ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Thursday, May 3, 2012

ಬರಗಾಲ


ಚಿತ್ರಕೃಪೆ: ಅಂತರ್ಜಾಲ 
ಬರಗಾಲ

ಬಿರುಬಿಸಿಲ ಬೇಗೆಯಲಿ ಅರಳಿಹುದು ಹೂವೊಂದು
ತರುವು ಕಸುವನು ಕಳೆದು ಒಣಗುತಿರಲು
ಕರುದನಗಳವುಗಳಿಗೆ ಆಹಾರವಿಲ್ಲದಲೆ
ಸೊರಗಿ ಕಣ್ಣೀರಿಡಲು ಬಡವ ನೊಂದು 

ಹರುಷಪಡಬೇಕೆ ನಾವ್ ಹೂವ ನೋಡುತಲಲ್ಲಿ?
ಮರುಕಹುಟ್ಟುವ ಸಾವುಬದುಕಿನಾಟದಲಿ
ತೊರೆಕೆರೆಗಳವು ಬತ್ತಿ ಬರಡಾದ ಜಾಗದಲಿ
ತರಿಕಿಟದ ಧಿಮಿ ಕುಣಿತ ವಿಧಿಯ ಆಟದಲಿ

ಕರೆದಾಗ ಬರಲಾರ ಮಹನೀಯ ಮಳೆರಾಯ
ದೊರೆಸಾನಿ ಜನಗಳವು ಬಂದುಹೋಗುವರು
ಬರಿಸುಮ್ಮನೇ ಅಲ್ಲಿ ಕಣ್ಣೊರೆಸುವಾತಂತ್ರ
ಪರಿಹಾರ ದಾರಿಯಲಿ ತಿಂದು ತೇಗುವರು!

ಪರಶಿವನೆ ಗತಿಯೆಂದು ಕರಮುಗಿದು ಪ್ರಾರ್ಥಿಸುತ
ನರನಾರಿಯರು ದಿಕ್ಕು ಕಾಣದಾಗುವರು
ಕಿರಿಸಾಲ ಹಿರಿದಾಗಿ ಬದುಕು ಬೇಸರವೆನಿಸಿ
ತೊರೆದೆಲ್ಲ ನಗರದೆಡೆ ಬೇಗ ಸಾಗುವರು

ಮರವು ಒಣಗುತಲಿತ್ತು ಹೂವು ಬಿರಿಯುತಲಿತ್ತು
ವರವೊ ಶಾಪವೊ ಅರಿಯೆ ಎಂಥ ಕಲಿಗಾಲ
ತೆರೆದೆದೆಯ ಬಯಲಿನಲಿ ಹನಿನೀರು ಸಿಗದಿರಲು
ಕೊರಗಿ ಸತ್ತಿದೆ ಹಕ್ಕಿ ತೀವ್ರ ಬರಗಾಲ


4 comments:

 1. "ದೊರೆಸಾನಿ ಜನಗಳವು ಬಂದುಹೋಗುವರು"......Very significant!

  ReplyDelete
 2. ಮರವು ಒಣಗುತಲಿತ್ತು ಹೂವು ಬಿರಿಯುತಲಿತ್ತು
  ವರವೊ ಶಾಪವೊ ಅರಿಯೆ ಎಂಥ ಕಲಿಗಾಲ

  like it

  ReplyDelete
 3. ಓದಿ ಪ್ರತಿಕ್ರಿಯಿಸಿದ ಮತ್ತು ಓದಿದ ಎಲ್ಲ ಮಹನೀಯರಿಗೂ ನನ್ನ ಅನಂತ ನಮನಗಳು.

  ReplyDelete