ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Sunday, May 29, 2011

ದೊಡ್ಡಮ್ಮ ಬರಲೀ..... ಹೋಯ್ ದೊಡ್ಡಮ್ಮ ಬರಲೀ.....

ದೊಡ್ಡಮ್ಮ ಬರಲೀ..... ಹೋಯ್ ದೊಡ್ಡಮ್ಮ ಬರಲೀ.....


ಬೇಸಿಗೆಯನ್ನು ಹಳ್ಳಿಗಳಲ್ಲಿ ಕಳೆಯುವುದೇ ಒಂದು ಮಜಾ. ಅಲ್ಲಿನ ಹಲವು ಸಂಗತಿಗಳು ನೆನಪಾದಾಗೆಲ್ಲಾ ನಗುತರಿಸುವುದರಜೊತೆಜೊತೆಗೇ ಹಳ್ಳಿಯ ಜನರ ನಿಸ್ಪೃಹ ಮನೋಭಾವವನ್ನೂ ಮುಗ್ಧತೆಯನ್ನೂ ಮನಸ್ಸಿನ ಕೆರೆಯಾಳದಿಂದ ಹೊರಗೆಳೆದುತರುತ್ತವೆ. ಅಲ್ಲಿ ಹಲವಾರು ವಿಶಿಷ್ಟ ಸಂಗತಿಗಳೂ ಘಟನೆಗಳೂ ಮತ್ತೆ ಪುನರ್ಸೃಷ್ಟಿಗೊಂಡು ಆಯಾ ವ್ಯಕ್ತಿಗಳು ಆಯಾಯಮೂಲರೂಪದಲ್ಲೇ ಹಾಯಾಗಿ ಮಾತನಾಡಸಿಗುತ್ತಾರೆ.

ಕಾಡ್ಯನ ಕುಣಿತದ ನಂತರ ನಮ್ಮ ಹಳ್ಳಿ ಬೇಸಿಗೆಯನ್ನು ಕರೆದು ಚಿಗಿತುಕೊಳ್ಳುತ್ತಿತ್ತು. ಹಾಂ .. ಕಾಡ್ಯನ ಕುಣಿತವೆಂದರೆ ಇದು ಬರಿದೇನಾಕಾರು ಜನ ಕೂಲಿ ಕೆಲಸದವರು ಚಳಿಗಾಲ ಮುಗಿಯುವ ಹಂತದಲ್ಲಿ ಗುಮಟೆ ಬಾರಿಸಿಕೊಂಡು ಕುಣಿಯುವುದು. ಅವರಿಗೆತಿಳಿದಿರುವ ಯಾವುದೋ ಒಂದೆರಡು ಜಾನಪದ ಗೀತೆಗಳನ್ನು ಹಾಡಿಕೊಂಡು ಕೆಲವರು ಹೆಜ್ಜೆಹಾಕಿದರೆ ಒಬ್ಬಾತ ಗುಮಟೆ[ವಿಶಿಷ್ಟಆಕಾರದ ಮಡಿಕೆಯ ಬಾಯಿಗೆ ಉಡದ ಚರ್ಮವನ್ನು ಕಟ್ಟಿ ತಯಾರಿಸಿದ ಒಂದು ವಾದ್ಯ]ಬಾರಿಸುತ್ತಿದ್ದ. ಆಗಾಗ ಅಲ್ಲಲ್ಲಿ ಸಿನಿಮಾಹಾಡುಗಳ ತುಣುಕುಗಳನ್ನೂ ತಮಾಷೆಗೆ ಸೇರಿಸಿ ಹಾಡುವ ಪ್ರಾಯದ ಹುಡುಗರ ಗುಂಪೂ ಇರುತ್ತಿತ್ತು. ತಲೆಗೆ ಟವೆಲ್ ಸುತ್ತಿಕೊಂಡುಕುಣಿದು ದಣಿದ ಹುಡುಗರು ಅಕ್ಕಿ, ಭತ್ತ, ತೆಂಗಿನಕಾಯಿ, ಕಾಂಚಾಣ ವಗೈರೆ ಕೊಡುವುದನ್ನು ತೆಗೆದುಕೊಂಡು ಹೋಗುತ್ತಿದ್ದರು. ಇದುಮನೆಮನೆಗೂ ಸಾಗಿ ನಡೆಸುವ ಸಂತಸದ ಕುಣಿತವಾಗಿತ್ತು.

ಬಯಲು ಸೀಮೆಯ ಪ್ರಭಾವದಿಂದ ಆಗಾಗ ಸಂಗ್ಯಾ ಬಾಳ್ಯಾ ಆಡುವ ಹರಿಜನರಿದ್ದರು. ಅದು ಎಲ್ಲರ ಮನೆಗಳೆದುರು ಆಡುವಆಟವಾಗಿರಲಿಲ್ಲ. ಹರಿಜನರು ಅವರ ಹಟ್ಟಿಯ ಗೊತ್ತಾದ ಜಾಗವೊಂದರಲ್ಲಿ ಸಣ್ಣ ವೇದಿಕೆ ನಿರ್ಮಿಸಿ ಪೂರ್ಣರಾತ್ರಿ ಚಿಮಣಿಎಣ್ಣೆಯಗ್ಯಾಸ್ ಲೈಟ್ ಬೆಳಕಿನಲ್ಲಿ ಸಂಗ್ಯಾಬಾಳ್ಯಾ ನಡೆಸುತ್ತಿದ್ದರು. ಅಲ್ಲಿ ಎಷ್ಟು ಜನರಿಗೆ ಅದರ ಕಥೆ ಗೊತ್ತಿತ್ತು ಎನ್ನುವುದು ನಮಗಂತೂಅರಿವಿಗಿಲ್ಲ. ಅಸಲಿಗೆ ಸಂಗ್ಯಾಬಾಳ್ಯಾ ಕಥೆ ಸಿನಿಮಾ ಆದಾಗಲೇ ನಮಗೂ ಸರಿಯಾಗಿ ಅರ್ಥವಾಗಿದ್ದು.

" ಇದು ಸಂಗ್ಯನ ಮುಂಡಾಸು ಅಲ್ವನೇ ಕಣೆ ಗಂಗಣೆ .........
ಇದು ಸಂಗ್ಯನ ಮುಂಡಾಸು ಅಲ್ವನೇ ಕಣೆ ಗಂಗಣೆ .........
ಇದು ಸಂಗ್ಯನ ಮುಂಡಾಸು ಅಲ್ವನೇ ಕಣೆ ಗಂಗಣೆ .........
..................................................."

ದೂರದಲ್ಲಿ ನಿಂತು ನಾವು ನೋಡಿದರೆ ಆಗಾಗ ಅಲ್ಪಸ್ವಲ್ಪ ಇಂತಹ ಹಾಡುಗಳು ಕೇಳುತ್ತಿದ್ದವು..ಆದರೂ ಅರ್ಥಮತ್ರಅಸ್ಪಷ್ಟವಾಗಿರುತ್ತಿತ್ತು. ಏನೇ ಇರಲಿ ಬೆಟ್ಟದ ತಳದಲ್ಲಿ ಅವರು ಸ್ವಸಂತೋಷಕ್ಕೆ ನಡೆಸುವ ಕಾರ್ಯಕ್ರಮ ಅದಾಗಿದ್ದುದರಿಂದನಮಗೆಲ್ಲಾ ಅರ್ಥವಾಯ್ತೋ ಬಿಡ್ತೋ ಅದು ಮುಖ್ಯವಲ್ಲ. ಮಜವೆಂದರೆ ಅಂತಹ ಸಂದರ್ಭದಲ್ಲಿ ತಮ್ಮ ಬದುಕಿನ ನೋವುದುಃಖ-ದುಮ್ಮಾನಗಳನ್ನು ಅವರೆಲ್ಲಾ ಪರಸ್ಪರ ಹಂಚಿಕೊಂಡು ಮಾತನಾಡುತ್ತಾ ಕಳೆಯುವ ಆ ರಾತ್ರಿಗಳಲ್ಲಿ ಅವರೇತಯಾರಿಸಿಕೊಂಡ ಸಾರಾಯಿ ಸಮಾರಾಧನೆಯೂ ನಡೆಯುತ್ತಿತ್ತು. ಕುಡಿದು ಚಿತ್ತಾದ ಕೆಲವು ಜನ ತಮ್ಮ ಸರದಿ ಬಂದಾಗ ಏನೇನೋಹಾಡುವುದೂ ಇರುತ್ತಿತ್ತು. ಬೆಳ್ಯನ ಗಣಪ, ಜಟ್ಟಿ, ಕ್ಯಾಸ, ಬಕ್ಕ, ನಾಗು, ಸಂಕ್ರು, ಮಂಜು, ಸಾತ ಇವೇ ಮೊದಲಾದ ಹರಿಜನಅತಿರಥ ಮಹಾರಥಿಗಳು ಸಂಗ್ಯಾಬಾಳ್ಯಾದಲ್ಲಿ ಹಾಡಿ ಕುಣಿಯುವುದನ್ನು ಅವರ ಹೆಂಗಸರು ಕಣ್ಣೆವೆಮುಚ್ಚದೇ ನೋಡುವಾಗಅವರುಗಳಿಗೆ ಅದಕ್ಕಿಂತಾ ಬೇರೇ ಮಾನ ಸನ್ಮಾನ ಬೇಕಾಗಿರಲಿಲ್ಲ. ವಾಡಿಕೆಯಲ್ಲಿ " ಸಿಂಗಿಬಾಳ " ಎಂದು ಅವರದನ್ನುಹೆಸರಿಸುತ್ತಿದ್ದರು. ಸಿಂಗಿಬಾಳದ ಮರುದಿನ ಎಲ್ಲರಿಗೂ ಗಾಢನಿದ್ರೆ, ವಿಶ್ರಾಂತಿ. ಆ ದಿನ ಎಲ್ಲೂ ಕೆಲಸಕ್ಕೆ ಹೋಗುವುದುಸಾಧ್ಯವಾಗುತ್ತಿರಲಿಲ್ಲ.

ಇನ್ನು ಹೋಳಿ ಹುಣ್ಣಿವೆಗೂ ಮುಂಚೆ ೧೦-೧೨ ದಿನಗಳಕಾಲ ಸುಗ್ಗಿ ಕುಣಿತ ನಡೆಯುತ್ತಿತ್ತು. ಇದಕ್ಕೂ ಪೂರ್ವಭಾವಿಯಾಗಿತಿಂಗಳುಗಟ್ಟಲೆ ಅವರು ಆ ಕುರಿತು ದಿನಾ ಸಂಜೆ ತಾಲೀಮು ನಡೆಸುತ್ತಿದ್ದರು. ಹರೆಯದ ಹುಡುಗರು ನಾ ಮುಂದು ತಾ ಮುಂದುಎಂದು ಸುಗ್ಗಿ ಕಟ್ಟಲು ಹವಣಿಸುತ್ತಿದ್ದರು. ಹರಿಜನರು ಮತ್ತು ನಾಮಧಾರಿ ಜನಾಂಗದವರೂ ಕೂಡ ಸುಗ್ಗಿ ಕುಣಿತದಲ್ಲಿಪಾಲ್ಗೊಳ್ಳುತ್ತಿದ್ದರು. ಮರದಲ್ಲಿ ಸಿಗುವ ಬೆಂಡಿನ ಸಹಾಯದಿಂದ ಗಿಳಿಗಳು, ಹಕ್ಕಿಗಳು ಮತ್ತು ಇನ್ನಿತರ ಕೆಲವು ಚಿಕ್ಕ ಆಕೃತಿಗಳುಳ್ಳತುರಾಯಿ ತಯಾರಾಗುತ್ತಿತ್ತು. ಗುಡಿಗಾರ ಜನಾಂಗ ಮುಂಗಡ ತೆಗೆದುಕೊಂಡು ಇದನ್ನು ತಯಾರಿಸಿ ಮಾರುತ್ತಿತ್ತು. ಬಣ್ಣ ಬಣ್ಣದಬೇಡಗೆಗಳನ್ನೂ ಚಿತ್ತಾರಗಳನ್ನೂ ಹೊದಿಸಿದ ಕಡ್ಡಿಗಳ ಪುಂಜವನ್ನು ತುರಾಯಿ ಎನ್ನುತ್ತಿದ್ದರು. ಮುಂಡಾಸಿನಮೇಲೆ ಅದನ್ನು ಕಟ್ಟಿಹಿಂದಲೆ ಮಲ್ಲಿಗೆಯಂತಹ [ಬೆಂಡಿನಿಂದ ತಯಾರಿಸಿದ] ಹೂವುಗಳ ಮಾಲೆಗಳನ್ನು ಇಳಿಯಬಿಡುತ್ತಿದ್ದರು. ಬಿಳಿಯ ಪೈಜಾಮ ಮತ್ತುಹಳದಿ ಅಥವಾ ಬಿಳಿಯ ತುಂಬುತೋಳಂಗಿ ಧರಿಸಿ ಮದುಮಗನಿಗೆ ಶಲ್ಯವನ್ನು ಕತ್ತರೀ ಆಕಾರದಲ್ಲಿ ಹೊದಿಸಿದಂತೇ ಧರಿಸುತ್ತಿದ್ದರು. ಕಣ್ಣಿಗೆ ಕಾಡಿಗೆ ಮತ್ತು ಹಣೆಗೆ ಕೆಂಪು-ಹಳದಿ ನಾಮಗಳನ್ನು ಧರಿಸುತ್ತಿದ್ದರು. ಸಂಪೂರ್ಣ ತಯಾರಾಗಿ ನಿಂತ ಸುಗ್ಗಿ ವೇಷದಹುಡುಗನನ್ನು ಆ ಯಾ ಜನಾಂಗದ ಹರೆಯದ ಹುಡುಗಿಯರು ನೋಡಿ ಸಂಭ್ರಮಿಸುವಂತೇ ಕಾಣುತ್ತಿದ್ದರು. ಬಹುಶಃ ಹುಡುಗರಿಗೂಇದೇ ಒಂದು ಅನಿಸಿಕೆ ಒಡಲಾಳದಲ್ಲಿದ್ದು ಅವರು ಸುಗ್ಗಿ ಕಟ್ಟುವಲ್ಲಿ ಹಾತೊರೆಯುತ್ತಿದ್ದರೋ ಏನೋ.

ದೇವರ ಹಾಡುಗಳಲ್ಲದೇ ಜಾನಪದ ಹಾಡುಗಳೂ ಮತ್ತು ಕೆಲವು ಭಾವಗೀತೆಗಳಿಗೂ ಅವರು ತಾಳಹಾಕಿ ಕುಣಿಯುತ್ತಿದ್ದರು. ಸುಗ್ಗಿಕಟ್ಟಿದವರು ಕೋಲಾಟವನ್ನೂ ಆಡುತ್ತಿದ್ದರು. ಗುಮಟೆ, ಜಾಗಟೆ, ತಾಳ, ತಾಸ್ಮಾರು[ ಅಗಲದ ಚಂಡೆಯಂತಹ ಒಂದುಚರ್ಮವಾದ್ಯ] ಮೊದಲಾದ ವಾದ್ಯಗಳನ್ನು ಇಲ್ಲಿ ಬಳಸಲಾಗುತ್ತಿತ್ತು. ಸುಗ್ಗಿಮನೆ ಎಂದು ಅವರವರ ಮನೆಗಳಲ್ಲಿ ಒಂದು ಮನೆಯನ್ನುಆ ದಿನಗಳಲ್ಲಿ ಅದಕ್ಕೇ ಮೀಸಲಿಟ್ಟು ಸುಗ್ಗಿ ಕಟ್ಟಿದ ಜನರೆಲ್ಲಾ ಅಲ್ಲೇ ವೃತನಿಷ್ಠರಂತೇ ಇರುತ್ತಿದ್ದರು. ಬೆಳಿಗ್ಗೆ ೯ ಗಂಟೆಗೆ ಸಾಮೂಹಿಕತಿಂಡಿತಿಂದು ಮತ್ತು ಸುಗ್ಗಿಮನೆಯ ದೇವರಲ್ಲಿ ಪ್ರಾರ್ಥಿಸಿ ಹೊರಟರೆ ಊರು ಪರವೂರು ಅಂತ ಮನೆಮನೆಗೆ ತಿರುಗಿ ಕುಣಿಯುತ್ತಾಕಾಯಿ-ಹಣ ಪಡೆದು ತೆರಳುತ್ತಿದ್ದರು. ಹಂದಿ ಕುಣಿತ, ನವಿಲು ಕುಣಿತ, ಕಾಡುಪ್ರಾಣಿಗಳ ಕೂಗಿನ ಅನುಕರಣೆ ಇವೇ ಮೊದಲಾದಹಲವು ಉಪಜೋಡಣೆಗಳು ಇರುತ್ತಿದ್ದವು. ಆಗಾಗ ಚೆನ್ನಾಗಿ ಕುಣಿಯುವ ಎರಡು ಪಂಗಡಗಳ ನಡುವೆ ಸ್ಪರ್ಧೆಯೂ ಇರುತ್ತಿತ್ತು. ಮಕರಗುಮ್ಮ ಅಥವಾ ಮಕ್ಕಳಗುಮ್ಮ ಎನ್ನುವ ಮುಖವಾಡ ಧರಿಸಿದ ವ್ಯಕ್ತಿಯೊಬ್ಬ ಮಾತುಬಾರದವರ ರೀತಿ ನಟಿಸುತ್ತಾ ಬಂದೂಕುಹಿಡಿಸು ಮಕ್ಕಳನ್ನು ಅಟ್ಟಿಸುವಂತೇ ಮಾಡುವುದು, ಕುಣಿತಬಾರದವರ ರೀತಿ ಹೇಗ್ಹೇಗೋ ಕುಣಿದು ಅಡ್ಡಾದಿಡ್ಡಿ ಓಡಾಡಿ ಜನರನ್ನುರಂಜಿಸುವುದು ಮಾಡುತ್ತಿದ್ದ. ಎಳೆಯ ಮಕ್ಕಳ ಕಣ್ಣು ಮಕರಗುಮ್ಮನ ಮೇಲೇ ನೆಟ್ಟಿರುತ್ತಿತ್ತು.

" ಮೋಹನ್ನ ಮುರಲೀ ವಾಲರೇ ಸಖಿ ಮೋಹನ್ನ ಮುರಲೀ ವಾಲರೆ....." ಏಕಕಾಲಕ್ಕೆ ಮಿಡಿಯುವ ಗುಮಟೆ, ತಾಳ, ಜಾಗಟೆ, ತಾಸ್ಮಾರುಗಳ ಹದವಾದ ಶಬ್ದಕ್ಕೆ ಕಾಲಿಗೆ ಕಟ್ಟಿದ ಗೆಜ್ಜೆಯ ಸದ್ದು ಮೇಳೈಸಿ ಇಡೀವಾತಾವರಣ ಸುಗ್ಗಿಯ ಹಿಗ್ಗಿನಿಂದತುಂಬಿಹೋಗುತ್ತಿತ್ತು. ಊರಜನ ಒಂದೆರಡು ಹಾಡುಗಳನ್ನು ಹೆಚ್ಚಿಗೆ ಕುಣಿಸಿ ಆಮೇಲೆ ಯಥಾಯೋಗ್ಯ ಪುರಸ್ಕಾರಗಳನ್ನುನೀಡುತ್ತಿದ್ದರು. ಕಲಸಿದ ಅವಲಕ್ಕಿ-ಬೆಲ್ಲ-ನೀರು, ಚಹ ಇತ್ಯಾದಿ ಉಪಚಾರವಗುತ್ತಿತ್ತು. ಮತ್ತೆ ಕುಣಿದ ಮನೆಗೆ ಮುಂದಿನ ವರುಷಬರುವುದಾಗಿ ಶುಭಕೋರಿ ಸುಗ್ಗಿ ಮುಂದಿನಮನೆಗೆ ಸಾಗುತ್ತಿತ್ತು. ಹಾದಿಯಲ್ಲಿ ಸಿಗುವ ದೇವಸ್ಥಾನಗಳ ಎದುರಲ್ಲಿ ಕನಿಷ್ಠ ೧೫-೨೦ನಿಮಿಷವಾದರೂ ಕುಣಿಯುತ್ತಾ ದೇವರನ್ನು ಸಂತೋಷಪಡಿಸುತ್ತಿದ್ದರು. ಹೋಳಿ ಹುಣ್ಣಿಮೆಯದಿನ ಸುಗ್ಗಿಮನೆಯಲ್ಲಿ ವಿಶೇಷಪೂಜೆಯಾಗಿ ಆ ರಾತ್ರಿ ಅಲ್ಲೇ ಎದುರಲ್ಲಿ ನಿಲ್ಲಿಸಿದ್ದ [ಬೇಡದ/ಉಪಯೋಗಿಸಿಬಿಟ್ಟ ಮರದ ವಸ್ತುಗಳು ಇತ್ಯಾದಿ ರಾಶಿಹಾಕಿ ಪೇರಿಸಿತಯಾರಿಸಿದ ಒಂದು ಆಕಾರವನ್ನು ಕಾಮನೆಂದು ಕರೆಯುತ್ತಿದ್ದರು]ಕಾಮನ ದಹನ ನಡೆಯುತ್ತಿತ್ತು. ಅಲ್ಲಿಗೆ ಆ ಸಲದ ಸುಗ್ಗಿಯಕುಣಿತದ ದಿನಗಳು ಮುಗಿದವು ಅಂತ ಲೆಕ್ಕ. ಬಂದ ಗಳಿಕೆಯನ್ನು ಎಲ್ಲರೂ ಹಂಚಿಕೊಂಡು, ಸಾಮೂಹಿಕವಾಗಿ ಒಂದು ಔತಣವನ್ನೂನಡೆಸಿ ಆಮೇಲೆ ತಂತಮ್ಮ ಮನೆಗಳಿಗೆ ತೆರಳುತ್ತಿದ್ದರು. ಬಳಸಿದ ಪರಿಕರಗಳು ಅವರವರ ಮನೆಗಳಲ್ಲಿ ಗೋಡೆಯಮೇಲೆ ಜಾಗಪಡೆದು ಅವರಿಗೆ ಸುಗ್ಗಿನ ಹಿಗ್ಗಿನ ಆನಂದವನ್ನು ತಂದುಕೊಡುತ್ತಿದ್ದವು.

ಕಾಮದಹನವಾದ ಮಾರನೇದಿನ ’ದುಮ್ಸಾಲೆ’ ಕಾರ್ಯಕ್ರಮ. ಮತ್ತೆ ಸುಗ್ಗಿ ಕಟ್ಟಿದ ಜನರೊಂದಿಗೆ ಸಹಕರಿಸಿದ ಕೆಲಜನಸೇರಿಕೊಂಡು ಮೃದಂಗ ತಾಳ ಬಡಿಯುತ್ತಾ ಮನೆಮನೆಗೆ ಬರುತ್ತಿದ್ದರು.

" ಕಾಮ್ನೋ ಭೀಮ್ನೋ ಕಾಮ್ನಸುಟ್ಟ ಬೆಳಗಾಗೆ ಕಾಯಿ-ಬೆಲ್ಲ ತಿನ್ಬೇಕೂ ದುಮ್ಸಾಲ್ಯೋ ....
ಕಾಯ್ ಕೊಡಿ-ದುಡ್ ಕೊಡಿ ದುಮ್ಸಾಲ್ಯೋ ......ವರ್ಸ್ಕೊಂದ್ ಹಬ್ಬ ದುಮ್ಸಾಲ್ಯೋ "

ಪ್ರತೀ ಮನೆಯಲ್ಲೂ ಕುಣಿದು ಮತ್ತೆ ಕಾಯಿ-ಹಣವನ್ನು ಪಡೆದು ತೆರಳುತ್ತಿದ್ದರು. ಅಲ್ಲಿಗೆ ಆ ವರ್ಷದ ಕುಣಿತದ ಹಬ್ಬಗಳುಮುಗಿದಹಾಗೇ.


ಬೇಸಿಗೆಯಲ್ಲಿ ಜಾತ್ರೆ, ವನಭೋಜನ ಅಂತ ದೇವರುಗಳೆಲ್ಲಾ ಹೊರಟುಬಿಡುತ್ತಿದ್ದವು. ದೇವರಲ್ಲಿ ಎರಡು ಗುಂಪು. ಕೆಲವು ಆಗಮಶಾಸ್ತ್ರ ರೀತ್ಯಾ ಪೂಜೆಗೊಳ್ಳುವ ಸಾತ್ವಿಕ ದೇವರುಗಳಾದರೆ ಕೆಲವು ಹಾಗೇ ಮನಸೋ ಇಚ್ಛೆ ಬೇಕುಬೇಕಾದ ಪೂಜೆಗೊಳ್ಳುವಉಗ್ರದೇವತೆಗಳು. ಈ ಉಗ್ರದೇವತೆಗಳು ಪಾರ್ವತಿಯ ಪ್ರತಿರೂಪಗಳಾಗಿದ್ದು ಅವುಗಳಿಗೆ ಅಲ್ಲಲ್ಲಿ ಕುರಿ-ಕೋಳಿಗಳ ಬಲಿಯೂನಡೆಯುತ್ತಿತ್ತು. ಸಾತ್ವಿಕ ದೇವರುಗಳಿಗೆ ಕುಂಬಳಕಾಯಿ-ಅನ್ನ-ತೆಂಗಿನಕಾಯಿ ಇತ್ಯಾದಿ ಸಾತ್ವಿಕಬಲಿ ಮತ್ತು ಸಾತ್ವಿಕಪೂಜೆಶಾಸ್ತ್ರೋಕ್ತವಾಗಿ ನಡೆಯುತ್ತಿತ್ತು. ಕೆಲವು ದೇವರುಗಳಿಗೆ ಹಲವಾರು ಊರುಗಳನ್ನು ಸುತ್ತುವ ಪರಿಪಾಟವಿತ್ತು. ಪಲ್ಲಕ್ಕಿಯಲ್ಲಿ ಪವಡಿಸಿಹೊರಟುಬಿಟ್ಟರೆ ತಿಂಗಳುಗಟ್ಟಲೆ ಅವು ಮತ್ತೆ ಗುಡಿಗೆ ಮರಳುತ್ತಿರಲಿಲ್ಲ. ಸಾವಿರಾರು ಪೂಜೆಗಳು ನಡೆದು ಆಮೇಲೆ ಮರಳಿ ಆಯಾದೇವಸ್ಥಾನಗಳಿಗೆ ಮರಳುವುದು ಅಲ್ಲಿನ ರಿವಾಜು. ಅಂತಹ ದೇವರುಗಳ ಪೈಕಿ ಗೇರುಸೊಪ್ಪೆಯ ಹನುಮಂತದೇವರು, ಚಂದಾವರಹನುಮಂತದೇವರು ಸಾತ್ವಿಕ ರೂಪದ ದೇವರಾದರೆ ಜಲವಳ್ ಕರ್ಕಿ ಅಮ್ಮನವರು ಉಗ್ರರೂಪದ ದೇವರು. ತಾಮಸಾಹಾರಭಕ್ಷಿಸುವ ಉಗ್ರರೂಪದ ದೇವರುಗಳನ್ನು ಬ್ರಾಹ್ಮಣ ಅರ್ಚಕರು ನಿತ್ಯವೂ ಆರಾಧಿಸುವ ಅಭ್ಯಾಸವಿರುವುದಿಲ್ಲ. ಆ ದೇವರುಗಳನ್ನುಹೆಚ್ಚಾಗಿ ಮಾಂಸಾಹಾರ ಭುಂಜಿಸುವ ಜನರುಗಳಲ್ಲೇ ಕೆಲವರು ನಿತ್ಯವೂ ಪೂಜಿಸುತ್ತಾರೆ. ಆದರೆ ಅಲ್ಲಲ್ಲಿ ವಿಶೇಷ ಪೂಜೆಗೆ ಬ್ರಾಹ್ಮಣಅರ್ಚಕರನ್ನು ಕರೆಯುವ ಪದ್ಧತಿ ಇತ್ತು; ಈಗಲೂ ಇದೆ.

ನಮ್ಮೂರ ಗದ್ದೆಯಲ್ಲಿ ಒಂದು ಜಾಗವನ್ನು ’ಅಮ್ಮ ಕೂರುವ ಕೊಡಗಿ’ ಎಂದೇ ಖಾತೆಗಳಲ್ಲಿ ನಮೂದಿಸಿದ್ದಾರೆ. ಗದ್ದೆಯ ಪೈರನ್ನೆಲ್ಲಾಕತ್ತರಿಸಿ ಮುಗಿದ ಕಾಲೀ ಗದ್ದೆಯನ್ನು ಸಮತಟ್ಟುಮಾಡಿ ಅಲ್ಲಿ ಚಪ್ಪರ ನಿರ್ಮಿಸಿ, ತಳಿರುತೋರಣಗಳಿಂದ ಅಲಂಕರಿಸಿಮಂಚವೊಂದನ್ನು ಇರಿಸಿ ದೀಪಮುಡಿಸಿರುತ್ತಾರೆ. ಅಲ್ಲಿಗೆ ಆಗಮಿಸುವ ಜಲವಳ್ ಕರ್ಕಿ ಅಮ್ಮನವರ ಪಲ್ಲಕ್ಕಿಯನ್ನು ಮಂಚದಮೇಲೆಕೂಡ್ರಿಸಿ ಮತ್ತೆ ಮೇಲಿನಿಂದ ಅಲಂಕರಿಸುತ್ತಾರೆ. ಬಂದ ಅಮ್ಮನಿಗೆ ಎಲ್ಲರೂ ವರ್ಗಿಣಿಹಾಕಿ ಊರ ಹತ್ತುಸಮಸ್ತರ ಪೂಜೆ ಬಹಳಗೌರವಯುತವಾಗಿ ನಡೆಯುತ್ತದೆ. ಹತ್ತು ಸಮಸ್ತರ ಪೂಒಜೆಯಲ್ಲಿ ಬ್ರಾಹ್ಮಣರೂ ಸೇರಿರುವುದರಿಂದ ಅವತ್ತು ಕುರಿ-ಕೋಳಿಗಳ ಬಲಿನಿಷಿದ್ಧ. ಅಮ್ಮನಿಗೆ ಸಾತ್ವಿಕ ಪೂಜೆ ನಡೆಯುತ್ತದೆ. ಅಡಿಕೆ ಶಿಂಗಾರ[ಹೊಂಬಾಳೆ]ಗಳಿಂದಲೂ ಬಗೆಬಗೆಯ ದಾಸವಾಳಗಳಿಂದಲೂಇನ್ನಿತರ ಘಮಘಮಿಸುವ ಮಲ್ಲಿಗೆ,ಜಾಜಿ, ಕರವೀರ, ಪುನ್ನಾಗ, ಇತ್ಯೇತ್ಯಾದಿ ಎಲ್ಲಾ ಬಗೆಯ ಹೂವುಗಳನ್ನು ಅಮ್ಮನಿಗೆ ಭಕ್ತಿಯಿಂದಅಲಂಕರಿಸುತ್ತಿದ್ದರು. ಎಳೆನೀರು, ಬಾಳೆಗೊನೆ, ಹಲಸಿನಹಣ್ಣು, ಅನಾನಸು, ಮಾವಿನಹಣ್ಣು, ಬಾಳೇಹಣ್ಣು ಇತ್ಯಾದಿ ಹಲವು ಹಣ್ಣು-ಕಾಯಿಗಳ ರಾಶಿರಾಶಿ ನೈವೇದ್ಯ ಇರುತ್ತಿತು. ಬ್ರಾಹ್ಮಣ ಅರ್ಚಕರೊಬ್ಬರು ಪಂಚಕಜ್ಜಾಯವನ್ನೂ ಮಾಡಿ ತರುತ್ತಿದ್ದರು. ಆದರೆ ಅಲ್ಲಿನಪೂಜೆ ಮಾತ್ರ ’ಗುನಗ’ ಎನ್ನುವ ಜನಾಂಗದಿಂದಲೇ ನಡೆಯುತ್ತಿತ್ತು.

ಗದ್ದೆಯ ಬದುವಿನ ಪಕ್ಕದಲ್ಲಿರುವ ನೀರಗುಂಡಿಯಲ್ಲಿ ಮಿಂದುಬರುವ ಗುನಗರು ಕೆಂಪು ಮಡಿಯುಟ್ಟು ಸಾಲಂಕೃತ ಅಮ್ಮನನ್ನು ಮತ್ತೆಹೊಸದಾಗಿ ಪೂಜಿಸುತ್ತಿದ್ದರು. ಧೂಪ,ದೀಪಗಳು, ಮಂಗಳವಾದ್ಯಗಳು, ಶಂಖ-ಜಗಟೆಗಳು, ಥರಥರದ ಮಂಗಳಾರತಿ, ನೈವೇದ್ಯ, ಕಾಣಿಕೆ ಎಲ್ಲವೂ ಸಮರ್ಪಣೆಯಾದಮೇಲೆ ಅಮ್ಮನಲ್ಲಿ ಪ್ರಾರ್ಥನೆ ನಡೆಯುತ್ತಿತ್ತು. ಆಗ ಪೂಜಾರಿಯಮೇಲೆ ಅಮ್ಮ ಬಂದು ಎಲ್ಲರಿಗೂಅಭಯನೀಡುವ ಕಾರ್ಯಕ್ರಮ ನಡೆಯುತ್ತಿತ್ತು. ಸೇರಿದ ಹತ್ತುಸಮಸ್ತರು ಭಯಭಕ್ತಿಗಳಿಂದ ಅಮ್ಮನ ದರ್ಶನಾಕಾಂಕ್ಷಿಗಳಾಗಿ ಬಿಟ್ಟಕಣ್ಣು ಬಿಟ್ಟಹಾಗೇ ನೋಡುತ್ತಿದ್ದರು. ಮುಖ್ಯ ಪೂಜಾರಿಯ ಮೈಮೇಲೆ ಬಂದ ಅಮ್ಮ ಪೂಜೆಯಿಂದ ಸಂತೃಪ್ತಳಾದಳೋ ಇಲ್ಲವೋಎಂಬುದು ಪೂಜಾರಿಯ ಬಾಯಿಂದ ಒಕ್ಕಣೆಯಾಗುತ್ತಿತ್ತು. ಮೈಮೇಲೆ ಬಂದ ಅಮನಲ್ಲಿ ಮೊದಲು ಬರುವವಳು ಸಣ್ಣಮ್ಮನಂತೆ! ಸಣ್ಣಮ ತೀರಾ ತಕರಾರೀ ಕುಳವಲ್ಲ. ಆಕೆ ಪರದೇಶಿ; ಕೊಟ್ಟ ಪೂಜೆ ಹೇಗಿದ್ದರೂ ಒಪ್ಪಿ ಕ್ಷಮಿಸಿ ನಡೆಯುವವಳು. ನಂತರ ಬರುವದೊಡ್ಡಮ್ಮ ಮಾತ್ರ ಬಹಳ ಹಠಮಾರಿ. ಎಷ್ಟೆಂದರೂ ಮಾರಿಕಾಂಬೆ ತಾನೇ ? ಅಪ್ಪೀ ತಪ್ಪೀ ಅವಳಿಗೆ ಪೂಜೆ ಸರಿಯಾಗಿನಡೆಯದಿದ್ದರೆ ಆ ವರ್ಷ ಊರಲ್ಲಿ ಮಾರಿಕಾ ಉಪದ್ರವಗಳೆನಿಸಿದ ಸಿಡುಬು,ಗೋಣಿ, ದಡಾರ, ಚಾಪೆ ಇವೆಲ್ಲಾಕಾಣಿಸಿಕೊಳ್ಳುತ್ತವೆಯಂತೆ. ಹೀಗಾಗಿ ಸಣ್ಣಮ್ಮ ಬಂದು ಹೋದ ಮರುಕ್ಷಣ ಅದೇ ಪೂಜಾರಿಯಲ್ಲಿ ದೊಡ್ಡಮ್ಮ ಆಗಮಿಸಿತ್ತಿದ್ದಳು. ಹಾಗೆದೊಡ್ಡಮ್ಮ ಬರುವುದು ಗೊತ್ತಾಗಬೇಕಲ್ಲಾ ? ಆಗ ಪಕ್ಕದಲ್ಲಿ ನಿಂತ ಸಹಾಯಕ ಪೂಜಾರಿ

" ದೊಡ್ಡಮ್ಮ ಬರಲೀ.....ಹೋಯ್ ದೊಡ್ಡಮ್ಮ ಬರಲೀ...." ಎಂದು ಬಡಬಡಿಸುತ್ತಿದ್ದ. ಶಂಖ-ಜಾಗಟೆ, ವಾದ್ಯಗಳು ತಾರಕಸ್ವರದಲ್ಲಿಮೊಳಗುತ್ತಿದ್ದವು. ಕೈಯ್ಯಲ್ಲಿ ಶಿಂಗಾರ ಹಿಡಿದ ಪೂಜಾರಿ ಶರೀರದ ಗಡಗಡ ಅತಿಯಾದಾಗ ಅಲ್ಲಿ ದೊಡ್ಡಮ್ಮ ಬಂದಳೆಂದೇ ಅರ್ಥ. ಅಷ್ಟಾಗುವಾಗ ರಾತ್ರಿ ಹತ್ತುಗಂಟೆಯ ಸಮಯವಾಗುತ್ತಿತ್ತು. ಚಿಮಣಿಎಣ್ಣೆಯ ಗ್ಯಾಸ್ ಲೈಟ್ನಲ್ಲಿ ಕಾಣುವ ದೃಶ್ಯಾವಳಿಗಳು ನಿಜಕ್ಕೂಭಯದ ವಾತಾವರಣವನ್ನೇ ನಿರ್ಮಾಣಮಾಡುತ್ತಿದ್ದವು. ಇದ್ದಕ್ಕಿದ್ದಂತೇ ದೊಡ್ಡಮ್ಮ ಬರುವಾಗ ಪಲ್ಲಕ್ಕಿಯಲ್ಲಿ ಕುಳಿತ ವಿಗ್ರಹದ ಕಣ್ಣುಕೆಂಪಗೆ ದೊಡ್ಡಗೆ ಇರುವ ಹಾಗೇ ಕಾಣಿಸುತ್ತಿದ್ದವು. ಇನ್ನೇನು ನಾಲಿಗೆ ಚಾಚಿಬಿಡುತ್ತಾಳೇನೋ ಅನ್ನಿಸುತ್ತಿತ್ತು. ದೊಡ್ಡಮ್ಮನ ಭಾಷೆಕೆಲವೊಮ್ಮೆ ಎಲ್ಲರಿಗೂ ಅರ್ಥವಾಗುತ್ತಿರಲಿಲ್ಲ! ಇನ್ನೂ ಕೆಲವೊಮ್ಮೆ ಕೇಳುವಷ್ಟು ದೊಡ್ಡದಾಗಿ ಅಮ್ಮ ಉಲಿಯುತ್ತಿರಲಿಲ್ಲ! ಆದರೂನಮ್ಮೂರನ್ನು ಕಂಡರೆ ಅಮ್ಮನಿಗೆ ಬಹಳ ಪ್ರೀತಿಯಿರುವುದರಿಂದಲೂ ಶತಮಾನಗಳಿಂದಲೂ ಅಕೆ ನಮ್ಮೂರಿಗೆ ಬಂದು ಪೂಜೆಗೊಂಡುಬಿಜಯಂಗೈಯ್ಯುತ್ತಿರುವುದರಿಂದಲೂ ಪೂಜೆ ಸಾಕಾಗಲಿಲ್ಲಾ ಎಂದಿದ್ದು ಹೇಳಿದ್ದು ಕಮ್ಮಿಯಂತೆ ಅಂತ ಕೆಲವರುಮಾತಾಡಿಕೊಳ್ಳುತ್ತಿದ್ದರು. ಅಂತೂ ಸುಮಾರು ೧೫ ನಿಮಿಷಗಳ ನಂತರ ಅಮ್ಮ " ಊರಿಗೆಲ್ಲಾ ಕ್ಷೇಮವಾಗಲಿ " ಎಂದುಸಾರಿದಮೇಲೆ ಮತ್ತೆ ಜಾಗಟೆ ವಾದ್ಯಗಳು ಜೋರಾಗಿ ಬಾರಿಸಲ್ಪಟ್ಟು ಪೂಜಾರಿಯ ಮೈಮೇಲೆ ಬಂದ ಅಮ್ಮ ಸ್ವಸ್ಥಾನಕ್ಕೆಹೊರಟುಹೋಗುತ್ತಿದ್ದಳು. ಇಡೀ ಮಡಿ ಒದ್ದೆಯಾಗಿ ಬೆವರಿ ಬಸವಳಿದ ಪೂಜಾರಿಗೆ ಸುಧಾರಿಸಿಕೊಳ್ಳಲು ಜನ ಗಾಳಿ ಬೀಸುತ್ತಿದ್ದರು. ನಂತರ ಎಲ್ಲರಿಗೂ ಪ್ರಸಾದ, ತಿನ್ನಲು ಪಂಚಕಜ್ಜಾಯ, ಬಾಳೇಹಣ್ಣುಗಳು ವಿತರಣೆಯಾಗಿ ಜನ ತಮ್ಮಪಾಲಿಗೆ ಬಂದ ಹಣ್ಣು-ಕಾಯಿಪ್ರಸಾದವನ್ನು ತೆಗೆದುಕೊಂಡು ಮನೆಗೆ ತೆರಳುತ್ತಿದ್ದರು. ಆ ರಾತ್ರಿ ಅಲ್ಲೇ ಚಪ್ಪರದಲ್ಲಿ ಉಳಿಯಲು ಅಮ್ಮನಿಗೆ ವ್ಯವಸ್ಥೆಯಿರುತ್ತಿತ್ತು. ಮಾರನೇ ಬೆಳಗಾಗಿ ಅಮ್ಮ ಕೆಲವುಜನರೊಟ್ಟಿಗೆ ಮತ್ತೆ ಮುಂದೆ ಸಾಗಬೇಕಾದ ಜಾಗಕ್ಕೆ ತೆರಳುತ್ತಿದ್ದಳು.

ಅಂದಹಾಗೇ ಊರಲ್ಲಿರುವ ಸಾತ್ವಿಕ ದೇವರುಗಳಲ್ಲಿ ವಿಷ್ಣುಮೂರ್ತಿ ಕೂಡಾ ಒಂದು. ನಿತ್ಯನೈಮಿತ್ತಿಕ ಪೂಜಾವಿಧಾನಗಳುಶತಶತಮಾನಗಳಿಂದಲೂ ನಡೆದುಬರುತ್ತಿರುವ ಆ ದೇವಾಲಯದಲ್ಲಿ ಯಾವುದೋ ಕಾಲದಲ್ಲಿ ಕಳ್ಳರು ನುಗ್ಗಿ ಬಹಳ ಪ್ರಚೀನವಾದವಿಗ್ರಹದ ಶಿಲೆಯ ಪ್ರಭಾವಳಿಯನ್ನು ತುಂಡರಿಸಿದ್ದರು. ಭಗ್ನವಾದ ವಿಗ್ರಹ ಎಂಬ ಅಪಕೀರ್ತಿಹೊತ್ತ ಬಹುಸುಂದರ ವಿಗ್ರಹವನ್ನುವಿಸರ್ಜಿಸಿ ಆ ಜಾಗದಲ್ಲಿ ಹೊಸವಿಗ್ರಹವನ್ನು ಪ್ರತಿಷ್ಠಾಪಿಸಿದ್ದೂ ಆಯಿತು. ಆವೇಳೆ ಮೆರವಣಿಗೆಹೊರಟ ಪಂಚಲೋಹದ ಅಜಮಾಸುಒಂದೂವರೆ ಅಡಿ ಎತ್ತರದ ಅತ್ಯಂತ ಸುಂದರವಾಗಿದ್ದ ಉತ್ಸವ ಮೂರ್ತಿಯನ್ನು ಪಲ್ಲಕಿಯಲ್ಲಿ ಕುಳಿತಾಗ ಯಾರೋ ಅದರಮೇಲೆಕಣ್ಣುಹಾಕಿದ್ದಿರಬೇಕು. ಪ್ರತಿಷ್ಠಾಪನಾ ಮಹೋತ್ಸವ ಮುಗಿದ ಒಂದೆರಡು ವರ್ಷಗಳಲ್ಲೇ ಒಂದು ರಾತ್ರಿ ಆ ಉತ್ಸವ ಮೂರ್ತಿಯನ್ನುಕಳ್ಳರು ಕದ್ದುಬಿಟ್ಟರು. ಮಾರನೇದಿನ ಪೂಜೆಗೆ ಬಂದ ಅರ್ಚಕರಿಗೆ ಕಂಡಿದ್ದು ಮುರಿದ ಬೀಗ-ತೆರೆದ ಬಾಗಿಲು. ವರದಹಸ್ತನಾದ ವಿಷ್ಣುಮೂರ್ತಿಯ ಶಿಲಾವಿಗ್ರಹದ ಕೈಮೇಲೆ ತುಳಸೀದಳವೊಂದು ಕಾಣುತ್ತಿತ್ತು. ಭಟ್ಟರು [ಅರ್ಚಕರು] ಹೆದರಿ ಊರಮಧ್ಯೆ ಓಡಿಬಂದರು. ಊರಜನ ಸೇರಿದರು. ತಲೆಗೊಂದರಂತೇ ಸಲಹೆಕೊಟ್ಟರು; ಮಾತನಾಡಿದರು. ಪೋಲೀಸರಿಗೆ ತಿಳಿಸಿ ಅವರೂ ಬಂದು ಹೋದರು. ಆಗೆಲ್ಲಾ ಪೋಲೀಸ್ ನಾಯಿಯ ಬಳಕೆ ಅಷ್ಟಾಗಿ ಇರಲಿಲ್ಲ!

ರಕ್ಷಿಸುವ ದೇವರನ್ನೇ ರಕ್ಷಿಸಬೇಕಾದ ಪ್ರಸಂಗಬಂದಾಗ ನಿಜಕ್ಕೂ ಬೇಸರವಾಗಿತ್ತು. ಕಳ್ಳರಂತೂ ಬಹಳ ದೂರದ ಜನವಾಗಿರಲುಸಾಧ್ಯವೇ ಇರಲಿಲ್ಲ. ಕಲಿಯ ಪ್ರಭಾವ ಆಗಲೇ ಜಾಸ್ತಿಯಾಗುತ್ತಾ ನಡೆದಿತ್ತಾದ್ದರಿಂದ ಪಕ್ಕದ ಊರವರೋ ಯಾರೋ ಅಂತೂ ತಮ್ಮಆಸಕ್ತಿಗೆ ಅನುಗುಣವಾಗಿ ವಿದೇಶಕ್ಕೆ ಮಾರಿ ಕೋಟಿಗಟ್ಟಲೆ ಗಳಿಸಲು ಆ ಕಾರ್ಯ ನಡೆಸಿದ್ದರು. ದಿನಗಳು ಉರುಳುತ್ತಲೇ ಇದ್ದರೂಕಳುವಾದ ವಿಗ್ರಹ ಮಾತ್ರ ಸಿಗಲೇ ಇಲ್ಲ. ಬಾಗಿಲುತಡೆದು ಹೇಳಿಕೊಳ್ಳಬೇಕು ಎಂಬ ಅಭಿಪ್ರಾಯ ಬಂತು. ಹಾಗೆಂದರೇನು ಎಂದುನಾನು ನನ್ನ ಹಿರಿಯರಲ್ಲಿ ಕೇಳಿದಾಗ ಅವರು ಹೇಳಿದ್ದು " ಊರಿಗೆ ಏನಾದರೂ ತೊಂದರೆ, ವಿಪತ್ತು ಬಂದರೆ, ಅನಾನುಕೂಲಉಂಟಾದರೆ, ಅವಘಡ ಸಂಭವಿಸಿದರೆ ಊರಜನರೆಲ್ಲಾ ಸೇರಿ ಅದೇ ದೇವಸ್ಥಾನದಲ್ಲಿ ವಿಶೇಷವಾಗಿ ಪೂಜೆ ಸಲ್ಲಿಸಿ ಎಲ್ಲರೂ ಒಟ್ಟಾಗಿಪ್ರಧಾನದ್ವಾರದೆದುರು ಕೈಮುಗಿದು ನಿಂತು ಬಂದ ಸಂಕಷ್ಟವನ್ನು ಪರಿಹರಿಸು ಎಂದು ಪ್ರಾರ್ಥಿಸುವುದು. " ವಾರದಲ್ಲೇಬಾಗಿಲುತಡೆದು ಹೇಳಿಕೊಂಡಿದ್ದೂ ಆಯಿತು.

ಬಂಗಾರಿ ಗೌಡ ಕೂಡ ಬಾಗಿಲು ತಡೆದು ಹೇಳಿಕೊಳುವ ಕಾರ್ಯದಲ್ಲಿ ಭಾಗವಹಿಸಿದ್ದ. ಪೂಜೆಮುಗಿಯುತ್ತಿದ್ದಂತೇ ಅದೆಲ್ಲಿಂದಆವೇಶಬಂತೋ ತಿಳಿಯಲಿಲ್ಲ. ಬಂಗಾರಿ ಹಾರಿ ಹಾರಿ ಬೀಳುತ್ತಿದ್ದ! " ಓಹೋ ನನ್ನಿಷ್ಣು ಮೂರ್ತಿ ನನ್ನಿಷ್ಣುಮೂರ್ತಿ....ನಾಸುಮ್ನಿರುದಿಲ್ಲ....ಬೇಕೇ ಬೇಕೂ ನನ್ನಿಷ್ಣುಮೂರ್ತಿ " ಆವೇಶದಲ್ಲಿ ಎದೆ ಎದೆ ಬಡಿದುಕೊಂಡು ಹಾರುತ್ತಿದ್ದ. ಬಂದವ ’ಬಾಗಿಲಜಟಕ’ ನಂತೆ! ಮಹಾವಿಷ್ಣುವಿನ ಬಾಗಿಲನ್ನು ಕಾಯಲು ಜಯ-ವಿಜಯರು ಬಾಗಿಲಭಟರಲ್ಲವೇ? ಅವರನ್ನೇ ಸಾಂಕೇತಿಕವಾಗಿ ಬಾಗಿಲಜಟ್ಗಅಥವಾ ಬಾಗಿಲಜಟಕ ಎಂಬ ಹೆಸರಲ್ಲಿ ಪ್ರಧಾನದ್ವಾರದ ಹೊರವಲಯದಲ್ಲಿ ಎಲ್ಲಾದರೂ ಪ್ರತಿಷ್ಠಾಪಿಸಿ ಅವರನ್ನೂ ಪೂಜಿಸುತ್ತಾರೆ. ಆಬಾಗಿಲುಜಟ್ಗ ಬಂಗಾರಿಯ ಮೈಮೇಲೆ ಬಂದಿದ್ದ ಎಂದು ಯಾರೋ ಹೇಳಿದರು. ಅರ್ಧಗಂಟೆಯಕಾಲ ಜಿಗಿದಾಡಿದ ಬಂಗಾರಿಕೊನೆಗೊಮ್ಮೆ ಸುಸ್ತಾಗಿ ಸ್ತಬ್ಧವಾಗಿ ಮಲಗಿಬಿಟ್ಟ. ಅದಾಗಿ ದಶಕಗಳೇ ಕಳೆದರೂ ಸುಂದರವಾದ ಆ ಉತ್ಸವಮೂರ್ತಿ ಸಿಗಲೇ ಇಲ್ಲ. ಅಷ್ಟಾಗಿ ತಲೆಕೆಡಿಸಿಕೊಳ್ಳಬೇಕಾದ ಅವಶ್ಯಕತೆ ಕಾಣದ ಕಾರಣ ಆರಕ್ಷಕರು ತಮ್ಮನ್ನೇ ರಕ್ಷಿಸಿಕೊಳ್ಳುತ್ತಾ ಕುಳಿತುಕೊಂಡುಬಿಟ್ಟರು! ಯಾರೋ ಪೂರ್ವಜರು ಮಕ್ಕಳಾಗದಿದ್ದುದಕ್ಕೆ ಹೇಳಿಕೊಂಡು ಸಂತಾನಪ್ರಾಪ್ತಿಯಾದ ಹಿನ್ನೆಲೆಯಲ್ಲಿ ಹರಕೆ ತೀರಿಸಲಾಗಿ ಆವಿಗ್ರಹವನ್ನು ಎರಕದಲ್ಲಿ ಮಾಡಿಸಿ, ಅದಕ್ಕೆ ತಕ್ಕನಾದ ಹಾಲುಕಂಚಿನ ಪ್ರಭಾವಳಿ, ಬಂಗಾರದ ಬಣ್ಣಲೇಪಿಸಿದ ಮೆತ್ತನೆಯಸುಖಾಸನಗಳನ್ನೂ ಮಿರುಗುವ ಮೇಲುಹೊದಿಕೆಯನ್ನೂ ಹೊಂದಿದ್ದ ಪಲ್ಲಕ್ಕಿಎಲ್ಲವನ್ನೂ ಸಜ್ಜುಗೊಳಿಸಿ ವರ್ಷಾವರ್ಷಾ ಉತ್ಸವವನ್ನುನಡೆಸಿಬಂದರು. ಮೂರ್ತಿ ಕಳುವಾದ ವರ್ಷ ಆ ಮನೆತನದವರು ಮೂರ್ತಿಯ ಬದಲಾಗಿ ಕಾಯಿ ಅಭಿಮಂತ್ರಿಸಿ ಪಲ್ಲಕ್ಕಿಯಲ್ಲಿಟ್ಟು ಸೇವೆಸಲ್ಲಿಸಿದರು. ಸರಿಸುಮಾರು ೭-೮ ವರ್ಷಗಳು ಗತಿಸಿದಮೇಲೆ ಇನ್ನು ಮತ್ತೆ ಆ ಮೂರ್ತಿಯನ್ನು ಮರಳಿ ಪಡೆಯುವ ಆಸೆ ಕಮರಿಹೋಗಿಹೊಸದಾದ ವಿಗ್ರಹವೊಂದನ್ನು ಖರೀದಿಸಿ ತಂದರು. ಈಗಿರುವ ವಿಗ್ರಹ ಆ ವಿಗ್ರಹಕ್ಕೆ ಸೌಂದರ್ಯದಲ್ಲಿ ಯಾವಮೂಲೆಗೂತಾಗುವುದಿಲ್ಲ. ಕಳೆದುಹೋದ ಆ ವಿಗ್ರಹವನ್ನು ನಮ್ಮ ಊರಿನಲ್ಲೇ ಊರವರೇ ಆದ ಆಚಾರಿಯೊಬ್ಬರು ತಮ್ಮ ಕಲಾಪ್ರೌಢಿಮೆಯಿಂದತಯಾರಿಸಿದ್ದರಂತೆ. ಅದು ಕೇವಲ ಕಲೆಗಾಗಿ ಮತ್ತು ಸೇವೆಗಾಗಿ ಮಾಡಿದ ವಿಗ್ರಹವಾಗಿತ್ತು. ಇಂದು ವಿಗ್ರಹಗಳು ಮಾರಾಟದವಸ್ತುಗಳಾಗಿರುವುದರಿಂದ ಕೆಲವೊಮ್ಮೆ ಕಲಾಹೀನವಾಗಿಯೂ ಕಳಾಹೀನವಾಗಿಯೂ ಇರುತ್ತವೆ. ಇಂದಿಗೂ ನನ್ನ ಮನಸ್ಸಲ್ಲಿಅಚ್ಚಳಿಯದ ಹಲವು ಮೊಗಗಳಲ್ಲಿ ಆ ಸುಂದರ ವಿಗ್ರಹದ ಮುಗುಳ್ನಗೆಯೂ ಅಡಗಿದೆ. ಆಗಾಗ ಮಾನವನ ದುಷ್ಟತನವನ್ನು ಅಣಕಿಸಿಮತ್ತೆ ನಕ್ಕಂತಾಗುತ್ತದೆ.

Saturday, May 28, 2011

ಐ ಲವ್ ಯೂ ಎಂಬ ಅಪಾಯಕಾರೀ ಅಣ್ವಸ್ತ್ರ


ಐ ಲವ್ ಯೂ ಎಂಬ ಅಪಾಯಕಾರೀ ಅಣ್ವಸ್ತ್ರ

ಆಶಾ ಉತ್ತಮ ಮನೆತನದ ಹುಡುಗಿ, ಹಳ್ಳಿಯಲ್ಲಿ ಕಾಲೇಜು ಇಲ್ಲದ್ದರಿಂದ ತಾಲೂಕು ಪಟ್ಟಣದ ಕಾಲೇಜಿಗೆ ಬಸ್‍ನಲ್ಲಿ ಪ್ರಯಾಣಿಸುತ್ತಿದ್ದಳು. ದಿನವೂ ಹೆಚ್ಚುಕಮ್ಮಿ ಅದೇವೇಳೆಗೆ ಬಸ್ ಏರುತ್ತಿದ್ದು ಅದೇ ಮಾರ್ಗವಾಗಿ ಚಲಿಸುವ ಪ್ರಮೇಯವಿತ್ತು. ದಿನಗಳ ನಂತರ ಮಳೆಗಾಲದಲ್ಲಿ ಕೆಲವೊಮ್ಮೆ ಬಸ್ ಕಾಲಿ ಇದ್ದ ಸಮಯದಲ್ಲಿ ಕಂಡಕ್ಟರ್ ಜೊತೆ ಮಾತುಕತೆ ನಡೆಯಹತ್ತಿತ್ತು. ಮಾತು ಆಕೆಗೆ ಬಹಳ ಇಂಪಾಗಿ ನಿಧಾನವಾಗಿ ಆಕೆ ಕಂಡಕ್ಟರ್ ಹೇಳಿದ್ದನ್ನೆಲ್ಲಾ ಮಾಡಲು ಆರಂಭಿಸಿದಳು. ಮದುವೆಯಾಗಿ ಮಕ್ಕಳ ಅಪ್ಪನಾದ ಆತನಿಗೋ ಹೆಣ್ಣುಗಳ ಗೀಳು! ಹೇಗಾದರೂ ಮಾಡಿ ಆಶಾ ತನಗೆ ದಕ್ಕಬೇಕೆಂಬುದು ಆತನ ಬಯಕೆಯಾಗಿತ್ತು. ಅದಕ್ಕಾಗಿ ಆತ ಎಲ್ಲಾರೀತಿಯಲ್ಲೂ ಪ್ರಯತ್ನ ನಡೆಸಿಯೇ ನಡೆಸಿದ; ಅಶಾಳನ್ನು ಮರುಳುಮಾಡಿಬಿಟ್ಟ. ತನ್ನ ಮತ್ತು ಕಂಡಕ್ಟರ್ ವಯಸ್ಸಿನ ಅಂತರವನ್ನೂ ಆಕೆ ಲೆಕ್ಕಿಸಲಿಲ್ಲ, ಆತ ಬಿಟ್ಟ’ಅಪ್ಪಟ ಬ್ರಹ್ಮಚಾರಿ’ ಎಂಬ ಹೇಳಿಯನ್ನಾಧರಿಸಿ ನಿಧಾನವಾಗಿ ಆಕೆ ಆತನೆಡೆಗೆ ವಾಲಿದಳು. ಕಾಲೇಜಿನ ಯಾವ ಹುಡುಗನೂ ಮಾಡದ ಕಿಡಿಗೇಡಿತನದ ಕೆಲಸವನ್ನು ಆ ಕಂಡಕ್ಟರ್ ಮಾಡಿದ್ದ. ಕೆಲವೇದಿನಗಳಲ್ಲಿ ಆಶಾ ಆತನನ್ನು ಗುಪ್ತವಾಗಿ ಮದುವೆಯಾದಳು! ವ್ಯಾಸಂಗಕ್ಕಿಂತ ಈ ವ್ಯಸನದಲ್ಲೇ ಹೊತ್ತುಕಳೆದ ಆಕೆಯ ದಿನಚರಿ ಪಾಲಕರಿಗೆ ತಿಳಿಯಲೇ ಇಲ್ಲ. ಯಾವಾಗ ಆಶಾ ಬಸುರಿಯಾದಳೋ ಆಗ ಕಂಡಕ್ಟರ್ ’ರೂಟ್’ ಬದಲಿಸಲು ಆರಂಭಿಸಿದ. ಅಲ್ಲೆಲ್ಲೋ ಆಸ್ಪತ್ರೆಯೊಂದರಲ್ಲಿ ಅಬಾರ್ಷನ್ ಮಾಡಿಸಿದ. ಕೊನೆಗೊಮ್ಮೆ ಆಕೆಯನ್ನು ಮತ್ತಷ್ಟು ಭೋಗಿಸುವ ಹಂಬಲದಲ್ಲಿ ಎಲ್ಲಿಗೋ ಕರೆದುಕೊಂಡು ಒಂದೆರಡು ದಿನ ನಾಪತ್ತೆಯಾಗಿಬಿಟ್ಟ. ಆಮೇಲೆ ಪಟ್ಟಣದ ಬೇರೇ ಕಡೆ ಒಂದು ಖೋಲಿ ಕೊಡಿಸಿದ. ಆ ಖೋಲಿಯಲ್ಲಿ ಅವಳಜೊತೆಗೆ ಚೆಲ್ಲಾಟದ ದಿನಗಳು ಮುಂದುವರಿದವು. ಇತ್ತ ಹೆತ್ತವರು ಕಂಗಾಲಾಗಿ ಎಲ್ಲೆಡೆಗೂ ಹುಡುಕುತ್ತಾ ಆರಕ್ಷಕರಿಗೆ ದೂರು ನೀಡಿದರು. ಹಲವುದಿನಗಳ ನಂತರ ಹೇಗೋ ಪತ್ತೆಹಚ್ಚಿದ ಪೋಲೀಸರೆದುರು ಆಕೆ ಹೇಳಿದ್ದು ತಾನು ಕಂಡಕ್ಟರ್ ನನ್ನೇ ಮದುವೆಯಾಗುತ್ತೇನೆ ಎಂದು. ಹದಿನೆಂಟು ತುಂಬಿದ ಹುಡುಗಿಯಾದ್ದರಿಂದ ಅಪ್ಪ-ಅಮ್ಮ ಕಣ್ಣೀರು ಹಾಕುವುದನ್ನು ಬಿಟ್ಟರೆ ಏನೂಮಾಡುವ ಹಾಗಿರಲಿಲ್ಲ. ’ಎಂಥಾಗತಿ ಬಂತಪ್ಪಾ’ ಎಂದು ಮನದಲ್ಲಿ ಮರುಗಿದರು. ಹಾಗೂ ಹೀಗೂ ವರ್ಷದೂಡಿದ ಕಂಡಕ್ಟರ್ ಮಗುವನ್ನು ಕರುಣಿಸಿದ. ಸಿಗುವ ಸಂಬಳದಲ್ಲಿ ಆತನಿಗೆ ಆಶಾಳನ್ನೂ ಮತ್ತು ಮೊದಲ ಕುಟುಂಬವನ್ನೂ ಸಲಹಲು ಆಗುತ್ತಿರಲಿಲ್ಲ. ಅಷ್ಟರಲ್ಲಿ ಆತನ ಮೊದಲ ಪತ್ನಿಗೂ ವಿಷಯ ತಿಳಿದು ಆಕೆಯ ಗಲಾಟೆ ಆರಂಭವಾಯಿತು. ಕಂಡಕ್ಟರ್ ಕೈ ಬಿಟ್ಟ; ಖೋಲಿಗೆ ಬರುವುದನ್ನೇ ಬಿಟ್ಟ. ಮಗುವಿನೊಂದಿಗೆ ಆಕೆ ಸಾವರಿಸಿಕೊಂಡು ತವರುಮನೆಗೆ ಬಂದಳು.

ಅಕ್ಷರ ಜಾತ್ರೆಗೆ ಬಂದ ಚಿಕ್ಕವಯಸಿಇನ ಚೇತನ್ ಎಂಬ ಹುಡುಗನನ್ನು ಶಿರಸಿ ಶರಣರ ಮಠದ ಸಾಧ್ವಿ ಕಾವಿಯ ಸೆರಗಿನಲ್ಲೇ ಅವಿತು ಪ್ರೀತಿಸಿದಳು. ಆತನಿಗೂ ಅವಳೇ ಸರ್ವಸ್ವವಾಗಿಬಿಟ್ಟಳು. ವಯಸ್ಸಿನಲ್ಲೂ ಹಿರಿಯಳುಬೇರೆ. ಆದರೂ ಅಗಲಿರಲಾರದ ಅದಮ್ಯ ಅನಿಸಿಕೆ! ಅವಳಲ್ಲಿರುವ ಏನೋ ಅವನಿಗೂ ಆತನಲ್ಲಿರುವ ಏನೋ ಅವಳಿಗೂ ಬೇಕಿತ್ತು. ಶರಣೆ ಏಕ್‍ದಂ ಆತನ ಜೊತೆಗೆ ಮಾಧ್ಯಮಗಳ ಮುಂದೆ ಮದುವೆಯ ಪ್ರಸ್ತಾಪವಿಟ್ಟಳು. ಪೋಲೀಸ್ ಸಹಭಾಗಿತ್ವದಲ್ಲಿ ಮದುವೆಯೂ ನಡೆದುಹೋಯಿತು. ಹುಡುಗನ ಅಮ್ಮನ ಅಳಲನ್ನು ಯಾರೂ ಕೇಳಲಿಲ್ಲ; ಕೇಳಿ ಏನೂ ಮಾಡುವ ಸ್ಥಿತಿಯಲ್ಲಿ ಇರಲಿಲ್ಲ. ಮನದ ಹಸಿ ಹಸಿ ಬಯಕೆಗಳನ್ನು ಪೂರೈಸಿಕೊಳ್ಳಲು ೬-೭ ತಿಂಗಳು ಸಾಕಾಯಿತು. ಅವಳಲ್ಲಿರುವ ’ಅದನ್ನು’ ಅವನೂ ಅವನಲ್ಲಿರುವ ’ಅದನ್ನು’ ಅವಳೂ ಯಥೇಚ್ಛ ಪಡೆದಿದ್ದೂ ಆಯಿತು. ಪತಿ ಮತ್ತು ಆತನ ಅಮ್ಮನ ಕಾಟ ತಾಳಲಾರದೇ ಶರಣೆ ತವರಿಗೆ ನಿರ್ಗಮಿಸಿದ್ದೂ ಸುದ್ದಿಯಾಯಿತು!

ಜೋಸೆಫ್ ಮತ್ತು ಸ್ಮಿತಾ ಕಾಲೇಜಿನಲ್ಲಿ ಓದುವಾಗ ಜೋಸೆಫ್ ಎರಡು ತರಗತಿ ಮುಂದಿದ್ದ. ಬಹಳ ಸುಂದರಿಯೆನಿಸಿದ ಸ್ಮಿತಾ ನಕ್ಕರೆ ಅಪ್ಸರೆಯನ್ನೂ ನಾಚಿಸುತ್ತಿದ್ದಳು! ಮಾತನಾಡಿದರೆ ಮುತ್ತು ಉದುರುತ್ತಿತ್ತು. ದಾಳಿಂಬೆಯ ಬೀಜಗಳ ದಂತಪಂಕ್ತಿ ಸಾಕ್ಷಾತ್ ಧರೆಗಿಳಿದ ರತಿದೇವಿ! ಜೋಸೆಫ್ ತೀರಾ ಸುಂದರನಲ್ಲದಿದ್ದರೂ ಕಾಲೇಜಿನ ಚುನಾವಣೆಯಲ್ಲಿ ಗೆದ್ದು ಸ್ಟೂಡೆಂಟ್ ಯೂನಿಯನ್ ಲೀಡರ್ ಆಗಿದ್ದ. ಅವನ ಮಾತುಗಳು ನಡವಳಿಕೆ ಆ ವಯಸ್ಸಿನಲ್ಲಿ ಅವಳಿಗೆ ತುಂಬಾ ಹಿಡಿಸಿದವು. ಅವಳಿಗಾಗಿಯೇ ಆತ ಚುನಾವಣೆಗೂ ನಿಂತಿದ್ದನೆಂದರೂ ತಪ್ಪಾಗಲಿಕ್ಕಿಲ್ಲ. ಅವಳನ್ನು ಪಡೆದೇ ತೀರುವುದು ಅವನ ಹಠ, ಅವನೇ ತಕ್ಕವನೆನ್ನುವುದೂ ಅವಳ ಮನಸ್ಸಿಗೆ ಬಂದಿರುವುದು ದಿಟ. ಅವಳಲ್ಲಿ ’ಏನೋ ಅಂತಹ’ದಿತ್ತು ಅವನಲ್ಲಿಯೂ ’ಏನೋ ಅಂತಹುದಿತ್ತು.’ ಆ ಏನೋ ಅಂಥದ್ದನ್ನು ಪರಸ್ಪರ ಪಡೆಯದೇ ಇರಲು ಸಾಧ್ಯವಾಗುತ್ತಿರಲಿಲ್ಲ. ಆ ’ಏನೋ ಅಂಥದ್ದು’ ದೈಹಿಕವಾಗಿ ಹತ್ತಿರವಿದ್ದರೆ ಮಾತ್ರ ಪಡೆಯಲು ಸಾಧ್ಯವಿತ್ತು. ಅದಕ್ಕೇ ಅವರು ಪರಸ್ಪರ ಪ್ರೀತಿಸಿದರು. ಕಾಲೇಜಿನಿಂದ ಟ್ರಿಪ್ ಹೋಗಿದ್ದ ವೇಳೆ ರಾತ್ರಿ ಬಸ್‍ನಲ್ಲಿ ಅಪ್ಪಿಕುಳಿತರು. ಆಗ ಆ ’ಏನೋ ಅಂಥದ್ದು’ ಸ್ವಲ್ಪ ಹತ್ತಿರವಾಯಿತೇನೋ! ಮತ್ತೂ ಹತ್ತಿರಬರಲಿ ಎಂದುಕೊಂಡ ಅವರು ಪ್ರಯಾಣಕಾಲದಲ್ಲಿ ತಂಗಿದ್ದ ಜಾಗದ ಕೊಠಡಿಯಲ್ಲಿ ಏನೋ ಅಂಥದ್ದನ್ನು ಇನ್ನೂ ಸ್ವಲ್ಪ ಜಾಸ್ತಿ ಪಡೆದರು! ಬರುಬರುತ್ತಾ ಅಗಲಿರಲಾರದ ಹಕ್ಕಿಗಳು ಎಂದರು. ಕಾಲೇಜಿನ ಗೋಡೆಗಳಮೇಲೆ ಎಲ್ಲಿ ನೋಡಿದರೂ ಅವರ ಹೆಸರುಗಳೇ ಬರೆಯಲ್ಪಟ್ಟವು. ಅಪ್ಪ-ಅಮ್ಮನಿಗೆ ಹೇಳದೇಕೇಳದೇ ಕಾಲೇಜು ಮುಗಿಯುವ ಮುನ್ನವೇ ಮದುವೆ ಮಾಡಿಕೊಂಡರು. ಬೆಂಗಳೂರಿಗೆ ಬಂದರು. ಹಲವುದಿನಗಳವರೆಗೆ ’ಏನೋ ಅಂಥದ್ದನ್ನು’ ಪಡೆಯುತ್ತಲೇ ಇದ್ದರು! ಆಮೇಲೆ ಒಂದುದಿನ ಪೂರ್ವ-ಪಶ್ಚಿಮವಾಗಿ ನಿಂತಾಗ ಸ್ಮಿತಾಗೆ ಕೈಲೊಂದು ಮಗು ಹೊಟ್ಟೆಯಲ್ಲೊಂದು ಮಗು ಇದ್ದಿತ್ತು ಎಂಬುದು ಸುದ್ದಿಯಾಯಿತು.

ಬೆಂಗಳೂರಿನ ಶುಭಾ ಎಂಬ ಹುಡುಗಿ ಗಿರೀಶ್ ಎಂಬ ತಂತ್ರಾಂಶ ತಂತ್ರಜ್ಞನನ್ನು ಮದುವೆಯಾಗಲು ಒಪ್ಪಿ ಎಂಗೇಜ್‍ಮೆಂಟ್ ಕೂಡ ನಡೆದುಹೋಯಿತು. ಆ ನಂತರ ಸರಿಯಾಗಿ ೧೦+ ಕೂಡ ಓದಿರದ ಅದ್ಯಾವುದೋ ತಮಿಳು ಹುಡುಗನನ್ನು ಆಕೆ ಪ್ರೀತಿಸುತ್ತಿದ್ದಳಂತೆ. ಎಂಥಾ ಹುಚ್ಚು ಪ್ರೀತಿ ಎಂದರೆ ಆತನನ್ನು ಜಂಗಮವಾಣಿಯಲ್ಲಿ ಸಂದೇಶದಿಂದ ಕರೆದು ಪಾಪದ ಹುಡುಗ ಗಿರೀಶ್‍ನನ್ನು ಕೊಲೆಮಾಡಿಸಿಬಿಟ್ಟಳು. ಆಮೇಲೆ ಈಗ ವಿಚಾರಣಾಧೀನ ಖೈದಿಯಾಗಿ ಜೈಲಿನಲ್ಲಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ರೂಪದಲ್ಲಾಗಲೀ ವಿದ್ಯೆಯಲ್ಲಾಗಲೀ ದುಡಿಮೆಯಲ್ಲಾಗಲೀ ಹೋಲಿಸಲಾಗದ ತಮಿಳು ಹುಡುಗನಲ್ಲಿ ಆಕೆ ಅದೇನು ಕಂಡಳು? ಅವನಲ್ಲಿರುವ ’ಏನೋ ಅಂಥದ್ದು’ ಅವಳಿಗೆ ಬೇಕಾಗಿತ್ತು! ಅಲ್ಲವೇ ?

ಸ್ನೇಹಿತರೇ, ಕೆಲವು ದಿನಗಳಿಂದ ಬರೆಯಲು ಸಮಯವಾಗಿರಲಿಲ್ಲ. ಮತ್ತೆ ಶುರುಮಾಡಿದ್ದೇನೆ. ಬರುಬರುತ್ತಾ ಮಾಧ್ಯಮಗಳಲ್ಲಿ ಲವ್ವೀ ಡವ್ವಿಯ ಕೇಸುಗಳು ತೀರಾ ಸಾಮಾನ್ಯವಾಗಿ ಮುಖಕ್ಕೆ ಅಪ್ಪಳಿಸ ಹತ್ತಿವೆ. ’ಮಾನವಕುಲ ತಾನೊಂದೆವಲಮ್’ ಎನ್ನುವುದು ಅಗತ್ಯವಾದರೂ ಅದನ್ನು ಸಾಧಿಸಹೊರಡುತ್ತೇವೆ ಎನ್ನುವ ಹಾದಿಯಲ್ಲಿ ಹಲವು ಕಾರೆ ಮುಳ್ಳುಗಳನ್ನು ಕಾಣಬೇಕಾಗಿದೆ. ನಿಜ ಜೀವನದ ಕೆಲವು ವಾಸ್ತವಿಕ ಮುಖಗಳನ್ನು ಅವಲೋಕಿಸಿದರೆ ಅದು ಅರಿವಿಗೆ ಬರುತ್ತದೆ. ಈ ಮೇಲಿನ ಎಲ್ಲಾ ಕಥೆಗಳೂ ಅದಕ್ಕೆ ಜ್ವಲಂತ ಉದಾಹರಣೆಗಳು. ಇನ್ನೂ ಸಾವಿರಾರು ಕಥೆಗಳನ್ನು ತೆಗೆದುಕೊಳ್ಳಬಹುದು. ಬಹುತೇಕ ಎಲ್ಲವೂ ದುಖಾಂತ್ಯದ ಕಥೆಗಳೇ ಆಗಿರುತ್ತವೆ. ಮಾನವೀಯ ಮೌಲ್ಯಗಳು ಕುಸಿಯುತ್ತಾ ನಡೆಯುತ್ತಿರುವ ಈ ದಿನಗಳಲ್ಲಿ ಎಗ್ಗಿಲ್ಲದ ಹಣದ ದಾಹ ಒಂದೆಡೆಗಾದರೆ, ಸ್ವೇಚ್ಛಾಚಾರ ಇನ್ನೊಂದೆಡೆಗೆ ಗಹಗಹಿಸಿ ನಗುತ್ತದೆ! ಅದರಲ್ಲಂತೂ ಹೆಣ್ಣುಮಕ್ಕಳು ತಾವೇ ದುಡಿಯುವ ಮಾರ್ಗಗಳನ್ನು ಅರಸಿ ಬದುಕುತ್ತಿರುವುದರಿಂದ ಅಲ್ಲಲ್ಲಿ ಅಲ್ಲಲ್ಲಿ ಅವರಿಗೆ ಏನೇನು ಬೇಕೋ ಆಯಾ ದಾಹಗಳನ್ನು ಪೂರೈಸಿಕೊಳ್ಳಲು ಅವರು ಮುಂದಾಗುತ್ತಾರೆ. ಝಣ ಝಣ ಕಾಂಚಾಣ ಕೈಗೆ ಬಂದಾಗ ಅವರಿಗೆ ಏನುಮಾಡಬೇಕೆಂಬುದು ತಿಳಿಯುವುದಿಲ್ಲ.

ಇನ್ನೊಂದು ಹಂತವೆಂದರೆ ಓದುವಾಗಿನ ಸಖ್ಯ. ಹದಗೆಟ್ಟ ಮಾಧ್ಯಮಗಳಲ್ಲಿ ಹಗಲಿರುಳೂ ಕಾಮಧ್ಯಾನ ನಡೆದರೆ ಚಿಕ್ಕಹುಡುಗರಿಗೆ ಅದರ ಗೀಳು ಹತ್ತದೇ ಇರಲು ಅವರೂ ಮನುಷ್ಯರಲ್ಲವೇ? ಅಂತಹ ಗೀಳು ಹತ್ತಿಸಿಕೊಂಡ ಹರೆಯದ ಹುಡುಗಿಯರು ಸುಮ್ನೇ ಒಮ್ಮೆ ರುಚಿ ನೋಡುವ ತೆವಲಿನಿಂದ ಯಾರದೋ ಕರೆಯನ್ನು ಮನ್ನಿಸಿ ಅವರೊಟ್ಟಿಗೆ ಗುಪ್ತವಾಗಿ ಮಲಗಿದರೆ, ಓಡಾಡಿದರೆ ಅದರಲ್ಲಿ ಮಾರ್ಗದರ್ಶಿಸಬೇಕಾದ ಹಿರಿಯರ ಹಲವರ ತಪ್ಪೂ ಇದೆ ಎಂಬುದನ್ನು ಮರೆಯುವ ಹಾಗಿಲ್ಲ. ಸಾಮಾನ್ಯವಾಗಿ ೧೦ರಿಂದ ಆರಭ್ಯ ೩೦ ರ ವರೆಗೂ ಇರುವ ಈ ಕಾಲ ಹುಡುಗ-ಹುಡುಗಿಯರಲ್ಲಿ ಹೊಸ ಹೊಸ ಕಲ್ಪನೆ, ಆಕರ್ಷಣೆಗಳನ್ನು ಸೃಜಿಸುವ ಕಾಲವಾಗಿರುತ್ತದೆ. ಸಿನಿಮಾದಲ್ಲಿ ಹೀರೋ ಹೀರೋಯಿನ್ ಯುಗಳಗೀತೆ ಹಾಡುವುದು, ಅಪ್ಪುವುದು, ಚುಂಬಿಸುವುದು, ಹಾಗೂ ಇನ್ನಿತರ ತರಹೇವಾರಿ ದೃಶ್ಯಗಳು ಹದಿಮನಸ್ಸಿನ ಒಳಗೆ ತೂರಿ ಕಾಮಾಂಧರಾಗುವಂತೇ ಪ್ರೇರೇಪಿಸುತ್ತದೆ. ತಾವಿರುವ ಸುತ್ತಲ ಪರಿಸರದಲ್ಲಿಯೇ ಹುಡುಗ ಹುಡುಗಿ ತಮಗೆ ಸಿಗಬಹುದಾದ ಅಥವಾ ತಾವು ಇಷ್ಟಪಡಬಹುದಾದವರನ್ನು ಗುರುತಿಸಿ ಅವರಲ್ಲಿ ಹೀರೋ ಹೀರೋಯಿನ್‍ಗಳನ್ನು ಕಾಣತೊಡಗುತ್ತಾರೆ. ಅಪ್ಪ-ಅಮ್ಮನ ಕಷ್ಟದ ಅರಿವು ಆಗ ಸುತರಾಂ ಬರುವುದಿಲ್ಲ. ದೂರದರ್ಶಕದ ಕೊಳವೆಯಲ್ಲಿ ನೋಡುವಾಗ ಹೇಗೆ ಆ ನಿಗದಿತ ಪ್ರದೇಶಮಾತ್ರ ಕಾಣುತ್ತದೋ ಹಾಗೇ ಕೇವಲ ’ಪ್ರೇಮಿ’ ಎಂಬ ವ್ಯಕ್ತಿಯ ಚಿತ್ರಮಾತ್ರ ಅವರ ಚಿತ್ತಭಿತ್ತಿಯಲ್ಲಿ ಮೂಡುತ್ತದೆ;ಕುಳಿತು ಲಾಸ್ಯವಾಡುತ್ತದೆ. ಮುಂದಿನ ಆಗುಹೋಗುಗಳು, ಜೀವನ ಇವೆಲ್ಲವುಗಳ ಪರಿಜ್ಞಾನ ಆಗ ಇರುವುದೇ ಇಲ್ಲ! " ಬೇಕೆಂದರೆ ಬೇಕು ಅಷ್ಟೇ " !

ಈ ’ಬೇಕೆಂದರೆ ಬೇಕೇ ಬೇಕು’ ಶುರುವಾದಾಗ ಅವರು ಪರಸ್ಪರ ’ಐ ಲವ್ ಯೂ ’ ಎನ್ನಲು ಹಾತೊರೆಯುತ್ತಾರೆ. ಕಾಲೇಜಿನಲ್ಲೋ ಬಸ್‍ಸ್ಟಾಪಿನಲ್ಲೋ ಯಾವುದೋ ಸಭೆ-ಸಮಾರಂಭದಲ್ಲೋ ಸಿಕ್ಕು ಮೌಖಿಕವಾಗಿ ನೇರವಾಗಿ ಅದನ್ನು ಹೇಳಿಕೊಳ್ಳುವ ಆಸೆ ಅತಿಯಾಗಿಬಿಡುತ್ತದೆ. ಅಲ್ಲಲ್ಲಿ ಅವಕಾಶ ಸಿಕ್ಕಾಗ ಮೈ ಹೊಸೆದು ಹೋಗುವುದು ಅಥವಾ ಛೇಡಿಸುವುದು ಆರಂಭವಾಗುತ್ತದೆ. ಇದಕ್ಕೆ ಅವರು ಕರೆದುಕೊಳ್ಳುವುದು ’ಪ್ರೀತಿ’ ಎಂದು. ಆದರೆ ಇದು ನಿಜವಾಗಿಯೂ ಪ್ರೀತಿಯೇ ಎನ್ನುವುದು ಯಕ್ಷಪ್ರಶ್ನೆ. ಇಲ್ಲಿಯೇ ಕೆಲವೊಮ್ಮೆ ತ್ರಿಕೋನ ಚತುಷ್ಕೋನ ಪಂಚಕೋನ ಮುಂತಾದರೀತಿಯ ’ಪ್ರೀತಿ’ ಆರಂಭಗೊಂಡು ಹುಡುಗರು ಕಾಡುಪ್ರಾಣಿಗಳ ರೀತಿ ಕಾದಾಡುತ್ತಾರೆ. ’ಕೈಕೊಟ್ಟಳು ಹುಡುಗಿ’ ಎಂದು ಬಗೆದಾಗ ಆ ’ಪ್ರೀತಿ’ ಎನ್ನಿಸಿಕೊಂಡ ಪ್ರೀತಿ ಕ್ಷಣಾರ್ಧದಲ್ಲಿ ದ್ವೇಷವಾಗಿ ಬದಲಾಗುತ್ತದೆ. ಆ ದ್ವೇಷ ಎಸಿಡ್ ದಾಳಿಗೋ ಕಿಡ್ನಾಪ್ ಮರ್ಡರ್‍ ಗೋ ಕಾರಣವಾಗುತ್ತದೆ. ಇದರಲ್ಲಿ ಇಂದಿನ ಹಲವು ಸಿನಿಮಾಗಳೂ ಪ್ರಮುಖ ಪಾತ್ರವಹಿಸುತ್ತವೆ. ಮನೋರಂಜನೆಗೆ ಸಿನಿಮಾಗಳು ಬೇಕು ನಿಜ, ಆದರೆ ಸಿನಿಮಾಗಳೆಲ್ಲಾ ಉಪೇಂದ್ರನ ಹುಚ್ಚಾಟಗಳನ್ನು ತೋರಿಸಿದರೆ ಅವು ಹಲವು ಅಪಘಾತಗಳಿಗೆ ದಾರಿಮಾಡಿಕೊಡುತ್ತವೆ.

ಇನ್ನು ವಯಸ್ಕರ ದಿಕ್ಕಿಗೆ ಮರಳೋಣ. ಮಾಧ್ಯಮವೊಂದರಲ್ಲಿ ಅಪರಾಧಿಯೊಂದನ್ನು ತೋರಿಸಿದರು. ಆತ ೫-೬ ಮದುವೆಯಾಗಿದ್ದ. ಮದುವೆಯಾಗುತ್ತೇನೆ ಎಂದು ಸ್ವಲ್ಪ ಜಾಸ್ತಿ ವಯಸ್ಕ ಹುಡುಗಿಯರ ಹಿಂದೆ ಬೀಳುವುದು, ಅವರಿಂದ ಹಣ-ಒಡವೆಗಳನ್ನು ಪಡೆಯುವುದು ಆಮೇಲೆ ನಾಪತ್ತೆಯಾಗುವುದು! ಆತನಿಗೂ ಆಕೆಗೂ ಪರಿಚಯವಾಗಿದ್ದು ದಿನಪತ್ರಿಕೆಯೊಂದರಲ್ಲಿ ಆತ ನೀಡಿದ ಜಾಹೀರಾತಿನಿಂದ. ಜಾಹೀರಾತುಗಳಿಗೆ ಮೊದಲೇ ಕಡಿವಾಣವಿಲ್ಲ. ಜಾಹೀರಾತಿನಿಂದ ಆಗುವ ಅಪರಧಗಳನ್ನು ಇನ್ನೊಮ್ಮೆ ನೋಡೋಣ. ಆತ ಕೊಟ್ಟ ಜಾಹೀರಾತಿಗೆ ಆಕೆ ಪ್ರತಿಕ್ರಿಯಿಸಿದಳು. ಆತನೂ ಮುಂದುವರಿದು ಎಲ್ಲೋ ಒಂದು ಪ್ರದೇಶದಲ್ಲಿ ಸಿಕ್ಕರು. ಅಮೇಲೆ ಯಥಾವತ್ ಅದೇಕಥೆ! ಮೊದಲ ಪರಿಚಯದಲ್ಲೇ ಅಗಲಿರಲಾರದಷ್ಟು ’ಪ್ರೀತಿ’! ಕೆಲವೇದಿನಗಳಲ್ಲಿ ಆತನಿಂದ ಹಣಸಹಾಯ ಮಾಡುತ್ತೀಯಾ ಎಂಬ ಪ್ರಸ್ತಾಪ. ಹಣನೀಡಿದ ಆಕೆಯೊಂದಿಗೆ ದೇಹಸುಖವನ್ನೂ ಪಡೆದು ಆಮೇಲೆ ನಾಪತ್ತೆ. ಆತನ ಜಂಗಮದೂರವಾಣಿ ನಿಷ್ಕ್ರ್‍ಇಯ ಅಥವಾ ಬದಲು!

ಇನ್ನೂ ಒಂದು ಹೆಜ್ಜೆ ಮುಂದುವರಿದರೆ ಅನೈತಿಕತೆ. ಗಂಡಸೂ ಹೆಂಗಸೂ ತಮ್ಮತಮ್ಮ ಇತಿಮಿತಿಗಳನ್ನು ಮರೆತು ವಿವಾಹೇತರ ಸಂಪರ್ಕಕ್ಕೆ ಮುಂದಾಗುವುದು. ’ಕದ್ದು ತಿಂದ ಹಣ್ಣಿನ ರುಚಿ ಜಾಸ್ತಿ ಇರುತ್ತದಂತೆ’ ಎಂದುಕೊಂಡ ಅವರ ಮನಸ್ಸಿನಲ್ಲಿ ’ಏನೋ ಅಂಥದ್ದು’ ಬೇಕಾಗಿರುತ್ತದೆ. ತನ್ನ ಗಂಡನಲ್ಲಿ/ಹೆಂಡತಿಯಲ್ಲಿ ಸಿಕ್ಕಿದರೂ ತೃಪ್ತಿಕರವಾಗಿರದ ಆ ’ಏನೋ ಅಂಥದ್ದು’ ಪರರ ಗಂಡ/ಹೆಂಡಿರಲ್ಲಿ ಸಿಗುತ್ತದೆ. ೨-೩ ದೊಡ್ಡ ಮಕ್ಕಳನ್ನು ಹೊಂದಿರುವ ಅನೇಕ ಹೆಂಗಸರು ಅಥವಾ ಗಂಡಸರೂ ಅದನ್ನೆಲ್ಲಾ ಮರೆತು ಎಲ್ಲೋ ಈ ರೀತಿಯ ಸಂಬಂಧಕ್ಕೆ ಮುಂದಾಗುತ್ತಾರೆ. ಕೆಲವೊಮ್ಮೆ ಇಂತಹ ಹಲವು ಸಂಬಂಧಗಳು ಒಂದಾದಮೇಲೆ ಒಂದರಂತೇ ಮುಂದುವರಿಯುತ್ತವೆ! ಕಾರಣವಿಷ್ಟೇ : ಆರ್ಥಿಕ ಸ್ವಾತಂತ್ರ್ಯ. ಗಳಿಸುವ ಅವರಿಗೆ ಮಜಾ ತೆಗೆದುಕೊಳ್ಳಲು ಬೇಡಾ ಎನ್ನಲು ಆಗುವುದೇ? ಅವರಿಗೆ ಯಾವ್ಯಾವ ರೀತಿಯ ಮಜಾ ಎಲ್ಲೆಲ್ಲಿ ಸಿಗುತ್ತದೋ ಅದ್ನ್ನು ಹುಡುಕಿ/ಹಿಂಬಾಲಿಸಿ ಪಡೆಯುತ್ತಾರೆ. ಇಂತಹ ಎಷ್ಟೋ ಕುಟುಂಬಗಳು ಒಡೆದುಹೋಗಿವೆ, ಕೆಲವು ಹಾಗೇ ಇದ್ದರೂ ಆಗಾಗ ಹೊಗೆಯಾಡುವ ಚಿಮಣಿಗಳಂತಿರುತ್ತವೆ!

ಇತ್ತೀಚೆಗಂತೂ ಡೈವೋರ್ಸ್ ಅನ್ನುವುದು ತೀರಾ ಸಾಮನ್ಯವಾಗಿಬಿಟ್ಟಿದೆ. ವಿನಾಕಾರಣ ಡೈವೋರ್ಸ್! ಇಂದು ಮದುವೆ, ಸಾಯಂಕಾಲ ಆರತಕ್ಷತೆ, ಮಾರನೇದಿನ ಬೀಗರ ಊಟ, ವಾರದಲ್ಲೇ ಮಧುಚಂದ್ರ, ಅದುಮುಗಿದ ವಾರದಲ್ಲೇ ವಿಚ್ಛೇದನ! ಇದರಲ್ಲಿ ಹೆಣ್ಣುಗಳ ಪಾತ್ರ ತೀರಾ ದೊಡ್ಡದು. ಹೆಣ್ಣೊಬ್ಬಳು ಗಂಡನ್ನು " ಆತ ಗಂಡಸೇ ಅಲ್ಲಾ " ಎಂದು ವಿಚ್ಛೇದಿಸಿದಾಗ ಹಾಗನ್ನಿಸಿಕೊಂಡ ಆತನಿಗೆ ಎಷ್ಟು ರೋಷ ಉಕ್ಕಿರಬೇಡ? ಮತ್ತೊಂದು ಮದುವೆಯಾಗಿ ಮಗು ಜನಿಸುವವರೆಗೂ ಗೊತ್ತಿರುವ ಹತ್ತಿರದ ಸಮಾಜಕೂಡ ಆತನನ್ನು ಅನುಮಾನಾಸ್ಪದ ರೀತಿಯಲ್ಲಿ ನೋಡುತ್ತಿತ್ತು! ಕೇವಲ ಆರ್ಥಿಕತೆಯನ್ನು ಅವಲಂಬಿಸಿ ಸಂಬಂಧ ಇನ್ನೊಂದು ತೆರನಾದದ್ದು. ಗಂಡನಾದವನು ಕಾರು, ಬಂಗಲೆ, ಸಾಕಷ್ಟು ಧಾರಾಕಾರವಗಿ ಹರಿಯುವ ಬ್ಯಾಂಕ್ ಬ್ಯಾಲೆನ್ಸ್ ಉಳ್ಳವನಾಗಿರಬೇಕು. ಇಲ್ಲದಿದ್ದರೆ ಮದುವೆಯಾದ ಕೆಲವೇ ದಿನಗಳು ಆ ಮದುವೆಯ ಭಾಗ್ಯ! ವಿಚ್ಛೇದಿತ ಮಹಿಳೆಯರಿಗೆ ಇನ್ನೂ ಮದುವೆಯಾಗದಿರುವ ಕನ್ಯೆಯರಿಗಿಂತಾ ಹೆಚ್ಚಿನ ಡಿಮಾಂಡು. ಹೀಗಾಗಿ ವಿಚ್ಛೇದನ ಸುಲಭ ಸೂತ್ರವಾಗಿಬಿಟ್ಟಿದೆ. ಕೆಲವರಂತೂ ಸುಖಾಸುಮ್ಮನೆ ಗಂಡನೆನಿಸಿಕೊಳ್ಳುವ ವ್ಯಕ್ತಿಯಿಂದ ಪರಿಹಾರ ಗಿಟ್ಟಿಸಲು ಮದುವೆಯಾಗುತ್ತಾರೆ. ಅದೇ ಒಂದು ದಂಧೆ! ಇನ್ನು ಕೆಲವರದು ಅನೈತಿಕ ಸಂಬಂಧದ ಹಿನ್ನೆಲೆಯುಳ್ಳದ್ದಾಗಿದ್ದು ಮದುವೆಯಾಗುವವರೆಗೂ ತೋರಬರುವುದಿಲ್ಲ, ಸಮಾಜದ ಕಣ್ಣಿಗೆ ಬೆಣ್ಣೆ ಹಚ್ಚುವ ತಂತ್ರ ಅದು! ಮದುವೆ ಎಂಬುದೊಂದು ಶಾಸ್ತ್ರಕ್ಕೆ. ಮಿಕ್ಕಿದ ಕೆಲಸಕ್ಕೆ ಬೇರೇ ಜನ ಇದ್ದಾರೆ ಎಂಬುದು ಅವರ ಅನಿಸಿಕೆ. ಇಂತಹ ಮದುವೆಗಳೂ ಕೂಡ ವಿಚ್ಛೇದನದಲ್ಲಿ ಪರ್ಯವಸಾನಗೊಳ್ಳುತ್ತವೆ.

ದಿನವೂ ಆಂಗ್ಲ ನಿಯತಕಾಲಿಕಗಳಲ್ಲಿ ಒನ್ ನೈಟ್ ಸ್ಟೇ, ಒನ್ ಡೇ ಫ್ಲಿಂಗ್, ಲಿವಿಂಗ್ ಟುಗೆದರ್ ಮತ್ತಿತರ ವಿದೇಶೀ ಸಂಸ್ಕೃತಿಯನ್ನು ಎತ್ತಿಹಿಡಿಯುವ ಕೆಲಸ ನಡೆಯುತ್ತಿದೆ. ಧರಿಸುವ ಬಟ್ಟೆಗಳಂತೂ ಎಲ್ಲವನ್ನೂ ಎತ್ತಿ ತೋರುವ ’ಅಪಾರ’ ದರ್ಶಕಗಳಾಗಿವೆ. ಹುಡುಗಿ ಯಾರು ಹೆಂಗಸು ಯಾರು ಎಂಬ ಭೇದವನ್ನೇ ಹೇಳದ ದಿರಿಸುಗಳು! ಯಾವಾಗ ನೋಡಿದರೂ ಆರ್ಕುಟ್ಟು, ಫೇಸ್ ಬುಕ್ಕು ಇದರಲ್ಲೇ ವ್ಯವಹಾರ! ಇದನ್ನೆಲ್ಲಾ ನೋಡಿದಾಗ ಅನ್ನಿಸುವುದು " ಐ ಲವ್ ಯೂ " ಎಂಬ ಹೇಳಿಕೆಗೆ ಅರ್ಥವಿದೆಯಾ? ಅದು ಕೇವಲ ದೈಹಿಕವಾಗಿ ತೆವಲನ್ನು ತೀರಿಸಿಕೊಳ್ಳುವ ಆಸೆಯಿಂದ ಹೇಳುವ ಮಾತಲ್ಲವಾ ? ಭಾರತದ ಸಾಮಾಜಿಕ ಮೌಲ್ಯ ಯಾಕೆ ಹೀಗಾಗುತ್ತಿದೆ? ಹಿಂದೆ ಹೀಗಿತ್ತಾ ? ಇಷ್ಟೊಂದು ಗರಿಷ್ಠಪ್ರಮಾಣದಲ್ಲಿ ವಿಚ್ಛೇದನ, ಲವ್ವಿ-ಡವ್ವಿ ನಡೆಯುತ್ತಿತ್ತಾ ? ಹಾಗಾದ್ರೆ ಈಗ ಮಾತ್ರ ಯಾಕೆ ಹೀಗಾಗ್ತಾ ಇದೆ? ಆಂಗ್ಲರ ಬೇಡದ ಸಂಸ್ಕೃತಿ ನಮ್ಮ ಸಮಾಜದಮೇಲೆ ಪರಿಣಾಮ ಬೀರಿದೆ ಎಂದರೆ ತಪ್ಪಾ? ವಿಧವಾ ಅಥವಾ ವಿಚ್ಛೇದಿತ ಮಹಿಳೆಯ ಮದುವೆ ನಿಷೇಧವಿತ್ತಲ್ಲವಾ? ಮಹಿಳೆಯರು ಸಾಂಕೇತಿಕವಾಗಿ ತನ್ನ ಶೀಲವನ್ನು ಮಾರಬಾರದೆಂಬ ಅಥವಾ ಪರಭಾರೆಮಾಡಬಾರದೆಂಬ ಕಾರಣಕ್ಕೆ ಕಿವಿ,ಮೂಗು,ಕೈ, ಕೊರಳು, ಕಾಲು ಈ ಅಂಗಗಳಲ್ಲಿ ಆಯಾ ಆಭರಣಗಳನ್ನು ಧರಿಸುತ್ತಿದ್ದರಲ್ಲವಾ? ಇವತ್ತು ಈ ಕಟ್ಟಳೆಗಳು ಕೇವಲ ಹಿಂದುಳಿತ ಸಂಸ್ಕೃತಿ ಎಂದು ನೋಡುವ ನಾವು ಮುಂದೆ ಸಹಜವಾಗಿ ಅನುಭವಿಸಬೇಕಾದ ಹಲವು ಸಮಾಜಿಕ ಪಿಡುಗುಗಳು ಈಗಲೇ ಗೋಚರಿಸಲ್ಪಡುತ್ತಿವೆಯಲ್ಲವೇ? ಅಂದರೆ ’ಐ ಲವ್ ಯೂ " ಎಂಬುದು ಅಣ್ವಸ್ತ್ರಕ್ಕಿಂತಾ ದೊಡ್ಡ ಅಸ್ತ್ರವೆಂದರೆ ತಪ್ಪೇ ? ಈ ಕುರಿತು ಚಿಂತಕರು ಕುಳಿತು ಮಂಥನಮಾಡಬೇಕಾಗಿದೆ. ’ಹೆಣ್ಣೊಬ್ಬಳು ಕಲಿತರೆ ಶಾಲೆಯೊಂದು ತೆರೆದಂತೇ’ ಎನ್ನುವ ನಾಣ್ನುಡಿ ಇದೆಯಲ್ಲಾ ಅದನ್ನು ಸರಿಯಾಗಿ ಅರ್ಥೈಸಿನೋಡಿ. ಇಂದಿನ ಕಲಿತ ಹೆಣ್ಣು ಹಲವು ಶಾಲೆಗಳನ್ನು ಅಲ್ಲಲ್ಲಿ ತೆರೆಯುತ್ತಾಳೆ! ಯಾಕೆಂದರೆ ಅವಳಿಂದ ಸಮಾಜಕ್ಕೆ ಆಗುವ ಅಪಚಾರ ಕಮ್ಮಿಯೇ? ಕಲಿಕೆ ಬೇರೆ ಮತ್ತು ಸಂಸ್ಕಾರ ಬೇರೆ. ಕೇವಲ ಪದವಿ ಓದಿದ ಹೆಣ್ಣುಮಕ್ಕಳು ಸಂಸ್ಕಾರವಂತರು ಎನ್ನಲು ಸಾಧ್ಯವೇ? ಹಾಗಂತ ಹೆಚ್ಚಿನ ಓದಿರದ ನಮ್ಮ ಹಳ್ಳಿಯ ಹೆಂಗಳೆಯರಲ್ಲಿ ಸಂಸ್ಕಾರದ ಕೊರತೆ ಇದೆಯೇ? ಸ್ವಸ್ಥಸಮಾಜ ಮುನ್ನಡೆಯಬೇಕೆಂದಿದ್ದರೆ ಮಹಿಳೆಯರಿಗೆ ಮಾರ್ಗದರ್ಶನ ಅಗತ್ಯ ಎಂಬುದು ಹಲವರ ಅಂಬೋಣವಾಗಿದೆ. ಅಂದಹಾಗೇ ಮಾಧ್ಯಮಗಳು ತಮ್ಮ ಟಿ.ಆರ್.ಪಿ ರೇಟಿಗಾಗಿ ಕಂಡಿದ್ದನ್ನೆಲ್ಲಾ ದೊಡ್ಡಸುದ್ದಿಮಾಡಿ ಅನೈತಿಕತೆಯನ್ನೇ ವಿಜೃಂಭಿಸಿ ಹುಯಿಲೆಬ್ಬಿಸುವುದನ್ನು ನಿರ್ಬಂಧಿಸಲು ಸಮಾಜಕಲ್ಯಾಣ ಇಲಾಖೆ ತಲೆಹಾಕಬೇಕಾಗಿದೆ ಎಂದೂ ಹಲವರು ಅಭಿಪ್ರಾಯಪಟ್ಟಿದ್ದಾರೆ.

Wednesday, May 18, 2011

ಮಲಯಾಳೀ ಕುಟ್ಟಿಚ್ಚಾತ್ತನ್, ಎಂ.ಜಿ.ಎಲ್ ಟೆಕ್ನಾಲಜಿ ಮತ್ತು ಚಿಲ್ಲರೆ


ಮಲಯಾಳೀ ಕುಟ್ಟಿಚ್ಚಾತ್ತನ್, ಎಂ.ಜಿ.ಎಲ್ ಟೆಕ್ನಾಲಜಿ ಮತ್ತು ಚಿಲ್ಲರೆ

" ಸಂಭೋ ಮಹಾದೇವ ! ಯುಗಧರ್ಮಗ್ಗೆ ತಗ್ಗಂತೇ ಎಲ್ಲವೂ ನಡೆಯಬೇಗಲ್ಲವೇ ? ಅದಗ್ಗೇ ನಿಮ್ಮ ಮನೆಯಲ್ಲಿ ಮಣಿಪ್ರಾಬ್ಲಂ, ಅನಾರೋಕ್ಯ, ಹಿಡಿದ ಗೆಲಸಗಳು ಆಕದೇ ಇರುವಂತದು, ಪೆಣ್ಣು-ಗಂಡು ಸಮಸ್ಯಾ, ಸಂತಾನಹೀನ ಸಮಸ್ಯಾ, ಸ್ತ್ರೀ ವಶೀಗರಣಂ, ಬ್ಯುಸಿನೆಸ್ಸಲ್ಲು ಧನಾಗಮಂ, ಜನವಶೀಗರಣಂ, ವಾಸ್ತುದೋಸ ನಿವಾರಣಂ ಹೀಗೇ ಹಲವು ಸಮಸ್ಯಾ ತಕ್ಕೊಂಡು ನಮ್ಮಲ್ಲಿ ಪರಿಯಾರವಕ್ಕುಂ.....ಇದು ಮಳಯಾಳೀ ಕುಟ್ಟಿಚ್ಚಾತ್ತನ್ ಸಗಾಯದಿಂದ ಪರಂಪರಾ ವಂದಿದ್ದು "

ನಗಲಿಕ್ಕೆ ಏನಿದೆ ಹೇಳಿ? ಎದುರು ಕುಳಿತ ಪ್ರಶ್ನಾರ್ಥಿ ದಂಗು ಬೀಳಬೇಕು! ಅಷ್ಟು ಅಚ್ಚ ಕನ್ನಡದಲ್ಲಿ ನಮ್ಮ ಕೇರಳದ ಲ್ಯಾಪ್ ಟಾಪ್ ಜ್ಯೋತಿಷಿಗಳು ಮಾತನಾಡುತ್ತಾರೆ. ಅವರು ಆರಾಧಿಸದೇ ಬಿಟ್ಟ ದೇವರು ಯಾವುದೋ ಇರಲಿಕ್ಕಿಲ್ಲ. ಬೇಕಾದರೆ ಅವರನ್ನೇ ಕೇಳಿ :

" ಹೌದು ಹೌದು ಪಚ್ಚವಳ್ಳ ಕುಳಕಿ ಗುರುವಾಯೂರಪ್ಪನ್ ಸಬರಿಮಲೈ ಅಯ್ಯಪ್ಪ ಸ್ವಾಮಿಗಳ್ ಬಾಲಾಂಜನೇಯ ದೇವಿ ಕಾಳಿಕಾ ದುರ್ಗಾ ಮೂಕಾಂಬಾ ಸತಕೋಟಿ ದೇವರುಗಳ್ ಯಂಗಳ ಆರಾಧನೆ ........."

ಓಹೊಹೊಹೋ ಸಾಕು ಸ್ವಾಮೀ ಸಾಕು, ಗೊತ್ತಾಯ್ತು ಬಿಡಿ, ನಿಮ್ಮಷ್ಟು ಭಾಗ್ಯವಂತರು ಯಾರು ಹೇಳಿ. ಎದುರಿಗೆ ಕುಳಿತಾಗ ನೀವು ದೂಸರಾ ಮಾತೇ ಆಡೋಹಾಗಿಲ್ಲ! ಎಲ್ಲವೂ ಮಂತ್ರಮಯ. ನಿಮಗೆ ಏನಾಗಬೇಕು ಹೇಳಿ, ಎಲ್ಲವೂ ಆಗುತ್ತದೆ. ಯಾರಾದ್ರೂ ಹೋದವರನ್ನು ಬದುಕಿಸಿಕೊಡಿ ಎಂದರೆ ಮಾತ್ರ ಸಾಧ್ಯವಾಗಲಿಕ್ಕಿಲ್ಲ, ಮಿಕ್ಕಿದ್ದೆಲ್ಲಾ ಸಾಧ್ಯ ಎನ್ನುತ್ತಾರೆ ಈ ಜ್ಯೋತಿಷಿಗಳು. ಅವರು ದಿನವೂ ದೇವರುಗಳ ಜೊತೆ ಮಾತನಾಡಬಲ್ಲ ಮಹಾಮಹಿಮರು. ಅದರಲ್ಲೂ ಮಳಯಾಳೀ ಕುಟ್ಟಿಚ್ಚಾತ್ತನ್ ಅವರ ಕೈಗೊಂಬೆಯ ಥರ ಆಗಿಬಿಟ್ಟಿದ್ದಾನೆ !

" ಗುರುಕ್ಕಳೇ ಯಂಗಳ್ ಗರ್ಣಾಟಗ ಬಿಜೇಪಿ ಸರಗಾರ ಉಳಿಯುತ್ತದೆಯೋ ? ಹೇಳಿ "

" ಆಯ್ಯಯ್ಯೋ ನಿಲ್ಲಿ ನಿಲ್ಲಿ ನಮ್ಮ ಕುಟ್ಟಿಚ್ಚಾತ್ತನ್ ಎಲ್ಲೋ ಹೋಗಿದ್ದಾರೆ [ಆಫ್ ಲೈನ್ ? ] ಅವರು ವಂದಮೇಲೆ ಉತ್ತರ ಗೇಳುತ್ತಾರೆ. ಕೊರ್ಚ ಸಮಯಂ ...................."

" ಸಮಯವೇ ಅದು ಮಾತ್ರ ಸಾಧ್ಯವೇ ಇಲ್ಲ, ನಮಗೆ ಅದೇ ಕುತೂಹಲ ಗುರುಕ್ಕಳೇ .... ಕೊರ್ಚ ಬೇಗಂ "

" ಎಂದು ಮಾರಾಯರೆ ನಿಂಗಳ್ ಅರ್ಜೆಂಟು ಮಾಡವೇಂಡ ... ಕುಟ್ಟಿಚ್ಚಾತ್ತನ್ ಕೋಪ ಬರ್ತಾರೆ "

" ನಮ್ಮ ಪುಟ್ಸಾಮಿಗೆ ಮಕ್ಳಿಲ್ಲ ಏನಾದ್ರೂ ಮಾಡ್ಕೊಡ್ತೀರಾ ? "

" ಹೋ ಹೋ ....ನಮ್ಮಿಂದ ಎಷ್ಟು ಮಗು ಹುಟ್ಟಿಲ್ಲ .....ಎಂತೆಂತಾ ಪೀಪಳ್ಗೆಲ್ಲಾ ಮಕ್ಕಳು ಮಾಡಿತ್ತು ನಾವು ..ನಿಮಕ್ಕೆ ಇಲ್ಲಾ ಎನ್ನುವುದೋ ? ಆದರೆ ಒಂದು ವಿಷಯಂ .....ಕೊರ್ಚ ಹೈ ಎಕ್ಸ್‍ಪೆಂಡಿಚರ್ ......ಮೂರು ದಿನ ೭೨ ಹವರು ಏಗಾಂತ ಪೂಜಾ....೧೦೧ ತೆಂಗಿನಗಾಯಿ ಗಳಸಂ, ವಸ್ತ್ರಂ, ಪಂಚಕಾಳೀ ಪೂಜಾ, ಭೋಜನಂ, ಕುಟ್ಟಿಚ್ಚಾತ್ತನ್ ಪೂಜಾ ...ಎರ್ಲಿ ಮಾರ್ನಿಂಗು ಪಚ್ಚವಳ್ಳ ಕುಳಿಕಿ ಆಯಿ ತದನಂತರಂ ಪೂಜಾ ....ಮನಸಿಲಾಯೋ ? "


" ಆಗ್ಲಿ ಬಿಡಿ ಅಷ್ಟೇ ತಾನೇ ಆತ ಕೊಡ್ತಾನೆ. ಖರ್ಚಿಗೆಲ್ಲಾ ತೊಂದರೆ ಇಲ್ಲಬಿಡಿ ಗುರುಕ್ಕಳೇ .... ಹಾಂ ಇನ್ನೊಂದು ನಾನು ಒಂದು ಪಕ್ಷ ಕಟ್ಟಬೇಕೆಂದಿದ್ದೇನೆ. ಅದಕ್ಕೆ ನಾನು ರಾಷ್ಟ್ರಾಧ್ಯಕ್ಷ ಮತ್ತು ನನ್ನ ಮಗ [ ಇನ್ನೂ ೪-೫ ವರ್ಷ ವಯಸ್ಸು ಈಗಲೇ ತಯಾರುಮಾಡಿದರೆ ಮುಂದೆ ಸರ್ ಹೋಗ್ತದೆ ಅದಕ್ಕೇ] ರಾಜ್ಯಾಧ್ಯಕ್ಷ .....ಹೇಗೆ ನಮ್ಮ ರಾಜಕೀಯ ಭವಿಷ್ಯ ಚೆನ್ನಾಗಿದೆಯಾ ? "

" ಕುಟ್ಟಿಚ್ಚಾತ್ತನ್ ಒಂದು ಸಲ ಒಂದೇ ಸಮಸ್ಯಾಗೆ ಪರಿಗಾರ ಹೇಳುತ್ತಾನೆ.....ತಮ್ಮ ಈ ಸಮಸ್ಯಾ ನಾಳೆ ಗೇಳುತ್ತೇನೆ"

ಆಯ್ತು ಸ್ವಾಮೀ ನಿಮ್ಮ ಕುಟ್ಟಿಚ್ಚಾತ್ತನ್ ಅದ್ಯಾವಾಗ ಆನ್‍ಲೈನ್ ಬರುತ್ತಾನೋ ಆಗ್ಲೇ ಹೇಳಿ ಪರವಾ ಇಲ್ಲ. ಸದ್ಯ ಇಲ್ಲಿಗೆ ಬಿಟ್ಟಿರಲ್ಲ ಎಂದು ಎದ್ದುಬರಬೇಕಾಗುತ್ತದೆ. ಇಂತಹ ಹಲವು ಕುಟ್ಟಿಚ್ಚಾತ್ತನ್‍ಗಳು ನಗರದ ತುಂಬ ಅಲ್ಲಲ್ಲಿ ಠಿಕಾಣಿಹೂಡಿ ಹಲವು ರೀತಿಯಲ್ಲಿ ತಮ್ಮ ಬೇಳೇ ಬೇಯಿಸಿಕೊಳ್ಳುತ್ತಿರುತ್ತಾರೆ. ಅಸಲಿಗೆ ಅವರ ಸಮಸ್ಯೆಗಳಿಗೇ ಅವರಲ್ಲಿ ಉತ್ತರವಿರುವುದಿಲ್ಲ! ಆದರೂ ಹಲವರ ಸಮಸ್ಯೆಗಳನ್ನು ಬಗೆಹರಿಸುತ್ತೇವೆ ಎಂದು ಕೂತಿರುತ್ತಾರೆ.

ಮೊದಲೇ ರಮಲಜ್ಯೋತಿಷ್ಯ, ಕಮಲಜ್ಯೋತಿಷ್ಯ, ಫಲಜ್ಯೋತಿಷ್ಯ, ವೈಜ್ಞಾನಿಕ ಜ್ಯೋತಿಷ್ಯ, ಅಷ್ಟಮಂಗಲ ಭವಿಷ್ಯ, ಹಕ್ಕಿಶಕುನ, ಹಸ್ತಸಾಮುದ್ರಿಕ, ನಾಡೀ ಜ್ಯೋತಿಷ್ಯ, ಸಂಖ್ಯಾ ಶಾಸ್ತ್ರ, ಕುಡಿದ ಕಾಫೀ ಕಪ್ಪು ನೋಡಿ ಭವಿಷ್ಯ, ದರ್ಪಣಶಾಸ್ತ್ರ, ಟೆರೋಟ್ ಕಾರ್ಡ್ ರೀಡಿಂಗ್ ಒಂದೇ ಎರಡೇ ಇನ್ನೂ ಹಲವಾರು ನಮ್ಮ ಹುಚ್ಚಿಗೆ ತಕ್ಕಂತೇ ಲಭ್ಯವಿವೆ. ಜೇಬುಗಟ್ಟಿ ಇದ್ದರೆ ಮಜಾತೆಗೆದುಕೊಳ್ಳಬಹುದು!ಈ ಎಲ್ಲರಲ್ಲೂ ಬಹುತೇಕವಾಗಿ ಸರ್ವೇ ಸಾಮಾನ್ಯವಾಗಿ ಸಿಗುವ ಒಂದು ವಸ್ತುವೆಂದರೆ ಲ್ಯಾಪ್ ಟಾಪ್! ವಿಪರ್ಯಾಸವೆಂದರೆ [ ಇದಿಷ್ಟೂ ಜನ ಕುಳಿತಲ್ಲೇ ಕಾಸುಮಾಡುವ ಕಲೆಯನ್ನು ಕಲಿತ ನಿಪುಣರಾಗಿರುತ್ತಾರೆಯೇ ವಿನಃ ಯಾವುದೂ ಪ್ರಯೋಜನಕ್ಕೆ ಬರುವಂತಹುದಲ್ಲ. ] ಅಸಹಾಯಕತೆಯಲ್ಲಿ ತೊಳಲಾಡುತ್ತಿರುವವರೇ ಇವರ ಗಿರಾಕಿಗಳಾಗಿದ್ದು ತಿಗಣೆ ರಕ್ತಹೀರುವಹಾಗೇ ತೊಂದರೆಯೆಂದು ಬಂದ ಜನರ ಮಾನಸಿಕ ಸ್ಥಿತಿ ಮತ್ತು ಅವರ ಆರ್ಥಿಕಸ್ಥಿತಿಯನ್ನು ಆಮೂಲಾಗ್ರ ಒಂದೇ ಸಿಟ್ಟಿಂಗ್‍ನಲ್ಲಿ ಅಳೆಯುವ ಅವರು ಯಾರಿಂದ ಹೇಗೆ, ಯಾವಾಗ, ಎಲ್ಲಿ, ಎಷ್ಟುದುಡ್ಡು ಪೀಕಬೇಕೆಂಬುದನ್ನು ಗುರುತಿಸಬಲ್ಲವರಾಗಿರುತ್ತಾರೆ. ಇತ್ತೀಚೆಗೆ ಇಂತಹ ಲಕ್ಷಾಂತರ ಭೋಗಸ್ ಜ್ಯೋತಿಷಿಗಳಿಂದ,ವಾಸ್ತು ತಜ್ಞರಿಂದ ಮಧ್ಯಮವರ್ಗದವರ ಸಮಸ್ಯೆಗಳು ಇನ್ನೂ ಬಿಗಡಾಯಿಸುತ್ತಿವೆ, ಹಲವು ಪ್ರದೇಶ ಹಡಾಲೆದ್ದು ಮೂಢವಾಗಿಹೋಗಿದೆ.

-----------

ಪಕ್ಕದ ಮನೆಯ ಪಾರ್ವತಿ ಮೆನನ್ ಹೊಸದಾಗಿ ಕನ್ನಡ ಕಲಿಯುತ್ತಿದ್ದರು. ಬೆಳಿಗ್ಗೆ ಎದುರಾದವರನ್ನು ಮಾದಕ್ಕ ಕೇಳಿದಳು " ಅಕ್ಕಾ ತಿಂಡಿ ಆಯ್ತಾ ? "

ಪಾರ್ವತಿ ಮೆನನ್ ಉತ್ತರ " ಇಲ್ಲ ಇಲ್ಲ ನಿನ್ನೆ ರಾತ್ರಿ ಮಲಗುವಾಗ ಒಂದುಗಂಡ ಬೆಳಿಗ್ಗೆ ಏಳುವಾಗ ಎಂಟುಗಂಡ, ಅದಕ್ಕೇ ಲೇಟು "


------------

ಇನ್ನು ಎಂ.ಜಿ.ಎಲ್ ಟೆಕ್ನಾಲಜಿ ! ಇದೊಂದು ಪ್ರಪಂಚದಲ್ಲೇ ಹೊಸದಾಗಿ ಸಂಶೋಧಿಸಲ್ಪಟ್ಟ ಟೆಕ್ನಾಲಜಿ! ಎಂ.ಜಿ.ಎಲ್ ಎಂದರೆ ’ ಮೆಕಾನಿಕಲ್ ಗ್ರಾಸ್ ಲಾಕ್’ ಎಂದು ಅದರ ವಿಸ್ತಾರರೂಪ. ಈ ಟೆಕ್ನಾಲಜಿಯನ್ನು ಪೊರಕೆಯೊಂದರಲ್ಲಿ ಬಳಸಲಾಗಿದೆ! ಅಬ್ಬಬ್ಬ ಅದೇನು ಅಂತೀರೋ ನಿಧಾನವಾಗಿ ಕೇಳಿ: ಸ್ವಾತಂತ್ರ್ಯ ಪೂರ್ವದಲ್ಲಿ ಪೊರಕೆ [ಹಿಡಿಕಟ್ಟು] ಅಥವಾ ಕಸಪೊರಕೆಗಳಿಗೆಲ್ಲಾ ಯಾವುದೇ ಬ್ರಾಂಡ್ ಇರಲಿಲ್ಲ. ಇದನ್ನು ಸ್ವಾತಂತ್ರ್ಯ ಬಂದ ೪೦-೪೫ ವರ್ಷಗಳ ವರೆಗೂ ಯಾರೂ ಲೆಕ್ಕಿಸಲೇ ಇಲ್ಲ. ಮುಂದೆ ಹೀಗೇ ಬಿಟ್ಟರೆ ಪೊರಕೆಗಳ ಘನತೆಗೆ ಕುಂದುಂಟಾಗುತ್ತದೆಂದೂ ಹಿಂದುಳಿದ ತರಗತಿಯಲ್ಲಿರುವ ಪೊರಕೆಗಳಿಗೆ ಸಾಮಾಜಿಕ ನ್ಯಾಯ ಒದಗಿಸುವ ಸಲುವಾಗಿ ಒಂದೆರಡು ಜನ ಪಂಡಿತರು ಅವುಗಳಿಗೆ ಬ್ರಾಂಡ್ ನೀಡಿದರು.

ದಿನಗಳೆದಂತೇ ಅವುಗಳ ಮರ್ಯಾದೆಗೆ ತಕ್ಕನಾಗಿ ಅವುಗಳನ್ನು ಪ್ಲಾಸ್ಟಿಕ್ ಕವರ್ ಗಳಲ್ಲಿ ಪ್ಯಾಕಿಂಗ್ ಮಾಡಲಾಯಿತು. ಹಾಗೆ ಪ್ಯಾಕ್ ಮಾಡಲ್ಪಟ್ಟ ಪೊರಕೆಗಳು ರಾಜ್ಯಾದ್ಯಂತ ತಿರುಗಾಡ ಹತ್ತಿದವು! ಮಾರಾಟ ಭರಾಟೆ ಜಾಸ್ತಿಯಾದಾಗ ಮೂಲವಸ್ತುಗಳಲ್ಲಿ ಒಂದನೆಯದು ಹುಲ್ಲಿನಥರದ ಮರದ ಟೊಂಗೆಗಳು ಮತ್ತೊಂದು ಉತ್ತಮ ಪ್ಲಾಸ್ಟಿಕ್ ಹಿಡಿಕೆ ಇವೆರಡರ ಗುಣಮಟ್ಟದಲ್ಲೂ ಕಳಪೆ ದರ್ಜೆ ಕಾಣಹತ್ತಿತ್ತು. ಬಲಿಯದ ಮರಗಳ ಎಳೆಯ ಟೊಂಗೆಗಳನ್ನು ಕತ್ತರಿಸಿ ಹಸಿಯಿರುವಾಗಲೇ ಅವುಗಳನ್ನು ಕಟ್ಟಿ ಒಂದೊಂದು ಹಿಡಿಕೆಯಲ್ಲಿ ಅವುಗಳನ್ನು ತೂರಿಸಿ ಆಮೇಲೆ ಅವುಗಳನ್ನು ಪ್ಲಾಸ್ಟಿಕ್ ಕವರ್ ಗಳಲ್ಲಿಪ್ಯಾಕ್ ಮಾಡಿ ಸರಬರಾಜು ಮಾಡಲಾಯಿತು. ಮಾಧ್ಯಮಗಳಲ್ಲಿ ಜೋರಾಗಿ ಜಾಹೀರಾತು ನೀಡಲಾಯಿತು! ಜನ ಕೊಂಡೇ ಕೊಂಡರು!

ಕೊಂಡುತಂದ ಪೊರಕೆ ಕಾಸಿಗೆ ಸರಿಯಾದ ಮೌಲ್ಯವನ್ನು ಒದಗಿಸದಾಗ ಜನ ಅದನ್ನು ದೂರಹತ್ತಿದರು. ನಿಜಕ್ಕೂ ಹೇಳಲೋ ನಮ್ಮ ಹಳ್ಳಿಗಳಿಂದ ತಯಾರಾಗಿ ಬರುವ ತೆಂಗಿನಕಡ್ಡಿ ಪೊರಕೆ, ಅಡಿಕೆಸೋಗೆ ಕಡ್ಡಿ ಪೊರಕೆ, ಅಂಚಿಕಡ್ಡಿ ಪೊರಕೆ ಇವೆಲ್ಲಾ ಸಾಕಷ್ಟು ಇದ್ದರೂ ಜನರಿಗೆ ಈ ಹೊಸರೂಪದ ಪೊರಕೆ ಕ್ರಾಂತಿಕಾರಿಯಾಗಿ ಕಂಡಿತು! ಕಸದಮೇಲೆ ಎಷ್ಟೇಸಲ ಕ್ರಾಂತಿಯ ಕಹಳೆ ಮೊಳಗಿದರೂ ಕಸಮಾತ್ರ ಹಾಗೇ ಉಳಿಯ ಹತ್ತಿತು. ಜೊತೆಗೆ ಬ್ರಾಂಡೆಡ್ ಪೊರಕೆಯೇ [ಆರಂಭದಲ್ಲಿ ಚೆನ್ನಾಗಿ ಝಾಡಿಸಿ ಆಮೇಲೆ ಬಳಸಿದರೂ ಸಹ] ಸ್ವಯಂ ಧೂಳನ್ನು ಉಗುಳಹತ್ತಿತು. ಎಷ್ಟೋ ಕಡ್ಡಿಗಳು ಮಧ್ಯೆ ಮಧ್ಯೆ ತುಂಡಾಗುತ್ತಿದ್ದವು. ಕೆಲವೊಮ್ಮೆ ಹಿಡಿಕೆ ಕಳಚಿ ಪೊರಕೆಯ ಬುಡ ಹೊರಗೆಬಂದು ಕ್ಯಾಬರೇ ಡ್ಯಾನ್ಸ್ ಮಾಡಹತ್ತಿತು! ಕೂದಲು ಉದುರಿ ಕೆಲವಷ್ಟೇ ಉಳಿದಮೇಲೆ ನವಿಲುಕೋಸಿನ ಥರಾ ಕಾಣೋ ತಲೆಯಂತೇ ಕಡ್ಡಿಗಳ ತುದಿ ಮುರಿಮುರಿದು ಮೊಂಡಾಗಿ ಖರೀದಿಸಿದ ಮೂರೇ ದಿನದಲ್ಲಿ ಪೊರಕೆಗಳು ಬಿಕನಿ ತೊಟ್ಟವು!

ಇಷ್ಟರಲ್ಲೇ ಬೇಸತ್ತ ಯಾವನೋ ಒಬ್ಬ ಹೊಸದೊಂದು ಅಚ್ಚುತಯಾರಿಸಿಕೊಂಡು ಸಂಪೂರ್ಣ ಪ್ಲಾಸ್ಟಿಕ್ ಪೊರಕೆಯನ್ನು ಮಾರುಕಟ್ಟೆಗೆ ತಂದ. ಆರಂಭದಲ್ಲಿ ಕೆಲವು ನ್ಯೂನತೆಗಳಿದ್ದರೂ ಕ್ರಮೇಣ ತಿದ್ದುಪಡಿಗೊಂಡ ಆವಿಷ್ಕಾರಗಳಲ್ಲಿ ಆ ಪ್ಲಾಸ್ಟಿಕ್ ಪೊರಕೆಗಳು ಬರಹತ್ತಿದವು. ಜನ ಈಗ ಅವುಗಳನ್ನೇ ಕೊಳ್ಳ ಹತ್ತಿದರು. ಬ್ರಾಂಡೆಡ್ ಗ್ರಾಸ್ ಬ್ರೂಮ್ ಗಳಿಗಿಂತ ಪ್ಲಾಸ್ಟಿಕ್ ಬ್ರೂಮ್ ಗಳ ತಾಳಿಕೆಬಾಳಿಕೆ ಜಾಸ್ತಿಯಾಗಿ ತೋರಿತು. ಕೊಟ್ಟ ಹಣಕ್ಕೆ ಯಾವುದೇ ಕಾರಣಕ್ಕೂ ಮೋಸವಿಲ್ಲದ ರೀತಿಯಲ್ಲಿ ಈ ಪೊರಕೆಗಳು ಡ್ಯೂಟಿಮಾಡಿದವು.

ಇದನ್ನೆಲ್ಲಾ ಮನಗಂಡ ಬ್ರಾಂಡೆಡ್ ಗ್ರಾಸ್ ಬ್ರೂಮ್ ತಯಾರಕರು ಬ್ರೂಮ್ ಜೊತೆಗೆ ಒಂದು ಮೊರವನ್ನೂ ಮುಕ್ತವಾಗಿ ಕೊಟ್ಟರೂ ಪೊರಕೆಗಳ ದರವನ್ನು ಹೆಚ್ಚಿಸಿದರು. ಆದರೂ ಮಾರುಕಟ್ಟೆ ಯಾಕೋ ಪಿಕ್-ಅಪ್ ಆದಹಾಗೇ ಕಾಣಲಿಲ್ಲ. ಆಗ ತಯಾರಕರ ’ಆರ್ ಎಂಡ್ ಡಿ’ಯಲ್ಲಿ ಕಂಡುಕೊಂಡ ಹೊಸ ಟೆಕ್ನಾಲಜಿಯೇ ’ಎಂ.ಜಿ.ಎಲ್’ ! ಸಪಾಟಾದ ಬಾಯುಳ್ಳ ಪ್ಲಾಸ್ಟಿಕ್ ಹಿಡಿಕೆಯಲ್ಲಿ ಹಿಂಬಾಗಿದ ರಿಬ್ಸ್ ಗಳಿವೆಯೆಂತೆ. ಹುಲ್ಲನ್ನು ಜಾರದಂತೇ ಅವು ಬಂಧಿಸುತ್ತವಂತೆ. ಮತ್ತು ಯಂತ್ರಗಳ ಸಹಾಯದಿಂದ ಒಂದು ಮೊಳೆಯನ್ನು ಕೂರಿಸಿರುವುದರಿಂದ ಯಾವುದೇ ಕಾರಣಕ್ಕೂ ಕಡ್ಡಿಗಳು ಜಾರಿಬರುವುದಿಲ್ಲವಂತೆ. ಹಿಡಿಕೆಯು ಹಿಂಭಾಗದಲ್ಲಿ ಉರುಟಾಗಿದ್ದು ಅಲ್ಲೂ ಒಳಗಡೆ ಹಿಂಭಾಗಿದ ರಿಬ್ಸ್ ಗಳಿರುವುದರಿಂದ ಕಡ್ಡಿಗಳು ಏನೇನೇಮಾಡಿದರೂ ಆಚೆ ಬರುವುದಿಲ್ಲವಂತೆ. ಹಿಡಿಕೆಯನ್ನು ಹಿಡಿಯುವ ಭಾಗ ಮೆತ್ತಗಿದ್ದು ಕೈಗಳಿಗೆ ಗಾಯವಾಗುವುದಿಲ್ಲಾ ಎನ್ನುತ್ತಾರೆ. ಜಾಹೀರಾತನ್ನು ಓದಿದವರಿಗೆ ಪ್ರತಿ ಸಾಲಿನಲ್ಲೂ ಕಾಣಸಿಗುವುದು ’ಹುಲ್ಲಿನ ಕಡ್ಡಿಗಳನ್ನು ಬಂಧಿಸುವಲ್ಲಿ ಸಹಕಾರಿಯಾಗಿದೆ’ ಎಂಬ ವಿಷಯ. ಈ ಜಾಹೀರಾತನ್ನು ನೋಡಿದಾಗ ನನಗೆ ನೆನಪಾದದ್ದು ತಿಗಣೆ ಹೊಡೆಯುವ ಮಶಿನ್ನು [ಬಿ.ಕೆ.ಟಿ--ಬೆಡ್‍ಬಗ್ ಕಿಲ್ಲಿಂಗ್ ಟೆಕ್ನಾಲಜಿ]! ಯಾರೋ ಒಬ್ಬಾತ ಅದನ್ನು ವಿ.ಪಿ.ಪಿ ಮೂಲಕ ತರಿಸಿದ್ದನಂತೆ, ಬಾಕ್ಸ್ ಬಿಚ್ಚಿದಾಗ ಉರುಟಾದ ಎರಡು ಕಲ್ಲುಗಳು ಮತ್ತು ಒಂದು ಸಣ್ಣ ಪುಸ್ತಿಕೆ ಇದ್ದವು. ಒಂದು ಕಲ್ಲನ್ನು ನೆಲದಮೇಲೆ ಜಾಗರೂಕತೆಯಿಂದ ಇಟ್ಟು ಅದರಮೇಲೆ ತಿಗಣೆಯನ್ನು ಮಲಗಿಸಿ ಇನ್ನೊಂದು ಕಲ್ಲಿನಿಂದ ಮಸಾಜ್ ಮಾಡಿದರೆ ಸಾಕು ಎಂದು ಜೊತೆಗಿರುವ ಪುಸ್ತಿಕೆ ಹೇಳುತ್ತಿತ್ತು! ಇದಕ್ಕೂ ಎಮ್.ಜಿ.ಎಲ್. ಟೆಕ್ನಾಲಜಿಗೂ ಬಹಳ ವ್ಯತ್ಯಾಸವೇನೂ ಕಾಣಿಸುವುದಿಲ್ಲ ಅಲ್ಲವೇ ? ಬ..ಬಾಯ್

Thursday, May 12, 2011

ಮೀನ್ ತಿಂದ್ರೆ ಮಾಪಾಪ ಕಾಶೀಗ್ಹೋದ್ರೆ ಮಾಪುಣ್ಯ!


ಮೀನ್ ತಿಂದ್ರೆ ಮಾಪಾಪ ಕಾಶೀಗ್ಹೋದ್ರೆ ಮಾಪುಣ್ಯ!

ಒಂದಾನೊಂದು ಸರೋವರವಿತ್ತಂತೆ, ಅದರಲ್ಲಿ ಕೊಕ್ಕರೆ ಮಹರ್ಷಿಗಳು ಒಂಟಿಕಾಲಲ್ಲಿ ನಿಂತು ಘೋರವಾದ ತಪಸ್ಸಿನಲ್ಲಿ ತೊಡಗುತ್ತಿದ್ದರಂತೆ! ಅವರು ಉಚ್ಚರಿಸುತ್ತಿದ್ದ ಮಂತ್ರ ’ಮೀನ್ ತಿಂದ್ರೆ ಮಾಪಾಪ ಕಾಶೀಗ್ಹೋದ್ರೆ ಮಾಪುಣ್ಯ.’ ಋಷಿಗಳ ತಪಸ್ಸನ್ನು ನೋಡಿ ಹಲವು ಮೀನುಗಳು ತಮ್ಮ ಆತ್ಮೋದ್ಧಾರಕ್ಕಾಗಿ ಕೊಕ್ಕರೆ ಋಷಿಗಳ ಹತ್ತಿರ ಹತ್ತಿರ ಬರುತ್ತಿದ್ದವಂತೆ. ತೀರಾ ಹತ್ತಿರಬಂದ ಮೀನಿಗೆ ಮಹರ್ಷಿಗಳು ತಮ್ಮ ಅದಮ್ಯ ತಪೋಬಲವನ್ನು ಉಪಯೋಗಿಸಿ ಒಂದೇ ಉಸುರಿಗೆ 'ಮೋಕ್ಷ' ಕರುಣಿಸುತ್ತಿದ್ದರಂತೆ. ಈ ಕಥೆ ಇಂದಿಗೂ ಹಲವಾರ್ ಸರ್ತಿ ಚಾಲ್ತಿಗೆ ಮರಳುತ್ತಿರುತ್ತದೆ. ನಮ್ಮ ರಾಜಕೀಯ ರಂಗದಲ್ಲಂತೂ ಇದು ಸತತ ಬಳಕೆಗೆ ಬೇಕಾಗುವ ತತ್ವಭರಿತ ಸಂಗತಿಯಾಗಿದೆ.

ಇದನ್ನೆಲ್ಲಾ ಇಲ್ಲ್ಯಾಕೆ ಹೇಳುತ್ತಿದ್ದೇನೆಂದರೆ ಮಣ್ಣಿನ ಮಕ್ಕಳ ರಾಜ್ಯಪರ್ಯಟನೆ ಶುರುವಾಗಿದೆ. ದೇವೇಗೌಡರು ತಮ್ಮ ಪ್ರಾಬಲ್ಯ ಕಡಿಮೆಯಾದಾಗ, ತಾವು ಸೋಲುವುದು ಅನುಭವಕ್ಕೆ ಬರುತ್ತಿರುವಾಗ, ತಮ್ಮ ತಂತ್ರ-ಪ್ರತಿತಂತ್ರ-ಕುತಂತ್ರಗಳು ಬುಡಮೇಲಾಗಿ ರಾಜಕೀಯ ಹೊಟ್ಟೆಯಮೇಲೆ ಒದ್ದೆಬಟ್ಟೆಹೊದ್ದುಕೊಳ್ಳುವ ಪ್ರಸಂಗ ಬಂದಾಗ ಅಥವಾ ಇನ್ನು ಯಾವ ಮಾರ್ಗವೂ ಉಳಿದಿಲ್ಲಾ ಎಂದು ಯೋಚಿಸುತ್ತಿರುವಾಗ ಅವರ ಕಣ್ಣಿಗೆ ಯಾರಾದರೂ ಕಾಣುತ್ತಾರೆ. ಸಿದ್ಧು, ಸಿಂಧ್ಯಾ, ಎಂ.ಪಿ.ಪ್ರಕಾಶ್ ಮುಂತಾದ ಹಲವು ಜನರನ್ನು ದಳದಿಂದ ಓಡಿಸಿದ ಅಪ್ಪ-ಮಕ್ಕಳಿಗೆ ಇತ್ತೀಚೆಗೆ ಅವರ ಹಣಬಲದಿಂದ ಉಳಿಸಿಕೊಂಡಿರುವ ಕೆಲವು ಕೆಲಸಕ್ಕೆಬಾರದ ತಲೆಗಳನ್ನು ಬಿಟ್ಟರೆ ಈಗ ಪಕ್ಷದಲ್ಲಿ ಹೇಳಿಕೊಳ್ಳುವ ಮುತ್ಸದ್ಧಿಗಳಾಗಲೀ, ಬುದ್ಧಿವಂತ ರಾಜಕಾರಣಿಗಳಾಗಲೀ ಉಳಿದಿಲ್ಲ.

ಒಂದುಕಡೆ ಕುಮಾರಣ್ಣನ ಸರ್ಕಸ್ ಕಂಪನಿಯ ಕೆಲಸಗಾರರೆಲ್ಲಾ ಮರದಕೆಳಗೆ ಬಿದ್ದ ಮಂಗನರೀತಿ ಒದ್ದಾಡುತ್ತಿದ್ದರೆ, ಕೆಲವರು ರಿಂಗ್ ಮಾಷ್ಟರ್ ಹೆದರಿಸಿದರೂ ಹೆದರದ ಮಟ್ಟಕ್ಕೆ ಬೆಳೆದುಬಿಟ್ಟಿದ್ದಾರೆ! ಅತ್ತ ಮನೆಯಲ್ಲಿ ಒಳಗೊಳಗೇ ಹೊಗೆಯುವ ಕಿಡಿಗಳು ಹೊರತೋರಿಕೆಗೆ ಪೂಜೆ-ಪುನಸ್ಕಾರಗಳನ್ನು ಅನುಸರಿಸುತ್ತವೆ. ’ರಾಧಿಕಾ ಕಲ್ಯಾಣ’ ವಾದಮೇಲಂತೂ ಗೌಡರು ಗರಮ್ಮಾಗಬೇಕೋ ಮುಗುಮ್ಮಾಗಬೇಕೋ ಅಥವಾ ಬಾಯಿಗೆ ಗಮ್ಮು ಹಾಕಿಕೊಂಡು ಸುಮ್ಮನಾಗಬೇಕೋ ತಿಳಿಯದೇ ಹಳಸಿದ ಮುಖಹೊತ್ತು ಹಾಸಿಗೆ ಕೊಡವಿಹಾಸಿದಂತೇ ಆಗಾಗ ಆಗಾಗ ಪಕ್ಷ ಹೇಗೆಲ್ಲಾ ಸಾಧನೆಮಾಡಿದೆ, ತಮಗೆ ಯಾವೆಲ್ಲಾ ಕಳಕಳಿ ಇದೆ ಎಂಬುದನ್ನು ಇಪ್ತಾರ್ ಕೂಟದವರೆಗೂ ಹೋಗಿ ತೋರಿಸಲು ಪ್ರಯತ್ನಿಸುತ್ತಾರೆ. ಸರ್ಕಸ್ ಮೇಷ್ಟ್ರಂತೂ ೩೦೦ ಕೋಟಿ ತರಿಸಿಕೊಂಡು ೫೦ ಕೋಟಿ ಸರ್ಕಸ್ಸಿಗೆ ಬಳಸಿದ್ದರಂತೆ, ಸರ್ಕಸ್ ಗೋತಾಹೊಡೆದಾಗ ೩೦೦ಕೋಟಿ ಕೊಟ್ಟ ಜನ ನಿಧಾನವಾಗಿ ಅದನ್ನು ಹಲುಬಲು ಶುರುವಿಟ್ಟಿದ್ದಾರಂತೆ! ಕೈಗೆ ಬಂದ ತುತ್ತು ಬಾಯಿಗೆ ಬರದಿದ್ದುದಕ್ಕೆ ನಮ್ಮ ಯಡ್ಯೂರಣ್ಣಂಗೆ ಮೇಷ್ಟ್ರು ಶಾಪ ಹಾಕಿದ್ದೇ ಹಾಕಿದ್ದು. ಸಾಲದ್ದಕ್ಕೆ ಅದ್ಯಾವನೋ ಮಾಂತ್ರಿಕ " ಇನ್ನು ಹದಿನೈದು ದಿನಗಳಲ್ಲಿ ನೀನೇ ಮುಖ್ಯಮಂತ್ರಿ, ನಿನ್ನನ್ನು ತಡೆಯುವ ಗಂಡಸ್ತನ[ಗಂಡಸುತನ] ಯಾರಿಗಿದೆ ? " ಎಂದು ಒದರುತ್ತಾ ೪೦ ಲಕ್ಷ ಬ್ಯಾಗಿಗೆ ಇಳಿಸಿಕೊಂಡು ಊರಿಗೆ ಹೋಗಿ ಮಲಗಿಬಿಟ್ಟನಂತೆ! ವಿಜ್ಞಾನಿಗಳೇ ತುಂಬಿದ ಬೆಂಗಳೂರೆಂಬ ಬೆಂಗಳೂರಲ್ಲಿ ವಿಧಾನಸೌಧದ ಸುತ್ತ ಕುರಿಕೋಳಿ ಬಲಿಗಳು, ಮಾಟ-ಮಂತ್ರ! ಅಕಟಕಟಾ ಇದೆಂಥಾ ವಿಪರ್ಯಾಸ!

ಗಾಂಧೀಜಿಗೆ ಅವಮಾನವಾಗುವ ಹಾಗೆ " ಈಗ ಗಾಂಧೀಜಿ ಇದ್ದಿದ್ದರೆ ಅವರೂ ಬ್ರಷ್ಟಾಚಾರವನ್ನು ಒಪ್ಪಿಕೊಳ್ಳುತ್ತಿದ್ದರು " ಎಂದೆಲ್ಲಾ ಹೇಳಿದ ತಪ್ಪಿಗೆ ಮಾಧ್ಯಮಗಳ ಹಲ್ಲಿಗೆ ಸಿಕ್ಕಿಹಾಕಿಕೊಂಡ ಕುಮಾರಣ್ಣನಿಗೆ ಮಾಧ್ಯಮವೊಂದು ಪ್ರಶ್ನಿಸಿದ್ದು " ನೀವು ಬ್ರಷ್ಟಾಚಾರ ನಿರ್ಮೂಲನೆಗೆ ಸಹಕರಿಸುತ್ತೀರಾ ? " ಅದಕ್ಕೆ ತನ್ನ ಒಪ್ಪಿಗೆ ಎಂದ ಕುಮಾರಣ್ಣ ಮಾಧ್ಯಮದ ಮಾತಿನಮಂಚದಲ್ಲಿ ಕುಳಿತಿದ್ದ ವಯೋವೃದ್ಧ ಎಚ್.ಎಸ್.ದೊರೆಸ್ವಾಮಿಗಳ ಬೆನ್ನುಹತ್ತಿದರು. ಇದನ್ನೆಲ್ಲಾ ಮನೆಯಲ್ಲೇ ನೋಡುತ್ತಾ ಕುಳಿತ ಅಪ್ಪಂಗೆ ’ಯುರೇಕಾ ಯುರೇಕಾ’ ಎಂದಹಾಗೇ ಏನೋ ನೆನಪಾಯಿತು. ಅದೇ ಅಣ್ಣಾಹಜಾರೆಯವರು ಹರವಿದ ಚಾದರದಲ್ಲಿ ತಮ್ಮ ಪಕ್ಷವನ್ನೇ ತೂರಿಸಿ ಜನರ ಕಣ್ಣಿಗೆ ಮಣ್ಣೆರಚುವುದು! ಯಾವ ದಾರಿಯೂ ಕಾಣದಾಗ ಈ ದಾರಿ ಸುಲಭವೂ ಪ್ರತಿಫಲದಾಯಕವೂ ಆಗಿ ಕಂಡುಬಂತು. ಆದರೆ ಮೌಲ್ಯಕುಸಿದ ತಾವೇ ಕೆಲವರು ಹಸಿರು-ಕೆಂಪು ಯಾವುದೇ ಟವೆಲ್ಲು ಹೊದ್ದು ವೇದಿಕೆಯೇರಿದರೂ ಜನ ಒಪ್ಪುವ ಥರ ಕಾಣಲಿಲ್ಲ. ಅದಕ್ಕೇ ಸ್ವಾತಂತ್ರ್ಯ ಹೋರಾಟಗಾರರಾದ ದೊರೆಸ್ವಾಮಿಗಳನ್ನೂ ಮತ್ತು ಅವರಜೊತೆ ಕೈಜೋಡಿಸಿರುವ ಹಲವರನ್ನೂ ತಾವೂ ಬೆಂಬಲಿಸುತ್ತೇವೆ ಎಂಬ ಹೇಳಿಕೆಯೊಡನೆ ನಿಧಾನವಾಗಿ ದೊರೆಸ್ವಾಮಿಗಳನ್ನು ತಮ್ಮೆಡೆಗೆ ಸೆಳೆಯತೊಡಗಿರುವುದು ಕಂಡುಬಂದಿದೆ.

ಮುತ್ಸದ್ಧಿಯಾದ ದೊರೆಸ್ವಾಮಿಗಳು ಇಲ್ಲೀವರೆಗೆ ಪಕ್ಷಾತೀತವಾಗಿ ಧ್ಯೇಯನಿಷ್ಠರಾಗಿ, ನ್ಯಾಯಕ್ಕಾಗಿ ಹೋರಾಡುತ್ತಾ ಬಂದವರು. ತೀರಾ ಪ್ರಚಾರಪ್ರಿಯರೂ ಅಲ್ಲದ ಶ್ರೀಯುತರು ಅನೇಕ ಸಾಹಿತ್ಯಕ, ಸಾಂಸ್ಕೃತಿಕ ಕಾರ್ಯಕ್ರಮಗಳ ವೇದಿಕೆಯ ಮುಂಭಾಗದಲ್ಲಿ ಕುಳಿತು ಆನಂದಿಸುತ್ತಿದ್ದರು. ತನ್ನೊಳಗಿನ ಆಕ್ರೋಶಕ್ಕೆ ಅಣ್ಣಾ ಹಜಾರೆ ದನಿಯಾದಾಗ ತಾವೂ ಸಹಜವಾಗಿ ದೇಶಾಭಿಮಾನದಿಂದ ಮುನ್ನುಗ್ಗಿ ಫ್ರೀಡಂ ಪಾರ್ಕ್‍ನಲ್ಲಿ ಧರಣಿಕುಳಿತರು. ದೊರೆಸ್ವಾಮಿಗಳ ಆಢ್ಯತೆ ಮತ್ತು ಅವರ ವ್ಯಕ್ತಿತ್ವಕ್ಕಿರುವ ಗೌರವವನ್ನು ಮನಗಂಡ ಮಣ್ಣಿನ ಮಕ್ಕಳು ಈಗ ನಿಧಾನವಾಗಿ ಅವರನ್ನು ಸೆಳೆದುಕೊಂಡು ಅವಕಾಶವನ್ನು ಉಪಯೋಗಿಸಿಕೊಂಡು ಕಾಲಾನಂತರದಲ್ಲಿ ಅವರ ಹೆಸರಿಗೂ ಕಳಂಕ ತರುವುದರಲ್ಲಿ ಸಂದೇಹವಿಲ್ಲ.

ದೊರೆಸ್ವಾಮಿಗಳು ಇದನ್ನೆಲ್ಲಾ ಅರಿತು ಆ ವೇದಿಕೆಯನ್ನು ರಾಜಕೀಯ ಪಕ್ಷಗಳನ್ನು ಹೊರಗಿಟ್ಟು ನಡೆಸಿದರೆ ಅದು ನಿಜವಾಗಿಯೂ ಉಳಿದುಕೊಂಡು ತನ್ನ ಧ್ಯೇಯವನ್ನು ಈಡೇರಿಸಿಕೊಳ್ಳುವಲ್ಲಿ ಸಫಲತೆಯನ್ನು ಕಾಣಬಹುದು. ಅದನ್ನು ಬಿಟ್ಟು ಅಪ್ಪ-ಮಕ್ಕಳ ಜೊತೆ ವೇದಿಕೆ ಹಂಚಿಕೊಳ್ಳುತ್ತಾ ಬೇಡದ ಕೈಗಳಿಗೆ ಪಂಜು-ಹಿಲಾಲು ಕೊಡುತ್ತಾ ತೆರಳಿದರೆ ದೊರೆಸ್ವಾಮಿಗಳನ್ನೂ ಹಳ್ಳಕ್ಕೆ ಬೀಳಿಸಲು ರಾಜಕೀಯದ ಆ ಜನ ರೆಡಿಯಾಗಿ ಕುಳಿತಿದ್ದಾರೆ. ಆಮೇಲೆ ರಾಜಕೀಯದ ಜನಗಳಿಗೂ ದೊರೆಸ್ವಾಮಿಗಳಿಗೂ ಯಾವುದೇ ಬದಲಾವಣೆ ಇಲ್ಲದಂತಾಗಿ ಅಣ್ಣಾಹಜಾರೆಯವರ ತತ್ವ ಮತ್ತು ದೊರೆಸ್ವಾಮಿಗಳು ಮನದಲ್ಲಿ ಸಂಕಲ್ಪಿಸಿದ ಆ ತತ್ವ ಹಾಗೇ ಕರಗಿಹೋಗಿ ಹೊರಟ ಪಂಜು ಇನ್ಯಾವುದೋ ಹಲಕಟ್ಟು ವೇದಿಕೆಯಲ್ಲಿ ಬೆಳಗುತ್ತದೆ! ಹೇಗೆ ಮಾಷ್ಟರ್ ಹಿರಣ್ಣಯ್ಯನವರು ಪಕ್ಷಗಳನ್ನು ದೂರವಿಟ್ಟು ಲಂಚಾವತಾರ ತಾಳಿದರೋ ಹಾಗೇ ದೊರೆಸ್ವಾಮಿಗಳೂ ಈಗಿರುವ ಮಾಜಿ-ಹಾಲಿಗಳನ್ನು ಬಿಟ್ಟು ಜನಸಾಮಾನ್ಯರ ಮತ್ತು ಸಮಾನ ಮನಸ್ಕರ ಜೊತೆ ಪ್ರತ್ಯೇಕವಾಗಿ ಗುರುತಿಸಿಕೊಂಡು ’ಬ್ರಷ್ಟಾಚಾರ ನಿರ್ಮೂಲನಾ ಆಂದೋಲನ’ ನಡೆಸಿದರೆ ಅದು ಸರಿಯಾದ ಮಾರ್ಗವಾಗುತ್ತದೆಯೇ ಹೊರತು ಈಗ ಅವರು ತುಳಿದಿರುವ ಆ ಮಾರ್ಗ ನನಗಂತೂ ಸರಿಕಾಣಲಿಲ್ಲ.

ಬಿದ್ದಾಗ ಸೀರೇನೋ ಟವೆಲ್ಲನ್ನೋ ಮುಚ್ಚಿಕೊಂಡು ಗೋಳೋ ಎನ್ನುವ ಗೌಡರು ಅವುಗಳ ಮರೆಯಲ್ಲಿರುವುದರಿಂದ ನಕ್ಕರೋ ಅತ್ತರೋ ತಿಳಿಯುವುದು ಕಷ್ಟ! ಅದಲ್ಲದೇ ಅನುಕೂಲಕ್ಕೊಮ್ಮೆ ಹಲವು ಗಣ್ಯರನ್ನು ಮಾನ್ಯರನ್ನು ಕರೆಯುವ ಕಳಿಸುವ ಎರಡೂ ವಹಿವಾಟು ಉಳ್ಳ ’ಮಹಾಮಹೋಪಾಧ್ಯಾಯ’ರಾದ ಅವರು ಯಾರನ್ನು ಎಷ್ಟುಕಾಲ ತಮ್ಮ ಜೊತೆ ಇಟ್ಟುಕೊಳ್ಳುತ್ತಾರೆ ಮತ್ತು ಯಾರನ್ನು ಎಲ್ಲಿ ಹೊಸಕಿಹಾಕುತ್ತಾರೆ ಎನ್ನುವುದು ಸಾಧ್ಯವಿಲ್ಲ. ಅಟ್ಟ ಹತ್ತಾದಮೇಲೆ ಏಣಿಯ ಹಂಗೇಕೆ ಎನ್ನುವ ತನ್ನ ಸ್ವಭಾವದಿಂದ ಹಿಂದೆ ರಾಮಕೃಷ್ಣ ಹೆಗಡೆಯವರನ್ನು ಪಕ್ಷದಿಂದಲೇ ಉಚ್ಛಾಟಿಸಿದ ಅವರು ಪರೋಕ್ಷವಾಗೈ ಇಂದು ಅದರ ಪ್ರತಿಫಲವನ್ನು ಉಣ್ಣುತ್ತಿದ್ದಾರೆ. ಉಚ್ಛಾಟಿತ ಹೆಗಡೆಯವರ ಮೇಲಿನ ದ್ವೇಷ ಎಷ್ಟಿತ್ತೆಂದರೆ " ಹೆಗಡೆ ಎನ್ನುವವರಿಗೆಲ್ಲಾ ಹೊಡೀರಿ " ಎಂದು ಪೋಲೀಸರಿಗೆ ತಾಕೀತುಮಾಡಿದ ಮಾ.ಪ್ರ. ಅವರು. ಇದನ್ನೇ ಅನುಸರಿಸಿದ ಪೋಲೀಸ್ ಪೇದೆಗಳು ಯಾವುದೋ ಸಮಸ್ಯೆಗಳಿಗೆ ಪರಿಹಾರಬಯಸಿ ಧರಣಿಗೋ ಮುಷ್ಕರಕ್ಕೋ ತೊಡಗಿದ ಹೆಗಡೆ-ಭಟ್ಟ ಎನ್ನುವವರಿಗೆಲ್ಲಾ ಹೊಡೆದದ್ದು ಮರೆಯಲಾರದ ಇತಿಹಾಸ. ಅದರಂತೇ ಕಾಕತಾಳೀಯವೋ ಯಾವ ನ್ಯೂನತೆಯೋ ನಂತರದ ಒಂದೆರಡು ಚುನಾವಣೆಗಳಲ್ಲಿ ಬೆಂಗಳೂರು ನಗರದಲ್ಲಿ ಮತದಾರರ ಯಾದಿಯಲ್ಲಿ ಹೆಗಡೆ ಮತ್ತು ಭಟ್ಟ ಎಂಬ ಅಡ್ಡ ಹೆಸರುಳ್ಳವರ ಹೆಸರುಗಳೇ ನಾಪತ್ತೆಯಾಗಿದ್ದವು!

ಆ ನಂತರ ಕೆಲವೇ ವರ್ಷಗಳಲ್ಲಿ ಹೆಗಡೆಯವರು ಸತ್ತರೂ ಅವರು ಸಭೆಯಲ್ಲಿ ಉದ್ಘೋಷಿಸಿದಂತೇ ದಳ ಇಬ್ಭಾಗವಾಯಿತು, ’ದಳಪತಿ’ಗಳು ಯಾರದೋ ದಾಳಗಳಾಗಿ ಕೆಲಸಮಾಡಹತ್ತಿದಾಗ ಅಪ್ಪ ತನ್ನ ರಾಜಕೀಯ ಅರಿಯದ ಮಕ್ಕಳನ್ನು ಕಟ್ಟಿಕೊಂಡು ನಿಧಾನವಾಗಿ ಆರಂಭಿಸಿದ್ದೇ ಸೆಕ್ಯೂಲರ್ ದಳ. ಮಕ್ಕಳಿಗೆ ’ಪಾಠ’ ಮುಗಿಯುವವರೆಗೆ ಖುರ್ಚಿಗಳು ಕಾಲಿ ಇರಬಾರದೆಂಬ ಉದ್ದೇಶದಿಂದಲೂ ಜನರಿಗೆ ’ಓಹೋ ಇದೊಂದು ದೊಡ್ಡ ರಾಷ್ಟ್ರೀಯ ಪಕ್ಷವಾಗುವ ಪಕ್ಷ’ ಎಂಬ ಅನಿಸಿಕೆ ಮೂಡಲೆಂದೂ ಅವಿಭಕ್ತ ದಳದಲ್ಲಿದ್ದ ಕೆಲವು ಮುಖಂಡರನ್ನು ತನ್ನೆಡೆ ಸೆಳೆದುಕೊಂಡರು. ಏನೋ ಗೌಡರು ಕರೆಯುತ್ತಿದ್ದಾರಲ್ಲ ಅಂತ ತೆರಳಿದ ಕೆಲವು ಜನರಿಗೆ ಬಿಸಿ ತಟ್ಟತೊಡಗಿದ್ದು ಸಿದ್ಧುವನ್ನು ಗುದ್ದಿ ಓಡಿಸಿದಾಗ! ಅದಾದ ನಂತರದ ಹಲವು ಬೆಳವಣಿಗೆಗಳು ನಿಮಗೆಲ್ಲಾ ತಿಳಿದೇ ಇವೆ; ಬೀದಿ ನಾಟಕಗಳು, ಸರ್ಕಸ್ಸುಗಳು ಅವಿರತವಾಗಿ ನಡೆದೇ ಇವೆ. ಆದರೆ ತನ್ನ ಕುಟುಂಬದ ಅನುಕೂಲಕ್ಕಾಗಿ ಕಟ್ಟಿಕೊಂಡ ಆ ಪಕ್ಷಮಾತ್ರ ಕೆಲವೊಮ್ಮೆ ರಾಜ್ಯದಲ್ಲಿಯೇ ಬುಡಮೇಲಾಗಿ ಮಲಗಿಬಿಡುತ್ತದೇನೋ ಅನಿಸುವ ಹೊತ್ತು ಬರುತ್ತಲೇ ಇದೆ. ಹೀಗೆ ಬುಡವೇ ಅಲ್ಲಾಡತೊಡಗಿದಾಗ ಗೌಡರು ಹೆಣೆಯುವ ಹಲವು ತಂತ್ರಗಳಲ್ಲಿ ಅವರು ’ಹೊತ್ತು ಬಂದಾಗ ಕತ್ತೆಯ ಕಾಲನ್ನಾದರೂ ಹಿಡಿ’ ಎಂಬ ಗಾದೆಯನ್ನು ಅಕ್ಷರಶಃ ನಡೆಸಿಕೊಂಡು ಬಂದಿದ್ದಾರೆ!

ಕೇವಲ ೧೧ ಎಕರೆ ಪಿತ್ರಾರ್ಜಿತ ಕೃಷಿ ಭೂಮಿಯನ್ನು ಪಡೆದ ಒಬ್ಬ ವ್ಯಕ್ತಿ ಏಕಾಏಕಿ ಕೋಟಿಗಟ್ಟಲೆ ಆಸ್ತಿಗೆ, ಹಲವು ಎಕರೆ ಭೂಮಿಗಳಿಗೆ ಒಡೆಯನಾಗುವುದು ಬ್ರಷ್ಟಾಚಾರದ ರಜಕೀಯದಿಂದ ಮಾರ ಸಾಧ್ಯ ಎಂಬುದು ಅನುಭವಿಕರ ಮಾತು. [ಇದಕ್ಕೆ ಕೆಲವು ಉದ್ದಿಮೆದಾರರು ಹೊರಾತಾಗಿರಬಹುದು]. ಈಗಿನ ಸರಕಾರ ಬರುವುದಕ್ಕಿಂತ ಮುಂಚೆ ಸರಕಾರದ ಎಲ್ಲಾ ಕಡತಗಳೂ, ಮಾಹಿತಿಗಳೂ ಗಣಕಯಂತ್ರಗಳಲ್ಲಿ ಲಭ್ಯವಿರದಿದ್ದ ಕಾರಣದಿಂದಲೂ ಮತ್ತು ಅಂದಿನ ವಿರೋಧ ಪಕ್ಷದಲ್ಲಿ ನಾಯಕರಾಗಿ ಕುಳಿತಿದ್ದ ಯಡ್ಯೂರಣ್ಣನವರ ಬಹುಕಾಲದ ನಿದ್ದೆಯಿಂದಲೂ ಆಳುವ ಧಣಿಗಳು ಚೆನ್ನಾಗಿ ಮೆಂದವು! ಎಲ್ಲೆಲ್ಲಿ ಯಾವ ರೀತಿಯ ಹಸಿರು ಹುಲ್ಲಿದೆ, ಎಷ್ಟು ಎತ್ತರಕ್ಕೆ ಬೆಳೆದು ಹುಲುಸಾಗಿ ತಿನ್ನಲು ಸಿಗುತ್ತದೆ ಎಂಬ ಅರಿವಿದ್ದ ಮಾಜಿ ಧಣಿಗಳು ಇಂದಿನ ಗಣಕೀಕೃತ ಮಾಹಿತಿ ಪಡೆದು ತಿಂದಿರಬಹುದಾದ ಹುಲ್ಲುಗಾವಲುಗಳ ನಿವ್ವಳ ತೂಕವನ್ನು ಲೆಕ್ಕಮಾಡತೊಡಗಿದರು! ಹಿಂದೆ ತಾವು ಮೆಂದ ಜಾಗದ ಮಾಹಿತಿಯುಳ್ಳ ಜನ ಇವರಾಗಿರುವುದರಿಂದ ಹಾಲಿ ಮುಖ್ಯಮಂತ್ರಿಗಳು ಮೆಂದಿರಬಹುದಾದ ಮತ್ತು ಮೇಯದೇಬಿಟ್ಟ ಎಲ್ಲಾ ಜಾಗವನ್ನೂ ಸೇರಿಸಿ ’ಮೆಂದ ಜಾಗ’ ಎಂದು ಬೋರ್ಡುಹಾಕಿ ಬಿಟ್ಟರು!

ಬಹುತೇಕ ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿಬಂದ ಒಂದೇ ಪಕ್ಷದ ಶಾಸಕರಿಗೆ ಒಗ್ಗಟ್ಟಿನಿಂದ ಸರಕಾರ ರಚಿಸಲು ಅನುವುಮಾಡಿಕೊಟ್ಟು ಅವರು ಸರಕಾರ ನಡೆಸುವಾಗ ಎಡವದಂತೇ, ತಪ್ಪುಮಾಡದಂತೇ ನೋಡಿಕೊಳ್ಳಬೇಕಾದ ವಿರೋಧ ಪಕ್ಷಗಳವರು ಜಾತೀರಾಜಕೀಯ, ಗೂಂಡಾರಾಜಕೀಯ, ಕುದುರೆವ್ಯಾಪಾರಾದಿ ಎಲ್ಲಾ ಕಸರತ್ತುಗಳನ್ನೂ ಆಳುವ ಪಕ್ಷಕ್ಕೂ ಕಲಿಸಿಕೊಟ್ಟರಲ್ಲದೇ ಆಳುವ ಜನರಿಗೆ ಒಂದೇ ಒಂದು ನಿಮಿಷ ರಾಜ್ಯಾಡಳಿತದ ಯಂತ್ರಕ್ಕೆ ತಲೆಹಾಕಲು ಅವಕಾಶ ನೀಡದೇ ಕೇವಲ ಕಾಲೆಳೆಯುವುದರಲ್ಲೇ ಕಾಲಕಳೆದುಬಿಟ್ಟರು. ಭೋಗಸ್ ಜ್ಯೋತಿಷಿಗಳು, ಹೊತ್ತಿಗೊಂದು ಮಾತನಾಡುವ ರಾಜ್ಯಪಾಲರು ಎಲ್ಲರೂ ಸೇರಿ ಎಲ್ಲಿಗೋ ಹೊರಟಿದ್ದ ವಾಹನ ಇನ್ನೆಲ್ಲಿಗೋ ಸಾಗತೊಡಗಿತು! ಇದು ಕರ್ನಾಟಕದ ಜನತೆಯ ದುರಾದೃಷ್ಟವೆಂದರೆ ತಪ್ಪೇ ? ಸದಾ ವಿರೋಧಪಕ್ಷದಲ್ಲೇ ಕುಳಿತು ಆಡಳಿತದಲ್ಲಿ ಅನನುಭವಿಯಾದ ಯಡ್ಯೂರಣ್ಣನವರ ಹುಂಬತನ ಮತ್ತು ಮುಂಗೋಪ ಮಿಕ್ಕುಳಿದ ಶಾಸಕರಿಗೆ, ಮಂತ್ರಿ-ಸಹೋದ್ಯೋಗಿಗಳಿಗೆ ಇರುಸುಮುರುಸು ಉಂಟುಮಾಡಿತು. ಅವಕಾಶ ರಾಜಕಾರಣಕ್ಕೆ ಪ್ರಸಿದ್ಧಿ ಪಡೆದ ಕುಮಾರಣ್ಣ ಆಂಡ್ ಕಂಪನಿ ಸರ್ಕಸ್ ಕಂಪನಿಯಾಗಿ ಪರಿವರ್ತಿತವಾಯಿತು! ಅಧಿಕಾರ ಹಿಡಿದವರನ್ನು ಹಲವು ಮೇಲಾಟವಾಡಿದರೂ ಮರ್ದಿಸಲಾಗದೇ ಮುಖ ಸುಟ್ಟ ಬೆಕ್ಕಿನಂತಾಗಿ ತನ್ನ ಮೈಯ್ಯನ್ನೇ ಪರಚಿಕೊಳ್ಳುವಂತಾದ ಪರಿಸ್ಥಿತಿಯಲ್ಲಿ ಸದ್ರೀ ಸರ್ಕಸ್ ಕಂಪನಿಯ ಮಾಲೀಕರು ಆಗಾಗ ಆಗಾಗ ಏನಾದರೂ ಕೆದಕುತ್ತಲೇ ಉಳಿದರು; ಹಾರುವ ನೊಣವನ್ನು ಹೊಡೆದು ಉಣ್ಣುವ ಗಂಜಿಯಲ್ಲಿ ಹಾಕಿ " ನೋಡು ನೊಣ ಬಿದ್ದಿದೆ " ಎಂದರು!

ಇಂತಹ ಸರ್ಕಸ್ ಕಂಪನಿಯ ಹೊಚ್ಚ ಹೊಸಾ ವರಸೆ ಅಣ್ಣಾ ಹಜಾರೆಯವರು ಆರಂಭಿಸಿದ " ಬ್ರಷ್ಟಾಚಾರ ನಿರ್ಮೂಲನಾ ಆಂದೋಲನ’ವನ್ನು ರಾಜ್ಯಾದ್ಯಂತ ತಮ್ಮ ಕಂಪನಿಯ ಬ್ರಾಂಡಿನಲ್ಲಿ ಬ್ಯಾನರಿನಡಿಯಲ್ಲಿ ಸಿನಿಮಾದಂತೇ ಜನತೆಗೆ ತೋರಿಸುವುದು! ಇದಕ್ಕೆ ಆಧಾರಕ್ಕಾಗಿ ಕಂಪನಿಯವರು ಬ್ರಾಂಡ್ ಅಂಬಾಸೆಡರ್ ಹುದ್ದೆಗೆ ಮಹನೀಯರೂ ಮರ್ಯಾದಿತರೂ ಆದ ದೊರೆಸ್ವಾಮಿಗಳನ್ನು ಆತುಕೊಂಡಿದ್ದಾರೆ! ಇಲ್ಲದಿದ್ದರೆ ಸಭೆಗಳಿಗೆ ಜನ ಬರಬೇಕಲ್ಲ ? ಕೊಕ್ಕರೆ ಮಹರ್ಷಿಗಳು ಕಾಶಿಗೆ ಹೋಗುವುದು ನಿಮಗೆ ತಿಳಿದೇ ಇದೆಯಲ್ಲಾ ಅದರಂತೇ ಎರಡೂ ಕೈಲಿ ಸಾಲದೆಂಬಂತೇ ದೇಹದ ಅಣುರೇಣುವಿನಲ್ಲೂ ಉಂಡುಂಡು ಉದ್ದಿನೆವಡೆಗಿಂತಲೂ ಉಬ್ಬಿದ ಬ್ರಷ್ಟಾಚಾರದ ಹರಿಕಾರರೇ ಈಗ ಅದರ ನಿರ್ಮೂಲನೆ ಮಾಡುತ್ತೇವೆ ಎಂದರೆ ಅದು ಕೊಕ್ಕರೆ ಮಹರ್ಷಿಗಳ ಕಾಶೀಯಾತ್ರೆಯಾಗಿ ಕಾಣುತ್ತದೆ ಮತ್ತು ಪರಿಣಮಿಸುತ್ತದೆ. ಪ್ರಸಕ್ತ ಕಾಲಮಾನದಲ್ಲಿ ಬ್ರಷ್ಟಾಚಾರ ನಿರ್ಮೂಲನೆಯಾಗಬೇಕಾದರೆ ಪಕ್ಷಭೇದವಿಲ್ಲದೇ ಈಗಿರುವ ಎಲ್ಲಾ ’ಸರ್ಕಸ್ ಕಂಪನಿ’ಗಳು ಮುಚ್ಚಬೇಕು, ಅವುಗಳ ’ಪ್ರಾಣಿ’ಗಳನ್ನು ಕಾಡಿನಲ್ಲಿ ಬಿಟ್ಟುಬರಬೇಕು, ಅವುಗಳ ಹಳೆಯ ಹರಕಲು ಗುಡಾರಕ್ಕೆ ಬೆಂಕಿಹಚ್ಚಬೇಕು. ಯಾರ ಶರೀರದಲ್ಲಿ ರಕ್ತದಲ್ಲಿ ದೇಶಭಕ್ತಿಯ ನಿಜವಾದ ತುಡಿತವಿದೆಯೋ, ಯಾರಿಗೆ ಹಣದ ದಾಹ ಇರುವುದಿಲ್ಲವೋ ಅಂತಹ ಜನಗಳ ಕೈಗೆ ಅಧಿಕಾರ ಸಿಗಬೇಕು. ಆಗ ಮಾತ್ರ ಬ್ರಷ್ಟಾಚಾರ ನಿರ್ಮೂಲನೆಯಾಗಲು ಸಾಧ್ಯ. ಅಲ್ಲೀವರೆಗೂ ನಡೆಯುವುದೆಲ್ಲಾ ಬರೇ ಡೊಂಬರಾಟ! ’ಕೊಕ್ಕರೆ ಮಹರ್ಷಿ’ಗಳು ಎಲ್ಲೀವರೆಗೆ ಒಂದೇಕಾಲಲ್ಲಿ ನಿಂತು ಈ ಮಂತ್ರವನ್ನು ಜಪಿಸಿತ್ತಾರೆಂಬುದನ್ನು ಕಾದುನೋಡೋಣ, ನಮಸ್ಕಾರ.

Sunday, May 8, 2011

| ಶಿಖರಿಶಿರೋಮಣಿತುಂಗಹಿಮಾಲಯ- ಶೃಂಗನಿಜಾಲಯ-ಮಧ್ಯಗತೇ|


|ಶಿಖರಿಶಿರೋಮಣಿತುಂಗಹಿಮಾಲಯ-
ಶೃಂಗನಿಜಾಲಯ-ಮಧ್ಯಗತೇ|

ಗಂಗಾನದಿಯಲ್ಲಿ ಮಿಂದು ಪುನೀತರಾದ ಭಗವಾನ್ ಶಂಕರರು ಗಂಗಾತಟಕ್ಕೆ ಮೆಟ್ಟಿಲುಗಳನ್ನೇರಿ ಬರುವಾಗ ಅಸ್ಪೃಷ್ಯನೊಬ್ಬ ದಾರಿಗಡ್ಡಲಾಗಿ ಮಲಗಿಬಿಟ್ಟಿದ್ದ. ದಾರಿ ಕೊಡೆಂದು ಕೇಳಲಾಗಿ ದಾಟಿಹೋಗೆಂದು ಶಂಕರರಿಗೆ ಹೇಳಿದ. ಏನೇ ಮಾಡಿದರೂ ಅಗಲವಾದ ಪಾವಟಿಗೆಗಳನ್ನು ಹತ್ತುವಾಗ ಆತನ ಸ್ಪರ್ಷ್ಯವಾಗುವುದು ಅನಿವಾರ್ಯವಾಗಿತ್ತು. ಆತನಲ್ಲಿ ಏನೇ ಹೇಳಿದರೂ ಆತ ಅತಿಯಾದ ಕೋಪವನ್ನು ತೋರುತ್ತಿದ್ದ. ಶಂಕರರೂ ಸ್ವಲ್ಪ ಗದರಿದರು. ’ತೊಲಗಾಚೆ’ ಎಂದರು. ಆ ಕ್ಷಣ ಆತ ಕೇಳಿದ " ನೀನು ತೊಲಗಾಚೆ ಎಂದಿದ್ದು ನನ್ನ ದೇಹಕ್ಕೋ ಅಥವಾ ನನ್ನ ಆತ್ಮಕ್ಕೋ ? ದೇಹಕ್ಕಾದರೆ ನಿನ್ನದೂ ನನ್ನದೂ ಮತ್ತು ಇತರ ಎಲ್ಲಜೀವಿಗಳದೂ ಜಡಶರೀರವಷ್ಟೇ ? ದೇಹದೊಳಗಿನ ಆತ್ಮಕ್ಕಾದರೆ ನನ್ನೊಳಗೂ ನಿನ್ನೊಳಗೂ ಮತ್ತು ಇತರ ಎಲ್ಲಾ ಜೀವಿಗಳೊಳಗೂ ಇರುವ ಆ ಆತ್ಮವೊಂದೇ ಆಗಿದೆ. " ಶಂಕರರು ತಬ್ಬಿಬ್ಬಾಗಿಬಿಟ್ಟರು. ದಿಟ್ಟಿಸಿ ನೋಡುತ್ತಾರೆ ಆತನಲ್ಲಿ ಸಾಕ್ಷಾತ್ ವಿಶ್ವನಾಥನ ರೂಪ ಗೋಚರಿಸುತ್ತದೆ. ಮಹಾದೇವನೇ ತನ್ನನ್ನು ಪರೀಕ್ಷಿಸಲು ಬಂದಿದ್ದನ್ನು ನೋಡಿದ ಶಂಕರರ ಬಾಯಿಂದ ’ಮನೀಷಾ ಪಂಚಕಮ್’ ಹೊರಡಲ್ಪಟ್ಟಿತು!

ಅಂದಿನ ಗೊಂಡಾರಣ್ಯಗಳಲ್ಲಿ ಕಾಲುದಾರಿಯೂ ಇಲ್ಲದ ಜಾಗಗಳಲ್ಲಿ ತಾವೇ ದಾರಿಯನ್ನು ಕಲ್ಪಿಸಿಕೊಂಡು ಶಂಕರರು ಓಡಾಡುತ್ತಿದ್ದರು. ಮಾರ್ಗಮಧ್ಯೆ ಅವರಿಗೆ ಹಲವು ಅಡೆತಡೆಗಳು ಕಾಣಿಸುತ್ತಿದ್ದವು. ಹೇಳಿಕೇಳಿ ಎಳೆಯ ವಟುವಾಗಿದ್ದ ಅವರ ಜೊತೆಗೆ ಆರಂಭದ ದಿನಗಳಲ್ಲಿ ಸಂಚರಿಸಲು ಯಾರೂ ಇದ್ದಿರಲಿಲ್ಲವೆನಿಸುತ್ತದೆ. ಈ ಸೃಷ್ಟಿಯ ಹಲವು ಅಶರೀರ ರೂಪಗಳು ತಮ್ಮ ಮುಕ್ತಿಗಾಗಿ ಶಂಕರರನ್ನು ಅಡರಿಕೊಳ್ಳುತ್ತಿದ್ದವು. ಪಿಶಾಚಿಗಳು, ದೆವ್ವ-ಭೂತಗಳು, ಬ್ರಹ್ಮರಾಕ್ಷಸಾದಿಗಳು ಮಾರ್ಗದಲ್ಲಿ ಸದಾ ಇರುತ್ತಲೇ ಇದ್ದವು. ಇಂದೂ ಕೂಡ ಅವು ಇರುತ್ತವಾದರೂ ನಮಗೆ ಅವುಗಳ ಗೋಚರಿಸುವಿಕೆ ನೇರವಾಗಿ ಕಾಣದೇ ಪರೋಕ್ಷವಾಗಿ ಕಾಣಿಸುತ್ತದೆ. ಉದಾಹರಣೆಗೆ ಎಲ್ಲವೂ ಸರಿಯಾಗಿದ್ದ ವಾಹನ ಬ್ರೇಕ್ ಫೇಲಾಗುವುದು, ಇದ್ದಕ್ಕಿದ್ದಂತೇ ಯಾವುದೋ ಪ್ರಾಣಿ ಅಡ್ಡಬಂದು ಆಮೇಲೆ ನಾಪತ್ತೆಯಾಗುವುದು, ಚಲಿಸುತ್ತಿರುವ ವಾಹನದಲ್ಲಿ ಭಾರಜಾಸ್ತಿ ಎನಿಸಿ ಅಲ್ಲಾಡಿದಂತಾಗುವುದು, ವಾಹನ ಎಷ್ಟೇ ವೇಗದಲ್ಲಿ ಚಲಿಸಿದರೂ ದಾರಿಸಾಗದೇ ಉಳಿಯುವುದು, ವಾಹನದ ವೇಗ ಮಿತಿಮೀರಿದಂತೆನಿಸಿವುದು ---ಇವೆಲ್ಲಕ್ಕೂ ಕೆಲವೊಮ್ಮೆ ಸ್ಥಾನಿಕ ಅಶರೀರಿಗಳ ಆಕ್ರಮಣ ಅಥವಾ ಉಪದ್ರವ ಕಾರಣವಾಗುತ್ತದೆ. ದಿವ್ಯಶಕ್ತಿಯುಳ್ಳ ಶಂಕರರು ಅವುಗಳಿಗೆಲ್ಲಾ ಉತ್ತರಿಸುತ್ತಿದ್ದರು, ಕಾಲಾನಂತರದಲ್ಲಿ ಮಾರ್ಗಗಳಲ್ಲಿ ಚಲಿಸುವ ಜನರಿಗೆ ಉಪಯುಕ್ತವಾಗಲಿ ಎಂಬ ಕಾರಣಕ್ಕೆ ’ಮಾರ್ಗ ಬಂಧು ಸ್ತೋತ್ರ’ ವನ್ನು ರಚಿಸಿದರು. ಈ ಮಾರ್ಗಬಂಧು ಸ್ತೋತ್ರದ ವೈಶಿಷ್ಟ್ಯವೆಂದರೆ ಇಹದಲ್ಲಿ ಚಲಿಸುವವರಿಗೂ, ಧ್ಯಾನಮಾರ್ಗದಲ್ಲಿ ಪರಾಶಕ್ತಿಯ ಗೋಚರವನ್ನು ಬಯಸಿ ಚಲಿಸುವವರಿಗೂ ಇದು ಉಪಯುಕ್ತವಾಗಿದೆ. ಧ್ಯಾನಕ್ಕೆ ಕುಳಿತಾಗಲೂ ಕೂಡ ಮನಸ್ಸನ್ನು ಕೇಂದ್ರೀಕೃತಗೊಳಿಸಲು ಅಡ್ಡಿಪಡಿಸುವ ಹಲವು ಭಾವತರಂಗಗಳು ಬರುತ್ತವೆ. ಅವುಗಳೆಲ್ಲದರಿಂದ ಮುಕ್ತಿ ಸಿಗಬೇಕಾದರೆ ಶಂಕರರ ’ಮಾರ್ಗ ಬಂಧು ಸ್ತೋತ್ರ’ ವನ್ನು ಪಠಿಸಿದರೆ ಉತ್ತಮ.

ಆದಿ ಶಂಕರರು ಮಾತೆಯ ಬಗ್ಗೆ ಬಹಳ ಕಾಳಜಿ ಉಳ್ಳವರಾಗಿದ್ದರು. ಏಕಮಾತ್ರ ಸಂತಾನವಾದ ಅವರು ಸನ್ಯಾಸಿಯಾಗುತ್ತೇನೆಂದು ಹೊರಟಾಗ ಅವರ ತಾಯಿ ಬಹಳ ಪ್ರಯಾಸದಿಂದ ಒಪ್ಪಿಕೊಳ್ಳಬೇಕಾಯಿತು. ಇದ್ದೊಬ್ಬ ಮಗ ಸನ್ಯಾಸಿಯಾಗಿಬಿಟ್ಟರೆ ಸಂಸಾರಿಯಾದ ತನ್ನನ್ನು ನೋಡಿಕೊಳ್ಳುವವರಾರು?. ಆದರೂ ಆ ಮಹಾತಾಯಿ ತನ್ನ ಸ್ವಾರ್ಥವನ್ನು ಮರೆತು ಜಗದ ಜನತೆಗೆ ಉಪಕಾರವಾಗಲಿ ಎಂಬ ದೃಷ್ಟಿಯಿಂದ ಮಗನನ್ನು ಹರಸಿ ಬೀಳ್ಕೊಟ್ಟರು, ಹೊರಡುವಾಗ ಮಗ ಹೇಳಿದ " ಅಮ್ಮಾ ನಿನ್ನ ಕೊನೆಗಾಲದಲ್ಲಿ ಎಲ್ಲಿದ್ದರೂ ನಾನು ಬಂದು ತಲುಪುತ್ತೇನೆ. " ಹೊರಟ ಶಂಕರರು ದೇಶಾಂತರ ಹಲವು ಪ್ರದೇಶಗಳಲ್ಲಿ ಸಂಚರಿಸಿದರು. ಹೀಗಿರುವಾಗ ಒಮ್ಮೆ ಅವರಿಗೆ ತಾಯಿಯ ಅಂತ್ಯ ಸಮೀಪಿಸಿದ ದೃಷ್ಟಾಂತವಾಯಿತು. ಆ ಕೂಡಲೇ ಹೊರಟುನಿಂತ ಅವರು ಪೂರ್ವಾಶ್ರಮದ ಕಾಲಟಿಯ ಮನೆಗೆ ಓಡೋಡಿ ಹೋದರು. ಶಂಕರರ ಅಮ್ಮ ಕೊನೆಯ ಘಟ್ಟದಲ್ಲಿದ್ದರು. ಮಗ ಬಂದುದನ್ನು ಗ್ರಹಿಸುತ್ತಲೇ ಇಹವನ್ನು ತೊರೆದರು. ತೊಡೆಯಮೇಲೆ ತಲೆಇಟ್ಟು ಇಹವನ್ನು ತ್ಯಜಿಸಿದ ಅಮ್ಮನ ಅಂತ್ಯಕ್ರಿಯೆಗೆ ವ್ಯವಸ್ಥೆಮಾಡಬೇಕಾಗಿತ್ತು. ಸನ್ಯಾಸಿಯಾದವನು ಇಹದ ಬಂಧನವನ್ನು ಕಳಚಿಕೊಳ್ಳುವುದರಿಂದ ಅಮ್ಮನ ಉತ್ತರಕ್ರಿಯೆಗಳನ್ನು ಅವರು ಮಾಡುವಂತಿರಲಿಲ್ಲ. ಆದರೆ ಶಂಕರರು ಅಮ್ಮನಿಗೆ ವಚನವಿತ್ತಿದ್ದರು! ಬಹುಶಃ ಧರ್ಮಸಂಕಟವೆಂದರೇ ಇದು! ಸನ್ಯಾಸಿ ಶಂಕರರು ತಾನೇ ಅಮ್ಮನ ಅಂತ್ಯಕ್ರಿಯೆಯನ್ನು ಪೂರೈಸಲು ನಿಂತರು. ಅಕ್ಕ-ಪಕ್ಕದ ಬ್ರಾಹ್ಮಣರಾದಿಯಾಗಿ ಯಾರೇ ಆಗಲಿ ಅವರ ಸಹಾಯಕ್ಕೆ ಬರಲಿಲ್ಲ-ಏಕೆಂದರೆ ಸನ್ಯಾಸಿ ಉತ್ತರಕ್ರಿಯೆಯನ್ನು ಮಾಡುತ್ತಾನೆ ಎಂಬ ಕಾರಣಕ್ಕಾಗಿ. ಆದರೂ ಶಂಕರರು ಧೃತಿಗೆಡಲಿಲ್ಲ. ಅಲ್ಲಿಲ್ಲಿ ಅಲೆದು ಒಂದಷ್ಟು ಸೌದೆ ಒಟ್ಟುಗೂಡಿಸಿದರು, ಚಿತೆಯನ್ನು ಮನೆಯ ಮಗ್ಗುಲಲ್ಲೇ ನಿರ್ಮಿಸಿದರು. ಗತಿಸಿದ ಅಮ್ಮನ ಶರೀರವನ್ನು ಚಿತೆಯಮೇಲಿಟ್ಟು ದಹಿಸಿದರು. ಅಮ್ಮನ ಆತ್ಮಕ್ಕೆ ಸದ್ಗತಿಯನ್ನು ಕರುಣಿಸಿದರು. [ಈ ನೆನಪಿನಲ್ಲಿ ಕೇರಳದಲ್ಲಿ ಇವತ್ತಿಗೂ ಹಲವೆಡೆ ಸತ್ತವ್ಯಕ್ತಿಗಳನ್ನು ಮನೆಗಳ ಮಗ್ಗುಲಲ್ಲೇ ಸುಡುವುದು ವಾಡಿಕೆ.]

ಸನ್ಯಾಸಿಗಳಿಗೆ ಜನ್ಮಕೊಟ್ಟ ಅಪ್ಪನೂ ನಮಸ್ಕರಿಸಬಹುದು. ಆದರೆ ತಾಯಿಯಿಂದ ಮಾತ್ರ ಅವರು ನಮಸ್ಕಾರವನ್ನು ಸ್ವೀಕರಿಸುವುದಿಲ್ಲ! ತಾಯ ಋಣ ಅಂಥದು. ಒಂಬತ್ತು ತಿಂಗಳು ಹೊತ್ತು-ಹೆತ್ತು ಸಲಹುವ ಮಮತಾಮಯಿ ತಾಯಿ ಎಂದೂ ತನ್ನ ಮಗುವಿಗೆ ಕೆಟ್ಟದ್ದನ್ನು ಬಯಸುವುದಿಲ್ಲ. ಗಾದೆಯೊಂದು ಹೀಗಿದೆ ’ತಾಯಿ ಮಗನ ಹೊಟ್ಟೆಯನ್ನು ನೋಡುತ್ತಾಳೆ ಹೆಂಡತಿ ಗಂಡನ ಜೇಬು ನೋಡುತ್ತಾಳೆ’ ಇದರರ್ಥ : ದುಡಿದು ಮರಳಿದ ಮಗನ ಹೊಟ್ಟೆ ಯಾವ ರೀತಿ ಹಸಿದು ಪರಿತಪಿಸಿತ್ತಿರಬಹುದು ಎಂಬುದು ತಾಯಿಯ ಚಿಂತೆ ಆದರೆ ಇಂದಿನ ದುಡಿಮೆ ಎಷ್ಟಾಗಿರಭುದು ಎಂಬುದು ಹೆಂಡತಿಯ ಚಿಂತೆ! ತನ್ನ ಊಟಕ್ಕೂ ಮೊದಲು ಮಗನ/ಮಕ್ಕಳ ಊಟವಾಯಿತೇ ಎಂಬುದನ್ನು ತಾಯಿ ಖಾತ್ರಿಪಡಿಸಿಕೊಳ್ಳುತ್ತಾಳೆ. ಒಮ್ಮೆ ತನಗಿರದಿದ್ದರೂ ಮಕ್ಕಳಿಗೆ ಏನನ್ನಾದರೂ ಒದಗಿಸಲು ಪ್ರಯತ್ನಿಸುವ ಆ ತಾಯ ತಾಯ್ತನದ ಜವಾಬ್ದಾರಿ, ಕಳಕಳಿ ಕೇವಲ ಬಾಯಿಂದ ಹೇಳಿ ತೀರಿಸಲಾಗುವ ಋಣವದಲ್ಲ. ತನ್ನ ತಾಯಿಯಲ್ಲೂ ಜಗನ್ಮಾತೆಯನ್ನೇ ಕಂಡ ಶಂಕರರು ’ ದೇವ್ಯಪರಾಧ ಕ್ಷಮಾಪಣ ಸ್ತೋತ್ರ’ವನ್ನು ರಚಿಸಿದರು. ಅದರಲ್ಲಿ ಹಲವು ಸರ್ತಿ ಹೇಳಿದರು--" ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾ ನ ಭವತಿ " [ಒಬ್ಬ ಕೆಟ್ಟ ಮಗುವಿರಬಹುದೇ ಹೊರತು ಕೆಟ್ಟ ತಾಯಿ ಇರಲಾರಳು]

ಆಶುಕವಿತ್ವದ ಆಚಾರ್ಯ ಶಂಕರರು ಹೋದಲ್ಲೆಲ್ಲಾ ಹಲವು ಕೃತಿಗಳನ್ನು ಸರಳ ಸಂಸ್ಕೃತದಲ್ಲಿ ರಚಿಸಿದರು. ಮನೋಹರವಾದ ಶಬ್ದಲಾಲಿತ್ಯದಿಂದ ಕೂಡಿದ ಸ್ತೋತ್ರಗಳು, ಶ್ಲೋಕಗಳು ಎಷ್ಟೇ ಸರ್ತಿ ಉಚ್ಚರಿಸಿದರೂ ಮತ್ತೆಮತ್ತೆ ತಿನ್ನಬೇಕೆನಿಸುವ [ಉಲಿಯಬೇಕೆನಿಸುವ] ಹಪಹಪಿಕೆಯನ್ನೂ ಮನಶ್ಯಾಂತಿಯನ್ನೂ ಕರುಣಿಸುವ ರಸಪೂರಿತ ಹಣ್ಣುಗಳು! ಆಸೇತು ಹಿಮಾಲಯ ಪರ್ಯಂತ ಹಲವಾರು ಬಾರಿ ತಿರುಗಾಡಿದ ಶಂಕರರು ಇಡೀ ಅಖಂಡ ಭರತಖಂಡವನ್ನೂ [ಅಪಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಸಹಿತದ ಭಾರತ] ಒಮ್ಮೆ ಮಾತೆಯಾಗಿಯೂ ಇನ್ನೊಮ್ಮೆ ಪಿತೃವಾಗಿಯೂ ಕಂಡು ಸ್ತೋತ್ರಗಳನ್ನು ಅನುಗ್ರಹಿಸಿದರು. ಜಗತ್ತೇ ಅರ್ಧನಾರೀಶ್ವರ ಶಕ್ತಿಯ ಪ್ರತೀಕವೆಂಬುದು ಅವರ ಅಭಿಮತವಾಗಿತ್ತು.

ಅಯಿ ಜಗದಂಬ ಮದಂಬ ಕದಂಬ-
ವನಪ್ರಿಯವಾಸಿನಿ ಹಾಸರತೇ |
ಶಿಖರಿಶಿರೋಮಣಿತುಂಗಹಿಮಾಲಯ-
ಶೃಂಗನಿಜಾಲಯ-ಮಧ್ಯಗತೇ|
ಮಧುಮಧುರೇ ಮಧುಕೈಟಭಭಂಜಿನಿ
ಕೈಟಭಭಂಜಿನಿ ರಾಸರತೇ |
ಜಯ ಜಯ ಹೇ ಮಹಿಷಾಸುರಮರ್ದಿನಿ
ರಮ್ಯಕಪರ್ದಿನಿ ಶೈಲಸುತೇ ||

ಹಿಮಾಲಯಗಳೂ ಗಿರಿಶಿಖರಗಳೂ ಕದಂಬವನಗಳೂ ಶೃಂಗನಿಜಾಲಯಗಳೂ ಎಲ್ಲೆಲ್ಲೂ ದೇವಿಯ, ಜಗನ್ಮಾತೃಕೆಯ ರೂಪವನ್ನು ಕಂಡ, ಆ ದಿವ್ಯರೂಪದ ಮನಸಾ ಉಂಡ ಮಹಾಮಹೋಪಾಧ್ಯಾಯ ಶಂಕರರು ಮುಂದಿನ ಪೀಳಿಗೆಗೆ ತಾನು ಕಂಡ ಸೌಂದರ್ಯವನ್ನು ಸ್ತೋತ್ರಗಳಲ್ಲಿ ಕಟ್ಟಿಕೊಟ್ಟರು.

ಹಿಂದೊಮ್ಮೆ ತಮಿಳುನಾಡಿನ ಮಧುರೆಯಲ್ಲಿ ಮೀನಾಕ್ಷಿ ಸುಂದರೇಶ್ವರ ದೇವಸ್ಥಾನದಲ್ಲಿ ನೆಲೆಸಿರುವ ಮೀನಾಕ್ಷಿ ಅಮ್ಮನವರು ಕಾರಣಾಂತರಗಳಿಂದ ಕ್ರೋಧಗೊಂಡು ರಾತ್ರಿಯಹೊತ್ತು ಕಾಳಿಯಾಗಿ ಸಂಚರಿಸುತ್ತ ಆಲಯವನ್ನು ಪ್ರವೇಶಿಸುವ ಜನರನ್ನೂ ಪ್ರಾಣಿಗಳನ್ನೂ ನುಂಗುತ್ತಾ ತಿರುಗುತ್ತಿದ್ದಳಂತೆ. ಹಲವಾರು ಬಲಿಗಳನ್ನು ತೆಗೆದುಕೊಳ್ಳುತ್ತಿದ್ದ ಮಹಾಕಾಳಿಯ ಆ ರೂಪವನ್ನು ನೆನೆಯುತ್ತಾ ಹಗಲಿನಲ್ಲೂ ಅರ್ಚಕರು ದೇವಸ್ಥಾನಕ್ಕೆ ಹೋಗುವುದಕ್ಕೆ ಹೆದರತೊಡಗಿದರು! ತೀರ್ಥಯಾತ್ರೆಮಾಡುತ್ತಾ ಬಂದ ಶಂಕರರು ಯಾರ ಮಾತನ್ನೂ ಕೇರ್‍ಳದೇ ರಾತ್ರಿಹೊತ್ತು ಅಲ್ಲೇ ತಂಗಿದರು. ಆ ರಾತ್ರಿ ಅಮ್ಮ ಮೀನಾಕ್ಷಿ ಕಾಳಿಯಾಗಿ ಭಯಂಕರವಾಗಿ ಘರ್ಜಿಸುತ್ತಾ ಏಕಾಏಕಿಯಾಗಿ ಕುಳಿತ ಶಂಕರರೆಡೆಗೆ ಬಂದು ತಿನ್ನುವುದಾಗಿ ಹೆದರಿಸಿದಳು. ಶಂಕರರು ಹೇಳಿಕೇಳಿ ೧೬-೧೭ರ ಹರೆಯದ ಬಾಲಕ! ಪುಕ್ಕಲನಾಗಿದ್ದರೆ ಓಡಿಹೋಗಬೇಕಾಗಿತ್ತು. ಆದರೆ ಶಂಕರರ ವಿಷಯದಲ್ಲಿ ಹಾಗಿರಲಿಲ್ಲ, ಅಮ್ಮನ ರೂಪವನ್ನೇ ಬದಲಿಸಲು ಅವರು ಅಲ್ಲುಳಿದಿದ್ದರು! ಮೀನಾಕ್ಷಿಯನ್ನು ಕಂಡು ನಕ್ಕುಬಿಟ್ಟರು! ಭಯಂಕರಳಾದ ತನ್ನನ್ನು ನೋಡಿ ನಗುತ್ತಿರುವ ಹುಡುಗನನ್ನು ಕಂಡು ಅಮ್ಮನಿಗೂ ಆಶ್ಚರ್ಯವಾಯಿತು. " ಜಗತ್ತಿಗೇ ಅಮ್ಮನಾದ ನೀನು ಮಕ್ಕಳನ್ನೆಲ್ಲಾ ಹೀಗೆ ಹೆದರಿಸುವುದೇ ? " ಎಂಬ ಶಂಕರರ ಪ್ರಶ್ನೆಗೆ ಅಮ್ಮನಲ್ಲಿ ಉತ್ತರವಿರಲಿಲ್ಲ. ಅಮ್ಮನ ಆವೇಶ ನಿಧಾನಾವಾಗಿ ಇಳಿಯುತ್ತಾ ಸಾಗಿತು. ಶಂಕರರಲ್ಲಿ ಸುಂದರೇಶ್ವರನ ರೂಪ ಆಕೆಗೆ ಮನದಟ್ಟಾಯಿತು. ಆದರೂ ಆಕೆ ಪಣವೊಂದನ್ನೊಡ್ಡಿ ಅದನ್ನು ಗೆಲ್ಲುವಂತೇ ಆಜ್ಞಾಪಿಸಿದಳು. ಅದರಂತೇ ಆ ರಾತ್ರಿ ಆ ಪಣವನ್ನು ಗೆಲ್ಲುವ ಸಲುವಾಗಿ ಶಂಕರರು ಚಕ್ರಬಂಧವೊಂದನ್ನು ರಚಿಸುತ್ತಾ ಶ್ಲೋಕದಲ್ಲಿ ಅವುಗಳನ್ನು ವಿವರಿಸುತ್ತಾ ಕುಳಿತರು. ಬೆಳಗಾಗುವಷ್ಟರಲ್ಲಿ ದೇವಿಗೆ ಸೌಮ್ಯಕಳೆ ಬಂದಿತ್ತು. ಶಂಕರರನ್ನು ಪ್ರೀತಿಯಿಂದ ಮೈದಡವಿ ವಿಗ್ರಹದಲ್ಲಿ ಐಕ್ಯವಾದವಳು ಮುಂದೆಂದೂ ಮತ್ತೆ ಕಾಳಿಯ ಉಗ್ರಸ್ವರೂಪವನ್ನು ಧರಿಸಲಿಲ್ಲ. ಅಂದಿನದಿನ ರಚಯಿತವಾದ ಆ ಚಕ್ರಬಂಧವೇ ಶ್ರೀಚಕ್ರವೆಂದು ಪ್ರಸಿದ್ಧಿಪಡೆಯಿತು! ಅದರ ಆರಾಧನೆಗೆ ಸೌಂದರ್ಯಲಹರೀ ಮತ್ತು ಲಲಿತಾ ಸಹಸ್ರನಾಮಗಳು ಶಂಕರರಿಂದ ಕೊಡಲ್ಪಟ್ಟವು. ಇಂದಿಗೂ ಆ ಚಕ್ರವನ್ನು ಗೃಹ ಗೋಷ್ಠಗಳಾದಿಯಾಗಿ ಹಲವೆಡೆ ಧನಾಕರ್ಷಕ ಯಂತ್ರವೆಂದು ಇಟ್ಟು ಪೂಜಿಸುವುದನ್ನು ನೋಡಬಹುದು. ಇದೇ ಶ್ರೀಚಕ್ರವನ್ನು ಶಂಕರರು ಆಮೇಲೆ ಹಲವೆಡೆಗಳಲ್ಲಿ ಶಿಲೆಗಳಮೇಲೆ ಕೊರೆದು ಪ್ರತಿಷ್ಠಾಪಿಸಿದರು. ಪ್ರಮುಖವಾಗಿ ತಿರುಪತಿ, ಶೃಂಗೇರಿ ಮುಂತಾದೆಡೆಗಳಲ್ಲಿ ಅವುಗಳನ್ನು ವಿಗ್ರಹಗಳೆಡೆಯಲ್ಲೇ ಬರೆದರು.

ಸನಾತನ ಧರ್ಮ ತನ್ನ ಮೂಲಧ್ಯೇಯಗಳನ್ನು ಕಳೆದುಕೊಂಡು ಕ್ರಮೇಣ ಹಿಂಸಾತ್ಮಕವಾಗಿ ಪರಿವರ್ತವಾಗುತ್ತಿರುವ ಸನ್ನಿವೇಶದಲ್ಲಿ ಪರಶಿವನ ನೇರ ಅವತಾರವಾಗಿ ಶಂಕರನಾಗಿ ಕೇರಳದ ಕಾಲಟಿಯಲ್ಲಿ ಆರ್ಯಾಂಬೆ ಹಾಗೂ ಶಿವಗುರು ಎಂಬ ದಂಪತಿಯ ಮಗುವಾಗಿ ಜನಿಸಿ ಕೇವಲ ೩೨ ವರ್ಷಗಳಕಾಲ ಭೌತಿಕ ಕಾಯದಿಂದ ಜೀವಿಸಿದ್ದ ಶ್ರೀ ಶಂಕರರು ಹಿಮಾಲಯದ ಕೇದಾರನಾಥದಲ್ಲಿ ಶಿಖರಗಾಮಿಯಾಗಿ ನಡೆದು ಅದೃಷ್ಯರಾದರು, ಪ್ರಕೃತಿಯಲ್ಲಿ ಭೌತಿಕವಾಗಿ ಕಾಣದಾದರು. ಆದರೂ ಇಂದಿಗೂ ಅನೇಕ ನಾಸ್ತಿಕ ಜನರಿಗೆ ಅವರ ಪ್ರೌಢಿಮೆಯನ್ನೂ ಪಾಂಡಿತ್ಯವನ್ನೂ, ಎಳವೆಯ ಅನನ್ಯ ಸಾಧನೆಯನ್ನೂ ಅಲ್ಲಗಳೆಯಲಾಗುವುದಿಲ್ಲ. ತತ್ವವೊಂದು ಹೀಗಿದೆ-- ಮೌಂಟ್ ಎವರೆಷ್ಟ್ ಏರಿದವರಿಗೆ ಮಾತ್ರ ಅಲ್ಲಿಂದ ಭೂಮಂಡಲ ಯಾವರೀತಿ ಕಾಣುತ್ತದೆ ಎಂಬುದು ತಿಳಿಯುತ್ತದೆ ಹೇಗೋ ಹಾಗೇ ಅವರವರ ದೃಷ್ಟಿಕೋನದಂತೇ ಮುಂದೆ ಹಲವಾರು ಪಂಥಗಳೂ ಭಕ್ತಿಪಂಥಗಳೂ ಹುಟ್ಟಿಕೊಂಡರೂ ಯಾವುದೇ ಕೊರತೆಯನ್ನಾಗಲೀ ಸಂಶಯವನ್ನಾಗಲೀ ಇಡದೇ ಹಲವು ಜ್ವಲಂತ ಸಾಕ್ಷಿಗಳೊಂದಿಗೆ ಸದಾ ಅ-ದ್ವೈತ ಎಂದು ಸಾರುವ ಪ್ರಕೃತಿಧರ್ಮವನ್ನು ಗಮನಿಸಿದರೆ ಶಂಕರರು ಪ್ರಕೃತಿಯ ಸಹಜ ಧರ್ಮವನ್ನೇ ನಮಗೆ ತಿಳಿಸಿದ್ದಾರೆ ಎಂಬುದು ಗೋಚರವಾಗುತ್ತದೆ. ಕೇವಲ ೩೨ ವಯಸ್ಸೇ ಆಗಿದ್ದರೂ ಹಲವರಿಗೆ ಶಂಕರರು ಮಾತಾ-ಪಿತೃ ಸ್ವರೂಪಿಯಾಗಿ ಕಂಡಿದ್ದಾರೆ; ಕಾಣುತ್ತಾರೆ. ಶಂಕರರಿಗೂ ಮತ್ತು ಅವರಲ್ಲಿರುವ ಮಾತೆಯರೂಪಕ್ಕೂ ನಮಿಸಿದರೆ ಜನ್ಮದಿನವಾದ ಇಂದು ಅವರನ್ನು ನೆನೆದಿದ್ದೂ ಆಗುತ್ತದೆ ಮತ್ತು ಮಾತೆಯರ ದಿನವಾದ ಇಂದು ಅವರನ್ನೂ ಸ್ಮರಿಸಿದ ಹಾಗಾಗುತ್ತದೆ ಎಂಬಕಾರಣದಿಂದ ಹೀಗೆ ನಿಮ್ಮೊಂದಿಗೆ ವಿಷಯ ಪ್ರಸ್ತಾಪಿಸಿದೆ.

ಪದಕಮಲಂ ಕರುಣಾನಿಲಯೇ
ವರಿವಸ್ಯತಿ ಯೋನುದಿನಂ ಸ ಶಿವೇ |
ಅಯಿ ಕಮಲೇ ಕಮಲಾನಿಲಯೇ
ಕಮಲಾನಿಲಯಃ ಸ ಕಥಂ ನ ಭವೇತ್ |
ತವ ಪದಮೇವ ಪರಂಪದಮಿತ್ಯನು-
ಶೀಲಯತೋ ಮಮ ಕಿಂ ನ ಶಿವೇ |
ಜಯ ಜಯ ಹೇ ಮಹಿಷಾಸುರಮರ್ದಿನಿ
ರಮ್ಯಕಪರ್ದಿನಿ ಶೈಲಸುತೇ ||

|| ಸಮಸ್ತ ಸನ್ಮಂಗಳಾನೀ ಭವಂತು ||

Saturday, May 7, 2011

ರಾಧೆಯ ಹಾಡು

ರಾಧೆಯ ಹಾಡು

ಅತಿ ಪ್ರೇಮದಿಂದ ತುಸು ಕೋಪದಿಂದ ರಾಧೆ ತನ್ನ ಕೃಷ್ಣನನ್ನು ಕಾಣುವ ರೀತಿ ಹಲವು. ಕೃಷ್ಣ ಹಲವರ ಸ್ವತ್ತು- ಆತ ಜಗತ್ತಿಗೆ ಗುರು, ಯಾದವ ಕುಲತಿಲಕ, ಹಲವರಿಗೆ ಬೇಕಾದ ವ್ಯಕ್ತಿ, ಆದರೆ ತನ್ನ ಕೃಷ್ಣ ತನಗೂ ಒಂದು ಸ್ವಲ್ಪ ಸಮಯ ಮೀಸಲಿಡಲಿ ಎಂಬುದು ರಾಧೆಯ ಅಪೇಕ್ಷೆ. ರಾಧಾಮಾಧವ ಮಧುರ ವಿಲಾಸ ಎಂದಿಗೂ ಎಲ್ಲರಿಗೂ ಖುಷಿಕೊಡುವ ಸಂಗತಿ. ಮುರಲೀಲೋಳನಾದ ಆತ, ಗೋವಳನಾದ ಆತ, ಗೋಪಿಕಾ ಮನೋಹರನಾದ ಆತ ಎಷ್ಟೆಂದರೂ ರಾಧೇಶ್ಯಾಮ ! 'ಊರಿಗೆ ಅರಸನಾದರೂ ಮನೆಗೆ ಮಗ' ಎನ್ನುವಹಾಗೆ ಯಾರಿಗೆ ಏನೇ ಆದರೂ ರಾಧೆಗೆ ಆತ ಗಂಡ, ಪ್ರಿಯತಮ, ಬಾಳಸಂಗಾತಿ ಎಲ್ಲವೂ. ರಾಧೆ ಒಮ್ಮೆ ತಾನಾಗೆ ಕೃಷ್ಣನನ್ನು ನೆನೆದು ಸ್ವಗತದಲ್ಲಿ ಹಾಡಿಕೊಂಡಿದ್ದು ಹೀಗೆ :
[ಆದಿ-ಅಂತ್ಯ ಎರಡೂ ಪ್ರಾಸಗಳನ್ನು ಏಕಕಾಲಕ್ಕೆ ಬಳಸಿ ರಚಿಸಿದ ಕವಿತೆ 'ಶ್ರೀಕೃಷ್ಣಾರ್ಪಣಮಸ್ತು' ಎಂಬುದರೊಂದಿಗೆ ನಿಮ್ಮ ಆವಗಾಹನೆಗೆ ]

ಕದ್ದು ಹೊರಟೆಯಲ್ಲ ಹೃದಯ ಮುದ್ದು ಮಾಧವ
ಉದ್ದ ಸುಳ್ಳು ಹೇಳಲೇಕೆ ಪೆದ್ದು ಯಾದವ !
ನಿದ್ದೆಯಲ್ಲೂ ನಿನದೆ ನೆನೆಪು ರಾಧಾಧವ
ಇದ್ದು ಸುಖವದೇನು ಮರೆತು ಮುರಳೀಧವ ?

ಕದ್ದು ಬೆಣ್ಣೆ ತಿಂದು ಸರಸವಾಡಿ ನಿಂದವ
ಎದ್ದು ಹಾರಿ ಹಾವ ತುಳಿದು ಗೆದ್ದುಬಂದವ
ಶುದ್ಧ ಶುಂಠ ರಗಳೆಪೋರ ಜಿದ್ದು ಇರದವ
ಒದ್ದೆ ಮನದಿ ನಿನ್ನ ವೇಣು ತುಡಿತ ಮಾರ್ದವ !

ಗುದ್ದಿ ಕಂಸನನ್ನು ವಧಿಸಿ ನ್ಯಾಯ ಪೇಳ್ದವ
ತಿದ್ದುಕೊಳದ ಶಿಶುಪಾಲನ ಶೀಘ್ರ ತರಿದವ
ಸದ್ದಿಲ್ಲದೆ ಪೂತನಿಯ ಹಾಲು ಕುಡಿದವ !
ಬಿದ್ದ ಕೌರವನ ನೋಡಿ ನಕ್ಕು ನುಡಿದವ

ಸುದ್ದಿಯಿಲ್ಲದಂತೆ ನಡೆದದೆಲ್ಲೋ ಸಂದವ
ಉದ್ದ ಸೀರೆಯಿತ್ತು ಕಾಣದಂತೆ ಉಳಿದವ !
ಎದ್ದು ಪಾರ್ಥಗಲ್ಲಿ ಗೀತೆ ಬೋಧಿಸಿದವ
ಖುದ್ದು ಬಾರೋ ಕಾಣಲೊಮ್ಮೆ ಪ್ರೇಮಾಧವ

Wednesday, May 4, 2011

ಭರಿಸಲಾಗದ ನಷ್ಟ ವಾಗಿದೆ !ಭರಿಸಲಾಗದ ನಷ್ಟ ವಾಗಿದೆ !

ಬಿನ್ ಲ್ಯಾಡನ್ ನಿಧನದಿಂದ ಪಾತಕಲೋಕಕ್ಕೆ ತುಂಬಲಾರದ ನಷ್ಟವಾಗಿದೆ ! ಅಬ್ಬರಿಸಿ ಅಕಾಲಮೃತ್ಯುವನ್ನು ಸ್ವಾಗತಿಸಿದ ಆತನ ದುರ್ಮರಣಕ್ಕೆ ಇಡೀ ಜಗತ್ತು ಶೋಕತಪ್ತವಾಗಿ ಕಂಬನಿಮಿಡಿದಿದೆ ! ---ಓಹೊಹೋ ಸಾರಿ ಕಣ್ರೀ ಇದು ಬೈಹಾರ್ಟೆಡ್ ಶೋಕ ಸಂದೇಶ ! ಮಾಮೂಲಾಗಿ ನಮ್ಮ ಮಾಧ್ಯಮಗಳಲ್ಲಿ ಸಲೀಸಾಗಿ ಕೆಲವು ಸಂದೇಶಗಳನ್ನು ಬಿತ್ತರಿಸುತ್ತಿರುತ್ತಾರೆ; ಕೊನೇಪಕ್ಷ ನಿರೂಪಕರೋ ವಾಚಕರೋ ತಾವು ಏನು ಹೇಳುತ್ತಿದ್ದೇವೆಂಬುದರ ಕಡೆಗೆ ಗಮನ ಕೊಟ್ಟಿದ್ದರೆ ಚೆನ್ನಾಗಿರುತ್ತಿತ್ತು.

ನೀವೆಲ್ಲಾ ಕೇಳಿದ್ದು ನೋಡಿದ್ದೇ ಹೊಸದೇನಲ್ಲ ಹಲವುಸಲ ಬಿಟ್ಟ ಸ್ಥಳಗಳನ್ನು ಭರ್ತಿಮಾಡಿಕೊಂಡು ಹೇಳಿದ್ದನ್ನೇ ಮತ್ತೆ ಮತ್ತೆ ಹೇಳುತ್ತಿರುತ್ತಾರೆ. ಉದಾ : __________ರವರ ನಿಧನದಿಂದ ____________ರಂಗಕ್ಕೆ ಭರಿಸಲಾಗದ ನಷ್ಟವಾಗಿದೆ. ___________ರವರ ಸಾವಿಗೆ ಪ್ರಧಾನಿ ___________ ಹಾಗೂ ಮುಖ್ಯಮಂತ್ರಿ ________________ಸೇರಿದಂತೇ ಹಲವಾರು ಗಣ್ಯರು ಕಂಬನಿ ಮಿಡಿದಿದ್ದಾರೆ. ಅವರ ಕುಟುಂಬಕ್ಕೆ ಪರಮಾತ್ಮ ದುಃಖ ಭರಿಸುವ ಶಕ್ತಿಯನ್ನು ಕೊಡಲಿ ಎಂದು ______ ಹಾರೈಸುತ್ತದೆ.

ರೆಡೀ ಇಟ್ಟುಕೊಂಡಿರುವ ಇಂತಹ ಸಾಲುಗಳ ಬಿಟ್ಟ ಸ್ಥಳಗಳನ್ನು ತುಂಬಿಕೊಂಡು ಬೈಹಾರ್ಟ್ ಮಾಡಿಕೊಂಡುಬಿಟ್ಟರೆ ಸಾಕು.

ನನ್ನ ತಮ್ಮ ತಮಾಷೆಗೆ ಹವಾಮಾನ ವರದಿ ಹೇಳುತ್ತಿದ್ದ :

ಬೆಂಗಳೂರಿನ ಸುತ್ತಮುತ್ತ ಮೋಡಕವಿದ ವಾತಾವರಣವಿದ್ದು ಸಂಜೆಯ ವೇಳೆಗೆ ತುಂತುರು ಮಳೆ ಅಥವಾ ಜಡಿಮಳೆ ಬೀಳುವ ಸಂಭವನೀಯತೆ ಇದೆ ! ಮಿಕ್ಕುಳಿದಂತೇ ಒಳನಾಡಿನನಲ್ಲಿ ಒಣಹವೆ ಮುಂದುವರಿದಿದ್ದು ನಿರೀಕ್ಷಿಸುವ ಬದಲಾವಣೆಯೇನೂ ಕಂಡುಬಂದಿಲ್ಲ. ಆಗಾಗ ಸುಂಟರಗಾಳಿ ಬೀಸುತ್ತಿರುವುದರಿಂದ ತೀರಪ್ರದೇಶದ ಮೀನುಗಾರರಿಗೆ ಮುನ್ನಚ್ಚೆರಿಕೆ ವಹಿಸುವಂತೆ ಸೂಚಿಸಲಾಗಿದೆ ! ----ನಗಬೇಕೋ ಅಳಬೇಕೋ ತಿಳಿಯುವುದಿಲ್ಲ. ಯಾಕೆಂದರೆ ಸುಮಾರು ೨೫-೩೦ ವರ್ಷಗಳಿಂದ ರೇಡಿಯೋದಲ್ಲಿ ಇಂಥದ್ದನ್ನೇ ಕೇಳುತ್ತಿದ್ದೇವೆ. ಶಬ್ದ ಶಬ್ದವೂ ಅದೇ, ಬ್ಯಾಂಕಿನ ಜಾಹೀರಾತೊಂದರಲ್ಲಿ ಹೇಳುವಂತೇ ’ಅದೇ ಮುಗುಳ್ನಗೆ ಮತ್ತು ಹೊಸ ಟೆಕ್ನಾಲಜಿ’ -- ಆ ಬ್ಯಾಂಕಿನವರು ಮುಗಳ್ನಗೆ ನಕ್ಕಿದ್ದು ಯಾವಾಗ ಎಂತ ತಿಳಿಯಲಿಲ್ಲ. ಬ್ಯಾಂಕಿನ ಕೌಂಟರುಗಳಲ್ಲಿ ಕುಳಿತ ಬಹುತೇಕ ಮೇಡಮ್ [ಮಡ್ಡಮ್ಮ]ಗಳು ಅಡುಗೆ-ಸೀರೆ-ಬಂಗಾರ ಇತ್ಯಾದಿ ಲೋಕಾಭಿರಾಮವಾಗಿ ಮಾತನಾಡುವ ಅಡ್ಡೆ ಅದಾಗಿರುವುದರಿಂದ ಮಧ್ಯೆ ಮಧ್ಯೆ ಬರುವ ಗಿರಾಕಿಗಳನ್ನು ಹುಲಿಗಣ್ಣಿನಿಂದ ನೋಡಿ " ಏನ್ಬೇಕ್ರೀ ?ಅಲ್ಹೋಗ್ರಿ " ಎಂದು ಎಗರಾಡುತ್ತಾ ಬಹಳ ಅಪ್ಯಾಯಮಾನವಾಗಿ ಸಂಭಾಳಿಸುವ ಪರಿ ಇಂದಿಗೂ ಕಾಣಸಿಗುವಂಥದ್ದೇ! ಕಂಪ್ಯೂಟರುಗಳು ಬಂದು ಎಷ್ಟೆಲ್ಲಾ ಕೆಲಸಗಳು ಗಣಕೀಕೃತವಾಗಿ ಬರೆಯುವ ಕೆಲಸವೇ ಅತಿ ಕಮ್ಮಿಯಾದ ಬ್ಯಾಂಕಿನಲ್ಲಿ ಹೀಗಿದ್ದೂ ಹೀಗೆ ಇನ್ನು ಮೊದಲಿನಹಾಗೇ ಕಂಪ್ಯೂಟರ್ ಇರದ ಕಾಲವಾಗಿದ್ದರೆ ಗಿರಾಕಿಗಳ ಕೆಲಸಕ್ಕೆ ದೇವರೇಗತಿಯಾಗಬೇಕಾಗಿತ್ತೇನೋ. ಪ್ರಾಯಶಃ ಅವರು ಹೇಳುವುದು ಹೀಗಿರಬೇಕು--ನಾವು ನಗುತ್ತಿರುತ್ತೇವೆ, ಕಂಪ್ಯೂಟರುಗಳು ಕೆಲಸಮಾಡುತ್ತಿರುತ್ತವೆ--ಇದೇ ಆ ಹೊಸ ಟೆಕ್ನಾಲಜಿ!

ಮಾಧ್ಯಮ ವಾಹಿನಿಗಳ ಕಾರ್ಯಕ್ರಮ ನಿರೂಪಕರಿಗಂತೂ ಕೆಲವೆಲ್ಲಾ ನಿದ್ದೆಯಲ್ಲೂ ಬಡಬಡಿಸುವ ಶಬ್ದಗಳು. ಇತ್ತೀಚೆಗೆ ಸಮಾರಂಭವೊಂದಕ್ಕೆ ಹೋಗಿದ್ದೆ. ಅಲ್ಲಿಗೆ ನಿರೂಪಕ ಮಹಾಶಯನೊಬ್ಬ ’ಗಣ್ಯ ಅತಿಥಿ’ಯಾಗಿ ಬಂದಿದ್ದ. ಮಾತನಾಡಬೇಕಲ್ಲ. ಮಾತಿನ ಮಧ್ಯೆ ಹಲವುಬಾರಿ ಆತನ ಎಂದಿನ ಶೈಲಿಯ ಶಬ್ದಗಳು ಬಂದವು, ಕಾರ್ಯಕ್ರಮ ಇನ್ನೂ ಮಧ್ಯಭಾಗದಲ್ಲಿತ್ತು. ತನ್ನ ಮಾತು ಮುಗಿದಕೂಡಲೇ " ಇಷ್ಟು ಹೇಳಿ ಈ ಕಾರ್ಯಕ್ರಮವನ್ನು ಮುಗಿಸ್ತಾ ಇದೇನೆ, ಕ್ಷಣಕ್ಷಣದ ಮಾಹಿತಿಗಾಗಿ ನೋಡ್ತಾಇರಿ " ಎಂದ. ಇಡೀ ಸಭೆಯಲ್ಲಿ ಗೊಳ್ಳನೆ ನಗೆ ! ಇನ್ನು ಲಲನಾಮಣಿಗಳು ಉದುರಿಸುವ ಮುತ್ತುಗಳನ್ನು ನೋಡಬೇಕು " ಈಗ ಚಿಕ್ಕದೊಂದು ಬ್ರೇಕ್ ಬ್ರೇಕ್ ನಂತರ ______ ಕಾರ್ಯಕ್ರಮ ಮುಂದುವರಿಯುತ್ತೆ " ೩೦ ನಿಮಿಷಗಳ ಕಾರ್ಯಕ್ರಮದಲ್ಲಿ ೨೦ ನಿಮಿಷಗಳು ಜಾಹೀರಾತಿಗೇ ಮೀಸಲು !

ಮೊನ್ನೆ ಸತ್ಯಸಾಯಿ ಬಾಬಾ ದೇಹಾಂತ್ಯವಾಯಿತು. ಆಗ ಹಲವರು " ಅವರ ಆತ್ಮಕ್ಕೆ ಚಿರಶಾಂತಿ ನೀಡಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇವೆ " ಎಂತಿದ್ದರು. ಸನ್ಯಾಸಿಗಳು, ಅವಧೂತರು, ಸಂತರು ಸಹಜವಾಗಿ ಎಲ್ಲಿದ್ದರೂ ಅವರ ಆತ್ಮ ಸದಾ ಶಾಂತಿಯಲ್ಲೇ ಇರುತ್ತದೆ! ಇದನ್ನು ಸಾಯಿಬಾಬಾ ಅಂತೂ ಎತ್ತಿ ತೋರಿಸಿದ್ದಾರೆ. ಅವರ ಆತ್ಮಕ್ಕೇ ಶಾಂತಿಯನ್ನು ಕೋರುವ ಮಹಾನ್ ಮಹಿಮಾನ್ವಿತರು ಅದೆಷ್ಟು ಮಂದಿ ! ಪುಣ್ಯಕ್ಕೆ ’ಸಾಯಿಬಾಬಾ ಅವರ ಕುಟುಂಬಕ್ಕೆ ಅವರ ಸಾವಿನಿಂದಾದ ನೋವನ್ನು ಭರಿಸುವ ಶಕ್ತಿಯನ್ನು ಕೊಡಲಿ’ ಎಂದು ಜಾಸ್ತಿ ಯಾರೂ ಹೇಳಲಿಲ್ಲ, ಯಾರೋ ಒಬ್ಬಿಬ್ಬರು ಅವರು ಜನಿಸಿದ ಮನೆಯನ್ನು ನೆನೆದು ಹೇಳಿದರು. ವಸುಧೈವ ಕುಟುಂಬಕಮ್ ಎಂಬುದನ್ನು ಕೃತಿಯಲ್ಲಿ ಬದುಕಿದ ವ್ಯಕ್ತಿಗೆ ವಿಶ್ವಕುಟುಂಬವೆಂಬ ಅರ್ಥದಲ್ಲಿ ಹಾಗೆ ಹೇಳಬಹುದಾದರೂ ಮೇಲ್ನೋಟಕ್ಕೆ ಕುಟುಂಬ ಬಂಧನವನ್ನು ಕಟ್ಟಿಕೊಳ್ಳದ ಬಾಬಾರಿಗೆ ಹಾಗೆ ಹೇಳುವುದು ಸರಿಯಾಗುತ್ತಿತ್ತೇ ?

ಪ್ರಚಾರಕ್ಕಾಗಿ ಋಷಿಕುಮಾರರಂತೆ, ಗುರೂಜಿಯಂತೆ ಹಲವರು ಮಾಧ್ಯಮಗಳ ಮೊರೆಹೋಗಿದ್ದಾರೆ. ಜ್ಯೋತಿಷಿಗಳು-ವಾಸ್ತು ತಜ್ಞರು ತಲೆಹುಣ್ಣಾಗುವಷ್ಟು ಕಾರ್ಯಕ್ರಮ ನಡೆಸಿಕೊಡುತ್ತಾರೆ. ಇಲ್ಲದ್ದನ್ನೂ ಊಹಿಸಿ ನಡೆಸುವ ಅನೇಕ ಕಾರ್ಯಕ್ರಮಗಳು ಜರುಗುತ್ತವೆ! ಜ್ಯೋತಿಷ್ಯ-ವಾಸ್ತು ಶಾಸ್ತ್ರವೇ ಹಣಮಾಡುವ ದಂಧೆಯೇ ಎನ್ನುವ ಕಾರ್ಯಕ್ರಮವನ್ನು ವಾರಗಳವರೆಗೆ ಬಿತ್ತರಿಸುವ ಮಾಧ್ಯಮವಾಹಿನಿಯೊಂದು ದಿನಂಪ್ರತಿ ಬೆಳಿಗ್ಗೆ ಜ್ಯೋತಿಷಿಗಳನ್ನು ಕೂರಿಸಿ ಯಥಾವತ್ ಫೋನ್-ಇನ್ ಜ್ಯೋತಿಷ್ಯ ಕಾರ್ಯಕ್ರಮ ನಡೆಸಿದ್ದು-ನಡೆಸುತ್ತಿರುವುದು ಹಾಸ್ಯಾಸ್ಪದ.

ಲೈಬ್ರರಿಯೊಂದರ ಬಳಿ ನಿಲ್ಲಿಸಿದ್ದ ಗಾಡಿಯಮೇಲೆ ’ಪ್ರೆಸ್’ ಎಂದು ಕೆಂಪಕ್ಷರದಲ್ಲಿ ಬರೆದಿತ್ತು. " ಪ್ರೆಸ್’ ಅಂತ ಬರೆದಿದ್ದೀರಲ್ಲಾ ....ಯಾವ ಮಾಧ್ಯಮದಲ್ಲಿ ಕೆಲಸಮಾಡುತ್ತೀರಿ ? " ಎನ್ನುವ ವಾಕ್ಯ ಅರ್ಧವಾಗುತ್ತಿದ್ದಂತೆಯೇ ಮೈಮೇಲೆ ಹಾರಿಬಂದ ಆತ " ಯಾಕೆ ನಿಮ್ ಪರ್ಮಿಶನ್ ಬೇಕಾ ? " ಎಂದ! ಪತ್ರಕರ್ತರಲ್ಲಿ ರೌಡಿಗಳೂ ಇದ್ದಾರೆ -ಹುಷಾರು!---ಇದು ಅಗ್ನಿ ಯಷ್ಟೇ ನಿಗಿನಿಗಿ ಉರಿಯುವ ಸತ್ಯ. ಒಂದುಕಾಲದಲ್ಲಿ ಪತ್ರಕರ್ತರೆಂದರೆ ಅವರು ಸಾಹಿತ್ಯಾಸಕ್ತರೂ, ದೇಶಪ್ರೇಮಿಗಳೂ ಆಗಿರುತ್ತಿದ್ದರು; ಸಮಾಜವನ್ನು ಸುಧಾರಿಸುವ ಲೇಖನ, ವರದಿಗಳನ್ನು ಬರೆಯುತ್ತಿದ್ದರು. ಇಂದು ರೋಲ್ ಕಾಲ್ ಮಾಡಿದವರೂ ಪತ್ರಕರ್ತರಾಗುತ್ತಾರೆ, ಮತ್ತೆ ಒಳಗೇ ಬಟ್ಟೆಯ ಹಾವು ಬಿಟ್ಟು ರೋಲ್‍ಕಾಲ್ ಮುಂದುವರಿಸುತ್ತಾರೆ! ಕನ್ನಡದ ಒಂದೆರಡು ಪತ್ರಿಕೆಗಳು ಹಾಗೆ ಬೆಳೆದಿವೆ. ಅದರ ಮಾಲೀಕರು ಬಹುಮಹಡಿಗಳನ್ನು ಕಟ್ಟಿಸಿದ್ದಾರೆ, ಕಾರುಗಳನ್ನು ಕೊಂಡು ಜಾಲಿಯಾಗಿದ್ದಾರೆ! ಕೆಟ್ಟದಾಗಿ ಬರೆಯುವ ಕುಚೋದ್ಯ ಲೇಖನಗಳನ್ನು ಕದ್ದು ಬಾಯ್ತುಂಬಾ ನೀರೂರಿಸಿಕೊಳ್ಳುತ್ತಾ ಓದುವ ಆಸಾಮಿಗಳೂ ಇದ್ದಾರೆ. ಅಂತಹ ಪತ್ರಿಕೆಗಳು ಬಿಸಿದೋಸೆಯಂತೇ ಖಾಲಿಯಾಗುತ್ತವೆ!

ಎಲ್ಲೆಲ್ಲಿ ಯಾವ್ಯಾವುದು ಇದ್ದರೆ ಚೆನ್ನವೋ ಹಾಗಿದ್ದರೆ ಸಾಮಾಜಿಕ ಸ್ವಾಸ್ಥ್ಯ ಹದಗೆಡುವುದಿಲ್ಲ. ಶಿಷ್ಟಾಚಾರಗಳನ್ನೆಲ್ಲಾ ಗಾಳಿಗೆ ತೂರಿ ಕೇವಲ ಹಣಗಳಿಸುವುದನ್ನೇ ಮುಖ್ಯವಾಗಿಸಿಕೊಳ್ಳುವ ಇವತ್ತಿನ ಬಹುಮಾಧ್ಯಮಗಳ ’ಅನುಕೂಲ ಸಿಂಧು’ ಸ್ಥಿತಿಗೆ ಏನುಹೇಳೋಣ?

ನಿನ್ನೆ ಕೂಡ ಮಾಧ್ಯಮವಾಹಿನಿಯೊಂದರಲ್ಲಿ ಮಾಧ್ಯಮಗಳು ಹಿಡಿದ ದಾರಿಯ ಕುರಿತು ಚರ್ಚೆ ನಡೆದಿತ್ತು. ಅದರಲ್ಲಿ ಒಬ ಪುಣ್ಯಾತ್ಮ ಹಿರಿಯ ಪತ್ರಕರ್ತ ಹೇಳಿದ್ದು, ಪತ್ರಿಕೆಗಳು ಯಾವುದೇ ಒಂದು ಪಕ್ಷವನ್ನು ವಹಿಸಿಕೊಂಡು ಮಾತನಾಡಿದರೆ ತಪ್ಪಿಲ್ಲವಂತೆ. ಮಾಧ್ಯಮಗಳು ಸತ್ಯವನ್ನಷ್ಟೇ ಹೇಳಬೇಕಂತೆ. ಆದರೆ ಯಾವುದೇ ಒಂದು ಪಕ್ಷಕ್ಕೆ ಅಂಟಿಕೊಂಡ ಮಾಧ್ಯಮ ಸತ್ಯವನ್ನು ಅನುಸರಿಸುವುದು ಸಾಧ್ಯವೇ ? ಇದು ಯಾರ ಕಿವಿಯಮೇಲೆ ಹೂವಿಡುವ ಪ್ಲ್ಯಾನು ? ’ಹಳ್ಳೀ ಹುಡ್ಗೀರ್ ಪ್ಯಾಟೇಲೈಫು’ ನಿಧಾನವಾಗಿ ಹಳ್ಳಹಿಡಿಯುತ್ತಿರುವುದು ಮಾಧ್ಯಮಗಳಲ್ಲೇ ಬಿತ್ತರಗೊಳ್ಳುತ್ತಿರುವ ವಿಷಯ. ಇಂಥಾ ರಿಯಾಲಿಟಿ ಶೋಗಳೆಲ್ಲಾ ಯಾಕೆ ಬೇಕು ಎಂಬುದು ಮಾತ್ರ ನಿಜವಾಗಿಯೂ ಸೋಜಿಗದ ಸಂಗತಿ!

ಪಾತಾಳವಾಣಿ, ಈಗ ಮತ್ತೊಮ್ಮೆ ರಸವಾರ್ತೆಗಳು : ಓದುತ್ತಿರುವವರು ಓದಗಾರ ಮಾಲಿಂಗ
ಭೂಮಿಯಮೇಲಿನ ಲಂಡನ್‍ನಲ್ಲಿ ರಾಜಕುಮಾರ ವಿಲಿಯಮ್ಸ್ ಮದುವೆಯಾದದ್ದನ್ನು ನಮ್ಮೆಲ್ಲಾ ಮಾಧ್ಯಮಗಳು ಗಂಟೆಗಟ್ಟಲೇ ತೋರಿಸಿ ಪುಣ್ಯಸಂಪಾದಿಸಿವೆ! ಜಗತ್ತಿನ ಅತೀ ದುಬಾರಿ ಮದುವೆಯನ್ನು ನಿಮಗಾಗಿ ’ಎಕ್ಸ್‍ಕ್ಲೂಸಿವ್’ ಆಗಿ ತಂದಿದ್ದೇವೆ ಎಲ್ಲರೂ ಅದೇ ಬೋರ್ಡನ್ನೇ ಹಾಕಿದ್ದರು, ಆದರೆ ಯಾರದ್ದು ಎಕ್ಸ್‍ಕ್ಲೂಸಿವ್ ಎಂಬುದು ಮಾತ್ರ ಗೊತ್ತಾಗಲಿಲ್ಲ. ಸಾಧ್ವಿ ಉಮಾಭಾರತಿ ಮತ್ತೆ ಬಿಜೆಪಿ ಸೇರುತ್ತೇನೆಂದು ಸಣ್ಣಗೆ ಸುದ್ದಿ ಬಿಟ್ಟಿದ್ದು ಈಗ ಹಳೇಮಾತು ಮತ್ತು ಆಗಾಗ ಕೇಳಿ ಹಳಸಿಹೋದ ಮಾತು ಆದರೆ ನಮ್ ಮಣ್ಣಿನಮಕ್ಳು ಬ್ರಷ್ಟಾಚಾರ ನಿರ್ಮೂಲನೆಗೆ ಹೊರಟುನಿಂತವ್ರೆ ಐ ! ಬಿನ್ ಲಾಡೆನ್ ಭೂತ ಅಮೇರಿಕಾಕ್ಕೆ ಪ್ರವೇಶ ಮಾಡಿದ್ಯಂತೆ ! ಬಾಬಾ ಇನ್ನೂ ದೇಹಬಿಟ್ಟು ಹೋಗಿದ್ದರೋ ಇಲ್ಲವೋ ಅಷ್ಟೊತ್ತಿಗಾಗ್ಲೇ ’ಗುರೂಜಿ’ ಬಾಬಾ ಆತ್ಮಾನ ಕರೆಸಿ ಮಾತಾಡ್ಸ್ಬುಟ್ಟವ್ರೆ ! "ನಾನು ಏಪ್ರಿಲ್ ೧೭ಕ್ಕೇ ಬೆಳಿಗ್ಗೆ ಐದೂವರೇಲೇ ಹೊಂಟೋದೆ ಆದ್ರೆ ಯಾರಿಗೂ ಗೊತ್ತಾಗಿಲ್ಲಾ ಅದ್ಕೇಯ ತಡವಾಗಿ ಹೇಳ್ಯವ್ರೆ ನಂಗೆ ದೇಹದಲ್ಲಿ ತುಂಬಾ ತೊಂದ್ರೆ ಇತ್ತು ಅದ್ಕೇ ಹೊಂಟ್ಬುಟ್ಟೆ" ಎಂದು ಮಲಗಿದ್ದ ವ್ಯಕ್ತಿ ’ಬಾಬಾ’ ಆದಾಗ ’ಗುರೂಜಿ’ ಕೈಮುಗ್ದಿದ್ದೇ ಕೈಮುಗದಿದ್ದು! "ಸ್ವಾಮೀ ನಿಮ್ಮನ್ ಕರ್ಸ್ಬುಟ್ಟು ತುಂಬಾ ತೊಂದ್ರೆ ಕೊಟ್ಟೆ, ಕ್ಷಮ್ಸಿ" ಅಂತ ಯೋಳಿದ್ದೇ ಯೋಳಿದ್ದು !

ನೀವು ಈ ರಸವಾರ್ತೆಗಳನ್ನು ಪಾತಾಳವಾಣಿಯಿಂದ ಕೇಳುತ್ತಿದ್ದೀರಿ !

ಮಳೆಬಂದಾಗ ಬೆಂಗ್ಳೂರಲ್ಲಿ ಪಾಲಿಕೆ ಮೇಯರು ಉಪಮೇಯರು ಕಂಟ್ರೋಲ್ ರೂಮ್ನಾಗೆ ಕೂರ್ತಾರಂತೆ! ಇದೆಲ್ಲಾ ಹಳೇ ಇಸ್ಯ ಇನ್ನೇನಾನಾ ಒಸದೈತಾ ಒರಸೆ ಅಂತಿದ್ದ ನಮ್ಮ ಲೂಸ್ ಮಾದ! ಎಲ್ಲಾ ಕಡೀಕ್ಕೂ ನೀರು ತುಂಬದ್ರೆ ಬರೀ ಕಂಟ್ರೋಲ್ ರೂಮ್ನಾಗೆ ಕುಂತ್ಗಬುಟ್ರೆ ಹೋತದಾ ? ಅಂತ ಕಿಸಕ್ಕಂತ ನಕ್ಕವ್ನೆ ಯಂಕ್ಟು. ಜ್ಯೂನಿಯರ್ ಎನ್.ಟಿ.ಆರ್ ಮದ್ಯೆಯಂತೆ ಮಾಧ್ಯಮದೋರು ಮೈಕು ಕ್ಯಾಮರಾ ಹಿಡ್ಕಂಡು ’ಎಕ್ಸ್‍ಕ್ಲೂಸಿವ್’ ತೋರ್ಸೋಕೆ ಸಿದ್ಧವಾಗಿದಾರೆ! ಬ್ರೇಕಿಂಗ್ ನ್ಯೂಜು -- ಸಿದ್ಧಾರ್ಥ ಮಲ್ಯ ದಡ್ಡ ಆದ್ರೂ ಪರವಾಗಿಲ್ಲ ಅಂತ ದೀಪಿಕಾ ಹೇಳವ್ಳಂತೆ ಅದನ ತೋರ್ಸೋಕೇಂತ್ಲೇ ಬಾಯಿಗೆ ಬಾಯಿ ಹಾಕಿ ಹಲ್ಲಿಗೆ ಹಲ್ಲು ಸಿಕ್ಕಾಕೊಂಡಿತ್ತು ಅಂತಾರೆ ! ಅಪ್ಪ ’ನಾ ಮುದ್ಕಾದ್ರೂ ನೀ ಕಲಿಯಾಕಿಲ್ಲ ಬಿಡು’ ಅಂತಿದ್ನಂತೆ ಅದ್ಕೇ ಪಕ್ದಲ್ಲೇ ನಿಂತಿರೋವಾಗ್ಲೇ ಒಂದ್ ಕೈ ತೋರ್ಸ್ಯವನೆ! ರಾಧಿಕಾ ಪರಿಣಯ ಪತ್ರಿಕೆಗಳಲ್ಲಿ ಫೋಟೋ ಸಮೇತ ಬಂದ್ರೂ ರಾಜಕಾರಣಿಗೊಳ್ಗೆ ಒಂದಕ್ಕಿಂತಾ ಹೆಚ್ಚು ಎಷ್ಟುಬೇಕಾದರೂ ಮಡೀಕಬಹುದು ಅಂಬೋ ಲಾ ಪಾಯಿಂಟ್ ಅದ್ಯಂತೆ, ಅದಕೇ ಯಾರೂ ಕಮಕ್ ಕಿಮಕ್ ಅನ್ದೇ ಕೂತಿರೋದು! ಹೊಸಗಾದೆ ಕಳೆದವಾರದಿಂದ ಜಾರೀಲಿದೆ : ಹುಡುಗರೇ ಪ್ರೀತಿ ಮಾಡ್ಬ್ಯಾಡಿ ಕಣ್ ಹೋಯ್ತದೆ ! ಬೋರ್ವೆಲ್ ನೀರ್ಗೆ ಬಾಟ್ಲಿ ಹಿಡ್ದು ಒಂದು ಜಿಲೆಟಿನ್ ಟ್ಯಾಬ್ಲೆಟ್ ಬಿಟ್ರೆ ಬೆಳ್ಳಗೆ ಸೈನಿಂಗ್ ಬತ್ತದೆ-ಹದನ್ನೇ ಮಾರ್ಕಂಡು ಕೋಟಿ ಸಂಪಾದ್ನೆ ಭೂಲೋಕದ ಬೆಂಗ್ಳೂರಾಗೆ!

ಇಲ್ಲಿಗೆ ರಸವಾರ್ತೆ ಮುಗೀತು, ಕೇಳಿಸ್ಕ್ಯಂಡ ನಮ್ಮೈಕ್ಳಗೆಲ್ಲಾ ವಂದನೆಗಳು.