ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Sunday, August 8, 2010

|| ಅಥ ಶ್ರೀ ಹುಳಿ ಮಜ್ಜಿಗೆ ಪುರಾಣಂ ||
|| ಅಥ ಶ್ರೀ ಹುಳಿ ಮಜ್ಜಿಗೆ ಪುರಾಣಂ ||

ಶುಕ್ಲಾಂಬರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ|
ಪ್ರಸನ್ನ ವದನಂ ಧ್ಯಾಯೇತ್ ಸರ್ವ ವಿಘ್ನೋಪ ಶಾಂತಯೇ ||

ಮೂಕಂ ಕರೋತಿ ವಾಚಾಲಂ ಪಂಗುಂ ಲಂಘಯತೇ ಗಿರಿಮ್ |
ಯತ್ಕೃಪಾ ತಮಹಂ ವಂದೇ ಪರಮಾನಂದಮಾಧವಂ ||

ವ್ಯಾಸಂ ವಸಿಷ್ಠನಪ್ತಾರಂ ಶಕ್ತೇಃ ಪೌತ್ರಮಕಲ್ಮಷಮ್ |
ಪರಾಶರಾತ್ಮಜಂ ವಂದೇ ಶುಕತಾತಂ ತಪೋ ನಿಧಿಮ್ ||

ವ್ಯಾಸಾಯ ವಿಷ್ಣುರೂಪಾಯ ವ್ಯಾಸರೂಪಾಯ ವಿಷ್ಣವೇ |
ನಮೋ ವೈ ಬ್ರಹ್ಮನಿಧಯೇ ವಾಸಿಷ್ಠಾಯ ನಮೋ ನಮಃ ||


ಚಾತುರ್ಮಾಸ್ಯ ಕಾಲದಲ್ಲಿ ವ್ಯಾಸಾದಿ ಮಹಾಮುನಿಗಳನ್ನು ಮನಸಾ ವಂದಿಸಿ ಗೌರೀತನಯ ಗಣೇಶನಿಗೆ ಅಡ್ಡಬಿದ್ದು ಸೂತಮಹಾಮುನಿಗಳು ಶೌನಕಾದಿ ಮುನಿಗಳಿಗೆ ಹೇಳಿರದ, ಅಷ್ಟಾದಶ ಪುರಾಣಗಳ ಪೈಕಿ ೨೦ ನೇ ಪುರಾಣವಾದ ’ಹುಳಿಮಜ್ಜಿಗೆ ಪುರಾಣ’ವನ್ನು ತಿಪ್ಪಾ ಭಟ್ಟರು ಸುಬ್ಬಮ್ಮನೇ ಮೊದಲಾದ ಸೇರಿದ ಹೆಂಗಸರು-ಮಕ್ಕಳಿಗೆಲ್ಲ ಹೇಳಿದ್ದನ್ನು ಅಲ್ಲೇ ಪಕ್ಕದಲ್ಲಿ ಗಡದ್ದಾಗಿ ಊಟಹೊಡೆದು ಮಲಗಲು ಜಾಗಸಿಗದೇ ಕುಳಿತೇ ತೂಕಡಿಸುತ್ತಿದ್ದ ನಾನು ಕೇಳಿದ ರೀತ್ಯಾ ಶ್ರುತಪಡಿಸುವಂತವನಾಗುತ್ತೇನೆ!

ಬೇಸಿಗೆ ಕಾಲದಲ್ಲಿ ಮಜ್ಜಿಗೆಯೊಂದು ಸಿಕ್ಕಿದರೆ ಅದು ಮಹಾಪುಣ್ಯವೆಂಬಂತೇ ಅನುಭವಿಸುವವರು ಬಹುತೇಕರಿದ್ದಾರೆ. ಸ್ವಾಭಾವಿಕವಾಗಿ ಸ್ವಲ್ಪ ಸಿಹಿಯುಳ್ಳ ಮಜ್ಜಿಗೆ ಕುಡಿದವರ ದಾಹವನ್ನು ತಣಿಸುತ್ತದೆ ಮಾತ್ರವಲ್ಲ ತುಸು ಒಣಗಿದ ಹೂ ಕುಂಡದ ಗಿಡಕ್ಕೆ ನೀರೆರೆದ ಅರ್ಧಘಂಟೆಯಲ್ಲಿ ಹೇಗೆ ನಳನಳಿಸುತ್ತದೋ ಹಾಗೇ ಜನರ ಸರ್ವನರಗಳೂ ನವಚೈತನ್ಯ ಪಡೆದು ಮನುಷ್ಯ ಕೆಲಸ ಮಾಡಲು ಹೊಸ ಉತ್ಸಾಹ ಪಡೆಯುತ್ತಾನೆ ಎಂಬುದು ನಿಸರ್ಗ ನಿಯಮ. ಆದರೆ ಇದೇ ಮಜ್ಜಿಗೆ ಆಯುರ್ವೇದದಲ್ಲಿ ಹಲವು ಔಷಧಗಳ ಸಂಗಾತಿಯಾಗಿ ಸೇವಿಸಲ್ಪಡುವುದೂ ಉಂಟು. ಮಜ್ಜಿಗೆ ತಕ್ಕಮಟ್ಟಿಗೆ ಹುಳಿ ಇದ್ದರೆ ಅದನ್ನು ಲಿಂಬೂ ಪಾನಕದ ಪರ್ಯಾಯವಾಗಿ ಉಪಯೋಗಿಸುವರು ಸಂಖ್ಯೆಯಲ್ಲಿ ಬಹಳ ಸಿಗುತ್ತಾರೆ. ಆದರೆ ಈಗ ನಾವು ಕೇಳುತ್ತಿರುವ ಹುಳಿ ಮಜ್ಜಿಗೆ ಕಥೆಯೇ ಬೇರೆ!

ಮಹಾಭಾರತ ಯುದ್ಧ ಮುಗಿಯುತ್ತಿರುವ ದಿನಗಳು. ಇನ್ನೇನು ಮುಗಿದೇಹೋಯಿತು ಎನ್ನುವಾಗ ಭೀಷ್ಮಾಚಾರ್ಯರು ಮರಣಿಸಿದ ಮೇಲೆ ಅವರು ದಾಹ ತೀರಿಸಿಕೊಳ್ಳಲು ಅರ್ಜುನ ಬಾಣಹೊಡೆದು ಗಂಗೆಯನ್ನು ಬರಿಸಿ ಆ ಚಿಲುಮೆ ನೇರವಾಗಿ ಅವರ ಬಾಯಿಗೆ ಬೀಳುವಂತೇ ಮಾಡಿದ್ದನಲ್ಲ. ನಾವಾದರೆ ನಮಗೆ ಬಾಟ್ಲಲ್ಲಿ ತುಂಬಿದ ಮಿನರಲ್ ವಾಟರ್ ಕೊಡು-ಈ ಕುರುಕ್ಷೇತ್ರದ ಯುದ್ಧಭೂಮಿಯಲ್ಲಿ ಹಲವರು ತುಳಿದ ಜಾಗದಲ್ಲಿ ಹುಟ್ಟಿದ ಗಲೀಜು ನೀರನ್ನು ನಾವು ಕುಡೆಯೆವು ಅಂದುಬಿಡೆತ್ತಿದ್ದೆವೇನೋ, ಆದರೆ ಅದು ಮಹಾಭಾರತ ಕಾಲವಾದ್ದರಿಂದ ಅಲ್ಲಿ ಹಾಗೆ ಹುಟ್ಟಿದ ನೀರು ಮಿನರಲ್ ಯುಕ್ತ ವಾಟರೇ ಆಗಿತ್ತು! ಇರಲಿ, ನಮ್ಮ ಭೀಷ್ಮಾಚಾರ್ಯರು ಮರಣಿಸಿದ ಬಳಿಕ ಗಂಗೆಗೆ ಇಲ್ಲಿ ತಾನಿದ್ದು ಪ್ರಯೋಜನವಿಲ್ಲ ಎಂದೆನಿಸಿತು. ಅದಕ್ಕಾಗಿ ಯುದ್ಧದಲ್ಲಿ ತನ್ನಿಚ್ಛೆಯಂತೇ ಮೆರೆದ ಶ್ರೀಕೃಷ್ಣ ಪ್ರಸನ್ನವದನನಾಗಿ ಕುಳಿತಿದ್ದ ಹೊತ್ತು ನೋಡಿ ಮನುಷ್ಯರೂಪದಲ್ಲಿ ಆತನನ್ನು ಕಂಡು ತನ್ನಳಲನ್ನು ತೋಡಿಕೊಂಡಳು. ಶಾಪಾನುಗ್ರಹ ಸಮರ್ಥನಾದ ಶ್ರೀಕೃಷ್ಣ ಆ ಗಂಗೆಗೆ ನೀನು ಅಂಶಾಂಶ ರೂಪದಲ್ಲಿ ಭಾರತೀಯ ತಳಿಯ ಹಸುವಿನ ಹಾಲಿನಲ್ಲಿ ಅಡಗಿದ್ದು ಲೋಕದ ಜನರನ್ನೆಲ್ಲಾ ಪೊರೆ, ಆ ಹಾಲು ಪ್ರೆಶ್ ಮಜ್ಜಿಗೆಯಾದಾಗ ಅದು ಕುಡಿಯಲು ಅಮೃತತುಲ್ಯವಾಗಿರಲಿ ತದನಂತರ ಯಾವಾಗ ಆ ಮಜ್ಜಿಗೆ ಅತೀ ಹುಳಿಬರುತ್ತದೋ ಆಗ ನೀನು ಅದರಲ್ಲಿಂದ ಮಾಯವಾಗಿ ಅದು ಕುಡಿಯಲು ಅನುಪಯುಕ್ತವಾಗಿ ಪರಿಣಮಿಸಲಿ ಎಂದು ಹರಸಿದ. ಇನ್ನೇನೂ ದಾರಿಕಾಣದೇ ಗಂಗೆ ತಥಾಸ್ತು ಎಂದುಕೊಂಡು ಹೊರಟುಹೋದಳು.

ಅಲ್ಲಿಂದಾಚೆಗೆ ಹಾಲು ಮಜ್ಜಿಗೆಯ ರುಚಿಯಲ್ಲಿ ಜನ ಬಹಳೇ ಬದಲಾವಣೆ ಕಂಡರು. ಈ ಪದಾರ್ಥಗಳ ಅದ್ಬುತ ರುಚಿಯನ್ನು ಜನ ಹೊಗಳೇ ಹೊಗಳಿದರು. ಅಂದಿನ ಕಾಲಕ್ಕೆ ಲಸ್ಸಿ ಪಸ್ಸಿ ಇವೆಲ್ಲಾ ಗೊತ್ತಿರದಿದ್ದರಿಂದಲೂ ತಂಗಳ ಪೆಟ್ಟಿಗೆ, ಮಿಕ್ಸಿ ಗ್ರೈಂಡರುಗಳನ್ನು ಆ ಅವತಾರ ಕಾಲದಲ್ಲಿ ಶ್ರೀಕೃಷ್ಣ ಹೊರತರದಿದ್ದರಿಂದಲೂ ಮೊಸರನ್ನು ಸುತರಾಂ ಕಡೆಗೋಲಲ್ಲೇ ಕಡೆಯುತ್ತಿದ್ದರು. ಇದಕ್ಕೆ ಇಂದಿಗೂ ಸಾಕ್ಷಿ ಉಡುಪಿಯಲ್ಲಿ ಕಡೆಗೋಲು ಹಿಡಿದು ಕೃಷ್ಣ ನಿಂತಿರುವುದು. ಆಗೆಲ್ಲಾ ಮೊಸರನ್ನು ಬಹಳ ವ್ಯವಸ್ಥಿತವಾಗಿ ’ಸಿಕ್ಕ’ ಎಂಬ ಬಳ್ಳಿಯಿಂದ ಮಾಡಿದ ನೇಯ್ಗೆಯ ತೂಗುದಾರದಲ್ಲಿ ಮಣ್ಣಿನ ಮಡಕೆಗಳಲ್ಲಿ ಮುಚ್ಚಿಡುತ್ತಿದ್ದರು. ಕರೆದ ನೊರೆಹಾಲನ್ನು ಕೆಲಹೊತ್ತು ಹಾಗೇ ಬಿಟ್ಟು, ಸೋಸಿ ನಂತರ ಕಾಯಿಸಿ, ಉಗುರು ಬೆಚ್ಚಗಿನವರೆಗೆ ಅದು ತಣಿದಮೇಲೆ ಅದಕ್ಕೆ ’ನೆರವು’[ಹೆಪ್ಪು]ಹಾಕುತ್ತಿದ್ದರು. ಹಾಗೆ ರಾತ್ರಿ ಹೊತ್ತಲ್ಲಿ ಹೆಪ್ಪಿಗಿಟ್ಟ ಹಾಲು ಮೊಸರಾಗಿ ಬೆಳಗಿನ ಜಾವ ೫ ಗಂಟೆಗೆ ಶೌಚ ಸ್ನಾನಾದಿಗಳನ್ನು ತೀರಿಸಿದ ಹೆಂಗಸರು ಮಡಿಯಲ್ಲಿ ಮೊಸರ ಮಡಿಕೆಗಳನ್ನು[ಗಡಿಗೆಗಳನ್ನು] ಸಿಕ್ಕದಿಂದ ಇಳಿಸಿ, ಅದನ್ನು ಈರಿಕೆಯೆಂಬ ಹುಲ್ಲಿನಿಂದ ಮಾಡಿದ ದೊಡ್ಡ ಉದ್ದಿನವಡೆಯಾಕಾರದ ಆಕೃತಿಯ ಮೇಲೆ ಕೂರಿಸಿ, ಅದಕ್ಕೆ ಸ್ವಲ್ಪ ಶುದ್ಧ ನೀರು [ಗಂಗಾಜಲ!] ಹಾಕಿ ಆಮೇಲೆ ನಿಧಾನಕ್ಕೆ ಕಡೆಗೋಲು ಇಳಿಸಿ, ಕಡೆಗೋಲ ಕಂಬದ ಸಹಾಯದಿಂದ ಮೊಸರನ್ನು ಕಡೆಯುತ್ತಿದ್ದರು. ೧೫-೨೦ ನಿಮಿಷ ಕಡೆದಾಗ ಶುದ್ಧ ಮಜ್ಜಿಗೆಯ ಮೇಲ್ಭಾಗದಲ್ಲಿ ಶುದ್ಧ ಬೆಣ್ಣೆ ತೇಲುತ್ತಿತ್ತು. ಆ ತೇಲುವ ಬೆಣ್ಣೆಯ ತುಂಡುಗಳನ್ನೆಲ್ಲ ಎತ್ತಿ ತೆಗೆದು ಬೇರೆ ಪಾತ್ರೆಗೆ ಹಾಕಿ ಮಜ್ಜಿಗೆಯನ್ನು ಬೇರೆ ಪಾತ್ರೆ ಒಂದಷ್ಟು ಬಗ್ಗಿಸುತ್ತಿದ್ದರು. ಹಾಗೆ ಬಗ್ಗಿಸಿದ ಮಜ್ಜಿಗೆ ಬಹಳಕೆಲಸಗಳಿಗೆ ಉಪಯೋಗಿಸಲ್ಪಡುತ್ತಿತ್ತು.ಹೀಗೆ ತಗೆದ ಮಜ್ಜಿಗೆ ಬೇಸಿಗೆಯಲ್ಲಿ ಮನೆಗೆ ಬಂದ ಬಹಳ ಅತಿಥಿಗಳಿಗೆ,ಅಭ್ಯಾಗತರಿಗೆ ಬಾಯಾರಿಕೆಗೆ ಕೊಡಲ್ಪಡುತ್ತಿತ್ತು. ಯಾವುದೇ ಅಡ್ಡ,ಕೆಟ್ಟ ವಾಸನೆಯಿರದ ಮಜ್ಜಿಗೆ ಕುಡಿಯಲು ಉತ್ಕೃಷ್ಟ ಪಾನೀಯವೆಂಬುದು ಈಗಲೂ ಎಲ್ಲರಿಗೂ ಗೊತ್ತು.

ಮಜ್ಜಿಗೆ ಬಗ್ಗೆ ಹೇಳುವಾಗ ಬೆಣ್ಣೆ-ತುಪ್ಪದ ಬಗ್ಗೆ ಹೇಳದಿದ್ದರೆ ಅದು ಅಪೂರ್ಣ ಪುರಾಣ! ಪುರಾಣಾಂತರ್ಗತ ಶ್ರೀ ಬೆಣ್ಣೆ-ತುಪ್ಪ ದೇವತಾಭ್ಯೋ ನಮಃ || ಆವಾಹಯಿಷ್ಯೇ ! ಬೆಣ್ಣೆ-ತುಪ್ಪಗಳು ಮಜ್ಜಿಗೆಯ ಮರಿಗಳು. ಒಮ್ಮೆ ಹೀಗಾಯಿತು ಒಂದು ಮದುವೆಯ ಆಮಂತ್ರಣ ಕೊಡಲು ಪಕ್ಕದ ಹಳ್ಳಿಗೆ ನಾನು ಹೋಗಿದ್ದೆ. ನಮ್ಮಲ್ಲಿ ಮದುವೆ-ಮುಂಜಿಗಳಿಗೆ ಕರೆಯಲು ಬಂದವರಿಗೆ ಕೊನೇಪಕ್ಷ ಸಕ್ಕರೆ-ತುಪ್ಪ ಕೊಡುವುದು ವಾಡಿಕೆ. ಅಂದು ನನಗೂ ಬಿಡದೇ ಹಠಮಾಡಿ ಆ ಮನೆಯ ಯಜಮಾನ ಸಕ್ಕರೆ-ತುಪ್ಪ ಮನೆಯೊಡತಿಗೆ ಹೇಳಿ ತರಿಸಿ ಕೊಟ್ಟ. ಬಾಯಲ್ಲಿ ಹಾಕುತ್ತಿರುವಂತೇ ನನಗೆ ಉಸಿರು ತೆಗೆದು ಕೊಳ್ಳುವುದಿರಲಿ, ಉಮ್ಮಳಿಸಿ ವಾಂತಿ ಬರುವಂತಾಯಿತು, ನುಂಗಿದರೆ ವಾಂತಿ ಗ್ಯಾರಂಟಿ-ಉಗುಳಿದರೆ ಯಜಮಾನರಿಗೆ ಬೇಜಾರು, ಅಪ್ಪಾ ನನ್ನ ಅವಸ್ಥೆ ದೇವರಿಗಷ್ಟೇ ಗೊತ್ತು. ಗಾದೆಗೆ ’ಬಿಸಿ ತುಪ್ಪ’ ಅಂತಾರೆ, ಆದರೆ ವಾಸ್ತವದಲ್ಲಿ ವಾಸನೆಯ ತುಪ್ಪವೂ ಹಾಗೇನೆ. ಕೆಲವರಿಗೆ ಬೆಣ್ಣೆ-ತುಪ್ಪವನ್ನು ಹೇಗಿಡಬೇಕು, ಯಾವಾಗ ಬಳಸಬೇಕು ಎಂಬುದು ತಿಳಿದಿರುವುದಿಲ್ಲ. ಬೆಣ್ಣೆಯನ್ನು ದಿನದಿನವೂ ಕರಗಿಸಿ ತುಪ್ಪಮಾಡುವ ವಹಿವಾಟು ತುಂಬಾ ಕಮ್ಮಿ. ಎತ್ತಿಟ್ಟ ಬೆಣ್ಣೆಯನ್ನು ನೀರಿನಲ್ಲಿಟ್ಟುಕೊಳ್ಳುವುದು ಅಭ್ಯಾಸ. ಆ ನೀರನ್ನು ದಿನವೂ ಬದಲಾಯಿಸುತ್ತ ೪-೫ ದಿನಗಳಿಗೊಮ್ಮೆ ಬೆಣ್ಣೆ ಶೇಖರಣೆ ಜಾಸ್ತಿಯಾದಾಗ ತುಪ್ಪ ಮಾಡುವುದು ಆಚರಣೆ. ತುಪ್ಪ ಕಾಯಿಸುವದಕ್ಕೂ ಒಂದು ಹದವಿದೆ. ಬೆಣ್ಣೆ ಕರಗಿ ಕಾದು ಒಂದು ಹಂತಕ್ಕೆ ಬರುವವರೆಗೆ ಕಾಯಿಸುತ್ತಲೇ ಇರಬೇಕು, ಕಾಯಿಸಿದ್ದು ಜಾಸ್ತಿ-ಕಮ್ಮಿ ಹೇಗೇ ಆದರೂ ತುಪ್ಪ ಕೆಡುವುದು ಶತಸ್ಸಿದ್ಧ! ಕೆಲವೊಮ್ಮೆ ಚೆನ್ನಾಗಿರುವ ತುಪ್ಪವನ್ನೂ ಚಮಚ ಹಾಕಿ ಬಳಸುತ್ತ ಬಹಳದಿನವಿಟ್ಟರೆ ಅಥವಾ ಬಳಸದೇ ತಿಂಗಳುಗಳ ಕಾಲವಿಟ್ಟರೆ ತುಪ್ಪ ’ಜಡ್ಡು’ ಹಿಡಿದ ತುಪ್ಪ ಅಥವಾ ಜಡ್ಡು ಎನ್ದಿಕೊಳ್ಳುತ್ತದೆ. [ಜಿಡ್ಡು ಬೇರೆ ಜಡ್ಡುಬೇರೆ, ಜಿಡ್ಡು ಎಂದರೆ ನಯದ ಪಸೆ, ಜಡ್ಡು ಎಂದರೆ ವಾಸನೆ ಎಂದರ್ಥ] ಹೀಗೇ ಕೆಲವು ಮನೆಗಳಲ್ಲಿ ಅವರ ಮೂಗುಗಳು ನಮ್ಮ ಮೂಗುಗಳ ಥರ ತೆರೆದುಕೊಳ್ಳುವುದೇ ಇಲ್ಲ. ಅವುಗಳಿಗೆ ಜಡ್ಡು ಹಾಗೂ ಹೊಸದು ಎಲ್ಲಾ ಒಂದೇ! ಅಂತಹ ಮನೆಗಳಲ್ಲಿ ಸತ್ಯನಾರಾಯಣ ಪೂಜೆ ಮಾಡಿದಾಗ ದೇವರಿಗೆ ಸಪಾದಭಕ್ಷ್ಯ ಮಾಡುವಾಗ ಜಡ್ಡುತುಪ್ಪವನ್ನೇ ಬಳಸುವುದರಿಂದ ಬಂದವರು ಪ್ರಸಾದವಾಗಿ ಪಡೆಯುವ ಸಪಾದವನ್ನು ತಿನ್ನಲು ಹೇಸಿಕೊಳ್ಳುತ್ತಾರೆ. ತಿನ್ನುವ ಹಾಗಿಲ್ಲ-ತಿನ್ನದೇ ಇರುವ ಹಾಗೂ ಇಲ್ಲ[ದೇವರು ಕೋಪಿಸಿಕೊಂಡರೆ!]

ಕೆಲವು ಮನೆಯಲ್ಲಿ ಬೆಣ್ಣೆ ದೋಸೆ ಕೊಡುತ್ತೇವೆಂದು ಹೇಳಿ ತಂದುಬಿಡುತ್ತಾರೆ. ಅಲ್ಲೂ ಅದೇ ಗತಿ. ದಿನವೂ ಅದೇ ಹಳೇ ನೀರಿನಲ್ಲಿ ಕುಳಿತಿರುವ ಬೆಣ್ಣೆ ವಾಸನೆಗಟ್ಟಿರುತ್ತದೆ. ಅಂತಹ ಬೆಣ್ಣೆ ತಟ್ಟೆಗೆ ಬಂದಾಗ ಭುಗ್ಗನೆ ಪೆಟ್ರೋಲ್ಗೆ ಬೆಂಕಿ ತಗುಲಿದ ಹಾಗೇ ನಮ್ಮ ಮೂಗಿಗೆ ವಾಸನೆ ಹತ್ತಿಕೊಂಡುಬಿಡುತ್ತದೆ! ಗಂಟೆಗಟ್ಟಲೆ ಈ ವಾಸನೆ ಯಾವ ವಾಸು ಬತ್ತಿ ಹಚ್ಚಿದರೂ ಓಡಿಹೋಗುವಂತಹುದಲ್ಲ. ಎದುರಿಗೇ ಕುಳಿತುಕೊಳ್ಳುವ ಯಜಮಾನರು

" ಸಂಕೋಚ ಮಾಡ್ಕೋಬಾರ್ದು, ಇನ್ನೊಂದು ಹಾಕ್ಸೊಳ್ಳಿ " ಅಂದುಬಿಟ್ಟರೆ ನಾವು ಸತ್ತಂತೆ ! ನಮ್ಮ ಫಜೀತಿ ಹೇಗಿರಬಹುದು!

ಕೆಲವು ಮನೆಗಳಲ್ಲಿ ಈ ನಾಥವೇ ಜಾಸ್ತಿ ಇರುವುದರಿಂದ ಮನೆಕಾಯುವುದಕ್ಕೆ ನಾಯಿಯ ಅವಶ್ಯಕತೆಯೇ ಇರುವುದಿಲ್ಲ. ವೆರಿ ಸಿಂಪಲ್ ಸಾಲ್ಯುಶನ್- ಬೆಣ್ಣೆ ಅಥವಾ ತುಪ್ಪದ ಪಾತ್ರೆ ತಂದು ಮುಚ್ಚಳ ತೆಗೆದಿಟ್ಟುಬಿಟ್ಟರೆ ಅವರ ಮನೆಕಡೆ ದರೋಡೆಕೋರರೂ ಬರುವುದೇ ಇಲ್ಲ!

’ಮಳ್ಳಾದರೂ ತಾಯಿ ನೀರಾದರೂ ಮಜ್ಜಿಗೆ’ ಎಂಬುದು ನಮ್ಮಲ್ಲಿನ ಗಾದೆ. ಈ ಗಾದೆ ಯಾವಾತ ಮಾಡಿದ್ದೋ ಗೊತ್ತಿಲ್ಲ! ತಾಯಿ ಮಳ್ಳಾದರೂ ಕೆಲವರು ಸಹಿಸಿಯಾರು, ಮಜ್ಜಿಗೆ ನೀರಾದರೂ ಪರವಾಗಿಲ್ಲ ಆದರೆ ಮಜ್ಜಿಗೆ ಹೆಂಡದ ವಾಸನೆಗೆ ತಿರುಗಿದರೆ ಅದು ಮದಿರಾರಸ ಪ್ರಿಯರಿಗೆ ಮಾತ್ರ ಇಷ್ಟವಾಗುತ್ತದೆಯೇ ಹೊರತು ಎಲ್ಲರೂ ಅದನ್ನು ಕುಡಿಯಲಾರರು.

ಒಮ್ಮೆ ಹೀಗೇ ಅದೂ ಇದೂ ಕೆಲಸಮಾಡುತ್ತಿದ್ದ ಮಂಜುವಿಗೆ ಸೀತಾರಾಮ್ ಹೆಗ್ಡೇರು
" ಏ ಮಂಜು ಉರಿ ಬಿಸ್ಲಲಾ , ಸ್ವಲ್ಪ ಮಜ್ಜಿಗೆ ಕುಡ್ಯನ ಬಾರಾ " ಅಂದರಂತೆ. ಮಂಜು ಬಂದಿದ್ದಾನೆ. ಮಜ್ಜಿಗೆಯೂ ಬಂದಿದೆ. ಮಜ್ಜಿಗೆಯ ಲೋಟವನ್ನು ಬಾಯಿಗಿಟ್ಟನೋ ಇಲ್ಲವೋ " ಊವೇ ......ಊವೇ" ಎಂತ ವಾಂತಿ ಮಾಡಿ ಎಚ್ಚರತಪ್ಪಿಬಿದ್ದಿದ್ದಾನೆ. ಆತನನ್ನು ಹೆಗ್ಡೇರು ಹತ್ತಿರದ ಆಸ್ಪತ್ರೆಗೆ ಸೇರಿಸಿದ್ದಾರೆ. ಎಚ್ಚರವಾದಾತನಿಗೆ ಹೆಗ್ಡೇರ ಮುಖನೋಡಿದ ತಕ್ಷಣ ವಾಂತಿ! ನೀರೂ ಬೇಡ ಏನೂ ಬೇಡ ಬದುಕಿ ಉಳಿದರೆ ಸಾಕು ಎನ್ನುವ ಸ್ಥಿತಿ.

ಆತ ಹುಷಾರಾಗಿ ಮನೆಗೆ ಬಂದ ವಾರದಮೇಲೆ ಬೇಟಿಯಾದಾಗ ಏನಾಯಿತು ಎಂದು ಕೇಳಿದರೆ " ಹೆಗ್ಡೇರ್ ಮನೆಲಿ ಮಜ್ಜಿಗೆ ಕೊಟ್ಟೀರು ಮಾರಾರ್ಯೆ, ಅದ್ಯೆಂತಾ ವಾಸನೆ ಅದು, ಹುಟ್ದಾಗಿಂದ ಇನ್ನೂವರೆಗೆ ಎಲ್ಲೆಲ್ಲೂ ನೋಡ್ಲಿಲ್ಲಾಗಿತ್ತು ನಾನು, ಬ್ಯಾಡ್ರೋ ಬ್ಯಾಡ, ಇನ್ನು ಮಜ್ಜಿಗೆ ಸಹವಾಸವೇ ಬ್ಯಾಡ " --ಮಂಜು ಉವಾಚ !

ತೀರಾ ಹುಳಿಬಂದ ಮಜ್ಜಿಗೆಯ ಪರಿಯೇ ಇದು. ಹಳ್ಳಿಯಲ್ಲೇ ಹಾಗೆ ಇನ್ನು ಶಹರ-ಪಟ್ಟಣಗಳಲ್ಲಿ ಪ್ಯಾಕೆಟ್ ಹಾಲಿನಿಂದ ಮಾಡಿದ ಮೊಸರು, ಮಜ್ಜಿಗೆ ಎಲ್ಲ ೨ ದಿನಗಳ ನಂತರ ಉಪಯೋಗಕ್ಕೆ ಯೋಗ್ಯವಲ್ಲ. ಒಂದೊಮ್ಮೆ ಉಪಯೋಗಿಸಿದರೆ ಮತ್ತೆ ನಿಮ್ಮ ಮೊಸರು-ಮಜ್ಜಿಗೆಯನ್ನು ಬಳಸುವ ಅಭಿರುಚಿಯೇ ಬದಲಾಗಿ ತೆನ್ನಾಲಿ ರಾಮಕೃಷ್ಣನ ಬೆಕ್ಕಿನ ಕಥೆಯಂತಾಗುತ್ತದೆ ಹುಷಾರು!

ಇತ್ತೀಚೆಗೆ ಈ ಮೇಲಿನ ಎಲ್ಲಾ ನಂಬಲರ್ಹ ಮೂಲಗಳಿಂದ ಬಂದ ವರದಿಯನ್ನು ಆಧರಿಸಿ ನಾನು ಎಲ್ಲೇ ಹೋದರೂ ಈಗ ಬೆಣ್ಣೆ-ತುಪ್ಪ ಬಡಿಸುತ್ತೇವೆ ಎಂದರೆ ನನಗೆ ವೈದ್ಯರು ಬಳಸಬೇಡ-ಅಲರ್ಜಿ ಇದೆ ಎಂದಿದ್ದಾರೆ ಎನ್ನುತ್ತೇನೆ ಮತ್ತು ಮಜ್ಜಿಗೆ ತಂದರೆ ಮಜ್ಜಿಗೆ ಅಂದರೆ ನನಗೆ ಅಷ್ಟಕ್ಕಷ್ಟೇ ಎಂದು ತಪ್ಪಿಸಿಕೊಳ್ಳುತ್ತೇನೆ. ನಿಮಗೂ ಈ ಅನುಭವಗಳು ಬಂದಿರಬಹುದು, ಬರಲೂಬಹುದು ಎಂಬ ಕಾರಣದಿಂದ ಸೂತರು ಶೌನಕಾದಿ ಮುನಿಗಳಿಗೆ ಹೇಳಿರದಿದ್ದ ವಿಷಯವನ್ನು ತಿಪ್ಪಾಭಟ್ಟರು ಸುಬ್ಬಮ್ಮ ಮತ್ತನೇಕ ಹೆಂಗಸರು-ಮಕ್ಕಳಿಗೆಲ್ಲ ಹೇಳಿರುವುದನ್ನ ನಿಮಗೆ ಇಂದಿಲ್ಲಿ ತಿಳಿಸಿಕೊಟ್ಟಿದ್ದೇನೆ.

|| ಇತಿ ಶ್ರೀ ಹುಳಿಮಜ್ಜಿಗೆ ಪುರಾಣಂ ಸಂಪೂರ್ಣಂ ||


ಫಲಶ್ರುತಿ

ಭಕ್ತಿಯಿಂದ ಈ ಪುರಾಣವನ್ನು ಓದುವವರಿಗೆ, ಪುಟಗಟ್ಟಿದ ರೂಪದಲ್ಲಿ ಪ್ರಿಂಟು ತೆಗೆದು-ಮನೆಯ ಕಪಾಟಿನಲ್ಲಿ ಎತ್ತಿಟ್ಟು ಆಗಾಗ ಪೂಜಿಸುವವರಿಗೆ, ಫ್ರೆಂಡ್ಸುಗಳಿಗೆ ತೋರಿಸಿ ನಕ್ಕು ನಕ್ಕು ಸುಸ್ತಾದವರಿಗೆ, ಗೂಗಲ್ ಬಜ್ಜಿನಲ್ಲಿ ಕೂತು ಬಿಸಿಬಿಸಿ ಬಜ್ಜಿ ಕಾಯಿಸಿಕೊಳ್ಳುವವರಿಗೆ, ಕಾಯಾ-ವಾಚಾ-ಮನಸಾ ಅನುಭವಿಸಿ ಇದನ್ನ ಈ ಮೆಲ್ ಮಾಡುವವರಿಗೆ, ಶಹರದಲ್ಲಿದ್ದು ಮಜ್ಜಿಗೆ-ಬೆಣ್ಣೆ-ತುಪ್ಪ ಮಾಡಿ ಗೊತ್ತಿಲ್ಲದ ಇತ್ತೀಚಿನ ಹುಡುಗಿಯರಿಗೆ ಈ ಎಲ್ಲರಿಗೂ ದೇವರು ಒಳ್ಳೆಯ, ದುರ್ವಾಸನಾರಹಿತ ಬೆಣ್ಣೆ-ತುಪ್ಪ-ಮಜ್ಜಿಗೆ ಇತ್ತು ಸಲಹುತ್ತಾನೆ.

ಸತ್ಯಾಸ್ಸಂತು ಭಕ್ತಸ್ಯ ಕಾಮಾಃ ||