಿನಿಮಾಗಳು ಅಲ್ಲದೇ ಆಡಿಯೋ ಆಲ್ಬಮ್ಗಳು ಕೃತಿಚೋರರಿಂದ ಚೋರಿಮಾಡಲ್ಪಟ್ಟಿವೆ; ಮಾಡಲ್ಪಡುತ್ತಿವೆ. ಆಗಾಗ ಅಲ್ಲಲ್ಲಿ ಗುಲ್ಲೆಬ್ಬಿಸಿದ ಕದ್ದ ಕಥೆಗಳು ಕಾಲಾನಂತರದಲ್ಲಿ ತಣ್ಣಗಾಗಿಹೋಗುತ್ತವೆ; ಚೋರೀಮಾಡುವವರು ತಮ್ಮ ಕೆಲಸವನ್ನು ನಡೆಸೇ ಇರುತ್ತಾರೆ. ಕೃತಿ ಚೌರ್ಯ ಎಂಬುದು ಇಂಟೆಲೆಕ್ಚ್ವಲ್ ಪ್ರಾಪರ್ಟಿಯನ್ನು ಕದ್ದು ಬಳಸುವಿಕೆಗೆ ಇರುವ ಹೆಸರು ಎಂಬುದು ನನಗೆ ಹಲವುದಿನ ಗೊತ್ತೇ ಇರಲಿಲ್ಲ. ಇಂಗ್ಲೀಷಿನಲ್ಲಿ ಪೈರಸಿ ಎಂದು ಕರೆಸಿಕೊಳ್ಳುವ ಈ ಕೆಲಸ ಡಿಜಿಟಲ್ ಮಾಧ್ಯಮಗಳ ಈ ಕಾಲದಲ್ಲಿ ತೀರಾ ಮತ್ತು ತುಂಬಾ ಸುಲಭ. ಹಲವರು ಬರಹಗಳನ್ನೂ ಕದ್ದು ಕಾಪೀ ಮಾಡಿಕೊಂಡು ತಮ್ಮ ಬರಹಗಳೆಂದು ಹೇಳಿಕೊಳ್ಳುತ್ತಾರೆ ಎಂದು ಕೇಳುತ್ತಲೇ ಇದ್ದೇನೆ.

ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಇದಕ್ಕೆಲ್ಲಾ ಕಡಿವಾಣ ಹಾಕುವುದು ಹೇಗೆ ಎಂಬುದು ಇನ್ನೂ ಯಕ್ಷಪ್ರಶ್ನೆಯೇ ಸರಿ. ನಾಣ್ಯಕ್ಕೆ ತೂತು ಮಾಡಿ ದಾರಕಟ್ಟಿ ಸಾರ್ವಜನಿಕ ಕಾಯ್ನ್ ಬೂತ್ಗಳಲ್ಲಿ ಕರೆಮಾಡಲು ಬಳಸಿ ಕರೆಮುಗಿದ ನಂತರ ಎತ್ತಿಕೊಂಡು ಹೋಗುವ ಕುಚಾತುರ್ಯ ಮೆರೆದ ಕಳ್ಳರೂ ಇದ್ದರಂತೆ, ಒಂದು ರೂಪಾಯಿಯ ನಾಣ್ಯವನ್ನೇ ಹೋಲುವ, ಅದೇ ತೂಕದ ಕಬ್ಬಿಣದ ಬಿಲ್ಲೆಗಳನ್ನು ಮಾಡಿಸಿತಂದು ಅದನ್ನು ಒಂದೊಂದಾಗಿ ಹಾಕಿ ಕರೆಮಾಡುವವರೂ ಇದ್ದರಂತೆ! ಅಷ್ಟೆಲ್ಲಾ ಮಾಡುವವರಿರುವಾಗ ಡಿಜಿಟಲ್ ಮಾಧ್ಯಮಗಳ ಮೂಲಕ ದೊರಕುವ ಸರಕಿಗೆ ಕೈಹಾಕಿ ಬಾಚಿಬರಗಿಕೊಳ್ಳುವುದು ಯಾವ ಮಹಾ ಕೆಲಸ ಹೇಳಿ? ಮೇಲಾಗಿ ಇಲ್ಲಿ ಕಳ್ಳತನದ ಹೆಜ್ಜೆಗುರುತು ಸಿಗುವುದೂ ಕೂಡ ಕಷ್ಟ. ಮುಂಡೇ ಮದುವೇಲಿ ಉಂಡೋನೇ ಜಾಣ ಅಂತಾರಲ್ಲ ಹಾಗೇ ಸಿಕ್ಕಿದ ಸರಕುಗಳನ್ನು ಸ್ವಾಹಾಮಾಡುವ ಸ್ವಭಾವ ಹೆಚ್ಚುಗಾರಿಕೆಯನ್ನು ಕೊಚ್ಚಿಕೊಳ್ಳುವ ಕೆಲವು ವ್ಯಕ್ತಿಗಳಲ್ಲಿ ಕಾಣಸಿಗುತ್ತದೆ. ಪ್ರತಿಭಾನ್ವಿತರು ಎನಿಸಿಕೊಂಡ ಕೆಲವರ ’ಪಾಂಡಿತ್ಯ’ವನ್ನು ಒರೆಗೆ ಹಚ್ಚದ ಹೊರತು ಅವರ ಒಳಹುರುಳು ಗೊತ್ತಾಗುವುದಿಲ್ಲ. ಪಂಡಿತರು ನ್ಯಾಷನಲ್ ಲೆವೆಲ್ಲೋ ಅಥವಾ ಇಂಟರ್ನ್ಯಾಷನಲ್ ಲೆವೆಲ್ಲೋ ಎಂಬುದು ತಿಳಿಯುವುದು ಅವರ ಘನಂದಾರೀ ಕೆಲಸ ಯಾರದೋ ಮೂಲಕ ಬಹಿರಂಗಗೊಂಡಾಗ ಮಾತ್ರ. ಬಿಡದಿ ನಿತ್ಯಾನಂದ ಅವತಾರವೆತ್ತಿದಮೇಲೆ ಹಲವು ಕಾವಿಧಾರಿಗಳು ಒಳಗೊಳಗೇ ಬಸವಳಿದುಹೋಗಿದ್ದಾರಂತೆ. ಅದೇ ರೀತಿ ಘನತೆವೆತ್ತ ಚೋರ ಮಹಾಮಹಿಮರು ಮುಖ್ಯಬೀದಿಯಲ್ಲಿ ತಮ್ಮ ತೇರನ್ನು ಎಳೆಯುವಾಗ ಸಿಕ್ಕಿಹಾಕಿಕೊಂಡರೆ ಆಗ ಆಗಬಹುದಾದ ಸನ್ಮಾನಕ್ಕೆ ಬೆಲೆಕಟ್ಟಲು ಸಾಧ್ಯವೇ?             

"ನಾನು ಅಲ್ಲಿ ಅದು ಮಾಡಿದೆ ಇಲ್ಲಿ ಇದು ಮಾಡಿದೆ", ಊರಿಗೆ ಊರೇ ಮೆಚ್ಚುವ ’ಮಹಾನ್ ಕಲಾವಿದ’ ತಾನು ಎಂಬುದನ್ನು ತಾನೇ ಹೇಳಿಕೊಳ್ಳುವ, ಕಂಡಲ್ಲೆಲ್ಲಾ ಅದನ್ನೇ ಎಲ್ಲರೂ ಒಪ್ಪಿಕೊಳ್ಳಲಿ ಎಂದು ಬಯಸುವ, ಪ್ರಶಸ್ತಿಗಳಿಗಾಗಿ ಲಾಬಿ-ವಶೀಲಿಬಾಜಿಗೆ ಇಳಿದಿರುವ ಇಂದಿನ ಕೆಲವು ಛಾಯಾಚಿತ್ರಗ್ರಾಹಕರು ದಯವಿಟ್ಟು ಗಮನಿಸಿ: ನನ್ನಂತಹ ಕೆಲಸಕ್ಕೆ ಬಾರದ ವ್ಯಕ್ತಿಯೂ ಕೂಡ ಇಂದು ಉತ್ತಮ ಛಾಯಾಚಿತ್ರಗಳನ್ನು ತೆಗೆಯಬಲ್ಲ ಎಂಬುದನ್ನು ನಿಮ್ಮೆದುರು ಸಾರಿ ಹೇಳುತ್ತಿದ್ದೇನೆ. ಕಣ್ಣುಗಳು ಸರಿಯಿದ್ದರೆ, ನೋಡುವ ದೃಷ್ಟಿಕೋನ ಸರಿಯಿದ್ದರೆ, ಉಪಕರಣ ಸುಸ್ಥಿತಿಯಲ್ಲಿದ್ದರೆ, ಸ್ವಲ್ಪ ಸಮಯ ವಿನಿಯೋಗಿಸಿದರೆ ಎಂತಹ ಮೂಢನೂ ಛಾಯಾಗ್ರಾಹಕನಾಗಬಹುದು-ಇದು ಡಿಜಿಟಲ್ ಕ್ಯಾಮೆರಾಗಳು ಅನುಗ್ರಹಿಸಿದ ಸರಳೀಕೃತ ಛಾಯಾಗ್ರಹಣ. ಮಿಕ್ಕಿದಂತೇ ಫೋಟೋ ಶಾಪ್, ಕೋರಲ್ ಡ್ರಾ ಮೊದಲಾದ ಕೆಲವು ತಂತ್ರಾಂಶಗಳ ಬಳಕೆ ತಕ್ಕಮಟ್ಟಿಗೆ ಬಳಸಲು ತಿಳಿದಿದ್ದರೆ ಫೋಟೊ ಪರಿಪರಿ ರೂಪವನ್ನು ಪಡೆಯಬಹುದು! ಛಾಯಾಗ್ರಹಣ ಎಂಬುದು ಈ ಕಾಲದಲ್ಲಿ ಗುರುದ್ರೋಣ ಕಲಿಸಬೇಕಾದ ಶಬ್ದವೇದಿ ವಿದ್ಯೆಯಲ್ಲ; ಯಾವ ಛಾಯಾಗ್ರಾಹಕನೂ ಸವ್ಯಸಾಚಿಯೂ ಅಲ್ಲ!