ಹೊತ್ತಿನ ಮಹತ್ವ
ಹೆತ್ತ ತಾಯಿ-ತಂದೆ ಹೊತ್ತ ಈ ಇಳೆಯನ್ನು
ಎತ್ತರಕೆ ಬೆಳೆಯಲುಪಕರಿಸಿದ ಗುರುಗಳನು
ಕತ್ತು ಬಾಗಿಸಿ ನಮಿಸು ಕಷ್ಟವೇನೇ ಇರಲಿ
ಮತ್ತೆ ಕರ್ತವ್ಯಮೆರೆ | ಜಗದಮಿತ್ರ
ಹೊತ್ತು ಮುತ್ತಿನ ಥರದ ಮೌಲ್ಯವುಳ್ಳದ್ದಿಹುದು
ತೆತ್ತು ಕಲಿತಂತಲ್ಲ ಮತ್ತೆ ಅದುಬರದು
ಬಿತ್ತ ಬೀಜವು ಬೆಳೆದು ಗಿಡವಾಗಿ ಮರವಾಗಿ
ಮತ್ತುದುರಿ ಬೀಳುವುದು | ಜಗದಮಿತ್ರ
ತುತ್ತ ತುದಿಯೇರಿ ನಿಂತಿಹೆನೆಂದು ಹಮ್ಮಿನಲಿ
ಸೊತ್ತು ವೈಭವ ನೆನೆದು ಮೆರೆಯಲದು ತರವೇ ?
ಹೊತ್ತೇ ಕುತ್ತುಗಳ ತಂದಿಡುತ ದೂಡ್ಕೆಡಹೆ
ತುತ್ತಿಗೂ ಕಷ್ಟವೈ | ಜಗದಮಿತ್ರ
ಹೊತ್ತಿನಲಿ ಕಾರ್ಯವನು ನಿಗದಿಯಲಿ ಮುಗಿಪರವಿ
ಹತ್ತಿ ಮೇಲೇರಿ ಕೆಳಗಿಳಿದು ತೋರುವನು
ಅತ್ತರೂ ಕರೆದರೂ ಬರದು ಕಳೆದಿಹ ಕಾಲ
ಮತ್ತೇಕೆ ತಡವಿನ್ನು ? ಜಗದಮಿತ್ರ
ಅತ್ತ ಮುಪ್ಪಿನಲೊಮ್ಮೆ ಮಾಡಿದಕೆ ಕಳವಳಿಸೆ
ಸುತ್ತ ಯಾರೂ ಬರರು ಬಲು ಕಠಿಣ ಸಹಿಸೆ !
ಬೆತ್ತದಾ ಹೊಡೆತವೂ ಅಷ್ಟು ನೋವಿನದಲ್ಲ
ಕತ್ತೆ ನೀನಾಗಪ್ಪೆ | ಜಗದಮಿತ್ರ
ಕತ್ತೂರಿ ಪರಿಮಳವು ಕತ್ತೆಗರಿವಾಗುವುದೇ?
ಮತ್ತದೇ ಹೊಲಸ್ಕಾಣೆ ನಗುವುದ್ಹಲ್ಕಿರಿದು
ಎತ್ತಣಿಂದೆತ್ತಣಕೂ ಸಮಯದರಿವಿನ ಬಗ್ಗೆ
ಎತ್ತಿ ಅನುಸರಿಸದನು | ಜಗದಮಿತ್ರ
ಬತ್ತಿದಾ ತೊರೆಗಳಲಿ ನೀರು ಉಕ್ಕಲೂಬಹುದು
ಕೊತ್ತಳದ ಕೋಟೆಯಲಿ ರಾಜ ದರ್ಬಾರು
ಎತ್ತರದ ಗೋಪುರಕೆ ಹತ್ತು ಸವಾಲುಗಳು
ಹೊತ್ತರಿದು ಮುನ್ನಡೆಯೋ | ಜಗದಮಿತ್ರ