ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Thursday, August 25, 2011

ಎನಗಿನ್ನು ದೊರೆತನ ಹೋಗಿ ವಿಶ್ವಾಮಿತ್ರ ಮುನಿಪರಿಗಾಗಿಹುದು !!


ಎನಗಿನ್ನು ದೊರೆತನ ಹೋಗಿ ವಿಶ್ವಾಮಿತ್ರ ಮುನಿಪರಿಗಾಗಿಹುದು !!

ಆಗಾಗ ನೆನಪಿನಾಳದಲ್ಲಿ ಕೇಳಬಯಸಿ ಕಾಡುವ ಯಕ್ಷಗಾನದ ಹಾಡುಗಳನ್ನು ಮತ್ತೆ ಮತ್ತೆ ಕೇಳಬೇಕು ಎನ್ನುವಾಗ ಕೆಲವೇ ಭಾಗವತರು ನೆನಪಾಗುತ್ತಾರೆ. ಯಕ್ಷಗಾನ ಪ್ರಸಂಗದ ಪ್ರದರ್ಶನಕ್ಕೆ ಭಾಗವತರೇ ನಿಜವಾದ ಸೂತ್ರಧಾರ ಅಲ್ಲವೇ? ಯಕ್ಷಗಾನದ ಅಭಿರುಚಿ ಇರುವ ಎಲ್ಲರಿಗೂ ಭಾಗವತರ ಸ್ಥಾನದ ಬಗ್ಗೆ ಹೊಸದಾಗಿ ಹೇಳುವ ಅವಶ್ಯಕತೆ ಇರುವುದಿಲ್ಲ. ಕಂಚಿನ ಕಂಠ ಎಂದೇ ಕರೆಯುತ್ತೇವೆ; ಅಂದಮಾತ್ರಕ್ಕೆ ಕಂಠವನ್ನು ಕಂಚು ಹಿತ್ತಾಳಿ ಇತ್ಯೇತ್ಯಾದಿ ಲೋಹಗಳಿಂದ ಮಾಡಿರುವುದಿಲ್ಲ, ಆದರೆ ಅವುಗಳಿಂದ ಹೊರಡುವ ಸ್ವರಮಾಧುರ್ಯಕ್ಕೂ ಮಾನವ ಕಂಠ ಶಾರೀರಕ್ಕೂ ತಾಳೆ ಹಾಕಿ ಹಾಗೆ ಹೇಳುವುದು ವಾಡಿಕೆ.

ಉತ್ತಮ ಭಾಗವತರು ರಂಗಸ್ಥಳಕ್ಕೆ ಕಾಲಿಟ್ಟ ಕೂಡಲೇ ಯಕ್ಷರಸಿಕರ ಚಪ್ಪಾಳೆ ಗಿಟ್ಟಿಸುವುದರಲ್ಲಿ ಸಂಶಯವಿಲ್ಲ. ಆದರೆ ಚಪ್ಪಾಳೆ ಗಿಟ್ಟಿಸಲೇಬೇಕೆಂಬ ಹರಸಾಹಸದಲ್ಲಿ ಸರ್ಕಸ್ಸಿಗೆ ತೊಡಗಿರುವ ಯುವ ಭಾಗವತರುಗಳನ್ನು ಕಂಡಾಗ ಬೇಸರವಾಗುತ್ತದೆ; ಅದು ಒಂದರ್ಥದಲ್ಲಿ ಪ್ರಶಸ್ತಿಗಳ ಹಿಂದೆ ಬಿದ್ದ ಕಲಾವಿದರನ್ನು, ಸಾಹಿತಿಗಳನ್ನು, ಸಂಗೀತಗಾರರನ್ನು ನೆನಪಿಸುತ್ತದೆ. ಹೇಗೆ ಕರ್ನಾಟಕ, ಹಿಂದೂಸ್ಥಾನಿ ಅಂತೆಲ್ಲಾ ಸಂಗೀತ ಪ್ರಾಕಾರಗಳಿವೆಯೋ ಹಾಗೇ ಯಕ್ಷಗಾನಕ್ಕೂ ಅದರದ್ದೇ ಆದ ವೈಶಿಷ್ಟ್ಯಪೂರ್ಣ ರಾಗಗಳಿವೆ. ಅವುಗಳನ್ನು ಬಿಟ್ಟು ಯಾವುದೋ ಸಂಗೀತದ ಅಥವಾ ಸುಗಮ ಸಂಗೀತದ ಗುಂಗಿನಲ್ಲಿ ಹಾಡುವ ಯಕ್ಷಗಾನದ ಹಾಡುಗಾರಿಕೆ ಯಕ್ಷಗಾನದ ಮೂಲರೂಪಕ್ಕೆ ಕುತ್ತುತರುತ್ತದೆ !

ನಾವೆಲ್ಲಾ ಚಿಕ್ಕವರಿರುವಾಗ ಯಕ್ಷಗಾನದಲ್ಲಿ ಹೊಸ್ತೋಟ, ಕಡತೋಕ, ಬಲಿಪ, ನೆಬ್ಬೂರು ಹೀಗೇ ಪ್ರಸಿದ್ಧ ಭಾಗವತರಿಗೆ ಆದ್ಯತೆ ಇತ್ತು. ಹಾಡುಗಾರಿಕೆಯಲ್ಲಿ ಅವರು ಆಳವಾಗಿ ತೊಡಗಿಕೊಂಡು ಅಲ್ಲಿನ ಮಟ್ಟುಗಳನ್ನು ಬಿಟ್ಟುಕೊಡದಂತೇ ಹಾಡುವುದು ಯಕ್ಷಗಾನದ ನಿಜವಾದ ಸಂಪ್ರದಾಯ. ಆ ನಂತರ ಕಾಳಿಂಗನಾವುಡರ ಗಾಳಿ ಜೋರಾಗಿಯೇ ಬೀಸಿತಾದರೂ ಕೆಲವೊಮ್ಮೆ ಅವರ ಹಾಡುಗಳಲ್ಲಿ ಅಕ್ಷರಶುದ್ಧತೆ ಕಾಣಬರಲಿಲ್ಲ. ಒಟ್ಟಾರೆ ಯಾವುದೋ ರಾಗಹಿಡಿದು ಕೂಗಿಬಿಟ್ಟರೆ ಅದು ಭಾಗವತಿಕೆಯಾಗುವುದಿಲ್ಲವಲ್ಲ; ಭಾಗವತಿಕೆ ಅಲ್ಲಿನ ಮೂಲ ಸಾಹಿತ್ಯಕ್ಕೆ ಚ್ಯುತಿಬರದ ರೀತಿಯಲ್ಲಿ ನಡೆದಾಗ ಮಾತ್ರ ಅದನ್ನು ಪರಿಗಣಿಸಬಹುದಾಗುತ್ತದೆ. ಬಹುಸಂಖ್ಯಾಕ ಯುವಕರು ಕಾಳಿಂಗ ನಾವುಡರಿಗೆ ಮನಸೋತರೂ ಪರಿಶುದ್ಧ ಯಕ್ಷಗಾನವನ್ನು ಬಲ್ಲವರು ಅವರ ಹಾಡುಗಳನ್ನು ಕೇಳಿದರೇ ಹೊರತು ಮನಸಾ ಅದೇ ಸರಿ ಎಂದು ಬಗೆಯಲಿಲ್ಲ.

ಯಕ್ಷಗಾನದ ಭಾಗವತಿಕೆಗೆ ದಿ|ಕೆರೆಮನೆ ಮಹಾಬಲ ಹೆಗಡೆಯವರ ಕೊಡುಗೆಯೂ ಇದೆ. ಅವರಂತಹ ಶುದ್ಧ ಸಾಹಿತ್ಯದಲ್ಲಿ ಹಾಡಿದ ಭಾಗವತರಿಲ್ಲ. ಇಂದಿಗೂ ಅವರ ಭಾಗವತಿಕೆಯಲ್ಲಿರುವ ಕೃಷ್ಣ ಸಂಧಾನ ಧ್ವನಿ ಸುರುಳಿಯನ್ನು ಇಷ್ಟವುಳ್ಳವರು ಆಲಿಸಬಹುದಾಗಿದೆ. ವೃತ್ತಿನಿರತ ಮೇಳಗಳಲ್ಲಿ ಕೆರೆಮನೆ ಮೇಳದಷ್ಟು ಶುದ್ಧ ಚೌಕಟ್ಟಿನ ಪ್ರದರ್ಶನ ನೀಡಿದ ಮೇಳ ಮತ್ತೊಂದಿಲ್ಲ. ಆದಿಯಲ್ಲಿ ಸ್ರೀವೇಷದವರಿಂದ ಗಣಪತಿ ಪೂಜೆ, ನಂತರ [ಕೋಡಂಗಿಯಿಂದ ಹಿಡಿದು] ಬಾಲಗೋಪಾಲವೇಷ, ತೆರೆಕುಣಿತ ಅಥವಾ ಒಡ್ಡೋಲಗ ಹೀಗೇ ಸಾಂಪ್ರದಾಯಿಕವಾಗಿ ಶುರುವಾಗುತ್ತಿದ್ದ ಪ್ರದರ್ಶನ ಅಂತ್ಯದಲ್ಲೂ ಗಣಪತಿ ಸ್ತುತಿ ಮತ್ತು ಸ್ತ್ರೀವೇಷದವರಿಂದ ಮಂಗಳಾರತಿಯೊಂದಿಗೆ ಮುಕ್ತಾಯಗೊಳ್ಳುತ್ತಿತ್ತು. ಪ್ರದರ್ಶನಕ್ಕೂ ಮುನ್ನ ಮತ್ತು ಪ್ರದರ್ಶನಾನಂತರ ಚೌಕಿಯಲ್ಲಿ [ ಗ್ರೀನ್ ರೂಂ]ಗಣಪತಿ ಪೂಜೆ ಕಡ್ಡಾಯವಾಗಿತ್ತು. ಇವೆಲ್ಲಾ ಯಕ್ಷಗಾನ ಸೃಜಿಸಿದ ಅಂದಿನ ಹಿರಿಯರು ನಂಬಿ ನಡೆಸಿಬಂದ ಜಾಯಮಾನ.

ಈಗೀಗ ಯಕ್ಷಗಾನ ಮೂರುಗಂಟೆಯ ಪ್ರದರ್ಶನಕ್ಕಿಳಿದಮೇಲೆ ತನ್ನ ಪಾರಂಪರಿಕ ತಿಟ್ಟುಗಳನ್ನು ಕೆಲವನ್ನು ಅದಾಗಲೇ ಬಿಟ್ಟುಕೊಟ್ಟಿದೆ! ಸಂಪ್ರದಾಯಗಳಲ್ಲಿ ಹಲವನ್ನು ಕಲಾವಿದರು ನಡೆಸುತ್ತಿಲ್ಲ--ಏಕೆಂದರೆ ಬಹುತೇಕ ಮೇಳಗಳು ಕೂಡಿ, ಕಳೆದು, ಗುಣಿಸಿ, ಭಾಗಿಸಿ ಕಟ್ಟುವ ಕಲಾವಿದರಿಂದ ಆವೃತವಾಗಿವೆ. ಇಂದಿರುವ ಕಲಾವಿದರು ನಾಳೆ ಇರುತ್ತಾರೆಂಬ ನಂಬುಗೆ ಮೇಳ ನಡೆಸುವ ಯಜಮಾನರಿಗೆ ಇರುವುದಿಲ್ಲ. ಕೆಲವು ಕಲಾವಿದರಂತೂ ಇಂದಿಲ್ಲಿ ನಾಳೆ ಮತ್ತೆಲ್ಲೋ ಹೀಗೇ ಯಾವ ಮೇಳಕ್ಕೂ ಅಂಟಿಕೊಳ್ಳದೇ ಕರೆದಲ್ಲಿಗೆ ಹೋಗಿ ಅನುಕೂಲವಾದಾಗ ಪಾತ್ರನಿರ್ವಹಿಸುವವರಾಗಿದ್ದಾರೆ !

ಭಾಗವತಿಕೆಯಲ್ಲಿ ನವನಾವೀನ್ಯ ಭಾವ ಮೂಡಿಸಬೇಕೆಂದು ಹೊರಟ ಇಂದಿನ ಬಡಗುತಿಟ್ಟಿನ ಗಾಯಕರಲ್ಲಿ ಸುಬ್ರಹ್ಮಣ್ಯ ಧಾರೇಶ್ವರರು ಸಂಗೀತವನ್ನು ಅಳವಡಿಸಿ ಯಕ್ಷಗಾನವನ್ನು ಸಂಗೀತೀಕರಣ ಮಾಡಿದ್ದರೆ ಶಬರಾಯ, ಮತ್ತಿತರ ಕೆಲವು ಜನ ಕಾಳಿಂಗ ನಾವುಡರನ್ನು ಅನುಕರಿಸುತ್ತ ಸ್ವಂತಿಕೆ ಕಳೆದುಕೊಂಡಿದ್ದಾರೆ. ಕೊಳಗಿ ಕೇಶವ ಹೆಗಡೆಯವರಿಗೆ ಕಂಠ ಚೆನ್ನಾಗಿದ್ದರೂ ಹಳೆಯ ಮಟ್ಟುಗಳು ಇನ್ನೂ ಪೂರ್ತಿ ಕರಗತವಾಗಿಲ್ಲ. ವಿದ್ವಾನ್ ಗಣಪತಿ ಭಟ್ಟರಿಗೆ ಉಚ್ಚರಣಾ ಶುದ್ಧಿ ಸಿದ್ಧಿಸಿದರೂ ಹೇಳಿಕೊಳ್ಳುವ ಅದ್ಭುತ ಗರಳು ಅವರದಾಗಿಲ್ಲ. ಇನ್ನು ತೆಂಕುತಿಟ್ಟಿನಲ್ಲಿ ಕೆಲವರಂತೂ ಏನು ಹಾಡುತ್ತಾರೆ ಎಂಬುದು ಅವರಿಗೇ ಗೊತ್ತಿಲ್ಲ! ವೈದ್ಯರನೇಕರು ತಮ್ಮ ಪ್ರಿಸ್ಕ್ರಿಪ್ಷನ್‍ನಲ್ಲಿ ಬ್ರಹ್ಮಲಿಪಿ ಬರೆಯುವುದು ನೋಡಿದ್ದೀರಲ್ಲ ಹಾಗೇ ಎಮ್ಮೆ ಉಚ್ಚೆ ಹೊಯ್ದಹಾಗೇ ಒಂದಷ್ಟು ಕೂಗುತ್ತಾರೆ; ಕೂಗುವುದು ಭಾಗವತಿಕೆಯಲ್ಲ ಎಂಬ ಕನಿಷ್ಠ ಅವಲೋಕನವೂ ಅವರಿಗಿಲ್ಲ.

ನಸೀಬು ಗಟ್ಟಿ ಇದ್ದುದರಿಂದ ನಾನಂತೂ ನೆಬ್ಬೂರರ ಹಲವು ಹಾಡುಗಳನ್ನು ಕೇಳಿದ್ದೇನೆ. ಅದೇನು ಮಟ್ಟು, ಅದೇನು ಘನತೆ, ಗಾಂಭೀರ್ಯ ಎಲ್ಲೆಲ್ಲಿ ಯಾವ್ಯಾವ ರಾಗಗಳನ್ನು ನಿಯೋಜಿಸಿ ಹಾಡಬೇಕೋ ಅದನ್ನು ಶ್ರುತಿಬದ್ಧವಾಗಿ ಸಾಹಿತ್ಯಶುದ್ಧವಾಗಿ ಹಾಡುವುದು ಅವರ ಹೆಗ್ಗಳಿಕೆಯಾಗಿದೆ. ಹಾಗಂತ ಹೇಳಿಕೊಳ್ಳುವ ಕಂಠಸಿರಿ ಅವರದಲ್ಲದಿದ್ದರೂ ಇರುವ ಮಧುರ್ಯದಲ್ಲೇ ಪ್ರೇಕ್ಷಕರನ್ನು ಶ್ರೋತೃಗಳನ್ನು ಮೋಡಿಮಾಡುವ ಗಾರುಡೀ ವಿದ್ಯೆ ಅವರಿಗೆ ತಿಳಿದಿದೆ; ಈಗ ಮುದುಕಾಗಿದ್ದಾರೆ, ಅಲ್ಲಲ್ಲಿ ಸ್ವಲ್ಪ ಸ್ವಲ್ಪ ಹಾಡುತ್ತಾರೆ. ನೆಬ್ಬೂರು ನಾರಾಯಣ ಭಾಗವತರು ರಂಗಸ್ಥಳಕ್ಕೆ ಬಂದರೆಂದರೆ ಇಡೀ ರಂಗಸ್ಥಳವನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡು ಹಿತಮಿತವಾದ ಹಾಡುಗಾರಿಕೆಯಿಂದ ಜನರನ್ನೂ ಕಲಾವಿದರನ್ನೂ ಸೆಳೆದಿದ್ದು ಅತಿಶಯೋಕ್ತಿಯಲ್ಲ.

ಹಿಂದೆಲ್ಲಾ ಭಾಗವತರಾಗಲೂ ಕೆಲವು ಅರ್ಹತೆಗಳನ್ನು ನೋಡುತ್ತಿದ್ದರು. ಇಂದು ಅದು ಮಾಯವಾಗಿದೆ. ಹಿಂದೆ ಪೌರಾಣಿಕ ಪ್ರಸಂಗಗಳು ಮಾತ್ರ ಇದ್ದವು; ಇಂದು ಸಾಮಾಜಿಕ ಪ್ರಸಂಗಗಳೂ ಕಾಲಿಟ್ಟಿವೆ-ವಿಜೃಂಭಿಸುತ್ತಿವೆ!! ಸಾಮಾಜಿಕ ಸಿನಿಮಾಗಳಂತೇ ಸಾಮಾಜಿಕ ಯಕ್ಷಗಾನ ಪ್ರಸಂಗಗಳಲ್ಲಿ ಕೇವಲ ಲೌಕಿಕ ವ್ಯವಹಾರಗಳ ದಾಖಲೆ ಕಾಣುತ್ತದೆಯೇ ಹೊರತು ನೀತಿಪಾಠಗಳು ಆದರ್ಶಗಳು ಕಾಣುವುದಿಲ್ಲ. ಕಮರ್ಷಿಯಲ್ ಸಿನಿಮಾಗಳು ಅಥವಾ ವಾಣಿಜ್ಯ ಚಲನಚಿತ್ರಗಳು ಎಂದು ಯಾವುದನ್ನು ಕರೆಯುತ್ತೇವೇಯೋ ಅದೇ ರೀತಿ ಕಮರ್ಷಿಯಲ್ ಪ್ರಸಂಗಗಳೂ ಇವೆ-ಅವು ಜಾಸ್ತಿ ಗೇಟ್ ಕಲೆಕ್ಷನ್ ಕೊಡುತ್ತವೆ ! ಈ ಕಾರಣಕ್ಕಾಗಿಯೇ ಕೆಲವು ಮೇಳಗಳು ವರ್ಷಾವರ್ಷಾ ಹೊಸ ಹೊಸ ಸಾಮಾಜಿಕ ಪ್ರಸಂಗಗಳನ್ನು ಅಳವಡಿಸುತ್ತಿದ್ದಾರೆ. ಬಸವಣ್ಣನ ಜೀವನ ಚರಿತ್ರೆಯನ್ನೂ ಯಕ್ಷಗಾನದಲ್ಲಿ ಕಂಡು ಸಖೇದಾಶ್ಚರ್ಯವಾಯ್ತು! ಎಲ್ಲಿಯ ಬಸವಣ್ಣ ಎಲ್ಲಿಯ ಯಕ್ಷಗಾನ !!

ಬಡಗುತಿಟ್ಟಿನಲ್ಲೂ ಬಡಾಬಡಗು ಎಂಬ ಶುದ್ಧ ಉತ್ತರಕನ್ನಡದ ತಿಟ್ಟೊಂದಿದೆ. ಆ ತಿಟ್ಟಿನಲ್ಲಿ ಕೆಲವು ವಿಶಿಷ್ಟ ರಾಗಗಳು ಮತ್ತು ಕುಣಿತಗಳು ಹಿಂದೆ ನಿಯೋಜಿತವಾಗಿವೆ. ಅಂಥದ್ದರಲ್ಲಿ ಸಭಾಹಿತ ಬಿಡ್ತಗೆ ಎನ್ನುವ ಒಂದು ತಿಟ್ಟು ಕೂಡ ತುಂಬಾ ಪ್ರಸಿದ್ಧ. ಈಗಿನ ಅವಸರದ ಕಾಲದಲ್ಲಿ ನಿಧಾನಗತಿಯಲ್ಲಿ ನಡೆಸುವ ಸಭಾಹಿತ ಬಿಡ್ತಗೆಗಳೆಲ್ಲಾ ಮಾಯವಾಗುವ ಹಂತದಲ್ಲಿವೆ! ಹಾಡುವ ಭಾಗವತನಿಗೆ ಸಂಗೀತದ ರಾಗಜ್ಞಾನವಿರಬೇಕು, ಸಾಹಿತ್ಯದ ಸ್ವಾಧ್ಯಾಯವಿರಬೇಕು. ಹಾಗಂತ ಯಕ್ಷಗಾನ ಈಗಿರುವ ಎರಡೂ ಸ್ವದೇಶೀ ಸಂಗೀತ ಪ್ರಾಕಾರಗಳಿಗಿಂತ ಭಿನ್ನವಾಗಿದೆ; ತುಸು ದೂರನಿಂತು ತನ್ನ ತನವನ್ನು ಮೆರೆಯುತ್ತದೆ! ಮೋಹನ, ಕಾಂಬೋಧಿ, ಕಲ್ಯಾಣಿ ಹೀಗೇ ಅನೇಕ ರಾಗಗಳನ್ನೂ ಒಳಗೊಂಡಿರುವ ಯಕ್ಷಗಾನ ತನ್ನದೇ ಆದ ಕೆಲವು ರಾಗಗಳನ್ನೂ ಹೊಂದಿದೆ-ಅವುಗಳ ಬಗ್ಗೆ ಅಧ್ಯಯನ ಇನ್ನೂ ನಡೆಯಬೇಕಿದೆ.

ಕೇವಲ ಒಂದು ಮದ್ದಳೆ[ಮೃದಂಗ], ಒಂದು ತಾಳದ ಜೊತೆ, ಒಂದು ಹಾರ್ಮೋನಿಯಂ ಮತ್ತು ಒಂದು ಚಂಡೆ ಇವಿಷ್ಟೇ ಸಂಗೀತ ಪರಿಕರಗಳು ೨೧-೨೨ನೇ ಶತಮಾನದಲ್ಲೂ ಎಲ್ಲಾ ಸಂಗೀತೋಪಕರಣಗಳಿಗಿಂತಾ ಚಂದವಾದ ಹಿಮ್ಮೇಳವನ್ನು ಒದಗಿಸುವುದೂ ಅಲ್ಲದೇ ಗೊತ್ತಿರದ ಯಾವುದೇ ಪ್ರೇಕ್ಷಕನನ್ನೂ ಸೆರೆಹಿಡಿದಿಡಬಲ್ಲ ಮಾಂತ್ರಿಕ ಶಕ್ತಿ ಹಿಮ್ಮೇಳಕ್ಕಿದೆ! ತಾಳದಲ್ಲೇ ಗೆಜ್ಜೆಯ ಉಲಿಯನ್ನು ಕೇಳಬಹುದಾದರೆ ಉತ್ತಮ ಕಂಠ ಮತ್ತು ತಾಳದ ಗಚ್ಚು ಇರುವ ಭಾಗವತ ಹಾಡಹೊರಟರೆ ನಿಜಕ್ಕೂ ಅದು ಭುವಿಯ ಸ್ವರ್ಗ ಎಂದರೆ ತಪ್ಪಲ್ಲ.

ನಮ್ಮ ಇಂದಿನ ಭಾಗವತರುಗಳು ತಮ್ಮನ್ನೂ ತಮ್ಮ ಹಾಡುಗಾರಿಕೆಯನ್ನೂ ಅವಲೋಕಿಸಿಕೊಳ್ಳಬೇಕಾದ ಕಾಲ ಬಂದಿದೆ. ಹೇಗೆ ಭಾಷೆಯೊಂದನ್ನು ಹಿಂದಿನ ಹಿರಿಯರು ಮುಂದಿನ ತಲೆಮಾರಿಗೆ ಜವಾಬ್ದಾರಿಯುತವಾಗಿ ತಲುಪಿಸುತ್ತಾರೋ ಹಾಗೇ ಯಕ್ಷಗಾನದ ಶುದ್ಧ, ಪಾರಂಪರಿಕ ಅಥವಾ ಸಂಪ್ರದಾಯ ಬದ್ಧ ಭಾಗವತಿಕೆಯನ್ನು ಮುಂದಿನ ಪೀಳಿಗೆಗೆ ಕಲಿಸುವಾಗ ಎಲ್ಲೂ ಅಪಚಾರವಾಗದಂತೇ, ಎಲ್ಲೂ ಮೂಲ ಕಲೆಗೆ ದೋಷ ತಟ್ಟದಂತೇ, ಎಲ್ಲೂ ಇರುವ ರಾಗಗಳ ಚಹರೆ ಬದಲಿಸಿ ಸಂಗೀತವನ್ನು ಅಳವಡಿಸದಂತೇ ಕಲಿಸುವುದು ಅಗತ್ಯವಾಗಿದೆ. ಯಾವುದೋ ಸಂಗೀತದ ಆಮಿಷಕ್ಕೆ, ಯಾವುದೋ ನವಜಾಯಮಾನದ ಮೋಡಿಗೆ ಒಳಗಾಗಿ ಮೂಲವನ್ನು ಬಲಿಹಾಕುವ ಪ್ರವೃತ್ತಿ ಸರಿಯಲ್ಲ ಎಂಬುದನ್ನು ಸ್ಪಷ್ಟಪಡಿಸಲು ಈ ಲೇಖನ ಬರೆದೆ. ಧನ್ಯವಾದಗಳೊಂದಿಗೆ ಇಗೋ ಇಲ್ಲಿವೆ ಯಕ್ಷಗಾನದ ಒಂದೆರಡು ಶಾಸ್ತ್ರೀಯ ಹಾಡುಗಳು ತಮ್ಮ ಆಸ್ವಾದನೆಗೆ :