ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Thursday, May 31, 2012

ಪ್ರತಿಭೆಗಳನ್ನು ಗುರುತಿಸುವುದು ನಿಜವಾದ ರಾಜಧರ್ಮ

ಚಿತ್ರಋಣ : ಅಂತರ್ಜಾಲ 

ಪ್ರತಿಭೆಗಳನ್ನು ಗುರುತಿಸುವುದು ನಿಜವಾದ ರಾಜಧರ್ಮ

ಕೆಲವುದಿನಗಳಿಂದ ನನ್ನಲ್ಲಿ ಕೆಲವರು ಕೇಳಿದ್ದೀರಿ, ಕನ್ನಡ ಸಿನಿಮಾ ರಂಗದ ಡಬ್ಬಿಂಗ್ ಬಗ್ಗೆ ಮತ್ತು ಗಿರೀಶ್ ಕಾಸರವಳ್ಳಿಯವರ ಬಗ್ಗೆ ಬರೆಯಿರಿ ಎಂದು. ನಾನು ಆ ಬಗ್ಗೆ ಜಾಸ್ತಿ ತಲೆಕೆಡಿಸಿಕೊಂಡ ಜನ ಅಲ್ಲ. ಆದರೂ ನಿಮ್ಮ ಕೋರಿಕೆಯನ್ನು ಮನ್ನಿಸಿ ನನಗೆ ತಿಳಿದ ಮಟ್ಟಿಗೆ ಒಂದೆರಡು ಅನಿಸಿಕೆಗಳನ್ನು ಹಂಚಿಕೊಳ್ಳುತ್ತೇನೆ.

ಕನ್ನಡ ಸಿನಿಮಾ ರಂಗದಲ್ಲಿ ಹಿಂದೆ ಉತ್ತಮ ಕಥೆಗಳಿದ್ದವು. ಆರಂಭದಲ್ಲಿ ಪೌರಾಣಿಕ ಕಥೆಗಳಿದ್ದವು, ಅದಾದ ಮೇಲೆ ಉತ್ತಮ ಸಾಮಾಜಿಕ ಕಥೆಗಳು, ಕಾದಂಬರಿಗಳ ಮೂಲಕ ನಿರ್ದೇಶಕರಿಗೆ ಸಿಕ್ಕು ಸಿನಿಮಾಗಳಾದವು. ಬರುಬರುತ್ತಾ ಹೊಸ ಅಲೆಗಳು ಎದ್ದವು; ಕೆಲವು ಜನರ ಬೇಡಿಕೆಯನ್ನು ಗಮನಿಸಿ ಹೆಣ್ಣುಮಕ್ಕಳಿಂದ ಕ್ಯಾಬರೆ ಮಾಡಿಸುವ ಹಂತವನ್ನು ತಲುಪಿದರು! ಕ್ರಮೇಣ ಅದೇನೋ ’ಮೈಚಳಿ ಬಿಟ್ಟು’ ’ಮೈಚಳಿ ಬಿಟ್ಟು’ ಎಂಬ ಪದ ಬಳಸಿ ನಾಯಕಿಯರಿಗೆ ಈಜುಡುಗೆ [ಬಿಕನಿ] ಹಾಕಿಸಲಾಯ್ತು. ಬರುಬರುತ್ತಾ ಕ್ಯಾಬರೆಗೆ ಬೇರೇ ನರ್ತಕಿಯರೇಕೆ ಅದನ್ನು ನಾಯಕಿಯರೇ ಮಾಡಿದರೆ ಹೇಗೆ? -ಎಂಬ ಅಂಶವನ್ನು ಮುಂದಿಟ್ಟುಕೊಂಡು  ನಾಯಕಿಯಾಗಲು ಅವಕಾಶ ಕೋರಿ ಬರುವ ಹೊಸ ನಟಿಯರನ್ನು ಆ ಕೆಲಸಕ್ಕೆ ಒಪ್ಪಿಸಲಾಯ್ತು. ಬಟ್ಟೆ ಬಿಚ್ಚುವುದೇ ಕಲೆ ಎಂಬಂತೇ ಬಿಂಬಿಸ ಹೊರಟಾಗಿನಿಂದ ಚಿತ್ರರಂಗದ ಚಹರೆ ಬದಲಾಗಿ ಹೋಯ್ತು.

ಡಬ್ಬಿಂಗ್ ಮಾಡುವುದರಿಂದ ಕಲಾವಿದರಿಗೆ ಅವಕಾಶ ಇರುವುದಿಲ್ಲ ಎಂಬ ಮಾತು ಕೆಲಮಟ್ಟಿಗೆ ಸತ್ಯವಾದರೂ ತಯಾರಿಸಿದ್ದನ್ನೇ ಮರುತಯಾರಿ ಮಾಡುವ ನ್ಯಾಶನಲ್ ವೇಸ್ಟ್ಗಿಂತ ಡಬ್ಬಿಂಗ್ ಒಳ್ಳೇದು ಅನಿಸುತ್ತದೆ. ಮೂಲ ಕಥೆಯನ್ನಾಧರಿಸಿ ಒಮ್ಮೆ ಒಂದು ಭಾಷೆಯಲ್ಲಿ ತಯಾರಿಸಲ್ಪಟ್ಟು ಯಶಸ್ವಿಯಾದ ಚಿತ್ರವನ್ನು, ಮತ್ತೊಂದು ಭಾಷೆಯಲ್ಲಿ ನೇರವಾಗಿ ಬಳಸಿಕೊಂಡರೆ ಕಥೆಯ ದೃಶ್ಯಾವಳಿಗಳಲ್ಲಿ ಮಾರ್ಪಾಟು ಆಗುವುದಿಲ್ಲ. ಕನ್ನಡವೂ ಸೇರಿದಂತೇ ಎಲ್ಲಾ ಚಿತ್ರರಂಗಗಳಲ್ಲೂ ಅನೇಕ ಕಲಾವಿದರು ನಿರ್ವಹಿಸುವ ಪಾತ್ರಗಳಿಗೆ ಹೇಗೂ ಕಂಠದಾನ ನೀಡಬೇಕಾದ ಅನಿವಾರ್ಯತೆ ಇದ್ದೇ ಇದೆ, ಅದರ ಬದಲು ಡಬ್ಬಿಂಗ್ಗೆ ಆದ್ಯತೆ ಕೊಡುವುದೇ ಒಳಿತು ಎಂಬುದು ಹಲವರ ಅಭಿಪ್ರಾಯ. ಅಷ್ಟಕ್ಕೂ ಉತ್ತಮ ಕಥೆಗಳು ನಮ್ಮಲ್ಲೇ ಹುಟ್ಟಿಕೊಂಡರೆ ಬೇರೇ ಭಾಷೆಯ ಚಿತ್ರರಂಗಗಳಿಂದ ನಾವು ಕಡಾ ಪಡೆಯುವ ಕೆಲಸ ತಪ್ಪುತ್ತದಲ್ಲಾ? --ಆ ಬಗ್ಗೆ ಮೊದಲು ತಲೆ ಓಡಿಸಬೇಕು.

ಇವತ್ತು ಚಿತ್ರರಂಗದಲ್ಲಿ ಕೋಟಿ ಕೋಟಿಗಳಲ್ಲಿ ಸೆಟ್ಟಿಂಗ್ ಗಳನ್ನು ಹಾಕಲಾಗುತ್ತದೆ. ಸಿನಿಮಾ ಅಂದರೆ ಕೋಟಿಗಳಲ್ಲಿ ಎಂಬುದೇ ಅಭ್ಯಾಸವಾಗಿಬಿಟ್ಟಿದೆ. ಹಿಂದೆ ಪುಟ್ಟಣ್ಣ ಕಣಗಾಲ್ರಂತಹ  ನಿರ್ದೇಶಕರಿದ್ದಾಗ ಸಿನಿಮಾ ತಯಾರಿಕೆ ಬರೇ ಸೆಟ್ಟಿಂಗ್ಗಳಲ್ಲಿ ನಡೆಯುತ್ತಿರಲಿಲ್ಲ, ಬದಲಾಗಿ ಹಲವಾರು ನೈಸರ್ಗಿಕ ತಾಣಗಳಲ್ಲಿ ತಯಾರಿಸಲ್ಪಡುತ್ತಿತ್ತು. ಆಗಿನ ಚಿತ್ರವೊಂದರ ಚಿತ್ರೀಕರಣದ ಸಮಯದಲ್ಲಿ ಕಲಾವಿದರು, ತಂತ್ರಜ್ಞರು, ಸಹಾಯಕರು, ನಿರ್ದೇಶಕರು, ನಿರ್ಮಾಪಕರು, ಬಣ್ಣದವರು, ಬೆಳಕಿನವರು ಎಂದೆಲ್ಲಾ ಹಿಡಿದು ಎಲ್ಲರನ್ನೂ ಒಂದೇ ಕುಟುಂಬದ ರೀತಿ ಭಾವಿಸಿ ನಡೆದುಕೊಳ್ಳುತ್ತಿತ್ತು, ಒಬ್ಬೊಬ್ಬರದೂ ಒಂದೊಂದು ಸ್ಟೈಲು ! ಕಲಾವಿದರಲ್ಲಿ ಸಮಯಪ್ರಜ್ಞೆ ತುಸು ಕಮ್ಮಿಯೇ ಎಂದರೆ ಇದು ಅವಹೇಳನದ ಮಾತಾಗುವುದಿಲ್ಲ. ಎಲ್ಲರಿಗೂ ಸಿಗುವ ಸಂಭಾವನೆ ಕಮ್ಮಿಯೇ ಎಂಬ ಭಾವನೆಯೇ ಹೊರತು ಪಡೆಯುವ ಸಂಭಾವನೆಗೆ ತಾವು ಅರ್ಹರೇ ಎಂಬುದು ಅವರ ಮನದಲ್ಲಿ ಎಂದೂ ಬರುವ ಪ್ರಶ್ನೆಯಲ್ಲ. ನಿರ್ದೇಶಕನ ಕನಿಷ್ಠ ಅರ್ಹತೆ ಇರದವರೂ ನಿರ್ದೇಶನ ಮಾಡತೊಡಗಿ ವರ್ಷಕ್ಕೆ ಎಲ್ಲರಿಗೂ ಮೀರಿದಷ್ರ್ಟು ಸಿನಿಮಾ ಮಾಡಿದೆ ಎಂದು ಕೊಚ್ಚುತ್ತಾ ಕೊನೆಗೊಮ್ಮೆ ಮಾಡಿದ ಎಲ್ಲಾ ಚಿತ್ರಗಳು ನೆಗೆದು ಬಿದ್ದು ನೆಲಕಚ್ಚಿದಾಗ, ನಿದ್ರೆ ಮಾತ್ರೆಯ ಮೊರೆಹೋಗುವುದು ವಿಷಾದನೀಯ. ಉತ್ತಮ ನಿರ್ದೇಶನ ಎಂದರೆ ಏನು ಎಂಬುದನ್ನು ಒಂದೇ ವಾಕ್ಯದಲ್ಲಿ ಬಣ್ಣಿಸುವುದು ಕಷ್ಟವಾದರೂ ಉತ್ತಮ ನಿರ್ದೇಶನ ಇದ್ದರೆ ಯಾವುದೇ ಕಾಲಕ್ಕೂ ಸಿನಿಮಾ ಸೋಲುವುದಿಲ್ಲ ಎನ್ನಬಹುದಾಗಿದೆ, ಹಾಗಾದರೆ ನಿರ್ದೇಶಕ ಉತ್ತಮವಾಗಿದ್ದರೆ ಸಾಕೇ? ಒಳ್ಳೆಯ ಕಥೆ ಬೇಡವೇ? ಎಂಬ ಪ್ರಶ್ನೆಗೆ ಉತ್ತರ  ಉತ್ತಮ ನಿರ್ದೇಶಕ ಒಳ್ಳೆಯ ಕಥೆಯನ್ನೇ ಆಧರಿಸಿ ಚಿತ್ರ ನಿರ್ಮಾಣ ಮಾಡುತ್ತಾನೆ. ಕಥೆ ಚೆನ್ನಾಗಿಲ್ಲಾ ಎಂದಾದರೆ ಒಳ್ಳೆಯ ಕಥೆ ಸಿಗುವವರೆಗೂ ಹುಡುಕಾಟ ನಡೆಯುತ್ತದೆ.

ಒಳ್ಳೆಯ ಕಥೆಗಳ ಹುಡುಕಾಟದಲ್ಲಿ ಹಾಗೆ ಮುಂದೆ ಸಾಗಿದ್ದವರು ದಿ|ಪುಟ್ಟಣ್ಣ ಕಣಗಾಲ್. ಕಥೆ ಸಿಗದಾಗ ಕನ್ನಡದಲ್ಲಿ ಅಂದಿನದಿನ ಸಿಗಬಹುದಾದ ಉತ್ತಮ ಕಾದಂಬರಿಗಳನ್ನು ತಂದು ರಾಶಿಹಾಕಿಕೊಂಡು, ಕೂತು, ಓದಿ, ಮನದಲ್ಲೇ ಕಥೆಯ ಪರಾಮರ್ಶೆ ನಡೆಸಿಕೊಂಡು, ಆಯ್ಕೆಯಾದ ಕಥೆಗೆ ತಾವು ನಡೆಸಬೇಕಾದ ದೃಶ್ಯಾವಳಿಗಳನ್ನು ಮನದಲ್ಲೇ ಕಲ್ಪಿಸಿಕೊಳ್ಳುತ್ತಿದ್ದರು. ಕಥೆಯಲ್ಲಿ ಬರುವ ಪಾತ್ರಗಳಿಗೆ ಹೋಲುವ ವ್ಯಕ್ತಿಗಳನ್ನು ಸಿಗುವ ಕಲಾವಿದರ ಬಳಗದಲ್ಲಿ ಹುಡುಕುತ್ತಿದ್ದರು. ಇಂತಹ ಪಾತ್ರಮಾಡಲು ಇಂಥವರೇ ಲಾಯಕ್ಕು ಎಂಬುದನ್ನು ನಿರ್ಧರಿಸುತ್ತಿದ್ದರು. ಇವತ್ತು ಈ ರೀತಿಯ ಯಾವುದೇ ಗುಣಾತ್ಮಕ ಅಥವಾ ಧನಾತ್ಮಕ ಪ್ರಕ್ರಿಯೆಗಳು ಕಾಣಸಿಗುವುದು ವಿರಳ. ಯಾರದ್ದೋ ಹುರುಳಿಲ್ಲದ ಕಥೆ, ಇನ್ಯಾರದ್ದೋ ಅಸಂಬದ್ಧ ಸಂಭಾಷಣೆ, ಕಥೆಗೆ ಯಾವುದೇ ರೀತಿಯಲ್ಲೂ ಪೂರಕವಲ್ಲದ ಐಟಮ್ ಸಾಂಗು, ಬರಿಬರಿದೇ ಬಿಚ್ಚುಡುಗೆಯ ಹಾಟ್ ಸೀನುಗಳು, ಕರ್ಕಶವೆನಿಸುವ ಸಂಗೀತ, ಒಂದಷ್ಟು ಫೈಟು-ಗಲಾಟೆ, ಜೀವನದಲ್ಲಿ ಮತ್ತೆಂದೂ ಕೇಳಲು ಇಷ್ಟಪಡದ ಹಾಡುಗಳು !--ಇದು ಇವತ್ತಿನ ಸಿನಿಮಾಗಳ ಲಕ್ಷಣವಾಗಿದೆ. 

ಕಣಗಾಲ್ರಂಥವರು ಮತ್ತೆ ಸಿಗುವುದು ಕಷ್ಟವೆನಿಸಬಹುದು. ಚಿಕ್ಕ ವಯಸ್ಸಿಗೇ ಮಹತ್ತರ ಸಾಧನೆಗಳನ್ನು ಮಾಡಿ ಜನಮನವನ್ನು ಗೆದ್ದ ಅವರು, ಕಲಾವಿದರ ಮಟ್ಟಿಗೆ ವಿಶ್ವವಿದ್ಯಾಲಯದಂತಿದ್ದರು. ಅವರ ಗರಡಿಯಲ್ಲಿ ಕನ್ನಡದ ಅನೇಕ ಘಟಾನುಘಟಿ ಕಲಾವಿದರು ಹುಟ್ಟಿಕೊಂಡರು. ಪುಟ್ಟಣ್ಣನ ಕಲಾಶಾಲೆ ಕೇವಲ ನಾಲ್ಕುಗೋಡೆಗಳ ಶಾಲೆಯಾಗಿರದೇ ಅದು ಕಲೆಯನ್ನು ನೇರವಾಗಿ ಪ್ರಾಯೋಗಿಕವಾಗಿ ಕಲಿಯುವ ಕಲಾಕೇಂದ್ರವಾಗಿತ್ತು ಎಂದರೆ ತಪ್ಪಲ್ಲ. ಪುಟ್ಟಣ್ಣನ ನಂತರದಲ್ಲಿ ಮತ್ತಿನ್ಯಾವ ನಿರ್ದೇಶಕರೂ ಆ ರೀತಿಯಲ್ಲಿ ಕಲಾವಿದರನ್ನು ತಯಾರುಮಾಡಲಿಲ್ಲ. ವಾಣಿಜ್ಯಕವಾಗಿ ಹಲವು ಕಲಾಶಾಲೆಗಳೇನೋ ಹುಟ್ಟಿಕೊಂಡವೇ ವಿನಃ ಅವುಗಳಿಂದ ಹೇಳಿಕೊಳ್ಳುವ ಮಟ್ಟಕ್ಕೆ ಬೆಳೆದ ಪ್ರತಿಭಾವಂತ ಕಲಾವಿದರು ತಯಾರಾಗಲಿಲ್ಲ, ಆಗುತ್ತಲೂ ಇಲ್ಲ. ಕಲೆ ವ್ಯಕ್ತಿಯಲ್ಲಿ ದೈವಿಕ ಕೊಡುಗೆಯಾಗಿದೆ, ಶಿಲೆಯಲ್ಲಿನ ಮೂರ್ತಿಯನ್ನು ಕಂಡ ಶಿಲ್ಪಿ ತನ್ನ ಚಾಣದ ಸಾವಿರಾರು ಏಟುಗಳಿಂದ ಆ ಮೂರ್ತಿಯ ರೂಪವನ್ನು ವಿಶ್ವದ ಜನತೆಗೆ ಅನಾವರಣಗೊಳಿಸಿ ತೋರಿಸುವಂತೇ, ಕಲಾವಿದನಾಗುವ ವ್ಯಕ್ತಿಯ ಲಕ್ಷಣವನ್ನು ಕಂಡು, ಅದನ್ನು ಸಮರ್ಪಕ ವೇಳೆಗೆ ಪ್ರಚುರಪಡಿಸುವುದು ನಿರ್ದೇಶಕರ ಚಾತುರ್ಯವಾಗಿರುತ್ತದೆ. ಈಗ ಹೊಸದಾಗಿ ಪ್ರವೇಶಿಸುವ ನಾಯಕ/ನಾಯಕಿಯ ಮನೆಯವರೇ ನಿರ್ಮಾಪಕರು, ನಾಯಕ/ನಾಯಕಿಗೆ ಅರ್ಹತೆ ಇರುತ್ತದೋ ಅಥವಾ ಬರೇ ಗ್ಲಾಮರ್ ಇದೆಯೆಂಬ ಕಾರಣಕ್ಕೆ ಸಿನಿಮಾ ರಂಗಕ್ಕೆ ಬರುತ್ತಾರೋ ತಿಳಿಯದಾಗಿದೆ.  ಒಟ್ಟಾರೆ ಬಹಳಷ್ಟು ಯುವಜನರಿಗೆ ಸಿನಿಮಾಗಳಲ್ಲಿ ನಟಿಸುವಾಸೆ, ಗೋಡೆಚಿತ್ರಗಳಲ್ಲಿ ಮಿರಮಿರನೆ ಮಿಂಚುವಾಸೆ, ಸಿನಿಮಾ ಬಿದ್ದುಹೋದರೂ ತಾವು ನಟ/ನಟಿಯರೆಂಬ ಹೆಸರು ಪಡೆಯುತ್ತೇವಲ್ಲಾ, ಜನ ನಮ್ಮನ್ನು ಭಿನ್ನವಾಗಿ ಗೌರವಿಸುತ್ತಾರಲ್ಲಾ ಎಂಬ ಭಾವನೆ!

ಪುಟ್ಟಣ್ಣನವರನ್ನು ಬಿಟ್ಟಮೇಲೆ ಹಳ್ಳಿಯ ಸನ್ನಿವೇಶಗಳನ್ನೂ ಗ್ರಾಮೀಣ ಬದುಕಿನ ಸೊಗಡುಳ್ಳ ದೃಶ್ಯಕಾವ್ಯಗಳನ್ನು ಬರೆದವರು ಗಿರೀಶ್ ಕಾಸರವಳ್ಳಿ ಎಂದರೆ ತಪ್ಪಾಗಲಾರದು. ಅವರ ಧಾರಾವಾಹಿಗಳಲ್ಲಿ ’ಗೃಹಭಂಗ’, ಮತ್ತು ’ಮೂಡಲ ಮನೆ’ ಬಹಳ ಮನೋಜ್ಞವಾಗಿವೆ. ಸಿನಿಮಾ ಅಥವಾ ಅಭಿನಯ ಕಲೆಯ ಜಾಡುಹಿಡಿದು ಹೊರಟಾಗ ಕನ್ನಡದಲ್ಲಿ ಅವರನ್ನು ಪ್ರತಿಭಾವಂತ ನಿರ್ದೇಶಕ ಎಂದು ಒಪ್ಪಿಕೊಳ್ಳಲೇಬೇಕಾಗುತ್ತದೆ. ಉತ್ತಮ ನಿರ್ದೇಶಕ ತಾನೆಂದೂ ಉತ್ತಮ ಎಂದು ಹೇಳಿಕೊಳ್ಳುವುದಿಲ್ಲ, ಅವನ ಚಿತ್ರಗಳೇ ಅದನ್ನು ಹೇಳುತ್ತವೆ. ಗಿರೀಶ್ ಕಾಸರವಳ್ಳಿ ಚಿತ್ರಗಳಿಗೆ ರಾಷ್ಟ್ರೀಯ ಪುರಸ್ಕಾರಗಳು ಸಿಕ್ಕಿರುವುದೇ ಅವರ ನಿರ್ದೇಶನದ ಔನ್ನತ್ಯವನ್ನು ಹೇಳುತ್ತದೆ.  

ಕನ್ನಡ ದಿನಪತ್ರಿಕೆಯೊಂದರಲ್ಲಿ ಕಥೆಯೊಂದು ಹೇಳುತ್ತದೆ: ಹೊರಗಿನಿಂದ ಮಾನ-ಸನ್ಮಾನಗಳನ್ನು ಪಡೆಯುವ ಯಜಮಾನರುಗಳ ಕೆಲಸಗಳ ಹಿಂದಿನ ನಿಜವಾದ ಕಾರ್ಯವಾಹಕರು ಅವರ ಕೆಲಸಗಾರರಾಗಿರುತ್ತಾರಂತೆ; ಅದರಂತೇ ದಿನಪತ್ರಿಕೆಯೊಂದರಲ್ಲಿ ಬರುವ ಹಲವು ತಪ್ಪುಗಳಿಗೆ ಅದರ ಸಂಪಾದಕರು ಕಾರಣವಲ್ಲ, ಬದಲಾಗಿ ಅಲ್ಲಿನ ಇತರ ವರದಿಗಾರರು/ಕೆಲಸಗಾರರು ಕಾರಣ ಎಂದು ಅವರು ಹೇಳಿದಹಾಗಿದೆ. ಕೆಲವೊಮ್ಮೆ ಭಾಷಾಂತರಗೊಳ್ಳುವ ಪುಸ್ತಕಗಳ ಹಿಂದೆಯೂ ಕೂಡ ’ಹೆಸರು ಯಾರದ್ದೋ ಬಸಿರು ಇನ್ಯಾರದ್ದೋ’ ಎಂಬ ಅಡಪಡ ಸುದ್ದಿಗಳು ತೀರಾ ಅಧಿಕೃತವಲ್ಲದೆಯೂ ನಂಬಲರ್ಹಮೂಲಗಳಿಂದ ತಿಳಿದುಬರುತ್ತವೆ. ಅದೇ ದಿನಪತ್ರಿಕೆಯಲ್ಲಿ ಗಿರೀಶ್ ಕಾಸರವಳ್ಳಿಯವರ ಬಗ್ಗೆ ವಿಚಿತ್ರವಾಗಿ ಬರೆಯಲಾಗಿದೆ. 

ನಾನು ಕಾಸರವಳ್ಳಿಯವರ ಖಾಸಾ ದೋಸ್ತನಾಗಲೀ, ಸಂಬಂಧಿಕನಾಗಲೀ, ಅಭಿಮಾನಿಯಾಗಲೀ ಅಲ್ಲ. ಸಹಜವಾಗಿ ಚಿತ್ರವಿಮರ್ಶಕನಾಗಿ ನಾನು ನೋಡಿದ ಅವರ ನಿರ್ದೇಶನದ ಚಲನಚಿತ್ರಗಳು ಮತ್ತು ಧಾರಾವಾಹಿಗಳು ನನಗೆ ಖುಷಿಕೊಟ್ಟಿವೆ. ಕಲಾವಿದರ ವೈಯ್ಯಕ್ತಿಕ ಬದುಕು ಎಲ್ಲ ಸಮಯದಲ್ಲೂ ಸುಖದ ಸುಪ್ಪತ್ತಿಗೆಯಲ್ಲವಲ್ಲ? ಅಲ್ಲಿರುವ ಮುಳ್ಳಿನಹಾಸಿಗೆ ನಮಗೆ ನೇರವಾಗಿ ಕಾಣಸಿಗುವುದಿಲ್ಲ. ಹರೆಯದಲ್ಲಿ ಕಲಾವಿದರಿಬ್ಬರಲ್ಲಿ ಪ್ರೇಮಾಂಕುರವಾಯ್ತು. ವೈಶಾಲಿ-ಗಿರೀಶ್ ರ ಮಡದಿಯಾದರು. ಇಬ್ಬರೂ ಪ್ರತಿಭಾವಂತರೇ. ’ಮೂಡಲಮನೆ’ಯ ನಿರ್ಮಾಣದ ಆರಂಭಿಕ ಹಂತದಲ್ಲಿ ನಾನು ವೈಶಾಲಿ ಮತ್ತವರ ಮಗಳು ಅನನ್ಯಾ ಕಾಸರವಳ್ಳಿ ಈ ಈರ್ವರನ್ನೂ ಮಲ್ಲೇಶ್ವರದಲ್ಲಿ ಕಂಡಿದ್ದೆ. ಅದಾದ ಕೆಲವು ತಿಂಗಳಲ್ಲಿ ವೈಶಾಲಿಯವರಿಗೆ ದೈಹಿಕ ಸ್ವಾಸ್ಥ್ಯ ಸರಿಯಿರಲಿಲ್ಲವೆಂದು ತಿಳಿದಿತ್ತು. ಆಮೇಲೆ ಪುನಃ ಚೇತರಿಸಿಕೊಂಡ ಅವರು ಆ ಧಾರಾವಾಹಿಯನ್ನು ಮುಗಿಸಿದ ನಂತರ ವರ್ಷದಕಾಲ ಸುಮ್ಮನೇ ಇದ್ದರು. ಅದರ ನಂತರ ’ಮುತ್ತಿನತೋರಣ’ವನ್ನು ತಯಾರಿಸುತ್ತಿದ್ದರು. ಮುತ್ತಿನತೋರಣದಲ್ಲಿ ಮುತ್ತು ಪೋಣಿಸುತ್ತಲೇ ಇಹಲೋಕಕ್ಕೆ ವಿದಾಯ ಹೇಳಿದ ವೈಶಾಲಿಯನ್ನು ಕಳೆದುಕೊಂಡ ಕೆಲದಿನಗಳಲ್ಲೇ ಗಿರೀಶ್ ಅವರಿಗೆ ರಾಷ್ಟ್ರೀಯ ಪ್ರಶಸ್ತಿಯೊಂದರ ಘೋಷಣೆಯಾಯ್ತು. ಮೆಚ್ಚಿನ ಮಡದಿಯನ್ನು ಕಳೆದುಕೊಂಡ ದುಃಖವೂ ಹೆಚ್ಚಿನ ಗೌರವ ದೊರೆತ ಸುಖವೂ ಏಕಕಾಲಕ್ಕೆ ಅನುಭವಕ್ಕೆ ಬಂದಾಗ ಕಲಾವಿದರ ಬದುಕು ಹೇಗಿರಬೇಡ? 

ಗಿರೀಶ್ ನಿರ್ದೇಶಿಸಿದ ಚಿತ್ರಗಳಾಗಲೀ ಧಾರಾವಾಹಿಗಳಾಗಲೀ ಯಾವುದೂ ಕಳಪೆ ಎನಿಸಲಿಲ್ಲ.  ಅವರ ನಿರ್ದೇಶನದ ಬಹುತೇಕ ಕೃತಿಗಳು ನಿಜಕ್ಕೂ ದೃಶ್ಯಕಾವ್ಯಗಳೇ ಸರಿ. ’ಮುಂಗಾರುಮಳೆ’ಯೆಂಬ ಕನ್ನಡದ ’ದೇವದಾಸ್’ ಸಿನಿಮಾವನ್ನು ನಿರ್ದೇಶಿಸಿದ ಯೋಗರಾಜ್ ಭಟ್ಟರು ನಂತರ ಅಂತಹ ಉತ್ತಮ ಸಿನಿಮಾಗಳನ್ನು ಕೊಡಲಾಗದೇ ಜನರಿಂದ ’ಯವ್ಡಾಸ್’ ಎಂಬ ಬಿರುದನ್ನು ಪಡೆದಿದ್ದಾರೆ. ಅರ್ಥಹೀನ ಕವನಗಳು, ಏನೇನೋ ಸಂಭಾಷಣೆಗಳು ಜನರಿಗೆ ಕೇಳಿದ್ದನೇ ಕೇಳಿ ರೋಸಿಹೋಗಿದೆ. ಕತ್ಲಲ್ಲಿ ಕರಡೀಗೆ ಜಾಮೂನು ತಿನ್ಸೋಕೆ ಎಂಬ ಹಾಡು ಭಟ್ಟರು ತಮ್ಮನ್ನೇ ಕರಡಿ ಎಂದು ಹೋಲಿಸಿಕೊಂಡು ಬರೆದ ಹಾಗಿದೆ! ಚೊಂಬೆದ್ದುಹೋದ ಅವರ ಇತ್ತೀಚಿನ ಸಿನಿಮಾಗಳು ಅವರಿಗೆ ’ಚೊಂಬೇಶ್ವರ’ ಎಂಬ ನಾಮಧೇಯವನ್ನು ಗಳಿಸಿಕೊಟ್ಟಿವೆ! ಏನೇನೋ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡ ಸರದಿ ಈಗ ನಾಗತಿಹಳ್ಳಿಗೆ ದಕ್ಕಿದೆ! ಒಂದೆರಡು ಉತ್ತಮ ಚಿತ್ರಗಳನ್ನು ಅವರೂ ಕೊಟ್ಟಿದ್ದರೂ ತಮ್ಮ ಇತ್ತೀಚಿನ ಚಿತ್ರದಲ್ಲಿ ನಿರ್ದೇಶಕ ಎಡವಿದ್ದಾನೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಹಾಗೆ ನೋಡಿದರೆ ಮಾಡಿದ ಯಾವುದೂ ಸಿನಿಮಾದಲ್ಲಿ ಹೆಸರನ್ನು ಕಳೆದುಕೊಳ್ಳದ ನಿರ್ದೇಶಕರ ಸಾಲಿನಲ್ಲಿ ಗಿರೀಶ್ ಕಾಸರವಳ್ಳಿಯೂ ನಿಲ್ಲುತ್ತಾರೆ. ’ಕನ್ನಡದ ಪ್ರಮುಖ ದಿನಪತ್ರಿಕೆ’ ಎಂದು ಸಾರಿಕೊಳ್ಳುತ್ತಾ ಓದುಗರ ಕೈಗೆ ಚೊಂಬು ಕೊಡುವ ಪತ್ರಿಕೆಯೊಂದರಲ್ಲಿ ಕನ್ನಡ ಸಿನಿಮಾ ರಂಗಕ್ಕೂ ಮತ್ತು ಕಾಸರವಳ್ಳಿಯವರಿಗೂ ಇರುವ ಸಂಬಂಧದ ವಿಶ್ಲೇಷಣೆ ವಿಚಿತ್ರಗತಿಯಲ್ಲಿ ಮೂಡಿಬಂದಿದ್ದು ’ಚೊಂಬು ನಿರ್ದೇಶಕರುಗಳ’ ಸಾಲಿನಲ್ಲಿ ಈ ’ಚೊಂಬು’ ಪತ್ರಿಕೆಯನ್ನೂ ಪರಿಗಣಿಸಿದರೆ ಒಳ್ಳೆಯದು ಎಂಬುದು ಬಹುತೇಕ ಓದುಗರ ಅಭಿಮತವಾಗಿದೆ!

ರಾಜರುಗಳ ಕಾಲ ಮುಗಿದು ಶತಮಾನಗಳೇ ಕಳೆದಿವೆ. ಈಗೇನಿದ್ದರೂ ರಾಜಧರ್ಮವನ್ನು ಪಾಲಿಸಬೇಕಾದವರು ಪ್ರಜೆಗಳೇ. ಯಾಕೆಂದರೆ ಇದು ಪ್ರಜಾರಾಜ್ಯ. ಕಾಗದದ ಹುಲಿ-ಸಿಂಹಗಳನ್ನು ಮುಂದಿರಿಸಿಕೊಂಡು, ಇತ್ತೀಚೆಗೆ ವಿಪ್ರ ಸಮಾವೇಶದಲ್ಲಿ ಪೇಜಾವರ ಮಠಾಧೀಶರು ಮಾಡಿದ ಪ್ರವಚನದ  ವಿರುದ್ಧ ವರದಿಗಳನ್ನು ಪ್ರಕಟಿಸಿ ಒಂದಷ್ಟು ಜನರನ್ನು ಸೆಳೆಯಲು ಪ್ರಯತ್ನಿಸಿ, ಪ್ರತಿಫಲವಾಗಿ ಅನೇಕ ಓದುಗರ ಕೆಂಗಣ್ಣಿಗೆ ಗುರಿಯಾಗಿ, ಹಲವು ಓದುಗರನ್ನು ಕಳೆದುಕೊಂಡ ಈ ಪತ್ರಿಕೆ ನಿತ್ಯವೂ ಒಂದಿಲ್ಲೊಂದು ತಗಾದೆ ತೆಗೆಯುತ್ತ ಜನರಲ್ಲಿ ತಪ್ಪು ಧೋರಣೆ ಮೂಡುವಂತೇ ಮಾಡುತ್ತಿರುವುದು ವಿಷಾದಕರ. ಇಂತಹ ಪತ್ರಿಕೆಗಳೂ ಕನ್ನಡಕ್ಕೆ ಬೇಕೇ ಎಂಬುದನ್ನು ಸ್ವಚ್ಛ ಕನ್ನಡದ ಕೆಚ್ಚೆದೆಯ ಓದುಗರು ನಿರ್ಧರಿಸಲು ಇದು ’ಸಕಾಲ’ ! 


Friday, May 25, 2012

ಮಹಾಂತೇಶ್ ಹತ್ಯೆಯನ್ನು ಅಪಘಾತವೆಂದು ಘೋಷಿಸ ಹೊರಟಾಗಲೇ ಅನುಮಾನ !

ಚಿತ್ರಋಣ: ಅಂತರ್ಜಾಲ
ಮಹಾಂತೇಶ್ ಹತ್ಯೆಯನ್ನು ಅಪಘಾತವೆಂದು ಘೋಷಿಸ ಹೊರಟಾಗಲೇ ಅನುಮಾನ !


’ಅನುಮಾನದ ಹುತ್ತ’ ಎಂಬುದು ಸಮಾನ್ಯವಾಗಿ ಬಳಕೆಯಾಗುವ ಪದ. ಯಾಕೆಂದರೆ ಯಾವ ಹುತ್ತದಲ್ಲಿ ಯಾವ ಹಾವಿದೆ ಎಂಬುದು ಯಾರಿಗೂ ಮೊದಲೇ ತಿಳಿದಿರುವುದಿಲ್ಲ; ಅದನ್ನು ತಿಳಿದುಕೊಳ್ಳಲು ಯಾವುದೇ ಯಂತ್ರಗಳ ಸಂಶೋಧನೆಗೂ ಯಾರೂ ತೀರಾ ತಲೆಕೆಡಿಸಿಕೊಂಡಿಲ್ಲ. ದೂರ ದರ್ಶಕಗಳು, ದೂರ ಸಂವೇದೀ ಯಂತ್ರಗಳೆಲ್ಲಾ ಇದ್ದರೂ ಜನಸಾಮಾನ್ಯರು ಹೋದೆಡೆಗೆಲ್ಲಾ ಅವುಗಳನ್ನು ಹೊತ್ತೊಯ್ಯುವುದು ಸಾಧ್ಯವಿಲ್ಲವಲ್ಲ? ಸಾರ್ವಜನಿಕ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾಗಳು ಕೆಲಸಮಾಡುತ್ತಿದ್ದರೂ ಅವುಗಳ ಕಾರ್ಯಕ್ಷಮತೆಯಲ್ಲಿ ನಿರೀಕ್ಷಿತ ಮಟ್ಟದ ಯಶಸ್ಸು ಇನ್ನೂ ಸರಿಯಾಗಿ ಸಿಗುತ್ತಿಲ್ಲ; ಮಾಸಲು ಮಾಸಲಾಗಿ ಕಾಣುವ ಬಿಂಬಗಳ ಜಾಡು ಹಿಡಿದು ಜಾಲಾಡುವುದು ಕಷ್ಟವಾದಾಗ ಅಪರಾಧಿಗಳಿಗೆ ಅದು ಅನುಕೂಲವಾಗಬಹುದು. ರಾಜಕಾರಣಿಗಳಿಗೂ ಧೂರ್ತರಿಗೂ ಅದು ಪರೋಕ್ಷ ಅನುಕೂಲವನ್ನೇ ಕಲ್ಪಿಸಬಹುದು.  

ಸರಕಾರಿ ಅಧಿಕಾರಿಗಳಿಗೆ ಬೆದರಿಕೆ, ಹತ್ಯೆ ಇತ್ತೀಚೆಗೆ ಬಹಳ ಸಲೀಸಾಗಿ ನಡೆಯುತ್ತಿರುವ ವಿಚಾರ! ದಾಂಡೇಲಿಯಲ್ಲಿ ವಾರದ ಹಿಂದೆ ಎ.ಸಿ.ಎಫ್ ಮದನ್ ನಾಯಕ್ ಅವರನ್ನು ಕ್ಷುಲ್ಲಕ ಕಾರಣಕ್ಕೆ ಹೊಡೆದು ಮುಗಿಸಿದರು. ಅದೇ ರೀತಿ ಬೆಂಗಳೂರಿನ ಜನನಿಬಿಡ ಪ್ರದೇಶವಾದ ಏಟ್ರಿಯಾ ಹೋಟೆಲ್ ಎದುರಿಗೇ ಮಹಾಂತೇಶ್ ಅವರನ್ನು ನೆಲಕ್ಕೆ ಉರುಳಿಸಿಕೊಂಡು ಬಡಿದು ಹಲ್ಲೆ ನಡೆಸಿದ್ದು ಅವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು. ಜೀವಕ್ಕೆ ಬೆಲೆಯೇ ಇಲ್ಲವೇ ಎನ್ನುವಷ್ಟು ಸುಲಭವಾಗಿ ಸೊಳ್ಳೆ ಹೊಡೆದ ರೀತಿಯಲ್ಲಿ ಇಂತಹ ಅಧಿಕಾರಿಗಳನ್ನು ಹೊಡೆಯುವುದನ್ನು ಕಂಡಾಗ ಸರಕಾರೀ ಅಧಿಕಾರಿಗಳಾಗುವವರ ಗತಿ ಮುಂದೇನು ಎಂಬ ಪ್ರಶ್ನೆಕೂಡ ಕಾಡುತ್ತದೆ. ಒಂದುಕಡೆ ರಾಜಕೀಯ ಪ್ರೇರಿತ ಒತ್ತಡಗಳಿಂದ ಎತ್ತಂಗಡಿ ಸಮಸ್ಯೆ-ಅವುಗಳ ಶಮನಕ್ಕೆ ಮತ್ತು ತಮಗೆ ಬೇಕಾದ ಜಾಗಕ್ಕೆ ವರ್ಗಾ ಮಾಡಿಸಿಕೊಳ್ಳಲು ಲಂಚತೆರಬೇಕಾದ ಸಮಸ್ಯೆ, ಇನ್ನೊಂದೆಡೆ ರಾಜಕೀಯ ಇಚ್ಛಾಶಕ್ತಿಗಳ ಕೈವಾಡದಿಂದ ಎದುರಾಗುವ ಪ್ರಾಣ ಭೀತಿ--ಈ ಮೂರರ ನಡುವೆ ಸಾಚಾ ಅಧಿಕಾರಿಗಳ ಸ್ಥಿತಿ ಬಹಳ ಡೋಲಾಯಮಾನ. ಆಡುವುದಕ್ಕಿಲ್ಲ; ಅನುಭವಿಸುವುದು ತಪ್ಪುವುದಿಲ್ಲ!

ದಾಂಡೇಲಿಯಲ್ಲಿ ಮೊಸಳೆ ಪಾರ್ಕ್ ನಿರ್ಮಿಸಿದ್ದನ್ನು ಕೆಲವು ವರ್ಷಗಳ ಹಿಂದೆಯೇ ಕೇಳಿದ್ದೆ. ಅಲ್ಲಿ ಅನೇಕ ಮೊಸಳೆಗಳಿವೆ ಎಂಬುದೂ ಗೊತ್ತಿದ್ದ ವಿಷಯವೇ ಆಗಿತ್ತು. ಆದರೆ ಆ ಪ್ರದೇಶದಲ್ಲಿ ಪೂಜೆ-ಬಲಿ-ಬಾಡೂಟ ಇವುಗಳ ಬಗ್ಗೆ ತಿಳಿದಿರಲಿಲ್ಲ. ಮಹಾರಾಷ್ಟ್ರ ಮೂಲದ ಕೆಲಜನ ಬಲಿಹಾಕಿದ ಕುರಿಯ ಬಾಡೂಟ ನಡೆಸಿ, ಮಿಕ್ಕುಳಿದ ಮಾಂಸವನ್ನು ನದೀಪಾತ್ರದ ಹೊರಗೆ ಚೆಲ್ಲಿ ಮೊಸಳೆಗಳನ್ನು ಕರೆದಿದ್ದಾರೆ. ಮೊಸಳೆಗಳು ಬಂದು ತಿನ್ನುತ್ತಿರುವುದನ್ನು ಅಲ್ಲಿಗೆ ಅನಿರೀಕ್ಷಿತವಾಗಿ ಬಂದ ಮದನ್ ನಾಯಕ್ ಅವರು ಕಂಡಿದ್ದಾರೆ; ಹಾಕಿದವರಿಗೆ ಹಾಗೆ ಹಾಕಬಾರದಿತ್ತು ಎಂದು ಕಿವಿಮಾತು ಹೇಳಿದ್ದಾರೆ. ಎಲ್ಲದಕ್ಕೂ ತಮ್ಮದೇ ಆದ ಧೋರಣೆಯನ್ನು ಕಾಯ್ದೆಯನ್ನೂ ಮಾಡಿಕೊಳ್ಳುವ ಕೆಲವು ಜನ ಇಂತಹ ಸಮಯದಲ್ಲಿ ವಾದಕ್ಕಿಳಿಯುತ್ತಾರೆ. ಮೊಸಳೆ ಪಾರ್ಕಿಗೆ ಸಂಬಂಧಿಸಿದ ಹಿರಿಯ ಅರಣ್ಯಾಧಿಕಾರಿ ತಾನು ಎಂಬುದನ್ನು ಹೇಳಿದಮೇಲೂ "ನೀನ್ಯಾರು ದೊಣ್ಣೆ ನಾಯ್ಕ, ಮಾಡೋಕೆ ಬೇರೇ ಕೆಲಸ ಇಲ್ವಾ?"  ಎಂಬೀ ಥರದ ಮಾತುಗಳು ಹೊರಬಂದಿವೆ. ಮಾತಿಗೆ ಮಾತು ಬೆಳೆದು ತನ್ನ ಖಾಸಗೀ ವಾಹನದಲ್ಲಿ ಕುಳಿತಿದ್ದ ಮದನ್ ನಾಯಕ್ ಅವರನ್ನು ಹೊರಗೆಳೆದು ಜಗಳವಾಡಿ ಹೊಡೆದಿದ್ದಾರೆ. ತಲೆಗೆ, ಎದೆಯ ಭಾಗಕ್ಕೆ ತೀರಾ ಜಾಸ್ತಿ ಎನಿಸುವಷ್ಟು ಪೆಟ್ಟು ತಗುಲಿದ ನಾಯಕರನ್ನು ತ್ವರಿತ ಗತಿಯಲ್ಲಿ ಆಸ್ಪತ್ರೆಗೆ ಸಾಗಿಸುವ ಬದಲು ನಮ್ಮ ಪೋಲೀಸರು ಗಂಟೆಗಳ ಕಾಲ ಠಾಣೆಯಲ್ಲಿ ಕೂರಿಸಿಕೊಂಡು ಮಾಹಿತಿ ಪಡೆದುಕೊಂಡಿದ್ದಾರೆ. ನೋವು ಉಲ್ಬಣಿಸಿ "ತಲೆನೋವು" ಎಂದು ಬಡಬಡಿಸಿದರೂ ಇನ್ನೂ ವಿವರ ಕೇಳುತ್ತಿದ್ದರೇ ಹೊರತು ದವಾಖಾನೆಗೆ ಕರೆದೊಯ್ಯಲಿಲ್ಲ. ತಡವಾಗಿ ಕರೆದೊಯ್ಯುವಷ್ಟರಲ್ಲಿ ಮದನ್ ನಾಯಕ್ ಇಹಲೋಕವನ್ನು ತ್ಯಜಿಸಿದ್ದಾರೆ.     

ಸಂಬಂಧಪಟ್ಟ ಕಡತಗಳಿಗೆ ಕಣ್ಮುಚ್ಚಿ ಸಹಿಮಾಡಲೊಪ್ಪದ ಮತ್ತು ದಾಖಲೆಗಳನ್ನು ಬದಲಾಯಿಸಲು ಅವಕಾಶ ಕೊಡದ ಮಹಾಂತೇಶರ ವಿರುದ್ಧ ಯಾರೋ ಕಿಡಿಕಾರುತ್ತಿದ್ದರೆಂದೂ, ಆಗಾಗ ಧಮಕಿ ಹಾಕುತ್ತಿದ್ದು ಹಿಂದೆ ಮೂರ್ನಾಲ್ಕು ಬಾರಿ ಚಿಕ್ಕಪ್ರಮಾಣದ ಹಲ್ಲೆಗಳು ಮಹಾಂತೇಶ್ ಅವರಮೇಲೆ ನಡೆದಿದ್ದವೆಂದೂ ಕೆಲವು ಬಲ್ಲ ಮೂಲಗಳು ತಿಳಿಸುತ್ತವಾದರೂ, ಯಾರಲ್ಲೂ ಅಧಿಕೃತ ದಾಖಲೆಗಳಾಗಲೀ ಸಾಕ್ಷಿಗಳಾಗಲೀ ಇಲ್ಲ. ಸಹಜವಾಗಿ ಅನೇಕ ಪ್ರಾಮಾಣಿಕ ವ್ಯಕ್ತಿಗಳು ಹೇಳಿಕೊಳ್ಳಲಾಗದಂತಹ ಸನ್ನಿವೇಶಗಳನ್ನು ಹೇಗೋ ನಿಭಾಯಿಸುವಂತೇ ಹಾಗೇ ಮುಂದುವರಿದವರು ಮಹಾಂತೇಶ್. ಮೊನ್ನೆ ಗುನ್ನೆ ನಡೆಯುವ ಕೆಲವು ದಿನಗಳ ಹಿಂದೆ ಕೂಡ ಪ್ರತಿನಿತ್ಯ ಕಾಡುವ-ದೂರವಾಣಿ ಕರೆಗಳು ಬರುತ್ತಿದ್ದು ಅವರು ಖಿನ್ನವದನರಾಗಿದ್ದರು ಎಂದು ಅವರ ಮನೆಯ ಮೂಲಗಳು ತಿಳಿಸುತ್ತವೆ. ಆದರೆ ಯಾರ ಕರೆಗಳು, ಯಾರು ಯಾತಕ್ಕಾಗಿ ಹಾಗೆ ಮಾಡುತ್ತಿದ್ದಾರೆ ಎಂಬುದನ್ನು ಮಹಾಂತೇಶ್ ಯಾರಲ್ಲೂ ಹೇಳಿಕೊಳ್ಳಲಿಲ್ಲ. ಹೇಳಿಕೊಂಡರೂ ಮುಗಿಸುತ್ತಿದ್ದರು; ಹೇಳದೇ ಇದ್ದರೂ ಈಗ ಮುಗಿಸಿದ್ದಾರೆ!  

ದಕ್ಷ ಅರಣ್ಯಾಧಿಕಾರಿಯೋರ್ವರು ನಾಟಾ ಕಳ್ಳಸಾಗಾಣಿಕೆಯಾಗುವುದನ್ನು ಕೇಳಿ ತಿಳಿದು, ರಾತ್ರಿ ಕಾದು ನಿಂತು, ಮಾಲು ತುಂಬಿದ ಲಾರಿಗಳನ್ನು ಹಿಡಿದರೆ, ಕೆಲವೇ ಕ್ಷಣಗಳಲ್ಲಿ ಚರದೂರವಾಣಿಗಳಲ್ಲಿ ಬೇಡದಮಾತುಗಳು ಕೇಳಿಬರುತ್ತವೆ; ಪ್ರಾಮಾಣಿಕ ಅಧಿಕಾರಿಗಳಿಗೆ ಜೀವ ಭಯವನ್ನೊಡ್ಡುವ ರಾಜಕೀಯ ಕುತಂತ್ರಿಗಳು ತಮ್ಮ ಮತ್ತು ತಮ್ಮ ಅನುಯಾಯಿಗಳಿಗೆ ಬೇಕಾದ ಕೆಲಸವನ್ನು ಆ ಮೂಲಕ ಪೊರೈಸಿಕಳ್ಳಲು ಹಿಡಿದ ಮಾಲಿನ ಸಮೇತ ಲಾರಿಗಳನ್ನು ಹಾಗೇ ಬಿಟ್ಟುಬಿಡುವಂತೇ ಆಜ್ಞೆಮಾಡುತ್ತಾರೆ. ಸರಕಾರದ/ಪ್ರಜೆಗಳ ಉಪ್ಪನ್ನವನ್ನು ತಿಂದ ಋಣಕ್ಕೆ ಪ್ರಾಮಾಣಿಕವಾಗಿ ಕೆಲಸಮಾಡುವ ಹಾಗೂ ಇಲ್ಲ, ಮಾಡದೇ ಇರುವ ಹಾಗೂ ಇಲ್ಲ. ಮಾಡಿದರೆ ರಾಜಕೀಯ ಷಡ್ಯಂತ್ರಕ್ಕೆ ಬಲಿಯಾಗಬೇಕು; ಮಾಡದಿದ್ದರೆ ನಾಗರಿಕರಿಂದ ’ನಿಷ್ಪ್ರಯೋಜಕ’ನೆಂಬ ಅವಹೇಳನಕ್ಕೆ ಒಳಗಾಗಬೇಕು. ಪೈಸೆ ತಿನ್ನದೇ ಪ್ರಾಮಾಣಿಕವಾಗಿ ಪಡೆದ ಸಂಬಳದಲ್ಲಿ ಕುಟುಂಬನಡೆಸಿಕೊಂಡು, ವರ್ಗಾವರ್ಗಿಗೆ ಕೊಡುವ ಲಂಚದ ಸಲುವಾಗಿ ಎರಡೆರಡು ವರ್ಷಗಳಿಗೆ ಇಂತಿಷ್ಟು ಎಂದು ದೊಡ್ಡ ಹುಂಡಿ ತಯಾರಿಸಿಟ್ಟುಕೊಂಡು ದುಡಿದ ಪ್ರಾಮಾಣಿಕ ಸಂಬಳದಲ್ಲಿ ಅರ್ಧವನ್ನು ಅದಕ್ಕೆ ಸುರಿಯಬೇಕು!"ನೋಡಪ್ಪಾ ನೀನು ಊಟ ಮಾಡಿದ್ಯೋ ಬಿಟ್ಯೋ ನಮಗದ್ ಬ್ಯಾಡ, ನಮ್ಮ ಹೊಟ್ಟೆಗೆ ಆಹಾರ ಇಡೋದ್ ಕಲೀತಿಯೋ ನಿನಗೂ ಕ್ಷೇಮ, ನಿನ್ನ ಕುಟುಂಬಕ್ಕೂ ಕ್ಷೇಮ" ಎಂಬಂತಹ ಮಾತುಗಳು ಧೂರ್ತ ರಾಜಕಾರಣಿಂದ ಪ್ರಾಮಾಣಿಕ ಅಧಿಕಾರಿಗಳ ಕಿವಿ ತಲುಪಿದಾಗ ’ಬಡವನ ಕೋಪ ದವಡೆಗೆ ಮೂಲ’ ಎನ್ನುವ ರೀತಿಯಲ್ಲಿ ಕೆಟ್ಟ ರಾಜಕಾರಣಿಗಳನ್ನು ಬೇರು ಸಹಿತ ನಿರ್ನಾಮಮಾಡುವ ರೋಷಾವೇಶ ಅಧಿಕಾರಿಗಳ ಒಳತೋಟಿಯಲ್ಲಿ ಹರಿಯುತ್ತದೆ; ಪ್ರಾಮಾಣಿಕತೆಗೆ ಸಿಕ್ಕ ಅಗೌರವಕ್ಕೆ ಅವರ ರಕ್ತ ಕೊತಕೊತ ಕುದಿಯತೊಡಗುತ್ತದೆ. ಆದರೂ ನಿರ್ವಾಹವಿಲ್ಲದೇ ಸಹಿಸಿಕೊಂಡಿರಬೇಕಾಗುತ್ತದೆ; ತನಗಲ್ಲದಿದ್ದರೂ ತನ್ನನ್ನೇ ನಂಬಿದ ಸಂಸಾರಕ್ಕೆ ಆದಾಯಮೂಲ ಬತ್ತಿಹೋಗಬಹುದಾದ ಕಾರಣದಿಂದ ಹೆದರಿ ಸುಮ್ಮನಾಗುತ್ತಾರೆ.  

ಅಧಿಕಾರಿಯೊಬ್ಬರು ನನ್ನಲ್ಲಿ ಹೇಳುತ್ತಿದ್ದರು: ವಿಧಾನಸೌಧದಲ್ಲಿರುವ ಕುರ್ಚಿಗಳೆಲ್ಲಾ ಕಾಸು ಕೇಳುತ್ತವೆ ಎಂದು! ಹರಿದ ಪೈಜಾಮಾದಲ್ಲಿ, ೧೯೮೦ ರಲ್ಲಿ ನಮ್ಮೂರ ಕಡೆಗೆ "ಚುನಾವಣೆಗೆ ನಿಲ್ಲುತ್ತೇನೆ ದಯಮಾಡಿ ಮತನೀಡಿ" ಎಂದು ಬೇಡುತ್ತಿದ್ದ ಬಿಳಿತಲೆಯೊಂದು, ದಶಕದ ಹಿಂದೆ ಮಂತ್ರಿಯಾಗಿದ್ದು ಇಂದು ಕೈಪಡೆಯಲ್ಲಿದೆ. ಉತ್ತರಕರ್ನಾಟಕದ ನೆರೆಪೀಡಿತರಿಗೆ ಸಾರ್ವಜನಿಕರಿಂದ ದೇಣಿಗೆಯಾಗಿ ಬಂದ, ’ಕೈಬಳಗ’ ಸಂಗ್ರಹಿಸಿದ ನಿಧಿಯಲ್ಲಿ ಒಂದಷ್ಟನ್ನು ಬಸಿದುಕೊಂಡು ನುಂಗಿದ ’ಹೆಗ್ಗಳಿಕೆ’ಗೆ ಪಾತ್ರವಾದ ಆ ತಲೆ ಅತ್ಯಂತ ಕೆಟ್ಟ ತಲೆ ಎಂಬುದಾಗಿ ಕೇಳಿದ್ದೇನೆ. "ಬಾರೊ ಬೋಳೀಮಗನೆ ಸೂಟ್ ಕೇಸ್ ತಂದಿದೀಯಾ ?" ಎಂದೇ ಅಧಿಕಾರಿಗಳನ್ನು ಮಾತನಾಡಿಸುತ್ತಿದ್ದ ಆ ಮಾಜಿ ಮುಂದೆ ಮತ್ತೆ ಹಾಲಿಯಾಗಲೂ ಬಹುದು-ಯಾಕೆಂದರೆ ಇದು ಪ್ರಜಾತಂತ್ರ! ಹಾಡಾ ಹಗಲೇ ಮಾಡಿದ ಘನತರವಾದ ಅಪರಾಧಗಳು ಪ್ರಜೆಗಳ ಮನಸ್ಸಿನಿಂದ ಮಾಯವಾಗಿಬಿಡುತ್ತವೆ. ಅಪರಾಧೀ ಹಿನ್ನೆಲೆಯುಳ್ಳದಿದ್ದರೆ ರಾಜಕಾರಣಿಗಳಾಗುವುದು ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿ ಇದೆ; ಒಂದೊಮ್ಮೆ ಶಾಸಕರೋ ಮಂತ್ರಿಯೋ ಆದರೂ, ಕೊಟ್ಟ ಖಾತೆ ತೆಗೆದುಕೊಳ್ಳಬೇಕು, ಪಕ್ಷದಲ್ಲಿ ಪರರು ಹೇಳಿದ್ದನ್ನು ಕೇಳಿಕೊಂಡು ಬಿದ್ದಿರಬೇಕು-ಬಾಯಿ ಬಿಟ್ಟರೋ ಖಾತೆ ಮಗುಚಿಬಿದ್ದು ಶಾಸಕಸ್ಥಾನಕ್ಕೆ ರಾಜೀನಾಮೆ ಕೊಡಿಸುವವರೆಗಿನ ಜವಾಬ್ದಾರಿಯನ್ನು ಮಿಕ್ಕುಳಿದ ಭಕಗಳೇ ಹೊರುತ್ತವೆ! ಹಿಂದೆ ಯಾವುದೋ ಕಾವ್ಯದಲ್ಲಿ ಓದಿದ್ದೆ ಭಕ, ಘೂಕ, ಬಲ್ಲುಕ, ಜಂಬುಕ ಮೊದಲಾದ ಪ್ರಾಣಿಗಳು ಲೋಹಿತಾಶ್ವನನ್ನು ಅಟ್ಟಾಡಿಸಿ ತಿಂದವೋ ಏನೋ ಇನ್ನೂ ಬರಲಿಲ್ಲಾ ಎಂದು ಚಂದ್ರಮತಿ ಪ್ರಲಪಿಸುವ ಹಂತ ಅದು. ಇವತ್ತು ಆ ಎಲ್ಲಾ ’ಪ್ರಾಣಿಗಳು’ ವಿಧಾನಸೌಧದಲ್ಲೇ ಕಾಣಸಿಗುತ್ತವೆಯೇ ಹೊರತು ಕಾಡುಗಳಲ್ಲಿ ಅವುಗಳ ವಂಶ ನಿರ್ವಂಶವಾಗಿ ಹೋಗಿದೆ.    

ಇನ್ನೊಂದು ಹೊಸ ಸಂಗತಿಯೆಂದರೆ, ಎಫ್.ಐ.ಆರ್ ದಾಖಲಿಸಿಕೊಳ್ಳುವಾಗ ಇವತ್ತಿನ ಕೆಲವು ಠಾಣೆಗಳಲ್ಲಿ ಆರಕ್ಷಕರು ನೋವುಂಡವರಲ್ಲಿ ಹೀಗೇ ಬರೆಯಿರಿ ಎಂದು ತಾಕೀತುಮಾಡುತ್ತಾರೆ! ವಾರದ ಹಿಂದೆ ನಮ್ಮ ಏರಿಯಾದ ಒಬ್ಬರ ಮನೆಯಲ್ಲಿ ಕಳ್ಳತನ ನಡೆಯಿತು. ಯಜಮಾನ ದುಬೈಯಲ್ಲಿ ಕೆಲಸಮಾಡುತ್ತಾರೆ; ಇಲ್ಲಿ ಅಮ್ಮ-ಮಗ ಮಾತ್ರ ಇರುತ್ತಿದ್ದರು. ಮಗನಿಗೆ ರಜಾಕಾಲವಾದ್ದರಿಂದ ಅಮ್ಮ-ಮಗ ಮನೆಗೆ ಬೀಗ ಹಾಕಿ ಊರಿಗೆ ಹೋಗಿದ್ದರಂತೆ. ಮನೆಯ ಮೇಲ್ಗಡೆ ಇರುವ ಪರಿಚಿತರ ಮನೆಯಲ್ಲಿ ಕೀಲಿ ನೀಡಿದ್ದು ಆಗಾಗ ನೋಡಲು ತಿಳಿಸಿದ್ದರಂತೆ. ಇನ್ನೇನು ಅವರು ಹಿಂದಿರುಗಿ ಬರುತ್ತಾರೆ ಎನ್ನುವ ದಿನ ಕುಡಿಯುವ ನೀರು ಬಿಂದಿಗೆ ತುಂಬಿಸಿಡಲು ಆ ಪರಿಚಿತ ಮಹಿಳೆಗೆ ಕರೆಮಾಡಿದ್ದಾರೆ. ಕೀಲಿ ಹೊಂದಿದ್ದ ಮಹಿಳೆ ಕೆಳಗಡೆ ಮನೆಯ ಬಾಗಿಲು ತೆರೆದು ನೀರು ತುಂಬಿಸಬೇಕು ಎಂದುಕೊಂಡರೆ ಮನೆಯ ಹಿಂದಿನ ಬಾಗಿಲು ತೆರೆದೇ ಇತ್ತು. ಗಲಿಬಿಲಿಗೊಂಡು ಅಡಿಗೆಮನೆಗೆ ಹೋದರೆ ಡಬ್ಬಗಳು ಚೆಲ್ಲಾಪಿಲ್ಲಿಯಾಗಿದ್ದವು. ಹೆದರಿಕಂಗಾಲಾದ ಆ ಮಹಿಳೆ, ಊರಿಂದ ಮರಳುತ್ತಿದ್ದ ಆ ಮನೆಯ ವಾರಸುದಾರಿಣಿಗೆ ತಿಳಿಸಿದ್ದಾರೆ. ನೋಡಿದರೆ ಮನೆ ಕಳ್ಳತನವಾಗಿತ್ತು. ಮನೆಯ ಮುಂಭಾಗದಲ್ಲಿಸುತ್ತಾ ಗ್ರಿಲ್ ಗಳಿದ್ದೂ ಹೊರಗಿನಿಂದ ಯಾರೂ ಬರುವಂತಿರಲಿಲ್ಲ, ಹಿಂದುಗಡೆ ಮಾತ್ರ ಒಂದು ಸಣ್ಣ ಶೀಟ್ ಮನೆ ಇದ್ದು ಅಲ್ಲಿ ಒಬ್ಬ ಪ್ಲಂಬರ್ ಸಂಸಾರ ವಾಸವಿದೆಯಂತೆ. ಹೇಳಿಕೇಳಿ ಪ್ಲಂಬರ್ ವೃತ್ತಿ, ಎದುರಿನ ಮನೆಯಲ್ಲಿ ಯಾರೂ ಇಲ್ಲಾ ಎಂಬುದನ್ನು ಖಚಿತಪಡಿಸಿಕೊಂಡು ತಾವೇ ಏಕೆ ಮಾಡಿರಬಾರದು ಎಂಬುದು ಕಳ್ಳತನಕ್ಕೆ ಒಳಗಾದ ಮಹಿಳೆಯ ಆರೋಪ.  ಹತ್ತು ಸಾವಿರ ನಗದು, ೬ ಜೊತೆ ಕಿವಿಯೋಲೆಗಳು, ದೊಡ್ಡ ಬೆಳ್ಳಿಯ ತಟ್ಟೆ ಸೇರಿದಂತೇ ೪ ಲಕ್ಷ ಮೌಲ್ಯದ ಸಾಮಾನುಗಳು ಕಳ್ಳತನವಾಗಿವೆಯಂತೆ. ಪೋಲೀಸರು ಎಲ್ಲದಕ್ಕೂ ಖರೀದಿಯ ರಶೀದಿ ಕೇಳಿದ್ದಾರೆ. ಬಂದಕಳ್ಳ ಕ್ರೆಡಿಟ್ ಕಾರ್ಡ್ ಸಮೇತ ಎಲ್ಲಾ ರಶೀದಿಗಳಿರುವ ಬ್ಯಾಗನ್ನೂ ಹೊತ್ತುಹೋಗಿದ್ದಾನೆ ಎಂದರೆ ಅರ್ಥವನ್ನೇ ಮಾಡಿಕೊಳ್ಳದ ಪೋಲೀ[ಸ್]ಮಂದಿ "ಕೇವಲ ೨೫ ಸಾವಿರ ಮೌಲ್ಯವೆಂದು" ಬರೆಯಿರಿ ಎಂದಿದ್ದಾರೆ. ಆಭರಣಗಳನ್ನು ಇಟ್ಟುಕೊಂಡಿದ್ದ ಮಹಿಳೆಗೆ ಅಲ್ಲಿ ಸುಮಾರು ಎಷ್ಟು ಮೌಲ್ಯದ ನಗಗಳಿದ್ದವು ಎಂಬುದು ಗೊತ್ತಿರದೇ ಇರುತ್ತದೆಯೇ?

ಇದೇ ರೀತಿಯಲ್ಲಿ, ಪೋಲೀಸರು ಮಹಾಂತೇಶ್ ಪ್ರಕರಣದಲ್ಲೂ ಅದು ಹಲ್ಲೆಯಲ್ಲ ಅಪಘಾತ ಎಂಬ ಹೊಸ ತಿರುವನ್ನು ನೀಡಬಯಸಿದ್ದರು; ಈಗ ಅದು ಇನ್ನೊಂದು ಹೊಸ ತಿರುವಿಗೆ ಸಿಕ್ಕು ಯಾವುದೋ ಕಾಲ್ ಗರ್ಲ್ ಪ್ರಕರಣವೆಂದು ಹೇಳಲ್ಪಡುತ್ತಿದೆ. ಹೊರಗಿನಿಂದ ನೋಡಿದಾಗಲಂತೂ ಮಹಾಂತೇಶ್ ಮೇಲಿನ ಹಲ್ಲೆಯಲ್ಲಿ ರಾಜಕೀಯದವರ ಕೈವಾಡ ಇದೆ ಎಂಬುದು ತೋರಿಬರುತ್ತದೆ; ಅದನ್ನು ಮುಚ್ಚಿಹಾಕುವ ತಂತ್ರಗಳೂ ನಡೆಯುತ್ತಿವೆ ಎಂಬುದು ಮನದಟ್ಟಾಗುತ್ತದೆ. ಈ ಲೇಖನ ಸಿದ್ಧಗೊಳ್ಳುತ್ತಿರುವ ವೇಳೆಯಲ್ಲಿ ಬಿ.ಬಿ.ಎಂ.ಪಿ ಎಂಜಿನೀಯರ್ ಒಬ್ಬರಿಗೆ ಆರುಜನರ ಗುಂಪು ಬೆದರಿಕೆ ಹಾಕಿದ ಸುದ್ದಿ ಬಿತ್ತರಗೊಂಡಿದೆ; ಅದು ಮತ್ಯಾವ ತಿರುವು ಪಡೆದುಕೊಳ್ಳುತ್ತದೋ ತಿಳಿಯದು. ಕೆಲವೊಮ್ಮೆ ಪೋಲೀಸರೂ ರಾಜಕೀಯದವರ ಒತ್ತಡಕ್ಕೆ ಮಣಿದು ಮೂಲಕಥೆಯನ್ನು ’ಕಟ್ಟುಕಥೆ’ಯಾಗಿ ಪರಿವರ್ತಿಸಿದಾಗ ವಕೀಲರುಗಳು ಪೋಲೀಸರಮೇಲೆ ದಾಳಿ ಮಾಡಿದ್ದು ಸರಿಯೇ ಇತ್ತೇನೋ ಅನಿಸುವಷ್ಟು ಸಹನೆಯ ಕಟ್ಟೆ ಒಡೆಯುತ್ತದೆ. ಒಟ್ಟಿನಲ್ಲಿ ಯಾರು ಯಾರನ್ನು ಸಂಭಾಳಿಸಬೇಕು? ಯಾರು ಯಾರಿಗೆ ಪ್ರಾಮಾಣಿಕರಾಗಿರಬೇಕು ಎಂಬುದನ್ನು ಸಮಾಜ ನಿರ್ಧರಿಸಬೇಕಾಗಿದೆ; ಇಲ್ಲದಿದ್ದರೆ ಅಧಿಕಾರಿಗಳೂ ಹತರಾಗುತ್ತಾರೆ, ಅಪಮೌಲ್ಯಗಳೇ ಮೌಲ್ಯಗಳಾಗಿ ರೌಡೀರಾಜ್ಯಭಾರವಾಗುವುದರಲ್ಲಿ ಅನುಮಾನವಿಲ್ಲ, ಇದು ಅನುಮಾನವಿಲ್ಲದ ಹುತ್ತವಾಗಿರುತ್ತದೆ-ಕಾಣಿಸುವ ಹಾವುಗಳು ಕಾಣಕಾಣುತ್ತಲೇ ಕಚ್ಚುವ ಮೊದಲು ಅವುಗಳನ್ನು ನಿರ್ನಾಮ ಮಾಡುವುದು ಸಾರ್ವಜನಿಕರ / ನಾಗರಿಕರ ಮುಂದಿರುವ ಏಕೈಕ ಸೂತ್ರವಾಗಿದೆ. ನಾಗರಿಕರು ಎಚ್ಚೆತ್ತುಕೊಳ್ಳುವರೇ? 

Wednesday, May 23, 2012

ಹಕ್ಕಿಯ ಹೆಗಲೇರಿ ಬಂದವಗೆ ನೋ- ಡಕ್ಕಾ ಮನಸೋತೆ ನಾನವಗೆ...

  
ಚಿತ್ರಋಣ: ಅಂತರ್ಜಾಲ
ಹಕ್ಕಿಯ ಹೆಗಲೇರಿ ಬಂದವಗೆ ನೋ-
ಡಕ್ಕಾ ಮನಸೋತೆ ನಾನವಗೆ...


ಜಗತ್ತಿನಲ್ಲಿ ಎಲ್ಲವನ್ನೂ ಎಲ್ಲರನ್ನೂ ಒಂದೇ ಮುಖದಲ್ಲಿ ಅಥವಾ ಒಂದೇಕೋನದಲ್ಲಿ ಅಳೆಯಲು ಸಾಧ್ಯವಾಗುವುದಿಲ್ಲ. ಹಾಗೊಮ್ಮೆ ವಿಮರ್ಶಿಸುವಾಗ ಹಲವು ಸಲ ಕೂಡಿ, ಕಳೆದು, ಗುಣಿಸಿ, ಭಾಗಿಸಿ, ವಿಭಜಿಸಿ, ಅಳೆದು, ತೂಗಿ ವ್ಯಕ್ತಿತ್ವದ ಪರಾಮರ್ಶೆಗೆ ಬರಬೇಕಾಗುತ್ತದೆ. ಜಗತ್ತನ್ನೇ ಬೆತ್ತಲೆಯಾಗಿಸಿ ನೋಡುವ ಕೆಲವರು ತಮ್ಮ’ಕತ್ತಲೆ’ಯಲ್ಲೇ ಹುಲಿ-ಸಿಂಹಗಳಂತೇ ಘರ್ಜಿಸುವುದನ್ನು ಕಂಡರೆ ನಗಬೇಕೋ ಅಳಬೇಕೋ ಎಂಬ ಸಮಸ್ಯೆ ಸಹಜವಾಗಿ ಪ್ರಾಪ್ತವಾಗುತ್ತದೆ. ಪೇಜಾವರ ವಿಶ್ವೇಶ ತೀರ್ಥ ಸ್ವಾಮಿಗಳು, ಮೊನ್ನೆ ಶಿವಮೊಗ್ಗೆಯಲ್ಲಿ ನಡೆದ ವಿಪ್ರಸಮ್ಮೇಳನದಲ್ಲಿ ಮಾಡಿದ ಭಾಷಣವನ್ನೇ ಹಿಡಿದುಕೊಂಡು, ಅದನ್ನು ಅರ್ಥಮಾಡಿಕೊಳ್ಳಲಾಗದ ತಮ್ಮ ಮಂಕುಬುದ್ಧಿಗೆ ಕನ್ನಡಿ ಹಿಡಿದು, "ಕನ್ನಡದ ಪ್ರಮುಖ ದಿನಪತ್ರಿಕೆ" ಎಂದು ತನ್ನ ಬೆನ್ನನ್ನು ತಾನೇ ಚಪ್ಪರಿಸಿಕೊಂಡ ಪತ್ರಿಕೆಯಲ್ಲಿ ನಿನ್ನೆ ಮೊನ್ನೆ ಬಂದ ಲೇಖನಗಳನ್ನು ಓದಿದರೆ ಯಾವುದು ಬೆತ್ತಲೆ ಮತ್ತು ಯಾವುದು ಕತ್ತಲೆ ಎಂಬುದು ಸ್ವಲ್ಪ ತಿಳುವಳಿಕೆ ಉಳ್ಳವನಿಗೆ ಅರ್ಥವಾಗುತ್ತದೆ. ಸದಾ ’ತಪ್ಪಾಯ್ತು ತಿದ್ಕೋತೀವಿ’ ಎನ್ನುವ ಅಂಕಣವನ್ನೇ ನಡೆಸುವ ಆ ದಿನಪತ್ರಿಕೆಯಲ್ಲಿ ಆ ಅಂಕಣದಲ್ಲಿ ಈ ಸಲುವಾಗಿಯೂ ಕ್ಷಮೆಯಾಚನೆ ಬಂದರೆ ವಿಶೇಷವಲ್ಲ!!

ತಮ್ಮನ್ನೇ ತಾವು ’ಪ್ರಜ್ಞಾನಬ್ರಹ್ಮ’ ಎಂದು ತಿಳಿದುಕೊಂಡ ಮಹಾನುಭಾವರು ಕೆಲವರು ತಮ್ಮ ಮನೋವೈಕಲ್ಯವನ್ನು ದೃಢಪಡಿಸುವುಕ್ಕಾಗಿಯೇ ಬರೆದ  ಬರಹಗಳು ಒಟ್ಟೊಟ್ಟಿಗೆ ಒಂದೇ ಪುಟದಲ್ಲಿ ಪ್ರಕಟಗೊಂಡಿವೆ; ಸುದ್ದಿಯ ಕೊರತೆಯಿಂದ ಹಗ್ಗಜಗ್ಗಾಡುವ ಬರಗಾಲದ ಈ ದಿನಗಳಲ್ಲಿ, ಸಿಕ್ಕ ಇಂತಹ ವಿಷಯಗಳನ್ನೇ ಅನಪೇಕ್ಷಿತವಾಗಿ ಎಳೆದೂ ಎಳೆದೂ ಸಮಾಜದ ಒಂದು ವರ್ಗವನ್ನು ಅವಹೇಳನ ಮಾಡುವುದು ಸುದ್ದಿಸಿಗದ ದಾರಿದ್ರ್ಯವನ್ನು ಬಹಿರಂಗವಾಗಿ ಒಪ್ಪಿಕೊಂಡಂತಾಗುತ್ತದೆ. ಅತಿ ಚಿಕ್ಕ ಮಕ್ಕಳಿಗಾದರೂ ಗೊತ್ತು ಈ ಶ್ಲೋಕ:

’ಸಹನಾವವತು
ಸಹನೌ ಭುನಕ್ತು...’

ಲೇಖನದಲ್ಲಿ ಒಬ್ಬರು ಮಂಡಿಸಿದ್ದಾರೆ ಹೇಗೆಂದರೆ

ಸಹನಾಭವತು
ಸಹನೌಭುನಕ್ತು ....!

ಸಂಸ್ಕೃತವನ್ನು ಹೇಗೆ ಬೇಕಾದರೂ ಬರೆಯಲು ಅದು ನಮ್ಮ ಅಜ್ಜಿಮನೆ ಹಕ್ಕೆಚಡಿಯಲ್ಲ ! ಮಂತ್ರಗಳನ್ನು ಬಳಸಲು ಅವುಗಳ ಪೂರಕ ಮಾಹಿತಿ ಬೇಕಾಗುತ್ತದೆ. ಸರಿಯಾದ ಮಾಹಿತಿ ಇಲ್ಲದೇ ಸ್ವಾಮಿಗಳಿಗೇ ಸವಾಲೆಸೆಯುವುದು ಎಂಥಾ ದುರದೃಷ್ಟಕರವೆಂದರೆ ಪತ್ರಿಕೆಯ ಮೌಲ್ಯಮಾಪನಮಾಡುವ ಕಾಲದಲ್ಲಿ ನಾವು ಮುಂದಾಗಬೇಕಾಗಿದೆ. ಕನ್ನಡದ ಇನ್ನೊಂದು ದಿನಪತ್ರಿಕೆಯಲ್ಲಿ ಇಂದು ಬಂದ ಲೇಖನದಲ್ಲಿ ಸ್ವಾಮಿಗಳು ಹೇಳಿದ ಮಾತುಗಳ ಬಗ್ಗೆ ಸಮರ್ಪಕ ವಿಶ್ಲೇಷಣೆಗಳು ಆಧಾರ ಸಹಿತವಾಗಿ ದೊರೆತಿವೆ. ವಿಷಯವಿಷ್ಟೇ : ಸಹಪಂಕ್ತೀ ಭೋಜನ! ಸಹಪಂಕ್ತೀ ಭೋಜನ ಇವತ್ತಿನ ದಿನದಲ್ಲಿ ಸ್ವಾಗತವೇ. ಅದನ್ನು ಯಾರೂ ಅಲ್ಲಗಳೆಯುವುದಿಲ್ಲ. ಆದರೆ ಅಲ್ಲಿ ದೊರೆಯಬಹುದಾದ ಸಲುಗೆಯಿಂದ, ಪ್ರೀತಿಯಿಂದ ಶಾಕಾಹಾರಿಗಳಾದವರು  ಮಾಂಸಾಹಾರಿಗಳಾಗುವ ಅಪಾಯವಿದೆ ಎಂಬ ವಾದ ಸುಳ್ಳಲ್ಲ.

ತುಸು ವರ್ಷಗಳ ಹಿಂದಕ್ಕೆ ಬ್ರಾಹ್ಮಣರ ಮನೆಗಳಲ್ಲಿ ಈರುಳ್ಳಿ, ಬೆಳ್ಳುಳ್ಳಿ, ಬಸಲೆಸೊಪ್ಪು ಇಂತಹ ಪದಾರ್ಥಗಳನ್ನು ಔಷಧಕ್ಕೂ ಕೂಡ ಬಳಸುತ್ತಿರಲಿಲ್ಲ! ಇಂದು ಹಾಗಲ್ಲ, ಸಮಾಜದ ಹಲವು ವರ್ಗಗಳ ಜೊತೆ ಸಹಬಾಳ್ವೆ ನಡೆಸುತ್ತಾ ಹಲವು ವೃತ್ತಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ಬ್ರಾಹ್ಮಣರು, ಅನಿವಾರ್ಯವಾಗಿ ಹೋಟೆಲ್ಗಳಲ್ಲೋ ಕ್ಯಾಂಟೀನ್ಗಳಲ್ಲೋ ತಿಂಡಿ-ತೀರ್ಥಗಳನ್ನು ಸ್ವೀಕರಿಸತೊಡಗಿದ್ದಾರೆ. ಆಹಾರಗಳ ತಯಾರಿಯನ್ನೇ ವ್ಯವಹಾರವನ್ನಾಗಿಸಿಕೊಂಡ ಜಾಗದಲ್ಲಿ ಈರುಳ್ಳಿ-ಬೆಳ್ಳುಳ್ಳಿ ಬಳಕೆಯನ್ನು ನಿಷೇಧಿಸಿ ಎನ್ನಲು ಸಾಧ್ಯವಾಗಲಿಲ್ಲ; ಕ್ರಮೇಣ ಅವುಗಳ ರುಚಿ ಮೈಗೊಂಡು ಅವುಗಳು ಇಲ್ಲದೇ ಅಡುಗೆಯೇ ಆಗುವುದಿಲ್ಲ ಎಂಬಷ್ಟು ಆತುಕೊಂಡು ಈಗ ಬಹುತೇಕ ಬ್ರಾಹ್ಮಣರ ಮನೆಗಳಲ್ಲಿ ಈರುಳ್ಳಿ-ಬೆಳ್ಳುಳ್ಳಿಗಳ ಬಳಕೆ ಕಾಯಮ್ಮಾಗಿ ಹೋಗಿದೆ! ಯಾಕೆ ಅವುಗಳನ್ನು ಬಳಸಬಾರದು ಎಂದಿದ್ದರು ಎಂದು ತಿಳಿಯುವುದಾದರೆ ವೇದವಿಜ್ಞಾನದ ಮೂಲಗಳ ಪ್ರಕಾರ ತಿಳಿದು ಬರುವ ಅಂಶ ಹೀಗಿದೆ: ಅವು ಕಾಮೋತ್ತೇಜಕ ಪದಾರ್ಥಗಳು. ಇಂದ್ರಿಯನಿಗ್ರಹವನ್ನೇ ಗುರಿಯಾಗಿಸಿಕೊಂಡು ಅಧ್ಯಯನ, ಅಧ್ಯಾಪನ ಮತ್ತು ಅನುಸರಣ ಇವುಗಳಲ್ಲಿ ನಿರತರಾದ ಮಂದಿಗೆ ನಿಗ್ರಹ ಶಕ್ತಿಯನ್ನು ಕುಂದಿಸುವ ಕೆಲಸ ಮಾಡುತ್ತವೆ ಎಂಬುದು ಈ ಬಳಕೆಯ ನಿಷೇಧದ ಹಿಂದಿರುವ ಸತ್ಯವಾಗಿತ್ತು. ಇವತ್ತು ಅಧ್ಯಾಪನರಂಗದಲ್ಲಿ ಇರುವ ಬಹಳ ವ್ಯಕ್ತಿಗಳು ಕಾಮುಕರಾಗಿದ್ದಾರೆ ಮತ್ತು ನಾವದನ್ನು ವಿಶ್ವವಿದ್ಯಾಲಯಗಳ ಮಟ್ಟದಲ್ಲೂ ಕಾಣುತ್ತಿದ್ದೇವೆ ಎಂದರೆ ಅದಕ್ಕೆ ಕಾರಣ ಅವರ ಆಹಾರ-ವ್ಯವಹಾರದ ವೈಖರಿಯೇ ಆಗಿರುತ್ತದೆ! 

ಆಹಾರಕ್ಕೂ ಆಚರಣೆಗೂ ಅದೆಲ್ಲಿಯ ಸಂಬಂಧ ಎಂದು ಅಸಡ್ಡೆ ಮಾಡುವವರಿಗೆ ಒಂದು ಉದಾಹರಣೆ: ’ಮದ್ಯಪಾನಮಾಡಿ ವಾಹನ ಚಲಿಸಬೇಡಿ’ ಎಂಬುದು ಸಂಚಾರೀ ನಿಯಮಗಳಲ್ಲಿ ಒಂದು. ಮದ್ಯಪಾನ ಮಾಡುವುದಕ್ಕೂ ವಾಹನ ಚಲಾಯಿಸುವಿಕೆಗೂ ಏನು ಸಂಬಂಧ? ಅದನ್ನು ನಾನು ಹೊಸದಾಗಿ ವಿವರಿಸುವುದು ಬೇಡಾ ಎನಿಸುತ್ತದೆ. ಅದೇ ರೀತಿ ವೇದಾಗಮ ಶಾಸ್ರ್ರಗಳನ್ನು ಪ್ರತ್ಯಕ್ಷವಾಗಿ/ಪರೋಕ್ಷವಾಗಿ ಪ್ರತಿನಿತ್ಯ ಬಳಸುವ ಬ್ರಾಹ್ಮಣ ವರ್ಗದ ಜನ ಸಹಪಂಕ್ತೀ ಭೋಜನದಲ್ಲಿ, ದೊರೆತ ಇತರರ ಸಲುಗೆಯನ್ನುಪಯೋಗಿಸಿಕೊಂಡು,  ನಿಧಾನವಾಗಿ ಮದ್ಯ-ಮಾಂಸಗಳ ಬಳಕೆಯ ಕಡೆಗೆ ವಾಲಬಹುದು ಎಂಬ ಅಂಶ ನಿಜಕ್ಕೂ ಚಿಂತನಾರ್ಹವೇ. ಯಾಕೆಂದರೆ ಅದು ಈಗಾಗಲೇ ನಡೆಯುತ್ತಿದೆ. ಲೌಕಿಕದ ಕಡೆಗೆ ಗಾಢವಾಗಿ ಎಳೆದು ಇಂದ್ರಿಯಗಳನ್ನು ಸಬಲಗೊಳಿಸುವ ಕಾರ್ಯವನ್ನು ಈ ಎರಡು ಪದಾರ್ಥಗಳು ಮಾಡುತ್ತವೆ ಎಂಬುದರಲ್ಲಿ ಅನುಮಾನವಿಲ್ಲ. ಹಾಗಾಗಿ ಸಂಸರ್ಗದ ಸಲುಗೆ ಆಹಾರಕ್ರಮಕ್ಕಿರುವ ಅಡ್ಡಬೇಲಿಯನ್ನು ಹಾರಿ ಕಾಳರಾತ್ರಿಯಲ್ಲಿ ಕಾಳಸಂತೆಯಲ್ಲಿ ಬಿಕರಿಯಾಗುವ ಮದ್ಯ-ಮಾಂಸಗಳನ್ನು ಸ್ವೀಕರಿಸುವಲ್ಲಿಯವರೆಗೂ ಬ್ರಾಹ್ಮಣ ಜನರನ್ನು ಸೆಳೆದೊಯ್ಯಬಹುದು ಎಂಬ ಶಂಕೆಯಿಂದ ಸ್ವಾಮಿಗಳು ಹಾಗೆ ಹೇಳಿದ್ದಾರೆ.   

ನನ್ನ ಬಹುತೇಕ ಸ್ನೇಹಿತರು ಎಲ್ಲರೂ ಮಾಂಸಾಹಾರಿಗಳೇ. ಹಾಗಂತ ಅವರು ಸುಸಂಸ್ಕೃತರಲ್ಲ ಎಂದು ನಾನೆಂದೂ ಅನ್ನುವುದಿಲ್ಲ. ನಮ್ಮಲ್ಲಿರುವ ಆ ಗಾಢ ಸ್ನೇಹಭಾವಕ್ಕೆ ಯಾವಕೊರತೆಯೂ ಇಲ್ಲ. ಆದರೆ ಮಾಂಸಾಹಾರಕ್ಕೆ ನನ್ನನ್ನು ಅವರು ಕರೆಯುವುದಿಲ್ಲ, ಶಾಕಾಹಾರಿಗಳಾಗಿ ಎಂಬ ಒತ್ತಾಯವನ್ನು ನಾನಂತೂ ಅವರಮೇಲೆ ಹೇರಲಿಲ್ಲ. ಕೆಲವು ವ್ಯವಹಾರಗಳಲ್ಲಿ ನಿರತರಾದ ವ್ಯಕ್ತಿಗಳಿಗೆ ಆ ಯಾ  ವ್ಯವಹಾರಕ್ಕೆ ಸಂಬಂಧಿಸಿದಂತೇ ನಿಯಮಗಳಿರುವುದು ಸೂಕ್ತ. ಗಡದ್ದಾಗಿ ರಾತ್ರಿ ಊಟ ಹೊಡೆದ ವಿದ್ಯಾರ್ಥಿ ಓದಲು ಕುಳಿತರೆ ಆತನಿಗೆ ಓದಿನ ಬದಲಿಗೆ ನಿದ್ದೆ ಹತ್ತುತ್ತದೆ. ಇಡೀದಿನ ಅದೂ ಇದೂ ತಿನ್ನುತ್ತಾ

ಆಚೆಮನೆ ಸುಬ್ಬಮ್ಮಂಗೆ ಏಕಾದಶಿ ಉಪವಾಸ
ಏನೋ ಸ್ವಲ್ಪ ತಿಂತಾರಂತೆ ಅವಲಕ್ಕಿ-ಉಪ್ಪಿಟ್ಟು-ಪಾಯಸ

ಅಂದಹಾಗೇ ಹೊಟ್ಟೆತುಂಬಿಸಿಕೊಂಡು ಜಾಗರಣೆ ಮಾಡುವುದು ಸಾಧ್ಯವಾಗುವುದಿಲ್ಲ! ಅದಕ್ಕೇ ಜಾಗರಣೆಯ ದಿನವಾದ ಶಿವರಾತ್ರಿಯಂದು ಲೋಕಕ್ಕೆ ಉಪವಾಸವನ್ನು ಹೇಳಿದ್ದಾರೆ. ಅಧಿಕಾರಿಗಳಿಗೆ, ಸಂಸದರಿಗೆ, ಶಾಸಕರಿಗೆ, ರಾಜ್ಯಪಾಲ-ರಾಷ್ಟ್ರಪತಿ ಈ ಎಲ್ಲರಿಗೆ ಹೀಗ್ಹೀಗೆ ನಡೆದುಕೊಳ್ಳಬೇಕು ಎಂಬ ನಿಯಮ-ನಿಬಂಧನೆಗಳಿವೆ. ಅದನ್ನು ಸರಕಾರದ ಭಾಷೆಯಲ್ಲಿ ’ಪ್ರೋಟೋಕಾಲ್’ ಎನ್ನುತ್ತಾರೆ. ಅಂತಹ ಪ್ರೋಟೊಕಾಲ್ ದೂರವಿರಿಸಿ ಬೇಕಾಬಿಟ್ಟಿ ವರ್ತಿಸಿದರೆ ವ್ಯವಸ್ಥೆ ಹದಗೆಡುತ್ತದೆ, ಸಮಾಜದ ಸ್ಥಿತಿ ಉದ್ವಿಗ್ನವಾಗುತ್ತದೆ, ಆಡಳಿತ ಯಂತ್ರ ತನ್ನ ಸ್ವರೂಪವನ್ನೂ ಮೌಲ್ಯವನ್ನೂ ಕಳೆದುಕೊಳ್ಳುತ್ತದೆ. ಸಹಸ್ರಮಾನಗಳಿಂದ ವಂಶಪಾರಂಪರ್ಯವಾಗಿ ಮದ್ಯ-ಮಾಂಸಗಳನ್ನು ಬಳಸದೇ ಇದ್ದ ಜನಾಂಗಕ್ಕೆ ಹೊಸದಾಗಿ ಅದನ್ನು ಬಳಸುವ ಬುದ್ಧಿ ಪ್ರಚೋದನೆಗೊಂಡರೆ ಅವರು ನಡೆಸಬೇಕಾದ ಕೈಂಕರ್ಯದಲ್ಲಿ ಸಹಜವಾಗಿ ವ್ಯತ್ಯಾಸಗಳನ್ನು ಕಾಣಬೇಕಾಗಿ ಬರುತ್ತದೆ. ಪೋಲೀಸರೇ ಕಳ್ಳರಾದರೆ, ಬೇಲಿಯೇ ಎದ್ದು ಹೊಲವನ್ನು ಮೇದರೆ ಹೇಗಾಗಬೇಡ? ಅಂದಹಾಗೇ ಅಲ್ಲಲ್ಲಿ ಅಪರೂಪಕ್ಕೆ ನಮ್ಮ ಪೋಲೀಸರೂ ಎಣ್ಣೆಹಾಕಿ ನರ್ತಿಸಿ ತಮ್ಮ ’ದಿವ್ಯಾನುಭೂತಿ’ಯನ್ನು ಪ್ರಸ್ತುತಪಡಿಸುವುದನ್ನೂ ಕಂಡಿದ್ದೇವೆ!

ಹಿಂದೂಜನ ಒಪ್ಪಿರುವ ಅಪ್ಪಿರುವ, ಸನಾತನವಾದ ಗ್ರಂಥ ಭಗವದ್ಗೀತೆಯ ಹದಿನೈದನೇ ಅಧ್ಯಾಯ-’ಪುರುಷೋತ್ತಮ ಯೋಗ’ ಎಂಬುದರಲ್ಲಿ ಜಗನ್ನಿಯಾಮಕ ಹೀಗೆ ಬೋಧಿಸಿದ್ದಾನೆ :   

ಅಹಂ ವೈಶ್ವಾನರೋ ಭೂತ್ವಾ ಪ್ರಾಣಿನಾಂ ದೇಹಮಾಶ್ರಿತಃ |
ಪ್ರಾಣಾಪಾನಸಮಾಯುಕ್ತಃ ಪಚಾಮ್ಯನ್ನಂ ಚತುರ್ವಿಧಂ ||

ಎಲ್ಲಾ ಜೀವಿಗಳ ದೇಹದಲ್ಲಿ ನಾನೇ ಸ್ಥಿತನಾಗಿದ್ದೇನೆ ಮತ್ತು ಪ್ರಾಣ ಮತ್ತು ಅಪಾನಗಳಿಂದ ಕೂಡಿದ ವೈಶ್ವಾನರ ಅಗ್ನಿರೂಪಿಯಾಗಿ ನಾಲ್ಕು ಪ್ರಕಾರದ ಅನ್ನವನ್ನು ಜೀರ್ಣವಾಗಿಸುತ್ತೇನೆ.

ಸರ್ವಸ್ಯ ಚಾಹಂ ಹೃದಿ ಸಂನಿವಿಷ್ಟೋ
ಮತ್ತಃ ಸ್ಮೃತಿರ್ಜ್ಞಾನಮಪೋಹನಂ ಚ|
ವೇದೈಶ್ಚ ಸರ್ವೈರಹಮೇವ ವೇದ್ಯೋ
ವೇದಾಂತಕೃದ್ವೇದವಿದೇವ ಚಾಹಮ್ ||

ನಾನೇ ಎಲ್ಲಾ ಪ್ರಾಣಿಗಳ ಹೃದಯದಲ್ಲಿ ಅಂತರ್ಯಾಮಿ ರೂಪದಿಂದ ಸ್ಥಿತನಾಗಿದ್ದೇನೆ; ನನ್ನಿಂದಲೇ ಸ್ಮೃತಿ, ಜ್ಞಾನ ಉಂಟಾಗುತ್ತದೆ ಹಾಗೂ ಸಂಶಯಾದಿ ದೋಷಗಳ ನಿವಾರಣೆಯಾಗುತ್ತದೆ. ಎಲ್ಲಾ ವೇದಗಳ ಮೂಲಕ ನಾನೇ ತಿಳಿಯಲು ಯೋಗ್ಯನಾಗಿದ್ದೇನೆ ಹಾಗೂ ವೇದಾಂತದ ಕರ್ತೃ ಮತ್ತು ವೇದಗಳನ್ನು ಬಲ್ಲವನೂ ಸಹ ನಾನೇ ಆಗಿದ್ದೇನೆ.  

ವೇದಗಳನ್ನು ಓದುವ, ಆಸ್ವಾದಿಸುವ, ಆಚರಿಸುವ, ಅನುಮೋದಿಸುವ, ಗೀತೆಯ ನುಡಿಗಳನ್ನು ಪಾಲಿಸುವ ಬಹುತೇಕ ಬ್ರಾಹ್ಮಣರಿಗೆ ಇದರ ಅರ್ಥ ತಿಳಿದಿರುತ್ತದೆ. ಬ್ರಹ್ಮಾಂಡದ ಪ್ರತೀ ಜೀವಿಯಲ್ಲೂ ತಾನೇ ಇದ್ದೇನೆ ಎಂದ ಭಗವಂತನ ಮಾತನ್ನು ಒಪ್ಪಿಕೊಂಡಾಗ ಇನ್ನೊಂದು ಪ್ರಾಣಿಯನ್ನು ಆಹಾರವಾಗಿ ಬಳಸಿಕೊಳ್ಳಲು ಆ ದೇಹ-ಜೀವಗಳ ಬೇರ್ಪಡಿಸುವಿಕೆ ಮನಸ್ಸಿಗೆ ಒಪ್ಪಿತವಾಗುವ ವಿಷಯವಲ್ಲ. ಆಹಾರವಾಗಿ ಹಲವು ಪದಾರ್ಥಗಳು ಸಿಗುತ್ತವೆ. ಮಾಂಸವೇ ಆಗಬೇಕೆ? ಇಲ್ಲವಲ್ಲ. ಜೀವವೇ ಇಲ್ಲದ ಅಥವಾ ಜೀವನ ಮುಗಿದ ಸಸ್ಯಜನ್ಯ ಪದಾರ್ಥಗಳನ್ನು ತಮ್ಮ ಆಹಾರವನ್ನಾಗಿಸಿಕೊಂಡವರು ಬ್ರಾಹ್ಮಣರು. ಸತತ ತೌಲನಿಕ ಅಧ್ಯಯನದಿಂದ, ಮಾಂಸ ಪದಾರ್ಥಗಳ ಬಳಕೆ ಅಜ್ಞಾನ-ಅಂಧಕಾರ, ಅಹಂಕಾರ, ಪ್ರಮಾದ, ಆಲಸ್ಯ ಮತ್ತು ನಿದ್ರೆಯನ್ನು ವೃದ್ಧಿಸಿ ಮನುಷ್ಯನ ದೇಹಾಭಿಮಾನವನ್ನು ಹೆಚ್ಚಿಸಿ ಅದರಿಂದ ಜೀವಾತ್ಮನನ್ನು ಬಂಧಿಸುತ್ತದೆ ಎಂಬುದು ತಿಳಿದುಬಂದಿದೆ. 

ಹೀಗಾಗಿ ಸರ್ವಪ್ರಜಾ ಸಂಸರ್ಗದಿಂದ, ಸಂಗದಿಂದ, ಊಟದಲ್ಲಿ ಒಟ್ಟಿಗೆ ಕುಳಿತು ಮದ್ಯಮಾಂಸಾದಿಗಳ ಬಗೆಗೆ ಹೇಳಿಕೇಳಿ ಮಾಡಿಕೊಳ್ಳಬಹುದಾದ ಸನ್ನಿವೇಶ ಉಂಟಾಗಬಹುದೆಂಬ ಕಾರಣದಿಂದ ಪಂಕ್ತಿಯಲ್ಲಿ ಭೇದಮಾಡಿದರೇ ಹೊರತು, ಇತರೆ ಜನಾಂಗಗಳನ್ನು ಹೀನವಾಗಿ ಕಾಣುವ ದುರುದ್ದೇಶದ ನಡೆ ಅದಲ್ಲ. ವೈಜ್ಞಾನಿಕವಾಗಿ ಸ್ವಚ್ಛತೆಯ ಸಲುವಾಗಿ ಮಡಿಯನ್ನೂ, ಸಾತ್ವಿಕ ಆಹಾರಕ್ರಮದ ಸಲುವಾಗಿ ಪಂಕ್ತಿಭೇದವನ್ನೂ ನಡೆಸುತ್ತಿದ್ದರು ಎಂಬುದರಲ್ಲಿ ಅನುಮಾನವಿಲ್ಲ. ಇಂದು ನಗರಗಳಲ್ಲಿ ಕೆಲವು ಬ್ರಾಹ್ಮಣರು ಮದ್ಯ-ಮಾಂಸಗಳಲ್ಲಿ ನಿರತರಾಗಿ ತಮ್ಮ ಮೂಲ ಆಶಯಗಳನ್ನು ಮರೆತಿದ್ದಾರೆ; ಲೌಕಿಕ ಜೀವನಕ್ಕೇ ಜಾಸ್ತಿ ಆತುಕೊಂಡಿದ್ದಾರೆ, ಆತ್ಮೋನ್ನತಿಯ ವಿಚಾರ ಕೈಬಿಟ್ಟಿದ್ದಾರೆ. ಸಮಾಜದಲ್ಲಿ ಅಸತ್ಯ, ಕೆಟ್ಟವಿಚಾರ, ಚಟಗಳು, ದುರ್ನಡತೆ ಇವೆಲ್ಲಾ ಬಹಳ ಬೇಗ ಹೇಗೆ ಪ್ರಸಾರವಾಗುತ್ತವೋ ಹಾಗೆಯೇ ಮದ್ಯ-ಮಾಂಸಾದಿಗಳ ಬಳಕೆಯೂ ಕೂಡ. ಮಾಂಸಾಹಾರವನ್ನು ಬಳಸಿದವರೆಲ್ಲಾ ಕೆಟ್ಟವರೆಂದೋ ಅಥವಾ ಸಮಾಜ ಘಾತುಕರೆಂದೋ ನಾನು ಹೇಳುತ್ತಿಲ್ಲ; ಅದೇ ಅವರು ಮಾಂಸಾಹಾರವನ್ನು ತ್ಯಜಿಸಿದ್ದರೆ ಇನ್ನೂ ಉನ್ನತ ಜ್ಞಾನದ ಮಟ್ಟವನ್ನು ಸಾಧಿಸಬಹುದಿತ್ತು ಎಂಬುದು ನನ್ನ ಹೇಳಿಕೆ. ಈ ಜ್ಞಾನ ಕೇವಲ ಲೌಕಿಕ/ಪ್ರಾಪಂಚಿಕ ವ್ಯವಹಾರ ಜ್ಞಾನವಲ್ಲ; ಇಲ್ಲಿ ’ಜ್ಞಾನ’ ಎಂಬ ಪದವನ್ನು ಪಾರಮಾರ್ಥಿಕ ಸಾಧನೆಗೂ ಬಳಸಿಕೊಳ್ಳಲಾಗಿದೆ ಎಂಬುದನ್ನು ಓದುಗರು ಅರಿಯಬೇಕು. ಪಾರಮಾರ್ಥಿಕ ಸಾಧನೆಯನ್ನು ಲೌಕಿಕವಾಗಿ ಅಳೆಯುವ ಯಾವುದೇ ಮಾಪನಗಳಿಲ್ಲ; ಅಂದಮಾತ್ರಕ್ಕೆ ಅದನ್ನು ಅಲ್ಲಗಳೆಯಲಾಗುವುದಿಲ್ಲ!  

ರಜಸ್ತಶ್ಚಾಭಿಭೂಯ ಸತ್ತ್ವಂ ಭವತಿ ಭಾರತ|
ರಜಃ ಸತ್ತ್ವಂ ತಮಶ್ಚೈವ ತಮಃ ಸತ್ತ್ವಂ ರಜಸ್ತಥಾ||

ರಜೋಗುಣ ಮತ್ತು ತಮೋಗುಣಗಳನ್ನು ಅದುಮಿಕೊಂಡು ಸತ್ವಗುಣವು ವೃದ್ಧಿಸುತ್ತದೆ, ಸತ್ವಗುಣ ತಮೋಗುಣಗಳನ್ನು ಅದುಮಿಕೊಂಡು ರಜೋಗುಣವು ವೃದ್ಧಿಸುತ್ತದೆ, ಅಂತೆಯೇ ಸತ್ವಗುಣ ಮತ್ತು ರಜೋಗುಣಗಳನ್ನು ಅದುಮಿಕೊಂಡು ತಮೋಗುಣವು ವೃದ್ಧಿಸುತ್ತದೆ ಎಂದು ಶ್ರೀಕೃಷ್ಣ ಅರ್ಜುನನಿಗೆ ೧೪ನೇ ಅಧ್ಯಾಯ ’ಗುಣತ್ರಯ ವಿಭಾಗಯೋಗ’ದಲ್ಲಿ ವಿವರಿಸಿದ್ದಾನೆ. ಕೃಷ್ಣಹೇಳಿದ ಮೂರರಲ್ಲಿ ಮೊದಲನೆಯ ರೀತಿಯನ್ನು ನಾವು ಅನುಸರಿಸಿದರೆ ಇಂದ್ರಿಯನಿಗ್ರಹ, ಅರಿಷಡ್ವರ್ಗಗಳ ಹತೋಟಿ ತಕ್ಕಮಟ್ಟಿಗೆ ಸಾಧ್ಯವಾಗುತ್ತದೆ ಎಂಬುದು ಮಹಾತ್ಮರ/ತಪಸ್ವಿಗಳ ಅನುಭವದ ಮಾತಾಗಿದೆ. ಅದನ್ನು ಸಾಧ್ಯವಾಗಿಸಿಕೊಳ್ಳುವಲ್ಲಿ ಬ್ರಾಹ್ಮಣವರ್ಗ ನಡೆದು ಬಂದಿತ್ತು. ದೇಶಾಂತರ ಪರ್ಯಟನೆಯಲ್ಲಿ ಬಂಗಾಳದ ಕಡೆಗೆ ನೆಲೆನಿಂತ ಬ್ರಾಹ್ಮಣವರ್ಗ ಸಂಸರ್ಗದ ಫಲವಾಗಿ ಮಾಂಸಾಹಾರವನ್ನು ಸ್ವೀಕರಿಸತೊಡಗಿತು! ಇವತ್ತಿಗೂ ಬಂಗಾಳದ ಬ್ರಾಹ್ಮಣರಿಗೂ ನಮ್ಮಲ್ಲಿನ ಬ್ರಾಹ್ಮಣರಿಗೂ ಸಹಪಂಕ್ತೀ ಭೋಜನ ನಡೆಯುವುದಿಲ್ಲ!! ಸಹಪಂಕ್ತೀ ಭೋಜನ-ನಿಷೇಧ ಜಾತಿಯಿಂದ ಅಥವಾ ಜಾತಿಗಳ ಸಲುವಾಗಿ ಜನಿಸಿದ್ದಲ್ಲ, ಬದಲಾಗಿ ಆಹಾರನೀತಿಯಿಂದ ಜನಿಸಿದ್ದಾಗಿದೆ; ಅಲ್ಲಿ ಅನ್ಯ ಜನಾಂಗವನ್ನು ಅವಹೇಳನಮಾಡುವ ಉದ್ದೇಶ ಇರುವುದಿಲ್ಲ. 

ಪತ್ರಿಕೆಯಲ್ಲಿ ಬರೆದ ಮಹಾನುಭಾವನೊಬ್ಬ ಋಷಿ ದೂರ್ವಾಸರ, ಕಶ್ಯಪರ ಮತ್ತು ಇನ್ನಿತರ ಹಲವರ ಮೂಲವನ್ನು ಕೆದಕುತ್ತಾ ಅವರೆಲ್ಲಾ ಮಾಂಸಾಹಾರಿಗಳಾಗಿರಲಿಲ್ಲವೇ ? ಎಂಬ ಪ್ರಶ್ನೆ ಹಾಕಿದ್ದಾನೆ. ನೋಡಿ: ಮಹರ್ಷಿ ವಾಲ್ಮೀಕಿ ಮೂಲದಲ್ಲಿ ಬೇಡನಾಗಿದ್ದುದು ನಮಗೆಲ್ಲಾ ತಿಳಿದೇ ಇದೆ; ಆದರೆ ಬದಲಾದ ಜೀವನದಲ್ಲಿ ಅದೇ ಬೇಡ ಹಕ್ಕಿಗಳ ವಧೆಯನ್ನು ತಾನೇ ನಿಷೇಧಿಸಿದ-ಮಾಂಸಾಹಾರವನ್ನು ವರ್ಜಿಸಿದ,  ’ಮರಾ ಮರಾ ಮರಾ ’ ಎನ್ನುವ ಜಪದಲ್ಲಿ ಧ್ಯಾನಸ್ಥನಾಗಿ ಕುಳಿತು ಜ್ಞಾನಿಯಾದ! ಸಹನೌಭುನಕ್ತು --ಎಂಬಲ್ಲಿ ಸಹನೆಯಿಂದ ಎಲ್ಲರೂ ಭುಂಜಿಸೋಣ ಎಂದರ್ಥವಾಗುತ್ತದೆಯೇ ಹೊರತು ಅದನ್ನೇ ವಿಪರ್ಯಾಸದ ಅರ್ಥಕ್ಕೆ ಬಳಸಿಕೊಳ್ಳಬೇಕಾಗಿಲ್ಲ. ಬದಲಾದ ಪರಿಸರದಲ್ಲಿ ಎಲ್ಲರೊಂದಿಗೆ ಸಹಪಂಕ್ತಿಯಲ್ಲಿ ಬ್ರಾಹ್ಮಣರು ಊಟಮಾಡುತ್ತಾ ಅದೇಷ್ಟೋ ಕಾಲ ಗತಿಸಿದೆ; ಮಾಡುತ್ತಲೇ ಇದ್ದಾರೆ, ಮಾಡುತ್ತಾರೆ. "ಆದರೆ ಊಟದ ಸಮಯದ ಸ್ನೇಹ, ಭಿನ್ನ ಆಹಾರದ ರುಚಿನೋಡುವ ಚಟದೆಡೆಗೆ ಹಚ್ಚದಂತೇ ಎಚ್ಚರವಹಿಸುವುದು ಬ್ರಾಹ್ಮಣರ ಕರ್ತವ್ಯ-ಎಂಬುದನ್ನು ಬ್ರಾಹ್ಮಣರು ಮರೆಯಬಾರದು" ಎಂದು ಶ್ರೀಗಳು ಹೇಳಿದ್ದಾರೆ; ಇದು ರಾಜಕೀಯ ಪ್ರೇರಿತವೂ ಅಲ್ಲ, ಮಾತನ್ನು ಹೊರಳಿಸಲೂ ಇಲ್ಲ ಎಂಬುದನ್ನು ಕಾಗದದ ’ಹುಲಿ’-’ಸಿಂಹ’ಗಳು ತಿಳಿದುಕೊಂಡು ಮಾತಾಡಬೇಕಾಗಿದೆ.

ಇನ್ನೊಂದು ನೋವು ತಂದ ಮಾತೆಂದರೆ. ಮಹಾನುಭಾವನೊಬ್ಬ ಬರೆದಿದ್ದು: ಅನ್ಯ ಜನಾಂಗಗಳಲ್ಲಿ ಮಠಗಳು ಹುಟ್ಟಿಕೊಂಡಮೇಲೆ ಬ್ರಾಹ್ಮಣ ಮಠಗಳಿಗೆ ದಕ್ಷಿಣೆ, ಪಾದಕಾಣಿಕೆ, ದಾನ ಇವೆಲ್ಲಾ ಗಣನೀಯ ಪ್ರಮಾಣದಲ್ಲಿ ಇಳಿಮುಖವಾಗಿದ್ದರಿಂದ ಪೇಜಾವರ ಸ್ವಾಮಿಗಳಂಥವರು ದಲಿತರ ಕೇರಿಗಳಲ್ಲಿ ಪಾದಯಾತ್ರೆ, ಸಂಚಾರ ನಡೆಸುತ್ತಾ ದೀಕ್ಷೆ ಕೊಡುತ್ತೇವೆ ಎನ್ನುತ್ತಾ ಪರೋಕ್ಷವಾಗಿ ಕಾಣಿಕೆ ಎತ್ತಲು ಬರುತ್ತಾರೆ ಎಂದಿದ್ದಾನೆ. ಜಾತೀವಾರು ಮಠಗಳು ತಲೆ ಎತ್ತಿದ್ದು, ಅವು ರಾಜಕೀಯವಾಗಿ ಆ ಯಾ ಜಾತಿಗಳಿಗೆ ಸರಕಾರೀ ಸೌಲಭ್ಯ/ಮಾನ್ಯತೆ/ಮೀಸಲಾತಿ ಇವುಗಳನ್ನು ಕೊಡಿಸಲಿಕ್ಕೆ ಎಂಬುದರಲ್ಲಿ ಸಂದೇಹವಿಲ್ಲ. ಪಾರಮಾರ್ಥಿಕವಾಗಿ ನಡೆಸುವ ಕಾರ್ಯಗಳಿಗೂ ಭಿನ್ನವಾಗಿ ಒಬ್ಬೊಬ್ಬ ಸ್ವಾಮಿ ಒಂದೊಂದು ರೀತಿಯಲ್ಲಿ ತನ್ನ ಲೌಕಿಕನಡೆಯಿಂದ ಪ್ರಚಾರಕ್ಕೆ ಬರುತ್ತಾನೆ; ಜನಾಂಗದ ಬಲವನ್ನು ಸಾಕ್ಷೀಕರಿಸಲು ವಿಧಾನಸೌಧದಂತಹ ರಾಜಕೀಯ ಮಹಲುಗಳಿಗೂ ನಡೆದುಬರುತ್ತಾನೆ. ಸನಾತನ ಧರ್ಮದಲ್ಲಿ ಎಲ್ಲಾ ಜನಾಂಗಗಳಿಗೆ ಗುರುವಿನ ಸ್ಥಾನದಲ್ಲಿ ನಡೆದಿದ್ದು ಬ್ರಾಹ್ಮಣ ಜನಾಂಗ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಬದಲಾದ ಸನ್ನಿವೇಶದಲ್ಲಿ ಉದರಂಭರಣೆಗಾಗಿ ಬ್ರಾಹ್ಮಣರು ವೇದಾಧ್ಯಯನ ತೊರೆದು ಅನ್ಯವೃತ್ತಿಗಳಲ್ಲಿ ತೊಡಗಿಕೊಂಡಿದ್ದೂ ಅಷ್ಟೇ ಸತ್ಯ. ವೃತ್ತಿ ಸಂಬಂಧದ ಒಡನಾಟ ತಿರುಗಾಟಗಳಿಂದ ಆಹಾರ-ವ್ಯವಹಾರಗಳಲ್ಲಿ ವ್ಯತ್ಯಯವುಂಟಾಗುವುದೂ ಅನಿವಾರ್ಯ ಸಹಜ. ಆದರೂ ಇವತ್ತಿಗೂ ಬ್ರಾಹ್ಮಣ ಮಠಗಳು ಆದಾಯಕ್ಕಾಗಿ ಅಥವಾ ಪಾದಗಾಣಿಕೆಗಾಗಿ ಯಾವಕೆಲಸದಲ್ಲೂ ತೊಡಗಿಕೊಂಡಿಲ್ಲ. ಅವರು ವಿಧಾನಸೌಧದ ಜಗಲಿಗೆ ಮೀಸಲಾತಿ ಕೇಳಲು ಬರುವುದಿಲ್ಲ. ಸಮಾಜದ ಯಾವ ವರ್ಗದವರಿಂದಲೂ ತಮಗೆ ಇಂತಿಷ್ಟು ಸಂದಾಯವಾಗಬೇಕೆಂದು ಎಂದೂ ಬಯಸುವುದಿಲ್ಲ. ಅವರಿಗೆ ಬೇಕಾಗಿರುವುದು ಸಮಷ್ಟಿಯ ಸಮಾಜದ ಸ್ವಾಸ್ಥ್ಯ! ಸರ್ವಜನಾಂಗದ ಸರ್ವತೋಮುಖ ಅಭಿವೃದ್ಧಿ. ಹೀಗಾಗಿ ದಲಿತರ ಸಂಕಷ್ಟದ ಅಳಲನ್ನು ಆಲೈಸಲು, ನಕ್ಸಲೈಟ್ಸ್ ಗಳ ಮನವನ್ನು ಸಮಾಜಮುಖಿಯಾಗಿ ಪರಿವರ್ತಿಸಲು ಆದಾಯ-ನಿರಪೇಕ್ಷಿತ ಮತ್ತು ಧರ್ಮಸಂತುಲಿತ ಸಂಚಾರವನ್ನೋ ಪಾದಯಾತ್ರೆಯನ್ನೋ ಆಂದೋಲನವನ್ನೋ ಬ್ರಾಹ್ಮಣ ಮಠಗಳು ನಡೆಸುತ್ತವೆ-ಕಾಣಿಕೆಗಾಗಿ ಅಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತಿದ್ದೇನೆ.

ಹಕ್ಕಿಯ ಹೇಗಲೇರಿ ಬಂದ ಭಗವಂತ ಕೃಷ್ಣನಾಗಿ, ಜಗದ್ಗುರುವಾಗಿ ಬೋಧಿಸಿದ ನೀತಿಗೆ ಆತುಕೊಂಡಿರುವ, ಆತನ ಲೀಲಾವಿನೋದದ ಪಾತ್ರಧಾರಿಗಳಾಗಿರುವ ಎಲ್ಲರ ನಡುವೆ, ಕೇವಲ ಮೇಲ್ವರ್ಗವೆಂದು ಗುರಿಮಾಡಲ್ಪಟ್ಟು, ಸದಾ ಅನ್ಯಜನಾಂಗದ ಮಾತಿನ ಚಾಟಿಏಟು, ರಾಜಕೀಯದ ಅವಗಣನೆ ಇವುಗಳನ್ನು ಸಹಿಸುತ್ತಾ ಬದುಕುವ ವಿಪ್ರಜನಾಂಗದ ಮೇಲಿನ, ಸ್ವಾಮಿಗಳ ಮೇಲಿನ ಆರೋಪ ಸರಿಯಲ್ಲ; ಮಾಡಿದ ಆರೋಪದಲ್ಲಿ ಎಳ್ಳಷ್ಟೂ ಹುರುಳಿಲ್ಲ. ಲೇಖಕರುಗಳ ಮತ್ತು ಅವರ ಮಂಡಳಿಯ ’ಯಜಮಾನರ’ ’ಕತ್ತಲೆ’ಕಳೆದು ಅವರು ನಿಜವಾದ ಬೆತ್ತಲೆ ಪ್ರಪಂಚವನ್ನು ಅವಲೋಕಿಸುವ ಮಟ್ಟಕ್ಕೆ ತಲುಪಲಿ ಎಂದು,  ನಾನೂ ಮನಸೋತ ಹಕ್ಕೀಹೆಗಲಿಗನಲ್ಲಿ ಪುನಃ ಪುನಃ ಪ್ರಾರ್ಥಿಸುತ್ತಿದ್ದೇನೆ, ನಮಸ್ಕಾರ.      

Monday, May 21, 2012

ಮೇದಿನಿ ಎಂಬ ಪರ್ವತದ ಸುತ್ತ ಮತ್ತೊಂದು ಸುತ್ತು

ಮೇದಿನಿ ಎಂಬ ಪರ್ವತದ ಸುತ್ತ ಮತ್ತೊಂದು ಸುತ್ತು
ಚಿತ್ರಋಣ: ಅಂತರ್ಜಾಲ

ಮೇದಿನಿಪ ಬಾರೆನುತ ತನ್ನಯ
ಜೋಡುಕರಗಳ ಮುಗಿದನಾಕ್ಷಣ

....ಎಂದು ಕೆಲವು ಯಕ್ಷಗಾನ ಪ್ರಸಂಗಗಳಲ್ಲಿ ಹಾಡುಗಳು ಕಾಣಸಿಗುತ್ತವೆ. ಮೇದಿನಿಯಲ್ಲೂ ಒಬ್ಬ ಮೇದಿನಿಪನಿದ್ದ. ಈಗ ಅದು ಗತ ವೈಭವದ ಇತಿ-ಹಾಸ! ಮೇದಿನಿಯ ಮಾರ್ಗ, ಅಲ್ಲಿನ ಚಾರಣದ ಕುರಿತು ಅನೇಕರು ಫೇಸ್ ಬುಕ್ ನಲ್ಲೂ ಕೂಡ ವಿವರ ಕೇಳಿದ್ದೀರಿ. ತಕ್ಕಮಟ್ಟಿಗೆ ನಿಮಗೆ ಉತ್ತರಿಸುವ ಪ್ರಯತ್ನದಲ್ಲಿ ಲೇಖನವನ್ನೇ ವಿಸ್ತರಿಸದರೆ ಒಳ್ಳೆಯದು ಎನಿಸಿತು, ಹಾಗೆ ಮಾಡುತ್ತಿದ್ದೇನೆ:  

ಉತ್ತರಕನ್ನಡದ ಕುಮಟಾ ಮತ್ತು ಸಿದ್ಧಾಪುರ ತಾಲೂಕುಗಳ ಗಡಿಭಾಗದಲ್ಲಿ ಬರುತ್ತದೆ ಈ ಮೇದಿನಿ ಪರ್ವತ. ಕುಮಟಾದಿಂದ ಸಿದ್ಧಾಪುರಕ್ಕೆ ಹೋಗುವ ಮಾರ್ಗದಲ್ಲಿ ಬಡಾಳ ಎಂಬುದೊಂದು ಗ್ರಾಮ ಸಿಗುತ್ತದೆ. ಬಡಾಳವನ್ನು ದಾಟಿ ಹಾಗೇ ಮುಂದೆ ಸಾಗುವಾಗ ಮೂಡ್ನಳ್ಳಿ ಎಂಬುದೊಂದು ಚಿಕ್ಕ ಪ್ರದೇಶ ಕಾಣಿಸುತ್ತದೆ. ಸರಿಯಾಗಿ ಗ್ರಹಿಸದೇ ಇದ್ದರೆ ತಪ್ಪಿಹೋಗುವ ಸಂಭವವಿದೆ. ಮೂಡ್ನಳ್ಳಿಯಲ್ಲಿ ಬಲಕ್ಕೆ ತಿರುಗಿ ಮೂರು ಕಿ.ಮೀ ವರೆಗೆ ಜೀಪು/ಕಾರುಗಳನ್ನು [ನಾವೇ ತೆಗೆದುಕೊಂಡುಹೋದ] ಮುನ್ನಡೆಸಬಹುದು. ಅಲ್ಲಿಂದ ಮುಂದಕ್ಕೆ ಬೆಟ್ಟದ ಹಾದಿ. ಅಜಮಾಸು ೮ ಕಿ.ಮೀ. ಚಾರಣವೇ ಗತಿ. [ಸಿದ್ಧಾಪುರದಿಂದ ಕುಮಟಾಕ್ಕೆ ಬರುವಾಗ ಮೂಡ್ನಳ್ಳಿಯಲ್ಲಿ ಎಡಕ್ಕೆ ತಿರುಗಬೇಕು ಎಂಬುದನ್ನು ಗಮನಿಸಬೇಕು.] ಸುಂದರ ಕಾನನದ ಹಸಿರಿನ ನಡುವೆ ಸಾಗುವ ಕಾಲುಹಾದಿಯಲ್ಲಿ ಚಾರಣ ನಡೆಸುವುದೇ ತೃಪ್ತಿಕರ. ಯಾವುದೇ ಹೋಟೆಲ್ ಅಥವಾ ಪ್ರವಾಸೀ ಸೌಲಭ್ಯಗಳು ಲಭ್ಯವಿಲ್ಲ, ಎಲ್ಲವನ್ನೂ ಖುದ್ದಾಗಿ ವ್ಯವಸ್ಥೆ ಮಾಡಿಕೊಂಡೇ ಸಾಗಬೇಕು. ತಂಬು, ಗುಡಾರಗಳಿದ್ದರೆ ಬೆಟ್ಟದ ತಲೆಯಮೇರ್ಲೆ ಕಾಣುವ ಕಾನುದೀವರ ಮನೆಗಳ ಸಾಲಿನಲ್ಲಿ ವಸತಿಹೂಡಿಕೊಳ್ಳಬಹುದು. ಫೋಟೋಗ್ರಫಿಗೆ ಹೇಳಿಮಾಡಿಸಿದ ರಮ್ಯ ತಾಣ! ಪ್ಲಾಸ್ಟಿಕ್ ಬಾಟಲಿಗಳು, ಕ್ಯಾರೀ ಬ್ಯಾಗಗಳನ್ನು ಆದಷ್ಟೂ ಬಳಸದಿರುವುದು ಪ್ರಕೃತಿಗೂ, ನಮಗೂ ಕ್ಷೇಮ. ಅನಿವಾರ್ಯವಾಗಿ ಬಳಸಿದ ಪಕ್ಷದಲ್ಲಿ ಅವುಗಳನ್ನು ಮರಳಿ ತರಬೇಕೇ ಹೊರತು ಅಲ್ಲಿ ಎಸೆಯಬಾರದು.

ಮೇದಿನಿಯ ತಲೆಭಾಗದಲ್ಲಿ ಇರುವ ಹೊಲಮನೆಗಳಲ್ಲಿರುವ ಕಾನುದೀವರು ಅಪ್ಪಟ ಸಂಪ್ರದಾಯವಾದಿಗಳು. ಅಲ್ಲಿ ಇನ್ನೂ ಒನಕೆಯನ್ನು ಬಳಸಿ ಭತ್ತಕುಟ್ಟಿ ಅಕ್ಕಿ ತಯಾರಿಸಲಾಗುತ್ತದೆ! ನೈಸರ್ಗಿಕವಾಗಿ ಬೆಳೆದ ಭತ್ತವನ್ನು ಒನಕೆಯಿಂದ ಕುಟ್ಟಿ ತಯಾರಿಸಿದ ಸಣ್ಣಕ್ಕಿ ಪರಿಮಳಭರಿತ ಮತ್ತು ಆರೋಗ್ಯಕ್ಕೆ ಉತ್ತಮ. ಆದರೆ ಅಕ್ಕಿ ಎಲ್ಲರಿಗೂ ಲಭ್ಯವಾಗುವುದಿಲ್ಲ ಯಾಕೆಂದರೆ ಬೆಳೆಯುವ ಪ್ರಮಾಣ ಬಹಳ ಕಮ್ಮಿ. ಕಾನುದೀವರು ತಮ್ಮ ಸ್ವಂತದ ಉಪಯೋಗಕ್ಕೆ ಬೆಳೆದುಕೊಳ್ಳುವ ಬೆಳೆ ಅದಾಗಿದೆ. ಮೇದಿನಿಯಲ್ಲಿ ಅಲ್ಲಲ್ಲಿ ನೈಸರ್ಗಿಕವಾಗಿ ಬೆಳೆಯುವ ಕಾಡು ಹಣ್ಣುಗಳು ಕಾಣಸಿಗುತ್ತವೆ. ಕಾನುದೀವರಲ್ಲಿ ಯಾರನ್ನಾದರೂ ಪರಿಚಯಿಸಿಕೊಂಡು ಮಾಹಿತಿ ಪಡೆದರೆ ಅಲ್ಲಿನ ಚಾರಣಕ್ಕೆ ಹೊಸ ಆಯಾಮ ಸಿಗುತ್ತದೆ; ಗೊತ್ತಿಲ್ಲದ ಹಲವು ಸಂಗ್ತಿಗಳನ್ನು ತಿಳಿದುಕೊಳ್ಳಬಹುದು, ನಾಟಿವೈದ್ಯದ ಆಯುರ್ವೇದೀಯ ಔಷಧ ಮೂಲಿಕೆಗಳ ಬಗ್ಗೆ ತಿಳಿದುಕೊಳ್ಳಬಹುದು, ಗಿಡ-ಮರಗಳ ಬಗ್ಗೆ ಮಾಹಿತಿ ಸಂಗ್ರಹಿಸಬಹುದು, ಕಾಡುಪ್ರಾಣಿಗಳ ಬಗ್ಗೆ ತಿಳಿಯಬಹುದು.

ಗಮ್ಯಸ್ಥಾನಗಳು ಎಲ್ಲರಿಗೂ ಅರಿವಲ್ಲ, ಮೇದಿನಿಗೆ ಹೋಗಬೇಕೇನೋ ಸರಿ, ಅಲ್ಲಿಗೆ ಹೋದಾಗ ಅಲ್ಲಿನ ಜನ ಹೇಳುವುದು ’ಕಂಚಿನಬಾಗಿಲ’ ಕೋಟೆ. ಎಷ್ಟೋ ಶತಮಾನಗಳ ಹಿಂದೆ ಯಾವುದೋ ಅರಸ ರಾಜ್ಯಭಾರ ನಡೆಸಿದ ಪ್ರದೇಶ ಮೇದಿನಿ! ಇಂದಿಗೂ ಕೋಟೆ ಬುರುಜುಗಳು, ಕೋಟೆಯ ಹಲವು ಅವಶೇಷಗಳು, ತೊರೆಗಳು, ಚಿಕ್ಕಪುಟ್ಟ ಸರೋವರಗಳು ಇವೇ ಮೊದಲಾಗಿ ಹಲವನ್ನು ವೀಕ್ಷಿಸಬಹುದಾಗಿದೆ. ಒಂದೇ ದಿನದಲ್ಲಿ ಬೆಳಿಗ್ಗೆ ತೆರಳಿ ಸಂಜೆ ಹಿಂದಿರುಗುವುದಾದರೆ ಮೇದಿನಿಯನ್ನು ಇಡಿಯಾಗಿ ನೋಡಿದ ಅನುಭವ ನಮ್ಮದಾಗುವುದಿಲ್ಲ. ಕೊನೇಪಕ್ಷ ಒಂದು ರಾತ್ರಿಯನ್ನು ಅಲ್ಲಿ ಕಳೆದರೆ ಪ್ರಕೃತಿಯ ರಮಣೀಯತೆ ಮತ್ತು ರಾತ್ರಿಯ ಸಂತಸ ಎರಡೂ ಸಿಗುವುದರಿಂದ ಹಾಗೆ ಮಾಡುವುದು ಉತ್ತಮ. ಸಿದ್ಧ ಆಹಾರವನ್ನು ಕೊಂಡೊಯ್ದುಕೊಳ್ಳಬಹುದು, ಸಾಮಗ್ರಿಗಳಿದ್ದರೆ, ಗ್ರಾಮೀಣ ಅಡುಗೆಯ ಅನುಭವ ಇದ್ದವರು ಜೊತೆಗಿದ್ದರೆ ಒಲೆಹಾಕಿಕೊಂಡು ಅಡುಗೆ ಮಾಡಿಕೊಳ್ಳಬಹುದು. 

ಮೇದಿನಿಯ ಜನರಿಗೆ ಹಲವು ಔಷಧಿಗಳ ಪರಿಚಯವಿದೆ. ಕಾನನದ ನಡುವಿನ ಗದ್ದೆಮನೆಗಳಲ್ಲಿ ಯಾರಿಗಾದರೂ ಕಾಯಿಲೆಯಾದರೆ ಬಹುದೂರ ಸಾಗಬೇಕಾಗಿ ಬರುವುದರಿಂದ ಗಿಡಮೂಲಿಕೆಗಳಿಂದ ದೊರೆಯಬಹುದಾದ ಪರಿಹಾರವನ್ನು ಅಲ್ಲಿನ ಜನ ಸಹಜವಾಗಿ ಅರಿತಿದ್ದಾರೆ. ವಂಶಪಾರಂಪರ್ಯವಾಗಿ ಅದು ಹಾಗೇ ಮುಂದುವರಿದಿದೆ. ಇವತ್ತಿಗೂ ದೊಡ್ಡಮಟ್ಟದ ಕಾಯಿಲೆಯೇನಾದರೂ ಕಾಣಿಸಿಕೊಂಡರೆ, ರೋಗಿಯನ್ನು ಕಂಬಳಿಮೂಟೆಯಲ್ಲಿ ಹೊತ್ತುಕೊಂಡು ೧೧ ಕಿ.ಮೀ. ಕ್ರಮಿಸಿ ನಂತರ ಮೂಡ್ನಳ್ಳಿಯಲ್ಲಿ ಸಿಗಬಹುದಾದ ವಾಹನವನ್ನು ಹಿಡಿದು ಕುಮಟಾಕ್ಕೋ ಸಿದ್ಧಾಪುರಕ್ಕೋ ಹೋಗಬೇಕಾಗುತ್ತದೆ. ನಮ್ಮ ಹಳ್ಳಿಗಳಲ್ಲಿ ಅನೇಕ ಕುಗ್ರಾಮಗಳಲ್ಲಿ ರಸ್ತೆಸೌಕರ್ಯವಿರದ ಹಿಂದಿನ ಕಾಲದಲ್ಲಿ ಕಂಬಳಿಮೂಟೆಯಲ್ಲಿ ರೋಗಿಯನ್ನು ಹೊತ್ತೊಯ್ಯುವುದು ರೂಢಿಗತವಾಗಿತ್ತು. ಒನಕೆ ಭತ್ತ ಕುಟ್ಟುವುದರ ಜೊತೆಗೆ ಕಂಬಳಿಮೂಟೆಯನ್ನು ಮಾಡಲೂ ಉಪಯೋಗಕ್ಕೆ ಬರುತ್ತದೆ. ಕಂಬಳಿಯನ್ನು ಉದ್ದವಾಗಿ ಹಾಸಿ ಅದರಲ್ಲಿ ರೋಗಿಯನ್ನು ಅಂಗಾತ ಮಲಗಿಸಿ, ಕಂಬಳಿಯ ಮೇಲ್ಭಾಗ ಮತ್ತು ಕೆಳಭಾಗವನ್ನು ಗಂಟುಕಟ್ಟಿ ಎರಡೂ ಗಂಟುಗಳಮೂಲಕ ಒನಕೆಯನ್ನು ತೂರಿಸಿ ಆ ಒನಕೆಯನ್ನು ಹಿಂದೊಬ್ಬ ಮತ್ತು ಮುಂದೊಬ್ಬ ಸೇರಿ ಹೊರುವುದು ವಾಡಿಕೆಯಾಗಿತ್ತು. ಅದು ಈಗಲೂ ಅಲ್ಲಿ ಜಾರಿಯಲ್ಲಿದೆ ಎಂದು ಕೇಳಿದ್ದೇನೆ.

ಕಾನುದೀವರ ಕಾರ್ಯಕ್ರಮಗಳು ಬಲು ವಿಶಿಷ್ಟ ಮತ್ತು ಅತ್ಯಂತ ಗ್ರಾಮೀಣ ಸೊಗಡಿನವಾಗಿವೆ. ಹಲವು ಬುಡಕಟ್ಟು ಜನಾಂಗಗಳಲ್ಲಿರುವಂತೇ ಪ್ರತಿಯೊಂದೂ ಕಾರ್ಯವೂ ಅವರದ್ದೇ ಆದ ಜಾನಪದ ಶೈಲಿಯ ಹಾಡುಗಳ ಮಿಳಿತದೊಂದಿಗೆ ನಡೆಯುತ್ತದೆ. ನನ್ನ ಬಂಧು ಸ್ವತಃ ನೋಡಿರುವಂತೇ, ಅಲ್ಲಿನ ಒಬ್ಬರ ಮನೆಯಲ್ಲಿ ಏನೋ ವಿಶೇಷವಿತ್ತು. ಕಾಡಮಧ್ಯದ ಈ ಜನರಿಗೆ ದೂರದ ಸಿದ್ಧಾಪುರದೆಡೆ ಅಲ್ಲೆಲ್ಲೋ ನೆಂಟರೂ ಇದ್ದಾರಂತೆ! ಕಾರ್ಯಕ್ರಮಕ್ಕೆ ಮೂರ್ನಾಕು ದಿನ ಮುಂಚೆಯೇ ನೆಂಟರು ಒಬ್ಬೊಬ್ಬರಾಗಿ ಕಾಲ್ನಡಿಗೆಯಲ್ಲಿ ನಡೆದು ಬಂದು ಸೇರಿಕೊಳ್ಳುತ್ತಿದ್ದರಂತೆ. ಹಿಂದೆ ಗ್ರಾಮೀಣಭಾಗದಲ್ಲಿ ನಡೆಯುತ್ತಿದ್ದಂತೇ ಕಾರ್ಯಕ್ರಮ ಎಂದರೆ ವಾರಗಟ್ಟಲೆಯ ಸಡಗರ. ಅಲ್ಲಿ ಹಾಡು-ಹಸೆ ಅವರದ್ದೇ ಆದ ಕುಣಿತ, ಪೂಜೆ-ಪುನಸ್ಕಾರ, ಅಹಾರವೈವಿಧ್ಯ ಇವೆಲ್ಲಾ ಇದ್ದೇ ಇರುತ್ತವೆ. ಕಾರ್ಯಮುಗಿದ ನಂತರವೂ ಕೂಡ ಉಳಿದುಕೊಂಡ ನೆಂಟರು ಒಬ್ಬೊಬ್ಬರೋ ಇಬ್ಬಿಬ್ಬರೋ ಕಾಲ್ನಡಿಗೆಯಲ್ಲಿ ಸಾಗಿ ತಮ್ಮ ಊರಿಗೆ ಮರಳುತ್ತಾರಂತೆ. ಇಂತಹ ಕಾರ್ಯಗಳು ನಮಗೆ ಬೇಕೆಂದಾಗಲೆಲ್ಲಾ ಏರ್ಪಡುವುದಿಲ್ಲ, ಅವು ಅಲ್ಲಿನ ಅವರ ಜೀವನದ ಭಾಗಗಳಲ್ಲವೇ? ಆದರೆ ಮೇದಿನಿಗೆ ಹೋದಾಗ ಪ್ರೀತಿಯಿಂದ ಅವರನ್ನು ಮಾತನಾಡಿಸಿ, ವಿನಂತಿಸಿದರೆ ಅವರಲ್ಲಿನ ಹಾಡುಗಳಲ್ಲಿ ಒಂದಷ್ಟನ್ನು ಕೇಳಬಹುದಾಗಿದೆ, ಅವರುಗಳಿಗೆ ಬಿಡುವಿದ್ದರೆ ಕುಣಿತವನ್ನೂ ಕುಣಿಸಿ ಕಾಣಬಹುದಾಗಿದೆ. 

ಹಲವು ಮಜಲುಗಳಲ್ಲಿ ತನ್ನನ್ನು ತೆರೆದುಕೊಳ್ಳುವ ಮೇದಿನಿ ಚಾರಣಪ್ರಿಯರಿಗೆ ಹೇಳಿಮಾಡಿಸಿದ ಹಲವು ಸ್ಥಳಗಳಲ್ಲಿ ಒಂದು. ಅಲ್ಲಿಗೆ ಹೋದಾಗ ನಮ್ಮೆಲ್ಲಾ ಲೌಕಿಕ ಜಂಜಡಗಳು, ಆಮಿಷದ ಮೊಬೈಲ್ ಕರೆಗಳು, ಬೇಗುದಿಗಳು, ಕಚೇರಿಗೆ ಓಡುವ ಧಾವಂತದ ಬದುಕಿನ ನಿತ್ಯಸತ್ಯಗಳು ತುಸುಕಾಲ ಇಲ್ಲವಾಗುತ್ತವೆ; ಸ್ನಾನಮಾಡಿದ ಮೈ ಶುಚಿಗೊಂಡು ಆಹ್ಲಾದಕರ ಅನುಭವವಾಗುವಂತೇ ನಿಸರ್ಗಸ್ನಾನವನ್ನು ಅನುಭವಿಸಿದ ಮನಸ್ಸು ಪುಳಕಿತಗೊಳ್ಳುತ್ತದೆ. ಬಹಳದಿನಗಳಿಂದ ಬಳಸದೇ ಬಿಟ್ಟಿದ್ದ ಮೊಬೈಲ್ ಬ್ಯಾಟರಿ ಚಾರ್ಜ್ ಆಗುತ್ತದೆ! ಗಿಳಿ-ಗೊರವಂಕ, ನವಿಲು, ಕೆಂಬೂತ ಮುಂತಾದ ಹಲವು ಹಕ್ಕಿಗಳ ಕೂಗು ಕಿವಿನಿಮಿರಿಸುತ್ತದೆ. ಸರ್ರನೆ ಸರಿದುಹೋಗುವ ಯಾವುದೋ ಸರೀಸೃಪವನ್ನು ಹುಡುಕುವ ಮನವುಂಟಾಗುತ್ತದೆ. ಸಾಧ್ಯವಾದರೆ ಒಮ್ಮೆ ಹೋಗಿಬನ್ನಿ, ನಿಸರ್ಗ ಸಹಜಸ್ಥಿತಿಯನ್ನು ಕಲುಷಿತಗೊಳ್ಳದಂತೇ ನೋಡಿಕೊಂಡು ಒಂದಷ್ಟು ಸಮಯ ಹಾಯಾಗಿ ಕುಳಿತು, ನಡೆದಾಡಿ, ಕುಣಿದು-ಕುಪ್ಪಳಿಸಿ ವಿಹರಿಸಿ ಬನ್ನಿ, ಆಗದೇ?

------

ಓದುಗರಲ್ಲಿ ಒಂದು ವಿಜ್ಞಾಪನೆ: ಉದ್ದಿಮೆ ಮೀಡಿಯಾ ನೆಟವರ್ಕ್ ನಮ್ಮ ಹೊಸ ಉದ್ಯಮ. ಪ್ರೊಫೆಶನಲ್ಸ್, ಕಲಾವಿದರು, ವಿವಿಧ ಉದ್ದಿಮೆದಾರರು, ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸು ಮನಸ್ಸಿದ್ದು ಬಹುಸಂಖ್ಯಾಕ ಜನರಿಗೆ ತಮ್ಮ ಬಗ್ಗೆ ಮಾಹಿತಿ ನೀಡಬಯಸುವ ಜನರಿಗೆ ಉದ್ದಿಮೆ ಮಾರ್ಗ ಕಲ್ಪಿಸುತ್ತದೆ. ಲ್ಲೋ ಪೇಜಸ್, ಪ್ರಿಂಟ್ ಆಡ್ಸ್, ಮಲ್ಟಿಮೀಡಿಯಾ ಆಡ್ಸ್, ಆನ್ ಲೈನ್ ಆಡ್ಸ್, ಪಬ್ಲಿಕ್ ರಿಲೇಶನ್ಸ್ ಮತ್ತು ಮಾನವ ಸಂಪನ್ಮೂಲ ಕುರಿತಾದ ಸಲಹೆಗಳನ್ನು-ಸೇವೆಗಳನ್ನು ಶುಲ್ಕ ಪಾವತಿಸಿ ಪಡೆದುಕೊಳ್ಳಬಹುದಾಗಿದೆ. ಮುಂಬರುವ ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಲ್ಲೋಪೇಜಸ್ ಪ್ರಕಟಗೊಳ್ಳುತ್ತದೆ-ಜಾಹೀರಾತು ಬುಕಿಂಗ್ ಆರಂಭಗೊಂಡಿದೆ. ’ಉದ್ದಿಮೆ’ ಬಳಗದ ಲೇಖನಗಳನ್ನು ಸದ್ಯ   http://uddime.blogspot.in            ನಲ್ಲಿ ಓದಬಹುದಾಗಿದೆ. ಹೆಚ್ಚಿನ ಮಾಹಿತಿಯನ್ನು ಪಡೆಯಲು   uddime@gmail.com    ಮಿಂಚಂಚೆ ಕಳಿಸಿ ಸಂಪರ್ಕಿಸಲು ಕೋರುತ್ತೇನೆ, ಧನ್ಯವಾದಗಳು.

Wednesday, May 16, 2012

ಮೇದಿನಿ ಎಂಬ ಪರ್ವತದ ಸುತ್ತ


ಚಿತ್ರಋಣ: ಅಂತರ್ಜಾಲ
ಮೇದಿನಿ ಎಂಬ ಪರ್ವತದ ಸುತ್ತ

ಕಾಡುಗಳೆಂದರೆ ನನಗೆ ಜೀವ. ಕಾಡುಗಳಲ್ಲಿನ ನಡೆ, ವಿಹಾರ, ಅಲ್ಲಿನ ಜೀವಿಗಳ ಜೀವನದ ರೀತಿಯ ಅವಲೋಕನ, ಹಸಿರು ಸಸ್ಯಶಾಮಲೆಯ ಸಮೃದ್ಧ ನೋಟ ಇವೆಲ್ಲಾ ನನಗಿಷ್ಟ; ನನಗೊಂದೇ ಏಕೆ ಮಾನವರಿಗೇ ಇಷ್ಟ! ಅದು ಮಾನವ ಸಹಜ ಬಯಕೆ. ಎಂತಹ ಸಮಸ್ಯೆಗಳಲ್ಲೂ ಮನೆಯಲ್ಲಿನ ಚಿಕ್ಕ ಮಕ್ಕಳು ಇಷ್ಟವಾಗುವ ಹಾಗೇ ಎಂಥಾ ಕಷ್ಟದ ಸನ್ನಿವೇಶವಿದ್ದರೂ ಒಂದು ಸುತ್ತು ಹಸಿರಿನ ನಡುವೆ ತೆರಳಿ ಮರಳಿದರೆ ಪ್ರಕೃತಿಮಾತೆಯ ಹಸ್ತ ನಮಗೆ ಸಾಂತ್ವನ ನೀಡುತ್ತದೆ; ಕಾಡುಗಳ್ಳರಿಗೆ ಹಾಗೆ ಅನಿಸದೇ ಇರಬಹುದು, ಆದರೆ ಆ ಸಂಖ್ಯೆ ಕಮ್ಮಿ ಅಲ್ಲವೇ?

ಸ್ನೇಹಿತರೊಬ್ಬರು ಬಿಸಿಲೆ ಘಾಟಿಯ ಬಗ್ಗೆ ಬರೆದಿದ್ದರು, ಇನ್ನೊಬ್ಬರು ಮೇಘಾನೆಯ ಬಗ್ಗೆ ಬರೆದಿದ್ದರು, ಆಗೆಲ್ಲಾ ನನಗೆ ನೆನಪಿಗೆ ಬಂದಿದ್ದು ಈ ’ಮೇದಿನಿ’. ಸ್ಥೂಲವಾಗಿ ಇಡೀ ಈ ಇಳೆಯನ್ನೇ ಮೇದಿನಿ ಎನ್ನುತ್ತಾರೆ. ಆದರೆ ನಾನು ಹೇಳಹೊರಟಿದ್ದು ಮೇದಿನಿಯೊಳಗಣ ಇನ್ನೊಂದು ಮೇದಿನಿಯ ಬಗ್ಗೆ. ಈ ಮೇದಿನಿ ಉತ್ತರಕನ್ನಡದ ಕುಮಟಾ ಮತ್ತು ಸಿದ್ಧಾಪುರ ತಾಲೂಕುಗಳ ನಡುವಣ ಅಡವಿಯಲ್ಲಿನ ಅತ್ಯಂತ ಎತ್ತರದ ಒಂದು ಪರ್ವತ. ಕರ್ನಾಟಕದ ಕಾಶ್ಮೀರ ಎಂದರೆ ಕೊಡಗು ಎಂಬುದನ್ನು ಬಹುತೇಕರು ಒಪ್ಪುವುದಾದರೂ ಹಸಿರು ಕಾನನವನ್ನು ದಟ್ಟವಾಗಿ ಹೊಂದಿದ್ದ ಉತ್ತರಕನ್ನಡಕೂಡ ಈ ವಿಷಯದಲ್ಲಿ ಕಮ್ಮಿಯೇನಿಲ್ಲ. ಉತ್ತರಕನ್ನಡದ ಹಲವು ರಮಣೀಯ ಪರ್ವತಗಳ ರಾಶಿಯಲ್ಲೇ ರಮ್ಯವೂ ರೋಚಕವೂ ಆಗಿರುವುದು ಈ ಮೇದಿನಿ. ನಾನು ಕಣ್ಣಾರೆ ಕಂಡಿಲ್ಲ; ಹತ್ತಿರದ ಬಂಧುವೊಬ್ಬರು ಅರಣ್ಯ ಇಲಾಖೆಯ ಪ್ರಮುಖ ಹುದ್ದೆಯಲ್ಲಿದ್ದು ಎಲ್ಲೆಡೆಗೂ ಹೋಗಿಬಂದಿದ್ದಾರೆ. ಕರ್ನಾಟಕದಲ್ಲಿ ಅವರು ನೋಡದ ಅರಣ್ಯಗಳಿಲ್ಲ. ತಾನು ನೋಡಿದ ಅರಣ್ಯಗಳ ಪೈಕಿ ಅವರು ಬಹಳವಾಗಿ ಮೆಚ್ಚಿದ್ದು ಮೇದಿನಿ.

ಸ್ವಭಾವತಃ ಅವರು ನಿಸರ್ಗ ಪ್ರಿಯರು. ಸರಕಾರದ/ಸಮಾಜದ ಉಪ್ಪನ್ನ ಉಂಡ ಕೈಲಿ ಎಂದೂ ಪೈಸೆ ಲಂಚವನ್ನೂ ಸ್ವೀಕರಿಸದ ನಿಸ್ಪೃಹರು. ಲಂಚ ಪಡೆದೂ ಗೊತ್ತಿಲ್ಲ; ತೆತ್ತೂ ಗೊತ್ತಿಲ್ಲ. ಎತ್ತಂಗಡಿ ಬಹಳ ಸಲ ಆಗಿದೆ; ಹೋದಲ್ಲೆಲ್ಲಾ ಕಾಡುಗಳರನ್ನು ಹಿಡಿದು ಧೂರ್ತ ರಾಜಕಾರಣಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಪ್ರಾಮಾಣಿಕರಿಗೆ ಇಲಾಖೆಗಳಲ್ಲಿ ಸೇವೆಸಲ್ಲಿಸುತ್ತಾ ಕಾಲಹಾಕುವುದು ಬಹಳ ಕಷ್ಟ ಎನ್ನುವುದು ಅವರ ಅನುಭವಜನ್ಯ ಮಾತು. ಅಡವಿಗಾಗಿ ಹಂಬಲಿಸಿ ಅದಕ್ಕಾಗಿಯೇ ಹುಟ್ಟಿದರೇನೋ ಎಂಬಂತಿರುವ ಅವರಿಗೆ ವನ್ಯಜೀವಿಗಳೆಲ್ಲಾ ಮಕ್ಕಳಂತೇ ಭಾಸ! ಆನೆಗಳನ್ನು ಬಹಳವಾಗಿ ಮೆಚ್ಚುವ ಅವರು ಯಾವುದೇ ಜೀವಿಯನ್ನೂ ಕಡೆಗಣಿಸುವುದಿಲ್ಲ. ಎಲ್ಲಾ ಸಸ್ಯ ಪ್ರಭೇದಗಳನ್ನು ಶಾಸ್ತ್ರೋಕ್ತವಾಗಿ ಹೆಸರಿಸಿ ಗುರುತಿಸುವ ಅಗಾಧ ಸಸ್ಯಶಾಸ್ತ್ರೀಯ ಪಾಂಡಿತ್ಯ ಅವರಿಗಿದೆ; ಪ್ರತೀ ಸಸ್ಯದ ಪೂರ್ವಾಪರಗಳನ್ನೂ ವಿವರಿಸಬಲ್ಲರು. ಕುಡುಕರು, ಜೂಜುಕೋರರು, ಕಾಮುಕರು, ಲಂಚಬಡುಕರೇ ತುಂಬಿರುವ ಇಲಾಖೆಯಲ್ಲಿ ಇಂತಹ ಜನ ಅಪರೂಪ; ಇದು ಆತ್ಮರತಿಯಲ್ಲ-ಇರುವ ಹಕೀಕತ್ತು. ಹೆಸರನ್ನು ಹೇಳಲು ಅನುಮತಿಸದ ಈ ವ್ಯಕ್ತಿಯಿಂದ ದೊರೆತ ಅಪರಿಮಿತ ಮಾಹಿತಿ ನನ್ನಲ್ಲಿ ಕಾಡುತ್ತಿರುವ ಕಾಡಿನ ಕುತೂಹಲವನ್ನು ಇಮ್ಮಡಿಗೊಳಿಸಿದೆ. ಆಗಾಗ ಅವರೊಡನೆ ಹೋದರೆ ಕಾಡನ್ನಾದರೂ ನೋಡಬಹುದಿತ್ತೇ ಎನಿಸುತ್ತದೆ; ಕಾಲ ಕೂಡಿ ಬರುತ್ತಿಲ್ಲ.

ಕಡಿದಾದ ಮಾರ್ಗದಲ್ಲಿ ಮೇಲಕ್ಕೆ ಮೇಲಕ್ಕೆ ಏರುತ್ತಾ ಹೋದರೆ ಕೊಟ್ಟಕೊನೆಗೆ ಸಪಾಟಾದ ಶಿರೋಭಾಗವನ್ನು ಹೊಂದಿರುವ ಮೇದಿನಿ ಕಾಣಿಸುವುದಂತೆ. ಇಡೀ ಪರ್ವತದ ತುಂಬಾ ಔಷಧೀಯ ಗುಣವುಳ್ಳ ಶತಶತಮಾನಗಳಷ್ಟು ಹಳೆಯ ಮರಗಳು ಇದ್ದಾವಂತೆ. ತೀರಾ ಅಪರೂಪವೆನಿಸುವ ಔಷಧೀಯ ಮೂಲಿಕೆಗಳೂ ಅಲ್ಲಿ ಕಾಣಸಿಗುತ್ತವಂತೆ. ಮೇದಿನಿಯ ಎತ್ತರದ ಶಿರೋಭಾಗದಲ್ಲಿ ’ಕಾನು ದೀವರು’ ಎಂಬ ಜನಾಂಗ ವಾಸಮಾಡುತ್ತದಂತೆ. ಅಲ್ಲಿ ಕೃಷಿಮಾಡಿಕೊಂಡು ತಮ್ಮಪಾಡಿಗೆ ತಾವು ಸರಳಜೀವನವನ್ನು ನಡೆಸುತ್ತಾರಂತೆ ಕಾನು ದೀವರು. ಅಲ್ಲಿ ಅವರು ನೈಸರ್ಗಿಕ ಗೊಬ್ಬರ ಬಳಸಿ ಭಾರತೀಯ ಮೂಲದ ಹಳೆಯತಳಿಯಾದ ಮೇದಿನಿ ಸಣ್ಣಕ್ಕಿಯನ್ನು ಬೆಳೆಯುತ್ತಾರಂತೆ. ನಮ್ಮಲ್ಲಿ ಈಗ ನಾವು ಬಾಸುಮತಿ ಎಂಬ ಅಕ್ಕಿಯನ್ನು ಕಾಣುತ್ತೇವಲ್ಲ ಆ ರೀತಿಯಲ್ಲೇ ಚಿಕ್ಕ ಮತ್ತು ಪರಿಮಳ ಭರಿತ ಅಕ್ಕಿ ಮೇದಿನಿ ಸಣ್ಣಕ್ಕಿ. ಅನ್ನ ಮಾಡಿದರೆ ಅರ್ಧ ಊರಿಗೇ ಪರಿಮಳ ಹರಡುವ ಮೇದಿನಿ ಸಣ್ಣಕ್ಕಿಯ ಬಗ್ಗೆ ಬಹಳವಾಗಿ ವಿವರಿಸಿದರು. ಇಂದು ಇಂತಹ ಬೀಜ ಸಂಕುಲಗಳು ನಶಿಸುತ್ತಿವೆ; ಕಾಣುವುದೇ ಅಪರೂಪ ಎಂಬುದು ಅವರ ಅಂಬೋಣವಾಗಿದೆ. 

ಸಾಮಾನ್ಯವಾಗಿ ಕಾಡಿನಲ್ಲಿ ವಾಸಿಸುವ ಮಂದಿಗೆ ಊರ ಜನರ ಸಖ್ಯ ಕಮ್ಮಿ. ನಾಗರಿಕ ಪದ್ಧತಿಯಂತೇ ಔಪಚಾರಿಕವಾಗಿ ನಡೆದುಕೊಳ್ಳುವ ರೀತಿರಿವಾಜೂ ಕಮ್ಮಿ. ಕಾಡಿನ ಮಧ್ಯೆ ನೈಸರ್ಗಿಕ ಸರಳ ಸುಂದರ ನಡೆ-ನುಡಿ ಅವರದ್ದು. ಅಂಥಾದ್ದರಲ್ಲೂ ಕಾನು ದೀವರು ತುಂಬ ಸಹೃದಯಿಗಳಂತೆ. ಅರಣ್ಯ ಇಲಾಖೆಯವರಮೇಲೆ ಅವರಿಗೆ ಕೋಪವಾಗಲೀ ಅಗೌರವವಾಗಲೀ ಇಲ್ಲವಂತೆ. ಇಲಾಖೆಯೂ ಕೂಡ ಅವರ ಸಹಜಗತಿಯ ಜೀವನಕ್ಕೆ ಇದುವರೆಗೆ ತೊಂದರೆ ನೀಡಿಲ್ಲ. ಒಂದಷ್ಟು ದನಗಳನ್ನು ಸಾಕಿಕೊಂಡು, ಹಾಲು-ಹೈನ ತಯಾರಿಸಿಕೊಂಡು, ಭತ್ತ ಬೆಳೆದು ಅಕ್ಕಿ-ಅವಲಕ್ಕಿ ಮಾಡಿಕೊಂಡು, ಜೇನುತುಪ್ಪ ಮಿಸರೆತುಪ್ಪ ಇಳಿಸಿಕೊಂಡು, ಕಾಡಿನ ಕೆಲವು ಉತ್ಫನ್ನಗಳನ್ನು ತಮ್ಮ ಸ್ವಂತ ಖರ್ಚಿಗೆ ಬಳಸಿಕೊಂಡು ಬದುಕುತ್ತಿರುವ ಜನ ಅವರು. ಹಲವು ಆದಿವಾಸಿಗಳಂತೇ ಏಂದೋ ಎಲ್ಲಿಂದಲೋ ಅಲ್ಲಿಗೆ ಬಂದುಳಿದ ಕಾನುದೀವರು ಇಂದಿಗೂ ಅಲ್ಲಿದ್ದಾರೆ. ಬೇಟೆಯಾಡುವುದು ತೀರಾ ಕಮ್ಮಿ. ಇತ್ತೀಚೆಗೆ ಅರಣ್ಯ ಇಲಾಖೆ ಸಾಕಷ್ಟು ನಿರ್ಬಂಧ ಹೇರಿರುವುದರಿಂದ ಬೇಟೆಯನ್ನು ಬಿಟ್ಟೇಬಿಟ್ಟಿದ್ದಾರೆ ಎನ್ನಬಹುದು. ಪಟ್ಟಣಗಳ ಕಡೆಗೆ ಅವರು ಬರುವುದು ತೀರಾ ಅಪರೂಪ. ಏಲ್ಲೋ ೫-೬ ತಿಂಗಳಿಗೆ ಒಮ್ಮೆ ಬಂದರೆ ಬಂದರು; ಇಲ್ಲಾಂದ್ರೆ ಇಲ್ಲ. ಪಟ್ಟಣಗಳಿಗೆ ಬರುವುದು ಬಟ್ಟೆಬರೆ, ತಮಗೆ ಸಿಗದ ಬಳಕೆಗೆ ಬೇಕಾದ ಅಗತ್ಯ ವಸ್ತುಗಳು ಇಂಥವುಗಳನ್ನು ಕೊಳ್ಳಲಿಕ್ಕಾಗಿ ಮಾತ್ರ. ತೀರಾ ಜಾಸ್ತಿ ಹಣದ ಬಳಕೆ ಇಲ್ಲ; ಅದು ಅವರಿಗೆ ಅನಿವಾರ್ಯವೂ ಅಲ್ಲ. ಇಂದಿಗೂ ಬಾರ್ಟರ್ ಸಿಸ್ಟಮ್ ರೀತಿಯಲ್ಲೇರ್ ಕೆಲವು ಕಾಡು ಉತ್ಫನ್ನಗಳನ್ನು ಕೊಟ್ಟು ಅದರ ಬದಲಿಗೆ ತಮಗೆ ಬೇಕಾದ ವಸ್ತುಗಳನ್ನು ಖರೀದಿಸುವ ಇರಾದೆ.

ಊರಿದ್ದಲ್ಲಿ ಹೊಲಗೇಡು ಇರುವಂತೇ ಅಲ್ಲಲ್ಲಿ ಗಂಟು[ನಿಧಿ]ಕಳ್ಳರು ಹೊಂಡಗಳನ್ನು ತೋಡಿದ್ದನ್ನು ಕಾಣಬಹುದಂತೆ! ಮೇದಿನಿಯ ಮೈತುಂಬಾ ಅಲ್ಲಲ್ಲಿ ನಿಧಿ ನಿಕ್ಷೇಪಗಳಿವೆ ಎಂಬ ಊಹೆಯನ್ನೇ ಅವಲಂಬಿಸಿ ಮಾಂತ್ರಿಕರೊಂದಿಗೆ ಅಲ್ಲಿಗೆ ಬಂದು ಗಂಟು ಹುಡುಕುವ ಜನವೂ ಇದ್ದಾರಂತೆ. ಆದರೆ ಯಾರಿಗೂ ಏನೂ ಸಿಕ್ಕಿದ್ದಂತೂ ದಾಖಲಾಗಿಲ್ಲ ಎಂಬುದು ಅಲ್ಲಿನ ವಾಸಿಗಳ ಹೇಳಿಕೆ. ಹೋಗಲಿ ಬಿಡಿ ಬಳ್ಳಾರಿಯಂತಹ ಪ್ರದೇಶಗಳಲ್ಲಿ ಹಾಡಹಗಲೇ ಅದಿರು ನಿಧಿಗಳನ್ನು ತೆಗೆದು ಭುವಿಯ ಬಸಿರನ್ನೇ ಬಗೆದುಂಡು ತೇಗಿದ ರಕ್ಕಸ ರಾಜಕಾರಣಿಗಳ ನಡುವೆ ಈ ಸಣ್ಣಪುಟ್ಟ ಗಂಟುಕಳ್ಳರೆಲ್ಲಾ ಏನು ಮಹಾ ಅಲ್ಲವೇ?     

ಅಯಿಗಿರಿನಂದಿನಿ ನಂದಿತಮೇದಿನಿ
ವಿಶ್ವವಿನೋದಿನಿ ನಂದಿನುತೇ |
ಗಿರಿವರವಿಂಧ್ಯ-ಶಿರೋಧಿನಿವಾಸಿನಿ
ವಿಷ್ಣುವಿಲಾಸಿನಿ ಜಿಷ್ಣುನುತೇ|
ಭಗವತಿ ಹೇ ಶಿಥಿಕಂಠಕುಟುಂಬಿನಿ
ಭೂರಿಕುಟುಂಬಿನಿ ಭೂರಿಕೃತೇ |
ಜಯಜಯ ಹೇ ಮಹಿಷಾಸುರಮರ್ದಿನಿ
ರಮ್ಯಕಪರ್ದಿನಿ ಶೈಲಸುತೇ  ||

ಪ್ರಾಯಶಃ ಮೇದಿನಿಯಂತಹ ಸುಂದರ ಕಾನನಗಳಲ್ಲಿ ವಿಹರಿಸುತ್ತಾ ಮುನ್ನಡೆಯುವಾಗಲೇ ಆದಿಶಂಕರರು ’ಮಹಿಷಾಸುರಮರ್ದಿನೀ ಸ್ತೋತ್ರ’ವನ್ನು ರಚಿಸಿದರು ಅನಿಸುತ್ತದೆ. ದೇವಿಯನ್ನು ಭೂರಿ ಕುಟುಂಬಿನಿ ಎಂದು ಕರೆದಿದ್ದಾರೆ ನೋಡಿ, ಇಡೀ ವಿಶ್ವವೇ ಅವಳ ಕುಟುಂಬವಾದಾಗ ಭೂರಿ ಕುಟುಂಬವಲ್ಲದೇ ಇನ್ನೇನು ?

ಕರಮುರಲೀರವ ವೀಜಿತಕೂಜಿತ
ಲಜ್ಜಿತಕೋಕಿಲ ಮಂಜುಮತೇ |
ಮಿಲಿತಪುಲಿಂದ ಮನೋಹರಗುಂಜಿತ
ರಂಜಿತಶೈಲ ನಿಕುಂಜಗತೇ |
ನಿಜಗುಣಭೂತ ಮಹಾಶಬರೀಗಣ
ಸದ್ಗುಣಸಂಭೃತ ಕೇಲಿತಲೇ |
ಜಯಜಯ ಹೇ ಮಹಿಷಾಸುರಮರ್ದಿನಿ
ರಮ್ಯಕಪರ್ದಿನಿ ಶೈಲಸುತೇ  ||

ಮುಂಗಾರುಮಳೆಯನ್ನು ಹೊತ್ತು ತರುವ ಭಾರವಾದ ಮೋಡಗಳು ಮೇದಿನಿಯಂತಹ ಪರ್ವತಗಳಲ್ಲಿನ ಮರಗಳಿಂದ ಆಕರ್ಷಿತವಾಗಿ, ತಂಪನ್ನು ಉಂಡು ಅಲ್ಲೇ ಮಳೆಗರೆಯುತ್ತವೆ! ಮಳೆಬರುವ ಪ್ರತೀ ಹಂತದಲ್ಲೂ ಮೋಡಗಟ್ಟಿದ ವಾತಾವರಣದಲ್ಲಿ ಅಂದದ ನವಿಲುಗಳು ನರ್ತಿಸುತ್ತವೆ. ದೂರದಲ್ಲಿ ಕೇಳಿಬರುವ ಯಾವುದೋ ಸದ್ದನ್ನು ಆಲಿಸಿ  ಕಿವಿನಿಮಿರಿಸಿ ನಿಂತ ಹರಿಣಗಳು ಚಂಗು ಚಂಗೆಂದು ಜಿಗಿದೋಡುತ್ತವೆ. ಗಾಳಿಗೆ ತೊನೆಯುವ ಗಾತ್ರದ ಸ್ನೇಹಲತೆಗಳು ತಮ್ಮ ನಳಿದೋಳುಗಳಿಂದ ಮರವರಮಹಾಶಯರನ್ನು ಬಿಗಿದಪ್ಪುತ್ತವೆ; ಲಲ್ಲೆಗರೆಯುತ್ತವೆ. ತರಗೆಲೆಗಳು ನೆನೆದು, ಕೊಳೆತು, ಹಲವು ಹೊಸ ಜೀವಸಂಕುಲಗಳು ಹುಟ್ಟತೊಡಗುತ್ತವೆ. ಜಿಂಕೆ-ಕಡವೆ-ಸಾರಂಗ, ಸಾಂಬಾರ್, ಕೃಷ್ಣಮೃಗ, ಹಂದಿ, ಹುಲಿ, ಮೊಲ, ಆನೆ, ಕರಡಿ, ಮುಂಗುಸಿ, ಹಾವು, ಚೇಳು, ಕಪ್ಪೆ, ಉಡ, ಸಿಳ್ಳೆಕ್ಯಾತ, ಮಂಗ, ಅಳಿಲು, ಕೇಶಳಿಲು, ಮಂಗಟ್ಟೆ-ಮೈನಾ-ಬುಲ್ ಬುಲ್-ಮಿಂಚುಳ್ಳಿ, ಕೊಕ್ಕರೆ....ಜೀವ ವೈವಿಧ್ಯಗಳನ್ನು ಹೆಸರಿಸ ಹೊರಟರೆ ಬಹಳ ಉದ್ದದ ಪಟ್ಟಿಯಾಗುತ್ತದೆ. ಯಾವುದು ಬೇಕು ಯಾವುದು ಬೇಡ ಎನ್ನುವ ಹಾಗೇ ಅನಿಸುವುದಿಲ್ಲ, ಎಲ್ಲವೂ ಒಂದಕ್ಕಿಂತ ಒಂದು ಭಿನ್ನ, ಒಂದಕ್ಕಿಂತ ಇನ್ನೊಂದು ಚೆನ್ನ ! ಎಲ್ಲೆಲ್ಲೋ ಹುಟ್ಟಿ ಹರಿಯುವ ತೊರೆಗಳು ಹಾಲು ಬಣ್ಣದ ಜಲಪಾತಗಳನ್ನು ಸೃಜಿಸಿರುತ್ತವೆ. ಬುಳುಬುಳು ಸದ್ದಿನೊಡನೆ ಹರಿಯುವ ಸ್ಫಟಿಕಸದೃಶ ನೀರು ಮನಸ್ಸಿನ ಕಲ್ಮಶವನ್ನೇ ತೊಳೆಯುವಂತಿರುತ್ತದೆ.       

ಕಮಲದಲಾಮಲ ಕೋಲಮಕಾಂತಿ-
ಕಲಾಕಲಿತಾಮಲ ಭಾಲಲತೇ |
ಸಕಲವಿಲಸ ಕಲಾನಿಲಯಕ್ರಮ
ಕೇಲಿಚಲತ್ಕಲ ಹಂಸಕುಲೇ |
ಅಲಿಕುಲಸಂಕುಲ ಕುವಲಯಮಂಡಲ
ಮೌಲಿಮಿಲದ್ ಬಕುಲಾಲಿಕುಲೇ |
ಜಯಜಯ ಹೇ ಮಹಿಷಾಸುರಮರ್ದಿನಿ
ರಮ್ಯಕಪರ್ದಿನಿ ಶೈಲಸುತೇ  ||

ಹರವಾದ ಸರೋವರದಲ್ಲಿ ಅಲ್ಲಲ್ಲಿ ಕಮಲಗಳು ಮೂಡಿರಲು, ಬಿಳಿಯ ಹಂಸಗಳು ಕೊಳದ ತುಂಬಾ ಸಂಚರಿಸುತ್ತಿರಲು ಅಡವಿಯ ನಡುವೆ ಅಂತಹ ಸೌಂದರ್ಯ ಕಾಣಸಿಕ್ಕರೆ ಸ್ವರ್ಗವನ್ನೇ ಕಂಡಷ್ಟು ಸಂತಸವಾಗುತ್ತದಲ್ಲವೇ? ಇಂತಹ ಅನೇಕ ಮೇದಿನಿಗಳು ಒಂದುಕಾಲಕ್ಕೆ ಭಾರತದಾದ್ಯಂತ ಇದ್ದವು. ಅಲ್ಲಿ ಋಷಿಮುನಿಗಳು ತಪೋನಿರತರಾಗಿರುತ್ತಿದ್ದರು. ನಮ್ಮ ರಾಮಾಯಣ-ಮಹಾಭಾರತಗಳಲ್ಲೇ ನೋಡಸಿಗುವ ಅನೇಕ ವನಗಳು ಇವತ್ತು ಇಲ್ಲವಾಗಿವೆ. ದಂಡಕಾರಣ್ಯ, ಋಷ್ಯಮೂಕ, ವಿಂಧ್ಯಾರಣ್ಯ, ಪಂಚವಟಿ ಇಂತಹ ಹಲವು ಕಾನನಗಳು ಕಾಲದಗತಿಯಲ್ಲಿ ನಾಶವಾಗಿವೆ; ಅಲ್ಲೆಲ್ಲಾ ನಗರಗಳೂ, ಪಟ್ಟಣಗಳೂ ತಲೆಯೆತ್ತಿ ನಿಂತಿವೆ. ಕೇವಲ ಮಿಕ್ಕಿದ ಎಲ್ಲಾ ವ್ಯವಸ್ಥೆಗಳಿದ್ದು ಕಾಡು ಇಲ್ಲದಿದ್ದರೆ ಮನುಷ್ಯ ಸುಖಿಯೇ? ಕಾಡಿಲ್ಲದ ಜಗತ್ತನ್ನು ನೆನೆಸಿಕೊಳ್ಳಲೂ ಹೆದರಿಕೆಯಾಗುತ್ತದೆ. ಕಾಡೇ ಎಲ್ಲಾ ಸಂಪತ್ತಿಗೂ ಮೂಲಸಂಪತ್ತು! ಕಾಡಿದ್ದರೇ ಮಳೆಬೆಳೆಗಳು ಕಾಲಕಾಲಕ್ಕೆ ಆಗಲು ಸಾಧ್ಯ.

ಹಿಂದಕ್ಕೆ ಚಪ್ಪನ್ನೈವತ್ತಾರು ದೇಶಗಳಾಗಿ ವಿಂಗಡಿಸಲ್ಪಟ್ಟಿದ ಅಖಂಡ ಭಾರತ ಹಲವು ಮೇದಿನಿಪರನ್ನು ಕಂಡಿತ್ತು, ಆ ಮೇದಿನಿಪರಲ್ಲಿ ಅದೆಷ್ಟೋ ಜನ  ಇಳೆಯೆಂಬ ಮೇದಿನಿಯನ್ನು ಪೊರೆಯುವಲ್ಲಿ ರಾಜನೀತಿಗಳನ್ನು ಸಮರ್ಪಕವಾಗಿ ಅನುಸರಿಸುತ್ತಿದ್ದರು. ಐವತ್ತಾರು ದೇಶಗಳಲ್ಲಿ ಒಳಗೊಳಗೆ ರಾಜಕೀಯ ದ್ವೇಷಾಸೂಯೆಗಳಿದ್ದರೂ ಭಾರತದ ಅಖಂಡತೆಗೆ ಧಕ್ಕೆಯಾಗದ ಅಘೋಷಿತ ಸುತ್ತುವರಿ ಸರಹದ್ದೊಂದು ನಿರ್ಮಾಣವಾಗಿತ್ತು; ಅದಕ್ಕೆ ಎಲ್ಲರೂ ಬದ್ಧರಾಗಿದ್ದರು! ಮೇದಿನಿಪರುಗಳು ಅಳಿದಮೇಲೆ ರಾಜತಾಂತ್ರಿಕ ವ್ಯವಸ್ಥೆ ಪ್ರಜಾತಾಂತ್ರಿಕ ವ್ಯವಸ್ಥೆಯಾಗಿ, ಪ್ರಜಾರಾಜ್ಯದಲ್ಲಿ ’ಕೊಟ್ಟವ ಕೋಡಂಗಿ ಇಸ್ಗೊಂಡವ ಈರಭದ್ರ’ಅನ್ನೋ ರೀತಿಯಲ್ಲಿ ಮೇದಿನಿಯ ಹಕ್ಕುಬಾಧ್ಯತೆಗಳನ್ನು ಲಕ್ಷ್ಯಿಸುವವರು ಕಮ್ಮಿ ಇದ್ದಾರೆ; ಅಹರ್ನಿಶಿ ಹಣದ ಕನಸನ್ನೇ ಕಾಣುವ  ಅವರುಗಳಿಗೆ ’ಮೇದಿನಿ’, ’ಕಾಡು’ ಹೀಗೆಲ್ಲಾ ಪದಪ್ರಯೋಗವಾದರೆ ಕಿವಿಯಲ್ಲೇ ಕಾಗೆ ಕೂತು ಕಾ ಕಾ ಕಾ ಕಾ ಎಂದು ಕರ್ಕಶವಾಗಿ ಕೂಗಿದಂತೇ ಭಾಸವಾಗುತ್ತಿರಬೇಕು. ಖುರ್ಚಿ ಉಳಿಸಿಕೊಳ್ಳುವುದರಲ್ಲೇ ನಿರತರಾಗುವ ಪ್ರಜಾರಾಜರುಗಳು ಹಿಂದಿನ ಮೇದಿನಿಪರಿಗೆ ಯಾವ ಲೆಕ್ಕದಲ್ಲೂ ಸರಿಗಟ್ಟುವುದಿಲ್ಲ. ಕಾಣದ ದೈವದ ಕಾರುಣ್ಯವೋ ಎಂಬಂತೇ ಅಪರೂಪಕ್ಕೆ ಅಲ್ಲಲ್ಲಿ ಮೇದಿನಿಯಂತಹ ಬೆಟ್ಟಗಳು ಇನ್ನೂ ಅತಿ ಕಮ್ಮಿ ಸಂಖ್ಯೆಯಲ್ಲಿ ಉಳಿದಿವೆ. ಅರಾಜಕತೆಯ ಪ್ರಜಾತಂತ್ರದಲ್ಲಿ ಅವುಗಳನ್ನು ರಕ್ಷಣೆಮಾಡಿಕೊಳ್ಳುವುದು ಪ್ರಜೆಗಳದ್ದೇ ಜವಾಬ್ದಾರಿಯಾಗಿದೆ.


Sunday, May 13, 2012

ಅದುರಿದ ಇನ್ಫಿ, ಗರಿಗೆದರಿದ ಪೆಂಟಾಲೂನ್ ಮತ್ತು ಮುಗಿದ ಪಟ್ನಿ ಅಧ್ಯಾಯ

ಅದುರಿದ ಇನ್ಫಿ, ಗರಿಗೆದರಿದ ಪೆಂಟಾಲೂನ್ ಮತ್ತು ಮುಗಿದ ಪಟ್ನಿ ಅಧ್ಯಾಯ
ಜಾಗತಿಕ ಮಾರುಕಟ್ಟೆಯಲ್ಲಿ ದಿನಂಪ್ರತಿ ಪೈಪೋಟಿ ನಡೆದೇ ಇರುತ್ತದೆ. ಎಷ್ಟೇ ತಲೆಮೇಲೆತ್ತಿ ನಡೆಯಲು ಪ್ರಯತ್ನಿಸಿದರೂ ಪರಿಸ್ಥಿತಿ ಉಲ್ಬಣಿಸಿದಾಗ ತಲೆಕೆಳಗಾಗಿ ನಡೆಯಬೇಕಾಗುವುದು ಅನಿವಾರ್ಯವಾಗುತ್ತದೆ; ಹೊರ ಜಗತ್ತಿಗೆ ಅದು ಗೋಚರವಾಗುತ್ತದೆ. ಹುಡುಗಿ ೩ ತಿಂಗಳು ೬ ತಿಂಗಳು ೯ ತಿಂಗಳ ತನಕವೂ ಬಚ್ಚಿಟ್ಟ ರಹಸ್ಯ ಬಸಿರು ೯ತಿಂಗಳ ಹಡೆಯುವ ಕಾಲಕ್ಕೆ ಹೊರಬರಲೇಬೇಕಾಗುತ್ತದೆ ಹೇಗೋ, ಒತ್ತಡಗಳನ್ನು ಹಿಮ್ಮೆಟ್ಟಿಸಿ ಬಿದ್ದ ಜಾಗದಿಂದ ಸಾವರಿಸಿಕೊಂಡು ಮೇಲೆದ್ದು ಮೈಕೊಡವಿ ತನಗೇನೂ ಆಗಿಲ್ಲವೆಂದು ಪೋಸುಕೊಡುವುದು ಕೆಲವು ಹಂತಗಳವರೆಗೆ ಮಾತ್ರ ಸಾಧ್ಯ. ಯಾವುದೋ ಒಂದು ಹಂತದಲ್ಲಿ ಅಂತರಂಗ ಬಹಿರಂಗವಾಗಲೇಬೇಕಾಗುತ್ತದೆ.

ಹೊಸ ಹೊಸ ದಂಧೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಆಗಸಕ್ಕೆ ನೆಗೆದು ಹೆಸರುಮಾಡಿದವರನ್ನು ನಾವು ಕಾಣುತ್ತಲೇ ಇದ್ದೇವೆ. ಅದರಲ್ಲಿ ಇನ್ಫೋಸಿಸ್, ಫ್ಯೂಚರ್ ಗ್ರೂಪ್ ಕೂಡ ಇದ್ದಾವೆ. ಇದುವರೆಗೆ ಜಾಗತಿಕ ಮಾರುಕಟ್ಟೆಯಲ್ಲಿ ಭಾರತೀಯ ಮೂಲದ್ದಾಗಿ, ತಂತ್ರಾಂಶ ನಿರ್ಮಾಣದಲ್ಲಿ ಅಪ್ರತಿಮ ಹೆಸರು ಗಳಿಸಿದ ಇನ್ಫಿಗೆ ಈಗ ಹೊಡೆತದ ಸರದಿ! ವಾಸ್ತವಿಕವಾಗಿ ಜಗತ್ತಿನಲ್ಲಿ ಮೂಲಭೂತವಾಗಿ ಬೇಕಾಗುವ ತಂತ್ರಾಂಶಗಳ ಅಭಿವೃದ್ಧಿ ಅದಾಗಲೇ ನಡೆದು ಮುಗಿದಿದೆ; ಇನ್ನೇನಿದ್ದರೂ ಅವುಗಳ ಪರಿಷ್ಕರಣೆ ಮತ್ತು ಕೆಡದಂತೆ ರಕ್ಷಣೆ ಈ ಕೆಲಸಗಳು ಮಾತ್ರ ಉಳಿದಿವೆ. ಎಲ್ಲೋ ಅಲ್ಪಮಟ್ಟದಲ್ಲಿ ಹೊಸ ಹೊಸ ತಂತ್ರಾಂಶಗಳ ಪ್ರಾಜೆಕ್ಟ್ ಗಳು ಸಿಗಬಹುದಾದರೂ ಅದಕ್ಕೆ ಹತ್ತಾರು ಕಂಪನಿಗಳ ಟೆಂಡರ್ ಕರೆಯಲಾಗುತ್ತದೆ. ಕರೆದ ಹತ್ತಾರು ಕಂಪನಿಗಳ ಹೊರತಾಗಿ ನೂರಾರು ತಂತ್ರಾಂಶ ಕಂಪನಿಗಳು ತಮ್ಮ ಗುತ್ತಿಗೆಯ ಹಣವನ್ನು ಟೆಂಡರ್ ನಲ್ಲಿ ನಮೂದಿಸಿರುತ್ತವೆ. ಸಹಜವಾಗಿ ಕಡಿಮೆ ಖರ್ಚಿನಲ್ಲಿ ಉತ್ತಮವಾದ ತಂತ್ರಾಂಶ ಒದಗಿಸಬಲ್ಲ ಕಂಪನಿಯತ್ತ ಆದೇಶ ಹೊರಳುತ್ತದೆ.  

ತನ್ನ ಗಾತ್ರದಿಂದ ತನಗಿರುವ ಹಲವಾರು ಖರ್ಚುವೆಚ್ಚಗಳಿಂದ ಸಾಮಾನ್ಯವಾಗಿ ಎಲ್ಲಾ ಕಂಪನಿಗಳಿಗಿಂತಲೂ ಅಧಿಕ ಮೊತ್ತವನ್ನು ಇನ್ಫಿ ನಮೂದಿಸುವುದು ಸಹಜ. ಯಾವಾಗ ಪ್ರಾಜೆಕ್ಟ್ ವೆಚ್ಚ ಜಾಸ್ತಿಯಾಗಿ ತೋರುತ್ತದೋ ಆಗ ಹೊರಗುತ್ತಿಗೆ ಆದೇಶಿಸುವ ಕಂಪನಿಗಳು ಇನ್ಫಿಯಂತಹ ಕಂಪನಿಗಳನ್ನು ಕೈಬಿಡುವುದೂ ನಡೆಯುತ್ತದೆ. ಪ್ರಸಕ್ತ ವರ್ಷದಲ್ಲಿ ಹಾಗೇ ಆಗಿದೆ. ಜಾಗತಿಕ ಆರ್ಥಿಕ ಕುಸಿತ ಎಂಬ ಕಾರಣಕ್ಕೆ ಇನ್ಫಿ ತನ್ನ ತಂತ್ರಜ್ಞರಿಗೆ, ಕೆಲಸಗಾರರಿಗೆ ಈಗಾಗಲೇ ಸಂಬಳದಲ್ಲಿ ಕಡಿತವನ್ನು ಘೋಷಿಸಿದೆ! ಮುಂಬರುವ ದಿನಗಳಲ್ಲಿ ಇನ್ನೂ ಕಡಿತಗೊಳ್ಳುವ ಸಾಧ್ಯತೆ ಕಾಣುತ್ತದೆ. ಯಾವುದೇ ರಂಗದಲ್ಲೇ ಆಗಲಿ, ಅನಾರೋಗ್ಯಕರ ಪೈಪೋಟಿ ಯಾವಾಗ ಆರಂಭವಾಗುತ್ತದೋ ಆಗ ಅಲ್ಲಿ ಹಲವು ಕಂಪನಿಗಳು ಅಥವಾ ಕೆಲಸಗಾರರು ನಷ್ಟವನ್ನು ಅನುಭವಿಸಬೇಕಾಗುತ್ತದೆ. ಕಂಪನಿಗಳು ಬಾಳುವ ಶಕ್ತಿಯನ್ನೇ ಕಳೆದುಕೊಳ್ಳಲೂ ಬಹುದು. ಚಿಕ್ಕಪುಟ್ಟ ಕಂಪನಿಗಳಲ್ಲಿ ಅವುಗಳ ಮಾಸಿಕ ಖರ್ಚುವೆಚ್ಚಗಳು ಕಮ್ಮಿ ಇರುತ್ತಿದ್ದು ಅವು ಹೇಗೋ ಸ್ವಲ್ಪ ನಿಭಾಯಿಸಬಹುದು, ವ್ಯವಹಾರ ಬೆಳೆಯುತ್ತಿದ್ದಾಗ, ಅದಕ್ಕೆ ತಕ್ಕಂತೇ ಹಿಗ್ಗಿದ ಗಜಗಾತ್ರದ ಮಾನವಸಂಪನ್ಮೂಲವುಳ್ಳ ಕಂಪನಿಗಳಿಗೆ ಇಂತಹ ಪೈಪೋಟಿಗಳಲ್ಲಿ ಇಳಿದಾಗ ಲುಕ್ಸಾನು ಕಟ್ಟಿಟ್ಟಬುತ್ತಿ. 

ವ್ಯಾವಹಾರಿಕವಾಗಿ ಹೊಸ ಹೊಸ ಆದೇಶಗಳನ್ನು ತನ್ನದಾಗಿಸಿಕೊಂಡು ಅಭಿವೃದ್ಧಿ ಕಾಣಬೇಕೆಂಬ ಕನಸು ಪ್ರತೀ ಕಂಪನಿಗಳ ನಿರ್ಮಾತೃಗಳಿಗೆ ಇರುತ್ತದೆ. ಅದು ಚಿಲ್ಲರೆ ಅಥವಾ ಸಗಟು ವ್ಯಾಪಾರಗಳ ರಂಗದಲ್ಲೂ ಇದೆ. ಚಿಲ್ಲರೆ ವ್ಯಾಪಾರವನ್ನೇ ಸಗಟುವ್ಯವಹಾರದ ರೀತಿ ಮಾಡಿಕೊಂಡು ಗ್ರಾಹಕರನ್ನು ನೇರವಾಗಿ ತಲ್ಪಿ ಲಾಭಪಡೆಯುವ ಸನ್ನಾಹದಿಂದ ಸಾವಿರಾರು ಕಂಪನಿಗಳ ಸಾವಿರಾರು ಉತ್ಫನ್ನಗಳನ್ನು ತನ್ನ ಮೂಲಕ ಮಾರುಕಟ್ಟೆಯಲ್ಲಿ ವಿಲೇವಾರಿ ಮಾಡುವುದು ಫ್ಯೂಚರ್ ಗ್ರೂಪ್ ಎಂಬ ಕಂಪನಿಯ ಸಾಹಸವಾಗಿದೆ. ಕಿಶೋರ್ ಬಿಯಾನಿ ಈ ಗ್ರೂಪನ್ನು ಆರಂಭಿಸಿದರು. ಬೆಳೆಯುತ್ತಾ ಬೆಳೆಯುತ್ತಾ ದೇಶವ್ಯಾಪಿ ತನ್ನ ಮೈಚಾಚಿ ಸಾವಿರಾರು ಜನರನ್ನು ತನ್ನ ಮಳಿಗೆಗಳಲ್ಲಿ ಕೆಲಸಕ್ಕೆ ನಿಯಮಿಸಿಕೊಂಡ ಫ್ಯೂಚರ್ ಗ್ರೂಪ್, ತತ್ಸಮಾನ ಪೈಪೋಟಿ ನೀಡಲು ಬಿರ್ಲಾ ಮೋರ್, ಟಾಟಾ ಸ್ಟಾರ್, ರಿಲಾಯನ್ಸ್  ಮಳಿಗೆಗಳು ಸನ್ನದ್ಧಗೊಂಡವು. ಸಾಲದ್ದಕ್ಕೆ ಮಹಾನಗರಗಳಲ್ಲಿ ಮಾಲ್ ಕಲ್ಚರ್ ಕಾಣಿಸಿಕೊಂಡು ಒಂದೇ ಸೂರಿನಡಿಯಲ್ಲಿ ಎಲ್ಲವೂ ದೊರೆಯುವಂತಾಗಿ ಮಾಲ್ ಗಳಲ್ಲಿ ಹಲವಾರು ಹೊಸ ಹೊಸ ಕಂಪನಿಗಳು ನೇರವಾಗಿ ವ್ಯಾಪಾರಕ್ಕೆ ಇಳಿದವು. ಇದರಿಂದ ಫ್ಯೂಚರ್ ಗ್ರೂಪ್ ೫೬೯೨ ಕೋಟಿ ಸಾಲದ ಹೊರೆಯನ್ನು ಹೊರಬೇಕಾಯಿತು. ಪೆಂಟಾಲೂನ್ಸ್, ಬಿಗ ಬಜಾರ್, ಬ್ರಾಂಡ್ ಫ್ಯಾಕ್ಟರಿ, ಸೆಂಟ್ರಲ್, ಫುಡ್ ಬಜಾರ, ಸ್ಟೆಪಲ್ಸ್, ಹೋಮ್ ಟೌನ್ ಮೊದಲಾದ ಬೇರೇ ಬೇರೇ ಹೆಸರುಗಳಲ್ಲಿ ಬೇರೇ ಬೇರೇ ವಿಭಾಗಗಳಿಗೆ ಸಂಬಂಧಿಸಿದ ಸರಕುಗಳನ್ನು ಮಾರಾಟಮಾಡುತ್ತಿದ್ದ ಫ್ಯೂಚರ್ ಗ್ರೂಪ್ ತನ್ನ ಅಸಹಾಯಕತೆಯನ್ನು ’ಥರ್ಡ್ ಐ’ ಎಂಬ ಸಲಹೆದಾರರಿಗೆ ತಿಳಿಸಿದಾಗ ಅವರು ನೀಡಿದ ಪರಿಹಾರ ಸೂತ್ರವಾಗಿ ಈಗ ಆದಿತ್ಯ ಬಿರ್ಲಾ ಗೂಪಿನ ಎ.ಬಿ.ಎನ್. ಮತ್ತು ಫ್ಯೂಚರ್ ಗ್ರೂಪಿನ ಪೆಂಟಾಲೂನ್ ನಡುವೆ ವ್ಯವಹಾರಿಕ ಒಪ್ಪಂದವಾಗಿದೆ. ಪೆಂಟಾಲೂನ್ ನ ೮೦೦ ಕೋಟಿಯ ಸ್ಟೇಕ್ ಗಳನ್ನು ಎ.ಬಿ.ಎನ್. ಖರೀದಿಸಿದ್ದೂ ಅಲ್ಲದೇ ಉದಾರ ಮನದಿಂದ ಹೆಚ್ಚುವರಿಯಾಗಿ ೮೦೦ ಕೋಟಿಯನ್ನು ನೀಡಿ ಪೆಂಟಾಲೂನ್ ಗಿದ್ದ ೧೬೦೦ ಕೋಟಿ ಸಾಲದ ಭಾರವನ್ನು ನಿವಾರಿಸಿದೆ.

ಪೀಟರ್ ಇಂಗ್ಲೆಂಡ್, ವ್ಯಾನ್ ಹ್ಯೂಸನ್ ಮೊದಲಾದ ಕೆಲವು ಬ್ರಾಂಡ್ ಗಳಲ್ಲಿ ರೆಡಿಮೇಡ್ ಗಾರ್ಮೆಂಟ್ಸ್ ಮಾರುತ್ತಿದ್ದ ಎ.ಬಿ.ಎನ್ ಪೆಂಟಾಲೂನ್ ಜೊತೆ ಸೇರಿದ್ದರಿಂದ ಈಗ ಹೊಸದೊಂದು ಹೆಸರಿನಲ್ಲಿ ಪೆಂಟಾಲೂನ್ ಮಳಿಗೆಗಳು ಶೋಭಿಸಲಿವೆ; ವ್ಯಾಪಾರ ಮುಂದುವರಿಸಲಿವೆ. ಹಲವುದಿನಗಳಿಂದ ನಿದ್ದೆಗೆಟ್ಟಿದ್ದ ಕಿಶೋರ್ ಬಿಯಾನಿಗೆ ಇರುವ ೫೬೯೨ ಕೋಟಿ ಹೊರೆಯಲ್ಲಿ ೧೬೦೦ ಕೋಟಿ ಭಾರ ಇಳಿದಿದೆ! ಇದು ಸ್ವಲ್ಪ ನಿಟ್ಟುಸಿರಿ ಬಿಡಲು ಕಾರಣವಾಗಿದೆ. ಇದೇ ರೀತಿ ಮಿಕ್ಕುಳಿದ ವಿಭಾಗಗಳನ್ನೂ ಆಸಕ್ತಿ ಮತ್ತು ಆರ್ಥಿಕಾನುಕೂಲವಿರುವ ಬೇರೇ ಕಂಪನಿಗಳ ಜೊತೆ ಸೇರಿಕೊಂಡು ನಿಭಾಯಿಸಿದರೆ ಮಾತ್ರ ಫ್ಯೂಚರ್ ಗ್ರೂಪ್ ಉಳಿಯಬಹುದೇ ಹೊರತು ಇಲ್ಲದಿದ್ದರೆ ಇದು ಕಿಂಗ್ ಫಿಶರ್ ರೀತಿಯಲ್ಲೇ ಸಂಬಳಕೊಡಲೂ ಪರದಾಡಬೇಕಾದ ಸ್ಥಿತಿ ಬರಬಹುದು!

ಬರಕತ್ತಾಗದ ಬಿಸಿನೆಸ್ಸಿಗೆ ಕೈಹಾಕುವುದು ಎಂದರೆ ಅದು ಕಂಪನಿಯ ಅಧೋಗತಿ ಎಂತಲೇ ಅರ್ಥ. ಒಂದು ವಸ್ತುವಿಗೆ ಅಥವಾ ಒಂದು ಸೇವೆಗೆ ತಗಲಬಹುದಾದ ವೆಚ್ಚಕ್ಕಿಂತ ಭಾರೀ ಕಮ್ಮಿ ಮೊತ್ತಕ್ಕೆ ಹೊರಗುತ್ತಿಗೆ ಹಿಡಿದು ಗಿರಾಕಿಗಳನ್ನು ಸಂಭಾಳಿಸುವುದು ನಿಜಕ್ಕೂ ಬಹಳ ದುರ್ಭರ ಪ್ರಸಂಗ. ಹಸಿದ ಹೊಟ್ಟೆಗೆ ಹಳಸಿದ ಅನ್ನವಾದರೇನು ಯಾರೋ ತಿಂದುಬಿಟ್ಟು ತೂರಿದ ಅನ್ನವಾದರೇನು ಅಲ್ಲವೇ? ಪೈಪೋಟಿ ನಿರತ ಕಂಪನಿಗಳ ಉದರಂಭರಣೆ ಕೆಲವೊಮ್ಮೆ ರಾಟ್ ರೇಸ್ ನಲ್ಲಿ ಕಷ್ಟಸಾಧ್ಯ. ಗಣಕಯಂತ್ರದ ಹಾರ್ಡ್ ವೇರ್ ಲೈನ್ ನಲ್ಲಿ ಇದು ಬಹಳ ಪ್ರಸ್ತುತ. ಅಲ್ಲಿ ಮಾಡುವ ಕೆಲಸಕ್ಕೆ ತಕ್ಕಮರ್ಯಾದೆ ಇಲ್ಲ. ಎಂಜಿನೀಯರ್ ಆಗಿರಲಿ, ಎಸ್.ಎಸ್.ಎಲ್.ಸಿ ಅನುತ್ತೀರ್ಣ ವ್ಯಕ್ತಿಯೇ ಆಗಿರಲಿ ವಿಂಡೋಸ್ ಇನ್ಸ್ಟಾಲೇಶನ್ ಮಾಡುವಲ್ಲಿ ಇಬ್ಬರ ತೂಕವನ್ನೂ ಒಂದೇ ರೀತಿ ಅಳೆಯುವ ಜಾಯಮಾನ ನಮ್ಮ ಗಿರಾಕಿಗಳದು. ಗಣಕಯಂತ್ರದ ಸಮಸ್ಯೆಗಳನ್ನು ತರ್ಕಬದ್ಧವಾಗಿ ಮೂಲಬೇರು ಹಿಡಿದು ಸಮಸ್ಯಾಪೂರಣ ಗೊಳಿಸಿ ನಿವಾರಿಸಿ ಕೊಡಬಲ್ಲ ಎಂಜಿನೀಯರ್ ಗಳನ್ನೂ ಮತ್ತು ಮಧ್ಯಂತರದಲ್ಲಿ ಮೇಸ್ತ್ರಿ ಕೆಲಸಮಾಡುವ ಸರಿಯಾಗಿ ಏನೂ ಗೊತ್ತಿರದ ಹುಡುಗರನ್ನೂ ಏಕದೃಷ್ಟಿಯಿಂದ ಅಳೆದು ಕೆಲಸಕ್ಕೆ ಸಲ್ಲಬೇಕಾದ ಗೌರವ ಸಂಭಾವನೆಯಲ್ಲಿ ಏಕರೂಪವನ್ನು ಕೊಡಮಾಡುವ ಗಿರಾಕಿಗಳಿಗೆ/ಗ್ರಾಹಕರಿಗೆ/ಉದ್ದಿಮೆದಾರರಿಗೆ ಏನೆನ್ನಬೇಕೋ ತಿಳಿದಿಲ್ಲ.
 
ಹಾಗಂತ ಗಣಕಯಂತ್ರಗಳ ಬೃಹತ್ ಅಥವಾ ಮಧ್ಯಮದರ್ಜೆಯ ನೆಟ್ವರ್ಕ್ ಇರುವಲ್ಲಿ ಸ್ಕಿಲ್ಡ್ ಲೇಬರ್ ಅನಿವಾರ್ಯವೆಂಬುದು ಬಹುತೇಕರಿಗೆ ತಿಳಿದೇ ಇದೆ. ಸ್ಕಿಲ್ಡ್ ಮತ್ತು ನಾನ್-ಸ್ಕಿಲ್ಡ್ ಸರ್ವಿಸ್ ಕೊಡುವವರಬಗ್ಗೆ ಮಹಿತಿಯೂ ಇರುತ್ತದೆ. ಆದರೂ ಕಾಲಿಗೆ ಹತ್ತಿದ ಕೊಳೆಯನ್ನು ತೊಳೆದುಕೊಳ್ಳುವಷ್ಟೇ ಸಲೀಸಾಗಿ ಸಮಸ್ಯೆಗಳ ನಿವಾರಣೆಗೆ ಸೆಮಿಸ್ಕಿಲ್ಡ್ ಅಥವಾ ನಾನ್-ಸ್ಕಿಲ್ಡ್ ಕೆಲಸಗಾರರನ್ನೇ ಒಪ್ಪಿಕೊಂಡು ಹೇಗಾದರೂ ಕೆಲಸಗಳನ್ನು ಕಮ್ಮಿ ಖರ್ಚಿನಲ್ಲಿ ನಿಭಾಯಿಸಿಕೊಳ್ಳುವುದು ಹಲವು ಗಿರಾಕಿಗಳ/ಗ್ರಾಹಕರ/ಉದ್ದಿಮೆದಾರರ ಲೆಕ್ಕಾಚಾರ. ಹೀಗೆ ಉಳಿಸುವ ಅಲ್ಪ ಹಣಕ್ಕೆ ಬದಲಾಗಿ ಕೆಲವೊಮ್ಮೆ ದ್ವಿಗುಣದಷ್ಟು ಖರ್ಚು ತಂದುಕೊಳ್ಳುವ ಪರಿಸ್ಥಿತಿ ಎದುರಿಸುವವರೂ ಅವರೇ! ಆದರೂ ಇನ್ನೂ ಕೂಡ ಸಾರ್ವಜನಿಕ ರಂಗದಲ್ಲಿ ಗಣಕಯಂತ್ರಗಳ ಭೌತಿಕಕಾಯಗಳ ಸೇವೆಯನ್ನು ಸರಿಯಾದ ಪರಿಮಾಣದಲ್ಲಿ ಜನ ಗುರುತಿಸಿಲ್ಲ. " ನಿಮ್ಮ ಕಂಪನಿಯಲ್ಲಿ ಎಷ್ಟು ಜನರಿದ್ದಾರೆ? ನಿಮ್ಮ ಕಂಪನಿ ಎಷ್ಟು ಗಿರಾಕಿಗಳನ್ನು ಹೊಂದಿದೆ? ನಿಮ್ಮ ಕಂಪನಿಯ ವಾರ್ಷಿಕ ವಹಿವಾಟು ಐವತ್ತು ಲಕ್ಷಕ್ಕೂ ಮಿಕ್ಕಿದೆಯೇ? " ಇದಿಷ್ಟೇ ಮೌಲ್ಯಮಾಪನ ಸಾಕೇ? ಕಂಪನಿಯಲ್ಲಿ ಕೆಲಸಕ್ಕೆ ಇರುವ ಎಂಜಿನೀಯರ್ ಗಳೆಷ್ಟು? ಕಂಪನಿಯನ್ನು ನಡೆಸುವವರ ಸ್ವಾನುಭವವೆಷ್ಟು? ಕಂಪನಿಯಿಂದ ನಿಭಾಯಿಸಲ್ಪಟ್ಟ ಜವಾಬ್ದಾರಿಯುತ ತಾಂತ್ರಿಕ ಕೆಲಸಗಳೆಷ್ಟು? -ಇಂತಹ ಪ್ರಶ್ನೆಗಳನ್ನು ಮೌಲ್ಯಮಾಪನಕ್ಕೆ ಬಳಸಿದ್ದರೆ ಒಳ್ಳೆಯದಿತ್ತು. ಮೌಲ್ಯಾಧಾರಿತವಾಗಿ ಹೊರಗುತ್ತಿಗೆ ನೀಡುವಾಗ ಗುತ್ತಿಗೆ ಪಡೆಯುವ ಕಂಪನಿಗೂ ತೊಂದರೆಯಾಗದ ರೀತಿಯಲ್ಲಿ ನಡೆದುಕೊಳ್ಳುವ ಸೌಜನ್ಯ ಇದ್ದರೆ ಒಳ್ಳೆಯದಾಗಿತ್ತು.

ಬಹುತೇಕ ಎಸ್.ಬಿ.ಐ ಶಾಖೆಗಳು ಮತ್ತು ಇನ್ನಿತರ ಕೆಲವು ಸಂಸ್ಥೆಗಳ ಗಣಕಯಂತ್ರಗಳ ಭೌತಿಕಕಾಯಗಳ ಸಮಸ್ಯೆಗಳನ್ನು ಬಗೆಹರಿಸುವಲ್ಲಿ, ಅತಿ ಕಡಿಮೆ ಮೊತ್ತಕ್ಕೆ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಸಂಸ್ಥೆ ’ಪಟ್ನಿ ಕಂಪ್ಯೂಟರ್ ಸರ್ವಿಸಸ್’. ಒಂದುಕಾಲಕ್ಕೆ ಐಐಟಿಯಿಂದ ಹೊರಬಿದ್ದ ಎಂಜಿನೀಯರ್ ಗಳಾದ, [ಇನ್ಫಿಸಂಸ್ಥಾಪಕ] ನಾರಾಯಣ ಮೂರ್ತಿ ಮೊದಲಾದವರು ಪಟ್ನಿಯಲ್ಲಿ ಕೆಲಸಮಾಡಿದವರಾಗಿದ್ದಾರೆ. ಪಿ.ಸಿ.ಎಸ್ ಎಂದು ತನ್ನದೇ ಬ್ರಾಂಡ್ ಹಾಕಿ ಗಣಕಯಂತ್ರವನ್ನೂ ಮಾರುಕಟ್ಟೆಗೆ ಬಿಟ್ಟಿದ್ದ ಪಿ.ಸಿ.ಎಸ್. ಹಾರ್ಡವೇರ್ ಮೂಲ ಬೆಲೆಗೆ ೪ ಪ್ರತಿಶತ ವೆಚ್ಚದಲ್ಲಿ ಹಾರ್ಡವೇರ್ ಸಮಸ್ಯಾಪೂರಣಕ್ಕೆ ಹೊರಗುತ್ತಿಗೆ ನಿಭಾಯಿಸುತ್ತಿತ್ತು ಎಂಬುದು ಒಳಗಿನ ಮೂಲಗಳಿಂದ ನಮಗೆ ಈ ಮೊದಲೇ ತಿಳಿದುಬಂದಿತ್ತು. ಪಿ.ಸಿ.ಎಸ್. ಅವಸಾನದ ಹಾದಿ ಹಿಡಿದಿದೆ ಎಂದು ನಾನು ೭ ವರ್ಷಗಳ ಹಿಂದೆಯೇ ಕೆಲವರಲ್ಲಿ ಹೇಳಿದ್ದೆ ಕೂಡ! ಇದು ಮತ್ಸರದಿಂದ ಹೇಳಿದ್ದಲ್ಲ ಬದಲಾಗಿ ಸನ್ನಿವೇಶವನ್ನು ವಿವೇಚಿಸಿ ಹೇಳಿದ ಮಾತಾಗಿತ್ತು. ಬದಲಾಗುತ್ತಿರುವ ಕಾಲಮಾನಕ್ಕೆ ತಕ್ಕಂತೇ ಸ್ಕಿಲ್ಡ್ ಎಂಜಿನೀಯರ್ ಗಳ ಸಂಬಳದಲ್ಲಿ ಹೆಚ್ಚಳವನ್ನು ಮಾಡಲೇಬೇಕಿತ್ತು. ಕೆಟ್ಟುಹೋಗ ಬಹುದಾದ ಹಾರ್ಡವೇರ್ ಬಿಡಿಭಾಗಗಳನ್ನು ಅಗತ್ಯಕ್ಕನುಸಾರವಾಗಿ ಮೊದಲೇ ಕಾಯ್ದಿರಿಸಿ ದಾಸ್ತಾನು ಇಟ್ಟುಕೊಳ್ಳಬೇಕಾಗುತ್ತಿದ್ದು, ಕೆಲವೊಮ್ಮೆ ಅವು ಬಳಕೆಯಾಗದಿದ್ದ ಪಕ್ಷದಲ್ಲಿ ವಿನಾಕಾರಣ ಹಣ ಪೋಲಾದಂತಾಗುತ್ತಿತ್ತು.

ಕೆಲಸಗಾರರ ಓಡಾಟದ ಖರ್ಚು, ಅಲ್ಲಲ್ಲಿ ವಸತಿಯ ಖರ್ಚು ಹೀಗೇ ತಗಲುವ ಮೂಲ ವೆಚ್ಚಕ್ಕೂ ಒಪ್ಪಿಕೊಂಡ ವೆಚ್ಚಕ್ಕೂ ಬಹಳ ಅಂತರವೇರ್ಪಡುತ್ತಿತ್ತು, ಪ್ರತೀವರ್ಷವೂ ಬ್ಯಾಂಕುಗಳು ಹೇರಳ ಲಾಭಗಳಿಸಿದವೇ ಹೊರತು ಪಿ.ಸಿ.ಎಸ್. ಬಗ್ಗೆ ಯಾರೂ ತಲೆಕೆಡಿಸಿಕೊಳ್ಳಲಿಲ್ಲ. ಹೊಳೆದಾಟಿದಮೇಲೆ ಅಂಬಿಗನ ಹಂಗು ಅವರಿಗೇಕೆ ಪಾಪ! ಸತತ ಹತ್ತೆಂಟು ವರ್ಷ ಪಿ.ಸಿ.ಎಸ್. ನಷ್ಟದಲ್ಲೇ ತನ್ನ ಸೇವೆಯನ್ನು ನಡೆಸಿಕೊಟ್ಟಿತಾದರೂ ಕೆಲಸವಿಲ್ಲದ ಕೈಗೆ ಕೆಲಸಪಡೆಯುವ ಹುನ್ನಾರದಲ್ಲಿ ತನ್ನನ್ನೇ ತಾನು ನಷ್ಟಕ್ಕೆ ಗುರಿಮಾಡಿಕೊಂಡಿತು. ಮೇಲಾಗಿ ಈ ಕಂಪ್ಯೂಟರ್ ಹಾರ್ಡವೇರ್ ಎನ್ನುವುದನ್ನು ಯಾರ್ಯಾರೋ ಮಾರ್ವಾಡಿಗಳು ತಮ್ಮ ವ್ಯಾಪಾರೀಕರಣಕ್ಕೆ ಬಳಸಿಕೊಂಡರು. ಫ್ಯಾಕ್ಟರಿ ಸೆಕೆಂಡ್ಸ್ ತೆಗೆದುಕೊಂಡು ಅದನ್ನು ಮಿಶ್ರಣಮಾಡಿ ಗ್ರೇ ಮಾರುಕಟ್ಟೆಯಲ್ಲಿ ಮಾರಾಟಮಾಡುತ್ತಾ ಹಾರ್ಡವೇರ್  ಮೌಲ್ಯವನ್ನೇ ಕಳೆದರು. ಎಷ್ಟೋ ಮಂದಿ ಹಾರ್ಡವೇರ್ ತಯಾರಕರು ಇದರಿಂದ ಕೈಸುಟ್ಟುಕೊಂಡು ದಂಧೆಯನ್ನೇ ಬಿಟ್ಟು ನಡೆದರು. ಹೀಗಿದ್ದೂ ಗಣಕಯಂತ್ರ ಹಾರ್ಡವೇರ್  ಮತ್ತು ಸೇವೆಗಳ ಕುರಿತಂತೇ ಸರಿಯಾದ ಅಸೋಶಿಯೇಶನ್ ಯಾವುದೂ ಅಸ್ಥಿತ್ವದಲ್ಲಿ ಬರಲಿಲ್ಲ. ಇರುವ ಸಂಘಟನೆ ಕೇವಲ ಸರಕಾರದ ತೆರಿಗೆ ಇತ್ಯಾದಿ ಸಮಸ್ಯೆಗಳ ಕುರಿತು ಚಿಂತಿಸುತ್ತದೆಯೇ ವಿನಃ ದರದಲ್ಲಿ  ಏಕರೂಪ ಅಥವಾ ಸೇವಾಶುಲ್ಕದಲ್ಲಿ ಏಕರೂಪ ಕೊಡುವುದು ಅವರಿಗೆ ಸಾಧ್ಯವಾಗಲಿಲ್ಲ. ಇದನ್ನೇ ಬಳಸಿಕೊಂಡ ಬ್ಯಾಂಕ್ ನಂತಹ ಸಂಸ್ಥೆಗಳು ಯಾರು ಕಮ್ಮಿಗೆ ಮಾಡಿಕೊಡುತ್ತಾರೋ ಅವರಿಗೇ ನಮ್ಮ ಆದೇಶ ಎಂಬುದಾಗಿ ಹೇಳಿದರು. ಆರಂಭಶೂರತನದಲ್ಲಿ ಪಿ.ಸಿ.ಎಸ್. ಮುಂಚೂಣಿಯಲ್ಲಿತ್ತು; ತಡೆದುಕೊಳ್ಳಲಾರದೇ ಈಗ ಅದು ನೆಗೆದುಬಿತ್ತು.

ಲುಕ್ಸಾನಿನಲ್ಲಿದ್ದ ಪಿ.ಸಿ.ಎಸ್ ಸಂಸ್ಥೆಗೆ ಸೇವೆಯನ್ನು ಬಹುತೇಕ ಬಿಟ್ಟಿಯಾಗೇ ಪಡೆದ ಎಸ್.ಬಿ.ಐ. ಸಾಲಕೊಡಲು ಮುಂದಾಗಲಿಲ್ಲ; ಸಾಲಪಡೆಯುವ ಇಚ್ಛೆಯಾಗಲೀ, ಇದೇ ರಂಗದ ಆದಾಯದಿಂದ ಪಡೆದಸಾಲವನ್ನು ಮರುಪಾವತಿಸುವ ಭರವಸೆಯಾಗಲೀ ಪಿ.ಸಿ.ಎಸ್. ಸ,ಸ್ಥೆಗೂ ಇರಲಿಲ್ಲ. ಹೇಳುವುದು ಸುಲಭ; ನಡೆಸುವುದು ಕಷ್ಟ ಎಂಬುದನ್ನು ನಾನು ಹಲವುಸರ್ತಿ ಹೇಳುತ್ತಿರುತ್ತೇನೆ. ಇಲ್ಲಿಯೂ ಕೂಡ ಹಾಗೇ ಪಿ.ಸಿ.ಎಸ್ ನವರು ಆರಾಮಾಗಿ ನಿಭಾಯಿಸಬಹುದಿತ್ತು ಎಂದು ಹೇಳಿಬಿಡಬಹುದು ಆದರೆ ಅದರಲ್ಲಿ ನಾವೂ ಭಾಗೀದಾರರಾಗಿದ್ದಲ್ಲಿ ಮಾತ್ರ ನಿಭಾಯಿಸುವ ಕಷ್ಟದ ಅರಿವಾಗುತ್ತದೆ. ಭಾಗಶಃ ಹಾರ್ಡವೇರ್ ರಂಗದಲ್ಲೇ ತೊಡಗಿಕೊಂಡು ಅದನ್ನು ಪಕ್ಕಕ್ಕಿರಿಸಿ ಬೇರೇ ಬೇರೇ ಉದ್ಯಮಗಳಲ್ಲಿ ತೊಡಗಿಕೊಂಡ ನಮಗೆ ಅಲ್ಲಿ ಘಟಿಸಬಹುದಾದ ಇಂಚಿಂಚಿನ ಅನುಭವ ಮತ್ತೆ ನೆನಪಿಗೆ ಬರುತ್ತದೆ. ಅಫ್ ಕೋರ್ಸ್ ಇಟ್ ಈಸ್ ಎ ಥ್ಯಾಂಕ್ ಲೆಸ್ ಜಾಬ್ ! ಹಾರ್ಡವೇರ್ ರಂಗದಲ್ಲಿ ನೂರಾರು ವರ್ಷ ಕೆಲಸಮಾಡಿದರೂ ಯಾರೊಬ್ಬರೂ ಕೃತಜ್ಞತೆ ಹೇಳುವುದಿಲ್ಲ, ಮೈ ಪೂರ್ತಿ ದುಡಿದು ಹಣ್ಣಾಗಿ ಹುಣ್ಣದರೂ ತಲೆಯಲ್ಲಿ ಮತ್ತೊಂದಷ್ಟು ಹುಣ್ಣಿರುತ್ತದೆ ಬಿಟ್ಟರೆ ಆರ್ಥಿಕವಾಗಿ ಯಾವುದೇ ನಂಬಲರ್ಹ ಆದಾಯವನ್ನು ತಂದುಕೊಡುವ ರಂಗ ಅದಲ್ಲ.

ಜಾಗತಿಕ ಆರ್ಥಿಕ, ತಾಂತ್ರಿಕ ಮತ್ತು ವಿಜ್ಞಾನ ರಂಗಗಳಲ್ಲಿ ಕ್ಷಿಪ್ರಗತಿಯಲ್ಲಿ ಬದಲಾವಣೆಯಾಗುತ್ತಿದೆ. ಜಾಗತಿಕ ಜನಸಂಖ್ಯೆಯೂ ಜಾಸ್ತಿಯಾಗುತ್ತಿದ್ದು ಪ್ರತಿಯೊಂದೂ ರಂಗದಲ್ಲಿ ಪೈಪೋಟಿ ಇದ್ದೇ ಇದೆ. ಕೇವಲ ಪೈಪೋಟಿಗಾಗಿ ಪೈಪೋಟಿ ಎನ್ನುತ್ತಾ ಆಮೇಲೆ ಮಕಾಡೆಮಲಗುವ ದಂಧೆಗಳನ್ನು ಆರಂಭಿಸಿ ಪೇಲವ ಮುಖಹೊತ್ತು ವಿಷಾದಕರವಾಗಿ ಮಾತನಾಡಿಕೊಳ್ಳುವುದರ ಬದಲು ಮೊದಲೇ ಅವಲೋಕನ ನಡೆಸಿ ಸರಿಯಾದ ಮಾರ್ಗದಲ್ಲಿ ಕ್ರಮಿಸುವುದು ಒಳ್ಳೆಯದು. ಪೈಪೋಟಿ ಇರಲಿ, ಅದು ಆರೋಗ್ಯಕರವಾಗಿರಲಿ ಎಂಬುದು ನನ್ನ ಅನಿಸಿಕೆ. ಅನಾರೋಗ್ಯಕರ ಪೈಪೋಟಿ ಬಂದ ಲಕ್ಷಣ ಗೋಚರಿಸುತ್ತಿರುವಂತೆಯೇ ಉದ್ದಿಮೆದಾರರು ತಮ್ಮ ಉದ್ದಿಮೆಯ ದಿಕ್ಕು-ದೆಸೆಗಳನ್ನು ಬದಲಾಯಿಸಿಕೊಳ್ಳುವುದು ಸೂಕ್ತ. ಆಗ ಯಾರೂ ವಿಷಾದಪಡಬೇಕಾದ ಬಾಗಿಲುಹಾಕಬೇಕಾದ ಅನಿವಾರ್ಯತೆ ಬರುವುದಿಲ್ಲ; ಬಾಗಿಲು ಬದಲಾಯಿಸಬೇಕಾಗಿ ಬರಬಹುದೇ ಹೊರತು ನೊಂದುಕೊಳ್ಳುವ ಬೇಸರದ ಛಾಯೆ ಕಾಡುವ ಪ್ರಮೇಯ ಇರುವುದಿಲ್ಲ.     

Wednesday, May 9, 2012

ಹೋಗಿ ಬರುವೆವಮ್ಮ ನಾವು ದಿಬ್ಬಣಿsಗರು ಸಾಗುವೆsವು ನಮ್ಮ ಕಡೆಗೆ ಬನ್ನಿರೆಲ್ಲರು


ಹೋಗಿ ಬರುವೆವಮ್ಮ ನಾವು ದಿಬ್ಬಣಿsಗರು
ಸಾಗುವೆsವು ನಮ್ಮ ಕಡೆಗೆ ಬನ್ನಿರೆಲ್ಲರು

ಇಂಪಾದ ಹಾಡು ಗಮನ ಸೆಳೆದಿದ್ದು ೩೦ ವರ್ಷಗಳ ಹಿಂದೆ! ಆಗ ನಾನಿನ್ನೂ ಬಾಲಕ. ನಮ್ಮ ಹಳ್ಳಿಗಳಲ್ಲಿ, ನಮ್ಮೂರ ನೆರೆಕೆರೆಯ ಊರುಗಳಲ್ಲಿ, ನಮ್ಮನೆಯ ಬಳಕೆ ಇರುವವರು, ಆಪ್ತರು ತಮ್ಮಲ್ಲಿ ಜರುಗುವ ಮದುವೆ-ಮುಂಜಿ ಕಾರ್ಯಕ್ರಮಗಳಿಗೆ ನಮ್ಮನ್ನೆಲ್ಲಾ ಕರೆದುಹೋಗಿರುತ್ತಿದ್ದರು. ನಮ್ಮಲ್ಲಿ ಮದುವೆ ಮುಂಜಿಗಳು ನಡೆಯುತಿದ್ದುದು ಸಾಮಾನ್ಯವಾಗಿ ಕಾರ್ತಿಕಮಾಸದಿಂದ-ವೈಶಾಖ ಮಾಸದ ವರೆಗೆ ಮಾತ್ರ. ಮನೆಯಮುಂದೆ ಅಂಗಳಗಳಲ್ಲಿ ನಿರ್ಮಿಸುವ ಸಾಕಷ್ಟು ವಿಶಾಲವಾದ ಚಪ್ಪರಗಳಲ್ಲೇ ಕಾರ್ಯಗಳು ನಡೆಯಬೇಕಾಗಿದ್ದುದರಿಂದಲೂ, ಸಾಮಾನ್ಯವಾಗಿ ಈ ಋತುಗಳು ಮಧುಮಾಸಗಳಾಗಿ ವಿಧವಿಧದ ಫಲಪುಷ್ಪಗಳು ದೊರೆಯುವುದರಿಂದಲೂ, ಮತ್ತು ಕೃಷಿಕರಿಗೆ ಸುಗ್ಗಿಯ ಹಿಗ್ಗು ಮನೆಮನಗಳನ್ನು ತುಂಬಿಸಿ ಇಂತಹ ಕೆಲಸಗಳಿಗೆ ಖರ್ಚುಮಾಡಲು ಕೈಲಿ ಅಲ್ಪಸ್ವಲ್ಪ ಹಣಸೇರಿರಬಹುದಾದ ಸಮಯವಿದಾದ್ದರಿಂದಲೂ, ಮಂಗಲಕಾರ್ಯಗಳಿಗೆ ಈ ಕಾಲಾವಧಿ ಸೀಮಿತವಾಗಿತ್ತು; ಅಪ್ಪಿ-ತಪ್ಪಿ ಅಪವಾದಕ್ಕೆ ಅಲ್ಲೆಲ್ಲೋ ಇಲ್ಲೆಲ್ಲೋ ಒಂದೊಂದು ಕಾರ್ಯ ಮಳೆಗಾಲದ ಆರಂಭಿಕ ಘಳಿಗೆಗಳಲ್ಲೂ ನಡೆಯುತ್ತಿತ್ತು. "ಮಳೆಗಾಲ ಆರಂಭವಾಯ್ತು ಪೆಟ್ಗೆ ಅಟ್ಟಕ್ಕೆ ಹಾಕಿದ್ದೇವೆ" ಎನ್ನುತ್ತಿದ್ದರು ನಮ್ಮಲ್ಲಿನ ಜನ!

ಈ ಪೆಟ್ಟಿಗೆ[ಪೆಟ್ಗೆ]ಅನ್ನುವ ಪದ ಯಕ್ಷಗಾನದ ವೇಷಭೂಷಣಗಳನ್ನು ತುಂಬಿಸಿ ಇಡುವಲ್ಲಿಂದ ಸಹಜವಾಗಿ ಬಳಕೆಗೆ ಬಂದಿತ್ತು. ರಂಗಮಂದಿರಗಳಿಲ್ಲದ ಆ ಕಾಲದಲ್ಲಿ ನಮ್ಮ ಹಳ್ಳಿಗಳಲ್ಲಿ ಯಕ್ಷಗಾನ ಪ್ರದರ್ಶನಗಳು ನಡೆಯುತ್ತಿದ್ದುದೂ ಮದುವೆಯ ಹಂಗಾಮಿನಂತೇ ನವೆಂಬರ್ ನಿಂದ ಮೇ ವರೆಗೆ ಮಾತ್ರ. ಮಳೆ ಬರುವ ಕಾಲದಲ್ಲಿ ವೇಷಭೂಷಣಗಳನ್ನು ತುಂಬಿದ ಪೆಟ್ಗೆಯನ್ನು ಕಲಾವಿದರು ಮನೆಯ ಅಟ್ಟದಮೇಲೆ ಇಡುತ್ತಿದ್ದರು. ಅವರ ಬಾಯಿಂದ ಬಂದ ಅ ವಾಕ್ಯ ಮದುವೆ ಕಾರ್ಯ ಮಾಡುವವರಿಗೂ ಹಬ್ಬಿ, ಜಾತಕ ಮೇಳಾಮೇಳಿ ಕೂಡಿಬರದೇ ಮದುವೆ ನಿಚ್ಚಳವಾಗಿ ನಡೆಯುವ ದಿನ ಗೋಚರವಾಗದ ಪಕ್ಷದಲ್ಲಿ, ಮಳೆದಿನಗಳು ಹತ್ತಿರ ಬಂದರೆ "ಪೆಟ್ಗೆ ಅಟ್ಟಕ್ಕೆ ಹಾಕಾಯ್ತು" ಎಂದು ಎದುರು ಆದವಿಚ ಕೇಳುತ್ತಾ ಕೂತವರಲ್ಲಿ ಹೇಳುವುದಿತ್ತು.

ನಮ್ಮ ಹಳ್ಳಿಗಳ ಮದುವೆ-ಮುಂಜಿಗಳಲ್ಲಿ ತೀರಾ ಆಡಂಬರಕ್ಕಿಂತಲೂ ಅಲ್ಲೊಂಥರಾ ಆತ್ಮೀಯ ವಾತಾವರಣವಿರುತ್ತಿತ್ತು. ಕೆಲಸದವರು ತಿಂಗಳಕ್ಕೂ ಮುನ್ನವೇ ಚಪ್ಪರ ಕಟ್ಟುತ್ತಿದ್ದರು, ಕಾರ್ಯಗಳಿಗೂ ಮುನ್ನಾದಿನ ಮತ್ತೆ ಬಂದು ತಳಿರುತೋರಣ ಕಟ್ಟಿಕೊಡುತ್ತಿದ್ದರು. ಊರಮಂದಿಯೇ ಸೇರಿ ಅಡುಗೆ ಮಾಡುತ್ತಿದ್ದರು. ಹರೆಯದ ಹುಡುಗ-ಹುಡುಗಿಯರು ಸಡಗರದಿಂದ ಬಡಿಸುವ ಕೆಲಸಮಾಡುತ್ತಿದ್ದರು. ಕಾರ್ಯಗಳ ಮನೆಗೆ ಸಂಬಂಧದಲ್ಲಿ ಹತ್ತಿರದವರಾದವರು ತಮ್ಮ ಮನೆಗಳಲ್ಲಿರಬಹುದಾದ ಹಾಲು-ಮೊಸರುಗಳನ್ನು ತಂದು ತಮ್ಮ ಆಪ್ತತೆಯನ್ನು ಮೆರೆಯುತ್ತಿದ್ದರು! ಆಯಕಟ್ಟಿನ ಸ್ಥಳಗಳಲ್ಲಿ ಅವರುಗಳೇ ನಿಗಾವಹಿಸಿ ಕಾರ್ಯಕ್ಕೆ ಬಂದವರಿಗೆ ಎಲ್ಲಾರೀತಿಯಲ್ಲೂ ಸಮಾಧಾನಕರವಾದ ಸತ್ಕಾರ ಸಿಗುವಂತೇ ನೋಡಿಕೊಂಡು ಕಾರ್ಯನಿರತ ಯಜಮಾನನ ಮಾರ್ಯಾದೆಗೆ ಧಕ್ಕೆಯಾಗದ ರೀತಿ ನೋಡಿಕೊಳ್ಳುತ್ತಿದ್ದರು. ಕಾರ್ಯಗಳಿಗೆ ಆಹ್ವಾನಿಸುವಾಗಲೂ, ಕಾರ್ಯಗಳನ್ನು ಇಟ್ಟುಕೊಂಡವರು ಸಂಬಂಧದಲ್ಲಿ ಹತ್ತಿರವಾಗಿರುವ ಮನೆಗಳಿಗೆ ಹದಿನೈದಿಪ್ಪತ್ತು ದಿನಗಳಿಗೂ ಮೊದಲೇ ಹೋಗಿ "ಹೋಯ್, ಮಗಳ ಮದ್ವೆ ಮಾರಾಯ್ರೆ, ಎಲ್ಲಾ ಬಂದು ನಿಂತು ಸಾಗಿಸಿಕೊಡಬೇಕು" ಎಂದು ಕೈಮುಗಿದು ವಿನಂತಿಸುತ್ತಿದ್ದರು.   

ಕಾರ್ಯಗಳನ್ನು ಸುಸೂತ್ರವಾಗಿ ಸಾಗಿಸಿಕೊಡುವುದೂ ಒಂದು ಗೌರವದ ಕೆಲಸವಾಗಿತ್ತು. ಒಮ್ಮೆ ನನ್ನ ಅನುಭವ ಹೀಗಿದೆ: ಸಂಬಂಧದಲ್ಲಿ ನಮಗೆ ಹತ್ತಿರದವರ ಮನೆಯೊಂದರ ಮದುವೆಯಕಾರ್ಯ, ಎಲ್ಲಾ ಕೆಲಸವೂ ಸಾಂಗವಾಗಿ ನಡೆಯುತ್ತಿತ್ತು ಆದರೆ ಅಡಿಗೆಗೆ ಸಿಪ್ಪೆ ಸುಲಿದ ತೆಂಗಿನಕಾಯಿಗಳೇ ಕಮ್ಮಿಯಾಗುತ್ತಿದ್ದವು. ಕನಿಷ್ಠ ೮೦-೧೦೦ ಕಾಯಿಗಳಾದರೂ ಬೇಕು ಎಂದು ಅಡುಗೆಯ ಉಸ್ತುವಾರಿ ವಹಿಸಿಕೊಂಡ ಮುಖ್ಯಸ್ಥ ಮುನ್ನಾದಿನ ರಾತ್ರಿ ೧೧ ಗಂಟೆಗೆ ಹೇಳಿದ. ಆ ಹೊತ್ತಿನಲ್ಲಿ ಯಾವ ಆಳುಕಾಳು ಯಾರೂ ಇರಲಿಲ್ಲ. ಬೆಳಗಿನ ಜಾವ ೪ ಗಂಟೆಯಿಂದಲೇ ತಿಂಡಿ-ತೀರ್ಥದ ತಯಾರಿ ನಡೆಯಬೇಕಿತ್ತು. ನಾನು ನನ್ನ ತಮ್ಮ ಇನ್ನೂ ಚಿಕ್ಕವರು. ಧೈರ್ಯದಿಂದ ಕಾಯಿ ಸುಲಿಯುವ ಸೂಲಿಗೆ [ಸಪಾಟಾಗಿರುವ ಕಬ್ಬಿಣದ ಮೊನಚಾದ ಗೂಟ]ನೆಲದಲ್ಲಿ ಹೂತು ಕಾಯಿ ಸುಲಿದೆವು; ಕೈಗಳಲ್ಲಿ ಗುಳ್ಳೆಗಳು ಎದ್ದರೂ ಕೆಲಸವನ್ನು ಪೂರೈಸಿಯೇ ರಾತ್ರಿ ೧ ಗಂಟೆಗೆ ನಿದ್ದೆಮಾಡಿದೆವು.
  


ಜನಪದರು ಇಂತಹ ಎಲ್ಲಾ ಕೆಲಸಗಳನ್ನೂ ನಡೆಸುವಾಗ ಅವುಗಳ ಶ್ರಮದ ಅರಿವು ಬಾರದಿರಲೆಂದು ಪ್ರತಿಯೊಂದೂ ಕೆಲಸದ ಜೊತೆಗೆ ಹಾಡನ್ನು ಹಾಡುವುದು ಅಭ್ಯಾಸವಾಗಿತ್ತು. ನಿಮಗೆಲ್ಲಾ ತಿಳಿದೇ ಇರುವ ಅಕ್ಕಿ / ರಾಗಿ / ಗೋಧಿ ಬೀಸುವ ಹಾಡು, ಮೊಸರುಕಡೆಯುವಾಗ ಹೇಳುವ ಹಾಡು, ರುಬ್ಬುವಾಗ ಹೇಳುವ ಹಾಡು ಇವೆಲ್ಲಾ ಇದ್ದಹಾಗೇ ಮಂಗಲಕಾರ್ಯಗಳಲ್ಲಂತೂ ಪ್ರತೀ ಹೆಜ್ಜೆಗೂ ಹಾಡುಗಳಿರುತ್ತಿದ್ದವು. ಅಲ್ಲಿ ಬಹುತೇಕ ಬಳಕೆಯಾಗುತ್ತಿದ್ದುದು ಅರ್ಧ ಛಂದಸ್ಸಿನ ಪ್ರಾಸಬದ್ಧ ಲಯಬದ್ಧ ಹಾಡುಗಳು. ಅಜ್ಞಾತ ಕವಿಗಳು ಹೊಸೆದ ಅಂತಹ ಹಾಡುಗಳು ಬಾಯಿಂದ ಬಾಯಿಗೆ ಹಬ್ಬುತ್ತಾ ಅದೆಷ್ಟು ತಲೆಮಾರುಗಳನ್ನು ಕ್ರಮಿಸುತ್ತಿದ್ದವೋ ತಿಳಿಯದು. ಅಜ್ಜಿ ಮಗಳಿಗೂ ಸೊಸೆಗೂ ಮೊಮ್ಮಕ್ಕಳಿಗೂ ಹೇಳಿಕೊಡುತ್ತಿದ್ದ ಹಾಡುಗಳು ಅದೇಕ್ರಮದಲ್ಲಿ ಮತ್ತೆ ತಲೆಮಾರಿನಿಂದ ಮುಂದಿನ ತಲೆಮಾರಿಗೆ ವರ್ಗಾವಣೆಯಾಗುತ್ತಾ ಬರುತ್ತಿದ್ದವು. ಹಲವು ಹಾಡುಗಳಲ್ಲಿ ಶ್ರೀರಾಮನ ಅಥವಾ ಶ್ರೀಕೃಷ್ಣನ ಕೇಂದ್ರೀಕೃತ ವರ್ಣನೆಗಳು ಕಾಣಸಿಗುತ್ತಿದ್ದವು. ಉದಾಹರಣೆಗೆ ನಮ್ಮಲ್ಲಿ ದಂಪತಿಗೆ ಆರತಿ ಬೆಳಗುವಾಗ,

ನಲಿದಾರತಿಗೈವಾ ಸಖಿಯೇ
ಎಲೆ ಶೋಭಿಪ ಚಲುವಾ ರಾಮ-ಜಾನಕಿಗೇ
ಎಲೆ ಶೋಭಿಪ ಚಲುವಾ ದಂಪತಿಗಳೆಗೇ 


ಹೀಗಿದ್ದರೆ, ಕನ್ಯಾದಾನ ನಡೆಸುವಾಗ,


ಧಾರೆ ಎರೆದ ರಾಯ ನಾರೀ ಜಾನಕಿಯ
ಶ್ರೀರಾಮಚಂದ್ರಗೆ ಧssರಣಿ ಸುತೆಯಾ

ಸಾಮಾನ್ಯವಾಗಿ ನವದಂಪತಿಯಲ್ಲಿ ರಾಮ-ಸೀತೆಯರನ್ನೋ ಲಕ್ಷ್ಮೀ-ನಾರಾಯಣರನ್ನೋ ಕಾಣುವುದು ರೂಢಿಗತ. ಮದುವೆಗಳಲ್ಲಿ ನಾಂದಿಯಿಂದ ಹಿಡಿದು ಸಟ್ಮುಡಿ[ಅಡುಗೆಯ ಸಟ್ಟುಗ ಹಿಡಿ]ಯ ವರೆಗೂ ನವದಂಪತಿಯನ್ನು ದೈವಸಮಾನವಾಗಿ ಕಂಡು ಅವರಿಗೆ ಗೌರವ ಸಲ್ಲಿಸುವ ವಾಡಿಕೆ ಇತ್ತು. ಆದರ್ಶಗಳನ್ನೇ ಮೈವೆತ್ತ ಶ್ರೀರಾಮನನ್ನೂ ಚಾಣಾಕ್ಷತನವನ್ನೇ ಮೈವೆತ್ತ ಶ್ರೀಕೃಷ್ಣನನ್ನೂ ಜನ  ಹಾಡುಗಳ ಮೂಲಕ ಇಲ್ಲೂ ನೆನೆಸಿಕೊಳ್ಳುತ್ತಿದ್ದರು.

ಮಂಗಲಕಾರ್ಯಗಳು ಎದ್ದರೆ [ನಡೆಸಲು ಸಿದ್ಧತೆ ನಡೆದರೆ] ಸುಮಾರು ೫-೬ ದಿವಸಗಳ ತನಕ ಕಾರ್ಯದ ಮನೆಯಲ್ಲಿ ಸಡಗರ-ಸಂಭ್ರಮ. ಒಂದಷ್ಟು ನೆಂಟರಿಷ್ಟರು ಸತತವಾಗಿ ಬಂದು-ಹೋಗಿ ಮಾಡುವ ಕಾಲ. ನಿತ್ಯವೂ ಹಲವು ವಿಧದ ಆಚರಣೆಗಳು. ಆಚರಣೆಗಳ ಹಿಂದಿನ ವೈಜ್ಞಾನಿಕ, ಮನೋವೈಜ್ಞಾನಿಕ, ಧಾರ್ಮಿಕ, ಪಾರಂಪರಿಕ, ಸಾಂಸ್ಕೃತಿಕ, ಸಾಂಪ್ರದಾಯಿಕ ಕಾರಣಗಳನ್ನು ತಿಳಿದುಕೊಂಡಾಗ ನಮಗೆ ಅಚ್ಚರಿಯಾಗುತ್ತದೆ. ಆ ಕಾಲದಲ್ಲಿ ಆಗಿನ್ನೂ ವಾಹನಗಳ ಭರಾಟೆ ಅಷ್ಟಾಗಿ ಇರಲಿಲ್ಲ. ಹೆಣ್ಣು-ಗಂಡುಗಳ ಸಂಬಂಧ ತೀರಾ ದೂರದ ಊರುಗಳ ನಡುವೆ ಇರುತ್ತಿರಲಿಲ್ಲ. ಸುಮಾರಾಗಿ ೪-೫ ಅಥವಾ ೧೦-೧೨ ಮೈಲುಗಳ ಅಂತರದ ಊರುಗಳ ನಡುವೆ ಬಾಂಧವ್ಯ! ಊರುಗಳ ನಡುವೆ ಬಾಂಧವ್ಯ ಎಂದು ಏಕೆ ಹೇಳುತ್ತಿದ್ದೇನೆಂದರೆ ಕಾರ್ಯ ನಡೆಯುವಾಗ ಇಡೀ ಊರಜನ [ಪ್ರತೀ ಮನೆಯಲ್ಲೂ ಇರುವ ಬಹುತೇಕ ಜನ]ಪಾಲ್ಗೊಳ್ಳುತ್ತಿದ್ದರು. ಊರಿಗೆ ಬರುವ ಪರವೂರ ಜನರನ್ನು ಗೌರವಿಸುವ ಪದ್ಧತಿ ಇತ್ತು. "ನಮ್ಮೂರ ಬೀಗರು" ಎಂತಲೇ ಕರೆಯುವ ಅಭ್ಯಾಸವೂ ಇತ್ತು! ಈಗಲೂ ಕೆಲವುಕಡೆ ’ಗ್ರಾಮಸ್ಥರು’ ಎಂದು ಮಂಗಲಪತ್ರಗಳಲ್ಲಿ ಅಚ್ಚುಮಾಡುವುದಿದೆ. ಗಂಡು-ಹೆಣ್ಣಿನ ಕೊಡುಕೊಳ್ಳುವಿಕೆಯಿಂದ ಗ್ರಾಮ-ಗ್ರಾಮಗಳ ನಡುವೆಯೇ ಒಂಥರಾ ಸ್ನೇಹ-ಸೌಹಾರ್ದ ಏರ್ಪಡುತ್ತಿತ್ತು.   



ನಾನು ಚಿಕ್ಕವನಿರುವ ಕಾಲಕ್ಕೆ ಮದುಮಗ[ಮದುವಣಿಗ]ನನ್ನು ಮೇನೆ[ತಮ್ಜಾಲು]ಯಲ್ಲಿ ಹೊತ್ತು ತರುವ ಸಂಪ್ರದಾಯವಿತ್ತು! ಅಂತಹ ಒಂದೆರಡು ಮದುವೆಗಳನ್ನು ನಾನು ನೋಡಿರುವೆನಷ್ಟೇ. ಆರ್ಥಿಕವಾಗಿ ಅನುಕೂಲವುಳ್ಳ ಸಿರಿವಂತರೆನಿಸಿದ ಜನ ಹಾಗೆ ಮೇನೆ ಬಳಸುತ್ತಿದ್ದರು. ಬಡವರ ದಿಬ್ಬಣದಲ್ಲಿ ಮದುವಣಿಗ ವಿನೋಬಾ ಸರ್ವಿಸ್ [ಕಾಲ್ನಡಿಗೆಗೆ ವಿನೋಬಾಭಾವೆ ಮಹತ್ವ ನೀಡಿದ್ದರಿಂದ ನಮ್ಮಲ್ಲಿ ಈ ಶಬ್ದ ಚಾಲ್ತಿಯಲ್ಲಿತ್ತು]ನಲ್ಲೇ ಸಾಗುತ್ತಿದ್ದ! ಮೇನೆಯಲ್ಲಿ ಕುಳಿತ ಮದುವಣಿಗನಿಗೆ ಹಿಂದೆ ಮುಂದೆ ಕೆಲವು ಹಾರ ತುರಾಯಿಗಳ ರಾಜೋಪಚಾರವಿರುತ್ತಿತ್ತು. ದಿಬ್ಬಣ ಹೆಣ್ಣಿನ ಮನೆ ಸೇರುವ ಘಳಿಗೆಯಲ್ಲಿ ಬಾಣಬಿರುಸಿನ ಪ್ರಯೋಗ ನಡೆಯುತ್ತಿತ್ತು. ಅಂತಹ ಒಂದು, ರಾತ್ರಿ-ಮದುವೆಯನ್ನು ನಾನು ನೋಡಿದ್ದು ನೆನಪಿದೆ. ಬಹಳ ಚಿಕ್ಕವನಾಗಿದ್ದರೂ ಅತ್ಯಂತ ಅಚ್ಚರಿ ಹುಟ್ಟಿಸಿದ ಕಾರ್ಯಕ್ರಮವನ್ನು ದಿಟ್ಟಿಸಿ ನೋಡುತ್ತಿದ್ದೆ. ವಿವಾಹ ನಡೆದಿದ್ದು ರಾತ್ರಿ ೮-೪೫ ರಲ್ಲಿ. ಗಂಡಿನ ದಿಬ್ಬಣ ಬಂದಿದ್ದು ರಾತ್ರಿ ಸುಮಾರು ೭ ಘಂಟೆಗೆ. ಮೇನೆಯಲ್ಲಿ ಕುಳಿತ ಮದುವಣಿಗ ಮಹಾರಾಜನನ್ನು ದೂರದಿಂದ ಕಣ್ತುಂಬಾ ನೋಡಿದ್ದೆ. ಮೇನೆಯ ಸುತ್ತ ಹಲವು ದೀವಟಿಗೆಗಳನ್ನು ಹಿಡಿದಿದ್ದರು. ಅದೆಷ್ಟೋ ಜನ ವಿವಿಧ ಹೊಸಹೊಸ ದಿರಿಸುಗಳಲ್ಲಿ ರಾಜನ ಅಸ್ಥಾನದಿಂದ ಬಂದವರಂತೇ ಕಾಣುತ್ತಿದ್ದರು! ಸಿಡಿಮದ್ದುಗಳ ಸದ್ದು ತಾರಕ್ಕಕ್ಕೇರಿತ್ತು. ಮಂಗಳವಾದ್ಯಗಳೂ ಪುರೋಹಿತರ ಮಂತ್ರಗಳೂ ಕೇಳಿಸುತ್ತಿರುವಂತೇ ಮೇನೆಯಿಂದಿಳಿದ ಮದುಮಗನಿಗೆ ಓಕುಳಿ ತೋರಿಸಿ, ತೆಂಗಿನಕಾಯಿ ಸುಳಿದೊಡೆದು, ಪಾದ ತೊಳೆದು, ಹೂ-ಹಾರ ಹಾಕಿ, ಅರಿಶಿನ-ಕುಂಕುಮ ಹಚ್ಚಿದ ನಂತರ ಭಾವೀ ಮಾವ ಆತನ ಬಲಗೈ ಹಿಡಿದು ಸಭಾಂಗಣದಲ್ಲಿರುವ ಮಂಟಪಕ್ಕೆ ಕರೆದೊಯ್ಯುವಾಗ ಅನೇಕರು ನಿಂತು ಅರಳು ಎರಚಿದರು.
 


ಕಾರ್ಯಗಳಿಗೆ ೫ ದಿನಗಳ ಸಮಯ ಹಿಡಿಯುತ್ತಿತ್ತು. ಈ ದಿನಗಳಲ್ಲಿ ವೇದ, ವಾದ್ಯ, ಖಾದ್ಯ, ಸಂಗೀತ, ನಾಟ್ಯ, ಯಕ್ಷಗಾನ ತಾಳಮದ್ದಲೆ, ಧಾರ್ಮಿಕ ಹೋಮ-ನೇಮ ಇವೆಲ್ಲಾ ಇರುತ್ತಿದ್ದು ಪೀಳಿಗೆಯಿಂದ ಪೀಳಿಗೆಗೆ ಜೀವನದ ಜವಾಬ್ದಾರಿಗಳನ್ನು ನೀತಿಯುಕ್ತವಾಗಿ ವಹಿಸಿಕೊಡುವ, ಅರುಹುವ ಕಾರ್ಯ ಇದಾಗಿರುತ್ತಿತ್ತು. ಕಾರ್ಯಗಳನ್ನು ನಡೆಸಿದವರು ಜೀವನದ ಜಂಜಡಗಳನ್ನು ಮರೆತು ವಾರಗಳ ಕಾಲ ಸಂತಸಪಡುವ ಸಮಯ ಇದಾಗಿರುತ್ತಿತ್ತು. ಮದುವೆಗಳಲ್ಲಂತೂ ಹೆಣ್ಣಿನಕಡೆಯ ಆತಿಥ್ಯ ಪಡೆದು ತೆರಳುವ ಗಂಡಿನ ಊರಿಗೆ ಹೆಣ್ಣಿನ ಊರ ಬಳಗ ಹೋಗಲು ಕಾತರಿಸುತ್ತಿತ್ತು. ೫ನೇ ದಿನ ನವದಂಪತಿಯನ್ನೊಳಗೊಂಡು ಗಂಡಿನ ಊರಿಗೆ ಪಯಣ ಬೆಳೆಸುವ ದಿಬ್ಬಣ ಅಲ್ಲಿ ಮಿತ್ರಭೋಜನವನ್ನು ಸವಿಯುತ್ತಿತ್ತು. ಅಂತಹ ಮದುವೆಯ ಸಮಾರಂಭವೊಂದರಲ್ಲಿ, ಹೆಣ್ಣಿನ ಮನೆಯಂಗಳದಲ್ಲಿ, ಆತಿಥ್ಯ ಪಡೆದು ಹೊರಟುನಿಂತ ಗಂಡಿನ ಕಡೆಯ ಯಾರೋ ಒಬ್ಬ ಮಹಿಳೆ ಹಾಡೊಂದನ್ನು ಹಾಡಿದ್ದರು,

ಹೋಗಿ ಬರುವೆವಮ್ಮ ನಾವು ದಿಬ್ಬಣಿsಗರು
ಸಾಗುವೆsವು ನಮ್ಮ ಕಡೆಗೆ ಬನ್ನಿರೆಲ್ಲರು   


ಹಾಡಿನಲ್ಲೇ ಆಮಂತ್ರಣವನ್ನು ಇನ್ನೊಮ್ಮೆ ನೀಡಿದ್ದರು ಎಂಬುದು ಸ್ಪಷ್ಟ. ಅಂದಿನ ದಿನಗಳಲ್ಲಿ ಗೌರವ ಎಷ್ಟಿತ್ತಪ್ಪಾ ಎಂದರೆ ಮದುವೆಯ ದಿನ ಊಟದ ನಂತರ ಗಂಡಿನ ಕಡೆಯವರು ಹೆಣ್ಣಿನ ತವರುಮನೆಯ ಅಕ್ಕ-ಪಕ್ಕದ ಮನೆಗಳಿಗೆ ತೆರಳಿ ಅಕ್ಷತೆಯಿಟ್ಟು "ನಮ್ಮಲ್ಲಿಗೆ ಬನ್ನಿ" ಎಂದು ವಿನಂತಿಸುವುದಿತ್ತು. ಸಭೆಯಲ್ಲೇ ಕುಳಿತ ಹೆಣ್ಣಿನ ತವರೂರ ಹಲವರನ್ನೂ ಸಹಿತ ಹಾಗೇ ಕರೆಯುವುದಿತ್ತು. ’ಕರೆಯ’ ಸಾಲಲಿಲ್ಲ ಎನಿಸಿದರೆ ಯಾರೂ ಹೋಗುತ್ತಿರಲಿಲ್ಲ. ಇಂದಿನ ನಗರ ನಾಗರೀಕತೆಯಲ್ಲಿ ಇರುವಂತೇ ಬಫೆಗಳಿಗೆಲ್ಲಾ ಅವಕಾಶವಿರಲಿಲ್ಲ. ಪರವೂರವರು ಊಟಕ್ಕೆ ಹೋಗಿ ಪಂಕ್ತಿಯಲ್ಲಿ ಜಾಗ ಹಿಡಿದು ನಿಲ್ಲಬೇಕಾದ ಅವಸರವೂ ಇರಲಿಲ್ಲ. ಬಾಳೆಲೆ ಹಾಕಿದಮೇಲೆ ಅವರಿಗೆ "ಊಟಕ್ಕೆ  ಏಳಿ" ಎಂಬ ಅಹ್ವಾನ ಬರುತ್ತಿತ್ತು! ಹಾಗೆ ಕರೆ ಸ್ವೀಕರಿಸಿದ ಮೇಲೆಯೇ ಜನ ಊಟಕ್ಕೆ ತೆರಳುತ್ತಿದ್ದರು. 

ಇನ್ನೇನು ಮುಗಿದುಹೋದ, ಗತವೈಭವದ ಆ ದಿನಗಳನ್ನು ಮತ್ತೆ ನೆನಪಿಸಿಕೊಳ್ಳುವುದೂ ಅಸಾಧ್ಯವೆನಿಸುವಷ್ಟು ನವನಾಗರಿಕತೆಯ ದಾಳಿ ನಡೆದುಬಿಟ್ಟಿದೆ; ಮನೆಗಳ ಮುಂದೆ ದೊಡ್ಡ ಅಂಗಳಗಳಿಲ್ಲ, ಚಪ್ಪರ ಕಟ್ಟಲು ಜನವೂ ಇಲ್ಲ, ತೋರಣ ಬೇಕೆಂದರೆ ಯಜಮಾನನೇ ಕಟ್ಟಿಕೊಳ್ಳಬೇಕು, ಅಡುಗೆಗೆ ಊರಮಂದಿ ಬರುವುದಿಲ್ಲ-ಅಡುಗೆ ಭಟ್ಟರನ್ನು ಕರೆಯಬೇಕು, ಸಂಬಂಧದಲ್ಲಿ ಹತ್ತಿರವಿರುವವರ ಮನೆಗಳಲ್ಲಿ ಹಸು-ಕರುಗಳಾಗಲೀ ಎಮ್ಮೆಗಳಾಗಲೀ ಇಲ್ಲದೇ ಕರಾವಿನ ನೆರವು ಇಲ್ಲ-ಅವರು ಹಾಲು-ಮೊಸರು ತರುವುದಿಲ್ಲ. ನೆಂಟರಿಷ್ಟರ ಈಗಿನ ಪೀಳಿಗೆ ಮಹಾನಗರಗಳಿಗೆ ತೆರಳಿರುವುದರಿಂದ ಮುದುಕ-ಮುದುಕಿ ಮನೆಯಲ್ಲಿ ದೇವರು-ದಿಂಡರು ಎಂದು ಕೈಲಾಗದಿದ್ದರೂ ದೀಪಹಚ್ಚಿಕೊಂಡು ಬದುಕು ಸವೆಸುತ್ತಿದ್ದಾರೆ. ಅವರಿಗೆ ಕಾರ್ಯಗಳಲ್ಲಿ ಪಾಲ್ಗೊಳ್ಳಲು ಬರಲಾಗುವುದಿಲ್ಲ; ಹೊಸ ಪೀಳಿಗೆಗೆ ಬರಲು ಪುರುಸೊತ್ತಿಲ್ಲ! ಪುರೋಹಿತರಿಗೆ ಇನ್ಯಾರದೋ ಮನೆಯಲ್ಲಿ ಹೋಮ ಮಾಡಿಸುವ ಗಡಿಬಿಡಿ, ವಾದ್ಯದವರಿಗೆ ಮತ್ತೆಲ್ಲಿಗೋ ಹೋಗಬೇಕು. ಹೀಗೇ ಹಳ್ಳಿಗಳಲ್ಲಿ ಹಿಂದಿನಂತೇ ಸಂಭ್ರಮೋಪೇತ ಮಂಗಲ ಕಾರ್ಯಗಳು ನಡೆಯುವುದು ಕಮ್ಮಿ. ಅಲ್ಲಿಯೂ ಅಲ್ಲಲ್ಲಿ ದೇವಸ್ಥಾನಗಳ ಎಡಬಲದಲ್ಲಿ ಕಲ್ಯಾಣಮಂಟಪಗಳು ತಲೆ ಎತ್ತಿವೆ. ಬೆಳಿಗ್ಗೆ ಆರಂಭವಾಗುವ ಕಾರ್ಯಕ್ರಮ ಅಬ್ಬಬ್ಬಾ ಎಂದರೆ ಮಧ್ಯಾಹ್ನ ೩-೪ ಘಂಟೆಗಳ ಹೊತ್ತಿಗೆ ಮುಗಿದು ಹೋಗಿರುತ್ತದೆ. ಹಾಡು-ಹಸೆ ಯಾವುದರ ಪರಿವೆಯೂ ಇರುವುದಿಲ್ಲ. ಅದೆಷ್ಟೋ ಅಜ್ಞಾತ ಕಂಠಗಳಿಗೆ ಅವಕಾಶ ನೀಡುತ್ತಿದ್ದ ಇಂಪಾದ ಹಾಡುಗಳು ಮರೆಯಾಗಿ ಹೋಗಿವೆ. ತೀರಾ ಹಳೆಯ ಅಜ್ಜಿಯಂದಿರನ್ನು ಬಿಟ್ಟರೆ ಇಂದು ಅಂತಹ ಹಾಡುಗಳನ್ನು ಹಾಡುವವರೇ ಇಲ್ಲ. ಆ ಹಾಡುಗಳಲ್ಲಿರುವ ಅದ್ಭುತ ಸಾಹಿತ್ಯ, ಸಂಸ್ಕೃತಿಯ ಸೊಗಡು, ತಾತ್ವಿಕ ಹಿನ್ನೆಲೆ, ನ್ಯಾಯ-ನೀತಿ ಬೋಧನೆ ಎಲ್ಲವೂ ನಮ್ಮಿಂದ ದೂರವಾಗಿವೆ. ಈಗಲೂ ಒಮ್ಮೊಮ್ಮೆ ಮದುವೆ ಹಂಗಾಮಿನಲ್ಲಿ ಹೊರಳಿ ನಿಂತಾಗ ಸಭೆಯ ಯಾವುದೋ ಭಾಗದಿಂದ ಕೇಳಿಬಂದ ಇಂಪಾದ ಆ ಹಾಡು ಮನದಲ್ಲಿ ಸುಳಿದು ಹೋಗುತ್ತದೆ; ಮನವನ್ನು ಚಣಕಾಲ ಹಿಂದಕ್ಕೆ ಕರೆದು ತನ್ನತನವನ್ನು ಮನದ ಮೂಸೆಯಲ್ಲಿ ಉಳಿಸಿಹೋಗುತ್ತದೆ. ಸದ್ಯಕ್ಕೆ ನಾವೂ ಹೋಗಿಬರುತ್ತೇವೆ ಸ್ವಾಮೀ, ನೀವೆಲ್ಲಾ ಬನ್ನಿ !


ಹೋಗಿ ಬರುವೆವಮ್ಮ ನಾವು ದಿಬ್ಬಣಿsಗರು
ಸಾಗುವೆsವು ನಮ್ಮ ಕಡೆಗೆ ಬನ್ನಿರೆಲ್ಲರು    


Saturday, May 5, 2012

ಇರುವುದು ಒಂದೇ ದೀಪವು ....

ಚಿತ್ರಋಣ: ಅಂತರ್ಜಾಲ
ಇರುವುದು ಒಂದೇ ದೀಪವು ....

೭೮ ವಸಂತಗಳಲ್ಲಿ ೬೧ ವಸಂತಗಳನ್ನು ಯಕ್ಷಗಾನಕ್ಕಾಗಿಯೇ ಮೀಸಲಿಟ್ಟು, ಬದುಕಿನ ಬವಣೆಗಳ ಮಧ್ಯೆಯಲ್ಲೂ ತನ್ನೊಳಗಿನ ಕಲಾವಿದನನ್ನು ಕುಣಿಸಿ ಯಕ್ಷಪ್ರೇಮಿಗಳನ್ನು ರಂಜಿಸಿದ ವ್ಯಕ್ತಿಗೆ, ಕರ್ನಾಟಕ ಸರಕಾರದ ’ಯಕ್ಷಗಾನ ಬಯಲಾಟ ಅಕಾಡೆಮಿ’ ವತಿಯಿಂದ ಅಭಿನಂದನಾ ಕಾರ್ಯಕ್ರಮವಿದ್ದಿದ್ದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ. ಯಕ್ಷಗಾನಕ್ಕೆ ಪ್ರಥಮವಾಗಿ ಪದ್ಮಶ್ರೀಯನ್ನು ದೊರಕಿಸಿಕೊಟ್ಟ ಆ ವ್ಯಕ್ತಿಯ ಬಗೆಗೆ ಹೊಸದಾಗಿ ಪರಿಚಯಿಸುವ ಅಗತ್ಯ ಬೀಳುವುದಿಲ್ಲ! ಯಾಕೆಂದರೆ ಸಾಮಾನ್ಯವಾಗಿ ಅವರ ಹೆಸರನ್ನು ಕೇಳಿರದ ಕನ್ನಡ ಜನವಿಲ್ಲ! ’ಪದ್ಮಶ್ರೀ’ ಎಂಬ ಪ್ರಶಸ್ತಿಯ ಬಗ್ಗೆ ಏನೂ ಅರಿತಿರದ ಮುಗ್ಧ ಕಲಾವಿದನಿಗೆ ಅನಿರೀಕ್ಷಿತವಾಗಿ ಮತ್ತು ಅತಿಸಹಜವಾಗಿ ಈ ಪ್ರಶಸ್ತಿ ಒದಗಿಬಂದಿದ್ದು ಪ್ರಶಸ್ತಿಗೇ ಸಂದ ಗೌರವ ಎಂದರೆ ಆಶ್ಚರ್ಯವೆನಿಸುವ ಅಗತ್ಯವೂ ಕಾಣುವುದಿಲ್ಲ. ಸಾಮಾನ್ಯವಾಗಿ ಕೇಂದ್ರ ಸರಕಾರ ಕೊಡಮಾಡುವ ಪ್ರಶಸ್ತಿಗಳು ಲಭಿಸಿದಾಗ ರಾಜ್ಯ ಸರಕಾರ ಅಂತಹ ಪ್ರಶಸ್ತಿಭಾಜನರನ್ನು ಅಭಿನಂದಿಸುವುದು ವಾಡಿಕೆ. ಕನ್ನಡ ನೆಲದ ಗಂಡುಮೆಟ್ಟಿನ ಕಲೆಯಾದ ಯಕ್ಷಗಾನದಲ್ಲಿ ಅಂತಹ ಹೆಜ್ಜೆಗುರುತು ಮೂಡಿಸಿದ ಚಿಟ್ಟಾಣಿಯವರನ್ನು ಗೌರವಿಸುವ ಒಂದು ಪುಟ್ಟ ಕಾರ್ಯಕ್ರಮ ನಡೆಯುವ ಸುದ್ದಿ ತಿಳಿದು, ಕೆಲಸದ ಅವಸರಗಳ ನಡುವೆಯೂ ಧಾವಿಸಿದ ನನಗೆ,ಅಚ್ಚುಕಟ್ಟಾಗಿ ನಡೆದ ಸಮಾರಂಭ ನೋಡಿ ಆದ ಖುಷಿಯನ್ನು ನಿಮ್ಮೊಡನೆ ಹಂಚಿಕೊಳ್ಳದೇ ಸುಮ್ಮನಿರಲು ಮನಸ್ಸಾಗಲಿಲ್ಲ; ಅದನ್ನು ಹಲವರು ಇಷ್ಟಪಡುತ್ತೀರಿ ಎಂಬುದೂ ನನಗೆ ಗೊತ್ತು.

ಚಿಟ್ಟಾಣಿ ನನಗೆ ಹೊಸಬರಲ್ಲ. ರಾಮಚಂದ್ರ ಹೆಗಡೆಯವರನ್ನು ನನ್ನ ಬಾಲ್ಯದಿಂದಲೂ ನಾನು ಬಲ್ಲೆ; ನನ್ನ ಬಾಲ್ಯದಲ್ಲಿಯೇ ತನ್ನ ಹರೆಯದ ಉತ್ತುಂಗದಲ್ಲಿದ್ದ ಚಿಟ್ಟಾಣಿಯವರು ಎಲ್ಲಾದರೂ ಪಾತ್ರ ಮಾಡುತ್ತಾರೆ ಎಂಬ ಗಾಳಿಸುದ್ದಿ ಹಬ್ಬಿದರೂ ಪ್ರದರ್ಶನ ನಡೆಯುವಲ್ಲಿ ಜನ ಕಿಕ್ಕಿರಿದು ಸೇರುತ್ತಿದ್ದರು. ಈಗಲೂ ಅದೇ ಅಭಿಮಾನ ಅವರ ಅಭಿಮಾನೀ ಬಳಗಕ್ಕೆ ಇದೆ. ಆದರೆ ಶಾರೀರಿಕ ಮುಪ್ಪಿನ ಅಪ್ಪುಗೆಯಿಂದ ದುರ್ಬಲರಾದ ಚಿಟ್ಟಾಣಿಗೆ ಮೊದಲಿನ ಹಾಗೆ ಕುಣಿಯಲು ಸಾಧ್ಯವಾಗುತ್ತಿಲ್ಲ ಎಂಬ ಕೊರಗು ಕಾಡುತ್ತಿದೆ; ಅವರನ್ನು ಇನ್ನೂ ಕುಣಿಸುತ್ತಲೇ ಇರುವುದು ನಮ್ಮ ಸಾಧುತ್ವವೆನಿಸುವುದಿಲ್ಲ. ರಂಗಕ್ಕೆ ಈ ಕಲೆಗೆ ಮಕ್ಕಳನ್ನೂ ಮೊಮ್ಮಗನನ್ನೂ ಪರಿಚಯಿಸಿದ ಅಜ್ಜ ಚಿಟ್ಟಾಣಿಗೆ ವಿಶ್ರಾಂತಿಯ ಅನಿವಾರ್ಯತೆ ಇದೆ. ೧೯೮೬-೮೭ ರಲ್ಲಿ ಕುಮಟಾದ ಮಣಕಿ ಗ್ರೌಂಡಿನಲ್ಲಿ ೫-೬ ಸಾವಿರ ಜನರ ಸಮ್ಮುಖದಲ್ಲಿ ಅಭಿಮಾನೀ ಬಳಗ ಬೆಳ್ಳಿಯ ಯಕ್ಷಗಾನ ಕಿರೀಟವನ್ನು ತೊಡಿಸಿ ಸನ್ಮಾನಿಸಿತ್ತು ಎಂದರೆ ಇಂದಿಗೆ ಅವರಿಗೆ ಸಂದ ರಂಗಪುರಸ್ಕಾರಗಳು ಎಷ್ಟಿರಬಹುದು ಎಂಬುದನ್ನು ನಾವು ತಿಳಿದುಕೊಳ್ಳಬಹುದಾಗುತ್ತದೆ.

ಯಕ್ಷಗಾನ ಬಯಲಾಟ ಅಕಾಡೆಮಿ ಇಷ್ಟುವರ್ಷ ಇದಿದ್ದೇ ಗೊತ್ತಾಗಿರಲಿಲ್ಲ! ಶ್ರೀಯುತ ಎಂ.ಎಲ್.ಸಾಮಗರು ಇತ್ತೀಚೆಗೆ ಅದರ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಮೇಲೆ ಸರಕಾರ ಕೊಡುವ ಸೀಮಿತ ಅನುದಾನದಲ್ಲೂ ಸಮರ್ಥವಾಗಿ ಕೆಲಸವನ್ನು ನಿಭಾಯಿಸುತ್ತಿದ್ದಾರೆ ಎಂಬುದಕ್ಕೆ ಈ ಕಾರ್ಯಕ್ರಮ ಸಾಕ್ಷಿಯಾದಂತಿತ್ತು. ಸಾರ್ವಜನಿಕವಾಗಿ ಜರುಗುವ ಕಾರ್ಯಕ್ರಮವೊಂದು ಎಷ್ಟೇ ಚಿಕ್ಕದೇ ಇದ್ದರೂ ಅದಕ್ಕೆ ಸಾಕಷ್ಟು ಪೂರ್ವತಯಾರಿಯ ಅಗತ್ಯ ಬೀಳುತ್ತದೆ. ವೇದಿಕೆಯಮೇಲೆ ಅದು ಸಂಪನ್ನಗೊಳ್ಳುವುದಕ್ಕೂ ಮೊದಲು ವೇದಿಕೆಯ ಹೊರಗೆ ನಿಂತು ದುಡಿಯಬೇಕಾದ ಕೈಗಳು ಹಲವು. ಚಿಟ್ಟಾಣಿಯವರೇ ತಮ್ಮ ಮಾತಿನಲ್ಲಿ ಹೇಳಿದಂತೇ ಆಳಾಗಿಯೂ ಅರಸನಾಗಿಯೂ ಕೆಲಸಮಾಡುವ ವಿಶಿಷ್ಟ ತಾಕತ್ತುಳ್ಳ ಸಾಮಗರು, ವೇದಿಕೆಗೂ ಒಳಗೂ ಒಡಾಡುತ್ತಾ ಪರಿಶ್ರಮಿಸಿದ್ದನ್ನು ಕಾಣುವಾಗ, ಈ ಕಾರ್ಯಕ್ರಮ ನಡೆಯುವುದಕ್ಕೂ ಪೂರ್ವಭಾವಿಯಾಗಿ ಅವರು ವ್ಯಯಿಸಿರಬಹುದಾದ ಶ್ರಮದ ಮೊತ್ತದ ಅರಿವಾಗದೇ ಇರುವುದಿಲ್ಲ! ಅಕಾಡೆಮಿಯೆಂಬ ಸರಕಾರೀ ಅಂಗಸಂಸ್ಥೆಗಳಿಗೆ ನಿಜಕ್ಕೂ ಬೇಕು ಇಂತಹ ಅಧ್ಯಕ್ಷರು. ಸ್ವತಃ ಯಕ್ಷಗಾನದ ಕಲಾವಿದನಾಗಿಯೂ, ಕಲಾಪೋಷಕನಾಗಿಯೂ ಇರುವ ಸಾಮಗರ ಬಹುಮುಖಗಳ ಪರಿಚಯ ಅವರ ವಾಗ್ವೈಖರಿಯಿಂದಲೇ ಗೋಚರಿಸುತ್ತಿತ್ತು.   

ಮೂರು ಆಯಾಮಗಳಲ್ಲಿ ಹರಡಿಕೊಂಡ ಈ ಕಾರ್ಯಕ್ರಮ ಆರಂಭಗೊಂಡಿದ್ದು ಮಧ್ಯಾಹ್ನದ ೩:೩೦ ಕ್ಕೆ. ಕೆಲಸದ ದಿನವಾದ ಶುಕ್ರವಾರದಂದು ಸಭಿಕರು ಸೇರುವರೇ ಎಂಬ ಆತಂಕದಲ್ಲೇ ಸಾಮಗರು ಇದ್ದರೆ ರವೀಂದ್ರ ಕಲಾಕ್ಷೇತ್ರದಲ್ಲಿ ಒಂದೇ ಒಂದು ಆಸನವೂ ಖಾಲೀ ಇರಲಿಲ್ಲ! ’ಸುಧನ್ವಾರ್ಜುನ’ ಯಕ್ಷಗಾನ ಪ್ರಸಂಗದೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಬಡಗು-ತೆಂಕು ಸಮ್ಮಿಶ್ರಣ ಅಗ್ದಿ ಲಾಯಕ್ಕಾಗಿತ್ತು. ಉತ್ತಮ ಹಿಮ್ಮೇಳ-ಮುಮ್ಮೇಳಗಳಿಂದ ಕೂಡಿದ್ದ ಈ ಪ್ರಸಂಗ ಬೆಂಗಳೂರಿನಲ್ಲಿರುವ, ನನ್ನಂತಹ ಅನೇಕ ಯಕ್ಷಪ್ರೇಮಿಗಳಿಗೆ ಸಮೃದ್ಧವಾದ ರಸದೌತಣವನ್ನು ಎರಡುಗಂಟೆಗಳಕಾಲ ಉಣಬಡಿಸಿತು. ಸುಧನ್ವನಾಗಿ ಕೊಂಡದಕುಳಿ ರಾಮಚಂದ್ರ ಹೆಗಡೆ, ಅರ್ಜುನನಾಗಿ ನಾವುಡ ಈ ಈರ್ವರು ಸಮರ್ಥವಾಗಿ ಅಭಿನಯಿಸಿದರೆ, ಪ್ರಭಾವತಿಯಾಗಿ ಸಭೆಯಲ್ಲಿ ಕುಳಿತ ಹೆಂಗಸರನ್ನೂ ನಾಚಿಸಿದವರು  ಮಂಟಪ ಪ್ರಭಾಕರ ಉಪಾಧ್ಯ. ಅದಕ್ಕೆ ತಕ್ಕಂತೇ ಕೊಳಗಿ ಕೇಶವ ಹೆಗಡೆ ಭಾಗವತಿಕೆ, ಪಾಠಕ್ ಅವರ ಮೃದಂಗ ಮತ್ತು ವಿಘ್ನೇಶ್ವರ ಕೆಸರಕೊಪ್ಪರ ಚಂಡೆ ಕುಳಿತ ಪ್ರೇಕ್ಷಕರನ್ನು ಎತ್ತಿ ಕುಣಿಸುತ್ತಿತ್ತು!

ಲಘು ಚಹಾ ವಿರಾಮದ ನಂತರ ಚಿಟ್ಟಾಣಿಯವರ ಬಗ್ಗೆ ತಮ್ಮ ಅತಿಸನಿಹದ ಅನಿಸಿಕೆಗಳನ್ನು ಹಂಚಿಕೊಂಡವರು ಮೈಸೂರು ಮುಕ್ತ ವಿಶ್ವವಿದ್ಯಾಲಯದ ಪ್ರೊ.ಜಿ.ಎಸ್.ಭಟ್ಟರು ಮತ್ತು ಕಲಾವಿದ ಮಂಟಪ ಉಪಾಧ್ಯ. ನಂತರ ಇಡೀ ಸಭೆ ಎದ್ದು ನಿಂತು ನಾಡಗೀತೆಯನ್ನು ಆಲಿಸಿ ಗೌರವಿಸಿತು. ಬಾಲಕಲಾವಿದರಾದ ಅಮೋಘ ಮತ್ತು ಅಮೃತ್ ಇಬ್ಬರೂ ತಮ್ಮ ಅಮೋಘ ಅಭಿನಯದಲ್ಲಿ ಬಾಲಗೋಪಾಲ ವೇಷವನ್ನು ಮೆರೆದು ಸಭೆಯ ಮೆರೆಗು ಹೆಚ್ಚಿಸಿದ್ದೂ ಅಲ್ಲದೇ ಯಕ್ಷಗಾನದ ಭವಿಷ್ಯ ಉಜ್ವಲವಾಗಿದೆ ಎಂಬುದನ್ನು ಸಾಬೀತುಪಡಿಸಿದರು. ಜ್ಯೋತಿ ಬೆಳಗುವುದರ ಮೂಲಕ ಮುಂದುವರಿದ ಸಭೆಯಲ್ಲಿ ಚಿಟ್ಟಾಣಿಯವರನ್ನು ಸನ್ಮಾನಿಸಿ ಮಾತನಾಡಿದವರು ಜ್ಞಾನಪೀಠ ಪುರಸ್ಕೃತ ಚಂದ್ರಶೇಖರ ಕಂಬಾರರು,  ಸಚಿವ ಗೋವಿಂದ ಕಾರಜೋಳ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಬಸವರಾಜ್ ಅವರುಗಳು. ನಂತರ ಸನ್ಮಾನ ಪಡೆದ ಚಿಟ್ಟಾಣಿಯವರು ಮಾತನಾಡಿ ಏನೂ ಅರಿಯದ ಜನಸಾಮಾನ್ಯನೊಬ್ಬ ಯಕ್ಷಗಾನದಲ್ಲಿ ತೊಡಗಿಕೊಂಡು ಈ ಎತ್ತರಕ್ಕೆ ಏರಲು ಕಾರಣೀಭೂತರಾದವರು ಅಭಿಮಾನಿಗಳೇ ಆಗಿದ್ದಾರಲ್ಲದೇ, ಡಾ|ರಾಜಕುಮಾರ್ ಹೇಳಿದಂತೇ ಪ್ರತಿಯೊಬ್ಬ ಪ್ರೇಕ್ಷಕನಲ್ಲೂ ದೇವರನ್ನು ಕಂಡೆ, ತನಗೆ ಅನ್ನ ನೀಡಿದ ಅಭಿಮಾನಿಗಳಿಗೆ ಚಿರಋಣಿ ಎಂದ ಅವರ ಮಾತುಗಳು ಕೇವಲ ಔಪಚಾರಿಕ ಎಂದು ಯಾರಿಗೂ ಅನಿಸಲಿಲ್ಲ.   

ಸನ್ಮಾನದ ಶಿಷ್ಟಾಚಾರಗಳು ಮುಗಿದ ತರುವಾಯ ’ಕಂಸವಧೆ’ ಪ್ರಸಂಗ ಪ್ರದರ್ಶನಗೊಂಡಿತು. ಸಮಯ ಬಹಳ ಜಾಸ್ತಿ ಆಗಿದ್ದರಿಂದಲೂ ಸ್ವತಃ ಚಿಟ್ಟಾಣಿಯವರು ಕಂಸನ ಪಾತ್ರವನ್ನು ನಿರ್ವಹಿಸುತ್ತಿದ್ದುದರಿಂದಲೂ ಈ ಪ್ರಸಂಗವನ್ನು ಚುಟುಕಾಗಿ ಅಭಿನಯಿಸಿ ಮುಗಿಸಿದರು. ಮೂರು ತಲೆಮಾರಿನ ಕಲಾವಿದರು ಅಪ್ಪ-ಮಗ-ಮಗ[ಚಿಟ್ಟಾಣಿ-ಸುಬ್ರಹ್ಮಣ್ಯ ಚಿಟ್ಟಾಣಿ-ಕಾರ್ತೀಕ್ ಚಿಟ್ಟಾಣಿ] ಈ ಪ್ರಸಂಗದಲ್ಲಿ ಅನುಕ್ರಮವಾಗಿ ಕಂಸ-ಕೃಷ್ಣ-ಬಲರಾಮ ಪಾತ್ರಗಳನ್ನು ಪೋಷಿಸಿದರು. ಅದೆಷ್ಟು ಬಾರಿ ಕಂಸನ ಪಾತ್ರವನ್ನು ನಿರ್ವಹಿಸಿದರೋ ಪ್ರಾಯಶಃ ಚಿಟ್ಟಾಣಿಯವರಿಗೇ ಅದರ ಅರಿವಿರಲಿಕ್ಕಿಲ್ಲ, ಆದರೆ ಈಗ ಮೊದಲಿನ ಹಾಗೆ ಭಾವಾಭಿವ್ಯಕ್ತಿಯನ್ನು ಕುಣಿದು ಬಿಂಬಿಸಲಿಕ್ಕೆ ಸಾಧ್ಯವಾಗುತ್ತಿಲ್ಲ. ಎರಡು ಹೆಜ್ಜೆ ಹಾಕಿದರೆ ಏದುಸಿರು ಬಂದು ನಿತ್ರಾಣರಾಗುತ್ತಿದ್ದ ಚಿಟ್ಟಾಣಿಯವರಿಗೆ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಿದ ತೃಪ್ತಿಯಂತೂ ಇಲ್ಲ; ಆದರೆ ’ಅಭಿಮಾನಿಗಳ ಆಕಾಂಕ್ಷಾಪೂರಿತ ಕಣ್ಣುಗಳಿಗೆ ಅರೆಘಳಿಗೆ ಇದು ಚಿಟ್ಟಾಣಿಯ ಕೊಡುಗೆ’ ಎಂಬ ರೀತಿಯಲ್ಲಿ ಅವರು, ಎಲ್ಲೆಲ್ಲಿಂದಲೋ ತನ್ನ ವೇಷವನ್ನು ಕಾಣಲೆಂದು ಕಾತರಿಸಿ ಬಂದ ಅಭಿಮಾನಿಗಳನ್ನು ಸಮಾಧಾನಿಸುವ ಸಲುವಾಗಿ ಪಾತ್ರ ನಿರ್ವಹಿಸಿದರು.

ನಮ್ಮಲ್ಲಿ ಯಕ್ಷಗಾನಗಳು ನಡೆಯುವಾಗಿ ನಮಗೆಲ್ಲಾ ಚೌಕಿ[ಗ್ರೀನ್ ರೂಂ]ಗೇ ಹೋಗಿ ಅಭ್ಯಾಸ.ಅಲ್ಲಿ ವೇಷಬರೆದುಕೊಳ್ಳುತ್ತಿರುವ ಕಲಾವಿದರುಗಳನ್ನು ಕಂಡು ಪ್ರೀತಿಯಿಂದ ಮಾತನಾಡಿಸುವುದು ನಮ್ಮಲ್ಲಿ ಬಹುತೇಕರ ಹವ್ಯಾಸ. ಅದಕ್ಕೆ ನಾನೂ ಹೊರತಲ್ಲ. ಚಹಾ ವಿರಾಮದ ನಂತರ ಚೌಕಿಗೆ ನುಗ್ಗಿದ ನಾನು ಚಿಟ್ಟಾಣಿಯವರಿಗೆ ನಮಸ್ಕಾರಮಾಡಿದೆ. ತನ್ನ ಪರಮಪ್ರಿಯ ೩೦ ಮಾರ್ಕಿನ ಬೀಡಿಯ ದಂ ಎಳೆಯುತ್ತಿದ್ದ ಅವರಲ್ಲಿ "ಹೆಗಡೇರೇ ಇನ್ನು ಬೀಡೀ ಸೇದುವವರಿಗೆ ಅಪಾಯವಿಲ್ಲ ಎಂದು ನಿಮ್ಮ ಚಿತ್ರಹಾಕಿಸಿ ಅದರ ಕೆಳಗೆ ಬರೆಸಿದರೆ ಹೇಗೆ?" ಎಂದಾಗ ತಮಾಷೆ ಕೇಳಿ ನಕ್ಕರು. ಅಕ್ಕಪಕ್ಕ ಕುಳಿತ ಇನ್ಯಾರೋ ನನ್ನಂತಹ ಯಕ್ಷಪ್ರೇಮಿಗಳೂ ಸಹಿತ ಹೆಗಡೆಯವರೊಂದಿಗೆ ತಮಾಷೆಯ ಮಾತುಗಳನ್ನಾಡುತ್ತಿರುವುದನ್ನು ಕಂಡೆ; ಪದ್ಮಶ್ರೀ ಬಂದರೂ ಅದೇ ಚಿಟ್ಟಾಣಿ, ನಾಳೆ ಪದ್ಮಭೂಷಣ ಬಂದರೂ ಅದೇ ಚಿಟ್ಟಾಣಿ-ಯಾವ ಅಹಂಕಾರವಾಗಲೀ ತಾನು ಮಹಾನ್ ಕಲಾವಿದ ಎಂಬ ಎತ್ತರವನ್ನು ಬಿತ್ತರಿಸುವ ಕುರುಹಾಗಲೀ ಅವರಲ್ಲಿ ಕಾಣಲಿಲ್ಲ. ಅಷ್ಟರಲ್ಲೇ ಬಣ್ಣ ಬರೆದುಕೊಳ್ಳುತ್ತಿದ್ದ ಸುಬ್ರಹ್ಮಣ್ಯ ಚಿಟ್ಟಾಣಿ, ಕಾರ್ತೀಕ್ ಎಲ್ಲರೂ ಅಲ್ಲೇ ಇದ್ದರು. ಮೃದಂಗವನ್ನು ಮಾತನಾಡಿಸುವ ಪಾಠಕ್ ಎದುರಾಗಿ ಕೈಕುಲುಕಿದರು. ಮೊದಲಿನ ಪ್ರಸಂಗ ಪ್ರದರ್ಶಿಸಿ ಮುಗಿದಿದ್ದರಿಂದ ಕೊಂಡದಕುಳಿ ವೇಷ ಬಿಚ್ಚಿಹಾಕುತ್ತಿದ್ದರು. ಎಲ್ಲರಿಗೂ ನಮನದೊಂದಿಗೆ ಲೋಕಾಭಿರಾಮವಾಗಿ ಮಾತನಾಡಿದ್ದು ಮನಸ್ಸಿಗೆ ಮುದನೀಡಿತು.

ಕರ್ನಟಕದ ಹೆಮ್ಮೆಯ ಗಂಡುಮೆಟ್ಟಿನ ಕಲೆ ಯಕ್ಷಗಾನ. ಕೇರಳದಿಂದ ಹಿಡಿದು ಕಾಶ್ಮೀರದವರೆಗೂ ಪ್ತತಿಯೊಂದೂ ರಾಜ್ಯಕ್ಕೂ ತನ್ನದೇ ಆದ ಕಲಾಪ್ರಕಾರ ಒಂದಿದೆ; ಅವುಗಳಿಗೆ ಮಾನ್ಯತೆಯೂ ದೊರೆತಿದೆ. ಕನ್ನಡ ನೆಲದಲ್ಲಿ ಅಂತಹ ಸ್ವಂತಿಕೆಯ ಅತಿವಿಶಿಷ್ಟ ಮತ್ತು ಸಮಗ್ರ ಕಲೆ ಎಂದರೆ ಅದು ಯಕ್ಷಗಾನ ಮಾತ್ರ! ಅಖಂಡ ಭಾರತದ ಎಲ್ಲಾ ರಾಜ್ಯಗಳ ಎಲ್ಲಾ ಕಲೆಗಳ ಛಾಯಾಚಿತ್ರಗಳನ್ನು ಕಲೆಹಾಕಿ ಜೋಡಿಸಿನೋಡಿದರೆ, ಅವುಗಳ ಮಧ್ಯದಲ್ಲಿ ಅತ್ಯಂತ ಸಹಜ ಸುಂದರ ವೇಷಭೂಷಣಗಳಿಂದ ಮೆರೆಯುವುದು, ಎದ್ದುಕಾಣುವುದು ನಮ್ಮ ಕನ್ನಡದ ಯಕ್ಷಗಾನದ ಚಿತ್ರ! ಸ್ವತಃ ಮಂತ್ರಿ ಗೋವಿಂದ ಕಾರಜೋಳ ತಮ್ಮ ಅನುಭವದಲ್ಲಿ ಹೇಳಿದರು-ವಿದೇಶಕ್ಕೆ ಹೋದಾಗ ಅಲ್ಲಿ ಮಂಗಳೂರಿನ ಯಕ್ಷಗಾನ ತಂಡವೊಂದು ಪ್ರದರ್ಶನ ನೀಡಲು ಹೋಗಿತ್ತಂತೆ. ಅದು ಭಾರತೀಯರು ದೀಪಾವಳಿಯನ್ನು ಆಚರಿಸುವುದರ ಕುರಿತ ಕಾರ್ಯಕ್ರಮ. ಯಕ್ಷಗಾನ ಮುಗಿದಾನಂತರ ಅಲ್ಲಿ ಸೇರಿದ್ದ ವಿದೇಶೀಯರು ಈ ಗೋವಿಂದ ಕಾರಜೋಳರನ್ನು ಕೇಳಿಕೊಂಡರಂತೆ: "ಸ್ವಾಮೀ ಮುಂದೆ ಪ್ರತೀವರ್ಷ, ನಿಮ್ಮಲ್ಲಿಂದ ಇಂತಹ ಹಲವು ತಂಡಗಳನ್ನು ಕಳಿಸಿ ನಮ್ಮಲ್ಲಿ ದೀಪಾವಳಿ ಆಚರಿಸುವುದಕ್ಕೆ ಅನುವುಮಾಡಿಕೊಡಿ"--ಇದಕ್ಕಿಂತ ಹಿರಿದಾದ ಭಾಗ್ಯ ಯಾವುದು ಬೇಕು ಯಕ್ಷಗಾನಕ್ಕೆ?

ಅನಾದಿಕಾಲದಲ್ಲಿ ಅಥವಾ ಶತಮಾನದ ಹಿಂದೆ ನಮ್ಮಲ್ಲಿನ ಹಳ್ಳಿಗಳಲ್ಲಿ ಸಾಕ್ಷರತೆ ಅಷ್ಟಾಗಿ ಇರಲಿಲ್ಲ. ಆದರೆ ಮಹಾಕವಿಗಳು ರಚಿಸಿದ ರಾಮಾಯಣ-ಮಹಾಭಾರತಗಳು ಎಲ್ಲರಿಗೂ ತಿಳಿದಿದ್ದವು! ಇಂದಿಗೂ ಕರ್ನಾಟಕದ ಕರಾವಳೀ ಮತ್ತು ಮಲೆನಾಡು ಜಿಲ್ಲೆಗಳಲ್ಲಿರುವ ಜನರಿಗೆ ಗೊತ್ತಿರುವ ಅದೇಷ್ಟೋ ಪೌರಾಣಿಕ ಕಥಾಭಾಗಗಳು ಬಾಕೀ ಪ್ರದೇಶದವರಿಗೆ ತಿಳಿದಿಲ್ಲ! ಹೀಗಾಗಲು ಕಾರಣವಿಷ್ಟೇ: ಮಳೆಗಾಲದ ಬೇಸರವನ್ನು ಕಳೆಯಲು ಹುಟ್ಟಿದ ಯಕ್ಷಗಾನ ಕಲೆ ನಮ್ಮಲ್ಲಿನ ಹಳ್ಳಿಹಳ್ಳಿಗಳಲ್ಲಿ ವ್ಯಾಪಿಸಿದೆ, ಅಲ್ಲಿನ ಹಬ್ಬ-ಹರಿದಿನಗಳ ಸಂದರ್ಭಗಳಲ್ಲಿ ಪೌರಾಣಿಕ ಪ್ರಸಂಗಗಳ ಪ್ರದರ್ಶನ ಅಥವಾ ತಾಳಮದ್ದಲೆ ನಡೆಯುತ್ತದೆ. ಮಾತಿನ ಚಾಕಚಕ್ಯತೆಯಿಂದ ಪಾತ್ರಧಾರಿಗಳು ಪರಸ್ಪರರನ್ನು ಸೋಲಿಸಲು ಪ್ರಯತ್ನಿಸುತ್ತಿರುವಾಗ ಪುಣ್ಯಕಥಾನಕಗಳಲ್ಲಿ ಅಡಗಿರುವ ಬಹುತೇಕ ಉಪಕಥೆಗಳೂ ಕಾಣಸಿಗುತ್ತವೆ; ಗೊತ್ತಿರದ ಅನೇಕ ಪೌರಾಣಿಕ ವ್ಯಕ್ತಿತ್ವಗಳ ಪರಿಚಯ ನಮಗಾಗುತ್ತದೆ. ಎಳವೆಯಲ್ಲಿ, ಮಕ್ಕಳಮೇಲೆ ದೃಶ್ಯಮಾಧ್ಯಮಗಳು ಬೀರುವ ಪರಿಣಾಮ ಬಹಳ. ನಮ್ಮಲ್ಲಿನ ರಾಮಾಯಣ-ಮಹಾಭಾರತದ ಕಥೆಗಳನ್ನು ಕರ್ನಾಟಕದ ಹಳ್ಳಿಹಳ್ಳಿಗಳಲ್ಲಿ ಜನ ಯಕ್ಷಗಾನದ ಮೂಲಕ ಅರಿತರೆ ಮನೋರಂಜನೆಯ ಜೊತೆಗೆ ಭಾರತೀಯ ಸಂಸ್ಕೃತಿಯ ಪರಿಚಯವೂ ಆಗುತ್ತದೆ. ಯಾವುದು ಒಳಿತು, ಯಾವುದು ಕೆಡುಕು, ಯಾವುದನ್ನು ಕೈಗೊಳ್ಳುವುದರ ಪರಿಣಾಮ ಏನಾಗುತ್ತದೆ ಎಂಬುದನ್ನು ಸಾದ್ಯಂತ ವಿವರಿಸುತ್ತ ನೋಡುಗರ ಹಸಿದ ಮನಸ್ಸಿಗೆ ಪುಷ್ಕಳ, ಸುಗ್ರಾಸ ಭೋಜನ ಒದಗುತ್ತದೆ.

ಕಂಸವಧೆಯಲ್ಲಿ ಒಂದು ಹಾಡು ’ಇರುವುದು ಒಂದೇ ದೀಪವು ಎರಡಾಯಿತು ...’ ಹೀಗೇ ಹಲವಾಯಿತು ಎನ್ನುತ್ತಾ ಎಲ್ಲೆಲ್ಲೂ ಕೃಷ್ಣನ ಪ್ರತಿರೂಪಗಳೇ ಕಂಸನನ್ನು ಅಣಕಿಸುವುದನ್ನು ಹೇಳಲಾಗುತ್ತದೆ. ಈ ಸೃಷ್ಟಿಯ ಮೂಲ ಒಂದೇ. ಆ ಅದ್ಭುತ ಚೈತನ್ಯ ಒಂದಿದ್ದದ್ದು ಹತ್ತಾಗಿ ಹಲವಾಗಿ ಈ ಜಗತ್ತನ್ನು ನಡೆಸುವ ಲೀಲಾವಿನೋದ ಮಾತ್ರ ಎಲ್ಲರಿಗೂ ಅರ್ಥವಾಗುವುದಲ್ಲ. ಇಂತಹ ಅಪರೂಪದ ಅರ್ಥವುಳ್ಳ ಹಾಡುಗಳನ್ನು ಆ ಕಾಲಕ್ಕೇ ನಮ್ಮ ಪೂರ್ವಜ ಪುಣ್ಯಾತ್ಮರು ಪ್ರಯಾಸಪೂರ್ವಕವಾಗಿ, ಪ್ರಯತ್ನಶೀಲರಾಗಿ ತಾಡವೋಲೆಗಳಲ್ಲಿ ಬರೆದು, ನಮಗಾಗಿ ನೀಡಿದರು. ಮುಂದಿನ ನಮ್ಮ ಪೀಳಿಗೆಗೆ ಹಿಂದಿನವರು ನಮಗೆ ನಿಸ್ವಾರ್ಥರಾಗಿ ಕೊಟ್ಟುಹೋದ ಉತ್ತಮ ಸಂಸ್ಕಾರಗಳನ್ನು ವರ್ಗಾಯಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿರುತ್ತದೆ. ಜೀವ ಇರುವವರೆಗೆ, ಈ ದೇಹದಿಂದಿರುವವರೆಗೆ ಭೂಮಿ, ಮನೆ-ಮಠ ತನ್ನದು ತನ್ನದು ಎಂದು ನಾವು ಭಾವಿಸಿಕೊಳ್ಳುತ್ತೇವೆ.  ವಾಸ್ತವದಲ್ಲಿ ಈ ಭೂಮಿಯ ಯಾವುದೇ ಭಾಗವಾಗಲೀ, ಆಕಾಶದ, ನೀರಿನ ಯಾವುದೇ ಭಾಗವಾಗಲೀ ನಮದಲ್ಲ. ಇಲ್ಲಿರುವವರೆಗೆ ಎಲ್ಲದಕ್ಕೂ ನಾವು ವಾರಸುದಾರರು ಮಾತ್ರ! "ನೋಡಿಕೋ" ಎಂಬ ಜವಾಬ್ದಾರಿಯನ್ನು ಕೊಡುವುದರ ಜೊತೆಗೆ ಕೊಟ್ಟ ಪಾತ್ರಗಳನ್ನು ಜಗವೆಂಬ ರಂಗದಲ್ಲಿ ನಿರ್ವಹಿಸುವ ಜಾತ ಕಲಾವಿದರಾದ ನಮ್ಮೆಲ್ಲರಿಗೂ, || ಜಾತಸ್ಯ ಮರಣ ಧ್ರುವಂ || ಎಂಬ ಸಂಸ್ಕೃತದ ವ್ಯಾಖ್ಯೆ ನೆನಪಾಗುವುದೇ ಇಲ್ಲ. ಬರುವಾಗ ತರಲಾರದ ಹೋಗುವಾಗ ಹೊರಲಾರದ, ಆದರೆ ಕೇವಲ ಲೌಕಿಕದ ಬದುಕಿಗೆ ಆಧಾರವೆನಿಸುವ ಇಲ್ಲಿನ ಆಸ್ತಿಪಾಸ್ತಿ, ಜೀವನಕ್ರಮ, ನ್ಯಾಯ-ನೀತಿಗಳ ಬಗ್ಗೆ ವಿಶದವಾಗಿ ಅರುಹುವ ಒಂದೇ ಒಂದು ಸಮಗ್ರ ಕಲೆ ಯಕ್ಷಗಾನ ಮಾತ್ರ. ಯಕ್ಷಗಾನವೆಂಬ ಒಂದೇ ದೀಪದಿಂದ ಹಲವುದೀಪಗಳು ಬೆಳಗಲಿ, ಸಮಾಜದಲ್ಲಿರುವ ಅಂಧಕಾರ ತೊಲಗಲಿ ಎಂಬ ಪ್ರಾರ್ಥನೆಯೊಂದಿಗೆ, ’ಯಕ್ಷಗಾನ ಬಯಲಾಟ ಅಕಾಡೆಮಿ’ಗೆ ಜೀವತುಂಬಲು ಪ್ರಯತ್ನಿಸುತ್ತಿರುವ ಸಾಮಗರಿಗೂ, ಮುಪ್ಪಡರಿದ ದೇಹದಲ್ಲೂ ಯಕ್ಷಕಲೆಯನ್ನು ಚಪ್ಪರಿಸಿ ಹಂಚಲು ಯತ್ನಿಸುತ್ತಿರುವ ಚಿಟ್ಟಾಣಿಯವರಿಗೂ ನನ್ನ ಅಭಿನಂದನೆಗಳು, ಅಭಿವಂದನೆಗಳು ಮತ್ತು ನಮಸ್ಕಾರಗಳು.  

Thursday, May 3, 2012

ಬರಗಾಲ


ಚಿತ್ರಕೃಪೆ: ಅಂತರ್ಜಾಲ 
ಬರಗಾಲ

ಬಿರುಬಿಸಿಲ ಬೇಗೆಯಲಿ ಅರಳಿಹುದು ಹೂವೊಂದು
ತರುವು ಕಸುವನು ಕಳೆದು ಒಣಗುತಿರಲು
ಕರುದನಗಳವುಗಳಿಗೆ ಆಹಾರವಿಲ್ಲದಲೆ
ಸೊರಗಿ ಕಣ್ಣೀರಿಡಲು ಬಡವ ನೊಂದು 

ಹರುಷಪಡಬೇಕೆ ನಾವ್ ಹೂವ ನೋಡುತಲಲ್ಲಿ?
ಮರುಕಹುಟ್ಟುವ ಸಾವುಬದುಕಿನಾಟದಲಿ
ತೊರೆಕೆರೆಗಳವು ಬತ್ತಿ ಬರಡಾದ ಜಾಗದಲಿ
ತರಿಕಿಟದ ಧಿಮಿ ಕುಣಿತ ವಿಧಿಯ ಆಟದಲಿ

ಕರೆದಾಗ ಬರಲಾರ ಮಹನೀಯ ಮಳೆರಾಯ
ದೊರೆಸಾನಿ ಜನಗಳವು ಬಂದುಹೋಗುವರು
ಬರಿಸುಮ್ಮನೇ ಅಲ್ಲಿ ಕಣ್ಣೊರೆಸುವಾತಂತ್ರ
ಪರಿಹಾರ ದಾರಿಯಲಿ ತಿಂದು ತೇಗುವರು!

ಪರಶಿವನೆ ಗತಿಯೆಂದು ಕರಮುಗಿದು ಪ್ರಾರ್ಥಿಸುತ
ನರನಾರಿಯರು ದಿಕ್ಕು ಕಾಣದಾಗುವರು
ಕಿರಿಸಾಲ ಹಿರಿದಾಗಿ ಬದುಕು ಬೇಸರವೆನಿಸಿ
ತೊರೆದೆಲ್ಲ ನಗರದೆಡೆ ಬೇಗ ಸಾಗುವರು

ಮರವು ಒಣಗುತಲಿತ್ತು ಹೂವು ಬಿರಿಯುತಲಿತ್ತು
ವರವೊ ಶಾಪವೊ ಅರಿಯೆ ಎಂಥ ಕಲಿಗಾಲ
ತೆರೆದೆದೆಯ ಬಯಲಿನಲಿ ಹನಿನೀರು ಸಿಗದಿರಲು
ಕೊರಗಿ ಸತ್ತಿದೆ ಹಕ್ಕಿ ತೀವ್ರ ಬರಗಾಲ


Tuesday, May 1, 2012

ಹುಳಿಮಾವಿನಲ್ಲಿ ಎಲ್ಲರಿಗೂ ಸಮಾರಾಧನೆ

ಬಿಬಿಎಂಪಿ ಗೋಡೆ ಚಿತ್ರದ ಛಾಯಾಪ್ರತಿಯ ಕೃಪೆ: ಅಂತರ್ಜಾಲ
ಹುಳಿಮಾವಿನಲ್ಲಿ ಎಲ್ಲರಿಗೂ ಸಮಾರಾಧನೆ

ಮಾವು ಈ ಸಲದ ಬೇಸಿಗೆಯಲ್ಲಿ ಸಿಹಿಸುದ್ದಿಯನ್ನಂತೂ ತರಲಿಲ್ಲ ಎಂಬುದು ಎಲ್ಲರಿಗೂ ಗೊತ್ತು; ಬೇಸಿಗೆಯ ಉತ್ತಮ ರಸಭರಿತ ಅತಿವಿಶಿಷ್ಟ ಫಲ ಅದಾಗಿರುವುದರಿಂದ ಮರೆತರೂ ಮರೆಯದ ಅದರ ಸ್ವಾದ ಅಂತಹ ಆಕರ್ಷಣೆಯನ್ನು ಇಟ್ಟುಕೊಂಡೇ ಇರುತ್ತದೆ. ಯಾರೋ ಇಲ್ಲಿಯಾತ ಅನಿವಾಸಿಯಾಗಿ ಹೊರದೇಶಕ್ಕೆ ತೆರಳಿದ್ದು, ಮಾವಿನ ಹಂಗಾಮು ಮುಗಿದಮೇಲೆ ಬಂದಾಗ ಪಶ್ಚಾತ್ತಾಪಗೊಳ್ಳುವುದೂ ಇರುತ್ತದೆ! ಸದ್ಯ ನಾನು ಹೇಳುತ್ತಿರುವುದು ಅದರ ಬಗ್ಗಲ್ಲ. ಹೆಸರುಗಳ ಪರಿಕ್ರಮಗಳ ಬಗ್ಗೆ. ಹುಳಿಮಾವು ಎಂಬುದೊಂದು ಗ್ರಾಮ ಬೆಂಗಳೂರಿನ ಆನೇಕಲ್ ತಾಲೂಕಿನಲ್ಲಿ ಬರುತ್ತದೆಯಷ್ಟೇ ? ಹುಳಿಮಾವು ಎಂಬುದು ಊರ ಹೆಸರೂ ಹೌದು ಎಂದು ಬಹಳ ಜನರಿಗೆ ಗೊತ್ತಿರಲಿಕ್ಕಿಲ್ಲ. ಪತ್ರಿಕೆಯಲ್ಲಿ ವರದಿ ಮಾಡುವಾಗ ಹೀಗೊಂದು ತಲೆಬರಹ ಬರೆದರೆ ದೂರದಲ್ಲಿರುವ ಅಥವಾ ಬೆಂಗಳೂರಿನ ಸುತ್ತಲ ಗ್ರಾಮಗಳ ಹೆಸರುಗಳನ್ನು ಅರಿಯದಿರುವ ಓದುಗರಿಗೆ [ಓದುವಾಗ ಪೂರ್ತಿ ವರದಿಯನ್ನು ಓದದೇ ಇದ್ದರೆ] ಇದೇನಪ್ಪಾ ಹುಳಿಮಾವಿನಲ್ಲೇ ಅಡುಗೆಮಾಡಿ ಬಡಿಸಿದರೇ ಎಂದೆನಿಸಬಹುದು. 

ಪೈಲ್ವಾನ್ ಸಣ್ಣಪ್ಪ ಎಂಬವರನ್ನು ನೀವು ನೋಡದಿರಬಹುದು. ಅಥವಾ ನಿಮಗೆ ಗೊತ್ತಿರದಿರಲೂ ಬಹುದು. ಸಾಮಾನ್ಯವಾಗಿ ಪೈಲ್ವಾನ ಎಂದಕೂಡಲೇ ಬೃಹದಾಕಾರದ ಶರೀರದ ಗಿರಿಜಾ ಮೀಸೆಯ ಧಡೂತಿ ವ್ಯಕ್ತಿಯ ಚಿತ್ರ ಮನದಲ್ಲಿ ಮೂಡುತ್ತದೆ. ಆದರೆ ಹೆಸರು ಮಾತ್ರ ಸಣ್ಣಪ್ಪ! ಹಾಗಾದರೆ ಪೈಲ್ವಾನ್ ಸಣ್ಣ ಶರೀರಿಯೇ ? ನಮ್ಮಲ್ಲಿ ತಮಾಷೆಗೆ ತೀರಾ ತುಂಬಾಲೆ [ಕಡ್ಡಿಯ ರೀತಿ ತೆಳ್ಳಗಿರುವ]ಯಾಗಿರುವವರಿಗೆ ಕಡ್ಡಿ ಪೈಲ್ವಾನ ಎನ್ನುವ ಪದ ಬಳಕೆ ರೂಢಿಯಲ್ಲಿದೆ. ಪೈಲ್ವಾನ್ ಸಣ್ಣಪ್ಪನ ಸಂದರ್ಶನ ಮಾಡುತ್ತಿರುವಂತೇ ’ಮುಖ್ಯಮಂತ್ರಿಗಳ ಅಪರಕಾರ್ಯ ದರ್ಶಿಗಳು’ ಎಂದು ಬೋರ್ಡು ಹಾಕಿದ್ದು ನೆನಪಿಗೆ ಬಂದೇಬಿಟ್ಟಿತು! ಹಿಂದೂಗಳಲ್ಲಿ, ಬದುಕಿರುವವರ ಕಾರ್ಯವಾದರೆ ಪೂರ್ವಕಾರ್ಯ ಅಥವಾ ಮಂಗಳಕಾರ್ಯ ಎಂದೂ, ವ್ಯಕ್ತಿ ಗತಿಸಿದ ನಂತರ ಆ ವ್ಯಕ್ತಿಯ ಕುರಿತ ಶ್ರಾದ್ಧಕಾರ್ಯವಾದರೆ ಅಪರಕಾರ್ಯ ಎಂದೂ ಕರೆಯುವುದು ವಾಡಿಕೆ. ಆದರೆ ನಮ್ಮ ಮಂತ್ರಾಲಯಗಳಲ್ಲಿ ಪ್ರತಿಯೊಬ್ಬ ಮಂತ್ರಿಗೂ  ಸಹಾಯಕರಾಗುವ ’ಅಪರಕಾರ್ಯದರ್ಶಿಗಳ’ ಹುದ್ದೆ ಇರುತ್ತದೆ. ಯಾರೋ ವೈದಿಕ ದಿನಪತ್ರಿಕೆ ಓದಿದರೆ, ರಾಜಕೀಯದ ಪ್ರಸಕ್ತ ವಿದ್ಯಮಾನಗಳ ಅರಿವು ಆತನಿಗೆ ಇರದಿದ್ದರೆ, ಆಗ ಆತ ಓಹೋ ಅಲ್ಲೂ ಯಾರೋ ಅಪರಕಾರ್ಯ ಮಾಡಿಸುವವರಿದ್ದಾರೆ ಎಂದುಕೊಳ್ಳಬಹುದು! ಇಲ್ಲಿ ’ಅಪರ’ ಎನ್ನುವ ಪದದ ಬದಲಿಗೆ ಬೇರೇ ಹೊಸಪದದ ಬಳಕೆ ಮಾಡುವುದು ಸಮಂಜಸವೆನಿಸುತ್ತದೆ.

ಮಂತ್ರಾಲಯ ಎಂದತಕ್ಷಣ ನೆನಪಾಗುವುದು ರಾಘವೇಂದ್ರ ಸ್ವಾಮಿಗಳ ಚಿತ್ರ. ಮಂತ್ರಗಳಿಂದ ತುಂಬಿದ ಆಲಯ ಮಂತ್ರಾಲಯ ಎನಿಸಿದ್ದು ಎಲ್ಲರಿಗೂ ಗೊತ್ತು. ಮಂತ್ರಿಗಳು ಕುಳಿತು ಸೂಟ್ ಕೇಸ್ ಲೆಕ್ಕಹಾಕುವ ಜಾಗಕ್ಕೂ ’ಮಂತ್ರಾಲಯ’ ಎಂಬ ಪದವನ್ನು ಇತ್ತೀಚೆಗೆ ಬಳಸುತ್ತಾರೆ. ಅದು ಸಚಿವಾಲಯವೇ ಹೊರತು ಮಂತ್ರಾಲಯ ಎಂಬ ಶಬ್ದ ಅಲ್ಲಿ ಸಮರ್ಪಕವೆನಿಸುವುದಿಲ್ಲ. ಆಲಯ ಎಂಬ ಪದಕ್ಕೂ ಒಂದು ಮಾನ್ಯತೆಯಿದೆಯಷ್ಟೇ? ಎಲ್ಲದಕ್ಕೂ ಆಲಯ ಎಂದು ಬಳಸಿದರೆ ಆ ಅನುಭವ ಹೇಗಿರಬಹುದು? ಹೃದಯಾಲಯ, ನೇತ್ರಾಲಯ ಇವೆಲ್ಲ ಏನೋ ಸರಿ ಆದರೆ ’ಮೂತ್ರಾಲಯ’ ಎಂದು ಒಂದುಕಡೆ ಬರೆದಿದ್ದು ಕಂಡಿತು-ಅದೂ ಆಲಯವೇ? ಕಳೆದೆರಡು ವರ್ಷಗಳ ಹಿಂದೆ ಬೆಂಗಳೂರು ನಗರದಲ್ಲಿ ಹಲವುಕಡೆ ರಸ್ತೆಬದಿಯ ಗೋಡೆಗಳಿಗೆ ಚಿತ್ತಾರಗಳನ್ನು ಬಿಡಿಸುವ ಕೆಲಸ ನಡೆದಿದೆ. ಹಲವಾರು ಕಡೆ ನನಗೆ ಕಾಣಿಸಿದ್ದು:  ಒಂದು ದೊಡ್ಡ ಆನೆ ಚಿತ್ರ ಅಥವಾ ಹುಲಿ ಮರದಮೇಲೆ ಮಲಗಿ ನಿದ್ರಿಸುವ ಚಿತ್ರ ಅವುಗಳಮೇಲೆ ಬಿಬಿಎಂಪಿ ಆಯುಕ್ತರು ಎಂದು ಬರೆದಿರುತ್ತದೆ. ಇದೇ ರೀತಿಯಲ್ಲಿ, ಮದ್ಯಪಾನ ನಿರ್ಮೂಲನಾ ಮಂಡಳಿಯ ಒಂದು ಕಟೌಟ್ ಕಂಡಿತ್ತು: ಮೇಲ್ಗಡೆ ’ಕರ್ನಾಟಕ ಸರ್ಕಾರ’ ಎಂದೂ ಅಲ್ಲೇ ಕೆಳಗೆ ’ಕುಡಿತದಿಂದ ಸರ್ವನಾಶ’ ಎಂದೂ ಬರೆದಿತ್ತು! ಪಾಪ ಓದಿದ ಜನ ಯಾವ ರೀತಿ ಅರ್ಥಮಾಡಿಕೊಳ್ಳಬೇಕು ?

ಕೆಲವೊಮ್ಮೆ ಸಭೆ-ಸಮಾರಂಭಗಳು, ಸಮ್ಮೇಳನಗಳು ನಡೆಯುತ್ತಿರುತ್ತವೆ. ಇಂಥಾ ಪೀಠಾಧ್ಯಕ್ಷರ [ಪೀಠಾಧ್ಯಕ್ಷರು ಎಂಬ ಪದಬಳಕೆಯೇ ಸರಿಯಲ್ಲ! ಅಲ್ಲಿ ಅಧ್ಯಕ್ಷರಿದ್ದಮೇಲೆ ಪೀಠಕ್ಕೆ ಅತಿಥಿಗಳೂ ಇರಬೇಕಾಯ್ತು !]೭೭ನೇ ಪೀಠಾರೋಹಣ ಮಹೋತ್ಸವ !! ವರ್ಷಕ್ಕೊಮ್ಮೆ ಹೊಸ ಹೊಸ ಪೀಠಾರೋಹಣ ಮಾಡುತ್ತಲೇ ಇದ್ದಾರ್ಯೇ? ಹಾಗಾದರೆ ಇಲ್ಲಿನ ಪದಬಳಕೆ ಸರಿಯಿದೆಯೇ?  ಅಲ್ಲೆಲ್ಲೋ ವಿದ್ಯಾರ್ಥಿಗಳ ಸಾಹಿತ್ಯ ಸಮ್ಮೇಳನ ನಡೆಯುತ್ತಿತ್ತಂತೆ ಅದಕ್ಕೇ ಅದನ್ನು ಹೀಗೆ ಬರೆದಿದ್ದರು: ’೯ನೇ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಕನ್ನಡ ಸಾಹಿತ್ಯ ಸಮ್ಮೇಳನ.’ ಎಷ್ಟು ಮಜವಾಗುತ್ತದೆ ನೋಡಿ. ಆಂಗ್ಲದಲ್ಲಿ ಒಂದು ಉದಾಹರಣೆ ಇದೆ-- ಕೋರ್ಟ್ ಹಾಲ್ ನಲ್ಲಿ ನ್ಯಾಯಾಧೀಶರು ತೀರ್ಪು ಘೋಷಿಸಿದರು " ಲೀವ್ ಹಿಮ್ ನಾಟ್ ಹ್ಯಾಂಗ್ ಹಿಮ್." ಸರಿಯಾಗಿ ಅರಿಯದ ಗುಮಾಸ್ತೆ ಅಲ್ಪವಿರಾಮ ಎಲ್ಲಿಹಾಕಬೇಕೆಂದು ಕೇಳಲೂ ಇಲ್ಲ, ಹಾಕಿಬಿಟ್ಟ, ನೋಡಿ- ಲೀವ್ ಹಿಮ್, ನಾಟ್ ಹ್ಯಾಂಗ್ ಹಿಮ್. ಖೂಳನೊಬ್ಬನಿಗೆ ದೇಹಾಂತ್ಯ ಶಿಕ್ಷೆ ವಿಧಿಸಲಾಗಿದ್ದು ಗುಮಾಸ್ತೆ ಬೆರಳಚ್ಚು ಮಾಡುವಾಗ ವ್ಯತ್ಯಾಸವಾಗಿತ್ತು! ಅದೇ ವಾಕ್ಯವನ್ನು ನ್ಯಾಯಾಧೀಶರು ಇನ್ನೊಮ್ಮೆ ಇನ್ನೊಬ್ಬ ಅಪರಾಧಿಗೆ ತೀರ್ಪಾಗಿ ಇತ್ತರು. ಈಗ ಗುಮಾಸ್ತೆ ತಡಮಾಡಲಿಲ್ಲ ಅಚ್ಚಿಸಿಯೇ ಬಿಟ್ಟ-ಲೀವ್ ಹಿಮ್ ನಾಟ್, ಹ್ಯಾಂಗ್  ಹಿಮ್! ಪಾಪದ ಅಪರಾಧಿಯನ್ನು ಆತ ನಿರಪರಾಧಿ ಎಂದು ಸಾಬೀತಾದುದರಿಂದ ಗುನ್ನೆಯಿಂದ ಖುಲಾಸೆಗೊಳಿಸಲಾಗಿತ್ತು; ಆದರೆ ಗುಮಾಸ್ತೆಯ ಎಡವಟ್ಟು ಈ ರೀತಿ ಇತ್ತು. ಮೇಲೆ ಹೇಳಿದ ವಿಶ್ವವಿದ್ಯಾಲಯ ಒಂಬತ್ತನೆಯದೋ ಅಥವಾ , ಒಂಬತ್ತನೇ ಸಾಹಿತ್ಯವೋ, ಅಲ್ಲಿನ ಒಂಬತ್ತನೇ ವಿದ್ಯಾರ್ಥಿಯೋ ಅಥವಾ ೯ನೇ ಸಮ್ಮೇಳನವೋ ? ’೯ನೇ’ ಎನ್ನುವ ಪದವನ್ನು ಎಲ್ಲಿ ಬಳಸಬೇಕು ಎಂಬುದು ಪ್ರಮುಖವಾಗಿರುತ್ತದೆ.  

ಇತ್ತೀಚೆಗೆ ದಿನಪತ್ರಿಕೆಗಳಲ್ಲಿ ಕಾಣುತ್ತಿರುವ ಕಾಗುಣಿತ ಮತ್ತು ವ್ಯಾಕರಣ ದೋಷಗಳು ಎಷ್ಟರಮಟ್ಟಿಗೆ ಇವೆ ಎಂದರೆ ’ತಪ್ಪಾಯ್ತು ತಿದ್ಕೋತೀವಿ’ ಎಂಬ ಕನ್ನಡ ಶಾಲೆಯನ್ನು ತೆರೆದು ಅಲ್ಲಿ ಹೊಸದಾಗಿ ವರದಿಗಾರರಿಗೆ ಕಲಿಸಬೇಕಾಗಿದೆ ಅನಿಸುತ್ತಿದೆ. ಒಬ್ಬರ ಕೂಡ ನಾನು ಮಾತನಾಡಿದಾಗ ಅವರು ಹೇಳಿದರು" ಈಗೇನಿದ್ರೂ ಸ್ಪೀಡ್ ಜಮಾನ, ಯಾವುದೂ ನಮ್ ಕೈಲಿರೋದಿಲ್ಲ, ಎಲ್ಲಾ ವರದಿಗಾರರೇ ನೇರವಾಗಿ ಟಂಕಿಸಿ ತಯಾರಿಸಿಬಿಡುತ್ತಾರೆ ಹೀಗಾಗಿ ತಪ್ಪುಗಳು ಸಹಜವಾಗಿ ಇದ್ದೇ ಇರುತ್ತವೆ" ನಾನು ಏನೂ ಉತ್ತರಿಸಲಿಲ್ಲ. ಹಿಂದಕ್ಕೆ ಮೊಳೆಗಳನ್ನು ಜೋಡಿಸಿ ಮುದ್ರಿಸುವ ಕ್ರಮ ಇತ್ತು[ಅಕ್ಷರಗಳು,ಸಂಕೇತಗಳು ಉಳ್ಳ ಮೊಳೆಗಳನ್ನು ದೂರದ ಮಾರುಕಟ್ಟೆಗಳಿಂದ ತೂಕದ ಲೆಕ್ಕದಲ್ಲಿ ಕೊಂಡು ತರಬೇಕಿತ್ತು]ದೋಷವಿದ್ದರೆ ಇಡೀ ಲೇಖನದ ಫ್ರೇಮ್[ಕಟ್ಟು] ತೆಗೆದು ಅಲ್ಲಿ ತಪ್ಪಾಗಿ ಜೋಡಿಸಲ್ಪಟ್ಟ ಮೊಳೆ ತೆಗೆದು ಸರಿಪಡಿಸಬೇಕಿತ್ತು, ಪರ್ಯಾಯ ವ್ಯವಸ್ಥೆ ಇರಲಿಲ್ಲ, ಆದರೂ ತಪ್ಪುಗಳು ಕಮ್ಮಿ ಇರುತ್ತಿದ್ದವು! ಇವತ್ತು ಗಣಕಯಂತ್ರದ ವ್ಯವಸ್ಥೆ ಇದೆ, ತಪ್ಪನ್ನು ಸರಿಪಡಿಸುವುದು ಅರೆನಿಮಿಷದ ಕೆಲಸ-ಆದರೂ ಮಾಡುವುದಿಲ್ಲ! ತಪ್ಪನ್ನು ತಪ್ಪೆಂದು ಗ್ರಹಿಸುವ/ಹುಡುಕುವ ಭಾಷಾ ಪ್ರೌಢಿಮೆಯುಳ್ಳ ವ್ಯಕ್ತಿಗಳನ್ನು ನೇಮಿಸಿಕೊಳ್ಳಲು ಯಾರಿಗೂ ಆಸಕ್ತಿಯಿಲ್ಲ. ದಿನಪತ್ರಿಕೆಗಳ ಓದುಗರ ಸಂಖ್ಯೆ ಬೆಳೆಸಬೇಕು, ಹೆಚ್ಚು ಜಾಹೀರಾತು ಗಳಿಸಬೇಕು ಎಂಬ ಭರದಲ್ಲಿ ಕಂಗ್ಲೀಷ್ ಲೇಖನಗಳೇ ಜಾಸ್ತಿ!ಬರಹಗಾರರಲ್ಲೂ ಕೂಡ ತಾವು ಬರೆದಿದ್ದೇ ಸರಿಯೆಂಬ ಅನಿಸಿಕೆಯ ಮೊಂಡುವಾದ. ಇದು ಹೊಸದೊಂದು ಕನ್ನಡವನ್ನೇ ಹುಟ್ಟುಹಾಕಿದೆ-ಅದೇ ’ಪತ್ರಿಗನ್ನಡ’ !!   

ಸಂತೆಯೊಳಗೊಂದು ಮನೆಯಮಾಡಿ
ಶಬ್ದಕ್ಕೆ ಅಂಜಿದೊಡೆಂತಯ್ಯಾ

--ಎಂಬ ವಚನದ ಅರ್ಥವನ್ನು ಈ ರೀತಿ ನಾವು ಪತ್ರಿಗನ್ನಡದ ಸಲುವಾಗಿ ಬಳಸಿಕೊಳ್ಳಬಹುದೇನೋ!

ವಿಧ್ಯೆ, ಉಧ್ಯೋಗ, ಶಬ್ಧ, ಅದಿಕಾರಿ, ಬಾಶೆ ಹೀಗೇ ಅನೇಕ ಪದಗಳ ’ರೂಪವೈವಿಧ್ಯ’ವನ್ನು ನೂರೆಂಟು ನೋಟಗಳಿಂದ ಪತ್ರಿಗನ್ನಡದಲ್ಲಿ ಕಾಣಬಹುದು! ಅಲ್ಲಿ ಒಮ್ಮೆ ಬರೆದಾಗ ಅದು ’ಉಧ್ಯೋಗ’ವಾದರೆ ಇನ್ನೊಮ್ಮೆ ಬರೆದಾಗ ’ಹುಧ್ಯೋಗ’ವಾಗಲೂ ಬಹುದು. ಇನ್ನು ಸಂಧಿ-ಸಮಾಸ ಇವೆಲ್ಲಾ ಬಿಡಿ ಸಮೋಸಾ ತಿಂದಷ್ಟೇ ಸಲೀಸು ನಮ್ಮ ವರದಿಗಾರರಿಗೆ! ’ಅವಳೇ ಅತನ ಬೇಕುಬೇಡಗಳಿಗೆ ಸ್ಪಂದಿಸುತ್ತಾ ಶೂ-ಸಾಕ್ಸ್ ನಿಂದಿಡಿದು, ಶರ್ಟ್ ಪ್ಯಾಂಟ್ ಗಳ ಇಸ್ತ್ರಿಸೇರಿದಂತೇ ಎಲ್ಲಾ ಕಾರ್ಯವನ್ನೂ ಚಾಚೂ ತಪ್ಪದೇ ನಿರ್ವಹಿಸುತ್ತಾಳೆ ’ ---ಎಂದು ಲೇಖನದ ಪ್ರಮುಖ ಉಲ್ಲೇಖವನ್ನು ತೋರಿಸಿದ ಪತ್ರಿಕೆಯೊಂದರ ಈ ಬರಹಕ್ಕೆ ಹಿಡಿದ ಗ್ರಹಣವನ್ನು ಬಿಡಿಸುವವರಾರು? ’ಹ’ ಕಾರದ ಸಂಧಿಯಾಗುವ ಜಾಗದಲ್ಲಿ ಅದನ್ನೇ ಹಾರಿಸಿಬಿಟ್ಟರೆ ಪದದ ಅರ್ಥವ್ಯತ್ಯಾಸವಾಗುವುದಿಲ್ಲವೇ? ಶಿವನೇ ಬಲ್ಲ. ಏಕವಚನ ಮತ್ತು ಬಹುವಚನಗಳ ಅರಿವು ಯಾರಿಗೂ ಇದ್ದಂತಿಲ್ಲ: ಆವುಗಳು ಮಾಡುತ್ತದೆ, ಭಾಷೆಗಳು ಇರುತ್ತದೆ--ಇದೆಲ್ಲಾ ಯಾವ ವ್ಯಾಕರಣ ಪದ್ಧತಿ ಸ್ವಾಮೀ ? ಓದುಕಲಿತ ವರದಿಗಾರರಿಗಿಂತಾ  " ನೀರ್ಗೊಳೆಲ್ಲಾ ಓಯ್ತಾ ಅವೆ" ಎಂಬೋ ಹಳ್ಳಿ ಹೈದನೇ ವಾಸಿ ಎನಿಸುತ್ತದೆ! ವರದಿಗಾರರಿಗೆ ಭಾಷೆಗೆ ಅನ್ಯಾಯ/ಅಪಚಾರ ಎಸಗಬಾರದೆಂಬ ನೈತಿಕ ಜವಾಬ್ದಾರಿ ಬೇಡವೇ? ಅಥವಾ ಹೇಗೇ ಬರೆದರೂ ಅದು ನಮ್ಮ ಕನ್ನಡ ಎಂದು ಓದುಗರು ಒಪ್ಪಿಕೊಳ್ಳಬೇಕೇ ? ವರದಿಗಾರರ ಮಾತಿನಲ್ಲೇ ಬರೆಯುವುದಾದರೆ ’ಪತ್ರಿಕೆಗಳಿಂದ ಒಸದಾಗಿ ಜನಿಸಿದ ಪತ್ರಿಗನ್ನಡ ನಮ್ಮ ಕನ್ನಡದ ಎಮ್ಮೆ!’

ನೀವು ಕೇಳಬಹುದು ’೭೮ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ’ ಎಂಬುದು ಸರಿಯೇ? ಸರಿಯಲ್ಲ. ’ಅಖಿಲಭಾರತ ಕನ್ನಡ ಸಾಹಿತ್ಯದ ೭೮ನೇ ಸಮ್ಮೇಳನ’ ಎನ್ನುವುದು ಸರಿ ಎಂದು ನನ್ನ ವಾದ. ಪದಗಳನ್ನು ಜೋಡಿಸಿದಾಗ ಅನರ್ಥವಾಗಬಾರದೆಂಬುದೇ ಇದರ ಉದ್ದೇಶ. ಹಾಗಾದರೆ ಮೇಲಿನ ಶೀರ್ಷಿಕೆಯನ್ನು ಹೇಗೆ ಬರೆಯಬಹುದಿತ್ತು ? ’ಹುಳಿಮಾವು ಗ್ರಾಮದಲ್ಲಿ ಎಲ್ಲರಿಗೂ ಸಮಾರಾಧನೆ’ ಎಂದು ಬರೆಯಬಹುದಿತ್ತು. ಇದು ಕೇವಲ ಸಾಂಕೇತಿಕ, ಊರುಗಳ ಹೆಸರುಗಳಲ್ಲಿ ವೈವಿಧ್ಯತೆ ಅಡಗಿದೆ, ಅವು ಅಲ್ಲಿನ ಪ್ರಾದೇಶಿಕ, ಪ್ರಾಕೃತಿಕ, ದೈವಿಕ, ಸಾಂಪ್ರದಾಯಿಕ ಅಂಶಗಳನ್ನಾಧರಿಸಿ ಯಾರಿಂದಲೋ ಇಡಲ್ಪಟ್ಟವು. ಬಿಳೇಕ ಹಳ್ಳಿ ಎಂದು ಒಂದು ಪ್ರದೇಶದ ಹೆಸರನ್ನು ತಪ್ಪಾಗಿ ನಮೂದಿಸುತ್ತಾರೆ-ಅದು ಬಿಳೇಕಳ್ಳಿ, ಬಿಳಿಯ ಬಣ್ಣದ ಕಳ್ಳಿ ಗಿಡಗಳು ಜಾಸ್ತಿ ಇದ್ದಿದ್ದರಿಂದ ಬಿಳೇಕಳ್ಳಿ ಎಂದೆನಿಸಲ್ಪಟ್ಟಿತ್ತು, ಹಳ್ಳಿಯೂ ಆಗಿತ್ತಾದ್ದರಿಂದ ಅನೇಕ ಜನ ಬಿಳೇಕ ಹಳ್ಳಿ ಎಂದೇ ತಿಳಿದರು. ಈಗ ಆಂಗ್ಲದಲ್ಲಿ ಅದು ಬಿಳೇಕ ಹಳ್ಳಿ ಎಂದೇ ಬರೆಯಲ್ಪಡುತ್ತಿದೆ! ಹಲಸೂರು ಎಂಬುದು ಇದೇರೀತಿ ತಪ್ಪಿನಿಂದ ಅಲ್ಸೂರ್ ಎಂದು ಕರೆಯಲ್ಪಡುತ್ತಿತ್ತು-ಈಗ ಜನ ಎಚ್ಚೆತ್ತುಕೊಂಡು ಹಲಸೂರು ಎಂದೇ ಸಂಬೋಧಿಸುತ್ತಾರೆ.  

ಭಾಷಾ ರಕ್ಷಣೆಗೆ ನಿಂತಿರುವ ಸಂಘಟನೆಗಳೇ ಭಾಷೆಯ ಪೂರ್ಣ ಮಾಹಿತಿಯನ್ನೂ ವ್ಯಾಪ್ತಿಯನ್ನೂ ಸರಿಯಾಗಿ ಅರಿತುಕೊಳ್ಳಬೇಕಾಗಿದೆ. ಎಷ್ಟೋ ಸಂಘಟನೆಗಳಲ್ಲಿ, ಅವರು ಬರೆಸುವ ನಾಮಫಲಕಗಳಲ್ಲೇ ವೈರುಧ್ಯವಿರುತ್ತದೆ; ಕನ್ನಡವೇ ಇದು ಎಂಬಷ್ಟು ಆಭಾಸವಾಗುತ್ತದೆ. ಪ್ರಾಯಶಃ  ಹಿಂದೀ ಭಾಷೆಯ ಪ್ರಭಾವದಿಂದ ಬೆಂಗಳೂರು-ಮೈಸೂರು ಭಾಗಗಳಲ್ಲಿ ’ಜ್ಞ’ ಕಾರದ ಉಚ್ಚಾರ ಸರಿಯಾಗಿ ಆಗುತ್ತಿಲ್ಲ. ’ಜ್ಞ’ ಇರುವಲ್ಲೆಲ್ಲಾ ’ಘ್ನ’ ಅಥವಾ ’ಗ್ಯ’ ಎಂದು ಬಳಸುತ್ತಾರೆ. ಉದಾಹರಣೆಗೆ- "ಮೈಮೇಲೆ ಗ್ಯಾನವೇ ಇರಲಿಲ್ಲ", "ಗ್ಯಾನ ಭಾರತಿ" ಹೀಗೆಲ್ಲಾ. ಇನ್ನು ಸಭೆ-ಸಮಾರಂಭಗಳಲ್ಲಿ "ನಾವು ತುಂಬಾ ತುಂಬಾ ಕೃತಘ್ನರಾಗಿದ್ದೇವೆ" ಎನ್ನುತ್ತಾರೆ-ನಗಬೇಕೋ ಅಳಬೇಕೋ ತಿಳಿಯುವುದಿಲ್ಲ. ಕನ್ನಡದಲ್ಲಿ ಕೃತಜ್ಞ=ಉಪಕಾರ ಸ್ಮರಿಸುವ ಎಂದೂ ಕೃತಘ್ನ=ಉಪಕಾರ ಸ್ಮರಣೆ ರಹಿತ ಎಂದೂ ಅವು ವಿರುದ್ಧಾರ್ಥಕ ಪದಗಳಾಗಿವೆ. ಇದನ್ನೆಲ್ಲಾ ತಿಳಿಸಿ ಹೇಳಿದರೆ ಎಗರಾಡುತ್ತಾರೆ, ಕೋಪ ಕೈಗೇ ಬರುವ ಸನ್ನಿವೇಶವಿರುತ್ತದೆ. ಹೀಗಿದೆ ಸಂಗ್ತಿ ಎಂದು ಹೇಳುವ ಹಾಗೇ ಇಲ್ಲ. ಹಾಗಾದರೆ ಹೇಳಿಕೊಡುವವರಾರು? ಗೊತ್ತಿಲ್ಲ. 

ಯಾವುದೇ ಸಮಾರಂಭ ಮತ್ತು ಸಮಾರೋಪಗಳ ಮಾಹಿತಿ ದೊರೆತಾಗ ನನಗೆ ಬಹಳ ಖೇದವಾಗುತ್ತದೆ ಯಾಕೆಂದರೆ ಆಮಂತ್ರಣದಲ್ಲಿ ’ಸಮರೋಪ ಸಮಾರಂಭ’ ಎಂದು ನಮೂದಿಸುತ್ತಾರೆ. ಇವೂ ಕೂಡ ಪರಸ್ಪರ ವಿರುದ್ಧಾರ್ಥಕ ಶಬ್ದಗಳಾಗಿವೆ. ’ಸಮಾರೋಪ ಸಮಾರಂಭ’ ಎನ್ನುವ ಬದಲು ’ಸಮಾರೋಪ ಸಭೆ’ ಎನ್ನುವುದು ಸರಿಯಾದ ಕ್ರಮವಾಗಿದೆ; ಸಮಾರಂಭವಾಗಿದ್ದು ಸಮಾರೋಪಗೊಳ್ಳುತ್ತದೆ. ಸಮಾರಂಭ ಎಂಬ ಪದವನ್ನೇ ಆಂಗ್ಲದ ’ಫಂಕ್ಷನ್’ ಎನ್ನುವ ಪದದ ಜಾಗದಲ್ಲಿ ಬಳಸುವುದು ವಿಹಿತವಲ್ಲ. ಸಮಾರಂಭ ಎನ್ನುವ ಪದಕ್ಕೆ ಉತ್ಸವ, ಹಬ್ಬ, ಒಸಗೆ ಹೀಗೇ ಹಲವು ಅರ್ಥಗಳಿದ್ದರೂ, ಆರಂಭಗೊಂಡಿದ್ದ ಉತ್ಸವ ಅಂತ್ಯಕಾಣುವಾಗ ಅಲ್ಲಿ ಸಮಾರಂಭ ಎಂದು ಮತ್ತೆ ಹೇಳಿದರೆ ಆಭಾಸವಾಗುತ್ತದೆ.

ಎಷ್ಟೋ ಮಂದಿ ಕನ್ನಡದ ಪದಗಳಲ್ಲಿ ಸಂಸ್ಕೃತ ಪದಗಳ ಛಾಯೆಯನ್ನು ಕಂಡು ತಿದ್ದುಪಡಿ ಮಾಡಲು ಮುಂದಾಗುತ್ತಾರೆ. ಉದಾಹರಣೆಗೆ : ಹೃತ್ಪೂರ್ವಕ = ಹೃದಯ ಪೂರ್ವಕ. ಈ ’ಪೂರ್ವಕ’ ಎನ್ನುವುದರಲ್ಲೂ ಸಂಸ್ಕೃತದ ಛಾಯೆ ಉಳಿದುಕೊಂಡುಬಿಟ್ಟಿತಲ್ಲಾ? ಅದಕ್ಕೇನು ಮಾಡ್ತೀರಿ? ಸಂಸ್ಕೃತ ಭಾಷೆ ಕನ್ನಡಕ್ಕೆ ತನ್ನಿಂದ ಬಹಳ ಪದಗಳನ್ನು ಕೊಟ್ಟಿದೆ. [ಕನ್ನಡದ] ಅಮ್ಮನ [ಸ್ಥಾನದಲ್ಲಿರುವ ಸಂಸ್ಕೃತದ] ಛಾಯೆ ಮಗಳಲ್ಲಿ ಕಾಣದಿರಲು ಸಾಧ್ಯವೇ? ಸಂಸ್ಕೃತವನ್ನು ಒದ್ದೋಡಿಸಬೇಕು ಎಂಬ ಹುಳುಕು ಹುನ್ನಾರದ ಕೆಲವರು ಮೃತಭಾಷೆ, ಸತ್ತಭಾಷೆ ಎಂದೆಲ್ಲಾ ಸಂಸ್ಕೃತವನ್ನು ಜರಿಯುತ್ತಾರೆ. ಸಂಸ್ಕೃತವನ್ನು ಕಲಿತು,ಅರಿತು  ಒಮ್ಮೆ ಅಲ್ಲಿನ ಮಹಾಕಾವ್ಯಗಳನ್ನು ಓದಿಕೊಂಡರೆ, ಆ ಭಾಷೆಯ ಘನತೆ-ಗಾಂಭೀರ್ಯತೆಯನ್ನು ತಿಳಿದುಕೊಂಡರೆ ನಮ್ಮ ಅಸಲು ಬಂಡವಲ ಗೊತ್ತಾಗುತ್ತದೆ. ವಿನಾಕಾರಣ ಇನ್ನೊಂದು ಸಮೃದ್ಧ ಭಾಷೆಯನ್ನು ಸತ್ತಭಾಷೆ ಎನ್ನುವುದಕ್ಕಿಂತಾ ಅದು ನಮ್ಮ ಸಾಮರ್ಥ್ಯಕ್ಕೆ ಒಗ್ಗದ ಭಾಷೆ ಎಂದು ಒಪ್ಪಿಕೊಳ್ಳುವುದು ಸರ್ವ ಸಮ್ಮತವೆನಿಸುತ್ತದೆ. ಕನ್ನಡದಲ್ಲಿನ ಸಂಸ್ಕೃತ ಪದಗಳಿಗೆ ಪರ್ಯಾಯ ಪದಗಳು ಇರದಿದ್ದ ಪಕ್ಷದಲ್ಲಿ ಅವುಗಳನ್ನು ತಿದ್ದುವ ’ಹೃದಯವಂತಿಕೆ’ ಅನಗತ್ಯವೆನಿಸುತ್ತದೆ; ಅವುಗಳನ್ನೇ ಯಥಾಸ್ಥಿತಿಯಲ್ಲಿ ಇರಿಸಿಕೊಂಡರೆ ಭಾಷೆಯ ಸೊಗಸುಗಾರಿಕೆಯಲ್ಲಿ ಕುಸಿತ ಕಾಣಿಸಲಾರದು. ಇಲ್ಲಿಗೆ ’ಹುಳಿಮಾವಿನಲ್ಲಿ ನಡೆಸಿದ ಸಮಾರಾಧನೆ ’ ಮುಗಿಯುತ್ತದೆ; ಕೇಳಿಸಿಕೊಂಡ ನಿಮಗೆ ಕೃತಘ್ನ ಅಲ್ಲಲ್ಲ ಕೃತಜ್ಞನಾಗಿದ್ದೇನೆ !