ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Wednesday, May 9, 2012

ಹೋಗಿ ಬರುವೆವಮ್ಮ ನಾವು ದಿಬ್ಬಣಿsಗರು ಸಾಗುವೆsವು ನಮ್ಮ ಕಡೆಗೆ ಬನ್ನಿರೆಲ್ಲರು


ಹೋಗಿ ಬರುವೆವಮ್ಮ ನಾವು ದಿಬ್ಬಣಿsಗರು
ಸಾಗುವೆsವು ನಮ್ಮ ಕಡೆಗೆ ಬನ್ನಿರೆಲ್ಲರು

ಇಂಪಾದ ಹಾಡು ಗಮನ ಸೆಳೆದಿದ್ದು ೩೦ ವರ್ಷಗಳ ಹಿಂದೆ! ಆಗ ನಾನಿನ್ನೂ ಬಾಲಕ. ನಮ್ಮ ಹಳ್ಳಿಗಳಲ್ಲಿ, ನಮ್ಮೂರ ನೆರೆಕೆರೆಯ ಊರುಗಳಲ್ಲಿ, ನಮ್ಮನೆಯ ಬಳಕೆ ಇರುವವರು, ಆಪ್ತರು ತಮ್ಮಲ್ಲಿ ಜರುಗುವ ಮದುವೆ-ಮುಂಜಿ ಕಾರ್ಯಕ್ರಮಗಳಿಗೆ ನಮ್ಮನ್ನೆಲ್ಲಾ ಕರೆದುಹೋಗಿರುತ್ತಿದ್ದರು. ನಮ್ಮಲ್ಲಿ ಮದುವೆ ಮುಂಜಿಗಳು ನಡೆಯುತಿದ್ದುದು ಸಾಮಾನ್ಯವಾಗಿ ಕಾರ್ತಿಕಮಾಸದಿಂದ-ವೈಶಾಖ ಮಾಸದ ವರೆಗೆ ಮಾತ್ರ. ಮನೆಯಮುಂದೆ ಅಂಗಳಗಳಲ್ಲಿ ನಿರ್ಮಿಸುವ ಸಾಕಷ್ಟು ವಿಶಾಲವಾದ ಚಪ್ಪರಗಳಲ್ಲೇ ಕಾರ್ಯಗಳು ನಡೆಯಬೇಕಾಗಿದ್ದುದರಿಂದಲೂ, ಸಾಮಾನ್ಯವಾಗಿ ಈ ಋತುಗಳು ಮಧುಮಾಸಗಳಾಗಿ ವಿಧವಿಧದ ಫಲಪುಷ್ಪಗಳು ದೊರೆಯುವುದರಿಂದಲೂ, ಮತ್ತು ಕೃಷಿಕರಿಗೆ ಸುಗ್ಗಿಯ ಹಿಗ್ಗು ಮನೆಮನಗಳನ್ನು ತುಂಬಿಸಿ ಇಂತಹ ಕೆಲಸಗಳಿಗೆ ಖರ್ಚುಮಾಡಲು ಕೈಲಿ ಅಲ್ಪಸ್ವಲ್ಪ ಹಣಸೇರಿರಬಹುದಾದ ಸಮಯವಿದಾದ್ದರಿಂದಲೂ, ಮಂಗಲಕಾರ್ಯಗಳಿಗೆ ಈ ಕಾಲಾವಧಿ ಸೀಮಿತವಾಗಿತ್ತು; ಅಪ್ಪಿ-ತಪ್ಪಿ ಅಪವಾದಕ್ಕೆ ಅಲ್ಲೆಲ್ಲೋ ಇಲ್ಲೆಲ್ಲೋ ಒಂದೊಂದು ಕಾರ್ಯ ಮಳೆಗಾಲದ ಆರಂಭಿಕ ಘಳಿಗೆಗಳಲ್ಲೂ ನಡೆಯುತ್ತಿತ್ತು. "ಮಳೆಗಾಲ ಆರಂಭವಾಯ್ತು ಪೆಟ್ಗೆ ಅಟ್ಟಕ್ಕೆ ಹಾಕಿದ್ದೇವೆ" ಎನ್ನುತ್ತಿದ್ದರು ನಮ್ಮಲ್ಲಿನ ಜನ!

ಈ ಪೆಟ್ಟಿಗೆ[ಪೆಟ್ಗೆ]ಅನ್ನುವ ಪದ ಯಕ್ಷಗಾನದ ವೇಷಭೂಷಣಗಳನ್ನು ತುಂಬಿಸಿ ಇಡುವಲ್ಲಿಂದ ಸಹಜವಾಗಿ ಬಳಕೆಗೆ ಬಂದಿತ್ತು. ರಂಗಮಂದಿರಗಳಿಲ್ಲದ ಆ ಕಾಲದಲ್ಲಿ ನಮ್ಮ ಹಳ್ಳಿಗಳಲ್ಲಿ ಯಕ್ಷಗಾನ ಪ್ರದರ್ಶನಗಳು ನಡೆಯುತ್ತಿದ್ದುದೂ ಮದುವೆಯ ಹಂಗಾಮಿನಂತೇ ನವೆಂಬರ್ ನಿಂದ ಮೇ ವರೆಗೆ ಮಾತ್ರ. ಮಳೆ ಬರುವ ಕಾಲದಲ್ಲಿ ವೇಷಭೂಷಣಗಳನ್ನು ತುಂಬಿದ ಪೆಟ್ಗೆಯನ್ನು ಕಲಾವಿದರು ಮನೆಯ ಅಟ್ಟದಮೇಲೆ ಇಡುತ್ತಿದ್ದರು. ಅವರ ಬಾಯಿಂದ ಬಂದ ಅ ವಾಕ್ಯ ಮದುವೆ ಕಾರ್ಯ ಮಾಡುವವರಿಗೂ ಹಬ್ಬಿ, ಜಾತಕ ಮೇಳಾಮೇಳಿ ಕೂಡಿಬರದೇ ಮದುವೆ ನಿಚ್ಚಳವಾಗಿ ನಡೆಯುವ ದಿನ ಗೋಚರವಾಗದ ಪಕ್ಷದಲ್ಲಿ, ಮಳೆದಿನಗಳು ಹತ್ತಿರ ಬಂದರೆ "ಪೆಟ್ಗೆ ಅಟ್ಟಕ್ಕೆ ಹಾಕಾಯ್ತು" ಎಂದು ಎದುರು ಆದವಿಚ ಕೇಳುತ್ತಾ ಕೂತವರಲ್ಲಿ ಹೇಳುವುದಿತ್ತು.

ನಮ್ಮ ಹಳ್ಳಿಗಳ ಮದುವೆ-ಮುಂಜಿಗಳಲ್ಲಿ ತೀರಾ ಆಡಂಬರಕ್ಕಿಂತಲೂ ಅಲ್ಲೊಂಥರಾ ಆತ್ಮೀಯ ವಾತಾವರಣವಿರುತ್ತಿತ್ತು. ಕೆಲಸದವರು ತಿಂಗಳಕ್ಕೂ ಮುನ್ನವೇ ಚಪ್ಪರ ಕಟ್ಟುತ್ತಿದ್ದರು, ಕಾರ್ಯಗಳಿಗೂ ಮುನ್ನಾದಿನ ಮತ್ತೆ ಬಂದು ತಳಿರುತೋರಣ ಕಟ್ಟಿಕೊಡುತ್ತಿದ್ದರು. ಊರಮಂದಿಯೇ ಸೇರಿ ಅಡುಗೆ ಮಾಡುತ್ತಿದ್ದರು. ಹರೆಯದ ಹುಡುಗ-ಹುಡುಗಿಯರು ಸಡಗರದಿಂದ ಬಡಿಸುವ ಕೆಲಸಮಾಡುತ್ತಿದ್ದರು. ಕಾರ್ಯಗಳ ಮನೆಗೆ ಸಂಬಂಧದಲ್ಲಿ ಹತ್ತಿರದವರಾದವರು ತಮ್ಮ ಮನೆಗಳಲ್ಲಿರಬಹುದಾದ ಹಾಲು-ಮೊಸರುಗಳನ್ನು ತಂದು ತಮ್ಮ ಆಪ್ತತೆಯನ್ನು ಮೆರೆಯುತ್ತಿದ್ದರು! ಆಯಕಟ್ಟಿನ ಸ್ಥಳಗಳಲ್ಲಿ ಅವರುಗಳೇ ನಿಗಾವಹಿಸಿ ಕಾರ್ಯಕ್ಕೆ ಬಂದವರಿಗೆ ಎಲ್ಲಾರೀತಿಯಲ್ಲೂ ಸಮಾಧಾನಕರವಾದ ಸತ್ಕಾರ ಸಿಗುವಂತೇ ನೋಡಿಕೊಂಡು ಕಾರ್ಯನಿರತ ಯಜಮಾನನ ಮಾರ್ಯಾದೆಗೆ ಧಕ್ಕೆಯಾಗದ ರೀತಿ ನೋಡಿಕೊಳ್ಳುತ್ತಿದ್ದರು. ಕಾರ್ಯಗಳಿಗೆ ಆಹ್ವಾನಿಸುವಾಗಲೂ, ಕಾರ್ಯಗಳನ್ನು ಇಟ್ಟುಕೊಂಡವರು ಸಂಬಂಧದಲ್ಲಿ ಹತ್ತಿರವಾಗಿರುವ ಮನೆಗಳಿಗೆ ಹದಿನೈದಿಪ್ಪತ್ತು ದಿನಗಳಿಗೂ ಮೊದಲೇ ಹೋಗಿ "ಹೋಯ್, ಮಗಳ ಮದ್ವೆ ಮಾರಾಯ್ರೆ, ಎಲ್ಲಾ ಬಂದು ನಿಂತು ಸಾಗಿಸಿಕೊಡಬೇಕು" ಎಂದು ಕೈಮುಗಿದು ವಿನಂತಿಸುತ್ತಿದ್ದರು.   

ಕಾರ್ಯಗಳನ್ನು ಸುಸೂತ್ರವಾಗಿ ಸಾಗಿಸಿಕೊಡುವುದೂ ಒಂದು ಗೌರವದ ಕೆಲಸವಾಗಿತ್ತು. ಒಮ್ಮೆ ನನ್ನ ಅನುಭವ ಹೀಗಿದೆ: ಸಂಬಂಧದಲ್ಲಿ ನಮಗೆ ಹತ್ತಿರದವರ ಮನೆಯೊಂದರ ಮದುವೆಯಕಾರ್ಯ, ಎಲ್ಲಾ ಕೆಲಸವೂ ಸಾಂಗವಾಗಿ ನಡೆಯುತ್ತಿತ್ತು ಆದರೆ ಅಡಿಗೆಗೆ ಸಿಪ್ಪೆ ಸುಲಿದ ತೆಂಗಿನಕಾಯಿಗಳೇ ಕಮ್ಮಿಯಾಗುತ್ತಿದ್ದವು. ಕನಿಷ್ಠ ೮೦-೧೦೦ ಕಾಯಿಗಳಾದರೂ ಬೇಕು ಎಂದು ಅಡುಗೆಯ ಉಸ್ತುವಾರಿ ವಹಿಸಿಕೊಂಡ ಮುಖ್ಯಸ್ಥ ಮುನ್ನಾದಿನ ರಾತ್ರಿ ೧೧ ಗಂಟೆಗೆ ಹೇಳಿದ. ಆ ಹೊತ್ತಿನಲ್ಲಿ ಯಾವ ಆಳುಕಾಳು ಯಾರೂ ಇರಲಿಲ್ಲ. ಬೆಳಗಿನ ಜಾವ ೪ ಗಂಟೆಯಿಂದಲೇ ತಿಂಡಿ-ತೀರ್ಥದ ತಯಾರಿ ನಡೆಯಬೇಕಿತ್ತು. ನಾನು ನನ್ನ ತಮ್ಮ ಇನ್ನೂ ಚಿಕ್ಕವರು. ಧೈರ್ಯದಿಂದ ಕಾಯಿ ಸುಲಿಯುವ ಸೂಲಿಗೆ [ಸಪಾಟಾಗಿರುವ ಕಬ್ಬಿಣದ ಮೊನಚಾದ ಗೂಟ]ನೆಲದಲ್ಲಿ ಹೂತು ಕಾಯಿ ಸುಲಿದೆವು; ಕೈಗಳಲ್ಲಿ ಗುಳ್ಳೆಗಳು ಎದ್ದರೂ ಕೆಲಸವನ್ನು ಪೂರೈಸಿಯೇ ರಾತ್ರಿ ೧ ಗಂಟೆಗೆ ನಿದ್ದೆಮಾಡಿದೆವು.
  


ಜನಪದರು ಇಂತಹ ಎಲ್ಲಾ ಕೆಲಸಗಳನ್ನೂ ನಡೆಸುವಾಗ ಅವುಗಳ ಶ್ರಮದ ಅರಿವು ಬಾರದಿರಲೆಂದು ಪ್ರತಿಯೊಂದೂ ಕೆಲಸದ ಜೊತೆಗೆ ಹಾಡನ್ನು ಹಾಡುವುದು ಅಭ್ಯಾಸವಾಗಿತ್ತು. ನಿಮಗೆಲ್ಲಾ ತಿಳಿದೇ ಇರುವ ಅಕ್ಕಿ / ರಾಗಿ / ಗೋಧಿ ಬೀಸುವ ಹಾಡು, ಮೊಸರುಕಡೆಯುವಾಗ ಹೇಳುವ ಹಾಡು, ರುಬ್ಬುವಾಗ ಹೇಳುವ ಹಾಡು ಇವೆಲ್ಲಾ ಇದ್ದಹಾಗೇ ಮಂಗಲಕಾರ್ಯಗಳಲ್ಲಂತೂ ಪ್ರತೀ ಹೆಜ್ಜೆಗೂ ಹಾಡುಗಳಿರುತ್ತಿದ್ದವು. ಅಲ್ಲಿ ಬಹುತೇಕ ಬಳಕೆಯಾಗುತ್ತಿದ್ದುದು ಅರ್ಧ ಛಂದಸ್ಸಿನ ಪ್ರಾಸಬದ್ಧ ಲಯಬದ್ಧ ಹಾಡುಗಳು. ಅಜ್ಞಾತ ಕವಿಗಳು ಹೊಸೆದ ಅಂತಹ ಹಾಡುಗಳು ಬಾಯಿಂದ ಬಾಯಿಗೆ ಹಬ್ಬುತ್ತಾ ಅದೆಷ್ಟು ತಲೆಮಾರುಗಳನ್ನು ಕ್ರಮಿಸುತ್ತಿದ್ದವೋ ತಿಳಿಯದು. ಅಜ್ಜಿ ಮಗಳಿಗೂ ಸೊಸೆಗೂ ಮೊಮ್ಮಕ್ಕಳಿಗೂ ಹೇಳಿಕೊಡುತ್ತಿದ್ದ ಹಾಡುಗಳು ಅದೇಕ್ರಮದಲ್ಲಿ ಮತ್ತೆ ತಲೆಮಾರಿನಿಂದ ಮುಂದಿನ ತಲೆಮಾರಿಗೆ ವರ್ಗಾವಣೆಯಾಗುತ್ತಾ ಬರುತ್ತಿದ್ದವು. ಹಲವು ಹಾಡುಗಳಲ್ಲಿ ಶ್ರೀರಾಮನ ಅಥವಾ ಶ್ರೀಕೃಷ್ಣನ ಕೇಂದ್ರೀಕೃತ ವರ್ಣನೆಗಳು ಕಾಣಸಿಗುತ್ತಿದ್ದವು. ಉದಾಹರಣೆಗೆ ನಮ್ಮಲ್ಲಿ ದಂಪತಿಗೆ ಆರತಿ ಬೆಳಗುವಾಗ,

ನಲಿದಾರತಿಗೈವಾ ಸಖಿಯೇ
ಎಲೆ ಶೋಭಿಪ ಚಲುವಾ ರಾಮ-ಜಾನಕಿಗೇ
ಎಲೆ ಶೋಭಿಪ ಚಲುವಾ ದಂಪತಿಗಳೆಗೇ 


ಹೀಗಿದ್ದರೆ, ಕನ್ಯಾದಾನ ನಡೆಸುವಾಗ,


ಧಾರೆ ಎರೆದ ರಾಯ ನಾರೀ ಜಾನಕಿಯ
ಶ್ರೀರಾಮಚಂದ್ರಗೆ ಧssರಣಿ ಸುತೆಯಾ

ಸಾಮಾನ್ಯವಾಗಿ ನವದಂಪತಿಯಲ್ಲಿ ರಾಮ-ಸೀತೆಯರನ್ನೋ ಲಕ್ಷ್ಮೀ-ನಾರಾಯಣರನ್ನೋ ಕಾಣುವುದು ರೂಢಿಗತ. ಮದುವೆಗಳಲ್ಲಿ ನಾಂದಿಯಿಂದ ಹಿಡಿದು ಸಟ್ಮುಡಿ[ಅಡುಗೆಯ ಸಟ್ಟುಗ ಹಿಡಿ]ಯ ವರೆಗೂ ನವದಂಪತಿಯನ್ನು ದೈವಸಮಾನವಾಗಿ ಕಂಡು ಅವರಿಗೆ ಗೌರವ ಸಲ್ಲಿಸುವ ವಾಡಿಕೆ ಇತ್ತು. ಆದರ್ಶಗಳನ್ನೇ ಮೈವೆತ್ತ ಶ್ರೀರಾಮನನ್ನೂ ಚಾಣಾಕ್ಷತನವನ್ನೇ ಮೈವೆತ್ತ ಶ್ರೀಕೃಷ್ಣನನ್ನೂ ಜನ  ಹಾಡುಗಳ ಮೂಲಕ ಇಲ್ಲೂ ನೆನೆಸಿಕೊಳ್ಳುತ್ತಿದ್ದರು.

ಮಂಗಲಕಾರ್ಯಗಳು ಎದ್ದರೆ [ನಡೆಸಲು ಸಿದ್ಧತೆ ನಡೆದರೆ] ಸುಮಾರು ೫-೬ ದಿವಸಗಳ ತನಕ ಕಾರ್ಯದ ಮನೆಯಲ್ಲಿ ಸಡಗರ-ಸಂಭ್ರಮ. ಒಂದಷ್ಟು ನೆಂಟರಿಷ್ಟರು ಸತತವಾಗಿ ಬಂದು-ಹೋಗಿ ಮಾಡುವ ಕಾಲ. ನಿತ್ಯವೂ ಹಲವು ವಿಧದ ಆಚರಣೆಗಳು. ಆಚರಣೆಗಳ ಹಿಂದಿನ ವೈಜ್ಞಾನಿಕ, ಮನೋವೈಜ್ಞಾನಿಕ, ಧಾರ್ಮಿಕ, ಪಾರಂಪರಿಕ, ಸಾಂಸ್ಕೃತಿಕ, ಸಾಂಪ್ರದಾಯಿಕ ಕಾರಣಗಳನ್ನು ತಿಳಿದುಕೊಂಡಾಗ ನಮಗೆ ಅಚ್ಚರಿಯಾಗುತ್ತದೆ. ಆ ಕಾಲದಲ್ಲಿ ಆಗಿನ್ನೂ ವಾಹನಗಳ ಭರಾಟೆ ಅಷ್ಟಾಗಿ ಇರಲಿಲ್ಲ. ಹೆಣ್ಣು-ಗಂಡುಗಳ ಸಂಬಂಧ ತೀರಾ ದೂರದ ಊರುಗಳ ನಡುವೆ ಇರುತ್ತಿರಲಿಲ್ಲ. ಸುಮಾರಾಗಿ ೪-೫ ಅಥವಾ ೧೦-೧೨ ಮೈಲುಗಳ ಅಂತರದ ಊರುಗಳ ನಡುವೆ ಬಾಂಧವ್ಯ! ಊರುಗಳ ನಡುವೆ ಬಾಂಧವ್ಯ ಎಂದು ಏಕೆ ಹೇಳುತ್ತಿದ್ದೇನೆಂದರೆ ಕಾರ್ಯ ನಡೆಯುವಾಗ ಇಡೀ ಊರಜನ [ಪ್ರತೀ ಮನೆಯಲ್ಲೂ ಇರುವ ಬಹುತೇಕ ಜನ]ಪಾಲ್ಗೊಳ್ಳುತ್ತಿದ್ದರು. ಊರಿಗೆ ಬರುವ ಪರವೂರ ಜನರನ್ನು ಗೌರವಿಸುವ ಪದ್ಧತಿ ಇತ್ತು. "ನಮ್ಮೂರ ಬೀಗರು" ಎಂತಲೇ ಕರೆಯುವ ಅಭ್ಯಾಸವೂ ಇತ್ತು! ಈಗಲೂ ಕೆಲವುಕಡೆ ’ಗ್ರಾಮಸ್ಥರು’ ಎಂದು ಮಂಗಲಪತ್ರಗಳಲ್ಲಿ ಅಚ್ಚುಮಾಡುವುದಿದೆ. ಗಂಡು-ಹೆಣ್ಣಿನ ಕೊಡುಕೊಳ್ಳುವಿಕೆಯಿಂದ ಗ್ರಾಮ-ಗ್ರಾಮಗಳ ನಡುವೆಯೇ ಒಂಥರಾ ಸ್ನೇಹ-ಸೌಹಾರ್ದ ಏರ್ಪಡುತ್ತಿತ್ತು.   



ನಾನು ಚಿಕ್ಕವನಿರುವ ಕಾಲಕ್ಕೆ ಮದುಮಗ[ಮದುವಣಿಗ]ನನ್ನು ಮೇನೆ[ತಮ್ಜಾಲು]ಯಲ್ಲಿ ಹೊತ್ತು ತರುವ ಸಂಪ್ರದಾಯವಿತ್ತು! ಅಂತಹ ಒಂದೆರಡು ಮದುವೆಗಳನ್ನು ನಾನು ನೋಡಿರುವೆನಷ್ಟೇ. ಆರ್ಥಿಕವಾಗಿ ಅನುಕೂಲವುಳ್ಳ ಸಿರಿವಂತರೆನಿಸಿದ ಜನ ಹಾಗೆ ಮೇನೆ ಬಳಸುತ್ತಿದ್ದರು. ಬಡವರ ದಿಬ್ಬಣದಲ್ಲಿ ಮದುವಣಿಗ ವಿನೋಬಾ ಸರ್ವಿಸ್ [ಕಾಲ್ನಡಿಗೆಗೆ ವಿನೋಬಾಭಾವೆ ಮಹತ್ವ ನೀಡಿದ್ದರಿಂದ ನಮ್ಮಲ್ಲಿ ಈ ಶಬ್ದ ಚಾಲ್ತಿಯಲ್ಲಿತ್ತು]ನಲ್ಲೇ ಸಾಗುತ್ತಿದ್ದ! ಮೇನೆಯಲ್ಲಿ ಕುಳಿತ ಮದುವಣಿಗನಿಗೆ ಹಿಂದೆ ಮುಂದೆ ಕೆಲವು ಹಾರ ತುರಾಯಿಗಳ ರಾಜೋಪಚಾರವಿರುತ್ತಿತ್ತು. ದಿಬ್ಬಣ ಹೆಣ್ಣಿನ ಮನೆ ಸೇರುವ ಘಳಿಗೆಯಲ್ಲಿ ಬಾಣಬಿರುಸಿನ ಪ್ರಯೋಗ ನಡೆಯುತ್ತಿತ್ತು. ಅಂತಹ ಒಂದು, ರಾತ್ರಿ-ಮದುವೆಯನ್ನು ನಾನು ನೋಡಿದ್ದು ನೆನಪಿದೆ. ಬಹಳ ಚಿಕ್ಕವನಾಗಿದ್ದರೂ ಅತ್ಯಂತ ಅಚ್ಚರಿ ಹುಟ್ಟಿಸಿದ ಕಾರ್ಯಕ್ರಮವನ್ನು ದಿಟ್ಟಿಸಿ ನೋಡುತ್ತಿದ್ದೆ. ವಿವಾಹ ನಡೆದಿದ್ದು ರಾತ್ರಿ ೮-೪೫ ರಲ್ಲಿ. ಗಂಡಿನ ದಿಬ್ಬಣ ಬಂದಿದ್ದು ರಾತ್ರಿ ಸುಮಾರು ೭ ಘಂಟೆಗೆ. ಮೇನೆಯಲ್ಲಿ ಕುಳಿತ ಮದುವಣಿಗ ಮಹಾರಾಜನನ್ನು ದೂರದಿಂದ ಕಣ್ತುಂಬಾ ನೋಡಿದ್ದೆ. ಮೇನೆಯ ಸುತ್ತ ಹಲವು ದೀವಟಿಗೆಗಳನ್ನು ಹಿಡಿದಿದ್ದರು. ಅದೆಷ್ಟೋ ಜನ ವಿವಿಧ ಹೊಸಹೊಸ ದಿರಿಸುಗಳಲ್ಲಿ ರಾಜನ ಅಸ್ಥಾನದಿಂದ ಬಂದವರಂತೇ ಕಾಣುತ್ತಿದ್ದರು! ಸಿಡಿಮದ್ದುಗಳ ಸದ್ದು ತಾರಕ್ಕಕ್ಕೇರಿತ್ತು. ಮಂಗಳವಾದ್ಯಗಳೂ ಪುರೋಹಿತರ ಮಂತ್ರಗಳೂ ಕೇಳಿಸುತ್ತಿರುವಂತೇ ಮೇನೆಯಿಂದಿಳಿದ ಮದುಮಗನಿಗೆ ಓಕುಳಿ ತೋರಿಸಿ, ತೆಂಗಿನಕಾಯಿ ಸುಳಿದೊಡೆದು, ಪಾದ ತೊಳೆದು, ಹೂ-ಹಾರ ಹಾಕಿ, ಅರಿಶಿನ-ಕುಂಕುಮ ಹಚ್ಚಿದ ನಂತರ ಭಾವೀ ಮಾವ ಆತನ ಬಲಗೈ ಹಿಡಿದು ಸಭಾಂಗಣದಲ್ಲಿರುವ ಮಂಟಪಕ್ಕೆ ಕರೆದೊಯ್ಯುವಾಗ ಅನೇಕರು ನಿಂತು ಅರಳು ಎರಚಿದರು.
 


ಕಾರ್ಯಗಳಿಗೆ ೫ ದಿನಗಳ ಸಮಯ ಹಿಡಿಯುತ್ತಿತ್ತು. ಈ ದಿನಗಳಲ್ಲಿ ವೇದ, ವಾದ್ಯ, ಖಾದ್ಯ, ಸಂಗೀತ, ನಾಟ್ಯ, ಯಕ್ಷಗಾನ ತಾಳಮದ್ದಲೆ, ಧಾರ್ಮಿಕ ಹೋಮ-ನೇಮ ಇವೆಲ್ಲಾ ಇರುತ್ತಿದ್ದು ಪೀಳಿಗೆಯಿಂದ ಪೀಳಿಗೆಗೆ ಜೀವನದ ಜವಾಬ್ದಾರಿಗಳನ್ನು ನೀತಿಯುಕ್ತವಾಗಿ ವಹಿಸಿಕೊಡುವ, ಅರುಹುವ ಕಾರ್ಯ ಇದಾಗಿರುತ್ತಿತ್ತು. ಕಾರ್ಯಗಳನ್ನು ನಡೆಸಿದವರು ಜೀವನದ ಜಂಜಡಗಳನ್ನು ಮರೆತು ವಾರಗಳ ಕಾಲ ಸಂತಸಪಡುವ ಸಮಯ ಇದಾಗಿರುತ್ತಿತ್ತು. ಮದುವೆಗಳಲ್ಲಂತೂ ಹೆಣ್ಣಿನಕಡೆಯ ಆತಿಥ್ಯ ಪಡೆದು ತೆರಳುವ ಗಂಡಿನ ಊರಿಗೆ ಹೆಣ್ಣಿನ ಊರ ಬಳಗ ಹೋಗಲು ಕಾತರಿಸುತ್ತಿತ್ತು. ೫ನೇ ದಿನ ನವದಂಪತಿಯನ್ನೊಳಗೊಂಡು ಗಂಡಿನ ಊರಿಗೆ ಪಯಣ ಬೆಳೆಸುವ ದಿಬ್ಬಣ ಅಲ್ಲಿ ಮಿತ್ರಭೋಜನವನ್ನು ಸವಿಯುತ್ತಿತ್ತು. ಅಂತಹ ಮದುವೆಯ ಸಮಾರಂಭವೊಂದರಲ್ಲಿ, ಹೆಣ್ಣಿನ ಮನೆಯಂಗಳದಲ್ಲಿ, ಆತಿಥ್ಯ ಪಡೆದು ಹೊರಟುನಿಂತ ಗಂಡಿನ ಕಡೆಯ ಯಾರೋ ಒಬ್ಬ ಮಹಿಳೆ ಹಾಡೊಂದನ್ನು ಹಾಡಿದ್ದರು,

ಹೋಗಿ ಬರುವೆವಮ್ಮ ನಾವು ದಿಬ್ಬಣಿsಗರು
ಸಾಗುವೆsವು ನಮ್ಮ ಕಡೆಗೆ ಬನ್ನಿರೆಲ್ಲರು   


ಹಾಡಿನಲ್ಲೇ ಆಮಂತ್ರಣವನ್ನು ಇನ್ನೊಮ್ಮೆ ನೀಡಿದ್ದರು ಎಂಬುದು ಸ್ಪಷ್ಟ. ಅಂದಿನ ದಿನಗಳಲ್ಲಿ ಗೌರವ ಎಷ್ಟಿತ್ತಪ್ಪಾ ಎಂದರೆ ಮದುವೆಯ ದಿನ ಊಟದ ನಂತರ ಗಂಡಿನ ಕಡೆಯವರು ಹೆಣ್ಣಿನ ತವರುಮನೆಯ ಅಕ್ಕ-ಪಕ್ಕದ ಮನೆಗಳಿಗೆ ತೆರಳಿ ಅಕ್ಷತೆಯಿಟ್ಟು "ನಮ್ಮಲ್ಲಿಗೆ ಬನ್ನಿ" ಎಂದು ವಿನಂತಿಸುವುದಿತ್ತು. ಸಭೆಯಲ್ಲೇ ಕುಳಿತ ಹೆಣ್ಣಿನ ತವರೂರ ಹಲವರನ್ನೂ ಸಹಿತ ಹಾಗೇ ಕರೆಯುವುದಿತ್ತು. ’ಕರೆಯ’ ಸಾಲಲಿಲ್ಲ ಎನಿಸಿದರೆ ಯಾರೂ ಹೋಗುತ್ತಿರಲಿಲ್ಲ. ಇಂದಿನ ನಗರ ನಾಗರೀಕತೆಯಲ್ಲಿ ಇರುವಂತೇ ಬಫೆಗಳಿಗೆಲ್ಲಾ ಅವಕಾಶವಿರಲಿಲ್ಲ. ಪರವೂರವರು ಊಟಕ್ಕೆ ಹೋಗಿ ಪಂಕ್ತಿಯಲ್ಲಿ ಜಾಗ ಹಿಡಿದು ನಿಲ್ಲಬೇಕಾದ ಅವಸರವೂ ಇರಲಿಲ್ಲ. ಬಾಳೆಲೆ ಹಾಕಿದಮೇಲೆ ಅವರಿಗೆ "ಊಟಕ್ಕೆ  ಏಳಿ" ಎಂಬ ಅಹ್ವಾನ ಬರುತ್ತಿತ್ತು! ಹಾಗೆ ಕರೆ ಸ್ವೀಕರಿಸಿದ ಮೇಲೆಯೇ ಜನ ಊಟಕ್ಕೆ ತೆರಳುತ್ತಿದ್ದರು. 

ಇನ್ನೇನು ಮುಗಿದುಹೋದ, ಗತವೈಭವದ ಆ ದಿನಗಳನ್ನು ಮತ್ತೆ ನೆನಪಿಸಿಕೊಳ್ಳುವುದೂ ಅಸಾಧ್ಯವೆನಿಸುವಷ್ಟು ನವನಾಗರಿಕತೆಯ ದಾಳಿ ನಡೆದುಬಿಟ್ಟಿದೆ; ಮನೆಗಳ ಮುಂದೆ ದೊಡ್ಡ ಅಂಗಳಗಳಿಲ್ಲ, ಚಪ್ಪರ ಕಟ್ಟಲು ಜನವೂ ಇಲ್ಲ, ತೋರಣ ಬೇಕೆಂದರೆ ಯಜಮಾನನೇ ಕಟ್ಟಿಕೊಳ್ಳಬೇಕು, ಅಡುಗೆಗೆ ಊರಮಂದಿ ಬರುವುದಿಲ್ಲ-ಅಡುಗೆ ಭಟ್ಟರನ್ನು ಕರೆಯಬೇಕು, ಸಂಬಂಧದಲ್ಲಿ ಹತ್ತಿರವಿರುವವರ ಮನೆಗಳಲ್ಲಿ ಹಸು-ಕರುಗಳಾಗಲೀ ಎಮ್ಮೆಗಳಾಗಲೀ ಇಲ್ಲದೇ ಕರಾವಿನ ನೆರವು ಇಲ್ಲ-ಅವರು ಹಾಲು-ಮೊಸರು ತರುವುದಿಲ್ಲ. ನೆಂಟರಿಷ್ಟರ ಈಗಿನ ಪೀಳಿಗೆ ಮಹಾನಗರಗಳಿಗೆ ತೆರಳಿರುವುದರಿಂದ ಮುದುಕ-ಮುದುಕಿ ಮನೆಯಲ್ಲಿ ದೇವರು-ದಿಂಡರು ಎಂದು ಕೈಲಾಗದಿದ್ದರೂ ದೀಪಹಚ್ಚಿಕೊಂಡು ಬದುಕು ಸವೆಸುತ್ತಿದ್ದಾರೆ. ಅವರಿಗೆ ಕಾರ್ಯಗಳಲ್ಲಿ ಪಾಲ್ಗೊಳ್ಳಲು ಬರಲಾಗುವುದಿಲ್ಲ; ಹೊಸ ಪೀಳಿಗೆಗೆ ಬರಲು ಪುರುಸೊತ್ತಿಲ್ಲ! ಪುರೋಹಿತರಿಗೆ ಇನ್ಯಾರದೋ ಮನೆಯಲ್ಲಿ ಹೋಮ ಮಾಡಿಸುವ ಗಡಿಬಿಡಿ, ವಾದ್ಯದವರಿಗೆ ಮತ್ತೆಲ್ಲಿಗೋ ಹೋಗಬೇಕು. ಹೀಗೇ ಹಳ್ಳಿಗಳಲ್ಲಿ ಹಿಂದಿನಂತೇ ಸಂಭ್ರಮೋಪೇತ ಮಂಗಲ ಕಾರ್ಯಗಳು ನಡೆಯುವುದು ಕಮ್ಮಿ. ಅಲ್ಲಿಯೂ ಅಲ್ಲಲ್ಲಿ ದೇವಸ್ಥಾನಗಳ ಎಡಬಲದಲ್ಲಿ ಕಲ್ಯಾಣಮಂಟಪಗಳು ತಲೆ ಎತ್ತಿವೆ. ಬೆಳಿಗ್ಗೆ ಆರಂಭವಾಗುವ ಕಾರ್ಯಕ್ರಮ ಅಬ್ಬಬ್ಬಾ ಎಂದರೆ ಮಧ್ಯಾಹ್ನ ೩-೪ ಘಂಟೆಗಳ ಹೊತ್ತಿಗೆ ಮುಗಿದು ಹೋಗಿರುತ್ತದೆ. ಹಾಡು-ಹಸೆ ಯಾವುದರ ಪರಿವೆಯೂ ಇರುವುದಿಲ್ಲ. ಅದೆಷ್ಟೋ ಅಜ್ಞಾತ ಕಂಠಗಳಿಗೆ ಅವಕಾಶ ನೀಡುತ್ತಿದ್ದ ಇಂಪಾದ ಹಾಡುಗಳು ಮರೆಯಾಗಿ ಹೋಗಿವೆ. ತೀರಾ ಹಳೆಯ ಅಜ್ಜಿಯಂದಿರನ್ನು ಬಿಟ್ಟರೆ ಇಂದು ಅಂತಹ ಹಾಡುಗಳನ್ನು ಹಾಡುವವರೇ ಇಲ್ಲ. ಆ ಹಾಡುಗಳಲ್ಲಿರುವ ಅದ್ಭುತ ಸಾಹಿತ್ಯ, ಸಂಸ್ಕೃತಿಯ ಸೊಗಡು, ತಾತ್ವಿಕ ಹಿನ್ನೆಲೆ, ನ್ಯಾಯ-ನೀತಿ ಬೋಧನೆ ಎಲ್ಲವೂ ನಮ್ಮಿಂದ ದೂರವಾಗಿವೆ. ಈಗಲೂ ಒಮ್ಮೊಮ್ಮೆ ಮದುವೆ ಹಂಗಾಮಿನಲ್ಲಿ ಹೊರಳಿ ನಿಂತಾಗ ಸಭೆಯ ಯಾವುದೋ ಭಾಗದಿಂದ ಕೇಳಿಬಂದ ಇಂಪಾದ ಆ ಹಾಡು ಮನದಲ್ಲಿ ಸುಳಿದು ಹೋಗುತ್ತದೆ; ಮನವನ್ನು ಚಣಕಾಲ ಹಿಂದಕ್ಕೆ ಕರೆದು ತನ್ನತನವನ್ನು ಮನದ ಮೂಸೆಯಲ್ಲಿ ಉಳಿಸಿಹೋಗುತ್ತದೆ. ಸದ್ಯಕ್ಕೆ ನಾವೂ ಹೋಗಿಬರುತ್ತೇವೆ ಸ್ವಾಮೀ, ನೀವೆಲ್ಲಾ ಬನ್ನಿ !


ಹೋಗಿ ಬರುವೆವಮ್ಮ ನಾವು ದಿಬ್ಬಣಿsಗರು
ಸಾಗುವೆsವು ನಮ್ಮ ಕಡೆಗೆ ಬನ್ನಿರೆಲ್ಲರು    


1 comment:

  1. ಚೆನ್ನಾಗಿದೆ ಸರ್.
    ತಾಳಗುಪ್ಪೆಯ ಒಂದು ಮಾಡುವೆ ನೆನಪಾಯಿತು
    ಸ್ವರ್ಣಾ

    ReplyDelete