ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Thursday, April 21, 2011

ಓದು ಒಕ್ಕಾಲು ಬುದ್ಧಿ ಮುಕ್ಕಾಲು


ಓದು ಒಕ್ಕಾಲು ಬುದ್ಧಿ ಮುಕ್ಕಾಲು

ಚಿಕ್ಕವರಿರುವಾಗ ನಮಗೆ ಈ ನಾಣ್ನುಡಿ ಮಗ್ಗಿ ಪುಸ್ತಕದ ಪುಟವೊಂದರ ಕೆಳಭಾಗದಲ್ಲಿ ಓದಸಿಗುತ್ತಿತ್ತು. ಅದರ ಅರ್ಥಮಾತ್ರ ಖಂಡಿತಾ ಆಗಿರಲಿಲ್ಲ. ’ ಓದು ಒಕ್ಕಾಲು’ ಎಂದರೆ ಓದುವುದನ್ನು ಒಂದೇ ಕಾಲಿನಲ್ಲಿ ನಿಂತು ಮಾಡಬೇಕೇನೋ ಆಗ ’ಬುದ್ಧಿ ಮುಕ್ಕಾಲು’ ಎಂದರೆ ಬುದ್ಧಿ ಪೂರ್ತಿ ಇಲ್ಲ, ಒಟ್ಟಾರೆ ನಮಗರ್ಥವಾಗಿದ್ದು ಒಂದೇ ಕಾಲಲ್ಲಿ ನಿಂತು ಓದಿದರೆ ಬುದ್ಧಿ ಹನ್ನೆರಡಾಣೆ [ಈಗ ಆಧುನಿಕ ಕಂಗ್ಲೀಷ್‍ನಲ್ಲಿ ’ಲೂಸು’ ಅಂತೇವಲ್ಲ] ಆಗುತ್ತದೆ. ಆದರೆ ತಡವಾಗಿ ಅದಕ್ಕಿರುವ ಅರ್ಥ ಮತ್ತದರ ಮೌಲ್ಯ ಎರಡೂ ಅರ್ಥವಾಗಿ ಈಗ ನೆನೆದರೆ ನಗು ಬರುತ್ತದೆ.

ಮನುಷ್ಯ ಬೆಳೆಯಲು ಕೇವಲ ಉನ್ನತ ವ್ಯಾಸಂಗವಷ್ಟೇ ಕಾರಣವಲ್ಲ. ಓದು ಕೇವಲ ನಮ್ಮ ತಿಳುವಳಿಕೆಗೆ ಮಾತ್ರ. ಹಾಗಾದರೆ ಶಿಲಾಯುಗದ ಮಾನವನಿಂದ ಇಲ್ಲಿಯವರೆಗೆ ನಡೆದು ಬಂದ ನಮ್ಮ ಸಹಸ್ರಮಾನದ ದಿನಗಳಲ್ಲಿ ಈಗಿರುವ ವಿಶ್ವವಿದ್ಯಾಲಯಗಳು ಮತ್ತು ವಿವಿಧ ವೃತ್ತಿಪರ ವ್ಯಾಸಂಗಗಳು ಇದ್ದವೇ ಎಂಬ ಪ್ರಶ್ನೆಯನ್ನು ನಮಗೆ ನಾವೇ ಹಾಕಿಕೊಂಡರೆ ಆಗ ಸಿಗುವುದು ಸಮರ್ಪಕ ಉತ್ತರ. ಮಾನವ ದಿನಗಳೆದಂತೇ ಹಲವು ವಿದ್ಯೆಗಳನ್ನು ಕಲಿಯುತ್ತ ಬಂದ. ಆರಂಭಿಕ ದಿನಗಳಲ್ಲಿ ಕೇವಲ ಬಾಯಿಂದ ಬಾಯಿಗೆ ವರ್ಗಾವಣೆಯಾಗಬೇಕಾಗಿದ್ದ ಮಾಹಿತಿಗಳು ಎಲ್ಲರಿಗೂ ತಲುಪಲು ಕಷ್ಟವಾಗುತ್ತಿತ್ತು. ಸಂಪರ್ಕ ಕ್ರಾಂತಿ ವಿಸ್ತಾರವಾಗುತ್ತಾ ಬಂದಾಗ ತಾಡವೋಲೆಗಳಲ್ಲಿ ಬರೆಯಲು ಕಲಿತ. ನಂತರ ಕಾಗದಗಳು ಹುಟ್ಟಿಕೊಂಡವು. ಕಲಿತದ್ದನ್ನು ಹಲವರು ಬರಹರೂಪಕ್ಕಿಳಿಸಲು ಪ್ರಯತ್ನಿಸಿದರು. ವಿಶ್ವದಲ್ಲಿ ಹಲವು ಜನರಿಗೆ ಅನುಕೂಲವಾಗುವುದನ್ನು ಒತ್ತಟ್ಟಿಗೆ ಸೇರಿಸುವ ಕಲೆ ಪ್ರಚುರಗೊಂಡಿತು. ಮೂಲಭೂತ ವ್ಯಾಸಂಗಕ್ಕಾಗಿ ಪ್ರಾಥಮಿಕ, ಮಾಧ್ಯಮಿಕ ಕಲಿಕೆ ಆರಂಭವಾಯಿತು. ಸಮಾನಮನಸ್ಕ ಪ್ರಬುದ್ಧರನೇಕರು ಸೇರಿ ಹಲವು ವಿಷಯಗಳನ್ನು ಕ್ರೋಢೀಕರಿಸಿ ಅವುಗಳನ್ನು ಅಭ್ಯಸಿಸುವ ಕ್ರಮವನ್ನೂ ಮತ್ತು ಅವುಗಳ ಉಸ್ತುವಾರಿಯನ್ನು ನೋಡಿಕೊಳ್ಳುವ ಸಂಸ್ಥೆಗಳನ್ನೂ ಸ್ಥಾಪಿಸಿದರು. ಅವೇ ಇಂದಿನ ವಿಶ್ವವಿದ್ಯಾನಿಲಯಗಳಾಗಿವೆ. ಅಂದರೆ ಹಲವರ ಅನುಭವಗಳೇ ಹೊತ್ತಗೆಯ ರೂಪದಲ್ಲಿ ಬರೆಯಲ್ಪಟ್ಟು ವಿಷಯಗಳಾಗಿ ಸೇರ್ಪಡೆಗೊಂಡು, ಸಂಬಂಧಿತ ಕೆಲವು ವಿಷಯಗಳನ್ನು ಅಭ್ಯಾಸ ಮಾಡುವುದಕ್ಕೆ ’ಪದವಿ’ ಎಂದು ಕರೆದರು. ಪದವಿಯನ್ನು ಮುಗಿಸಿ ಇನ್ನೂ ಆಳವಾಗಿ ಅಧ್ಯಯನ ಮಾಡುವವರನ್ನು ’ಸ್ನಾತಕೋತ್ತರ ಪದವಿ’ಗಳಿಂದ ಗುರುತಿಸಲಾಯಿತು. ಇದು ಓದಿನ ಬೆಳವಣಿಗೆ.

ಮಾನವನಲ್ಲಿ ಸಹಜವಾಗಿ ಹಲವು ಚಟುವಟಿಕೆಗಳು ಇರುತ್ತವೆ. ಕಾಡಿನಲ್ಲಿದ್ದ ಮಾನವ ನಾಡನ್ನು ಕಟ್ಟಿದ್ದನ್ನು ನೋಡಿದರೆ ಆಶ್ಚರ್ಯವಾಗುತ್ತದೆ. ಅದೇ ನಾಡು ಜಾಸ್ತಿಯಾಗಿ ಕಾಡು ಕಮ್ಮಿಯಾಗುತ್ತಿರುವುದಕ್ಕೆ ಮರುಕವೂ ಆಗುತ್ತದೆ! ನಾವು ಉಪಯೋಗಿಸುವ ಪ್ರತಿಯೊಂದು ವಸ್ತುವಿನ ಹಿಂದೆ ನುರಿತ ಮಾನವನ ಸತತ ಅಭ್ಯಾಸದ ಮಾರ್ಗವಾದ ವಿಜ್ಞಾನದ ಕೊಡುಗೆ ಇದೆ. ವಸ್ತುವಿನ ಬಗೆಗೆ ಜ್ಞಾನವನ್ನು ಗಳಿಸುವುದೇ ವಿಜ್ಞಾನ ಅಲ್ಲವೇ? ಉದಾಹರಣೆಗೆ ಈಗ ನಾನು ಬರೆಯುತ್ತಿರುವ ಲೆಕ್ಕಣಿಕೆ[ಪೆನ್ನು]-ಒಂದು ಪೆನ್ನು ತಯಾರಾಗುವಾಗ ಅದರ ಒಳಗಿನ ಬರೆಯುವ ಮಸಿ[ಇಂಕು] ಅದರ ತಾಳಿಕೆ, ಬಾಳಿಕೆ ಮತ್ತು ಹರಿಯುವಿಕೆ, ಅದನ್ನು ಶೇಖರಿಸುವ ಕೊಳವೆ. ಕೊಳವೆಯ ತುದಿಯಲ್ಲಿ ಬರೆಯುವಂತಹ ಸಲಕರಣೆ.[ನಿಬ್ಬು ಅಥವಾ ಬಾಲ್ ಪಾಯಿಂಟು] ಕೊಳವೆಯ ಹೊರಕವಚ ಮತ್ತು ಅದಕ್ಕೆ ಮೇಲೆ ಮುಚ್ಚಳ. ಮುಚ್ಚಳಕ್ಕೊಂದು ಕ್ಲಿಪ್ ಮಾದರಿಯ ಜೋಡಣೆ-ಈ ಎಲ್ಲವುಗಳಿಗೂ ಒಂದು ಸ್ಪಷ್ಟ ಆಕಾರ ಅಳತೆ--ಇವೆಲ್ಲಾ ನಮ್ಮ ವಿಜ್ಞಾನದ ಪರಿಮಾಣಗಳಿಂದ ಗೊತ್ತಾಗಿದ್ದಲ್ಲವೇ?

ಹೀಗೇ ಲೆಕ್ಕಮಾಡುವುದಕ್ಕೆ ಗಣಿತ, ಆಯ ಅಳತೆಗಳಿಗೆ ವಿಜ್ಞಾನ, ಸಾರ್ವಜನಿಕ ಸಹಜೀವನ ಕಲಿಯಲು ಸೋಶಿಯಲ್ ಸೈನ್ಸ್---ಹೀಗೆಲ್ಲಾ ಬೇರೆ ಬೇರೆ ವಿಷಯಗಳು ಪ್ರಸ್ತುತಗೊಂಡವು. ಬುದ್ಧಿ ವಿಕಸನಗೊಂಡಂತೆ ವಿಜ್ಞಾನದ ಇನ್ನೊಂದು ಮುಖ ತಂತ್ರಜ್ಞಾನ ಬೆಳೆಯಿತು. ಬದುಕಿಗಾಗಿ ಮೊಟ್ಟ ಮೊದಲು ಆರಂಭಗೊಂಡ ಮೂರು ಶಾಖೆಗಳು ಸಿವಿಲ್. ಇಲೆಕ್ರಿಕಲ್ ಮತ್ತು ಮೆಕಾನಿಕಲ್. ಕಾಲ ಸಂದಂತೆ ಮತ್ತೆ ಆವಿಷ್ಕಾರಗಳಾಗಿ ಇಲೆಕ್ಟ್ರಿಕಲ್ ನಲ್ಲಿ ಮತ್ತೆ ಭಾಗಗಳಾದವು-- ವಿದ್ಯುನ್ಮಾನ ಶಾಖೆಯ ಜನನವಾಯಿತು. ನಂತರ ಗಣಕಯಂತ್ರ ಸಂಶೋಧನೆಯಾಗಿ ಆ ಮೂಲಕ ಇನ್ನೂ ಹಲವು ಶಾಖೆಗಳು ಉದ್ಭವಿಸಲು ಗಣಕಯಂತ್ರವೇ ಕಾರಣವಾಯಿತು!ವಿಜ್ಞಾನದ ಇನ್ನೊಂದು ಮುಖವಾದ ಜೀವವಿಜ್ಞಾನದಲ್ಲಿ ರೋಗನಿವಾರಣೆ ಮತ್ತು ಚಿಕಿತ್ಸೆಗಳ ಕುರಿತಾಗಿ ಮೆಡಿಕಲ್ ಸೈನ್ಸ್ ಜನನವಾಯಿತು. ಅದು ಮುಂದೆ ಮತ್ತೆ ಆವಿಷ್ಕಾರಗೊಂಡು ಅದರಲ್ಲೇ ಹಲವು ವಿಭಾಗಗಳು ಹುಟ್ಟಿಕೊಂಡವು. ಹಿಂದಿನ ಭಾರತದಲ್ಲೂ ರಾಜರ ಕಾಲದಲ್ಲಿ ನಳಂದಾ ತಕ್ಷಶಿಲೆ ಮೊದಲಾದ ಹಲವೆಡೆಗಳಲ್ಲಿ ವಿಶ್ವವಿದ್ಯಾಲಯಗಳಿದ್ದವು ಎಂಬುದು ನಮಗೆ ಸಮಾಜವಿಜ್ಞಾನದಿಂದ-ಇತಿಹಾಸದಿಂದ ತಿಳಿದುಬಂದ ವಿಷಯ.

ಕಲಿಯುವ ವಿದ್ಯಾರ್ಥಿಗೆ ಯಾವುದನ್ನು ಆಯ್ದುಕೊಳ್ಳಲಿ ಎಂಬಷ್ಟು ರಂಗಗಳು/ವಿಷಯಗಳು ಈಗ ಲಭ್ಯವಾಗುತ್ತಿವೆ. ಆದರೆ ಕಲಿಯುವವರು ಮಾತ್ರ ಕೇವಲ ಪದವಿ/ಸ್ನಾತಕೋತ್ತರ ಪದವಿಯ ಗಳಿಕೆಗಾಗಿ ಮಾತ್ರ ಕಲಿಯುವ ಮನಸ್ಸಿನವರಾಗಿ ಆ ಯಾ ವಿಷಯಗಳಲ್ಲಿರುವ ಹುರುಳನ್ನು ಮನದಟ್ಟುಮಾಡಿಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ. ಯಾರೋ ಕಲಿಯುತ್ತಾರೆ ಅಂತ ತಾನೂ ಅದನ್ನೇ ಕಲಿಯುವ ಅಥವಾ ಕೇವಲ ಹಣಗಳಿಕೆಯ ದುರಾಸೆಯಿಂದ ಕೇವಲ ಮೆಡಿಕಲ್ ಮತ್ತು ಇಂಜಿನಿಯರಿಂಗ್ ಎರಡನ್ನೇ ಆಯ್ದುಕೊಳ್ಳುವ ಮಟ್ಟಿಗೆ ನಮ್ಮ ಜನ ತಯಾರಾದರು!-ಇದೂ ಒಂದು ವಿಕಸನವೇ ಸರಿ! ಆದರೆ ವಿಪರ್ಯಾಸ ಎನಿಸಿಕೊಳ್ಳುವ ವಿಕಸನ. ಹಿಂದೆ ಕೇವಲ ಹಣದ ಘಮಲಿನಲ್ಲಿ-ಅಮಲಿನಲ್ಲಿ ಯಾವುದನ್ನೂ ಮಾಡುತ್ತಿರಲಿಲ್ಲ; ಈಗ ಹಣವಿದ್ದವರು ಮತ್ತು ಹಣಗಳಿಕೆಯೇ ಮುಖ್ಯವಾಗುಳ್ಳವರು ಈ ಎರಡೇ ಕ್ಷೇತ್ರಗಳನ್ನು ಆಯ್ದುಕೊಳ್ಳುತ್ತಿದ್ದಾರೆ. ಯಾರನ್ನಾದರೂ ಕೇಳಿದರೆ " ನಮ್ಮಗ ಈ ಸರ್ತಿ ಪಿ.ಯೂ ಮುಗೀತು....ಮೆಡಿಕಲ್ ಓದಿಸ್ಬುಟ್ರೆ ಜೀವನ ಸೆಟ್ಲು " ಇಂಥದ್ದೇ ಮಾತು. ನನಗೆ ಗೊತ್ತಿರುವ ಒಬ್ಬ ಆಸಾಮಿಯ ಮಗ ಹತ್ತನೇ ತರಗತಿಯ ಪರೀಕ್ಷೆಯನ್ನು ಎಂಟೋ ಹತ್ತೋ ಸಲ ಬರೆದಿದ್ದಾನೆ, ದ್ವಿತೀಯ ಪಿಯೂಸಿ ಮುಗಿದ ತಕ್ಷಣ ಅಪ್ಪ ಯಾವ ಜಾದುಮಾಡಿದನೋ ಗೊತ್ತಿಲ್ಲ; ಖಾಸಗೀ ಮೆಡಿಕಲ್ ಕಾಲೇಜಿನಲ್ಲಿ ಓದಿ ಲಂಚಕೊಟ್ಟು ಬೇಕಾದ ರೀತಿ ಪದವಿ ಪಡೆದು ಈಗ ಸರಕಾರೀ ಆಸ್ಪತ್ರೆಯಲ್ಲಾತ ವೈದ್ಯ! ನೆಟ್ಟಗೆ ಚುಚ್ಚುಮದ್ದು ಕೊಡಲೂ ಗೊತ್ತಾಗದ ದಡ್ಡ ವ್ಯಕ್ತಿ ಯಾವರೀತಿ ಚಿಕಿತ್ಸೆ ನೀಡಬಹುದು ಅಂತೀರಿ ? --ಇದು ಇಂದಿನ ಜಗತ್ತು! ಯಾಕೆ ಇದನ್ನು ಹೇಳಿದೆನೆಂದರೆ ಇವತ್ತಿನ ನಮ್ಮ ವೃತ್ತಿಗಳಿಗೆ ಮಾಪುಗೋಲಾಗಿರುವುದು ಮೂಲಭೂತವಾಗಿ ವ್ಯಾಸಂಗದ ಪದವಿ ಪತ್ರಗಳು.

ನಮ್ಮ ಸುತ್ತಮುತ್ತಲ ಹಲವು ರಂಗಗಳಲ್ಲಿ ಹಲವು ಉತ್ಕೃಷ್ಟ ವ್ಯಕ್ತಿಗಳನ್ನು ನೋಡುತ್ತೇವೆ. ಆದರೆ ಅವರಲ್ಲಿ ಎಲ್ಲರೂ ಕೇವಲ ಪದವಿಯನ್ನು ಪಡೆದವರಲ್ಲ. ಆರ್. ಎನ್ ಶೆಟ್ಟರೇ ಇರಲಿ, ಡಾ|ರಾಜ್‍ಕುಮಾರ್ ಇರಲಿ ಕಲಾವಿದ ಬಿ,ಕೆ,ಎಸ್. ವರ್ಮಾ ಇರಲಿ ಎಲ್ಲರೂ ಅವರವರ ವೃತ್ತಿಯಲ್ಲಿ ಉನ್ನತ ಹಂತವನ್ನು ತಲುಪಿದವರು. ಅವರಿಗೆ ಪದವೀ ವ್ಯಾಸಂಗ ಬೇಕಾಗಲೇ ಇಲ್ಲ. ಅವರಲ್ಲಿನ ತುಡಿತ ಅವರುಗಳನ್ನು ಆ ಮಟ್ಟಕ್ಕೆ ಏರಿಸಿತು. ಅಂದರೆ ಪ್ರತೀ ವ್ಯಕ್ತಿಗೂ ತಾನು ಸಾಧಿಸಬೇಕೆಂಬ ಚಲವಿರಬೇಕು. ಇಷ್ಟಪಡುವ ವೃತ್ತಿಪರ ವಿಷಯದ ಕುರಿತು ಅಧ್ಯಯನ ಮಾಡಿಕೊಂಡರೆ ಅದು ಉನ್ನತಿಗೇರಲು ದಾರಿಯಾಗುತ್ತದೆ. ಉನ್ನತಿಯ ಹಿಂದೆ ಪ್ರತೀವ್ಯಕ್ತಿಯ ಅವಿರತ ಪರಿಶ್ರಮ ಅಡಗಿರುತ್ತದೆ. ಆ ಪಟ್ಟ ಕುಂತಲ್ಲೇ ಬರುವುದಿಲ್ಲ. ದೀರ್ಘಕಾಲದ ತಪಸ್ಸಿನಂತೇ ಅದನ್ನು ಮಾಡಿದಾಗ ಆ ರಂಗದಲ್ಲಿ ಯಶಸ್ಸು ಸಿಗುತ್ತದೆ.

ಆರ್.ಎನ್ ಶೆಟ್ಟರು ಚಿಕ್ಕ ಪುಟ್ಟ ಕಂತ್ರಾಟುಗಳನ್ನು ಪಡೆದು ಊರೂರು ಅಲೆಯುವಾಗ ಅವರಿಗೆ ಉಳಿದುಕೊಳ್ಳಲು ಮನೆ ಇರಲಿಲ್ಲ! ಕೆಲಸ ನಡೆಯುತ್ತಿರುವ ಪ್ರದೇಶದ ಹತ್ತಿರದಲ್ಲಿಯೇ ಯಾರದ್ದಾದರೂ ಬಾಡಿಗೆಮನೆ ಪಡೆದು ವಾಸಿಸುತ್ತಿದ್ದರು. ಕಾಲಕ್ರಮೇಣ ಅವರು ಸಿವಿಲ್ ಕನ್ಸ್‍ಟ್ರಕ್ಷನ್ ನಲ್ಲಿ ತನ್ನದೇ ಆದ ದಾರಿಯಲ್ಲಿ ಯಾವ ಎಂಜಿನೀಯರಿಗೂ ಕಮ್ಮಿ ಇರದ ರೀತಿಯಲ್ಲಿ ಜ್ಞಾನ ಪಡೆದರು-ಅನುಭವದಿಂದ. ಡಾ| ರಾಜ್ ಕುಮಾರ್ ನಾಟಕ ಕಂಪನಿಗಳಲ್ಲಿ ಕೆಲಸಮಾಡುತ್ತಿರುವಾಗ ಹೊಟ್ಟೆಗೆ ಬಟ್ಟೆಗೆ ಹಣಸಿಗುವುದು ಅವರಿಗೆ ಗೊತ್ತಿತ್ತೇ ವಿನಃ ದೊಡ್ಡ ಮೊತ್ತದ ಸಂಬಳವೇನೂ ಸಿಗುವರಂಗ ಅದಾಗಿರಲಿಲ್ಲ. ಚಿತ್ರರಂಗಕ್ಕೆ ಅನಿರೀಕ್ಷಿತವಾಗಿ ನಡೆದುಬಂದ ಅವರು ಮೊದಲಾಗಿ ತನಗೆ ಪಾತ್ರಪೋಷಣೆ ಮಾಡಲು ಬರುವುದೇ ಎಂಬುದನ್ನು ಅರಿಯತೊಡಗಿದ್ದರು. ಪೌರಾಣಿಕ ಕಥಾಭಾಗಗಳಲ್ಲಿನ ಪಾತ್ರಗಳನ್ನು ನೆನೆಯುತ್ತಾ ಅದರೊಳಗೇ ತನ್ನನ್ನು ಅಭಿನಯಿಸುವತ್ತ ತೊಡಗಿಸಿಕೊಂಡು ನಿಮಗ್ನರಾಗುತ್ತಿದ್ದರು. ’ಈ ಪಾತ್ರವನ್ನು ಹೀಗೇ ಮಾಡಬೇಕು’ ಎಂದು ಅವರಂತರಾತ್ಮ ಹೇಳುತ್ತಿತ್ತು. ಪಾತ್ರಗಳಲ್ಲಿನ ಭಾವಗಳನ್ನು ತಾನೇ ಆ ವ್ಯಕ್ತಿಯೆಂಬಂತೇ ಅನುಭವಿಸಿ ಅಭಿನಯಿಸಿದ್ದರಿಂದ ಅವರ ಆ ಕಲೆ ಜನಮೆಚ್ಚುಗೆ ಪಡೆಯಿತು; ಅವರು ಉನ್ನತಿಯನ್ನು ಪಡೆದರು.

ಚಿತ್ರಕಲಾವಿದ ಬಿ.ಎಕ್.ಎಸ್. ವರ್ಮಾ ಅವರು ಚಿಕ್ಕವರಿರುವಾಗ ಚಿತ್ರಬಿಡಿಸುವದರ ಹೊರತು ಇನ್ಯಾವ ಗೀಳನ್ನೂ ಅಂಟಿಸಿಕೊಳ್ಳಲಿಲ್ಲ. ತಂದೆ ಕೋಪದಿಂದ ಬೈದರೂ ಸಹಿಸಿಕೊಂಡು ಬೆಂಗಳೂರಿನ ಕಲಾಸಿಪಾಳ್ಯದಂತಹ ರಸ್ತೆಗಳಲ್ಲಿ ಚಿತ್ರ ಬರೆಯುವುದು, ಜನ ಅದನ್ನು ಮೆಚ್ಚುವುದು, ಅದನ್ನೇ ತಾನೂ ನೋಡುತ್ತಾ ಅಲ್ಲಿ ಫೂಟ್‍ಪಾತ್ ಮೇಲೆ ಮಲಗುವ ಕೂಲಿಜನರೊಟ್ಟಿಗೆ ಮಲಗಿಬಿಡುವುದು ಹೀಗೇ ಹಲವಾರು ವರ್ಷ ಅವರಿಗೆ ಅದೇ ಬದುಕಾಗಿತ್ತು. ತಮ್ಮೊಳಗಿನ ಆಂತರ್ಯ ಅವರಿಗೆ ಚಿತ್ರಬಿಡಿಸುವುದಕ್ಕೆ ಮಾತ್ರ ಆಸ್ಪದಕೊಡುತ್ತಿತ್ತು. ತಮ್ಮ ನೆಚ್ಚಿನ ಕಲಾವಿದನಾದ ರಾಜಾ ರವಿವರ್ಮನ ನೆನಪಿಗಾಗಿ ತಮ್ಮ ಹೆಸರಿನ ಕೊನೆಗೆ ’ವರ್ಮಾ’ ಎಂಬುದನ್ನು ಸೇರಿಸಿಕೊಂಡಿದರು. ಈಗ ಬೆರಳಾಡಿಸಿದರೂ ಬಹುಸುಂದರ ಚಿತ್ರಗಳು ಮೂಡುವಷ್ಟು ನುರಿತಕಲಾವಿದರಾಗಿ ಸಾವಿರಾರು ಕೃತಿಗಳನ್ನು ತಯಾರಿಸಿದರು. ಹಾಡುತ್ತಿರುವಾಗಲೇ ೫ ನಿಮಿಷಗಳಲ್ಲಿ ಅದಕ್ಕೆ ಪೂರಕವಾದ ಇಡೀ ಚಿತ್ರವನ್ನು ವೇದಿಕೆಯಲ್ಲೇ ರಚಿಸುವ ಸಿದ್ಧಿ ಅವರಿಗೆ ಬಂತು. ಇದು ಯಾವ ಯೂನಿವರ್ಸಿಟಿಯಲ್ಲಿ ಹೇಳಿಕೊಟ್ಟ ವಿದ್ಯೆಯಲ್ಲ!

ಹಿರಿಯಮಿತ್ರರಾದ ಸಹಸ್ರಾವಧಾನಿ ಡಾ| ಆರ್. ಗಣೇಶ್ ಹತ್ತು ವರ್ಷಗಳ ಹಿಂದೊಮ್ಮೆ ಅವರ ಮನೆಯಲ್ಲಿ ನನ್ನ ಕೈಗೊಂದು ಪುಸ್ತಕ ಕೊಟ್ಟರು. ’ಅವಧಾನ ಕಲೆ’ ಎಂದು ಬರೆದಿತ್ತು. ಅದು ಅವರ ಥೀಸಿಸ್ ಎಂಬುದು ಗೊತ್ತಾಯಿತು. ಅಳಿದು ಹೋಗುತ್ತಿದ್ದ ಭಾರತೀಯ ಅವಧಾನ ಕಲೆಯನ್ನು ಮುಂದಿನ ಪೀಳಿಗೆಗಳಿಗೆ ತಿಳಿಸುವ ಸಲುವಾಗಿ ಹಾಗಂದರೇನು ಎಂಬುದನ್ನು ಬಹುದೊಡ್ಡ ಪುಸ್ತಕರೂಪದಲ್ಲಿ ಬರೆದಿದ್ದರು. ಅದನ್ನು ಪರಿಗ್ರಹಿಸಲು ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಯಾರೂ ಪಂಡಿತರಿರಲಿಲ್ಲ! ಆಗ ಹಿರಿಯ ವಿದ್ವಾಂಸರಾದ ಎನ್. ರಂಗನಾಥ ಶರ್ಮಾ ಮತ್ತು ಸಾಹಿತಿಗಳಾದ ಎಲ್.ಎಸ್. ಶೇಷಗಿರಿರಾಯರು ಸೇರಿ ಅದನ್ನು ಓದುತ್ತಾ ತಿಂಗಳಾನುಗಟ್ಟಲೆ ಸಮಯದಲ್ಲಿ ಅದನ್ನು ಒಪ್ಪಿ ವಿಶ್ವವಿದ್ಯಾನಿಲಯಕ್ಕೆ ತಿಳಿಸಿ ಗೌರವಪೂರ್ವಕವಾಗಿ ಡಾಕ್ಟರೇಟ್ ಕೊಡಮಾಡಿದರು. ಮೆಕಾನಿಕಲ್ ಎಂಜಿನೀಯರ್ ಆಗಿರುವ ಗಣೇಶ್ ಸಾಹೇಬರು ಅದನ್ನು ವೃತ್ತಿಯನ್ನಾಗಿ ತೆಗೆದುಕೊಳ್ಳಲಿಲ್ಲ; ಒಂದೊಮ್ಮೆ ಹಾಗೆ ಮಾಡಿದ್ದರೆ ದೇಶ ಒಬ್ಬ ಅಪ್ರತಿಮ ಮೇಧಾವಿಯನ್ನು ಬರೇ ಆ ರಂಗಕ್ಕೆ ಮಾತ್ರ ಸೀಮಿತವಾಗಿಸುತ್ತಿತ್ತು. ಅವರಲ್ಲಿನ ತುಡಿತ ಅವರು ಒಂದೇ ಕಡೆನಿಂತು ಆ ವೃತ್ತಿಯನ್ನು ಮಾಡಬಿಡಲಿಲ್ಲ, ಅವರು ಹಲವಾರು ವ್ಯಕ್ತಿಗಳಿಗೆ ಮಾರ್ಗದರ್ಶಕರಾದರು, ಬೋಧಕರಾದರು. ಯಾವುದೇ ವಿಷಯವನ್ನು ಆಳವಾಗಿ ಇಣುಕಿ ಯಾವುದೇ ಪ್ರಶ್ನೆ ಕೇಳಿದರೂ ಅದನ್ನು ಸಬೂಬುಕೊಟ್ಟು ಮಗುಚದೇ ನೇರವಾಗಿ ಮತ್ತು ಸ್ಫುಟವಾಗಿ ಉತ್ತರಿಸಬಲ್ಲ ’ಮಾನವ ಕಂಪ್ಯೂಟರ್’ ಎಂಬ ಖ್ಯಾತಿಗಳಿಸಿದ ಅವರು ನೂರು ಜನ ಪ್ರಚ್ಛಕರಿಗೆ[ಪ್ರಶ್ನೆ-ಸಮಸ್ಯೆಗಳನ್ನು ಮುಂದಿಡುವವರು] ಒಂದೇವೇದಿಕೆಯಲ್ಲಿ ಉತ್ತರಿಸುವಾಗ ನೋಡಿದವರಿಗೆ ಇದು ಇಂದ್ರಜಾಲವೋ ಮಹೇಂದ್ರಜಾಲವೋ ಅನಿಸುವಷ್ಟು ಆಶ್ಚರ್ಯಕರ ಮತ್ತು ಸಂತೋಷಕರವಾಗಿರುತ್ತದೆ. ಪ್ರಚ್ಛಕರೂ ಕೂಡ ವಿದ್ವಾಂಸರೇ ಆಗಿದ್ದು ಸಮಸ್ಯೆಗಳು ಬಹಳ ಕ್ಲಿಷ್ಟವಾಗಿರುತ್ತವೆ. ಸಮಯದ ಸಂಕೋಲೆ ಇರುತ್ತದೆ. ಮಧ್ಯೆ ಮಧ್ಯೆ ಅವರ ಮನಸ್ಸನ್ನು ದಾರಿತಪ್ಪಿಸಲು ಅಪ್ರಸ್ತುತ ಪ್ರಸ್ತುತಿಯನ್ನು ತರುವ ವ್ಯಕ್ತಿಯಿರುತ್ತಾನೆ. ಆದರೂ ಅವರು ನಿಭಾಯಿಸುವ ಆ ಕಲೆ ಯಾವ ವಿಶ್ವವಿದ್ಯಾಲಯದಲ್ಲಿ ಎಲ್ಲಿ ಹೇಳಲ್ಪಟ್ಟಿದೆ? ದೇಶದ/ಜಗತ್ತಿನ ಹದಿನೈದು-ಹದಿನಾರು ಭಾಷೆಗಳಲ್ಲಿ ಪ್ರೌಢಿಮೆ ಪಡೆದಿರುವ ಅವರು ಶತಾಯುಷಿಯಾಗಿ ಹಲವು ಅವಧಾನಿಗಳನ್ನು ಸೃಜಿಸಲಿ ಎಂದು ಹಾರೈಸೋಣ.

ಇನ್ನು ಅನಿಲ್ ಅಗರವಾಲ್ ಸರದಿ. ಬಿಹಾರದಲ್ಲಿ ಬಡಕುಟುಂಬದಲ್ಲಿ ಜನಿಸಿದ ಅನಿಲ್ ಅವರ ತಂದೆ ಒಬ್ಬ ಹಳೇ ಪಾತ್ರೆ-ಮೆಟಲ್ ವ್ಯಾಪಾರಿಯಾಗಿದ್ದರು. ಮಗನ ಓದಿಗೆ ಅಂತ ಸೈಕಲ್ ಒಂದನ್ನು ಕೊಡಿಸಿದ್ದರು. ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸವನ್ನು ಮಗ ೧೦ ಕೀ.ಮೀ ದೂರದ ಶಾಲೆಯೊಂದಕ್ಕೆ ಸೈಕಲ್‍ನಲ್ಲಿ ತೆರಳಿ ಕಲಿತ. ಮತ್ತೆ ಕಾಲೇಜು ವ್ಯಾಸಂಗಕ್ಕೆ ಹಣವಿರಲಿಲ್ಲ, ತಂದೆ ಹೋಗಗೊಡಲೂ ಇಲ್ಲ. ಹತ್ತನೇ ತರಗತಿ ಕಲಿತ ನಂತರ ಆಯ್ದುಕೊಂಡಿದ್ದು ಅದೇ ಹಳೇ ಮೆಟಲ್ ಸ್ಕ್ರ್ಯಾಪ್ ವ್ಯಾಪಾರ. ಸ್ವಲ್ಪದಿನಗಳಲ್ಲೇ ಕೈಲಿ ಸ್ವಲ್ಪ ಹಣಕೂಡಿದಮೇಲೆ ಅಲ್ಲಿಂದ ಸೀದಾ ಬಂದದ್ದು ಮುಂಬೈಗೆ. ಯಾರೂ ಪರಿಚಿತರಿಲ್ಲ, ಗಾಡ್‍ಫಾದರ್ ಇಲ್ಲ, ಇಂಗ್ಲೀಷಂತೂ ಬರುತ್ತಲೇ ಇರಲಿಲ್ಲ. ಮುಂಬೈಗೆ ಬಂದಿಳಿದ ಬಾಲಕ ಅಲ್ಲಿಯೂ ಅದೇ ಹಳೇ ಮೆಟಲ್ ಸ್ಕ್ರ್ಯಾಪ್ ವ್ಯಾಪಾರ ಮುಂದುವರಿಸಿ ಕೆಲವಾರು ವರ್ಷಗಳಲ್ಲಿ ಹಣಗಳಿಸುತ್ತಾ ಹೋದ. ನಂತರ ತಾನು ಮಾರುತ್ತಿದ್ದ ಮೆಟಲ್‍ಗಳ ಬಗ್ಗೆ ತಿಳಿದುಕೊಂಡ. ಸೊರಗುತ್ತಿದ್ದ ಕೆಲವು ಚಿಕ್ಕ ಮೆಟಲ್ ಕಂಪನಿಗಳನ್ನು ಕೊಂಡುಕೊಂಡ. ದಂಧೆ ಬೆಳೆಯಿತು. ಮತ್ತಷ್ಟು ದೊಡ್ಡ ಮೆಟಲ್ ಕಂಪನಿಗಳು ಅನಿಲ್ ತೆಕ್ಕೆಗೆ ಬಂದವು. ಕೆಲವು ಅದಿರು ಗಣಿಗಳೂ ದೊರೆತವು. ಅನಿಲ್ ಬೆಳೆಯುತ್ತಲೇ ನಡೆದ. ಭಾರತದಲ್ಲಿ ’ಲೈಸೆನ್ಸ್’ ಸಲುವಾಗಿ ಸ್ವಲ್ಪ ಬೇಸರಗೊಂಡ ಆತ ಲಂಡನ್‍ಗೆ ತೆರಳಿದ. ಅಲ್ಲಿ ಯಾವುದೋ ಪತ್ರಿಕೆಯ ಮೂಲಕ ಬ್ರ್ಯಾನ್ ಗಿಲ್ಬರ್ಟ್ ಎಂಬಾತನ ಪರಿಚಯವಾಯಿತು. ಮೆಟಲ್ ವಿಷಯಮಾತನಾಡುತ್ತಾ ತನ್ನ ಸೈಕಲ್ ಪ್ರಿಯತೆಯನ್ನೂ ಅನಿಲ್ ಗಿಲ್ಬರ್ಟ್‍ಗೆ ಹೇಳಿದ. ಸ್ವಭಾವತಃ ಸೈಕಲ್ ಪ್ರೇಮಿಯಾಗಿದ್ದ ಗಿಲ್ಬರ್ಟ್ ಅನಿಲ್‍ಗೆ ಸನೇಹಿತನಾಗಿಬಿಟ್ಟ ಮಾತ್ರವಲ್ಲ ಲಂಡನ್ ಮೆಟಲ್ ಉದ್ಯಮಿಗಳ ಜೊತೆಗೆ ಗಿಲ್ಬರ್ಟ್ ಚೆನ್ನಾಗಿ ಒಡನಾಟ ಇಟ್ಟುಕೊಂಡವನಾಗಿದ್ದ. ಆತ ಅನಿಲ್‍ಗೆ ಲಂಡನ್‍ನ ಒಳ್ಳೊಳ್ಳೆಯ ಕಂಪನಿಗಳ ಸಂಪರ್ಕವನ್ನು ಕಲ್ಪಿಸಿದ. ಅಲ್ಲಿಂದ ಅನಿಲ್ ಗ್ರಹಗತಿಯೇ ಬದಲಾಗಿ ಹೋಯಿತು. ಅನಿಲ್ ಬಿಲಿಯನೈರ್ ಆದ; ಭಾರತದಲ್ಲಿ ಧೀರೂಭಾಯ್ ಅಂಬಾನಿ ಮತ್ತು ಲಕ್ಷ್ಮಿ ಮಿತ್ತಲ್ ಅವರನ್ನೂ ಹಿಂದಿಕ್ಕಿ ತಾನೇ ಶ್ರೀಮಂತ ಸ್ಥಾನಕ್ಕೆ ಏರಿದ್ದಾರೆ ಅನಿಲ್. ಒಂದುಕಾಲಕ್ಕೆ ಸಹಪಾಠಿಯಾಗಿದ್ದ ಲಾಲೂ ಪ್ರಸಾದ್ ಯಾದವ್ ರಾಜಕರಣದಲ್ಲಿದ್ದರೂ ಕಷ್ಟದಲ್ಲಿದ್ದಾಗಲೂ ಅವರ ಸಹಾಯ ಅಪೇಕ್ಷಿಸಿರಲಿಲ್ಲ ಅನಿಲ್. ಈಗ ಎರಡು ದೊಡ್ಡ ಆಸ್ಪತ್ರೆಗಳನ್ನು ಧರ್ಮಾರ್ಥ ನಿರ್ಮಿಸಿದ್ದಾನೆ, ಇಸ್ಕಾನ್ ದೇವಾಲಯ ನಿರ್ಮಿಸಿದ್ದಾನೆ, ಸುಮಾರು ೫ ಲಕ್ಷ ವಿದ್ಯಾರ್ಥಿಗಳಿಗೆ ಬಿಸಿಯೂಟ ನೀಡುವ ವ್ಯವಸ್ಥೆ ಕಲ್ಪಿಸಿದ್ದಾನೆ. ಗಣಿಗಾರಿಕೆಯ ವಿರುದ್ಧ ಜನ ಸಿಡಿದೇಳದಿರಲಿ ಎಂಬ ಕಾರಣಕ್ಕೆ ಕಣ್ಣೊರೆಸುವ ತಂತ್ರ ಇದೆಂದು ಕೆಲವರು ಹೇಳಿದರೂ ಹಳ್ಳಿಯ ಹೈದನೊಬ್ಬ ಲಂಡನ್ ತಲುಪಿ ಅಲ್ಲೂ ಸೈ ಎನ್ನಿಸಿಕೊಂಡು ಜಾಗತಿಕ ಮಟ್ಟದಲ್ಲಿ ಬೆಳೆಯುವಾಗ ಅವನ ವಿದ್ಯಾರ್ಹತೆ ಅಡ್ಡಿಬರಲಿಲ್ಲ. ಈ ವ್ಯವಹಾರ ಚಾತುರ್ಯವನ್ನು ಯಾರು ಆತನಿಗೆ ಕಲಿಸಿದರು?

ಬೆಳೆಯಬೇಕೇ ? ತತ್ವ ಅರಿಯಬೇಕು. ನಾವು ಮಾಡುವ ವೃತ್ತಿಯಲ್ಲಿ ನೈಪುಣ್ಯತೆ ಗಳಿಸಬೇಕು. ಸತತ ಪರಿಶ್ರಮ ಬೇಕು. ನಿರಂತರ ಹೊಸ ಹೊಸ ಉತ್ತಮ ವಿಚಾರಗಳನ್ನು ಬೇರೆಯವರಿಂದ ಅರಿಯುವ ಸ್ವಭಾವವಿರಬೇಕು. ವಿನಯ-ವಿಧೇಯತೆ ಇರಲೇಬೇಕು. ವೃತ್ತಿ ಪರಿಪೂರ್ಣತೆಯೆಡೆಗೆ ಸದಾ ಅಡಿಯಿಡುವ ಆಸಕ್ತಿಯಿರಬೇಕು. ಮಾಡಿದ ಕೆಲಸ ನಮಗೂ ಸಮಾಜಕ್ಕೂ ದೇವರಿಗೂ ತೃಪ್ತಿತರುವಂಥದಾಗಿರಬೇಕೆಂಬ ಅನಿಸಿಕೆಯಿರಬೇಕು. ಅಂದಮಾತ್ರಕ್ಕೆ ಉನ್ನತ ವ್ಯಾಸಂಗ ಬೇಡವೆಂದಲ್ಲ, ಕಲಿತ ಆ ವಿದ್ಯೆಯೂ ಕಾಲು ಭಾಗವಷ್ಟೇ ಎಂದುಕೊಂಡು ಮುಕ್ಕಾಲುಭಾಗ ನಮ್ಮ ಮುಂದಿನ ಸಾಧನೆಗಳಲ್ಲಿ ಸಾಬೀತುಪಡಿಸಬೇಕು. ದೇವರಲ್ಲಿ ಅದುಕೊಡು ಇದುಕೊಡು ಎಂದು ಬೇಡುವ ಬದಲು ಬುದ್ಧಿಗೆ ಒಳ್ಳೆಯ ಪ್ರೇರೇಪಣೆ ಕೊಡು ಎನ್ನುವ ಪ್ರಾರ್ಥನೆಯಿರಬೇಕು. ಆಗಮಾತ್ರ ’ಓದು ಒಕ್ಕಾಲು ಬುದ್ಧಿ ಮುಕ್ಕಾಲು’ ಎಂದರೇನೆಂದು ಅರ್ಥವಾದೀತು.