ಚಿತ್ರಋಣ: ಅಂತರ್ಜಾಲ
ಇರುವುದು ಒಂದೇ ದೀಪವು ....
೭೮ ವಸಂತಗಳಲ್ಲಿ ೬೧ ವಸಂತಗಳನ್ನು ಯಕ್ಷಗಾನಕ್ಕಾಗಿಯೇ ಮೀಸಲಿಟ್ಟು, ಬದುಕಿನ ಬವಣೆಗಳ ಮಧ್ಯೆಯಲ್ಲೂ ತನ್ನೊಳಗಿನ ಕಲಾವಿದನನ್ನು ಕುಣಿಸಿ ಯಕ್ಷಪ್ರೇಮಿಗಳನ್ನು ರಂಜಿಸಿದ ವ್ಯಕ್ತಿಗೆ, ಕರ್ನಾಟಕ ಸರಕಾರದ ’ಯಕ್ಷಗಾನ ಬಯಲಾಟ ಅಕಾಡೆಮಿ’ ವತಿಯಿಂದ ಅಭಿನಂದನಾ ಕಾರ್ಯಕ್ರಮವಿದ್ದಿದ್ದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ. ಯಕ್ಷಗಾನಕ್ಕೆ ಪ್ರಥಮವಾಗಿ ಪದ್ಮಶ್ರೀಯನ್ನು ದೊರಕಿಸಿಕೊಟ್ಟ ಆ ವ್ಯಕ್ತಿಯ ಬಗೆಗೆ ಹೊಸದಾಗಿ ಪರಿಚಯಿಸುವ ಅಗತ್ಯ ಬೀಳುವುದಿಲ್ಲ! ಯಾಕೆಂದರೆ ಸಾಮಾನ್ಯವಾಗಿ ಅವರ ಹೆಸರನ್ನು ಕೇಳಿರದ ಕನ್ನಡ ಜನವಿಲ್ಲ! ’ಪದ್ಮಶ್ರೀ’ ಎಂಬ ಪ್ರಶಸ್ತಿಯ ಬಗ್ಗೆ ಏನೂ ಅರಿತಿರದ ಮುಗ್ಧ ಕಲಾವಿದನಿಗೆ ಅನಿರೀಕ್ಷಿತವಾಗಿ ಮತ್ತು ಅತಿಸಹಜವಾಗಿ ಈ ಪ್ರಶಸ್ತಿ ಒದಗಿಬಂದಿದ್ದು ಪ್ರಶಸ್ತಿಗೇ ಸಂದ ಗೌರವ ಎಂದರೆ ಆಶ್ಚರ್ಯವೆನಿಸುವ ಅಗತ್ಯವೂ ಕಾಣುವುದಿಲ್ಲ. ಸಾಮಾನ್ಯವಾಗಿ ಕೇಂದ್ರ ಸರಕಾರ ಕೊಡಮಾಡುವ ಪ್ರಶಸ್ತಿಗಳು ಲಭಿಸಿದಾಗ ರಾಜ್ಯ ಸರಕಾರ ಅಂತಹ ಪ್ರಶಸ್ತಿಭಾಜನರನ್ನು ಅಭಿನಂದಿಸುವುದು ವಾಡಿಕೆ. ಕನ್ನಡ ನೆಲದ ಗಂಡುಮೆಟ್ಟಿನ ಕಲೆಯಾದ ಯಕ್ಷಗಾನದಲ್ಲಿ ಅಂತಹ ಹೆಜ್ಜೆಗುರುತು ಮೂಡಿಸಿದ ಚಿಟ್ಟಾಣಿಯವರನ್ನು ಗೌರವಿಸುವ ಒಂದು ಪುಟ್ಟ ಕಾರ್ಯಕ್ರಮ ನಡೆಯುವ ಸುದ್ದಿ ತಿಳಿದು, ಕೆಲಸದ ಅವಸರಗಳ ನಡುವೆಯೂ ಧಾವಿಸಿದ ನನಗೆ,ಅಚ್ಚುಕಟ್ಟಾಗಿ ನಡೆದ ಸಮಾರಂಭ ನೋಡಿ ಆದ ಖುಷಿಯನ್ನು ನಿಮ್ಮೊಡನೆ ಹಂಚಿಕೊಳ್ಳದೇ ಸುಮ್ಮನಿರಲು ಮನಸ್ಸಾಗಲಿಲ್ಲ; ಅದನ್ನು ಹಲವರು ಇಷ್ಟಪಡುತ್ತೀರಿ ಎಂಬುದೂ ನನಗೆ ಗೊತ್ತು.
ಚಿಟ್ಟಾಣಿ ನನಗೆ ಹೊಸಬರಲ್ಲ. ರಾಮಚಂದ್ರ ಹೆಗಡೆಯವರನ್ನು ನನ್ನ ಬಾಲ್ಯದಿಂದಲೂ ನಾನು ಬಲ್ಲೆ; ನನ್ನ ಬಾಲ್ಯದಲ್ಲಿಯೇ ತನ್ನ ಹರೆಯದ ಉತ್ತುಂಗದಲ್ಲಿದ್ದ ಚಿಟ್ಟಾಣಿಯವರು ಎಲ್ಲಾದರೂ ಪಾತ್ರ ಮಾಡುತ್ತಾರೆ ಎಂಬ ಗಾಳಿಸುದ್ದಿ ಹಬ್ಬಿದರೂ ಪ್ರದರ್ಶನ ನಡೆಯುವಲ್ಲಿ ಜನ ಕಿಕ್ಕಿರಿದು ಸೇರುತ್ತಿದ್ದರು. ಈಗಲೂ ಅದೇ ಅಭಿಮಾನ ಅವರ ಅಭಿಮಾನೀ ಬಳಗಕ್ಕೆ ಇದೆ. ಆದರೆ ಶಾರೀರಿಕ ಮುಪ್ಪಿನ ಅಪ್ಪುಗೆಯಿಂದ ದುರ್ಬಲರಾದ ಚಿಟ್ಟಾಣಿಗೆ ಮೊದಲಿನ ಹಾಗೆ ಕುಣಿಯಲು ಸಾಧ್ಯವಾಗುತ್ತಿಲ್ಲ ಎಂಬ ಕೊರಗು ಕಾಡುತ್ತಿದೆ; ಅವರನ್ನು ಇನ್ನೂ ಕುಣಿಸುತ್ತಲೇ ಇರುವುದು ನಮ್ಮ ಸಾಧುತ್ವವೆನಿಸುವುದಿಲ್ಲ. ರಂಗಕ್ಕೆ ಈ ಕಲೆಗೆ ಮಕ್ಕಳನ್ನೂ ಮೊಮ್ಮಗನನ್ನೂ ಪರಿಚಯಿಸಿದ ಅಜ್ಜ ಚಿಟ್ಟಾಣಿಗೆ ವಿಶ್ರಾಂತಿಯ ಅನಿವಾರ್ಯತೆ ಇದೆ. ೧೯೮೬-೮೭ ರಲ್ಲಿ ಕುಮಟಾದ ಮಣಕಿ ಗ್ರೌಂಡಿನಲ್ಲಿ ೫-೬ ಸಾವಿರ ಜನರ ಸಮ್ಮುಖದಲ್ಲಿ ಅಭಿಮಾನೀ ಬಳಗ ಬೆಳ್ಳಿಯ ಯಕ್ಷಗಾನ ಕಿರೀಟವನ್ನು ತೊಡಿಸಿ ಸನ್ಮಾನಿಸಿತ್ತು ಎಂದರೆ ಇಂದಿಗೆ ಅವರಿಗೆ ಸಂದ ರಂಗಪುರಸ್ಕಾರಗಳು ಎಷ್ಟಿರಬಹುದು ಎಂಬುದನ್ನು ನಾವು ತಿಳಿದುಕೊಳ್ಳಬಹುದಾಗುತ್ತದೆ.
ಯಕ್ಷಗಾನ ಬಯಲಾಟ ಅಕಾಡೆಮಿ ಇಷ್ಟುವರ್ಷ ಇದಿದ್ದೇ ಗೊತ್ತಾಗಿರಲಿಲ್ಲ! ಶ್ರೀಯುತ ಎಂ.ಎಲ್.ಸಾಮಗರು ಇತ್ತೀಚೆಗೆ ಅದರ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಮೇಲೆ ಸರಕಾರ ಕೊಡುವ ಸೀಮಿತ ಅನುದಾನದಲ್ಲೂ ಸಮರ್ಥವಾಗಿ ಕೆಲಸವನ್ನು ನಿಭಾಯಿಸುತ್ತಿದ್ದಾರೆ ಎಂಬುದಕ್ಕೆ ಈ ಕಾರ್ಯಕ್ರಮ ಸಾಕ್ಷಿಯಾದಂತಿತ್ತು. ಸಾರ್ವಜನಿಕವಾಗಿ ಜರುಗುವ ಕಾರ್ಯಕ್ರಮವೊಂದು ಎಷ್ಟೇ ಚಿಕ್ಕದೇ ಇದ್ದರೂ ಅದಕ್ಕೆ ಸಾಕಷ್ಟು ಪೂರ್ವತಯಾರಿಯ ಅಗತ್ಯ ಬೀಳುತ್ತದೆ. ವೇದಿಕೆಯಮೇಲೆ ಅದು ಸಂಪನ್ನಗೊಳ್ಳುವುದಕ್ಕೂ ಮೊದಲು ವೇದಿಕೆಯ ಹೊರಗೆ ನಿಂತು ದುಡಿಯಬೇಕಾದ ಕೈಗಳು ಹಲವು. ಚಿಟ್ಟಾಣಿಯವರೇ ತಮ್ಮ ಮಾತಿನಲ್ಲಿ ಹೇಳಿದಂತೇ ಆಳಾಗಿಯೂ ಅರಸನಾಗಿಯೂ ಕೆಲಸಮಾಡುವ ವಿಶಿಷ್ಟ ತಾಕತ್ತುಳ್ಳ ಸಾಮಗರು, ವೇದಿಕೆಗೂ ಒಳಗೂ ಒಡಾಡುತ್ತಾ ಪರಿಶ್ರಮಿಸಿದ್ದನ್ನು ಕಾಣುವಾಗ, ಈ ಕಾರ್ಯಕ್ರಮ ನಡೆಯುವುದಕ್ಕೂ ಪೂರ್ವಭಾವಿಯಾಗಿ ಅವರು ವ್ಯಯಿಸಿರಬಹುದಾದ ಶ್ರಮದ ಮೊತ್ತದ ಅರಿವಾಗದೇ ಇರುವುದಿಲ್ಲ! ಅಕಾಡೆಮಿಯೆಂಬ ಸರಕಾರೀ ಅಂಗಸಂಸ್ಥೆಗಳಿಗೆ ನಿಜಕ್ಕೂ ಬೇಕು ಇಂತಹ ಅಧ್ಯಕ್ಷರು. ಸ್ವತಃ ಯಕ್ಷಗಾನದ ಕಲಾವಿದನಾಗಿಯೂ, ಕಲಾಪೋಷಕನಾಗಿಯೂ ಇರುವ ಸಾಮಗರ ಬಹುಮುಖಗಳ ಪರಿಚಯ ಅವರ ವಾಗ್ವೈಖರಿಯಿಂದಲೇ ಗೋಚರಿಸುತ್ತಿತ್ತು.
ಮೂರು ಆಯಾಮಗಳಲ್ಲಿ ಹರಡಿಕೊಂಡ ಈ ಕಾರ್ಯಕ್ರಮ ಆರಂಭಗೊಂಡಿದ್ದು ಮಧ್ಯಾಹ್ನದ ೩:೩೦ ಕ್ಕೆ. ಕೆಲಸದ ದಿನವಾದ ಶುಕ್ರವಾರದಂದು ಸಭಿಕರು ಸೇರುವರೇ ಎಂಬ ಆತಂಕದಲ್ಲೇ ಸಾಮಗರು ಇದ್ದರೆ ರವೀಂದ್ರ ಕಲಾಕ್ಷೇತ್ರದಲ್ಲಿ ಒಂದೇ ಒಂದು ಆಸನವೂ ಖಾಲೀ ಇರಲಿಲ್ಲ! ’ಸುಧನ್ವಾರ್ಜುನ’ ಯಕ್ಷಗಾನ ಪ್ರಸಂಗದೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಬಡಗು-ತೆಂಕು ಸಮ್ಮಿಶ್ರಣ ಅಗ್ದಿ ಲಾಯಕ್ಕಾಗಿತ್ತು. ಉತ್ತಮ ಹಿಮ್ಮೇಳ-ಮುಮ್ಮೇಳಗಳಿಂದ ಕೂಡಿದ್ದ ಈ ಪ್ರಸಂಗ ಬೆಂಗಳೂರಿನಲ್ಲಿರುವ, ನನ್ನಂತಹ ಅನೇಕ ಯಕ್ಷಪ್ರೇಮಿಗಳಿಗೆ ಸಮೃದ್ಧವಾದ ರಸದೌತಣವನ್ನು ಎರಡುಗಂಟೆಗಳಕಾಲ ಉಣಬಡಿಸಿತು. ಸುಧನ್ವನಾಗಿ ಕೊಂಡದಕುಳಿ ರಾಮಚಂದ್ರ ಹೆಗಡೆ, ಅರ್ಜುನನಾಗಿ ನಾವುಡ ಈ ಈರ್ವರು ಸಮರ್ಥವಾಗಿ ಅಭಿನಯಿಸಿದರೆ, ಪ್ರಭಾವತಿಯಾಗಿ ಸಭೆಯಲ್ಲಿ ಕುಳಿತ ಹೆಂಗಸರನ್ನೂ ನಾಚಿಸಿದವರು ಮಂಟಪ ಪ್ರಭಾಕರ ಉಪಾಧ್ಯ. ಅದಕ್ಕೆ ತಕ್ಕಂತೇ ಕೊಳಗಿ ಕೇಶವ ಹೆಗಡೆ ಭಾಗವತಿಕೆ, ಪಾಠಕ್ ಅವರ ಮೃದಂಗ ಮತ್ತು ವಿಘ್ನೇಶ್ವರ ಕೆಸರಕೊಪ್ಪರ ಚಂಡೆ ಕುಳಿತ ಪ್ರೇಕ್ಷಕರನ್ನು ಎತ್ತಿ ಕುಣಿಸುತ್ತಿತ್ತು!
ಲಘು ಚಹಾ ವಿರಾಮದ ನಂತರ ಚಿಟ್ಟಾಣಿಯವರ ಬಗ್ಗೆ ತಮ್ಮ ಅತಿಸನಿಹದ ಅನಿಸಿಕೆಗಳನ್ನು ಹಂಚಿಕೊಂಡವರು ಮೈಸೂರು ಮುಕ್ತ ವಿಶ್ವವಿದ್ಯಾಲಯದ ಪ್ರೊ.ಜಿ.ಎಸ್.ಭಟ್ಟರು ಮತ್ತು ಕಲಾವಿದ ಮಂಟಪ ಉಪಾಧ್ಯ. ನಂತರ ಇಡೀ ಸಭೆ ಎದ್ದು ನಿಂತು ನಾಡಗೀತೆಯನ್ನು ಆಲಿಸಿ ಗೌರವಿಸಿತು. ಬಾಲಕಲಾವಿದರಾದ ಅಮೋಘ ಮತ್ತು ಅಮೃತ್ ಇಬ್ಬರೂ ತಮ್ಮ ಅಮೋಘ ಅಭಿನಯದಲ್ಲಿ ಬಾಲಗೋಪಾಲ ವೇಷವನ್ನು ಮೆರೆದು ಸಭೆಯ ಮೆರೆಗು ಹೆಚ್ಚಿಸಿದ್ದೂ ಅಲ್ಲದೇ ಯಕ್ಷಗಾನದ ಭವಿಷ್ಯ ಉಜ್ವಲವಾಗಿದೆ ಎಂಬುದನ್ನು ಸಾಬೀತುಪಡಿಸಿದರು. ಜ್ಯೋತಿ ಬೆಳಗುವುದರ ಮೂಲಕ ಮುಂದುವರಿದ ಸಭೆಯಲ್ಲಿ ಚಿಟ್ಟಾಣಿಯವರನ್ನು ಸನ್ಮಾನಿಸಿ ಮಾತನಾಡಿದವರು ಜ್ಞಾನಪೀಠ ಪುರಸ್ಕೃತ ಚಂದ್ರಶೇಖರ ಕಂಬಾರರು, ಸಚಿವ ಗೋವಿಂದ ಕಾರಜೋಳ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಬಸವರಾಜ್ ಅವರುಗಳು. ನಂತರ ಸನ್ಮಾನ ಪಡೆದ ಚಿಟ್ಟಾಣಿಯವರು ಮಾತನಾಡಿ ಏನೂ ಅರಿಯದ ಜನಸಾಮಾನ್ಯನೊಬ್ಬ ಯಕ್ಷಗಾನದಲ್ಲಿ ತೊಡಗಿಕೊಂಡು ಈ ಎತ್ತರಕ್ಕೆ ಏರಲು ಕಾರಣೀಭೂತರಾದವರು ಅಭಿಮಾನಿಗಳೇ ಆಗಿದ್ದಾರಲ್ಲದೇ, ಡಾ|ರಾಜಕುಮಾರ್ ಹೇಳಿದಂತೇ ಪ್ರತಿಯೊಬ್ಬ ಪ್ರೇಕ್ಷಕನಲ್ಲೂ ದೇವರನ್ನು ಕಂಡೆ, ತನಗೆ ಅನ್ನ ನೀಡಿದ ಅಭಿಮಾನಿಗಳಿಗೆ ಚಿರಋಣಿ ಎಂದ ಅವರ ಮಾತುಗಳು ಕೇವಲ ಔಪಚಾರಿಕ ಎಂದು ಯಾರಿಗೂ ಅನಿಸಲಿಲ್ಲ.
ಸನ್ಮಾನದ ಶಿಷ್ಟಾಚಾರಗಳು ಮುಗಿದ ತರುವಾಯ ’ಕಂಸವಧೆ’ ಪ್ರಸಂಗ ಪ್ರದರ್ಶನಗೊಂಡಿತು. ಸಮಯ ಬಹಳ ಜಾಸ್ತಿ ಆಗಿದ್ದರಿಂದಲೂ ಸ್ವತಃ ಚಿಟ್ಟಾಣಿಯವರು ಕಂಸನ ಪಾತ್ರವನ್ನು ನಿರ್ವಹಿಸುತ್ತಿದ್ದುದರಿಂದಲೂ ಈ ಪ್ರಸಂಗವನ್ನು ಚುಟುಕಾಗಿ ಅಭಿನಯಿಸಿ ಮುಗಿಸಿದರು. ಮೂರು ತಲೆಮಾರಿನ ಕಲಾವಿದರು ಅಪ್ಪ-ಮಗ-ಮಗ[ಚಿಟ್ಟಾಣಿ-ಸುಬ್ರಹ್ಮಣ್ಯ ಚಿಟ್ಟಾಣಿ-ಕಾರ್ತೀಕ್ ಚಿಟ್ಟಾಣಿ] ಈ ಪ್ರಸಂಗದಲ್ಲಿ ಅನುಕ್ರಮವಾಗಿ ಕಂಸ-ಕೃಷ್ಣ-ಬಲರಾಮ ಪಾತ್ರಗಳನ್ನು ಪೋಷಿಸಿದರು. ಅದೆಷ್ಟು ಬಾರಿ ಕಂಸನ ಪಾತ್ರವನ್ನು ನಿರ್ವಹಿಸಿದರೋ ಪ್ರಾಯಶಃ ಚಿಟ್ಟಾಣಿಯವರಿಗೇ ಅದರ ಅರಿವಿರಲಿಕ್ಕಿಲ್ಲ, ಆದರೆ ಈಗ ಮೊದಲಿನ ಹಾಗೆ ಭಾವಾಭಿವ್ಯಕ್ತಿಯನ್ನು ಕುಣಿದು ಬಿಂಬಿಸಲಿಕ್ಕೆ ಸಾಧ್ಯವಾಗುತ್ತಿಲ್ಲ. ಎರಡು ಹೆಜ್ಜೆ ಹಾಕಿದರೆ ಏದುಸಿರು ಬಂದು ನಿತ್ರಾಣರಾಗುತ್ತಿದ್ದ ಚಿಟ್ಟಾಣಿಯವರಿಗೆ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಿದ ತೃಪ್ತಿಯಂತೂ ಇಲ್ಲ; ಆದರೆ ’ಅಭಿಮಾನಿಗಳ ಆಕಾಂಕ್ಷಾಪೂರಿತ ಕಣ್ಣುಗಳಿಗೆ ಅರೆಘಳಿಗೆ ಇದು ಚಿಟ್ಟಾಣಿಯ ಕೊಡುಗೆ’ ಎಂಬ ರೀತಿಯಲ್ಲಿ ಅವರು, ಎಲ್ಲೆಲ್ಲಿಂದಲೋ ತನ್ನ ವೇಷವನ್ನು ಕಾಣಲೆಂದು ಕಾತರಿಸಿ ಬಂದ ಅಭಿಮಾನಿಗಳನ್ನು ಸಮಾಧಾನಿಸುವ ಸಲುವಾಗಿ ಪಾತ್ರ ನಿರ್ವಹಿಸಿದರು.
ನಮ್ಮಲ್ಲಿ ಯಕ್ಷಗಾನಗಳು ನಡೆಯುವಾಗಿ ನಮಗೆಲ್ಲಾ ಚೌಕಿ[ಗ್ರೀನ್ ರೂಂ]ಗೇ ಹೋಗಿ ಅಭ್ಯಾಸ.ಅಲ್ಲಿ ವೇಷಬರೆದುಕೊಳ್ಳುತ್ತಿರುವ ಕಲಾವಿದರುಗಳನ್ನು ಕಂಡು ಪ್ರೀತಿಯಿಂದ ಮಾತನಾಡಿಸುವುದು ನಮ್ಮಲ್ಲಿ ಬಹುತೇಕರ ಹವ್ಯಾಸ. ಅದಕ್ಕೆ ನಾನೂ ಹೊರತಲ್ಲ. ಚಹಾ ವಿರಾಮದ ನಂತರ ಚೌಕಿಗೆ ನುಗ್ಗಿದ ನಾನು ಚಿಟ್ಟಾಣಿಯವರಿಗೆ ನಮಸ್ಕಾರಮಾಡಿದೆ. ತನ್ನ ಪರಮಪ್ರಿಯ ೩೦ ಮಾರ್ಕಿನ ಬೀಡಿಯ ದಂ ಎಳೆಯುತ್ತಿದ್ದ ಅವರಲ್ಲಿ "ಹೆಗಡೇರೇ ಇನ್ನು ಬೀಡೀ ಸೇದುವವರಿಗೆ ಅಪಾಯವಿಲ್ಲ ಎಂದು ನಿಮ್ಮ ಚಿತ್ರಹಾಕಿಸಿ ಅದರ ಕೆಳಗೆ ಬರೆಸಿದರೆ ಹೇಗೆ?" ಎಂದಾಗ ತಮಾಷೆ ಕೇಳಿ ನಕ್ಕರು. ಅಕ್ಕಪಕ್ಕ ಕುಳಿತ ಇನ್ಯಾರೋ ನನ್ನಂತಹ ಯಕ್ಷಪ್ರೇಮಿಗಳೂ ಸಹಿತ ಹೆಗಡೆಯವರೊಂದಿಗೆ ತಮಾಷೆಯ ಮಾತುಗಳನ್ನಾಡುತ್ತಿರುವುದನ್ನು ಕಂಡೆ; ಪದ್ಮಶ್ರೀ ಬಂದರೂ ಅದೇ ಚಿಟ್ಟಾಣಿ, ನಾಳೆ ಪದ್ಮಭೂಷಣ ಬಂದರೂ ಅದೇ ಚಿಟ್ಟಾಣಿ-ಯಾವ ಅಹಂಕಾರವಾಗಲೀ ತಾನು ಮಹಾನ್ ಕಲಾವಿದ ಎಂಬ ಎತ್ತರವನ್ನು ಬಿತ್ತರಿಸುವ ಕುರುಹಾಗಲೀ ಅವರಲ್ಲಿ ಕಾಣಲಿಲ್ಲ. ಅಷ್ಟರಲ್ಲೇ ಬಣ್ಣ ಬರೆದುಕೊಳ್ಳುತ್ತಿದ್ದ ಸುಬ್ರಹ್ಮಣ್ಯ ಚಿಟ್ಟಾಣಿ, ಕಾರ್ತೀಕ್ ಎಲ್ಲರೂ ಅಲ್ಲೇ ಇದ್ದರು. ಮೃದಂಗವನ್ನು ಮಾತನಾಡಿಸುವ ಪಾಠಕ್ ಎದುರಾಗಿ ಕೈಕುಲುಕಿದರು. ಮೊದಲಿನ ಪ್ರಸಂಗ ಪ್ರದರ್ಶಿಸಿ ಮುಗಿದಿದ್ದರಿಂದ ಕೊಂಡದಕುಳಿ ವೇಷ ಬಿಚ್ಚಿಹಾಕುತ್ತಿದ್ದರು. ಎಲ್ಲರಿಗೂ ನಮನದೊಂದಿಗೆ ಲೋಕಾಭಿರಾಮವಾಗಿ ಮಾತನಾಡಿದ್ದು ಮನಸ್ಸಿಗೆ ಮುದನೀಡಿತು.
ಕರ್ನಟಕದ ಹೆಮ್ಮೆಯ ಗಂಡುಮೆಟ್ಟಿನ ಕಲೆ ಯಕ್ಷಗಾನ. ಕೇರಳದಿಂದ ಹಿಡಿದು ಕಾಶ್ಮೀರದವರೆಗೂ ಪ್ತತಿಯೊಂದೂ ರಾಜ್ಯಕ್ಕೂ ತನ್ನದೇ ಆದ ಕಲಾಪ್ರಕಾರ ಒಂದಿದೆ; ಅವುಗಳಿಗೆ ಮಾನ್ಯತೆಯೂ ದೊರೆತಿದೆ. ಕನ್ನಡ ನೆಲದಲ್ಲಿ ಅಂತಹ ಸ್ವಂತಿಕೆಯ ಅತಿವಿಶಿಷ್ಟ ಮತ್ತು ಸಮಗ್ರ ಕಲೆ ಎಂದರೆ ಅದು ಯಕ್ಷಗಾನ ಮಾತ್ರ! ಅಖಂಡ ಭಾರತದ ಎಲ್ಲಾ ರಾಜ್ಯಗಳ ಎಲ್ಲಾ ಕಲೆಗಳ ಛಾಯಾಚಿತ್ರಗಳನ್ನು ಕಲೆಹಾಕಿ ಜೋಡಿಸಿನೋಡಿದರೆ, ಅವುಗಳ ಮಧ್ಯದಲ್ಲಿ ಅತ್ಯಂತ ಸಹಜ ಸುಂದರ ವೇಷಭೂಷಣಗಳಿಂದ ಮೆರೆಯುವುದು, ಎದ್ದುಕಾಣುವುದು ನಮ್ಮ ಕನ್ನಡದ ಯಕ್ಷಗಾನದ ಚಿತ್ರ! ಸ್ವತಃ ಮಂತ್ರಿ ಗೋವಿಂದ ಕಾರಜೋಳ ತಮ್ಮ ಅನುಭವದಲ್ಲಿ ಹೇಳಿದರು-ವಿದೇಶಕ್ಕೆ ಹೋದಾಗ ಅಲ್ಲಿ ಮಂಗಳೂರಿನ ಯಕ್ಷಗಾನ ತಂಡವೊಂದು ಪ್ರದರ್ಶನ ನೀಡಲು ಹೋಗಿತ್ತಂತೆ. ಅದು ಭಾರತೀಯರು ದೀಪಾವಳಿಯನ್ನು ಆಚರಿಸುವುದರ ಕುರಿತ ಕಾರ್ಯಕ್ರಮ. ಯಕ್ಷಗಾನ ಮುಗಿದಾನಂತರ ಅಲ್ಲಿ ಸೇರಿದ್ದ ವಿದೇಶೀಯರು ಈ ಗೋವಿಂದ ಕಾರಜೋಳರನ್ನು ಕೇಳಿಕೊಂಡರಂತೆ: "ಸ್ವಾಮೀ ಮುಂದೆ ಪ್ರತೀವರ್ಷ, ನಿಮ್ಮಲ್ಲಿಂದ ಇಂತಹ ಹಲವು ತಂಡಗಳನ್ನು ಕಳಿಸಿ ನಮ್ಮಲ್ಲಿ ದೀಪಾವಳಿ ಆಚರಿಸುವುದಕ್ಕೆ ಅನುವುಮಾಡಿಕೊಡಿ"--ಇದಕ್ಕಿಂತ ಹಿರಿದಾದ ಭಾಗ್ಯ ಯಾವುದು ಬೇಕು ಯಕ್ಷಗಾನಕ್ಕೆ?
ಅನಾದಿಕಾಲದಲ್ಲಿ ಅಥವಾ ಶತಮಾನದ ಹಿಂದೆ ನಮ್ಮಲ್ಲಿನ ಹಳ್ಳಿಗಳಲ್ಲಿ ಸಾಕ್ಷರತೆ ಅಷ್ಟಾಗಿ ಇರಲಿಲ್ಲ. ಆದರೆ ಮಹಾಕವಿಗಳು ರಚಿಸಿದ ರಾಮಾಯಣ-ಮಹಾಭಾರತಗಳು ಎಲ್ಲರಿಗೂ ತಿಳಿದಿದ್ದವು! ಇಂದಿಗೂ ಕರ್ನಾಟಕದ ಕರಾವಳೀ ಮತ್ತು ಮಲೆನಾಡು ಜಿಲ್ಲೆಗಳಲ್ಲಿರುವ ಜನರಿಗೆ ಗೊತ್ತಿರುವ ಅದೇಷ್ಟೋ ಪೌರಾಣಿಕ ಕಥಾಭಾಗಗಳು ಬಾಕೀ ಪ್ರದೇಶದವರಿಗೆ ತಿಳಿದಿಲ್ಲ! ಹೀಗಾಗಲು ಕಾರಣವಿಷ್ಟೇ: ಮಳೆಗಾಲದ ಬೇಸರವನ್ನು ಕಳೆಯಲು ಹುಟ್ಟಿದ ಯಕ್ಷಗಾನ ಕಲೆ ನಮ್ಮಲ್ಲಿನ ಹಳ್ಳಿಹಳ್ಳಿಗಳಲ್ಲಿ ವ್ಯಾಪಿಸಿದೆ, ಅಲ್ಲಿನ ಹಬ್ಬ-ಹರಿದಿನಗಳ ಸಂದರ್ಭಗಳಲ್ಲಿ ಪೌರಾಣಿಕ ಪ್ರಸಂಗಗಳ ಪ್ರದರ್ಶನ ಅಥವಾ ತಾಳಮದ್ದಲೆ ನಡೆಯುತ್ತದೆ. ಮಾತಿನ ಚಾಕಚಕ್ಯತೆಯಿಂದ ಪಾತ್ರಧಾರಿಗಳು ಪರಸ್ಪರರನ್ನು ಸೋಲಿಸಲು ಪ್ರಯತ್ನಿಸುತ್ತಿರುವಾಗ ಪುಣ್ಯಕಥಾನಕಗಳಲ್ಲಿ ಅಡಗಿರುವ ಬಹುತೇಕ ಉಪಕಥೆಗಳೂ ಕಾಣಸಿಗುತ್ತವೆ; ಗೊತ್ತಿರದ ಅನೇಕ ಪೌರಾಣಿಕ ವ್ಯಕ್ತಿತ್ವಗಳ ಪರಿಚಯ ನಮಗಾಗುತ್ತದೆ. ಎಳವೆಯಲ್ಲಿ, ಮಕ್ಕಳಮೇಲೆ ದೃಶ್ಯಮಾಧ್ಯಮಗಳು ಬೀರುವ ಪರಿಣಾಮ ಬಹಳ. ನಮ್ಮಲ್ಲಿನ ರಾಮಾಯಣ-ಮಹಾಭಾರತದ ಕಥೆಗಳನ್ನು ಕರ್ನಾಟಕದ ಹಳ್ಳಿಹಳ್ಳಿಗಳಲ್ಲಿ ಜನ ಯಕ್ಷಗಾನದ ಮೂಲಕ ಅರಿತರೆ ಮನೋರಂಜನೆಯ ಜೊತೆಗೆ ಭಾರತೀಯ ಸಂಸ್ಕೃತಿಯ ಪರಿಚಯವೂ ಆಗುತ್ತದೆ. ಯಾವುದು ಒಳಿತು, ಯಾವುದು ಕೆಡುಕು, ಯಾವುದನ್ನು ಕೈಗೊಳ್ಳುವುದರ ಪರಿಣಾಮ ಏನಾಗುತ್ತದೆ ಎಂಬುದನ್ನು ಸಾದ್ಯಂತ ವಿವರಿಸುತ್ತ ನೋಡುಗರ ಹಸಿದ ಮನಸ್ಸಿಗೆ ಪುಷ್ಕಳ, ಸುಗ್ರಾಸ ಭೋಜನ ಒದಗುತ್ತದೆ.
ಕಂಸವಧೆಯಲ್ಲಿ ಒಂದು ಹಾಡು ’ಇರುವುದು ಒಂದೇ ದೀಪವು ಎರಡಾಯಿತು ...’ ಹೀಗೇ ಹಲವಾಯಿತು ಎನ್ನುತ್ತಾ ಎಲ್ಲೆಲ್ಲೂ ಕೃಷ್ಣನ ಪ್ರತಿರೂಪಗಳೇ ಕಂಸನನ್ನು ಅಣಕಿಸುವುದನ್ನು ಹೇಳಲಾಗುತ್ತದೆ. ಈ ಸೃಷ್ಟಿಯ ಮೂಲ ಒಂದೇ. ಆ ಅದ್ಭುತ ಚೈತನ್ಯ ಒಂದಿದ್ದದ್ದು ಹತ್ತಾಗಿ ಹಲವಾಗಿ ಈ ಜಗತ್ತನ್ನು ನಡೆಸುವ ಲೀಲಾವಿನೋದ ಮಾತ್ರ ಎಲ್ಲರಿಗೂ ಅರ್ಥವಾಗುವುದಲ್ಲ. ಇಂತಹ ಅಪರೂಪದ ಅರ್ಥವುಳ್ಳ ಹಾಡುಗಳನ್ನು ಆ ಕಾಲಕ್ಕೇ ನಮ್ಮ ಪೂರ್ವಜ ಪುಣ್ಯಾತ್ಮರು ಪ್ರಯಾಸಪೂರ್ವಕವಾಗಿ, ಪ್ರಯತ್ನಶೀಲರಾಗಿ ತಾಡವೋಲೆಗಳಲ್ಲಿ ಬರೆದು, ನಮಗಾಗಿ ನೀಡಿದರು. ಮುಂದಿನ ನಮ್ಮ ಪೀಳಿಗೆಗೆ ಹಿಂದಿನವರು ನಮಗೆ ನಿಸ್ವಾರ್ಥರಾಗಿ ಕೊಟ್ಟುಹೋದ ಉತ್ತಮ ಸಂಸ್ಕಾರಗಳನ್ನು ವರ್ಗಾಯಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿರುತ್ತದೆ. ಜೀವ ಇರುವವರೆಗೆ, ಈ ದೇಹದಿಂದಿರುವವರೆಗೆ ಭೂಮಿ, ಮನೆ-ಮಠ ತನ್ನದು ತನ್ನದು ಎಂದು ನಾವು ಭಾವಿಸಿಕೊಳ್ಳುತ್ತೇವೆ. ವಾಸ್ತವದಲ್ಲಿ ಈ ಭೂಮಿಯ ಯಾವುದೇ ಭಾಗವಾಗಲೀ, ಆಕಾಶದ, ನೀರಿನ ಯಾವುದೇ ಭಾಗವಾಗಲೀ ನಮದಲ್ಲ. ಇಲ್ಲಿರುವವರೆಗೆ ಎಲ್ಲದಕ್ಕೂ ನಾವು ವಾರಸುದಾರರು ಮಾತ್ರ! "ನೋಡಿಕೋ" ಎಂಬ ಜವಾಬ್ದಾರಿಯನ್ನು ಕೊಡುವುದರ ಜೊತೆಗೆ ಕೊಟ್ಟ ಪಾತ್ರಗಳನ್ನು ಜಗವೆಂಬ ರಂಗದಲ್ಲಿ ನಿರ್ವಹಿಸುವ ಜಾತ ಕಲಾವಿದರಾದ ನಮ್ಮೆಲ್ಲರಿಗೂ, || ಜಾತಸ್ಯ ಮರಣ ಧ್ರುವಂ || ಎಂಬ ಸಂಸ್ಕೃತದ ವ್ಯಾಖ್ಯೆ ನೆನಪಾಗುವುದೇ ಇಲ್ಲ. ಬರುವಾಗ ತರಲಾರದ ಹೋಗುವಾಗ ಹೊರಲಾರದ, ಆದರೆ ಕೇವಲ ಲೌಕಿಕದ ಬದುಕಿಗೆ ಆಧಾರವೆನಿಸುವ ಇಲ್ಲಿನ ಆಸ್ತಿಪಾಸ್ತಿ, ಜೀವನಕ್ರಮ, ನ್ಯಾಯ-ನೀತಿಗಳ ಬಗ್ಗೆ ವಿಶದವಾಗಿ ಅರುಹುವ ಒಂದೇ ಒಂದು ಸಮಗ್ರ ಕಲೆ ಯಕ್ಷಗಾನ ಮಾತ್ರ. ಯಕ್ಷಗಾನವೆಂಬ ಒಂದೇ ದೀಪದಿಂದ ಹಲವುದೀಪಗಳು ಬೆಳಗಲಿ, ಸಮಾಜದಲ್ಲಿರುವ ಅಂಧಕಾರ ತೊಲಗಲಿ ಎಂಬ ಪ್ರಾರ್ಥನೆಯೊಂದಿಗೆ, ’ಯಕ್ಷಗಾನ ಬಯಲಾಟ ಅಕಾಡೆಮಿ’ಗೆ ಜೀವತುಂಬಲು ಪ್ರಯತ್ನಿಸುತ್ತಿರುವ ಸಾಮಗರಿಗೂ, ಮುಪ್ಪಡರಿದ ದೇಹದಲ್ಲೂ ಯಕ್ಷಕಲೆಯನ್ನು ಚಪ್ಪರಿಸಿ ಹಂಚಲು ಯತ್ನಿಸುತ್ತಿರುವ ಚಿಟ್ಟಾಣಿಯವರಿಗೂ ನನ್ನ ಅಭಿನಂದನೆಗಳು, ಅಭಿವಂದನೆಗಳು ಮತ್ತು ನಮಸ್ಕಾರಗಳು.
ಕಂಸವಧೆಯಲ್ಲಿ ಒಂದು ಹಾಡು ’ಇರುವುದು ಒಂದೇ ದೀಪವು ಎರಡಾಯಿತು ...’ ಹೀಗೇ ಹಲವಾಯಿತು ಎನ್ನುತ್ತಾ ಎಲ್ಲೆಲ್ಲೂ ಕೃಷ್ಣನ ಪ್ರತಿರೂಪಗಳೇ ಕಂಸನನ್ನು ಅಣಕಿಸುವುದನ್ನು ಹೇಳಲಾಗುತ್ತದೆ. ಈ ಸೃಷ್ಟಿಯ ಮೂಲ ಒಂದೇ. ಆ ಅದ್ಭುತ ಚೈತನ್ಯ ಒಂದಿದ್ದದ್ದು ಹತ್ತಾಗಿ ಹಲವಾಗಿ ಈ ಜಗತ್ತನ್ನು ನಡೆಸುವ ಲೀಲಾವಿನೋದ ಮಾತ್ರ ಎಲ್ಲರಿಗೂ ಅರ್ಥವಾಗುವುದಲ್ಲ. ಇಂತಹ ಅಪರೂಪದ ಅರ್ಥವುಳ್ಳ ಹಾಡುಗಳನ್ನು ಆ ಕಾಲಕ್ಕೇ ನಮ್ಮ ಪೂರ್ವಜ ಪುಣ್ಯಾತ್ಮರು ಪ್ರಯಾಸಪೂರ್ವಕವಾಗಿ, ಪ್ರಯತ್ನಶೀಲರಾಗಿ ತಾಡವೋಲೆಗಳಲ್ಲಿ ಬರೆದು, ನಮಗಾಗಿ ನೀಡಿದರು. ಮುಂದಿನ ನಮ್ಮ ಪೀಳಿಗೆಗೆ ಹಿಂದಿನವರು ನಮಗೆ ನಿಸ್ವಾರ್ಥರಾಗಿ ಕೊಟ್ಟುಹೋದ ಉತ್ತಮ ಸಂಸ್ಕಾರಗಳನ್ನು ವರ್ಗಾಯಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿರುತ್ತದೆ. ಜೀವ ಇರುವವರೆಗೆ, ಈ ದೇಹದಿಂದಿರುವವರೆಗೆ ಭೂಮಿ, ಮನೆ-ಮಠ ತನ್ನದು ತನ್ನದು ಎಂದು ನಾವು ಭಾವಿಸಿಕೊಳ್ಳುತ್ತೇವೆ. ವಾಸ್ತವದಲ್ಲಿ ಈ ಭೂಮಿಯ ಯಾವುದೇ ಭಾಗವಾಗಲೀ, ಆಕಾಶದ, ನೀರಿನ ಯಾವುದೇ ಭಾಗವಾಗಲೀ ನಮದಲ್ಲ. ಇಲ್ಲಿರುವವರೆಗೆ ಎಲ್ಲದಕ್ಕೂ ನಾವು ವಾರಸುದಾರರು ಮಾತ್ರ! "ನೋಡಿಕೋ" ಎಂಬ ಜವಾಬ್ದಾರಿಯನ್ನು ಕೊಡುವುದರ ಜೊತೆಗೆ ಕೊಟ್ಟ ಪಾತ್ರಗಳನ್ನು ಜಗವೆಂಬ ರಂಗದಲ್ಲಿ ನಿರ್ವಹಿಸುವ ಜಾತ ಕಲಾವಿದರಾದ ನಮ್ಮೆಲ್ಲರಿಗೂ, || ಜಾತಸ್ಯ ಮರಣ ಧ್ರುವಂ || ಎಂಬ ಸಂಸ್ಕೃತದ ವ್ಯಾಖ್ಯೆ ನೆನಪಾಗುವುದೇ ಇಲ್ಲ. ಬರುವಾಗ ತರಲಾರದ ಹೋಗುವಾಗ ಹೊರಲಾರದ, ಆದರೆ ಕೇವಲ ಲೌಕಿಕದ ಬದುಕಿಗೆ ಆಧಾರವೆನಿಸುವ ಇಲ್ಲಿನ ಆಸ್ತಿಪಾಸ್ತಿ, ಜೀವನಕ್ರಮ, ನ್ಯಾಯ-ನೀತಿಗಳ ಬಗ್ಗೆ ವಿಶದವಾಗಿ ಅರುಹುವ ಒಂದೇ ಒಂದು ಸಮಗ್ರ ಕಲೆ ಯಕ್ಷಗಾನ ಮಾತ್ರ. ಯಕ್ಷಗಾನವೆಂಬ ಒಂದೇ ದೀಪದಿಂದ ಹಲವುದೀಪಗಳು ಬೆಳಗಲಿ, ಸಮಾಜದಲ್ಲಿರುವ ಅಂಧಕಾರ ತೊಲಗಲಿ ಎಂಬ ಪ್ರಾರ್ಥನೆಯೊಂದಿಗೆ, ’ಯಕ್ಷಗಾನ ಬಯಲಾಟ ಅಕಾಡೆಮಿ’ಗೆ ಜೀವತುಂಬಲು ಪ್ರಯತ್ನಿಸುತ್ತಿರುವ ಸಾಮಗರಿಗೂ, ಮುಪ್ಪಡರಿದ ದೇಹದಲ್ಲೂ ಯಕ್ಷಕಲೆಯನ್ನು ಚಪ್ಪರಿಸಿ ಹಂಚಲು ಯತ್ನಿಸುತ್ತಿರುವ ಚಿಟ್ಟಾಣಿಯವರಿಗೂ ನನ್ನ ಅಭಿನಂದನೆಗಳು, ಅಭಿವಂದನೆಗಳು ಮತ್ತು ನಮಸ್ಕಾರಗಳು.
ನಾನು ಕೂಡ ಯಕ್ಷಗಾನಪ್ರೇಮಿ. ಆದರೆ ಮೊನ್ನೆ ಬರಲಾಗಲಿಲ್ಲ. ನೀವು ಹೋಗಿ ಅಲ್ಲಿನ ಯಥಾವತ್ ವರ್ಣನೆ ಮಾಡಿದ್ದೀರಿ. ಚಿಟ್ಟಾಣಿಯವರನ್ನು ಕ೦ಡು ಮಾತನಾಡಿಸಿ ಬ೦ದಿದ್ದೀರಿ. ಬಿಡುವಿಲ್ಲದ ಕಾರ್ಯಬಾಹುಳ್ಯದ ನಡುವೆಯೂ ಸಮಯ ಹೊ೦ದಿಸಿ ಹೋಗಿ ಬ೦ದಿರಲ್ಲ. ನೀವೇ ಧನ್ಯ. ಇನ್ನೊಮ್ಮೆ ಇ೦ತಹ ಕಾರ್ಯಕ್ರಮ ಇದ್ದಾಗ ನನಗೆ ತಿಳಿಸಿ. ಖ೦ಡಿತ ಬರುತ್ತೇನೆ.
ReplyDeleteಚಿಟ್ಟಾಣಿಯವರದ್ದು ಬಹಳ ಆಕರ್ಷಕ ಕಣ್ಣು, ಟೆಂಟಿನಲ್ಲಿ ಹಿಂದಿನ ಸೀಟಿನಲ್ಲಿ ಕುಳಿತವನಿಗೂ ಅವ್ರ ಕಣ್ಣಿನ ಚಲನೆ ಕಾಣಿಸುವಶ್ಟು ತೀಕ್ಷ್ಣ, ಆದ್ದರಿಂದಲೇ ಅವರ ಅಭಿನಯ ಮನಮೋಹಕ, ಈಗ ಬಹಳಷ್ಟು ಕಲಾವಿದರು ಅವರಿಗಿಂತಲೂ ಹೆಚ್ಚು ಕಾಲಾಟ ಮಾಡುವವರಿದ್ದರೂ, ಚಿಟ್ಟಾಣಿಯವರ ಈ ಆಕರ್ಷಕ ಕಣ್ಣಿನ ಚಲನೆಯೊಂದಿಗಿನ ಅಭಿನಯದ ಮುಂದೆ ಆಕರ್ಶಕವಾಗಿ ಕಾಣುವದಿಲ್ಲೆ,ಚಿಟ್ಟಾಣಿ ಅಜ್ಜನಿಗೆ ಸಹಸ್ರ ನಮನ
ReplyDelete