ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Saturday, January 18, 2014

ಹಣತೆಯೆನ್ನದಲ್ಲ ದೇವಹಣತೆಯೆನ್ನದಲ್ಲ ದೇವ

ಹಣತೆಯೆನ್ನದಲ್ಲ ದೇವ ಬತ್ತಿಯಲ್ಲ ಎಣ್ಣೆಯಿಲ್ಲ
ಫಣತವೆಂದು ಕರೆದರೆನ್ನ ಕುಣಿತ ಕಂಡ ಹಲವರು
ಎಣಿಕೆಯಿಲ್ಲ ಬರೆದದೆಷ್ಟೊ ಕನಸು ಹರಿದ ನಿಜವದೆಷ್ಟೊ
ಕುಣಿಕೆಗಳನು ಸೇರಿಸೆಳೆವ ಸೂತ್ರಧಾರ ಓ ಪ್ರಭು

ತಿಣುಕಲಿಲ್ಲ ನಿನ್ನ ಕೃಪೆಯಿಂ ಮನಕೆ ಬಂದುದಾಯ್ತು ಬರಹ
ವಣಿಕನಾನು ಹೊತ್ತಗೆಗಳ ಹೊತ್ತು, ಹೊತ್ತು-ಹೊತ್ತಿಗೆ
ಸಣಕಲಾದ ಮನದ ಮನೆಯೊಳಿಣುಕಿ ತೆಗೆದ ಭಾವಗಳನು
ಗಣಿಕೆಯೊರೆದು ತೆರೆದು ಇಟ್ಟೆ ಲೋಕಮುಖಕೆ ಅರ್ಪಿಸಿ 

ಪಣಕೆ ಒಡ್ಡಲಾರೆ ಭಾಷ್ಯ ಸೂತ್ರಕಾರನೆನ್ನಲಾರೆ
ಚುಣುಕು ರಾಗ-ತಾಳದಲ್ಲಿ ನುಡಿವೆ ತನನ ತೋಂ ತನ
ಸೊಣಕು ಸೊಗಡು ನೆಲ-ಜಲಗಳ ದೇಶ-ಕೋಶ ಪರಿವೆಯಿರದ
ಮಿಣುಕು ಹುಳದ ತೆರದಿ ಹಾರಿ-ಹರೆವೆನಷ್ಟು ಭರದಲಿ!

ಕಣಕ-ಹೂರಣಗಳನರಿಯೆ ಕಣಿಕೆಯೆತ್ತಿ ಕೊಣಕುತಿರುವೆ
ಕುಣುಕು ಬಹಳವಿದೆಯದೆಂದು ಹೇಳಲಾರೆ ನಿನ್ನೊಳು
ಗಣಕ-ಗುಣಕವೆಲ್ಲ ನಿನದು ಅಣಕವಾಡ ಬೇಡ ದೊರೆಯೆ
ಇನಕುಲೇಂದ್ರ ಮಣಿದು ಮುಗಿವೆ ಚಣಚಣದಲು ಚರಣಕೆ

Saturday, January 11, 2014

.....ಕಂಬ್ಳಿ ಹೊದ್ಕೊಂಡ್ ಕುಂತ್ಕಂಡಿದ್ರೆ ಯಾರು ನಿನ್ನ ಕೇಳ್ತಾರೆ ನಿಂಗವ್ವ? ನೀನು ಬೆಂಗಳೂರಿಗೆ ಬಂದು ನೋಡವ್ವ!

 
 ಚಿತ್ರಋಣ:ಅಂತರ್ಜಾಲ 

.....ಕಂಬ್ಳಿ ಹೊದ್ಕೊಂಡ್ ಕುಂತ್ಕಂಡಿದ್ರೆ ಯಾರು ನಿನ್ನ ಕೇಳ್ತಾರೆ ನಿಂಗವ್ವ? ನೀನು ಬೆಂಗಳೂರಿಗೆ ಬಂದು ನೋಡವ್ವ!

ಪದ್ಯ ಸಾಹಿತ್ಯದಲ್ಲಿ ಜನಪದವೂ ಒಂದು. ಜಾನಪದ ಎಂಬುದು ಸರಿಯಾದ ಪದ ಪ್ರಯೋಗವಲ್ಲ. ಜನರೊಳಗಿನ ಅಜ್ಞಾತ ಕವಿ ಮನಗಳು ಜನರಿಗಾಗಿ ಹೊರಹೊಮ್ಮಿಸಿದ ಸಾಹಿತ್ಯ ಪ್ರಾಕಾರ ಜನಪದ. ಪ್ರಾಯಶಃ ’ಜಾಣಪದ’ ಎಂಬ ಪದ ಪ್ರಯೋಗ ಹೇಳುವಾಗ ಸ್ವಲ್ಪ ತಿರುಚಲ್ಪಟ್ಟು ’ಜಾನಪದ’ ಎಂದಾಗಿರಲು ಸಾಕು. ಇಲ್ಲಿ ನನ್ನ ಉದ್ದೇಶ ಇರುವುದು ಆ ಪದದ ಬಗ್ಗೆ ಹೇಳುವುದಲ್ಲ; ಪದವನ್ನು ಶಿರೋನಾಮೆಯಾಗಿ ಹೊತ್ತ ಪದ್ಯಗಳ ಕಂತೆಯ ಸಂತೆಯ ಬಗ್ಗೆ ಮೂರು ಮತ್ತೊಂದು ಮಾತನಾಡುವುದು.  

ಹುಕ್ಕೇರಿ ಬಾಳಪ್ಪ, ಏಣಗಿ ಬಾಳಪ್ಪ ಇವರೆಲ್ಲ ಅನೇಕ ಹಾಡುಗಳನ್ನು ಹಾಡಿದಂತೆ ಕೆಲವು ರಂಗ ಕಲಾವಿದರೂ ಜನಪದ ಪದ್ಯಗಳನ್ನು ಹಾಡಿದ್ದಾರೆ. ಆ ಪೈಕಿ ಗುರುರಾಜ್ ಹೊಸಕೋಟಿ ಎಂಬವರೂ ಒಬ್ಬರು. ಹೆಸರನ್ನು ಹೇಳುತ್ತಿದ್ದಂತೆಯೇ ನಿಮಗೆಲ್ಲ ತುಸುಮಟ್ಟಿಗೆ ಅವರ ಪದ್ಯದ ಸದ್ದಿನ ಥಾಟು ಕಿವಿಯಲ್ಲಿ ಮಾರ್ದನಿಸತೊಡಗಿರಬಹುದು. ಅವರ ಹಾಡುಗಳ ಧ್ವನಿಸಾಂದ್ರಿಕೆಗಳು ಮಾರುಕಟ್ಟೆಯಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಬಿಕರಿಗೊಂಡಿವೆ! ಉತ್ತರ ಕರ್ನಾಟಕದ ಮಂದಿಗೆ ಇಂತಹ ಸಾಹಿತ್ಯ ಪ್ರಾಕಾರವೂ ಮತ್ತು ಹಾಡುಗಳೂ ಸಹ ಅಚ್ಚುಮೆಚ್ಚು; ಅದರರ್ಥ ಉಳಿದವರಿಗೆ ಹಿಡಿಸುವುದಿಲ್ಲವೆಂದಲ್ಲ, ಉಳಿದೆಡೆ ಜನಪದ ಸಂಗೀತ ಕಲವಿದರು ಕಮ್ಮಿ ಇದ್ದರು, ಇದ್ದಾರೆ ಮತ್ತು ಜನಪದಕ್ಕೆ ಅಷ್ಟೊಂದು ಮಹತ್ವ ಕೊಡುವುದಕ್ಕಿಂತ ಉಳಿದ ಪ್ರಾಕಾರಗಳಿಗೆ ಮಹತ್ವಕೊಟ್ಟರು ಎಂದರ್ಥ. ಗುರುರಾಜ್ ಹೊಸಕೋಟಿಯವರ ಹಾಡುಗಳನ್ನು ಕೇಳಿದ ಗಂಗರಾಜು ಅವರು ತಮ್ಮ ಸಿನಿಮಾವೊಂದರಲ್ಲಿ ಅವರಿಂದ ಜನಪದ ಶೈಲಿಯ ಹಾಡೊಂದನು ಹಾಡಿಸಿದರು:

ನಿಂಗಿ ...ನಿಂಗಿ ... ನಿಂಗಿ..ನಿಂಗಿ
ನಿದ್ದಿ ಕದ್ದಿಯಲ್ಲೆ ನಿಂಗಿ
ಚಂದಾನ ಚಂದ್ರ.....
ಭೂಮಿಗೆ ಲಾಂದ್ರ...ಆಗ್ಯಾನ ನೋಡಲ್ಲಿ

ಗಂಗರಾಜು ಎಂಬವರು ಬರೆಯತೊಡಗಿದಾಗ ತನ್ನ ಹೆಸರು ಸ್ವಲ್ಪ ವಿಭಿನ್ನವಾಗಿರಲಿ ಎಂದು ’ಹಂಸಲೇಖ’ ಎಂದು ತಮ್ಮನ್ನು ಕರೆದುಕೊಂಡರು, ಹಂಸದ ಆಕಾರದಲ್ಲಿ ರುಜುಮಾಡಲು ಆರಂಭಿಸಿದರು. 

ಮನುಷ್ಯನ ವಯಸ್ಸು ಕೂರುವುದಿಲ್ಲ; ಕಿಲೋಗಟ್ಟಲೆ ಸುಣ್ಣ-ಬಣ್ಣ ಮೆತ್ತಿಕೊಂಡರೂ ಯಾವ ಸುಂದರಿಯೂ ಒಂದಷ್ಟು ವಯಸ್ಸಿನ ನಂತರ ಷೋಡಶಿಯಾಗಿ ಕಾಣುವುದಿಲ್ಲ. ಇನ್ಫ್ಯಾಕ್ಟ್, ಬಣ್ಣ ಮೆತ್ತಿಕೊಂಡು ವಯಸ್ಸು ಮರೆಮಾಚಿ ಸುಂದರ ಎನಿಸಿಕೊಳ್ಳುವುದರಲ್ಲಿ ಕೆಲವು ಗಂಡಸರೂ ಕಮ್ಮಿ ಇರುವುದಿಲ್ಲವೆಂದು ಬಸಂತ್ ಕುಮಾರ್ ಪಾಟೀಲ್ ಹೇಳಿದ್ದಾರೆ ಬಿಡಿ! ವಯಸ್ಸು ಯಾವುದೇ ಇದ್ದರೂ ಮನುಷ್ಯರಲ್ಲಿ ಲವಲವಿಕೆ ಎಂಬುದು ಮರೆಯಾಗಬಾರದು; ಅದೇ ಜೀವನಕ್ಕೆ ಬೇಕಾದ ಪ್ರಮುಖ ಇಂಧನ. ಜೀವನೋತ್ಸಾಹ ಸದಾ ಇದ್ದರೆ ಯಾವುದೋ ಒಂದು ರೀತಿಯಲ್ಲಿ ಏನನ್ನೋ ಸಾಧಿಸಲು ಸಾಧ್ಯವಾಗುತ್ತದೆ. ಉತ್ಸಾಹವೇ ಉಡುಗಿಹೋದರೆ ಸತ್ತಿದ್ದೂ ಬದುಕಿರುವ ಹಾಗೆ ಜೀವನ ಸಪ್ಪೆಯಾಗಿರುತ್ತದೆ; ನೀರಸವಾಗಿ ಬೇಸರದಲ್ಲೇ ಮುಗಿದು ಹೋಗುತ್ತದೆ. ಬೇಸರ-ಬೇಗುದಿಗಳನ್ನು ಝಾಡಿಸಿ ಒಂದೆಡೆ ದೂಡಿಟ್ಟು ಬಾಗಿಲು ಹಾಕಿ ಬೋಲ್ಟ್ ಮಾಡಿ, ಇದು ನನ್ನ ಸಂತಸದ ಸಮಯ ಎಂದು ಒಂದಷ್ಟು ಸಮಯವನ್ನು ನಮಗಾಗಿ ಇಟ್ಟುಕೊಂಡು, ಒಂದಷ್ಟು ಸಂಗೀತ-ಸಾಹಿತ್ಯ-ಕಲೆಗಳ ಗಂಧವನ್ನು ನಮ್ಮೊಳಗೆ ಬಿಟ್ಟುಕೊಳ್ಳಬೇಕು. ಅದೊಂದು ಕಲ್ಪನಾ ವಿಲಾಸ, ಅದೊಂದು ಭ್ರಮಾಲೋಕ, ಅಲ್ಲೆಲ್ಲಾ ಒಂದಷ್ಟು ಹೊತ್ತು ಹಂಪಿಯಲ್ಲಿ ಹ್ಯಾಲಿಕಾಪ್ಟರ್ ರೈಡ್ ಹೋಗಿಬಂದ ಹಾಗೇ ವಿಹರಿಸಿ ಹೊರಬರಬೇಕು. ಆಗ ಲವಲವಿಕೆ ಹೆಚ್ಚಿ ಶರೀರಿದ ಪ್ರತಿಯೊಂದೂ ಜೀವಕೋಶಕ್ಕೂ ಹೊಸಜೀವ ಬರುತ್ತದೆ; ಹಣವನ್ನು ಕಂಡರೆ ಹೆಣವೂ ಎದ್ದುಬರುತ್ತದೆ ಅಂತಾರಲ್ಲಾ ಹಾಗೆ!  

ನನ್ನ ಮಿತ್ರ ಗುರುರಾಜ್ ಜೊತೆಗೆ ನಾನು ಹರಟೆಗೆ ಕೂತಿದ್ದಾಗ ಅವರು ಸಿಗರೇಟ್ ಸೇದುತ್ತಿದ್ದರು. ನಾನಾದರೂ ’ಅಗ್ನಿಹೋತ್ರಿ’ಯಲ್ಲ. ತಮಾಷೆಯ ಮಾತಿಗೆ ಗುರುರಾಜ್ ಹೆಸರಾದವರು. "ಸಿಗರೇಟೆಲ್ಲ ಸೇದ ಬಾರದ್ರೀ....ಕ್ಯಾನ್ಸರ್ ಬರತ್ತೆ" ಎಂದರೆ ಸಾಕು ಉತ್ತರಿಸುತ್ತಿದ್ದುದು ಹೀಗೆ: "ಭಟ್ರೆ ನಿಮಗ್ಗೊತ್ತಿಲ್ಲ, ಸಿಗರೇಟ್ ಸೇದಿದಾಗ ಶ್ವಾಸಕೋಶದೊಳಗೆ ಹೊಗೆ ಹೋಗುವುದರಿಂದ ಅಲ್ಲಿರುವ ಕ್ರಿಮಿಕೀಟಗಳೆಲ್ಲ ಸತ್ತುಹೋಗುತ್ತವೆ. ವಿಜ್ಞಾನಿಗಳಿಗೆ ತಲೆಯಿಲ್ಲ, ಅವರು ಹೇಳಿದ್ದನ್ನೆಲ್ಲಾ ಮಾಡುತ್ತ ಕೂರಲು ನಮಗೆ ಪುರ್ಸೊತ್ತಿಲ್ಲ." ನಿಯಮಗಳನ್ನು ಹೇಳುವ ವೈದ್ಯರೂ, ವಿಜ್ಞಾನಿಗಳೂ ಅಲ್ಲಲ್ಲಿ ಸಿಗರೇಟ್ ಸೇದುವುದನ್ನು ಕಂಡಿದ್ದ ನನಗೆ ಏನು ಹೇಳಬೇಕೋ ತಿಳಿಯುತ್ತಿರಲಿಲ್ಲ. ಪ್ರತೀ ವ್ಯಕ್ತಿಗೂ ತನ್ನ ವೈಯ್ಯಕ್ತಿಕದಲ್ಲಿ ಕೆಲವು ಬೇಕು-ಬೇಡಗಳಿರುತ್ತವೆ; ಅವುಗಳನ್ನು ತೀರಾ ನಿರ್ಬಂಧಕ್ಕೆ ತರಲು ಯಾರಿಂದಲೂ ಆಗುವುದಿಲ್ಲ. ಅದರಿಂದಲೇ ಅವರಿಗೆ ತೃಪ್ತಿ ಎಂಬುದಾದರೆ ಆಗ್ಲಪ್ಪಾ ಹಾಗಾದರೂ ನೆಮ್ಮದಿಯಿಂದಿರುತ್ತಾರಲ್ಲಾ ಎಂದುಕೊಂಡು ಸಂಬಂಧಿಕರು ಸುಮ್ಮನಾಗುತ್ತಾರೆ. ವೈಯ್ಯಕ್ತಿಕ ಬೇಡಿಕೆಗೂ ಮಾಡುವ ವೃತ್ತಿಗೂ, ಕಲಿತಿರುವ ವಿದ್ಯೆಗೂ ಯಾವುದೇ ಸಂಬಂಧವೂ ಇರುವುದಿಲ್ಲ. ಆದರೂ ಒಂದು ಕಿವಿಮಾತು: ಲವಲವಿಕೆ ಪಡೆಯುವ ಭರದಲ್ಲಿ ದುಶ್ಚಟಗಳಿಗೆ ದಾಸರಾಗುವುದು ಒಳಿತಲ್ಲ.       

ಸಾಹಿತ್ಯದಲ್ಲಿ ಸದಾ ಯೌವ್ವನವಿರಬೇಕು, ಸಾಹಿತ್ಯವೆಂಬುದು ಶಾರೀರಿಕವಾಗಿ ಮುದುಕಾಗಬಾರದು. ಸಾಹಿತ್ಯ ಸಣಕಲಾಗಿ, ಗೂರಲುಬ್ಬಸ ಅದಕ್ಕೆ ಶುರುವಾಗಿ, ಮುಪ್ಪಿನ ಮುಖ-ಮೈ ಸಿಕ್ಕುಗಳು-ಸುಕ್ಕುಗಳು ಕಾಣಿಸಿಕೊಂಡರೆ, ಸಂಬಂಧಮಾಡಿಕೊಳ್ಳಲು ಬರುವ ಓದುಗರೆಂಬ ಯೌವ್ವನಿಗರು ಬಂದ ದಾರಿಗೆ ಸುಂಕವಿಲ್ಲವೆಂದು ಬೈದುಕೊಂಡು ಓಡಿಹೋದಾರು! ನೀವೇ ನೋಡಿ: "ಮೈ ಅಮಿತಾಭ್ ಬಚ್ಚನ್ ಬೋಲ್ ರಹಾಂ ಹೂಂ ...." ಎಂಬ ದನಿ ನಮ್ಮಲ್ಲಿನ ಮುದುಕಿಯರಿಗೆ ಕೇಳಿದರೆ, ಇಂದಿನ ಹುಡುಗಿಯರಿಗೆ ರಣಬೀರ್ ಕಪೂರ್ ಕೈಹಿಡಿದುಕೊಂಡು ನಿಂತಷ್ಟೇ ಖುಷಿಯಾಗಿಬಿಡುತ್ತದಲ್ಲಾ, ಸಿಕ್ಸ್ಟೀ ಪ್ಲಸ್  ಹೇಮಾ ಮಾಲಿನಿ, ರೇಖಾ, ಶ್ರೀದೇವಿ ಥರದ ನಟಿಯರು ಹತ್ತಿರದ ನಗರಗಳಿಗೆ ಬಂದರೆ, ಕೈಲಾಗದ ಮುದುಕರೂ ಕೋಲೂರಿಕೊಂಡು ನಿಧಾನಕ್ಕೆ ನೋಡಿಬರಲು ಹೊರಟುಬಿಡುತ್ತಾರಲ್ಲಾ, ಅಂಥಾ ಯೌವ್ವನದ ಕಸುವನ್ನು ಸಾಹಿತ್ಯ ಸದಾ ಉಳಿಸಿಕೊಳ್ಳಬೇಕು. ಹೆಂಡ ಮತ್ತು ಆಯುರ್ವೇದೀಯ ಔಷಧಿಗಳು ಹಳೆಯದಾದಷ್ಟೂ ಪರಿಣಾಮ ಅಧಿಕವಂತೆ! ಅದೇರೀತಿಯಲ್ಲಿ, ಬರೆದ ಸಾಹಿತ್ಯ ಕಾಲಾನಂತರದಲ್ಲೂ, ಹುದುಗಿದ್ದಲ್ಲಿಂದಲೇ ದೂರಕ್ಕೆ ಬಾಣಪ್ರಯೋಗಿಸಿ ಬೇಟೆಯಾಡುವ ಶಬ್ದವೇದಿ ಬಲ್ಲ ಚಾಣಾಕ್ಷನಂತೆ, ತಾನೆಲ್ಲೇ ಹುದುಗಿದ್ದರೂ, ಹುಡುಕುತ್ತಿರುವ ಆಸಕ್ತರನ್ನು ಬರಸೆಳೆಯುವಲ್ಲಿ ಯಶಸ್ವಿಯಾಗಬೇಕು.

ಜನಪದ ಪದ್ಯಸಾಹಿತ್ಯಗಳು ಯಾಕೆ ಇಷ್ಟವಾಗುತ್ತವೆಂದರೆ, ಅವುಗಳಲ್ಲಿನ ಪಾತ್ರಗಳಲ್ಲಿ ಜೀವಂತಿಕೆಯಿರುತ್ತದೆ. ಅದು ನೇರವಾಗಿ ಯಾರನ್ನೋ ಕುರಿತು ಹೇಳಿದ್ದಲ್ಲ, ಬದಲಾಗಿ ಜನಜೀವನದಲ್ಲಿ ಕಂಡುಬರುವ ಒಂದು ಮಜಲು.

ಕಲಿತ ಹುಡುಗಿ
ಕುದುರೆ ನಡಿಗಿ ನಡೀತ ಬರ್ತಿತ್ತ
ಉಟ್ಟ ಸೀರೆಯ
ಕೆಳಗಿನ ದಡಿಯು ಕಸಾ ಹೊಡೆಯುತಿತ್ತ...

ಸೊನಗಾರ ಮಗನು ಬೆಂಕಿಯಲ್ಲಿ
ಚಿನ್ನ ಕಾಯ್ಸುತಿದ್ದ
ಆ ಸಮಯದಲಿ ಕಲಿತ ಹುಡುಗಿ
ಅಲ್ಲಿಗೆ ಬಂದ್ಬಿಡ್ತ
ಹುಡುಗಿ ನೋಡುತ ಇರುವಾಗಲೇ
ಚಿನ್ನ ಕರಗಿ ಹೋತ
ಆ ಸಮಯದಲಿ ಗುಂಜಿ ಚಿನ್ನ
ತೆಗೆವುದೆ ಮರೆತೋತ ...  

ಎಂಬ ಹಾಡಿನಲ್ಲಿ ಕಾಲೇಜು ಓದಿದ ಅಧುನಿಕ ಕನ್ಯಾಮಣಿ ಸರ್ವಾಲಂಕಾರ ಭೂಷಿತೆಯಾಗಿ ನಡೆದು ಬರುವುದನ್ನು ವರ್ಣಿಸಲಾಗಿದೆ. ಅಲ್ಲಿ ಯಾವ ಯಾವ ವೃತ್ತಿಯ ಜನ ಆಕೆಯ ನಡಿಗೆಯನ್ನು ಕಂಡು ಮೋಹಗೊಂಡು ಏನೇನು ಮಾಡಿದರು/ಮಾಡಿಕೊಂಡರು ಎಂಬುದನ್ನು ಅಜ್ಞಾತ ಕವಿ ಹಿತಮಿತವಾಗಿ ತನ್ನ ರಸಿಕ ಪದಗಳಲ್ಲಿ ಬಣ್ಣಿಸಿದ್ದಾನೆ. ಹುಡುಗಿ ಸುಂದರಿ ಎಂಬುದರ ಜೊತೆಗೆ ಆಕೆಯ ಸೌಂದರ್ಯ ಘಮಲಿಗೆ ಮಾರುಹೋಗುವವರ ದೃಶ್ಯಾವಳಿಗಳನ್ನು ಮನದಲ್ಲಿ ಚಿತ್ರಿಸಿಕೊಂಡರೆ ಅದೊಂಥರಾ ಮಜಾ ಕೊಡುತ್ತದೆ!  ಕಲಿತು ಬದಲಾಗಿ, ನಗರ ’ನಾಗರಿಕತೆ’ಗೆ ಹೊಂದಿಸಿಕೊಂಡ ಹುಡುಗಿಯ ನಡತೆಯನ್ನು ನೇರವಾಗಿ ಅವಳಲ್ಲಿ ಹೇಳಲಾಗದ ಕವಿ ಹುಡುಗಿಯ ಬಗ್ಗೆ ಪದ್ಯದ ಮುಖಾಂತರ ಹೇಳಿದ್ದಾನೆ;  ಯಾವುದೇ ವ್ಯಕ್ತಿಯ ಬಗ್ಗೆ ಹೇಳುವುದು ಅದರ ಗುರಿಯಲ್ಲ; ವ್ಯಕ್ತಿತ್ವವೊಂದರ ಬಗ್ಗೆ ಹೇಳುತ್ತಾ ತಮಾಷೆ ತೆಗೆದುಕೊಳ್ಳುವುದು ಉದ್ದೇಶ. ಇದೇ ವಿಧದಲ್ಲಿ " ನೀ ಮಳ್ಳಿಹಂಗೆ ...."ಎಂದು ಹಾಡೊಂದು ಆರಂಭವಾಗುತ್ತದೆ. ಹಳ್ಳಿಮೂಲೆಯಲ್ಲಿ ಕಂಬಳಿ ಹೊದ್ದುಕೊಂಡು ಕುಳಿತುಕೊಂಡಿದ್ದರೆ ಯಾರೂ ನೋಡುವುದಿಲ್ಲ, ನೀನು ಬೆಂಗಳೂರಿಗೆ ಬಂದದ್ದೇ ಆದರೆ, ಸ್ವಲ್ಪ ಸುಣ್ಣ-ಬಣ್ಣ ಹೊಡೆದುಕೊಂಡು ಅಲ್ಲಲ್ಲಿ ನಿಂತು ನೋಡು.. ನಿನ್ನ ಖದರ್ರೇ ಬೇರೆ ಆಗಿಬಿಡುತ್ತದೆ! ಜನ ಬೇಡ ಬೇಡವೆಂದರೂ ನಿನ್ನ ಮುಂದೆ-ಹಿಂದೆ-ಅಕ್ಕ-ಪಕ್ಕ ಇರುವ ಎಲ್ಲಾ ಜಾಗಗಳಿಂದಲೂ, ಎಲ್ಲಾ ಕೋನಗಳಿಂದಲೂ ನಿನ್ನನ್ನು ನೋಡ್ತಾರೆ ನಿಂಗವ್ವ, ಸುಮ್ನೇ ಹಳ್ಳೀಲಿ ಯಾಕಿರ್ತೀಯ? ಬೆಂಗಳೂರಿಗೆ ಬಾ ಎಂದು ಹೇಳುತ್ತಾ ಬೆಂಗಳೂರಿನಲ್ಲಿ ಸುಂದರ ಹೆಣ್ಣಿಗೆ ಇರುವ ಕೀಟಲೆಗಳನ್ನು ಹೇಳುವುದರ ಜೊತೆಗೇ, ಬೆಂಗಳೂರಿನ ಆಯಕಟ್ಟಿನ ಕೆಲವು ಸ್ಥಳಗಳಲ್ಲಿ ಕೆಲವು ಹೆಂಗಸರು ನಿಂತು ತೋರಿಸಿಕೊಳ್ಳುತ್ತ ಮಾರ್ಕೆಟ್ ಗಿಟ್ಟಿಸಿಕೊಳುವ ಬಗ್ಗೆ ವ್ಯಂಗ್ಯವಾಗಿಯೂ ಹಾಡಿನಲ್ಲಿ ಹೇಳಲಾಗಿದೆ.       

ತೀರಾ ಮಡಿವಂತಿಕೆಯುಳ್ಳ ಮಹನೀಯರಿಗೆ ಇವು ಅಶ್ಲೀಲ ಸಾಹಿತ್ಯವೆನಿಸಬಹುದು. ಆದರೆ ಹೆಚ್ಚಿನ ಹಾಡುಗಳಲ್ಲಿ ಜನಜೀವನದ ಆಡುಂಬೊಲದ ಹಲವು ಮುಖಗಳೇ ಅಡಗಿರುತ್ತವೆ! ಲವಲವಿಕೆ ತುಂಬಿದ ಸಾಹಿತ್ಯಕ್ಕೊಂದು ಶಕ್ತಿಯಿರುತ್ತದೆ. ಅದು ಮುದುಕರನ್ನೂ ಎತ್ತಿ ಕುಣಿಸುತ್ತದೆ; ಮನದಲ್ಲೇ ಹಳೆಯದನ್ನೆಲ್ಲ ನೆನಪಿಸಿಕೊಳ್ಳುವ ಮುದುಕು ಗಂಡಸರು ತಮ್ಮ ಯೌವ್ವನದಲ್ಲಿ ’ಆಕೆ’ ಪ್ರಥಮವಾಗಿ ನೋಡಿ ನಕ್ಕಿದ್ದನ್ನು ನೆನೆದು ಪುಳಕಗೊಳ್ಳುತ್ತಾರೆ! ಧೈರ್ಯದಿಂದ ’ಆಕೆ’ ಓಣಿಕೇರಿಯ ಹಿತ್ತಲಲ್ಲಿ ಸಿಕ್ಕು ಮಾತನಾಡಿದ ಸಂದರ್ಭವನ್ನು ನೆನೆದು ನಾಚಿ ನೀರಾಗುತ್ತಾರೆ! "ಮದುವೆಯಾಗೋಣವೇ" ಎಂದು ಪ್ರಸ್ತಾಪ ಸಲ್ಲಿಸುವುದರೊಳಗೆ, ಕಾವೇರಿ ದಡದಲ್ಲಿ’ಆಕೆ’ ತನ್ನ ಮದುವೆಯ ಆಮಂತ್ರಣ ಪತ್ರಿಕೆ ಕೊಟ್ಟುಹೋದದ್ದನ್ನು ನೆನೆದು ಕಣ್ಣ ಹನಿ ಉದುರಿಸುತ್ತಾರೆ! ಎಲ್ಲಾ ಗಂಡಸರಿಗೂ ಅಲ್ಲಿ ’ಆಕೆ’ ಸಿಗುತ್ತಾಳೆ; ಅಂಡ್ ಆಫ್ಕೊರ್ಸ್, ವೈಸೆ ವರ್ಸಾ !!  ಅದು ಮಾನವ ಸಹಜ ಭಾವನೆಗಳ ಮಿಡಿತ-ತುಡಿತ. ಜನಪದ ಪದ್ಯಗಳನ್ನು ಎಲ್ಲರೆದುರೂ ಕೇಳದ ’ಮಡಿವಂತ’ ಜನ, ಅಲ್ಲಲ್ಲಿ ಕದ್ದು ಕೇಳಿದವರಿದ್ದಾರೆ!

ಸಿನಿಮಾ, ನಾಟಕ, ಕಥೆ-ಕವನ-ಕಾದಂಬರಿಗಳ ಪಾತ್ರಗಳಲ್ಲಿ ಜನ ತಮ್ಮನ್ನು ಕಲ್ಪಿಸಿಕೊಂಡು ಆನಂದವನ್ನು ಅನುಭವಿಸುತ್ತಾರೆ. ನಿಜ ಜೀವನದಲ್ಲಿ ಸಿಗದ ಯಾವುದೋ ಆನಂದ ಅಂತಹ ರಂಜನೀಯ ದೃಶ್ಯಾವಳಿಗಳ ಮೂಲಕ ಅವರಿಗೆ ದೊರೆಯುತ್ತದೆ; ಅವರನ್ನು ರಂಜಿಸುತ್ತದೆ. ಅದೇ ಕೆಲಸವನ್ನು ಒಂದಷ್ಟು ಜನರಿಗೆ ಜನಪದ ಸಾಹಿತ್ಯದ ಕೆಲವು ಪದ್ಯಗಳೂ ಒದಗಿಸಿಕೊಟ್ಟರೆ ತಪ್ಪಿಲ್ಲ.

ದೇವರು ನಿಮ್ಮೆಲ್ಲರನ್ನೂ ಚೆನ್ನಾಗಿಟ್ಟಿರಲಿ, ಇಷ್ಟು ಹೇಳಿ ನನ್ನ ಇಂದಿನ ಭಾಷಣವನ್ನು ಮುಗಿಸುತ್ತಿದ್ದೇನೆ, ಜೈಹಿಂದ್, ಜೈ ಕರ್ನಾಟಕ