ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Sunday, May 9, 2010

ಅಮ್ಮಾ..ಎಂದರೇ ತೃಪ್ತಿಯು


ಕೇವಲ ಮದರ್‍ಸ ಡೇ ಆಚರಣೆಯಿಂದ ಯಾವ ಪ್ರಯೋಜನವೂ ಈ ಜಗತ್ತಿನಲ್ಲಿಲ್ಲ, ಬದಲಾಗಿ ಆ ತಾಯಂದಿರನ್ನು ಪ್ರತಿ ದಿನ ಪ್ರತಿ ಕ್ಷಣ ನೆನಪಿಸಿಕೊಂಡು ಅವರಿಗೆ ಅವರ ಮುಪ್ಪಿನ ಕಾಲದಲ್ಲಿ ಅವರನ್ನು ಎಲ್ಲಿಗೂ ಸಾಗಹಾಕದೆ, ವೃದ್ಧಾಶ್ರಮಕ್ಕೆ ಸೇರಿಸದೆ, ಅವರ ಅವಶ್ಯಕತೆಗಳನ್ನು-ಬೇಡಿಕೆಗಳನ್ನು ಪೂರೈಸಿದರೆ ಅದೇ ನಿಜವಾದ ಮದರ್‍ಸ್ ಡೇ ! ನಾವು ಪ್ರತಿನಿತ್ಯ ಟಿ.ವಿ ಚಾನೆಲ್ ಗಳಲ್ಲಿ, ಪೇಪರ್ ಗಳಲ್ಲಿ ನೋಡುತ್ತ/ಓದುತ್ತ ಇರುತ್ತೇವೆ--ಮಕ್ಕಳಿದ್ದೂ ಬೀದಿಪಾಲಾದ ಅಮ್ಮಂದಿರ ಬಗ್ಗೆ. ಯಾವ ತಾಯಿ ಕೂಡ ತನ್ನ ಮಗುವನ್ನು ಹಡೆದಾಗ ಮುಂದೆ ಅದರಿಂದ ತನ್ನ ಸ್ವಾರ್ಥಕ್ಕಾಗಿ ಏನನ್ನೋ ಬಯಸಿ ಹಡೆಯುವುದಿಲ್ಲ. ಅದು ನಿಸರ್ಗ ಸಹಜ ಕ್ರಿಯೆ. ಹಡೆದ ಮಗುವನ್ನು ಅತಿ ಪ್ರೀತಿಯಿಂದ ಲಾಲನೆ-ಪಾಲನೆ-ಪೋಷಣೆಮಾಡಿ ಬೆಳೆಸಿ, ಪ್ರಾಥಮಿಕ ವಿದ್ಯೆಯನ್ನು ತಾನೇ ಪ್ರಾರಂಭಿಸಿ ಮುನ್ನಡೆಸುವ ಅಮ್ಮನ ಪಾತ್ರ ಪ್ರತೀ ವ್ಯಕ್ತಿಯ ಬದುಕಿನಲ್ಲೂ ಬಹಳ ಅರ್ಥಗರ್ಭಿತ;ಸತ್ವಪೂರ್ಣ. ಅಮ್ಮನ ಆ ಜಾಗವನ್ನು ಯಾರೂ ತುಂಬಲು ಸಾಧ್ಯವೇ ಇಲ್ಲ.

ನಾವೆಲ್ಲ ಕೇವಲ ಶ್ರೀಸಾಮಾನ್ಯರು, ಇನ್ನು ಮಹಾತ್ಮರೆನಿಸಿದ ಶ್ರೀ ಆದಿಶಂಕರರು ತಾಯಿಗೆ ಒಬ್ಬನೇ ಮಗನಾಗಿದ್ದರು. ದೈವೇಚ್ಛೆಯಂತೆ ಸನ್ಯಾಸ ಸ್ವೀಕರಿಸಿದ ಅವರು ತಾಯಿಗೊಮ್ಮೆ ವಚನವಿತ್ತರು " ಅಮ್ಮಾ ನಿನ್ನ ಅಂತ್ಯಕಾಲಕ್ಕೆ ಎಲ್ಲಿದ್ದರೂ ಬಂದು ಸೇರುತ್ತೇನಮ್ಮ " ಎಂದು. ಹಾಗೇ ಅನೇಕ ವರ್ಷಗಳ ನಂತರ ಶಂಕರರು ಲೋಕಕಲ್ಯಾಣಾರ್ಥ ಬಹುದೂರದಲ್ಲಿರುವಾಗ ಅವರಿಗೆ ಧ್ಯಾನಾಸಕ್ತರಾಗಿ ಕುಳಿತೊಂದು ದಿನ ಅಮ್ಮನ ಅಂತ್ಯಕಾಲ ಸಮೀಪಿಸಿದ್ದು ತಿಳಿದುಬಂತು, ಕೂಡಲೇ ಕೇರಳದ ಕಾಲಟಿಗೆ ಧಾವಿಸಿದ ಶಂಕರರು ಅಮ್ಮನ ಸನಿಹಕ್ಕೆ ಬಂದರು, ಅದಾಗಲೇ ಅಮ್ಮ ಇಹದ ಬಂಧನ ಕಳೆದುಕೊಳ್ಳುವ ಸ್ಥಿತಿಗೆ ತಲುಪಿದ್ದರು, ಅಮ್ಮನ ಆತ್ಮಕ್ಕೆ ಚಿರಶಾಂತಿಯನ್ನು ತನ್ನ ತಪೋಬಲದಿಂದ ಅನುಗ್ರಹಿಸಿದ ಶಂಕರರು ಕೇವಲ ಒಬ್ಬನೇ ಮಗನಾದ ಕಾರಣ ಅಮ್ಮನ ಅಂತ್ಯಕ್ರಿಯೆಗೆ ಸ್ವತಃ ಮುಂದಾದರು. ನೆರೆಹೊರೆಯ ಯಾರೂ ಅವರ ಸಹಾಯಕ್ಕೆ ಬರಲಿಲ್ಲ. ಯಾಕೆಂದರೆ ಸನ್ಯಾಸಿಗೆ ಕಾರ್ಮಾಧಿಕಾರವಿಲ್ಲ-ಅವ್ರು ಅದನ್ನೆಲ್ಲ ಮಾಡುವ ಹಾಗಿಲ್ಲ ಎಂಬುದು. ಯಾರ ಸಹಾಯಕ್ಕಾಗಿ ಕಾಯದೇ ಶಂಕರರು ತಮ್ಮ ಪೂರ್ವಾಶ್ರಮದ ಮನೆಯ ಪಕ್ಕದಲ್ಲೇ ಅಮ್ಮನ ಅಂತ್ಯಕ್ರಿಯೆ ನಡೆಸಿದರು. ಇಹದ ಕರ್ತವ್ಯವಾದ ಅಂತ್ಯೇಷ್ಟಿಯ ವಿಧಿವಿಧಾನಗಳನ್ನು ತಮ್ಮ ದಿವ್ಯ ತಪಸ್ಸಿದ್ಧಿಯ ಫಲದಿಂದ ಅರಿತು ಪೂರೈಸಿ ಅಮ್ಮನ ಇಹದ ಋಣವನ್ನು ನೆನೆದರು. ಅಂದಿನಿಂದ ಸನ್ಯಾಸ ಧರ್ಮದಲ್ಲಿ ಹೇಗಿರಬೇಕು ಎಂಬ ಅಧ್ಯಾಯಗಳನ್ನು ಬರೆದರು. ಹೀಗಿರುವಾಗ ಅಮ್ಮನಿಗೆ ಯಾವ ರೀತಿಯಲ್ಲೂ ಉಪಕರಿಸದೇ ನಮ್ಮ ಸ್ವಾರ್ಥದಲ್ಲೇ ಮುಳುಗಿರುವ ನಾವು ಕೇವಲ ಹೀಗೊಂದು ಪಾಶ್ಚಾತ್ಯರ ಗೌಣ ಪದ್ಧತಿಯನ್ನು ಅನುಕರಿಸಿ ಅನುಸರಿಸುವುದರಿಂದ ಮದರ್‍ಸ ಡೇ ಅರ್ಥಪೂರ್ಣವೇ ? ಅನೇಕ ಗಂಡಸರು ಮದುವೆಯಾದಮೇಲೆ ಹೆಂಡತಿಯ ಮಾತನ್ನು ಕೇಳಿ ಅಮ್ಮನನ್ನು ದೂರಮಾಡುತ್ತಾರೆಂಬುದು ಸರ್ವ ವೇದ್ಯ ಸಂಗತಿ. ಇಂದಿನ ಅಮ್ಮಂದಿರಂತೂ ಹಿಂದಿನವರ ಥರ ಇಲ್ಲ, ಅವರು ಹೊಂದಿಕೊಳ್ಳುವ ಸ್ವಭಾವದವರಗಿರುತ್ತಾರೆ, ಎಲ್ಲೋ ಏನೋ ಅಭಿಪ್ರಾಯ ಭೇದ ಬಂದುದಕ್ಕೆ ಅದನ್ನು ತಿದ್ದಬೇಕೇ ಹೊರತು ಅಮ್ಮನನ್ನು ದೂರಮಾಡುವುದು,ಯಾರದೋ ಸುಪರ್ದಿಗೆ ನೋಡಿಕೊಳ್ಳಲು ಬಿಡುವುದು ತರವಲ್ಲ. ಹೀಗೇ ಆಲೋಚಿಸುತ್ತಿರುವಾಗ ಇಳಿದ ಕಣ್ಣಿನ ಧಾರೆಗೆ ಅಕ್ಷರ ರೂಪ ಕೊಡಲು ಪ್ರಯತ್ನಿಸಿ ನಿಮ್ಮ ಮುಂದಿಡುತ್ತಿದ್ದೇನೆ.......

ಅಮ್ಮಾ..ಎಂದರೇ ತೃಪ್ತಿಯು

ಅವ್ವಾ ಎನ್ನಲೇ ?
ಅಬ್ಬೇ ನಿನ್ನನೂ
ಅಮ್ಮಾ..ಎಂದರೇ ತೃಪ್ತಿಯು
ಚೆನ್ನಾದ ಬಾಳು ನೀಡಿ
ನಮ್ಮನ್ನು ಹರಸಿದೆ
ಹಣ್ಣಾದ ನಿನ್ನ ಜೀವ
ನಮಗಾಗೀ ತುಡಿದಿದೇ
ಇನ್ನೆಲ್ಲಿ ತೀರಿಸಲಮ್ಮ
ನಿನ್ನೊಡಲಿನ ಆ ಋಣ.......ಅವ್ವಾ ಎನ್ನಲೇ ?||ಪ||


ಒಂಬತ್ತು ತಿಂಗಳಷ್ಟು
ನಮ್ಮನ್ನು ಬಸಿರೊಳೂ
ಮುಂದಷ್ಟು ವರುಷ ದಿನವೂ
ಸೊಂಟ ತೋಳಿನಲೀ ಹೊತ್ತೂ
ಈ ಲೋಕದ ಬದುಕಿನ ಹೆಜ್ಜೆ
ಕಲಿಸಿದೆ ನೀ ಪ್ರತಿ ಕ್ಷಣ......ಅವ್ವಾ ಎನ್ನಲೇ ? ||೧||


ಅಂಬೆಗಾಲನಿಕ್ಕಿ ಬೆಳೆದೂ
ಅಡುತ್ತಾ ಮಡಿಲೊಳೂ
ತುಂಬ ತಪ್ಪು ಹೆಜ್ಜೆ ಇಡುತಾ
ನಡೆದಂತಾ ದಿನಗಳೂ
ಹಂಬಲಿಸಿ ಬದುಕಿನ ತೊಡಕು
ಬೆಂಬಿಡದೇ ಅರೆಕ್ಷಣ.......ಅವ್ವಾ ಎನ್ನಲೇ ? ||೨||


ಓದು ಬರಹ ಕಲಿಸುತ ದಿನವೂ
ಕಥೆ ನೀತಿ ನಿಯಮಂಗಳಾ
ಸಾಧು ಗೋಧು ಪಿರಂಗಿ ಚಾರೀ
ಕಣ್ಣಾ ಮುಚ್ಚಾಲೆ ಆಟಂಗಳಾ
ವೇದ ಸಾರವೇ ತುಂಬಿದ ಶ್ಲೋಕ
ಆದೆ ಜ್ಞಾನದ ಹರಿವಾಣ.....ಅವ್ವಾ ಎನ್ನಲೇ ? ||೩||


ಹೊತ್ತಾರೆ ಅನ್ನವನಿಕ್ಕಿ
ಸಂತಸದೀ ನೋಡುತಾ
ಒಟ್ಟಾರೆ ಕಷ್ಟಗಳನೂ
ನಮ್ಮ ನಗುವಲಿ ಕಳೆಯುತಾ
ಹೆತ್ತ ಕರುಳಿನ ಕುಡಿಯೊಳು ನಿತ್ಯ
ತುಂಬಿ ಭವಿತವ್ಯದ ಹೂರಣ.....ಅವ್ವಾ ಎನ್ನಲೇ ? ||೪||


ಬೆಳೆಬೆಳೆಯುತ ದೊಡ್ಡವರಾಗಿ
ಸೇರಿದೆವೂ ಪಟ್ಟಣ
ಕಳೆಗುಂದಿದ ನಿನ್ನಯ ಮುಖವಾ
ಮರೆಯುತ್ತಾ ಜೀವನ
ಮುಪ್ಪಡರಿದ ನಿನ್ನಯ ಬದುಕಲಿ
ಬಂದೇವೇ ಅರೆಕ್ಷಣ?......ಅವ್ವಾ ಎನ್ನಲೇ ? ||೫||